ನಾನು ಹೇಳಿದ್ದು ಹೌದೋ ಅಲ್ಲವೊ? ಕಾಡಿನಲ್ಲಿ ಹೋಗುವಾಗ ಕೋವಿ ಖಾಲಿ ಇರಬಾರದಂತೆ!…. ಈಡು  ತುಂಬಿಕೊಂಡು ಬಂದಿದ್ದರಿಂದ ಅಲ್ಲವೊ ಈ ಕೋಳಿ ಸಿಕ್ಕಿದ್ದು, ತಾನೆ ತನ್ನ ಕೈಯಲ್ಲಿ ಮ್ಯಾಣೆ ಹಿಡಿದುಕೊಂಡಿದ್ದ ಕಾಡುಕೋಳಿಯ ಕಡೆ ನೋಡುತ್ತಾ ಗಟ್ಟದ ತಗ್ಗಿನವರ ಕಾಕುದನಿಯಲ್ಲಿ ಐತ ಮುಂದುವರಿದನು ಹುಂಜ ಏನು ತೂಕ ಇದೆ ಅಂತೀರಿ?….  ಅಯ್ಯಾ, ನೀವೆ ನೋಡಿ!”

ಕೋವಿಗೆ ಮತ್ತೆ ಈಡು ತುಂಬುತ್ತಿದ್ದ ಮುಕುಂದಯ್ಯ ಐತನಿಗೆಂದನು, ಅವನು ನೀಡುತ್ತಿದ್ದ ಹುಂಜದ ಕಡೆ ಕಣ್ಣು ಹಾಯಿಸಿದೆ: “ನಿನ್ನ ಕೂಳು ಹೊತ್ತಿತ್ತು! ಒಂದು ಗಂಟೇನೆ ಆಯ್ತಲ್ಲಾ ಇಲ್ಲಿ, ಅದನ್ನು ಹುಡುಕಕ್ಕೆ! ಬೆಳಕು ಇರಾ ಹಾಂಗೆ ಮನೆ ಸೇರಾನ ಅಂತಿದ್ರೆ, ಮೇಗ್ರಳ್ಳಿ ಬುಡದಲ್ಲೇ ಕತ್ತಲೆ ಆಗಾ ಹಾಂಗೆ ಮಾಡ್ದೆಲ್ಲ, ನೀನು?”

ಮಿಶನ್ ಸ್ಕೂಲಿನ ಪ್ರಾರಂಭೋತ್ಸವ ಮುಗಿಯುವಷ್ಟರಲ್ಲೆ ಬೈಗು ಕಪ್ಪಾಗಿ ಬಿಟ್ಟಿತ್ತು. ಇನ್ನೂ ಹೊತ್ತು ಮಾಡುತ್ತಿದ್ದರೋ ಏನೋ? ಆದರೆ ದೀಪಕ್ಕೆ ಏರ್ಪಾಡು ಮಾಡಿರಲಿಲ್ಲವಾದ್ದರಿಂದ ಬೆಳಕಿರುವಂತೆಯೆ ಆದಷ್ಟು ಬೇಗನೆ ಮುಗಿಸಿದ್ದರು.

ಅಂತಕ್ಕನ ಮನೆಗೆ ಅನಂತಯ್ಯನವರೊಡನೆ ಹೋಗಿ, ಸ್ಕೂಲಿಗೆ ಓದಲು ಬರುವ ತಮ್ಮ ಹುಡುಗರನ್ನು ಅಲ್ಲಿ ಊಟ ವಸತಿಗೆ ಬಿಡುವ ವಿಚಾರ ಮಾತನಾಡಿ, ಮುಕುಂದಯ್ಯ ಹೊರಡುವುದೆ ಕತ್ತಲುಕತ್ತಲಾಗಿತ್ತು. ಹೆದ್ದಾರಿಯಿಂದ ಹುಲಿಕಲ್ಲು ನೆತ್ತಿಯ ಕಡೆಗೆ ಅಗಚುವ ಕಾಲುದಾರಿ ಸಿಕ್ಕಲ್ಲಿಯೆ ಐತ ಕೋವಿಗೆ ಈಡು ತುಂಬಿಕೊಳ್ಳುವಂತೆ ಮುಕುಂದಯ್ಯನನ್ನು ಪ್ರೇರೇಪಿಸಿದ್ದು, ಅದರ ಪರಿಣಾಮವಾಗಿಯೆ, ಹತ್ತು ಮಾರು ಕಾಡಿನಲ್ಲಿ ಹೋಗುವುದರೊಳಗಾಗಿ ಹಿಂದೆ ಗುತ್ತಿ ಸಿಂಬಾವಿ ಭರಮೈಹೆಗ್ಗಡೆಯವರು ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೆ ಕೊಟ್ಟಿದ್ದ ಕಾಗದವನ್ನು ಹೊತ್ತು ತರುತ್ತಿದ್ದಾಗ ಹುಲಿಯ ಬೊಗಳಿ ಮೇಲೆ ಬಿದ್ದು ಎಬ್ಬಿಸಿದ್ದ ಹೆಚ್ಚಾವಿನ “ಬೆತ್ತದ ಸರ”ಕ್ಕೆ ಸಮೀಪದಲ್ಲಿ ಒಂದು ಕಾಡುಕೋಳಿ ಹುಂಜ, ಗೊತ್ತು ಕೂರಲೆಂದು, ನೆಲದ ಹಳುವಿನಿಂದ ಹಾರಿ ಒಂದು ದೊಡ್ಡ ಮರದ ಮೇಲೆ ಕೂತಿತು. ಅದು ಅಡಗಿದ್ದ ಕೊಂಬೆ ಎತ್ತರವಾಗಿದ್ದು ಸಂಧ್ಯಾ ಗಗನಕ್ಕೆ ಇದಿರಾಗಿದ್ದುದರಿಂದ ಬೈಗಿನ ಬಾನಿನ ಬಣ್ಣದ ಹಿನ್ನೆಲೆಯಲ್ಲಿ ಮಷೀಚಿತ್ರದಂತೆ ಎದ್ದು ಕಾಣುತ್ತಿದ್ದು, ಸುಲಭವಾಗಿ ಸಿಕ್ಕಿತ್ತು ಮುಕುಂದಯ್ಯನ ಗುರಿಗೆ. ಆದರೆ ಕೋಳಿ, ಹೊಡೆದಲ್ಲಿಯೆ ಕೆಳಕ್ಕೆ ಬೀಳದೆ, ಸ್ವಲ್ಪ ದೂರ ಇಳಿಜಾರಾಗಿ ಹಾರಿ ಹೋಗುತ್ತಾ ನೆಲಕ್ಕೆರಗಿತ್ತು. ಅದು ದೊಪ್ಪನೆ ಬಿದ್ದ ಸದ್ದೂ ಆ ಸಂಧ್ಯಾ ನಿಃಶಬ್ದತೆಯಲ್ಲಿ ಚೆನ್ನಾಗಿ ಕೇಳಿಸಿತ್ತು. ಆದರೆ ಆಗಾಗಲೆ ಕತ್ತಲೆ ಕವಿಯುತ್ತಿದ್ದ ಹಳುವಿನಲ್ಲಿ ಅದನ್ನು ಹುಡುಕುವುದೆ ಕಷ್ಟವಾಯಿತು. ಸುಮಾರು ಹೊತ್ತು ಅವರಿಬ್ಬರೂ ಹಳುವಿನಲ್ಲಿ ಅದನ್ನು ತಡಕಿ ಹುಡುಕಿದ ಮೇಲೆಯೆ ಅದು ಪತ್ತೆಯಾಗಿತ್ತು. ಚೆನ್ನಮ್ಮಗೆ “ಕತ್ತಲಾಗುವುದರೊಳಗೆ ಮನೆಯಲ್ಲಿರುತ್ತೇನೆ” ಎಂದು ಧೈರ್ಯ ಹೇಳಿ, ಆಶ್ವಾಸನೆ ಕೊಟ್ಟು ಬಂದಿದ್ದ ಮುಕುಮದಯ್ಯಗೆ, ಮೇಗರವಳ್ಳಿ ಹತ್ತಿರದ “ಬೆತ್ತದ ಸರ”ದಲ್ಲಿಯೆ ಅಷ್ಟು ಕತ್ತಲೆಯಾಗಿದ್ದನ್ನು ಕಂಡು, ತುಂಬ ಅಸಮಾಧಾನವಾಗಿತ್ತು. ಅದಕ್ಕೇ ಅವನು ಹುಂಜವನ್ನು ಕೈಯಲ್ಲಿ ಹಿಡಿದಿದ್ದ ಐತನ ಮೃಗಯಾ ಉತ್ಸಾಹಕ್ಕೆ ತಣ್ಣೀರೆರಚುವಂತೆ ಮಾತನಾಡಿದ್ದು!

ಇಬ್ಬರೂ ಬೇಗಬೇಗನೆ ಕಾಲುಹಾಕಿ ಹುಲಿಕಲ್ಲುನೆತ್ತಿಗೆ ಏರಿ ಇಳಿದು ಕೋಣೂರಿನ ಗಟ್ಟದ ತಗ್ಗಿನವರ ಬಿಡಾರದ ಸಮೀಪಕ್ಕೆ ಬಂದಾಗ ಐತ “ಅಯ್ಯಾ, ಒಂದು ಚಣ ಹಿಡಿದುಕೊಂಡಿರಿ, ಈಗ ಬಂದೆ” ಎಂದು ಕಾಡುಕೋಳಿಯನ್ನು ಮುಕುಂದಯ್ಯನ ಕೈಗಿತ್ತು ಕತ್ತಲೆಯಲ್ಲಿ ಕಾಣದಾದನು. ದೇಹಬಾಧೆಗೆ ಅವಸರವಾಗಿರಬೇಕು ಎಂದು ಭಾವಿಸಿ, ಮುಕುಂದಯ್ಯ ಕೋಳಿ ಹಿಡಿದು ಕಾದನು.

ಜಲಬಾಧೆಗಿರಲಿ, ಮಲಬಾಧೆಗಾದರೂ ಇಷ್ಟು ಹೊತ್ತು ಬೇಕೇ? ಎಲ್ಲೆಲ್ಲಿಯೂ ನೀರು ಹರಿಯುತ್ತಿರುವ ಈ ಕಾಲದಲ್ಲಿ ನೀರು ಹುಡುಕಿಕೊಂಡಾದರೂ ಎಲ್ಲಿಗೆ ಹೋದನು ಇವನು?…  ಅಥವಾ? ಹಾಳಾದವನು ಕುಡಿಯೋಕೆ ಗಿಡಿಯೋಕೆ ಸಿಗುತ್ತದೆ ಅಂತಾ ಯಾರ ಬಿಡಾರಕ್ಕಾದರೂ ನುಗ್ಗಿದನೋ?…. ಅವಳಿಗೆ ಬೇರೆ ಹೇಳಿ ಬಂದೀನಿ! ತುದಿಗಾಲ ಮೇಲೆ ಕಾಯ್ತಾ ಇರ್ತಾಳೆ, ಸೂಜಿ ಮೇಲೆ ನಿಂತ ಹಾಗೆ!….. ಕಡೆಗೆ, ನನಗೇನಾದುರೂ ಆಯ್ತೋ ಏನೋ ಅಂತಾ ಎದೆಗೆಟ್ಟು, ಏನಾದರೂ ಮಾಡಿಕೊಂಡರೂ ಮಾಡಿಕೊಂಡಳೆ! ಅದಕ್ಕೂ ಹೇಸುವವಳಲ್ಲ!…. ಇವತ್ತು ರಾತ್ರಿ ಬೇರೆ “ಬಂದೇ ಬರ್ತಿನಿ” ಅಂತಾ ಒಪ್ಪಿಯೂ ಬಿಟ್ಟಾಳೆ! ಮುಕುಂದಯ್ಯಗೆ ಮುಗುಳುನಗೆ ತಡೆಯಲಾಗಲಿಲ್ಲ. ಥೂ ಎಷ್ಟು ಹೊತ್ತಾಯ್ತು? ಎತ್ತ ಸತ್ತ ಈ ಬೋಳೀಮಗ?…. ನಾ ಹೋಗ್ತಾ ಇರ್ತೀನಿ. ಬರಲಿ ಹಾಳಾದವನು ಆಮೇಲೆ!….

ಮುಕುಂದಯ್ಯ ಕೋಳಿ ಕೋವಿ ಎರಡನ್ನೂ ಹೊತ್ತುಕೊಂಡು ಹೂವಳ್ಳಿಯ ಕಡೆಗೆ ಕತ್ತಲಲ್ಲಿಯೆ ಆದಷ್ಟು ಜೋರಾಗಿ ಕಾಲು ಹಾಕಿದನು. ಸ್ವಲ್ಪ ದೂರ ಹೋಗುವುದರಲ್ಲಿ ಹಿಂದುಗಡೆಯಿಂದ ಯಾರೊ ಓಡೋಡಿ ಬರುವ ಸದ್ದು ಕೇಳಿಸಿ ನಿಂತನು.

ಏದುತ್ತಾ ಹತ್ತಿರಕ್ಕೆ ದೌಡಾಯಿಸಿ ಬಂದು, ಕವಿದಿದ್ದ ಕುರುಡುಗತ್ತಲೆಯಲ್ಲಿ ಇನ್ನೇನು ಡಿಕ್ಕಿ ಹೊಡೆಯಬೇಕು ಅನ್ನುವಷ್ಟರಲ್ಲಿ ಮುಕುಂದಯ್ಯ ಕೂಗಿ ನಿಲ್ಲಿಸಿದನು:

“ಎತ್ತಲಾಗಿ ಸತ್ತಿದೆಯೊ, ಹಾಲಾದವನೆ?”

“ಅಕ್ಕಿಣಿ ಬಿಡಾರಕ್ಕೆ ಹೋಗಿ ಬಂದೆ.”

“ಯಾರ ಉಚ್ಚೆ ಕುಡಿಯಾಕೋ?” ಸಿಟ್ಟುರಿದಿತ್ತು ಮುಕುಂದಯ್ಯಗೆ.

“ಇಲ್ಲಾ, ಅಯ್ಯಾ, ಪೀಂಚಲು ಏನೋ ಹೇಳಿದ್ಲು, ಬಸಿರೀಗೆ ಮದ್ದು ತರಾಕ್ಕೆ ಹೋಗಿದ್ದೆ” ಎಂದಿತು ಐತನ ದೀನವಾಣಿ.

ಮುಕುಂದಯ್ಯನ ಮನಸ್ಸು ಮೃದುವಾಯಿತು. ಕಾಡುಕೋಳಿಯನ್ನು ಮುಂಚಾಚಿ, ಕೇಳಿದನು: “ಅಕ್ಕಣಿ ಮನೇಲಿಲ್ಲೇನೊ ಈಗ?”

ಮುಕುಂದಯ್ಯ ಮುಂದಕ್ಕೆ ನೀಡಿದ್ದ ಕೋಳಿಯನ್ನು ಕೈಗೆ ತೆಗೆದುಕೊಳ್ಳುತ್ತಾ ಐತನೆಂದನು:

“ಇಲ್ಲಾ, ಅಯ್ಯಾ! ಮೊನ್ನೆಯಿಂದ ಮತ್ತೆ ಬಿಡಾರಕ್ಕೇ ಬಂದಾಳೆ” ತುಸು ತಡೆದು ಮತ್ತೆ ಸ್ವಾರಸ್ಯ ಚಾಪಲ್ಯಕ್ಕೆ ವಶವಾಗಿ ಮುಂದುವರಿಸಿದನು: “ಹಳೆಮನೆ ಅಮ್ಮ ಮನೆಗೆ ಬಂದಮ್ಯಾಲೆ ರಂಗಪ್ಪಯ್ಯೋರು “ಬಿಡಾರಕ್ಕೇ ಹೋಗು, ಚೀಂಕ್ರನಿಂದ ನಿಂಗೇನೂ ಆಗದೆ ಇದ್ದಾಂಗೆ ನಾ ನೋಡ್ಕೋತೀನಿ” ಅಂದರಂತೆ!”

“ಇನ್ನೆಲ್ಲಿ ಚೀಂಕ್ರ ಬರ್ತಾನೆ, ಗಟ್ಟದಮೇಲೆ? ಅವನ ಕಥೆ ಪೂರೈಸದ್ಹಾಂಗೆ!” ಮನೆಕಡೆಗೆ ಬಿರುಬಿರನೆ ಕಾಲು ಹಾಕುತ್ತಲೆ ಗಂಟಲಲ್ಲಿಯೆ ನಕ್ಕು ಹೇಳಿದನು ಮುಕುಂದಯ್ಯ.

ಇಬ್ಬರೂ ಸ್ವಲ್ಪ ದೂರ ನೀರವವಾಗಿ ಮುಂದುವರಿದಿದ್ದರು.

ಹಿಂದುಗಡೆ ಬರುತ್ತಿದ್ದ ಐತ ಇದ್ದಕ್ಕಿದ್ದ ಹಾಗೆ ಕಿಸಕ್ಕನೆ ನಕ್ಕಿದ್ದು ಕೇಳಿಸಿ, ಮುಕುಂದಯ್ಯ ಕಾಲುಹಾಕುತ್ತಲೆ ಕೇಳಿದನು: “ಯಾಕೋ ಪೂರಾ ನಗ್ತೀಯಲ್ಲಾ?”

“ಯಾಕಿಲ್ಲಯ್ಯಾ…. “ ಎಂದನು ಐತ.

ಮತ್ತೆ ಇಬ್ಬರೂ ತಮ್ಮ ತಮ್ಮ ಆಲೋಚನೆಗಳಲ್ಲಿ ಮಗ್ನರಾಗಿಯೊ ಅಥವಾ ಕವಿದಿದ್ದ ಕತ್ತಲೆಯಲ್ಲಿ ಎಡವದಂತೆ ದಾರಿಗಾಣುವುದರಲ್ಲಿ ತಲ್ಲೀನರಾಗಿಯೊ ತುಸುದೂರ ಸಾಗಿದ್ದರು.

“ಅಯ್ಯಾ!” ಕರೆದನು ಐತ ಮತ್ತೆ.

“ಏನೋ?”

“ಅಕ್ಕಣಿ ಈಗ ಹೆಗ್ಗಡ್ತಮ್ಮ ಆಗಿಬಿಟ್ಟಾಳೆ! ನಿಮ್ಮೋರು ಉಟ್ಟಹಾಂಗೆ ಸೀರೆ ಉಟ್ಟುಕೊಂಡು ಗಡದ್ದಾಗಿದ್ದಾಳೆ!…. ಅವಳ ಬಿಡಾರಾನೂ…. ನನ್ನ ಬಿಡಾರ ಆಗಿತ್ತಲ್ಲಾ ಅದನ್ನೂ ಸೇರಿಸಿಯೆಬಿಟ್ಟಾರೆ!…. ಈಗ “ಮನೆ” ಆಗಿಬಿಟ್ಟದೆ…. “

“ಅದೆಲ್ಲಾ ನಿನಗ್ಯಾಕೋ? ಬಿಡಾರ ಬೀಳಿಸಿ “ಮನೇ”ನಾದ್ರೂ ಕಟ್ಟಲಿ,  ಅರಮನೇನಾದ್ರೂ ಕಟ್ಟಲಿ!…. ನೀನೇನು ಹೋಗ್ತೀಯಾ ನಿನ್ನ ಬಿಡಾರಕ್ಕೆ ಮತ್ತೆ?…..”

“ನನ್ನ ಜೀಂವ ಹೋದ್ರೂ ನಾನು ಹೋಗುದಿಲ್ಲ, ಒಡೆಯಾ” ಎಂದು ಪ್ರತಿಜ್ಞೆ ಮಾಡಿದ ಐತ, ಏನೋ ರಹಸ್ಯ ಹೇಳುವ ಧ್ವನಿಯಲ್ಲಿ ಮುಂದುವರಿದನು ಮತ್ತೆ: “ಇವೊತ್ತೊಂದು ತಮಾಸೇನ ಆಯ್ತಲ್ಲಾ, ಒಡೆಯಾ? ನಾನು…. ಅಕ್ಕಣಿ ಬಿಡಾರದ ಹತ್ತೆ ಹೋದಾಗ,…. ಒಳಗೆ…. ಮಾತಾಡೋದು ಕೇಳಿಸ್ತು….  ಮನೇ ದೊಡ್ಡಯ್ಯೋರು ಒಳಗಿದ್ರು!….”

“ಹರಕು ಬಾಯಿ ಮುಟ್ಠಾಳ, ಬಾಯಿ ಮುಚ್ಚಿಕೊಂಡು ಸುಮ್ಮನಿರಬಾರದೇನೋ? ನಿನ್ನ ನಾಲಗೆ ಪೂರಾ ಉದ್ದ ಆಗ್ತಾ ಇದೆಯೋ, ಇತ್ತಿತ್ತಲಾಗಿ…. ಒಂದು ದಿನ ನೀನು ಯಾರ ಕೈಲಾದ್ರೂ ಹಲ್ಲು ಉದುರಿಸಿಕೊಳ್ತೀಯಾ, ನೋಡ್ತಿರು! ನಿನಗ್ಯಾಕೊ ದೊಡ್ಡೋರ ವಿಚಾರ?”

ಐತ ಮುಂದೆ ಮಾತೆತ್ತಲಿಲ್ಲ, ಹೂವಳ್ಳಿ ಮನೆ ಮುಟ್ಟುವವರೆಗೂ.

ಆಗಿನ ಕಾಲದ ಮಲೆನಾಡಿನಲ್ಲಿ, ಸಾಮಾನ್ಯ ದಿನಗಳಲ್ಲಿ, ಆ ಒಂದೊಂದೆ ದೊಡ್ಡ ಮನೆಯ ಹಳ್ಳಿಗಳಲ್ಲಿ, ದುಡಿದು ದಣಿದು ಜನರು ಕತ್ತಲಾಗಿ ದೀಪ ಹಚ್ಚಿದೊಡನೆ ಉಂಡು ಮುಗಿಸಿ, ಕೋಣೆ ಸೇರುತ್ತಿದ್ದುದು ಮಾಡಿಕೆ. ಆದರೆ ಅಂದು ಹೂವಳ್ಳಿ ಮನೆಯಲ್ಲಿ ರಾತ್ರಿ ಬಹಳ ಹೊತ್ತಾಗಿದ್ದರೂ ಜಗಲಿಯ ದೀಪ ಉರಿಯುತ್ತಲೆ ಇತ್ತು.

ಜಗಲಿಯ ಕೆಸರುಹಲಗೆಯ ಮೇಲೆ ಮುಂಡಿಗೆಗೆ ಒರಗಿ ಒಬ್ಬಳೆ ಕುಳಿತಿದ್ದ ನಾಗಕ್ಕ, ಎದುರಿಗೆ ಅಂಗಳದಲ್ಲಿದ್ದ ತುಳಸಿಕಟ್ಟೆಯ ಮೇಲೆ ದೇವರಿಗೆ ಹಚ್ಚಿಟ್ಟಿದ್ದ ನೀಲಾಂಜನಗಳ ನಾಟ್ಯಮಾನ ಸೊಡರುಗಳ ಕಡೆಗೆ ನೋಡುತ್ತಾ, ಗಂಭೀರ ಚಿಂತಾಮಗ್ನಳಾಗಿ ಕುಳಿತಿದ್ದಳು. ಅವಳು ತನ್ನ ವಿಫಲ ಜೀವನವನ್ನಾಗಲಿ ಅದರ ದುಃಖ ಮಯ ದುರಂತತೆಯನ್ನಾಗಲಿ ಕುರಿತು ಯೋಚಿಸುತ್ತಿರಲಿಲ್ಲ. ಚಿನ್ನಮ್ಮನ ಭವಿಷ್ಯ ಜ್ಜೀವನದ ಯೋಗಕ್ಷೇಮವೆ ಅವಳ ಧ್ಯಾನದ ವಿಷಯವಾಗಿತ್ತು. ತನ್ನ ಸ್ವಂತ ಸುಖ ಸಂತೋಷ ಎಂಬುದೆಲ್ಲ ಮಣ್ಣು ಪಾಲಾಗಿದ್ದ ಈ ಜನ್ಮದ ಬಾಳುವೆಯಲ್ಲಿ ಇನ್ನು ಅವಳಿಗೆ ಉಳಿದಿದ್ದ ಏಕಮಾತ್ರ ಪ್ರತ್ಯಾಶೆ ಎಂದರೆ ಚಿನ್ನಮ್ಮ ಸುಖಸಂತೋಷಗಳಿಂದ ಬದುಕಿ ಬಾಳುವುದೆ ಆಗಿತ್ತು. ಮುಕುಂದಯ್ಯನೊಡನೆ ಚಿನ್ನಮ್ಮನ ಲಗ್ನವೂ ಇನ್ನೊಂದು ತಿಂಗಳಿಗೆ ನಿಶ್ಚಯವಾಗಿಯೂ ಇತ್ತು. ಅದಕ್ಕೆ ಮನುಷ್ಯ ದೃಷ್ಟಿಗೆ ಗೋಚರವಾಗುವ ಯಾವ ವಿಘ್ನವೂ ಇರಲಿಲ್ಲ ನಿಜ. ಆ ಮಂಗಳಕರವಾದ ಸುದಿನವನ್ನೆ ಇದಿರು ನೋಡುತ್ತಾ ನಾಗಕ್ಕ, ಹರ್ಷಚಿತ್ತೆಯಾಗಿ ಆ ಪುಣ್ಯಮುಹೂರ್ತವನ್ನೆ ಉತ್ಕಟಾಭಿಲಾಷೆಯಿಂದ ನಿರೀಕ್ಷಿಸುವ ಉಲ್ಲಾಸೋತ್ಸಾಹಗಳಲ್ಲಿ ತೇಲಿ ಸಾಗುತ್ತಿದ್ದ ತರಳೆ ಚಿನ್ನಮ್ಮನ ದ್ವಿಗುಣಿತ – ತ್ರಿಗುಣಿತ – ಶತಗುಣಿತ ಆನಂದಸ್ರೋತದಲ್ಲಿ ಲೀನೆಯಾಗಿದ್ದಳು. ಆದರೆ ಆವೊತ್ತು ಬೆಳಿಗ್ಗೆ ಚಿನ್ನಮ್ಮ ಮನೆಯಿಂದ ತುಸುದೂರವಿದ್ದ ಕಾಡುದಾರಿಯಲ್ಲಿ ಕೋವಿಯೊಡನೆ ಮೇಗರವಳ್ಳಿಗೆ ಹೋಗುತ್ತಿದ್ದ ಮುಕುಂದಯ್ಯನನ್ನು ಬೀಳುಕೊಟ್ಟು, ಮನೆಗೆ ಹಿಂತಿರುಗಿ, ಅಂಗಳದ ತುಳಸೀ ದೇವರಿಗೆ ಸುತ್ತು ಬಂದು, ನಾಗಕ್ಕಗೆ ನಡೆದ ವಿಷಯವನ್ನೆಲ್ಲ ತಿಳಿಸಿದ ಮೇಲೆ, ಮನೆಯಲ್ಲಿ ಎಲ್ಲರ ಮನಸ್ಸಿಗೂ ಮುಗಿಲು ಕವಿದಂತಾಗಿತ್ತು. ಈಡು ತುಂಬದಿದ್ದ ಕೋವಿಯನ್ನು ತೆಗೆದುಕೊಂಡು ಹೋಗುತ್ತಿದ್ದುದಕ್ಕೆ ಯಾವ ದುರುದ್ದೇಶವೂ ಇಲ್ಲವೆಂದೂ, ನಿರಪಾಯವಾಗಿ ತಾನು ಸಾಯಂಕಾಲವೆ ಸುರಕ್ಷಿತವಾಗಿ ಹಿಂದಕ್ಕೆ ಬರುತ್ತೇನೆ ಎಂದೂ ಮುಕುಂದಯ್ಯ ಧೈರ್ಯ ಹೇಳಿದ್ದರೂ, ಹೆಂಗಸರ ಹೃದಯಗಳು ದಿನವೆಲ್ಲ ತಳಮಳಗೊಳ್ಳುತ್ತಲೆ ಇದ್ದುವು; ಇಷ್ಟವ್ಯಕ್ತಿಯ ಸುರಕ್ಷಿತಾಗಮನಕ್ಕೆ ಪ್ರಾರ್ಥನಾಭಂಗಿಯಲ್ಲಿ ಆನತವಾಗಿಯೆ ಇದ್ದುವು, ತಮ್ಮ ತಮ್ಮ ಭಾವಾನುರೂಪದ ಭಗವಚ್ಚರಣತಲದಲ್ಲಿ!

ಮನೆಯಲ್ಲಿಯೆ ಇದ್ದರೆ ಕೆಲಸವಿಲ್ಲದ ಮನಸ್ಸು ಕಳವಳವನ್ನೆ ಮೆಲುಕು ಹಾಕುತ್ತಾ ಇರುವುದನ್ನು ತಪ್ಪಿಸುವುದಕ್ಕಾಗಿಯೆ ನಾಗಕ್ಕ ಚಿನ್ನಮ್ಮನನ್ನೂ ಪೀಂಚಲು ವೊಡನೆ ಕರೆದುಕೊಂಡು ಮಧ್ಯಾಹ್ನ ಊಟವಾದ ಮೇಲೆ ತೋಟದ ಕೆಲಸಕ್ಕೆ ಹೋಗಿದ್ದಳು. ಚಿನ್ನಮ್ಮನೊಡನೆ ತಾನೊಬ್ಬಳೆ ಇರುವಾಗಲೆಲ್ಲ ಸಾಧಾರಣವಾಗಿ ಆಶ್ಲೀಲಾಂಚಿತವೂ ಆಗಿರುವ ಹಾಸ್ಯ ಪರಿಹಾಸ್ಯದ ಮಾತುಕತೆಯಲ್ಲಿ ತಡಗಿ ಮನೋರಂಜನೆ ಮಾಡುತ್ತಿದ್ದ ಪೀಂಚಲುವೂ ಆ ದಿನ ಸಂಮ್ಲಾನೆಯೂ ಗಂಭೀರೆಯೂ ಆಗಿಬಿಟ್ಟಿದ್ದಳು. ಇನ್ನು ಕೆಲವೇ ತಿಂಗಳಲ್ಲಿ ಕಂದನೊಬ್ಬನನ್ನು ಪಡೆಯುವ ಹೇರಾಸೆಯಿಂದಿದ್ದ ಆ ಚೊಚ್ಚಲು ಬಸಿರಿಗೆ, ತನ್ನ ಗಂಡನಿಗೂ ಏನಾದರೂ ಆದರೆ ತನ್ನ ಗತಿಯೇನು? ಎಂಬ ಚಿಂತೆ ಹತ್ತಿತ್ತು.

ಅವಳಿಗೆ ಹುಟ್ಟುವ ಮಗು ಹೆಣ್ಣೊ? ಗಂಡೋ? ಎಂಬ ವಿಷಯದಲ್ಲಿ ಚಿನ್ನಮ್ಮಗೂ ಪೀಂಚಲುವಿಗೂ ಎಷ್ಟೋ ಸಾರಿ ತರತರವಾದ ಪಂಥ ಪಾಡು ನಡೆಯುತ್ತಿತ್ತು. ಇವೊತ್ತು ಕೆಲಸದ ಮಧ್ಯೆ ವಿಶ್ರಾಂತಿಗಾಗಿ ನೆರಳಲ್ಲಿ ಮೂವರೂ ಕುಳಿತಿದ್ದಾಗ, ಅಡಕೆಯ ಮರದ ಪೊಟರೆಯಲ್ಲಿ ಗೂಡುಕಟ್ಟಿ ಮರಿಮಾಡಿದ್ದ ಕಾಮಳ್ಳಿ ದಂಪತಿ ತಮ್ಮ ಎರಡು ಮರಿಗಳನ್ನು ಆಗತಾನೆ ಹೊರಕ್ಕೆ ಹಾರಿಸಿ, ಅವಕ್ಕೆ ಗುಟುಕು ಕೊಡುತ್ತಿದ್ದುವು. ಆ ಮರಿಗಳಲ್ಲಿ ಒಂದು ಗಂಡು ಒಂದು ಹೆಣ್ಣೆಂದೂ, ಎರಡೂ ಹೆಣ್ಣಾಗಿರಬೇಕೆ ಎಂದೂ, ಎರಡೂ ಗಂಡೇ ಆಗಿರಬಾರದೆಕೆ ಎಂದೂ ವಾದವಿವಾದ ಪ್ರಾರಂಭವಾಗಿತ್ತು. ಆಗ ವಿನೋದಶೀಲೆ ಚಿನ್ನಮ್ಮ ತನ್ನ ಎರಡು ಕೈಬೆರಳುಗಳನ್ನು ಮುಂದಕ್ಕೆ ಚಾಚಿ, ಒಂದನ್ನು ಮುಟ್ಟುವಂತೆ ಪೀಂಚಲುಗೆ ಹೇಳಿದಳು. ಪೀಂಚಲು ಏನು? ಎಂತು? ಏತಕ್ಕೆ? ಒಂದೂ ಗೊತ್ತಾಗದೆ ಸುಮ್ಮನೆ ಒಂದು ಬೆರಳನ್ನು ಮುಟ್ಟಿದಳು.

“ನೀನೆ ಪುಣ್ಯವಂತೆ ಕಣೇ” ಎಂದು ಚಿನ್ನಮ್ಮ.

“ಯಾಕ್ರೋ?” ಹಿಗ್ಗಿ ರಾಗವಾಗಿ ಕೇಳಿದಳು ಪೀಂಚಲು. ಸುಳ್ಳಾಗಲಿ, ನಿಜವಾಗಲಿ, ಮಂಗಳ ಹೇಳಿದರೆ ಮಾರುಹೋಗದವರಾರು?

“ದೊಡ್ಡಬೆರ್ಳ್ಳು ಮುಟ್ಟಿದೆಲ್ಲಾ? ಅದಕ್ಕೇ!”

“ದೊಡ್ಡಬೆರ್ಳ್ಳು ಮುಟ್ಟದ್ರೆ? ಏನು?”

“ದೊಡ್ಡಬೆರ್ಳ್ಳು,- ಗಂಡು: ಸಣ್ಣ ಬೆರ್ಳ್ಳು,- ಹೆಣ್ಣು!….  ನಿಂಗೆ ಹುಟ್ಟೋ ಬಾಲೆ ಗಂಡೋ ಹೆಣ್ಣೋ ಅಂತಾ ಸಕುನ ನೋಡ್ದೆ ಕಣೇ.”

“ತೋ ನಿಮ್ಮ!” ಚಿನ್ನಮ್ಮ ಮಾಡಿದುದಕ್ಕೂ ಹೇಳಿದುದಕ್ಕೂ ಒಳಗೊಳಗೆ ತುಂಬ ಹಿಗ್ಗಿದ್ದರೂ ಪೀಂಚಲು ಲಜ್ಜಿಗೊಂಡಂತೆ ನಗುನಗುತ್ತಾ ಹೇಳಿದಳು “ನಿಮಗೆ ಮಾಡೋಕೆ ಕಸುಬಿಲ್ಲ, ಚಿನ್ನಕ್ಕಾ.”

ದೂರ ಕುಳಿತು ಅನಾಸಕ್ತಿಯಂತೆ ತೋಟದ ಕಡೆಗೆ ನೋಡುತ್ತಿದ್ದರೂ ಅತ್ಯಂತ ಆಸಕ್ತಿಯಿಂದ ಕಿವಿಗೊಟ್ಟು ಆಗಲಿಸುತ್ತಿದ್ದಳು ನಾಗಕ್ಕ. ಆ ಇಬ್ಬರು ಹುಡುಗಿಯರ ಅಣುಗು – ಬಿರುಗು ಸಂಭಾಷಣೆಯನ್ನು ಅವಳು ತನ್ನ ಬದುಕಿನ ಶೂನ್ಯತೆಯನ್ನೂ ಅನ್ಯರ ಬಾಳುವೆಯ ಸುಖಸಂತೋಷ ತೃಪ್ತಿಗಳಿಂದಲೆ ತುಂಬಿಕೊಳ್ಳಬೇಕಾಗಿತ್ತು.

ಹುಡುಗಿಯರಿಬ್ಬರ ಮುಗ್ಧ ಅಟ್ಟಹಾಸ ಸಹ್ಯಾದ್ರಿಯ ಮೂಲೆಯ ಆ ಅಡಕೆಯ ತೋಟಕ್ಕೆ ಚಕ್ಕಳಗುಳಿ ಇಡುತ್ತಿತ್ತು!

ಕಾಮಳ್ಳಿಯ ಮರಿಗಳು ಗಂಡೋ ಹೆಣ್ಣೋ ಎಂಬುದರಲ್ಲಿ ಪ್ರಾರಂಭವಾದ ಚಿತ್ರ ವೃತ್ತಿ, ಪೀಂಚಲುಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ಶಕುನ ನೋಡುವುದರಲ್ಲಿ ವ್ಯವಹರಿಸಿತ್ತು. ಆದರೆ ಚಿನ್ನಮ್ಮನ ಚಿತ್ತವೃತ್ತಿಯ ತರಂಗ ಚಲನೆ ಅಲ್ಲಿಗೇ ನಿಲ್ಲಲಿಲ್ಲ. ಬೆಳಗಿನಿಂದಲೂ ಅವಳನ್ನು ಕಾಡುತ್ತಿದ್ದ ಒಂದು ಚಿಂತೆಯ ಕಡೆಗೆ ಒಲೆಯಿತು. ಮತ್ತೆ ಎರಡು ಬೆರಳು ಎತ್ತಿ ಹಿಡಿದಳು, ಪೀಂಚಲುವ ಮುಖದ ಮುಂದೆ. ಹೇಳಿದಳು:

“ಮುಟ್ಟೆ, ಇದರಲ್ಲಿ ಯಾವುದಾದ್ರೂ ಒಂದು ಬೆರ್ಳ್ಳನ್ನ….”

ಈ ಸಾರಿ ಪೀಂಚಲು ಹಿಂದಿನ ಸಲದಂತೆ ಲಘುವಾಗಿಯಾಗಲಿ ಯಾಂತ್ರಿಕವಾಗಿಯಾಗಲಿ ವರ್ತಿಸಲಿಲ್ಲ. ತನ್ನ ಕಣ್ಣ ಮುಂದೆ ಕವಲಾಗಿ ನಿಂತಿದ್ದ ಚಿನ್ನಕ್ಕನ ಎರಡು ಬೆರಳುಗಳನ್ನೂ ತದೇಕಚಿತ್ತಳಾಗಿ ನೋಡತೊಡಗಿದಳು. ಯಾವ ಬೆರಳನ್ನು ಮುಟ್ಟಿದರೆ ಏನು ಶಕುನ ಬಂದುಬಿಡುತ್ತದೆಯೋ? ಕಂಡವರಾರು?

ಪೀಂಚಲು ಭಾವಿಸಿದ್ದಳು, ಚಿನ್ನಮ್ಮ ತನ್ನ ಸಲುವಾಗಿಯೆ ಕಣಿ ಹೇಳಲು ಬೆರಳೊಡ್ಡಿದ್ದಾಳೆ ಎಂದು. ಆದ್ದರಿಂದ ತನಗೆ ಶುಭವಾಗುವಂತೆ ಹೇಳುವ ಬೆರಳನ್ನೆ ಪತ್ತೆಹಚ್ಚಿ ಮುಟ್ಟಬೇಕೆಂದು ಅವಳ ಆಕಾಂಕ್ಷೆ. ತಪ್ಪಿ ಬೇರೆ ಮುಟ್ಟಿಬಿಟ್ಟರೆ ಏನು ಗತಿ?…. ಆವೊತ್ತು ತನ್ನ ಗಂಡ ಐತ, ನೆನೆದರೆ ಇವೊತ್ತಿಗೂ ಏನು ನಾಚಿಗೆಯೇರುತ್ತದೆ! ತನ್ನ ಬತ್ತಲೆಯೊಡನೆ ಅವನ ಬತ್ತಲೆಯನ್ನೂ ಸೇರಿಸಿ ಆಟವಾಡುತ್ತಿದ್ದಾಗ, ಹಾಲು ತುಂಬಿ ಉಬ್ಬುತ್ತಿರುವ ತನ್ನ ಪೆರ್ಮೊಲೆಗಳಿಗೆ ಮುತ್ತಿಟ್ಟು, “ಎಡವೊ? ಬಲವೊ? ಹೇಳು!” ಅಂದಾಗ ತಾನು ಫಕ್ಕನೆ “ಬಲ” ಅನ್ನಲು ಹಾಂಗಾದ್ರೆ ನೀನು ಹೆಣ್ಣು ಹಡೆಯುವುದೇ ನಿಶ್ಚಯ! ಎಂದು ಅಪಶಕುನ ಹೇಳಿದ್ದನಲ್ಲವೆ? ಹಾಂಗಾಗಬಾರದಲ್ಲಾ ಇಂದು?

ಚಿನ್ನಮ್ಮನ ಬೆರಳುಗಳನ್ನು ನೋಡುತ್ತಿದ್ದ ಪೀಂಚಲು ತನ್ನೊಳಗೇ “ಅಃ ಚಿನ್ನಕ್ಕನ ಕೈಬೆರಳು ಎಷ್ಟು ಬಿಳಿ! ಎಷ್ಟು ಸಪುರ! ಏನು ಚೆಂದ! ಮುದ್ದು ಮಾಡಬೇಕು ಅನ್ನಿಸುತ್ತದೆ!…. ನನಗೇ ಹೀಂಗಾದರೆ, ಇನ್ನು ಆ ಮುಕುಂದಯ್ಯೋರಿಗೆ ಹೆಂಗಾಗ ಬೇಕು?… ಅದಕ್ಕೇ ಮತ್ತೆ, ಆವೊತ್ತು ಸೊಪ್ಪು ತರಲು ಹಾಡ್ಯಕ್ಕೆ ಹೋಗಿದ್ದಾಗ…  ಅವರು…. ಚಿನ್ನಕ್ಕನಿಗೆ…  ಹಾಂಗೆ ಮಾಡಿಬಿಟ್ಟದ್ದು?” ಎಂದುಕೊಂಡು ಸಚಿತ್ರವಾಗಿ ನೆನೆಯುತ್ತಿದ್ದಂತೆಯೆ, ಅವಳ ಮುಖಮಂಡಲ ಭಾವಮಯವಾಗಿ ಕಾಂತಿಯುಕ್ತವಾಯಿತು.

ಅದನ್ನು ಗಮನಿಸಿ ಚಿನ್ನಮ್ಮ “ಏ ಯಾಕೇ, ಇಷ್ಟು ನಾಚಿಕೆ ನಿಂಗೆ? ಬೆರಳು ಮುಟ್ಟು ಅಂದ್ರೆ?” ಎಂದು ಅವಸರಪಡಿಸಿದಳು.

ಆಗ ಮಾಡಿದಂತೆ ಈಗಲೂ, ದೊಡ್ಡ ಬೆರಳೇ ಶುಭದ ನಿಧಿಯಾಗಿರಬೇಕು ಎಂದು ಭಾವಿಸಿ, ಪೀಂಚಲು ನೀಳವಾಗಿ ನಿಂತಿದ್ದ ಅದನ್ನೆ ಮುಟ್ಟಿದಳು. ಪಾಪ, ಅವಳಿಗೆ ಹೇಗೆ ಗೊತ್ತಾಗಬೇಕು, ಅದರ ಪರಿಣಾಮ ಅಷ್ಟೊಂದು ಭೀಕರವಾಗುತ್ತದೆ ಎಂದು?

ಶರತ್ಕಾಲದ ಸರೋವರದಂತೆ ಪ್ರಶಾಂತ ಸುಂದರವಾಗಿದ್ದ ಚಿನ್ನಮ್ಮನ ವದನರಂಗದಲ್ಲಿ ಇದ್ದಕ್ಕಿದ್ದಂತೆಯೆ ಭಯವಿಕಾರದ ತರಂಗಗಳೆದ್ದುವು. ಚಳಿಗಾಳವಾಗಿದ್ದೂ, ನೆರಳಿನಲ್ಲಿ ಕುಳಿತಿದ್ದೂ, ಕುಳಿರುಗಾಳಿ ಬೀಸುತ್ತಿದ್ದರೂ ಅವಳ ಹಣೆಯಲ್ಲಿ ಬೆವರಿನ ಹನಿ ಮೂಡಿದವು. ಉಸಿರು ಸುಯ್ಯುಸಿರಾಯಿತು, ಕಣ್ಣಲ್ಲಿ ಬಳಬಳನೆ ನೀರು ಉಕ್ಕಿ ಕೆನ್ನೆಗಳ ಮೇಲೆ ಹರಿದವು. ಹೆದರಿ ಕೂಗಿಕೊಂಡರೂ ದನಿ ಏಳಲಿಲ್ಲ. ಇನ್ನೇನು ಪ್ರಜ್ಞೆ ತಪ್ಪಿ ಬೀಳುತ್ತಾಳೆಯೊ ಏನೋ ಎಂಬಂತೆ ತತ್ತರಿಸುತ್ತಿದ್ದ ಅವಳನ್ನು ಕಂಡು, ಬೆಬ್ಬಳಿಸಿ “ಅಯ್ಯೋ ಚಿನ್ನಕ್ಕಾ, ಏನಾಯ್ತು? ಏನಾಯ್ತು?” ಎಂದು ಚೇತ್ಕರಿಸಿ, ದಿಗಿಲು ಬಡಿದಿದ್ದ ಪೀಂಚಲು ತನ್ನ ಗರ್ಭಸ್ಥೂಲತೆಯನ್ನೂ ಮರೆತು ಚಂಗನೆ ನೆಗೆದದ್ದು ಚಿನ್ನಮ್ಮನನ್ನು ಆತುಕೊಂಡಳು. ನಾಗಕ್ಕನೂ ಓಡಿಬಂದು ಹಿಡಿದುಕೊಂಡಳು.

ಪೀಂಚಲು ಪಕ್ಕದಲ್ಲಿಯೆ ಹರಿಯುತ್ತಿದ್ದ ತೋಟದ ಕಪ್ಪಿನ ನೀರನ್ನು ಬೊಗಸೆಯೆತ್ತಿ ತಂದು, ನಾಗಕ್ಕ ಹೇಳಿದಂತೆ ನೆತ್ತಿಗೂ ಹಣೆಗೂ ಚಿಮುಕಿಸಿದಳು. ಸೆರಗಿನಿಂದ ಗಾಳಿ ಬೀಸಿದಳು. ಅವರು ಕುಳಿತಿದ್ದ ಜಾಗದಲ್ಲಿ ಕಸಕಡ್ಡಿ ಜಿಗ್ಗು ಹಳು ತುಂಬಿದ್ದರಿಂದ ಆ ಸದೆಯಲ್ಲಿ ಎಲ್ಲಿಯಾದರೂ ಅಡಗಿದ್ದ ಹಾವು ಗೀವು ಕಚ್ಚಿತೋ ಎಂದು ಹುಡುಕಿ ನೋಡಿದರು.

ಸ್ವಲ್ಪ ಹೊತ್ತಿನ ಮೇಲೆ ಚಿನ್ನಮ್ಮ ಚೇತರಿಸಿಕೊಂಡಳು! ಆದರೆ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. ಅಗಲವಾಗಿ ತೆರೆದಿದ್ದ ಕಣ್ಣುಗಳಲ್ಲಿಯೂ ಮುಖಭಂಗಿಯಲ್ಲಿಯೂ ತುಸು ಹೊತ್ತಿನ ಹಿಂದೆ ತಾಡಿತವಾಗಿದ್ದ ಭೀತಿಯ ಭಾವ ತನ್ನ ಮುದ್ರೆಯನ್ನೊತ್ತಿ ಬಿಟ್ಟಿತ್ತು. ಕಣ್ಣೀರು ಉಕ್ಕಿದಂತೆಲ್ಲ ಸೆರಗಿನಿಂದ ಒರಸಿಕೊಳ್ಳುತ್ತಿದ್ದಳು.

“ಐತ ಹೇಳುತ್ತಿದ್ದ, ಅಮ್ಮಾ: ಇಲ್ಲಿ ಹಗಲು ಹೊತ್ತಿನಲ್ಲಿ ಏನೋ ಒಂದು ತಿರುಗುತ್ತದೆಯಂತೆ!….” ಪ್ರಾರಂಭಿಸಿದಳು ಪೀಂಚಲು.

ರೇಗಿ ಅವಳ ಬಾಯಿ ಮುಚ್ಚಿಸಿದಳು ನಾಗಕ್ಕ: “ಸಾಕು ಸುಮ್ಮನಿರೆ!…  ಎಷ್ಟು ಸಾರಿ ಹೇಳಬೇಕೆ ನಿನಗೆ ನಾನು? ಬೆರಳೂ ಗಿರಳೂ ಮುಟ್ಟಿ, ಸಕುನ ಗಿಕುನ ನೋಡೋ ಆಟ ಆಡಬಾರದು ಅಂತಾ?…. ಏಳಿ, ಹೋಗಾನ ಮನೆಗೆ…. ಸಾಕು ನೀವು ಕಡಿದಿದ್ದು, ಕೆಲಸ!”

“ಏನು? ಎಂತು?” ಎಂಬುದು ಹೊಳೆಯದಿದ್ದರೂ “ಏಕೆ?” ಎಂಬುದನ್ನು ಊಹಿಸಿದ್ದಳು ನಾಗಕ್ಕ. ತನ್ನ ಇನಿಯನಿಗೆ ಸಂಬಂಧಪಟ್ಟಹಾಗೆ ಏನನ್ನೊ ಸಂಕಲ್ಪಿಸಿ, ಬೆರಳು ಮುಟ್ಟಿಸಿದ್ದಳು ಚಿನ್ನಮ್ಮ. ಅದು ಶುಭಕ್ಕೆ ವ್ಯತಿರಿಕ್ತವಾಗಿ, ಕೇಡಿನ ಕಡೆಗೇ ಇತ್ಯರ್ಥ ಹೇಳಿದ್ದರಿಂದ ಅವಳ ಮೃದು ಮುಗ್ಧ ಆಶಾಪೂರ್ಣ ಚೇತನ ತತ್ತರಿಸಿ ಹೋಗಿತ್ತು.

ಮನೆಗೆ ಹಿಂತಿರುಗುತ್ತಾ ದಾರಿಯಲ್ಲಿ ನಾಗಕ್ಕ ಚಿನ್ನಮ್ಮಗೆ ಧೈರ್ಯ ಹೇಳಿದಳು: “ತಂಗೀ, ನಾ ಹೇಳೋ ಮಾತನ್ನ ಸೆರಗಿನಲ್ಲಿ ಗಂಟುಹಾಕಿ ಕೊಂಡಿರು: ಇವೊತ್ತಲ್ಲ ನಾಳೆ, ನಾಳೆ ಅಲ್ಲ ಮುಂದೆ: ನಿನ್ನ ಒಳ್ಳೆಯದಕ್ಕೇ ನಾ ಹೇಳ್ತಿದ್ದೀನಿ: ನಿನ್ನ ಗಂಡನೇ ಆಗಲಿ, ನಂಟರಿಷ್ಟರು ಯಾರೇ ಆಗಲಿ, ಮನೆ ಬಿಟ್ಟು ಕೆಲಸಕ್ಕೆ ಹೊರಗೆ ಹೋದಾಗ, ನೀನು “ಕೆಟ್ಟದ್ದಾಗಿಬಿಟ್ಟರೆ ಏನು ಗತಿ?” ಅಂತಾ ಅಮಂಗಳಾನೇ ನೆನೆದು ಹೆದರ್ತಾ ಕೂತರೆ ಖಂಡಿತಾ ಒಳ್ಳೆದಲ್ಲ. ಅದಕ್ಕೆ ಬದಲಾಗಿ ಅವರಿಗೆ ಒಳ್ಳೇದಾಗ್ತದೆ; ಅವರು ಸುಖವಾಗಿ ಮನೆಗೆ ಬರ್ತಾರೆ” ಅಂತಾ ದೇವರನ್ನು ನೆನೀತಿದ್ರೆ, ಒಳ್ಳೇದು ಆಗೇಆಗ್ತದೆ.

ನಾಗಕ್ಕನ ಹಿತವಚನ ಚಿನ್ನಮ್ಮಗೆ ತನ್ನ ಮುಕುಂದ ಬಾವ ಜೈಮಿನಿ ಭಾರತ ಓದಿ ಕಥೆ ಹೇಳುತ್ತಿದ್ದಾಗ ಹೇಳಿದ್ದನ್ನೆ ನೆನಪಿಗೆ ತಂದಿತ್ತು. ತಾನು ಎಂಥಾ ತಪ್ಪು ಮಾಡುತ್ತುದ್ದೆ ಎಂದು ತನ್ನನ್ನು ತಾನೆ ಬೈದುಕೊಂಡಳು. ಈ ಅಮಂಗಳಾಶಂಕೆ ಆಕೆಯ ಬದುಕನ್ನೆ ಕೊರೆಯುತ್ತಿದ್ದ ಒಂದು ಕೆಟ್ಟ ಕೀಟಚಾಳಿಯಾಗಿತ್ತು. ಅವಳು ಹಗಲೆಲ್ಲ ತಾನು ಬಲ್ಲಂತೆ ಭಗವಂತನನ್ನು ನೆನೆಯುತ್ತಾ, ಮುಕುಂದ ಭಾವ ಯಾವ ಆಮಂಗಳ ಕಾರ್ಯವನ್ನೂ ಮಾಡದೆ, ಯಾವ ಅಮಂಗಳಕ್ಕೂ ಒಳಗಾಗದೆ, ಬೈಗಿಗೆ ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಹಾರೈಸುತ್ತಾ ಇದ್ದು, ಮುಚ್ಚಂಜೆ ಕಪ್ಪಾಗಲು ಅಂಗಳದ ತುಳಸೀ ದೇವರಿಗೆ ದೀಪ ಹಚ್ಚಿಟ್ಟು, ಕೈಮುಗಿದು ಎರಡು ಸುತ್ತು ಬಂದು, ಅಡ್ಡಬಿದ್ದಳು.

ಅಡ್ಡಬಿದ್ದವಳು ಬಹಳ ಹೊತ್ತು ಮೇಲೇಳಲಿಲ್ಲ. ಅವಳ ಮನಸ್ಸಿಗೆ ತನ್ನ ಮೈಯಲ್ಲಿ ಎನೋ ಆಗುತ್ತಿರುವಂತೆ ಅನುಭವವಾಗಿ, ದೇವರ ಬಳಿಯ ತುಳಸಿಯ ಮುಂದೆ ಅದಾಗಿಬಿಟ್ಟರೆ ಮೈಲಿಗೆ ಆಗುತ್ತದೆಂದು ಹೆದರಿ, ಬೇಗಬೇಗನೆ ಜಗಲಿಗೇರಿ ಒಳಕ್ಕೆ ಹೋಗುವುದಕ್ಕೆ ಬದಲಾಗಿ, ಕೆಳಗರಡಿಯಲ್ಲಿದ್ದ ಮುರುವಿನ ಒಲೆಯ ಪಕ್ಕದಲ್ಲಿಟ್ಟಿದ್ದ ಅಕ್ಕಿಕಲಬಿಯ ಮರೆಗೆ ಹೋದಳು.

ಜಗಲಿಯ ಮೇಲಿದ್ದು, ಮೊಮ್ಮಗಳು ದೇವರಿಗೆ ಬಲಗೊಂಡು ಅಡ್ಡ ಬೀಳುತ್ತಿದ್ದ ದಿವ್ಯದೃಶ್ಯವನ್ನು ಆಶೀರ್ವಾದ ತುಂಬಿದ ಹೃದಯದಿಂದ ಕಣ್ಣುತೊಯ್ದು ನೋಡುತ್ತಿದ್ದ ಚಿನ್ನಮ್ಮನ ಅಜ್ಜಿ, ತನ್ನ ಪಕ್ಕದಲ್ಲಿ ನಿಂತಿದ್ದ ನಾಗಕ್ಕಗೆ “ಯಾಕೆ?… ಹುಡುಗಿ ಅತ್ತಲಾಕಡೆ ಹೋದ್ಲು?…” ಎಂದು ಸೋಜಿಗವೊರೆದಳು.

ನಾಗಕ್ಕ ಕರೆದಳು, ಚಿನ್ನಮ್ಮ ಓಕೊಂಡರೂ, ಜಗಲಿಗೆ ಬರಲಿಲ್ಲ.

ನಾಗಕ್ಕ ಕಲಬಿಯಿದ್ದ ಜಾಗಕ್ಕೆ ಇಳಿದುಹೋಗಿ, ತುಸು ಹೊತ್ತು ಪಿಸಿಪಿಸಿ ಮಾತನಾಡಿ ಹಿಂದಕ್ಕೆ ಬಂದವಳು ಅಜ್ಜಿಗೆ “ಏನೂ ಇಲ್ಲಂತೆ, ಅಜ್ಜಮ್ಮ…. ಚೆಂಬು, ಚಾಪೆ, ಕಂಬಳಿ ತಂದುಕೊಡಾಕೆ ಹೇಳ್ತು” ಎನ್ನುತ್ತಾ ಚೆನ್ನಮ್ಮ ಮಲಗುತ್ತಿದ್ದ ಅಜ್ಜಿಯಕೋಣೆಗೆ ನಡೆದಳು.

ಅಜ್ಜಿಗೆ ಅರ್ಥವಾಯ್ತು. ಆ ಮುರುವಿನ ಒಲೆಯ ಪಕ್ಕದಲ್ಲಿ, ಎತ್ತರವೂ ದೊಡ್ಡದೂ ಆಗಿದ್ದ ಅಕ್ಕಿಕಲಬಿಯಿಂದ ಮರೆಕಟ್ಟಿದಂತಿದ್ದ, ಕೆಳಗರಡಿಯ ಆ ಜಾಗದಲ್ಲಿ ಇಂದು ಚೆನ್ನಮ್ಮ ಮುಟ್ಟಾಗಿ, ಮೂರು ದಿನಗಳೂ, ಹಗಲೂ ರಾತ್ರಿಯೂ, ಕುಳಿತೂ ಎದ್ದೂ ಮಲಗಿಯೂ ಹರಟೆ ಹೊಡೆದೂ ಆಕಳಿಸಿಯೂ ನಿದ್ದೆಮಾಡಿಯೂ ಕಳೆಯಲಿರುವಂತೆ, ಚಿನ್ನಮ್ಮನ ತಾಯಿಯೂ ಚಿನ್ನಮ್ಮನ ಅಜ್ಜಿಯೂ ಚಿನ್ನಮ್ಮನ ಮುತ್ತಜ್ಜಿಯೂ, ಅವಳಜ್ಜಿಯ ಅಜ್ಜಿಯ ಅಜ್ಜಿಯೂ ನೂರಾರು ವರ್ಷಗಳಿಂದಲೂ, ಅವರು ಹೊರಗಾಗಿದ್ದಾಗಲೆಲ್ಲ, ಸಲಕ್ಕೆ ಮೂರು ಮೂರು ದಿನಗಳಂತೆ, ಬೀಡುಬಿಟ್ಟು ಕಳೆದಿದ್ದರು! ಈಗಲೂ ವಯೋಧರ್ಮದಿಂದ ಅಜ್ಜಿಗೆ ಆ ತೊಂದರೆ ತಪ್ಪಿದ್ದರೂ ನಾಗಕ್ಕಗೆ ಇನ್ನೂ ತಪ್ಪಿರಲಿಲ್ಲವಷ್ಟೇ?….

ಕತ್ತಲಾಗುವವರೆಗೆ ತಕ್ಕಮಟ್ಟಿಗೆ ಧೈರ್ಯದಿಂದಲೆ ಇತ್ತು, ಚಿನ್ನಮ್ಮನ ಚೈತನ್ಯ. ಬೈಗುಕಪ್ಪಾಗುತ್ತಾ ಬಂದಂತೆಲ್ಲ ಅವಳ ಪ್ರತೀಕ್ಷೆ ತೀಕ್ಷ್ಣವಾಗತೊಡಗಿತು. ಮತ್ತೆ ಮತ್ತೆ ಹೆಬ್ಬಾಗಿಲಾಚೆಗೆ ಹೋಗಿ ಹಾದಿಯ ಕಡೆಗೆ ನೋಡುತ್ತಿದ್ದಳು. ಪೂರ್ತಿ ಕತ್ತಲು ಕವಿದ ಮೇಲೂ ಮುಕುಂದಯ್ಯ ಹಿಂತಿರುಗದಿದ್ದುದನ್ನು ನೋಡಿ, ಅವಳ ಅಮಂಗಳಾಶಂಕೆ ಬಿಸಿಯಾಗುತ್ತ ಬಂದು ಕುದಿಯತೊಡಗಿತು.

ಮನೆಗೆ ಅಂಟಿಕೊಂಡಂತಿದ್ದ ಕೊಟ್ಟಿಗೆಯ ಮೂಲೆಯ ತನ್ನ ಬಿಡಾರದಲ್ಲಿ ಅಡುಗೆಮಾಡಿಟ್ಟು, ತನ್ನ ಗಂಡ ಬಂದ ಮೇಲೆ ಅವನೊಡನೆಯೆ ಉಣ್ಣುವ ಆಶೇಯಿಂದ, ಬಿಡಾರದ ಬಾಗಿಲು ಮುಚ್ಚಿಕೊಂಡು ಪೀಂಚಲು ಮನೆಗೆ ಬಂದಿದ್ದಳು. ಐತನಿಲ್ಲದ ರಾತ್ರಿಗಳಲ್ಲಿ ಪೀಂಚಲು ತನ್ನ ಬಿಡಾರದಲ್ಲಿ ಒಬ್ಬಳೆ ಮಲಗಲು ಅಂಜಿಕೆಯಾಗಿ ಮನೆಗೇ ಬಂದು, ಮನೆಗೆಲಸದ ಮುದುಕಿ ಸುಬ್ಬಿ ಯಾವಾಗಲೂ ಮಲಗುತ್ತಿದ್ದ ಅಕ್ಕಿ ಕಲಬಿಯ ಮೂಲೆಯಲ್ಲಿಯೆ ಮಲಗುತ್ತಿದ್ದುದು ರೂಢಿ. ಇವತ್ತು ಚಿನ್ನಕ್ಕನೂ ಅಲ್ಲಿಯೆಮಲಗುವಂತಾಗಿದ್ದುದನ್ನು ಕೇಳಿ ಅವಳಿಗೆ ತುಂಬಾ ಸಂತೋಷವಾಯ್ತು, ವಿನೋದಕ್ಕೂ ಮಾತಿಗೂ ಹೆಚ್ಚು ಕಡಿಮೆ ಸಮಸಮ ವಯಸ್ಸಿನ ಸಂಗಾತಿಯ ಸಖೀಸಂಗ ದೊರೆತಿದ್ದಕ್ಕಾಗಿ.

ಆದರೆ ಇವೊತ್ತಿನ ಪರಿಸ್ಥಿತಿ ಬೇರೆಯಾಗಿತ್ತು. ಚೆನ್ನಮ್ಮನ ಮನಃಸ್ಥಿತಿ ವಿನೋದಕ್ಕಾಗಲಿ ಪಟ್ಟಂಗಕ್ಕಾಗಲಿ ಸ್ವಲ್ಪವೂ ಸಿದ್ಧವಾಗಿರಲಿಲ್ಲ. ಒಂದೆರಡು ಸಾರಿ ಪೀಂಚಲು ಮಾಡಿದ ಪ್ರಯತ್ನವೂ ವಿಫಲವಾಗಿತ್ತು. ಅದು ಅಷ್ಟಕ್ಕೇ ನಿಂತಿರಲೂ ಇಲ್ಲ. ಚಿನ್ನಮ್ಮ ತನ್ನ ಪ್ರಿಯತಮನ ಆಗಮನ ನಿರೀಕ್ಷೆಯಿಂದಲೂ ಅಮಂಗಳಾಶಂಕೆಯಿಂದಲೂ ಕುದಿಯುತ್ತಿದ್ದಾಳೆ ಎಂಬುದನ್ನು ಗ್ರಹಿಸಿದ ಅನಂತರ ಆ ಉದ್ವೇಗ ಪೀಂಚಲಿಗೂ ತಟ್ಟಲಾರಂಭಿಸಿತು. ಒಮ್ಮೆ ಚಿನ್ನಮ್ಮ ಹೆಬ್ಬಾಗಿಲಾಚೆ ಹೋಗಿ ಬಂದು ನಿಟ್ಟುಸಿರು ಬಿಟ್ಟು, ತನಗೆ ತಾನೆ ಎಂಬಂತೆ “ತಮಗೆ ಬರಾಕೆ ತಡಾಗ್ತದೆ ಅಂತಾ ಗೊತ್ತಾದಮೇಲೆ ಐತನ್ನಾದ್ರೂ ಕಳಿಸಬಾರ್ದಿತ್ತೇ? ಸುಖಾ ಸುಮ್ಮನೆ ನಮ್ಮ ಹೊಟ್ಟೆ ಉರಿಸಾಕೆ?” ಎಂದು ಸಿಡುಕಿಕೊಂಡದ್ದನ್ನು ಆಲಿಸಿದ ಪೀಂಚಲಿಗೂ ಯಾಕೋ ಹೆದರಿಕೆಯಾದಂತಾಗಿ, ಸುಯ್ದೇರಿ, ಕಣ್ಣು ಒದ್ದೆಯಾಗಿತ್ತು: ಅವಳ ಹೊಟ್ಟೆಯಲ್ಲಿದ್ದು ಆಗಲೆ ಅಲ್ಪಸ್ವಲ್ಪ ಚಲನೆಗೂ ಷುರು ಮಾಡಿದ್ದ ಐತನ ಕಂದಮ್ಮ ತನ್ನ ಅಸ್ತಿತ್ವವನ್ನು ಅಬ್ಬೆಗೆ ಸುಪ್ರಕಟವಾಗಿಯೆ ತಿಳಿಸುವಂತೆ ಒದ್ದಾಡಿಕೊಂಡಿತ್ತು, ಕುಮುಟಿತ್ತೆಂಬಂತೆ!….

ರಾತ್ರಿ ಊಟದ ಹೊತ್ತಾಗಲು ನಾಗಕ್ಕ ಹಿತ್ತಲುಕಡೆಗೆ ಬಾ ಎಂದು ಊಟಕ್ಕೆ ಎಬ್ಬಿಸಿದಾಗ ಚಿನ್ನಮ್ಮ ತನಗೆ ಹಸಿವಾಗುತ್ತಿಲ್ಲ ಎಂದು ಹೇಳಿ ಮುಸುಗುಹಾಕಿಕೊಂಡು ಮಲಗಿಬಿಟ್ಟಿದ್ದಳು. ಅವಳಿಗೆ ತುಸು ದೂರದಲ್ಲಿ ಮಲಗಿದ್ದ ಪೀಂಚಲು, ತನಗೆ ಹಸಿವಾಗಿದ್ದರೂ, ಚಿನ್ನಮ್ಮ “ಬಿಡಾರಕ್ಕೆ ಹೋಗಿ ಉಂಡುಕೊಂಡು ಬಾರೆ” ಎಂದು ಒಂದೆರಡು ಸಾರಿ ಹೇಳಿದ್ದರೂ, “ಅವರು ಬಂದಮ್ಯಾಲೇ ಹೋಗ್ತೀನಿ” ಎಂದು ಮಲಗಿದ್ದಳು. ಚೆನ್ನಮ್ಮಗೆ ಗೊತ್ತಿತ್ತು, ಚೊಚ್ಚಲು ಬಸಿರಿ ಪೀಂಚಲು ತನ್ನ ಹಾಗೆ ಹಸಿದುಕೊಂಡಿರಲಾರಳು ಮತ್ತು ಹಸಿದಿರಲೂ ಬಾರದು ಎಂದು. ಆದರೆ, ಯಾವಾಗಲೂ ಲಘುವಾಗಿ ವಿನೋದಶೀಲೆಯಾಗಿರುತ್ತಿದ್ದ ಪೀಂಚಲಿಗೂ ಚಿನ್ನಮ್ಮನ ಅಮಂಗಳಾ ಶಂಕೆಯ ಆವೇಗ ತಟ್ಟಿಬಿಟ್ಟಿತ್ತು.

ಅಜ್ಜಿ ಕಾದೂ ಕಾದೂ, ಉಣ್ಣುವ ಶಾಸ್ತ್ರ ಮುಗಿಸಿ, ಮಲಗುವ ಕೋಣೆಗೆ ಹೋಗಿದ್ದಳು. ನಾಗಕ್ಕಗೆ ಹಸಿವೆಯಾಗಿದ್ದರೂ ದುಡಿದು ದಣಿದಿದ್ದರೂ ಉಣ್ಣುವ ಮನಸ್ಸಾಗದೆ ಜಗಲಿಗೆ ಬಂದು, ಕೆಸರು ಹಲಗೆಯ ಮೇಲೆ ಮಂಡಿಗೆಗೆ ಒರಗಿ ಕುಳಿತು, ಅಂಗಳದ ತುಳಸಿಯ ದೇವರಿಗೆ ಹಚ್ಚಿಟ್ಟಿದ್ದ ನೀಲಾಂಜನಗಳಲ್ಲಿ ಡೋಲಾಯಮಾನವಾಗಿ ಉರಿಯುತ್ತಿದ್ದ ಕೆಂಜೊಡರುಗಳ ಕಡೆಗೆ ನೋಡುತ್ತಾ, ಆ ದಿನ ನಡೆದ ಸಂಗತಿಗಳನ್ನು ಮೆಲಕುಹಾಕುತ್ತಾ, ಮುಕುಂದಯ್ಯನ ಆಗಮನವನ್ನೇ ಕಾತರತೆಯಿಂದ ಪ್ರತೀಕ್ಷಿಸುತ್ತಾ ಕುಳಿತಿದ್ದಳು. ಹಗಲು ಅಡಕೆ ತೋಟದಲ್ಲಿ ಅವಳು ಚಿನ್ನಮ್ಮಗೆ ಬುದ್ಧಿ ಹೇಳಿ, ಕೊಟ್ಟಿದ್ದ ಧೈರ್ಯ ಈಗ ಅವಳಿಗೇ ಅಷ್ಟಾಗಿರಲಿಲ್ಲ: ಏನಾದರೂ ನಡೆಯಬಾರದ್ದು ನಡೆದಿದ್ದರೆ? ಆಗಬಾರದ್ದು ಆಗಿದ್ದರೆ? ಏನು ಗತಿ? ಯಾಕೆ ಇಷ್ಟು ರಾತ್ರಿಯಾದರೂ ಇನ್ನೂ ಬರಲಿಲ್ಲ….  ಅಷ್ಟರಲ್ಲಿ ಹೊರಗಡೆ ನಾಯಿ ಬೊಗಳಿದವು. ನಾಗಕ್ಕ “ಅಂತೂ ಬಂದರಲ್ಲಾ?” ಎಂದು ದೀರ್ಘವಾಗಿ ಉಸಿರೆಳೆದು ಎದ್ದು ನಿಂತಳು. ಹೆಬ್ಬಾಗಿಲು ತಟ್ಟಿದ ಸದ್ದಾಯಿತು. ಐತನ ದನಿ ಕೇಳಿಸಿತು.

“ಸುಬ್ಬೀ. ಬಾಗಿಲು ತೆಗಿಯೆ” ಕೂಗಿ ಹೇಳಿದಳು ನಾಗಕ್ಕ.

ಮುದುಕಿ ಸುಬ್ಬಿ ಉರಿಯುತ್ತಿದ್ದ ಮುರುವಿನೊಲೆಯ ಪಕ್ಕದಲ್ಲಿ ಹೆಬ್ಬಾಗಿಲಿಗೆ ಸಮೀಪವೆ ಮಲಗಿದ್ದಳು. ಅನುದ್ವಿಗ್ನ ಭಂಗಿಯಲ್ಲಿ, ನಿಧಾನವಾಗಿ ಎದ್ದು, ತಾಳ ತೆಗೆದು, ಬಾಗಿಲು ಎಳೆಯತೊಡಗಿದಳು. ಆದರೆ ದಿಮ್ಮಿಗಳಂತಹ ಹಲಗೆಗಳಿಗೆ ಕಬ್ಬಿಣದ ದಪ್ಪ ಪಟ್ಟಿಗಳನ್ನು ಜೋಡಿಸಿ ಮಾಡಿದ್ದ ಆ ಹೆಬ್ಬಾಗಿಲು ಮುದುಕಿಗೆ ಜಗ್ಗಲಿಲ್ಲ, ಅತ್ತ ಕಡೆಯಿಂದ ಐತ ನೂಕುತ್ತಿದ್ದರೂ! ಮುಕುಂದಯ್ಯನೂ ಐತನಿಗೆ ನೆರವಾಗಿ ಅತ್ತ ಕಡೆಯಿಂದ ನೂಕಿದ ಮೇಲೆಯೆ ಹೆಬ್ಬಾಗಿಲು ಕಿರೇಂದು ತೆರೆಯಿತು…  ನಾಗಕ್ಕ ಅಡುಗೆ ಮನೆಗೆ ನಡೆದಳು.

“ಐತಾ, ಆ ಕೋಳೀನ ಅಕ್ಕಿ ಕಲಬಿಗೆ ಹಾಕಿಡೋ; ನಾಳೆ ಬೆಳಿಗ್ಗೆ ಸರಿಮಾಡಿ ಕೊಡಬಹುದು” ಎನ್ನುತ್ತಾ ಮುಕುಂದಯ್ಯ ಒಳಗೆ ಬಂದು, ಕೋವಿಯನ್ನು ಜಗಲಿಯ ಒಂದು ಮೂಲೆಗೆ ಒರಗಿಸಿಟ್ಟು, ಬಟ್ಟೆ ಬಿಚ್ಚಿಡತೊಡಗಿದನು.

ಮುಳ್ಳಿನ ಹಾಸಗೆಯ ಮೇಲೆ ಮಲಗಿದ್ದ ಚಿನ್ನಮ್ಮಗೆ ಸಂಪೂರ್ಣ ಎಚ್ಚರಿತ್ತು. ಅಳುತ್ತಿದ್ದ ಕಣ್ಣು ಒಂದು ಚಣವೂ ಮುಚ್ಚಿರಲಿಲ್ಲ. ನಾಯ ಕೂಗಿ, ಬಾಗಿಲು ತಟ್ಟಿ, ಐತನ ದನಿ ಕೇಳಿಸಿದಾಗಲೆ ಅವಳ ಎದೆಯ ಮೇಲಿದ್ದ ಭಾರವೆಲ್ಲ ತೊಲಗಿದಂತಾಗಿತ್ತು. ಮುಕುಂದಯ್ಯ ಒಳಗೆ ಬಂದು, ಐತನಿಗೆ ಕೋಳಿಯನ್ನು ಅಕ್ಕಿ ಕಲಬಿಯೊಳಗೆ ಇಡಲು ಹೇಳಿದ ಅವನ ಇಷ್ಟಪ್ರಿಯ ಕಂಠಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನ ಗರಿಹಗುರವಾಗಿ, ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಅದರ ದಂಡವು ನೆಟ್ಟಗಾಗಿ ವಿರಾಮಭಂಗಿಯಲ್ಲಿ ಮಲಗುವಂತೆ, ಒಂದೆರಡು ನಿಮಿಷಗಳಲ್ಲಿಯೆ ಆನಂದ ಮೂರ್ಛೆಯೊ ಎಂಬಂತಹ ಗಾಢನಿದ್ರೆಗೆ ಮುಳುಗಿಬಿಟ್ಟಳು! ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೊ ವಿರಹ ಮಿಲನ ನಾಟಕದಲ್ಲಿ?

ಮುಕುಂದಯ್ಯ ಕೈಕಾಲು ತೊಳೆದುಕೊಂಡು, ತುಳಸಿಕಟ್ಟೆಗೆ ಬಲವಂದು ಅಡ್ಡಬಿದ್ದು, ಅಡುಗೆ ಮನೆಗೆ ಹೋಗಿ ಮಣೆಯ ಮೇಲೆ ಅಂಡೂರಿ ಕುಕ್ಕುರುಗಾಲಲ್ಲಿ ರೂಢಿಯಂತೆ ಊಟಕ್ಕೆ ಕುಳಿತನು. ನಾಗಕ್ಕ ಬಾಳೆ ಎಲೆ ಹಾಕಿ ಬಡಿಸಿದಳು. ಉಣ್ಣುತ್ತಾ ನಾಗಕ್ಕನೊಡನೆ ಮನೆ ಗೆದ್ದ ತೋಟಗಳಲ್ಲಿ ನಡೆದ ಆ ದಿನದ ಕೆಲಸಗಳ ವಿಚಾರವಾಗಿ ಆಗೊಂದು ಈಗೊಂದು ಪ್ರಶ್ನೆ ಹಾಕಿ ಮಾತನಾಡಿದನು. ಆದರೆ ಅವನು ಅತ್ತ ಇತ್ತ ಕಣ್ಣು ಹಾಯಿಸುತ್ತಿದ್ದ ರೀತಿಯಿಂದಲೂ, ಮಾತಿನ ಮಧ್ಯೆ ನಿಲ್ಲಿಸಿ ನಿಲ್ಲಿಸಿ ಏನನ್ನೊ ಆಲಿಸಲೆಳಸಿ ಸುಮ್ಮನಾಗುತ್ತಿದ್ದ ಭಂಗಿಯಿಂದಲೂ, ಒಟ್ಟಿನಲ್ಲಿ ಅವನಲ್ಲಿ ತೋರುತ್ತಿದ್ದ ಅಸಮಾಧಾನ ಭಾವದಿಂದಲೂ, ಅವನು ಚಿನ್ನಮ್ಮ ಕಾಣಿಸದಿದ್ದುದಕ್ಕಾಗಿಯೆ ಚಡಪಡಿಸುತ್ತಿದ್ದಾನೆ ಎಂಬುದು ಇಂಗಿತಜ್ಞೆ ನಾಗಕ್ಕಗೆ ಹೊಳೆಯಿತು. ಅವಳಿಗೆ ಹೊರಗಾಗಿದೆ ಎಂದು ನಾಗಕ್ಕ ಹೇಗೆ ಹೇಳುತ್ತಾಳೆ? ಅವನೇ ವಿಚಾರಿಸಿದರೆ ಹೇಳುತ್ತೇನೆ ಎಂದು ಕೊಂಡು ಸುಮ್ಮನಾದಳು. ಆದರೆ ಮುಕುಂದಯ್ಯಗೆ ನಿಮಿಷ ನಿಮಿಷಕ್ಕೂ ಅಸಮಾಧಾನ ಹೆಚ್ಚಾಗುತ್ತಾ ಹೋಯಿತು.

ಸಾಧಾರಣವಾಗಿ ಮುಕುಂದಯ್ಯ ಎಷ್ಟೇ ಹೊತ್ತಾಗಿ ಮನೆಗೆ ಬಂದರೂ ಚಿನ್ನಮ್ಮನ ಸ್ವಾಗತ ಸೇವೆ ಶುಶ್ರೂಷೆ ಸಲ್ಲಾಪಗಳು ತಪ್ಪುತ್ತಿರಲಿಲ್ಲ. ಅದರಲ್ಲಿಯೂ ಇವೊತ್ತು, ಮುಕುಂದಯ್ಯ ಏನೋ ಒಂದು ಅಪಾಯವಾಗಬಹುದಾಗಿದ್ದ ಸನ್ನಿವೇಶದಲ್ಲಿ ಸಿಕ್ಕಿಯೂ ಉಪಾಯದಿಂದ ಗೆದ್ದುಬಂದಿರುವಾಗ, ಚಿನ್ನಮ್ಮ ತನ್ನ ಆಗಮನವನ್ನು ಪ್ರತೀಕ್ಷಿಸದೆ, ನಿರ್ಲಕ್ಷಿಸಿ ನಿದ್ದೆ ಮಾಡಿಬಿಡ ಬಹುದೇ? ಬಹುಶಃ ತಾನು ಕತ್ತಲಾಗುವುದರೊಳಗೆ ಬರಲಿಲ್ಲ ಎಂದು ಮುನಿಸಿಕೊಂಡು, ತನ್ನನ್ನು ಶಿಕ್ಷಿಸುವ ಸಲುವಾಗಿ ಹೀಗೆ ಮಾಡಿರಬೇಕು! ಮಾಡಿದರೆ ಮಾಡಲಿ! ನಾನೂ ಮುನಿಸಿಕೊಳ್ಳಬಲ್ಲೆ…. ಇನ್ನು ಒಂದು ತಿಂಗಳೂ, ನಮ್ಮ ಮದುವೆ ಆಗುವವರೆಗೂ, ನಾನೂ ಅವಳೊಡನೆ ಮಾತುಬಿಡುತ್ತೇನೆ! ಆಗ ಗೊತ್ತಾಗುತ್ತದೆ ಅವಳಿಗೆ! ಅವಳಿಗೆ ಯಾವಾಗಲೂ ದಿಮಾಕು! ನಾನೇ ಯಾವಾಗಲೂ ಸೋಲಬೇಕೇನು? ತೋರಿಸ್ತೀನಿ ಅವಳಿಗೆ! ನಂಗೂ ಗೊತ್ತು ಸಿಟ್ಟುಮಾಡಿಕೊಳ್ಳೋಕೆ!….

ಮುಕುಂದಯ್ಯ ತನ್ನ ಸಿಗ್ಗನ್ನು ಆದಷ್ಟು ಮಟ್ಟಿಗೆ ಮುಚ್ಚಿಟ್ಟು ಕೊಳ್ಳಲು ಪ್ರಯತ್ನಿಸುತ್ತಾ ಊಟ ಮುಗಿಸಿ, ಎಂದಿನ ಪದ್ಧತಿಯಂತೆ ಜಗಲಿಯಲ್ಲಿ ಕುಳಿತು ಸ್ವಲ್ಪ ಹೊತ್ತು ರಾಗವಾಗಿ ಕಾವ್ಯ ಓದುವುದನ್ನೂ ತಿರಸ್ಕರಿಸಿ, ನೆಟ್ಟಗೆ ಮಲಗುವ ಕೋಣೆಗೆ ಹೋಗಿ ಬಾಗಿಲು ಮುಚ್ಚಿ ತಾಳಹಾಕಿಕೊಂಡನು. ಅವನು ತನ್ನ ನಿತ್ಯದ ಅಭ್ಯಾಸದಂತೆ ಸ್ವಲ್ಪ ಹೊತ್ತಾದರೂ ಜಗಲಿಯಲ್ಲಿ ಕೂತಿದ್ದರೆ, ತನ್ನ ಗಂಡ ಐತನ ಸಂಗಡ ಬಿಡಾರಕ್ಕೆ ಹೋಗಿ ಅವನೊಡನೆ ಉಂಡು ಪೂರೈಸಿ, ಅವನನ್ನೂ ಸಂಗಡ ಕರೆದುಕೊಂಡು ಮನೆಗೆ ಹಿಂತಿರುಗಿದ್ದ ಪೀಂಚಲು, ಹೊರಗಾದವರು ಮಲಗುತ್ತಿದ್ದ ಕಲಬಿಯ ಪಕ್ಕದ ಜಾಗದಲ್ಲಿ ಮಲಗುತ್ತಿದ್ದುದನ್ನಾಗಲಿ, ಆ ಜಾಗದಿಂದ ಬಹುದೂರವಿದ್ದ ಜಗಲಿಯ ತೆಣೆಯ ಮೇಲೆ ಐತನೊಬ್ಬನ ಮಲಗುವ ಚಾಪೆ ಬಿಚ್ಚಿಕೊಳ್ಳುತ್ತಿದ್ದುದನ್ನಾಗಲಿ ಗಮನಿಸದೆ ಇರಲಾಗುತ್ತಿರಲಿಲ್ಲ. ಬಿಡಾರದಲ್ಲಿ ಮಲಗಿಕೊಳ್ಳದೆ ಮನೆಯಲ್ಲಿ ಏಕೆ ಮಲಗುತ್ತಿದ್ದಾನೆ? ಎಂಬ ಮುಕುಂದಯ್ಯನ ಪ್ರಶ್ನೆಗೆ ಐತ ಹೇಳಬಹುದಾಗಿದ್ದ ಉತ್ತರದಲ್ಲಿ ಮುಕುಂದಯ್ಯನ ಎದೆಯ ಕುದಿದಾಟವೆಲ್ಲ ತಣ್ಣಗಾಗುತ್ತಿತ್ತು, ಚಿನ್ನಮ್ಮನ ಮೇಲಣ ಮುನಿಸೆಲ್ಲ ಮಾಯವಾಗಿ, ಸಮಾಧಾನದಿಂದ ಉಂಟಾಗುವ ಪ್ರಶಾಂತ ಮನಃಸ್ಥಿತಿಯಲ್ಲಿ ರಾತ್ರಿ ಅವನು ಚೆನ್ನಾಗಿ ನಿದ್ದೆಮಾಡಬಹುದಿತ್ತು.

ಆದರೆ?

ಆವೊತ್ತು ಬೆಳಗಿನಿಂದಲೂ ಮುಕುಂದಯ್ಯ ಮಾನಸಿಕ ಮತ್ತು ದೈಹಿಕ ಶ್ರಮಗಳಿಂದ ದಣಿದಿದ್ದನು. ಆದರೂ ದುಗುಡಕ್ಕೆ ಸಿಲಿಕಿದ ಚೇತನಕ್ಕೆ ನಿದ್ದೆ ಬರುತ್ತದೆಯೆ?

ಬಾಗಿಲು ಮುಚ್ಚಿ, ತಾಳವಿಕ್ಕಿ, ಮಲಗಿಕೊಂಡವನು ಸ್ವಲ್ಪ ಹೊತ್ತಿನಲ್ಲಿಯೆ ಎದ್ದು ತಾಳ ತೆಗೆದು, ಮತ್ತೆ ಮಲಗಿದನು: ಪಾಪ! ಹುಡುಗಿ ನಾನು ಬಂದಮೇಲೆ ಏಳೋಣ ಎಂದು ಮಲಗಿದ್ದವಳು ಹಾಗೆಯೆ ನಿದ್ದೆ ಹೋಗಿರಬಹುದು. ಫಕ್ಕನೆ ಎಚ್ಚರವಾಗಿ, ನಾನು ಬಂದು ಮಲಗಿರಬಹುದೆಂದು ಎಲ್ಲಿಯಾದರೂ ಬಂದರೆ? ಬಾಗಿಲು ತಳ್ಳಿ, ತಾಳ ಹಾಕಿರುವುದನ್ನು ನೋಡಿ, ಹಿಂದಕ್ಕೆ ಹೋಗಬೇಕಾಗಿ ಬಂದರೆ? ಎಷ್ಟು ದುಃಖಪಟ್ಟುಕೊಳ್ಳುತ್ತಾಳೊ? ಪ್ರಿಯೆಯ ಪರವಾಗಿ ತುಂಬ ಮೃದುವಾಯಿತು ಮುಕುಂದಯ್ಯನ ಮನಸ್ಸು…. ತಾನು ತುಂಬ ದಣಿದಿದ್ದುದರಿಂದಲೆ ಮುಂಗೋಪದಿಂದ ವರ್ತಿಸಿಬಿಟ್ಟೆ. ವಿಚಾರಿಸಿದ್ದರೆ ನಾಗಕ್ಕ ನಿಜಸ್ಥಿತಿ ಹೇಳುತ್ತಿದ್ದಳು….  ಆಃ ನನ್ನ ಚಿನ್ನಿ ಎಂಥ ಹುಡುಗಿ? ಏನು ಚೆಲುವೆ? ಎಷ್ಟು ಬುದ್ಧಿವಂತೆ? ನನಗಾಗಿ ಎಂಥೆಂಥ ಸಾಹಸ ಮಾಡಿಬಿಟ್ಟಿದ್ದಾಳೆ? ನಾನೆಂಥ ಕೃತಘ್ನ! ಮುಕುಂದಯ್ಯ ಚಿನ್ನಿಯೊಡನೆ ಮನೆಯಲ್ಲಿ, ಗದ್ದೆಯಲ್ಲಿ, ತೋಟದಲ್ಲಿ, ಹಾಡ್ಯದಲ್ಲಿ, ಹಾಡ್ಯದ ಮಾರಿಗುಡಿಯಲ್ಲಿ ಆಡಿದ ಆಟಗಳನ್ನೆಲ್ಲ ಮೆಲುಕುಹಾಕುತ್ತಾ ಸವಿದನು….  ರಾತ್ರಿ ಬಹಳ ಮುಂದುವರಿದರೂ ಬಾಗಿಲು ತೆರೆಯಲಿಲ್ಲ.

ಬಾಗಿಲು ಮುಚ್ಚಿದ್ದನ್ನು ನೋಡಿ ಹಿಂದಕ್ಕೆ ಹೋಗಿಬಿಟ್ಟಳೊ? ಛೇ? ಎಂಥ ಕೆಲಸ ಮಾಡಿಬಿಟ್ಟೆ? ಮುಕುಂದಯ್ಯ ಮತ್ತೊಮ್ಮೆ ಎದ್ದು, ಬಾಗಿಲನ್ನು ಅರ್ಧ ತೆಗೆದಿಟ್ಟು, ಮಲಗಿಕೊಂಡನು. ಹೊರಗಡೆಯ ಗಾಳಿ ನುಗ್ಗಿ ಕೋಣೆ ತುಸು ತಣ್ಣಗಾಯಿತು.

ಇವೊತ್ತೆ ಅಮಾಸೆ, ಮುಂದಿನ ಅಮಾಸೆ ಕಳೆದು ಎರಡೊ ಮೂರೊ ದಿನಗಳಲ್ಲಿ ನಮ್ಮ ಮದುವೆ! ಜೋಯಿಸರು ಅಮೃತ ಮೂಹೂರ್ತ ಇಟ್ಟುಕೊಟ್ಟಿದ್ದೀನಿ ಅಂತಾ ಹೇಳಿದ್ದಾರೆ. ಬ್ರಾಹ್ಮಣರಲ್ಲದವರಿಗೆ ಸಾಧಾರಣವಾಗಿ ನಿಶಾಲಗ್ನವನ್ನೆ ಇಟ್ಟುಕೊಡುವುದು ವಾಡಿಕೆಯಾಗಿದ್ದರೂ ನಮ್ಮ ಮದುವೆಗೆ ದಿವಾಲಗ್ನವನ್ನೆ ಇಟ್ಟುಕೊಟ್ಟಿದ್ದಾರೆ…  ಅವರೂ ಜನಾಜನ ನೋಡಿ ಪಂಚಾಂಗ ನೋಡ್ತಾರೆ!…. ಥೂ ಇವೊತ್ತು ಅವಳು ಬರುವ ತರಾ ಕಾಣಾದಿಲ್ಲ…  ಬಂದಿದ್ದರೆ ಏನಾಗುತ್ತಿತ್ತೊ?…. ಏನಾದರೂ ಆಗಿದ್ದರೂ ಏನು ಮಹಾ? ಇನ್ನೊಂದು ತಿಂಗಳಲ್ಲಿ ನಾನು ಗಂಡ, ಅವಳು ಹೆಂಡತಿ! ಆಮೇಲೆ ನಮಗೆ ಯಾರ ಮುಲಾಜು?… ಮತ್ತೆ ಮುಕುಂದಯ್ಯನ ಮನಸ್ಸಿನಲ್ಲಿ ಸಿಗ್ಗು ಹೊಗೆಯಾಡತೊಡಗಿತು…. ಇರಲಿ, ನಾನೂ ತೋರಿಸ್ತೀನಿ ಅವಳಿಗೆ! ಇನ್ನು ಒಂದು ತಿಂಗಳು ನಾನು ಅವಳ ಹತ್ತಿರ ಮಾತನಾಡಿದರೆ ನಾನು ಗಂಡಸೇ ಅಲ್ಲ! ಅವಳ ಗಂಡನಾದ ಮೇಲೆಯೇ ನಾನು ಅವಳ ಸಂಗಡ ಮಾತಾಡುವುದು! ಅದಕ್ಕೆ ಮೊದಲು ತುಟಿ ಪಿಟಿಕ್ಕೆನ್ನುವುದಿಲ್ಲ!….

ಅಂತೂ ಮುಕುಂದಯ್ಯನಿಗೆ ನಿದ್ದೆ ಹತ್ತುವುದರಲ್ಲಿ ಮುಕ್ಕಾಲು ಇರುಳು ಮುಗಿದಿತ್ತು. ಹಾಸಗೆಯ ಮೇಲೆ ಹೊರಳೀ ಹೊರಳೀ ಸಾಕಾಗಿ, ಆಕಳಿಸೀ ಆಕಳಿಸೀ ನಿದ್ದೆ ಹೋಗಿದ್ದನು.

ಬೆಳ್ಳಿಗ್ಗೆ ಮುಕುಂದಯ್ಯ ಎದ್ದು, ಅರ್ಧ ತೆರೆದೆ ಇದ್ದ ಕೋಣೆಯ ಬಾಗಿಲಲ್ಲಿ ನಿಂತು, ಅಂಗಳದ ತುಳಸಿದೇವರಿಗೆ ಕೈಮುಗಿದು, ಜಗಲಿಗೆ ಬಂದಾಗ ತೆಣೆಯಲ್ಲಿ ಮಲಗಿದ್ದ ಐತನನ್ನು ಕಂಡು ಅಚ್ಚರಿಗೊಂಡು ವಿಚಾರಿಸಿದನು.

“ಇದೇನೋ? ಇಲ್ಲಿ ಮಲಗೀಯ?”

“ಅವಳು ಬಿಡಾರದಲ್ಲಿ ಮಲಗಲಿಲ್ಲ; ಇಲ್ಲಿಗೇ ಬಂದಳು; ಅದಕ್ಕೇ ನಾನೂ ಇಲ್ಲಿಗೇ ಬಂದುಬಿಟ್ಟೆ” ಎದ್ದು ಕುಳಿತು ಚಾಪೆ ಸುತ್ತುತ್ತಾ ಹೇಳಿದನು ಐತ.

“ಯಾಕೋ? ನಿನ್ನ ಹೆಂಡ್ತಿಗೆ ಹುಷಾರಿಲ್ಲೇನೋ?” ಮಾಗಿಯ ಚಳಿಗೆ ಶಾಲನ್ನು ಬಿಗಿಯಾಗಿ ಹೊದ್ದುಕೊಳ್ಳುತ್ತಾ ಕೇಳಿದನು ಮುಕುಂದಯ್ಯ.

“ಹುಷಾರಿದ್ದಾಳೆ…  ಹು ಹು ಹು! ಏನು ಚಳಿ!”

“ಮತ್ತೆ?”

“ನಾವು ಬರುವ ಮುನ್ನ ಚಿನ್ನಕ್ಕನ ಹತ್ತಿರವೆ ಮಲಗಿದ್ದಳು. “ನಾನು ಚಿನ್ನಕ್ಕನ ಕೂಡೆ ಮಲಗುತ್ತೇನೆ, ನೀನು ಬೇಕಾದರೆ ಜಗಲಿಯ ತೆಣೆಯಮೇಲೆ ಮಲಗಿಕೊ!” ಎಂದು ಬಿಟ್ಟಳಲ್ದಾ?”

ಕೆಳಗರಡಿಯಲ್ಲಿದ್ದ ಅಕ್ಕಿಕಲಬಿಯ ಪಕ್ಕದಲ್ಲಿ, ಕವಿದಿದ್ದ ಅರೆಗತ್ತಲಲ್ಲಿ ಚಿನ್ನಮ್ಮ ಪೀಂಚಲು ಮಾತಾಡುತ್ತಿದ್ದದ್ದೂ ಕೇಳಿಸಿತು. ಹೆಬ್ಬಾಗಿಲನ್ನು ತೆರೆದಿಡುವ ನೆವಮಾಡಿಕೊಂಡು ಮುಕುಂದಯ್ಯ ಅಲ್ಲಿಗೆ ಹೋಗಿ, ಹರಟೆ ಹೊಡೆಯುತ್ತಿದ್ದ ಅವರಿಬ್ಬರೂ ಬಲವಾಗಿ ಹೊದ್ದುಕೊಂಡು ತಂತಮ್ಮ ಹಾಸಗೆಯಲ್ಲಿದ್ದುದನ್ನು ಕದ್ದುನೋಡಿ, ನಡೆದಿದ್ದ ಸಂಗತಿ ಏನು ಎಂಬುದನ್ನು ಪ್ರತ್ಯಕ್ಷ ಮನದಟ್ಟು ಮಾಡಿಕೊಂಡನು. ಅವನ ಅಂತಃಕರಣದ ಆಕಾಶದಲ್ಲಿ ಕವಿದಿದ್ದ ಕಾರ್ಮೋಡವೆಲ್ಲ ಇದ್ದಕ್ಕಿದ್ದ ಹಾಗೆ ತೂರಿಹೋಗಿ, ಚೇತನಸಮಸ್ತವೂ ಸುಪ್ರಸನ್ನವಾದಂತಾಯಿತು: “ಅಯ್ಯೋ ದೇವರೆ, ಮೊದಲೇ ಗೊತ್ತಾಗಿದ್ದರೆ ಇಷ್ಟೆಲ್ಲಾ ಪಾಡುಪಡುವುದು ತಪ್ಪುತ್ತಿತ್ತಲ್ಲಾ!” ಎಂದುಕೊಂಡನು.

ಅಷ್ಟರಲ್ಲಿ ಮುಕುಂದಯ್ಯ ತೆರೆದಿಟ್ಟಿದ್ದ ಹೆಬ್ಬಾಗಿಲಾಚೆಗೆ (ಬಹುಶಃ ಸಣ್ಣ ಕೆಲಸಕ್ಕಿರಬೇಕು?) ಹೋಗಿದ್ದ ಐತ ಹು ಹು ಹು ಹು ಹು ಎನ್ನುತ್ತಾ ಒಳಗೆ ನುಗ್ಗಿ ಬಂದು ಮುರುವಿನೊಲೆಯ ಬಳಿಗೆ ಓಡಿ, ಚಳಿಕಾಯಿಸುತ್ತಾ ಕುಳಿತುಃ “ಹು ಹು ಹು! ಏನು ಚಳಿ, ಅಯ್ಯಾ? ಹು ಹು ಹು! ಕವಣ ಹೆಂಗೆ ಕರೀತಾ ಅದೆ? ಸೊಲ್ಪ ನೋಡಿ! ಹು ಹು ಹು!” ಎನ್ನುತ್ತಾ ಬೆಂಕಿಯ ಉರಿಯ ಹತ್ತಿರಕ್ಕೆ ಕೈ ಚಾಚಿದನು.

ಮುಕುಂದಯ್ಯ ಹೆಬ್ಬಾಗಿಲಾಚೆಗೆ ಕಣ್ಣುಹಾಯಿಸಿದಾಗ, ದಟ್ಟವಾಗಿ ಬೀಳುತ್ತಿದ್ದ ಮಾಗಿಯ ಮಂಜು ಹೊರಗಡೆಯ ಲೋಕಸಮಸ್ತವನ್ನೂ ಆವರಿಸಿ ಆಚ್ಛಾದಿಸಿ ಆಕ್ರಮಿಸಿ ನುಂಗಿಬಿಟ್ಟಿತ್ತು! ಗಿಡ, ಮರ, ಗುಡ್ಡ, ಬೆಟ್ಟ, ಮಲೆ, ಕಾಡು, ಗದ್ದೆ, ತೋಟ, ನೆಲ, ಬಾನು ಒಂದೂ ಇರಲಿಲ್ಲ. ದಟ್ಟೈಸಿ ಸುರಿಯುತ್ತಿದ್ದ ಕಾವಣದ ಮಹಾಶ್ವೇತ ಜಲಪ್ರಲಯದಲ್ಲಿ ಜಗಲ್ಲಯವಾದಂತಿತ್ತು!

“ಐತಾ, ಕೊನೆ ತೆಗಿಯಾಕೆ ಯಾರನ್ನಾದರೂ ಕರಕೊಂಡು ಬರಬೇಕಲ್ಲೋ” ಎನ್ನುತ್ತಾ ಮುಕುಂದಯ್ಯನೂ ಮುರುವಿನ ಒಲೆಯ ಬಳಿಗೆ ಬಂದು ಚಳಿ ಕಾಯಿಸುತ್ತಾ ನಿಂತನು.

ಸುಮಾರು ಸೊಂಟೆತ್ತರ ಇದ್ದ ‘ಮುರಿನೊಲೆ’ಗೆ ಕಚ್ಚಿದ್ದ ಆನೆಗಲು ದಪ್ಪದ ಹೆಗ್ಗುಂಟೆಗಳೂ ದಿಮ್ಮಿಗಳೂ ನಿಗಿನಿಗಿ ಕೆಂಗೆಂಡವಾಗಿ ಧಗಧಗಿಸಿ ಉರಿಯುತ್ತಿದ್ದುವು. ಹೇರೊಲೆಗೆ ಶಾಶ್ವತವಾಗಿ ಹೂಳಿಬಿಟ್ಟಿದ್ದ ಭಾರಿಯ ಹಂಡೆಯಲ್ಲಿ, ಬೆಳಿಗ್ಗೆ ಹಾಲು ಕರೆಯುವಾಗ ಎಮ್ಮೆ ಹಸುಗಳಿಗೆ ತಿಂಡಿಯಾಗಲಿರುವ ಮುರು, ತೊಕ ತೊಕ ತೊಕ ಸದ್ದು ಮಾಡಿ, ಆವಿಗಂಪು ಬೀರಿ ಕುದಿಯುತ್ತಿತ್ತು!

“ಪಿಜಿಣ ಇದ್ದಿದ್ರೆ ನಮಗೆ ಎಷ್ಟು ಅನುಕೂಲ ಆಗ್ತಿತ್ತು ಈಗ?…. ಅಡಕೆ ಮರ ಹತ್ತೋದ್ರಲ್ಲಿ ಅವನ್ನ ಬಿಟ್ಟರೆ ಇರಲಿಲ್ಲ, ಕೊಟ್ಟೆ ಕಟ್ಟೋಕ್ಕಾಗಲಿ, ಕೊನೆ ತೆಗೆಯೋಕ್ಕಾಗಲಿ!….  ಕುದುಕನ ಕಡೆಯೋರಿಗೆ ಹೇಳಿ, ಯಾರನ್ನಾದರೂ ಕರಕೊಂಡು ಬರ್ತೀನಯ್ಯಾ.” ಎನ್ನುತ್ತಾ ಐತ ತುಸು ಅತ್ತತ್ತ ಸರಿದುಕೊಂಡನು, ಮುಕುಂದಯ್ಯನಿಗೆ ಕುಳಿತುಕೊಳ್ಳಲು ಜಾಗ ಬಿಡುವಂತೆ.

“ಗದ್ದೆ ಕೊಯ್ಲಿಗೂ ಜನಾ ಗೊತ್ತು ಮಾಡಬೇಕೋ….  ಸುಮ್ಮನೆ ಕೂತರೆ ಆಗಾದಿಲ್ಲ….” ಎನ್ನುತ್ತಾ ಮುಕುಂದಯ್ಯ ಬೆಂಕಿಗೆ ಬೆನ್ನು ಕಾಯಿಸುವಂತೆ ಕುಳಿತುಕೊಂಡನು.

ತನ್ನ ದನಿಕೇಳಿ ಸುಖಿಸುವವಳು ತನ್ನ ಮಾತನ್ನು ಆಲಿಸುತ್ತಿದ್ದಾಳೆ ಎಂಬ ಸುಖಾನುಭವಕ್ಕಾಗಿಯೆ ಅವನು ಮಾತಾಡುತ್ತಿದ್ದಂತಿತ್ತು.

ಚಿನ್ನಮ್ಮ ಪೀಂಚಲು ಇಬ್ಬರೂ ಮಾತು ನಿಲ್ಲಿಸಿ, ನಿದ್ದೆ ಮಾಡುವವರಂತೆ ನಟಿಸುತ್ತಾ, ಗಡದ್ದಾಗಿ ಹೊದ್ದುಕೊಂಡು ಬೆಚ್ಚಗೆ ಮಲಗಿದ್ದರು: ಮುಟ್ಟಾದ ಮೂರು ದಿನವಾದರೂ ಮಲೆನಾಡಿನ ಮಹಿಳೆಯರಿಗೆ ನಿವೃತ್ತಿಜೀವನದ ವಿರಾಮದ ಹಕ್ಕು ಇರುತ್ತಿತ್ತಷ್ಟೇ!