ಸಂಜೆ ಸುಮಾರು ನಾಲ್ಕೊ ನಾಲ್ಕೂವರೆಯೊ ಗಂಟೆಯಾಗಿತ್ತು. ಆದರೂ ಮೋಡಗತ್ತಲೆ ಕವಿದು ಆರೂವರೆಯೊ ಏಳೊ ಎಂಬ ಭ್ರಾಂತಿಗೆ ಎಡಗೊಡುತ್ತಿತ್ತು. ಮಳೆ ಸುರಿಯುತ್ತಿತ್ತು. ಸೋಗೆ ಹೊದಿಸಿದ್ದ ಮನೆಯ ಅನೇಕ ಭಾಗಗಳಲ್ಲಿ ನೀರು ಸೋರಿ ಸೋರಿ, ಅಲ್ಲಲ್ಲಿ ತಂಬಾಳೆ ಬೋಗುಣಿ ಮಡಕೆಗಳನ್ನಿಟ್ಟು ನೀರು ಹಿಡಿದು, ಅದು ಹರಿಯದಂತೆ ಮಾಡಬೇಕಾಗಿ ಬಂದಿತ್ತು.

ಹೂವಳ್ಳಿಮನೆಯೊಳಗೆ ಜನ ತುಂಬಿದಂತೆ ಭಾಸವಾಗುತಿತ್ತು. ನಿಜಕ್ಕೂ ಜನ  ತುಂಬ ವಿರಳವಾಗಿಯೆ ಇತ್ತು. ಮಳೆಯಿಲ್ಲದ ದಿನವಾಗಿದ್ದರೆ ಹೊರಗೆಲ್ಲ ಸುತ್ತ ಮುತ್ತಾ ಓಡಾಡುತ್ತಾ ಇರುತ್ತಿದ್ದ ಮದುವೆಯ ಉಲ್ಲಾಸ ಉತ್ಸವಗಳು ಮಳೆಯ ನಿಮಿತ್ತ ಮನೆಯೊಳಗೇ ಮುದುಡಿಕೊಂಡು ದಟ್ಟಯ್ಸಿದ ಭ್ರಮೆಗೆ ಕಾರಣವಾಗಿತ್ತಷ್ಟೆ! ಗಿಜಿಬಿಜಿ ಸದ್ದೂ ಸರ್ವವ್ಯಾಪಿಯಾಗಿತ್ತು.

ಸಿಂಬಾವಿಯಿಂದ ಬರುವ ಗಂಡಿನ ಕಡೆಯ ದಿಬ್ಬಣದವಿಚಾರವಾಗಿಯೆ ಗುಂಪು ಗುಂಪಿನಲ್ಲಿ ಮಾತುಕತೆ ಚಚ್ರ್ಚೆ ಜಿಜ್ಞಾಸೆ ಊಹೆ ಎಲ್ಲ ನಡೆದಿತ್ತು: ‘ಈ ಮಳೆಯಲ್ಲಿ ದಿಬ್ಬಣ ಹಂಗೆ ಬರುತ್ತದೆಯೊ ದೇವರೆ ಬಲ್ಲ.’ ‘ಹಳ್ಳ ದಾಟುವುದಾದರೂ ಹ್ಯಾಂಗೆ, ಮಾರಾಯ್ರಾ?’ ‘ದಂಡಿಗೆಯವರು ಕಾಲುದಾರಿಯಲ್ಲಿ ಜಾರಿಬಿದ್ದು ಗಂಡಿನ ಸೊಂಟ ಮುರಿದೆ ತರುತ್ತಾರೆ ಅಂಬೋ ಹಾಂಗೆ ಕಾಣ್ತದೆ.’ ‘ಒಬ್ಬರಿಬ್ಬರಾದರೂ ತೇಲಿ ಹೋಗದೆ ಇರುತ್ತಾರೆಯೆ ತುಂಬಿದ ಹಳ್ಳದಲ್ಲಿ?’ ‘ಅವರಿಗೇನು ಹುಚ್ಚೊ? ತುಂಬಿದ ಹಳ್ಳಕ್ಕೆ  ಇಳಿಯುವುದಕ್ಕೆ? ಅಚೆಯ ದಂಡೆಯಲ್ಲಿ ಕಾಯುತ್ತಾರೆ, ಹಳ್ಳ ಇಳಿಯೋ ತನಕ.’ ‘ಹಾಂಗೆ ಕಾಯುವುದಾದರೆ ನಾಳೆ ಬೈಗಿನತನಕ ಅವರು ಕಾಯಬೇಕಾದೀತು, ಈ ಮಳೆ ನೋಡಿದರೆ ನಿಲ್ಲುವ ಹಾಂಗೆ ತೋರುವುದಿಲ್ಲ.’ ‘ಹೆಣ್ಣಿನ ಅದೃಷ್ಟಾನೂ…’ ‘ಅಂಥಾ ದೊಡ್ದೋರ ಕೈ ಹಿಡಿಯುವ ಪುಣ್ಯ ಇರಬೇಕಾಯ್ತಲ್ಲ! ’ ‘ಎಂಥಾ ದೊಡ್ಡೋರಪ್ಪಾ? ದುಡ್ಡಿನ ದೊಡ್ಡವರೋ?’ ‘ಹ್ಞೂ! ಯಾಕಾಗಬಾರದು? ದುಡ್ದಿನ ದೊಡ್ದವರೇ ಅಂತಾನೂ ಇಟ್ಟುಕೋ…’

ಈ ಗಜಿಬಿಜಿ ಗಲಾಟೆಯಿಂದ ದೂರವಾಗಿ, ತನ್ನ ಅಜ್ಜಿಯ ಕೋಣೆಯಲ್ಲಿ ಚಿನ್ನಮ್ಮ ಒಬ್ಬಳೆ ಚಾಪೆಯ ಮೇಲೆ ಕುಳಿತು, ಸುತ್ತಿಟ್ಟಿದ್ದ ಅಜ್ಜಿಯ ಹಾಸಗೆಗೆ ಒರಗಿಕೊಂಡು ಗಂಭೀರ ಚಿಂತಾಮಗ್ನಳಾಗಿದ್ದಳು. ಬೆಳಿಗ್ಗೆ ಶಾಸ್ತ್ರ ಮಾಡಿಸುವಾಗ ಅವಳ  ಅಂಗೋಪಾಂಗಗಳ ಮೇಲೆ ಹೇರಿದ್ದ ಚಿತ್ರ ವಿಚಿತ್ರವಾದ ಆಭರಣ ಸಂದೋಹ ವಿಲ್ಲದಿದ್ದರೂ ಅವಳು ಮದುವಣಗಿತ್ತಿ ಎಂಬುದಕ್ಕೆ ಸಾಕ್ಷಿಯಾಗಿ ಕೆಲವೇ ಅಲಂಕಾರಗಳಿಂದ ಶೋಭಿತೆಯಾಗಿದ್ದಳು; ಕುಂಕುಮವೆರೆಸಿದ ಕೆಲವು ಅಕ್ಷತೆಗಳೂ ಅವಳ ಸುತ್ತ ಬಿದ್ದಿದ್ದುವು; ಶಾಸ್ತ್ರ ಮಾಡಿಸುವಾಗ ಅವಳ ತಲೆಗೂದಲಲ್ಲಿ, ಗೊಬ್ಬೆ ಸೆರಗಿನಲ್ಲಿ, ಮಡೀಲಿನಲ್ಲಿ ಸೀರೆಯ ಮಡಿಕೆಗಳಲ್ಲಿ, ಆಭರಣಗಳಲ್ಲಿ ಸಿಕ್ಕಿಕೊಂಡಿದ್ದು, ಕೋಣೆಯ ಏಕಾಂತಕ್ಕೆ ಬಂದು ಕೊಡವಿಕೊಂಡಾಗ ಬಿದ್ದವು ಅವು:

‘ಯಾಕೆ ಹೀಗೆ ಸುರಿಯುತ್ತಿದೆ ಮಳೆ? ಇವತ್ತೆ?…. ಈ ಮಳೆ ಹೀಗೇ ಬೀಳುತ್ತಿದ್ದರೆ ಗತಿ? ನನ್ನನ್ನು ಹೇಗೆ ತಪ್ಪಿಸಿಕೊಂಡು ಹೋಗುತ್ತಾರೊ ಮುಕುಂದಬಾವ? ಸಿಕ್ಕಿಬಿದ್ದರೆ ಏನುಗತಿ?… ತಪ್ಪಿಸಿಕೊಂಡು ಹೋಗುವುದಕ್ಕೆ ಆಗುತ್ತದೆಯೊ ಇಲ್ಲವೋ?… ಒಂದು ವೇಳೆ ಎಲ್ಲಿ ಯಾದರೂ ಧಾರೆಗೆ ನಿಲ್ಲುವ ಪ್ರಸಂಗ ಬಂದೇ ಬಿಟ್ಟರೆ?… ಬಂದರೆ, ಇದ್ದೇ ಇದೆಯಲ್ಲಾ ನನ್ನ ಹತ್ತಿರ, ಔಷಧಿ! ನಾಗಕ್ಕನೇ ತಿನ್ನುವುದಕ್ಕೆ ಇಟ್ಟುಕೊಂಡಿದ್ದ ವಿಷ!- ಆಲೋಚನೆಯ ನಡುವೆ ಚಿನ್ನಮ್ಮ ಎದ್ದು ನಿಂತಳು. ನಾಗಂದಿಗೆಯ ಮೇಲೆ ಕೈಯಾಡಿಸಿ ಒಂದು ಸಣ್ನ ಕರಡಿಗೆಯನ್ನು ತೆಗೆದು, ಅದರಲ್ಲಿದ್ದ ಪೊಟ್ಟಣವನ್ನು ಬಿಚ್ಚಿ ನೋಡಿ, ವಿಷದ ಪದಾರ್ಥ ಇರುವುದನ್ನು ಮತ್ತೊಮ್ಮೆ ನಿಶ್ಚಯಪಡಿಸಿಕೊಂಡು ಕರಡಿಗೆಯನ್ನು ಅಲ್ಲಿಯೇ ಭದ್ರಪಡಿಸಿಟ್ಟು, ಮತ್ತೆ ಚಾಪೆಯ ಮೇಲೆ ಸುಯ್ಯುತ್ತಾ ಕೂತುಕೊಂಡಳು: ‘ನನ್ನ ಅವ್ವ ಇದ್ದಿದ್ದರೆ?….’ ಚಿನ್ನಮ್ಮನ ಅಲೋಚನೆ ತನ್ನ ತಾಯಿಯನ್ನು ನೆನಪಿಗೆ ತಂದೊಡನೆಯ ಕಣ್ಣೀರು ಸುರಿಯತೊಡಗಿ ನೀರವವಾಗಿ ಬಿಕ್ಕಿಬಿಕ್ಕಿ ಅಳತೊಡಗಿದಳು.

ಅವಳ ತಾಯಿಯ ಅಕಾರವಾಗಲಿ ಮುಖವಾಗಲಿ ಅವಳ ನೆನಪಿಗೆ ಸ್ವಲ್ಪವಾದರೂ ಸ್ಪಷ್ಟವಾಗಿ ಬರುವಂತಿರಲಿಲ್ಲ. ಅಷ್ಟು ಚಿಕ್ಕ ವಯಸ್ಸಿನಲ್ಲಿಯೆ ತಾಯಿ ತೀರಿಹೋಗಿದ್ದಳು. ಬಹಳ ಕಾಲದವರೆಗೆ ಅವಳು ಅಜ್ಜಿಯನ್ನೆ ತನ್ನ ತಾಯಿಯೆಂದೂ ತಿಳಿದುಕೊಂಡಿದ್ದಳು. ಅವಳ ಅಜ್ಜಿ ಅವಳನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತಿದ್ದರೂ ಅವಳ ಹೃದಯದ ಹೊಸ ಆಶೆಗಳನ್ನು ಅರಿಯಲಾರದ ಸಂಪ್ರದಾಯದ ಮುದುಕಿಯಾಗಿದ್ದಳು. ಕೋಣೂರು ಮುಕುಂದನಿಗೆ ತನ್ನ  ಮೊಮ್ಮಗಳನ್ನು ಕೊಡಲು ಅವಳಿಗೆ ಇಷ್ಟವಿಲ್ಲದಿರಲಿಲ್ಲ. ಆದರೆ ಸಿಂಬಾವಿ ಭರಮೈಹೆಗ್ಗಡೆಯವರ ದೊಡ್ದಸ್ತಿಗೆ, ಐಸ್ಚರ್ಯ, ಅವರ ಮೊದಲನೆಯ ಹೆಂಡತಿಗೆ ಮಕ್ಕಳಾಗದೆ ಬಂಜೆಯಾಗಿದ್ದುದರಿಂದ ತನ್ನ ಮೊಮ್ಮಗಳ ಮಕ್ಕಳಿಗೇ ಸಿಂಬಾವಿಯ ದೊಡ್ಡ ಆಸ್ತಿಯೆಲ್ಲ ದೊರೆಯುತ್ತದೆ ಎಂಬ ದೂರದ ಮಹದಾಶೆ, ಅವರು ನೀಡಿದ್ದ ಧನ ಕನಕ- ಇವುಗಳಿಂದ ಪ್ರೇರಿತಳಾಗಿ, ಲೌಕಿಕವಾಗಿ ವಿವೇಕಪೂರ್ವಕವಾದುದು ಎಂದು ತಾನು ನಂಬಿದ ತನ್ನ ಅಳಿಯನ ಸಲಹೆಗೆ ಸಮ್ಮತಿಸಿದ್ದಳು. ತನ್ನ ಮಗಳಂತೂ ಬಡವನ ಕೈ ಹಿಡಿದು ಸುಖವನ್ನೆ ಕಾಣದೆ ಬಾಳದೆ ಹೋದಳು; ಮೊಮ್ಮಗಳಾದರೂ ಸಿರಿವಂತರ ಮನೆ ಸೇರಿ ಸುಖಿಯಾಗಿರಲಿ ಎಂಬುದೊಂದೆ ಮುದುಕಿಯ ಹಾರೈಕೆಯಾಗಿತ್ತು.

ಇನ್ನು ಅವಳ ತಂದೆ, ವೆಂಕಪ್ಪನಾಯಕರ ಅಕಾರ, ಗಾತ್ರ, ಮಹಾಮೀಸೆ, ಮಾತು ನಡತೆ ಎಲ್ಲದರಲ್ಲಿಯೂ ಇರುತ್ತಿದ್ದ ಒಂದು ಗ್ರಾಮೀಣರೂಕ್ಷತೆ-ಇವುಗಳಿಂದಾಗಿ ಚಿನ್ನಮ್ಮಗೆ ಎಳೆತನದಿಂದಲೂ ತಂದೆಯಲ್ಲಿ ಭಯ ಭಕ್ತಿಯೆ ಉದ್ದೀಪನವಾಗಿತ್ತು. ತಂದೆಯನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ಗೌರವಿಸುತ್ತಿದ್ದಳು. ಆ ಗೌರವದಲ್ಲಿ ಹೆದರಿಕೆಯೆ ಹೃದಯವಾಗಿರುತ್ತಿತ್ತು. ದೊಡ್ಡವಳಾದ ಮೇಲಂತೂ ಅವಳು ಹೆಚ್ಚು ಕಡಮೆ ದೂರವಾಗಿಯೆ ಇರುತ್ತಿದ್ದಳು. ತಂದೆಗೆ ಇದಿರಾಡುವ ಧೈರ್ಯವಾಗಲಿ, ಎದರು ಬೀಳುವ ಉದ್ಧಟತನವಾಗಲಿ ಅವಳಿಗೆ ಕನಸಿನಲ್ಲಿಯೂ ಸಾಧ್ಯವಿರಲಿಲ್ಲ. ಆದ್ದರಿಂದಲೆ ನಾಗಕ್ಕನ ಪರಿಚಯವಾದ ಮೇಲೆ ಅವಳನ್ನೆ ನೆಮ್ಮಿಬಿಟ್ಟಿದ್ದಳು. ನಾಗಕ್ಕ ಒಂದು ರೀತಿಯಲ್ಲಿ ಚಿಕ್ಕಮ್ಮನಾಗಿ ಮನೆಯಲ್ಲಿ ನಿಂತಮೇಲಂತೂ ಆಕೆಯ ತನ್ನ ಹೆತ್ತ ತಾಯಿಯ ಸ್ಥಾನದಲ್ಲಿಯೂ ನಿಂತಿದ್ದಳು. ಪ್ರಣಯ ಮತ್ತು ವಿಷಯ ದಾಂಪತ್ಯ ಜೀವನಗಳ ಕರಾಳ ಮುಖಗಳ ನರಕಮಯ ಪರಿಚಯವಿದ್ದ ನಾಗಕ್ಕಗೆ ಚಿನ್ನಮ್ಮನ ಹೃದಯ ಸಂಪೂರ್ಣವಾಗಿ ಅರ್ಥವಾಗಿದ್ದು, ಅವಳನ್ನು ಸ್ವಂತ ಮಗಳೆಂಬಂತೆ ಪ್ರೀತಿಸುತ್ತಿದ್ದುದರಿಂದ, ಅವಳಿಗಾಗಿ ತನಗೆ ಏನು ಕಷ್ಟ ನಷ್ಟ ಕೇಡುಬಂದರೂ ಸಹಿಸಲು ಸಿದ್ಧಳಾಗಿ, ಅವಳನ್ನು ಈ ವಿಷಯ ವಿವಾಹದಿಂದ ಪಾರುಮಾಡಲು ದೃಢಸಂಕಲ್ಪ ಮಾಡಿದ್ದಳು, ಅವಳನ್ನು ಈ ಹೂವಳ್ಳಿಗೆ ಬಂದದ್ದೂ ಕೂಡಿಕೆಯ ಒಂದು ರೀತಿಯ ಸಮ್ಮತಿಯಿತ್ತದ್ದೂ ಚಿನ್ನಮ್ಮನ ಅಕ್ಕರೆಗಾಗಿಯೆ; ಈಗ ಅವಳ ಸ್ವಂತದ್ದು ಎನ್ನಬಹುದಾದ ಸುಖಸಂತೋಷ ಏನಿದ್ದರೂ ಅದೆಲ್ಲ ಚಿನ್ನಮ್ಮನ ಸುಖಸಂತೋಷದಲ್ಲಿ ಅಭೇದವಾಗಿತ್ತು.

ತಾಯಿಯನ್ನು ನೆನೆದ ಚಿನ್ನಮ್ಮ ಆ ಮಾತೃಮುಖದ ನೆನಪೇನಾದರೂ ಮನಸ್ಸಿನ ಕಣ್ಣಿಗೆ ಕಾಣುತ್ತದೆಯೆ ಎಂದು ಪ್ರಯತ್ನಿಸಿದಳು. ಪ್ರಯೋಜನವಾಗಲಿಲ್ಲ. ತನ್ನ ಅಜ್ಜಿ ಮತ್ತು ಇತರ ಹತ್ತಿರದ ಬಂಧುಗಳು ತನ್ನ ತಾಯಿಯ ಸ್ಫುರದ್ರೂಪ ಅಕಾರ ಸೌಂದರ್ಯಗಳನ್ನು ನೆನದು ಮೆಚ್ಚಿ ಮಾತಾಡುವಾಗಲೆಲ್ಲ ಹೇಳುತ್ತಿದ್ದದ್ದು ಅವಳ ಜ್ಞಾಪಕಕ್ಕೆ ಬಂತು. ತಾನು ಹುಡುಗಿಯಾಗಿದ್ದಾಗಲೆ, ತನ್ನನ್ನು ನೋಡಿದವರೆಲ್ಲ, ತನ್ನ ಮುಖ ತನ್ನ ತಾಯಿಯ ಮುಖಕ್ಕೆ ಹೋಲುತ್ತದೆ ಎನ್ನುತ್ತಿದ್ದರು. ದೊಡ್ಡವಳಾಗಿ ತರುಣಿಯಾದ ಮೇಲಂತೂ ತನ್ನನ್ನು ನೋಡಿ ತನ್ನ ತಾಯಿಯನ್ನು ನೋಡುವುದೇ ಬೇಡ ಎನ್ನುವಷ್ಟು ತನ್ನ ಮುಖ ತಾಯಿಯ ಮುಖಕ್ಕೆ ‘ತದ್ರೂಪ’ ಆಗಿದೆ ಎನ್ನುತ್ತಿದ್ದರು.

ಚಿನ್ನಮ್ಮ ಬಾಚಣಿಕೆಯ ಪಕ್ಕದಲ್ಲಿ ಗೋಡೆಗೆ ಆನಿಸಿಟ್ಟಿದ್ದ ಸಣ್ಣ ಕನ್ನಡಿಯನ್ನು ಕೈಗೆ ತೆಗೆದುಕೊಂಡಳು. ಅದನ್ನು ಕೊಂಡುಕೊಟ್ಟಿದ್ದೂ ಮುಕುಂದಬಾವನೆ, ಇತರ  ನೆಂತರೊಡನೆ ತಾನೂ ಅವರ ಸಂಗಡ ತೇರಿಗೆ ಹೋಗಿದ್ದಂದು; ಅದಕ್ಕೆ ಮೊದಲು ಅವಳು ಬೋಗುಣಿಯಲ್ಲಿಯೊ ಹಂಡೆಯಲ್ಲಿಯೊ ಇರುತ್ತಿದ್ದ ನೀರಿನಲ್ಲಿ ನೋಡಿಕೊಂಡೆ ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಿದ್ದದ್ದು ರೂಢಿ. ಹೆಣ್ಣುಮಕ್ಕಳು ಕನ್ನಡಿ ನೋಡಿಕೊಂಡು ತಲೆಬಾಚಿಕೊಳ್ಳುವುದೆಂದರೆ ಅದೊಂದು ಅನೀತಿವ್ಯಾಪಾರವೆಂದೇ ಆಗಿನ ಭಾವನೆಯಾಗಿತ್ತ. ‘ಕನ್ನಡಿ ನೋಡಿಕೊಳ್ಳುವುದು ಸೂಳೆಯರು ಮಾತ್ರ!’ ಎಂದೂ ಕೆಲವರು ವಯಸ್ಸಾದ ಹೆಗ್ಗಡಿತಮ್ಮಗಳು ಹೇಳುತ್ತಿದ್ದುದನ್ನೂ ಕೇಳಿದ್ದಳು. ಆದ್ದರಿಂದಲೆ ಮುಕುಂದಬಾವನಿಂದ ಕನ್ನಡಿಯನ್ನು ಈಸಿಕೊಳ್ಳುವಾಗಲೆ ಏನೋ ಕಳ್ಳತನದ ಹುಳಿಯನ್ನು ಅನುಭವಿಸಿತ್ತು ಅವಳ ಮನಸ್ಸು. ತರುವಾಯವೂ ಕನ್ನಡಿಯನ್ನು ಮುಚ್ಚು ಮರೆಯಾಗಿಯೆ ಬಳಸುವುದು ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಅದ್ದರಿಂದಲೆ ಈಗಲೂ ಅವಳ ಕಣ್ಣು ಬಾಗಿಲತ್ತ ಓಡಿದ್ದು! ತಾಳಹಾಕಿದ್ದೇನೆಂದು ಪ್ರತ್ಯಕ್ಷ ಜ್ಞಾನದಿಂದ ನಿಶ್ಚಯಮಾಡಿಕೊಂಡ ಮೇಲೆಯೆ ಅವಳು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲು ತೊಡಗಿದಳು!…

‘ಆಃ ಎಷ್ಟು ಚಂದಾಗದೆ ನನ್ನವ್ವ!’…ಚಿನ್ನಮ್ಮನ ಹೃದಯದಿಂದ ಹಿಗ್ಗಿನ  ಸುಯ್ಲೊಂದು ಹೊಮ್ಮಿತ್ತು…. ‘ನೋಡಕ್ಕೆ ಎರಡು ಕಣ್ಣೂ ಸಾಲ್ದು! ಕೈ ತೊಳೆದುಕೊಂಡು ಮೈ ಮುಟ್ಟಬೇಕು!… ಇಂಥವಳನ್ನು ಹೊಡೀತಿದ್ದನಂತಲ್ಲಾ ನನ್ನಪ್ಪಯ್ಯ?… ಹೆಂಗಾರು ಕೈಬರ್ತಿತ್ತೊ ಅವನಿಗೆ?…’ ಅವಳ ಅರಿವಿಲ್ಲದೆಯೆ ಚಿನ್ನಮ್ಮನ ಕಣ್ಣು ನೀರುಕ್ಕಿ ಮಂಜಾಗಿ  ಹರಿಯತೊಡಗಿತ್ತು… ‘ತೂ! ಇದೆಂಥ ಹಾಳುಮಳೆ? ಈ ಮುಗಿಲ ಮಬ್ಬಿನಾಗೆ ಕನ್ನಡೀನೂ ಸರಿಯಾಗಿ ಕಾಣಾದಿಲ್ಲ….’

ಚಿನ್ನಮ್ಮ ಕನ್ನಡಿಯನ್ನು ಹೆಚ್ಚು ಬೆಳಕಿಗೆ ಹಿಡಿದರೆ ಹೆಚ್ಚು ಚೆನ್ನಾಗಿ ಕಾಣುತ್ತದೆ ಎಂದುಕೊಂಡು ಬೆಳಕಂಡಿಯ ಕಡೆಗೆ ತುಸು ಸರಿದಳು. ಕನ್ನಡಿಯ ಮೇಲೇನೊ ಹೆಚ್ಚು ಬೆಳಕು ಬಿತ್ತು. ಆದರೆ? ಅವಳಿಗೆ ಫಕ್ಕನೆ ಅರಿವಾಗಿ ಮೆಲ್ಲಗೆ ನಕ್ಕಳು. ಕನ್ನಡಿಯನ್ನಲ್ಲ ಬೆಳಕಿಗೆ ತರಬೇಕಾದ್ದು; ತನ್ನ ಮುಖವನ್ನು!

ಕಣ್ಣೊರಸಿಕೊಂಡು, ತನ್ನ ಮುಖವನ್ನೆ ಬೆಳಕಿಗೊಡ್ಡುವಂತೆ ತಿರುಗಿ ಕುಳಿತು, ಕನ್ನಡಿಯಲ್ಲಿ ತುಸು ಚೆನ್ನಾಗಿ ಕಾಣತೊಡಗಿದ ಸೌಂದರ್ಯರಾಶಿಯ ಕಡೆಗೆ  ನೋಡತೊಡಗಿದಳು, ದೃಷ್ಟಿನಟ್ಟು. ಆ ಕನ್ನಡಿಯ ವಿಸ್ತೀರ್ಣವೂ, ತುಸು ದೂರ ಹಿಡಿದುಕೊಂಡರೆ, ಮುಖ ಮಾತ್ರ ಕಾಣುವಷ್ಟಿತ್ತು! ಆದ್ದರಿಂದ ತನ್ನ ತಾಯಿಯ ಮುಖದ ಚಂದವನ್ನು ಒಮ್ಮೆಗೇ ಸಮಗ್ರವಾಗಿ ಕಾಣಲಾರದೆ ಭಾಗಭಾಗವಾಗಿಯೆ ಕಂಡು ಅಕ್ಕರೆಯುಕ್ಕಿದಳು: ಬೈತಲೆ ತೆಗದಿದ್ದ ಮಿಂಚುಗಪ್ಪಿನ ತಲೆಕೂದಲು. ಅಗಲವಾದ  ಹೊಂಬಣ್ಣದ ಹಣೆ, ಹಣೆಯ ಮಾಂಗಲ್ಯವನ್ನೂ ಚೆಲುವನ್ನೂ ನೂರುಮಡಿಗೈವ ಕುಂಕುಮದ ಬೊಟ್ಟು, ಕಾಡಿಗೆಗಪ್ಪಿನ ಹುಬ್ಬು ಹೊಳೆಯುತ್ತಿರುವ ಕಣ್ಣಿನ ಮೇಲೆ ಬಾಗಿರುವ ಸೊಗಸು, ಕನ್ನೆಯ ಮಿರುಗುವ ಕೋಮಲತೆ, ತುಟಿಯ ಮನೋಹರತೆ, ಗಲ್ಲದ ದುಂಡನೆಯ ಮುದ್ದು, ಮೂಗುತಿ ಮಿರುಗುವ ನೀಳಮೂಗು, ಸಾಭರಣ ಸುಂದರವಾದ ಕಿವಿ-ಒಂದೊಂದನ್ನೂ ಮತ್ತೆ ಮತ್ತೆ ನೋಡಿ ‘ಅಃ ನನ್ನವ್ವ ಎಷ್ಟು ಚಂದಾಗದೆ!’ ಎಂದುಕೊಂಡಳು ಚಿನ್ನಮ್ಮ, ಅನೇಕ ಸಾರಿ! ಗಲ್ಲದ ಕೆಳಭಾಗದಲ್ಲಿ ಆಗಿ  ನಿಂತುಬಿಟ್ಟಿದ್ದ ಗಾಯದ ಸಣ್ಣ ಕಲೆಯನ್ನು ನೋಡಿದಾಗ, ತಾನು ಹುಡುಗಿಯಾಗಿದ್ದಾಗ ಬಚ್ಚಲು ಕಲ್ಲಿನ ಮೇಲೆ ಜಾರಿಬಿದ್ದು, ಕೊಣದ ಕಲ್ಲು ಗಲ್ಲಕ್ಕೆ ತಗುಲಿ, ನೆತ್ತರು ಸೋರಿ, ಅಜ್ಜಿಯ ಜೀವವೆ ಹಾರಿಹೋಗುವಂತಾಗಿದ್ದನ್ನು ನೆನೆದಳು. ತನ್ನ ಮುಖದಲ್ಲಿದ್ದ ಆ ಒಂದೆ ಕಳಂಕ ತನ್ನ ತಾಯಿಯ ಮುಖದ್ದಲ್ಲ ಎಂದು ನೆನೆದಾಗಲೆ ಅವಳಿಗೆ ತಾನೂ ಬಣ್ಣಿಸುತ್ತಿದ್ದ ಮುಖ ತನ್ನದು ಎಂಬ ಪ್ರಜ್ಞೆ ಸುಸ್ಪಷ್ಟ ಜಾಗ್ರತವಾದದ್ದು.

ಅಷ್ಟು ಹೊತ್ತಿಗೆ ಸರಿಯಾಗಿ ಯಾರೊ ಕತೆದ ಕೂಗು ಕೇಳಿಸಿದಂತಾಗಿ ಕನ್ನಡಿಯನ್ನು ಬೇಗ ಬೇಗನೆ ಅಡಗಿಸಿದಳು. ಆದರೆ ಯಾರೂ ಕರೆದಿರಲಿಲ್ಲ. ಅವಳ ಬೀರಿ, ಮುದ್ದು ಬೆಕ್ಕು, ಮಿಯಾವ್ ಮಿಯಾವ್ ಎನ್ನುತ್ತಾ ಅವಳ ಬಳಿಗೆ ಬಾಲವೆತ್ತಿ ಬಂದು ಮೈಗೆ ಮೈ ತಿಕ್ಕತೊಡಗಿತು. ಬಹುಶಃ ಅವಳನ್ನು ಎಲ್ಲೆಲ್ಲಿಯೂ ಅರಸಿ ಕಾಣದೆ, ಕೋಣೆಯಲ್ಲಿ ಹುಡುಕಿ ನೋಡುವ ಸಲುವಾಗಿ ಬಾಗಿಲಿಗೆ ಬಂದು, ಅದೂ ಮುಚ್ಚಿದ್ದುದನ್ನು ಕಂಡು, ಬೆಳಕಂಡಿಯಿಂದ ನುಸುಳಿ ಬಂದಿತ್ತೆಂದು ತೋರುತ್ತದೆ ಆ  ಬೀರಿಬೆಕ್ಕು. ಅದನ್ನು ಕಂಡು ಚಿನ್ನಮ್ಮನ ಹೃದಯದಲ್ಲಿ ಎಂತಹ ಅತ್ಮೀಯತೆ  ಉಕ್ಕಿತೆಂದರೆ, ತನ್ನ ಅವ್ವನೆ ಬೆಕಿನ ನೆವದಲ್ಲಿ ತನ್ನನ್ನು ಸಂತೈಸಲು ಬಂದಿದ್ದಾಳೆಯೊ ಏನೊ ಎಂಬ ಅನುಭವ ಉಂಟಾಗಿ, ಮೈಮೇಲಣ ರೋಮ ಮುಳ್ಳುನಿಲ್ಲುವಂತಾಯ್ತು! ಬೀರಿಯ ತಲೆಯನ್ನು ಸವರುತ್ತಾ ಅದರ ಬಹು ಮೃದುವಾದ ಮೀಯಾವ್ ಮೀಯಾವ್  ಕರೆಯ ಸದ್ದನ್ನು ಸವಿದಳು. ಬೆಕ್ಕಾದರೂ ದಿಕ್ಕಾಯ್ತಲ್ಲಾ ಈ ಅನಾಥೆಗೆ ಎಂದುಕೊಂಡಿತು ಅವಳ ಮನಸ್ಸು: ಅವಳಿಗೆ ಹೇಗೆ ಗೊತ್ತಾಗಬೇಕು, ಯಾರೆ ಆಗಲಿ, ಯಾವುದೆ ಆಗಲಿ ಸೃಷ್ಟಿವ್ಯೂಹದಲ್ಲಿ ದಿಕ್ಕಿಲ್ಲದೆ ಇರುವುದಿಲ್ಲ ಎಂದು? ಆ ಬೆಕ್ಕಿನ ಮೀಯಾವ್ ಮೀಯಾವ್ ಕಾಕತಾಳೀಯವಾಗಿ ತೋರಿದರೂ ಅವಳಿಗೆ ಸಂತೈಕೆ ನೀಡಿತ್ತು, ಅಶ್ವಾಸನೆಯನ್ನೂ ನೀಡಿತ್ತು-ಎಂಬುದು ಮಾತ್ರ ಅವಳ ಅರಿವಿಗೆ ಮೀರಿದ್ದಾಗಿತ್ತು. ಅವಳ ಮದುವೆ ಸಿಂಬಾವಿ ಭರಮೈ ಹೆಗ್ಗಡೆಯವರೊಡನೆ ನಡೆಯುವುದಾಗಲಿ  ನಡೆಯದಿರುವುದಾಗಲಿ ಅವಳಿಗೆ ಮಾತ್ರ ಮಹದ್ವಿಷಯವಾಗಿರಲಿಲ್ಲ ಅವಳು ಮತ್ತು ಅವಳ ಭವಿಷ್ಯ. ಬಹುಶಃ ಅವಳ ಮಕ್ಕಳಲ್ಲಿ ಇಬ್ಬನೊ ಅಥವಾ ಮೊಮ್ಮಕ್ಕಳಲ್ಲಿ ಒಬ್ಬನೊ ಐತಿಹಾಸಿಕವಾಗಿಯೊ ಅಧ್ಯಾತ್ಮಿಕವಾದ ಅಧಾರಪಾತ್ರವಾಗಿರಬಾರದೇಕೆ? ಭೂತಕಾಲದ ಪ್ರಚೋದನೆ ಮಾತ್ರವಲ್ಲದೆ ಭವಿಷ್ಯತ್ಕಾಲದ ಆಕರ್ಷಣೆಯೂ ವರ್ತಮಾನದ ಚಲನವಲನಗಳನ್ನು ನಿರ್ಣಯಿಸುವ ಪ್ರಬಲ ಶಕ್ತಿಯಾಗಿರುತ್ತದೆ ಅಲ್ಲವೆ?…

ಯಾರೊ ದಡದಡನೆ ಬಾಗಿಲು ತಟ್ಟಿದರು! ಆ ತಟ್ಟುವ ರೀತಿಯಲ್ಲಿ ಅವಸರವೊ ಉದ್ವೇಗವೊ ವ್ಯಕ್ತವಾಗುವಂತಿತ್ತು. ಹಾಗಲ್ಲದಿದ್ದರೆ ತಟ್ಟುವವರು ಹುಡುಗರು ಮಾತ್ರವೆ ಆಗಿರಬೇಕು; ದೊಡ್ಡವರಾದರೆ ಮೆಲ್ಲಗೆ ತಟ್ಟುತ್ತಿದ್ದರು, ಇಲ್ಲದೆ ಕರೆಯುತ್ತಿದ್ದರು…. ಚಿನ್ನಮ್ಮ ಕುಳಿತಲ್ಲಿಂದ ಏಳದೆಯೆ ಆಲಿಸಿದಳು. ದಡದಡದಡ ತಟ್ಟುವುದು ನಿಂತು ಒಂದು ಬಾಲಕವಾಣಿ ಕೇಳಿಸಿತು: “ ಅಕ್ಕಯ್ಯ,ಅಕ್ಕಯ್ಯ, ಬಾಗಿಲು ತೆಗಿ!”   ಚಿನ್ನಮ್ಮ ಮುಖ ಒರಸಿಕೊಂಡು, ಸೀರೆ ಬಟ್ಟೆ ಸರಿಮಾಡಿಕೊಂಡು ಎದ್ದು ಹೋಗಿ ತಾಳ ತೆಗೆದಳು.

“ಅಕ್ಕಯ್ಯ! ಅಕ್ಕಯ್ಯ! ಕೇಳ್ದೇನು?” ಎಂದು ಮೇಲುಸಿರೆಳೆಯುತ್ತಲೆ  ಒಳನುಗ್ಗಿದನು ಧರ್ಮು. ಚಿನ್ನಮ್ಮ ಮತ್ತೆ ಬಾಗಿಲು ಹಾಕಿ, ತಾಳವಿಕ್ಕಿ ಚಾಪೆಗೆ ನಡೆದಳು. ಹುಡುಗನ ಉದ್ವೇಗ ಅವಳಿಗೂ ತಗುಲತೊಡಗಿತ್ತು. ಕೇಳಿದಳು:

“ಏನೋ? ಏನೋ?….ಯಾಕೋ ಏದುತ್ತಿಯಲ್ಲಾ?”

“ನಮ್ಮ ತಿಮ್ಚಿಗಪ್ಪಯ್ಯ ಸಿಂಬಾವಿ ಗಂಡಿನ ಕಡೆ ಮದುವೆಗೆ ಹೋಗಿದ್ದವ  ಬಂದಾನೆ….”

“ಯಾರೋ? ಹಳೆಮನೆ ತಿಮ್ಮಪ್ಪಣೈನೇನೊ?”

“ಹ್ಞೂ ಅವನೇ.”

“ಏನಂತ್ಯೋ?”

“ಸಿಂಬಾವಿ ಕಡೆ ಏನು ಮಳೆ ಅಂದ್ರೆ ಮಳೆಯಂತೆ! ಇಲ್ಲೀ ಮಳೆಗೆ ಹತ್ತರಷ್ಟೊ ನೂರತಷ್ಟೊ ಬರ್ತಾ ಇದೆಯಂತೆ!…. ಹಳ್ಳಾ ಎಲ್ಲಾ ತುಂಬಿ ಹರೀತವಂತೆ….‘ಇವತ್ತೇನು ದಿಬ್ಬಣ ಧಾರೆಮೂಹೂರ್ತಕ್ಕೆ ಬರಾ ತರಾ ಇಲ್ಲ!’ ಅಂತಾ ಇದ್ದ ಜಗಲೀಲಿ ನೆಂತರ ಹತ್ರ….”

“ಬರದೇ ಇದ್ದರೆ ಅಷ್ಟೇ ಹೋಯ್ತು! ಹಾಳಾಗಲಿ ಬಿಡು! ಋಣ ಕಡೀತು!….”

ಧರ್ಮು ಬೆರಗಾದವನಂತೆ ತನ್ನ ಚಿನ್ನಕ್ಕಯ್ಯನ ಕಡೆ ನೋಡಿದನು. ತಾನು ತರುವ ವಿಷಾದಕರ ವಾರ್ತೆಯಿಂದ ಇನ್ನೇನಾಗದಿದ್ದರೂ ಖಿನ್ನಳಂತೂ ಆಗಿಯೆ ಆಗುತ್ತಾಳೆ ಎಂದು  ಹಾರೈಸಿದ್ದ ಅವನಿಗೆ ಚಿನ್ನಮ್ಮನ ಸಿಡುಕಿನ ಶಾಪಸದೃಶವಾದ ಬಿರುನುಡಿಗಳನ್ನು ಕೇಳಿ ಸೋಜಿಗವಾಯಿತು. ಅಕ್ಕಯ್ಯ ಏಕೋ ಮುನಿಸಿಕೊಂಡಿದ್ದಾಳೆ ಎಂದು ಭಾವಿಸಿದನು. ಮರುಕ್ಷಣದಲ್ಲಿಯೆ ಅವನ ಮನಸ್ಸಿಗೆ ಇನ್ನೊಂದು ವಿಷಯದ ಬೆಳಕು ಹೊಳೆದಂತಾಯಿತು. ಆ ವಿಷಯ ಅವನಿಗೆ ಹೆಚ್ಚೇನೂ ತಿಳಿದಿರಲಿಲ್ಲ; ಅವನ ವಯಸ್ಸಿಗೆ  ವಿಶೇಷವಾಗಿ ಅರ್ಥವಾಗುವಂತೆಯೂ ಇರಲಿಲ್ಲ. ಆದರೂ ತನ್ನ ಕೋಣೂರು ಮುಕುಂದಮಾವನಿಗೆ ಹೂವಳ್ಳಿ ಚಿನ್ನಕ್ಕಯ್ಯನನ್ನು ಕೊಟ್ಟು ಮದುವೆಯಾಗುತ್ತದಂತೆ ಎಂಬರ್ಥದ ಸಂಬಂಧವನ್ನು ಅವರಿಬ್ಬರಲ್ಲಿಯೂ ಕಲ್ಪಿಸಿಕೊಂಡಿತ್ತು ಅವನ ಮನಸ್ಸು. ಆದರೆ ಅಂತಹ ಹೆಣ್ಣು ಗಂಡಿನ ಮದುವೆ ಮಾತುಗಳು ಎಷ್ಟೋ ಆಗಿ, ಹೋಗಿ, ಕಡೆಗೆ  ಯಾರೋ ಯಾರನ್ನೋ ಮದುವೆಯಾಗುತ್ತಿದ್ದುದು ಆ ನಾಡಿನ ಸಹಜ ಜೀವನ ವ್ಯಾಪಾರಗಳಲ್ಲಿ ಒಂದಾಗಿದ್ದುದರಿಂದ ಅಂಥಾದ್ದನ್ನು ಯಾರೂ ವಿಶೇಷವಾಗಿ ಮನಸ್ಸಿಗೆ  ಹಾಕಿಕೊಳ್ಳುತ್ತಿರಲಿಲ್ಲ. ಇನ್ನು ಸಣ್ಣ ಹುಡುಗರಿಗೆ ಅದರಲ್ಲಿರಬಹುದಾದ ವಿಶೇಷಾರ್ಥ ಹೇರೆತಾನೆ ಅರಿವಿಗೆ ಬಂದೀತು?

ಯಾವಾಗ ಮುಕುಂದಮಾವನ ಆಲೋಚನೆ ಮನಸ್ಸಿಗೆ ಬಂದಿತೋ ಹುಡುಗ ಸಹಜವಾಗಿಯೆ ಕೇಳಿದನು: “ಅಕ್ಕಯ್ಯ, ಮುಕುಂದ ಮಾವ ಯಾಕೆ ಮದೇಮನೆಗೆ ಬಂದೇ ಇಲ್ಲಾ?….”

ಪ್ರಶ್ನೆಯೇನೊ ತುಂಬಾ ಸರಳವಾಗಿಯೆ ಇತ್ತು. ಆದರೆ ಎಂತಹ ಭಯಂಕರ  ಜಟಿಲತೆಯನ್ನು ಕೆರಳಿಸೆಬ್ಬಿಸಿತ್ತು ಚಿನ್ನಮ್ಮನ ಹೃದಯದಲ್ಲಿ!

ಅವಳ ಮುಖ ಸಣ್ಣದಾಯಿತು. ಕೋಣೆಯಲ್ಲಿ ಅಷ್ಟು ಮಬ್ಬು ಬೆಳಕಿರದಿದ್ದರೆ, ಬಣ್ಣ ಬದಲಾಯಿಸಿದ್ದನ್ನೂ ಗಮನಿಸುತ್ತಿದ್ದನೊ ಏನೊ, ಧರ್ಮು. ತುಟಿ ಅಳತೊಡಗುವ ಮಕ್ಕಳ ತುಟಿಗಳಂತೆ ತುಸು ನಡುಗುತ್ತಾ ಮುಂಚಾಚಿದಂತಾದುವು. ಕಣ್ಣು ಹನಿಗೂಡಿದುವು. ತನ್ನಿಂದ ತಡೆಯಲಾಗದ ಭಾವಗೋಪನಕ್ಕಾಗಿ ಮಾತಿಲ್ಲದೆ ಮುಖ ತಿರುಗಿಸಿಕೊಂಡಳು.

ಅಕ್ಕಯ್ಯಗೆ ಮಹಾಸಂಕಟಕರವಾಗುವ ಅಪರಾಧವನ್ನೆಸಗಿದಂತವನಾಗಿ ಧರ್ಮು, ಕಂಪದ ಗದ್ದೆ ಎಂಬುದು ಗೊತ್ತಿಲ್ಲದೆ ಅದರ ಅಂಚಿನ ಮೇಲೆ ನಡೆಯುವವನು ಕೆಳಗೆ  ಒಂದು ಕಾಲು ಹಾಕಿ ಫಕ್ಕನೆ ಅದನ್ನೆತ್ತಿಕೊಳ್ಳುವಂತೆ, ತಟಕ್ಕನೆ ವಿಷಯದ ದಿಕ್ಕನೆ  ಬದಲಾಯಿಸಿದನು: “ಅಕ್ಕಯ್ಯ, ಕಾಡಣ್ಣಯ್ಯಗೆ ಕಾಲಿಗೆ ಮುಳ್ಳು ಚುಚ್ಚಿಕೊಂಡಿತ್ತಲ್ಲಾ? ಅದೀಗ ಕೀತು ಸಿಡೀತಾ ಅದೆಯಂತೆ, ಜರ ಬಂದು ನಡುಗ್ತಾಕೂತಾನೆ ಜಗಲೀಲ.”

ಚಿನ್ನಮ್ಮ ತನ್ನ ದುಃಖವನ್ನೆಲ್ಲ ಬದಿಗೊತ್ತಿದಂತೆ ಸೆರಗಿನಿಂದ ಕಣ್ಣೊರಸಿಕೊಂಡು ಹೇಳಿದಳು, ಸಾಧಾರಣ ಧ್ವನಿಯಲ್ಲಿ: “ ಹೋಗೋ, ಕರಕೊಂಡು ಬಾರೋ ಅವನ್ನ. ಒಂದು ಚೂರು ಕಾಡು ಜೀರಿಗೆ ತಿನ್ನಿಸಿ, ಬಿಸಿ ನೀರು ಕುಡಿಸಿ, ಬೆಚ್ಚಗೆ ಹೊದಿಸಿ, ಮಲಿಗಿಸ್ಯಾರು ಮಲಗಿಸ್ತೀನಿ, ಪಾಪ!…. ಹೆಂಗಾರು ಮಾಡಿ ಕಾಲಿನ ಮುಳ್ಳು ತೆಗೆದು, ಕೀವು ಬಿಡಿಸದೆ ಇದ್ದರೆ….ಛೇ ಪಾಪ!….

ಅಕ್ಕನಲ್ಲಾದ ಬದಲಾವಣೆಗೆ ಹರ್ಷಚಿತ್ತನಾಗಿ ಧರ್ಮು ಕಾಡುವನ್ನು ಕರೆತರಲು ಜಗಲಿಗೆ ಓಡಿದನು….

ಕಾಡುಗೆ ಕಾಡುಜೀರಿಗೆ ತಿನ್ನಿಸಿ, ಬಿಸಿ ನೀರು ಕುಡಿಸಿ, ಚೆನ್ನಾಗಿ ಹೊದಿಸಿ ಮಲಗಿಸಿ, ನಾನಾ ರೀತಿಯ ಸಮಾಧಾನವನ್ನು ಹೇಳಿ ಉಪಾಯದಿಂದ ಕಾಲಿನ ಕೀವು ಬಿಡಿಸಿ, ಒಳಗೆ ಮುರಿದುಕೊಂಡಿದ್ದ ಅಂಕೋಲೆ ಮುಳ್ಳಿನ ಅರ್ಧ ಚೂರನ್ನು ಹೊರತೆಗೆದು ಮುಗಿಸುವಷ್ಟರಲ್ಲಿ ಬೈಗು ಕಪ್ಪಾಗಿತ್ತು. ಯಾರೋ ಹೊತ್ತಿಸಿದ್ದ ಒಂದು ಹಣತೆಯ  ಬೆಳಕೂ ಕೋಣೆಯನ್ನು ತುಸು ಬೆಳಗತೊಡಗಿತ್ತು.

ಕಾಡುಗೆ ಚಿಕಿತ್ಸೆ ನಡೆಯುತ್ತಿದ್ದಾಗ ಒಳಗೂ ಹೊರಗೂ ಬಂದೂ ಹೋಗಿ, ಹೋಗೀ ಬಂದು ಮಾಡುತ್ತಲೆ ಇದ್ದ ಚಟುವಟಿಕೆಯ ತಿಮ್ಮು ಏನೇನೊ ವಾರ್ತೆಗಳನ್ನು ತಂದೂ ತಂದೂ ಅಕ್ಕಯ್ಯಗೆ ಹೇಳುತ್ತಲೆ ಇದ್ದನು. ಗುರು ಲಘು ಬೇದವಿಲ್ಲದ ಆ ಸುದ್ದಿಗಳಲ್ಲಿ ಬಹುಪಾಲು ನಗೆಯ ವಿಷಯಗಳೆ ಆಗಿರುತ್ತಿದ್ದುವು. ಆದರೆ ಕತ್ತಲಾಗಿ ದೀಪ ಹೊತ್ತಿಸಿದ ಮೇಲೊಮ್ಮೆ ಕೋಣೆಯಿಂದ ಹೊರಬಿದ್ದವನು ಬಹಳ ಹೊತ್ತಿನವರೆಗೂ ಒಳಗೆ ಬರಲಿಲ್ಲ. ಆಮೇಲೆ ದಡದಡನೆ ಒಳಗೆ ಓಡಿ ಬಂದವನು ಹೇಳಿದನು: “ಅಕ್ಕಯ್ಯ, ಮಳೆ ಜೋರಾಗಿ ಹೊಡೀತಿತ್ತಂತೆ. ಇಳಿಜಾರಿನಲ್ಲಿ ದಂಡಿಗೆ  ಹೊತ್ತವರು ಕಾಲುಜಾರಿ ಬಿದ್ದು, ದಂಡಿಗೆ ಒಳಗೆ ಕೂತಿದ್ದ ಮದುವನಗಗೆ ಸೊಂಟ  ಉಳುಕಿಹೋಗದೆಯಂತೆ!….”

ಅವನು ಇನ್ನೂ ಮುಂದುವರಿಸುತ್ತಿದ್ದನೊ ಏನೊ? ಆದರೆ ಚಿನ್ನಮ್ಮ ಕಿಸಕ್ಕನೆ  ನಕ್ಕು ಬಿಟ್ಟಿದ್ದನ್ನು ಕಂಡು ಅವಾಕಾದನು. ತನಗೆ ಗಂಡನಾಗುವವನ ಸೊಂಟ ಮುರಿದದ್ದನ್ನು ಕೇಳಿ ಹೆಂಡತಿಯಾಗುವವಳು ತಡೆಯಲಾರದೆ ನಕ್ಕಿದ್ದನ್ನು ಕಂಡು ಹುಡುಗನಿಗೆ  ಸೋಜಿಗವಾಯಿತು ಆದರೆ ಮರುಕ್ಷಣದಲ್ಲಿಯೆ ಏಕೋ ಏನೋ ಅವನೂ ಗಹಗಹಿಸಿ ನಗತೊಡಗಿದನು: ಮತ್ತೆ ಹೇಳಿದನು ತುಸು ಮೂದಲಿಕೆಯ ದನಿಯಿಂದ: “ಹಂಗಾಗಬೇಕಲ್ಲೇನಕ್ಕಯ್ಯಾ ಅವರಿಗೆ? ಹಿಹ್ಹಿಹ್ಹಿಹಿಹಿ!”

ಇಬ್ಬರೂ ಒಟ್ಟಿಗೆ ಚೆನ್ನಾಗಿ ನಗುವುದನ್ನು ಕೇಳಿ ಜ್ವರತಪ್ತನಾಗಿ ಮಲಗಿದ್ದ  ಕಾಡುವೂ ನಗತೊಡಗಿದನು. ಧರ್ಮು ಅಲ್ಲಿ ಇದ್ದಿದ್ದರೆ ಅವನೂ ಸೇರುತ್ತಿದ್ದನೊ ಆ  ನಗುವಿನ ಹೊನಲಿಗೆ: ಅಷ್ಟು ಹಾಸ್ಯಾಸ್ಪದವಾಗಿತ್ತು ದಂಡಿಗೆಯವರು ಜಾರಿ ಬೀಳುವ  ಮತ್ತು ಮದುಮಗನ ಸಾಲಂಕೃತ ಸೊಂಟಮುರಿಯುವ ದೃಶ್ಯ! ಅಷ್ಟರಲ್ಲಿ ಗರತಿಯರು ಕೆಲವರು ಬಂದು ಮದುಮಗಳನ್ನು ಶಾಸ್ತ್ರ ಮಾಡಿಸಲು, ಶೃಂಗಾರಗೈದು, ಧಾರೆಯ ಮಂಟಪಕ್ಕೆ ಸಿದ್ಧಗೊಳಿಸುವುದಕ್ಕಾಗಿ ಕರೆದೊಯ್ದರು.

ಕೋಣೆಯೆಲ್ಲ ನಿಃಶಬ್ದವಾದ ಮೇಲೆ, ಕಾಡು ಒದ್ದನೆಯ ಆಗ ಬಾರದೆಂದು  ಜೊತೆ ಕುಳಿತಿದ್ದ ತಿಮ್ಮು “ಹಿಹ್ಹಿಹ್ಹಿಹ್ಹಿ! ಕಾಡಣ್ಣಯ್ಯ, ಆ ಮತ್ತಿಗೇರಿ ಅತ್ತೆಮ್ಮನ  ಬಾಲೆ…. ಥೂ ಥೂ ಥೂ!….” ಅದನ್ನು ನೆನೆನೆನೆದು ಹುಡುಗರಿಬ್ಬರೂ ನಗತೊಡಗಿದರು, ಒಬ್ಬರಿಗೊಬ್ಬರು ಕಚಗುಳಿ. ಇಟ್ಟುಕೊಂಡರೊ ಎಂಬಂತೆ.

* * *

ಬೈಗಾಯ್ತು; ಕಪಾಯ್ತು; ಕತ್ತಲಾಯ್ತು; ರಾತ್ರಿಯೂ ಸುದೂರ ಸಾಗಿತ್ತು. ಹಣತೆಗಳು, ಚಿಮಿಣಿಗಳು, ದೊಂದಿಗಳು, ಬೆಟ್ಟಳ್ಳಿಯಿಂದ ತಂದಿದ್ದು ನವನಾಗರಿಕತೆಯ ಲಾಂಛನಗಳಾಗಿದ್ದ ಲಾಟೀನು ಲ್ಯಾಂಪುಗಳು ಅಲ್ಲಲ್ಲಿ, ಅವು ಅವುಗಳಿಗೆ ಉಚಿತವಾಗಿದ್ದ  ಸ್ಥಾನಗಳಲ್ಲಿ ಉರಿಯತೊಡಗಿದ್ದುವು. ಮದುವೆಗೆ ನೆರೆದಿದ್ದವರು ಸ್ವಲ್ಪವೆ ಸಂಖ್ಯೆಯ  ಜನಗಳಾದರೂ ಅಲ್ಲಲ್ಲಿ ಗುಂಪುಗುಂಪಾಗಿ ಕುಳಿತು ಗುಜು ಗುಜು ಮಾತನಾಡಿಕೊಳ್ಳುತ್ತಿದ್ದುದು ಆ ಪುರಾತನ ಕಾಲದ ದೊಡ್ಡ ಮನೆಯ ತುಂಬ ಒಂದು ಜೇನುಗೂಡಿನ ಝೇಂಕಾರದಂತಹ ಮೊರೆ ತುಂಬಿತ್ತು: ಕಲ್ಲೂರು ಗಣಪತಿ ಸಾವಿರಕಾಯಿ ಒಡೆಸುವುದಾಗಿ ಹಾಸಿಗೆ ಹಿಡಿದಿದ್ದ ವೆಂಕಪ್ಪನಾಯಕರು ಹರಕೆ ಹೊತ್ತಿದ್ದರೂ ಮಳೆ ನಿಂತಿರಲಿಲ್ಲ; ಕಡಮೆಯಾಗಿರಲೂ ಇಲ್ಲ. ಸಿಂಬಾವಿಯಿಂದ ಬರಬೇಕಾಗಿದ್ದ ದಿಬ್ಬಣವನ್ನು ನಾನಾ ಭಾವಭಂಗಿ ಗಳಿಂದ ನಿರೀಕ್ಷಿಸುತ್ತಾ ವಿವಿಧ ಸ್ವರೂಪದ ವ್ಯಾಖ್ಯಾನ ಟೀಕೆಗಳನ್ನು ಮಾಡುತ್ತಾ, ಇಡಿಯ ಮನೆಯ, ಗರತಿಯರೂ ಗಿರಾಸ್ತರೂ ಅಡುಗೆಯವರೂ ಆಳುಗಳೂ ಎಲ್ಲ ಕಾಯುತ್ತಿದ್ದರು:

“ಹೋಯ್, ಕಡೆಗೂ ಗಂಡಿನ ಕಡೆ ದಿಬ್ಬಣ ಬರ್ತದೆಯೋ ಇಲ್ಲೋ?….”

“ಆವಾಗ ಒಂದು ಸಾರಿ, ಎಲ್ಲೋ ದೂರದಾಗೆ, ಕೊಂಬಿನ ಕೂಗು ಕೇಳಿಸಿಧಾಂಗೆ ಆಯ್ತಪ್ಪಾ….”

“ಯಾವಾಗ್ಲೋ?”

“ದೋಯಿಸ್ರು ಬಂದ್ರಲ್ಲಾ ಆವಾಗ…”

“ಏ ! ಅದಿಲ್ಲೇ ನಮ್ಮ ಹಳೆಮನೆ ಹೊಲೇರು ಊದಿದ್ದಿರ್ಬೇಕು.”

“ದೋಯಿಸ್ರೇ ಹೇಳಿದರಂತೊ ‘ಅಲ್ಲೆಲ್ಲೋ ದೂರದಲ್ಲಿ ದಿಬ್ಬಣದ ಸದ್ದು ಕೇಳಿದ್ಹಾಂಗೆ ಆಗ್ತಿತ್ತು.’ ಅಂತಾ….”

“ದಂಡಿಗೀನ ಹೊತ್ಕೊಂಡು ಬಿದ್ರಂತಲ್ಲಾ ಬೋವೇರು ಜಾರಿ!….ಮದುವನಗಗೆ ಸೊಂಟಾನೆ ಉಳುಕ್ತು ಅಂತಾ ಹೇಳ್ತಿದ್ರಂತೆ?….”

“ಅದೆಲ್ಲಾ ಸುಳ್ಳಂತೋ… ಜಾರಿ ಬಿದ್ದಿದ್ದೇನೊ ಹೌದಂತೆ, ಆದರೆ ಸೊಂಟಗಿಂಟ ಮುರಿದಿದ್ದು ಸುಳ್ಳಂತೆ….”

“ಹೆಗ್ಗಡೇರ ಹಿರೇ ಹೆಂಡ್ತಿ, ಅದೇ ಮೊದಲನೆ ಹೆಂಡ್ತಿ ಜಟ್ಟಮ್ಮ ಹೆಗ್ಗಡ್ತೇರು, ‘ಅಪಶಕುನ ಆಯ್ತು. ದಿಬ್ಬಣ ಮುಂದೆ ಹೋಗಾದೆಬ್ಯಾಡ, ಅಂತಾ ಕೂತುಬಿಟ್ಟಿದ್ರಂತೆ?”

“ಆದ್ರೆ, ಹೆಗ್ಗಡೇರು ಬಿಡ್ತಾರೇನೋ? ಇಂಥಾ ಹೆಣ್ಣು ಕಿರೀ ಹೆಂಡ್ತಿ ಆಗಿ ಬರುವಾಗ?….”

“ಅಲ್ಲಿ ನೋಡಲ್ಲಿ! ಯಾರೋ ದಿಬ್ಬಣದ ಕಡೇರು ಬಂಧಾಂಗೆ  ಕಾಣ್ತದೆ…. ಏನಂತೆ ಹೋಗಿ ಕೇಳಿಕೊಂಡಾದ್ರೂ ಬರ್ತೀನಿ….”

ಮಾತಾಡುತ್ತಿದ್ದವನು ಎದ್ದುಹೋಗಿ,ಹೊಸದಾಗಿ ಮಳೆಯಲ್ಲಿ ನೆನೆದು ಬಂದಿದ್ದ  ಒಬ್ಬನೊಡನೆ, ಸುತ್ತಲೂ ಮುತ್ತಿಕೊಂಡು ಪ್ರಶ್ನೆಗಳ ಸುರಿಮಳೆ ಸುರಿಸಿ ಮಾತಾಡುತ್ತಿದ್ದ ಗುಂಪಿನಲ್ಲಿ ಸೇರಿದನು.

ದಿಬ್ಬಣದವರೇನೊ ಕೋಡ್ಲುಹಳದ ದಂಡೆವರೆಗೂ ‘ಹಾಂಗೂ ಹೀಂಗೂ ಮಾಡಿ’ ಬಂದಿದ್ದಾರೆಂದೂ, ಹಳ್ಳ ತುಂಬಿ ಹರಿಯುತ್ತಿರುವುದರಿಂದ, ಮಳೆ ಸ್ವಲ್ಪ ಕಡಿಮೆಯಾಗಿ, ಹಳ್ಳದ ನೀರು ಇಳಿಯುವುದನ್ನೆ ಕಾಯುತ್ತಿದ್ದಾ ರೆಂದೂ ಗೊತ್ತಾಯಿತು. ಹಳ್ಳದ ಮತ್ತು ಅದರ ಆಳವಿರುವ ಮತ್ತು ಆಳವಿರದಿರುವ ಜಾಗಗಳ ಪರಿಚಯವಿರುವ ಊರು ಮನೆಯವರನ್ನು ಕಳಿಸಿ ದಿಬ್ಬಣದವರನ್ನೂ ದಂಡಿಗೆಯಮ್ಮೂ ದಾಟಿಸುವ ಕೆಲಸಕ್ಕೆ  ಹಚ್ಚಿದರು. ಅವರು ದಿಬ್ಬಣದವರು ಕಾಯುತ್ತಿದ್ದೆಡೆಗೆ ಹೋಗಿ ಈಚೆಯ ದಂಡೆಯಿಂದಲೆ ಕೂಗಿ ಹೇಳಿ, ಅರ್ಧಮೈಲಿಯ ಮೇಲುಭಾಗದಲ್ಲಿ ಹಳ್ಳ ಅಗಲವಾಗಿ ನೀರು ಅಳವಿಲ್ಲದೆ ಹರಿಯುತ್ತಿದ್ದ ಕಲ್ಲು ಕಲ್ಲು ಜಾಗದಲ್ಲಿ ದಿಬ್ಬಣದವರನ್ನೂ ದಂಡಿಗೆಯವರನ್ನೂ ಎಚ್ಚರಿಕೆಯಿಂದ ದಾಟಿಸಿದರು.

ಅಂತೂ ದಿಬ್ಬಣದವರೂ ದಂಡಿಗೆಯೂ, ಹೂವಳ್ಳಿಯ ಮನೆಯ ಮುಂದಣ  ಗದ್ದೆ ಬಯಲಿನ ಹಕ್ಕಲ ಬಳಿಗೆ ಬಂದುವನ್ನು ಸಾರಲು ಕೊಂಬು ಕೂಗಿದುವು, ಕದಿನಿ ಹಾರಿದುವು, ತಂಬಟೆ  ಬಾರಿಸಿದುವು. “ದಿಬ್ಬಣ ಬಂತು! ದಿಬ್ಬಣ ಬಂತು!” ಎಂದು  ಎಲ್ಲೆಲ್ಲಿಯೂ ಗದ್ದಲ ಸಂಭ್ರಮ ತೆರೆಯುಕ್ಕಿತು! ಎರಡು ಕಡೆಯ ವಾಲಗ ವಾದ್ಯಗಳೂ ಭೋರ್ಗರೆಯಿತು:

ಸರ್ವಾಲಂಕಾರ ಭೂಷಿತೆಯಾಗಿ, ಗರತಿಯರು ಸುತ್ತುಗಟ್ಟಿರಲು ಗೋಡೆಗೆ  ಬೆನ್ನೊರಗಿ ತಲೆಬಾಗಿ ಕುಳಿತಿದ್ದ ಮದುಮಗಳು, ಚಿನ್ನಮ್ಮ, ಗಂಭೀರ ಚಿಂತಾಮಗ್ನೆಯಾಗಿ ತನ್ನ ದೈವವನ್ನು ನೆನೆಯುತ್ತಾ ಅಗಾಗ್ಗೆ ಕಣ್ಣೊರಸಿಕೊಳ್ಳುತ್ತಿದ್ದಳು. ಸುತ್ತ ಹತ್ತಿರವಿದ್ದ  ಮುತೈದೆಯರು ಅವಳ ಕಣ್ಣೀರಿಗೆ ತಮ್ಮದೆ ಆದ ರೀತಿಯಲ್ಲಿ ವ್ಯಾಖ್ಯಾನಮಾಡಿಕೊಂಡು ಅವಳನ್ನು ಸಮಾಧಾನಪಡಿಸಲೆಂದು ಉಸಿರಿದ ಮಾತುಗಳೆ ಅವಳ ದುಃಖಕ್ಕೆ ಕಾರಣವಾಗಿ ಚಿನ್ನಮ್ಮ ಮತ್ತಷ್ಟು ಹತಾಶೆಯಾಗಿ ವಿಹ್ವಲಗೊಳ್ಳುತ್ತಿದ್ದಳು. ಧರ್ಮು ತಿಮ್ಮು ಹೇಳಿದ್ದ ಸುದ್ದಿಗಳಿಂದಲೂ, ಮತ್ತು ಸುತ್ತಮುತ್ತಲಿದ್ದ ವಯಸ್ಸಾದ ಹೆಗ್ಗಡಿತಿಯವರು ತಮ್ಮ ತಮ್ಮೊಳಗೆ ಆಡಿಕೊಳ್ಳುತ್ತಿದ್ದಮಾತುಗಳಿಂದಲೂ, ಮಳೆಬಿಡದೆ ಹೊಡೆಯುತ್ತಿದ್ದುದರಿಂದಲೂ, ದಿಬ್ಬಣದವರು ರಾತ್ರಿ ಬಹಳ ಹೊತ್ತಾದರೂ ಬಾರದೆ ಇದ್ದುದರಿಂದಲೂ ಆ ದಿನ  ತನಗೊದಗಲಿರುವ ಮದುವೆಯ ದುರಂತ ತನ್ನ ಪಲಾಯನರೂಪದ ಪ್ರಯತ್ನ  ವಿಲ್ಲದೆಯೆ ದೇವರ ದಯೆಯಿಂದ ನಿಂತರೂ ನಿಲ್ಲ ಬಹುದೆಂದು ಹಾರೈಸಿದ್ದಳು.  ಹಿತ್ತಲು ಕಡೆಯ ಹಂಡೆಯ ಸದ್ದು ಯಾವಾಗಬೇಕಾದರೂ ಕೇಳಿಸ ಬಹುದೆಂದು ಅತ್ತಕಡೆ ಕಿವಿಯಾಗಿಯೆ ಕುಳಿತಿದ್ದಳು. ನಾಗಕ್ಕನೂ ಅಗಾಗ ಮದುಮಗಳಿಗೆ ಏನನ್ನೊ ಹೇಳುವ ನೆವದಿಂದ ಬಂದು ಅವಳ ಕಿವಿಯಲ್ಲಿ ಧೈರ್ಯದ ಮಾತುಗಳನ್ನು ಹೇಳಿ ಹೋಗುತ್ತಿದ್ದಳು: ಪಕ್ಕದಲ್ಲಿದ್ದ ಗರತಿಯರು ಯಾಕೆ? ಏನು? ಎಂತು? ಎಂದು ವಿಚಾರಿಸಿದಾಗ ನಾಗಕ್ಕ ‘ಹುಡುಗಿಗೆ ಏನೂ ಸ್ವಲ್ಪ ಹೊಟ್ಟೆ ಸರಿಯಾಗಿಲ್ಲ ’ ಎಂದೂ, ‘ತಲೆನೋವು’ ಎಂದೊ ‘ಅದಕ್ಕೆ ಏನಾದರೂ ಕುಡಿಯುವುದಕ್ಕೆ ಬೇಕೇನೋ ಎಂದು ಕೇಳಿದೆ.’ ಎಂದೊ ನೆವಹೇಳುತ್ತಿದ್ದಳು. ದಿಬ್ಬಣ ಕೋಡ್ಲುಹಳ್ಳದ ದಂಡೆಗೆ ಮುಟ್ಟಿ, ನೀರು ಇಳಿಯುವುದನ್ನೆ ಕಾಯುತ್ತಿದೆ=ಎಂಬ ಸುದ್ದಿ ಬಂದಾಗ, ಮದುವೆಗೆ ಬಂದಿದ್ದ ನೆಂಟರಮ್ಮರೆಲ್ಲ ತಾವು ಬಂದದ್ದು ವ್ಯರ್ಥವಾಗಲಿಲ್ಲವಲ್ಲಾ ಎಂಬ ತೃಪ್ತಿಯಿಂದ ನಿಡುಸುಯ್ದು ಸಂತಸ ಗೊಂಡಿದ್ದರು. ಅದೇ ಸುದ್ದಿ ಚಿನ್ನಮ್ಮನ ಹೃದಯಕ್ಕೆ ಸಿಡಿಲಾಗಿ ಎರಗಿತ್ತು.

‘ಏಕಿನ್ನೂ ಹಂಡೆಯ ಸದಾಗಲಿಲ್ಲ? ನನ್ನನ್ನು ಇಲ್ಲಿಂದ ಮೊದಲೇ ಏಕೆ ಪಾರು ಮಾಡಬಾರದಾಗಿತ್ತು? ಮುಕುಂದಬಾವಗೆ ನಾನು ಬೇಡವಾದೆನೆ?’-ಚಿನ್ನಮ್ಮನ ಶಂಕೆ ಉದ್ವೇಗ ಗರಗಸವಾಗಿ ಹೃದಯದ ಮೇಲೆ ಹರಿಯತೊಡಗಿತ್ತು. ಮಡಿಲಿನಲ್ಲಿ ಆ ವಿಷದ ಪೊಟ್ಟಣವಾದರೂ ಇದೆಯೆ? ನೋಡಿಕೊಂಡಳು ಕೈತಡವಿ. ಅದೂ ಇರಲಿಲ್ಲ. ‘ಅಯ್ಯೋ, ನಾಗಂದಿಗೆಯ ಮೇಲೆ ಇಟ್ಟವಳು ಮರತೇ ಬಂದುಬಿಟ್ಟೆನಲ್ಲಾ!’ ಎಂದುಕೊಂಡು ಅತ್ತ ಇತ್ತ ಗಾಬರಿಗೊಂಡವಳಂತೆ ಕಣ್ಣು ಹಾಯಿಸತೊಡಗಿದಳು.

“ಯಾಕೇ? ಮದೋಳ್ಗಿಗೆ ಹೊಟ್ಟೆಗಿಟ್ಟೆ ನೋಯ್ತದೇನೆ?” ಹತ್ತಿರವಿದ್ದು ಗಮನಿಸಿದ ನೆಂಟರಮ್ಮ ಒಬ್ಬರು ಕೇಳಿದರು.

“ನಾಗಕ್ಕನ ಬರಾಕೆ ಹೇಳಬೇಕಂತೆ.” ಸಖಿಯತನವನ್ನು ವಹಿಸಿಕೊಂಡು ಮೆರೆಯುತ್ತಿದ್ದ ಹುಡುಗಿಯೊಬ್ಬಳು ಹೇಳಿದಳು.

ಯಾರೊ ಹೋಗಿ ನಾಗಕ್ಕಗೆ ಹೇಳಿದರು. ಅವಳು ಬಂದು ವಿಚಾರಿಸಿದಾಗ ಅವಳ ಕಿವಿಯಲ್ಲಿ ಚಿನ್ನಮ್ಮ ಪಿಸುಗುಟ್ಟಿದಳು.ನಾಗಕ್ಕ ಮದುಮಗಳನ್ನು೭ ಎಬ್ಬಿಸಿ ಕರೆದೊಯ್ದಳು.

ಚಿನ್ನಮ್ಮ ತನ್ನ ಕೋಣೆಗೆ ಹೋಗಿ, ನಾಗಕ್ಕಗೆ ಬಾಗಿಲು ತಾಳ ಹಾಕುವಂತೆ ಹೇಳಿ ವಿಷವಿದ್ದ ಕರಡಿಗೆಗೆ ಕೈಹಾಕಿ, ಅದರಲ್ಲಿದ್ದ ಪೊಟ್ಟಣವನ್ನು ತೆಗೆದು ಮಡಿಲಿಗೆ ಹಾಕಿಕೊಳ್ಳುತ್ತಿದ್ದಾಗ, ನಾಗಕ್ಕಗೆ ಎಲ್ಲವೂ ತಟಕ್ಕನೆ ಅರ್ಥವಾಗಿ, ಅದನ್ನು ಕಸಿದುಕೊಂಡಳು. ಆಗಲೆ ಕೇಳಿಸಿದ್ದು, ಹಿತ್ತಲುಕಡೆಯ ಹಂಡೆಯನ್ನು ಬಡಿದ ಸದ್ದು!

ಆ ಸದ್ದಿನಷ್ಟು ಸಾಧಾರಣವಾದದ್ದು, ಯಕ್ಕಚ್ಚಿತವಾದದ್ದು, ಗಮನಾನರ್ಹವಾದದ್ದು, ಆ ಮದುವೆಮನೆಯ ಗಲಾಟೆಯಲ್ಲಿ ಅತ್ಯಂತ ನಿರ್ಲಕ್ಷಿತವಾದದ್ದು ಅಂದು ಆ ಹೂವಳ್ಳಿಯ ಜಗತ್ತಿನಲ್ಲಿ ಮತ್ತೊಂದಿರಲಿಲ್ಲ. ಆದರೆ ಚಿನ್ನಮ್ಮಗೂ ಅವಳ ಕ್ಷೇಮಕಾತರೆಯಾಗಿದ್ದ ನಾಗಕ್ಕಗೂ ಆ ನಾದಸಂಕೇತ ಮೋಕ್ಷದ್ವಾರಕ್ಕೂ ಮಿಗಿಲಾಗಿತ್ತು!

ಇಬ್ಬರಿಗೂ ಮಿಂಚು ಮುಟ್ಟಿದಂತಾಗಿ ನಿಮಿರಿ ನಿಂತು ಆಲಿಸಿದರು. ಮೈ ಬಿಸಿಯೇರಿ ಉಸಿರಾಟ ಸೋದ್ವಿಗ್ನವಾಯಿತು. ಬಾಯಿಗಿಂತಲೂ ಹೆಚ್ಚಾಗಿ ಕಣ್ಣುಗಳೆ ಮಾತಾಡಿಕೊಂಡವು.

ಚಿನ್ನಮ್ಮ ಬೇಗಬೇಗನೆ ಸುಲಭವಾಗಿ ಕಳಚಿಬಿಡಬಹುದಾಗಿದ್ದ ಒಡವೆಗಳನ್ನು, ಅದರಲ್ಲಿಯೂ ಭಾರವಾಗಿದ್ದು ಚಲನೆಗೆ ತೊಡಕು ಮಾಡುವ ಕಟ್ಟಾಣಿ ಮತ್ತು ಜಡೆಬಿಲ್ಲೆಯ ಸರಮಾಲೆಗಳಂತಹ ಆಭರಣಗಳನ್ನು, ತೆಗೆ ತೆಗೆದು ನಾಗಕ್ಕನ ಕೈಗೆ ಕೊಟ್ಟಳು. ಅವಳು ಪಕ್ಕದಲ್ಲಿದ್ದ ಸಂದುಕಕ್ಕೆ ಅವನ್ನು ಹಾಕಿ “ಹೊತ್ತಾಯ್ತು! ಬ್ಯಾಗ!” ಎಂದು ಎಚ್ಚರಿಸಿದಳು.

ಹೊರಕ್ಕೆ ಹೊರಡೆಲೆಂದು ನಾಗಕ್ಕ ಬಾಗಿಲ ತಾಳಕ್ಕೆ ಕೈ ಹಾಕುತ್ತಿರಲು, ಚಿನ್ನಮ್ಮ ಅಳುದನಿಯಲ್ಲಿ ಬಿಕ್ಕುತ್ತಾ “ ಅಜ್ಜಿಗೆ ಹೇಳಿಹೋಗ್ತೀನಿ, ನಾಗಕ್ಕಾ!” ಎಂದಳು.

“ಏನು ನೆಂಟರ ಮನೆಗೆ ಹೊರಟಿದ್ದೀನಿ ಅಂತಾ ಮಾಡೀಯೆನು? ನಿನ್ನ ಉಪಚಾರ ಮಾಡಿ ಕಳಿಸಿಕೊಡಾಕೆ? ಅಜ್ಜಿಗೆ ಗೊತ್ತಾದ್ರೆ ನಿನ್ನಗತಿ ಮುಗೀತು ಅಂತಾ ಇಟ್ಟುಗೊ….!”

“ನಾನಿಲ್ಲ ಅಂತಾ ಗೊತ್ತಾದ ಕೂಡ್ಲೆ ಅಜ್ಜಿ ಎದೆ ಒಡೆದು ಸಾಯ್ತದೆ!… ನಾಗಕ್ಕಾ ನಾ ಹೋಗಾದಿಲ್ಲ; ನಾ ಒಲ್ಲೆ! ನಾ ಹಾಳಾದ್ರೆ ಅಷ್ಟೇ ಹೋಯ್ತು; ನೇಣು ಹಾಕ್ಕೊಳ್ತೀನಿ; ಇಲ್ದಿದ್ರೆ ಕೆರೇ ಬಾವಿ ಹಾರ್ತೀನಿ! ಏನಾದ್ರೂ ಮಾಡ್ಕೊಳ್ತೀನಿ!….ಅಜ್ಜಿ ಅತ್ತೂ ಅತ್ತೂ ಎದೆ ಒಡೆದೇ ಸಾಯ್ತದಲ್ಲಾ, ನಾ ಸತ್ತುಹೋದೆ ಅಂತಾ!”

ನಾಗಕ್ಕ ಒಂದು ಕ್ಷಣ ದಿಕ್ಕು ಕೆಟ್ಟಂತಾಗಿ ತತ್ತರಿಸಿದಳು. ಎಷ್ಟು ದಿನಗಳಿಂದ, ಎಷ್ಟು ಪ್ರಯತ್ನದಿಂದ ಮುಕುಂದಣ್ನ ಚಿನ್ನಮ್ಮನಿಗಾಗಿಯೆ, ತನಗಾಗಿ ಮಾತ್ರವೆ ಅಲ್ಲ, ಕಷ್ಟಪಟ್ಟು ಕಟ್ಟಿದ್ದ ವ್ಯೂಹದ ಕೋಟೆ ಇದ್ದಕ್ಕಿದ್ದ ಹಾಗೆ ಧಸಕ್ಕೆಂದು ಬಿದ್ದು ಹೋಗುವುದರಲ್ಲಿದೆಯಲ್ಲಾ ಎಂಬ ಸಂಕಟದ ಚಪ್ಪಡಿಯಡಿ ಸಿಕ್ಕಿ ಜೀವವೆ ಅಪ್ಪಚ್ಚಿಯಾದಂತಾದಳು!

“ಅಯ್ಯೋ, ಚಿನ್ನೂ, ಯಾಕೆ ಹೀಂಗೆ ಮಾಡ್ತೀಯಾ? ನಿನ್ನ ಕುತ್ತಿಗೇನ ನೀನೇ ಕತ್ತರ್ಸಿಕೊಳ್ಳೋದಲ್ಲದೆ ನಮ್ಮೆಲ್ಲರ ಕುತ್ತಿಗೇಗೂ ತಂದಿಡ್ತಾ ಇದ್ದೀಯಲ್ಲಾ? ಮುಕುಂದಣ್ಣ ಏನಂತಾರೇ? ಈ ಮಳೇಲಿ, ಅಲ್ಲೆಲ್ಲೂ ಕಾಡಿನಲ್ಲಿ, ನೀರು ಬರ್ತೀಯ ಅಂತಾ ಕಾಯ್ತಾ ಇದ್ದಾರಲ್ಲಾ!…. ಅಲ್ಲಿ ಕೇಳ್ದೇನು? ಹಂಡೇ ಸದ್ದು! ಪೀಂಚಲು ಮತ್ತೆ ಬಡೀತಿದಾಳೆ!…. ನಿನ್ನ ದಮ್ಮಯ್ಯ ಅಂತೀನೇ! ನಿನ್ನ ಬಾಳ್ನೆಲ್ಲಾ ಬೂದಿ ಹುಯ್ಕೋಬ್ಯಾಡೇ! ನಿನ್ನ ದಮ್ಮಯ್ಯ ಅಂತೀನೇ! ನಿನ್ನ ಅಜ್ಜಿಗೆ ಏನು ಹೇಳಬೇಕೋ ಅದ್ನೆಲ್ಲಾ ನಾನೆ ಹೇಳ್ತೀನೇ, ಪುಣ್ಯಾತಗಿತ್ತೀ!…. ಹೊತ್ತಾಯ್ತು! ಬಾ, ಕಣ್ಣೊರ್ಸಿಕೊ! ಯಾರಿಗೂ ಗೊತ್ತಾಗಬಾರದು; ಹೊರಕಡೀಗೆ ಹೋಗ್ತೀಯಾ ಅಂತಾ ಹೇಳ್ತೀನಿ, ಯಾರಾದ್ರೂ ಕೇಳಿದ್ರೆ. ಬಾ ನನ್ನ ಹಿಂದೆ!”

ಚಿನ್ನಮ್ಮಗೆ ಮಾತಾಡಲೂ ಅವಕಾಶವಾಗದ ರೀತಿಯಲ್ಲಿ ಅವಳ ಕೈ ಹಿಡಿದೆಳೆದುಕೊಂಡೆ ಬಾಗಿಲು ದಾಟಿದಳು ನಾಗಕ್ಕ. ಜನಸಂದಣಿಯ ನಡುವೆ ನಡೆದು, ಹಂಡೆಯ ಕಡೆಯಿಂದ ಓಡಿ ಬಳಿಗೆ ಬಂದ, ಗಟ್ಟದ ಮೇಲಣ ಉಡುಗೆ ಉಟ್ಟಿದ್ದ ಪೀಂಚಲುವಿಗೆ ಏನನ್ನೊ ಹೇಳಿ, ನೀರಿನ ತಂಬಿಗೆಯನ್ನು ಅವಳ ಕೈಗೆ ಕೊಟ್ಟು, ಹಿತ್ತಲು ಕಡೆಯ ಹಿಂಬಾಗಿಲು ತೆಗೆದು, ಮಾಡ ಸಂದಿಯ ಕಡೆಗೆ ಕೈದೋರಿದಂತೆ ಮಾಡಿದಳು. ಪೀಂಚಲು ತಾನೊಂದು ಕಂಬಳಿಕೊಪ್ಪೆ ಹಾಕಿಕೊಂಡು, ಮತ್ತೊಂದನ್ನು ಮದುಮಗಳಿಗೆ ಹಾಕಿ, ಚಿನ್ನಮ್ಮ ಸಹಿತ ಕಗ್ಗತ್ತಲೆಯಲ್ಲಿ ಕರಗಿಹೋದಳು.

ಮಳೆ ಬೀಳುತ್ತಲೆ ಇತ್ತು. ಆದರೆ ಅದರ ಜೋರು ತುಸು ಇಳಿದಂತೆ ತೋರುತ್ತಿತ್ತು. ಪೀಂಚಲು ಮಾರ್ಗದರ್ಶಿಯಾಗಿ ಮುಂಬರಿಯುತ್ತಿದ್ದರೂ ಅವಳಿಗಿಂತಲೂ ಚಿನ್ನಮ್ಮಗೇ ಆ ದನಓಣಿಯ ಗುಡ್ಡದ ದಾರಿ ಹೆಚ್ಚು ಪರಿಚಿತವಾದುದಾಗಿತ್ತು. ಆದರೂ ಪೀಂಚಲುಗಿಂತಲೂ ಚಿನ್ನಮ್ಮಗೇ ಹಾದಿ ನಡೆಯುವುದು ಕಷ್ಟತರವಾಗಿತ್ತು. ಎಷ್ಟಂದರೂ ಪೀಚಲು ಕೆಲಸದ ಆಳು; ಅವಳು ದಿನದಿನವೂ ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿ ಗದ್ದೆಯಲ್ಲಿ ತೋಟದಲ್ಲಿ ಕಾಡಿನಲ್ಲಿ ನಡೆದೂ ದುಡಿದೂ ಅಭ್ಯಾಸವಾದವಳು. ಚಿನ್ನಮ್ಮ ಚಿಕ್ಕವಳಾಗಿದ್ದಾಗ ಆ ಹಾಡ್ಯ, ಕಾಡು, ಗದ್ದೆಗಳಲ್ಲಿ ಅಡ್ದಾಡಿದ್ದರೂ ದೊಡ್ಡವಳಾದ ಮೇಲೆ ಇತ್ತೀಚಿನ ವರ್ಷಗಳಲ್ಲಿ ಅವಳು ಶ್ರೀಮಂತರ ಗೃಹಿಣಿಯರಂತೆ ಹೆಚ್ಚು ಕಾಲವನ್ನು ಮನೆಯೊಳಗಣ ಮೃದುಲತಾ ವಲಯದಲ್ಲಿಯೆ ಕಳೆಯುತ್ತಿದ್ದಳು. ಹಳು ಕೀಳುವುದಕ್ಕೂ ಸಸಿ ನೆಡುವುದಕ್ಕೊ ಇತರ ಶ್ರಮಜೀವಿ ಸ್ತ್ರೀಯರೊಡನೆ ಸ್ವಸಂತೋಷದಿಂದ ವಿಲಾಸಾರ್ಥವಾಗಿಯೆ ಗೊರಬು ಸೂಡಿಅಕೊಂಡು ಅಗೊಮ್ಮೆ ಈಗೊಮ್ಮೆ ಗದ್ದೆ ತೋಟಗಳಿಗೆ ಹೋಗುತ್ತಿದ್ದುದುಂಟು. ಆದರೆ ಅದೆಲ್ಲ ಕಲಾರೂಪದ್ದಾಗಿರುತ್ತಿತ್ತೆ ಹೊರತು ಅವಸ್ಯ ದುಡಿಮೆಯ ಶ್ರಮರೂಪದ್ದಾಗಿರುತ್ತಿರಲಿಲ್ಲ.

“ಪೀಂಚಲೂ, ಅಷ್ಟು ಜೋರಾಗಿ ಹೋಗಬೇಡೇ. ಸ್ವಲ್ಪ ನಿಲ್ಲೇ.” ಚಿನ್ನಮ್ಮ ಮುಳ್ಳಿನ ಪೊದೆಗೆ ಸಿಕ್ಕಿದ್ದ ಸೀರೆಯ ತುದಿಯನ್ನು ಬಿಡಿಸಿಕೊಂಡು, ಪಿಚಕ್ ಪಿಚಕ್ಕೆಂದು ಸುತ್ತುಗಾಲುಂಗುರ ಹಾಕಿದ್ದ ಕಾಲುಬೆರಳುಗಳ ಸಂದಿಯಿಂದ ಮೇಗಾಲನ್ನು ಆವರಿಸಿ ಸೀರೆಗೂ ಹಾರುತ್ತಿದ್ದ ಕೆಸರಿನಲ್ಲಿ, ಎಚ್ಚರಿಕೆಯಿಂದ, ಆದರೂ ಆದಷ್ಟು ಬೇಗಬೇಗನೇ, ಕಾಲು ಹಾಕಿದಳು, ನಡುನಡುವೆ ಜಾರುತ್ತಾ, ಮುಗ್ಗರಿಸುತ್ತಾ.

ಮಳೆಗಾಲ ಕೂತಿತ್ತಾದ್ದರಿಂದ ಅದರ ಪ್ರಾರಂಭಸ್ಥಿತಿಯ ಗುಡುಗು-ಸಿಡಿಲುಗಳ ಆರ್ಭಟ ಇರಲಿಲ್ಲ. ಗಾಳಿಯೂ ತನ್ನ ಉಗ್ರ ಚಂಚಲತೆಯನ್ನು ತ್ಯಜಿಸಿ ಒಂದು ಸ್ಥಿರ ವೇಗದಿಂದಲೇ ಬೀಸುತ್ತಿತ್ತು. ಮೇಘ ಸಂದಿಗಳಲ್ಲಿ ಮಿಂಚು ಮತ್ತೆ ಮತ್ತೆ ಥಳಿಸುತ್ತಿದ್ದರೂ ಅದು ಸದ್ದಿನಿಂದ ಹೆದರಿಸುತ್ತಿರಲಿಲ್ಲ. ಬಹುಮಟ್ಟಿಗೆ ಮೂಕವಾಗಿತ್ತು. ನಿಮಿಷ ನಿಮಿಷಕ್ಕೂ ಒಂದಲ್ಲ ಒಂದು ದಿಕ್ಕಿನಿಂದ ಮಿಂಚು ಇಣುಕಾಡುತ್ತಿದ್ದಾದ್ದರಿಂದ ಪೀಂಚಲು ಚಿನ್ನಮ್ಮರಿಗೆ ಆಕಾಶದಿಂದಲೇ ಹಾದಿದೀಪ ಒದಗಿದಂತಿತ್ತು. ಮಿಂಚಿದಾಗಲೆಲ್ಲಾ ಕಾಡೂ ಪೊದೆಗಳೂ ಬಾಣು ಮೋಡಗಳೂ ಮಳೆಯೂ ದನೋಣಿಯ ಕಲ್ಲು ಕೊರಕಲಿನ ದಾರಿಯೂ ಹಗಲಿಣುಕಿದಂತೆ ಸುಸ್ಪಷ್ಟವಾಗಿ ತೋರಿ ಮತ್ತೇ ಕವಿಯುತ್ತಿದ್ದ ಕಾರ್ಗತ್ತಲೆಯಲ್ಲಿ ಮಷೀಯಮಯವಾಗಿ ಶೂನ್ಯವಾಘುತ್ತಿದ್ದುವು; ಆಗಲೇ ಮಿಣುಕು ಹುಳುಗಳು ಕೋಟಿ ಕೋಟಿ ಸಂಖ್ಯೆಯಲ್ಲಿ ಪೊದೆ ಮರ, ಬಳ್ಳಿ ಗಿಡಗಳನ್ನೆಲ್ಲ ಆಕ್ರಮಿಸಿದಂತೆ ಆವರಿಸಿ ಮಿರುಗುತ್ತಿದ್ದವು.!

ಚೊಚ್ಚಲ ಬಸಿರಿಯೂ ಮತ್ತು ಒಲ್ಲದ ಮದುವೆಯಿಂದ ಪಾರಾದ ಮದುಮಗಳೂ, ಕಂಬಳಿಕೊಪ್ಪೆಗಳನ್ನು ಬಲವಾಗಿ ಸುತ್ತಿಕೊಂಡು ಮಳೆಗಾಳಿ ಚಳಿಗಳಿಂದ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಾ ಸ್ವಲ್ಪ ದೂರ ಕಾಡುದಾರಿಯಲ್ಲಿ  ಸಾಗಿದ್ದರು.  ಮನೆಯಿಂದ ಹೊರಬದ್ದ ಉತ್ಸಾಹದ ಪ್ರಥಮ ಮನಃಸ್ಥಿತಿ ಬರುಬರುತ್ತಾ ನೈಸರ್ಗಿಕ ಅರಣ್ಯ ಕಠೋರತೆಗೆ ಸಿಕ್ಕಿ ಕುಗ್ಗಿದಂತಾಗಲು ಚಿನ್ನಮ್ಮ ಕೇಳಿದಳೂ: ಇನ್ನೆಷ್ಟು ದೂರ ಅದೆಯೆ, ಅವರು ಸಿಕ್ಕಕೆ?”

“ಹಾಡ್ಯದ ಮಾರಮ್ಮನ ಗುಡಿ ಹತ್ರ ಇರ್ತಿನಿ ಅಂತಾ ಹೇಳಿದ್ರು.”

ಚಿನ್ನಮ್ಮಗೆ  ಗೊತ್ತಿದ್ದಂತೆ ಸಾಮಾನ್ಯವಾಗಿ  ಪೀಂಚಲು ತನ್ನ ಗಂಡನನ್ನು ಕುರಿತು ಮಾತನಾಡುವಾಗಲೆಲ್ಲ ಏಕವಚನವನ್ನೇ ಪ್ರಯೋಗಿಸುತ್ತಿದ್ದದ್ದು ಮುಕುಂದಬಾವನನ್ನೇ ಕುರಿತು ಆಡುತ್ತಿದ್ದಾಳೆ ಎಂದು ಭಾವಿಸಿ ಕೇಳಿದಳು: “ಯಾರೆ ಹೇಳಿದ್ದು”

“ನನ್ನ ಗಂಡ ಕಣ್ರೋ, ಐತ.” ನಿರ್ಭಾವ ಧ್ವನಿಯಿಂದ ಉತ್ತರಿಸುತ್ತಾ ಬೇಗಬೇಗನೆ ಸಾಗಿದ್ದಳು, ಪೀಂಚಲು.

ಇದ್ದಕ್ಕಿದ್ದ ಹಾಗೆ ಒಂದು ಮಿಂಚು ಫಳ್ಳೆಂದಿತು. ಒಂದು ಕ್ಷಣಕಾಲ ಹಗಲಾದಂತಾಗಿ ಗಿಡ, ಮರ, ದಂಡೆಯ ಬಿದಿರ ಹಿಂಡಿಲು, ಕೆರೆಯ ಏರಿ, ಕೆರೆ ತುಂಬ ತುಂಬಿದ ನೀರಿನ ಹರವು, ಪ್ರತಿಬಿಂಬದ ಆಕಾಶ ಎಲ್ಲ ತಟಕ್ಕನೆ ಕಾಣಿಸಿ, ಮತ್ತೆ ಕಣ್ಣಿಗೆ ಕಪ್ಪು ಮೆತ್ತಿದಂತಾಯ್ತು. ಮಳೆ ಗಾಳಿಯ ಸದ್ದಿನ ಕೂಡೆ ವಟಗುಟ್ಟುವ ಕಪ್ಪೆ ಮತ್ತು ಕ್ರಿಮಿ ಕೀಟಾದಿಗಳ ಕರ್ಕಶ ಧ್ವನಿ ಕಿವಿಗೆ ಘೋರವಾಗಿತ್ತು: ದಿಬ್ಬಣದ ಅಬ್ಬರವೂ ದೂರ ಕೇಳಿಸಿತ್ತು.

ಎದೆ ಜಗ್ ಎಂದಿತು ಪೀಂಚಲುಗೆ. ಹಿಂದೆ  ಬರುತ್ತಿದ್ದ ಚಿನ್ನಮ್ಮಗೆ ಡಿಕ್ಕಿ ಹೊಡೆಯುವಂತೆ ಹಿಂನೆಗೆದು ಸರಿದು “ಅಯ್ಯಮ್ಮಾ!” ಎಂದು ನಿಂತಳು. “ಕೆರೆಗೇ ಬೀಳ್ತಿದ್ದೆವಲ್ಲಾ, ಚಿನ್ನಕ್ಕಾ, ಮಿಂಚದೆ ಇದ್ದಿದ್ರೆ!….”

“ಮಾರಮ್ಮನ ಗುಡಿ ಹತ್ರ ಅಂದಿ, ಇಲ್ಲಿಗ್ಯಾಕೆ ಬಂದ್ಯೇ?”

“ನಂಗೆ ದಾರಿ ತಪ್ತು ಕಣ್ರೋ, ದಾರೀನೇ ಗೊತ್ತಾಗದಿಲ್ಲ.” ಐತನ ಹೆಂಡತಿಯ ದನಿಯಲ್ಲಿ ಏನೋ ಅಧೀರತೆಯ ಸುಳಿವಿತ್ತು.

“ಹಿಂದಕ್ಕೆ ಹೋಗಾನೆ, ಮತ್ತೆ….”

“ಎಲ್ಲಿಗ್ರೋ? ಮನಿಗೇನ್ರೋ?”

“ನೀ ಹೋಗು ಮನೀಗೆ, ಬೇಕಾದ್ರೆ….” ಚಿನ್ನಮ್ಮನ ದನಿಯಲ್ಲಿ ಸಿಡುಕಿತ್ತು.

“ನೀವು?”

“ನಾನಿಲ್ಲೇ ಕೆರೆಗೆ ಹಾರ್ತಿನಿ!….”

“ನಿಮ್ಮ ದಮ್ಮಯ್ಯ, ಚಿನ್ನಕ್ಕಾ, ಹಂಗೆಲ್ಲಾ ಹೇಳಬ್ಯಾಡಿ?”

“ಮತ್ತೇ?’…. ಮನೀಗೆ ಹೋಗಾನ ಅಂದ್ರೆಲ್ಲಾ ಅದ್ಕೇ ಕೇಳ್ದೆ…”

“ಹಿಂದಕ್ಕೆ ಹೋಗಿ, ಆ ದೊಡ್ಡ ಬಸಿರ ಮರದ ಹತ್ರಕ್ಕ ಹೋದ್ರೆ, ಅಲ್ಲಿಂದ ನಂಗೊತ್ತು ಮಾರಮ್ಮನ ಗುಡೀಗೆ ಹಾದಿ….”