ಮೊಡಂಕಿಲನ ಹೆಂಡತಿ, ಬಾಗಿ, ಪಿಜಿಣನ ಬಿಡಾರಕ್ಕೆ ಬಂದು, ಹೂವಳ್ಳಿ ಮದುವೆ ಮನೆಗೆ ಹೋಗಿ ಧಾರೆ ನೋಡಿಕೊಂಡು ಬರೋಣ ಬಾ ಎಂದು ಅಕ್ಕಣಿಯನ್ನು ಆಹ್ವಾನಿಸಿದಾಗ, ಅವಳು ಹಾಸಗೆಯ ಮೇಲೆ ಹೊರಳುತ್ತಾ ನರಳುತ್ತಿದ್ದ ತನ್ನ ಗಂಡನ ಕಡೆಗೆ ನೋಡಿ, ತಾನು ತನ್ನ ಗಂಡನನ್ನು ಆ ದುಃಸ್ಥಿತಿಯಲ್ಲಿ ಬಿಟ್ಟು ಬರಲು ಸಾಧ್ಯವಿಲ್ಲವೆಂದು ತಿಳಿಸಿದಳು. ಆದರೆ ಪಿಜಿಣನೇ ಪ್ರೋತ್ಸಾಹಿಸಿದನು: ’ಹೋಗಿ ಬಾ; ಅವಳು ಅಷ್ಟಲ್ಲದೆ ಕರೆಯುತ್ತಾಳೆ. ನಿನಗೂ ಬೇಜಾರು ಪರಿಹಾರವಾದ ಹಾಂಗೆ ಆಗುತ್ತದೆ. ನನ್ನ ರೋತೆ ಇದ್ದೇ ಇರುತ್ತದೆ! ಅದು ಜೀವಹೋದ ಮೇಲೆಯೇ ಮುಗಿಯುವುದು! ಧಾರೆಯಾದರೂ ಎಷ್ಟು ಹೊತ್ತು ಆಗುತ್ತದೆ? ಮುಗಿದಕೂಡಲೆ ಬಂದುಬಿಡಬಹುದಲ್ಲಾ?’

ಚೀಂಕ್ರನ ಮಕ್ಕಳನ್ನು ಬಾಗಿಯ ಬಿಡಾರದಲ್ಲಿ ಮಲಗಿಸಿ, ಚೀಂಕ್ರ ತಂದುಕೊಟ್ಟಿದ್ದ ಹೊಸ ಸೀರೆಯನ್ನಟ್ಟು, ಒಂದೆರಡು ಆಭರಣಗಳನ್ನೂ ತೊಟ್ಟು, ಅಕ್ಕಣಿ ’ಹೋಗಿ ಬರುತ್ತೇನೆ’ ಹೇಳಲು ಗಂಡನೆಡೆಗೆ ಹೋದಳು. ಅವಳ ಹಿಗ್ಗನ್ನೂ, ಹೊಸ ಸೀರೆಯುಟ್ಟ ಸಂಭ್ರಮವನ್ನೂ, ಕಳಕಳಿಸುತ್ತಿದ್ದ ಮೋರೆಯನ್ನು ತುಸು ಎವೆಯಿಕ್ಕದೆ ನೋಡಿ, ಸುಯ್ದು, ’ಹೋಗಿ ಬಾ’ ಎಂದನು ಪಿಜಿಣ, ನರಳುವ ದನಿಯಲ್ಲಿ. ಅವನ ಹೃದಯದಲ್ಲಿ ಶಮನವಾಗಲಿ ಪ್ರತೀಕಾರವಾಗಲಿ ಸಾಧ್ಯವಿಲ್ಲದ ಮತ್ಸರಾಗ್ನಿ ಆ ರುಗ್ಣಾವಸ್ಥೆಯಲ್ಲಿಯೂ ಹೊಗೆಯಾಡತೊಡಗಿತ್ತು.

ಅಕ್ಕಣಿ ಹೋದಮೇಲೆ ಪಿಜಿಣನ ಮನಸ್ಸು ತನ್ನ ಭಯಂಕರ ನಿರ್ಧಾರದತ್ತ ಹಲ್ಲುಕಚ್ಚಿಕೊಂಡು ಬದ್ಧಭ್ರುಕುಟಿಯಾಗಿ ಸಾಗಲಾರಂಭಿಸಿತು!

ತನ್ನ ಶುಶ್ರೂಷೆಯ ವಿಚಾರದಲ್ಲಿ ಅತ್ಯಂತ ಆಸಕ್ತೆಯಾಗಿದ್ದರೂ ಚೀಂಕ್ರನೊಡನೆ ಸಂಬಂಧ ಬೆಳೆಸಿದ್ದಾಳೆ ಎಂಬ ಗುಟ್ಟು ಪಿಜಿಣನ ಪ್ರಜ್ಞೆಗೆ ಹೊಕ್ಕಮೇಲೆ ತನ್ನ ಹೆಂಡತಿಯ ಪರವಾದ ಅವನ ಮನಸ್ಸು ಮೆಲ್ಲಮೆಲ್ಲನೆ ವಿರಕ್ತವಾಗತೊಡಗಿತ್ತು. ಅವಳಿಂದ ತಾನು ಇನ್ನು ಸುಖಪಡೆಯಲು ಸಮರ್ಥನಾಗಬಲ್ಲೆನೆಂಬ ಆಸೆಯನ್ನು ಸಂಪೂರ್ಣವಾಗಿ ಬಿಟ್ಟ ಅವನಿಗೆ, ಅವಳಿಗೂ ತನ್ನಿಂದ ಸುಖ ಇಲ್ಲ ಎಂಬುದು ಮನದಟ್ಟಾಯಿತು. ತಾನು ತೊಲಗಿದರೆ, ಅವಳ ಆಶೆಯೂ ಕೈಗೂಡಿ, ಅವಳು ಚೀಂಕ್ರನೊಡನೆ ನೆಮ್ಮದಿಯಾಗಿ ಇರಬಹುದು ಎಂಬ ಅವನ ಆಲೋಚನೆಗೆ ದಿನದಿನವೂ ಅಧಿಕಗೊಳ್ಳುತ್ತಿದ್ದ ಅವನ ಹೊಟ್ಟೆಯ ಬೇನೆಯೂ ಸಮರ್ಥನೆ ಇತ್ತಿತ್ತು! ಎಷ್ಟೋ ಸಾರಿ ಆ ಯಮಯಾತನೆ ಸಹಿಸಲಾರದೆ ’ಏನಾದರೂ ಅಫೀಮುಗಿಫೀಮು ತಂದುಕೊಟ್ಟು, ತನ್ನ ಪರಾಣ ಹೋಗುವಂತೆ ಮಾಡಿ, ನನ್ನನ್ನು ಬದುಕಿಸುತ್ತೀಯಾ?’ ಎಂದು ಅಕ್ಕಣಿಗೆ ಕೈಮುಗಿದದ್ದೂ ಉಂಟು!

ಚೀಂಕ್ರ ಕೊನೆಮಟ್ಟೆಯ ರಾಶಿಯಲ್ಲಿ ಮುಚ್ಚಿಟ್ಟಿದ್ದ ಶೀಸೆಗಳ ಕಡೆ ಪಿಜಿಣ ಸತೃಷ್ಣ ದೃಷ್ಟಿ ಬೀರಿದ್ದನು. ಆದರೆ ಅಕ್ಕಣಿ ಅದಕ್ಕೆ ಅವಕಾಶಕೊಡದಂತೆ ಎಚ್ಚರಿಕೆ ವಹಿಸಿದ್ದಳು. ಈಗ ಯಾರ ಅಂಕೆಯೂ ಇಲ್ಲದ ಅವನು ಹಾಸಿಗೆಯಿಂದೆದ್ದು ಆ ಶೀಸೆಗಳಿಂದ ಸಾರಾಯಿಯನ್ನು ಕರಟಕ್ಕೆ ಬೊಗ್ಗಿಸಿ ಬೊಗ್ಗಿಸಿ ಕುಡಿದನು. ಕುಡಿದಂತೆಲ್ಲ ಹುಮ್ಮಸ್ಸು ಏರಿತು. ಚಟ್ಟಿಯಲ್ಲಿ ಬಚ್ಚಿಟ್ಟಿದ್ದ ಮೀನುಪಲ್ಯವನ್ನು ಚೆನ್ನಾಗಿ ನಂಚಿಕೊಂಡು ಮತ್ತಷ್ಟು ಕುಡಿದನು. ತುಂಬ ಶಕ್ತಿ ಬಂದಂತಾಗಿ, ಒಂದು ತೆರನಾದ ಸಂತೋಷೋನ್ಮಾದ ಆವರಿಸಿತು. ಹೋಗಿ ಹಾಸಗೆಯ ಮೇಲೆ ಉಸ್ಸೆಂದು ಉರುಳಿಕೊಂಡನು.

ಸ್ವಲ್ಪ ಹೊತ್ತಿನಲ್ಲಿಯೆ ಭಯಂಕರ ಪ್ರತಿಕ್ರಿಯೆ ಪ್ರಾರಂಭವಾಯಿತು. ಹೊಟ್ಟೆಯ ಬೇನೆ ಸಾವಿರಾರು ಚೇಳು ಕಚ್ಚಿದಂತೆ ಕಠೋರವಾಯಿತು. ರಕ್ತ ರಕ್ತವೆ ಭೇದಿಯಾಯಿತು. ಅಯ್ಯೋ ಎಂದು ಕೂಗಿಕೊಂಡು ಮೇಲೆದ್ದು ನಿಲ್ಲಲಾರದೆ ಮಡಕೆಗಳ ಮೇಲೆ ಬಿದ್ದನು. ಉರಿಯನ್ನು ತಾಳಲಾರದೆ ಪಾತ್ರೆಯಲ್ಲಿದ್ದ ತಣ್ಣೀರನ್ನು ಗೊಟಗೊಟನೆ ಕುಡಿದನು. ಏನು ಮಾಡಿದರೂ ಆ ತಾಪ, ಆ ಯಾತನೆ, ಹೆಚ್ಚುತ್ತಾ ಹೋಯಿತು. ಕೂಗಿದರೂ ಗಂಟಲಿನಿಂದ ಸ್ವರ ಹೊರಡಲಿಲ್ಲ. ’ಅಕ್ಕಣೀ! ಅಕ್ಕಣೀ! ಅಯ್ಯೋ! ಅಯ್ಯೋ!’ ಎಂದು ಒರಲಿ ಕರೆಯುತ್ತಿದ್ದೇನೆ ಎಂದು ತಿಳಿದುಕೊಂಡನಷ್ಟೇ! ಕೊರಳಿಂದ ದನಿ ಹೊರಟರೆ ತಾನೆ? ಕಡೆಗೆ ಬೇಗೆ ಬೇನೆ ತಡೆಯಲಾರದೆ ಒಂದು ನೇಣನ್ನು ತುಡುಕಿ, ಬೋಗುಣಿಯೊಂದನ್ನು ಬೋರಲು ಹಾಕಿ, ಅದರ ಮೇಲೆ ಹತ್ತಿ, ಸೂರಿನ ಬಿದಿರಿಗೆ ಉರುಳು ಕಟ್ಟಿದನು….ಅವನು ಸಾಯಬೇಕು ಎಂದೇನೊ ನಿಶ್ಚಯಿಸಿದ್ದನು. ಆದರೆ ಆ ರೀತಿಯದ್ದಾಗಿರಲಿಲ್ಲ. ತಾನು ಆತ್ಮಹತ್ಯೆಮಾಡಿಕೊಂಡೆ ಎಂಬುದು ಯಾರಿಗೂ ಗೊತ್ತಾಗದಂತೆ ಅದನ್ನು ಸಾಧಿಸಲು ಯೋಚಿಸಿದ್ದನು: ಸ್ವಲ್ಪ ಮೈಗೆ ಬಲ ಬಂದರೆ, ಗೌಡರ ಅಡಕೆತೋಟಕ್ಕೆ ಕೊಟ್ಟೆಕಟ್ಟಲು ಹೋಗಿ, ಕೊಟ್ಟೆಮಣೆ ಕೊಟ್ಟೆಹೊರೆ ಸಹಿತವಾಗಿ ಎತ್ತರದ ಅಡಕೆ ಮರದ ನೆತ್ತಿಗೇರಿ, ಅಲ್ಲಿಂದ ಫಕ್ಕನೆ ಕೊಟ್ಟೆ ಮಣೆಯಿಂದ ಜಾರಿ ಬಿದ್ದಂತೆ, ಆಕಸ್ಮಿಕದಲ್ಲಿ ಮರಣ ಹೊಂದಿದಂತೆ, ತೋರಿಸಿಕೊಳ್ಳಬೇಕು ಎಂದು ಸಂಕಲ್ಪಿಸಿದ್ದನು. ಆದರೆ….

ಆ ರಾತ್ರಿ ಬಾಗಿ ಮೊಡಂಕಿಲರೊಡನೆ ಹೂವಳ್ಳಿ ಮದುವೆಮನೆಗೆ ಹೋದ ಅಕ್ಕಣಿ ಆ ಜನ, ಆ ಗಲಭೆ, ಆ ವಾದ್ಯ, ಆ ಸಂದಣಿಯಲ್ಲಿ, ಆ ಬಣ್ಣ, ಆ ಕಂಪು, ಆ ಸೀರೆಗಳು, ಆ ಆಭರಣಗಳು ಇವುಗಳಲ್ಲಿ ಕಣ್ಮುಳುಗಿ ಮನಮುಳುಗಿ ಹೋದಳು. ತಾನೇ ತಂದು ಕೊಟ್ಟಿದ್ದ ಹೊಸ ಸೀರೆ ಉಟ್ಟು ಮನೋಹರಿಯಾಗಿದ್ದ ಅವಳನ್ನು ಚೀಂಕ್ರ ಸೇರೆಗಾರ ಮತ್ತೆಮತ್ತೆ ಏನಾದರೂ ನೆವ ಮಾಡಿಕೊಂಡು ಬಂದು ಮಾತಾಡಿಸುತ್ತಿದ್ದುದು ಅಕ್ಕಣಿಗೇನು ಅಹಿತವಾಗಿರಲಿಲ್ಲ! ಎಲೆ ಅಡಕೆ ಹಾಕಿದ್ದ ರಂಗುತುಟಿಗಳಿಂದ ನಕ್ಕು ಸೇರೆಗಾರನಿಗೆ ಮನರಂಜಕವಾಗಿಯೂ ವರ್ತಿಸಿದ್ದಳು!

“ಈವೊತ್ತೇನು ಊಟ ನಮಗೆ ಬೆಳಗಿನ ಜಾವ ಸಿಕ್ಕಿದ್ರೆ ನಮ್ಮ ಪುಣ್ಯ! ಈ ಬಾಳೆ ಹಣ್ಣಾದ್ರೂ ತಿಂದರು.” ಎಂದು ಅಕ್ರಮವಾಗಿ ಮುರಿದು ತಂದಿದ್ದ ಮದುವೆ ಚಪ್ಪರದ ಬಾಳೆಹಣ್ಣನ್ನು ಕೂಟ್ಟು ಹೋದವನು, ಮತ್ತೆ ಸ್ವಲ್ಪ ಹೊತ್ತಿನಲ್ಲಿಯೆ ತಿರುಗಿಬಂದು ಹೇಳಿದ್ದನು: “ಇವತ್ತೇನು ಗುಂಡಿನ ಮನೆ ದಿಬ್ಬಣ್ ಸಿಂಬಾವಿಯಿಂದ ಬರೋದಿಲ್ಲ ಅಂಬ್ರು! ಭಾರಿ ಮಳೆ ಅಂತೆ ಆ ಕಡೆ!…

ಮತ್ತೊಮ್ಮೆ ರಾತ್ರಿ ಮುಂದುವರಿದ ಮೇಲೆ ಬಂದವನು ಹೇಳಿದ್ದನು,ಬಾಗಿ ಅಕ್ಕಣಿ ಇನ್ನೂ ಒಂದಿಬ್ಬರೂ ಗಟ್ಟಿದ ತಗ್ಗಿನ ಹೆಣ್ಣಾಳುಗಳನ್ನು ಒಟ್ಟಿಗೆ ಉದ್ದೇಶಿಸಿ: “ಹೋಯ್, ಇವೊತ್ತು ಲಗ್ನ ನಡೆಯುವ ತರಾ ಕಾಣುವುದಿಲ್ಲ, ಹೆಣ್ಣುಗಳಿರಾ. ನಾಯಕರಿಗೆ ಸಕತ್ತು ಖಾಯಿಲೆಯಾಗಿ, ಬಾಯಿಗೆ ನೀರುಬಿಡುವ ಹಾಂಗೆ ಆಗಿದೆಯಂತೆ….”

ಇನ್ನೂ ಸ್ವಲ್ಪಹೊತ್ತು ಬಿಟ್ಟುಕೊಂಡು ಅವಸರ ಅವಸರವಾಗಿ ಓಡುತ್ತಾ ಬಂದವನು “ಏಳಿನಿ, ಏಳಿನಿ ಬೇಗ! ದಿಬ್ಬಣ ಇನ್ನೂ ಬರುವುದು ಬಾಳ ಹೊತ್ತಾಗ್ತದಂತೆ, ಧಾರೆಗೆ ಮುಂಚೇನೆ ಊಟ ಮುಗಿಸಲಕ್ಕು ಅಂಬ್ರು.” ಎಂದು ಅವರನ್ನೆಲ್ಲ ಕರೆದುಕೊಂಡು ಹೋಗಿ ಹೊರಗಿನ ಕೀಳುಜಾತಿಯ ಜನರು ಕೂತಿದ್ದ ಪಂಕ್ತಿಯಲ್ಲಿ ಹೆಂಗಸರ ನಡುವೆ ಕೂರಿಸಿದನು.

ಅಷ್ಟರಲ್ಲಿ ಯಾರೋ ಕೂಗಿದರು “ ಹಸಲೋರು ಅಲ್ಲಿ ಕೂರಬೇಕು; ಇಲ್ಲಲ್ಲಾ! ಏಳಿ ಹೆಂಗಸ್ರೆಲ್ಲಾ!…”

“ಹಸಲೋರೇನು ಬಿಲ್ಲೋರಿಗಿಂತ ಕೀಳಲ್ಲ ಜಾತೀಲಿ. ನೀನೆ ಬೇಕಾದರೆ ಎದ್ದು ಹೋಗು! “ ಚೀಂಕ್ರ ಪ್ರತಿಭಟಿಸಿದನು.

“ಹಾದರದ ಸೂಳೆಮಗನಿಗೆ ಏನು ದೌಲತ್ತು?” ಕೂಗಿತು ಎದುರುತ್ತರ!

“ಯಾವನೋ ಸೂಳೇಮಗ? ನಿನ್ನ ಹೆಂಡ್ತಿನಾ….ಯ!”

“ಹೆಡ್ತಿ ತಿಂದುಕೊಂಡ ಲೌಡೀಮಗನೆ, ಕಂಡೋರ ಹೆಂಡಿರನ್ನೆಲ್ಲಾ ಕೆಡಿಸಿ, ಬಾಯಿಗೆ ಬಂದಹಾಂಗೆ ಮಾತಾಡ್ತಿಯಾ? ದವಡೇಲಿ ಹಲ್ಲೊಂದು ಇಲ್ಲದ್ಹಾಂಗೆ ಮಾಡೇನು? ಹುಸಾರ್, ಷಂಡಮುಂಡೇಗಂಡ!”

ಗಲಾಟೆ ದೊಂಬಿಗೆ ತಿರುಗುವ ಮುನ್ನ ನಾಲ್ಕಾರು ಜನ ಸೇರಿ, ವಿವೇಕ ಹೇಳಿ, ಸಮಜಾಯಿಸಿ ಮಾಡಿದರು.

ಅಕ್ಕಣಿ ತುಂಡು ಕಡುವು ಪರಮಾನ್ನ ಎಲ್ಲವನ್ನೂ ಸವಿದು ಚಪ್ಪರಿಸಿದಳು, ಇತರ ಹೆಂಗಸರೊಡನೆ ಅದೂ ಇದೂ ಹರಟೆ ಹೊಡೆಯುತ್ತಾ.

ಊಟ ಪೂರೈಸಿದ ಮೇಲೆ ಮತ್ತೆ ಅವರೆಲ್ಲರೂ ಕೆಳಗರಡಿಯ ಕತ್ತಲು ಕವಿದ ಮೂಲೆಯಲ್ಲಿ ಸೇರಿ, ಗುಜುಗುಜು ಮಾತಾಡುತ್ತಾ. ಎಲೆ ಅಡಿಕೆ ಹಾಕಿಕೊಳ್ಳುತ್ತಾ, ಅಂದಿನ ನಾಟಕದ ಮುಖ್ಯದೃಶ್ಯಾವಲೋಕನಕ್ಕಾಗಿ ಕಾಯುತ್ತಾ ಕುಳಿತರು, ಧಾರೆಯ ಮಂಟಪದ ದಿಕ್ಕಿಗೆ ಆಗಾಗ ಕಣ್ಣು ಹಾಯಿಸುತ್ತಾ.

ರಾತ್ರಿ ಬಹಳ ಹೊತ್ತು ಮುಂಬರಿದ ಮೇಲೆ, ದಿಬ್ಬಣ ಅಂತೂ ಇಂತೂ ಹಳ್ಳದ ದಂಡೆಯವರೆಗೆ ಬಂದು ನೀರು ಇಳಿಯುವುದನ್ನೆ ಕಾಯುತ್ತಿದೆ ಎಂಬ ಸುದ್ದಿ ಹಬ್ಬಿತು. ಬಾಗಿ ಅಕ್ಕಣಿಯರ ಗುಂಪಿನಲ್ಲಿ ಸಂತೋಷದ ತರಂಗವಾಡಿತು, ಧಾರೆ ‘ಕಾಂಬ’ ಪುಣ್ಯ ಲಭಿಸಿತಲ್ಲಾ ಎಂದು.

ಆದರೆ ಸ್ವಲ್ಪ ಹೊತ್ತಾದ ಮೇಲೆ, ನೆರೆದಿದ್ದ ಜನಗಳಲ್ಲಿ ಒಂದು ನಂಬಲಾರದ ದುರ್ವಾರ್ತೆ ಗುಜುಗುಜು ಹರಡತೊಡಗಿತು. ಮೊದಮೊದಲು ಒಬ್ಬರ ಕಿವಿಯಲೊಬ್ಬರು ಪಿಸುಮಾತನ್ನಾಗಿ ಮಾತ್ರ ಹೇಳುತ್ತಿದ್ದುದು ಸ್ವಲ್ಪ ಹೊತ್ತಿನಲ್ಲಿ ಗಟ್ಟಿಯಾಗಿಯೆ ಆಡುತ್ತಿದ್ದ ಬಹಿರಂಗ ಚರ್ಚಾವಿಷಯವಾಗಿ ಪರಿಣಮಿಸಿತ್ತು.

ಬಾಗಿ ಅಕ್ಕಣಿಯರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಿದವರಲ್ಲಿ ಮೊತ್ತಮೊದಲುಗನೆಂದರೆ ಮೊಡಂಕಿಲ. ಏನೋ ಅನಾಹುತವಾದದ್ದನ್ನು ಕಂಡು ಹೇಳಬಂದವನಂತೆ ಗುಜುಗುಜು ಗುಂಪಿನ ನಡುವೆ ನುಗ್ಗಿ ಓಡೋತ್ತಲೆ ಬಂದು ಒದರಿದನು: “ಹೋಯ್, ಕೇಳಿದಿರಾ? ಹೆಣ್ಣೆ ಪತ್ತೆ ಇಲ್ಲ್ ಅಂಬ್ರು!”

ಬಾಗಿ ಅಕ್ಕಣಿಯರು ದಿಗಿಲುಬಿದ್ದು ಕೇಳಿದರು: “ಎಲ್ಲಿಗೆ ಹೋಪರಪ್ಪ ಈ ಕತ್ತಲೇಲಿ? ಅಯ್ಯೋ ದ್ಯಾವರೆ!”

ಪಕ್ಕದಲ್ಲಿದ್ದು ಇವರ ಸಂಭಾಷಣೆಗೆ ಕಿವಿಗೊಟ್ಟಿದ್ದ ಒಬ್ಬಳು ಸಮಾಧಾನ ಹೇಳಿದಳು: “ಎಲ್ಲಿಗೊ ಹೋಪರಲ್ಲ. ‘ಹೊರಕಡೆ’ಗೆ ಹೋಗಿರಲಕ್ಕುಅಂಬ್ರು. ನಮ್ಮ ಪೀಂಚಲು ಅವರ ಸಂಗಡ ಇದ್ದಳಂಬ್ರು…. ಅವರಿಗೆ ಹೊತ್ತಾರೆಯಿಂದ ಹೊಟ್ಟೆನೋವಿತ್ತು ಅಂಬ್ರು…”

ಅಷ್ಟರಲ್ಲಿ ಗಂಡಿನ ದಿಬ್ಬಣ ಮನೆ ಮುಟ್ಟಿತ್ತು. ಎಲ್ಲಿ ನೋಡಿದರೂ ಸಂಭ್ರಮ, ಗಲಾಟೆ, ಗುಜುಗುಜು, ದೀಪಗಳ ಓಡಾಟ, ಒಬ್ಬರನ್ನೊಬ್ಬರು ಸ್ವಾಗತಿಸುವುದು, ಸಂಬೋದಿಸುವುದು…ಅಕ್ಕಣಿ ಬಾಗಿಯರಂತಹ ಕೀಳುಜಾತಿಯವರು ಅದರಲ್ಲಿ ಬರಿಯ ಪ್ರೇಕ್ಷಕರಾಗಿ ದೂರದಿಂದ ಮಾತ್ರ ಭಾಗವಹಿಸುವುದು ಸಾಧ್ಯವಾಗಿತ್ತು.

ಗಂಡಿನ ಕಡೆಯ ದಿಬ್ಬಣದವರೆಲ್ಲ ಮದುಮಗನಿಗಾಗಿ ಗೊತ್ತುಮಾಡಿದ್ದ ಮೇಲಿನ ಜಗಲಿಯ ಎತ್ತರದ ಜಾಗದಲ್ಲಿ ಆಸೀನರಾದರು. ದಿಬ್ಬಣದವರ ಕಡೆ ಮೆಚ್ಚಿ ನೋಡುತ್ತಾ, ಅವರನ್ನೂ ಅವರ ಬಟ್ಟೆಬರೆಗಳನ್ನೂ, ಪರಿಚಯವಿದ್ದಲ್ಲಿ ಅವರ ಪರಿಚಯ ವಿಚಾರವನ್ನೂ ಕುರಿತು ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಅಕ್ಕಣಿ ತನ್ನ ಕಡೆಗೆ ಬರುತ್ತಿದ್ದ ಚೀಂಕ್ರಿ ಸೇರೆಗಾರನನ್ನು ಕಂಡು ಮುಗುಳುನಕ್ಕಳು.

ಸೇರೆಗಾರ ಮಾತ್ರ ಮುಳುಗು ನಗಲಿಲ್ಲ. ಅವನ ಮುಖದ ಮೇಲೆ ಏನೋ ಗಂಭೀರ ಛಾಯೆ ಇದ್ದಹಾಗಿತ್ತು. ಉಟ್ಟಬಟ್ಟೆ ಒದ್ದೆಯಾಗಿದ್ದಂತೆಯೂ ತೋರಿತು. ತಲೆಗೆ ಸುತ್ತಿದ್ದ ಕೆಂಪು ವಸ್ತ್ರವೂ ಒದ್ದೆಯಾಗಿ ಕರಿಯ ಛಾಯೆಯನ್ನು ಪಡೆದಿತ್ತು.

“ಓ ಏನು ಚೀಂಕ್ರ ಸೇರೆಗಾರ್ರು ಮಳೇಲಿ ನೆಂದ ಹಾಂಗಿದೆಯಲ್ಲಾ? ಗಂಡಿನ ಕಡೆ ದಿಬ್ಬಣದೋರನ್ನ ಹಳ್ಳ ದಾಂಟಿಸಲಿಕ್ಕೆ ಹೋಗಿ ರಲಕ್ಕು!…

ಮೊಡಂಕಿಲ ಮೇಲಿನ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದೆ ಚೀಂಕ್ರ ಸಮೀಪಕ್ಕೆ ಬಂದು ನಡುವೆ ಕುಳಿತು, ಒಂದು ರೀತಿಯ ರಹಸ್ಯಧ್ವನಿಯಲ್ಲಿ ಸುಯ್ದನು: “ಇನ್ನು ಯಾಕೆ ಕಾಯುತ್ತೀರಿ ಸುಮ್ಮನೆ? ಈವೊತ್ತು ಧಾರೆ ಮುಖ ನಾವು ಕಾಣಲಿಕ್ಕಿಲ್ಲ! ಲಗ್ನ ನಿಂತ ಹಾಂಗೆ ಸೈ! ಮದುವೆಯ ಹೆಣ್ಣೆ ಮನೆಯಲ್ಲಿಲ್ಲ!”

“ಹೊರಕಡೆಗೆ ಹೋಗಿರಲಕ್ಕು ಅಂಬ್ರು?” ಅಕ್ಕಣಿಯ ಮಾತು.

“ನಮ್ಮ ಪೀಂಚಲೂ ಸಂಗಡ ಹ್ವೋಯ್ಕಂಬ್ರು!” ಬಾಗಿಯ ದನಿ.

“ನಾನೆ ಕಂಡಿದ್ದಲ್ಲಾ? ಮತ್ತೇನು ಸುಮ್ಮನೆ ನಾನು ಮಳೇಲಿ ನೆನ್ದದ್ದೆ?” ಎಂದು ಚೀಂಕ್ರ ನಿರ್ಣಾಯಕವಾಗಿ ನಕ್ಕನಷ್ಟೆ.

ಆ ರಾತ್ರಿ ಚೀಂಕ್ರನು ಐತನಲ್ಲದೆ ಪೀಂಚಲು ಒಬ್ಬಳೆ ಗಟ್ಟಿದ ಮೇಲಿನವರ ಉಡುಗೆಯಲ್ಲಿದ್ದುದನ್ನು ನೋಡಿದಾಗಣಿಂದಲೂ ಅತ್ತಕಡೆ ಒಂದು ಕಣ್ಣಿಟ್ಟಿದ್ದನು. ಚಿನ್ನಮ್ಮನನ್ನು ‘ಹೊರಕಡೆ’ಗೆ ಕರೆದುಕೊಂಡು ಹೋಗುವ ನೆವದಿಂದ ಪೀಂಚಲು ಅವಳ ಸಂಗಡ ಹೋದುದನ್ನೂ ದೂರದಿಂದ ಗಮನಿಸಿದ್ದನು. ಆದರೆ ಅವರಿಬ್ಬರೇ ಆ ಮಳೆಯಲ್ಲಿ ಆ ಕತ್ತಲೆಯಲ್ಲಿ ಆ ಕಾಡಿನಲ್ಲಿ ಹೋಗುತ್ತಾರೆ ಎಂದು ಅವನು ಊಹಿಸಿರಲಿಲ್ಲ. ಆದರೆ ಅವರು ಹೋದ ಸ್ವಲ್ಪ ದೀರ್ಘ ಸಮಯದ ಮೇಲೆ ಐತನೊಬ್ಬನೆ ಬಂದು ಅಲ್ಲಿ ಇಲ್ಲಿ ಇಣುಕುತ್ತಿದ್ದುದನ್ನು ಅವನು ಗಮನಿಸಿ, ಅವನನ್ನು ಮಾತಾಡುಸುವ ನೆವದಲ್ಲಿ ಅವನ ಹಿಂದೆ ಮುಂದೆಯೇ ತಿರುಗಾಡುತ್ತಿದ್ದನು. ಆದರೂ ತುಸು ಹೊತ್ತಿನೊಳಗೆ, ಆ ಜನಗಳ ನಡುವೆ ಅಲ್ಲಿ ಇಲ್ಲಿ ಕತ್ತಲಲ್ಲಿ ನುಗ್ಗಿ ಓಡಾಡುವಂತೆ ನಟಿಸುತ್ತಿದ ಐತ, ಹೇಗೋ ಚೀಂಕ್ರನ ಕಣ್ಣು ತಪ್ಪಿಸಿ ಪರಾರಿಯಾಗಿದ್ದನು. ಜನರು ಮದುಮಗಳು ಕಾಣೆಯಾದುದನ್ನು ಗೊತ್ತುಹಚ್ಚಿ, ಹುಡುಕಲು ತೊಡಗಿದಾಗಲೆ ಚೀಂಕ್ರನಿಗೆ ನಡೆದಿದ್ದ ಸಂಗತಿಯ ಗುಟ್ಟು ಹೊಳೆದಿತ್ತು: ಮದುಮಗಳು ಚಿನ್ನಮ್ಮನನ್ನು ಪೀಂಚಲು ಐತರ ನೆರೆವಿನಿಂದ ಕೋಣುರು ಮುಕುಂದಯ್ಯಗೌಡರು ಕಣ್ಣು ತಪ್ಪಿಸಿ ಕರೆದೊಯ್ದಿದ್ದಾರೆ ಎಂದು: ಯಾವುದು ಅವನ ಕಿವಿಗೆ ಅದುವರೆಗೆ ಬರಿಯ ಗಾಳಿಸುದ್ದಿಯಾಗಿ ಬಿದ್ದಿತ್ತೋ ಅದು ಈಗ ಖಾತ್ರಿಯಾಗಿ ನಡೆದ ಘಟನೆಯಾಗಿ ಹೋಗಿತ್ತು!.

ಮದುಮಗಳು ಕಾಣಿಯಾದುದಕ್ಕೆ ಅನೇಕರ ಊಹೆ ಅನೇಕ ರೀತಿಗಳಲ್ಲಿ ಆಟವಾಡಿತ್ತು. ಆದರೆ ಬಹುಜನರು ನಂಬಿದ್ದೆಂದರೆ, ಒಲ್ಲದ ಗಂಡನನ್ನು ಕೈ ಹಿಡಿಯಲು ಹೇಸಿ, ಅವಳು ಕರೆಗೋ ಹಳ್ಳಕ್ಕೋ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬುದು. ಆದ್ದರಿಂದ ಅನ್ವೇಷಣೆಯೂ ಆ ಜಾಡನ್ನೆ ಹಿಡಿದಿತ್ತು.

ಅಂತೂ ಆ ರಾತ್ರಿ ಮದುವೆ ನಡೆಯುವುದಿಲ್ಲ ಎಂಬುದು ನಿಶ್ಚಯವಾಗಿ ಅಕ್ಕಣಿ ಬಾಗಿಯರು ಕೋಣೂರಿನ ತಮ್ಮ ಬಿಡಾರಗಳಿಗೆ ಹಿಂದಿರುಗುವಷ್ಟರಲ್ಲಿ,ಮತ್ತೊಂದು ಭಯಂಕರ ವಾರ್ತೆಯನ್ನು ತಂದಿದ್ದನು ಚೀಂಕ್ರ: ಹೂವಳ್ಳಿ ವೆಂಕಪ್ಪನಾಯಕರು ತೀರಿಕೊಂಡ ಸುದ್ದಿ!

ಇಡೀ ಮನೆಯನ್ನೆಲ್ಲ ವ್ಯಾಪಿಸಿದ್ದ ಉತ್ಸವದ ವಾತವರಣ ಮಾಯವಾಗಿ, ಮಸಣದ ದುಃಖಮಯ ಮ್ಲಾನತೆ ತುಂಬಿಹೋದಂತಾಗಿತ್ತು. ಚಿನ್ನಮ್ಮ ಕಾಣೆಯಾದ ವಿಚಾರವಾಗಿಯೂ ಅವಳ ತಂದೆ ತೀರಿಕೊಂಡ ವಿಚಾರವಾಗಿಯೂ ನಾನಾ ತರಹದ ಸುದ್ದಿಗಳು ಹುಟ್ಟಿಕೊಂಡು ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಹರಡತೊಡಗಿದ್ದುವು. ಗಟ್ಟಿಯಾಗಿ ರೋದಿಸುವರೊಂದು ಕಡೆ, ನಿಃಶಬ್ದವಾಗಿ ಬಿಕ್ಕಿ ಬಿಕ್ಕಿ ಅಳುವರೊಂದು ಕಡೆ, ಕೋಪದಿಂದ ಸಿಂಬಾವಿಯ ಕಡೆಯವರನ್ನು ಟೀಕಿಸುವರೊಂದು ಕಡೆ, ತಪ್ಪನ್ನೆಲ್ಲ ಹೂವಳ್ಳಿಯವರ ಮೇಲೆಯೆ ಹೊರಿಸಿ ನಿಂದಿಸುವರೊಂದು ಕಡೆ. ಸೋತು, ಶತ್ರುವಿನ ಧಾಳಿಗೆ ಸಿಕ್ಕು, ದಿಕ್ಕಾಪಾಲಾಗಿ ಓಡುವ ಸೈನ್ಯದ ಗಲಿಬಿಲಿ, ಭಯ, ಅಸ್ತವ್ಯಸ್ತತೆ ಮತ್ತು ದಿಗ್ಭ್ರಾಂತಿ ಎಲ್ಲೆಲ್ಲಿಯೂ ಹಬ್ಬಿ, ಹೂವಳ್ಳಿ ಮನೆ ರಾಣಾರಂಗವಾಗಿ ಹೋಗಿತ್ತು.

“ಪಾಪ! ಒಬ್ಬಳೇ ಮಗಳು! ಧಾರೆಯ ದಿನವೇ ಹಳ್ಳಕ್ಕೆ ಹಾರಿ ಪ್ರಾಣ ತೆಗೆದುಕೊಂಡ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ‘ಆಞ್!’ ಅಂತಾ ಕೂಗಿ, ಪ್ರಜ್ಞತಪ್ಪಿ, ಕಣ್ಣು ಮುಚ್ಚಿದವರು ಮತ್ತೆ ಕಣ್ಣು ತೆರೆಯಲೇ ಇಲ್ಲವಂಗೆ!”

“ಮೊದಲೇ ಸುಮಾರು ವರ್ಷದಿಂದ, ಕಾಲಿನಲ್ಲಿ ಆಗಿದ್ದ ಕುಂಟಿನ ಹುಣ್ಣಿನ ದೆಸೆಯಿಂದ ನಂಜು ಏರಿ, ಜ್ವರ ಜೋರಾಗಿ, ಮಾತು ನಿಂತೇ ಹೋಗಿತ್ತಂತೆ. ಹೆಂಗಾದ್ರೂ ಲಗ್ನ ಒಂದು ಪೂರೈಸಿದರೆ ಸಾಕಲ್ಲಾ ಅಂತಿದ್ರಂತೆ…. ಮದುವಣಗಿತ್ತಿ ಎಲ್ಲೂ ಇಲ್ಲ, ಏನಾದಳೋ ಗೊತ್ತಿಲ್ಲ-ಅಂತಾ ಕೇಳಿದ್ದೆ ಒಂದು ನೆಪ ಆಗಿ ಪರಾಣ ಹಾರೇ ಹೋಯ್ತಂತೆ!”

“ಅಯ್ಯೋ! ಆ ಮುದುಕೀಗೋಳು ನೋಡಬಾರದಂತೆ! ಮೊಮ್ಮಗಳು ಅಂದ್ರೆ ಅಷ್ಟು ಅಕ್ಕರೆಯಿಂದ ಸಾಕಿತ್ತಂತೆ ಆ ಅಜ್ಜಿ. ಅತ್ತೂ ಅತ್ತೂ ಸೊಂಟಾನೆ ಬಿದ್ದು ಹೋದ್ದಂಗಾಗ್ಯದೆಯಂತೆ! ಅದೂ ಏನ ನಾಳೆ ಹೊತ್ತಾರೆ ಒಳಗೇ ಅತ್ತ ಮಕ ಹೋಗೋ ಹಾಂಗೇ ಅದೆಯಂತೆ!”

“ಆ ನಾಗಕ್ಕಂದೇ ಎಲ್ಲಾ ಕಿತಾಪತಿ. ಅಂತಾನೂ ಹೇಳ್ತಾರಪ್ಪಾ! ಸುಳ್ಳೋ ಬದ್ದೋ? ಆ ಭಗವಂಗನೇ ಬಲ್ಲ!….”

ಇಂತಹ ಅನೇಕ ತರಹದ ಸಂವಾದದ ಕೆಂಜಿಗೆ ಹಿಂಡಲಿನಲ್ಲಿ ನುಸುಳಿ ತೂರಿ ಅಕ್ಕಣಿ, ಬಾಗಿ ಮತ್ತು ಮೊಡಂಕಿಲರು ಹೂವಳ್ಳಿಯಿಂದ ಕೋಣೂರಿಗೆ ಹಿಂತಿರುಗಿ ಹೊರಟರು. ನಟ್ಟಿರುಳು ಕಳೆದು ಬಹೂದೂರ ಸಾಗಿತ್ತು. ಮಳೆ ಮೂದಲಿನಂತೆ ಜೋರಾಗಿ ಸುರಿಯದಿದ್ದರೂ ನಿಂತು ನಿಂತು ಸುರಿಯುತ್ತ ರಾತ್ರಿಯನ್ನು ದುರ್ನಿಶೆಯನ್ನಾಗಿ ಮಾಡಿತ್ತು.

ಕೋಣೂರು ಮನೆಯನ್ನು ದಾಟಿ ತಮ್ಮ ಬಿಡಾರಗಳಿದ್ದ ಜಾಗಕ್ಕೆ ಸಮಿಪಿಸುತ್ತಿದ್ದ ಅಕ್ಕಣಿಗೆ ಏಕೋ ದುಃಖ ಉಕ್ಕಿಬಂದಂತಾಗಿ, ಎಷ್ಟೊ ಪ್ರಯತ್ನಪಟ್ಟರೂ ತಡೆಯಲಿಕ್ಕಾಗದೆ, ಬಿಕ್ಕಿಬಿಕ್ಕಿ ಅಳತೊಡಗಿದಳು.

ಪಕ್ಕದಲ್ಲಿದ್ದ ಬಾಗಿ, ರೋಗಿಯಾಗಿದ್ದ ತನ್ನ ಗಂಡನ ದುಸ್ಥಿತಿಯ ನೆನಪಾಗಿ ಅಕ್ಕಣಿ ಅಳುತ್ತಿರಬೇಕು ಎಂದು ಭಾವಿಸಿ, ನಾನಾ ರೀತಿಯಿಂದ ಸಮಾಧಾನ ಹೇಳಿದಳು: ಆದರೆ ಅಕ್ಕಣಿಗೆ ಚೆನ್ನಾಗಿ ಗೊತ್ತಿತ್ತು. ಬಾಗಿ ಹೇಳಿದ ಯಾವ ಸಮಾಧಾನವನಕ್ಕೂ ಬುಡ ಭದ್ರವಿಲ್ಲ ಎಂದು.

ತನ್ನ ಗಂಡನ ರೋಗ ಗುಣವಾಗುವುದಿಲ್ಲ ಎಂಬುದು ಅಕ್ಕಣಿಗೆ ಖಾತ್ರಿಯಾಗಿ ಹೋಗಿತ್ತು. ಅವನಿಂದ ಯಾವ ವಿಧವಾದ ಸುಖವೂ ತನಗೆ ಇನ್ನು ಮುಂದು ದೊರೆಯುವುದಿಲ್ಲ ಎಂಬುದರಲ್ಲಿಯೂ ಅವಳಿಗೆ ಸಂದೇಹವಿರಲಿಲ್ಲ. ಅವನು ಬದುಕಿರುವಷ್ಟು ಕಾಲವೂ ತಾನೇ ಅವನಿಗಿ ದುಡಿದು ಹಾಕಬೇಕು ಎನ್ನುವುದೂ ಅವಳಿಗೆ ಸ್ವಷ್ಟವಾಗಿತ್ತು. ಆದರೂ ಅವನು ಸತ್ತರೆ ತಾನು ಮುಂಡೆಯಾಗುತ್ತೇನಲ್ಲ ಎಂಬ ಅಮಂಗಳದ ಭೀತಿ ಅವಳ ಹೃದಯನ್ನಾವರಿಸಿತ್ತು. ಅವರ ಕೀಳುಜಾತಿಯ ರಿವಾಜಿನಂತೆ ಪಿಜಿಣ ಸತ್ತರೆ ಅಕ್ಕಣಿಯ ಮುಂಡೆತನ ಅನಿವಾರ್ಯವಾದುದೇನಾಗಿರಲಿಲ್ಲ! ಕೆಲವೇ ದಿನಗಳಲ್ಲಿ, ಸತ್ತವನಿಗೆ ಮಾಡಿ ಮುಗಿಸಬೇಕಾತಿದ್ದ ಕ್ರಿಯೆಗಳೆಲ್ಲ ಪೂರೈಸಿದೊಡನೆ, ಅವಳು ತನ್ನ ವೈಧವ್ಯ ದುಃಖದಿಂದ ಪಾರಾಗಿ, ನವವಧುವೂ ಆಗಬಹುದಾಗಿತ್ತು! ಚೀಂಕ್ರಿನ ಕೃಪೆಯಿಂದ ಆ ಅವಕಾಶವೂ ಶೀಘ್ರವಾಗಿ ಅಶ್ರಮವಾಗಿಯೆ ಲಭಿಸುವಂತೆಯೂ ಇತ್ತು!. ಅಕ್ಕಣಿಯ ಒಳಮನಸ್ಸಿಗೆ ಒಮ್ಮೂಮ್ಮೆ ಆ ಕನಸೂ ಮಿಂಚುತ್ತಿದ್ದುದುಂಟು. ಹಾಗೆ ಮಿಂಚಿದಾಗಲೆಲ್ಲ ಅವಳು ತನ್ನನ್ನು ತಾನೆ ಪಾಪಿ ಎಂದು ಬಯ್ದುಕೊಂಡು, ತನಗೆ ತಾನೆ ನೂರು ಶಾಪ ಹಾಕಿಕೊಳ್ಳುತ್ತಿದ್ದಳು.. ಅವಳ ಅಂತರಾಳದ ಧರ್ಮಪ್ರಜ್ಞೆ ’ಚಿಃ ನೀನು ಎಂತಹ ಹಾದರಗಿತ್ತಿ ಆಗಿಹೋದೆ? ಗಂಡನ ಸಾವನ್ನು ಬಯಸಿ, ಮಿಂಡನನ್ನು ಕೂಡಿಕೆಯಾಗುವ ಸಂಚು ಮಾಡುತ್ತಿದ್ದಿಯಾ?’ ಎಂದು ಮೂದಲಿಸಿದಂತಾಗುತ್ತಿತ್ತು. ಆದರೂ ಪಿಜಿಣ ಈ ಭಯಂಕರ ರೋಗದಿಂದ ನರಳುತ್ತಾ ಇನ್ನೂ ಬಹು ದೀರ್ಘಕಾಲ ಬದುಕಿರುವ ಸಂಭವವನ್ನು ನೆನೆದಾಗಲೆಲ್ಲ ಅಕ್ಕಣಿಯ ಜೀವ ದಿಕ್ಕುಗೆಟ್ಟು ಸಂಕಟದಿಂದ ನಿಡುಸುಯ್ಯುತ್ತಿತ್ತು. ಹೀಗೆ ಇಬ್ಬಗೆಯ ಇಕ್ಕುಳದಲ್ಲಿ ಸಿಕ್ಕಾಗಲೆಲ್ಲ ಅಕ್ಕಣಿ ಬಿಕ್ಕಿಬಿಕ್ಕಿ ಅತ್ತೂ ಅತ್ತೂ, ಅದರಿಂದುಂಟಾಗುತ್ತಿದ್ದ ದಣಿವನ್ನೆ, ಒಂದು ತೆರನ ಪ್ರಜ್ಞಾ ಮೂರ್ಛೆಯನ್ನೆ, ಸಮಾಧಾನವನ್ನಾಗಿ ಪರಿಗಣಿಸುತ್ತಿದ್ದದ್ದು ಅವಳಿಗೆ ರೂಢಿ ಬಿದ್ದಿತ್ತು.

ಅಳುತ್ತಳುತ್ತಲೆ ಅಕ್ಕಣಿ ಅವಳ ಬಿಡಾರದ ಬಾಗಿಲಿಗೆ ಬಂದಳು.

ಸರಿ, ಇನ್ನೇನು? ತಟ್ಟಿಯ ಬಾಗಿಲ ನೂಕಿ ಒಳಹೊಕ್ಕರೆ ಅವಳಿಗಾಗಿ ಕಾಯುತ್ತಲೆ ಇರುತ್ತದೆ ದಿನನಿತ್ಯದ ರೋತೆ!

ಬಾಗಿ ಮೊಡಂಕಿಲರು ಅಕ್ಕಣಿ ಬಾಗಿಲು ತೆರೆಯುವುದನ್ನೆ ನೋಡುತ್ತಾ ಅವಳ ಹಿಂದೆ ನಿಂತರು. ಅವರು ತಮ್ಮ ಬಿಡಾರಕ್ಕೆ ನಾಲ್ಕುಮಾರು ಹಿಂದೆಯ ಅಗಚಿ ಹೋಗಬೇಕಾಗಿತ್ತು. ಆದರೆ ಅಕ್ಕಣಿಯ ದುಃಖಸ್ಥಿತಿಯನ್ನೂ ಅವಳ ಗಂಡನ ರೋಗದ ಉಲ್ಬಣತೆಯನ್ನೂ ನೆನೆದು, ಬಿಡಾರದೊಳಕ್ಕೆ ಹೋಗಿ ವಿಚಾರಿಸಿಕೊಂಡೆ ಹೋಗುವ ಎಂದು ಬಂದಿದ್ದರು.

ಕತ್ತಲೆ ಕವಿದಿದ್ದ ಬಿಡಾರ ಅಷ್ಟು ನೀರವವಾಗಿದ್ದುದು ಅಕ್ಕಣಿಗೆ ಅಚ್ಚರಿಗಿಂತಲೂ ಹೆಚ್ಚಾಗಿ ಅನುಮಾನ ಉಂಟುಮಾಡಿತ್ತು. ಸಾಮಾನ್ಯವಾಗಿ ಪಿಜಿಣನಿಗೆ ಇತ್ತೀಚೆಗೆ ನಿದ್ದೆಯೆ ಬರುತ್ತಿರಲಿಲ್ಲ. ಮೂರು ಹೊತ್ತೂ ಅಯ್ಯಪ್ಪಾ ಉಸ್ಸಪ್ಪ ಎನ್ನುತ್ತಲೋ ನರಳುತಲೋ ಇನ್ನೇನನ್ನಾದರೂ ಹಲವರಿಯುತ್ತಲೋ ಇರುತ್ತಿದ್ದ. ’ಇಂದೇನು ಇಷ್ಟು ನಿಃಶಬ್ಧವಾಗಿ ನಿದ್ದೆ ಮಾಡುತ್ತಿದ್ದರಲ್ಲಾ! ಎಂದು ಕೊಂಡಿತು ಅವಳ ಮನಸ್ಸು. ಕಡೆಗೆ ಉಸಿರಾಡುವುದಾದರೂ ಕೇಳಿಸಬೇಕಾಗಿತ್ತಲ್ಲ? ಏನು ವಾಸನೆ? ಒಡನೆಯೆ ಚೀಂಕ್ರ ಕೊನೆಮೆಟ್ಟೆಯ ರಾಶಿಯಡಿ ಅಡಗಿಸಿಟ್ಟಿದ್ದ ಸಾರಾಯಿ ಶೀಸೆಗಳ ನೆನಪಾಗಿ ಅವಳೆದೆ ಏನೋ ಆಶಂಕಿಯಿಂದ ಹೌಹಾರಿತು. ಕಾಲೆಲ್ಲ ಸೋತು ಬಂದಂತಾಯಿತು. ಗಂಟಲು ಆರಿತು. ಬೇಗಬೇಗನೆ ಬಾಗಿಲು ತಳ್ಳಿ. ಒಳಗೆ ಕಗ್ಗತ್ತಲೆಗೆ ದಾಟಿದಳು. ಬಿಡಾರದ ಮೂಲೆಯಲ್ಲಿದ್ದ ಒಲೆಯಲ್ಲಿ ಕೆಂಡ ಬೂದಿಮುಚ್ಚಿಕೊಂಡಿತ್ತು. ನೆಟ್ಟಗೆ ಅಲ್ಲಿಗೆ ಕೆಸರು ಗಾಲಿನಲ್ಲಿಯೆ ನಡೆದು, ಕೂತು, ಊದಿ, ಜಿಗ್ಗು, ಒಟ್ಟಿದಳು. ಬೆಂಕಿ ಹೊತ್ತಿಕೊಂಡು ಜ್ವಾಲೆ ಉರಿಯಿತು. ಬಿಡಾರ ಬೆಳಕಾಯಿತು.

ಬಿಡಾರ ಬೆಳಕಾಯಿತು. ಆದರೆ ಅಕ್ಕಣಿಯ ಕಣ್ಣಿಗೆ ಬಿದ್ದ ಘೋರ ದೃಶ್ಯಕ್ಕೆ, ಅವಳ ಪ್ರಾಣಕ್ಕೆ ಕಗ್ಗತ್ತಲೆಯ ಸಿಡಿಲು ಹೊಡೆದಂತಾಗಿ, ಕಣ್ಣು ಕತ್ತಲೆಗಟ್ಟಿ, ಪ್ರಜ್ಞೆ ಸೋತು, ಚಿಟಾರನೆ ಚೀರಿಕೊಂಡು, ಧಾತು ಹಾರಿ ನೆಲಕ್ಕೆ ಉರುಳಿಬಿಟ್ಟಳು!

ತತ್ತರಿಸಿ ಹೋದ ಬಾಗಿ ಮೊಡಂಕಿಲರು ಒಳಗೆ ನುಗ್ಗಿ ನೋಡುತ್ತಾರೆ: ಒಲೆಯ ಉರಿಯ ಮಂದಕಾಂತಿಯಲ್ಲಿ ನಸುಮಬ್ಬಾಗಿ ಕಾಣಿಸುತ್ತಿದೆ, ಬಿಡಾರದ ಬೆಂಗಟೆಯಿಂದ ನೇತಾಡುತ್ತಿದ್ದ ಪಿಜಿಣನ ನಿಶ್ಚಲ-ಕೃಶ-ಕಳೇಬರ….

ರಾತ್ರಿ ಹೂವಳ್ಳಿಯ ಮದುವೆಮನೆಯಲ್ಲಾದ ದುರಂತದ ಗಲಿಬಿಲಿಯಲ್ಲಿ ಸಧ್ಯವಾದಷ್ಟು ತನ್ನ ಸಂಪಾದನೆಯನ್ನು ಕೈಗೂಡಿಸಿಕೊಂಡು ಮರುದಿನ ಬೆಳಗ್ಗೆ ಚೀಂಕ್ರ ಸೇರೆಗಾರನು ಕೋಣೂರಿಗೆ ಹಿಂತಿರುಗಿದಾಗ ಅವನ ಆಶೆ, ಅವನ ಹೃದಯದ ನಿಗೂಢ ದುರಭಿಸಂಧಿ, ಅಷ್ಟು ಶೀಘ್ರವಾಗಿ ಕೈಗೂಡುತ್ತದೆ ಎಂದು ಅವನು ಭಾವಿಸಿರಲಿಲ್ಲ: ತಾನು ಕೊನೆ ಮುಟ್ಟೆಯಡಿ ಮುಚ್ಚಿಟ್ಟಿದ್ದ ಸಾರಾಯಿ ಶೀಸೆಗಳಿಗೆ ಒದಗಿದ್ದ ಗತಿಗೆ ಅವನು ಬಹಳ ವ್ಯಸನಪಟ್ಟಂತೆ ತೋರಿಸಿಕೊಂಡಿದ್ದರೂ ಒಳಗೊಳಗೆ ಸಾರ್ಥಕವಾಯಿತೆಂದು ಹಿಗ್ಗಿದನು. ಅಕ್ಕಣಿಯ ದುಃಖದಲ್ಲಿ ಸಮಭಾಗಿಯಾದಂತೆ ಶೋಕಿಸಿದ್ದನು. ಇತರರ ಸಂಗಡ ತಾನೂ ನಿರಾಸಕ್ತನೆಂಬಂತೆ ಅಕ್ಕಣಿಗೆ ಸಮಾಧಾನ ಹೇಳಿದ್ದನು. ಪಿಜಿಣನ ಶವ ಸಂಸ್ಕಾರದಲ್ಲಿ ಅತ್ಯಂತ ಮುತುವರ್ಜಿಯಿಂದ ಪರಮಬಂಧುವಿನಂತೆ ಸೇವೆ ಸಲ್ಲಿಸಿದನು.

ಅಕ್ಕಣಿ ಮಾತ್ರ ಅವನ ಕಡೆ ದೃಷ್ಟಿ ಹಾಯಿಸಲಿಲ್ಲ. ಅತ್ಯಂತ ನಿರ್ಲಕ್ಷತೆಯಿಂದ ಚೀಂಕ್ರನ ಅಸ್ತಿತ್ವವನ್ನೆ ತಿರಸ್ಕರಿಸುವಂತೆ ವರ್ತಿಸಿದಳು. ತನ್ನ ಗಂಡನ ಸಾವೊಂದೇ ಅವಳ ಮನಸ್ಸರ್ವವನ್ನೂ ವ್ಯಾಪಿಸಿ, ಅವಳ ಬದುಕನ್ನು ಬೇಯಿಸುತ್ತಿದ್ದಂತೆ ಕಾಣುತ್ತಿತ್ತು. ತನ್ನ ಗಂಡನ ಅಕಾಲ ಮರಣಕ್ಕೆ ಚೀಂಕ್ರನೇ ಕಾರಣ ಎಂಬ ಧ್ವನಿ ಬರುವಂತಹ ಮಾತನ್ನೂ ಆಡಿದ್ದಳು!

“ಸೇರೆಗಾರ್ರನ್ನು ಯಾಕೆ ಬಯ್ಯುತ್ತೀಯಾ? ನಿನಗೂ ನಿನ್ನ ಗಂಡಗೂ ಅವರು ಎಷ್ಟೆಲ್ಲ ಉಪಕಾರ ಮಾಡಿದ್ದಾರೆ?” ಎಂದು ಕಿವಿಮಾತು ಹೇಳಿದ ಬಾಗಿಗಿ, ಮೂದಲಿಸುವಂತೆ ನುಡಿದಿದ್ದಳು, ಸುಯ್ದು:

“ಮಾಡಿದಾರೆ! ಉಪಕಾರ ಮಾಡಿದ್ದಾರೆ! ಉಪಕಾರದ ಒಳಗಿದ್ದ ಅಪಕಾರ ನಿನಗೆ ಹೆಂಗೆ ಗೊತ್ತಾಗಲಕ್ಕೂ, ಬಾಗಕ್ಕಾ?”