ಹಳೆಮನೆಗೆ ಮೇಗರವಳ್ಳಿಯಿಂದ ಸುಮಾರು ಒಂದು ಹರಿದಾರಿ. ಆಗುಂಬೆಗೆ ಹೋಗುವ ರಸ್ತೆಯ ಎಡಪಕ್ಕಕ್ಕೆ ಒಂದು ಗುಡ್ಡ ಹತ್ತಿ ಇಳಿದರೆ ಸರಿ, ಹಳೆಮನೆಯ ಗದ್ದೆಯ ಕೋಗೂ ಅಡಿಕೆ ತೋಟವೂ ಕಾಣಿಸುತ್ತವೆ. ಕಾಡು ದಟ್ಟವಾಗಿ ಬೆಳೆದ ಒಂದು ಗುಡ್ಡಕ್ಕೂ ಅಡಿಕೆ ತೋಟಕ್ಕೂ ನಡುವೆ ಹಳೆಮನೆಯ ದೊಡ್ಡದಾದ ಚೌಕಿಮನೆ. ಸಂಸ್ಕೃತಿಯ ದೃಷ್ಟಿಯಿಂದಲ್ಲ ಆಕೃತಿಯ ದೃಷ್ಟಿಯಿಂದ ನಿಜವಾಗಿಯೂ ದೊಡ್ಡ ಮನೆ.

ಮನೆ ಒಂದಾದರೂ ಅದರ ಕಾಲುಭಾಗಕ್ಕೆ ಊರು ಹೆಂಚು ಹೊದಿಸಿತ್ತು. ಉಳಿದುದಕ್ಕೆ ಅಡಿಕೆ ಸೋಗೆ, ಹೆಂಚಿನ ಮೇಲೆ ಅಲ್ಲಲ್ಲಿ ಪಾಚಿ ಬೆಳೆದು ಒಣಗಿ ಕರಿಮಚ್ಚೆಗಳು ತೋರುತ್ತಿದ್ದರೂ ಒಟ್ಟಿನಲ್ಲಿ ಅವುಗಳ ಹೊಸತನ ಸಂಪೂರ್ಣವಾಗಿ ಮಾಸಿರಲಿಲ್ಲ.

ಆ ಒಂದು ಮನೆಯಲ್ಲಿ ಎರಡು ಸಂಸಾರಗಳಿದ್ದುವು. ಅಥವಾ ಸರಿಯಾಗಿ ಹೇಳುವುದಾದರೆ, ಎರಡು ವರ್ಷದ ಹಿಂದೆ ಆ ಮನೆಯಲ್ಲಿ ಒಂದಾಗಿದ್ದ ಸಂಸಾರ ಒಡೆದು ಪಾಲಾಗಿ ಎರಡಾಗಿತ್ತು. ತರುವಾಯ ಅವರವರ ಮನಸ್ಸಿನಂತೆ ಅವರವರ ಪಾಲಿಗೆ ಬಂದ ಮನೆಯಲ್ಲಿ ಒಳಗೂ ಹೊರಗೂ ಮಾರ್ಪಾಡಾಗಿತ್ತು. ಜನರೂ ಕೂಡ ಬದಲಾಗಿ ‘ಹೆಂಚಿನ ಮನೆಯವರು’ ಸೋಗೆ ಮನೆಯವರು’ ಎಂದು ಕರೆಯುವುದಕ್ಕೆ ತೊಡಗಿದ್ದರು. ಆದರೆ ಮನೆಯವರ ಮುಂದೆ ಹಾಗೆ ಮಾತಾಡಿಕೊಳ್ಳುತ್ತಿರಲಿಲ್ಲ. ಅದರಲ್ಲಿಯೂ ಸೋಗೆ ಮನೆಯವರ ಮುಂದೆ.

ಏಕೆಂದರೆ ದೊಡ್ಡ ಜಮೀನು ಆಳುಕಾಳು ಎಲ್ಲದರಲ್ಲಿಯೂ ಪ್ರಬಲವಾಗಿದ್ದದ್ದು ಕಾಲು ಪಾಲಿನ ಹೆಂಚಿನ ಮನೆಯಲ್ಲ, ಮುಕ್ಕಾಲು ಪಾಲಿನ ಸೋಗೆಮನೆ. ಹಿರಿಯವರೂ, ಯಜಮಾನರೂ, ಸಂಪಾದನೆಯ ಮತ್ತು ಕೂಡಿಡುವ ವಿಚಾರದಲ್ಲಿ ಅದ್ಭುತ ಕರ್ತೃತ್ವಶಾಲಿಗಳೂ ಆಗಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಆಸ್ತಿಯಲ್ಲಿ ಬಂದಿದ್ದಂತೆ ಮನೆಯಲ್ಲಿಯೂ ಮುಕ್ಕಾಲು ಪಾಲು ಬಂದಿತ್ತು. ಬಹುಕಾಲದ ಹಿಂದೆಯೆ ಗತಿಸಿಹೋಗಿದ್ದ ಅವರ ಅಣ್ಣನ ಮಗ ಶಂಕರ ಹೆಗ್ಗಡೆಯವರಿಗೆ ಕಾಲು ಪಾಲು ಸಿಕ್ಕುವುದೂ ಶ್ರಮಸಾಧ್ಯವಾಯಿತೆಂದ ಮೇಲೆ ಸುಬ್ಬಣ್ಣ ಹೆಗ್ಗಡೆಯವರ ಇದಿರಾಗಲಿ ಅಥವಾ ಅವರ ಮಗ ತಿಮ್ಮಪ್ಪ ಹೆಗ್ಗಡೆಯವರ ಇದಿರಾಗಲಿ ‘ಹೆಂಚಿನ ಮನೆ’ ‘ಸೋಗೆಮನೆ’ ಎಂದು ಯಾರೂ ಮಾತಾಡುತ್ತಿರಲಿಲ್ಲ. ಅಂತಹ ಸನ್ನಿವೇಶಗಳಲ್ಲಿ ಅವರು ಉಪಯೋಗಿಸುತ್ತಿದ್ದ ಹೆಸರು ‘ದೊಡ್ಡ ಮನೆ’ ‘ಸಣ್ಣ ಮನೆ’.

ಒಟ್ಟಾಗಿದ್ದ ಮನೆ ಒಡೆದುಹೋಗುವುದಕ್ಕೆ ಮುಖ್ಯ ಕಾರಣವಾಗಿದ್ದುದು ತಿಮ್ಮಪ್ಪ ಹೆಗ್ಗಡೆ. ಆತನು ಶಂಕರ ಹೆಗ್ಗಡೆಯವರಿಗಿಂತಲೂ ಬಹಳ ಕಿರಿಯವನು. ಇನ್ನೂ ಮದುವೆಯಾಗಿರಲಿಲ್ಲ. ಶಂಕರ ಹೆಗ್ಗಡೆಯವರಿಗೆ ಮದುವೆಯೂ ಆಗಿ ಮಕ್ಕಳೂ ಆಗಿತ್ತು. ಅಷ್ಟೊಂದು ಅಸಮಾನ ವಯಸ್ಕರಾಗಿದ್ದರೂ ಅವನಿಗೆ ಶಂಕರ ಹೆಗ್ಗಡೆಯವರ ಮೇಲೆ ಸಹಿಸಲಾರದ ಹೊಟ್ಟೆಕಿಚ್ಚು. ಅಚ್ಚ ಕರ್ರಗಿದ್ದ ಅವನಿಗೆ ಶಂಕರಣ್ಣಯ್ಯನ ಬಿಳಿ ಮೈ ಕಂಡರಾಗುತ್ತಿರಲಿಲ್ಲ. ತನ್ನ ತಂದೆಯಂತೆಯ ಕುಳ್ಳಾಗಿದ್ದ ಆತನಿಗೆ ದೊಡ್ಡಪ್ಪನ ಮಗನ ಎತ್ತರವನ್ನು ಕಂಡರೆ ಸಹಿಸುತ್ತಿರಲಿಲ್ಲ. ತನ್ನ ಹಲ್ಲು ಯದ್ವಾತದ್ವಾ ಹುಟ್ಟಿ ಹುಳು ಹಿಡಿದಿರುವಾಗ ಶಂಕರಣ್ಣಯ್ಯನ ಹಲ್ಲು ಬೆಳ್ಳಗೆ ಶುಚಿಯಾಗಿ ಸಾಲಾಗಿ ಏಕಿರಬೇಕು? ಸೌಮ್ಯವಾಗಿದ್ದ ಶಂಕರ ಹೆಗ್ಗಡೆಯವರ ಚೆಲುವಾದ ಕಣ್ಣುಗಳನ್ನು ನೋಡಿದಾಗಲೆಲ್ಲಾ ತಿಮ್ಮಪ್ಪ ಹೆಗ್ಗಡೆಗೆ ಭಯಂಕರವಾಗಿ ಡೊಳ್ಳುಬ್ಬಿದಂತಿರುವ ತನ್ನ ಮೆಣ್ಣೆಗಣ್ಣಿನ ವಿಕಾರದ ನೆನಪಾಗಿ ಎದೆ ಕುದಿಯುತ್ತಿತ್ತು. ಯಾವ ತರ್ಕದಿಂದಲೊ ಏನೊ ತನಗೆ ಎಲ್ಲ ರೀತಿಯಿಂದಲೂ ಶಂಕರ ಹೆಗ್ಗಡೆಯವರಿಂದ ಅನ್ಯಾಯವಾಗಿದೆ ಎಂಬುದು ಅವನ ತಲೆಗೆ ಹೊಕ್ಕು ಹೋಗಿತ್ತು. ಶಂಕರ ಹೆಗ್ಗಡೆ ತನಗಿಂತಲೂ ಮೊದಲೆ ಹುಟ್ಟಿ ತನಗೆ ಬರಬೇಕಾಗಿದ್ದ ಸಲ್ಲಕ್ಷಣಗಳನ್ನೆಲ್ಲಾ ಸುಲಿದುಕೊಂಡುಬಿಟ್ಟಿದ್ದಾನೆ ಎನ್ನುವಷ್ಟರಮಟ್ಟಿಗೆ ಅವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ.

ತಿಮ್ಮಪ್ಪ ಹೆಗ್ಗಡೆಯ ಕರುಬಿಗೂ ದ್ವೇಷಕ್ಕೂ ಒಳಗಾಗಿದ್ದರೂ ಶಂಕರ ಹೆಗ್ಗಡೆ ವಾಸ್ತವವಾಗಿ ಬಹಳ ಸಾಮಾನ್ಯ ವ್ಯಕ್ತಿ. ಜೋಯಿಸರಾಗಿದ್ದ ಕಲ್ಲೂರು ಮಂಜಯ್ಯನವರ ಪ್ರಭಾವದಿಂದ ಆತನಿಗೆ ಒಂದು ವಿಧವಾದ ಅನುಕರಣದ ಸಂಸ್ಕೃತಿ ಲಭಿಸಿತ್ತು. ಉಳಿದವರು ಶನಿವಾರದ ದಿನ ಮಾತ್ರ ಮಿಂದರೆ ಅವನು ದಿನವೂ ಮೀಯುತ್ತಿದ್ದನು. ಉಳಿದವರ ಬಟ್ಟೆ ಕೊಳೆಯಿಂದ ರಟ್ಟಾಗಿದ್ದರೆ ಅವನದು ಬೆಳ್ಳಗಿರದಿದ್ದರೂ ಹಳ್ಳಿಯ ಹಾರುವರ ಪಾಣಿಪಂಚೆಯಷ್ಟರಮಟ್ಟಿಗಾದರೂ ಶುಚಿಯಾಗಿರುತ್ತಿತ್ತು. ಜೋಯಿಸರು ಹಳೆಮನೆಗೆ ಬಂದಾಗ ಅವರೊಡನೆ ಇತರರಿಂತಲೂ ಸ್ವಲ್ಪ ಹೆಚ್ಚು ಕಾಲ ಮಾತಾಡುತ್ತಿದ್ದದ್ದಲ್ಲದೆ ಅವರನ್ನು ಕಳುಹಿಸುತ್ತಾ ಸ್ವಲ್ಪ ದೂರ ಹೋಗಿ ಹಳ್ಳ ದಾಟಿಸಿ ಬರುತ್ತಿದ್ದನು. ಈ ಎಲ್ಲ ಕಾರಣಕ್ಕಾಗಿ ಜೋಯಿಸರಿಗೂ ಅವನನ್ನು ಕಂಡರೆ ವಿಶ್ವಾಸ. ‘ಏನಪ್ಪಾ ಶಂಕರಪ್ಪಾ, ಹೇಗಿದ್ದೀಯಾ?’ ಎಂದು ನಗೆಮೊಗದಿಂದ ಕುಶಲಪ್ರಶ್ನೆ ಮಾಡುತ್ತಿದ್ದರು.

ಇದನ್ನೆಲ್ಲಾ ಕಂಡು ಹುಡುಗನಾಗಿದ್ದ ತಿಮ್ಮಪ್ಪ ಹೆಗ್ಗಡೆಗೆ ಕರುಬು ಹೆಚ್ಚಾಯಿತು. ಜೋಯಿಸರ ವಿಶ್ವಾಸ ಸಂಪಾದನೆಗಾಗಿ ಶಂಕರ ಹೆಗ್ಗಡೆಯೊಡನೆ ಪೈಪೋಟಿ ಮಾಡಿದನು. ಅದರ ಪರಿಣಾಮ ವಿಪರೀತವಾಯಿತು. ಅವನ ಕೊಳಕು ಬಟ್ಟೆ, ಹುಳುಕು ಹಲ್ಲು, ಡೊಳ್ಳೇರಿದ ಮೆಳ್ಳೆಗಣ್ಣು, ಯಾವಾಗಲೂ ಅಸಹ್ಯವಾಗಿ ತೆರೆದಿರುತ್ತಿದ್ದ ದಪ್ಪ ತುಟಿ, ತುಟಿಯ ಮೇಲೆ ತೊನ್ನಿನಂತಿದ್ದ ಬಿಳಿಯ ಮಚ್ಚೆ, ಬೆವರಿನ ದುರ್ಗಂಧ, ಮಾತಾಡಿದರೆ ಹಲ್ಲಿನ ಸಂಧಿಗಳಿಂದ ಚಿಮ್ಮುತ್ತಿದ್ದ ಎಂಜಲು ಹನಿ- ಇವುಗಳನ್ನೆಲ್ಲಾ ಸಹಿಸಲು ಪ್ರಯತ್ನಪಟ್ಟರೂ ಸಾಧ್ಯವಾಗದೆ ಮಂಜಯ್ಯ ಜೋಯಿಸರು ಒಂದು ದಿನ ಬಹಳ ಸಂಕೋಚದಿಂದ, ಆದರೂ ಅನಿವಾರ್ಯವಾಗಿ, “ತಿಮ್ಮಪ್ಪ, ನೀನು ಸ್ವಲ್ಪ ದೂರ ನಿಂತುಕೊಂಡು ಮಾತಾಡಪ್ಪಾ” ಎಂದುಬಿಟ್ಟರು. ನಾಲ್ಕು ಮಂದಿಯ ಮುಂದೆ ತನಗಾಗಿದ್ದ ಅವಮಾನಕ್ಕಾಗಿ ಅಂದಿನಿಂದ ಅವನಿಗೆ ಜೋಯಿಸರನ್ನು ಕಂಡರೆ ಆಗುತ್ತಿರಲಿಲ್ಲ. ಜೋಯಿಸರಿಗೆ ನೇರವಾಗಿ ತಾನೇನನ್ನೂ ಮಾಡಲಾರದೆ ಅವರವನಾಗಿದ್ದ ಶಂಕರ ಹೆಗ್ಗಡೆಯ ಮೇಲೆ ಮುಯ್ಯಿ ತೀರಿಸಿಕೊಳ್ಳುತ್ತಿದ್ದನು.

ಮನೆ ಪಾಲಾಗಿ ಶಂಕರ ಹೆಗ್ಗಡೆ ಬೇರೆ ಸಂಸಾರ ಹೂಡಿದ ಮೇಲೆ ತಿಮ್ಮಪ್ಪ ಹೆಗ್ಗಡೆಯ ಮನಸ್ಸಿಗೆ ಸ್ವಲ್ಪ ತೃಪ್ತಿಯಾಯಿತು. ತಮ್ಮ ಪಾಲಿಗೆ ಬಂದಿದ್ದ ಮುಕ್ಕಾಲು ಪಾಲು ಜಮೀನು ಮನೆ ಇತ್ಯಾದಿಗಳಿಂದ ತಾವು ಶ್ರೀಮಂತರೆಂದೂ ದಾಯಾದಿಗಳು ದರಿದ್ರರೆಂದೂ ಹೆಮ್ಮೆ ಹುಟ್ಟಿ ಸಂತೋಷವಾಗಿತ್ತು. ಆದರೆ ಒಂದೇ ವರ್ಷದ ಒಳಗಾಗಿ ಆ ತೃಪ್ತಿಗೂ ದಕ್ಕೆ ತಗುಲಿತು. ಕಾರಣ: ಶಂಕರ ಹೆಗ್ಗಡೆಯ ಏಳಿಗೆ.

ಶಂಕರ ಹೆಗ್ಗಡೆಯ ಹಿಸ್ಸೆಗೆ ಬಂದಿದ್ದ ಕಾಲು ಪಾಲು ಆ ಮನೆಯ ನೀಚಾಂಶವಾಗಿದ್ದರೂ ಕೊಂಚ ಬದಲಾವಣೆಗಳಿಂದ ಅದನ್ನು ಉತ್ತಮಾಂಶವಾಗಿ ಕಾಣುವಂತೆ ಮಾಡಿಕೊಂಡಿದ್ದನು. ಆಗಲೂ ತಂಟೆ ತಕರಾರು ತಂದೊಡ್ಡಲು ಹವಣಿಸಿದ್ದನು ತಿಮ್ಮಪ್ಪ ಹೆಗ್ಗಡೆ. ತಮ್ಮ ಮನೆಗೂ ಅಪಾಯವಾಗುತ್ತದೆಂದು ಅದನ್ನು ಬಲಾತ್ಕಾರವಾಗಿ ನಿಲ್ಲಿಸಲು ಮುಂದುವರಿದಿದ್ದನು. ಸುಬ್ಬಣ್ಣ ಹೆಗ್ಗಡೆಯವರು ಅವನನ್ನು ತಡೆದು ಒಳಗೆ ಕರೆದುಕೊಂಡು ಹೋಗಿ “ನೀ ಸುಮ್ಮನಿರೊ, ಅವ ಏನಾರೂ ಸಾಯಲಿ; ಗ್ವಾಡೆಗೆ ಕಿಡಕೀನಾದ್ರೂ ಇಡಿಸ್ಲಿ; ಮನೇಗೆ ಕಳಾಸಾನಾದ್ರೂ ಹಾಕಸ್ಲಿ; ಇನ್ನೊಂದು ವರ್ಸದೊಳಗೇ ಸಾಲಮಾಡಿ ದಿವಾಳಿ ತೆಗೆದ್ರೆ ಸೈಯಲ್ಲಾ. ಹಾರ್ರು ಮಾಡಿದ್ಹಾಂಗೇ ಬಿಳೀ ಬಟ್ಟೆ ಹಾಕ್ಕೊಂಡು ಜಗಲಿಗೆ ಗಾಳಿ ಬೆಳಕು ಬಿಟ್ಟಕೊಂಡ್ರೆ ಮನೆ ಬಯಲಾಗದೆ ಏಟು ದಿನ ಇದ್ದಾತು!” ಎಂದು ಏಕಾಂತ ಹೇಳಿದ ಮೇಲೆ ಪಾಲುದಾರರ ವಿನಾಶಕ್ಕೆ ತಾನೇಕೆ ತಡೆಯಾಗಬೇಕೆಂದು ತಟಸ್ಥನಾಗಿದ್ದನು. ಆದರೆ ಶಂಕರ ಹೆಗ್ಗಡೆ ತನ್ನ ಪಾಲಿನ ಮನೆಗೆ ಸೋಗೆಗೆ ಬದಲಾಗಿ ಊರು ಹೆಂಚು ಹಾಕಿಸುತ್ತಾನೆಂದು ವಾರ್ತೆ ಹಬ್ಬಿದಮೇಲೆ ತಿಮ್ಮಪ್ಪ ಹೆಗ್ಗಡೆಗೆ ಸಹಿಸಲಾರದಷ್ಟು ಹೊಟ್ಟೆಯುರಿಯಾಯ್ತು. ಅಪ್ಪಯ್ಯನ ಹತ್ತಿರ ಹೋಗಿ “ನಾವೇನು ಕಡಿಮೆ ಅವನಿಗೆ” ಅವ ಮನೀಗೆ ಹೆಂಚು ಹಾಕಿಸೋವಾಗ ನಾವು ಸೋಂಗೆ ಹಾಕಿಸಿಕೊಂಡು ಕಾಲಮಾಡೋದು ಹ್ಯಾಂಗೆ?” ಎಂದು ತಮ್ಮ ಗೌರವಕ್ಕಾಗಿಯಾದರೂ ತಾವೂ ಹೆಂಚು ಹಾಕಿಸಬೇಕೆಂದು ಕೇಳಿಕೊಂಡನು. ಸುಬ್ಬಣ್ಣ ಹೆಗ್ಗಡೆಯವರ ಹುಟ್ಟು ಜಿಪುಣತೆಗೆ ಒದೆ ಬಿದ್ದಂತಾಗಿ, ಹಣೆ ಬಡಿದುಕೊಳ್ಳುತ್ತಾ, “ಅಯ್ಯಯ್ಯಯ್ಯಯ್ಯೊ ನೀ ಎಲ್ ಕಲಿತಪ್ಪಾ ಈ ಮನೆಹಾಳ್ ಬುದ್ದೀನಾ? ನಮ್ಮ ಅಪ್ಪ, ಅಜ್ಜ, ಮುತ್ತಜ್ಜ ಎಲ್ಲಾ ಸೋಂಗೆ ಮನೇಲೆ ಕಾಲ ಹಾಕಲಿಲ್ಲೇನೋ? ಅವರಿಗಿಲ್ದೇ ಇದ್ದ ಬಹುಮಾನಾ ನಿಮಗೆಲ್ಲ ಈಗ ಬಂದುಬಿಡ್ತಲ್ಲೇ? ಅಯ್ಯೋ, ಮನೆಹಾಳ್ ಮುಂಡೆ ಮಕ್ಕಳ್ರಾ, ನೀವು ಬಾಳಿರೇನೋ? ಬೂದಿ ಹುಯ್ಕೊಂಡು ಹೋಗ್ತೀರೋ!” ಎಂದು ಮೊದಲಾಗಿ ಆಶೀರ್ವಾದ ಮಾಡಿ ಕಳುಹಿಸಿದ್ದರು. ತಿಮ್ಮಪ್ಪ ಹೆಗ್ಗಡೆಗೆ ತಂದೆಯ ಮೇಲೆಯೂ ಬಹಳ ಬೇಜಾರಾಗಿ “ನೀನಿನ್ನೆಷ್ಟು ದಿವ್ಸ ಇದ್ದೀಯೊ? ನೀ ಹೋದ ಮೇಲಾದ್ರೂ ನಾ ಹೆಂಚು ಹಾಕ್ಸೋಕೆ ಆಗ್ತದೋ ಇಲ್ಲೋ ನೋಡ್ತೀನಿ” ಎಂದು ಮನದಲ್ಲಿಯೆ ಬುಸುಗುಟ್ಟಿದ್ದನು.

ಹೀಗಿರುತ್ತಿರುವಾಗಲೆ ಶಂಕರ ಹೆಗ್ಗಡೆಯ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಒಂದು ಅವಕಾಶ ಸಿಕ್ಕಿತು. ಸುಬ್ಬಣ್ಣ ಹೆಗ್ಗಡೆಯವರಿಗೆ ಬೇಕಾದಷ್ಟು ಆಸ್ತಿಪಾಸ್ತಿ ನಗನಟ್ಟುಗಳಿದ್ದರೂ ತಿಮ್ಮಪ್ಪ ಹೆಗ್ಗಡೆಗೆ ಹೆಣ್ಣು ಕೊಡುವುದಕ್ಕೆ ಹೆದರುತ್ತಿದ್ದರು. ಹಡೆದ ತಂದೆ ತಾಯಿಗಳು. ಅದಕ್ಕೆ ಕಾರಣ ತಿಮ್ಮಪ್ಪ ಹೆಗ್ಗಡೆಯ ಬಣ್ಣ, ರೂಪ ಮತ್ತು ವಿಕಾರಗಳು ಮಾತ್ರವೇ ಆಗಿರಲಿಲ್ಲ. ಅವನ ಹಿಂಸಾ ಸ್ವಭಾವ, ಕ್ರೂರಬುದ್ಧಿ, ದುಷ್ಟ ಪ್ರಾಣಿಗೆ ಸಹಜವಾದ ಕಾಡುತನ ಇವುಗಳ ಪ್ರಸಿದ್ಧಿ ಅನೇಕರ ಕಿವಿಗೆ ಬಿದ್ದಿತ್ತು. ಅದೂ ಅಲ್ಲದೆ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಮನೆಯ ಹೆಂಗಸರಿಗೆ ಸೋಮಾರಿತನದಿಂದಿರುವುದಕ್ಕೆ ಸ್ವಲ್ಪವೂ ಅವಕಾಶ ಕೊಡುತ್ತಿರಲಿಲ್ಲ. ಎಂದರೆ ಅಡುಗೆ ಮಾಡುವುದೇ ಮೊದಲಾದ ಮನೆಯೊಳಗಿನ ಕೆಲಸಗಳ ಜೊತೆಗೆ ಅವರ ಕೈಲಿ ಮನೆಗೆ ಕಟ್ಟಿಗೆ ಹೊರಿಸುತ್ತಿದ್ದರು; ಕೊಟ್ಟಿಗೆಗೆ ಸೊಪ್ಪು ತರಗು ಹೊರಿಸುತ್ತಿದ್ದರು; ಗದ್ದೆಗೆ ಗೊಬ್ಬರ ಹಾಕಿಸುತ್ತಿದ್ದರು; ಸಸಿ ನಡಿಸುತ್ತಿದ್ದರು; ಕಳೆ ಕೀಳಿಸುತ್ತಿದ್ದರು. ಅದೂ ಇದೂ ಏನು? ಗೃಹಿಣಿಯರಿಂದ ಗೃಹಕಾರ್ಯಗಳೆಲ್ಲವನ್ನೂ ಚಾಚೂ ತಪ್ಪದೆ ಮಾಡಿಸುತ್ತಿದ್ದರು! ಎಂಟು ದಿನಕ್ಕೊಮ್ಮೆಯಲ್ಲದೆ ಮೀಯಗೊಡುತ್ತಿರಲಿಲ್ಲ. ಕೊಡುತ್ತಿದ್ದುದು ಜಡ್ಡು ಸೀರೆ. ಅದನ್ನೂ ಹರಡು ಮುಚ್ಚುವಂತೆ ಉಟ್ಟುಕೊಂಡರೆ ಗ್ರಹಚಾರ ಬಿಡಿಸುತ್ತಿದ್ದರು. ‘ಒಕ್ಕಲು ಮಕ್ಕಳಿಗೆ ಮೊಳಕಾಲು ಮುಚ್ಚಿದರೆ ಸಾಕು. ಬಿರಾಂಬರು ಉಟ್ಟ ಹಾಂಗೆ ಉಟ್ಟರೋ ಮನೆ ತೊಳೆದು ಹೋಗ್ತದೆ’ ಎಂದು ಮುಖದ ಮೇಲೆ ನೀರಿಳಿಯುವಂತೆ ಬಯ್ಯುತ್ತಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಹಳೆಮನೆಗೆ ಹೆಣ್ಣು ಕೊಡಲು ಜನ ಹೆದರುತ್ತಿದ್ದರು.

ಒಮ್ಮೆ ಸಿಂಬಾವಿ ಭರಮೈ ಹೆಗ್ಗಡೆಯವರು ತಮ್ಮ ನೆಂಟಬಾವ ಶಂಕರ ಹೆಗ್ಗಡೆಯವರ ಮನೆಗೆ ಬಂದಿದ್ದಾಗ ಸುಬ್ಬಣ್ಣ ಹೆಗ್ಗಡೆಯವರು ಅವರನ್ನು ಕಳ್ಳಿನ ಉಪಚಾರಕ್ಕೆ ಕರೆದಿದ್ದರು. ಸುಬ್ಬಣ್ಣ ಹೆಗ್ಗಡೆಯವರು ಇಳಿವಯಸ್ಸಿನವರಾಗಿದ್ದರೂ ನಡುವಯಸ್ಸಿನವಾಗಿದ್ದ ಭರಮೈ ಹೆಗ್ಗಡೆಯವರಲ್ಲಿ ಬಹಳ ಸಲಿಗೆ. ಬಹು ವಿಷಯಗಳಲ್ಲಿ ಅವರಿಬ್ಬರೂ ಸಮಪ್ರಕೃತಿಯವರಾಗಿದ್ದುದೇ ಅವರ ಸ್ನೇಹಕ್ಕೆ ಮೂಲಕಾರಣ. ಆ ಸ್ನೇಹಕ್ಕೆ ಶಾಶ್ವತ ಬಾಂಧವ್ಯದ ಮುದ್ರೆಯನ್ನೊತ್ತುವ ಸಲುವಾಗಿಯೇ ಶಂಕರ ಹೆಗ್ಗಡೆಯ ತಂಗಿ ಜಟ್ಟಮ್ಮನನ್ನು, ಹಳೆ ಮನೆ ಪಾಲಾಗುವುದಕ್ಕೆ ಮೂರು ನಾಲ್ಕು ವರ್ಷಗಳ ಮುಂಚೆ, ಭರಮೈ ಹೆಗ್ಗಡೆಯವರಿಗೆ ಧಾರೆಯೆರೆದುಕೊಟ್ಟಿದ್ದರು.

ಕಳ್ಳು ಕುಡಿಯುತ್ತಾ ಕುಡಿಯುತ್ತಾ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಮಗನ ಮದುವೆಯ ಪ್ರಸ್ತಾಪವೆತ್ತಿ ಭರಮೈ ಹೆಗ್ಗಡೆಯವರ ತಂಗಿ ಲಕ್ಕಮ್ಮನನ್ನು ತಂದುಕೊಳ್ಳುವ ಇಚ್ಛೆಯನ್ನು ಸೂಚಿಸಿದರು. ಸಿಂಬಾವಿ ಹೆಗ್ಗಡೆಯವರಿಗೂ ಬಹುದಿನಗಳಿಂದ ಮನಸ್ಸಿನಲ್ಲಿ ಒಂದು ಕೊರತೆ ಕೊರೆಯುತ್ತಿತ್ತು. ಜಟ್ಟಮ್ಮಗೆ ಇದುವರಿಗೂ ಮಕ್ಕಳಾಗಿರಲಿಲ್ಲವಾದ್ದರಿಂದ ಮತ್ತೊಂದು ಮದುವೆಯಾಗುವ ಆಸೆ ಅವರಲ್ಲಿ ಆಗತಾನೆ ಕಣ್ದೆರೆಯುತ್ತಿತ್ತು. ಹಳೆಮನೆ ಹೆಗ್ಗಡೆಯವರ ಸೂಚನೆ ಅವರಿಗೆ ದೈವೇಚ್ಛೆಯಂತೆಯೇ ತೋರಿ, ತಮ್ಮ ಮನಸ್ಸನ್ನು ಬಿಚ್ಚಿ ಹೇಳಿದರು; ಸುಬ್ಬಣ್ಣ ಹೆಗ್ಗಡೆಯವರ ಕಿರಿಯ ಮಗಳೂ ತಿಮ್ಮಪ್ಪ ಹೆಗ್ಗಡೆಯ ತಂಗಿಯೂ ಆದ ಮಂಜಮ್ಮನನ್ನು ತಮಗೆ ತಂದುಕೊಂಡು ತಮ್ಮ ತಂಗಿ ಲಕ್ಕಮ್ಮನನ್ನು ತಿಮ್ಮಪ್ಪ ಹೆಗ್ಗಡೆಗೆ ಕೊಡಲು ಅಡ್ಡಿಯಿಲ್ಲ ಎಂದು. ಸುಬ್ಬಣ್ಣ ಹೆಗ್ಗಡೆಯವರು ಯಾವುದನ್ನೂ ಹಿಂದಿನಿಂದ ತಿಳಿಸುತ್ತೇನೆ ಎಂದಿದ್ದರು. ಮಗಳ ಮೇಲಿನ ಕನಿಕರದಿಂದ ಭರಮೈ ಹೆಗ್ಗಡೆಯವರಿಗೆ ಆಕೆಯನ್ನು ಬಲಿಕೊಡಲು ಅವರು ತಟಕ್ಕನೆ ಒಪ್ಪಿಕೊಳ್ಳದೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು.

ಆದರೆ ಅಂತಹ ವಿಷಯಗಳಲ್ಲೆಲ್ಲ ವಾಡಿಕೆಯಾಗಿ ನಡೆಯುವಂತೆ ಆ ರಹಸ್ಯ ಬಹಳ ಕಾಲ ರಹಸ್ಯವಾಗಿರಲಿಲ್ಲ. ಪಿಸುಮಾತಾಗಿ ಕಿವಿಗೆ ಬಿದ್ದು ಗುಸು ಗುಸು ಹರಡುತ್ತಿತ್ತು. ಹಾಗೆ ಹರಡುವುದಕ್ಕೆ ಇತ್ತ ಕಡೆಯಿಂದ ತಿಮ್ಮಪ್ಪ ಹೆಗ್ಗಡೆಯೂ ಅತ್ತ ಕಡೆಯಿಂದ ಭರಮೈ ಹೆಗ್ಗಡೆಯವರೂ ಕಾರಣರಾಗಿದ್ದರು. ಸುದ್ದಿ ಕಿವಿಗೆ ಬಿದ್ದೊಡನೆಯೆ ಎದೆಗೆ ಸಿಡಿಲು ಬಿದ್ದಂತಾಗಿ ಜಟ್ಟಮ್ಮ ಹಳೆಮನೆಗೆ ಬಂದು ತನ್ನಣ್ಣನನ್ನು “ಏನೋ ಸುದ್ದಿ ಹಬ್ಬಿದೆಯಲ್ಲಾ ಹೌದೆ?” ಎಂದು ವಿಚಾರಿಸಿದಳು. ಶಂಕರ ಹೆಗ್ಗಡೆಯವರು “ಸುದ್ದಿಯೇನೋ ಹಬ್ಬಿದೆ. ಆದರೆ ನನಗೊಂದೂ ಗೊತ್ತಿಲ್ಲ. ಚಿಕ್ಕಪ್ಪಯ್ಯನನ್ನೇ ಹೋಗಿ ಕೇಳು” ಎಂದರು.

“ನನಗೇನು ಅಂಜಿಕೆ? ಹೋಗಿ ಕೇಳ್ತೀನಿ” ಎಂದು ಜಟ್ಟಮ್ಮ ಆಚೆಮನೆಗೆ ಹೋದಳು.

ಮನೆ ಪಾಲಾಗುವುದಕ್ಕೆ ಮೊದಲೆ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಜಟ್ಟಮ್ಮನಿಗೆ ಮನೆ ಪಾಲಾದ ಮೇಲೆಯೂ ಸುಬ್ಬಣ್ಣ ಹೆಗ್ಗಡೆಯವರಲ್ಲಿ ಮೊದಲಿನಿಂದಲೂ ತನಗಿದ್ದ ಸಲಿಗೆಗೆ ಊನ ಬಂದಿರಲಿಲ್ಲ.

ಸುಬ್ಬಣ್ಣ ಹೆಗ್ಗಡೆಯವರು ಜಟ್ಟಮ್ಮನನ್ನು ಆದರದಿಂದ ಬರಮಾಡಿಕೊಂಡರು. ಅಕ್ಕರೆಯಿಂದ ಮಾತಾಡಿಸಿದರು. ಆ ಸುದ್ದಿಯ ವಿಚಾರ ಮಾತು ಬಂದಾಗ “ಅಯ್ಯೋ ಜಟ್ಟೂ, ನಿನಗೇನು ಬಿರಾಂತೇನೆ? ಏನೋ ಮಾತಿಗೆ ಮಾತು ಬಂತು. ಅತ್ತ ಹೋಗೊ ಮಾತು ಇತ್ತ ಹೋಯ್ತು!” ಎಂದು ನಗುತ್ತಾ ಕುಟ್ಟೊರಳಲ್ಲಿ ಅಡಕೆ ಕುಟ್ಟತೊಡಗಿದ್ದರು. ಜಟ್ಟಮ್ಮನಿಗೆ ಮನಸ್ಸು ಸಮಾಧಾನವಾಗಿ ಗಂಡನ ಮನೆಗೆ ಹಿಂತಿರುಗಿದ್ದಳು.

ಹಿಂತಿರುಗಿದ ಮೇಲೆ ಬಹಳ ಆಲೋಚಿಸಿದಳು: ಇವರು ಎರಡನೆ ಮದುವೆ ಆಗುವುದೇತಕ್ಕೆ? ನನಗೆ ಮಕ್ಕಳಾಗಲಿಲ್ಲ ಎಂದಲ್ಲವೇ? ನಾನು ಸತ್ತಮೇಲಾದರೂ ರಗಳೆಯಿರಲಿಲ್ಲ. ಈಗ ನಾನೇ ಹೋಗಿ, ನಮ್ಮ ದಾಯಾದಿಗಳ ಮನೆ ಹೆಣ್ಣು ಕೇಳಿ ಇವರಿಗೆ ಮತ್ತೊಂದು ಮದುವೆ ಮಾಡಿಸಿ, ಸವತಿಯನ್ನು ಮನೆದುಂಬಿಸಿಕೊಳ್ಳಬೇಕೆಂದರೆ ಅದಕ್ಕಿಂತಲೂ ಕೆರೆ ಬಾವಿ ತಳ ನೋಡುವುದು ಲೇಸು.

ಆಮೇಲೆ ತನಗೆ ಬೇಗನೆ ಮಕ್ಕಳಾಗುವುದಕ್ಕೆ ಧಾರ್ಮಿಕ ಕಾರ್ಮಿಕ ಉಪಾಯಗಳನ್ನೆಲ್ಲಾ ಕೈಕೊಂಡಳು. ದೇವರು ದಿಂಡರಿಗೆ ಹೇಳಿಕೊಂಡಳು. ಮತ್ತು ಮೇಗರವಳ್ಳಿಯಲ್ಲಿ ಮಲೆಯಾಳದ ಪಂಡಿತರೆಂದು ಪ್ರಸಿದ್ಧಿ ಪಡೆದಿದ್ದ ಕಣ್ಣಾ ಪಂಡಿತರಿಂದ ಔಷಧ ತರಿಸಿಕೊಂಡಳು. ಅಲ್ಲದೆ ಗಂಡನ ತಂಗಿ ಲಕ್ಕಮ್ಮನೊಡನೆ ಜಗಳವನ್ನೂ ಹೆಚ್ಚಿಸಿದಳು.

“ಹಂದೀ ಒಡ್ಡೀಗೆ ಹಾಕ್ತಾರಂತಲ್ಲೇ ನಿನ್ನಾ” ಎಂದು ಜಟ್ಟಮ್ಮ ಹೀನೈಸಿದರೆ, ಲಕ್ಕಮ್ಮ “ಹಂದೀ ಒಡ್ಡಿನಿಂದಲೇ ಬರ್ತದಂತಲ್ಲಾ ನಿನ್ನ ತವತಿ!” ಎಂದು ಅತ್ತಿಗೆಯ ಕುತಿಗೆ ಹಿಸುಕುವಂತೆ ಮಾತಾಡುತ್ತಿದ್ದಳು.

ಅವರಿಬ್ಬರ ಮಾತಿನ ತೋರುಬೆರಳೂ ಹಳೆಮನೆಯಲ್ಲಿ ಸೋಗೆ ಪಾಲಿನವರು ಸಾಕುತ್ತಿದ್ದ ಹಂದಿಗಳನ್ನು ಕುರಿತದ್ದಾಗಿತ್ತು. ಸುಬ್ಬಣ್ಣ ಹೆಗ್ಗಡೆಯವರ ಮನೆಯ ಮುಂದೆಯೇ ಹಂದಿಗಳಿಗೆ ಒಡ್ಡಿಗಳನ್ನು ಮಾಡಿದ್ದರಿಂದ ಎಲ್ಲಿ ನೋಡಿದರೂ ಗಲೀಜಾಗಿ ಗಬ್ಬುವಾಸನೆ ಸದಾ ಹಬ್ಬಿರುತ್ತಿತ್ತು. ಜನಿವಾರದವರಂತೂ ಅವರಲ್ಲಿಗೆ ಸಾಲಕ್ಕಾಗಿಯಾಗಲಿ ಇತರ ಕಾರ್ಯಗಳಿಗಾಗಲಿ ಹೋದಾಗ ಮೂಗು ಮುಚ್ಚಿಕೊಂಡು ತುದಿಗಾಲಲ್ಲಿ ನಡೆಯುತ್ತಾ ಉಗುಳುತ್ತಾ ಜಗಲಿಗೆ ಓಡುತ್ತಿದ್ದರು.

ಸುಬ್ಬಣ್ಣ ಹೆಗ್ಗಡೆಯವರಿಗೆ ಮಾತ್ರ ಸ್ವಲ್ಪವೂ ಅಸಹ್ಯವಾಗುತ್ತಿರಲಿಲ್ಲ. ಅವರಿಗೆ ಕೋಳಿ ಒಡ್ಡಿ, ಕುರಿಒಡ್ಡಿ, ಹಂದಿಒಡ್ಡಿಗಳೆಂದರೆ ಗದ್ದೆ ತೋಟಗಳಷ್ಟೆ ಮುಖ್ಯವಾಗಿದ್ದುವು; ಅಮೂಲ್ಯವಾಗಿದ್ದುವು. ಸಹಸ್ರಾರು ರೂಪಾಯಿಗಳಿಗೆ ಸ್ವಾಮಿಯಾಗಿದ್ದರೂ ಕಂಬಳಿ ಹೊದೆದುಕೊಂಡು, ಕೊಳಕಲು ಪಂಚೆಯೊಂದನ್ನು ಮೊಳಕಾಲಿನವರೆಗೆ ಸುತ್ತಿಕೊಂಡು, ಕುಟುಂಬದ ಯೋಗಕ್ಷೇಮವನ್ನು ವಿಚಾರಿಸುವುದಕ್ಕಿಂತಲೂ ಸಾವಿರ ಪಾಲು ಹೆಚ್ಚಿನ ಮಮತೆಯಿಂದಲೂ ಕುತೂಹಲದಿಂದಲೂ ಆ ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾ ಸೇವೆ ಮಾಡುತ್ತಿದ್ದರು. ಅವುಗಳಿರುವ ಒಡ್ಡಿಗಳು ಕಣ್ಣಿನಿಂದ ಮರೆಯಾಗಿದ್ದರೆ ಮನಸ್ಸಿನಿಂದಲೂ ಎಲ್ಲಿಯಾದರೂ ಮರೆಯಾಗಿ ಬಿಟ್ಟಾವು ಎಂಬ ಅಳುಕಿನಿಂದಲೇ ಜಗಲಿಯ ಎದುರುಗಡೆ, ನೇರವಾಗಿ ಕಾಣುವಂತೆ, ಒಡ್ಡಿಗಳನ್ನೆಲ್ಲಾ ಕಟ್ಟಿಸಿದ್ದರು.

ಜನರು ತಮ್ಮನ್ನು ನೋಡಿ ಒಳಗೊಳಗೆ ಇಸ್ಸಿ ಎಂದುಕೊಂಡರೆ, ಮುದುಕರಾಗಿದ್ದ ಸುಬ್ಬಣ್ಣ ಹೆಗ್ಗಡೆಯವರಿಗೆ ಅದು ಲಕ್ಷಕ್ಕೇ ಬರುತ್ತಿರಲಿಲ್ಲ. ಬಂದರೂ ಅಂಥವರನ್ನು ಕಂಡು ಕನಿಕರಪಡುತ್ತಿದ್ದರೇ ಹೊರತು ತಾವೇ ನಾಚಿಕೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಸೂಕ್ಷ್ಮ ರುಚಿಗಳಾಗಿರಲಿಲ್ಲ ಅವರು.