ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸೀಮೆಯ ಮಲೆನಾಡಿನ ಈ ಕ್ಷುದ್ರೋಕ್ಷುದ್ರವಾಗಿ ತೋರುವ, ಮತ್ತು ನಾಗರೀಕತೆಯ ಐತಿಹಾಸಿಕ ಪ್ರವಾಹದ ವೈಭವಪೂರ್ಣವಾದ ಮಧ್ಯಸ್ರೋತಕ್ಕೆ ಬಹುದೂರವಾಗಿ ಅದರ ಅಂಚಿನ ಅಜ್ಞಾತೋಪಮವಲಯದಲ್ಲಿ ಯಃಕಶ್ಚಿತವಾಗಿರುವ ಈ ಅರಣ್ಯಕ ಪ್ರಪಂಚದ ಶ್ರೀಸಾಮಾನ್ಯರ ಬದುಕು-ಕ್ಷುದ್ರ ಅಲ್ಪ ಜಟಿಲ ರಾಗದ್ವೇಷಮಯ ಜೀವನ ಜಾಲ-ಇಂತಿಂತಿಂತು ಸಾಗುತ್ತಿದ್ದ ಸಮಯದಲ್ಲಿಯೆ ಅತ್ತ ಸುವಿಶಾಲ ಜಗತ್ತಿನಲ್ಲಿ ಚಾರಿತ್ರಕ ಮಹದ್ ಘಟನೆಗಳೆಂದು ಪರಿಗಣಿತವಾಗಲಿರುವ ಲೋಕವಿಖ್ಯಾತ ವ್ಯಾಪಾರಗಳೂ ನಡೆಯುತ್ತಿದ್ದವಷ್ಟೆ; ಯುದ್ಧ, ಕೌಲು, ಕ್ಷಾಮ, ಕಲಾ ಸಾಹಿತ್ಯ ಸೃಷ್ಟಿ, ಮಹಾ ಕಾವ್ಯರಚನೆ, ತಪಸ್ಯೆ, ಸಾಕ್ಷಾತ್ಕಾರ, ವೈಜ್ಞಾನಿಕ  ಸಂಶೋಧನೆ, ಇತಾದಿ ಇತ್ಯಾದಿ, ಇತ್ಯಾದಿ!

ಆಗ, ತತ್ಕಾಲದಲ್ಲಿ ಅಂತಹ ಮಹದ್ಘಟನೆ ಎಂದು ಭಾವಿತವಾಗದಿದ್ದರೂ ಲೋಕದಲ್ಲಿ ಆ ಕಾಲದಲ್ಲಿ ನಡೆಯುತ್ತಿದ್ದ ಯಾವ ಮಹದ್ ಘಟನೆಗೂ ದ್ವಿತೀಯವಲ್ಲದೆ ತತ್ಕಾಲ ಮಾತ್ರ ಅಖ್ಯಾತವಾಗಿದ್ದ ಒಂದು ವಿಭೂತಿ ಘಟನೆ ಜರುಗುತ್ತಿತ್ತು. ಅಮೇರಿಕ ಸಂಯುಕ್ತ ಸಂಸ್ಥಾನದ ಸೆಂಟ್ ಲಾರೆನ್ಸ್ ಮಹಾನದಿಯ ನಡುವೆಯಿರುವ ಸಹಸ್ರ ದ್ವೀಪೋದ್ಯಾನದಲ್ಲಿ.

ಕ್ರಿ.ಶ.೧೮೯೩ ರಲ್ಲಿ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಲನದಲ್ಲಿ ತಟಕ್ಕನೆ ಯಶೋಗೋಪುರದ ಶಿಖರಕ್ಕೇರಿ ಆಧ್ಯಾತ್ಮಿಕ ಜಗನ್ನಯನ ಕೇಂದ್ರ ಮೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ಎರಡು ವರ್ಷಗಳ ಕಾಲ ಅಮೇರಿಕಾದ ಅನೇಕ ನಗರಗಳಲ್ಲಿ ಸಂಚರಿಸಿ, ಕ್ರೈಸ್ತಮತ ಸಂಕುಚಿತ ವಲಯದಲ್ಲಿಯೆ ಬೆಳೆದು ಕುಬ್ಜದೃಷ್ಟಿಗಳಾಗಿದ್ದ ಪಾಶ್ಚಾತ್ಯರಿಗೆ ಅಭೂತಪೂರ್ವ ಧೀರೋದಾರ ದೃಷ್ಟ್ಯ ವೇದಾಂತದ ಸಂದೇಶವಿತ್ತು ಜಯಡಿಂಡಿಮವನ್ನು ಮೊಳಗಿಸಿದ್ದರಷ್ಟೆ. ತರುವಾಯ ಅವರು ವೇದಾಂತದ ಅಧ್ಯಾತ್ಮಿಕ ಯೋಗಸಾದನೆಯನ್ನು ಕೈಗೊಳ್ಳಲು ಹಂಬಲಿಸುತ್ತಿದ್ದ ಕೆಲವು ಶಿಷ್ಯ ಶಿಷ್ಯೆಯರೊಡನೆ ಸೆಂಟ್ ಲಾರೆನ್ಸ್ ಮಹಾನದಿಯ ಸುವಿಸ್ತೃತ ಜಲರಾಶಿಯ ಮಧ್ಯೆ ಅರಣ್ಯಾವೃತವಾಗಿದ್ದು ನಿಭೃತವಾಗಿದ್ದ ಸಹಸ್ರದ್ವೀಪೋದ್ಯಾನದ ಒಂದು ಕುಟೀರಕ್ಕೆ ಬಂದು ನಿಂತರು.

ಸ್ವಾಮೀಜಿ ಒಂದು ದಿನ ತಮ್ಮ ಶಿಷ್ಯರಲ್ಲಿ ಕೆಲವರಿಗೆ ಮಂತ್ರದೀಕ್ಷೆ ಕೊಡಲು ನಿರ್ಧರಿಸಿದ್ದರು. ಅವರು ಸಹೋದರಿ ಕ್ರಿಸ್ಟೈನ್ ಎಂಬ ಮಹಿಳೆಯನ್ನು ಎಕ್ಕಟಿ ಕರೆದು ಹೇಳಿದರು: “ನೀನು ದೀಕ್ಷೆ ತೆಗೆದುಕೊಳ್ಳಲು ಎಷ್ಟರಮಟ್ಟಿಗೆ ಅರ್ಹಳಾಗಿದ್ದೀಯೇ ಎಂಬುದನ್ನು ಅರಿಯಲು ಸಾಕಾಗುವಷ್ಟು ನಿನ್ನ ಪರಿಚಯ ನನಗಿನ್ನೂ ಆಗಿಲ್ಲ….ಆದರೆ ನನಗೆ ಒಂದು ಶಕ್ತಿ ಇದೆ. ಪರಮನಃಪ್ರವೇಶನ ಶಕ್ತಿ. ಅನ್ಯರ ಮನಸ್ಸನ್ನು ಹೂಕ್ಕು ಅದರ ರಹಸ್ಯಗಳನ್ನೆಲ್ಲ ಅರಿಯುವ ಶಕ್ತಿ. ನಾನು ಅದನ್ನು ಸಾಧಾರಣವಾಗಿ ಉಪಯೋಗಿಸುವದಿಲ್ಲ. ಅತ್ಯಂತ ಅಪೂರ್ವವಾಗಿ ಅವಶ್ಯ ಬಿದ್ದಾಗ ಮಾತ್ರ ಉಪಯೋಗಿಸಿಕೊಳ್ಳುತ್ತೇನೆ… ನೀನು ಅನುಮತಿತ್ತರೆ, ನಿನ್ನ ಮನಸ್ಸನ್ನು ಪ್ರವೇಶಿಸಿ ಅದನ್ನು ಓದಿಕೊಳ್ಳುವ ಇಚ್ಛೆ ಇದೆ; ಏಕೆಂದರೆ ಇತರರೊಂದಿಗೆ ನಿನಗೂ ನಾಳೆ ದೀಕ್ಷೆ ಕೊಡಬೇಕೆಂದಿದ್ದೇನೆ.”

ಆಕೆ ಸಂತೋಷದಿಂದಲೆ ಒಪ್ಪಿಗೆಕೊಟ್ಟಳು.

ಮರುದಿನ ಶಿಷ್ಯರೆಲ್ಲ ಮಂತ್ರದೀಕ್ಷಿತರಾದ ಮೇಲೆ ಸ್ವಾಮೀಜಿ, ಅದೂ ಇದೂ ಮಾತನಾಡುತ್ತಾ, ಸೂಕ್ಷ್ಮವಾಗಿ, ಶಿಷ್ಯರಲ್ಲಿ ಕೆಲವರ ಪೂರ್ವ ಜೀವನದ ಸಂಗತಿಗಳನ್ನು ಭವಿಷ್ಯಜೀವನದಲ್ಲಿ ಸಂಭವಿಸಲಿರುವ ಘಟನೆಗಳನ್ನೂ ಅವರವರಿಗೆ ಪ್ರತ್ಯೇಕವಾಗಿ ತಿಳಿಸಿದರು. ಕೆಲವಂತೂ ಅವರವರಿಗೇ ಮಾತ್ರ ಗೊತ್ತಿದ್ದ ಕಟ್ಟೇಕಾಂತ ವಿಷಯಗಳಾಗಿದ್ದವು. ಶಿಷ್ಯರ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಆದರೆ ಸ್ವಾಮೀಜಿ ಆ ಶಕ್ತಿ ಅಂತಹ ಅದ್ಭುತ ಶಕ್ತಿಗಳ ಅಪೇಕ್ಷೆ ಹಾನಿಕರವೆಂದೂ ಎಚ್ಚರಿಸಿದರು.

ಸೋದರಿ ಕ್ರಿಸ್ಟೈನ್ ಸಂಗಡ ಮಾತನಾಡುತ್ತಾ, ಆಕೆಯ ಭೂತಭವಿಷ್ಯತ್ ಜೀವನದ ಮತ್ತು ಪೂರ್ವಸಂಸ್ಕಾರಗಳ ಸಂಸ್ಕ್ರಣದ ವಿಚಾರವಾಗಿ ತಿಳಿಸಿ ಹಿತೋಪದೇಶ ನೀಡುತ್ತಿದ್ದಾಗ, ಸ್ವಾಮೀಜಿ ಇದ್ದಕಿದ್ದ ಹಾಗೆ ಹೊಟ್ಟೆ ಹುಣ್ಣಾಗುವಂತೆ ನಗತೊಡಗಿದರು. ಏನನ್ನೊ ಕಂಡೂ ಕಂಡೂ ಮತ್ತೆ ನಕ್ಕರು. ಅಳ್ಳೆಹಿಡಿದುಕೊಂಡು ನಕ್ಕರು ಉಸಿರು ಕಟ್ಟಿ ಕಣ್ಣಲ್ಲಿ ನೀರುಕ್ಕುವಂತೆ ನಕ್ಕರು.

ಸಹೋದರಿಗೆ ಮೊದಮೊದಲು ಪರಿಹಾಸವಾಗಿದ್ದುದು ಬರಬರುತ್ತಾ ಸೋಜಿಗವಾಯಿತು. ಕಡೆಕಡೆಗೆ ಸ್ವಾಮಿಗಳಿಗೆ ಏನಾದರೂ ಮಾನಸಿಕ ವ್ಯಪರೀತ್ಯ ಉಂಟಾಯಿತೊ ಎಂದು ಶಂಕಿಸಿದಳು. ಆಕೆ ಭೀತೆಯಾದುದನ್ನು ನೋಡಿದ ಸ್ವಾಮೀಜಿ ತಮ್ಮ ನಗೆಯನ್ನು ಹತೋಟಿಗೆ ತಂದುಕೊಂಡು, ನಗುಮೊಗರಾಗಿಯೆ ಮೌನವಾಗಿ ಕುಳಿತುಬಿಟ್ಟರು. ಕುತೂಹಲಾವಿಷ್ಟೆಯಾದ ಕ್ರಿಸ್ಟೈನ್ ಎಷ್ಟು ಪ್ರಶ್ನೆ ಕೇಳಿದರೂ ಅವರು ಬಾಯಿಬಿಡಲಿಲ್ಲ.

ಹಿಂದಿನ ರಾತ್ರಿ, ದೀಕ್ಷೆ ತೆಗೆದುಕೊಳ್ಳಲಿರುವ ಶಿಷ್ಯರ ಈ ಜನ್ಮದ ಮತ್ತು ಪೂರ್ವಾಪರ ಜನ್ಮಗಳ ಸೂಕ್ಷ್ಮಭೂಮಿಕೆಗಳಲ್ಲಿ ಸಂಚರಿಸಿ, ಅವರ ಚೈತ್ಯದ ವಿಕಾಸನ ಸ್ಥಿತಿಯನ್ನು ಅರಿಯುವ ಕಾರ್ಯದಲ್ಲಿದ್ದಾಗ, ಸ್ವಾಮೀಜಿಯ ಸರ್ವಕಾಲ ಸರ್ವದೇಶ ವ್ಯಾಪ್ತಿಯಾಗಿಯೂ ಅತೀತವಾಗಿದ್ದ ಅತಿಮಾನಸಕ್ಕೆ ಗೋಚರವಾಗಿದ್ದ ಅಸಂಖ್ಯ ದೃಷ್ಯ ಪರಂಪರೆಗಳಲ್ಲಿ ಒಂದು ದೃಶ್ಯದ ನೆನಪು ಅವರ ಈ ವಿಕಟಾಟ್ಟಹಾಸಕ್ಕೆ ಕಾರಣವಾಗಿತ್ತು.

ಕಡೆಗೂ ಸ್ವಾಮೀಜಿ ಅದರ ವಿಚಾರವಾಗಿ ಸಹೋದರಿ ಕ್ರಿಸ್ಟೈನ್ ಗೆ ಯಾವ ವಿವರವನ್ನೂ ಕೊಡಲಿಲ್ಲ. ಆದರೆ ಇಷ್ಟನ್ನು ಮಾತ್ರ ಸೂಚ್ಯವಾಗಿ ಹೇಳಿದ್ದರು:

“ನೋಡು, ಸೋದರೀ, ನಾನು ಇಂಡಿಯಾದಿಂದ ಇಲ್ಲಿಗೆ ಬಂದು ನಿಮಗೆ ವೇದಾಂತ ಭೋಧನೆ ಮಾಡಿ, ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ನೀಡಿ, ನಿಮ್ಮನ್ನು ಮತಾಂತರಗೊಳಿಸುವ ರೂಕ್ಷಬರ್ಬರವಾದ ಕಿರಾತನೀತಿಗೆ ಕೈಹಾಕದೆ, ಕ್ರೈಸ್ತರಿಗೆ, ಯೆಹೂದ್ಯರಿಗೆ, ಮೆಥಡಿಸ್ಟರಿಗೆ, ಪ್ಯೂರಿಟನ್ನರಿಗೆ, ಕ್ಯಾಥೋಲಿಕ್ಕರಿಗೆ, ಅವರವರ ಭಾವದಲ್ಲಿಯೆ, ಅವರವರ ಶ್ರದ್ದೆಯಲ್ಲಿಯೆ, ಅವರವರು ಮುಂದುವರಿಯುವಂತೆ ಹೇಳಿ ದೀಕ್ಷೆಕೊಡುವ ಕೆಲಸದಲ್ಲಿದ್ದೇನೆ. ಸ್ವಲ್ಪ ಹೆಚ್ಚು ಕಡಮೆ, ಅದೇ ದಿನದಲ್ಲಿ, ಅದೇ ಸಮಯದಲ್ಲಿ, ನನ್ನ ಮಾತೃಭೂಮಿಯ ಒಂದು ಪರ್ವತಾರಣ್ಯ ಪ್ರದೇಶದ ಮೂಲೆಯಲ್ಲಿ, ಕ್ರೈಸ್ತಮತ ಪ್ರಚಾರಕರು ಬ್ರಿಟಿಷ್ ಸರ್ಕಾರದ ರಾಜಕೀಯ ಬಲ ಮತ್ತು ಪ್ರತಿಷ್ಠೆ ಮತ್ತು ಸೌಕರ್ಯ ಸೌಲಭ್ಯಗಳನ್ನು ಪಡೆದು, ವಿದ್ಯಾಭ್ಯಾಸದ ಮತ್ತು ವೈದ್ಯಕೀಯದ ನೆರವೀಯುವ ಬಲೆಯೊಡ್ದಿ, ಅರಿಯದ ಅಜ್ಞಾನಿಗಳನ್ನು ತಮ್ಮ ಜಾತಿಗೆ ಸೇರಿಸಿಕೊಂಡು, ತಮ್ಮ ಸಂಖ್ಯಾ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ವ್ಯಾಪಾರೀ ಉದ್ಯಮದಲ್ಲಿದ್ದಾರೆ. ಆದರೆ ಆ ಅಜ್ಞಾನೀ ಜನರಲ್ಲಿಯೂ ಒಂದು ಅಂಥವಾದ ಸ್ವಮತನಿಷ್ಠೆ ಇರುವುದರಿಂದ ಅವರೂ ಮಿಶನರಿಗಳ ಮತಾಂತರ ಕಾರ್ಯವನ್ನು ತಮ್ಮದೇ ಆದ ದಸ್ಯುವಿಧಾನದಿಂದ ವಿಫಲಗೊಳಿಸುತ್ತಿದ್ದಾರೆ. ಅಂತಹ ಒಂದು ದೃಶ್ಯವನ್ನು ಕಂಡಿದ್ದೆ, ನಿನ್ನೆಯ ಅತೀಂದ್ರಿಯ ಮನಃಪರ್ಯಟನದಲ್ಲಿ. ಅದರ ನೆನಪಾಗಿ, ಆ ಚಿತ್ರ ಕಣ್ಣಿಗೆ ಕಟ್ಟಿದಂತಾಗಿ ತಡೆಯಲಾರದೆ ನಕ್ಕುಬಿಟ್ಟೆ….ನಾನು ಕಂಡ ಅನೇಕ ದರ್ಶನ ಚಿತ್ರಗಳಲ್ಲಿ ಅದೇ ಏಕೆ ನೆನಪಿಗೆ ಬರಬೇಕೊ?….ಯಾರಿಗೆ ಗೊತ್ತು? ಬಹುಶಃ ನನಗೂ ನಾನು ಕೈಗೊಂಡಿರುವ ಶ್ರೀ ರಾಮಕೃಷ್ಣ ಲೋಕಸಂಗ್ರಹ ಕಾರ್ಯಕ್ಕೂ, ಅಲ್ಲಿ ನಾನು ಕಂಡ ದ್ರಶ್ಯದಲ್ಲಿ ಪಾತ್ರದಾರಿಗಳಾಗಿದ್ದವರಿಗೋ ಅಥವಾ ಅವರ ಮಕ್ಕಳಾಗಿ ಹುಟ್ಟಲಿರುವವರಿಗೋ ಅಥವಾ ಅವರ ಮೊಮ್ಮಕ್ಕಳು ಮರಿಮಕ್ಕಳಿಗೋ, ಏನಾದರೂ ಸಂಬಂಧ ಇರಬಾರದೇಕೆ?….ಇಲ್ಲವೆ, ಇಂದು ನನ್ನಿಂದ ದೀಕ್ಷಿತರಾದವರು ಮರಣಾನಂತರ ಮತ್ತೊಂದು ಜನ್ಮದಲ್ಲಿ ಅಲ್ಲಿಯೆ ಹುಟ್ಟಿಬಂದು ನನ್ನ ಕಾರ್ಯವನ್ನು ಮುಂದುವರಿಸುವ ಸೇವೆಗೆ ಪಾತ್ರಗಳಾಗಬಾರದೇಕೆ?….”

* * *

ಅಂದು ಬೆಳಿಗ್ಗೆ ಮುಂಚೆ, ಹೂವಳ್ಳಿ ಮನೆಯಲ್ಲಿ, ಕೋವಿಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, ಕೋವಿಗೆ ಈಡು ತುಂಬದೆ ಬರಿಯ ಕೇಪನ್ನು ಮಾತ್ರ ಹಾಕಿಕೊಂಡು ಹೊರಗೆ ಹೊರಡಲನುವಾಗುತ್ತಿದ್ದ ಮುಕುಂದಯ್ಯನಿಗೆ ತಾನು, ಸ್ವಾಮಿ ವಿವೇಕಾನಂದ್ರು ಅಮೇರಿಕಾದಲ್ಲಿ ಸಹೋದರಿ ಕ್ರಿಸ್ಟೈನ್ ಗೆ ಹೇಳಿದ್ದ. ಆ ಶ್ರೀರಾಮಕೃಷ್ಣ ಲೋಕ ಸಂಗ್ರಹ ಕಾರ್ಯದ ಸಫಲತೆಗಾಗಿ ವಿಧಿಯ ಕೈಯಲ್ಲಿ ಒಂದು ಉಪಾಂಗೋಪಕರಣವಾಗುತ್ತಿದ್ದೇನೆ ಎಂಬುದು ಹೇಗೆ ತಾನೆ ಗೊತ್ತಾಗಬೇಕು. ಅವನು ತನ್ನ ಅಕ್ಕನಿಗೆ ಮಾತು ಕೊಟ್ಟಿದ್ದಂತೆಯೂ ತನ್ನ ಬೆಟ್ಟಳ್ಳಿ ದೇವಯ್ಯ ಬಾವನನ್ನು, ಅವನ ಅಪೇಕ್ಷೆಯಂತೆಯೆ, ಕಿಲಸ್ತರ ಜಾತಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿಯೂ ಮೇಗರವಳ್ಳಿಯ ಮಿಶನ್ ಇಸ್ಕೂಲಿಗೆ ಹೊರಟಿದ್ದನು.

ಅವನು ಕೋವಿ ಮತ್ತು ಕೋವಿಚಿಲಗಳನ್ನು ತೆಗೆದುಕೊಂಡಿದ್ದರೂ, ಬೇಟೆಯ ಉಡುಪಿನಲ್ಲಿರದೆ, ನೆಂಟರ ಮನೆಗೆ ಹೋಗುವಾಗ ಹಾಕಿಕೊಳ್ಳುವಂತೆ ತೋಪಿ, ಅಂಗಿ, ಕಚ್ಚೆಪಂಚೆಗಳನ್ನು ತೊಟ್ಟುಕೊಂಡಿದ್ದನ್ನು ಕಂಡ ನಾಗಕ್ಕಗೆ ಏನೊ ಅನುಮಾನ ಬಂದು, ಅದನ್ನು ಚಿನ್ನಮ್ಮಗೆ ತಿಳಿಸಿದಳು.

ಭೀತಿ ಬಡಿದಂತಾಗಿ ಚಿನ್ನಮ್ಮ ಏದಿದಳು: “ನಾಗಕ್ಕಾ, ಅಜ್ಜೀಗಾದರೂ ಹೇಳೆ, ಅವರು ಹೋಗದಾಂಗೆ ಮಾಡೆ….ಅವರು ಷಿಕಾರಿಗೆ ಹೋಗ್ತಾ ಇಲ್ಲ ಕಣೇ. ಮೇಗ್ರೊಳ್ಳಿಗೆ ಹೋಗ್ತಾರಂತೆ, ಪಾದ್ರೀನ ಹೊಡೆದಾಕಾಕೆ! ನಂಗೆ ಮೊನ್ನೇನೆ ಹೇಳಿದ್ಲು ಪೀಂಚ್ಲು. ಸುಳ್ಳು ಅಂತಾ ಮಾಡಿದ್ದೆ. ಐತ ಹೇಳಿದ್ದನಂತೆ ಅವಳಿಗೆ. ಅಂವನ್ನೂ ಕರಕೊಂಡು ಹೋಗ್ತಾರಂತೆ!….ಅಯ್ಯಯ್ಯೋ, ಬ್ಯಾಗ ಹೋಗೋ!….

ನಾಗಕ್ಕ ಗಟ್ಟಿಯಾಗಿ ಕೂಗಿ ಹೇಳಿದ ಮೇಲೆ ಅಜ್ಜಿಗೆ ವಿಷಯವೇನೊ ಗೊತ್ತಾಯಿತು. ಆದರೆ ಅರ್ಥವಾಗಲಿಲ್ಲ. ಯಾರಾದರೂ ಮನುಷ್ಯರನ್ನು ಹೊಡೆಯುತ್ತಾರೆಯೆ ಕೋವಿಯಲ್ಲಿ? ಕೋವಿ ಇರುವುದು ಹಂದಿ, ಮಿಗ, ಕಾಡುಕುರಿ, ಕಾಡುಕೋಳಿ, ಹುಲಿ ಮೊದಲಾದ ಕಾಡುಪ್ರಾಣಿಗಳನ್ನು ಹೊಡೆಯುವುದಕ್ಕೆ: “ಏ ಹೋಗೆ! ಅವನಿಗೇನು ಹುಚ್ಚೇನೆ, ಮನುಷ್ಯನ್ನ ಹೊಡೆಯಾಕೆ?” ಎಂದು ನಾಗಕ್ಕನನ್ನು ಗದರಿಸಿದರೂ, ಸೊಂಟದ ಮೇಲೆ ಕೈಯಿಟ್ಟು ನಸುಬಾಗಿ ಬಾಗಿಲಿಗೆ ನಡೆದು ಬಂದು ಮುಕುಂದಯ್ಯನನ್ನು ವಿಚಾರಿಸಿದಳು.

“ಇವೊತ್ತು ಮೇಗ್ರೊಳ್ಳಿ ಮಿಶನ್ ಇಸ್ಕೂಲಿನ ಪ್ರಾರಂಭೋತ್ಸವವಂತೆ, ಅಜ್ಜೀ ಅದಕ್ಕೆ ಹೋಗ್ತಿದ್ದೀನಿ…. ಬರ್ತಾ ಎಂತಿದ್ರೂ ಕಂಡರೆ ಒಂದು ಈಡು ಹೊಡೆಯಾನ ಅಂತಾ ಕೋವಿ ತಗೊಂಡೀನಿ.” ಎಂದು ಅಜ್ಜಿಗೆ ಸಮಾಧಾನ ಹೇಳಿ ಹೋರಟೇಬಿಟ್ಟನು. ಅಜ್ಜಿಗೆ ಕೇಳಿಯೆ ಮುಕುಂದಯ್ಯನ ಮೇಲೆ ಪ್ರೀತಿಪೂರ್ವಕವಾದ ಗೌರವವುಂಟಾಯಿತು. ಒಳಗೆ ಹೋಗಿ ನಾಗಕ್ಕ ಚಿನ್ನಮ್ಮ ಇಬ್ಬರಿಗೂ ಛೀಮಾರಿ ಮಾಡಿದಳು: “ಗಂಡಸರು ಏನಾದರೂ ದೊಡ್ಡ ಕೆಲಸಕ್ಕೆ ಹೊರಟು ನಿಂತಾಗ ಹೀಂಗೆಲ್ಲ ಅನಿಬಿರುಗು ಆಡಬಾರದು ಕಣೇ. ಅಪಶಕುನ ಆಗ್ತದೆ!”

ಮುಕುಂದಯ್ಯ ಮನೆಯಿಂದ ಸ್ವಲ್ಪದೂರ ಹೋಗುವುದರೊಳಗೆ, ಅವನ ಹಿಂದೆ ಸಂಗಡ ಹೊರಟಿದ್ದ ಐತ “ಅಯ್ಯಾ, ಚಿನ್ನಕ್ಕೋರು ಯಾಕೊ ಬಿರುಬಿರನೆ ಬರಾಹಾಂಗೆ ಕಾಣ್ತದೆ.” ಎಂದು ಪಿಸುದನಿಯಲ್ಲಿ ಗುಟ್ಟಾಡುವಂತೆ ಹೇಳಿದನು.

ಐತನಿಗೆ ಮುಂದೆ ಹೋಗುತ್ತಿರುವಂತೆ ಹೇಳಿ. ಮುಕುಂದಯ್ಯ ನಿಂತನು.

ಚಿನ್ನಮ್ಮ ಏದುತ್ತಾ ಬಂದು ಹತ್ತಿರ ನಿಂತಳು. ಚಳಿಗಾಲದ ಬೆಳಗಿನ ಎಳಬಿಸಿಲಿನಲ್ಲಿ ಅವಳ ಬಾಯುಸಿರು ಹೊಗೆಹೊಗೆಯಾಗಿ ಮೇಲೇರುತ್ತಿತ್ತು. ಏನೋ ಕೆಲಸ ಮಾಡುತ್ತಿದ್ದವಳು ಹಾಗೆಯೆ ಎದ್ದು ಓಡಿ ಬಂದಿದ್ದಳಾದ್ದರಿಂದ ನೇಲುಬಿದ್ದಿದ್ದ ಗೊಬ್ಬೆಯ ಸೆರಗನ್ನೂ ಎತ್ತಿ ಕಟ್ಟಿರಲಿಲ್ಲ. ಸಾಮಾನ್ಯವಾಗಿ ರವಕೆ ಕುಪ್ಪಸ ಯಾವುದನ್ನೂ, ಅದರಲ್ಲಿಯೂ ಮನೆಯಲ್ಲಿರುವಾಗ, ತೊಟ್ಟುಕೊಳ್ಳುತ್ತಿರಲಿಲ್ಲವಾದ್ದರಿಂದ ಸೀರೆಯ ಮರೆಯಲ್ಲಿ ಅದನ್ನೊತ್ತಿಎತ್ತಿ ತಳ್ಳುವಂತಿದ್ದ ಅವಳ ವಿಕಾಸಮಾನ ಕುಟ್ಮಲಜುಚಗಳು ಮೇಲಕ್ಕೂ ಕೆಳಕ್ಕೂ ಉಸಿರಾಡಿದಂತೆಲ್ಲ ಎದ್ದು ಬೀಳುತ್ತಿದ್ದವು. ಅವಳ ಆ ಉದ್ವೇಗದ ಪರಿಸ್ಥಿತಿಯಲ್ಲಿ ಅವಳಿಗೆ ಸರ್ವದಾ ಸಹಜವಾಗಿರುತ್ತಿದ್ದ ಲಜ್ಜೆಯೂ ಹಿಂಜೈದಂತಿತ್ತು. ಕಣ್ಣೀರು ಸುರಿಯುತ್ತಿತ್ತು. ಬಿಕ್ಕುತ್ತಿದ್ದುದರಿಂದ ಮೂಗುತಿ ಮತ್ತು ಎಸಳು ಬುಗುಡಿಗಳು ಲಯಬದ್ಧವಾಗಿ ಅಳ್ಳಾಡುತ್ತಿದ್ದಂತಿತ್ತು. ಅವಳು ತನ್ನೆದೆಯನ್ನು ಸಂತೈಸಲೆಂಬಂತೆ ಒತ್ತಿಕೊಂಡಿದ್ದು, ಮುಂಗೈಮೇಲೆ ಹಚ್ಚೆ ಜುಚ್ಚಿದ್ದ ಜೋಗಿ ಜಡೆಯ ಕರ್ನೀಲಿ ಬಣ್ಣವು ತಾರತಮ್ಯದಿಂದ ಅವಳ ಮೈ ಬಣ್ಣವನ್ನು ಮನೋಹರವಾಗಿ ಎತ್ತಿ ತೋರಿಸುತ್ತಿತ್ತು. ಮನೆಯೊಳಗಿನ ಬೆಳಕಿನಲ್ಲಿ ಕಾಣಿಸದೆ ಮರೆಯಾಗಿರುತ್ತಿದ್ದ ಅವಳ ಆ ಅಪ್ಸರ ಸೌಂದರ್ಯದ ಪ್ರಭಾವದಿಂದ ರುದ್ರಕಾರ್ಯಕ್ಕೆ ದೃಢಚಿತ್ತನಾಗಿ ಹೊರಟಿದ್ದ ಮುಕುಂದಯ್ಯಾ ಹೃದಯ ಆರ್ದ್ರವಾಯಿತು. ಇನ್ನು ಕೆಲವೇ ದಿನಗಳಲ್ಲಿ ತನ್ನ ಧರ್ಮಪತ್ನಿಯಾಗಲಿರುವ ಅವಳನ್ನು ಮನಸ್ಸಿನಿಂದಲೆ ಬಿಗಿದಪ್ಪಿ ಮುದ್ದಾಡಿತು ಅವನ ಚೇತನ ಸಮಸ್ತವೂ! ಅವಳಿಗೆ ಹೇಳದೆ ಬಂದದ್ದು ತಪ್ಪಾಯಿತು ಎನ್ನಿಸಿತವನಿಗೆ.

“ಯಾಕೆ, ಚಿನ್ನಿ?”

ಚಿನ್ನಮ್ಮ ಓಡಿ ಬಂದದ್ದು ಸಣ್ಣ ಕೆಲಸಕ್ಕಾಗಿರಲಿಲ್ಲ; ತನ್ನ ಐದೆತನವನ್ನು ಕಾಪಾಡಿಕೊಳ್ಳುವ, ಮಾಂಗಲ್ಯವನ್ನು ರಕ್ಷಿಸಿಕೊಳ್ಳುವ ಮಹತ್ಕಾರ್ಯಕ್ಕಾಗಿ ಧಾವಿಸಿ ಬಂದಿದ್ದಳು ಆ ಮಲೆಯ ಕನ್ಯೆ. ಅವಳಿನ್ನೂ ಅವನನ್ನು ಶಾಸ್ತ್ರೋಕ್ತವಾಗಿ ಮದುವೆಯಾಗಿರಲಿಲ್ಲ, ತಾಳಿ ಕಟ್ಟಿಸಿಕೊಂಡಿರಲಿಲ್ಲ, ನಿಜ. ಆದರೆ ಉಳಿದೆಲ್ಲ ರೀತಿಗಳಿಂದಲೂ ಅವಳು ಅವನ ಹೆಂಡತಿಯಾಗಿಬಿಟ್ಟಿದ್ದಳು. ತನ್ನ ಕನ್ನೆತನವೂ ಅವನಿಗೆ ಸಮರ್ಪಿತವಾಗಿಬಿಟ್ಟಿತ್ತು. ಅವನಿಗಾಗಿ ಮಲೆನಾಡಿನ ಮನೆತನದ ಹೆಣ್ಣು ಮಾಡಬಾರದ್ದನ್ನೆಲ್ಲ ಮಾಡಿದ್ದಳು. ಅವನನ್ನು ಬಿಟ್ಟು ತನಗಿನ್ನು ಇಹಜೀವನವಿರಲಿಲ್ಲ. ಅವನಿಗೇನಾದರೂ ಆಗಬಾರದ್ದು ಆದರೆ? ಅಯ್ಯೋ, ಅದನ್ನು ನೆನೆದರೇ ಅವಳಿಗೆ ಪ್ರಜ್ಞೆ ತಪ್ಪುವಂತಾಗುತ್ತಿತ್ತು! ಅವನೇನಾದರೂ ಅವಶನಾಗಿ ಗುಂಡು ಹಾರಿಸಿದರೆ, ನರಹತ್ಯೆ ನಡೆದರೆ, ನೆವ ಸಿಕ್ಕಿದರೆ ಸಾಕು ನೇಣು ಹಾಕುತ್ತಿದ್ದ ಆ ಕಾಲದಲ್ಲಿ,-ಅವನಿಗೆ ಗಲ್ಲಾಗುವುದೆ ಖಂಡಿತ! ಅಯ್ಯೋ ಆಮೇಲೆ? ನನ್ನ ಗತಿ? ಚೆನ್ನಮ್ಮ ನೆಲಕ್ಕೆ ದಿಂಡುರುಳಿ, ಮುಕುಂದಯ್ಯನ ಪಾದಗಳನ್ನು ಬಲವಾಗಿ ಹಿಡಿದುಕೊಂಡು, ಅವನ್ನು ಕಣ್ಣೀರಿನಿಂದ ತೋಯಿಸುತ್ತಾ ಬಿಕ್ಕಿ ಬಿಕ್ಕಿ ಅತ್ತಳು.

ಮುಕುಂದಯ್ಯ ಕೋವಿಯನ್ನು ನೆಲಕಿಟ್ಟು, ಬಗ್ಗಿ, ಎರಡೂ ಕೈಗಳಿಂದ ಅವಳನ್ನು ಎತ್ತುತ್ತಾ “ಯಾಕೆ, ಚಿನ್ನೀ?” ಎಂದನು ಮತ್ತೆ, ಸ್ತಂಭಿತನಾಗಿ.

“ನಂಗೊತ್ತು, ನೀವು ಯಾಕೆ ಹೋಗ್ತಿದ್ದೀರಿ ಅಂತಾ. ಬೆಟ್ಟಳ್ಳಿ ಅತ್ತಿಗೆಮ್ಮಗೆ ಕೊಟ್ಟಿದ್ದ ಮಾತನ್ನು ನಡೆಸಿಕೊಡುವುದಕ್ಕೆ! ಐತ ಹೇಳಿದನಂತೆ; ಪೀಂಚ್ಲು ಹೇಳಿತು ನಂಗೆ….ಖಂಡಿತಾ ಬೇಡ, ನೀವು ಕೋವಿ ತಗೊಂಡು ಹೋಗೋದು. ನಂಗೆ ಜೀವಾನೆ  ಹಾರ್ತಿದೆ! ನೀವು ಯಾರನ್ನಾದ್ರೂ ಕೊಂದರೆ?….ನಾನು ಕೋಣೆಗೆ ಬರ್ಲಿಲ್ಲಾ ಅಂತಾ ನಿಮಗೆ ಸಿಟ್ಟಾಗಿದ್ರೆ, ನನ್ನ ಸರೂ ತಪ್ಪಾಯ್ತು! ಕಾಲಿಗೆ ಬೀಳ್ತೀನಿ…. ಇವೊತ್ತು ಬಂದೇ ಬರ್ತಿನಿ…. ಇನ್ನೊಂದು ತಿಂಗಳು ತಡೆದರೆ…. ಆಗೇ ಅಗ್ತದಲ್ಲಾ…. ಅಂತಾ….ಬರ್ಲಿಲ್ಲ!”

ನಡುನಡುವೆ ಬಿಕ್ಕಿಬಿಕ್ಕಿ, ನಿಲ್ಲಿಸಿ ನಿಲ್ಲಿಸಿ, ಅಳತ್ತಳುತ್ತಾ ಹೇಳುತ್ತಿದ್ದ ಚಿನ್ನಮ್ಮನ ಮಾತುಗಳನ್ನು ಕೇಳುತ್ತಿದ್ದ ಮುಕುಂದಯ್ಯಗೆ ಅವಳ ದುಃಖವನ್ನು ನೋಡಿ ಮನಸ್ಸು ನೊಂದಿತಾದರೂ ತುದಿತುದಿಗೆ ಅವಳಾಡಿದ ಮಾತುಗಳಿಗೆ ತಡೆಯಲಾರದೆ ನಕ್ಕುಬಿಟ್ಟನು.

“ಸುಮ್ಮಸುಮ್ಮನೆ ಏನೇನೋ ಉಹಿಸಿಕೊಂಡು ಹೀಂಗೆ ಅಳ್ತಿಯಲ್ಲಾ? ನಿಗೆ ಯಾರು ಹೇಳ್ದೋರು? ಆ ಹರಕಲು ಬಾಯಿ ಐತಾ ಹೇಳ್ದಾ ಅಂತಾ ಅದನ್ನೆಲ್ಲಾ ನಂಬ್ತೀಯಾ?…ನೋಡು, ಚಿನ್ನೀ, ನಾನೇನು ನೂನು ತಿಳಿದಕೊಂಡಷ್ಟು ಧೈರ್ಯಶಾಲೀನೂ ಅಲ್ಲ, ಮೂರ್ಖನೂ ಅಲ್ಲ. ನನಗೂ ನಿನ್ನಷ್ಟೇ ಆಸೆ ಇದೆ, ನಿನ್ನ ಮದುವೆಯಾಗಬೇಕೂ ಸುಖವಾಗಿ ಬಾಳಬೇಕೂ ಅಂತಾ. ಇಷ್ಟೆಲ್ಲ ಪಾಡುಪಟ್ಕೊಂದು, ನಿನ್ನೂ ದಣಿಸಿ, ನೆಂಟರು ಇಷ್ಟರು ಊರೋರ ಬಾಯಿಗೆಲ್ಲ ಬಂದು, ಈಗ ನಿನಗೆ ಅನ್ಯಾಯ ಆಗೋ ಹಾಂಗೆ ಮಾಡ್ತಿನಿ ಅಂತಾ ಖಂಡಿತ ತಿಳಿಕೊಳ್ಳಬ್ಯಾಡ….ನಾನು ಕೋವಿ ತಗೋಂಡು ಹೋಗ್ತೀನಿ ಅಂತಾ ನಿಂಗೆ ಹೆದರಿಕೇನೇ?” ಮುಕುಂದಯ್ಯ ಬಗ್ಗಿ ಕೆಳಗಿಟ್ಟಿದ್ದ ಕೋವಿಯನ್ನು ಕೈಗೆ ತೆಗೆದುಕೊಂಡನು. “ಇಲ್ಲಿ ನೋಡು, ಈ ಕೋವೀಲಿ ಏನು ಅದೆ ಅಂತಾ.” ಚಿನ್ನಮ್ಮ ಬೆಚ್ಚುವಂತೆ ಅವಳ ಕಡೆಗೆ ಕೋವಿನಳಿಗೆ ತಿರುಗಿಸಿ ಹಿಡಿದು, ಕುದುರೆ ಎತ್ತಿ, ಬಿಲ್ಲೆಳೆದುಬಿಟ್ಟನು! ಛಾಟ್ ಎಂದು ಕೇಪು ಹೊಟ್ಟಿ ಹಾರಿತು: ಢಾಂ ಎಂದು ಈಡಾಗಲಿಲ್ಲ. ಹೆದರಿ ಬಿಳಿಚಿಕೊಂಡಿದ್ದಚಿನ್ನಮ್ಮ ಮುಕುಂದಯ್ಯನ ನಗೆಗೆ ಕಕ್ಕಾವಿಕ್ಕಿಯಾದಳು. “ನೋಡಿದೆಯಾ? ಕೋವಿಗೆ ಬರೀ ಕೇಪು ಹಾಕಿದ್ದೆ. ಈಡು ತುಂಬಿರಲಿಲ್ಲ. ಆದರಿಂದ ಯಾರಿಗೂ ಅಪಾಯಾಅಗುವುದಿಲ್ಲ…. ನಿನ್ನ ‘ಗಂಡ’ ಇವೊತ್ತು ರಾತ್ರಿ ಸುರಕ್ಷಿತವಾಗಿ ಬಂದೇ ಬರ್ತಾನೆ. ಗೊತ್ತಾಯ್ತೆ?….”ಗಂಡ ಅಂದದ್ದಕ್ಕೆ ಸಿಟ್ಟು ಮಾಡಿಕೊಳ್ಳೋದಿಲ್ಲಷ್ಟೆ? “ವರ” ಅಂತ ಬದಲಾಯಿಸಿಕೋ ಬೇಕಾದ್ರೆ….”

ಚಿನ್ನಮ್ಮ ಲಜ್ಜಾಭಂಗಿಯಿಂದ ನಿಂತಿದ್ದನ್ನು ನೋಡಿ “ಇವೊತ್ತು ರಾತ್ರಿ ‘ಬಂದೇ ಬರ್ತೀನಿ’ ಅಂತಾ ನೀನು ಹೇಳಿದ್ದು ಜ್ಞಾಪಕ ಇರಲಿ! ಮತ್ತೆಲ್ಲಾದರೂ ಮರೆತು ಬಿಟ್ಟೀಯಾ?…. ಏನು?…. ನೆಲ ನೋಡ್ತಾ ನಿಂತುಬಿಟ್ಟೇಲ್ಲಾ, ಚಿನ್ನೀ?…. ನೀನು ಬಂದ್ರೆ ಅಲ್ಲಿ ನಡೆಯೋ ಕತೇನೆಲ್ಲಾ ಸ್ವಾರಸ್ಯವಾಗಿ ಹೇಳ್ತೀನಿ, ಆಯ್ತಾ?” ಎಂದು ವಿನೋದವಾಡಿ, ತನ್ನ ಕಡೆಗೆ ಮುದ್ದು ನೋಟ ಬೀರಿ ಎವೆಯಿಕ್ಕದೆ ನೋಡುತ್ತಾ ನಿಂತಿದ್ದ ತನ್ನ ಪ್ರಾಣೇಶ್ವರನನ್ನು ನೇರವಾಗಿ ನೋಡುವುದರಿಂದಲೆ ಕಣ್ಣುತ್ತರವಿತ್ತು ಮನೆಯ ಕಡೆಗೆ ತಿರುಗಿದಳು “ವಧೂ” ಚಿನ್ನಮ್ಮ.

* * *

ಮೇಗರವಳ್ಳಿಯ ಮಿಶನ್ ಇಸ್ಕೂಲಿನ ಹೊಸ ಕಟ್ಟಡವು ಪ್ರಾರಂಭೋತ್ಸವಕ್ಕೆ ಸಜ್ಜಾಗಿತ್ತು ಒಳಗೂ ಹೊರಗೂ. ಒಳಗೆ ಬೆಂಚು, ಕುರ್ಚಿ, ಪಟಗಳು: ಹೊರಗೆ ಮಾವು ಹಲಸಿನ ತೋರಣ, ಬಗನಿ ಬಾಳೆಯ ಗಿಡಗಳನ್ನು ಕಟ್ಟಿ ಸಿಂಗರಿಸಿದ್ದ ಅಡಕೆ ಮರದ ಚಪ್ಪರ. ಪ್ರಾರಂಭೋತ್ಸವದ ಸಮಯ ಸಾಯಂಕಾಲವೆಂದು ಗೊತ್ತಾಗಿದ್ದರೂ ಆ ದಿನ ಪ್ರಾತಃಕಾಲವೆ ಒಂದು ಸಣ್ಣ ಗುಂಪು ಅಲ್ಲಿ ಸೇರಿತ್ತು. ಬೆಳಿಗ್ಗೆ ಅಲ್ಲಿ ನಡೆಯುವುದೆಂದು ಗೊತ್ತಾಗಿದ್ದ ಸಮಾರಂಭವು ಸಾರ್ವಜನಿಕ ಸ್ವರೂಪದ್ದಾಗಿರಲಿಲ್ಲ, ಖಾಸಗಿಯಾದಾಗಿತ್ತು. ಒಂದು ರೀತಿಯಲ್ಲಿ ಗೋಪ್ಯವಾದದ್ದೂ ಆಗಿತ್ತು: ಬೆಟ್ಟಳ್ಳಿ ದೇವಯ್ಯಗೌಡರ ಮತಾಂತರ ಸಮಾರಂಭ!

ಅಂತಹ ಮತಾಂತರಕಾರ್ಯ ಗುಟ್ಟಾಗಿ ನಡೆಯಬೇಕಾಗಿರಲಿಲ್ಲ. ಚರ್ಚಿನಂತಹ ಅಥವಾ ಚರ್ಚು ಇಲ್ಲದೆಡೆಗಳಲ್ಲಿ ಪ್ರಾರ್ಥನಾ ಮಂದಿರದಂತಹ ಪವಿತ್ರ ಸ್ಥಳಗಳಲ್ಲಿ ಸುಪ್ರಕಟವಾಗಿಯೆ ನಡೆಯುತ್ತಿದ್ದುದು ವಾಡಿಕೆಯಾಗಿತ್ತು. ಅಲ್ಲದೆ ಮಿಶನರಿಗಳಿಗೆ ಅಂತಹ ಪ್ರಕಟನೆ ಮತ್ತುಪ್ರಚಾರದ ಅವಶ್ಯಕತೆಯೂ ಇತ್ತು. ಆದರೆ ದೇವಯ್ಯಗೌಡರ ಸಕಾರಣವಾದ ಅಪೇಕ್ಷೆಯಂತೆ ಅವರ ಮತಾಂತರವನ್ನು ಸಧ್ಯಕ್ಕೆ ಅಂತರಂಗವಾಗಿಯೆ ನಡೆಯಿಸಲು ಒಪ್ಪಿಕೊಂಡಿದ್ದರು ರೆಬರೆಂಡ್ ಲೇಕ್ ಹಿಲ್ ಪಾದ್ರಿಗಳು.”ದೇವಯ್ಯನವರ ಬಂಧುಬಾಂಧವರೆಲ್ಲ ಅವರ ಮತಾಂತರಕ್ಕೆ ವಿರೋಧವಾಗಿದ್ದಾರೆ. ದೇವಯ್ಯನವರು ಮಾತ್ರ ಪವಿತ್ರ ಬೈಬಲ್ಲಿನ ಉಪದೇಶಗಳಿಗೂ ದೇವರ ಕುಮಾರ ಯೇಸುಕ್ರಿಸ್ತನ ವ್ಯಕ್ತಿತ್ವಕ್ಕೂ ಮಾರುಹೋಗಿ, ಬ್ರಾಹ್ಮಣರ ಹಿಂದೂ ಧರ್ಮದ ಮೌಢ್ಯ ವಲಯದಿಂದ ಹೊರಬರಲು ಕಾತರರಾಗಿದ್ದಾರೆ. ಬ್ರಾಹ್ಮಣರ ಜಗದ್ ಗುರುಗಳೂ ಆವರ ಮಠಗಳೂ ಅವರ ಪುರೋಹಿತರು ನಾಮಧಾರಿ ಗೌಡರ ಜನಾಂಗವನ್ನು ಕೀಳುಭಾವನೆಯಿಂದ ಕಾಣುತ್ತಿರುವುದನ್ನೂ, ಅವರು ವಿದ್ಯೆ ಕಲಿತು ಮುಂದಕ್ಕೆ ಬರದಂತೆ ಮಾಡಲು ವರ್ಣಾಶ್ರಮಧರ್ಮ ಸ್ವಧರ್ಮಪರಿಪಾಲನೆ ಮೊದಲಾದ ತತ್ವಗಳನ್ನು ತಂದೊಡ್ಡಿ, ತಾವೇ ಬರೆದಿಟ್ಟಿರುವ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸಿ, ಆ ಶಾಸ್ತ್ರೋಕ್ತಿಯನ್ನು ಉಲ್ಲಂಘಿಸಿದರೆ ದೇವರ ಕೋಪಕ್ಕೂ ಬ್ರಾಹ್ಮಣರ ಶಾಪಕ್ಕೂ ಗುರಿಯಾಗಿ ನರಕಕ್ಕೆ ಹೋಗುತ್ತಾರೆಂದು ಹೆದರಿಸುವುದನ್ನೂ ಸಹಿಸಿ ಸಹಿಸಿ, ಅವರಿಗೆ ಸಾಕಾಗಿದೆ. ಆದ್ದರಿಂದ ಈ ಬ್ರಾಹ್ಮಣರ ಹಿಡಿತದಿಂದ ಹೊರಬಂದು ತಮ್ಮ ಜನಾಂಗದ ಉದ್ದಾರವನ್ನು ಸಾಧಿಸಬೇಕೆಂಬುದೇ ಅವರ ಅಭಿಲಾಷೆ…. ಆದರೆ ಸದ್ಯದ ಸಾಮಾಜಿಕ ಪ್ರಸ್ಥಿತಿಯಲ್ಲಿ, ಸದ್ಯಕ್ಕಾದರೂ, ತಾವು ಬಹಿರಂಗವಾಗಿ ಕ್ರೈಸ್ತ ಮತಕ್ಕೆ ಸೇರುವುದರಿಂದ ತಮ್ಮ ಉದ್ದೇಶ ಸಾಧನೆಗೆ ಅನುಕೂಲವಾಗುವುದರ ಬದಲು ಪ್ರತಿಕೂಲವೆ ಹೆಚ್ಚಾಗ ಬಹುದಾದ್ದರಿಂದ ಅವರು ತಮ್ಮ ಮಾತಾಂತರವನ್ನು ಸದ್ಯಕ್ಕೆ ಗೋಪ್ಯವಾಗಿಡಲು ಬಯಸಿದ್ದಾರೆ.” ಉಪದೇಶಿ ಜೀವರತ್ನಯ್ಯನ ಈ ವಾದ ರೆವರೆಂಡ್ ಅವರಿಗೆ ಸಾಧುವಾಗಿಯೂ ಸತರ್ಕವಾಗಿಯೂ ತೋರಿತ್ತು: ದೇವಯ್ಯಗೌಡರನ್ನು ಗಲಾಟೆಯಿಲ್ಲದೆ, ಗಲಾಟೆಗೆ ಅವಕಾಶವಾಗದಂತೆ, ಗುಟ್ಟಾಗಿ ಮತ್ತು ಸರಳವಾಗಿ ಖುದ್ದು ತಾವೆ ಮತಾಂತರಗೊಳಿಸಲು ಒಪ್ಪಿದ್ದರು. ಸಧ್ಯಕ್ಕೆ ಗೌಡರ ಹಿಂದೂ ಹೆಸರನು ಕ್ರೈಸ್ತ ಹೆಸರಿಗೆ ಬದಲಾಯಿಸಬಾರದೆಂದೂ ವಸನವೇಷಭೂಷಣಗಳಲ್ಲಿ ಬಾಹ್ಯಕವಾದ ಯಾವ ವ್ಯತ್ಯಾಸವೂ ಗೋಚರವಾಗದಂತಿರಬೇಕೆಂದೂ ತೀರ್ಮಾಣವಾಗಿತ್ತು.

ತೀರ್ಮಾನದ ಎರಡನೆಯ ಭಾಗಕ್ಕೆ ನಿಜವಾಗಿಯೂ ಅವಶ್ಯಕತೆ ಇರಲಿಲ್ಲ. ಆಗಬೇಕಾದ ಪರಿವರ್ತನೆಯಲ್ಲ ಮೊದಲೆ ಆಗಿಯೆಹೋಗಿತ್ತು. ಕ್ಯಾಥೋಲಿಕ್ಕರಂತೆ ಯಾವ ವಿಧವಾದ ಶಿಲುಬೆಯ ಲಾಂಛನವನ್ನೂ ಕೊರಳಲ್ಲಿ ಧರಿಸದ ಪ್ರೋಟೆಸ್ಟೆಂಟ್ ರಿಗೂ ನಾಮಧಾರಿಗಳಿಗೂ, ಜುಟ್ಟು ತ್ತೆಗೆದು ಕ್ರಾಪು ಬಿಡುವುದೊಂದನ್ನು ಬಿಟ್ಟರೆ, ಹೆಚ್ಚು ಬಾಹ್ಯಕವಾದ ಆಂಗಿಕ ವ್ಯತ್ಯಾಸ ಯಾವುದು ಇರಲಿಲ್ಲ. ದೇವಯ್ಯ ಎಂದೋ ಜುಟ್ಟು ಬೋಳಿಸಿ ಕ್ರಾಪು ಬಿಟ್ಟಾಗಿತ್ತು! ಇನ್ನು ಹಣೆಯ ಮೇಲೆ ನಾಮಗೀಮ ಧರಿಸುವುದು? ಅದನ್ನು ಅವನು ತಿರಸ್ಕರಿಸಿ ಎಷ್ಟೋ ಕಾಲವಾಗಿತ್ತು! ಸಾಮಾನ್ಯ ಜನದ ಮಟ್ಟಿಗೆ ಹೇಳುವುದಾದರೆ, ಅವರ ದೃಷ್ಟಿಯಲ್ಲಿ ದೇವಯ್ಯ ಥೇಟು ಕಿಲಸ್ತರವನೆ ಆಗಿದ್ದನು!

ಬಿಳಿಪಾದ್ರಿ ಕರಿಪಾದ್ರಿ ಇಬ್ಬರೂ ಬೈಸಿಕಲ್ಲುಗಳ ಮೇಲೆ ಬಂದಿದ್ದರು. ಇಷ್ಟಪಟ್ಟಿದ್ದರೆ ಲೇಕ್ ಹಿಲ್ ದೋರೆಸಾನಿಯೊಡನೆ ಕೋಚಿನಲ್ಲಿಯೆ ತೀರ್ಥಹಳ್ಳಿಯಿಂದ ಮೇಗರವಳ್ಳಿಗೆ ಬರಬಹುದಾಗಿತ್ತು. ಅವನು ಇಷ್ಟಪಟ್ಟಿದ್ದರೆ ತೀರ್ಥಹಳ್ಳಿಯ ಅಮಲ್ದಾರರೂ ಪೋಲೀಸು ಇನ್ಸಪೇಕ್ಟರೂ ರೆವರೆಂಡ್ ಸಾಹೇಬರಿಗೆ ಮೈಗಾವಲಾಗಿ ಪರಿವಾರ ಬರುತ್ತಿದ್ದರು. ಏಕೆಂದರೆ, ಆಳುವ ಬ್ರಿಟಿಷರ ಕ್ರೈಸ್ತಮತಕ್ಕೆ ಸೇರಿದ್ದು, ಕ್ರೈಸ್ತಮತ ಪ್ರಚಾರಕ ಗುರುವಾಗಿದ್ದ ಆತನಿಗೆ ಸರಕಾರದ ಆಡಳಿತ ಯಂತ್ರವೆಲ್ಲ ಕಂ ಕಿಂ ಎನ್ನದೆ ಕೈಂಕರ್ಯ ಸಲ್ಲಿಸಬೇಕೆಂದು ಮೇಲಿಂದ ಕಟ್ಟಾಜ್ಞೆಯಿದ್ದಿತು. ಅಲಿಖಿತವಾಗಿ, ಆದರೂ ಕಟ್ಟು ನಿಟ್ಟಾಗಿ. ಆದರೆ ಇಂದು ಮತಾಂತರ ಕಾರ್ಯವು ಸಂಪ್ರದಾಯ ಸಮಾಜದ ಅಂಧರೋಷವನ್ನು ಕೆರಳಿಸದ ರೀತಿಯಲ್ಲಿ ಗಲಾಟೆಯಿಲ್ಲದೆ ನಡೆಯುವುದು ಬಹುಮುಖ್ಯವಾಗಿತ್ತು; ಜೊತೆಗೆ ಆಗತಾನೆ ತುದಿಮುಟ್ಟುತ್ತಿದ್ದ ಮಳೆಗಾಲದ ರಸ್ತೆಯೂ ತುಂಬ ಕೆಟ್ಟುಹೋಗಿತ್ತು?

ಸಧ್ಯಕ್ಕೆ ಐಗಳು ಅನಂತಯ್ಯನವರನ್ನೆ ಹೆಡ್ ಮಾಸ್ಟರ್ ಆಗಿ ನೇಮಿಸಿ ಕೊಂಡಿದ್ದರು. ಉಪದೇಶಿ ಜೀವರತ್ನಯ್ಯನ ಸಿಫಾರಸಿನ ಮೇಲೆ. ಅದಕ್ಕೆ ಅನಿವಾರ್ಯವಾದ ಕೆಲವು ಕಾರಣಗಳಿದ್ದವು: ಊರುಮನೆಯವರನ್ನೆ ನೇಮಿಸುವುದರಿಂದ ಸುತ್ತಮುತ್ತಣ ಹಳ್ಳಿಯ ಜನರು ತಮ್ಮ ಮಕ್ಕಳನ್ನು ಕಿಲಸ್ತರ ‘ಇಸ್ಕೋಲ್ಮನೆ’ಗೆ ಸೇರಿಸಿದರೆ ಜಾತಿ ಕೆಡಸಿಬಿಡುತ್ತಾರೆ ಎಂಬ ಸಂಶಯದಿಂದ ಪಾರಾಗಿ ಸ್ಕೂಲಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ ಎಂಬುದು ಒಂದು. ಎರಡನೆಯದಾಗಿ, ಕ್ರೈಸ್ತರಾಗಿದ್ದು ಅರ್ಹರಾಗಿರುವ ಉಪಧ್ಯಾಯರು ಯಾರೂ ಆ ಕೊಂಪೆಗೆ ಬರುವಂತಿರಲಿಲ್ಲ. ಮೂರನೆಯದು, ಮಿಶನರಿಗಳು ಕೊಡುತ್ತಿದ್ದ ಆ ಅತ್ಯಲ್ಪ ಸಂಬಳವು ಐಗಳಂಥವರಿಗೆ ಭಾರಿ ತಲುಬಾಗಿ ತೋರಿ ಆಕರ್ಷಣೀಯವಾಗಿರುತ್ತಿದ್ದದು. ನಾಲ್ಕನೆಯದಾಗಿ ಅಥವಾ ಮೂರನೆಯ ಒಂದು ಉಪಕಾರಣವಾಗಿ, ಕೋಣುರು ಮನೆಯ ಹಿಸ್ಸೆಯ ಅನಂತರ ಅನಂತಯ್ಯನವರಿಗೆ ಅಲ್ಲಿರಲು ಮನಸ್ಸು ಬರಲಿಲ್ಲ: ಅಕ್ಕಣಿಗೂ ಸೋತಿದ್ದ ರಂಗಪ್ಪಗೌಡರ ಸಡಿಲಕಚ್ಚೆ ಅವರಿಗೆ ಅತೀವ ಅಸಹ್ಯವಾಗಿತ್ತು! ಹೂವಳ್ಳಿಗೆ ಬಂದು ಇರುತ್ತೇನೆ ಎಂದು ಅವರು ಮುಕುಂದಯ್ಯನಿಗೆ ತಿಳಿಸಿದ್ದರು. ಮುಕುಂದಯ್ಯನಿಗೂ ಐಗಳಲ್ಲಿ, ತಾನು ಹುಡುಗನಾಗಿದ್ದಾಗಿನಿಂದಲೂ ಗೌರವ ಬುದ್ಧಿಯಿದ್ದು, ಅವರಿಂದ ಭಾರತ ರಾಮಾಯಣಾದಿಗಳನ್ನು ಓದಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದನಾದ್ದರಿಂದ, ಒಂದು ಗುರು ಶಿಷ್ಯ ಸಂಬಂಧ ಬೆಳೆದುಬಿಟ್ಟಿತ್ತು; ಆದರೆ ಐಗಳನ್ನು ಮುಕುಂದಯ್ಯನೇ ಕೋಣುರಿನಿಂದ ಬಿಡಿಸಿ ಹೂವಳ್ಳಿಗೆ ಕರೆದೊಯ್ದು ತಾನು ಹುಟ್ಟಿ ಬೆಳೆದು ದೊಡ್ಡವನಾದ ಮನೆಯ ಕೆಲಸಕಾರ್ಯಗಳಿಗೆ ಅಡ್ಡಿ ತಮ್ದನೆಂದು ಅಪಖ್ಯಾತಿ ಬರುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ಸದ್ಯಕ್ಕೆ ಐಗಳು ಬೇರೆ ಇನ್ನೆಲ್ಲಿಯಾದರೂ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮವೆಂದು ಸೂಚಿಸಿದ್ದನು. ಅಲ್ಲದೆ, ಎಲ್ಲಕ್ಕಿಂತಲೂ ಹೆಚ್ಚಾಗಿ, ಆಗ ತತ್ಕಾಲದಲ್ಲಿ ಅತಿ ಮುಖ್ಯವೆಂಬಂತೆ  ತೋರುತಿದ್ದರೂ, ಮೇಗರವಳ್ಳುಯ ಮತ್ತು ಮಲೆನಾಡಿನ ಮತ್ತು ಕನ್ನಡನಾಡಿನ ಮತ್ತು ಭರತ ಭೂಮಿಯ ಭಾವೀ ಪ್ರಗತಿಯ ಮತ್ತು ಜಾಗ್ರತಿಯ ದೃಷ್ಠಿಯಿಂದ ನಿಜವಾಗಿಯೂ ಬಹು ಮುಖ್ಯವಾದದ್ದೆಂದು ಮುಂದೆ ಗೊತ್ತಾಗುವಂತಹ ಮತ್ತೊಂದು ದೈವಿಕ ಉದ್ದೇಶದ ಕಾರಣವೂ ಒಂದು ಇತ್ತು, ಅಗೋಈಚರವಾಗಿ ಅಂತರ್ಗತವಾಗಿ, ಗೂಢವಾಗಿ: ಹಳೆಮನೆ, ಕೋಣುರು, ಹೂವಳ್ಳೀ, ಬೆಟ್ಟಳ್ಳಿ, ಕಲ್ಲೂರು ಸಿಂಬಾವಿ ಮೊದಲಾದ ಸುತ್ತಮುತ್ತಣ ಹಳ್ಳಿಗಳಲ್ಲಿದ್ದು, ಓದು ಬರಹ ಕಲಿಯಲು ಇಷ್ಟಪಡುವ ಹುಡುಗರೆಲ್ಲ, ಅಂತಕ್ಕನ ಮನೆಯಲ್ಲಿದ್ದುಕೊಂಡು ಮಿಶನ್ ಇಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುವುದೆಂದು ನಿರ್ಣಯವಾಗಿತ್ತು. ಅದುವರೆಗೂ ‘ಓಟ್ಲುಮನೆ’ಯಾಗಿದ್ದ ಅಂತಕ್ಕನ ಮನೆ ‘ವಿದ್ಯಾರ್ಥಿ ನಿಲಯ’ವಾಗಿ ಪರಿವರ್ತನೆಗೊಳ್ಳುವದನ್ನೆ ಇದಿರು ನೋಡುತ್ತಿತ್ತು. ಕೆಲವೆ ತಿಂಗಳ ಹಿಂದೆ ಮಗಳನ್ನು ದುರಂತವಾಗಿ ಕಳೆದುಕೊಂಡಿದ್ದು ಮುದುಕಿಯಾಗುತ್ತಿದ್ದ ಅಂತಕ್ಕನ ಬದುಕಿಗೂ, ಮಕ್ಕಳ ಸಹವಾಸದ ಮತ್ತು ಸೇವೆಯ ಅಕ್ಕರೆಯ ಆಪು ಸಿಕ್ಕಿ, ಪುನಶ್ಚೇತನಗೊಳ್ಳುವ ಸುಯೋಗ ಸಮೀಪಿಸಿತ್ತು…..

ಕೋವಿ ಹಿಡಿದಿದ್ದ ಮುಕುಂದಯ್ಯ, ಹಿಂಬಾಲಿಸಿದ್ದ ಐತನೊಡನೆ, ಅಂತಕ್ಕನ ಮನೆಯನ್ನು ದಾಟಿ ಇಸ್ಕೂಲಿನ ಹತ್ತಿರಕ್ಕೆ ಬಂದಾಗ, ಸ್ವಲ್ಪ ದೂರದಲ್ಲಿ ಕಾಡಿನ ಅಂಚಿನಲ್ಲಿ ಬಿದ್ದಿದ್ದ ಒಂದು ಮರದ ಮೇಲೆ ಕುಳಿತು ಸಂಭಾಷಣೆಯಲ್ಲಿ ತೊಡಗಿದ್ದ ಐಗಳು ಅನಂತಯ್ಯನವರನ್ನೂ ಕಣ್ಣಾ ಪಂಡಿತರನ್ನೂ ಕಂಡನು: ಅವರಿಬ್ಬರೂ ಮುಕುಂದಯ್ಯನ ಕಡೆ ನೋಡಿ ಮುಗುಳು ನಕ್ಕರು, ಭಾಗವತರಾಟ ಪ್ರಾರಂಭವಾಗುವುದಕ್ಕೆ ರಂಗಸ್ಥಳ ಸಿದ್ದವಾಗಿದೆ ಎಂಬಂತೆ! ತನಗೆ ಸಂಬಳ ಕೊಡುವ ಅಧಿಕಾರಿಯ ಆಜ್ಞೆಯಂತೆ ಬೆಳಿಗ್ಗೆಯ ಜರುಗಲಿದ್ದ ಮತಾಂತರ ಪವಿತ್ರ ಕ್ರಿಯೆಗೂ ಮತ್ತು ಸಂಜೆಗೆ ನಡೆಯುವುದೆಂದು ಗೊತ್ತಾಗಿದ್ದ ಸ್ಕೂಲಿನ ಪ್ರಾರಂಭೋತ್ಸವಕ್ಕೂ ಬೇಕಾದುದನ್ನೆಲ್ಲ ಅಣಿಗೊಳಿಸಿ, ಕಿಲಸ್ತರ ಜಾತಿ ವಿಷಯಕವಾದ ಕಾರ್ಯದಲ್ಲಿ ತಾನು ಪಾಲುಗೊಳ್ಳುವುದು ತನಗೆ ನಿಷಿದ್ದವೆಂದು ಕ್ಷಮೆ ಕೇಳಿ, ಹೆಡ್ ಮಾಸ್ಟರ್ ಅನಂತಯ್ಯನವರು ಆ ಪ್ರಾತಃ ಕಾಲದ ಗೋಪ್ಯ ಸಮಾರಂಭದಿಂದ ದೂರ ಸರಿದಿದ್ದರು. ಆದರೆ ಅವರಿಗೆ ಗೊತ್ತಿತ್ತು, ಮುಂದೆ ಏನಾಗುತ್ತದೆ ಎಂಬುದು. ಅದನ್ನೆ ಕುರಿತು ಅವರು ಕಣ್ಣಾ ಪಂಡಿತರೊಡನೆ ಮಾತಾಡುತ್ತಿದ್ದುದು.

ಕೋವಿಯೊಡನೆ ಬಂದಿದ್ದ ಮುಕುಂದಯ್ಯನನ್ನು ಕಂಡು, ಅವನ ಧಾರ್ಮಿಕ ಸಾಹಸಕ್ಕೆ ತಮ್ಮ ಸಂಪೂರ್ಣ ಸಮ್ಮತಿ ಮತ್ತು ಬೆಂಬಲವನ್ನು ಸೂಚಿಸುವಂತೆ ಅವರಿಬ್ಬರೂ ಮುಗುಳುನಗೆಯಿಂದ ಅವನನ್ನು ಸ್ವಾಗತಿಸಿ ಹುರಿದುಂಬಿಸಿದ್ದರು….

ಮುಕುಂದಯ್ಯ ಐತನ ಕಿವಿಯಲ್ಲಿ ಏನನ್ನೊ ಪಿಸುಗುಟ್ಟಿ ಕಳಿಸಿದನು….

ಪೀಟಿಲು ಕೊಯ್ದು ಪ್ರಾರ್ಥನೆ ನಡೆಸುತ್ತಿದ್ದ ಉಪದೇಶಿ ಜೀವರತ್ನಯ್ಯನವರು ಬೆಳಕಂಡಿಯ ಕಡೆಗೆ ನೋಡುತ್ತಾರೆ. ಒಂದು ಕೋವಿಯ ನಳಿಗೆಯ ಬಾಯಿ ತಮ್ಮ ಕಡೆಗೇ ಗುರಿಯಿಟ್ಟು ಕಿಟಕಿಯ ಮರದ ಸರಳುಗಳ ಮಧ್ಯೆ ತೂರುತ್ತಿದೆ! ಯೇಸುಕ್ರಿಸ್ತ, ಬೈಬಲ್ಲು, ಕ್ರೈಸ್ತಮತ, ಧರ್ಮಪ್ರಚಾರ, ಉಪದೇಶಿತ್ವ, ಪಾದ್ರಿತ್ವ ಇತ್ಯಾದಿಯಾದೆಲ್ಲ ಮನುಷ್ಯತ್ವದ ಉಪಾಧಿಗಳೂ ತಟಕ್ಕನೆ ಕಳಚಿಬಿದ್ದು, ಅವರ ಜೀವ ತನ್ನ ಪ್ರಾಣಿತ್ವದ ಮೂಲೋಪಾದಿಯೊಂದನ್ನು ಮಾತ್ರ ಅವಲಂಬಿಸಿದೆ. ಬತ್ತಲೆ ನಿಂತಂತಾಯಿತು! ಬದುಕಿದರೆ ಬೆಲ್ಲ ತಿಂದೇನು ಎಂಬಂತೆ ಹೌಹಾರಿ, ಪೀಟಿಲನ್ನೂ ಸುವಾರ್ತೆಯನ್ನೂ ಹೊತ್ತುಹಾಕಿ, ಮರೆಯಾಗಿ ಅವಿತುಕೊಳ್ಳಲು ಒಂದು ಮೂಲೆಯ ಕಡೆಗೆ ಓಡಿದರು. ಅವರಿಗೆ ಏನು? ಯಾರು? ಏಕೆ? ಎಂಬುದೊಂದೂ ಅರ್ಥವಾಗದಿದ್ದರೂ ತನ್ನನ್ನು ಗುಂಡಿಕ್ಕಿ ಕೊಲೆಮಾಡಲು ಹವಣಿಸುತ್ತಿದ್ದಾರೆ ಎಂಬುದಂತೂ ಚೆನ್ನಾಗಿ ಅರ್ಥವಾಗಿತ್ತು. ಮೊನ್ನೆ ತಾನೆ ಬುಯಲುಸೀಮೆಯ ಒಂದು ಹಳ್ಳಿಯಲ್ಲಿ, ಕಿಲಸ್ತರ ಜಾತಿಗೆ ತನ್ನ ಮಗನನ್ನು ಸೇರಿಸಲು ಹವಣಿಸುತ್ತಿದ್ದ ಒಬ್ಬ ಪಾದ್ರಿಯನ್ನು ರೈತನೊಬ್ಬನು ದೊಣ್ಣೆಯಿಂದ ಹೊಡೆದು ಕೊಂದಿದ್ದ ಸುದ್ದಿ ಬಂದಿದ್ದು, ಅದರ ನೆನಪಿನ್ನೂ ಹಸಿಗಾಯವಾಗಿಯೆ ಇತ್ತು, ಜೀವರತ್ನಯ್ಯನ ಮನಸ್ಸಿನಲ್ಲಿ.

ಆ ಮತಾಂತರದ ಯಜ್ಞದಲ್ಲಿ ಯೂಪಸ್ತಂಭಕ್ಕೆ ಕಟ್ಟುಗೊಂಡು ಬಲಿಪಶು ವಾಗಿದ್ದ ದೇವಯ್ಯ, ತನ್ನ ರಕ್ಷಣೆಗೆ ಬರುತ್ತೇನೆಂದು ಭಾಷೆಯಿತ್ತು ಮೋಸಮಾಡಿ ಬಿಟ್ಟನೇನೋ ಎಂದು ಕಳವಳಿಸುತ್ತಾ, ಮುಕುಂದಯ್ಯನ ಆಗಮನವನ್ನೇ ನಿರೀಕ್ಷಿಸುತ್ತಿದ್ದವನು, ಮರದ ಸರಳುಗಳ ನಡುವೆ ಬೆಳಕಂಡಿಯಲ್ಲಿ ತೂರಿದ ಕೋವಿಯ ನಳಿಗೆಯನ್ನು ಕಂಡು, ಸದ್ಯಕ್ಕೆ ಬದುಕಿದೆ! ಎಂದು ಕೊಂಡನು. ತಟಕ್ಕನೆ ತನ್ನ ನಾಟಕಾಭಿನಯವನ್ನು ಪ್ರಾರಂಭಿಸಿ ಬಿಳಿ ಪಾದ್ರಿ ರೆವರೆಂಡ್ ಲೇಕ್ ಹಿಲ್ಲರನ್ನು, ಪ್ರಾಣಾಪಾಯದಿಂದ ತಪ್ಪಿಸಲೆಂಬಂತೆ ತೋಳ್ವಿಡಿದು ಎಳೆದುಕೊಂಡೆ ಓಡೆದನು, ಕರಿ ಪಾದ್ರಿ ಅವಿತುಕೊಂಡಿದ್ದ ಮೂಲೆಗೆ!

ಅಷ್ಟರಲ್ಲಿ ಕಿಟಕಿಯ ಆಚೆಯಿಂದ ಮೊಳಗಿತು ಮುಕುಂದಯ್ಯನ ರುದ್ರವಾಣಿ: “ಪಾದ್ರಿಗಳೆ, ನನ್ನ ಬಾವನಿಗೆ ಜಾತಿ ಕೆಡಿಸುವ ಕೆಲಸ ಮಾಡುತ್ತಿದ್ದೀರಿ. ಬಾವಿಗೆ ಹಾರಲಿದ್ದ ನನ್ನ ಅಕ್ಕನನ್ನು ತಡೆದು ನಿಲ್ಲಿಸಿ ಬಂದಿದ್ದೇನೆ. ಒಳ್ಳೆಯ ಮಾತಿಗೆ, ನನ್ನ ಭಾವವನ್ನು ಕಿಲಸ್ತರ ಜಾತಿಗೆ ಸೇರಿಸುವವುದಿಲ್ಲ ಎಂದು ನಿಮ್ಮ ದೇವರ ಮೇಲೆ ಆಣೆಯಿಟ್ಟು ಅವನನ್ನು ಬಿಟ್ಟುಕೊಡದಿದ್ದರೆ ನಿಮ್ಮನ್ನೆಲ್ಲ ಸುಟ್ಟುಬಿಡುತ್ತೇನೆ!”

“ದೇವಯ್ಯಗೌಡರೆ, ನಿಮ್ಮ ಭಾವನಿಗೆ ಬುದ್ಧಿ ಹೇಳಿ. ಅವರು ಮಾಡುತ್ತಿರುವುದು ಕ್ರಿಮಿನಲ್ ಕಾರ್ಯ. ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ!” ಎಂದರು ರೆವರೆಂಡ್ ಲೇಕ್ ಹಿಲ್. ಅವರು ಉಪದೇಶಿ ಜೀವರತ್ನಯ್ಯನಂತೆ ದಿಗಿಲುಗೊಂಡಿರಲಿಲ್ಲ.

ಇಷ್ಟರಲ್ಲಿ ಉಪದೇಶಿ ಜೀವರತ್ನಯ್ಯನವರು ಸ್ಕೂಲಿಗೆ ಇದ್ದ ಏಕೈಕ ಬಾಗಿಲ ಬಳಿಗೆ ಧಾವಿಸಿ, ಅದನ್ನು ತೆರೆಯಲೆಂದು ಎಳೆದರು, ಬಾಗಿಲಿಗೆ ಹೊರಗಡೆಯಿದ್ದ ಸರಪಣಿಯ ಚಿಲಕವನ್ನು ಐತ, ಮುಕುಂದಯ್ಯನ ಅಪ್ಪಣೆಯಂತೆ, ಹಾಕಿಕೊಂಡು, ಅದರ ರಕ್ಷಣೆಗೆ ಕತ್ತಹಿಡಿದು ನಿಂತಿದ್ದನಾದ್ದರಿಂದ ಅದು ತೆರೆಯಲೊಲ್ಲದೆಹೋಯ್ತು!

ಮೇಲುಸಿರು ಕೀಳುಸಿರು ಬಿಡುತ್ತಾ ಉಪದೇಶಿ ಕೂಗಿದರು: “ದೇವಯ್ಯಗೌಡರೆ, ನೀವೇ ಹೊಣೆಯಾಗುತ್ತೀರಿ, ರೆವರೆಂಡ್ ಅವರಿಗೆ ಏನಾದರೂ ಆದರೆ! ಇಡೀ ಬ್ರಿಟಿಷ್ ಚಕ್ರಾಧಿಪತ್ಯವೆ ನಿಮ್ಮ ಮನೆಮಾರುಗಳನ್ನೆಲ್ಲಾ ಧ್ವಂಸಮಾಡಿಬಿಡುತ್ತದೆ! ನಮ್ಮನ್ನು ರಕ್ಷಿಸುವ ಭಾರ ನಿಮ್ಮದು!”

“ಹೆದರಬೇಡಿ, ಉಪದೇಶಿಗಳೇ! ನಾನು ಹೇಗಾದರೂ ಮಾಡಿ ನಿಮ್ಮನ್ನು ಉಳಿಸುತ್ತೇನೆ!” ನಾಟಕದ ಮಾತನಾಡಿ ದೇವಯ್ಯಗೌಡರು ಕಿಟಕಿಯ ಕಡೆಗೆ ನೋಡಿದಾಗ ಅಲ್ಲಿ ಕೋವಿಯ ನಳಿಗೆ ಕಾಣಿಸಲಿಲ್ಲ. ಆದರೆ ಅದು ಆ ಕಿಟಕಿಯ ಎದುರಿಗಿದ್ದ ಗೋಡೆಯ ಕಿಟಕಿಯಿಂದ ತೂರುತ್ತಿತ್ತು! ಈ ಕಿಟಕಿಗೆ ಮರೆಯಾಗಿ ಮೂಲೆಹಿಡಿದು ನಿಂತಿದ್ದವರೆಲ್ಲ ಆ ಕಿಟಕಿಗೆ ತೆರೆದಿಟ್ಟಂತೆ ಕಾಣಿಸುತ್ತಿದ್ದರು! ಯಾವಾಗ ಕೋವಿಯ ನಳಿಗೆ ತಮ್ಮ ಕಡೆಗೆ ಮುಖವಾಡಿತೋ ಅವಾಗ ಉಪದೇಶಿ ಅಲ್ಲಿದ್ದವರನ್ನೆಲ್ಲ ತಳ್ಳಿಕೊಂಡುಹೋಗಿ ಎದುರಿಗಿದ್ದ ಮತ್ತೊಂದು ಮೂಲೆಯಲ್ಲಿ ರಕ್ಷಣೆ ಪಡೆದು ನಿಂತರು!

ದೇವಯ್ಯ ಮಾತ್ರ ಕೈಮುಗಿದುಕೊಂಡು, ನೇರವಾಗಿ ಬೆಳಕಂಡಿಯ ಬಳಿಸಾರಿ, ಕೋವಿಯ ನಳಿಗೆಗೆ ಅಡ್ಡನಿಂತು ಬಿನ್ನಯ್ಸಿದನು: “ಭಾವ, ಮುಕುಂದಬಾವ, ಬೇಡ, ಖಂಡಿತಾ ಬೇಡ! ನನ್ನನ್ನವರು ಜಾತಿಗೆ ಸೇರಿಸಿಕೊಳ್ಳುವುದಿಲ್ಲ. ಬಾಗಿಲ ಚಿಲಕ ತೆಗಿ!”

“ಹಾಗೆಂದು ಉಪದೇಶಸಿಗಳೆ ಹೇಳಲಿ. ಇಲ್ಲದಿದ್ದರೆ ನಾನು ಬಿಡುವುದಿಲ್ಲ!” ಎಂದಿತು ಮುಕುಂದಯ್ಯನ ದೃಢಧ್ವನಿ.

ದೇವಯ್ಯ ಮೂಲೆಗೆ ಹಿಂತಿರುಗಿ, ತನ್ನ ಬಾವನಿಗೆ ಒಮ್ಮೊಮ್ಮೆ ಒಂದು ತರಹದ ಹುಚ್ಚು ಕೆರಳುತ್ತದೆಂದೂ, ಸದ್ಯಕ್ಕೆ ಅಪಾಯದಿಂದ ಪಾರಾಗಬೇಕಾದರೆ ಅವನು ಹೇಳಿದಂತೆ ಮಾಡುವುದೇ ಲೇಸೆಂದೂ ತಿಳಿಸಿದನು.

ರೆವರೆಂಡ್ ಲೇಕ್ ಹಿಲ್ ಹೇಳಿದರು: “ನಾವೇನೂ ನಿಮ್ಮನ್ನು ಬಲತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸುತ್ತಿಲ್ಲ. ನಿಮ್ಮ ಇಷ್ಟದ ಮೇರೆಗೆ ಹಾಗೆ ಮಾಡುತ್ತಿದ್ದೇವೆ. ನಿಮ್ಮ ಹೆಂಡತಿಯನ್ನು ನೀವು ಒಪ್ಪಿಸದಿದ್ದರೆ ಅದು ನಿಮ್ಮ ತಪ್ಪು. ಅದು ನನಗೆ ಮೊದಲೆ ಗೊತ್ತಾಗಿದ್ದರೆ ನಿಮ್ಮನ್ನು ಮತಾಂತರಗೊಳಿಸಲು ನಾನೇ ಒಪ್ಪುತ್ತಿರಲಿಲ್ಲ. ಕ್ರೈಸ್ತರಿಗೆ ನಿಮ್ಮ ಕುಟುಂಬವನ್ನು ನಾಶಗೊಳಿಸುವ ಉದ್ದೇಶ ಎಂದೂ ಇರುವುದಿಲ್ಲ” ಎಂದು ಕರಿಯ ಪಾದ್ರಿಯ ಕಡೆಗೆ ತಿರುಗಿ ಮುಂದುವರಿದರು: “ಉಪದೇಶಿಗಳೇ, ನೀವು ಅದನ್ನೆಲ್ಲ ಮೊದಲೆ ಚೆನ್ನಾಗಿ ಅರಿಯಬೇಕಿತ್ತು. ಹೋಗಿ, ದೇವಯ್ಯ ಗೌಡರ ಬಾವನಿಗೆ ತಿಳಿಸಿ, ನಾವು ಯಾರನ್ನೂ ಬಲತ್ಕಾರವಾಗಿ ಕ್ರೈಸ್ತಮತಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದಾಗಿ!”

ಪಾಪ, ರೆವರೆಂಡ್ ಸಾಹೇಬರಿಗೆ ಹೇಗೆ ತಾನೆ ಗೊತ್ತಾಗಬೇಕು, ಯೇಸುಕ್ರಿಸ್ತ, ಮತ, ಧರ್ಮ, ಪರಲೋಕ, ದೇವರು ಇವು ಯಾವುದಕ್ಕೂ ಸಂಬಂಧಪಡದ ಪಾದ್ರಿಯ, ಪಾದ್ರಿಯ ಮಗಳ ಮತ್ತು ದೇವಯ್ಯಗೌಡರ ಆಂತರಂಗಿಕವೂ ಶುದ್ಧ ಲೌಕಿಕವೂ ಆಗಿದ್ದ ಗುಪ್ತ ವ್ಯಾವಹಾರಿಕ ಜಟಿಲತೆ?

ಯಾವುದು ಬಹಿರಂಗವಾಗಬಾರದೋ ಅದು ಎಲ್ಲಿ ಹೊರಬಿದ್ದು, ತನಗೆ ಉನ್ನತತರಸ್ಥಾನ ಲಭಿಸುವುದಕ್ಕೆ ಬಲವಾಗಿ ಸ್ಥಾನಾವನತಿಯೆ ಉಂಟಾಗಿಬಿಡುತ್ತದೆಯೋ ಎಂದು ಹೆದರಿ, ಪಾದ್ರಿ ಜೀವರತ್ನಯ್ಯ ಮುಕುಂದಯ್ಯನಿಗೆ ಅವನ ಇಷ್ಟದಂತೆ ಆಶ್ವಾಸನೆಯಿತ್ತು. ಬಾಗಿಲು ಚಿಲಕ ತೆಗೆಸಿದನು.

“ನಿಮ್ಮ ಭಾವನವರೊಡನೆ ನಾನು ಮಾತನಾಡಬೇಕಾಗಿದೆ, ದಯವಿಟ್ಟು ಅವರನ್ನು ಒಳಗೆ ಕರೆದುಕೊಂಡು ಬನ್ನಿ,” ರೆವರೆಂಡ್ ಅವರು ಕೇಳಿಕೊಳ್ಳಲು, ಮುಕುಂದಯ್ಯನನ್ನು ಕರೆತರಲು ದೇವಯ್ಯ ಹೊರಗೆ ಹೋದನು.

ಪಾದ್ರಿ ಜೀವರತ್ನಯ್ಯನವರು ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿ, ಲೇಕ್ ಹಿಲ್ ಅವರಿಗೆ ಸ್ಥಳೀಯ ವಿದ್ಯಮಾನಗಳ ವಿಚಾರವಾಗಿ ತಿಳಿವಳಿಕೆ ಉಂಟು ಮಾಡುವ ಉದ್ದೇಶದ ನೆವದಲ್ಲಿ ಅವರಿಗೆ ಮುನ್ನೆಚ್ಚರಿಕೆ ನೀಡಿದರು: “ಸ್ವಾಮಿ, ತಮಗೆ ಇಲ್ಲಿಯ ಜನರ ನೀತಿ, ರೀತಿ, ನಡೆ, ನುಡಿ ಯಾವುದರ ಪರಿಚಯವೂ ಇಲ್ಲ. ಇವರೊಡನೆ ನಾವು ತುಂಬ ಎಚ್ಚರಿಕೆಯಿಂದಿರಬೇಕು. ಈ ದೇವಯ್ಯಗೌಡರ ಬಾವ ಕೋಣೂರಿನವನು. ಮುಕುಂದಗೌಡ ಎಂದು ಹೆಸರು. ಅವನು ಕೇಡೆ ನಂಬರ ಒನ್. ಗುತ್ತಿ ಎಂಬ ಹೆಸರಿನ ಒಬ್ಬ ಹೊಲೆಯನ ಸಂಗಡ ಸೇರಿಕೊಂಡು, ಹುಡುಗಿಯನ್ನು ಅಪಹರಿಸುವುದು, ಮಾರಾಮಾರಿ ಮಾಡಿಸುವುದು, ಪುಂಡುಪೋಕರಿ ಮುಸಲ್ಮಾನರನ್ನು ಕೂಡಿಸಿ ಅತ್ಯಾಚಾರ, ಕೊಲೆ ಮಾಡಿಸುವುದು. ಹೀಗೆ ಈ ನಾಡಿಗೇ ಒಬ್ಬ ಭೀಕರ ವ್ಯಕ್ತಿಯಾಗಿದ್ದಾನೆ. ಒಂದೆರಡು ತಿಂಗಳ ಹಿಂದೆ, ಸಿಂಬಾವಿಯ ಒಬ್ಬ ಗೌರವಸ್ಥ ಹೆಗ್ಗಡೆಯವರ ಮದುವೆ ಗೊತ್ತಾಗಿದ್ದು, ಇನ್ನೇನು ಲಗ್ನದ ಮೂಹೂರ್ತ ಬಂದಿತು ಎನ್ನುವಷ್ಟರಲ್ಲಿ, ಈ ಮುಕುದಂಗೌಡ ಮದುಮಗಳಾಗುವ ಆ ಹುಡುಗಿಯನ್ನು ಅಪಹರಿಸಿ,ಯಾವುದೊ ಕಾಡಿನಬಲ್ಲಿ ಹುದುಗಿಸಿಟ್ಟನಂತೆ. ಅವಲ ತಂದೆಯನ್ನೂ ಅವನೆ ಕೊಲ್ಲಿಸಿದ ಎಂದು ಹೇಳುತ್ತಾರೆ. ಈಗ ಆ ಹುಡುಗಿಯ ಮನೆ ಆಸ್ತಿ-ಪಾಸ್ತಿಯನ್ನೆಲ್ಲ ಲಬಟಾಯಿಸಿ ಕೊಂಡು ಅವಳ ತಂದೆಗೆ ಆ ಹುಡುಗಿ ಒಬ್ಬಳೆ ಮಗಳಂತೆ ಅವಳ ಮನೆಯಲ್ಲಿಯೆ ಇದ್ದುಬಿಟ್ಟಿದ್ದಾನಂತೆ. ಇನ್ನೂ ಅವಳನ್ನು ಮದುವೆ ಮಾಡಿಕೊಂಡೂ ಇಲ್ಲ; ಮಾಡಿಕೊಳ್ಳುತ್ತೇನೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾನಂತೆ. ಅಷ್ಟರಲ್ಲಿ, ಅವಳು ಗರ್ಭಿಣಿ ಆಗಿಬಿಟ್ಟಿದ್ದಾಳೆ ಎಂದೂ ವದಂತಿ! ಇನ್ನು, ಅವರ ಜಾತಿಯ ನೀತಿಯ ಪ್ರಕಾರ ಅವಳನ್ನು ಅಕ್ರಮ ಗರ್ಭಿಣಿ ಎಂದು ಸಾರಿ, ಬಹಿಷ್ಕಾರ ಹಾಕಿಸಿ ಹೊರಗಟ್ಟಿ, ಆಕೆಯ ಮನೆಮಾರನ್ನೆಲ್ಲ ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕೆಂದು, ಬಹುಶಃ ಅವನ ಒಳ ಇರಾದೆ ಇರಬೇಕು! ಬೆಟ್ಟಳ್ಳಿಯ ಹೊಲೆಯ ಬಚ್ಚ ಎಂಬಾತನನ್ನು ಕ್ರೈಸ್ತಮತಕ್ಕೆ ಸೇರಿಸಿಕೊಳ್ಳುತ್ತಾರೆಂದು ಸುದ್ದಿ ಹಬ್ಬಿಸಿ, ಅವನಿಗೆ ಗೊತ್ತಾಗಿದ್ದ ಹುಡುಗಿಯನ್ನು ಸಿಂಬಾವಿಯ ಹೊಲೆಯ ಗುತ್ತಿ ಎಂಬ ಹೆಸರಿನ ಕೇಡಿಯ ಮುಖಾಂತರ ಅಪಹರಿಸಿ, “ನಾವು ಅಂದೆಮ್ಮೊ ತೀರ್ಥಹಲ್ಳಿಯ ಹೊಳೆಯನ್ನು ದೋಣಿಯಲ್ಲಿ ದಾಟಿ ಹೋಗಿದ್ದೆವಲ್ಲಾ? ಸುಬ್ಬಯ್ಯಗೌಡರು ಚಂದ್ರಯ್ಯಗೌಡರು ಎಂಬ ಹೆಸರಿನ ನಾಮಧಾರಿ ಯುವಕರ ಮನೆಗೆ? ಆ ಕಾನೂರು ಕಡೆಗೆ ಕಳಿಸಿದ್ದಾನಂತೆ ತಲೆತಪ್ಪಿಸಿಕೊಳ್ಳಲು, ಈ ಮುಕುಂದಗೌಡ!…. ಆ ಇಜಾರದ ಸಾಬಿ ಎಂಬ ಧೂರ್ತ ಪುಂಡ ಮುಸಲ್ಮಾನನ್ನು ಗುತ್ತಿಯ ಕೈಲಿ ಕಡಿಸಿದ್ದೂ ಇವನೇ ಅಂತೆ!…  ಆ ಪುಂಡರೆ ಎಲ್ಲ ಸೇರಿ ಇದೆ ಸ್ಕೂಲಿನಲ್ಲಿ ಕಾವೇರಿ ಎಂಬ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ನಮ್ಮ ಇದೇ ಬಾವಿಗೆ ಹಾಕಿದ್ದರಂತೆ!…  ಅವರಲ್ಲಿ ಒಬ್ಬ ಮುಸಲ್ಮಾನ ತಲೆತಪ್ಪಿಸಿಕೊಂಡು ಕನ್ನಡ ಜಿಲ್ಲೆಗೆ ಓಡಿದ್ದಾನಂತೆ. ಇನ್ನಿಬ್ಬರನ್ನೂ ದಸ್ತಗಿರಿ ಮಾಡಿ ವಿಚಾರಣೆಗಾಗಿ ಲಾಕಪ್ಪಿನಲ್ಲಿ ಇಟ್ಟಿದ್ದಾರೆ…. ನನ್ನ ಅಭಿಪ್ರಾಯ ಕೇಳುವುದಾದರೆ, ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿರುವ ಇವನನ್ನು ಬಂಧಿಸಿ ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸುವುದೆ ಉತ್ತಮ. ಹಾಗೆ ಮಾಡಿದರೆ ಈ ಜನಕ್ಕೆ ಸ್ವಲ್ಪ ಹೆದರಿಕೆ ಹುಟ್ಟಿ, ನಮ್ಮ ಪವಿತ್ರ ಕ್ರಿಸ್ತನ ಸುವಾರ್ತೆಯನ್ನು ನಾವು ನಿರಾತಂಕವಾಗಿ ಬೋಧಿಸಲು ಅನುಕೂಲ ಸನ್ನಿವೇಶ ಕಲ್ಪಿತವಾಗುತ್ತದೆ, ಈ ಕಾಡು ಜನರನ್ನೂ ಪಳಗಿಸಿದಂತಾಗುತ್ತದೆ….!”

“ಉಪದೇಶಿಗಳೆ, ಕ್ರಿಸ್ತಸ್ವಾಮಿಯ ಸಂದೇಶವನ್ನು ಕ್ರೈಸ್ತೋಚಿತವಲ್ಲದ ವಿಧಾನಗಳಿಂದ ಪ್ರಚಾರಮಾಡಲು ನೀವು ಹೊರಟಿರಾದರೆ, ಜನರನ್ನು ಮೈಮೇಲೆ ಹಾಕಿಕೊಂಡು, ತದ್ವಿರುದ್ಧ ಪರಿಣಾಮಕ್ಕೆ ಭಾಜನರಾಗುತ್ತೀರಿ. ನಾವು ನಮ್ಮ ಸ್ವಾರ್ಥ ಉದ್ದೇಶಗಳನ್ನೆಲ್ಲ ತ್ಯಜಿಸಿ, ಸತ್ತ್ವಮಾರ್ಗದಿಂದಲೆ ಮುಂದುವರಿದು, ಜನರ ನಂಬಿಕೆಗೆ ಪಾತ್ರರಾಗಬೇಕು. ಅವರ ವಿಶ್ವಾಸ ಲಭಿಸಿದ ತರುವಾಯವೆ ಅವರು ನಮ್ಮ ಉಪದೇಶಕ್ಕೆ ಕಿವಿಗೊಡುತ್ತಾರೆ. ಔಷಧೋಪಚಾರ, ವಿದ್ಯಾಭ್ಯಾಸ ಮೊದಲಾದ ಸಹಾಯಗಳ ಮೂಲಕ ಅವರ ಹೃದಯವನ್ನು ನಾವು ಗೆಲ್ಲಬೇಕು.ಅವರ ಮತೀಯ ಮೌಢ್ಯಗಳಿಂದ ಅವರಿಗಾಗುತ್ತಿರುವ ಅಪಾಯಗಳನ್ನು ಉಪಾಯವಾಗಿ ಅವರಿಗೆ ಮನದಟ್ಟಾಗುವಂತೆ ಮಾಡಬೇಕು… “ಅಷ್ಟರಲ್ಲಿ ಮುಕುಂದಯ್ಯನೊಡನೆ ಪ್ರವೇಶಿಸಿದ ದೇವಯ್ಯಗೌಡರನ್ನು ಕಂಡು ರೆವರೆಂಡ್ ಲೇಕ್ ಹಿಲ್ ಅವರು ಪಾದ್ರಿಯಿಂದ ಅತ್ತ ತಿರುಗಿದರು.

ಕೈಯಲ್ಲಿ ಕೋವಿ ಹಿಡಿದಿದ್ದ ಮುಕುಂದಯ್ಯ ಮುಗುಳು ನಗುತ್ತಾ “ನಮಸ್ಕಾರ, ಪಾದ್ರಿಗಳಿಗೆ” ಎಂದನು.

ರೆವರೆಂಡ್ ಅವರು ಪ್ರತಿನಮಸ್ಕಾರ ಮಾಡಿ, ಬೆಂಚಿನ ಕಡೆಗೆ ಕೈತೋರಿ ಅವರನ್ನೆಲ್ಲ ಕೂರಿಸಿ, ತಾವೂ ಒಂದು ಕುರ್ಚಿಯ ಮೇಲೆ ಎದುರಾಗಿ ಕುಳಿತುಕೊಂಡರು.

ಒಂದೆರಡು ನಿಮಿಷಗಳ ಕಾಲ ಮುಕುಂದಯ್ಯನನ್ನೇ ಗಮನಿಸುತ್ತಿದ್ದರು, ತಾವು ಏನು ಮಾತಾಡಬೇಡು ಎಂಬುದನ್ನು ಆಲೋಚಿಸುತ್ತಿದ್ದಂತೆ ತೋರಿದರು ಲೇಕ್ ಹಿಲ್. ಆದರೆ ಅವರು ಏನನ್ನೂ ಆಲೋಚಿಸುತ್ತಿರಲಿಲ್ಲ. ಮುಕುಂದಯ್ಯನ ವ್ಯಕ್ತಿತ್ವದ ಸ್ವರೂಪವನ್ನು ಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು: ಮುಕುಂದಯ್ಯ ದೇವಯ್ಯನಂತೆ ಕ್ರಾಪು ಬಿಟ್ಟಿರಲಿಲ್ಲ; ಟೋಪಿಯ ಹಿಂದೆ ಕಟ್ಟಿದ್ದ ಜುಟ್ಟು ಕಾಣಿಸುತ್ತಿತ್ತು. ಹಣೆಯ ಮೇಲೆ ನಾಮವೂ ಇತ್ತು. ಕಿವಿಯಲ್ಲಿ ಒಂಟಿಗಳೂ ಇದ್ದುವು. ಆದರೆ ಅವನ ಮುಖದಲ್ಲಿ ಅಲ್ಲಿದ್ದವರಾರಲ್ಲಿಯೂ ಇಲ್ಲದಿದ್ದ ಒಂದು ಸತ್ವಪೂರ್ಣ ತೇಜಸ್ಸನ್ನೂ ಸರಳ ಸುಂದರ ಪ್ರಸನ್ನತೆಯನ್ನೂ ದರ್ಶಿಸಿದ ಲೇಕ್ ಹಿಲ್ ರಿಗೆ  ಅವನ ವಿಷಯದಲ್ಲಿ ಒಂದು ಗೌರವಪೂರ್ವಕವಾದ ವಿಶ್ವಾಸ ಹುಟ್ಟಿ, ಅವರ ಮುಖದ ಮೇಲೆಯೂ ಸುಪ್ರಸನ್ನತೆ ಸುಳಿದಾಡಿದುದನ್ನು ಕಂಡು ಜೀವರತ್ನಯ್ಯಗೆ ಬೆರಗಾಯಿತು. ತಾನು ಮುಕುಂದಯ್ಯನ ಮೇಲೆ ಹೇಳಿದ್ದುದೆಲ್ಲ ವ್ಯರ್ಥವಾಯಿಯೋ ಏನೋ ಎಂದು ಕರಿಪಾದ್ರಿಗೆ ಮುಖಭಂಗವೂ ಆಯಿತು.

ಆದರೆ ಒಂದು ವಿಷಯ ಮಾತ್ರ ಆ ಘಟನೆಯ ರೂಪಣೆಯಲ್ಲಿ ಭಾಗಿಗಳಾಗಿದ್ದವರೆಲ್ಲರ ಪ್ರಜ್ಞಾಭೂಮಿಕೆಗೂ ಅತೀತವಾಗಿದ್ದು, ಅಗೋಚರವಾಗಿತ್ತು; ರೆವರೆಂಡ್ ಲೇಕ್ ಹಿಲ್ ಆಗಲಿ, ಉಪದೇಶಿ ಜೀವರತ್ನಯ್ಯನಾಗಲಿ, ಮುಕುಂದಯ್ಯನಾಗಲಿ, ಯಾವ ಇತ್ಯರ್ಥಗಳನ್ನು ತಾವೇ ಸ್ವತಂತ್ರವಾಗಿ ನಿರ್ಣಯಿಸುತ್ತಿದ್ದೇವೆ ಎಂದು ಭಾವಿಸಿ ವರ್ತಿಸುತ್ತಿದ್ದರೋ ಆ ಇತ್ಯರ್ಥಗಳಿಗೆಲ್ಲ ಅಂತರ್ಯಾಮಿ ಸೂತ್ರಧಾರಿಯಾಗಿತ್ತು, ಭಗವಂತನ ಅಡಿದಾವರೆವರೆಗೂ ನಿಡುಚಾಚಿ ಅದನ್ನು ತನ್ನ ಹೂವೆದೆಗೆ ಬಿಗಿದಪ್ಪಿದ ಒಬ್ಬಳು ಪ್ರಣಯಾರ್ಥಿ ತರುಣಿಯ ಪ್ರೇಮಮಯ ಮುಗ್ಧ ಹೃದಯದ ಆರ್ತ ಅಭೀಪ್ಸೆಯ ಪ್ರಾರ್ಥನಾಬಾಹು~

“ಮುಕುಂದಯ್ಯ ಗೌಡರೆ, ನೀವು ಎಂಥ ಭಯಂಕೆರ ಅಪರಾಧ ಕಾರ್ಯದಲ್ಲಿ ತೊಡಗಿದ್ದೀರಿ ಎಂಬುದು ನಿಮಗೆ ಅರ್ಥವಾಗಿದೆಯೇ?” ಗಂಭೀರ ಧ್ವನಿಯಲ್ಲಿ ಪ್ರಶ್ನಿಸಿದ್ದರು ರೆವರೆಂಡ್ ಲೇಕ್ ಹಿಲ್, “ಗುಂಡಿಕ್ಕಿ ಕೊಂದು ಕೊಲೆಮಾಡಿದವರಿಗೆ ಏನು ಶಿಕ್ಷೆ ಗೊತ್ತೆ?”

“ಗೊತ್ತು, ಸ್ವಾಮೀ, ನಾನೇನು ಕೊಲೆಮಾಡುವುದಕ್ಕೆ ಬಂದಿರಲಿಲ್ಲ. ನನ್ನ ಅಕ್ಕನಿಗೆ ಗಂಡನನ್ನು ಉಳಿಸಿಕೊಟ್ಟು, ಅವಳ ಪ್ರಾಣವನ್ನೂ ಮಾಂಗಲ್ಯವನ್ನೂ ರಕ್ಷಿಸಲು ಬಂದಿದ್ದೆ.” ಸಾಹಿತ್ಯ ಭಾಷೆಯಲ್ಲಿ ಮಾತನಾಡುತ್ತಿದ್ದ ರೆವರೆಂಡರಿಗೆ ಆ ರೀತಿಯ ಭಾಷೆಯಲ್ಲಿಯೆ ಉತ್ತರವಿತ್ತನು ಮುಕುಂದಯ್ಯ.

“ಹಾಗಾದರೆ ಬಂದೂಕು ಏಕೆ ತಂದಿದ್ದೀರಿ?”

ಮುಕುಂದಯ್ಯ ಕೋವಿಯೆಡನೆ ಎದ್ದ, ಮುಂದಕ್ಕೆ ಬಾಗಿ ಅದನ್ನು ರೆವರೆಂಡರ ಮುಂದೆ ಮೇಜಿನ ಮೇಲೆ ಇಟ್ಟು, ನಗುತ್ತಲೆ ಹೇಳಿದನು: “ಇದು ಖಾಲಿ ಕೋವಿ, ಸ್ವಾಮಿ, ಅದರಿಂದ ಯಾರ ಕೊಲೆಯೂ ಸಾಧ್ಯವಿಲ್ಲ. ಅದಕ್ಕೆ ಈಡು ತುಂಬಿಲ್ಲ. ಕೇಪು ಇಟ್ಟಿಲ್ಲ. ತಾವೇ ಪರಾಂಬರಿಸಬಹುದು. ಬರಿಯ ತೋರಿಕೆಯ ಬೆದರಿಕೆಗೆ ತಂದಿದ್ದೆ. ಅಷ್ಟೇ…”

ಕ್ರೈಸ್ತ ಮಿಶನರಿಗಳ ವೈದ್ಯಕೀಯ ಸಹಾಯ, ವಿದ್ಯಾಭ್ಯಾಸ ಪ್ರಚಾರ ಇತ್ಯಾದಿ ಲೋಕೋಪಕಾರ ಕಾರ್ಯಗಳನ್ನು ಬಾಯಿತುಂಬ ಶ್ಲಾಘಿಸಿದ ಮುಕುಂದಯ್ಯ ಅವರ ಮತಾಂತರ ಚಟುವಟಿಕೆಗಳನ್ನು ಸಮಾಜದ ಅಡಿಪಾಯವನ್ನೇ ಬುಡಮೇಲು ಮಾಡುವ ಕೆಲಸ ಎಂದು ವರ್ಣಿಸಿ, ಕೆಲವು ನಿದರ್ಶನಗಳನ್ನು ಕೊಟ್ಟು, ಮಿಶನ್ ಸ್ಕೂಲು ಚೆನ್ನಾಗಿ ನಡೆಯುವಂತೆ ತಾನು ಸಹಕರಿಸುವುದಾಗಿಯೂ, ಇತರರನ್ನೂ ಸಹಕರಿಸುವಂತೆ ಮಾಡುವುದಾಗಿಯೂ ಭರವಸೆಯಿತ್ತನು.

“ನಿಮ್ಮ ಸಹಕಾರಕ್ಕಾಗಿ ನಿಮಗೆ ಅನೇಕ ವಂದನೆಗಳು.” ಲೇಕ್ ಹಿಲ್ ಮುಂದುವರಿದರು: “ನಮ್ಮ ಮತಾಂತರ ಚಟುವಟಿಕೆಗಳನ್ನೇನೊ ನೀವು ಸಾಮಾಜಿಕ ಜೀವನವನ್ನು ಬುಡಮೇಲು ಮಾಡುವ ಕಾರ್ಯ ಎಂದು ವರ್ಣಿಸುತ್ತಿದ್ದೀರಿ. ಯಾರನ್ನೂ ಬಲಾತ್ಕಾರವಾಗಿ ಕ್ರೈಸ್ತರನ್ನಾಗಿ ಮಾಡುವ ಇಚ್ಛೆ ನಮಗಿಲ್ಲ. ನೀವು ನಮ್ಮ ಜಾತಿಗೆ ಸೇರದಿರಬಹುದು; ಸೇರದಿದ್ದರೆ ಚಿಂತೆಯಿಲ್ಲ… ಆದರೆ, ಗೌಡರೆ, ನಾನು ಹೇಳುವುದನ್ನು ದಯವಿಟ್ಟು ಗಮನಿಸಿ ಕೇಳಿ…  ನಿಮ್ಮ ಜಾತಿಯವರು ಎಲ್ಲಿಯವರೆಗೆ ಬ್ರಾಹ್ಮಣರ ಪಾದ ತೊಳೆದು, ಅದನ್ನು ತೀರ್ಥವೆಂದು ಕುಡಿಯುವುದನ್ನೇ ತಮ್ಮ ಧರ್ಮಜೀವನ ಸರ್ವಸ್ವ ಎಂದು ಭಾವಿಸುವರೊ ಅಲ್ಲಿಯವರೆಗೆ ನಿಮಗೆ, ನಾಮಧಾರಿ ಗೌಡರಿಗೆ ಮತ್ತು ಇತರ ಬ್ರಾಹ್ಮಣೇತರ ವರ್ಗದವರಿಗೆ, ಉದ್ಧಾರವಿಲ್ಲ; ಉಳಿಗತಿಯಿಲ್ಲ. ನಿಮ್ಮ ಮೂಢಾಚಾರಗಳು ಬ್ರಾಹ್ಮಣರ ಜೀವನೋಪಾಯಕ್ಕೆ, ಸಂಪಾದನೆಗೆ, ಬಂಡವಾಳ ಸ್ವರೂಪವಾಗಿವೆ. ನಿಮ್ಮನ್ನು ಅವರು ನಾಯಿಗಳನ್ನು ಕಂಡಹಾಗೆ ಕಾಣುತ್ತಾರೆ. ಮುಟ್ಟುವುದಿರಲಿ ಹತ್ತಿರ ಬಂದರೂ ಅವರಿಗೆ ಮೈಲಿಗೆ. ಬ್ರಾಹ್ಮಣರೆಲ್ಲ ಬ್ರಹ್ಮನ ಮುಖದಿಂದ ಬಂದವರೆಂದೂ ಶೂದ್ರು ಅವನ ಕಾಲಡಿಯಿಂದ ಬಿದ್ದವರೆಂದೂ ಕಟ್ಟುಕಥೆ ಕಟ್ಟಿದ್ದಾರೆ. ಅವರೇ ಅವರ ಅನುಕೂಲಕ್ಕಾಗಿ ಬರೆದುಕೊಂಡಿರುವ ಪುರಾಣ ಕಥೆಗಳನ್ನು, ನಿಜವಾಗಿ ನಡೆದವೆಂಬಂತೆ ನಿಮಗೆ ಹೇಳಿ, ನಿಮ್ಮನ್ನು ಮರುಳು ಮಾಡಿದ್ದಾರೆ. ಶೂದ್ರರು ವೇದ ಓದಬಾರದಂತೆ! ಓದುವುದಿರಲಿ, ಯಾರಾದರೂ ಓದುವುದನ್ನು ಆಲಿಸಿದರೂ ನರಕದಲ್ಲಿ ಶೂದ್ರನ ಕಿವಿಗೆ ಕಾಯಿಸಿದ ಕಬ್ಬಿಣವನ್ನು ಹೊಯ್ಯುತ್ತಾರಂತೆ! ಶತಶತಮಾನಗಳಿಂದಲೂ ನಿಮ್ಮನ್ನು ಈ ಮೂಢಸ್ಥಿತಿಯಲ್ಲಿ ಇಟ್ಟು, ನಿಮ್ಮಿಂದ ಸೇವೆ ಸಲ್ಲಿಸಿಕೊಂಡು, ಸುಖಜೀವನ ನಡೆಸುತ್ತಿದ್ದಾರೆ…. ಕ್ರೈಸ್ತ ಧರ್ಮದಲ್ಲಿ ಜಾತಿಭೇದವಿಲ್ಲ; ಎಲ್ಲರೂ ದೇವರ ಇದಿರಿನಲ್ಲಿ ಸಮನರು. ನಾನು ಕೇಳಿಕೊಲ್ಳುವುದಿಷ್ಟೇ: ನೀವು ಕ್ರಿಸ್ತಮತಕ್ಕೆ ಸೇರಿ, ಬಿಡಿ, ಅದು ಅಷ್ಟು ಮುಖ್ಯವಲ್ಲ; ಆದರೆ ಕ್ರೈಸ್ತ ಧರ್ಮದ ಉದಾರ ತತ್ತ್ವಗಳನ್ನೂ ಸೇವಾ ಮನೋಧರ್ಮವನ್ನೂ ಸರ್ವ ಸಮಾನತಾ ದೃಷ್ಟಿಯನ್ನೂ ಉನ್ನತ ಆದರ್ಶಗಳನ್ನೂ ನಿಮ್ಮ ಮಾರ್ಗದರ್ಶನ ಜ್ಯೋತಿಯನ್ನಾಗಿ ಮಾಡಿಕೊಂಡು, ಬ್ರಾಹ್ಮಣ್ಯದ ದುರ್ಮುಷ್ಟಿಯಿಂದ ಬಿಡಿಸಿಕೊಳ್ಳುವುದು ಮಾತ್ರ ನಿಮ್ಮ ಜನಾಂಗದ ಪ್ರಗತಿಗೆ ಅತ್ಯಂತ ಅವಶ್ಯಕವಾದ ಆತ್ಯ ಕರ್ತವ್ಯ ಕರ್ಮ! ಆ ದಾರಿಯಲ್ಲಿ ಮುಂದುವರಿಯುವುದಕ್ಕೆ ನಿಮ್ಮ ಜನಾಂಗದವರಿಗೆ ನಾವು ಸರ್ವ ಸಹಾಯ ನೀಡಲು ಸಿದ್ಧರಿದ್ದೇವೆ…. ಈ ಸಾಯಂಕಾಲ ನಡೆಯಲಿರುವ ಈ ಸ್ಕೂಲಿನ ಪ್ರಾರಂಭೋತ್ಸವ ಆ ದಿಕ್ಕಿನಲ್ಲಿ ನಿಮ್ಮ ಮಿಶನ್ ಇಟ್ಟಿರುವ ಮೊದಲ ಹೆಜ್ಜೆ. ನಿಮ್ಮ ಜನರೆಲ್ಲ, ಅದರಲ್ಲಿಯೂ ನಿಮ್ಮಂಥ ಮತ್ತು ದೇವಯ್ಯಗೌಡ ರಂಥ ಮುಂದಾಳುತನದ ಯುವಕರು, ಮುಂದೆ ಬಂದು ನಮ್ಮೊಡನೆ ಸಹಕರಿಸುತ್ತೀರೆಂದು ನಾನು ದೃಢವಾಗಿ ನಂಬಿದ್ದೇನೆ. ಸರಕಾರದಿಂದಾಗಲಿ, ವಿದ್ಯಾಭ್ಯಾಸದ ಇಲಾಖೆಯಿಂದಾಗಲಿ, ನಮ್ಮ ಮಿಶನ್ನಿನ ಕಡೆಯಿಂದಾಗಲಿ ನಿಮಗೆ ಬೇಕಾಗುವ ಎಲ್ಲ ನೆರವೂ ಒದಗುವಂತೆ ಮಾಡಲು ನಾನು ಪವಿತ್ರಾತ್ಮ ಯೇಸುಕ್ರಿಸ್ತನ ಹೆಸರಿನಲ್ಲಿ ಕಂಕಣ ಬದ್ಧನಾಗಿದ್ದೇನೆ…. ತಮಗೆಲ್ಲರಿಗೂ ನಮಸ್ಕಾರ…..”

ರೆವರೆಂಡರು ಕುರ್ಚಿಯಿಂದೆದ್ದು ನಿಂತು ಮುಕುಂದಯ್ಯನ ಕಡೆಗೆ ಕೈಚಾಚಿದರು. ಮುಕುಂದಯ್ಯ ಒಂದು ಅರೆನಿಮಿಷ ಹಳ್ಳಿಬೆಪ್ಪಾಗಿ ನಿಮತಿದ್ದನು. ಆದರೆ ಪಕ್ಕದಲ್ಲಿದ್ದ ದೇವಯ್ಯನ ಇಂಗಿತ ತಿವಿತದಿಂದ ಎಚ್ಚತ್ತುಕೊಂಡು, ಹಸ್ತಲಾಘವದ ಅರಿವು ತೋರಿ, ಹಲ್ಲುಬಿಡುತ್ತಾ ಕೈ ನೀಡಿದನು. ಲೇಕ್ ಹಿಲ್ ಅವರು ಮುಕುಂದಯ್ಯನಿಗಂತೂ ಅಂತೆಯೆ ಎಲ್ಲರಿಗೂ ಹಸ್ತಲಾಘವವಿತ್ತು, ಸಾಯಂಕಾಲದ ಪ್ರಾರಂಭೋತ್ಸವಕ್ಕೆ ಎಲ್ಲರನ್ನೂ ಆಹ್ವಾನಿಸಿ, ಜೀವರತ್ನಯ್ಯನಿಗೆ ಹಿಂಬಾಲಿಸಿ ಹೊರಡುವ ಸನ್ನೆ ಮಾಡಿ, ಬಾಗಿಲು ದಾಟಿದರು.

“ಕರೀ ಪಾದ್ರಿಯಂತಲ್ಲೊ; ನಿಜವಾಗಿಯೂ ದೊಡ್ಡ ಮನುಷ್ಯನೆ ಕಣೋ, ಈ ಬಿಳೀ ಪಾದ್ರಿ!” ಮುಕುಂದಯ್ಯ ದೇವಯ್ಯನ ಕಡೆ ತಿರುಗಿ ಶ್ಲಾಘಿಸಿದನು.

“ನಮ್ಮ ಕಾಡು, ನಿಮ್ಮ ತಿಮ್ಮು, ಹಳೆಮನೆ ಧರ್ಮು, ಹೆಂಚಿನಮನೆ ರಾಮು ಎಲ್ಲರನ್ನೂ, ಇಸ್ಕೂಲು ಸುರುವಾದ ಕೂಡ್ಲೆ, ಮೊದಲೂ ತಂದು ಸೇರಿಸಿಬಿಡಬೇಕು, ಓದಕ್ಕೆ!…  ಏನಂತೀಯ?” ದೇವಯ್ಯ ಕೇಳಿದನು, ರೆವರೆಂಡರ ಭಾಷಣಕ್ಕೆ ತನ್ನ ಪ್ರಥಮ ಪ್ರತಿಕ್ರಿಯೆ ಎಂಬಂತೆ.

“ಸೇರಿಸದೆ ಮತ್ತೆ!” ಮುಕುಂದಯ್ಯ ಅನಂತಯ್ಯನ ಕಡೆ ತಿರುಗಿದನು. ಎಂತಿದ್ದರೂ ನಮ್ಮ ಐಗಳೆ ಹೆಡ್ ಮಾಸ್ಟರ್ ಆಗ್ಯಾರಲ್ಲಾ!….  ನೀವೇನ್ ಹೇಳ್ತೀರಿದ ಅನಂತೈಗಳೆ?”

“ಆಗಲೆ ಹುಡುಗರಿಗೆಲ್ಲಾ ಹೇಳಿಬಿಟ್ಟೀನಿ, ಬಟ್ಟೆ ಗಿಟ್ಟೆ ಒಕ್ಕೊಂಡು ಸಿದ್ಧವಾಗಿರಿ ಅಂತಾ….. ಅವರಿಗೂ ಖುಷಿಯೋ ಖುಷಿ! ಮಕ್ಕಳು ಬರ್ತಾರಲ್ಲಾ ಅಂತಾ ಅಂತಕ್ಕಗೂ ಪೂರಾ ಗೆಲುವಾಗಿ ಬಿಟ್ಟಿದೆ!” ಎಂದರು ಅನಂತಯ್ಯ.