ದೇವರ ಕಾರ್ಯ ಮುಗಿಸಿಕೊಂಡು ಕಲ್ಲೂರಿನಿಂದ ಬೆಟ್ಟಳ್ಳಿಗೆ ಹಿಂತಿರುಗಿದ ಮರುದಿನವಸವಲ್ಲ ಅದರ ಮರುದಿವಸ ಮುಕುಂದಯ್ಯನೊಡನೆ ಧರ್ಮು ಅವನ ತಾಯಿ ಮತ್ತು ತಿಮ್ಮು ಮೂವರೂ ಕೋಣೂರಿಗೆ ಹೋಗುವುದೆಂದು ನಿಶ್ಚಯವಾಗಿತ್ತು. ಆದರೆ ಆ ದಿನ ಮಳೆ ಬೆಳಗಿದನಂದಲೂ ಹಿಡಿದು ಹೊಡೆಯಲು ಪ್ರಾರಂಭವಾಗಿ ಇಡಿಯ ದಿನವೆಲ್ಲ ಜಡಿ ಸುರಿದಿದ್ದರಿಂದ ಹೊರಡಲಿಲ್ಲ. ಹಳ್ಳಿಯ ಜನರು ‘ಅಂತೂ ಮಳೆ ಕೂತ್ಹಾಂಗೆ ಆತು!’ ಎಂದುಕೊಂಡಿದ್ದರು, ಮುಗಿಲ ಕಡೆ ನೋಡಿ.

ನಂಟರು ಮರುದಿನ ಬೆಳಿಗ್ಗೆ ಹೊರಟು ನಿಂತಾಗ ಅವರನ್ನು ಬೀಳ್ಕೊಳ್ಳಲು ಮನೆಯ ಗಂಡಸರು ಹೆಂಗಸರು ಎಲ್ಲರೂ ಹೊರ ಅಂಗಳದಲ್ಲಿ ನಿಂತಿದ್ದರು. ರಂಗಮ್ಮ ಚೆಲುವಯ್ಯನನ್ನು ಎತ್ತಿಕೊಂಡಿದ್ದಳು. ‘ಹೋಗಿ ಬರ್ತೆವೆ’ ‘ಹೋಗಿ ಬನ್ನಿ’ ಎಂದು ಹೇಳುವುದು ಕೇಳುವುದು ಎಲ್ಲ ಪೂರೈಸಿದಾಗ, ಚೆಲುವಯ್ಯನನ್ನು ತನ್ನ ಅಕ್ಕ ರಂಗಮ್ಮನ ಕೈಯಿಂದ ತಾನು ಕರೆದೆತ್ತಿಕೊಳ್ಳಲು ದೇವಮ್ಮ  ತೋಳು ಚಾಚಿ ನಿಂತಾಗ ಅವನು ತನ್ನ ತಾಯಿಯ ಕೈಗೆ ಬರಲೊಲ್ಲದೆ ರಂಗಮ್ಮನ ಎದೆಗಪ್ಪಿಕೊಂಡು ಅವಳ ಸೆರಗಿನಲ್ಲಿ ಮುಖ ಮರೆಸಿಕೊಂಡನು. ಅದನ್ನು ಕಂಡು ಅಲ್ಲಿದ್ದವರೆಲ್ಲ ನಕ್ಕರು. ಅಜ್ಜ ಕಲ್ಲಯ್ಯ ಗೌಡರು “ಓ ಹೋ ಹೋ! ನೋಡ್ರಪಾ! ದೊಡ್ಡಮ್ಮನ್ನ ಬಿಟ್ಟಿರಾಕೇ ಮನಸ್ಸಿಲ್ಲ ಈ ಹುಡುಗ್‌ಗೆ!” ಎಂದು ವಿನೋದವಾಡಿದರು. ಹತ್ತಿರ ನಿಂತಿದ್ದ ಧರ್ಮು ಚೆಲುವಯ್ಯನ ಕಡೆ ಕೈನೀಡಿ “ನಾನು ಕರಕೋಳ್ತೀನೊ! ನನ್ನ ಹತ್ರಕ್ಕೆ ಬಾರೊ, ಪುಟ್ಟಾ!” ಎಂದು ಮುದ್ದು ಮಾತಾಡಿ ತೋಳುಚಾಚಲು ಸ್ವಲ್ಪವೂ ಪ್ರತಿಭಟಿಸದೆ ಅವನ ಕೈಗೆ ಹೋದನು. ಅದನ್ನು ಕಂಡು ಮತ್ತೆ ಎಲ್ಲರೂ ನಕ್ಕರು. ಆದರೆ ಮತ್ತೆ ತನ್ನನ್ನು ಕರೆದುಕೊಳ್ಳಲು ಬಂದ ತನ್ನ ತಾಯಿಯ ಕೈಗಾಗಲಿ ಅಜ್ಜಿಯ  ಕೈಗಾಗಲಿ ಹೋಗಲೊಲ್ಲದೆ ರೊಚ್ಚೆಮಾಡುತ್ತಿರಲು ತುಸು ಬಲತ್ಕಾರವಾಗಿಯೆ ಅವನ ತಾಯಿ ಎಳೆದೆತ್ತಿಕೊಂಡಾಗ ಅವನು ಅಳತೊಡಗಿದನು. ಆದರೆ ಆ ಶಿಶುವರ್ತನೆಗೆ, ದೂರದಲ್ಲಿ ನಿಂತು ವಿಸ್ಮಯ ಮುಖಮುದ್ರೆಯಿಂದ ನೋಡುತ್ತಿದ್ದ ಮುಕುಂದಯ್ಯ ವಿನಾ, ಯಾರೂ ಅಷ್ಟು ವಿಶೇಷ ಗಮನ ಕೊಡದೆ ನಂಟರನ್ನು ಬೀಳ್ಕೊಂಡರು. ರಂಗಮ್ಮ ಹನಿಗಣ್ಣಾಗಿಯೆ ಹೊರಟಳು.

ಅವಳಿಗೆ ಬೆಟ್ಟಳ್ಳಿಗೆ ಬಂದಾಗಿನಿಂದ ಏನೋ ಒಂದು ರೀತಿಯ ಮನಸ್ಸಾಮಾಧಾನ ಒದಗಿತ್ತು. ಶಿಶು ಚೆಲುವಯ್ಯನ ಸಂಗವೂ ಅವಳ ಮನಸ್ಸನ್ನು ತನ್ನ ಸಂಕಟದಿಂದ ದುರ ಕರೆದೊಯ್ದು, ಅದರ ದುಃಸ್ಮೃತಿಯ ಮೇಲೆ ತೆಳ್ಳನೆಯ ವಿಸ್ಮೃತಿಯ ಪರದೆಯನ್ನೆಳೆದಂತಾಗಿತ್ತು. ಅಲ್ಲದೆ ಕಲ್ಲೂರಿನ ದೇವಸ್ಥಾನದಲ್ಲಿ ಇದ್ದಕ್ಕಿದ್ದಹಾಗೆ ದೇವರ ಪಕ್ಕದಲ್ಲಿ ತನ್ನ ಗಂಡ ದೊಡ್ಡಣ್ಣಹೆಗ್ಗಡೆ ತಾನು ತಿರುಪತಿಗೆ ಹೊರಟಾಗ ಇದ್ದಂತೆಯೆ ಕಾಣಿಸಿಕೊಂಡಂತಾಗಿ, ಅವಳ ಹೃದಯದಲ್ಲಿ ಅವಳಿಗೆ ಅರ್ಥವಾಗದ ಏನೋ ಒಂದು ರೀತಿಯ ಪರಿವರ್ತನೆಯಾಗಿತ್ತು.

ಅವಳ ತಮ್ಮ ಮುಕುಂದಯ್ಯ ಅಳಿಂದ ಮಾತ್ರ ಗುಟ್ಟಾಗಿರಲು ಪ್ರಯತ್ನಿಸಿದ್ದ ಸುದ್ದಿ ಐಗಳು ಅನಂತಯ್ಯ ತೀರ್ಥಹಳ್ಳಿಯಿಂದ ಹಿಂದಿರುಗಿ ಬಂದು, “ಆ ಗೋಸಾಯಿ ಬೇರೆ ಯಾರೂ ಅಲ್ಲ, ದೊಡ್ಡಣ್ಣಹೆಗ್ಗಡೆಯೆ ಹೌದು” ಎಂದು ಗುರುತಿಸಿದ್ದ ಸುದ್ದಿ, ಅವಳ ಕಿವಿ ನೇರವಾಗಿ ತಲುಪದಿದ್ದರೂ, ಅವರಿವರ ಗುಟ್ಟಿನ ಮಾತುಗಳಿಂದಲೂ ಗುಟ್ಟಿನ ವರ್ತನೆಯಿಂದಲೂ ಗುಮಾನಿಯಾಗುವಷ್ಟರ ಮಟ್ಟಿಗೆ ಗೊತ್ತಾಗಿತ್ತು ಆದ್ದ್ರಿಂದಲೇ ಅವಳು ಒಮ್ಮೆ ಏಕಾಂತವಾಗಿ ತನ್ನ ಮಗ ಧರ್ಮುವಿನ ಹತ್ತಿರ “ತಮ್ಮಾ, ನೀನಾದ್ರೂ ನನ್ನ ಒಂದು ಸಾರಿ ತೀರ್ಥಹಳ್ಳಿಗೆ ಕರೆದುಕೊಂಡು ಹೋಗ್ತಿಯಾ? ನನ್ನ ಕಂಡ ಮ್ಯಾಲಾದ್ರೂ ಅವರಿಗೆ ನೆನಪು ಸರಿಯಾಗಿ ಬಂದು, ಸುಖವಾಗಿ ಮನೀಗೆ ಬರ್ತಿದ್ರೋ ಏನೋ?” ಎಂದು ತನ್ನ ಹೃದಯದ ನೋವನ್ನು ತೋಡಿಕೊಂಡಿದ್ದಳು.

ಕೋಣೂರಿಗೆ ಹೊರಟಿದ್ದ ನಂಟರೊಡನೆ ಷಿಕಾರಿ ಉಡುಪಿನಲ್ಲಿದ್ದ ದೇವಯ್ಯನೂ ತನ್ನ ಹೊಚ್ಚಹೊಸ ತೋಟಾಕೋವಿಯನ್ನು ಹೆಗಲಮೇಲೆ ಹಾಕಿಕೊಂಡು ಹೊರಟಿದ್ದನು. ಅವನು ಸಾರಿಕೆಬೇಟೆಗೆ ಹೋಗಬೇಕೆಂದಿದ್ದ ಆ ಕಾಡಿಗೆ ಕೋಣೂರಿನ ಕಾಲುದಾರಿಯಲ್ಲಿಯೆ ಅಗಚಿ ಹೋಗಬೇಕಾಗಿತ್ತು. ಅವನನ್ನು ಹಿಂಬಾಲಿಸಿ ಮೂರು ನಾಲ್ಕು ನಾಯಿಗಳೂ ಹೊರಟಿದ್ದುವು.

ದೇವಯ್ಯ ಮುಕುಂದಯ್ಯರು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದರು, ಕಲ್ಲೂರು ‘ಗಡ್ಡದಯ್ಯ’ನನ್ನು ಸಂದರ್ಶಿಸಿದ್ದರ ವಿಚಾರವಾಗಿ. ದೇವಯ್ಯನೆಂದನು:

ಅವರೇನು ಸಾಮಾನ್ಯ ಮನುಷ್ಯರಲ್ಲೋ; ದೊಡ್ಡ ವಿದ್ವಾಂಸರೇ ಇರಬೇಕು. ಅವರ ಹತ್ತಿರ ಇತ್ತಲ್ಲಾ ಆ ಇಂಗ್ಲೀಷು ಪುಸ್ತಕ?…. ನೀ ನೋಡ್ದೇನು?….ಇನ್ನೊಂದು ಸಾರಿ ಅವರ ಹತ್ರ ಹೋಗಬೇಕಲ್ಲಾ! ಯಾವಾಗ ಹೋಗಾನ ಹೇಳು.

ದೇವಯ್ಯನಿಗಿಂತಲೂ ನೂರುಮಡಿ ಗಡ್ಡದಯ್ಯನ ಪ್ರಭಾವವನ್ನು ಅರಿತು ಅನುಭವಿಸಿದ್ದ ಮುಕುಂದಯ್ಯ ಹೆಚ್ಚಿಗೆ ಏನೂ ಮಾತಾಡದೆ “ಹೋಗಾನ…. ನಮ್ಮ ದೊಡ್ಡಣ್ಣ ಬಾವನ್ನ ಮನೀಗೆ ಕರಕೊಂಡು ಬಂದಮ್ಯಾಲೆ….” ಎಂದನಷ್ಟೆ. ಆದರೆ ತಾನೊಬ್ಬನೆ ಇದ್ದಾಗ ಗಡ್ಡದಯ್ಯ ತನಗೊಬ್ಬನಿಗೇ ಎಂದು ಹೇಳಿದ್ದ ಭಯಂಕರ ರಹಸ್ಯದ ವಿಚಾರವಾಗಿ ಒಂದು ಚಕಾರದ ಗುಟ್ಟನ್ನೂ ಬಿಟ್ಟುಕೊಡಲಿಲ್ಲ.

ಅಷ್ಟರಲ್ಲಿ ಅವರ ದಾರಿ ಬೆಟ್ಟಳ್ಳಿ ಹೊಲಗೇರಿಯ ಸಮೀಪದಲ್ಲಿದ್ದ  ಕಾರೆಮಟ್ಟಿನ ಅರೆಕಲ್ಲಿನ ಬುಡಕ್ಕೆ ಸಾಗಿತ್ತು. ಎಲ್ಲಿ ಗುತ್ತಿ ಸಿಂಬಾವಿ ಗುತ್ತಿಯ ನಾಯಿ, ಹುಲಿಯ, ಅವನೊಡನೆ ಅಲ್ಲಿಗೆ ಬಂದಾಗಲೆಲ್ಲ ತಪ್ಪದೆ ಕಾಲೆತ್ತಿ ಗುಂಡುಗಲ್ಲಿಗೆ ಅಭಿಷೇಕ ಮಾಡಿಯೆ ಮಾಡುತ್ತಿತ್ತೋ ಅಲ್ಲಿಗೆ: ಎಲ್ಲಿ ಗುತ್ತಿ ಹೊಂಚಿ ಕೂತು, ತನ್ನೆಡೆಗೆ ಬೈಕುಪ್ಪಿನಲ್ಲಿ ಕದ್ದು ಓಡಿ ಬಂದಿದ್ದ ತಿಮ್ಮಿಯನ್ನು ಸಂಧಿಸಿ, ಅವಳನ್ನು ಹುಲಿಕಲ್ಲು ನೆತ್ತಿಯ ಮಾರ್ಗವಾಗಿ ಸಿಂಬಾವಿಗೆ ಹಾರಿಸಿಕೊಂಡು ಹೋಗಿದ್ದನೋ ಅಲ್ಲಿಗೆ!

ಅಪ್ರಸಿದ್ಧ ಯಃಕಶ್ಚಿತ ವ್ಯಕ್ತಿಗಳಿಗೆ ಸಂಬಂಧಪಟ್ಟುದಾದರೂ ತೀವ್ರ ಭಾವಮಯವಾದ ವಿಶೇಷ ಘಟನೆಗಳು ಸಂಭವಿಸಿದ ಸಾಧಾರಣ ಸ್ಥಳಗಳಿಗೂ ಒಂದು ಸ್ಮೃತಿಸಂಸ್ಕಾರರೂಪದ ವಿಶಿಷ್ಟ ಮನೋಮಂಡಲ ಕಲ್ಪಿತವಾಗಿದ್ದು, ತರುವಾಯ ಅದನ್ನು ಪ್ರವೇಶಿಸುವ ಸಮಾನ ಸಹಾನುಭೂತಿಯ ಮತ್ತು ಅನುಕಂಪೆಯ ವ್ಯಕ್ತಿಗಳ ಹೃದಯದಲ್ಲಿ ಏನಾದರೂ ಪ್ರತಿಕ್ರಿಯೆಯನ್ನುಂಟುಮಾಡುತ್ತವೆಂದೂ ಏನೋ? ಅಥವಾ ತನಗೆ ಪೂರ್ವ ಪರಿಚಯವಿದ್ದು ಅಲ್ಲಿಯೆ ಸಮೀಪದಲ್ಲಿದೆ ಎಂದು ಗೊತ್ತಿದ್ದ ಹೊಲಗೇರಿಯ ಪ್ರಭಾವದಿಂದಲೊ? ಮುಕುಂದಯ್ಯ ದೇವಯ್ಯನನ್ನು ಕೇಳಿದನು: “ಅಲ್ಲಾ, ಭಾವ, ಮಾವನೂ ನೀನೂ ಸೇರಿಕೊಂಡು ಏನೇನೋ ಪುಕಾರು ಮಾಡ್ತಿದ್ದೀರಂತೆ? ಆ ಸಿಂಬಾವಿ ಹೊಲೇರ ಗುತ್ತಿ ಮದುವೆಯಾದೋಳ್ನ ಏನೇನೊ ಪುಕಾರುಮಾಡಿ ಕರಕೊಂಡು ಬಂದು, ನಿಮ್ಮ ಗಾಡಿ ಹೊಡಿಯೋ ಬಚ್ಚಗೆ ಬಲಾತ್ಕಾರವಾಗಿ ಕೂಡಿಕೆ ಮಾಡ್ತೀರಂತೆ! ಹೌದೇನು?”

“ಯಾರು ಹೇಳ್ದೊರು ನಿನಗೆ? ಅವಳನ್ನ ಆ ಬಚ್ಚಗೆ ಕೊಟ್ಟು ಮದೇಮಾಡೋದು ಅಂತಾ ಎಲ್ಲ ನಿಶ್ಚಯವಾಗಿತ್ತು. ಆ ತಾಯಿಗ್ಗಂಡ ಗುತ್ತಿ, ನಮ್ಮ ಮನೇಮೇಲೆ ಯಾವಾಗ್ಲೂ ಕತ್ತಿಕಟ್ಟೋಕೆ ಸಮಯ ಕಾಯ್ತಾ ಇರ್ತಾನಲ್ಲಾ ಆ ಭರಮೈಹೆಗ್ಗಡೆ, ಅವನ ಮಸಲತ್ತಿಗೆ ಒಳಗಾಗಿ, ಈ ಹುಡುಗೀನ ಹಾರಿಸಿಕೊಂಡು ಹೋಗಿ, ಸುಳ್ಳೆಮಳ್ಳೆ ಮದುವೆ ಆಯ್ತು ಅಂತಾ ಸುದ್ದಿ ಹುಟ್ಟಿಸಿದ್ದ…ಯಾರೇನು ಎಳಕೊಂಡು ಬರ್ಲಿಲ್ಲ ಅವಳ್ನ. ಅವಳ ಅಪ್ಪನೇ ಸಿಂಬಾವಿಗೆ ಹೋಗಿ, ಬುದ್ಧಿ ಹೇಳಿ, ಒಪ್ಪಿಸಿ, ಕರಕೊಂಡು ಬಂದಿದ್ದು….ಗೊತ್ತಾಯ್ತೇನು?” ದೇವಯ್ಯ ತಾನೂ ತನ್ನ ತಂದೆಯೂ ನಿರಾಪರಾಧಿಗಳೆಂಬುದನ್ನು ಸಮರ್ಥಿಸಿ ಮಾತಾಡಿದ್ದನು.

“ಆ ಹುಡುಗೀಗೆ ಇಷ್ಟ ಇಲ್ಲಂತೆ, ಬಚ್ಚನ್ನ ಮದುವೆ ಆಗೋಕೆ? ಅವಳೇ ತನ್ನಿಚ್ಛೆಯಿಂದಲೆ ಹೋಗಿದ್ದಂತೆ ಗುತ್ತಿ ಸಂಗಡ?…. ಕೆರೆ ಬಾವಿ ಹಾರ್ತೀನಿ ಅಂತಾಳಂತೆ ಈಗ!”

“ಹುಡುಗಿ ಇಷ್ಟಾನೋ? ಹಿ ಹ್ಹಿ ಹ್ಹಿ ಹ್ಹಿ! ಅಪ್ಪ, ಅಮ್ಮ, ಸಾಲ ಕೊಟ್ಟೋರು ಉಪ್ಪು ಅನ್ನ ಹಾಕಿ ಸಾಕ್ದೋರು, ಯಾರ ಇಷ್ಟಾನೂ ಲೆಕ್ಕಕ್ಕಿಲ್ಲ? ಹುಡುಗಿ ಇಷ್ಟ ಮಾತ್ರ ಲೆಕ್ಕಕ್ಕೆ ಬರ್ತದೆ? ಒಳ್ಳೇ ನ್ಯಾಯ ಬಿಡೂ ನಿನ್ದೂ?…. ಈಗಿನ ಕಾಲದಲ್ಲಿ ಯಾರಪ್ಪಾ ಕೇಳ್ತಾರೆ ಹುಡುಗಿ ಇಷ್ಟಾನ?….ನಿನಗೆ ಗೊತ್ತಲ್ಲ!” ದೇವಯ್ಯ ಮುಕುಂದಯ್ಯನ ಕಣ್ಣನ್ನು ನೇರವಾಗಿ ನೋಡಿದುದರ ಇಂಗಿತ ಅವನಿಗೆ ತಟ್ಟನೆಹೊಳೆದು, ಮುಖ ತಿರುಗಿಸಿ, ಕಾಡುದಟ್ಟಯಿಸಿದ್ದ ಮಲೆಯ ಸಾಲನ್ನೂ ಅದರಾಚೆ ಮೋಡ ಕವಿದಿದ್ದ ಚಿನ್ನಮ್ಮನ ದುಃಖ ನೋಡುತ್ತಾ ನಿರುತ್ತರನಾದನು, ಮನಸ್ಸಿನ ದಿಗಂತದಲ್ಲಿ ಹೂವಳ್ಳಿ ಚಿನ್ನಮ್ಮನ ದುಃಖ ದಾರುಣ ಮೂರ್ತಿ ಹೊಳೆದಂತಾಗಿ!

ತುಸದೂರ ಇಬ್ಬರೂ ಮೌನವಾಗಿಯೆ ಮುಂಬರಿದಿದ್ದರು…. ದೇವಯ್ಯ ಕಾಡಿನ ಕಡೆಗೆ ಏರುವ ಓಣಿಯ ಬಳಿ ನಿಂತು “ನಾನಿಲ್ಲೇ ಅಗಚಿ ಹೋಗ್ತೀನೋ, ಮುಕುಂದು” ಎಂದು ತಮಗಿಂತಲೂ ಸ್ವಲ್ಪ ಹಿಂದೆ ಬರುತ್ತಿದ್ದ ತನ್ನ ರಂಗತ್ತೆಯ ಹಿಂದೆ ಮುಂದೆ ಸುತ್ತಮುತ್ತ ಏನೇನೋ ಬಾಲಲೀಲೆಗಳನ್ನಾಡುತ್ತಾ, ಹಣ್ಣುಗಳನ್ನು ಕುಯ್ಯುತ್ತಾ ಮಟ್ಟುಗಳಲ್ಲಿ ಹಕ್ಕಿಯ ಗೂಡುಗಳನ್ನು ಹುಡುಕುತ್ತಾ ಬರುತ್ತಿದ್ದ ಧರ್ಮು ತಿಮ್ಮು ಅವರನ್ನು ಕರೆದು “ಹೋಗಿ ಬರ್ತೀರೇನ್ರೋ, ಏ ತಂಟೆಗಳಾ!” ಎಂದು ವಿನೋದವಾಡಿ, ಅವರಿಬ್ಬರೂ ತನ್ನೆಡೆಗೆ ಓಡಿ ಬರುವಷ್ಟರಲ್ಲಿ ನಾಯಿಗಳೊಡನೆ ಹಳುವಿನಲ್ಲಿ ಹೊಕ್ಕುಬಿಟ್ಟನು. ನಿಂತಿದ್ದ ಮುಕುಂದಯ್ಯನನ್ನು ಅವನ ಹಳೆಮನೆ ಅಕ್ಕಯ್ಯ ಕೂಡಿಕೊಂಡ ಮೇಲೆ ಮತ್ತೆ ಎಲ್ಲರೂ ಮುನ್ನಡೆದರು.

ನಾಲ್ಕು ಹೆಜ್ಜೆ ಹೋಗಿದ್ದರು. ರಂಗಮ್ಮ ಕೇಳಿದಳು. “ತಮ್ಮಯ್ಯ, ನೀವೆಲ್ಲ ಸೇರಿ ಯಾಕೆ ಈ ಮೂಚ್ಚುಮರೆ ಮಾಡ್ತಿದ್ದೀರೋ ನಾ ಕಾಣೆ. ಇಷ್ಟು ವರ್ಷಾಣೆ ಎಲ್ಲ ಸೈಸಿದವಳು ಇನ್ನು ಮುಂದೆ ಬರಾದನ್ನ ಸೈಸಲಾರನೇ?”

ಮುಕುಂದಯ್ಯ ಐಗಳು ತೀರ್ಥಹಳ್ಳಿಗೆ ಹೋಗಿ ಹಿಂದಿರುಗಿ ಬಂದು ಹೇಳಿದ್ದ ವಿವರಗಳನ್ನೆಲ್ಲ ಹೇಳಿದನು. ಧರ್ಮು ತಿಮ್ಮು ಇಬ್ಬರಿಗೂ ತಮ್ಮ ಆಟ ಗೀಟ ಎಲ್ಲವನ್ನು ಬಿಟ್ಟು ಅತ್ಯಂತ ಗಂಭೀರವಾಗಿ ರಂಗಮ್ಮನ ಪಕ್ಕದಲ್ಲಿಯೆ ನಡೆಯುತ್ತಾ ಆಲಿಸುತ್ತಿದ್ದರು.

“ಅವರೇ ಹೌದು ಅಂತಾ ಆದಮೇಲೆ ನನ್ನ್ಯಾಕೆ ನೀ ತೀರ್ಥಹಳ್ಳಿಗೆ ಕರಕೊಂಡು ಹೋಗಬಾರದು?” ರಂಗಮ್ಮ  ಕೇಳಿದಳು.

“ಅವರಿಗೆ ಸ್ವಲ್ಪವೂ ನೆನಪೇ ಇಲ್ಲವಂತೆ….”

“ನನ್ನೂ ಧರ್ಮುನೂ ನೋಡಿದರೆ ನೆನ್ಪಾಗಬೈದೋ ಏನೋ?”

ಗಡ್ಡದಯ್ಯನನ್ನು ಸಂದರ್ಶಿಸುವುದಕ್ಕೆ ಮೊದಲೇ ಆಗಿದ್ದರೆ ಮುಕುಂದಯ್ಯ ‘ಆಗಲಿ’ ಎನ್ನುತ್ತಿದ್ದನು. ಆದರೆ ಈಗ ಅವನು ಇತರರಿಗೆ ಇಲ್ಲದಿದ್ದ ಮತ್ತು ಇತರರಿಗೆ ಹೇಳಬಾರದಿದ್ದ ಒಂದು ರಹಸ್ಯಜ್ಞಾನದ ಸಂಕಟಕ್ಕೆ ಸಿಕ್ಕಿದ್ದನು!

“ಸ್ವಲ್ಪ ತಡಿ, ಅಕ್ಕಯ್ಯ, ನಾನೂ ಬೆಟ್ಟಳ್ಳಿ ಬಾವನೂ ನಾಳೆ ನಾಡಿದ್ದರ ಹಾಂಗೆ ಅವರೆ ಗಾಡಿ ಕಟ್ಟಿಸಿಕೊಂಡು ಹಗಾನ ಅಂತಾ ಮಾಡಿದ್ದೀವಿ….”

ತುಸು ನಡುಕು ದನಿಂಯಿಂದಲೆ ಹೇಳಿದಳು ರಂಗಮ್ಮ:

“ನೆನಪು ಬರ್ಲಿ, ಬರದೇ ಇರ್ಲಿ, ಕರಕೊಂಡು ಬಂದುಬಿಡು, ತಮ್ಮಯ್ಯಾ, ದೇವರು ಮಾಡಿಸಿದ್ಹಾಂಗ ಆಗ್ತದೆ.”

ಏನಾದರೂ ಆಗಲಿ, ಹೇಗಾದರೂ ಇರಲಿ, ಎಂಟು ವರ್ಷಗಳಿಂದ ಪರಿತಪಿಸುತ್ತಿದ್ದ ರಂಗಮ್ಮಗೆ ತನ್ನ ಗಂಡನ ಮುಖದರ್ಶನವಾದರೂ ಸಾಕು, ಬೆಂದೆದೆಗೆ ತಂಪಾಗಿ ತಾನು ಧನ್ಯೆಯಾಗುತ್ತೇನೆ ಎಂಬ ಮನಸ್ಸು.

ಸ್ವಲ್ಪ ಹೊತ್ತು ಯಾರೊಬ್ಬರೂ ಮಾತಾಡದೆ ತಮ್ಮ ತಮ್ಮ ಚಿಂತೆಯಲ್ಲಿಯೆ ಮಗ್ನರಾದಂತೆ ಮುಂದುವರಿದಿದ್ದರು. ಇದ್ದಕ್ಕಿದ್ದ ಹಾಗೆ ಮಲೆಯ ಓರೆಯ ಕಾಡಿನ ನಡುವಣೆತ್ತರದಿಂದ ನಾಯಿಗಳು ಬೊಗಳುವ ದೂರದ ಸದ್ದು ಕೇಳಿಸಿತು. ಧರ್ಮು ತಿಮ್ಮು ಇಬ್ಬರೂ ಉತ್ಸಾಹಿತರಾಗಿ ಕಿವಿಗೊಟ್ಟಿದ್ದರು. ಆಲಿಸುತ್ತಿದಂತೆಯೆ ಒಂದು ಕೋವಿಈಡೂ ಕೇಳಿಸಿತು. ದೂರದ ಆ ಢಂಕಾರ ಕಾಡಿನ ಸಾಹಸದ ಕೇಕೆಯಂತೆ ಕೇಳಿಸಿ, ಧರ್ಮು ತಿಮ್ಮು ಇಬ್ಬರೂ ಕುಣಿದಾಡುತ್ತಾ ‘ಬೆಟ್ಟಳ್ಳಿ ಚಿಕ್ಕಪ್ಪಯ್ಯ ಎಂಥದನ್ನೋ ಹೊಡದ್ರು ಅಂತಾ ಕಾನ್ತದೆ!’ ‘ದ್ಯಾವಣ್ಣಮಾವ ಹಂದಿ ಹೊಡದ್ರೋ! ದ್ಯಾವಣ್ಣಮಾವ ಹಂದಿ ಹೊಡದ್ರೋ!’ ಎಂದು ಕೂಗುತ್ತಾ ಆ ಸ್ಥಳಕ್ಕೇ ಓಡತೊಡಗಿದರು. ಮುಕುಂದಯ್ಯ ಗದರಿಸಿ ಇಬ್ಬರನ್ನೂ ಹಿಂದಕ್ಕೆ ಕರೆದು ಭರ್ತ್ಸನೆ ಮಾಡಿದನು: “ನಿಮಗೇನು ಆಟಾನಾ? ಅದೆಷ್ಟು ದೂರ ಅಂತಾ ನಿಮಗೇನು ಗೊತ್ತೇ? ಈಡು ಇಲ್ಲೇ ಕೇಳಿಸಿದ್ಗಾಂಗಾಯ್ತು ಅಂತಾ ಅದೇನು ಇಲ್ಲೆ ಹತ್ರ ಅದೆ  ಅಂತಾ ಮಾಡಿರೇನು? ಬನ್ನಿ, ಸುಮ್ಮನೆ ಬನ್ನಿ!”

ಇವರು ಕಮ್ಮಾರಸಾಲೆ ಇದ್ದ ಜಾಗಕ್ಕೆ ಬರುವಷ್ಟರಲ್ಲಿ ಆಕಾಶವೆಲ್ಲ ಮೋಡ ತುಂಬಿ, ಮೋಡಗತ್ತಲೆಯ ಮಬ್ಬು ಕವಿದಿತ್ತು. “ಇವತ್ತೂ ನಿನ್ನ ಹಾಂಗೆ ಮಳೆ ಹಿಡಿದು ಹೊಡೀತದೆಯೋ ಏನೋ ಕರ್ಮ?” ಎಂದುಕೊಂಡ ಮುಕುಂದಯ್ಯ, ತನಗೆ ತಾನೆ “ಏನಾದಾರಾಗಲಿ; ಮುಂಜಾಗ್ರತೆಯ ಕ್ರಮವಾಗ ಒಂದು ಓಲೆಕೊಡೆಯನ್ನಾದರೂ ಈಸಿಕೊಂಡು ಬಂದಿರುತ್ತೇನೆ” ಎಂದು ಉಳಿದವರನ್ನು ಹಳುವಿನ ನಡುವಣ ಕಾಲುದಾರಿಯಲ್ಲಿ ನಿಲ್ಲುವಂತೆ ಹೇಳಿ, ತಾನೊಬ್ಬನೆ ಹಿಂದಿನ ದಿನದ ಮಳೆಯಲ್ಲಿ ನಿಂತಿದ್ದ ಕೆಸರು ಹಾರದಂತೆ ಪಂಚೆಯನ್ನು ಎತ್ತಿ ಕಟ್ಟಿಕೊಂಡು, ಪುಟ್ಟಾಚಾರಿಯ ಗುಡಿಸಲಿಗೆ ಹೋದನು. ಅವೊತ್ತು ಆಚಾರಿ ತಿದಿಬೆಂಕಿ ಹೊತ್ತಿಸಿರಲಿಲ್ಲ; ‘ಕೂತಿದ್ದನು!’ ಎಂದರೆ ರಜಾ ತೆಗೆದುಕೊಂಡಿದ್ದನು!

ಓಲೆಕೊಡೆಯನ್ನು ಕೊಡುತ್ತಾ ಪುಟ್ಟಾಚಾರಿ ಮುಕುಂದಯ್ಯನ ಕಡೆಗೆ ಅರ್ಥಪೂರ್ಣವಾಗಿ ನೋಡಿ “ಗೌಡರ ಸವಾರಿ ಯತ್ತ ಮಕ ಹೋಗಿತ್ತು?…. ಚೀಂಕ್ರ ಸಿಕ್ಕಲಿಲ್ಲೇನು ನಿಮಗೆ?” ಎಂದನು.

ಮುಕುಂದಯ್ಯ ತಾನು ಇತರರೂ ಬೆಟ್ಟಳ್ಳಿಯಿಂದ ಬರುತ್ತಿದ್ದೇವೆ ಎಂಬುದನ್ನು ತಿಳಿಸಲು, ಪುಟ್ಟಾಚಾರಿ “ಹಂಗಾರೆ ನಿಮಗಿನ್ನೂ ಸುದ್ದಿ ಗೊತ್ತಾಗಿಲ್ಲ?” ಎಂದನು.

“ಯಾವ ಸುದ್ದಿ?”

“ಚೀಂಕ್ರ ಅಂತಕ್ಕನ ಕಡೆಯಿಂದ ಒಂದು ಕಾಗದ ತಂದಿದ್ದ. ತೀರ್ಥಳ್ಳಿ ಪಾದ್ರಿ ಕಳಿಸಿದ್ದಳಂತೆ….”ಪುಟ್ಟಾಚಾರಿ ಇನ್ನೂ ಮುಗಿಸಿರಲಿಲ್ಲ.

“ಕುಡುಕ ಸೂಳೇಮಗ ಎತ್ತ ಸತ್ತ?” ರೇಗಿ ಕೇಳಿದನು ಮುಕುಂದಯ್ಯ, ಏನು ವಾರ್ತೆ ಕಳುಹಿಸಿದ್ದಾರೆಯೋ ಜೀವರತ್ನಯ್ಯ ಎಂಬ ಕಳವಳಕ್ಕೆ ಸಿಕ್ಕಿ.

“ಆವಾಗ್ಲೆ ಹೋದನಲ್ಲ, ಕೋಣೂರು ಗೌಡ್ರಿಗೆ ಕಾಗದ ಕೋಡ್ತೀನಿ ಅಂತಾ?…. ಸುಳ್ಳೋ…. ಬದ್ದೋ? ಅಂತೂ ಅಂವ ಹೇಳಿದ್ದು: ದೊಡ್ಡಣ್ಣ ಹೆಗ್ಗಡೇರಿಗೆ ಇಪರೀತ ಕಾಯಿಲೆ ಆಗಿ, ಇನ್ನೇನು ಅತ್ತೋ ಇತ್ತೋ ಅನ್ನೋ ಹಾಂಗಿದಾರಂತೆ!….”

ಪುಟ್ಟಾಚಾರಿಯು ಮುಂದಿನ ಮಾತನ್ನು ಕೇಳಲು ಮುಕುಂದಯ್ಯ ಅಲ್ಲಿರಲಿಲ್ಲ.

ಕೊಡೆ ತೆಗೆದುಕೊಂಡು ಬಂದವನು ಯಾರೊಡನೆಯೂ ಏನೂ ಮಾತನಾಡದೆ ಮನೆಯ ಕಡೆಗೆ ಬಿರುಬಿರನೆ ಕಾಲು ಹಾಕತೊಡಗಿದನು. ಧರ್ಮು ತಿಮ್ಮು ರಂಗಮ್ಮ ಮೂವರೂ ಓಡೋಡಿ ಏದುತ್ತಾ ಅವನನ್ನು ಹಿಂಬಾಲಿಸಬೇಕಾಯಿತು.

ಆದರೆ ಬಹಳ ದೂರ ಹೋಗಿರಲಿಲ್ಲ. ಎದುರುಗಡೆಯಿಂದ ಓಡಿ ಬರುತ್ತಿದ್ದ ಐತ ಪೊದೆಗಳ ನಡುವೆ ಕಾಣಿಸಿದನು.

“ಏನೋ, ಐತ? ಯಾಕೋ ಓಡಿಬರುತ್ತಿದ್ದೀಯ?” ಮೇಲೆ ಕೆಳಗೆ ಉಸಿರೆಳೆದು ಏದುತ್ತಿದ್ದ ಐತನಿಗೆ ಮುಕುಂದಯ್ಯ ತುಸು ಭಾವವಶನಾಗಿ ಏದುತ್ತಲೆ ಪ್ರಶ್ನೆ ಹಾಕಿದ್ದನು.

ಐತ ಏನನ್ನೊ ಸೊಂಟದಲ್ಲಿ ಕೈಯಾಡಿಸಿ ಹುಡುಕುತ್ತಾ ಹೇಳಿದನು. ತೊದಲು ತೊದಲಾಗಿ: “ಮತ್ತೆ….ಮತ್ತೆ…. ಮತ್ತೆ…. ಕಾಣಿ…. ಇಜಾರದ ಸಾಬೂನ ತೀರ್ಥಹಳ್ಳಿ ಆಸ್ಪತ್ರೆಗೆ…. ಸೇರಿಸಕ್ಕೆ…. ಕರಕೊಂಡು ಹೋಗಿದ್ನಂತೆ ಲುಂಗೀಸಾಬು. ಸಿಂಗಾವಿ ಗುತ್ತಿ ಕತ್ತೀಲಿ ಕಡಿದುಬಿಟ್ಟಿದ್ನಂತೆ ಅವನ್ನ….ಸಾಯಾಕಾಗಿ ಬಿದ್ದಾನಂತೆ ಇಜಾರದ ಸಾಬು!…. ಖೂನಿ ಮಾಡ್ಯಾನೆ ಅಂತಾ ಹೇಳಿ…. ಗುತ್ತಿನ…. ಕೋಳಹಾಕಿ ಹಿಡುಕೊಂಡು ಹೋಗಾಕೆ ಗೇಟೀಸಿನೋರು ಬಂದಾರಂತೆ…. ಲುಂಗಿಸಾಬು ಜೊತೇಲಿ! ಲುಂಗಿಸಾಬು ತಂದುಕೊಟ್ಟನಂತೆ ಈ ಕಾಗದಾನ ಅಂತಕ್ಕನ ಕೈಲಿ. ಚೀಂಕ್ರ ತಂದುಕೊಟ್ಟ…. ದೊಡ್ಡ ಗೌಡ್ರು ಓದಿ ನನ್ನ ಕೈಲಿ ಕೊಟ್ರು, ‘ಬೇಗ ಓಡು ಬೆಟ್ಟಳ್ಳಿಗೆ. ಮುಕುಂದಗೆ ಕೊಡು ಈ ಕಾಗದಾನ’ ಅಂತಾ.”

ಮುಕುಂದಯ್ಯ ಐತನ ಕೈಯಿಂದ ಕಾಗದವನ್ನು ಕಿತ್ತುಕೊಂಡು, ಓದಿ ರಂಗಮ್ಮನ ಕಡೆ ತಿರುಗಿ “ಅಕ್ಕಯ್ಯ, ನೀನಿ ಹುಡುಗರನ್ನ ಕರೆದುಕೊಂಡು ಮನೇಗೆ ಹೋಗು. ನಾನೀಗ ಜರೂರು ಬೆಟ್ಟಳ್ಳಿಗೆ ಹೋಗಬೇಕಾಗಿದೆ” ಎಂದವನೆ ಓಲೆಕೊಡೆಯನ್ನು ಐತನ ಕೈಗೆ ಕೊಟ್ಟು “ಅಣ್ಣಯ್ಯಗೆ ಹೇಳು, ನಾನು ಬೆಟ್ಟಳ್ಳಿಗೆ ಹೋಗಿ, ಬಾವನ್ನ ಕರಕೊಂಡು, ಗಾಡಿ ಕಟ್ಟಿಸಿಕೊಂಡೇ ತೀರ್ಥಳ್ಳಿಗೆ ಹೋದಾ ಅಂತ…. ಏ ಧರ್ಮು, ನೀನೂ ಹೇಳ್ತೀಯೇನೋ?” ಎನ್ನುತ್ತಾ ಹಿಂದಕ್ಕೆ ತಿರುಗಿ ಬಂದ ಹಾದಿಯಲ್ಲಿಯೆ ವೇಗವಾಗಿ ಹೊರಟುಬಿಟ್ಟನು.

ಧರ್ಮು “ಆಗಲಿ, ಮಾವಾ!” ಎಂದು ಕೂಗಿದ್ದು ಕೂಡ ಅವನಿಗೆ ಕೇಳಿಸಿರಲಿಕ್ಕಿಲ್ಲ.

ಮುಕುಂದಯ್ಯ ಹಳುವಿನಲ್ಲಿ ಕಣ್ಮರೆಯಾದ ಕೂಡಲೆ ರಂಗಮ್ಮ “ಏನೋ ಅದು, ಐತಾ? ಯಾಕೋ ಅವನು ಮತ್ತೆ ಹಿಂದಕ್ಕೆ ಹೋಗಿದ್ದು?…. ಅವರು ಹ್ಯಾಂಗಿದ್ದಾರಂತೋ ತೀರ್ಥಳ್ಳೀಲಿ?” ಎಂದು ಕೇಳುತ್ತಾ ದೀರ್ಘವಾಗಿ ಸುಯ್ದು ಕೋಣೂರಿನ ಕಡೆಗೆ ನಡೆಯತೊಡಗಿದಳು.

“ನಂಗೊತ್ತಿಲ್ಲ, ಅಮ್ಮಾ…. ಗೌಡರು…. ಕಾಗದ ಓದ್ದೋರೇ…. ‘ಅಯ್ಯೋ ದೇವರೇ!’ ಅಂತಾ ತಲೆಮ್ಯಾಲೆ ಕೈಹೊತ್ತುಕೊಂಡು ಕೂತುಬಿಟ್ರು!…. ಆ ಚೀಂಕ್ರ ಹೇಳ್ತಿದ್ದ. ‘ತಿರುಪತಿಗೆ ಹೋಗಿದ್ದ ಹೆಗ್ಗಡೇರಿಗೆ ಇಪರೀತ ರೇಸ್ಮೆ ಕಾಯ್ಲೆ’ ಅಂತಾ…. ಹೌದೋ ಸುಳ್ಳೋ? ಅಂವ ಒಬ್ಬ ಕುಡುಕ ಸೂಳೇಮಗ!