ಮೇಗರವಳ್ಳಿಯಿಂದ ತೀರ್ಥಹಳ್ಳಿಗೆ ಹೋಗುವ ಹೆದ್ದಾರಿ. ಸಾಮಾನ್ಯರ ಮಾತಿನಲ್ಲಿ ಅದಕ್ಕಿನ್ನೂ ‘ರಸ್ತೆ’ ಎಂಬ ಹೆಸರು ಸರ್ವಸಾಮಾನ್ಯವಾಗಿರಲಿಲ್ಲ. ಆದರೆ ಬಳಕೆಗೆ ಬರುತ್ತಿತ್ತು. ಆದರೆ ಬಳಕೆಗೆ ಬರುತ್ತಿತ್ತು. ಮುಂದೆ ‘ರಸ್ತೆ’ಗೆ ಬದಲಾಗಿ ‘ರೋಡು’ ಎಂಬುದು ಬಳಕೆಗೆ ಬಂದಂತೆ, ಮುಸಲ್ಮಾನರ ದೌಲತ್ತು ಸಂಪೂರ್ಣವಾಗಿ ಸಂಸ್ಥಾಪಿತವಾದಂದು. ‘ರಸ್ತೆ’ಯಾಗುತ್ತಿದ್ದ ಆ ‘ಹೆದ್ದಾರಿ’ ದುರಸ್ತು ಕಾಣದೆ ಬಹುಕಾಲವಾಗಿದ್ದ ಅನುಭವ ಅದರ ಮೇಲೆ ತೀರ್ಥಹಳ್ಳಿಯ ಕಡೆಗೆ ಸಾಗುತ್ತಿದ್ದ ಮೂವರಿಗೂ ಚೆನ್ನಾಗಿಯೆ ಆಗುತ್ತಿತ್ತು. ಅದರಲ್ಲಿಯೂ ಆ ಅನುಭವದ ‘ಫಜೀತಿ’ ಹಳ್ಳಿಗಾಡಿನ ಕಾಡುಗಳಲ್ಲಿ ಬರಿಗಾಲಿನಲ್ಲಿಯೆ ತಿರುಗಿ ಅಭ್ಯಾಸವಿದ್ದ ಸಿಂಬಾವಿ ಗುತ್ತಿಗೆಗಿಂತಲೂ ನೂರುಮಡಿಯಾಗಿ ವಿಶೇಷವಾಗಿ ಪಟ್ಟಣದ ಬೀದಿಗಳಲ್ಲಿಯೆ ಗಸ್ತು ತಿರುಗುವ ಅಭ್ಯಾಸವಿದ್ದ ಆ ಇಬ್ಬರು ಪೋಲೀಸನವರಿಗೆ ಸಮಧಿಕವಾಗಿ ಅನುಭವಕ್ಕೆ ಬರುತ್ತಿತ್ತು.

ಅದರಲ್ಲಿಯೂ ಏನು ಮಳೆ! ಮುಂಗಾರಿನ ಪ್ರಾರಂಭದ ಜೋರಿನಿಂದ ಸುರಿಯುತ್ತಿರಲಿಲ್ಲ, ನಿಜ; ಆದರೆ ಹಿಡಿದು ಹೊಡೆಯುತ್ತಿತ್ತು. ಜಡಿ! ಸುತ್ತಲೂ ಹೆಗ್ಗಾಡು; ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದುವು, ನೂರಾರು ವರ್ಷಗಳ ಸಾಲಧೂಪದ ಹೆಮ್ಮರಗಳು. ಹಳುವೋ ನಿತ್ಯ ಶ್ಯಾಮಲ! ರೇಜಿಗೆ ಹಿಡಿಸುವ ಜೀರುಂಡೆಗಳ ಕರ್ಕಶದ ಚೀರುದನಿ ಬೇರೆ. ಹಕ್ಕಿಗಳ ಸದ್ದೆ ಇಲ್ಲ. ನಿಲ್ಲದೆ ಸುರಿಯುತ್ತಿದ್ದ ಆ ಮಳೆಯಲ್ಲಿ ಅವು ಎಲ್ಲಿಯೋ ತಲೆ ಉಡುಗಿಸಿದ್ದವು. ಮಿಂಚು ಗುಡುಗು ಸಿಡಿಲು ಯಾವುದೂ ಇಲ್ಲ; ಅವಾದರೂ ಇದ್ದಿದ್ದರೆ ಹೆದರಿಕೆಯನ್ನಾದರೂ ಹುಟ್ಟಿಸಿ ಬೇಸರ ಪರಿಹಾರಮಾಡುತ್ತಿದ್ದುವು! ಬೇಸರ!ಬೇಸರ!ಬೇಸರ! ಜಿಂಯ್ಯೋ ಎಂದು ಮಳೆ ಹೊಡೆಯುತ್ತಿದೆ. ಆ ಕೊರಕಲು ರಸ್ತೆಯಲ್ಲಿ ಕೆಸರು ಮತ್ತು ಹೊಂಡಗಳನ್ನು ತಪ್ಪಿಸಿ ನಡೆಯುವ ಸಲುವಾಗಿ ನೆಗೆನೆಗೆದು ಹಾರುತ್ತಾ ಬಿಚ್ಚಿ ಸೂಡಿದ್ದ ಎರಡು ಕೊಡೆಗಳು ಸಾಗುತ್ತಿವೆ; ಅವರ ನಡುವೆ ಆ ಎರಡಕ್ಕೂ ತುಂಬ ಕುಳ್ಳಾಗಿ ಒಂದು ಕಂಬಳಿಕೊಪ್ಪೆ ಸಾಗುತ್ತಿದೆ: ಇಬ್ಬರು ಪೋಲೀಸರು ಮತ್ತು ಸಿಂಬಾವಿ ಹೊಲೆಯರ ನಾಯಿಗುತ್ತಿ!

ಗುತ್ತಿಗೆಯೊಬ್ಬನೆ ಇದ್ದಾನಲ್ಲಾ! ಅವನ ನಾಯಿಯೆಲ್ಲಿ? ಹುಲಿಯ!

ಅದಕ್ಕಾಗಿಯೆ ಎಂದು ತೋರುತ್ತದೆ, ಗುತ್ತಿ ಮತ್ತೆ ಮತ್ತೆ ಹಿಂದಕ್ಕೆ ಕಳ್ಳನೋಟವಟ್ಟಿ ನೋಡುತ್ತಾ ಹೋಗುತ್ತಿದ್ದಾನೆ. ಅಂದು ತಿಮ್ಮಿಯೊಡನೆ ಹುಲಿಕಲ್ಲು ನೆತ್ತಿಯಿಂದ ಇಳಿಯುತ್ತಿದ್ದಾಗ ಕುರ್ಕನ ಸಂಗಡ ಕಾದಾಡಿ ಮಾಡಿಕೊಂಡಿದ್ದ ಉಗುರಿನ ಗಾಯದ ದೆಸೆಯಿಂದ ಒಂದು ಕಣ್ಣು ಹೂಕೂತು ಕಾನಿಸದಂತಾಗಿ ಒಕ್ಕಣ್ಣಾಗಿದ್ದ ತನ್ನ ನಾಯಿ ಮತ್ತೆ ಎಲ್ಲಿ ಬಂದುಬಿಟ್ಟೀತೋ ಎಂಬ ಅಂಜಿಕೆಯಿಂದ. ಏಕೆಂದರೆ, ಕೇರಿಯಲ್ಲಿ ಪೋಲೀಸರು ತನ್ನನ್ನು ಹಿಡಿದಾಗ, ಹುಲಿಯ ಒಬ್ಬನ ಮೇಲೆ ಹಾರಿ ಕಚ್ಚಿದ್ದರಿಂದ ಅವನ ಅಂಗಿಯ ತೋಳು ಹರಿದುಹೋಗಿತ್ತು. ಆಗ ಮತ್ತೊಬ್ಬನು ತನ್ನ ದೊಣ್ಣೆಯಿಂದ ಅದಕ್ಕೊಂದು ಬಲವಾದ ಪೆಟ್ಟುಕೊಟ್ಟು, ಕೂಗಿಕೊಳ್ಳುವಂತೆ ಮಾಡಿ, ಓಡಿಸಿದ್ದನು. ಆದರೂ ಆ ಒಕ್ಕಣ್ಣಿನ ಸ್ವಾಮಿಭಕ್ತ ತನ್ನನ್ನು ಬೆಂಬಿಡದೆ ಹಿಂಬಾಲಿಸಿತ್ತು. ರಸ್ತೆಯಲ್ಲಿ ಒಂದೆರಡು ಸಾರಿ ಅದು ಹತ್ತಿರಕ್ಕೆ ಬಂದಾಗ ಆ ಇಬ್ಬರು ಪೋಲೀಸರೂ ಬಡಿಗೆ ಮತ್ತು ಕಲ್ಲುಗಳಿಂದ ಅದನ್ನು ಹೊಡೆದು ಹಿಂದಕ್ಕಟ್ಟಿದ್ದರು. ಒಂದು ಸಾರಿಯಂತೂ ಪೋಲೀಸನವನು ಎಸೆದ ದೊಡ್ಡದೊಂದು ಕಲ್ಲು ಅದರ ಮೂತಿಗೆ ತಗುಲಿ ಹುಲಿಯ ರೋಧಿಸುತ್ತಾ ಓಡಿತ್ತು. ಆಗ ಗುತ್ತಿ ಪ್ರತಿಭಟಿಸಿ, ತಲೆಗೊಂದು ಏಟು ತಿಂದಿದ್ದನು. ಆಮೇಲೆ, ನಾಯಿ ತನ್ನನ್ನು ಹಿಂಬಾಲಿಸಿದರೆ ಪ್ರಾಣಾಯಾಮಕ್ಕೆ ಒಳಗಾಗುತ್ತದೆ ಎಂಬ ಭೀತಿಯಿಂದ ತಾನೂ ಕಲ್ಲೆಸೆದು ಅದನ್ನು ಓಡಿಸಿದ್ದನು, ‘ಹೋಗು, ಹುಲಿಯಾ, ನಡೀ ಕೇರಿಗೆ’ ಎಂದು ಗದರಿಸಿ. ಆಗ ಬೋಳುಮೀಸೆಯ ಪೋಲೀಸನವರು ‘ಓ ಹೋ ಹೋ! ಈ ಹೊಲೆಯನ ನಾಯಿ ಹೆಸರು ಹುಲಿ ಅಂತೆ ಹುಲಿ….!’ ಎಂದು ಹಂಗಿಸಿದ್ದನು.

ಈಗ ಗುತ್ತಿ ಮತ್ತೆ ಹಿಂದಕ್ಕೆ ನೋಡುತ್ತಿದ್ದುದನ್ನು ಗಮನಿಸಿದ ಗಿರ್ಲುಮೀಸೆಯ ಪೋಲೀಸನವನು “ಯಾಕೋ? ಹಿಂದಕ್ಕೆ ಮತ್ತೆ ಮತ್ತೆ ನೋಡ್ತೀಯಾ? ನಿನ್ನ ನಾಯಿನ ಛೂ ಬಿಟ್ಟು ಪರಾರಿಯಾಗಲು ಯೋಚನೆ ಮಾಡ್ತಿದ್ದೀಯೋ? ಅದೆಲ್ಲ ಬಿಟ್ಟುಬಿಡು. ಅದರ ಹೆಣಾನೂ ಹಾಕ್ತೀವಿ! ಗೊತ್ತಾಯ್ತೇನು?…. ನಾವು ಹಿಡಿಯೋಕೆ ಬಂದಕೂಡ್ಲೆ ಕೇರೀನೆ ಬಿಟ್ಟು ಕಾಡು ಹತ್ತಿದ್ದೆಯಲ್ಲಾ ಹಾಂಗಲ್ಲಾ, ಬದ್ಮಾಷ್, ಗೊತ್ತಾಯ್ತೇನು?” ಎಂದು ಕ್ರೂರನೇತ್ರಗಳಿಂದ ನೋಡಿದ್ದನು. ಗುತ್ತಿಯ ಕಡೆಗೆ. ಗುತ್ತಿ ಪ್ರತ್ಯುತ್ತರ ಹೇಳದೆ ಚಿಂತಾ ಭಾರನಂತೆ ಕಾಲು ಹಾಕಿದ್ದನು.

ಪೋಲೀಸಿನವರು ತನ್ನನ್ನು ಹಿಡಿದು, ಕೈಗೆ ಕೋಳ ಹಾಕಿ, ತೀರ್ಥಹಳ್ಳಿಗೆ ಕರೆದುಕೊಂಡು ಹೋಗಲು ಬಂದಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೆ ಗುತ್ತಿ ಕಂಗಾಲಾಗಿದ್ದನು. ಅವನ ಅಪ್ಪ ಕರಿಸಿದ್ದನೂ ಅಮ್ಮ ಗಿಡ್ಡಿಯೂ ಯಾರಾದರೂ ಸತ್ತರೆ ಬಾಯಿ ಬಡುಕೊಳ್ಳುವಂತೆ ಲಬಲಬಿಸಿದ್ದರು. ಕೇರಿಗೆ ಪೋಲೀಸರು ಬರುತ್ತಾರೆ ಎಂಬ ವಾರ್ತೆ ಕೇಳಿದೊಡನೆ ಕೇರಿಯ ಗಂಡಸರು ಹೆಂಗಸರು ಎಲ್ಲರೂ ತಲೆತಪ್ಪಿಸಿಕೊಳ್ಳಲು ಕಾಡು ಹತ್ತಿದ್ದರು. ನಡೆಯಲಾರದ ಮುದುಕ ಮುದುಕಿಯರೂ ಮಕ್ಕಳೂ ಮಾತ್ರ ತಮ್ಮ ತಮ್ಮ ಬಿಡಾರದ ತಟ್ಟಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡು, ಒಲೆಯನ್ನು ಹೊತ್ತಿಸದೆ ಹುದುಗಿಬಿಟ್ಟರು.

ಪೋಲೀಸರು, ಸಿಂಬಾವಿ ಭರಮೈಹೆಗ್ಗಡೆಯವರೊಡನೆ, ಹೊಲೆಗೇರಿಗೆ ಬಂದಾಗ ತಮ್ಮನ್ನೆದುರುಗೊಂಡ ಅದರ ನಿರವತೆಗಳನ್ನು ನೋಡಿ ಹತಾಶರಾಗಿ ಸಿಡುಕ್ಕಿದ್ದರು. ಭರಮೈಹೆಗ್ಗಡೆಯವರೇ ಮುನ್ಸೂಚನೆ ಕೊಟ್ಟು, ತಮ್ಮ ಆಳನ್ನು ರಕ್ಷಿಸಲು ಈ ಉಪಾಯ ಹೂಡಿರಬಹುದು ಎಂಬ ಶಂಕೆಯೂ ತಲೆದೂರಿತ್ತು ಆ ಪೋಲೀಸನವರಿಗೆ. ಆದ್ದರಿಂದ ಅವರಿಗೂ ಹಿತ ಹೇಳುವ ರೀತಿಯಲ್ಲಿ ಮುಚ್ಚುಮರೆಯ ಎಚ್ಚರಿಕೆ ಕೊಡುತ್ತಾ ಅವರೊಡನೆ ಸಿಂಬಾವಿ ಮನೆಗೆ ಹಿಂದಿರುಗಿ, ಅಲ್ಲಿಯೆ ಉಳಿದುಕೊಂಡಿದ್ದರು. ಭರಮೈಹೆಗ್ಗಡೆಯವರು ಶ್ರೀಮಂತರಾಗಿದ್ದರೂ ಸರಕಾರ, ಪೋಲೀಸು ಎಂದರೆ ಅವರಿಗೆ ತುಂಬ ಪುಕ್ಕಲು. ಆಗಿನ ಕಾಲದಲ್ಲಿ ಪೋಲೀಸರಿಗೆ ಅಂಜದಿದ್ದವರೆ ಇರಲಿಲ್ಲ; ಅವರ ಅಧಿಕಾರ, ಜಬರದಸ್ತು ಅಂತಹದ್ದಾಗಿತ್ತು. ಆದ್ದರಿಂದಲೆ ಆ ದಿನ ಸಿಂಬಾವಿ ಮನೆಯಲ್ಲಿ ಕೋಳಿತುಂಡು, ಕಡಬು, ಕಳ್ಳು ಸಾರಾಯಿಗಳ ಔತಣವನ್ನೇರ್ಪಡಿಸಿ ಸರಕಾರದ ಯಮದೂತರನ್ನು ತೃಪ್ತಿಪಡಿಸಿದ್ದರು.

ಕಾಡಿಗೆ ಓಡಿದ್ದ ಹೊಲೆಯರು ಬಹಳ ಹೊತ್ತು ಅಲ್ಲಿರಲಿಕ್ಕಾಗಿರಲಿಲ್ಲ. ಮುಚ್ಚಿಕೊಂಡಿದ್ದ ಮೋಡಗಪ್ಪು ಜಡಿಮಳೆಯಾಗಿ ಬಿಡದೆ ಸುರಿಯತೊಡಗಿದ್ದುದರಿಂದ ಅನೇಕರು ತೊಪ್ಪನೆ ತೊಯ್ದು, ಅಲ್ಲಿ ಇಲ್ಲಿ ನುಸುಳಿ, ಕಳ್ಳತನದಿಂದ ತಮ್ಮ ತಮ್ಮ ಬಿಡಾರಗಳಿಗೆ ಹೊಕ್ಕಿದ್ದರು. ಆದರೆ ಆ ದಿನ ಗಬ್ಬದ ಆಡಿನ ಕೊಲೆಯ ದೆಸೆಯಿಂದಾಗಿ ಸಾಬರೊಡನೆ ನಡೆದಿದ್ದ ಹೊಡೆದಾಟದಲ್ಲಿ ಹಾಜರಿದ್ದು ನೇರವಾಗಿ ಭಾಗವಹಿಸಿದ್ದರು ಯಾರೂ ಹಗಲಿನಲ್ಲಿ ಬಿಡಾರಕ್ಕೆ ಹಿಂದಿರುಗಿರಲಿಲ್ಲ. ಹಳೆಪೈಕದವರ ಹಟ್ಟಯ ಹಿಂದೆಯೊ ಕೂಡುಹಟ್ಟಿಯ ಅಟ್ಟದ ಮೇಲೆಯೊ, ಸೌದೆ ಕೊಟ್ಟಿಗೆಯ ಸಂಧಿಯಲ್ಲಿಯೊ ಅಡಗಿ ನಿಂತು ಕಾಲನೂಕಿ, ದೊಂಬಿಯಲ್ಲಿ ಅವನ ಕಾಳಿಗೆ ಬಿದ್ದ ಪೆಟ್ಟು ಇರುತ್ತಿದ್ದನಾದರೂ, ಪೋಲೀಸರು ಸಿಂಬಾವಿಗೆ ಬರುವವರೆಗೂ ಹಾಸಗೆಯಲ್ಲಿಯೆ ಹೆಚ್ಚಾಗಿ ಇರುತ್ತಿದ್ದನಾದರೂ, ದೊಳ್ಳ ಮನೆಯಿಂದ ತಂದುಕೊಟ್ಟಿದ್ದ ಬುತ್ತಿಯಿಂದ ಹಗಲೂಟವನ್ನು ಪೂರೈಸಿ ಹಾಗೂ ಹೀಗೂ ಕರೆಯುವ ಕೊಟ್ಟಿಗೆಯ ಅಟ್ಟದ ಮೇಲೆ ಅವಿತಿದ್ದು, ಚೆನ್ನಾಗಿ ರಾತ್ರಿಯಾದ ಮೇಲೆ ಜಡಿಮಳೆಯಲ್ಲಿಯೆ ಕುಂಟುತ್ತಾ ಬಿಡಾರ ಸೇರಿದ್ದನು. ಮರುದಿನ ಬೆಳಗಿನ ಜಾವದಲ್ಲಿ ಸಿಂಬಾವಿಯಿಂದ ಹೊರಬಿದ್ದು ಎಲ್ಲಿಯಾದರೂ ಲಕ್ಕುಂದದಲ್ಲಿಯೋ ಸೀತೂರಿನಲ್ಲಿಯೋ ಅಡಗಿದ್ದು, ಪೋಲೀಸನವರು ಊರುಬಿಟ್ಟು ಹೋದಮೇಲೆ ಬೆಟ್ಟಳ್ಳಿಗೆ ಹೋಗಿ, ಕಷ್ಟಕ್ಕೆ ಸಿಕ್ಕಿದ್ದ ತಿಮ್ಮಿಯನ್ನು ಎಲ್ಲಿಗಾದರೂ ದೂರ ಓಡಿಸಿಕೊಂಡು ಹೋಗಬೇಕೆಂದು ವ್ಯೂಹಿಸಿದ್ದನು, ಮನದಲ್ಲಿಯೆ.

ಆದರೆ ಇಂಥಾದ್ದನ್ನೆಲ್ಲ ಎಷ್ಟೆಷ್ಟೋ ಕಂಡು ಅನುಭವಿಸಿ ನುರಿತಿದ್ದ ಆ ಪೋಲೀಸಿನವರು ಭರಮೈಹೆಗ್ಗಡೆಯವರಿಗೂ ಗುಟ್ಟು ಬಿಟ್ಟುಕೊಡದೆ, ರಾತ್ರಿ ನಾಲ್ಕು ಗಂಟೆಯ ಹೊತ್ತಿಗೇ, ಮಳೆಯನ್ನೂ ಲೆಕ್ಕಿಸದೆ ಕೇರಿಗೆ ಹೋಗಿ, ಕರಿಸಿದ್ದನ ಬಿಡಾರಕ್ಕೆ ಮುತ್ತಿಗೆ ಹಾಕಿ, ಗುಲ್ಲು ಕೋಲಾಹಲಗಳ ನಡುವೆ, ಲಾಟೀನಿನ ಬೆಳಕಿನಲ್ಲಿಯೆ ಗುತ್ತಿಯನ್ನು ಸೆರೆಹಿಡಿದು ಬಿಟ್ಟಿದ್ದರು!

ಅವನ ಕೈಗೆ ಕೋಳ ಹಾಕಿ ಮನೆಗೆ ಕರೆದೊಯ್ದ ಮೇಲೆಯೇ ಭರಮೈಹೆಗ್ಗಡೆಯವರಿಗೆ ಆ ವಿಷಯ ಗೊತ್ತಾದದ್ದು! ಅವರು ತಮ್ಮೊಳಗೇ ‘ಶನಿಮುಂಡೇಗಂಡ! ಹೊಲೆಸೂಳೇ ಮಗ! ಎರಡು ದಿನ ಬಿಡಾರಕ್ಕೆ ಹೋಗಬ್ಯಾಡ ಅಂತಾ ದೊಳ್ಳನ ಕೈಲಿ ಬುತತೀನೂ ಕೊಟ್ಟು ಕಳ್ಸಿದ್ರೂ, ಬಿಡಾರಕ್ಕೆ ಹೋಗಿ ಸಿಕ್ಕಿಕೊಂಡಿದ್ದ್‌ಆನಲ್ಲಾ ಪೋಲೀಸರ ಕೈಗೆ!’ ಎಂದು ಗೊಣಗಿ ಶಪಿಸುತ್ತಾ, ಶಾಲು ಹೊದೆದು, ಕೋಣೆಯಿಂದ ಎದ್ದು ಬಂದಿದ್ದರು.

ಪೋಲೀಸರ ಎದುರಿಗೆ ಗುತ್ತಿಯನ್ನು ಬಾಯಿಗೆ ಬಂದಂತೆ ಬಯ್ದು, ‘ಪೋಲೀಸರು ಹೇಳಿದ ಹಾಗೆ ಕೇಳು; ನಿನಗೇನೂ ಶಿಕ್ಷೆ ಆಗುವುದಿಲ್ಲ. ಮತ್ತೆ ಓಡಿಗೇಡಿ ಹೋಗಲು ಪ್ರಯತ್ನಿಸೀಯಾ? ಹುಷಾರು!’ ಎಂದು ಬುದ್ದಿ ಹೇಳಿದಂತೆ ಮಾಡಿ, ಯಾರಿಗೂ ಗೊತ್ತಾಗದ ರೀತಿಯಲ್ಲಿ ಕಣ್ಣು ಮಿಟುಕಿಸಿದ್ದರು. ಪೋಲೀಸರಿಗೂ ಹೊಟ್ಟೆಗೂ ಬಾಯಿಗೂ ಬೆಚ್ಚಗೆ ಮಾಡಿದ್ದಂತೆಯೆ ಕೈಗೂ ಅವರ ನೀರಿಕ್ಷೆಗೆ ಮಿಗಿಲಾಗಿಯೇ ಬೆಚ್ಚಗೆ ಮಾಡಿ, ಕೈಗೆ ಕೋಳ ಹಾಕಿದ್ದನ್ನೂ ತಪ್ಪಿಸಿದ್ದರು.

ಪೋಲೀಸರಿಗೆ ಕಪ್ಪಕಾಣಿಕೆ ಅರ್ಪಿಸುವುದಕ್ಕಾಗಿ ಅವರನ್ನು ಉಪ್ಪರಿಗೆಯ ಮೇಲಕ್ಕೆ ರಹಸ್ಯಕ್ಕೆ ಕರೆದೊಯ್ದು, ಗುತ್ತಿಯ ಪರವಾಗಿ ವಾದಿಸಿದ್ದರು: “ಅವನೇನು ಖೂನೀಗೀನಿ ಮಾಡುವಂಥಾ ಮನುಷ್ಯನಲ್ಲ. ಹೇಳಿದ ಹಾಗೆ ಕೇಳಿಕೊಂಡು ಬಹಳ ಒಳ್ಳೆಯವನಾಗಿ ಕೆಲಸ ಮಾಡಿಕೊಂಡು ಇದ್ದಾನೆ. ನಮ್ಮ ಹೊಲೇರ ಪೈಕಿ ಸಿಪಾಯಿ ಅಂದರೆ ಅವನೊಬ್ಬನೆ ಸೈ! ಇನ್ನೂ ಹುಡುಗ. ಆ ಇಜಾಗರದ ಸಾಬಿ ಅವನ ಗಬ್ಬದ ಕುರೀನ ಕೊಯ್ದು ಹಾಕಿದ ಸಿಟ್ಟಿಗೆ ಸ್ವಲ್ಪ ಗಲಾಟೆ ಮಾಡಿಬಿಟ್ಟ. ಅವನ ಕಾಲಿನ ಎಲುಬು ಮುರಿಯುವಹಾಂಗೆ ಏಟು ಕೊಟ್ಟಿದ್ದೂ ಆ ಇಜಾರದ ಸಾಬೀನೇ ಅಂತಾ, ಕಂಡವರೆಲ್ಲ ಹೇಳಿದ್ದಾರೆ ನನಗೆ. ಅವೊತ್ತಿನ ಹೊಡೆದಾಟದಲ್ಲಿ ಗುತ್ತಿ ಹತ್ತಿರ ಕತ್ತಿಯೆ ಇರಲಿಲ್ಲಂತೆ. ಕತ್ತೀಲಿ ಕಡಿದವನು ಅವನ ಬಾವನಂತೆ, ಬೆಟ್ಟಳ್ಳಿ ಹೊಲೇರ ಸಣ್ಣಬೀರ! ಅಂವ ಈಗ ನುಣುಚಿಕೊಂಡು ಬಿಟ್ಟಿದ್ದಾನೆ, ಇವನ್ನ ಸಿಕ್ಕಿಹಾಕಿ!….ಪಾಪ, ಕಾಲು ಗಾಯ ಬೇರೆ ಇನ್ನೂ ಮಾದಿಲ್ಲ. ಕೋಳ ಗೀಳ ಹಾಕಿ ಹಿಂಸೆ ಮಾಡಬೇಡಿ….ಅದೂ ಅಲ್ಲದೆ ಮೊನ್ನೆ ಮದುವೆ ಮಾಡಿಕೊಂಡಿದ್ದಾನೆ. ಅವನ ಹೆಂಡ್ತೀನ ಉಪಾಯವಾಗಿ ತವರಿಗೆ ಕರಕೊಂಡು ಹೋಗ್ತೀಂವಿ ಅಂತ ಕರಕೊಂಡು ಹೋಗಿ, ಈಗ ಅವಳನ್ನ ಮತ್ತೊಬ್ಬನಿಗೆ ಲಗ್ನಾ ಮಾಡ್ತಾರಂತೆ. ಅದರದ್ದೂ ಒಂದು ಮೊಕದ್ದಮೆ ಬರಬಹುದು ಇಷ್ಟರಲ್ಲೇ ನಿಮ್ಮ ಕಛೇರಿಗೆ….”

ಪೋಲೀಸಿನವರು ತಮಗೆ ಲಭಿಸಿದ ಅನೀರಿಕ್ಷಿತ ಪರಿಮಾಣದ ಪರಿತೋಷದಿಂದ ಸಂತೃಪ್ತರಾಗಿ, ವಿಚಾರಣೆಯಲ್ಲಿ ಗುತ್ತಿಗೆ ಏನೂ ತೊಂದರೆಯಾಗದಂತೆ ಸಾಕ್ಷಿಹೇಳಿಸಿ, ಅವನನ್ನು ಖಂಡಿತ ಖುಲಾಸೆ ಮಾಡಿಸುವುದಾಗಿ ಭರವಸೆಯಿತ್ತು ಹೆಗ್ಗಡೆಯವರಿಗೆ ಸಲಾಂ ಹೇಳಿದ್ದರು. ಅವರ ಆ ಭರವಸೆಗೆ ಸಾಕಾದಷ್ಟು ಆಧಾರವೂ ಇತ್ತು. ಏಕೆಂದರೆ ಗುತ್ತಿಯನ್ನು ಅವರು ಹಿಡಿದು ಒಯ್ಯುತ್ತಿದ್ದುದಕ್ಕೆ ಯಾವ ಸಕ್ರಮವಾದ ಅಧಿಕೃತ ಆಜ್ಞೆಯೂ ಇರಲಿಲ್ಲ. ಇತ್ತ ಭರಮೈಹೆಗ್ಗಡೆಯವರಿಂದ ತಿಂದಂತೆ ಅತ್ತ ಬೆಟ್ಟಳ್ಳಿ ಕಲ್ಲಯ್ಯಗೌಡರ  ಕಡೆಯಿಂದಲೂ ತಿಂದು ಈ ನಕಲಿ ದಸ್ತಗಿರಿಗೆ ಕೈಹಾಕಿದ್ದರು. ಅವರಿಗೆ ಇಜಾರದಸಾಬಿ ಸಿಕ್ಕಿದ್ದು ಒಂದು ಬರಿಯ ನೆವವಾಗಿತ್ತು. ಆ ಸಾಬಿ ನಿಜವಾಗಿಯೂ ಸಾಯುವ ಸ್ಥಿತಿಯಲ್ಲೇನೂ ಇರಲಿಲ್ಲ. ಒಂದು ಬೆರಳು ತುಂಡಾಗಿತ್ತು, ಅಷ್ಟೆ ಅಲ್ಲದೆ ಅವನಿಗಾಗಿದ್ದ ಉಳಿದ ಗಾಯಗಳೂ ಆಸ್ಪತ್ರೆಯಲ್ಲಿ ಗುಣಮುಖವಾಗುತ್ತಿದ್ದುವು. ಬೆಟ್ಟಳ್ಳಿ ಕಲ್ಲಯ್ಯಗೌಡರು ಮತ್ತು ದೇವಯ್ಯನ ಮುಖಾಂತರ ತೀರ್ಥಹಳ್ಳಿಗೆ ಹೋಗಿ ಪಾದ್ರಿಗೆ ದೂರುಕೊಟ್ಟಿದ್ದ ಬಚ್ಚನಿಂದ ಇಷ್ಟೆಲ್ಲ ಕಿತಾಪತಿ ನಡೆದದ್ದು ಯಾರಿಗೂ ಇನ್ನೂ ಗೊತ್ತಾಗಿರಲಿಲ್ಲ. ದೇವಯ್ಯಗೌಡರನ್ನೂ ತನ್ನನ್ನೂ ಕಿಲಸ್ತರ ಜಾತಿಗೆ ಸೇರಿಸುತ್ತಾನೆಂದು ಗುತ್ತಿ ಪಾದ್ರಿಗೆ ಬಾಯಿಗೆ ಬಂದ ಹಾಗೆ ಬಯ್ದನು ಎಂದು ಬಚ್ಚ ಜೀವರತ್ನಯ್ಯನ ಕಿವಿಗೆ ವಿಷ ಹೊಯ್ದಿದ್ದನು. ಅದರಲ್ಲಿ ಬಚ್ಚನಿಗಿದ್ದ ನಿಜವಾದ ಉದ್ದೇಶ. ಹೇಗಾದರೂ ಮಾಡಿ ಗುತ್ತಿಯನ್ನು ಲಾಕಪ್ಪಿನಲ್ಲಿ ಇಡಿಸಿಯೋ ಜೈಲಿಗೆ ಹಾಕಿಸಿಯೋ ದೂರವಾಗಿಟ್ಟಿದ್ದರೆ, ತಾನು ತಿಮ್ಮಿಯನ್ನು ನಿರ್ವಿಘ್ನವಾಗಿ ಮದುವೆಯಾಗಬಹುದು ಎಂಬುದೆ! ಜೀವರತ್ನಯ್ಯ ತನ್ನ ಜಾತಿಯವನೇ ಆಗಿದ್ದ ಜಮಾದಾರನ ಸಹಾಯದಿಂದ ಇದನ್ನೆಲ್ಲ ಏರ್ಪಡಿಸಿದ್ದನು. ಅದನ್ನೆಲ್ಲ ಪೋಲೀಸಿನವರಿಗೆ ಭರಮೈಹೆಗ್ಗಡೆಯವರಿಗೆ ಯಾವ ಭರವಸೆ ಕೊಡುವುದೂ ಅಷ್ಟೇನೂ ಕಷ್ಟವಾಗಿರಲಿಲ್ಲ.

ಗುತ್ತಿ ಕುಂಟುತ್ತಾ ಪೋಲೀಸಿನವರ ನಡುವೆ ನಿಧಾನವಾಗಿ ಸಾಗಿದ್ದನು. ತನಗೂ ತನ್ನ ಹೆಂಡತಿಗೂ ಒದಗಿದ್ದ ಕಷ್ಟವನ್ನು ನೆನೆದಂತೆಲ್ಲಾ ಅವನಿಗೆ ದುಃಖ ಉಕ್ಕಿ ಬರುತ್ತಿತ್ತು. ಮೊನ್ನೆ ಮೊನ್ನೆ ತಾನೇ ಮದುವೆಯಾಗಿ, ಒಂದೆರಡು ದಿನ ಮಗ್ಗುಲಲ್ಲಿ ಮಲಗಿಸಿಕೊಂಡೂ ಅಂಗಸುಖದಿಂದ ರುಚಿಯರಿತಿದ್ದ ಅವನಿಗೆ, ಮಾವ ದೊಡ್ಡಬೀರ ತನ್ನ ಮಗಳನ್ನು ತವರಿಗೆ ಕರೆದೊಯ್ದಾಗಲೆ ಸಹಿಸಲಾರದಷ್ಟು ಖೇದವಾಗಿತ್ತು. ಜೊತೆಗೆ, ಹಾಳು ಇಜಾರದ ಸಾಬಿಯ ದೆಸೆಯಿಂದ ಕಾಳಿಗೆ ಬೇರೆ ಪೆಟ್ಟು ಬಿದ್ದು ಯಾತನಗೀಡು ಮಾಡಿತ್ತು. ಒಂದು ದೃಷ್ಟಿಯಿಂದ ಆ ಯಾತನೆಯನ್ನೂ ಅವನು ಸ್ವಾಗತಿಸಿದ್ದನು, ಏಕೆಂದರೆ ಅದು ತಿಮ್ಮಿಯ ಅಗಲಿಕೆಯ ಉರಿಯನ್ನು ಕೊಂಚ ಮಟ್ಟಿಗಾದರೂ ಮರೆಯಿಸುತ್ತಿತ್ತು. ಕಾಲು ಗುಣವಾದೊಡನೆಯ ತಾನು ಬೆಟ್ಟಳ್ಳಿಗೆ ಹಾರಿಹೋಗಿ ತಿಮ್ಮಿಯನ್ನು ಕರೆತರುತ್ತೇನೆ ಎಂದು ಹೊಂಗನಸು ಕಟ್ಟಿಕೊಂಡಿದ್ದನು. ಆಗ ಬಂದಿತ್ತು ಗುಸು ಸುದ್ದಿ: ತಿಮ್ಮಿಯನ್ನು ಕರಕೊಂಡು ಹೋದುದರ ಉದ್ದೇಶ ಅವಳನ್ನು ಹಿಂದಕ್ಕೆ ಕಳುಹಿಸಿ ಕೊಡುವುದಕ್ಕಲ್ಲ ಎಂದು! ಗುತ್ತಿಯ ಚೇತನವಲ್ಲ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತ್ತು. ಕಾಳು ತುಸು ಗುಣವಾದರೆ ಸಾಕಲ್ಲಾ ಎಂದು ಪರಿತಪಿಸುತ್ತಿದ್ದನು. ಅಷ್ಟರಲ್ಲಿ ಪೋಲೀಸರು ಬಂದು ತನ್ನನ್ನು ಹಿಡಿದಿದ್ದರು! ಈಗ ಅವರ ನಡುವೆ, ಕಟುಕರ ನಡುವಣ ಕುರಿಯಂತೆ, ತಲೆಬಗ್ಗಿಸಿಕೊಂಡು ಹೋಗುತ್ತಿದ್ದಾನೆ. ತೀರ್ಥಹಳ್ಳಿಗೆ! ಮಳೆ ಸುರಿಯುತ್ತಿದೆ. ದಾರಿಯುದ್ದಕ್ಕೂ ಅವನು ಏನೊಂದು ಂಆತಿಗೆ ಹೋಗಿರಲಿಲ್ಲ.

ಗುತ್ತಿಯ ತಲೆಯಲ್ಲಿ ಏನೇನೋ ಚಿಂತೆ ಸುಳಿದಾಡುತ್ತಿವೆ. ಒಡೆಯರು ಹೇಳಿದ್ದನ್ನೆಲ್ಲ ನೆನೆಯುತ್ತಾನೆ. ಅವರು ಕಣ್ಣು ಮಿಟುಕಿಸಿದುದರ ಅರ್ಥ ಏನು ಎಂದು ಪರಿಚಿಂತಿಸುತ್ತಾನೆ. ದಾರಿಯಲ್ಲಿ ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡುಬಿಡು ಎಂದರೆಲ್ಲವೆ ಎಂದು ಆಲೋಚಿಸುತ್ತಾನೆ! ತಿಮ್ಮಿಯ ನೆನಪು ಬರುತ್ತದೆ; ಒಡನೆಯೆ ಅವನ ಚೈತನ್ಯ ತಪ್ಪಿಸಿಕೊಂಡು ಒಡುವ ಸಾಹಸಕ್ಕೆ ಅನುವಾಗುತ್ತದೆ…. ಮತ್ತೆ ವಿವೇಕ ಮೂಡುತ್ತದೆ: ಈ ಇಬ್ಬರು ಪೋಲೀಸರಿಂದ ಹೇಗೆ ತಪ್ಪಿಸಿಕೊಂಡು ಓಡಲಿ? ಸಿಕ್ಕಿಬಿದ್ದರೆ ನನ್ನ ಗತಿ ಏನಾಗುತ್ತದೆ? ಕಾಲಾದರೂ ಸರಿಯಾಗಿ ಇದ್ದಿದ್ದರೆ ಒಂದು ಕೈ ನೋಡಬಹುದಿತ್ತು. ಅಯ್ಯೋ ಎಂದು ಎದೆ ಒಳಗೊಳಗೆ ಬೇಯುತ್ತದೆ. ‘ಇಂದೊಮ್ಮೆ ಹೇಗಾದರೂ ತಪ್ಪಿಸಿಕೊಂಡು ತಿಮ್ಮಿಯನ್ನು ಸೇರಿದರೆ, ಆಮೇಲೆ ನಮ್ಮನ್ನು ಕಂಡುಹಿಡಿಯುವವರಾರು? ನೋಡುತ್ತೇನೆ!’ ಎಂದುಕೊಳ್ಳುತ್ತದೆ ಅವನ ವಿರಹದಗ್ಧ ಮನಸ್ಸು….ಚಿಂತಿಸುತ್ತಿದ್ದಂತೆ ಏನೋ ಹೊಳೆಯಿತು ತಲೆಗೆ!

‘ಅದೇ ಉಪಾಯ! ನೋಡಿಯೇಬಿಡುತ್ತೇನೆ!’ ಎಂದು ಧೃಡ ಮಾಡಿಕೊಂಡನು. ಎಚ್ಚರಿಕೆಯಿಂದ ತನಗೆ ಅಡಿಅಡಿಯೂ ಪರಿಚಿತವಾಗಿದ್ದ ಹೆದ್ದಾರಿಯ ಇಕ್ಕೆಲಗಳನ್ನೂ ಚೆನ್ನಾಗಿ ವೀಕ್ಷಿಸುತ್ತಾ ನಡೆಯತೊಡಗಿದನು….‘ಆ ಕ್ಯಾದಗೆ ಹಿಂಡಲ ಹತ್ರ ಕೆರೆ ಅಂಗಳದ ಕಂಪ ಅದೆಯಲ್ಲಾ ಅಲ್ಲೇ ಕೊಟ್ಟರೆ ಕೊಡಬೇಕು ಇವರಿಗೆ ಕೈ! ಆ ಕಂಪದಾಗೆ ಒಂದು ಕಡಾನೇ ಸಿಕ್ಕೊಂಡು ಬಿದ್ದಿತ್ತು. ಆ ದೊಡ್ಡ ಬ್ಯಾಟೀಲಿ! ಇನ್ನು ಈ ಗಿರ್ಲು ಮೀಸೆ ಧಡಿಯ ಹೂತುಕೊಂಡು ಹೋಗಾದೇನು ಹೆಚ್ಚಿ?….  ಮತ್ತೆ ಈ ಸಣಕಲ ಮೀಸೆ ಬೋಳ? ಆ ಹಳುವಿನ ಗಿಜರಿನಾಗೆ ಇಂವ ನನ್ನ ಅಟ್ಟಿ ಹಿಡಿಯಾದು ಅದೇ! ಮಳೆ ಬ್ಯಾರೆ ಹುಯ್ತಾ ಇದೆ! ಆಗಿದ್ದಾಗ್ಲಿ, ನೋಡೇಬಿಡ್ತೀನಿ!’….

ಇದ್ದಕ್ಕಿದ್ದ ಹಾಗೆ ಗುತ್ತಿ ಡುರುಕ್ಕೆಂದು ಹೂಸು ಕೊಟ್ಟು ನಿಂತನು!

ಥೂ! ಥೂ! ಥೂ! ತುಪ್ಪುತ್ತಾ ಶಪಿಸುತ್ತಾ, ಆದರೂ ನಗು ತಡೆಯಲಾರದ ಕಿಸಕ್ಕನೆ ನಕ್ಕು, ಪೋಲೀಸಿನವರಿಬ್ಬರೂ ಗುತ್ತಿಯಿಂದ ದೂರ ನೆಗೆದು ನಿಂತರು.

ಗುತ್ತಿ ರಸ್ತೆಯ ಮಧ್ಯೆ ಕೂತು, ಹೊಟ್ಟೆ ಕಿವುಚಿಕೊಳ್ಳುತ್ತಾ, ಮುಖದ ಮೇಲೆ ಯಮಯಾತನಾಭಂಗಿಯನ್ನು ಪ್ರದರ್ಶಿಸುತ್ತಾ, ಅಯ್ಯೋ ಅಯ್ಯೋ ಎಂದು ನರಳುತ್ತಿದ್ದನ್ನು ನೋಡಿ ಗಿರ್ಲುಮಿಸೆಯವನು ಸ್ವಲ್ಪ ಹತ್ತಿರಕ್ಕೆ ಬಂದು “ಏನಾಯ್ತೋ? ಏನಾಯ್ತೋ” ಎಂದು ಕೇಳಿದನು.

ಗುತ್ತಿ ಅರ್ಧ ಉಸಿರು ಕಟ್ಟಿದವನಂತೆ ನರಳಿದನು “ಹೊಟ್ಟೆ ಕಚ್ತದೇ, ನನ್ನೊಡೆಯಾ! ಒಂದು ಚೂರು ಹೊರಕಡೀಗೆ ಹೋಗಿ ಬತ್ತೀನಿ!”

“ಎಲ್ಲಿಗೆ ಹೋಗ್ತಾನಂತೆ? ಕಳ್ಳಮಾದರ್ಚೋತ್ ಸೂಳೇಮಗ, ಏನೋ ಹುನಾರ್ ತಗೀತಿದಾನೆ! ಏಳೋ, ಏಳೋ, ಬೋಳಿಮಗನೆ, ಒದಿತೀನಿ ನೋಡು.” ಹತ್ತಿರಕ್ಕೆ ಬರುತ್ತಾ ಬೈದನು ಬೋಳುಮೀಸೆಯನು.

ಎಲ್ಲಿಗೂ ಹೋಗಾದಿಲ್ಲಾ, ನನ್ನೊಡೆಯಾ…. ಹೊಟ್ಟೆ ಕಚ್ತದೇ…. ಹೊರಕಡೆಗೆ ಹೋಗಿ ಬತ್ತೀನಿ…. ದೂರ ಹೋಗದಿಲ್ಲಾ…. ಇಲ್ಲೇ ಮಟ್ಟಿನ ಹಿಂದೆ ಕೂತುಗೋತೀನಿ!” ಎನ್ನುತ್ತಾ ಕಂಬಳಿಕೊಪ್ಪ ಹಾಕಿದ್ದ ಯಾತನಾಕ್ಲಿಷ್ಟ ಮುಕವನ್ನೆತ್ತಿ ಬೋಳುಮೀಸೆಯವನ ಕಡೆ ದೈನ್ಯದಿಂದ ನೋಡಿದನು.

“ಪಾಯಿಖಾನಿಗೆ ‘ಹೊರಕಡೆ’ ಅಂತಾ ಹೇಳ್ತಾರೆ ಈ ಹಳ್ಳಿ ಜನ. ಶನಿಸೂಳೆಮಗ ಹೋಗಿಯಾದ್ರೂ ಬರ್ಲಿ.” ಹೇಳಿತು ಗಿರ್ಲುಮೀಸೆಯ ಸಹಾನುಭೂತಿಯ ವಾಣಿ. ಅಷ್ಟರೊಳಗಾಗಲೆ ಗುತ್ತಿ ಎರಡು ಮೂರು ಸಾರಿ ಹೂಸು ಬಿಟ್ಟಿದ್ದನು. ಹತ್ತಿರ ಬಂದಿದ್ದ ಬೋಳುಮೀಸೆಯವನು ನಾತ ಸಹಿಸಲಾರದೆ ಮೂಗು ಮುಚ್ಚಿಕೊಂಡು ದೂರ ಹೋಗುತ್ತಾ ಕೂಗಿದನು: “ಸಾಯೋ ಬೇಗ, ನಿನ್ನ ಹಾಳು ಹೊಟ್ಟೆಗೆ ಬೆಂಕಿಹಾಕ!”

ಗುತ್ತಿ ನಿಧಾನವಾಗಿ ಎದ್ದು, ಕೇದಗೆ ಹಿಂಡಿಲನ್ನೂ, ಉಸುಬಿನ ಕೆರೆಯ ಅಂಗಳವನ್ನೂ ಹಸಿರುಹುಲ್ಲು ಹಬ್ಬಿ ಸಾಧಾರಣ ಬಯಲಿನಂತೆ ತೋರುತ್ತಿದ್ದ ಕಂಪದ ಹುಸಿ ನೆಲವಿದ್ದ ಮೂಲೆಯನ್ನೂ ಸಮೀಕ್ಷಿಸಿದನು. ತಾನು ಎತ್ತ ಕಡೆಯಿಂದ ಹೋಗಿ, ಎಲ್ಲಿ ‘ಹೊರಕಡೆ’ಗೆ ಕೂರಬೇಕು ಎಂಬುದನ್ನೂ ತಜ್ಞಶೀಘ್ರತೆಯಿಂದ ನಿಶ್ಚಯ ಮಾಡಿಕೊಂಡನು. ಇದ್ದಕ್ಕಿದ್ದಹಾಗೆ, ಬಹಳ ಅವಸರವಾದಂತೆ, ಮೊಳಕಾಲಿನವರೆಗೆ ಸುತ್ತಿದ್ದು ಕೊಳಕಲು ಮುದ್ದೆಯಾಗಿದ್ದ ತನ್ನ ಅಡ್ಡಪಂಚೆಯನ್ನು ಅಂಡೆಲ್ಲ ಕಾಣುವಂತೆ ಎತ್ತಿ, ಒಳಗೆ ಕಟ್ಟಿದ್ದ ಲಂಗೋಟಿಯನ್ನು ಬಿಚ್ಚುವವನಂತೆ ನಟಿಸುತ್ತಾ ರಸ್ತೆಯನ್ನು ಬಿಟ್ಟು ಇಳಿಜಾರಿನಲ್ಲಿ ಓಡಿದನು! ಪೋಲೀಸಿನವರಿಬ್ಬರೂ ಅವನ ರೋಮಮಯ ಕುಂಡೆಯ ದರ್ಶನಕ್ಕೆ ಜುಗುಪ್ಸೆ ಪಟ್ಟು, ‘ಥೂ! ಥೂ! ಥೂ!’ ಎಂದು ಉಗುಳುತ್ತಾ ‘ಸಾಕಪ್ಪಾ ಈ ಹೊಲೆಸೂಳೆಮಗನ ಸಾವಾಸ!’ ಎಂದು ಬಯ್ಯುತ್ತಾ ಮುಖತಿರುಗಿಸಿಕೊಂಡರು.

“ಏಯ್ ದೂರ ಹೋಗಬೇಡೋ!” ಎಂದು ಆಜ್ಞೆ ಕೂಗಿತು ಗಿರ್ಲುಮೀಸೆ.

ಅವನ ಅಪ್ಪನ ಮನೆಗೆ ಎಲ್ಲಿಗೆ ಸಾಯ್ತಾನೆ?” ಎಂದಿತು ಬೋಳುಮೀಸೆ.

ಈ ಹಾಳು ಪೋಲೀಸು ಕೆಲಸ ನನಗೆ ಯಾಕೆ ಬೇಕಿತ್ತು, ಮಾಯಿಂದಪ್ಪೂ?” ಎಂದು ರಸ್ತೆಯ ಅಂಚಿನಲ್ಲಿ ತುದಿಗಾಲ ಮೇಲೆ ಕೂತು, ಕೊಡೆಯ ಮರೆಯಲ್ಲಿ ಬೀಡಿ ಹೊತ್ತಿಸಲು ಅನುಗುಣವಾಗುತ್ತಿತ್ತು, ಗಿರ್ಲುಮೀಸೆ.

“ಈ ದನಗೋಳು ಮಳೇಲಿ ಸಾಲದಕ್ಕೆ ಈ ಹೊಲೆಸೂಳೇಮಗನ್ದು ಬೇರೆ ರಂಪ!” ಎಂದು ಬೋಳುಮೀಸೆ ಗುತ್ತಿ ಹೋದತ್ತಕಡೆ ನೋಡುತ್ತಿತ್ತು.

ಯಾವ ಪೊದೆಯ ಮರೆಯಲ್ಲಿ ಗುತ್ತಿ ಪಾಯಖಾನೆಗೆ ಕೂತಹಾಗೆ ಮಾಡಿದ್ದನೋ ಅಲ್ಲಿಂದ ಸ್ವಲ್ಪ ದೂರದಲ್ಲಿ ರಸ್ತೆಯ ಅಂಚಿನ ಕಾಡಿನಲ್ಲಿ ಯಾವುದೋ ಪ್ರಾಣಿ ಓಡಾಡಿದ ಸದ್ದಾಯಿತು. ಪಟ್ಟಣಜೀವಿಗಳಾದ ಪೋಲೋಸರಿಬ್ಬರಿಗೂ ತುಸು ತಲ್ಲಣವಾಯ್ತು, ಹುಲಿಯೋ ಏನೋ ಎಂದು.

ಆ ಶಂಕೆಯ ನಿವಾರಣಾರ್ಥವಾಗಿಯೂ ಮತ್ತು ಧೈರ್ಯ ತಂದುಕೊಳ್ಳುವುದಕ್ಕಾಗಿಯೂ ಗಿರ್ಲುಮೀಸೆ ‘ಏಯ್, ಆಯ್ತೇನೋ? ಬೇಗ ಬಾರೊ!’ ಎಂದು ಕೂಗಿ, ಬೀಡಿ ಹೊತ್ತಿಸಲು ಪ್ರಯತ್ನಿಸತೊಡಗಿದನು. ಆದರೆ ಆ ಮಳೆಗಾಲದಲ್ಲಿ ಅದು ಕೈಗೊಡುವ ಸಂಭವ ಕಾಣಲಿಲ್ಲ. ಬರಿದೆ ಬೆಂಕಿಕಡ್ಡಿ ಕರ್ಚು ಮಾಡುವುದೇಕೆ ಎಂದು ಪೊಟ್ಟಣವನ್ನೂ ಬೀಡಿಯನ್ನೂ ಜೇಬಿಗೆ ಹಾಕಿಕೊಂಡು ಎದ್ದು ನಿಂತು ನೋಡಿದಾಗ, ಗುತ್ತಿ ಅಲ್ಲಿ ಎಲ್ಲಿಯೂ ಕೂತಿದ್ದಂತೆ ಭಾಸವಾಗಲಿಲ್ಲ! ಕರೆದರೆ ಉತ್ತರವಿಲ್ಲ!

“ಕೊಟ್ಟ ಕಣೋ ಸೂಳೆಮಗ ಕೈಯ!” ಎಂದೋಡಿ ಕೆರೆಯ ಅಂಗಳದ ನೀರಿಲ್ಲದ ಹಸುರು ನೆಲದ ಕಡೆಗೆ ಹಾರಿ ಧಾವಿಸುತ್ತಾ ಗಿರ್ಲು ಮೀಸೆಯವನು ಬೋಳುಮೀಸೆಯವನಿಗೆ ಕೂಗಿದನು: “ಮಾಯಿಂದಪ್ಪೂ, ಮಾಯಿಂದಪ್ಪೂ, ಅತ್ತ ಕಡೆಯಿಂದ ಓಡಿ ಬಾ! ಅಡ್ಡಹಾಕು! ಓಡು! ಓಡು!”

ಮಾಯಿಂದಪ್ಪು ಕೆರೆಯನ್ನು ಬಳಸಿ ಸುತ್ತುಗಟ್ಟುವ ಉದ್ದೇಶದಿಂದ ಅತ್ತಕಡೆ ಓಡಿ ಕಾಡಿನ ಹಳುವಿಗೆ ನುಗ್ಗಿದನು. ಆದರೆ ಆ ಮುಳ್ಳಿನ ಗಿಜರಿನಲ್ಲಿ ಅವನು, ಓಡುವುದಿರಲಿ, ಚಲಿಸುವುದೆ ಹರ್ಮಾಗಾಲವಾಯಿತು. ಕಷ್ಟಪಟ್ಟು ನುಸುಳಿ ನಾಲ್ಕು ಹೆಜ್ಜೆ ಹೋಗುವುದರಲ್ಲಿ ಗುತ್ತಿ ಛೂ ಬಿಟ್ಟಿದ್ದ ಅವನ ದೈತ್ಯನಾಯಿ ಹುಲಿಯ – ಆ ಒಕ್ಕಣ್ಣಿನ ಸ್ವಾಮಿಭಕ್ತ ತನ್ನ ಒಡೆಯನನ್ನೆ ರಸ್ತೆಯ ಅಂಚಿನ ಕಾಡಿನಲ್ಲಿ ಮರೆಯಾಗಿ ಹಿಂಬಾಲಿಸುತ್ತಿತ್ತೆಂದು ತೋರುತ್ತದೆ. ಅವನ ಮೇಲೆ ರೌದ್ರವಾಗಿ ಬೊಗಳುತ್ತಾ ಎಗರಿತು. ಆ ಮುಳ್ಳು ಬಳ್ಳಿ ಗಿಜುರುಗಳ ಮಧ್ಯೆ ಮಾಯಿಂದಪ್ಪುಗೆ ನೆಟ್ಟಗೆ ನಿಲ್ಲಲೂ ಆಗುತ್ತಿರಲಿಲ್ಲವಾದ್ದರಿಂದ ಹುಲಿಯನ ಭಾರಕ್ಕೂ ವೇಗಕ್ಕೂ ಕಂಗಾಲಾಗಿ ಕೆಳಗೆ ಬಿದ್ದುಬಿಟ್ಟನು. ಹುಲಿಯು ಅವನನ್ನು ಕಚ್ಚುವ ಗೋಜಿಗೆ ಹೋಗದೆ, ಕಾಡಿನಲ್ಲಿ ಒಂದೇ ಸಮನೆ ಕುಂಟಿಕುಂಟಿ ಓಡುತ್ತಿದ್ದ ತನ್ನ ಒಡೆಯನ ಮೈಗಾವಲಾಗಿ ಅವನ ಹಿಂದೆ ಹಿಂದೆಯೆ ಓಡಿ ಬಿಟ್ಟಿತ್ತು!

ಮಾಯಿಂದಪ್ಪು ತತ್ತರಿಸಿಕೊಂಡು ಎದ್ದು ನಿಲ್ಲುವ ಹೊತ್ತಿಗೆ, ಆರ್ತಧ್ವನಿಯಿಂದ ತನ್ನನ್ನು ಹೆಸರು ಹಿಡಿದು ಕೂಗುತ್ತಿದ್ದ ದಫೇದಾರ ಮಾನನಾಯಕರ ಬೊಬ್ಬೆ ಕೇಳಿಸಿತು! ಏನೊಂದು ಅರ್ಥವಾಗದ ಮಾಯಿಂದಪ್ಪು ಹಿಂದುರುಗಿ, ಕೂಗು ಕೇಳಿಸುತ್ತಿದ್ದ ದಿಕ್ಕಿಗೆ ರಸ್ತೆಯ ಕಡೆಗೇ ಮತ್ತೆ ಓಡಿದನು, ಆ ಹಳುವಿನಲ್ಲಿ ತನಗೆ ಪರಮಸಾಧ್ಯವಾದ ವೇಗದಲ್ಲಿ.

ಮಾನನಾಯಕರ ಕೂಗೇನೊ ಕೇಳಿಸುತ್ತಿತ್ತು! ಆದರೆ ಮಾಯಿಂದಪ್ಪು ಎತ್ತ ಕಣ್ಣು ಹೊರಳಿಸಿದರೂ ದಫೇದಾರರು ದೃಗ್ಗೋಚರವಾಗಲಿಲ್ಲ. ದಿಗಿಲುಗೊಂಡು ಅತ್ತ ಇತ್ತ ಓಡಿ ಹುಡುಕಿ ನೋಡುತ್ತಾನೆ, ಕೆರೆಯ ಅಂಗಳದ ಹಸುರುನೆಲದಲ್ಲಿ, ಭೂಗರ್ಭದಿಂದ ಮೂಡಿ ನಿಂತ ವರಾಹವತಾರದಂತೆ, ಸೊಂಟದ ಮೆಲೆ ಮಾತ್ರ ಗೋಚರವಾಗಿ ನಿಂತಿದ್ದರೋ ಮಾಯಿಂದಪ್ಪುಗೆ ಅರ್ಥವಾಗಲಿಲ್ಲ. ಅವರಿಗೆ ನೆರವಾಗಲು ಅವರತ್ತ ಏಕೆ? ಹೇಗೆ? ಹಾಗೆ ನಿಂತಿದ್ದರೋ ಮಾಯಿಂದಪ್ಪುಗೆ ಅರ್ಥವಾಗಲಿಲ್ಲ. ಅವರಿಗೆ ನೆರವಾಗಲು ಅವರತ್ತ ಓಡ ತೊಡಗಿದನು.

“ಬರಬೇಡ! ಬರಬೇಡ! ಅಲ್ಲೆ ನಿಲ್ಲು! ನಿಲ್ಲು! ನಿಲ್ಲು! ಉಸುಬು! ಕಂಪ!” ಮಾನನಾಯಕರು ಅಬ್ಬರಿಸಿ ಕೂಗಿದರು.

ಮಾಯಿಂದಪ್ಪಯ ಮರವಟ್ಟಂತಾಗಿ ನಿಂತುಬಿಟ್ಟನು.

ತತ್ಕಾಲದಲ್ಲಿ, ಆ ಜಡಿಮಳೆಯಲ್ಲಿ, ಆ ನಿರ್ಜನ ಕಾಡಿನ ಮಧ್ಯೆ, ಹೇಳುವವರು ಕೇಳುವವರು ದಿಕ್ಕು ದೆಸೆ ಯಾವುದೂ ಇಲ್ಲದಂತಾಗಿದ್ದ ಆ ವಾತಾವರಣದಲ್ಲಿ, ಕಷ್ಟಕ್ಕೆ ಸಿಕ್ಕಿದ್ದ ಅವರಿಬ್ಬರೂ ತಮ್ಮ ಪೋಲೀಸುಗಾರಿಕೆಯ ಮತ್ತು ಅಧಿಕಾರದ ಸರ್ವ ಉಪಾಧಿಗಳಿಂದಲೂ ಬಿಡುಗಡೆ ಹೊಂದಿ ಸಾಮಾನ್ಯ ಮನುಷ್ಯವ್ಯಕ್ತಿಗಳಾಗಿದ್ದರು: ಒಬ್ಬನು ಬೋವಿ-ಮನೆಯಲ್ಲಿ ಹೆಂಡತಿ ಬಾಣಂತಿಯಾಗಿರುವ ಗಂಡುಕೂಸಿನ ತಂದೆ,- ಮಾನನಾಯಕ! ಇನ್ನೊಬ್ಬನು ಸೆಟ್ಟಿ ವಿಧವೆಯಾಗಿದ್ದು ರೋಗದಿಂದ ನರಳುತ್ತಿರುವ ತಾಯಿಯ ಒಬ್ಬನೆ ಮಗ, – ಮಾಯಿಂದಪ್ಪು!

ಮಾಯಿಂದಪ್ಪು ನೋಡುತ್ತಿದ್ದಂತೆಯೆ ದೃಗ್ಗೋಚರವಾಗಿದ್ದ ಮಾನನಾಯಕರ ದೇಹಭಾಗ ಮೆಲ್ಲಮೆಲ್ಲನೆ ಕಡಮೆಯಾಗುತ್ತಿದ್ದಂತೆ ತೋರಿತು! ನಾಯಕರು ಮೇಲೆಳಲು ಪ್ರಯತ್ನಪಟ್ಟಂತೆಲ್ಲ ಕೆಳಕೆಳಕ್ಕೆ ಹೋಗುತ್ತಿದ್ದರು! ಅವರ ಸೂಚನೆಯ ಮೇರಗೆ ಮಾಯಿಂದಪ್ಪು ತನ್ನ ಪೋಲೀಸಿನ ಕರಿಯಪೇಟವನ್ನು ಬಿಚ್ಚಿ, ಒಂದು ತುದಿ ತನ್ನ ಕೈಯಲ್ಲಿರುವಂತೆ ಹಿಡಿದು, ಸುರಳಿ ಬಿಚ್ಚಿ ಬೀಸಿ ಎಸೆದನು. ಒಂದೆರಡು ಪ್ರಯತ್ನಗಳಲ್ಲಿಯೆ ನಾಯಕರು ಅದರ ಮತ್ತೊಂದು ತುದಿಯನ್ನು ತಮ್ಮನ್ನು ರಕ್ಷಿಸಲು ಐತಂದ ಪರಮಾತ್ಮನ ಪಾದಾರವಿಂದವೋ ಎಂಬಂತಹ ಭಕ್ತಿಯ ಕೃತಜ್ಞತೆಯಿಂದ ಬಿಗಿಯಾಗಿ ಹಿಡಿದುಕೊಂಡರು. ಆದರೆ ಮಾಯಿಂದಪ್ಪುವಿನಿಂದ ಉಸುಬಿನಲ್ಲಿ ಭದ್ರವಾಗಿ ಸಿಕ್ಕಿಕೊಂಡಿದ್ದ ಅವರನ್ನು ಹೊರಕ್ಕೆಳೆಯಲಾಗಲಿಲ್ಲ; ಕೆಳಕೆಳಕ್ಕೆ ಮುಳುಗುತ್ತಿದ್ದುದನ್ನು ತಪ್ಪಿಸಲು ಮಾತ್ರ ಸಾಧ್ಯವಾಯಿತು.

ಮಾನನಾಯಕರ ಕಣ್ಣಿಂದ ನೀರು ಸೋರಿದ್ದನ್ನೇನೋ ಕಂಡನು ಮಾಯಿಂದಪ್ಪು: ಅದರೆ ಅವರು ತೀರ್ಥಹಳ್ಳಿಯ ರಾಮೇಶ್ವರ ದೇವರಿಗೆ ಅನನ್ಯ ಭಕ್ತಿಯಿಂದ ಮನಸ್ಸಿನಲ್ಲಿಯೆ ಮಾಡಿಕೊಳ್ಳುತ್ತಿದ್ದ ಪ್ರಾರ್ಥನೆ ಮತ್ತು ಹೊತ್ತುಕೊಳ್ಳುತ್ತಿದ್ದ ಹರಕೆ ಕೇಳಿಸಿರಲಿಲ್ಲ;

‘ಸ್ವಾಮಿ, ಇದೊಂದು ಸಾರಿ ನಮ್ಮನ್ನು ಹೇಗಾದರೂ ಬಚಾವು ಮಾಡು! ಈ ಪಾಪಿಷ್ಠ ಪೋಲೀಸು ಕೆಲಸಕ್ಕೆ ಖಂಡಿತ ರಾಜಿನಾಮೆಕೊಟ್ಟು, ನನ್ನ ಗದ್ದೆ ತೋಟ ನೋಡಿಕೊಂಡು ಮಾಡಿಕೊಂಡು ನೆಮ್ಮದಿಯಾಗಿ ನಿನ್ನ ಸೇವೆ ಸಲ್ಲಿಸುತ್ತೇನೆ. ಏನೋ ಆ ಅಮಲ್ದಾರರು ಹೇಳಿದರು-ಬೋವೀ ಜನಾಂಗಕ್ಕೆ ನೀನೊಂದು ಭೂಷಣ ಆಗಿರುತ್ತೀಯಾ; ದಫೇದಾರನಾಗು-ಅಂತಾ. ನನಗೂ ದುರ್ಬುದ್ದಿ, ಕೆಟ್ಟಗಳಗೇಲಿ ಹೇಲು ತಿನ್ನಾಕೆ ಒಪ್ಪಿಕೊಂಡು ಕೆಟ್ಟೆ, ಸ್ವಾಮೀ! ಇದೊಂದು ಸಾರಿ ನನ್ನ ಕಾಪಾಡು!’

ರಾಮೇಶ್ವರನಿಗೆ ಅವರ ಪ್ರಾರ್ಥನೆ ಮುಟ್ಟಿತೋ ಏನೋ? ರಾಮೇಶ್ವರದ ದೇವಸ್ಥಾನದಲ್ಲಿ ಗಂಟೆಯ ಸದ್ದಾಗುವಂತೆ ಕೇಳಿಸಿತು. ಮಾನನಾಯಕರ ಕಿವಿಗಳಿಗೆ! ಭಗವಂತ ಇಷ್ಟು ಸುಲಭನೇ? ನಾಯಕರಿಗೆ ಅಚ್ಚರಿಯಾಯಿತು. ಆದರೆ ಆ ಘಂಟೆಯ ದನಿ ಮಾಯಿಂದಪ್ಪುವಿಗೂ ಕೇಳಿಸಿತ್ತು. ಅವನು ಕತ್ತು ತಿರುಗಿಸಿ ತೀರ್ಥಹಳ್ಳಿಯ ದಿಕ್ಕಿಗೆ ನೋಡಿದನು. ಏನೂ ಕಾಣಿಸಲಿಲ್ಲ. ಮೇಗರವಳ್ಳಿಯ ದಿಕ್ಕಿಗೆ ನೋಡಿದಾಗ, ಗಂಟೆ ಗಗ್ಗರ ಕಟ್ಟಿದ್ದ ಸುಸ್ವರದ ಕೊರಳಿನ ಎತ್ತುಗಳು ಕಮಾನುಗಾಡಿಯೊಂದನ್ನು ಎಳೆದುಕೊಂಡು ತಮ್ಮನ್ನು ಸಮೀಪಿಸುತ್ತಿದ್ದುವು.

ಗಾಡಿ ನಿಂತಿತು, ಹಿಂಬಾಗದಿಂದ ದೇವಯ್ಯನೂ ಮುಕುಂದಯ್ಯನೂ ಕೊಡೆ ಸುಡಿಸಿಕೊಳ್ಳುತ್ತಲೆ ಹಾರಿದರು. ಮಳೆಯಲ್ಲಿ ತೊಯ್ಯುತ್ತಲೆ ಕರಿಪೇಟದ ತುದಿಯನ್ನು ಹಿಡಿದು ನಿಂತಿದ್ದ ಪೋಲೀಸನವನನ್ನು ಗುರುತಿಸಿ, ದೇವಯ್ಯ ಕೇಳಿದನು “ಏನು, ಮಾಯಿಂದಪ್ಪು? ಇದ್ಯಾಕೆ ಇಲ್ಲಿ ಹೀಂಗೆ ನಿಂತೀಯಾ?”

ಅಷ್ಟರಲ್ಲಿ ಕೆರೆಯಂಗಳದ ಕಡೆಯಿಂದ “ನಮಸ್ಕಾರ, ಗೌಡರಿಗೆ.” ಎಂದು ಯಾರೂ ಕೂಗಿದ್ದನ್ನು ಕೇಳಿ ಅತ್ತಕಡೆ ನೋಡುತ್ತಾರೆ: ಗಿರ್ಲು ಮೀಸೆಯ ದಫೇದಾರ ಮಾನನಾಯಕರು ಹೂತುಕೊಂಡು ನಿಂತಿದ್ದಾರೆ!

ಎತ್ತಿನ ಕೊರಳು ಬಿಚ್ಚಿ, ಗಾಡಿ ಬಿಟ್ಟು, ಕಂಬಳಿಕೊಪ್ಪೆ ಹಾಕಿಕೊಂಡು ಓಡಿಬಂದಿದ್ದ ಬಚ್ಚನಿಗೆ ಆಜ್ಞಾಪಿಸಲು, ಅವನೂ ಮಾಯಿಂದಪ್ಪುವೂ ಸೆರಿ ಮೆಲ್ಲನೆ ಜಗ್ಗಿಸಿ ಎಳೆದೂ ಎಳೆದೂ ದಫೇದಾರರನ್ನು ದಡಕ್ಕೆ ತಂದರು.

ಮಾನನಾಯಕರು ಕಂಪದ ಕೆಸರು ಮೆತ್ತಿದ ಬಟ್ಟೆಗಳನ್ನು ತೆಗೆಯುವುದೆ ಮುಂತಾದ ಕೆಲಸದಲ್ಲಿ ತೊಡಗಿದ್ದಾಗ, ಮಾಯಿಂದಪ್ಪು ನಡೆದುದನ್ನೆಲ್ಲ ಸಂಕ್ಷೇಪವಾಗಿ ತಿಳಿಸಿ:

“ಬಡ್ಡೀಮಗ, ನೋಡಿ, ಎಂಥಾ ಜಾಗ ಆರಿಸಿದ್ದಾನೆ ಓಡಿಹೋಗುವುದಕ್ಕೆ?” ಎಂದನು.

“ದಫೇದಾರ್ರು ಉಳಿದದ್ದೆ ಹೆಚ್ಚು ಈ ಕಂಪದಾಗೆ. ಇದರೊಳಗೆ ಸುಮಾರು ಹಂದಿ ಹುಲಿ ಕಡ ಮಿಗ ಎಲ್ಲಾ ಹೂತುಕೊಂಡು ಹೋಗ್ಯವೆಯಂತೆ!” ಎಂದನು ಬಚ್ಚ.

“ಅಂತೂ ಗಾಳದ ತುದಿಗೆ ಒಳ್ಳೆ ಎರೆ ಸಿಕ್ಕಿಸಿಕೊಂಡು ಕರೀ ಪೇಟದ ನೇಣು ಹಿಡುಕೊಂಡು ನಿಂತಿದ್ದೀ ಅನ್ನು!” ಅಂತಹ ಅಪಘಾತವೇನೂ ನಡೆಯದೆ ಅಪಾಯದಿಂದ ಪಾರಾಗಿದ್ದುದರಿಂದ ಸಂದರ್ಭವನ್ನು ವಿನೋದಕ್ಕೆ ತಿರುಗಿಸಿದ್ದನು ದೇವಯ್ಯ.

ಆ ತೊಂದರೆಯ ಸನ್ನಿವೇಶದಲ್ಲಿಯೂ ಎಲ್ಲರೂ ನಕ್ಕರು, ತುಸುದೂರದಿಂದ ಆಲಿಸಿದ್ದ ಮಾನನಾಯಕರೂ ಸೇರಿ.

ಮಾಯಿಂದಪ್ಪು ಗುತ್ತಿಯನ್ನು ಮತ್ತೆ ಹಿಡಿಯುವ ಮಾತನ್ನೆತ್ತಿದಾಗ, ದೇವಯ್ಯ ಬುದ್ದಿ ಹೇಳಿದನು: “ನಿಮ್ಮ ಪೋಲೀಸರನ್ನೆಲ್ಲ ಕರಕೊಂಡು ಬಂದು ಷಿಕಾರಿ ನುಗ್ಗಿದರೂ ಅಂವ ಇನ್ನು ಬಡಪಟ್ಟಿಗೆ ಸಿಕ್ಕೋದಿಲ್ಲ. ಅಂವ ಏನು ಸಾಮಾನ್ಯ ಅಂತ ಮಾಡಿರೇನು? ಪುಂಡ! ಜಗಪುಂಡ! ಆ ಸಿಂಬಾವಿ ಹೆಗ್ಗಡೆಯ ಚಿತಾವಣೆ ಬೇರೆ ಇದೆ ಅವನಿಗೆ ಹುಡಗೇರನ್ನ ಹಾರಿಸೋದು, ದೊಂಬಿ ಮಾಡೋದು, ಕಳವು ಖೂನಿ ನಡಸೋದು, ಒಂದೋ ಎರಡೋ ಅಂವ ಮಾಡದಿದ್ದೇ ಇಲ್ಲ. ಇತ್ತ ಕಡೆಗೆಲ್ಲಾ ಅವನೊಬ್ಬ ಖದೀಮ್‌ಪುಂಡ ಆಗಿಬಿಟ್ಟಿದ್ದಾನೆ!”

ಬಚ್ಚನೂ ತನ್ನ ಸಲಹೆ ಸೇರಿಸಿದ್ದನು: “ಅಯ್ಯಾ, ಈ ಕಾಡಿನಲ್ಲಿ ಈ ಮಳೇಲಿ ಅಂವ ಇನ್ನೆಲ್ಲಿ ಸಿಕ್ತಾನೆ? ಎಂತಿದ್ರೂ ಇಂದೋ ನಾಳೆಯೋ ಬೆಟ್ಟಳ್ಳಿಗೆ ನಮ್ಮ ಕೇರಿಗೆ ಬಂದೇ ಬರ್ತಾನೆ. ಆಗ ಬೇಕಾದ್ರೆ ನಾ ಹಿಡುಕೊಡ್ತೀನಿ ಅಂವನ್ನ!”

ತನಗೆ ಚಿಕ್ಕಂದಿನಿಂದಲೂ ಚೆನ್ನಾಗಿ ಪರಿಚಿತನಾಗಿದ್ದು ತುಂಬ ಒಳ್ಳೆಯ ನಿಷ್ಠಾವಂತ ಸೇವಕನಾಗಿದ್ದ ಗುತ್ತಿಯನ್ನು ಕುರಿತು ಅವರಾಡುತ್ತಿದ್ದ ಮಾತುಗಳನ್ನು ಆಲಿಸಿ ಆಶ್ಚರ್ಯಪಡುತ್ತಾ ನಿಂತಿದ್ದನು ಮುಕುಂದಯ್ಯ.

ಮಾನನಾಯಕರು ತಮ್ಮ ಮಾನಸ್ಥಾನದ ಏರ್ಪಾಡುಗಳನ್ನೆಲ್ಲ ಪೂರೈಸಿ ಕೊಂಡಾದ ಮೇಲೆ, ಒದ್ದೆ ಬಟ್ಟೆಗಳಲ್ಲಿ ನಡುಗುತ್ತಿದ್ದ ಆ ಇಬ್ಬರು ಪೋಲೀಸರನ್ನೂ ಅವರ ಸಾಮಾನುಗಳ ಸಹಿತ ಗಾಡಿಯಲ್ಲಿ ಕೂರಿಸಿಕೊಂಡು, ಬೆಟ್ಟಳ್ಳಿಯ ಕಮಾನುಗಾಡಿ ಗಂಟೆ ಗಗ್ಗರಗಳ ಸುಸ್ವರಗೈಯುತ್ತಾ, ಎಡೆಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ತೀರ್ಥಹಳ್ಳಿಯ ಕಡೆಗೆ ಹೊರಟಿತು.

“ನೀವೆಲ್ಲಾದರೂ ಬರುವುದು ಸ್ವಲ್ಪ ತಡವಾಗಿದ್ದರೆ, ನನ್ನ ಹೆಣಾನೆ ಹಾಕಿಕೊಂಡು ಹೋಗಬೇಕಾಗುತ್ತಿತ್ತೇನೋ?” ಎಂದರು ದಫೇದಾರರು.

ಹಿಂತಿರುಗಿ ಬರುವಾಗ ಹೆಣಾ ಹಾಕಿಕೊಂಡು ಬರುವ ಅಶುಭಯೋಗವಿದ್ದ ಆ ಗಾಡಿ ಹೋಗುವಾಗೇಕೆ ಹೆಣಾ ಹೊತ್ತುಕೊಂಡು ಹೋದೀತು?