ಯಾರು ಬದುಕಲಿ, ಯಾರು ಸಾಯಲಿ, ಯಾರು ಹುಟ್ಟಲಿ, ಹುಟ್ಟದೆ ಹೋಗಲಿ, ಮಳೆಗಾಲ ನಿಲ್ಲುತ್ತದೆಯೆ? ಮಳೆಹಿಡಿದು ಕೂತಿತ್ತು, ನಾಲ್ಕುಪಾದಗಳನ್ನೂ ಬಲವಾಗಿ ಊರಿ! ಮೋಡ ಸದಾ ಕವಿದು ಸೂರ್ಯದರ್ಶನವೆ ಅಪೂರ್ವವಾಯಿತು. ತನ್ನ ದುರ್ದಮ್ಯ ವ್ಯಾಪಾರಗಳನ್ನು ನಿರ್ಲಕ್ಷವಾಗಿ ನಿರ್ದಾಕ್ಷಿಣ್ಯವಾಗಿ ಸಾಗಿಸಿತ್ತು ಬೃಹತ್ ಪ್ರಕೃತಿ. ಆ ಪ್ರಕೃತಿಯ ಪ್ರತಿರೂಪವಾದ ಸಹ್ಯಾದ್ರಿ ಪರ್ವತ ಕಾನನ ಶ್ರೇಣಿ ಮನುಷ್ಯರ ಅಲ್ಪ ಸುಖದುಃಖಗಳಿಗೆ ಸಂಪೂರ್ಣ ನಿಸ್ಸಂಗಿಯಾಗಿ ಭೀಷಣ ವರ್ಷಧಾರೆಯಲ್ಲಿ ತೊಪ್ಪನೆ ತೊಯ್ಯುತ್ತಾ ಹಬ್ಬಿ ಕೊಬ್ಬಿ ಉಬ್ಬಿ ನಿಂತಿತ್ತು.

ಆ ಭೂಮ ನಿಸರ್ಗದ ಮುಂದೆ ಹಳೆಮನೆ, ಕೋಣೂರು, ಹೂವಳ್ಳಿ, ಬೆಟ್ಟಳ್ಳಿ ಮತ್ತು ಸಿಂಬಾವಿಯಂತಹ ಏಕಾಗ್ರ ಕ್ಷುದ್ರ ಗ್ರಾಮಗಳ ಬದುಕಿನ ಆಶೆ ನಿರಾಶೆ ಕಷ್ಟ ಸುಖ ಶೋಕ ತಾಪಾದಿಗಳು ಯಃಕಶ್ಚಿತಗಳಾಗಿದ್ದುದರಲ್ಲಿ ಆಶ್ಚರ್ಯವೇನು? ತಂದೆ ತಾಯಿಯವರನ್ನು ಏಕಕಾಲದಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡ ಧರ್ಮುವ ಮನಃಸ್ಥಿತಿಯಾಗಲಿ; ತಾನು ಬಯಸಿದ ಹೆಣ್ಣು, ಆ ಹೆಣ್ಣಿನ ಇಚ್ಛೆಗೂ ವಿರುಧ್ದವಾಗಿ, ಮತ್ತೊಬ್ಬನ ಪಾಲಾಗುತ್ತದೆಯಲ್ಲಾ ಎಂಬ ಮುಕುಂದಯ್ಯನ ಹೃದಯವ್ಯಥೆಯಾಗಲಿ; ತಾನು ಹಾರಿಸಿಕೊಂಡು ಬಂದು ಮದುವೆಯಾಗಿದ್ದ ಹುಡುಗಿಯನ್ನು ಮತ್ತೆ ತವರಿಗೊಯ್ದು ಬಲಾತ್ಕಾರವಾಗಿ ಮತ್ತೊಬ್ಬನಿಗೆ ಮದುವೆ ಮಾಡಿಸುತ್ತಾರೆ ಎಂಬ ವಾರ್ತೆಯ ಬಡಬಾಗ್ನಿಯನ್ನು ಹೊಟ್ಟೆಯೊಳಗಿಟ್ಟುಕೊಂಡು, ಹೇಗೋ ಉಪಾಯದಿಂದ ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಮಳೆಗಾಲದ ಕಾಡಿನಲ್ಲಿ ತಲೆಮರೆಸಿಕೊಂಡು ಕಾಲ ಹಾಕುತ್ತಿರುವ ಗುತ್ತಿಯ ದಾರುಣ ಚಿತ್ತಸ್ಥಿತಿಯಾಗಲಿ; ನಿರಂತರ ರೋಗಿಷ್ಟನಾಗಿದ್ದರೂ ತನ್ನನ್ನು ಒಲಿದು ಬದುಕು ಸಾಗಿಸುತ್ತಿದ್ದ ತನ್ನ ಹೆಂಡತಿ ಅಕ್ಕಣಿ ಮೆಲ್ಲಮೆಲ್ಲಗೆ ಜಾರಿ ಚೀಂಕ್ರನಿಗೆ ವಶವಾಗುತ್ತಿದ್ದಾಳಲ್ಲಾ ಎಂದು ಒಳಒಳಗೆ ಕೊರಗಲಾರಂಭಿಸಿರುವ ಪಿಜಿಣನ ಬಾಳಬೇಗೆಯಾಗಲಿ; ಕಡೆಗೆ, ಪಾದ್ರಿಯಿಂದ ಅನೇಕಾನೇಕ ಪರಿತೋಷಗಳನ್ನು ಪಡೆದು, ಆತನಿಗೆ ತಾನು ಕ್ರೈಸ್ತ ಜಾತಿಗೆ ಸೇರುತ್ತೇನೆ ಎಂಬ ನಂಬುಗೆ ಬರುವಂತೆ ಮಾಡಿ, ಒಂದು ರೀತಿಯಲ್ಲಿ ಮಾತನ್ನೂ ಕೊಟ್ಟು, ಈಗ ಅದರಿಂದ ನುಣುಚಿಕೊಳ್ಳಲು ಹವಣಿಸುತ್ತಿರುವ ದೇವಯ್ಯನ ಹಾಸ್ಯಾಸ್ಪದವಾದ ಒಳತೋಟಿಯಾಗಲಿ-ಆ ಸಹ್ಯಾದ್ರಿಯ ಮಲೆ ಕಾಡು ಮಳೆ ಇವುಗಳ ಕಡೆಗಣ್ಣಿನ ಗಮನಕ್ಕಾದರೂ ಬರುತ್ತವೆಯೇ?-ಮಲೆಯೋ? ಅಲೆಅಲೆಅಲೆಯಾಗಿ ಬಾನ್ಮುಟ್ಟಿ ತಲೆಯೆತ್ತಿ ನಿಂತಿದೆ! ಕಾಡೋ? ದಿಗಂತವಿಶ್ರಾಂತವಾಗಿ, ದಟ್ಟವಾಗಿ, ವ್ಯಾಘ್ರಭೀಷಣವಾಗಿ, ವರಾಕಠೋರವಾಗಿ ಹಸರಿಸಿದೆ! ಮಳೆಯೋ? ಹಗಲೂ ಇರುಳೂ ಒಂದೇ ಸಮನೆ ಸುರಿಯುತ್ತಿದೆ, ಹೊಡೆಯುತ್ತಿದೆ, ಜಡಿಯುತ್ತಿದೆ!

ಮನೆಮನೆಯಲ್ಲಿಯ ಹಳ್ಳಿಯ ಜನರು ಗದ್ದೆಯ ಕೆಲಸಕ್ಕೆ ಶುರು ಮಾಡಿದ್ದಾರೆ: ಆರು ಕಟ್ಟುತ್ತಿದ್ದಾರೆ; ಅಗೋಡಿ ಮಾಡುತ್ತಿದ್ದಾರೆ; ಅಂಚು ಕೆತ್ತುತ್ತಿದ್ದಾರೆ. ಹಗಲು, ಕೂಣಿಹಾಕಿ ಮೀನು ಹಿಡಿಯುತ್ತಿದ್ದಾರೆ; ರಾತ್ರಿ, ದೊಂದಿ ಲಾಟೀನುಗಳ ಬೆಳಕಿನಲ್ಲಿ ಹತ್ತುಮೀನು ಕಡಿಯುತ್ತಿದ್ದಾರೆ. ಅಟ್ಟದ ಮೇಲಿದ್ದ ಗೊರಬುಗಳೆಲ್ಲ ಹೆಣ್ಣಾಳುಗಳ ತಲೆಗೇರಿ ಸಂಚರಿಸುತ್ತವೆ; ಹಾಸಿಗೆಯಲ್ಲಿಯೂ ಸಂಧಿಮೂಲೆಗಳಲ್ಲಿಯೂ ಇದ್ದ ಕಂಬಳಿಗಳೆಲ್ಲ ಕೊಪ್ಪೆಗಳಾಗಿ ಗಂಡಾಳುಗಳ ತಲೆಗೇರಿ ದುಡಿದಾಡುತ್ತಿವೆ. ಎತ್ತಿನ ಹಟ್ಟಿಯ ಉಳುಮೆಯ ಕೆಲಸದ ಎತ್ತುಗಳೆಲ್ಲ ರಜಾಕಾಲ ಮುಗಿದು ಇಸ್ಕೂಲು ಪ್ರಾರಂಭವಾದಂತಿದೆ!

ಹಳೆಮನೆಯ ದುರಂತ ಸಂಭವಿಸಿದ ತರುಣದಲ್ಲಿ ಯಾರು ಇಬ್ಬರು ಸಂಧಿಸಿದರೂ ಮೊದಮೊದಲಲ್ಲಿ ಮಾತು ಮೊದಲಾಗುತ್ತಿದ್ದದ್ದು ಒಂದೇ ವಿಷಯದಿಂದ: ತಿರುಪತಿಗೆ ಹೋಗಿದ್ದು ಹಿಂತಿರುಗಿದ್ದ ಹಳೆಮನೆ ದೊಡ್ಡಣ್ಣ ಹೆಗ್ಗಡೆಯವರು ಕಾಲವಾದ ಕಥೆ ಮತ್ತು ಅವರ ಹೆಂಡತಿ ರಂಗಮ್ಮ ಹೆಗ್ಗಡಿತಿಯವರ ಇಚ್ಛಾಮರಣದ ಸುದ್ದಿ! ಅಳುತ್ತಾ ಮಾತಾಡಿದರು; ನಗುತ್ತಾ ಮಾತಾಡಿದರು; ಉಳುತ್ತಾ ಮಾತಾಡಿದರು; ಅಂಚು ಕೆತ್ತುತ್ತಾ ಮಾತಾಡಿದರು; ಬಾಯಿಗೆ ಹಾಕಿಕೊಳ್ಳುತ್ತಾ ಮಾತಾಡಿದರು; ಎಲೆಯಡಕೆ ಜಗಿಯುತ್ತಾ ಮಾತಾಡಿದರು; ಬೆಳಗ್ಗೆ ಕೆಲಸಕ್ಕೆ ಹೋಗುತ್ತಾ ಮಾತಾಡಿದರು; ಬೈಗಿನಲ್ಲಿ ಮನೆಗೆ ಹಿಂದಿರುಗುತ್ತಾ ಮಾತಾಡಿದರು! ಎಷ್ಟು ಮಾತಾಡಿದರೂ ಸಾಲದ ಸುದ್ದಿ! ಎಷ್ಟು ಮೆಚ್ಚಿ ನುಡಿದರೂ ತೀರದ ಸುದ್ದಿ! ಕರುಣ, ಅದ್ಭುತ ಶಾಂತರಸಗಳಿಗೆ ಅಕ್ಷಯ ಪಾತ್ರೆಯಾಗಿ ಪವಿತ್ರ ತೀರ್ಥವಾರ್ತೆಯಾಗಿತ್ತು ಆ ಸುದ್ದಿ!

ಎಂತಹ ಹೂಳಿನ ಮೇಲೆಯೂ ಕಾಲಕ್ರಮೇಣ ಹುಲ್ಲು ಬೆಳೆಯುತ್ತದೆ; ಎಂತಹ ಸೂಡಿನ ಸುಟ್ಟು ನೆಲವನ್ನಾದರೂ ಕಾಲಕ್ರಮೇಣ ಹಸುರು ತಬ್ಬುತ್ತದೆ. ಅಲ್ಲಿ ಹೆಣ ಹೂಳಿದ್ದಾರೆಂಬ ಚಿಹ್ನೆಯೆ ಮಾಸಿಹೋಗುತ್ತದೆ; ಅಲ್ಲಿ ಹೆಣ ಸುಟ್ಟಿದ್ದರು ಎಂಬ ಗರುತೂ ಕಾಣದಂತೆ ಗರುಕೆ ತಬ್ಬಿ ನಳನಳಿಸಿ ಹಸುರು ನಗೆ ಬೀರುತ್ತದೆ. ಹಾಗೆಯೆ ಬದುಕಿನ ಇತರ ಸದ್ಯೋಮುಖ್ಯ ಸಂಗತಿಗಳು ಬರಬರುತ್ತಾ ಜನಮನವನ್ನಾಕ್ರಮಿಸಿ, ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮ ಹೆಗ್ಗಡಿತಿಯವರ ದಾರುಣ ಕಥೆಯನ್ನು ಕ್ರಮೇಣ ದೂರಸ್ಮೃತಿಯನ್ನಾಗಿ ಮಾಡತೊಡಗಿದ್ದವು.

ಉಳಿದೆಲ್ಲರಿಗಿಂತಲೂ ಹೆಚ್ಚಾಗಿ ದುಃಖಿಯಾಗಿದ್ದ ತಬ್ಬಲಿ ಧರ್ಮು ಸೂತಕಾನಂತರ ತಿಥಿ ಮೊದಲಾದ ಕರ್ಮಗಳೆಲ್ಲ ಪೂರೈಸಿದ ಮೇಲೆ ಕೋಣೂರಿಗೆ ಹಿಂದಿರುಗಿ ಮಾವನ ಮನೆಯಲ್ಲಿ, ಅಜ್ಜಿಯ ಮತ್ತು ಅತ್ತೆಯ ಅಕ್ಕರೆಯ ಆಶ್ರಯದಲ್ಲಿ, ಐಗಳ ಮಠದಲ್ಲಿ ಅನಂತಯ್ಯನವರಿಂದ ಎಂದಿನಂತೆ ಇತರ ಮಕ್ಕಳೊಡನೆ ಓದು ಬರಹ ಕಲಿಯಲು ತೊಡಗಿದ್ದನು. ಅವನ ಗೆಳೆಯರು ಕಾಡು, ತಿಮ್ಮು ಇಬ್ಬರೂ ಅವನಿಗೊದಗಿದ್ದ ದುರಂತದ ನಿಮಿತ್ತ ತಮ್ಮ ಗೆಳೆಯನನ್ನು ಎಂದಿಗಿಂತಲೂ ಹೆಚ್ಚು ಪ್ರೀತಿಯಿಂದಲೂ ಅಕ್ಕರೆಯಿಂದಲೂ ದಾಕ್ಷಿಣ್ಯದಿಂದಲೂ ಕಾಣುತ್ತಿದ್ದರು. ಧರ್ಮು ಯಾರಿಗೂ ತಿಳಿಯದಂತೆ ಅಳುತ್ತಿದ್ದು ಗೆಳೆಯರು ಸಮೀಪಿಸುತ್ತಿರುವುದನ್ನು ಕಂಡು ಕಣ್ಣೊರೆಸಿಕೊಂಡಾಗಲೆಲ್ಲ ಕಾಡು, ತಿಮ್ಮು ಇಬ್ಬರೂ ಅವನನ್ನು ನಾನಾ ರೀತಿಯಿಂದ ಸಂತವಿಸುತ್ತಿದ್ದರು: ‘ನಿನ್ನ ಅವ್ವ ಅಪ್ಪಯ್ಯ ಸ್ವರ್ಗದಲ್ಲಿದ್ದು ನೋಡುತ್ತಿದ್ದಾರೆ ಕಣೋ!’ ಐತನ ಹೆಂಡತಿ ಪೀಂಚಲು ನೋಡಿದಳಂತೆ, ಸೂಡಿನ ಬೆಂಕಿಯೆಲ್ಲ ಆರುತ್ತಿದ್ದಾಗ ಆಕಾಶದಿಂದ ಒಂದು ರಥ ಇಳಿದು ಬಂದು, ದೊಡ್ಡ ಮಾವಗೂ ದೊಡ್ಡತ್ತೆಗೂ ಹೂವಿನ ಹಾರ ಹಾಕಿ, ಅದರಲ್ಲಿ ಕೂರಿಸಿಕೊಂಡು ಹೋಯಿತಂತೆ!’ ‘ಮುಕುಂದ ಮಾವನ ಸ್ವಪ್ನದಲ್ಲಿ ದೊಡ್ಡಮ್ಮ ದೊಡ್ಡಪ್ಪಯ್ಯ ಇಬ್ಬರೂ ಬಂದಿದ್ದರಂತೆ ಕಣೋ!’ ಇತ್ಯಾದಿಯಾಗಿ. ಒಂದು ಸಾರಿ ಧರ್ಮು ಬೈಗುಗತ್ತಲಲ್ಲಿ ಮಗ್ಗಿ ಹೇಳುತ್ತಿದ್ದಾಗಲೆ, ನಡುವೆ ತಂದೆತಾಯಿಯರ ನೆನಪುಕ್ಕಿ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತಾಗ ಅನಂತೈಗಳು ಅನೇಕ ರೀತಿಯಾಗಿ ಸಾಂತ್ವನ ಹೇಳೆ ಅವತ್ತಿನ ಮಗ್ಗಿ ಪಾಠದಂತಹ ಮುಖ್ಯ ವಿಷಯವನ್ನು ನಿಲ್ಲಿಸಿ ಅಡಿಕೆ ಬಿಟ್ಟಿದ್ದರು. ಆಗ ಕಾಡು ಧರ್ಮುವ ಜೊತೆಯೇ ಹೋಗಿ. ಕೆಸರ್ಹಲಗೆಯ ಮೇಲೆ ಅವನ ಪಕ್ಕದಲ್ಲಿಯೆ ಒತ್ತಿ ಕುಳಿತು, ಅಂಗಳಕ್ಕೆ ಕಾಲು ಇಳಿಬಿಟ್ಟಕೊಂಡು ಹೇಳಿದ್ದನು, ತುಳಸೀಕಟ್ಟೆಗೆ ಹೊತ್ತಿಸಿಟ್ಟಿದ್ದ ನೀಲಾಂಜನದ ದೀಪವನ್ನೇ ನೋಡುತ್ತಾ: “ಧರ್ಮೂ, ಆ ‘ಗಡ್ಡದಯ್ಯ’ ಆವೊತ್ತು ಆ ಕಲ್ಲೂರು ಹೊಳೆದಂಡೆ ಮ್ಯಾಲೆ, ಅದೇ ಆ ಜೋಳಿಗೆಗೆ ಕೈ ಹಾಕಿ ಹಾಕಿ ನಮಗೆ ಹಣ್ಣು ಕೊಟ್ಟನಲ್ಲಾ ಆ ಗಡ್ಡದಯ್ಯ, ನಿನ್ನೊಬ್ಬನ್ನೇ ಹತ್ರಕ್ಕೆ ಕರೆದು ಹೆಗಲ ಮೇಲೆ ಕೈ ಹಾಕಿ ಹೇಳಿದ್ದನಲ್ಲಾ? ನಿಂಗೆ ಗ್ಯಾಪಕ ಅದೆಯೇನು?” ಎಂದು ಕೇಳಲು, ಧರ್ಮು ಮಾತಾಡದೆ ತಲೆದೂಗಿ ಸಮ್ಮತಿಸಿದಂತೆ ತನ್ನ ಕಡೆ ನೋಡುತ್ತಿರಲು, ಕಾಡು ಉತ್ತೇಜಿತನಾಗಿ ಮುಂದುವರಿದಿದ್ದನು: “ಅಂವ ಹೇಳಿದ್ದೇನು? ಗೊತ್ತೇ? ’ಮಗೂ, ನಿನ್ನ ಭವಿಷ್ಯ ಉಜ್ವಲವಾಗಿದೆ. ಚೆನ್ನಾಗಿ ಓದು ಬರಹ ಕಲಿತುಕೋ. ನೀನು ಮುಂದೆ ತುಂಬ ದೊಡ್ಡ ಹೆಸರು ಪಡೆದು ದೊಡ್ಡ ಮನುಷ್ಯನಾಗುತ್ತೀಯ!….”

“ಹಾಂಗಲ್ಲ ಕಣೋ, ಅಂವ ಅಂದದ್ದು: ‘ಕೀರ್ತಿವಂತನಾಗುತ್ತೀಯ’” ಧರ್ಮು ಅತ್ಯಂತ ಸರಳ ಮುಗ್ಧ ಭಾವದಿಂದ ಸ್ನೇಹಿತನ ಜ್ಞಾಪಕವನ್ನು ತಿದ್ದಿದ್ದನು.

* * *

ತೀರ್ಥಹಳ್ಳಿಯಿಂದ ಬಂದ ಬೆಟ್ಟಳ್ಳಿಯ ಗಾಡಿಯಿಂದ ಹೆಣವನ್ನು ಇಳಿಸುತ್ತಿದ್ದಾಗ ತಿಮ್ಮಪ್ಪಹೆಗ್ಗಡೆಯೂ ಇತರರಂತೆ ಶೋಕ ಪ್ರದರ್ಶನ ಮಾಡಲು ಮುಂದುವರಿದಿದ್ದನು. ಆದರೆ ಆ ಹೆಣದ ಮುಖವನ್ನು ನೋಡಿ, ಆ ಕಳೇಬರ ನಿಜವಾಗಿಯೂ ತಿರುಪತಿಗೆ ಹೋಗಿದ್ದ ತನ್ನ ಅಣ್ಣನದೇ ಎಂಬುದು ಖಾತ್ರಿಯಾದ ತರುವಾಯ, ಅವನ ಚೇತನ ಹೌಹಾರಿಬಿಟ್ಟಿತ್ತು. ಚಿಕ್ಕಂದಿನಿಂದಲೂ ತಾನು ಒಲಿದಿದ್ದಾತನ ಮೃತ್ಯುಸಮ್ಮಖದಲ್ಲಿ ಉಂಟಾಗುವ ಒಂದು ಅಪಾರ್ಥಿವ ಭೀತಿ ಅವನ ಹೃದಯವನ್ನಾಕ್ರಮಿಸಿತ್ತು. ಏಳೆಂಟು ವರುಷಗಳ ಹಿಂದೆ ಅಣ್ಣ ತಿರುಪತಿಗೆ ಹೋಗುವವರೆಗೂ ತಿಮ್ಮಪ್ಪಗೆ ಅವನಲ್ಲಿ ಉಳಿದೆಲ್ಲರಿಗಿಂತಲೂ ಅತಿಶಯವಾದ ಗಾಢವಿಶ್ವಾಸವಿತ್ತು. ಏಕೆಂದರೆ ಹುಡುಗ ತಿಮ್ಮಪ್ಪನ ಒರಟು ರೂಪ, ಒರಟುವರ್ತನೆ, ಒಡಲಕೊಳಕು, ಹೊಲಸುಬಾಯಿ ಇವುಗಳ ದೆಸೆಯಿಂದ ತಂದೆ ಸುಬ್ಬಣ್ಣ ಹೆಗ್ಗಡೆಯವರಾದಿಯಾಗಿ ಎಲ್ಲರೂ ಅವನನ್ನು ಜಿಗುಪ್ಸೆಯಿಂದ ಕಡೆಗಣಿಸಿ ಬೈದು ದೂರೀಕರಿಸುತ್ತಿದ್ದಾಗ ಅಣ್ಣ ದೊಡ್ಡಣ್ಣಹೆಗ್ಗಡೆ ಯೊಬ್ಬನೆ ಅವನನ್ನು ಪ್ರೀತಿಯಿಂದ ಕಾಣುತ್ತಿದ್ದನು. ಷಿಕಾರಿ ಹುಚ್ಚಿನ ದೊಡ್ಡಣ್ಣ ಕಾಡು ಸುತ್ತಲು ಕಾತರನಾಗಿದ್ದ ತಮ್ಮನನ್ನು ಎಷ್ಟೋಸಾರಿ ತನ್ನೊಡನೆ ಸಾರಿಕೆ ಬೇಟೆಗೂ ಮರುಸು ಕೂರುವುದಕ್ಕೂ ಕರೆದುಕೊಂಡು ಹೋಗುತ್ತಿದ್ದನು. ಜೇನು ಕೀಳುವುದು, ಹಕ್ಕಿ ಹೊಡೆಯುವುದು, ಮೀನಿಗೆ ಗಾಳ ಹಾಕುವುದು, ಕೆರೆಗೆ ಬಲೆಹಾಕಿ ಮೀನು ಹಿಡಿಯುವುದು, ಹಲಸಿನ ಹಣ್ಣೋ ದೀರ್ಕನ ಹಣ್ಣೋ ಮಾವಿನ ಹಣ್ಣೋ ಕಲ್ಲುಸಂಪಿಗೆ ಹಣ್ಣೋ ಕುಯ್ಯುವುದು, ಉರುಳು ಒಡ್ಡಿ ಹುಂಡುಕೋಳಿ ಚಿಟ್ಟುಗೋಳಿ ಕಾಡುಕೋಳಿಗಳನ್ನು ಹಿಡಿಯುವುದು, ಮೊದಲಾದ ನಾನಾ ಲಲಿತ ಮತ್ತು ರುದ್ರ ಸಾಹಸಗಳಲ್ಲಿ ತಿಮ್ಮಪ್ಪ ಅಣ್ಣನೊಡನೆ ಭಾಗಿಯಾಗಿ ಸಂತೋಷಪಟ್ಟಿದ್ದನು.

ತಿರುಪತಿಗೆ ಹೋದ ಅಣ್ಣ ತಿರುಗಿ ಹಿಂದಿರುಗದಿದ್ದಾಗ ತಿಮ್ಮಪ್ಪನ ದುಃಖ ಇತರ ಯಾರ ದುಃಖಕ್ಕೂ ಕಡಿಮೆಯದ್ದಾಗಿರಲಿಲ್ಲ. ಆದರೆ ಕೌಮಾರ್ಯ ತಾರುಣ್ಯಕ್ಕೇರಿ, ತಾರುಣ್ಯ ಯೌವನದಂಚಿಗೆ ಸಮೀಪಿಸುವಷ್ಟರಲ್ಲಿ, ಇದ್ದ ಒಬ್ಬ ಅಣ್ಣನ ವಿಶ್ವಾಸದಿಂದಲೂ ದೂರನಾಗಿ, ಮನೆಯವರ ಕಟುತ್ವಕ್ಕೆ ಕಹಿಗೊಂಡಿದ್ದ ಅವನ ಚೇತನ ತನ್ನ ಸಿಹಿ ಸಂತೋಷಗಳನ್ನು ತನ್ನವರೂ ಮನೆಯವರೂ ಅಲ್ಲದ ಅನ್ಯರ ಸಂಗದಲ್ಲಿಯೂ ಪಾಪಕ್ಷೇತ್ರಗಳಲ್ಲಿಯೂ ಕಂಡುಕೊಂಡು ವಿಲಾಸಿಸತೊಡಗಿತ್ತು. ಚೆನ್ನಾಗಿ ಮೀಯಿಸಿ ಶುಚಿಯಾಗಿಟ್ಟು ಒಳ್ಳೆಯ ಆಹಾರ ತಿನ್ನಿಸಿ ಸಾಕಿದ್ದ ಮನೆಯ ಚೀನಿನಾಯಿ, ’ಸಣುಬಿ’ನ ಸಮಯ ಬಂದಾಗ, ದದ್ದು ಹಿಡಿದು ವಿಕಾರವಾಗಿದ್ದರೂ ಲೆಕ್ಕಿಸದೆ ಬೀದಿಯ ನಾಯಿಯ ಸಂಗ ಬಯಸಿ ಸರಪಣಿ ಕಂಪೌಂಡುಗಳಿಂದ ನುಣುಚಿಕೊಂಡು ಪೋಲಿಬೀಳುವಂತೆ, ತಿಮ್ಮಪ್ಪ ಕೀಳು ಜಾತಿಯವರ ಹಟ್ಟಿ ಬಿಡಾರ ಗುಡಿಸಲು ಜೋಪಡಿಗಳಲ್ಲಿಯೂ ಸುಖವನ್ನರಸಿ ಪಡೆದಿದ್ದನು. ಅವನ ಹೊಲಸು ಶೃಂಗಾರ ಸಾಹಸದ ಇತ್ತೀಚಿನ ಬೇಟೆಗೆ ತುತ್ತಾಗಿದ್ದವಳೆಂದರೆ ಹೊಲೆಯರ ಕುಳುವಾಡಿ ಸಣ್ಣನ ಹಿರಿಯ ಅವಿವಾಹಿತ ಮಗಳು ಪುಟ್ಟಿ! ಉಂಡಾಡಿ ಬೈರನ ನೆರವು ಪಡೆದು ಅವಳನ್ನು ಉಪಾಯವಾಗಿ ನೆಲ್ಲುಹುಲ್ಲು ಕುತ್ತರೆ ಹಾಕಿದ್ದ ಕಣಕ್ಕೆ ಬೈಗಿನಲ್ಲಿ ಬರುವಂತೆ ಮಾಡಿ, ಕಳ್ಳು ಕುಡಿಸಿ, ತನ್ನ ದೇಹ ತೃಷ್ಣೆಯನ್ನು ಪರಿಹರಿಸಿಕೊಂಡಿದ್ದನು, ‘ಸಣ್ಣ ಒಡೆಯ ತಿಮ್ಮಪ್ಪಯ್ಯ’! ಆ ಗುಟ್ಟೂ ಎಲ್ಲರ ಗುಟ್ಟಿನ ಪಿಸುಮಾತಾಗಿಯೆ ಬಹಿರಂಗ ವಿಷಯವಾಗಿಬಿಟ್ಟಿತ್ತು. ತಾವು ಊರಿನಲ್ಲಿ ಇಲ್ಲದಿದ್ದಾಗ ನಡೆದಿದ್ದ ಆ ವಿಷಯವನ್ನು ಕೇಳಿತಿಳಿದಿದ್ದ ಅವನ ತಂದೆ ಸುಬ್ಬಣ್ಣಹೆಗ್ಗಡೆಯವರು ಬೆಟ್ಟಳ್ಳಿಯಿಂದ ಹಿಂದಿರುಗಿ ಬಂದಾಗ ಅವನ ಕಪಾಲಕ್ಕೆ ಹೊಡೆಯಲು ಹೋಗಿದ್ದಕ್ಕೆ ನಿಜವಾದ ಅಂತಃಕಾರಣವೂ ಅದೇ ಆಗಿತ್ತು!

ಅಣ್ಣನ ಕಳೇಬರವನ್ನು ಕಂಡಾಗಲೆ ತುಸು ಸೆಡೆತಿದ್ದ ತಿಮ್ಮಪ್ಪನ ನೀಚತ್ವ ಅತ್ತಿಗೆಯ ಆಕಸ್ಮಿಕವಾದ ಮತ್ತು ಅತ್ಯಂತ ಶೋಕದ ಸನ್ನಿವೇಶದಲ್ಲಿ ಅತ್ಯದ್ಭುತವೆಂಬಂತೆ ಸಂಭಿವಿಸಿದ್ದ ಸಾವಿನ ಸಮ್ಮಖದಲ್ಲಿ ಹಠಾತ್ತನೆ ಕುಸಿದು ಬಿದ್ದಂತಾಗಿತ್ತು. ಏಕೆ? ಏನು?ಎತ್ತ? ಎಂಬುದು ಅವನಿಗೇನೂ ಅರ್ಥವಾಗಿರಲಿಲ್ಲ. ಯಾವುದೋ ಮಹಾ ದೊಡ್ಡದರ ಮುಂದೆ ತನ್ನ ಅಲ್ಪತ್ವ ಮುದುಗಿ ನಾಚಿ ಹೆದರಿ ಕುಗ್ಗಿ ನೆಲಸಮವಾಗಿ ಹೋದಂತಾಗಿತ್ತು ಅವನಿಗೆ. ಅದರಿಂದ ಪಾರಾಗುವ ಪ್ರಯತ್ನದಲ್ಲಿ, ಆ ಪಾರಾಗುವಿಕೆಯ ಒಂದು ಅನಿವಾರ್ಯ ವಿಧಾನವೊ ಎಂಬಂತೆ, ಅವನ ಚೇತನ, ಆ ಕುಗ್ಗಿಗೆ ಪ್ರತಿಸ್ಪರ್ಧಿಯಾಗಿ, ತನ್ನ ಪಾತಾಳ  ಸುಪ್ತಸ್ಥಿತಿಯಲ್ಲಿ ಗುಪ್ತವಾಗಿದ್ದ ದೊಡ್ಡತನವನ್ನು ಹೊಡೆದೆಬ್ಬಿಸಿ ನಿಮಿರಿ ನಿಲ್ಲಿಸಿತ್ತು. ತಾತ್ಕಾಲಿಕವೋ? ಚಿರಕಾಲಿಕವೋ? ಅಂತೂ ಅದನ್ನು ಗಮನಿಸಿದ ಅನೀಕರಿಗೆ ದೊಡ್ಡಣ್ಣಹೆಗ್ಗಡೆಯ ದೊಡ್ಡತನವೆ ತಮ್ಮನ ಮೈಮೇಲೆ ಬಂದಿರಬೇಕು ಅನ್ನಿಸಿತ್ತು.

ಆದ್ದರಿಂದಲೆ ಹಾಸಗೆ ಹಿಡಿದಿದ್ದ ಸುಬ್ಬಣ್ಣಹೆಗ್ಗಡೆಯವರು ಮಲಗಿದ್ದ ಕೋಣೆಗೆ ಬೆಳಿಗ್ಗೆ ಮುಂಚೆ ಪ್ರವೇಶಿಸಿ, ತಿಮ್ಮಪ್ಪ “ಅಪ್ಪಯ್ಯಗೆ ಎಚ್ಚರಾಯ್ತಾ? ಮಕಾ ತೊಳೆಯಾಕೆ ಬಿಸಿನೀರು ತರಲೇನು?” ಎಂದು ಕೇಳಿದಾಗ, ತಂದೆಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ! ಇನ್ನೂ ಸ್ವಲ್ಪ ಹೊತ್ತಿನಮೇಲೆ ಮತ್ತೆ ಅವನು ಒಳಕ್ಕೆ ಬಂದು ಅತ್ಯಂತ ವಿನಯವಾಣಿಯಿಂದ “ಅಪ್ಪಯ್ಯಗೆ ಕಣ್ಣಾ ಪಂಡಿತರ ಕಷಾಯ ತಂದುಕೊಡಲೇನು ಅಂತಾ ಕೇಳ್ತದೆ ಬುಚ್ಚಿ.” ಎಂದಾಗ ಆ ಆಶ್ಚರ್ಯ ವಿಸ್ಮಯಕ್ಕೆ ತಿರುಗಿ, ಆನಂದಾತಿಶಯಕ್ಕೆ ಅವರ ಕಣ್ಣು ಹನಿಗೂಡಿತ್ತು! ನಿನ್ನೆ ತಾನೆ ನಡೆದಿದ್ದ ಎರಡು ಪ್ರಿಯಜೀವಿಗಳ ದೇಹದ ದಹನ ಸಂಸ್ಕಾರದಿಂದ ದುಃಖ ಜರ್ಜರಿತವಾಗಿದ್ದ ಅವರ ಮುದಿಹೃದಯ, ಅದುವರೆಗೂ ಪಕ್ಕೆಯಲ್ಲಿ ಮುಳ್ಳಾಗಿ ಚುಚ್ಚುತ್ತಿದ್ದ ಈ ಮಗನ ಪರಿವರ್ತನೆಯನ್ನು ಕಂಡು, ಕೃತಜ್ಞತೆಗೆ ಹಿಗ್ಗಿ ಹೋಗಿತ್ತು. ಅವರ ಪಿತೃಚೇತನ ಇದ್ದಕ್ಕಿದ್ದಂತೆ ತಿಮ್ಮಪ್ಪನ ಹಿಂದಿನ ಅಲ್ಪತ್ವ ಅಪರಾಧ ದೌಷ್ಟ್ಯಗಳನ್ನೆಲ್ಲ ಕ್ಷಮಿಸಿ, ಅವನ ಪರವಾಗಿ ವಾದಿಸಿತ್ತು: ’ಪಾಪ! ಹುಡುಗ ನಿಜವಾಗಿಯೂ ಒಳ್ಳೆಯವನೆ! ನಾವೇ ಅವನ್ನ ಬೈದೂ ಹೊಡೆದೂ ದೂರಮಾಡಿ ಹಾಂಗಾಗಿಬಿಟ್ಟಿದ್ದ! ಏನೊ ದೇವರು ಕಣ್ಣು ಬಿಟ್ಟ ಅಂತಾ ಕಾಣ್ತದೆ ನಮ್ಮ ಮನೇ ಮೇಲೆ!’

ಮಂಜಮ್ಮನಂತೂ ತನ್ನ ಒರಟು ಅಣ್ಣಯ್ಯ ತನ್ನನ್ನು, ತನ್ನ ಅಪ್ಪಯ್ಯ ಅಕ್ಕರೆಗೆ ಕರೆಯುವಂತೆ, ’ಬುಚ್ಚಿ’ ಎಂದು ಸಂಭೋಧಿಸಿ ಕರೆಯತೊಡಗಿದ್ದನ್ನು ಕೇಳಿ, ಅವನ ಮೇಲಣ ಮಮತೆಯುಕ್ಕಿ ಕರಗಿದಂತಾಗಿದ್ದಳು. ತಿಮ್ಮಪ್ಪ ಸಾಧಾರಣವಾಗಿ ತನ್ನ ತಂಗಿಯನ್ನು ತಿರಸ್ಕಾರ ಧ್ವನಿಯಿಂದ ’ಮಂಜಿ’ ಎಂದೇ ಕರೆಯುತ್ತಿದ್ದುದು ವಾಡಿಕೆಯಾಗಿತ್ತು.

ಧರ್ಮುವ ಪರವಾಗಿದ್ದ ತಿಮ್ಮಪ್ಪನ ವರ್ತನೆಯಂತೂ ಸಂಪೂರ್ಣವಾಗಿ ಬದಲಾಯಿಸಿತ್ತು. ತಾನೆ ಮನೆಯ ಯಜಮಾನನಾಗಿ ಅವನ ಅಭ್ಯುದಯದ ಹೊಣೆಗಾರಿಕೆ ಹೊತ್ತಂತೆ ತೋರುತ್ತಿತ್ತು….’ ಐಗಳ ಹತ್ರ ಚೆನ್ನಾಗಿ ಓದು ಬರಾ ಕಲಿ. ಆಮ್ಯಾಲೆ ಮೇಗರೊಳ್ಳೀಲಿ ಹೊಸ ಮಿಶನ್ ಇಸ್ಕೂಲಾಗಿದೆಯಲ್ಲಾ ಅಲ್ಲಿಗೆ ಹೋಗಿ ಇಂಗಲೀಸು ಕಲ್ತು, ಕಡೀಗೆ ತೀರ್ಥಹಳ್ಳಿಗೂ ಹೋಗಬೈದಂತೆ!….’ ಎಂದು ತುಂಬ ಮುದ್ದಿನಿಂದ ಮಾತಾಡಿಸಿ ಅವನನ್ನು ಕೋಣೂರಿಗೆ ಕಳಿಸಿದ್ದನು.

ಮನೆ ಹಿಸ್ಸೆಯಾಗಿ ಶಂಕರಹೆಗ್ಗಡೆ ಬೇರೆ ಹೋದಾಗಿನಿಂದಲೂ ಒಮ್ಮೆಯೂ ಅವರ ಮನೆಯ ಕಡೆಗೆ ಸುಳಿಯದಿದ್ದ ತಿಮ್ಮಪ್ಪಹೆಗ್ಗಡೆ, ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮ ಹೆಗ್ಗಡಿತಿಯವರ ಹನ್ನೊಂದನೆಯ ದಿನದ ತಿಥಿ ಪೂರೈಸಿದ ಮರುದಿನ ಬೆಳಗ್ಗೆ, ಮೊತ್ತ ಮೊದಲಾಗಿ ಹೆಂಚಿನ ಮನೆಯ ಅಂಗಳಕ್ಕೆ ಕಾಲಿಟ್ಟನು. ಜಗಲಿಯಲ್ಲಿ ತನ್ನ ಬಾವ ಸಿಂಬಾವಿ ಭರಮೈಹೆಗ್ಗಡೆಯವರೊಡನೆ ಮಾತನಾಡುತ್ತಾ ಕುಳಿತಿದ್ದ ಶಂಕರಹೆಗ್ಗಡೆಗೆ ತನ್ನ ಕಣ್ಣನ್ನೆ ನಂಬಲು ಸಾಧ್ಯವಾಗಲಿಲ್ಲ.

ಬಂಧುಜೀವಗಳೆರಡರ ಸದ್ಯೋಮರಣದ ದುರಂತ ದುಃಖಛಾಯೆ ಯಲ್ಲಿದ್ದ ಶಂಕರಹೆಗ್ಗಡೆಯ ಹೃದಯದಲ್ಲಿಯೂ ತಾತ್ಕಾಲಿಕ ಕ್ಷಮಾಗುಣವು ತನಗೆ ತಾನೆ ಉದ್ದೀಪಿತವಾದ್ದರಿಂದ ಸಿಂಬಾವಿ ಬಾವನ ಇದಿರಿನಲ್ಲಿ ದಾಯಾದಿ ತಿಮ್ಮಪ್ಪನನ್ನು ವಿಶ್ವಾಸದಿಂದಲೆ ಬರಮಾಡಿಕೊಂಡನು. ತನ್ನಿಂದ ಏನಾದರೂ ಸೇವೆ ಅಥವಾ ಸಹಾಯದ ಆವಶ್ಯಕತೆ ಇದೆಯೆ ಎಂದೂ ವಿಚಾರಿಸಿದ್ದನು.

ತಿಮ್ಮಪ್ಪ ಆ ಮಾತು ಈ ಮಾತು ಆಡಿ, ಸಿಂಬಾವಿ ಬಾವನನ್ನು ಏಕಾಂತಕ್ಕೆ ಕರೆದು ಮಾತಾಡಿದನು. ಅಲ್ಲಿಂದ ಸೀತತ್ತಿಗಮ್ಮನ ಯೋಗಕ್ಷೇಮ ವಿಚಾರಿಸುವ ನೆವದಿಂದ, ಏನೇನನ್ನೊ ಗಳಪುತ್ತಿದ್ದು ತನ್ನ ಕೈ ಹಿಡಿದುಕೊಂಡು ಪಕ್ಕದಲ್ಲಿಯೇ ನಡೆದುಬಂದ ರಾಮುವಿನೊಡನೆ, ಒಳಗೆ ಹೋಗಿ, ಜಟ್ಟಕ್ಕಯ್ಯನೊಡನೆ ತನ್ನ ನಾನಾ ವಿಧವಾದ ಸುಖ ದುಃಖಗಳನ್ನು ಹೇಳಿಕೊಂಡು, ಮೆಲ್ಲನೆ ಪಿಸುದನಿಯಲ್ಲಿ ತನ್ನ ಮತ್ತು ತಂಗಿ ಮಂಜಮ್ಮನ ಮದುವೆಯ ಪ್ರಸ್ತಾಪವೆತ್ತಿದನು.

“ನೋಡು, ಅಕ್ಕಯ್ಯ, ನನ್ನ ದುರಾದೃಷ್ಟ, ಅಣ್ಣಯ್ಯ ಅತ್ತಿಗೆಮ್ಮ ಇಬ್ಬರೂ ಒಟ್ಟಿಗೆ ಹೋಗಿಬಿಟ್ರು…. ಅಪ್ಪಯ್ಯನೂ ಹಾಸಿಗೆ ಹಿಡಿದು ಬಿಟ್ಟಾನೆ…. ಇನ್ನೇನು ಹೊರೆ ಎಲ್ಲಾ ನನ್ನ ಮ್ಯಾಲೇ ಬಿದ್ದ ಹಾಂಗಾಯ್ತು…. ನೀವೆಲ್ಲ ನನ್ನ ಕೈಹಿಡಿದು ಎತ್ತದೆ ಇದ್ದರೆ, ನನಗೆ ಇನ್ಯಾರು ಗತಿ?” ಅಳುದನಿಯಿಂದಲೆ ನುಡಿದು, ಕಂಬನಿ ಮಿಡಿದು, “ನಮ್ಮ ಮನೆ ಪಾಲಾಗದೆ ಇದ್ದಿದ್ರೆ ಶಂಕರಣ್ಣಯ್ಯನೇ ಎಲ್ಲಾನೂ ನೋಡಿಕೊಳ್ತಿದ್ನೋ ಇಲ್ಲೋ? ಮನೆ ಪಾಲಾದ್ರೆ ಏನಾಯ್ತು? ಅಂವ ಅಣ್ಣಯ್ಯ, ನೀನು ಅಕ್ಕಯ್ಯ ಅನ್ನೋದೇನಾದ್ರೂ ತಪ್ತದೆಯೇ?….” ಎಂದು ಮೊದಲಾಗಿ ಪೀಠಿಕೆ ಹಾಕಿ, ತನ್ನ ಮತ್ತು ತಂಗಿಯ ಮದುವೆಯ ಭಾರವೂ ಅವರ ಮೇಲೆಯೆ ಬಿದ್ದಿದೆ ಎಂಬುದನ್ನೂ ಸೂಚಿಸಿ, ಭರಮೈಹೆಗ್ಗಡೆಗೆ ತನ್ನ ತಂಗಿ ಮಂಜಮ್ಮನನ್ನು, ಹಿಂದೆ ಮಾತಾಗಿದ್ದು, ಜಟ್ಟಮ್ಮನಿಂದಲೆ ಅದು ಮುರಿದು ಬಿದ್ದುದನ್ನೂ ಇಂಗಿತವಾಗಿ ನುಡಿದು,-ತಂದುಕೊಂಡು, ತನಗೆ ಭರಮೈಹೆಗ್ಗಡೆಯ ತಂಗಿ ಲಕ್ಕಮ್ಮನನ್ನು ಕೊಟ್ಟು ಲಗ್ನವೇರ್ಪಡಿಸುವಂತೆ ಸಲಹೆಕೊಟ್ಟನು.

ಆದರೆ ಜಟ್ಟಮ್ಮ ತನ್ನ ಗಂಡನ ಮದುವೆ ಹೂವಳ್ಳಿ ವೆಂಕಪ್ಪನಾಯಕರ ಮಗಳು ಚಿನ್ನಮ್ಮನೊಡನೆ ಆಗಲೆ ನಿಶ್ಚಯವಾಗಿಬಿಟ್ಟಿರುವ ವಿಚಾರ ತಿಳಿಸಿ, “ತಮ್ಮ ತಂಗೀನೇ ಕೊಟ್ಟು, ನಿನ್ನ ತಂಗೀನೇ ತರಾದು ಅಂತಾ ಮೊದಲೇನೋ ವೇಚನೆ ಮಾಡಿದ್ರು. ಆದರೆ ಈಗ ಯಾಕೋ ಅವರ ಮನಸ್ಸು ಬದಲಾಯಿಸಿದ ಹಾಂಗೆ ಕಾಣ್ತದೆ. ತಂಗೀನ ಬ್ಯಾರೆ ಯಾರಿಗೋ ಕೊಡಾಕೆ ನೋಡ್ತಿರೊ ಹಾಂಗೆ ಕಾಣ್ತದೆ!….ನಂಗೇನೋ ಅವಳನ್ನ ನಿಂಗೇ ಕೊಡಬೇಕು ಅಂತಾ ಮನಸ್ಸು. ಆದರೆ ಅವರ ತಂಗೀನ ಅವರ ಮನಸ್ಸು ಬಂದೋರಿಗೆ ಕೊಡಬ್ಯಾಡ ಅಂತಾ ಹ್ಯಾಂಗೆ ಹೇಳಾದು, ಹೆಣ್ಣು ಹೆಂಗ್ಸು?” ಎಂದು ಹೇಳಿ, ತುಂಬ ಸಹಾನುಭೂತಿ ವ್ಯಕ್ತಪಡಿಸಿದಳು. ತಿಮ್ಮಪ್ಪಹೆಗ್ಗಡೆಯ ಕೆಟ್ಟಚಾಳಿಯ ಅಸಹ್ಯ ಕಥೆ ಕಿವಿಯಿಂದ ಕಿವಿಗೆ ಅಸಹ್ಯಾಸಹ್ಯತರವಾಗಿ ಹಬ್ಬಿದುದೇ ತನ್ನ ಗಂಡನ ಮನಸ್ಸು ಬದಲಾಯಿಸಿದುದಕ್ಕೆ ಒಳಗುಟ್ಟಿನ ಕಾರಣ ಎನ್ನುವುದನ್ನು ಮಾತ್ರ ಜಟ್ಟಮ್ಮ ಬಿಟ್ಟುಕೊಟ್ಟಿರಲಿಲ್ಲ.

ನೆರೆಮನೆಗೆ ಹೋಗುವಾಗ ಇದ್ದ ಪ್ರಶಾಂತತೆ ನೆರೆಮನೆಯಿಂದ ಹಿಂತಿರುಗಿದ ತಿಮ್ಮಪ್ಪ ಹೆಗ್ಗಡೆಯಲ್ಲಿ ಇರಲಿಲ್ಲ. ಅವನ ಮನಸ್ಸು ಸಂಪೂರ್ಣ ವಿಕ್ಷುಬ್ದಗೊಂಡಿತ್ತು. ತನ್ನ ತಂಗಿ ಮಂಜಮ್ಮನೊಡನೆ ಸಿಂಗಾವಿ ಭರಮೈಹೆಗ್ಗಡೆಯ ವಿವಾಹ ಮುರಿದುಬಿದ್ದಿದ್ದ ವಿಚಾರ ಅವನಿಗೇನೂ ಹೊಸದಾಗಿರಲಿಲ್ಲ. ಹೂವಳ್ಳಿಯ ಚಿನ್ನಮ್ಮನ ಮದುವೆಯ ವಿಚಾರವೂ ಅವನಿಗೆ ಗೊತ್ತಿದ್ದುದೆ ಆಗಿತ್ತು. ಆ ಘಟನೆಯಿಂದ ತನ್ನ ಮತ್ತು ಸಿಂಬಾವಿ ಲಕ್ಕಮ್ಮನ ಮದುವೆ ಸ್ವಲ್ಪ ತಡವಾಗ ಬಹುದೇ ಹೊರತು ಇನ್ನೇನೂ ಪ್ರಮಾದಕ್ಕೆ ಅವಕಾಶವಿಲ್ಲ ಎಂದು ಭಾವಿಸಿ ಆಶಾವಾದಿಯಾಗಿದ್ದನು. ಆದರೆ ಈಗ ಭರಮೈಹೆಗ್ಗಡೆ ತನ್ನ ತಂಗಿಯನ್ನು ತನಗೆ ಕೊಡುವ ವಿಚಾರದಲ್ಲಿ ವಿಮನಸ್ಕನಾಗಿ, ಬೇರೆ ಆಲೋಚನೆಯಲ್ಲಿದ್ದಾನೆಂದು ಅತ್ಯಂತ ಪ್ರಮಾಣಪೂರ್ವಕವಾದ ಅಧಿಕಾರದ ಸ್ಥಳದಿಂದಲೆ ಕೇಳಿ ತಿಳಿದು ದಿಕ್ಕುಗೆಟ್ಟಂತಾಗಿದ್ದನು.

ಅವನ ಆ ದಿಙ್ಮೂಡತ್ವಕ್ಕೆ ಕಾರಣ, ಅಂತಹ ಆದರ್ಶಮಯ ಮಹತ್ವದ ಸಂಗತಿಯಾಗಿರಲಿಲ್ಲ. ಹೂವಳ್ಳಿ ಚಿನ್ನಮ್ಮನನ್ನು ಭರಮೈಹೆಗ್ಗಡೆಗೆ ದ್ವಿತೀಯ ಪತ್ನಿಯನ್ನಾಗಿ ಮಾಡುತ್ತಾರೆಂದು ಕೇಳಿದಾಗ ಮುಕುಂದಯ್ಯನಿಗುಂಟಾಗಿದ್ದ ದಿಙ್ಮೂಢತ್ವಕ್ಕೂ ಈಗ ತಿಮ್ಮಪ್ಪಹೆಗ್ಗಡಗೆ ಉಂಟಾಗಿದ್ದ ಮನಃಕ್ಷೋಭೆಗೂ ಧ್ಯೇಯಸ್ವರೂಪದಲ್ಲಿ ಯಾವ ದೂರದ ಸಂಬಂಧವೂ ಇರಲಿಲ್ಲ. ತಿಮ್ಮಪ್ಪಹೆಗ್ಗಡೆ ಆಗಲೆ ಹೆಣ್ಣಿನ ಸುಖವನ್ನು ನಾನಾ ಪಾತ್ರೆಗಳಲ್ಲಿ ಉಂಡುಬಿಟ್ಟಿದ್ದನು. ಅವನಿಗೆ ಈಗ ಬೇಕಾದದ್ದು ತನ್ನ ಜಾತಿಗೆ ಸೇರಿದ್ದ ಒಂದು ಹೆಣ್ಣು. ಇತರರಂತೆ ತಾನೂ, ತನ್ನಂತಹ ಮನೆತನದ ಒಂದು ಹೆಣ್ಣನ್ನು ಮದುವೆಯಾಗಿ, ಸಮಾಜದ ಕಣ್ಣಿನಲ್ಲಿ ಎಲ್ಲರಂತೆ ಗೌರವವಾಗಿ ಗೌಡಿಕೆ ಮಾಡಿಕೊಂಡಿದ್ದರಾಯಿತು ಎಂಬುದಷ್ಟೇ ಅವನಿಗೆ ಬೇಕಾಗಿತ್ತು. ಲಕ್ಕಮ್ಮನೇ ಬೇಕು ಎಂದೂ ಅವನಿಗೆ ಹಟ ಇದ್ದಿರಲಿಲ್ಲ. ತಾನು ಗೌರವಪೂರ್ವಕವಾಗಿ ಮದುವೆಯಾಗಬಹುದಾದ ಅಂತಹ ಮತ್ತೊಂದು ಹೆಣ್ಣು ಸಿಕ್ಕುವ ಪಕ್ಷದಲ್ಲಿ ಸಂತೋಷದಿಂದಲೆ ಲಕ್ಕಮ್ಮನನ್ನು ತ್ಯಜಿಸುತ್ತಿದ್ದನು. ತ್ಯಜಿಸುತ್ತಿದ್ದೇನೆ, ತ್ಯಜಿಸಬೇಕಾಯಿತಲ್ಲಾ ಎಂಬ ಯಾವ ಪಶ್ಚಾತ್ತಾಪದ ಚುಚ್ಚೂ ಅವನ ಮನಸ್ಸಿಗೆ ಬರುತ್ತಿರಲಿಲ್ಲ. ಆದರೆ ಈಗ ಬೇರೆ ಯೂರು ತನಗೆ ಹೆಣ್ಣು ಕೊಡಲು ಒಪ್ಪದಿರುವಾಗ ಸಿಕ್ಕಿದ್ದ ಒಂದು ಹೆಣ್ಣೂ ಕೈಬಿಟ್ಟು ಹೋದರೆ, ತನ್ನ ಮಾನ ಮೂರು ಕಾಸಾಗುವುದಿಲ್ಲವೆ? ಕಡೆಗೆ, ಯಾವ ಸರೀಕ ಜಾತಿಯವನೂ ಹೆಣ್ಣು ಕೊಡದಿದ್ದ ತನಗೆ, ಯಾವುದಾದರೂ ಒಂದು ಜಾತಿ ಮಾತ್ರದಲ್ಲಿ ಸಮಾನವಾಗಿರುವ, ಕೀಳುಮಟ್ಟದ ಒಕ್ಕಲ ಹೆಣ್ಣು ಗತಿಯಾದರೆ? ಎಷ್ಟು ಅಗೌರವ! ಆದ್ದರಿಂದಲೆ ಸಿಂಬಾವಿ ಲಕ್ಕಮ್ಮನನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಲೇಬೇಕೆಂದೂ, ಅದಕ್ಕಿರುವ ಒಂದೇ ಒಂದು ದಾರಿ ಎಂದರೆ ಭರಮೈಹೆಗ್ಗಡೆಗೆ ಹೂವಳ್ಳಿ ಚಿನ್ನಮ್ಮ ದಕ್ಕುದಂತೆ ಮಾಡಿ, ಅವನಿಗೆ ತನ್ನ ತಂಗಿ ಮಂಜಮ್ಮನನ್ನೇ ಗತಿ ಎಂಬಂತೆ ಮಾಡಬೇಕೆಂದೂ, ಹಾಗೆ ಮಾಡಿದರೇನೇ ಅವನ ತಂಗಿಯನ್ನು ಅನಿವಾರ್ಯವಾಗಿ ತನಗೇ ಕೊಡಲೇ ಬೇಕಾಗುತ್ತದೆಂದು ತೀರ್ಮಾನಿಸಿ, ಕಾರ್ಯೋನ್ಮುಖನಾಗಲು ಗಟ್ಟಿಮನಸ್ಸು ಮಾಡಿಕೊಂಡನು. ಸ್ವಭಾವತಃ ರೂಕ್ಷನಾಗಿದ್ದ ತಿಮ್ಮಪ್ಪಹೆಗ್ಗಡೆ, ಯಾವ ಕೆಲಸ ಕೈಗೊಂಡರೂ ರೂಕ್ಷತೆಯೇನು ತಪ್ಪಿದ್ದಲ್ಲವಷ್ಟೇ?

* * *

ತೀರ್ಥಹಳ್ಳಿಯಲ್ಲಿ ತನ್ನ ಹಳೆಮನೆ ಬಾವ, ದೊಡ್ಡಣ್ಣಹೆಗ್ಗಡೆ ತೀರಿಕೊಂಡಾಗ, ಮುಂಕುಂದಯ್ಯನ ಮನಸ್ಸು ಒಂದು ವಿಚಿತ್ರ ಮನಸ್ಥಿತಿಯನ್ನು ಅನುಭವಿಸಿತ್ತು.’ಗಡ್ಡದಯ್ಯ’ನಿಂದ ತಾನು ತಿಳಿದಿದ್ದ ರಹಸ್ಯಜ್ಞಾನದಿಂದಾಗಿ, ಅವನಿಗೆ ಆ ಸಾವು, ಅವನು ಆ ರಹಸ್ಯವನ್ನು ತಿಳಿಯದಿದ್ದರೆ ಎಷ್ಟು ದುಃಖವನ್ನು ತರುತ್ತಿತೋ, ಅಷ್ಟು ದುಃಖವಾಗಿರಲಿಲ್ಲ. ದೊಡ್ಡಣ್ಣಹೆಗ್ಗಡೆಯದೇ ಆಗಿದ್ದ ಆ ದೇಹದಲ್ಲಿ ಇದ್ದ ಬೇರೆ ಯಾವುದೊ ಜೀವ, ತನ್ನ ಪ್ರಾರಬ್ಧವನ್ನು ಪೂರೈಸಿ, ಇಂದೋ ನಾಳೆಯೋ ದೇಹತ್ಯಾಗ ಮಾಡುತ್ತದೆ ಎಂದು ’ಗಡ್ಡದಯ್ಯ’ ಹೇಳಿದುದನ್ನು ಅವನು ಮತ್ತೆ ಮತ್ತೆ ನೆನೆಯುತ್ತಿದ್ದನು. ದೊಡ್ಡಣ್ಣಹೆಗ್ಗಡೆಯ ಜೀವವೆ ಈಗ ತನ್ನ ಕಿರಿಯ ಅಕ್ಕ ದೇವಮ್ಮಗೂ ಬೆಟ್ಟಳ್ಳಿಯ ದೇವಯ್ಯಗೂ ಮಗನಾಗಿ ಹುಟ್ಟಿದ್ದಾನೆ ಎಂಬ ’ಗಡ್ಡದಯ್ಯನ’ ಮಾತಿನಲ್ಲಿ ಅವನ ನಂಬುಗೆ ಅಷ್ಟು ಸುಭದ್ರವಾಗಿರಲಿಲ್ಲ. ಆದರೂ ತನ್ನ ದೊಡ್ಡ ಅಕ್ಕ, ಹಳೆಮನೆ ರಂಗಮ್ಮ, ಬೆಟ್ಟಳ್ಳಿಗೆ ಹೋದಾಗಿನಿಂದ ’ಚೆಲುವಯ್ಯ’ನೊಡನೆ ವ್ಯವಹರಿಸಿದ ರೀತಿಯನ್ನು ಕೇಳಿಯೂ ನೋಡಿಯೂ ಅವನಿಗೆ ’ಗಡ್ಡದಯ್ಯ’ನ ಮಾತು ನಿಜವಿದ್ದರೂ ಇರಬಹುದೇನೋ ಎಂದನ್ನಿಸಿತ್ತು. ಅಷ್ಟೇ ಅಲ್ಲದೆ, ’ಹುಚ್ಚುಹೆಗ್ಗಡಿತಿ’ ಎನ್ನಿಸಿಕೊಂಡಿದ್ದ ತನ್ನ ಅಕ್ಕ ತನ್ನ ಮುಂದಿನ ಜನ್ಮದಲ್ಲಿ ತನಗೂ ಹೂವಳ್ಳಿ ಚಿನ್ನಮ್ಮನಿಗೂ ಮಗಳಾಗಿ ಹುಟ್ಟಿ, ಮತ್ತೆ ಚೆಲುವಯ್ಯನನ್ನೇ ಮದುವೆಯಾಗಿ, ತನ್ನ ಈ ಜನ್ಮದ ಪ್ರಾರ್ಥನೆಗೆ ಮುಂದಿನ ಜನ್ಮದಲ್ಲಿ ಸಂಪೂರ್ಣವಾದ ಸುಖದ ಸಿದ್ದಿಯನ್ನು ಪಡೆಯುತ್ತಾಳೆ ಎಂಬುದನ್ನೂ ಸೂಚಿಸಿತ್ತು ’ಗಡ್ಡದಯ್ಯ’ನ ಭವಿಷ್ಯದರ್ಶನ. ಆದರೆ ತನ್ನ ದೊಡ್ಡಅಕ್ಕ ಇಷ್ಟು ಬೇಗನೆ ಇಷ್ಟು ಅನಿರೀಕ್ಷಿತವಾಗಿ ಅದ್ಭುತವೆಂಬಂತೆ ದೇಹತ್ಯಾಗ ಮಾಡಿ ’ಗಡ್ಡದಯ್ಯ’ನ ಮಾತಿಗೆ ಪುಷ್ಟಿ ನೀಡುತ್ತಾಳೆ ಎಂದು ಅವನು ಊಹಿಸಿಯೆ ಇರಲಿಲ್ಲ. ಈಗ ಅದೂ ನಡೆದು ಹೋಗಿತ್ತು! ತನಗಿರುವ ರಹಸ್ಯಜ್ಞಾನದ ಮಹಿಮೆಯಿಂದ ಒಂದು ಉಚ್ಚಸ್ತರದಲ್ಲಿ ನೆಲೆಸಿದ್ದ ಅವನ ಮನಸ್ಸಿಗೆ, ಅಕ್ಕನ ಅನಿರೀಕ್ಷಿತ ಮರಣವೂ ಅದಕ್ಕಾಗಿಯೆ ಅಷ್ಟು ಸಂಕಟವನ್ನು ತರದಿದ್ದರೂ, ಧರ್ಮು ಪಡುತ್ತಿದ್ದ ಸಹಿಸಲಾರದ ಶೋಕವನ್ನು ನೋಡಿ ಮಮ್ಮಲ ಮರುಕ ಉಂಟಾಗಿತ್ತು.

ಸಿಂಬಾವಿ ಭರಮೈಹೆಗ್ಗಡೆಗೆ ಮದುವೆ ನಿಶ್ಚಯವಾಗಿರುವ ಹೂವಳ್ಳಿ ಚಿನ್ನಮ್ಮನಲ್ಲಿ ತನಗೆ ಮಗಳು ಸಂಭವಿಸುವ ಅಸಂಭವನೀಯ ವಿಚಾರ ಮನಸ್ಸಿಗೆ ಬಂದಾಗಲೆಲ್ಲ ಅವನಿಗೆ ’ಗಡ್ಡದಯ್ಯ’ನ ಕಣಿ ಒಂದು ಬರಿಯ ಕಟ್ಟುಕಥೆಯಾಗಿ ತೋರುತ್ತಿತ್ತು. ಚಿನ್ನಮ್ಮನನ್ನು ಆ ವಿವಾಹದಿಂದ ಪಾರು ಮಾಡಲು ಒಳಸಂಚೇನೋ ನಡೆಯುತ್ತಿತ್ತು. ಆದರೆ ಅದರ ಸಫಲತೆಯ ವಿಷಯದಲ್ಲಿ ಮುಕುಂದಯ್ಯನ ಶ್ರದ್ಧೆ ದೋಲಾಯಮಾನವಾಗಿ ಕಂಪಿಸುತ್ತಿತ್ತು. ಅದಕ್ಕೆ ತನ್ನವರದ್ದಾಗಲಿ ದೊಡ್ಡವರ ಯಾರ ಬೆಂಬಲವೂ ಇರಲಿಲ್ಲ. ಅಷ್ಟೇ ಅಲ್ಲ, ಸಾಮಾಜಿಕವಾದ ಮಾನಮರ್ಯಾದೆ ಕಟ್ಟಪಾಡುಗಳ ವಿಚಾರದಲ್ಲಿ ಸಂಪ್ರದಾಯ ದೃಷ್ಟಿಯಿಂದಲ್ ಸಂಪೂರ್ಣಬದ್ಧರಾಗಿದ್ದ ಆ ದೊಡ್ಡವರಿಗೆ ಈ ಸಂಗತಿ ಏನಾದರೂ ಗೊತ್ತಾಗಿದ್ದರೆ ಛೀಮಾರಿ ಹಾಕಿ ಅದನ್ನು ವಿಫಲಗೊಳಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದರು.

ಆದ್ದರಿಂದಲೇ, ಒಂದು ದಿನ, ಬೈಗು ಕಪ್ಪಾಗುತ್ತಿದ್ದಾಗ, ಧರ್ಮು ಕಾಡು ತಿಮ್ಮು ಮತ್ತು ಇತರ ಹುಡುಗರೂ ಸೇರಿ ಎಲ್ಲರೂ ಒಡ್ಡಿಗೆ ಕೋಳಿಗಳನ್ನಟ್ಟಿ ಕೂಡುತ್ತಿದ್ದ ಅಟ್ಟಹಾಸದ ಗಲಭೆಯಲ್ಲಿ ಮುಕುಂದಯ್ಯನೂ ವಿನೋದಾರ್ಥಿಯಾಗಿ ಭಾಗಿಯಾಗಿದ್ದಾಗ, ಧರ್ಮುವನ್ನು ಅವನ ಅಜ್ಜಯ್ಯ ಕರೆತರಲು ಹೇಳಿದ್ದಾರೆಂದು ಹಳೆಮನೆಗೆ ಕರೆದುಕೊಂಡು ಹೋಗಲು ಕೋಣೂರಿಗೆ ಬಂದಿದ್ದ ತಿಮ್ಮಪ್ಪಹೆಗ್ಗಡೆ, ಆ ಮಾತು ಈ ಮಾತಿನ ನಡುವೆ “ಮುಕುಂದಬಾವ, ನಾ ಹೇಳ್ತಿನಿ ಕೇಳಿ. ಈ ಹೂವಳ್ಳಿ ಹೆಣ್ಣನ್ನ ಸಿಂಬಾವಿಗೆ ಲಗ್ನ ಮಾಡಿ ಕೊಡುದನ್ನ ತಪ್ಪಿಸದೆ ಇದ್ದರೆ ನಾವೆಲ್ಲ ಆ ಅನ್ಯಾಯದಲ್ಲಿ ಪಾಲುಗಾರರಾಗಬೇಕಾಗುತ್ತದೆ. ಇಷ್ಟು ಎಳೇ ಹುಡುಗೀನ ಆ ಹಳೇ ಮುದುಕಗೆ ಕಟ್ಟೋಕೆ ಬದಲಾಗಿ ಅದನ್ನು ಬಾವಿಗಾದ್ರೂ ಹಾಕೋದು ಲೇಸು! ನಮ್ಮ ಮನೇಲಿ ಕೆಲಸ ಮಾಡ್ತಾಳಲ್ಲಾ ಆ ಹಳೆಪಕ್ಕದ ಹೂವಿ ಹೇಳ್ತಿತ್ತು ’ಆ ಹೂವಳ್ಳಿ ಚಿನ್ನಮ್ಮೋರ ದುಃಖ ಯಾರಿಗೆ ನೋಡಕ್ಕಾಗ್ತದೆ? ಅವರು ಕಂಡಿತಾ ಕೆರೆಗೋ ಬಾವಿಗೋ ಬೀಳ್ತಾರೆ; ಇಲ್ಲ, ನೇಣು ಹಾಕಿಕೊಳ್ತಾರೆ!’ ಅಂತಾ”. ಎಂದು ಏಕಾಂತವಾಗಿ ತನಗೆ ಹೇಳಿದ್ದನ್ನು ಕೇಳಿ ಮುಕುಂದಯ್ಯ ಬೆರಗಾಗಿ ಹೋಗಿದ್ದನು! ಆದರೆ ತಿಮ್ಮಪ್ಪಹೆಗ್ಗಡೆಯ ಸ್ವಭಾವವನ್ನಿರಿತ್ತಿದ್ದ ಮುಕುಂದಯ್ಯ, ಅವನು ನಿಜವಾಗಿಯೂ ತನ್ನ ಕಡೆಗಿದ್ದಾನೆಯೋ? ಅಥವಾ ಗುಟ್ಟು ತಿಳಿದುಕೊಂಡು ತಮ್ಮ ಸಂಚನ್ನು ಹೊರಹಾಕಿ, ಹಿಡಿದುಕೊಟ್ಟು, ಹಾಳುಮಾಡ ಲೋಸ್ಕರವೆ ಸೋಗು ಹಾಕುತ್ತಿದ್ದಾನೆಯೋ? ಎಂಬುದನ್ನು ನಿಶ್ಚಯಿಸಲಾರದೆ ಯಾವ ಪ್ರತ್ಯುತ್ತರವನ್ನು ಕೊಡದೆ ಎಚ್ಚರಿಕೆಯಿಂದ ವರ್ತಿಸಿದ್ದನು.

ಮಳೆ ಹಿಡಿದಿದ್ದರಿಂದಲೂ ಬೇಸಾಯಗಾರರೆಲ್ಲ ಪುರುಸೊತ್ತಿಲ್ಲದೆ ಬೆಳಗಿನಿಂದ ಬೈಗಿನವರೆಗೂ ಗದ್ದೆಗಳಲ್ಲಿ ದುಡಿಯಬೇಕಾಗಿದ್ದರಿಂದಲೂ ಹೂವಳ್ಳಿ ಲಗ್ನ ಮುಂದಿನ ವರ್ಷಕ್ಕೆ ಮುಂದುವರಿಯಬಹುದೆಂದು ಇದ್ದ ಒಂದು ದೂರದಾಸೆಯೂ ಭಗ್ನಗೊಂಡಿತ್ತು. ಸಿಂಬಾವಿ ಹೆಗ್ಗಡೆ ಹೂವಳ್ಳಿ ವೆಂಕಪ್ಪನಾಯಕರಿಗೆ ತಗಾದೆ ಮಾಡಿ “ಆರಿದ್ರೇ ಮಳೆಗೆ ಆದವನೇ ಗಂಡ!’ ಎಂಬ ಗಾದೆಯನ್ನು ಸಾರ್ಥಕಗೊಳಿಸಿದ್ದರು. ಬರುವವರು ಬರಲಿ ಇಲ್ಲದವರು ಬಿಡಲಿ; ಮದುವೆಯಂತೂ ಗೊತ್ತಾಗಿದ್ದ ಕಾಲಕ್ಕೆ ನಡೆಯಲೇಬೇಕೆಂದು ಸಾಲಗಾರನಿಗೆ ಸಾಲ ಕೊಟ್ಟವನ ತಗಾದೆಆಜ್ಞೆ ಮಾಡಿದ್ದರು!

ಆ ದುರ್ಮುಹೂರ್ತ ಬಳಿಸಾರಿದಂತೆಲ್ಲ ಮನಸ್ಸಿನ ಶಂಕೆ ಮತ್ತು ಎದೆಯ ತಲ್ಲಣ ಹೆಚ್ಚುಹೆಚ್ಚಾಗುತ್ತಿದ್ದ ಮುಕುಂದಯ್ಯ ’ಗಡ್ಡದಯ್ಯ’ನನ್ನು ಮತ್ತೊಮ್ಮೆ ಕಾಣುವ ಅಭಿಸಂಧಿಯಿಂದ, ತನ್ನ ಪುಟ್ಟಕ್ಕ ಮತ್ತು ಪುಟ್ಟಕ್ಕನ ಮಗು ಹೇಗಿದ್ದಾರೆಂದು ವಿಚಾರಿಸುವ ನೆವವೊಡ್ಡಿ, ’ಗದ್ದೆ ಕೆಲಸ ಬಿಟ್ಟು, ನೆಂಟರ ಮನೆ ತಿರುಗ್ತಾನೆ, ಎಂಬ ತನ್ನ ಅಣ್ಣ ರಂಗಪ್ಪಗೌಡರ ಕಟುಟೀಕೆಯನ್ನೂ ಸಹಿಸಿ, ಬೆಟ್ಟಳ್ಳಿಗೆ ಹೋದನು. ಕಲ್ಲೂರಿಗೆ ಹೋಗಿ ’ಗಡ್ಡದಯ್ಯ’ನನ್ನು ಸಂಧಿಸುವ ತನ್ನ ಮನಸ್ಸನ್ನು ದೇವಯ್ಯನಿಗೆ ತಿಳಿಸಲು ಅವನು, ತಾನು ಸಿಕ್ಕಿಬಿದ್ದಿರುವ ಸಮಸ್ಯೆಯಿಂದ ಪಾರಾಗಲು ತಾನೇ ’ಗಡ್ಡದಯ್ಯ’ನ ಮಾರ್ಗ ದರ್ಶನ ಪಡೆಯಲೆಂದು ಕಲ್ಲೂರಿಗೆ ಹೋಗಿದ್ದುದಾಗಿಯೂ, ಆದರೆ ’ಗಡ್ಡದಯ್ಯ’ ಆ ಕಲ್ಲುಮಂಟಪದಿಂದ ಅದೃಶ್ಯನಾಗಿ ಎಷ್ಟೋ ದಿನಗಳಾದುದಾಗಿ ತಿಳಿದುಬಂದಿತೆಂದೂ ಆತನು ಶೃಂಗೇರಿಯ ದರ್ಶನ ಮಾಡಿಕೊಂಡು ಕನ್ಯಾಕುಮಾರಿಯ ಮಾರ್ಗವಾಗಿ ಕೊಲಂಬೋಗೆ ಹೋಗುವುದಾಗಿ ಹೇಳುತ್ತಿದ್ದನಂತೆ ಎಂದೂ ತಿಳಿಸಿದನು.

ಮತ್ತೆ ಆ ನಿರಾಡಂಬರ ತೇಜಸ್ವಿಯಾಗಿದ್ದ ಪೂಜ್ಯ ಸಂನ್ಯಾಸಿಯನ್ನು ಸಂದರ್ಶಿಸುವ ಭಾಗ್ಯ ತನ್ನ ಜೀವಮಾನದಲ್ಲಿ ಎಂದೆಂದಿಗೂ ಒದಗಲಾರದು ಎಂದು ಚಿಂತಿಸಿ ಖಿನ್ನನಾದ ಮುಕುಂದಯ್ಯನ ಚೇತನಕ್ಕೆ ಹಠಾತ್ತನೆ ಆತನ ಮಹಿಮೆ ಉಜ್ವಲವಾಗಿ ಸ್ಪುರಿಸಿದಂತಾಯ್ತು. ಅಂದು ಆತನು ಅಮೆರಿಕಾ, ವಿವೇಕಾನಂದ, ವೇದಾಂತ ದರ್ಶನ, ಭಾರತದ ಪುನರುಜ್ಜೀವನ ಇತ್ಯಾದಿಯಾಗಿ ಹೇಳಿದ್ದುದು, ಯಾವುದೂ ಅರ್ಥವಾಗಲಿ ಭಾವವಾಗಲಿ ಆಗದಿದ್ದುದು, ಇಂದು ಮುಕುಂದಯ್ಯನ ಅಗೋಚರ ಆಕಾಶಪ್ರಜ್ಞೆಯ ಅಂಚಿನಲ್ಲಿ, ಆಗತಾನೆ ಆಗಲಿರುವ ಚಂದ್ರೋದಯ ಪೂರ್ವದ ಕನಕಕಾಂತಿಯಿಂದ ಪ್ರಜ್ವಲಿಸತೊಡಗಿತು. ಆ ಮೂರ್ತಿಯನ್ನು ನೆನೆನೆನೆದು ಮನದಲ್ಲಿಯೆ ಅದಕ್ಕೆ ಅಡ್ಡ ಬಿದ್ದನು!

ಆ ದಿನ ರಾತ್ರಿ, ಊಟಕ್ಕೆ ಮೊದಲೂ ಊಟವಾದ ತರುವಾಯವೂ, ದೇವಯ್ಯ ಮುಕುಂದಯ್ಯ ಇಬ್ಬರೂ ಬಹಳ ಹೊತ್ತಿನವರೆಗೆ ಮಾತಾಡುತ್ತಿದ್ದುದು, ಹೊರಗಡೆ ಸುರಿಯುತ್ತಿದ್ದ ಜಡಿಮಳೆಯ ಜೋಗುಳದಲ್ಲಿ, ತಮ್ಮ ಕೋಣೆಯಲ್ಲಿ ಅರೆಜೊಂಪಿನ ನಿದ್ದೆಯಲ್ಲಿದ್ದ ಕಲ್ಲಯ್ಯಗೌಡರಿಗೆ ಗುನುಗುನುಗುನು ಸದ್ದಾಗಿ ಮಾತ್ರ ಕೇಳಿಸುತ್ತಲೆ ಇತ್ತು.

“ಆ ಭರಮೈಹೆಗ್ಗಡೆ ಮಾಡೋದು ಅಷ್ಟರಲ್ಲೇ ಇದೆ! ನಾವು ಮಾಡೋದು ಮಾಡಾನ! ಚಿನ್ನಕ್ಕನ ತಪ್ಪಿಸೋ ಕೆಲಸ ನೀ ನೋಡಿಕೋ; ಮುಂದಿನ ಕೆಲಸ ನನಗೆ ಬಿಡು. ನಾ ಎಲ್ಲ ಪ್ಲಾನು ಮಾಡ್ತಿನಿ.” ಮುಕುಂದಯ್ಯನಿಗೆ ಧೈರ್ಯ ಹೇಳಿ ಹುರಿದುಂಬಿಸಿದ ದೇವಯ್ಯ, ಆತನ ಮಗಳ ದಾಕ್ಷಿಣ್ಯಕ್ಕೆ ಸಿಕ್ಕಿಬಿದ್ದಿದ್ದ ತನ್ನನ್ನು ಮತಾಂತರಗೊಳಿಸುವ ಪಾದ್ರಿಯ ಬ್ಯಾಪ್ಟಿಸಮ್ ಏರ್ಪಾಡಿನಿಂದ ತನ್ನನ್ನು ಪಾರುಗಾಣಿಸುವ ವಿಚಾರದಲ್ಲಿ ಇಬ್ಬರೂ ಒಪ್ಪಿಕೊಂಡಿದ್ದ ರೀತಿಯನ್ನು ಕಾರ್ಯಗತ ಮಾಡುವ ವಿಷಯವಾಗಿ ಒತ್ತಿ ಒತ್ತಿ ಎಚ್ಚರಿಕೆ ಹೇಳಿದನು: “ನೋಡೂ, ಕೋವಿಗೆ ಮಾತ್ರ ಈಡು ತುಂಬಿಕೊಂಡು ಬಂದೀಯಾ, ಹುಷಾರು! ಆ ದೊಡ್ಡ ಪಾದ್ರಿ ಲೇಕ್ ಹಿಲ್ ದೊರೇನೂ ಬರ್ತಾನಂತೆ ತೀರ್ಥ ಕೋಡೋಕೆ!”

“ಬರೀ ಕೇಪು, ಮಸಿ ಹಾಕ್ಕೊಂಡು ಬರ್ತಿನಿ! ಸಮಯ ಬಿದ್ದರೆ ಒಂದು ಹುಸಿ ಬೆದರು ಈಡು ಹಾರಿಸೋಕೆ; ಆಯ್ತಾ?…. ರವೆ, ಗುಂಡು ಹಾಕ್ಕೊಂಡು ಬಂದು ಅವರನ್ನು ಖೂನಿ ಮಾಡಾಕೆ ನಂಗೇನು ಹುಚ್ಚೆ?…. ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿ ಅಗಳಿ ಹಾಕಾಕೆ ನಮ್ಮ ಐಗಳಿಗೆ ಹಚ್ಚಿಕೊಡ್ತೀನಿ!…. ಆ ಜಾತಿಗೆ ಸೇರಿಸೋ ಹುಚ್ಚು ಬಿಡಿಸ್ದೇ ಇದ್ರೆ ಆಗೋದಿಲ್ಲ ಆ ಪಾದ್ರಿಗೆ! ಬಾಕಿ ಎಲ್ಲಾ ಒಳ್ಳೆ ಮನುಷ್ಯನೇ!”

ಮುಕುಂದಯ್ಯ ಧೈರ್ಯ ಹೇಳಿ ಆಶ್ವಾಸನೆ ಕೊಟ್ಟನು ದೇವಯ್ಯಗೆ.