ಬಿರು ಬಿಸಿಲಿನ ಬಾನಿನಲ್ಲಿ
ದೀರ್ಘ ಸರಳರೇಖೆಯೆಳೆವ
ಕೋಗಿಲೆಗಳ ಕೊರಳು
ಹೂಡಿ ಹೂಡಿ ಬಿಟ್ಟ ಹಾಗೆ
ಒಂದೇ ಒಂದು ಗುರಿಯ ಕಡೆಗೆ
ಕೂರ್ ದನಿಗಳ ಸರಳು !
ಕಾಮಳ್ಳಿಯ ಸಿಳ್ಳ ಕೇಳು :
ದನಿಯುಂಗುರವೆಸೆವ ಕೊರಳು
ಸುರುಳಿ ಸುರುಳಿ ಕಲ್ಪನೆಯೊಲು
ಮಲೆನಾಡಿನ ಮನದೊಳು !
ತೆರೆಮೊರೆಯುವ ಹಸುರು ನೊರೆಯ
ವನಸಮುದ್ರದೆದೆಯ ಮೇಲೆ
ಹಾಯಿದೋಣಿ ನಡೆವೊಲು !
ಟಗರುಮೈಯ ಬೆಟ್ಟಗಳಲಿ
ಹೆಪ್ಪುನಿಂತ ಹಸುರುಗಳಲಿ
ಬಿಸಿಲ ನೆನಪು ತೂರಿ ಬಂದು
ಬೆರಗಾಗಿಸೆ ಮೌನವ,
ನೂರು ಹಕ್ಕಿಯಿಂಚರಗಳ
ಲಾಳಿಯಾಡಿ ನೇಯುತಲಿದೆ
ಕಾಣದ ದೇವಾಂಗವ !
Leave A Comment