ಹಿರಿಯ ಮಗ ಮತ್ತು ಸೊಸೆ ಇಬ್ಬರೂ ತೀರಿಕೊಂಡ ರೀತಿ ಮತ್ತು ಸನ್ನಿವೇಶದಿಂದುಂಟಾಗಿದ್ದ ಹತಾಶೆ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಲ್ಲಿ ಬದುಕಬೇಕು ಎಂಬ ಆಶೆಯ ಬೇರನ್ನೆ ಚಿವುಟಿಹಾಕಿತ್ತು. ತಿರುಪತಿಗೆ ಹೋದವನು ಹಿಂದಿರುಗುತ್ತಾನೆ ಎಂಬ ಪ್ರತ್ಯಾಶೆಯೆ ಅವರ ಬಾಳ್ವಿಗೆ ಅನೇಕ ವರ್ಷಗಳಿಂದಲೂ ಪ್ರೋತ್ಸಾಹ ನೀಡಿತ್ತು. ಅದು ಇನ್ನೇನು ಕೈಗೂಡುತ್ತದೆ ಎಂದು ಅವರ ಜೀವ ಒಂದು ಹಿರಿಯ ಹಿಗ್ಗಿನ ಉನ್ಮಾದ ಸದೃಶ ಶಿಖರವನ್ನೇರಿದ್ದಾಗಲೆ ಸಂಭವಿಸಿದ್ದ ರುದ್ರ ದುರಂತದಿಂದ ಅದು ಹತಾಶೆಯ ಕಮರಿಗೆ ಉರುಳಿಬಿದ್ದಿತ್ತು. ಕಿರಿಯ ಮಗ ತಿಮ್ಮಪ್ಪಹೆಗ್ಗಡೆಯ ಕ್ಷಣಿಕ ಭಾವೋದ್ರೇಕದಿಂದುಂಟಾಗಿದ್ದ ಅಪಘಾತವೂ ಆ ಹತಾಶೆ ಬೆಳೆದು, ಹಬ್ಬಿ, ಬದುಕನ್ನೆಲ್ಲ ಆಕ್ರಮಿಸಿ, ಅದನ್ನು ಲಯಗೊಳಿಸುವುದಕ್ಕೆ ಒಂದು ಅಡರ್ಪನ್ನೊದಗಿಸಿತ್ತಷ್ಟೆ! ಅವರಿಗೆ ತನು ಈ ಮಳೆಗಾಲ ಮುಗಿಯುವುದರೊಳಗೆ ಸಾಯುತ್ತೇನೆ ಎಂಬ ನಂಬುಗೆ ಬಂದು ಪ್ರಬಲವಾದ ಆಶೆಯೆ ಆಗುವಷ್ಟರಮಟ್ಟಿಗೆ ಬಲವಾಗಿತ್ತು. ಅದಕ್ಕಾಗಿಯೆ ಅವರು ಮಗಳು ಮಂಜಮ್ಮನ ಮತ್ತು ಮಗ ತಿಮ್ಮಪ್ಪನ ಮದುವೆಗಳೆರಡೂ ಒಟ್ಟಿಗೆ ಬೇಗನೆ ನಡೆಯುವಂತೆ ಮಾಡಿದ್ದರು.

ಆ ಮದುವೆಗೆ ಹೂವಳ್ಳಿಯಿಂದ ಯಾರೂ ಹೋಗಿರಲಿಲ್ಲ, ಸೂತಕದ ಮತ್ತು ಮನೆಯನ್ನೆಲ್ಲ ವ್ಯಾಪಿಸಿದ್ದ ಸಾವಿನ ದುಃಖದ ಕಾರಣಕ್ಕಾಗಿ. ಮದುಮಗನಾಗುವ ತಿಮ್ಮಪ್ಪನೆ ಬಂದು ಕರೆದು ಹೋಗಿದ್ದನು. ಆದರೆ ಸಿಂಬಾವಿಯವರು ಪಾಲುಗೊಳ್ಳುವ ಉತ್ಸವಕ್ಕೆ ಚಿನ್ನಮ್ಮ ಹೇಗೆ ಹೋದಾಳು? ಇನ್ನು ನಾಗಕ್ಕ? ಅವಳು ಕೂಡಿಕೆಯಾಗಿದ್ದ ಹೆಣ್ಣಾದರೂ ಎರಡನೆಯ ಸಾರಿ ವೈಧವ್ಯ ಪ್ರಾಪ್ತಿಯಾದವಳಲ್ಲವೆ? ದ್ವಿಗುಣಿತ ಅಮಂಗಳೆಯಾಗಿದ್ದ ಅವಳು ಎಲ್ಲಿಯಾದರೂ ಮದುವೆಯಂತಹ ಮಂಗಳದೆಡೆಗೆ ಹೋಗುವುದುಂಟೆ? ಇನ್ನು ಅಜ್ಜಿ? ಮನೆಯಿಂದ ಹೊರಗೆ ಓಡಿಯಾಡುವುದೂ ಅವಳಿಗೆ ಕಷ್ಟಕರವಾಗಿತ್ತು.

ಮುಕುಂದಯ್ಯ ತಿಮ್ಮಪ್ಪನ ಮದುವೆಗೆ ಗಂಡಿನ ಮೆನಗೆ ಮಾತ್ರ ಹೋಗಿ ಬಂದಿದ್ದನು. ಹೆಣ್ಣಿನ ಮದುವೆಗೆ ಹೋಗಿದ್ದವನು ಗಂಡಿನ ಮನೆಯಿಂದ ದಿಬ್ಬಣ ಬರುವಷ್ಟರಲ್ಲಿಯೆ ಹೊರಟುಬಂದಿದ್ದನು. ಬರುವಾಗ ಮದುಮಗಳು ಮಂಜಮ್ಮಗೂ ಹೇಳಿ, ಕ್ಷಮೆ ಕೇಳುವಂತೆ, ಏನೇನೊ ಸಬೂಬು ಹೇಳಿ ಬಂದಿದ್ದನು.

ಹಾಗೆ ಹಳೆಮನೆಯಿಂದ ಹೊರಟು ಬರುತ್ತಿದ್ದಾಗ ನಡೆದಿದ್ದ, ಬಹಳ ಸಮಾನ್ಯವೆಂದು ತೋರಬಹುದಾದ, ಒಂದು ಘಟನೆ ಮುಕುಂದಯ್ಯನ ಮನಸ್ಸಿನ ಮೇಲೆ ವಿಶೇಷ ಪರಿಣಾಮ ಉಂಟುಮಾಡಿತ್ತು:

ಮನೆಯಿಂದ ಕೆಳಗೆ ಅಡಕೆ ತೋಟದ ಕಲ್ಲು ಕಟ್ಟಣೆಯ ಪಕ್ಕದಲ್ಲಿಯೆ ಇಳಿದು ಗದ್ದೆ ಕೋಗಿನ ಕಡೆಗೆ ಹೋಗುತ್ತಿದ್ದ ಕಾಲುದಾರಿಯಲ್ಲಿ ಸುಮಾರು ಇಪ್ಪತ್ತು ಮೂವತ್ತು ಮಾರು ನಡೆದಿದ್ದನೋ ಇಲ್ಲವೋ ಯಾರೋ ಹಿಂದಿನಿಂದ ಕೂಗಿ ಕರೆದಂತಾಯಿತು. ತಿರುಗಿ ನೋಡಿದಾಗ ಯಾಗೂ ಗೋಚರಿಸಲಿಲ್ಲ. ಮತ್ತೆ ಎರಡು ಹೆಜ್ಜೆ ಹಾಕುವಷ್ಟರಲ್ಲಿ ಮತ್ತೆ ಅದೇ ಕೀಚಲು ದನಿ ಕೇಳಿಸಿತು: ‘ಏ ಮುಕುಂದ ಮಾವ! ಏ ಮುಕುಂದ ಮಾವ!’

ದನಿಯಿಂದಲೆ ಗೊತ್ತಯಿತು ಕರೆಯುತ್ತಿದ್ದವನು ಧರ್ಮು ಎಂದು. ಆದರೆ ಸುತ್ತಲೂ ನೋಡಿದಾಗ ಅವನು ಎಲ್ಲಿಯೂ ಕಾಣಿಸಲಿಲ್ಲ. ಹುಡುಗ ಆಟಕ್ಕೆ ಎಲ್ಲಿಯೊ ಅಡಗಿಕೊಂಡು ಕರೆಯುತ್ತಿದ್ದಾನೆ ಎಂದು ಊಹಿಸಿ ಮುಕುಂದಯ್ಯ ಸರಸಕ್ಕೆ “ಏ ಪಟಿಂಗ್ರಾ, ಅಲ್ಲೇನ ಮಾಡ್ತಿರೋ? ಈಗ ನಿನ್ನ ಚಿಕ್ಕಪ್ಪಯ್ಯ ಬಂದ್ರೆ ಬೀಳ್ತವೆ ಕನಾತಿ!” ಎಂದು, ತನಗೆ ಏನೂ ಯಾರೂ ಕಾಣಿಸದಿದರೂ, ಧರ್ಮು ಒಬ್ಬನೆ ಇರಲಾರ, ಮದುವೆಗೆ ಬಂದ ನೆಂಟರ ಮಕ್ಕಳೂ ಎರಬಹುದೆಂದು ಸ್ವಾಭಾವಿಕವಾಗಿಯೆ ಊಹಿಸಿ, ಗದ್ದೆಯ ದಿಕ್ಕಿಗಿದ್ದ ಒಂದು ದಟ್ಟವಾಗಿ ಬೆಳೆದಿದ್ದ ಕರ್ಜಿಹಣ್ಣಿನ ಮಟ್ಟಿನ ಕಡೆ ನೋಡುತ್ತಾ ಗದರಿಸುವಂತೆ ನಟಿಸಿದನು.

ಆದರೆ ಹಲವು ಕೊರಳುಗಳು ಒಟ್ಟಿಗೆ ಗಟ್ಟಿಯಾಗಿ ನಕ್ಕ ಸದ್ದು ಬಂದದ್ದು ತನ್ನ ಬೆಂಗಡೆಯಿಂದ! ತಿರುಗಿ ನೋಡುತ್ತಾನೆ: ಕಟ್ಟಣೆಯಾಚೆ, ಅಡಕೆಯ ಬಾಳೆಯ ಮರಗಳ ನಡುವೆ, ತುಸು ಮರೆಯಾಗಿದ್ದ ಒಂದು ಪೇರಲ ಮರದಲ್ಲಿ ಮಂಗಗಳು ಕೂರುವಂಗತೆ ಹತ್ತಿ ಕೂತಿವೆ, ಹುಡುಗರ ಒಂದು ಹಿಂಡೆ!

“ಚಿಟ್ಟಬಿಲ್ಲು ತರಲಿಲ್ಲೇನು, ಮಾವಾ?” ಎಲ್ಲರಿಗಿಂತಲೂ ಮೇಲೆ ನೆತ್ತಿಯ ಹರೆಯಲ್ಲಿದ್ದ ಧರ್ಮು ಕೂಗಿದನು.

“ಹೂನೊ!ನೆಂಟರಮನೆಗೆ ಲಗ್ನಕ್ಕೆ ಬರೋರು ಚಿಟ್ಟಿಲ್ಲು ತರ್ತಾರೇನೋ, ಪಟಿಂಗಾ?”

“ಮತ್ತೇ…? ಲಗ್ನಕ್ಕೆ ಬಂದಾವ ಎತ್ತಲಾಗೋ ಹೋಗ್ತಿದ್ದೀಯಾ?” ಧರ್ಮು ಆಗಲೆ  ಪೇರಲಮರದಿಂದಿಳಿದು ಕಟ್ಟಣೆ ಹತ್ತಿ ನೆಗೆಯುತ್ತಿದ್ದನು.

“ಕೆಲಸ ಇದೆ ಕಣೋ, ಮನೀಗೆ ಹೋಗ್ತೀನಿ.” ಹತ್ತಿರಕ್ಕೆ ಬಂದಿದ್ದ ಹುಡುಗನಿಗೆ ಮುಕುಂದಯ್ಯ ಮೆಲ್ಲಗೆ ಹೇಳಿದನು.

“ಅತ್ತೆಮ್ಮನ ಮನೀಗಾ?” ಧರ್ಮು ಕೋಣೂರನ್ನು ಕರೆಯುತ್ತಿದ್ದ ರೀತಿ ಮುಕುಂದಯ್ಯಗೆ ರೂಢಿಯಾಗಿತ್ತು.

“ಅಲ್ಲೋ…. ಹೂವಳ್ಳಿಗೆ.” ಬಳಿಗೆ ಬಂದು ಅಕ್ಕರೆಯಿಂದ ತನ್ನ ಬಲಗೈಯನ್ನು ಹಿಡಿದುಕೊಂಡಿದ್ದ ಹುಡುಗನಿಗೆ ಹೇಳಿದನು ಮುಕುಂದಯ್ಯ.

“ಅದನ್ನೇ…. ನಾನು ಹೇಳಿದ್ದೂ…. ಮತ್ತೆ! ಹೂವಳ್ಳಿಗೆ ಹೋಗ್ತಿಯೇನೂ ಅಂತಾ.”

“‘ಅತ್ತೆಮ್ಮನ ಮನೀಗಾ?’ ಅಂತಾ ಕೇಳ್ದೇ?….”

“ಹೌದು….‘ಹೂವಳ್ಳಿ ಚಿನ್ನಕ್ಕ ಇನ್ನುಮ್ಯಾಲೆ ನಿನ್ನ ಅತ್ತೆಮ್ಮ ಕಣೋ!’ ಅಂತಾ ಹೇಳಿದ್ರು!”

“ಯಾರೋ ಹೇಳಿದ್ದು?”

“ಮಂಜತ್ತೇ!….”

ಮುಂದೇನು ಸಮಂಜಸವಾಗಿ ಮಾತಾಡಬೇಕೋ ಅದು ಹೊಳೆಯಲಿಲ್ಲ ಮುಕುಂದಯ್ಯಗೆ. ಅಂತೂ ಧರ್ಮು ತನಗೆ ಪ್ರಿಯವಾದ್ದನ್ನೆ ಹೇಳಿದ್ದನು. ಆದರೆ ಇನ್ನೂ ಏನೇನು ಬಿದ್ದಿದೆಯೋ ಈ ಮಕ್ಕಳ ಕಿವಿಗೂ? ಮುಕುಂದಯ್ಯನಿಗೆ ಸೋಜಿಗವಾಯಿತು. ತನ್ನ ಪೆಚ್ಚನ್ನು ಮುಚ್ಚಿಕೊಳ್ಳುವುದಕ್ಕಾಗಿ, ಮಾತು ಮುಂಮುಂದುವರಿಸಬೇಕಲ್ಲಾ ಎಂದು, ಹೇಳಿದನು: “ನಿನ್ನ ಮಂಜತ್ತೆ, ಇವೊತ್ತು ರಾತ್ರಿ, ಮದೋಳ್ಗಿ ಆಗ್ತಾಳೋ! ನಾಳೆ ಗಂಡನ ಮನೆಗೆ ಸಿಂಬಾವಿಗೆ ಹೋದವಳು ಮತ್ತೆ ಬರಾದಿಲ್ಲ, ನಿಂಗೆ ಅಡಿಗೆ ಮಾಡಿ ಹಾಕೋಕೆ!….”

“ಲಕ್ಕ್ ಚಿಗಮ್ಮ ಬಂದದಲ್ಲಾ, ಸಿಂಬಾವಿಯಿಂದ ತಿಮ್ಮು ಚಿಗಪ್ಪಯ್ಯನ ಸಂಗಡ? ಅಡಿಗೆ ಮಾಡಿ ಹಾಕ್ತದೆ!” ಸ್ವಲ್ಪವೂ ಅಪ್ರತಿಭನಾಗದೆ ಉತ್ತರಕೊಟ್ಟಿದ್ದನು ಧರ್ಮು.

“ಹೋಗಲಿ ಬಿಡು: ಒಬ್ಬರು ಹೋದರೆ ಮತ್ತೊಬ್ಬರು ಬರ್ತಾರೆ!….ನಂಗೆ ಹೊತ್ತಾಗ್ತದೆಯೊ, ನಾ ಹೋಗ್ತಿನೋ.” ಎಂದು ಮುಂದಕ್ಕೆ ಕಾಲು ಹಾಕಲಿದ್ದ ಮುಕುಂದಯ್ಯಗೆ ಧರ್ಮುವ ಪಕ್ಕದಲ್ಲಿ, ಅವನ ಗಾತ್ರದಿಂದಲೆ ತನ್ನ ಗಾತ್ರ ಮರೆಯಾಗುವಷ್ಟರ ಮಟ್ಟಿನ ಕೃಶಗಾತ್ರನಾಗಿದ್ದ ರಾಮು, ತನ್ನ ಧರ್ಮಣ್ಣಯ್ಯನ ಹಸ್ತವನ್ನು ತನ್ನ ಕೃಶಹಸ್ತದಿಂದ ಹಿಡಿದು ನಿಂತಿದ್ದುದು ಕಣ್ಣಿಗೆ ಬಿತ್ತು.

“ಅಯ್ಯೋ,! ಇಂವ ಯಾವಾಗ ಬಂದನೋ ಇಲ್ಲಿಗೆ? ನಾ ನೋಡಲೇ ಇಲ್ಲ….” ಮುಕುಂದಯ್ಯ ರೂಢಿಯ ಮಟ್ಟದ ಅಚ್ಚರಿಯನ್ನು ಪ್ರದರ್ಶಿಸಿ, ಧರ್ಮು ಕಡೆಗೆ ತಿರುಗಿ, ಎಚ್ಚರಿಕೆ ಹೇಳಿದನು: “ಇಂವನ್ನ್ಯಾಕೆ ಕರಕೊಂಡು ಬತ್ರಿಯೊ, ಧರ್ಮೂ, ಈ ಮಳೇಲಿ, ಈ ಗಾಳೀಲಿ, ಈ ಕೆಸರಿನಾಗೆ? ಅವನಪ್ಪಯ್ಯ ಎಲ್ಲಾರೂ ಕಂಡರೆ ನಿಂಗೆ ಸಮಾ ಆಗ್ತದೆ!…. ಅವನಿಗೆ ಮೊದಲೇ ಒಡಲ ಜರ ಅಂತಿದ್ರು, ನೀನೀ ಮಳೇಲಿ-ಚಳೀಲಿ ಅವನ್ನ ತಿರುಗಿಸಿದ್ರೆ ಗತಿ? ಮನೀಗೆ ಕರಕೊಂಡು ಹೋಗು ಬೇಗ!….”

“ಮನೇಲಿ…. ಅವನೊಬ್ಬ್ನೇ ಅಂತಾ…. ಅವನವ್ವನೇ ನನ್ನ ಸಂಗಡ ಕಳಿಸ್ತು…. ಮತ್ತೆ…. ಮತ್ತೆ…. ಮತ್ತೆ…. ಮಾವಾ!….” ಹೇಳಲು ಹೆದರಿ ಹೆದರಿ, ಹೇಳಲೋ ಬಿಡಲೋ ಎಂಬಂತೆ ತಡೆದೂ ತಡೆದೂ ಧರ್ಮು ದುಃಖಧ್ವನಿಯಲ್ಲೆ ಶೋಕಮುಖಮುದ್ರೆಯಾಗಿ ಮುಂದುವರಿದನು: “ರಾಮು ತಮ್ಮ…. ಮೊನ್ನೆ…. ಆವೊತ್ತು ಜೋರಾಗಿ ಮಳೆ ಬೀಳ್ತಿತ್ತಲ್ಲಾ ಆವೊತ್ತು…. ಸತ್ತು ಹೋತಂತೆ!…. ನಾವು ಯಾರೂ ನೋಡಲೇ ಇಲ್ಲ! ರಾಮೂನು ನೋಡ್ಲಿಲ್ವಂತೆ…. ಸುಡುಗಾಡಿಗೆ ತಗೊಂಡುಹೋಗಿ ಮಣ್ಣು ಮಾಡಿಬಿಟ್ರಂತೆ!” ನೀರವವಾಗಿ ಅಳತೊಡಗಿದ್ದ ರಾಮುವ ಕಣ್ಣೊರಸುತ್ತಾ “ಛೆ ಪಾಪ! ರಾಮು ಅಳ್ತಾನೇ ಇರ್ತಾನೆ! ಅದಕ್ಕೇ ಅವನವ್ವ ‘ಧರ್ಮೂ, ನೀನಾರೂ ಕರಕೊಂಡು ಹೋಗಿ ಸುಮ್ಮನಿರಿಸಪ್ಪಾ’ ಅಂತಾ ಹೇಳಿ ಕಳಿಸ್ತು….  ಅದಕ್ಕೇ ಕರಕೊಂಡು ಬಂದೆ, ಮಾವಾ!….”

ಶಂಕರಹೆಗ್ಗಡೆಯ ಕೈಕೂಸು ತೀರಿಕೊಂಡ ಸುದ್ದಿ ಮುಕುಂದಯ್ಯನಿಗೂ ಮುಟ್ಟಿತ್ತು. ಆದರೆ ಅದು ಅನಿರೀಕ್ಷಿತವಾಗಿರಲಿಲ್ಲ. ಹಿಂದೆ ಬೆಟ್ಟಳ್ಳಿ ಗಾಡಿಯ ಜೊತೆಯಲ್ಲಿ ದೇವಯ್ಯನೊಡನೆ ಕಲ್ಲೂರು ಗಣಪತಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ, ಗಂಡನೊಡನೆ ನಡೆದುಕೊಂಡು ಬರುತ್ತಿದ್ದ ಸೀತಮ್ಮಹೆಗ್ಗಡಿತಿಯವರ ಕೌಂಕುಳಲ್ಲಿದ್ದ ಆ ಕೂಸನ್ನು ನೋಡಿದಾಗಲೆ ಅವನಿಗೆ ಗೊತ್ತಾಗಿತ್ತು, ಅದು ಈ ಮಳೆಗಾಲ ಕಳೆಯುವುದಿಲ್ಲ ಎಂದು. ದೊಡ್ಡವರ ಬದುಕಿನ ದೊಡ್ಡ ದೊಡ್ಡ ಘಟನೆಗಳ ನಡುವೆ ಆ ಚಿಕ್ಕ ಜೀವ ದಿವಂಗತವಾದದ್ದು ಯಃಕಶ್ಚಿತವಾಗಿದ್ದ ಅಪತ್ರಿಕಾವಾರ‍್ತೆಯಾಗಿತ್ತು. ಇತರರಿಗಿರಲಿ, ತಾಯಿ ತಂದೆಗಳಿಗೂ, ಆ ಜೀವ ತನು ಪಡುತ್ತಿದ್ದ ನಿತ್ಯಕ್ಲೇಶದಿಂದ ಪಾರಾದದ್ದು ಒಂದು ಹಿತಸಂಗತಿಯೆ ಆಗಿತ್ತು. ಆದರೆ ಆ ಶಿಶುಮರಣ ಘಟನೆಯ ನಿಜಮೌಲ್ಯ ಹೃದಯಸ್ಯಂದಿ ಯಾಗಿದ್ದುದು ಈ ಮಕ್ಕಳಿಗೆ ಮಾತ್ರ-ರಾಮುಗೆ ಮತ್ತು ಧರ್ಮುಗೆ!

‘ನಡೆಯುತ್ತಿರುತ್ತವೆ ಹೀಗೆ ಘಟನಾಪರಂಪರೆ. ಕೆಲವು ಕಣ್ಣಿಗೆ ಬೀಳುತ್ತವೆ; ಕೆಲವಂತೂ ಗಮನಕ್ಕೂ ಬರುವುದಿಲ್ಲ.’ ತನ್ನೊಳಗೆ ತಾನು ಹೇಳಿಕೊಳ್ಳುತ್ತಿದ್ದ ಮುಕುಂದಯ್ಯ, ಮಳೆ ಸಣ್ಣಗೆ ಶುರುವಾಗುತ್ತಿದ್ದುದನ್ನು ಗಮನಿಸಿ, ಕೈಲಿದ್ದ ಕೊಡೆಯನ್ನು ಬಿಚ್ಚುತ್ತಾ, ಮುದ್ದುಮಾಡುವ ದನಿಯಿಂದ ಹೇಳಿದನು: “ಮಳೆ ಬರಕ್ಕೆ ಸುರುವಾಯ್ತು…. ಅಳಬೇಡ, ರಾಮು…. ಬೇಗ ಮನೀಗೆ ಹೋಗಿ.”

ಧರ್ಮು ರಾಮುವನ್ನು ಕೈಹಿಡಿದುಕೊಂಡೆ ಕುಕ್ಕೋಟದಿಂದ ಮನೆಯ ಕಡೆಗೆ ಓಡಿದನು. ಸ್ವಲ್ಪಹೊತ್ತು ನಿಂತಿದ್ದ ಮದ್ದಳೆಯ ಮತ್ತು ವಾಲಗದ ಸದ್ದು ಮತ್ತೆ ಉಕ್ಕಿ ಕೇಳಿಬರತೊಡಗಿತ್ತು. ಮುಕುಂದಯ್ಯ ಸಸಿನೆಟ್ಟಿ ಮಾಡಿದ್ದ ಗದ್ದೆಕೋಗಿನಲ್ಲಿ ಅಂಚಿನಿಂದ ಅಂಚಿಗೆ ನಡೆಯುತ್ತಾ ಹೂವಳ್ಳಿಗೆ ಹೊರಟಿದ್ದನು….

ಹೂವಳ್ಳಿಯ ಮದುವೆ ನಿಂತುದಕ್ಕೂ ಚಿನ್ನಮ್ಮ ಕಾಣೆಯಾದುದಕ್ಕೂ ತನ್ನ ತಮ್ಮನೆ ಕಾರಣ ಎಂದು ಸ್ಪಷ್ಟವಾಗಿ ಗೊತ್ತಾದ ಮೇಲೆ, ಕೋಣೂರು ರಂಗಪ್ಪಗೌಡರು ಮುಕುಂದಯ್ಯ ತಮ್ಮ ಮನೆತನಕ್ಕೇ ಕೆಟ್ಟ ಹೆಸರು ತಂದಿಟ್ಟನೆಂದು ಕುಪಿತರಾದರು. ಹಾಗೆ ಹೆಣ್ಣನ್ನು ಹಾರಿಸಿಕೊಂಡು ಹೋಗುವುದು ಹೊಲೆಯರು ಗಟ್ಟದ ತಗ್ಗಿನವರು ಮೊದಲಾದ ಕೀಳು ಜನಕ್ಕೆ ಹೇಳಿಸಿದ್ದಲ್ಲದೆ ತಮ್ಮಂಥ ಉತ್ತಮ ಜಾತಿಯ ಶ್ರೇಷ್ಠ ಕುಲದವರಿಗೆ ಅತ್ಯಂತ ಅವಮಾನಕರವಾದ ಹೇಯಕಾರ್ಯ ಎಂಬುದು ಅವರ ಮತವಾಗಿತ್ತು. ಅದರಲ್ಲಿಯೂ ಹಾಗೆ ಮದುವೆಯಾಗುವ ಮುನ್ನ, ಮತ್ತೊಬ್ಬ ಗಂಡಸಿನೊಡನೆ ಓಡಿಹೋಗುವ ಹೆಂಗಸಂತೂ ಖಂಡಿತವಾಗಿಯೂ ಗರತಿಯಾಗಿರಲು ಯೋಗ್ಯಳೇ ಅಲ್ಲ: ಅಂಥವಳೊಡನೆ ಸಂಸಾರ ಮಾಡುವುದೂ ಒಂದೇ, ಸೂಳೆ ಕಟ್ಟಿಕೊಳ್ಳುವುದೂ ಒಂದೇ; ಎಂದು ಜಿಗುಪ್ಸೆಪಟ್ಟುಕೊಂಡಿತ್ತು. ಅವರ ಮನೆತನಸ್ತಿಕೆ! ‘ತಮ್ಮ ಮನೆಗೆ ಆ ಹೆಣ್ಣನ್ನು ತಂದುಕೊಳ್ಳುವುದು ಎಂದಿಗೂ ಸಾಧ್ಯವಿಲ್ಲ’ ಎಂದುಬಿಟ್ಟರು. ‘ತಮ್ಮನೇನಾದರೂ ಹಟಹಿಡಿದು ಆ ಹೆಣ್ಣನ್ನೆ ಮದುವೆಯಾಗಬೇಕು ಎಂದರೆ, ಅವನು ತನ್ನ ಪಾಲು ತೆಗೆದುಕೊಂಡು ಬೇರೆ ಹೋಗಿ, ಆಮೇಲೆ ಏನೂ ಬೇಕಾದರೂ ಮಾಡಿ ಕೊಳ್ಳಲಿ!”

ಆದರೆ ಅವರ ತಯಿ, ಕಾಗಿನಹಳ್ಳಿ ಅಮ್ಮ ಎಂದು ಮಾತ್ರವೆ ಎಲ್ಲರಿಗೂ ಗೊತ್ತಿದ್ದ ದಾನಮ್ಮ ಹೆಗ್ಗಡಿತಿಯವರು, ತಮ್ಮ ಕಿರಿಯ ಮಗನ ಪರವಾಗಿ ಹಿರಿಯ ಮಗನೊಡನೆ ನಾನಾ ರೀತಿಯಿಂದ ವಾದಿಸಿ, ಮನೆ ಪಾಲಾಗುವುದನ್ನೂ ಮುಕುಂದಯ್ಯ ಬೇರೆ ಹೋಗುವುದನ್ನೂ ವಿರೋಧಿಸಿದ್ದರು. ಐಗಳು ಅನಂತಯ್ಯ ತಮ್ಮ ಮುದಿತಾಯನ್ನು ನೋಡಿಕೊಂಡು ಬರಲು ಗಟ್ಟದ ಕೆಳಗೆ ಹೋದವರು ಹಿಂದಿರುಗಿ ಬರುವವರೆಗೂ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ತಡೆಹಿಡಿಯಬೇಕೆಂದು ಸಂಬಂಧಪಟ್ಟ ಎಲ್ಲರ ನಡುವೆಯೂ ಒಂದು ಒಪ್ಪಂದವಾಯಿತು. ಏಕೆಂದರೆ, ಐಗಳು ಕೋಣೂರು ಮನೆಯ ಉಪ್ಪು ಅನ್ನ ತಿಂದು ಸಂಬಳ ತೆಗೆದುಕೊಳ್ಳುವ ಒಬ್ಬ ನೌಕರನ ಸ್ಥಾನದಲ್ಲಿದ್ದರೂ, ತಮ್ಮ ವಿರ್ಶವಾಸಪೂರ್ವಕವಾದ ನಡತೆ, ನಿಷ್ಪಕ್ಷಪಾತ ವರ್ತನೆ, ಸರ್ವರ ಹಿತಚಿಂತನೆ, ಉಪಕಾರ ಬುದ್ಧಿ, ತಮ್ಮನ್ನೆ ನಿರ್ಲಕ್ಷಿಸಿಕೊಳ್ಳುವಷ್ಟರಮಟ್ಟಿನ ಪರಹಿತಾಸಕ್ತಿ, ಎಲ್ಲಕ್ಕಿಂತಲೂ ಹೆಚ್ಚಾಗಿ, ಭಾರತ ರಾಮಾಯಣ ಭಾಗವತಗಳನ್ನು ರಾಗವಾಗಿ ಓದಿ ಹೇಳಿ, ಮನರಂಜನೆಯ ವಿಧಾನದಿಂದಲೆ, ಧರ‍್ಮದಲ್ಲಿ ಪೂಜ್ಯಬುದ್ಧಿಯುಂತಾಗುವಂತೆ ಹೃದಯವನ್ನರಳಿಸಿ ಧ್ಯೇಯದತ್ತ ಆಕರ್ಷಿಸುವ ಒಂದು ಗುರೂಪದೇಶ ಸಾಮರ್ಥ್ಯ ಇವುಗಳಿಂದ ಅವರು ಮನೆಯವರೆಲ್ಲರ ಪ್ರೀತಿ, ಗೌರವ, ನಂಬುಗೆಗಳಿಗೆ ಪಾತ್ರರಾಗಿದ್ದರು.

ಆದರೆ ಐಗಳು ಕೋಣೂರಿಗೆ ಹಿಂತಿರುಗಿ ಬರುವ ತನಕ ಹೂವಳ್ಳಿಯ ಗದ್ದೆ ತೋಟಗಳ ಬೇಸಾಯ ತಡೆದಿರುವುದಕ್ಕಾಗುತ್ತದೆಯೇ? ಆಗಲಿ ಮಳೆಗಾಲ ಪ್ರಾರಂಭವಾಗಿ ಮುಂಬರಿದಿತ್ತು. ಇತರರ ಎಲ್ಲ ಗದ್ದೆಕೋಗುಗಳೂ ಹೊಸದಾಗಿ ನಟ್ಟಿ ಮಾಡಿದ ಬಿಳಿಚುಹಸುರು ಸಸಿಗಳಿಂದ ಶೋಭಿಸತೊಡಗಿದ್ದುವು; ನಟ್ಟಿ ಸ್ವಲ್ಪ ತಡವಾದ ಗದ್ದೆಗಳಲ್ಲಿಯೂ ಆ ಕೆಲಸದಲ್ಲಿ ತೊಡಗಿದ್ದ ಕಂಬಳಿಕೊಪ್ಪೆಗಳೂ ಗೊರಬುಗಳೂ ಸಶಬ್ದ ಸಂಭ್ರಮದಿಂದ ಸಚಲವಾಗಿದ್ದುವು.

ಮೊದಲೇ ಸಾಲದ ದವಡೆಯಲ್ಲಿದ್ದ ಹೂವಳ್ಳಿಯ ಆಸ್ತಿ, ಈ ವರ್ಷದ ಗದ್ದೆ ತೋಟಗಳ ಬೇಸಾಯವೂ ನಿಂತು ಹೋಗುವ ಪಕ್ಷದಲ್ಲಿ, ಮುಂದಿನ ವರ್ಷ ಏನೂ ಉಳಿಯದೆ ಕರಗುವುದರಲ್ಲಿ ಸಂದೇಹವಿರಲಿಲ್ಲ. ಕಡೆಗೆ ಮನೆಯವರಿಗೆ ಉಣ್ಣುವುದಕ್ಕಾದರೂ ಒಂದಷ್ಟು ಬತ್ತ ಬೆಳೆಯದಿದ್ದರೆ ಏನು ಗತಿ? ಚಿನ್ನಮ್ಮ ನಾಗಕ್ಕ ಇಬ್ಬರೂ ಕೋಲುಗರಟ ಹಿಡಿಯಬೇಕಾಗುತ್ತದೆ, ಇಲ್ಲವೆ ಗಟ್ಟದ ತಗ್ಗಿನವರಂತೆ ಯಾರಾದರೂ ಮನೆಯ ಆಳಾಗಿ ಕೂಲಿ ಮಾಡಿ ಅಜ್ಜಿಗೂ ತಮಗೂ ಹೊಟ್ಟೆಬಟ್ಟೆಗೆ ಬೇಕಾಗುವಷ್ಟನ್ನಾದರೂ ಸಂಪಾದಿಸಬೇಕಾಗುತ್ತದೆ.

ಒಗತನದಲ್ಲಿ ಗಟ್ಟಿಗಿತ್ತಿಯಾಗಿದ್ದ ನಾಗಕ್ಕ ಇದನ್ನೆಲ್ಲ ಅಜ್ಜಿಯೊಡನೆ ಆಲೋಚಿಸಿ, ತಾನೇ ಹೊಣೆ ಹೊರಲು ಗಟ್ಟಿ ಮನಸ್ಸು ಮಾಡಿದಳು. ಸುಬ್ಬಿ ಬೈರ ಮೊದಲಾದ ಹೂಬಳ್ಳಿಯ ಜೀತದಾಳುಗಳ ಜೊತೆಗೆ ಹಳೆಮನೆ ಕೋಣೂರಿನಂತಹ ಹತ್ತಿರದ ಮನೆಗಳಲ್ಲಿರುವ ಕೂಲಿಯಾಳುಗಳನ್ನೂ ಸಹಾಯಕ್ಕೆ ಕರೆದುಕೊಳ್ಳುವ ಹಂಚಿಕೆ ಮಾಡಿದ್ದಳು.

ಮಲೆಯ ನೆತ್ತಿಯಿಂದ ಮನೆಗೆ ಹಿಂದಿರುಗಿದ್ದ ಮದುಮಗಳು ಚಿನ್ಮಮ್ನ ಸ್ವಭಾವದಲ್ಲಿ ಕ್ರಾಂತಿಸ್ವರೂಪದ ಪರಿವರ್ತನೆಯಾಗಿತ್ತು. ಮಾತುಕತೆ ನಡತೆಗಳಲ್ಲಿ ಹಿಂದಿನ ಆಟಗುಳಿ ಹುಡುಗಿ ಕಾಣುತ್ತಿರಲಿಲ್ಲ. ಅಜ್ಜಿಯ ಸೇವಾ ಶುಶ್ರೂಷೆಗಳಲ್ಲಿ ಹಿಂದೆ ಇದ್ದಂತೆಯೆ ಪ್ರೀತ್ಯಾಸಕ್ತಿ ತೋರುತ್ತಿದ್ದಿತಾದರೂ ಅಂದಿನ ಮನೋಲಘುತ್ವ ಇರಲಿಲ್ಲ. ನಾಗಕ್ಕನ ಮೇಲಣ ಅಕ್ಕರೆ ಮೊದಲಿಗಿಂತಲೂ ಕಡಿಮೆಯಾಗಿರಲಿಲ್ಲ. ಆದರೆ ವ್ಯವಹಾರದಲ್ಲಿ ಎದ್ದು ಕಾಣತೊಡಗಿತ್ತು, ಚಿಂತಾ ಮಗ್ನತೆ ಮತ್ತು ಗಾಂಭೀರ್ಯ. ತನ್ನಿಂದಾಗಿ ತಮ್ಮ ಮನೆಗೂ ಮನೆತನಕ್ಕೂ ಒದಗಿದ ಆರ್ಥಿಕ, ಸಮಾಜಿಕ ಮತ್ತು ಲೌಕಿಕವಾದ ಪರಿಸ್ಥಿತಿ ಅವಳಿಗೆ ಪೂರ್ಣವಾಗಿ ಅರ್ಥವಾಗಿತ್ತು. ತನ್ನ ಸ್ವಂತ ಶೀಲದ ವಿಚಾರವಾಗಿಯೂ ಬಂಧು ಬಾಂಧವರಲ್ಲಿ ಮತ್ತು ಜನಸಾಮಾನ್ಯರಲ್ಲಿ ಎಂತಹ ಅನುದಾರಭಾವನೆಗಳು ಪ್ರಚಲಿತವಾಗಿದ್ದುವೆಂಬುದೂ ಅವಳಿಗೆ ತಿಳಿದಿತ್ತು. ತನ್ನ ವಿಷಯಕವಾದ ಅಪನಿಂದೆಗೆ ಅವಳು ನೊಂದುಕೊಂಡಿದ್ದುದಕ್ಕಿಂತಲೂ ಹೆಚ್ಚಾಗಿ ತನ್ನೊಡನೆ ಹೇಗೆ ಬೇಕಾದರೂ ಹಾಗೆ ವರ್ತಿಸಬಹುದಾಗಿದ್ದ ಸದವಕಾಶದಲ್ಲಿಯೂ ಅತ್ಯಂತ ಸಭ್ಯ ಸಹಜವಾದ ಲಜ್ಜಾಮರ್ಯಾದೆಗಳಿಂದ ದೂರದೂರವಾಗಿದ್ದುಕೊಂಡೆ ನಡೆದುಕೊಂಡಿದ್ದ ತನ್ನ ಮುಕುಂದಬಾವನ ಮೇಲೆ ಬಂದಿದ್ದ ಅಪವಾದಕ್ಕೆ ಅವಳು ಕುಗ್ಗಿಹೋಗಿದ್ದಳು. ಕೋಣೂರು ಮನೆಯಲ್ಲಿ ಅಣ್ಣ ತಮ್ಮಂದಿರೊಳಗೆ ನಡೆಯುತ್ತಿದ್ದ ಹಿಸ್ಸೆಯ ಗಲಿಬಿಲಿ, ಸಿಂಬಾವಿ ಭರಮೈಹೆಗ್ಗಡೆಯವರು ಹೇಳುತ್ತಿದ್ದರೆಂದು ಅವರಿವರು ಹೇಳುತ್ತಿದ್ದ ಪ್ರತೀಕಾರದ ಸುದ್ದಿ, ಸಿಂಬಾವಿ ಮತ್ತು ಹಳೆಮನೆಯ ಲಗ್ನಗಳು ಮಿಂಚಿನ ವೇಗದಲ್ಲಿ ನಡೆದಿದ್ದ ರೀತಿ ಮತ್ತು ಅದರಿಂದ ತನಗೂ ಮುಕುಂದ ಬಾವನಿಗೂ ಸಂಭವಿಸಬಹುದಾದ ಪರಿಣಾಮ ಇವುಗಳನ್ನು ನೆನೆದಾಗಲೆಲ್ಲ ಚಿನ್ನಮ್ಮನ ಹೃದಯದಲ್ಲಿ ಏನೋ ನಿರಕಾರವಾದ ದಿಗಿಲು ಸಂಚರಿಸುತ್ತಿತ್ತು.

ಮುಕುಂದಯ್ಯ ಹೂವಳ್ಳಿಗೆ ಮತ್ತೆ ಮತ್ತೆ ಬಂದು ವಿಚಾರಿಸಿಕೊಳ್ಳುತ್ತಿದ್ದುದು ಚಿನ್ನಮ್ಮನಿಗೆ ತುಂಬ ಹಿಗ್ಗಿನ ವಿಷಯವಾಗಿದ್ದರೂ ಯಾರು ಏನು ಅಂದುಕೊಳ್ಳುತ್ತಾರೊ? ಮತ್ತೆ ಏನನ್ನು ಹುಟ್ಟಿಸಿ ಹೇಳುತ್ತಾರೊ? ಎಂದು ಅವಳಿಗೆ ಅಂಜಿಕೆಯಾಗುತ್ತಿತ್ತು. ಅವಳ ಮನಸ್ಸಿನ ಫಜೀತಿಯನ್ನರಿತು ಮುಕುಂದಯ್ಯ ಎಲ್ಲಿಯಾದರೂ ಒಂದೆರಡು ದಿನ ಹೂವಳ್ಳಿಗೆ ಬರದೆ ನಿಂತು ಬಿಟ್ಟರಂತೂ ಚಿನ್ನಮ್ಮನ ಅಂಜಿಕೆ ವಿಷಮಸ್ಥಿತಿಗೇರುತ್ತಿತ್ತು, ಬಾವ ತನ್ನನ್ನೆಲ್ಲಿ ಮರೆತುಬಿಡುತ್ತಾರೊ ಎಂದು! ಮುಕುಂದಯ್ಯ ಗಂಡಸು; ಅವನ ಪೂರ್ವಚರಿತ್ರೆ ಏನೆ ಇರಲಿ ಅದನ್ನು ಸಮಾಜ ಲೆಕ್ಕಿಸುವುದಿಲ್ಲ; ಯಾರು ಬೇಕಾದರೂ ಹೆಣ್ಣು ಕೊಡುತ್ತಾರೆ. ಆದರೆ ತನು ಹೆಣ್ಣು; ತನ್ನನ್ನು ಮುಕುಂದಯ್ಯ ಕೈಬಿಡುವ ಪಕ್ಷದಲ್ಲಿ ಲೋಕವೆ ಕೈ ಬಿಟ್ಟಂತೆ; ತನಗಿನ್ನು ಬಾಳ್ವೆ ಎಂಬುದಿಲ್ಲ- ಈ ಭಾವನೆ ಅವಳಲ್ಲಿ ಆಲೋಚನಾ ಸ್ಪಷ್ಟವಾಗಿತ್ತೆಂದಲ್ಲ; ಅವಳ ಭೀತಿಯ ಅಂತರಾಳದಲ್ಲಿ ಅದಕ್ಕೆ ಆಧಾರಭೂತವಾಗಿತ್ತು!

ಒಂದು ಹಗಲು ಮಳೆ ಹೊಳವಾಗಿದ್ದಾಗ ಚಿನ್ನಮ್ಮ ಹೊರ ಅಂಗಳದ ಬಯಲಿನಲ್ಲಿ ಸುಬ್ಬಿಯೊಡನೆ ಯಾವುದೊ ಕೆಲಸದ ವಿಚಾರವಾಗಿ ಸಲಹೆ ಕೊಡುತ್ತಾ ನಿಂತಿದ್ದಾಗ ಮುಕುಂದಯ್ಯ ಎಂದಿನಂತೆ ಕೋಣೂರಿನಿಂದ ಹೂವಳ್ಳಿಗೆ ಬಂದನು. ಆ ಅಂಗಳದ ಬಯಲು ಬೆಳಕಿನಲ್ಲಿ ಚಿನ್ನಮ್ಮನನ್ನು ನೋಡಿ ಅವನಿಗೆ ಗಾಬರಿಯಾಯಿತು. ಹುಲಿಕಲ್ಲಿನ ನೆತ್ತಿಯಲ್ಲಿ ತಾನು ಕಂಡಿದ್ದ ಸುಪುಷ್ಪ, ಸುದೃಢ, ಸುಂದರ ಕಾಯದ ಹುಡುಗಿ ತುಂಬ ಕೃಶಳಾಗಿದ್ದಂತೆ ತೋರಿದಳು. ಉಟ್ಟಿದ್ದ ಸೀರೆಯ ಮಾಲಿನ್ಯದಂತೆಯೆ ಮುಖದ ಕಳೆಯೂ ಕೆಟ್ಟಿತ್ತು. ಅವಳನ್ನು ಇತ್ತೀಚೆಗೆ ಯಾವಾಗಲೂ ಮನೆಯ ಒಳಗಣ ಮಬ್ಬು ಬೆಳಕಿನಲ್ಲಿಯೆ ನೋಡುತ್ತಿದ್ದುದರಿಂದ ಅವಳಲ್ಲಿ ಉಂತಾಗಿದ್ದ ಈ ಶಾರೀರಕ ಪರಿವರ್ತನೆ ಮುಕುಂದಯ್ಯನಿಗೆ ದೃಗ್ಗೋಚರವಾಗಲು ಅವಕಾಶ ದೊರಕಿರಲಿಲ್ಲ. ಈಗ ಅದನ್ನು ಕಂಡು ಅವನಿಗೆ ದಿಗಿಲಾಯಿತು. ಯಾವುದೊ ಕೊರಗು ಮನಸ್ಸನ್ನು ಕೊರೆಯುತ್ತಿರುವುದರಿಂದಲೆ ಅವಳು ಹಾಗಾಗಿರಬೇಕು ಎಂದು ನಿಶ್ಚಯಿಸಿದ ಮುಕುಂದಯ್ಯ ನೇರವಾಗಿ ಅವಳನ್ನು ಸಮೀಪಿಸಿದನು. ಅವಳು ಅವನನ್ನು ಕಂಡು ಮುಗುಳುನಗೆಯಿಂದ ಸ್ವಾಗತಿಸಿದ್ದರೂ ಅವನು ಹತ್ತಿರ ಬಂದಾಗ ತಲೆಬಾಗಿ ನಿಂತಳು. ಅವನನ್ನು ತಲೆಯೆತ್ತಿ ನೋಡುವ ಆಶೆಯಿದ್ದರೂ ಅವಳಿಗೆ ಹಾಗೆ ಮಾಡಲಾಗಲಿಲ್ಲ. ಅದನ್ನರಿತ ಸುಬ್ಬಿ, ಚಿನ್ನಕ್ಕ ತನಗೆ ಹೇಳಿದ್ದ ಕೆಲಸಕ್ಕೆ ಹೋಗುವಂತೆ, ಬೇಗಬೇಗನೆ ಅಲ್ಲಿಂದ ಹೋದಳು:

“ಯಾಕೆ, ಚಿನ್ನೀ, ಹುಷಾರಿಲ್ಲೇನು? ಬಹಳ ಇಳಿದು ಹೋಗಿದ್ದೀಯಲ್ಲಾ!” ಪಿಸುಮಾತಿನ ಸಣ್ಣದನಿಯಲ್ಲಿತ್ತು ಆ ಪ್ರಶ್ನೆ.

ಮುಕುಂದಯ್ಯನ ಅಕ್ಕರೆಯ ಪ್ರಶ್ನೆಗೆ ಚಿನ್ನಮ್ಮ ಉತ್ತರ ಹೇಳಲೂ ಇಲ್ಲ; ತಲೆಯೆತ್ತಲೂ ಇಲ್ಲ. ಆದರೆ ಅವಳು ಜೋರಾಗಿ ಉಸಿರೆಳೆದುಕೊಳ್ಳುತ್ತಿದ್ದುದೂ ಗೊಬ್ಬೆ ಸೆರಗು ಬಿಗಿಯಾಗಿ ಕಟ್ಟಿದ್ದ ಅವಳ ಎದೆ ಏದುತ್ತಿರುವಂತೆ ಮೇಲಕ್ಕೂ ಕೆಳಕ್ಕೂ ಉಬ್ಬಿ ಇಳಿಯುತ್ತಿದ್ದುದೂ ಅವಳು ಪ್ರಬಲ ಭಾವವಶಳಾದುದನ್ನು ಘೋಷಿಸುವಂತಿತ್ತು. ಮುಕುಂದಯ್ಯ ನೋಡುತ್ತಿದ್ದ ಹಾಗೆಯೆ ತಲೆ ಬಾಗಿದ್ದ ಅವಳ ಕಣ್ಣುಗಳಿಂದ ಹನಿಗಳು ಬಳಬಳನೆ ನೇರವಾಗಿ ನೆಲಕ್ಕೇ ಬಿದ್ದುವು!

ತಾನೂ ಭಾವವಶನಾಗುತ್ತಿರುವಂತೆ ಅನುಭವವಾಯಿತು ಮುಕುಂದಯ್ಯಗೆ. ಸಮಭಾವ ಮಹಿಮೆಯಿಂದ ಐಕ್ಯಗೊಂಡ ಆ ಪ್ರಣಯಿ ಹೃದಯಗಳು ತಮ್ಮ ಅಂತಃಕರಣದ ಆಲೋಚನೆಗಳನ್ನೂ ಪರಸ್ಪರ ಅರ್ಥಮಾಡಿಕೊಂಡುವೊ ಏನೋ?

“ಚಿನ್ನೀ, ಒಳಗೆ ಹೋಗಾನ ಬಾ.” ಗದ್ಗದವಾಗುತ್ತಿದ್ದ ಕಂಠದಿಂದಲೆ ಹೇಳಿದನು ಮುಕುಂದಯ್ಯ “ನಿನ್ನೊಬ್ಬಳ ಹತ್ತಿರಾನೆ ಮಾತಾಡಬೇಕಾಗಿದೆ….”

ಸರಸರನೆ ಮನೆಯೊಳಗೆ ನಡೆದ ಮುಕುಂದಬಾವನನ್ನು ಸೂತ್ರಗೊಂಬೆಯಂತೆ ಅನುಸರಿಸಿದಳು ಚಿನ್ನಮ್ಮ.

“ಬಾವ ಏನೋ ಮಾತಾಡಬೇಕಂತೆ ನನ್ನ ಹತ್ರ.” ತನಗೆ ದಿರಾದ ನಾಗಕ್ಕಗೆ ಹೇಳಿ, ಚಿನ್ನಮ್ಮ ಕೋಣೆಯ ಬಾಗಿಲು ತೆರೆದಳು; ತನ್ನ ಹಿಂದೆ ನಿಂತಿದ್ದ ಮುಕುಂದಯ್ಯನನ್ನು ಕಣ್ಣಿಂದಲೆ ಕರೆಯುವಂತೆ ನೋಡಿ, ಒಳಕ್ಕೆ ದಾಟಿದಳು.

ನಾಗಕ್ಕಗೂ ಅದನ್ನು ಕೇಳಿ ತುಂಬ ಸಂತೋಷವಾಯಿತು; ಮನಸ್ಸಿಗೆ ಸಮಾಧಾನವಾಯಿತು. ಯಾವುದೋ ಚಿಂತೆಯಿಂದಲೋ? ಅಭ್ಯಾಸವಿಲ್ಲದ ಸಾಹಸ ಪ್ರಯಾಣವನ್ನು ಕೈಕೊಂಡ ಅತಿ ಅಯಾಸದ ಕಾರಣವಾಗಿಯೋ? ಅಥವಾ ಆ ಉದ್ಯಮದಲ್ಲಿಯೆ ಆಕೆ ಅನುಭವಿಸಿದ್ದ ಹೃದಯಕ್ಷೋಭೆ ಮತ್ತು ಚಿತ್ತೋದ್ವೇಗಗಳ ದೆಸೆಯಿಂದಲೋ? ಚಿನ್ನಮ್ಮ, ಅವಳ ತಂದೆಯ ಮರಣಾನಂತರ, ಹುಲಿಕಲ್ಲು ನೆತ್ತಿಗೆ ಏರಿದ ಮರುದಿನವೆ ಮತ್ತೆ ಇಳಿದು ಮನೆಗೆ ಮರಳಿದ ಮೇಲೆ, ದಿನ ಕ್ರಮೇಣ ಇಳಿದುಹೋಗುತ್ತಿದ್ದುದನ್ನೂ ಹೆಚ್ಚು ಹೆಚ್ಚು ಮೌನಿಯಾಗುತ್ತಿದ್ದುದನ್ನೂ ತಾನೊಬ್ಬಳೆ ಕುಳಿತು ಬಹಳ ಹೊತ್ತು ಧೇನಿಸುತ್ತಿದ್ದುನ್ನೂ ಗಮನಿಸಿ ನಾಗಕ್ಕ ಸಂಕಟಪಟ್ಟುಕೊಂಡಿದ್ದಳು. ಅದಕ್ಕೆ ಕಾರಣವನ್ನು ತಿಳಿಯಲೂ ಅದನ್ನು ಶಮನಗೊಳಿಸಲೂ ಅವಳು ಮಾಡಿದ್ದ ಪ್ರಯತ್ನ ಫಲಕಾರಿಯಾಗಲಿಲ್ಲ. ಅದನ್ನು ಕುರಿತು ಮುಕುಂದಯ್ಯ ನೊಡನೆಯೂ ಇಂಗಿತವಾಗಿ ಪ್ರಸ್ತಾಪಿಸಿ, ತನ್ನಂತಹ ಹೆಂಗಸು ಮರ್ಯಾದೆಯ ಮಟ್ಟದಲ್ಲಿ ಮಾನವಾಗಿ ಸೂಚಿಸಬಹುದಾದಷ್ಟನ್ನು ಪರಿಹಾರೋಪಾಯವಾಗಿ ಸೂಚಿಸಿದ್ದಳು. ಆದರೆ ಮುಕುಂದಯ್ಯನ ಸಂಪ್ರದಾಯ ನೀತಿಪ್ರಜ್ಞೆ ಅದನ್ನು ಒಪ್ಪಿಕೊಳ್ಳಲಿಲ್ಲವೋ? ಅಥವಾ ಅವನ ಗ್ರಾಮೀಣ ಸರಳಸ್ವಭಾವದ ಯೌವನಕ್ಕೆ ಅದು ಅರ್ಥವಾಗಲಿಲ್ಲವೋ? ಅಥವಾ ನಿರಾಧಾರವೂ ಅನ್ಯಾಯವೂ ಆಗಿದ್ದ, ತಮ್ಮಿಬ್ಬರ ಸಂಬಂಧ ವಿಚಾರವಾದ, ಕುತ್ಸಿತ ಜನಾಪವಾದಕ್ಕೆ ತಮ್ಮ ಶುಚಿ ವರ್ತನೆಯನ್ನೆ ತಿರಸ್ಕಾರದ ಸಮ್ಮಾರ್ಜನಿಯನ್ನಾಗಿ ಪ್ರಯೋಗಿಸಿ ತೋರಿಸಬೇಕೆಂಬ ಅವನ ಛಲಕ್ಕೆ ಹಿಡಿಸಲಿಲ್ಲವೋ? ಅಂತೂ ಅವಳ ಸೂಚನೆ ಅದುವರೆಗೂ ಸಫಲವಾಗಿರಲಿಲ್ಲ. ಈಗ ಚಿನ್ನಮ್ಮನೊಡನೆ ಮುಕುಂದಯ್ಯ ಏಕಾಂತವಾಗಿ ಮಾತನಾಡುವ ಸಂದರ್ಭದಲ್ಲಿಯಾದರೂ ತನ್ನ ಆ ಮನೋರಥ ಕೈಗೂಡಬಹುದೆಂದು ನಾಗಕ್ಕನ ಹೃದಯ ಹರ್ಷಿತವಾಯಿತು. ಆದ್ದರಿಂದಲೆ ಚಿನ್ನಮ್ಮನನ್ನು ಹಿಂಬಾಲಿಸಿದ್ದ ಮುಕುಂದಯ್ಯನ ಬೆನ್ನುಮರೆಯಾಗಿ, ಕೋಣೆಯ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಂಡುದನ್ನು ಕಂಡು ಅವಳು, ಎದೆಸವಿಗೆ ಮಂದಸ್ಮಿತೆಯಾಗಿ ಅಡುಗೆಮನೆಗೆ ಹೋದಳು, ಏನಾದರೂ ಸಿಹಿ ತಯಾರಿಸಬೇಕೆಂದು ಸಂಕಲ್ಪಿಸಿ.

ನಾಗಕ್ಕನ ಮನೋರಥವೇನೋ ಕೈಗೂಡಿತು; ಆದರೆ ಅಳು ಊಹಿಸಿದ ಅಥವಾ ಅಪೇಕ್ಷಿಸಿದ ರೀತಿಯಿಂದ ಅದು ನಡೆಯಲಿಲ್ಲ.

ಮುಕುಂದಯ್ಯ ಮಂಚದ ಮೇಲೆ ಅವನ ರೂಢಿಯಂತೆ ತನಗೆ ದೂರವಾಗಿಯೆ ಕುಳಿತುಕೊಳ್ಳುತ್ತಾನೆಂದು ನಿರೀಕ್ಷಿಸಿ ಚಿನ್ನಮ್ಮ ಅದರ ತಲೆದಿಸಿ ಪಕ್ಕದಲ್ಲಿದ್ದ ಪಿಟಾರಿಯ ಬಳಿ ನಿಂತಳು. ಆದರೆ, ಎಂದಿನಂತಲ್ಲದೆ ಇಂದು, ಅವನು ಅವಳ ಬಳಿಗೇ ಬಂದು ಪಿಟಾರಿಯ ಮೇಲೆಯೇ ಕುಳಿತುಕೊಂಡುದನ್ನು ಕಂಡು, ಅವಳಿಗೆ ಅಚ್ಚರಿಯೊಡನೆ ಆನಂದವೂ ಆಯಿತು. ಆದರೂ ಸ್ವಾಭಾವಿಕ ಸಂಕೋಚದಿಂದ ದೂರ ಸರಿಯಲು ಪ್ರಯತ್ನಿಸಿದಾಗ ಅವಳಿಗೆ ಗೊತ್ತಾಯಿತು, ಹಾಗೆ ಸರಿಯಲು ಅಲ್ಲಿ ಜಾಗವೇ ಇರಲಿಲ್ಲ.

“ಎಲ್ಲಿಗೆ ಹೋಗ್ತಿಯ, ಚಿನ್ನಿ, ಎಲ್ಲೇ ಬಾ, ಕೂತುಕೋ.” ಮುಕುಂದಯ್ಯ ಪಿಟಾರಿಯ ಮೇಲೆ ತನ್ನ ಪಕ್ಕದಲ್ಲಿದ್ದ ಸ್ಥಳಕ್ಕೆ ಆಹ್ವಾನಿಸಿದನು.

ಚಿನ್ನಮ್ಮ ಬಾವನ ಆ ಆಹ್ವಾನಕ್ಕೆ ಅಪೂರ್ವ ಲಜ್ಜೆಯನ್ನು ಅನುಭವಿಸುತ್ತಾ, ನಿಂತಲ್ಲಿಂದ ಕದಲಲಿಲ್ಲ. ಅವಳಿಗೆ ಅದು ಸಂತೋಷಪ್ರದವಾಗಿದ್ದರೂ ನಂಬಲಾರದಷ್ಟು ವಿನೂತನವಾಗಿ ತೋರಿತ್ತು.

“ನೀನು ಯಾಕೆ ಇಷ್ಟು ಇಳಿದುಹೋಗಿದ್ದೀಯಲ್ಲಾ? ಏನೋ ಕೊರಗು ಹಚ್ಚಿಕೊಂಡಿದ್ದೀಯ ಮನಸ್ಸಿಗೆ!” ಮುಕುಂದಯ್ಯ ಪ್ರಾರಂಭಿಸಿದನು. ಅವಳನ್ನು ತನ್ನ ಪಕ್ಕದಲ್ಲಿ ಕೂರಲು ಬಲಾತ್ಕರಿಸಲಿಲ್ಲ.

ಮೊದಮೊದಲು ಚಿನ್ನಮ್ಮನ ಬಾಯಿಂದ ಮಾತೇ ಹೊರಡಲಿಲ್ಲ; ಬದಲಾಗಿ ಕಣ್ಣಿರುಗರೆಯುತ್ತಾ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಆ ಕೋಣೆಯಲ್ಲಿ ಅಷ್ಟೇನೂ ಬೆಳಕಿರಲಿಲ್ಲ. ಇದ್ದ ಒಂದೇ ಒಂದು ಸಣ್ಣ ಬೆಳಕಂಡಿಯಿಂದ ಬರುತ್ತಿದ್ದ ಬೆಳಕೂ ಒಳಗೆ ಪ್ರವೇಶಿಸಿದೊಡನೆ ಅರಗತ್ತಲೆಯಾಗಿತ್ತು! ಆ ಮಬ್ಬಿನಲ್ಲಿಯೇ ಚಿನ್ನಮ್ಮನ ಮುಖದ ಮೇಲೆ ಮುದ್ರಿತವಾಗಿದ್ದ ದುಃಖವನ್ನು ಕಂಡು, ಹೃದಯ ಹಿಂಡಿದಂತಾಗಿ, ಮುಕುಂದಯ್ಯ ಪಿಟಾರಿಯಿಂದೆದ್ದನು. ಚಿನ್ನಮ್ಮನನ್ನು ಬಾಚಿ ತಬ್ಬಿಕೊಂಡು, ಮಂಚದ ಮೇಲೆ ಕುಳಿತು, ಒಂದು ಮಗುವನ್ನೆಂತೊ ಅಂತೆ ಅವಳನ್ನು ತನ್ನ ತೊಡೆಯ ಮೇಲೆಯೆ ಕೂರಿಸಿಕೊಂಡನು. ಪ್ರತಿಭಟನಾ ಶಕ್ತಿಯನ್ನೆಲ್ಲ ಸಂಪೂರ್ಣವಾಗಿ ಕಳೆದುಕೊಂಡವಳಂತೆ ಚಿನ್ನಮ್ಮ ತನ್ನ ಇನಿಯನ ಬಲಿಷ್ಠತೆಗೆ ಪೂರ್ಣ ಶರಣಾಗತಳಾಗಿ ಮುಕುಂದಯ್ಯನ ಗಾತ್ರವನ್ನು ತನ್ನೆರಡು ತೋಳುಗಳಿಂದಲೂ ತಬ್ಬಿ ಸೋತಳು. ಮುಕುಂದಯ್ಯ ಅವಳ ಅಶ್ರು ಆರ್ದ್ರ ಬೆಚ್ಚನೆಯ ಮೃದು ಕೆನ್ನೆಗಳಿಗೆ ತನ್ನ ತುಟಿಗಳನ್ನೊತ್ತಿ ಒತ್ತಿ ಸಂತೈಸಿದನು. ಮತ್ತೆ ಮತ್ತೆ ಅವಳ ಬೆಣ್ಣೆಮಿದು ಚೆಂದುಟಿಗಳಿಗೆ ತುಟಿಯೊತ್ತಿ ಒತ್ತಿ ಮುಂಡಾಡಿದನು. ಆ ಹೊಚ್ಚ ಹೊಸ ಅನುಭವದ ಸುಖಪ್ರಲಯಕ್ಕೆ ಸಿಕ್ಕಿ ಚಿನ್ನಮ್ಮನ ಚೇತನ ರಸಮೂರ್ಛೆಗದ್ದಿ ಮೈಮರೆಯಿತು. ‘ನನ್ನ ಮುಕುಂದ ಭಾವ ಇಷ್ಟು ಒಳ್ಳೆಯವರೆಂದು ಇದಕ್ಕೆ ಮೊದಲು ನನಗೆಂದೂ ಗೊತ್ತಾಗಿರಲಿಲ್ಲ; ಕನಸಿನಲ್ಲಿಯೂ ಊಹಿಸಲು ಸಾಧ್ಯವಿರಲಿಲ್ಲ!’ ಎಂಬುದು ತನಗಾದ ಸುಖಕ್ಕೆ ಆ ನಿರ್ವಚನೀಯ ಅನುಭವಕ್ಕೆ ಅವಳ ಗ್ರಾಮ್ಯ ಭಾಷಾಪ್ರಜ್ಞೆ ಮಾಡಿದ್ದ ಮೂಕ ವ್ಯಾಖ್ಯಾನವಾಗಿತ್ತು!

ಚಿನ್ನಮ್ಮಗೆ ಸರ್ವ ಸಂದೇಹಗಳೂ ಸರ್ವ ಸಂಕಟಗಳು ಪರಿಹಾರವಾಗಿ ಹೃದಯ ಹಗುರವಾಯಿತು. ತನ್ನ ಮುಕುಂದಬಾವ ತನ್ನನ್ನು ಎಂದಿಗೂ ಯಾವ ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ಭಾವ ಅವಳ ಹೃದಯದಲ್ಲಿ ಬುಡಭದ್ರವಾಗಿ, ಮುನ್ನಿನ ಧೈರ್ಯ ನೆಲೆಸಿತು. ಎಷ್ಟು ಉಪದೇಶಿಸಿದ್ದರೂ ಎಷ್ಟು ವಾದಿಸಿದ್ದರೂ ಆಗದಿದ್ದ ಕೆಲಸ ನಡೆದು ಹೋಗಿತ್ತು, ಆ ಚುಂಬನಾಲಿಂಗನ ಮಹಿಮೆಯಿಂದ!

ಅವರಿಬ್ಬರೂ ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡು ಹಾಗೆಯೆ ಬಹಳ ಹೊತ್ತು ಕುಳಿತು ಸುಖಸ್ರೋತದಲ್ಲಿ ತೇಲಾಡುತ್ತಿದ್ದರು.

ಇಬ್ಬರ ಮನಸ್ಸೂ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ ಮುಕುಂದಯ್ಯ “ಚಿನ್ನೀ, ನಾನು ಇವೊತ್ತಿನಿಂದ ನಿನ್ನ ಮನೆಯಲ್ಲಿಯೇ ಇರೋಕೆ ಬಂದೀನಿ! ಆಗಬಹುದಾ?….”

ಹಠಾತ್ತನೆ ಉಕ್ಕಿದ ಆನಂದದ ಸೂಚಕವಾಗಿ, ಗಂಡನಾಗುವವನನ್ನು ಮತ್ತಷ್ಟು ಬಿಗಿದಪ್ಪುತ್ತಾ ಚಿನ್ನಮ್ಮ “ನನ್ನ ಮನೆಯೇನೂ ಅಲ್ಲ; ನಿಮ್ಮದೆ ಮನೆ!” ಎಂದು ಹುಸಿ ಸಿಡುಕಿನಿಂದ ಹೇಳಿ ಮುತ್ತೊತ್ತಿಸಿಕೊಂಡಳು.

“ನಾಳೆ ಬೆಳಿಗ್ಗೆಯಿಂದ ಐತ ಪೀಂಚಲು ಇಬ್ಬರೂ ಇಲ್ಲಿಗೇ ಬಂದು ಕೆಲಸಕ್ಕೆ ನಿಲ್ತಾರೆ. ಅವರಿಗೆ ಹಿತ್ತಲು ಕಡೆಯ ಸೌದೆ ಕೊಟ್ಟಿಗೇಲಿ ಬಿಡಾರಕ್ಕೆ ಜಾಗ ಕೊಡಿಸ್ತೀಯಾ, ನಿನ್ನಜ್ಜಿ ಹತ್ರ ಕೇಳಿ?”

ಮುಕುಂದಯ್ಯನ ಮಾತು ಕೇಳಿ ಸಿಟ್ಟುಗೊಂಡವಳಂತೆ ಅವನ ತೊಡೆಯ ಮೇಲಿಂದ ಇಳಿಯಲು ಪ್ರಯತ್ನಿಸಿ, ಆಗದೆ, “ನನ್ನೇನು ಕೇಳ್ತೀರಿ? ನಿಮ್ಮ ಮನೆ ಕೆಲಸಾ, ನೀವೇ ಹೇಳಿ ಮಾಡಿಸಿ!” ಎಂದಳು ಚಿನ್ನಮ್ಮ.

“ಏಳು. ಹಾಂಗಾದ್ರೆ, ಕೆಲಸಕ್ಕೆ ಹೊರಡ್ತೀನಿ!” ಮುಕುಂದಯ್ಯ ಅವಳನ್ನು ತೊಡೆಯಿಂದಿಳಿಸುವಂತೆ ನಟಿಸಿದನು. ಆದರೆ ತನ್ನ ಚಿನ್ನಿ ತನ್ನನ್ನು ಮತ್ತೂ ಬಿಗಿಯಾಗಿ ಅಪ್ಪಿದ್ದುದು ಅರಿವಾಗಿ, ಹಿಗ್ಗಿ ಹೇಳಿದನು: “ಎಲ್ಲರ ಮನೇಲ್ಲಿಯೂ ಸಸಿನೆಟ್ಟು ಪೂರೈಸ್ತಾ ಬಂದದೆ. ನಾವೂ ನಾಳೇನೇ ಸುರು ಮಾಡಬೇಕು, ಕೆಲಸಕ್ಕೆ…. ನೀನೂ ಬರ್ತೀಯಷ್ಟೆ, ನನ್ನ ಜೊತೆ ಗದ್ದೆ ಕೆಲಸಕ್ಕೆ?”

“ನಾವೇನು ಸುಮ್ಮನೆ ಕೂಳು ಕತ್ತರಿಸ್ತಾ ಕೂತೀಂವಿ ಅಂತ ಮಾಡೀರೇನು? ನಾಗಕ್ಕ ನಾಕು ಜನಕ್ಕೆ ಹೇಳಿ, ಸೊಲ್ಪ ಕೆಲಸ ಸುರುಮಾಡ್ಸದೆ. ನಾಗಕ್ಕನ ಜೊತೇಲಿ ನನೂ ಹೋಗ್ತಾನೆ ಇದ್ದೀನಿ ಕೆಲ್ಸಕ್ಕೆ.”

“ಹಾಂಗಾದ್ರೆ ‘ನನ್ನ’ ಜೊತೇಲಿ ಬರಾದಿಲ್ಲ?….” ವಿನೋದವಾಡಿದನು ಮುಕುಂದಯ್ಯ.

“ನಿಮ್ಮ ಜೊತೇಲಿ ಬಂದು ನಾನೇನು ಅಂಚು ಕಡೀತೀನೇ? ಹೊಡ್ತೀನೇ?…. ಸಸಿ ನೆಡೋಕೆ, ಕಳೆ ಕೀಳೋಕೆ ನೀವೇನು ಗೊರಬು ಸೂಡಿಕೊಳ್ತೀರೇನೊ ನನ್ನ್ಹಾಂಗೆ?…. ನನ್ನಿಂದಾಗದಿಲ್ಲಾಪ್ಪಾ, ಕಂಬಳಿಕೊಪ್ಪೆ ಹಾಕ್ಕೊಳ್ಳಾಕೆ. ಅದು ಗಂಡಸರಿಗೆ ಸೈ ಹೇಳ್ಸಿದ್ದು!”

“ಮತ್ತೆ ಆವೊತ್ತು, ಪೀಂಚಲು ಸಂಗಡ, ಆ ದನಗೋಳು ಮಳೇಲಿ ಹೊರಟಿದ್ದೆಯಲ್ಲಾ, ಹುಲಿಕಲ್ಲು ನೆತ್ತಿಗೆ, ಕಂಬಳಿ ಕೊಪ್ಪೇನೆ ಹಾಕ್ಕೊಂಡು?”

“ಪೀಂಚಲು ಸಂಗಡ ಏನಲ್ಲ; ನಿಮ್ಮ ಸಂಗಡ!…. ಮತ್ತೇನು ಗೊರಬು ಸೂಡಿಕೊಂಡು ಬರಬೇಕಾಗಿತ್ತೇನೊ, ಆ ಕಾಡಿನ ಗಿಜಿರಾಗೆ?….” ಹೇಳುತ್ತಿದ್ದ ಹಾಗೆಯೆ, ಏನೊ ದುಃಖದ ನೆನಪಾದಂತಾಗಿ, ಚಿನ್ನಮ್ಮ ಮುಕುಂದಯ್ಯನನ್ನು ಅಪ್ಪಿಕೊಂಡೆ ಅಳತೊಡಗಿಬಿಟ್ಟಳು.

“ತಮಾಷೆಗೆ ಹೇಳಿದ್ರೆ ಅಳ್ತೀಯಲ್ಲಾ, ಚಿನ್ನೀ? ನೀನು ಅತ್ತರೆ ನನಗೂ ಅಳೂ ಹಾಂಗೆ ಆಗ್ತದೆ!” ಮುಕುಂದಯ್ಯ ತನ್ನ ತೋಳಪ್ಪುಗೆಯನ್ನು ಮತ್ತಷ್ಟು ಬಲಿದು ಮುತ್ತಿಡುತ್ತಾ, ಸಂತೈಸಿದನು.

* * *

ಆ ರಾತ್ರಿ ಹೂವಳ್ಳಿಯ ಅಡುಗೆ ಮನೆಯಲ್ಲಿ ಮುಕುಂದಯ್ಯ ಊಟಕ್ಕೆ ಕುಳಿತಿದ್ದಾಗ ನಾಗಕ್ಕ ಬಡಿಸುತ್ತಿದ್ದಳು. ಅಜ್ಜಿ ಒಲೆಸರದ ಹತ್ತಿರ ಬೆಂಕಿಗೆ ಬೆನ್ನು ಮಾಡಿ ಸೊಂಟ ಕಾಯಿಸಿಕೊಳ್ಳುತ್ತಿದ್ದಳು, ಮಣೆಯ ಮೇಲೆ ಕೂತುಕೊಂಡು. ಚಿನ್ನಮ್ಮ ಅಜ್ಜಿಯ ಮರೆಗೆ ಕುಳಿತು, ಕುಟ್ಟೊರಳಿನಲ್ಲಿ ಅಜ್ಜಿಗಾಗಿ ಎಲೆ ಅಡಿಕೆ ಹೊಗೆಸೊಪ್ಪು ಸುಣ್ಣ ಎಲ್ಲ ಒಟ್ಟುಹಾಕಿ ಕುಟ್ಟುತ್ತಿದ್ದಳು. ಒಲೆಯ ಬಳಿಯ ಬೆಚ್ಚನೆಯ ಮೂಲೆಯಲ್ಲಿ ಮಲಗಿದ್ದ ಚೆನ್ನಮ್ಮನ ಮುದ್ದಿನ ಬೀರಿ ತನ್ನ ಮರಿಗಳಿಗೆ ಮೊಲೆಕೊಡುತ್ತಾ ಮಲಗಿತ್ತು.

ಬಡಿಸಿದ್ದ ಹೋಳಿಗೆಯನ್ನು ಸವಿಯುತ್ತಾ ಮುಕುಂದಯ್ಯ ಸೋಜಿಗಪಟ್ಟು ಕೊಂಡನು ‘ಬಹುಶಃ ಮದುವೆಗೆಂದು ಮಾವ ಸಾಲ ಮಾಡಿ ಸಂಗ್ರಹಿಸಿದ್ದ ಸಾಮಗ್ರಿಯೊ ಏನೋ?’

ಮತ್ತೆ ಅಜ್ಜಿಯೊಡನೆ ಮಾತಾಡುತ್ತಾ ಕೋಣೂರು ವ್ಯವಹಾರವನ್ನೂ ಬೆಟ್ಟಳ್ಳಿ ದೇವಯ್ಯ ಮತ್ತು ಹಳೆಮನೆ ತಿಮ್ಮಪ್ಪ ಇವರ ಸಂಧಾನದಿಂದಾಗಿ ಸಿಂಬಾವಿಯವರಿಗೆ ಹೂವಳ್ಳಿಯಿಂದ ಸಲ್ಲಬೇಕಾದ ಹಣಕ್ಕೆ ಕಂತು ಗೊತ್ತಾದುದನ್ನೂ, ಕನ್ನಡ ಜಿಲ್ಲೆಗೆ ಹೋಗಿದ್ದ ಐಗಳು ಅನಂತಯ್ಯ ಹಿಂತಿರುಗಿದ ಅನಂತರ ತಮ್ಮ ಮನೆ ಹಿಸ್ಸೆಯಾಗುವುದನ್ನೂ ಕುರಿತು ವಿವರಿಸಿದನು, ಆಗಾಗ ಅಜ್ಜಿ ಕೇಳಿದ ಪ್ರಶ್ನೆಗಳಿಗೆ ಸಮಜಾಯಿಸಿ ಹೇಳುತ್ತಾ… ಹಾಗೆಯೆ ಇಂಗಿತವಾಗಿ ಚಿನ್ನಮ್ಮನ ಕಡೆ ನೋಡುತ್ತಾ, ಕಲ್ಲೂರು ಜೋಯಿಸರು ಈ ವರ್ಸದ ಗದ್ದೆಯ ಕೊಯ್ಲು ಪೂರೈಸಿದ ಮೇಲೆ ಲಗ್ನಕ್ಕೆ ಶುಭ ಮುಹೂರ್ತ ಇಟ್ಟುಕೊಡಲು ಒಪ್ಪಿದ್ದಾರೆ ಎಂಬ ಸಂಗತಿಯನ್ನೂ ತಿಳಿಸಲು ಮರೆಯಲಿಲ್ಲ.

ಮುಕುಂದಯ್ಯ ಅದನ್ನು ಹೇಳುತ್ತಿದ್ದಾಗ ಕುಟ್ಟೊರಳಿನ ಸದ್ದು ನಿಂತಿತ್ತು.