ಕರ್ಮೀನ್‌ಸಾಬ್ರು ಚೀಂಕ್ರ ತನಗೆ ಸಿಕ್ಕಿದ್ದು ಎಂದು ಹೇಳಿ ತಂದು ಅಡವಿಟ್ಟಿದ್ದ ಹರಳುಂಗುರವನ್ನೇನೊ ಲಬಟಾಯಿಸಿಯೆ ಬಿಟ್ಟರು, ವಂಚನೆಗೆ ಸರಿದೂಗುವ ಚುರುಕು ಬುದ್ಧಿಯಿಲ್ಲದೆ ಬರಿಯ ಜಂಬಗಾರನಾಗಿದ್ದ ಸೇರೆಗಾರನಿಗೆ ಬ್ರಾಂದಿ, ಸ್ವಾರ್ಲುಮೀನು, ಉಪ್ಪು, ಹೊಗೆಸೊಪ್ಪು, ಮೆಣಸಿನಕಾಯಿ, ತೆಂಗಿನಕಾಯಿ, ಪಂಚೆ, ಭಂಗಿ ಇತ್ಯಾದಿ ಸುಳ್ಳು-ಪೊಳ್ಳು ಲೆಖ್ಖ ತೋರಿಸಿ! ತನಗೂ ಲೆಖ್ಖ ಬರುತ್ತದೆ ಎಂದು ತೋರಿಸಿಕೊಳ್ಳಲು ಚೀಂಕ್ರ ಸೇರೆಗಾರ ಕೇಳಿದ ಪ್ರಶ್ನೆಗಳಿಗೆ ಸಾಬ್ರು ಎಂಥೆಂಥ ಜಟಿಲ ಉತ್ತರ ಕೊಡುತ್ತಿದ್ದರು. ಎಂದರೆ ಅವುಗಳ ವಿದ್ವತ್ತಿಗೇ ಚೀಂಕ್ರ ತಗರುಬಿಗುರಾಗಿ, ಮಾರುಹೋಗಿ, ತನಗೆ ಅವು ಅರ್ಥವಾಗಲಿಲ್ಲ ಎಂದರೆ ತನ್ನ ಬೆಪ್ಪಲ್ಲಿ ಬಯಲಾಗುತ್ತದೆಯೋ ಎಂದು ಅಂಜಿ, ಬೆಪ್ಪು ನಗೆ ನಗುತ್ತಾ “ಬರಾಬರಿ, ಸಾಬ್ರೆ, ಬರಾಬರಿ!” ಎಂದು ತಾನು ಕೇಳಿದ್ದ ಯಾವುದೋ ವ್ಯಾಪಾರಗಾರರ ಮಾತಿನ ತನಗರ್ಥವಾಗದ ಪರಿಭಾಷೆಯನ್ನು ಪ್ರಯೋಗಿಸಿ ಒಪ್ಪಿಗೆ ಕೊಟಿದ್ದನು, ವಾಣಿಜ್ಯ ವಿಷಯದಲ್ಲಿಯೂ ಸಾಬರಿಗೆ ಬಿಟ್ಟುಕೊಡಲಿಲ್ಲ ಎಂದು ಹೆಮ್ಮೆಪಟ್ಟುಕೊಂಡು!.

ಆದರೂ, ಕರೀಂ ಸಾಬುಗೆ ಆ ಉಂಗುರ ಸೇರೆಗಾರನಿಂದ ದಕ್ಕಿದ್ದರೂ ಅದನ್ನು ದೈವದಿಂದ ದಕ್ಕಿಸಿಕೊಳ್ಳುವಷ್ಟು ಧೈರ್ಯವಿರಲಿಲ್ಲ. ಆ ಉಂಗುರ ತಾನೆ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೆ ಮಾರಿದ್ದು ಎಂದು ಗುರುತಿಸಿದೊಡನೆ ಅವನಿಗೆ ಏನೋ ದುಃಶಕುನ ಭೀತಿಯುಂಟಾಗಿತ್ತು. ಆ ಉಂಗುರ ಯಾರದ್ದಾಗಿರುತ್ತದೆಯೆ ಅವರಿಗೆ ಕ್ಷೇಮವಿಲ್ಲ ಎಂಬ ಭಾವನೆ ಮೂಡಿತ್ತು. ಆ ಉಂಗುರವನ್ನು ತೊಟ್ಟಿದ್ದರಿಂದಲ್ಲವೆ ಅದನ್ನಿಟ್ಟು ಕೊಂಡಿದ್ದ ಅಕ್ಕಸಾಲಿ ದಂಪತಿಗಳು, ಒಬ್ಬನು ಖುನಿಯಾಗಿಯೂ ಒಬ್ಬಳು ಅಬ್ಬರಿಗೆ ಹಾರಿಯೂ, ದುರ್ಗತಿಯನ್ನಪ್ಪಿದ್ದು? ಆ ಉಂಗುರ ತನ್ನ ಕೈಸೇರಿದ್ದಾಗಲೆ ತನಗೂ ತನ್ನ ಸಂಸಾರಕ್ಕೂ ಒಂದಾದ ಮೇಲೊಂದು ಸಾವು ನೋವು ಕಷ್ಟ ಸಂಕಟ ರೋಗ ರುಜೆ ಉಂಟಾದದ್ದು? ಅದನ್ನು ಬೆಟ್ಟಳ್ಳಿ ಕಲ್ಲಯ್ಯಗೌಡರಿಗೆ ದಾಟಿಸಿದ ಮೇಲೆ ಅವರಿಗೂ ಮುಜುಗರ ಹಿಡಿದದ್ದು? ಅವರ ಮಗ ಪೋಲಿಬಿದ್ದುದ್ದು? ಕಿಲಸ್ತರ ಸಹವಾಸಕ್ಕೆ ಸಿಕ್ಕಿ ಜಾತಿ ಕೆಡಲು ಹವಣಿಸಿದ್ದು? ಅವರ ಸೊಸೆಯ ಅಕ್ಕನಿಗೆ, ಗಂಡ ತಿರುಪತಿಗೆ ಹೋದವನು ಹಿಂದಕ್ಕೆ ಬರದೆ, ಹುಚ್ಚು ಹಿಡಿದದ್ದು? ಕರೀಮ್ ಸಾಬಿ ಆಲೋಚಿಸಿದಂತೆಲ್ಲ ಅವನ ಸಿದ್ಧಾಂತಕ್ಕೆ ಹೆಚ್ಚು ಹೆಚ್ಚು ಪುಷ್ಟಿ ದೊರಕಿತು. ಆ ಉಂಗುರವನ್ನು ಬೇಗನೆ ಬೇರೆ ಯಾರಿಗಾದರೂ ಮಾರಿ, ‘ಮಾರಿ-ದಾಟಿಸಿ’ ಬಿಡಬೇಕೆಂದು ನಿಶ್ಚಯಿಸಿದನು. ಆ ಊಂಗುರ ಮತ್ತೆ ತನ್ನಲ್ಲಿಗೆ ಬಂದ ದಿನವೇ ಅಲ್ಲವೆ, ಸಿಂಬಾವಿಯಲ್ಲಿ ತನಗೆ ಕಷ್ಟ ಪ್ರಾರಂಭವಾದದ್ದು? ಗುತ್ತ್ತಿಯ ಕೈಲಿ ಇಜಾರದ ಸಾಬಿ ಕಡಿಸಿಕೊಂಡದ್ದು? ರಾತ್ರಾ ರಾತ್ರಿ ಆ ಮಳೆಯಲ್ಲಿ, ದುರ್ಗಮ, ಬೆಟ್ಟಗುಡ್ಡ ಕಾಡುಗಳಲ್ಲಿ, ರಕ್ತ ಸೋರುತ್ತಿದ್ದ ಇಜಾರದ ಸಾಬಿಯನ್ನು ಬಹುಕಷ್ಟದಿಂದ ಕುದುರೆಯಮೇಲೆ ಸಾಗಿಸಿ ತಂದದ್ದು? ತೀರ್ಥಹಳ್ಳಿಯ ಆಸ್ಪತ್ರೆಗೆ ಸೇರಿಸಲು ಅವನನ್ನು ಕೊಂಡೊಯ್ಯುವುದೇ ಒಂದು ಹರಮಹಾಕಾಲವಾಯಿತಲ್ಲ? ಮತ್ತೆ, ಆ ಪೋಲೀಸಿನವರು, ಆ ಅಮಲ್ದಾರರು, ಆ ಇನಿಸ್ಪೆಕ್ಟರ್ ಇವರಿಂದ ಒದಗಿದ್ದ ಗೋಳೋ ಅಷ್ಟಿಷ್ಟಲ್ಲ! ಅಂತೂ ಆ ಪುಂಡುಮುಂಡೇಗೌಡ ಬದ್ಮಾಷ್ ಹೇಗೋ ಗುಣವಾಗಿ ಹೊನ್ನಾಳಿಗೆ ಅವನೂರಿಗೆ ತೊಲಗಿದ್ದೆ ನಾನು ಬಚವಾದೆ!…. ಈ ಉಂಗುರ ನನ್ನಲ್ಲಿದ್ದರೆ ನನಗೆ ಕೇಡು ತಪ್ಪಿದ್ದಲ್ಲ….ಮಾರುವುದಾದರೂ ಸರಿಯಾದ ಈಗಿನ ಬೆಲೆಗೇ ಮಾರಬೀಕು…. ಸಾಹುಕಾರ ಕಲ್ಲೂರು ಮಂಜಭಟ್ಟರು, ಹೇಲಿನಲ್ಲಿ ಕಾಸು ಹೆಕ್ಕುವವರು, ಅವರು ಅರ್ಥ ಬೆಲೆಗೂ ಕೊಳ್ಳುವುದಿಲ್ಲ; ಕೊಂಡರೆ ಕೊಳ್ಳಬೇಕು ಬೆಟ್ಟಳ್ಳಿ ಸಾಹುಕಾರರು. ಆದರೆ….ಮತ್ತೆ ನಾನೇ ಈ ಉಂಗುರವನ್ನು ಕಲ್ಲಯ್ಯಗೌಡರ ಹತ್ತಿರ ಕೊಂಡೊಯ್ದರೆ, ಗುರುತು ಸಿಕ್ಕಿ, ಮತ್ತೆ ಹೊಸ ಕಷ್ಟಕ್ಕೆ ಸಿಕ್ಕಿಕೊಳ್ಳುವುದೇ ನಿಜ! ಈ ಉಂಗುರದಿಂದ ಆಗುವ ಕೇಡನ್ನು ತಪ್ಪಿಸಿಕೊಳ್ಳುವುದಕ್ಕೆ ಹೋಗಿ, ಮತ್ತೊಂದು ತಿಗಲಿಗೆ ಖಂಡಿತಾ ಸಿಕ್ಕಿಕೊಳ್ಳುತ್ತೇನೆ…. ನಾನು ಹೋಗುವುದಿಲ್ಲ ನನ್ನ ತಮ್ಮ ಇದನ್ನೆಲ್ಲ ನಂಬುವುದಿಲ್ಲ. ಬಹಳ ಉಡಾಫಿ. ಅವನನ್ನೆ ಕಳಿಸುತ್ತೇನೆ….

ಕೆಂಪುಗೀಟಿನ ಲುಂಗಿಯುಟ್ಟು, ನೀಲಿ ಬಣ್ಣದ ಉದ್ದ ಬನೀನು ತೊಟ್ಟು, ತಲೆಗೆ ಬಣ್ಣದ ರೇಷ್ಮೆ ವಸ್ತ್ರ ಸುತ್ತಿದ್ದ ಕುಡಿ ಮೀಸೆಯ ಪುಡಿಸಾಬು ಬೆಟ್ಟಳ್ಳೀಗೆ ಹೋಗಿಕಲ್ಲಯ್ಯಗೌಡರನ್ನು ಕಂಡು ಸಾಲಾಮು ಮಾಡಿದಾಗ ಅವರು ಸ್ವಲ್ಪ ಡಂಗುಬಡಿದವರಾಗಿ, ಪಕ್ಕನೆ ಗುರುತುಹಿಡಿಯಲಾರದೆ, ಬಹುವಚನದಲ್ಲಿ ಗೌರವದಿಂದ ಸ್ವಾಗತಿಸಿದರು; “ಬನ್ನಿ ಸಾಹೇಬರೆ…. ಮೇಲಕ್ಕೆ ಬನ್ನಿ, ಪರ್ವಾ ಇಲ್ಲ;…. ಅಲ್ಲಿ ಯಾಕೆ ತಣೆಯ ಮೇಲೆ ಕೂರುತ್ತೀರಿ? ಜಗಲಿಗೇ ಬನ್ನಿ; ಪರ್ವಾ ಇಲ್ಲ.”

ಪುಡಿಸಾಬಿಗೆ ತಕ್ಷಣ ಗೊತ್ತಾಯ್ತು ವಯೋಧರ್ಮದಿಂದ ದೃಷ್ಟಿ ಮಂದವಾಗಿದ್ದ ಗೌಡರು ತನ್ನನ್ನು ಈ ಷೋಕಿಯ ವೇಷದಲ್ಲಿ ಗುರುತಿಸಲಾರದೆ ಹೋಗಿದ್ದಾರೆ ಎಂದು. ಅವರು ಮೇಲಕ್ಕೆ ಬರಹೇಳಿದರೂ ಅವನು ಜಗಲಿಗೆ ಹತ್ತಲಿಲ್ಲ.!

“ನಾನು, ಸ್ವಾಮಿ, ಮೇಗರವಳ್ಳಿ ಕರೀಮ್ ಸಾಬರ ತಮ್ಮ” ದೇಶಾವರದ ನಗೆ ನಕ್ಕನು.

“ಓಹೋ! ಪುಡಿ ಸಾಬನೇನೊ? ನನಗೆ ಗುರುತೇ ಸಿಗಲಿಲ್ಲ. ನನ್ನ ಕಣ್ಣು ಬೇರೆ ಇತ್ತಿತ್ತಲಾಗಿ ಮಬ್ಬಾಗ್ತಾ ಅದೆ…. ಕೂತುಗೋ, ಕೂತುಗೋ. ಏನು ಬಂದಿದ್ದು?” ಗುರುತಿಸಿದೊಡನೆ ಕರೀಮ್ ಸಾಬಿಯ ತಮ್ಮನಿಗೆ ಅರ್ಹವಾಗುವ ರೀತಿಯಲ್ಲಿ ತಮ್ಮ ಧ್ವನಿ ಬದಲಾಯಿಸಿದ್ದರು ಗೌಡರು….

ವಿಷಯ ತಿಳಿಸಿ, ಹರಳುಂಗುರವನ್ನು ಜೇಬಿನಿಂದ ತೆಗೆದು ತುಂಬ ಧೂರ್ತಸಹಜ ವಿನಯದಿಂದ ಬಾಗಿ, ತನ್ನ ಎಡಗೈಯನ್ನು ಬಲಗೈಯ ಕುಣಿಕೆಗೆ ಮುಟ್ಟಿಸಿಕೊಂಡು, ಬಲಗೈಯಲ್ಲಿ ಹಿಡಿದಿದ್ದ ಉಂಗುರವನ್ನು ಗೌಡರ ಕೈಗೆ ಇಳಿಬಿಟ್ಟನು.

ಕಲ್ಲಯ್ಯಗೌಡರು ಉಂಗುರವನ್ನು ಅತ್ತ ಇತ್ತ ತಿರುಗಿಸಿ, ಪರೀಕ್ಷಕನ ಗತ್ತಿನಿಂದ, ಸ್ವಲ್ಪ ಹೆಚ್ಚೆ ಎನ್ನಬಹುದಾದಷ್ಟು ಹೊತ್ತು ಪರಿಶೀಲಿಸಿದರು. ಪುಡಿಸಾಬಿಯ ಅಣ್ಣ ಕರ್ಮೀನ್ ಸಾಬಿ ಕೆಲವು ವರ್ಷಗಳ ಹಿಂದೆ ತಮಗೆ ಮಾರಿದ್ದ ಇಂಥಾದ್ದೆ ಒಂದು ಹರಳುಂಗುರದ ನೆನಪಾಗಿ, ಇದನ್ನೂ ಅದನ್ನೂ ಮನಸ್ಸಿನಲ್ಲಿಯೆ ಹೋಲಿಸುವಂತೆ ಮತ್ತೂ ಸ್ವಲ್ಪ ಕಾಲ ಸಮೀಕ್ಷಿಸಿದರು, ಬೆಲೆ ವಿಚಾರಿಸಿದರು. ಪುಡಿಸಾಬಿ ಹೇಳುತ್ತಿರುವ ಬೆಲೆ ತುಂಬ ಹೆಚ್ಚಾಯ್ತು ಎಂದುಕೊಂಡರು. (ಪುಡಿಸಾಬಿ ತನ್ನ ಅಣ್ಣ ಮಾರಲು ಹೇಳಿದ್ದ ಕರೀದಿಗಿಂತಲೂ ಒಂದೂವರೆಯಷ್ಟು ಜಾಸ್ತಿ ಹೇಳಿದ್ದನು. ಅವನು ತನ್ನ ಖಾಸಗಿ ಖರ್ಚಿಗೆ ಹಣ ಸಂಪಾದನೆ ಮಾಡಬೇಡವೇ)

ಗೌಡರು ಇದ್ದಕ್ಕಿದ್ದ ಹಾಗೆ ತಮ್ಮ ಮಗನ ಹೆಸರು ಹಿಡಿದು ಕೂಡರು. ಬಳಿಗೆ ಬಂದು ನಿಂತ ದೇವಯ್ಯಗೆ ಒರೆಗಲ್ಲು ತರಲು ಹೇಳಿದರು. ಒರೆಗಲ್ಲಿಗೆ ಉಂಗುರವನ್ನು ತಿಕ್ಕಿ ಒರೆಹಚ್ಚಿದರು. “ಬರೀ ಬೆಟ್ಟೆ ಬಂಗಾರ ಕಂಡಂಗೆ ಕಾಣ್ತದೆ!” ಎಂದುಕೊಂಡು ಮಗನತ್ತ ತಿರುಗಿ “ಒಂದು ಕೆಲಸ ಮಾಡ್ತೀಯಾ, ದೇವು? ಇವನಣ್ಣ ಹಿಂದೆ ಒಂದು ಉಂಗುರ ಕೊಟ್ಟಿದ್ದನಲ್ಲಾ?…. ಅದೇ, ನಿನಗೆ ಕೊಟ್ಟ ಉಂಗರಾನೋ!….ಇಂಥಾದ್ದೇ ಹರಳುಂಗುರ! ಅದನ್ನ ತಗೊಂಡು ಬಾ, ಒರೆಹಚ್ಚಿ ನೋಡಾನ” ಎಂದರು.

ದೇವಯ್ಯ ಪಿತೃ ಆಜ್ಞಾ ಪರಿಪಾಲನಾ ಆತುರನೆಂಬಂತೆ ತನ್ನ ಮಲಗುವ ಕೋಣೆಯ ಕಡೆಗೆ ಬಿರುಬಿರನೆ ನಡೆದು ಕಣ್ಮರೆಯಾದನು. ಬಹಳ ಹೊತ್ತಾದರೂ ಹೊರಗೆ ಬರಲಿಲ್ಲ. “ಎಲ್ಲಿಯೋ ಮರೆತಿಟ್ಟು ಊಂಗುರವನ್ನು ಹುಡುಕುತ್ತಿದ್ದಾನೆ; ಈಗಿನ ಹುಡಗರ ಹಣೆಬರಹವೇ ಹೀಂಗೆ” ಎಂದುಕೊಂಡು ಗೌಡರು, ಪುಡಿಸಾಬಿಯೊಡನೆ ಇಜಾರದ ಸಾಬಿಯ ವಿಚಾರವಾಗಿಯೂ ಮಿಶನ್ ಇಸ್ಕೂಲಿನ ಕಟ್ಟದದ ವಿಚಾರವಾಗಿಯೂ ಇನ್ನೂ ಮನಸ್ಸಿಗೆ ಹೊಳೆಹೊಳೆದಂತೆ ಅನೇಕ ವಿಷಯಗಳನ್ನೂ ಕುರಿತು ಲೋಕಾಭಿರಾಮವಾಗಿ ಮಾತಾಡತೊಡಗಿದರು.

ತನ್ನ ಅಪ್ಪಯ್ಯ ಉಂಗುರದ ವಿಷಯ ಎತ್ತಿದೊಡನೆ ದೇವಯ್ಯನಿಗೆ ಎದೆ ಡವಗುಟ್ಟತೊಡಗಿತು. ಅದನ್ನು ತರಹೇಳಿದೊಡನೆ ಅವನಿಗೆ ಮೈಮೇಲೆ ಕುದಿನೀರು ಹೊಯ್ದಂತಾಗಿ, ತನ್ನ ಅಸ್ಥಿರತೆ ಗೋಚರವಾಗುವ ಮುನ್ನವೆ ಅಲ್ಲಿಂದ ಕಾಲು ಕಿತ್ತಿದ್ದನು. ತನ್ನ ಕೋಣೆಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಚಿಂತಿಸತೊಡಗಿದನು.

ಹಾಳು ಆ ಉಂಗರ ತನ್ನಲ್ಲಿಯೂ ಇರಲಿಲ್ಲ, ತಾನು ಮೆಚ್ಚುಗೊಟ್ಟಿದ್ದ ಐಲು ಹುಡಗಿಯ ಕೈಯಲ್ಲಿಯೂ ಇದ್ದ ಹಾಗೆ ತೋರಲಿಲ್ಲ! ಎರಡು ಮೂರು ಸಾರಿ ಕಾವೇರಿಯನ್ನು ಸಂಧಿಸಿ, ಅವಳೊಡನೆ ಸರಸವಾಡಿ, ಉಂಗುರ ಎಲ್ಲಿ ಎಂದು ಕೇಳಿದಾಗಲೆಲ್ಲ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಳೂ. ಒಮ್ಮೆ ‘ಅಲ್ಲೆಲ್ಲಿಯೋ ಇಟ್ಟಿದ್ದೇನೆ, ಆಮೇಲೆ ತೋರಿಸುತ್ತೇನೆ.’ ಎಂದಿದ್ದಳು ಇನ್ನೊಮ್ಮೆ ‘ಅಬ್ಬೆ ಇಟ್ಟುಕೊಂಡಿದ್ದಾಳೆ. ನಾಳೆ ನಾಡಿದ್ದರ ಹಾಗೆ ಅವಳಿಂದ ಈಸಿಕೊಳ್ಳುತ್ತೇನೆ.’ ಎಂದಿದ್ದಳು ಮತ್ತೊಮ್ಮೆ ‘ಅಯ್ಯೋ ಮರತೇಹೊಯ್ತು. ಇನ್ನೊಂದು ಸಾರಿ ನೀವು ಬರುವಾಗ ಖಂಡಿತಾ ಹುಡುಕಿಟ್ಟಿರುತ್ತೇನೆ.’ ಎಂದು ಮೋಹಕವಾಗಿ ಕ್ಷಮೆ ಯಾಚಿಸಿದ್ದಳು. ದೇವಯ್ಯನಿಗೆ ಅವಳ ಮೇಲೆ ಸಂಶಯವೂ ಹುಟ್ಟಿತ್ತು. ಬೇರೆ ಇನ್ನಾರಿಗಾದರೂ ಕೊಟ್ಟಿರಬಹುದೇ ಎಂಬ ಸಂದೇಹಕ್ಕೆ ಒಳಗಾಗಿ, ಮಾತ್ಸರಕ್ಕೂ ತುತ್ತಾಗಿದ್ದನು. ಈಗ ಷೋಕಿಯಾಗಿ ಸುಪುಷ್ಟ ದೃಢ ಕಾಯನಾಗಿದ್ದ ಪುಡಿಸಬಿಯ ಕೈಯಲ್ಲಿದ್ದ ಹರಳುಂಗರ ಅದೇ ಆಗಿರಬಹುದೇ ಎಂಬ ಸಂಶಯವೂ ಅವನನ್ನು ಬಾಧಿಸತೊಡಗಿತ್ತು.

ತಂದೆ ಜಗಲಿಯಿಂದ ತನ್ನ ಹೆಸರು ಕೂಗಿದ್ದು ಕೇಳಿಸಿ, ದೇವಯ್ಯ ಸದ್ಯೋಪಾಯವೊಂದನ್ನು ನಿರ್ಣಯಿಸಿ, ತನ್ನ ಭಾವೋದ್ವೇಗದ ಕುರುಹು ಕಾಣಿಸದಂತೆ ಉಡುಗಿಸಲು ಪ್ರಯತ್ನಿಸುತ್ತಾ ಜಗಲಿಯ ನಡೆದನು. ಎಷ್ಟು ಹುಡುಕಿದರೂ ಸಿಕ್ಕಿರಲಿಲ್ಲವೆಂದೂ ತನ್ನ ಹೆಂಡತಿ ಹಳೆಮನೆಯ ಲಗ್ನಕ್ಕೆ ಹೋಗುವಾಗ ‘ಮೈಯಿಡಲು’ ಆ ಉಂಗುರವನ್ನು ತೆಗೆದುಕೊಂಡು ಹೋಗಿರಬಹುದೆಂದೂ, ಅದಕ್ಕೆ ಬದಲಾಗಿ ಬೇರೆಯೊಂದನ್ನು ಏನಾದರೂ ‘ಮೈಯಿಡಿಸಿ’ ಅದನ್ನು ಹಿಂದಕ್ಕೆ ತರಿಸುತ್ತೇನೆಂದೂ ಹೇಳಿದನು. ಗೌಡರು “ಈಗಿನ ಕಾಲದ ಹುಡುಗರಿಗೆ ಹಿರಿಯರು, ಮನೆಯ ಯಜಮಾನರು ಅನ್ನುವುದೇನೂ ಇಲ್ಲ…. ಹೇಳುವುದಿಲ್ಲ, ಕೇಳುವುದಿಲ್ಲ, ಮನಸ್ಸಿಗೆ ಬಂದ ಹಾಗೆ ಮಾಡ್ತಾರೆ…. ನನಗೊಂದು ಮಾತು ತಿಳಿಸದೆ, ಅದನ್ನು ಮೈಯಿಡಾಕ ಕೊಟ್ಟೆ ಅಂತೀಯಲ್ಲಾ?” ಎಂದು ಗೊಣಗಿ, ಪುಡಿಸಾಬಿಗೆ “ಈಗ ಬ್ಯಾಡಕಣೋ, ತಂಗೊಂಡು ಹೋಗೋ. ಆ ಉಂಗುರ ಬಂದ ಮ್ಯಾಲೇ ನೋಡಾನ. ಭಾರಿ ದುಬಾರಿ ಬ್ಯಾರೆ ಕರೀದಿ ಹೇಳ್ತಿಯಾ. ಒರೇ ಹಚ್ಚಿದರೆ ಬರೀ ಬೆಟ್ಟೇ ಬಂಗಾರಧಾಂಗೆ ಕಾಣ್ತದೆ…. ಆ ಉಂಗುರ ಬರಲಿ; ಸರಿಯಾಗಿ ಓರೇ ಹಚ್ಚಿ ನೋಡಿ ಕರೀದಿ ಮಾಡಾದಾದ್ರೆ ಮಾಡನ.” ಎಂದು ಹೇಳಿ ಕಳಿಸಿಬಿಟ್ಟರು.

ಪುಡಿಸಾಬಿ ಬೈಸಿಕಲ್ಲು ಹಕ್ಕಲನ್ನು ದಾಟಿ, (ದೇವಯ್ಯ ಉಪದೇಶಿ ಜೀವ ರತ್ನಯ್ಯನ ಗುರುತ್ವದಲ್ಲಿ ಬೈಸಿಕಲ್ಲಿನ ಅಭ್ಯಾಸಮಾಡಿದ್ದ ಆ ಸ್ಥಳಕ್ಕೆ ಜನ ‘ಬೈಸಿಕಲ್ಲು ಹಕ್ಕಲು’ ಎಂದೇ ನಾಮಕರಣ ಮಾಡಿದ್ದರು.) ಬೆಟ್ಟಳ್ಳಿಯ ಹೊಲೆಗೇರಿಗೆ ಅಗಚುತ್ತಿದ್ದ ಕಾಲು ದಾರಿಯ ಅರೆಕಲ್ಲಿನ ಕಾರೆಮಟ್ಟಿನ ಹತ್ತಿರಕ್ಕೆ ಬಂದಿದ್ದನು. (ಗುತ್ತಿ ಸಿಂಬಾವಿಯಿಂದ ಬೆಟ್ಟಳ್ಳಿ ಕೇರಿಯ ಅತ್ತೆಮನೆಗೆ ಬರುವಾಗಲೆಲ್ಲ ಅವನ ನಾಯಿ, ಹುಲಿಯ, ಕಾಲೆತ್ತಿ ಅಭಿಷೇಕ ಮಾಡುತ್ತಿದ್ದ ಕಾರೆಯ ಗುಜ್ಜುಪೊದೆ!) ಹಿಂದೆ ಬೈಸಿಕಲ್ಲು ಬೆಲ್ಲಿನ ಸದ್ದಾಯಿತು ಟೀ ಟ್ರೀಂ ಟ್ರೀಂ! ನಿಂತು ಹಿಂದಕ್ಕೆ ನೋಡುತ್ತಿದ್ದಂತೆ ದೇವಯ್ಯ ಬಳಿಸಾರಿ ಬೈಸಿಕಲ್ಲಿನಿಂದ ಇಳಿದನು.

ದೇವಯ್ಯ ಬೈಸಿಕಲ್ಲನ್ನು ಒಂದು ಮರಕ್ಕೆ ಒರಗಿಸಿಟ್ಟನು. ‘ನಿನ್ನ ಹತ್ರ ಸ್ವಲ್ಪ ಮಾತಾಡುವುದಿದೆ.’ ಎನ್ನುತ್ತಾ ಕಾರೆಮಟ್ಟಿನ ಬುಡದಲ್ಲಿ ಅರೆಕಲ್ಲಿನ ಮೇಲೆ ಕುಳಿತನು. ಪುಡಿಸಾಬಿಯೂ ತುಸುದೂರದಲ್ಲಿಯೆ ಗೌರವಪೂರ್ವಕವಾಗಿ ಕುಳಿತನು.

“ಎಲ್ಲಿ? ಆ ಉಂಗುರ ತೆಗೆ, ಸ್ವಲ್ಪ ನೋಡ್ತೀನಿ.”

ದೇವಯ್ಯಗೌಡರು ತಮ್ಮ ತಂದೆಗೆ ತಿಳಿಯದಂತೆ ತಾವೇ ಉಂಗುರ ವಿಕ್ರಯ ಮಾಡಲು ಬಂದಿರಬೇಕು ಎಂದು ಭಾವಿಸಿ, ಕಳ್ಳವ್ಯಾಪಾರದಲ್ಲಿ ನಿಷ್ಣಾತನಾಗಿದ್ದ ಪುಡಿಸಾಬ ಉಂಗುರವನ್ನು ಹೊರತೆಗೆದು ದೇವಯ್ಯನ ಕೈಲಿಟ್ಟನು. ನೋಡುವುದೆ ತಡ, ದೇವಯ್ಯಗೆ ಆ ಉಂಗುರ ತಾನು ಕಾವೇರಿಯ ಬೆರಳಿಗೆ ತೊಡಿಸಿದ್ದುದೇ ಎಂಬುದು ಖಾತ್ರಿಯಾಯಿತು.

ಸದ್ಯಕ್ಕೆ ಇದು ನನ್ನ ಹತ್ತಿರ ಇರಲಿ, ಆಮೇಲೆ ಕೊಡುತ್ತೇನೆ. ದುಡ್ಡಾದರೆ ದುಡ್ಡು, ಉಂಗುರ ಆದರೆ ಉಂಗುರ. ದೇವಯ್ಯನೆಂದನು. ಭಾವತಿಶಯದಿಂದ ಲೆಂಬಂತೆ ಅವನು ಸ್ವಲ್ಪ ಜೋರಾಗಿಯೆ ಉಸಿರು ಎಳೆದು ಬಿಡತೊಡಗಿದ್ದನು.

“ಆಗುವುದಿಲ್ಲ, ಸ್ವಾಮಿ, ನನಗೆ ಕೊಟ್ಟವರು ನನ್ನನ್ನು ಸುಮ್ಮನೆ ಬಿಡುತ್ತಾರೆಯೆ?” ಕೈಮುಗಿದು ಹೇಳಿದನು ಪುಡಿಸಾಬು.

“ಯಾರು ಕೊಟ್ಟಿದ್ದೋ? ಎಲ್ಲಿತ್ತೋ ಇದು ನಿನಗೆ!” ದೇವಯ್ಯನ ದನಿ ಬಿಗಡಾಯಿಸಿತ್ತು.

“ಯಾರೊ ಕೊಟ್ಟರು. ಅದು ಯಾಕೆ ನಿಮಗೆ?” ಹುಸಿನಕ್ಕನು ಸಾಬಿ.

“ಗಂಡಸರೊ? ಹೆಂಗಸರೊ?”

“ಹೆಂಗಸರು ಅಂತಾನೆ ಇಟ್ಟುಕೊಳ್ಳಿ!” ಪುಡಿಸಾಬಿಗೆ ಚೀಂಕ್ರ ಅದು ತನಗೆ ಲಭಿಸಿದ್ದ ರೀತಿಯನ್ನು ಇಂಗಿತವಾಗಿ ತಿಳಿಸಿದ್ದನು. ಪುಸಿಸಾಬಿಗೂ ಗೊತ್ತಿತ್ತು. ದೇವಯ್ಯಗೌಡರು ಅಂತಕ್ಕನ ಮಗಳೊಡನೆ ಆಡುತ್ತಿದ್ದ ಸರಸದ ಸಂಗತಿ.

“ಇದೂ…ಕದ್ದ ಮಾಲು! ನೀನು ತೊಂದರೆಗೆ ಸಿಕ್ಕಿಕೊಳ್ಳುತ್ತೀಯ, ಪೋಲೀಸರ  ಕೈಲಿ.”

“ಪೋಲೀಸರು ನಮಗೂ ಗೊತ್ತು, ಸ್ವಾಮಿ, ನಿಮ್ಮೊಬ್ಬರಿಗೇ ಅಲ್ಲ…ಇದನ್ನು ನಾನೇನು ಕದ್ದು ತಂದದ್ದಲ್ಲ; ಇನಾಮು ಬಂದದ್ದು.” ಹೇಳುತ್ತಾ ಇಂಗಿತವಾಗಿ ಹುಳಿನಗೆ ನಕ್ಕನು ಪುಡಿಸಾಬಿ, ದೇವಯ್ಯನ ಮುಖವನ್ನು ಮೂದಲಿಸುವಂತೆ ನೋಡುತ್ತಾ.

“ಯಾರೋ ನಿನಗೆ ಕೊಟ್ಟದ್ದು ಇನಾಮು? ಸುಳ್ಳು ಹೇಳ್ತಿಯಾ?”

“ಆಗಲೆ ಹೇಳಿದ್ದೇನಲ್ಲಾ!….”

ದೇವಯ್ಯ ತಟಕ್ಕನೆ ಮಾತು ನಿಲ್ಲಿಸಿ ಎದುರಿಗಿದ್ದ ಒಂದು ಮರಕ್ಕೆ ಅದರಲ್ಲಿ ಜೋಲಾಡುತ್ತದ್ದ ಹಸಿಕಾಯಿಯ ಬೀಜ ಬಿಡಿಸಿ ತಿನ್ನಲೆಂದು ಉಲಿಯುತ್ತಾ ಹಾರಿಬಂದು ಕುಳಿತು, ಎಲೆಹಸುರಿನಲ್ಲಿ ಮುಳುಗಿಹೋದ ಒಂದು ಗಿಣಿಹಿಂಡಿನ ಕಡೆಗೆ ಹುಡುಕಿನೋಡುವಂತೆ ಸ್ವಲ್ಪ ಹೊತ್ತು ನಿರ್ನಿಮೇಷನಾಗಿದ್ದನು. ಮತ್ತೆ ಉಂಗುರವನ್ನು ಸಾಬಿಯ ಕೈಗಿತ್ತು, ಸರಕ್ಕನೆ ಮರಕ್ಕೆ ಒರಗಿಸಿದ್ದ ಬೈಸಿಕಲ್ಲನ್ನು ಹಾದಿಗೆ ತಂದು, ಹತ್ತಿ ಹೊರಟೆ ಹೋದನು, ಗಿಡಮರ ಪೊದೆಯ ಕಾಡಿನಲ್ಲಿ ಮರೆಯಾಗಿ. ಆದರೆ ಸಾಬಿಯಲ್ಲಿ ಪ್ರಸುಪ್ತವಾಗಿದ್ದ ಪಶುರುಚಿಯೊಂದರ ಕೆರಳಿಕೆಗೆ ಕಾರಣವಾಗುವ ಆಲೋಚನಾ ತರಂಗಗಳನ್ನು ಎಬ್ಬಿಸಿ ಹೋಗಿದ್ದನಷ್ಟೆ!

ಪುಡಿಸಾಬಿ ಮೇಗರವಳ್ಳಿಗೆ ಹಿಂತಿರುಗಿದವನು ಆ ಉಂಗುರವನ್ನು ತನ್ನ ಅಣ್ಣನ ಕೈಗೆ ವಾಪಾಸು ಕೊಡಲಿಲ್ಲ. “ಉಂಗುರವನ್ನು ಕಲ್ಲಯ್ಯ ಗೌಡರು ತೆಗೆದುಕೊಂಡರು; ನಮಗೆ ಸಲ್ಲಬೇಕಾದ ಹಣವನ್ನು ನಮ್ಮ ಲೆಕ್ಕಕ್ಕೆ ಜಮಾ ಕಟ್ಟಿಕೊಳ್ಳುತ್ತಾರಂತೆ” ಎಂದು ಹೇಳಿದನು. ಆ ರೀತಿಯಲ್ಲಿಯೆ ಬೆಟ್ಟಳ್ಳಿ ಸಾಹುಕಾರರೊಡನೆ ಎಷ್ಟೋ ಲೇವಾದೇವಿ ನಡೆಸುತ್ತಿದ್ದ ಕರೀಂಸಾಬು ಅದನ್ನೊಂದು ವಿಶೇಷವೆಂದು ಗಮನಿಸಿದೆ ಸುಮ್ಮನಾದನು. ಒಂದು ಅಪಶಕುನದ ವಸ್ತು ಅಷ್ಟು ಸುಲಭದಲ್ಲಿ ಗಲಾಟೆಯಿಲ್ಲದೆ ಲಾಭಕರವಾಗಿ ತೊಲಗಿದುದೆ ಅವನಿಗೆ ಸಮಾಧಾನಕರವಾಗಿತ್ತು.

* * *

ಅಂತಕ್ಕನ ಅಡುಗೂಳುಮನೆ, ಅಥವಾ ಈಗ ಅನೇಕರು ಕರೆಯತೊಡಗಿದ್ದಂತೆ ’ಓಟ್ಲುಮನೆ’, ಆ ಶ್ರಾವಣ ಸಂಧ್ಯೆಯಲ್ಲಿ ನಿಃಶಬ್ದವಾಗಿತ್ತು. ಕೋಳಿ, ನಾಯಿ, ಗುಬ್ಬಿ, ಹಕ್ಕಿಗಳ ಸದ್ದು ಸಂಚಲನೆಗಳನ್‌ಉ ಬಿಟ್ಟರೆ ಆ ಪ್ರದೇಶ ನಿದ್ರಿಸುವಂತೆಯೆ ಕಾಣುತ್ತಿತ್ತು. ಮಳೆಗಾಲದಲ್ಲಿ ಕನ್ನಡ ಜಿಲ್ಲೆಗೂ ಮಲೆನಾಡಿಗೂ ನಡುವೆ ಇರುತ್ತಿದ್ದ  ಸಂಚಾರವೆಲ್ಲ ಸ್ತಬ್ಧವಾಗುತ್ತಿದ್ದುದರಿಂದ ಆಗುಂಬೆ, ತೀರ್ಥಹಳ್ಳಿಯ ಹೆದ್ದಾರಿ ಸ್ವಲ್ಪ ಹೆಚ್ಚುಕಡಿಮೆ ಖಾಲಿಯಾಗಿಯೆ ಇರುತ್ತಿತ್ತು, ಸ್ಥಳೀಯರ ವಿರಳ ಸಂಚಾರ ವಿನಾ. ಆದ್ದರಿಂದ ಅಂತಕ್ಕನ ಊಟದ ಮನೆಗೆ ಆ ಸಮಯದಲ್ಲಿ ಅತಿಥಿಗಳು ಬರುತ್ತಿದ್ದುದು ಅತ್ಯಂತ ಅಪೂರ್ವ; ಇಲ್ಲವೆ ಇಲ್ಲ ಎಂದರೂ ಸುಳ್ಳಾಗುವುದಿಲ್ಲ, ಅಷ್ಟು ಅತ್ಯಂತ ಅಪೂರ್ವ.

ಮನೆಯ ಹಿಂಭಾಗದಲ್ಲಿ ಕೆಲಸದ ಹುಡುಗ ಕೊರಗನ ಕೈಯಲ್ಲಿ ಮದರಂಗಿ ಅರೆಸಿ, ಅದನ್ನು ತನ್ನ ಬೆರಳುಗುರುಗಳಿಗೆ ಮುಂಡಾಸು ಕಟ್ಟಿಸಿಕೊಳ್ಳುತ್ತಿದ್ದಳು ಕಾವೇರಿ. ರಾತ್ರಿ ಮಲಗಿ ಏಳುವಷ್ಟರಲ್ಲಿ ಆ ಉಗುರುಗಳೂ ಕೆಂಪಾಗಿ ರಂಜಿಸುತ್ತರುವುದನ್ನೇ ಭಾವಿಸಿ, ಪೂರ್ವಭಾವಿ ರಸಾಸ್ವಾದನೆಯಲ್ಲಿದ್ದಳು ಆ ತರಳೆ. ಅಂತಕ್ಕ ಏನೋ ಗೃಹಕೃತ್ಯದ ಮೇಲೆ ಅಂಗಡಿಗೊ ಎಲ್ಲಿಗೊ ಹೋಗಿದ್ದಳು.

ಮಾತಿನ ನಡುವೆ ಕೊರಗ ಹುಡುಗ ಹೇಳಿದ: “ಅಮ್ಮಾ ನಿಮ್ಮ ಉಂಗುರ ಕಳೆದು ಹೋಯ್ತು ಅಂತಾ ಹೇಳುತ್ತಿದ್ದಿರಲ್ಲಾ ಅದು ಎಲ್ಲೋ ಒಂದು ಕಡೆ ಅದೆಯಂತೆ….”

ಬೇಸರ, ತಾಟಸ್ಥ್ಯ, ಔದಾಸೀನಗಳನ್ನೆಲ್ಲ ಒಟ್ಟಿಗೆ ಒಮ್ಮೆಗೆ ಕೊಡವಿ ಬಿಟ್ಟಂತಾಯ್ತು ಕಾವೇರಿಯ ಚೇತನಕ್ಕೆ, ಕುತೂಹಲ ನಿಮಿರಿ ಕೇಳಿದಳು: “ಎಲ್ಲಿಯೋ? ಯಾರ ಬಳಿಯೋ? ಯಾರು ಹೇಳಿದರೋ? ಯಾವಾಗ ಗೊತ್ತಾಯಿತೋ ನಿನಗೆ?….”

ಕಾವೇರಿಯ ಕುತೂಹಲದ ಪ್ರಶ್ನೆಗಳಿಗೆ, ತನ್ನ ತಿಳಿವಳಿಗೆಯ ಅಮೂಲ್ಯತೆಗೆ ತಾನೆ ಎಚ್ಚರಗೊಂಡಂತಾಗಿ ಅಚ್ಚರಿಪಡುತ್ತಾ, ಹಿಗ್ಗಿ ನಗುಮೊಗನಾಗಿ ಕೊರಗ ಹೇಳಿದನು: “ನನಗೆ ಸೇರೆಗಾರ ಹೇಳಿದ….‘ನೀನು ಯಾರಿಗೂ ಹೇಳಬೇಡ’ ಅಂದಿದ್ದಾನೆ. ತಲೆ ಹೋಗುವ ಯಾಪಾರವಂತೆ!…. ಅಂವನ್ನ ಉಪಚಾರಮಾಡಿ ಪುಸಲಾಯಿಸಿದರೆ ಸಿಕ್ಕರೂ ಸಿಕ್ಕಬೈದು!….”

ಉಂಗುರ ಕಳೆದು ಹೋದಾಗ ಕಾವೇರಿ ಅದನ್ನು ಹುಡುಕುವ ಪ್ರಯತ್ನವನ್ನೇನೂ ಮಾಡಿದ್ದಳು ಆದರೆ ಅದನ್ನು ಆದಷ್ಟು ಅಂತರಂಗವಾಗಿಯೆ ಇಟ್ಟಿದ್ದಳು, ಬಹಿರಂಗವಾಗುವುದರಿಂದ ದೇವಯ್ಯಗೌಡರ ಸಂಸಾರಿಕ ಜೀವನದಲ್ಲಿ ತೊಂದರೆ ಉಂಟಾಗಬಹುದೆಂದು ಹೆದರಿ, ಮತ್ತೂ ಅವರ ಸಾಮಾಜಿಕ ಗೌರವಕ್ಕೂ ಊನವಾಗದಿರಲಿ ಎಂದು. ಆದರೆ ದೇವಯ್ಯಗೌಡರು ಎರಡು ಮೂರು ಸಾರಿ ವಿಚಾರಿಸಿದಾಗಲೂ ಉಂಗುರ ಕಳೆದು ಹೋಯಿತು ಎಂದು ಹೇಳಲು ಅವಳಿಗೆ ಧೈರ್ಯವಾಗಲಿಲ್ಲ. ಏನೇನೊ ಸಬೂಬು ಹೇಳಿ, ಹುಡುಕುತ್ತಿರುವ ಭಾವನೆ ಕೊಟ್ಟಿದ್ದಳು. ನಿಜ ಹೇಳಿದರೆ ಗೌಡರು ನಂಬದಿದ್ದರೆ? ನಂಬದಿದ್ದರೂ ಚಿಂತೆ ಇರಲಿಲ್ಲ; ಆದರೆ ಇನ್ನೇನನ್ನೋ ನಂಬಿಬಿಟ್ಟರೆ? ಅದಕ್ಕೂ ಅವಕಾಶ ಇಲ್ಲದಿರಲ್ಲಿಲ್ಲ. ಏಕೆಂದರೆ ಕಾವೇರಿ ಅಣುಗುಅಣುಗಾಗಿ ಇತರರೊಡನೆ ಹುಡುಗಾಟವಾಡುತ್ತಿದ್ದುದೂ ಉಂಟು! ಆ ತೆರನಾದ ಸರಳವರ್ತನೆ ಮತ್ತು ಕುರುಡು ನಂಬಿಕೆಯೆ ಅವಳಿಗೆ ತರುವಾಯ ಒದಗಿದ್ದ ಅನಾಹುತಕ್ಕೂ ಕಾರಣವಾಯಿತು.

ಪುಡಿಸಾಬಿಯ ಕೈಯಲ್ಲಿ ಹರಳುಂಗುರವನ್ನು ಕಂಡ ಮಾರನೆಯ ದಿನ ದೇವಯ್ಯಗೌಡರು ಮೇಗರವಳ್ಳಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಇಲ್ಲಿ ತಿರುಗಿ, ಅವರಿವರ ಹತ್ತಿರ ಕಿವಿಮಾತು ಆಡಿ, ಬೈಸಿಕಲ್ಲಿನ ಮೇಲೆ ತೀರ್ಥಹಳ್ಳಿಗೆ ನೆಟ್ಟಗೆ ಹೋಗಿದ್ದರು. ಆದರೆ ಹಿಂದೆಂದೂ ನಡೆಯದಿದ್ದುದು ಅಂದು ನಡೆದಿತ್ತು; ಅಂತಕ್ಕನ ಓಟ್ಲುಮನೆಗೆ ಅವರು ಊಟಕ್ಕೆ ಬಂದಿರಲಿಲ್ಲ. ಬೈಸಿಕಲ್ಲಿನ ಗಂಟೆ ಸದ್ದು ಕೇಳಿಸಿ, ಕಾವೇರಿ ಅಂಗಳಕ್ಕೆ ಓಡಿ ಬಂದು, ಉಣುಗೋಲಿನ ಗಳುಗಳನ್ನು ಒತ್ತರಿಸಿ, ಬೈಸಿಕಲ್ಲೇರಿದ್ದ ಗೌಡರನ್ನು ನೇರವಾಗಿ ಅಂಗಳಕ್ಕೆ ಆಹ್ವಾನಿಸಲು ಕಾದಿದ್ದಳು. ಆದರೆ ಗೌಡರನ್ನು ಹೊತ್ತ ಬೈಸಿಕಲ್ಲು, ಉಣಗೋಲಿನ ಆಚೆಯ ಹೆದ್ದಾರಿಯಲ್ಲಿ ನೇರವಾಗಿ ಮಿಶನ್ ಸ್ಕೂಲಿನ ಕಟ್ಟಡದ ಪಕ್ಕದಲ್ಲಿ ಹಾದು ತೀರ್ಥಹಳ್ಳಿಯ ದಿಕ್ಕೆಗೆ ಧಾವಿಸಿತ್ತು. ಅವರ ಕಣ್ಣಮೇಲೆಯೆ ಹಾಯುವಂತೆಯೆ ನಿಂತು ಮುಗುಳ ನಗುತ್ತಿದ್ದ ಕಾವೇರಿ ಕಡೆಗೆ ತಿರುಗಿಯೂ ನೋಡಿರಲಿಲ್ಲ. ಕಾವೇರಿ ಮನೆಯೊಳಗೆ ಹೋಗಿ, ತನ್ನ ಕೋಣೆಯ ಬಾಗಿಲು ಹಾಕಿಕೊಂಡು ಬಹಳ ಹೊತ್ತು ಅತ್ತಿದ್ದಳು. “ಏನೋ ಅವಸರದ ಸರಕಾರಿ ಕೆಲಸ ಇತ್ತು ಅಂತಾ ಕಾಣುತ್ತದೆ ಅವರಿಗೆ ನೀನು ಸುಕಾಸುಮ್ಮನೆ ಯಾಕೆ ಅಳುತ್ತೀ?” ಎಂದಿದ್ದಳು ಅವಳ ತಾಯಿ ಅಂತಕ್ಕ ಸೆಡ್ತಿ.

ಅಂದಿನಿಂದ ಕಾವೇರಿಗೆ ತನ್ನ ಉಂಗುರ ಕಳೆದುಹೋದ ಅಥವಾ ಕಳವಾದ ವಿಚಾರವನ್ನು ಹಿಂದಿನಂತೆ ರಹಸ್ಯವಾಗಿಡಲು ಸಾಧ್ಯವಾಗಲಿಲ್ಲ. ಕೊರಗನೊಡನೆ, ಚೀಂಕ್ರನೊಡನೆ, ಅಜ್ಜೀಸಾಬು, ಲುಂಗೀಸಾಬು ಅಂತಹರು ತನ್ನ ತಾಯಿಯೊಡನೆ ಗೃಹಕೃತ್ಯದ ಬೇಹಾರ ಸಾಗಿಸಲು ಬಂದಾಗ ಸಮಯ ಸಿಕ್ಕರೆ ಅವರೊಡನೆ, ಕಡೆಗೆ ಮದ್ದು ಕೊಡಲು ಮನೆಗೆ ಬಂದ ಕಣ್ಣಾಪಂಡಿತರೊಡನೆಯೂ ಪ್ರಸ್ತಾಪಿಸತೊಡಗಿದಳು. ಅಂತೂ ಸುದ್ದಿ ಗುಸುಗುಸು ಹಬ್ಬಿತ್ತು.

ಕೊರಗ ಹುಡುಗ ‘ಚೀಂಕ್ರ ಸೇರಿಗಾರನಿಗೆ ಉಂಗುರ ಎಲ್ಲಿದೆ ಅಂಬುದು ಗೊತ್ತಿದೆಯಂತೆ’ ಎಂದು ಸೂಚಿಸಿ, ‘ಅಂವನ್ನ ಉಪಚಾರಮಾಡಿ ಪುಸಲಾಯಿಸಿದರೆ ಸಿಕ್ಕರೂ ಸಿಗಬೈದು’ ಎಂದು ಹೇಳಿದ ಮೇಲೆ, ಕಾವೇರಿ ಸೇರೆಗಾರನೊಡನೆ ಸ್ವಲ್ಪ ಸಲಿಗೆಯಿಂದ ವರ್ತಿಸತೊಡಗಿದ್ದಳು. ಆಗೊಮ್ಮೆ ಈಗೊಮ್ಮೆ ಕಳ್ಳು ಹೆಂಡ ಸ್ವಾರ್ಲುಮೀನು ಕೊಟ್ಟು ಸವಿಮಾತಾಡಿ ಪುಸಲಾಯಿಸಿದಳು. ಆದರೆ ಚೀಂಕ್ರ ಅದಕ್ಕೆ ವಿಪರೀತಾರ್ಥ ಕಲ್ಪನೆ ಮಾಡಿಕೊಂಡನಷ್ಟೆ!

ಕಾವೇರಿಯ ವರ್ತನೆಗೆ ಒಂದು ಸರಳ ಧೈರ್ಯವಿತ್ತು. ಚೀಂಕ್ರ ಕೀಳು ಜಾತಿಯವನು. ಹೆಚ್ಚುಕಡಮೆ ದಕ್ಷಿಣ ಕನ್ನಡ ಜಿಲ್ಲೆಯ ಹೊಲೆಯ; ಹಸಲರವನು. ಅವನು ತಮ್ಮ ಮನೆಯೊಳಗೆ ಕಾಲಿಡುವುದಿರಲಿ, ಜಗಲಿಯ ತೆಣೆಗೂ ಹತ್ತುತ್ತಿರಲಿಲ್ಲ. ಹಿಂದೆ ಗುತ್ತಿಯ ಮೈಕಟ್ಟನ್ನೂ ಬಣ್ಣವನ್ನೂ ರುಪವನ್ನೂ ತಾನೆಂದು ಮೆಚ್ಚಿನೋಡಿದ್ದಳೊ ಅಂತೆಯೆ ಚೀಂಕ್ರನನ್ನೂ ಒಂದು ಸ್ವಪ್ರಯೋಜನ ಸಾಧನೆಗಾಗಿ ಪುಸಲಾಯಿಸಿದ್ದಳು. ಅದರಲ್ಲಿ ಅಪಾರ್ಥಕ್ಕೆ ಯಾವ ಕಾರಣವೂ ಇರಲು ಸಾಧ್ಯವಿರಲಿಲ್ಲ.

ಆದರೆ ಚೀಂಕ್ರನ ಜಾರ ಹೃದಯದಲ್ಲಿ ಮೊದಲಿನಿಂದಲೂ ಕಾವೇರಿಯ ಪರವಾದ ಭಾವನೆ ಬೇರೆಯಾಗಿತ್ತು. ಅವನು ದೇಯ ಸತ್ತಮೇಲೆ, ಕೋಣೂರಿನಿಂದ ಮೇಗರೊಳ್ಳಿಗೆ ಮಿಶನ್ ಇಸ್ಕೂಲು ಕಟ್ಟುವ ಕೆಲಸಕ್ಕೆ ಬಂದಾಗಲೂ ಪ್ರಾಯಕ್ಕೆ ಬರುತ್ತಿದ್ದ ಆ ಮುಗ್ಧ ಹುಡುಗಿಯನ್ನು ನಾಯಿಗಣ್ಣಿನಿಂದಲೆ ನೋಡಿದ್ದನು. ಆದರೆ ಸಾಮಾಜಿಕವಾಗಿ ಬಹುದೂರದಲ್ಲಿ ಮತ್ತು ಎತ್ತರದ ಅಂತಸ್ತಿನಲ್ಲಿದ್ದ ಆ ಹೆಣ್ಣನ್ನು ಅವನ ನರಿಮನಸ್ಸು ನೋಡುತಿತ್ತೆ ಹೊರತು ಇನ್ನೇನು ಮಾಡಲೂ ಸಮರ್ಥವಾಗಿರಲಿಲ್ಲ. ಈಗ ಉಂಗುರದ ಪ್ರಸಂಗದಲ್ಲಿ ಅವನಿಗೊಂದು ಸಂದರ್ಭ ಒದಗಿತ್ತು. ಕಾವೇರಿಯ ಉಪಚಾರಕ್ಕೆ ಅಪಾರ್ಥ ಕಲ್ಪನೆ ಮಾಡುವುದು ಅವನಿಗೆ ಸುಸ್ವಾದುವಾಗಿದ್ದುದಲ್ಲದೆ, ಬಯಸಿದ ಹೆಣ್ಣಿನ ಬಯಕೆಯನ್ನು ಈಡೇರಿಸುವನೆಂಬ ದುರ್ಬುದ್ಧಿ ಸಮರ್ಥನೀಯ ಭಾವನೆಯಿಂದ ಅದು ಸಾಧುವಾಗಿಯೂ ತೋರಿತು. ಆ ಸಾಹಸಕ್ಕೆ ತಾನೊಬ್ಬನೆ ಮುಂದುವರಿಯಲು ಅಂಜದ ಅವನ ಹೇಡಿಜೀವಕ್ಕೆ ಪುಡಿಸಾಬಿಯ ನೀಚಸೂಚನೆ ಹಾರುವ ಮಂಗಕ್ಕೆ ಏಣಿಹಾಕಿತ್ತು.

ಬೆಟ್ಟಳ್ಳಿಯಿಂದ ಉಂಗುರದೊಡನೆ ಹಿಂದಿರುಗುತ್ತಿದ್ದ ಪುಡಿಸಾಬಿಯನ್ನು ಬೈಸಿಕಲ್ಲು ಹಕ್ಕಲಿನ ಆಚೆಯ ಅರೆಕಲ್ಲಿನ ಕಾರಮಟ್ಟಿನೆಡೆ ದೇವಯ್ಯ ಸಂಧಿಸಿ, ಉಂಗುರದ ವಿಚಾರವಾಗಿ ಪ್ರಸ್ತಾಪಿಸಿ, ಪ್ರಶ್ನೆಕೇಳಿ, ಕಳವುಮಾಲು ಪೋಲೀಸುಗೀಲೀಸು ಎಂದೆಲ್ಲ ಕೆರಳು ಮಾತಾಡಿ, ಸಾಬಿಯ ಮನದ ಹುತ್ತದಲ್ಲಿ ಪ್ರಸುಪ್ತವಾಗಿದ್ದ ನೀಚರುಚಿಯ ದೌಷ್ಟ್ಯ ಸರ್ಪವನ್ನು ಮಟ್ಟಿ ಏಳಿಸದೆ ಇದ್ದಿದ್ದರೆ ಅದನ್ನು ಅವನು ತನ್ನ ಅಣ್ಣನಿಗೆ ಹಿಂತಿರುಗಿಸಿ ಸುಮ್ಮನಾಗುತ್ತಿದ್ದನು. ಆದರೆ ಯಾವಾಗ ಆ ಉಂಗುರವು ಶೃಂಗಾರ ಜೀವಿತಕ್ಕೆ ಸಂಬಂಧಪಟ್ಟಿದ್ದು ಎಂಬುದು ಗೊತ್ತಾಯಿಗೋ ಸಾಬಿಯ ಕಾಮವಿಕಾರವೂ ಶೃಂಗಾರಾಪೇಕ್ಷಿಯಾಗಿ ಸಾಹಸಲೀಲೆಗೆ ಹಾತೊರೆಯತೊಡಗಿತು. ಅವನಲ್ಲಿ ಕೆರಳಿದ್ದ ಪಶುರುಚಿಗೂ ಪ್ರಣಯ ಪ್ರೇಮ ಮೊದಲಾದ ಪದಗಳಿಗೂ ಯಾವ ಅರ್ಥಸಂಬಂಧವೂ ಇರಲಿಲ್ಲ: ಮನೆಯಲ್ಲಿ ಕಾಫಿಕುಡಿದು ಹೊರಟಿದ್ದರೂ ಕಂಡ ಕಂಡ ಕೆಫೆಗಳಲ್ಲಿ ಕುಳಿತು ಕಾಫಿ ಕುಡಿಯುವ ಕೆಲವು ಅಲಸ ಶ್ರೀಮಂತ ಯುವಕರ ಆಧುನಿಕ ಚಟದಂತಹ ಒಂದು ಚಟ ಮಾತ್ರವಾಗಿತ್ತು ಅದು. ಆ ಚಟಕ್ಕೆ ದೇವಯ್ಯ ಕೆರಳಿಸಿದ್ದ ಹಟದ ಸಾಣೆಯಿತ್ತಷ್ಟೆ!

ಸಾಬಿ ಚೀಂಕ್ರನೊಡನೆ ಆ ಮಾತೆತ್ತಿದೊಡನೆ, ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಹಾಗಾಯ್ತು:

“ಕಾಣನಿ, ಕಾವೇರಮ್ಮ, ಇದನ್ನು ಮಾತ್ರ ನೀವು ಯಾರೊಬ್ರ ಸಂಗಡಾನೂ ಬಾಯಿ ಬಿಟ್ಟೀರಿ? ಉಂಗುರ ನಿಮ್ಮ ಕೈಗೆ ಬಂದಮ್ಯಾಲೆ ಬೇಕಾದರೆ ನಿಮ್ಮ ಅಬ್ಬೆ ಹತ್ರ ಹೇಳಿನಿ, ಅದಕ್ಕೆ ಮುಂಚೆ ತುಟಿ ಪಿಟಕ್ ಅನ್ನ ಬಾರದು….”

ಇಲ್ಲ ಮಾರಾಯನೆ, ನಾನು ಯಾಕೆ ಹೇಳಲಿಕ್ಕೆ ಹೋಗಲಿ, ನನಗೆ ಉಂಗುರ ಸಿಕ್ಕರೆ ಸಾಕು….”

“ಉಂಗುರ ಪುಡಿಸಾಬರ ಕೈಗೆ ಸಿಕ್ಕದೆ ನಿಮಗೆ ದೇವಯ್ಯ ಗೌಡರು ಕೊಟ್ಟದ್ದು ಅಂತಾ ನೀವು ಪಡ್ತಿರೋ ಪಾಡು ಕೇಳಿ ಅವರಿಗೆ “ಛೇ! ಪಾಪ! ಅನ್ನಿಸಿದೆ. ಅದನ್ನು…ನಿಮಗೇ ಕೊಡ್ತೀನಿ ಅಂತಾನೂ ನನ್ನ ಹತ್ರ ಹೇಳಿದಾರೆ…. ಆದರೆ ಅದೆಲ್ಲ ಯಾರಿಗೂ ಗೊತ್ತಾಗ್ದೆ ಇದ್ಹಾಂಗೆ ಆಗಬೇಕಂತೆ….ಯಾಕೆ ಅಂತೀರೋ? ದೇವಯ್ಯಗೌಡರು ಮೊನ್ನೆ ತೀರ್ಥಳ್ಳಿಗೆ ಹೋಗಿ ಪೋಲೀಸರಿಗೆ ಫಿರ್ಯಾದು ಕೊಟ್ಟಾರೆ ಅಂತಾ ಸುದ್ದಿ…ಅದಕ್ಕೇ ಆದಷ್ಟು ಬ್ಯಾಗನೆ, ಪೋಲೀಸುಗೀಲೀಸು ಗಲಾಟೆ ಬರೋದರ ಒಳಗೆ, ಉಂಗುರ ದಾಟಿಸಿ ಬಿಡಾನ ಅಂತಾ ಅವರ ಮನಸ್ಸು….ಬಹಳ ಒಳ್ಳೇರು ಕಣ್ರೋ ಆ ಪುಡಿಸಾಬ್ರು! ನಿಮಗೇನು ಹೊಸಬರಲ್ಲ. ನೀವು ಎಷ್ಟೋ ಕಾಲದಿಂದ ನೋಡ್ತಾನೆ ಇದ್ದೀರಿ ಅಲ್ಲೇನು ಹೇಳಿ?”

ಚೀಂಕ್ರನ ಪ್ರಶ್ನೆಗೆ ‘ಹೌದು’ ಎಂದಳು ಕಾವೇರಿ. ಅವಳು ಪುಡಿಸಾಬುವನ್ನು ಇತರರನ್ನು ನೋಡುತ್ತಿದ್ದಂತೆಯೆ ನೋಡಿದ್ದಳು. ಅವನು ರೂಪದಲ್ಲಿ ಬಣ್ಣದಲ್ಲಿ ಬಟ್ಟೆ ಷೋಕಿಯಲ್ಲಿ ಇತರರಿಗಿಂತಲೂ ಜೋರಾಗಿರುತ್ತಿದ್ದುದರಿಂದ ಕಾವೇರಿ ಮನದಲ್ಲಿಯೆ ಪ್ರಶಂಸಿಸಿಯೂ ಇದ್ದಳು. ಆ ಪ್ರಶಂಸೆ ಬಾಲ್ಯಸಹಜ ಮುಗ್ಧತೆ ಮಾತ್ರ ಆಗಿತ್ತು. ಅದರಲ್ಲಿಯೂ ತುರುಕನಾಗಿದ್ದ ಅವನು ಜಾತಿಯ ದೃಷ್ಟಿಯಿಂದ ಹಸಲವರಿಗಿಂತಲೂ ಕೀಳಾಗಿದ್ದನಲ್ಲವೆ? ಊರು ಮನೆಯವನಾಗಿದ್ದುದರಿಂದ ಕಾವೇರಿ ಅಂಗಡಿಗೆ ಹೋದಾಗಾಗಲಿ, ಅವನೇ ಕೆಲಸದ ನಿಮಿತ್ತ ಅಂತಕ್ಕನ ಮನೆಗೆ ಬಂದಾಗಲಾಗಲಿ, ಕಾವೇರಿಯನ್ನು ಸಲಿಗೆಯಿಂದ ವಿನೋದವಾಗಿಯೂ ಮಾತನಾಡಿಸಿಯೂ ಇದ್ದುದರಿಂದ ಕಾವೇರಿ ಅವನಲ್ಲಿ ಅಪನಂಬಿಕೆ ಪಡುವುದಕ್ಕೂ ಕಾರಣವಿರಲಿಲ್ಲ. ಅವಳೇನೋ ಗಾಳಿಸುದ್ದಿ ಕೇಳಿದ್ದಳು, ಸಾಬರುಗಳಲ್ಲಿ ಆಗುಂಬೆಘಾಟಿಯ ದಾರಿಯಲ್ಲಿ ತಲೆಯೊಡೆಯುವುದು ದೋಚುವುದು ಮಾಡುತ್ತಾರೆ ಎಂದು. ಆದರೆ ಅದು ಬಹುದೂರದ ಕಾಡಗಿಚ್ಚಿನಂತಿದ್ದು ಅದರ ಬಸಿ ಅವಳಿಗೆ ಮುಟ್ಟಿರಲಿಲ್ಲ.

“ಯಾರ ಕೈಲಿ ಕೊಡುಕ್ಕೂ ಅವರಿಗೆ ಮನಸ್ಸಿಲ್ಲ…. ನಿಮ್ಮ ಕೈಲೇ ಕೊಡ್ತೀನಿ ಅಂತಾರೆ. ನಿಮ್ಮನ್ನ ಕಂಡರೆ ಅವರಿಗೆ ಎಷ್ಟು ಪಿರೀತಿ ಅಂತೀರ! ನನ್ನ ಕೈಲಿ ಮೊನ್ನೆ ಹೇಳ್ತಾರೆ: ‘ಅಷ್ಟು ಚೆಂದಾಗಿರೋರ್ನ ನಾ ಎಲ್ಲೂ ನೋಡಿಲ್ಲೋ, ಚೀಂಕ್ರ!’ ಅಂತಾ….” ಮುಖದಲ್ಲಿ ಸಂಕೋಚ ಭಾವನೆ ಸೂಚಿಸಿದ ಕಾವೇರಿಯನ್ನು ನೋಡಿ ಚೀಂಕ್ರ ಪ್ರೋತ್ಸಾಹಕನಾಗಿ ಮುಂದುವರಿದನು: “ನಿಜ ಹೇಳಿದರೆ ಯಾಕೆ ನಾಚಿಕೆಮಾಡಿಕೊಳ್ತೀರಿ? ಪುಡಿ ಸಾಬ್ರು ನಿಜಾನೆ ಹೇಳಿದ್ರು. ನಿಮಗಿಂತ ಚೆಂದಾಗಿರೋರ್ನ ನಾನೂ ಎಲ್ಲೂ ನೋಡಿಲ್ಲಾ ಅಂತಾ ಯಾರ ಕೈಲಿ ಬೇಕಾದ್ರೂ ಬಾಜೂ ಕಟ್ತೀನಿ ನಾನು!….”

ತನ್ನ ಸೌಂದರ್ಯ ಪ್ರಶಂಸೆಗಿಂತಲೂ ಹೆಚ್ಚಿನ ಪ್ರಲೋಭನೆಯಾಗಲಿ ದೌರ್ಬಲ್ಯವಾಗಲಿ ಹೆಂಗಸಿಗೆ ಮತ್ತೊಂದು ಇರಲಾರದು. ಅದರಲ್ಲಿಯೂ ತಾರುಣ್ಯ ಪ್ರಾರಂಭದಲ್ಲಿರುವ ಕಾವೇರಿಯಂತಹ ಹುಡುಗಿಯರಿಗೆ ಅಂತಹ ಶ್ಲಾಘನೆ ಭಂಗಿ ತಿನ್ನಿಸಿದಂತಾಗುತ್ತದೆ. ಎಚ್ಚರಿಕೆ, ವಿವೇಕ, ಭೀರುತ್ವಗಳೆಲ್ಲ ಹಿಂಜರಿದು ಹಿಗ್ಗೊಂದೆ ಮುನ್ನುಗ್ಗುತ್ತದೆ.

ಪೂರ್ವಭಾವಿಯಾಗಿ ಗೊತ್ತುಮಾಡಿದ ಒಂದು ದಿನ, ಕತ್ತಲಾದಮೇಲೆ, ಕಾವೇರಿ ಯಾರಿಗೂ ತಿಳಿಯದಂತೆ ಚೀಂಕ್ರನೊಡನೆ ಹೋಗಿ ಪುಡಿಸಾಬಿಯಿಂದ ಉಂಗುರ ಪಡೆಯುವುದೆಂದು ಸಂಚು ಸಿದ್ಧವಾಯಿತು. ಎಲ್ಲಿ ಸಾಬಿಯನ್ನು ಸಂಧಿಸುವುದೆಂದು ಸ್ಥಳದ ವಿಚಾರ ಬಂದಾಗ, ಕಾವೇರಿ ತಾನು ಮನೆಯಿಂದ ಬಹಳಹೊತ್ತು ಹೊರಗಿರಲು ಸಾಧ್ಯವಿಲ್ಲವೆಂದೂ, ಸಿಕ್ಕಿಕೊಳ್ಳಬಹುದೆಂದೂ, ಸಂಶಯಕ್ಕೆ ಅವಕಾಶವಾಗುತ್ತದೆ ಎಂದೂ ಹೇಳಿದುದರಿಂದ ಅಂತಕ್ಕನ ಮನೆಗೆ ಸ್ವಲ್ಪ ಹೆಚ್ಚು ಕಡಿಮೆ ಕಾಣುವಂತೆಯೆ ಇದ್ದು ಅನತಿ ದೂರದಲ್ಲಿರುವ ಮಿಶನ್ ಸ್ಕೂಲಿನಲ್ಲಿ* ಸೇರಬಹುದೆಂದು ಸದ್ಯಕ್ಕೆ ನಿರ್ಣಯವಾಯಿತು.*  ಮಿಶನ್ ಸ್ಕೂಲ್ ಕಟ್ಟಡ ಸಿದ್ಧವಾಗಿತ್ತೆ ಹೊರತು ಇನ್ನೂ ಇಸ್ಕೂಲು ಪ್ರಾರಂಭವಾಗಿರಲಿಲ್ಲ. ಚಳಿಗಾಲದಲ್ಲಿ ಕ್ರೈಸ್ತರ ಹಬ್ಬದ ಕಾಲಕ್ಕೆ ಬಿಳಿಪಾದ್ರಿ ರೆವರೆಂಡರಿಂದ ಅದರ ಪ್ರಾರಂಭೋತ್ಸವ ನಡೆಯುವಂತೆಯೂ, ಅದರ ಹಿಂದಿನ ದಿನವೊ ಅಥವಾ ಆ ದಿನವೆ ಪ್ರಾತಃಕಾಲವೊ ದೇವಯ್ಯಗೌಡರ ಮತಾಂತರ ಧರ್ಮಕ್ರಿಯೆಯೂ ಅಲ್ಲಿಯೆ ಗಲಾಟೆಯಿಲ್ಲದೆ ನಡೆಯುವಂತೆಯೂ ಏರ್ಪಾಡಾಗಿತ್ತು.