ಮಂಗಗಳು ಭಾಗಾಯತ ಪ್ರದೇಶಕ್ಕೆ ಅತಿಶಯ ಕೇಡು ಮಾಡುವ ಪ್ರಾಣಿಗಳು-ಕ್ರಿ,ಶ೧೯೨೮ರ ಮಾರ್ಚ ೩೦ಲ್ಲಿ ಕೆನರಾ ಕಲೆಕ್ಟರ್ ಎಚ್.ಡಿ.ಭಾಸ್ಕರವಿಲ್ಲೆ  ರಿವ್ಹಿಜನ್ ಸೆಟ್ಲಮೆಂಟ್ ವರದಿಯಲ್ಲಿ ಬರೆದಿದ್ದ ಸಾಲುಗಳಿವು. ಆಗ ಈ ಕೆನರಾದಲ್ಲಿ ಶೇಕಡಾ ೮೨.೮ ಪ್ರದೇಶ ಅರಣ್ಯವಿತ್ತು. ಕಾಡಿನ ನಡುವೆ ಕೃಷಿ ಭೂಮಿ, ಮಂಗಗಳಿಗೆ ಅಡವಿಯಲ್ಲೂ ಸಾಕಷ್ಟು ಹಣ್ಣು ಹಂಪಲುಗಳಿದ್ದವು. ಕೃಷಿ ಭೂಮಿಗೆ ಹಾನಿ ಮಾಡುವದೂ ಗಣನೀಯ ಪ್ರಮಾಣದಲ್ಲಿತ್ತು. ಮಂಗಗಳನ್ನು ಬೇಟೆಯಾಡಲು ಅವಕಾಶ ನೀಡಬೇಕೆಂದು  ಆಗ ಕೃಷಿಕರು ಹೋರಾಟ ನಡೆಸಿದ್ದರು. ಬೆಳೆ ಸಂರಕ್ಷಣಾ ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ಬೇಟೆಗಾರರನ್ನು ನೇಮಿಸಿಕೊಳ್ಳುವ ಅವಕಾಶವಿತ್ತು. ಕ್ರಿ.ಶ. ೧೯೪೧ರಲ್ಲಿ ಒಂದು ಮಂಗನನ್ನು ಹೊಡೆದರೆ ಒಂದು ರೂಪಾಯಿ ಪ್ರೋತ್ಸಾಹ ಹಣವನ್ನು ತಹಶೀಲ್ದಾರರು ನೀಡುತ್ತಿದ್ದರು, ಬೆಳೆ ರಕ್ಷಣಾ ಸಹಕಾರಿ ಸಂಘದವರು ಬೇಟೆಗಾರ ಕೊಂದ ಮಂಗಗಳ ಬಾಲಗಳನ್ನು ಕಡಿದು ಒಣಗಿಸಿಡುವ ಪರಿಪಾಠವಿತ್ತು. ವರ್ಷಕ್ಕೆ ಒಮ್ಮೆ ಮಂಗನ ಬಾಲದ ಕಟ್ಟುಗಳನ್ನು ಹೊತ್ತೊಯ್ದು ತಹಶೀಲ್ದಾರರ ಎದುರು ಎಣಿಸಿ ಬಾಲದ ಬಾಬತ್ತು ಪಡೆಯುತ್ತಿದ್ದರು. ಆಗ ಕೃಷಿ ಬೆಳೆಯ ಸಂರಕ್ಷಣೆಗೆ ಇದು ಒಂದು ಮಹತ್ವದ ಕಾರ್ಯಕ್ರಮವಾಗಿತ್ತು!

ಈಗ ಮಲೆನಾಡಿನ ಸ್ಥಿತಿ ಬದಲಾಗಿದೆ. ಬೃಹತ್ ಜಲವಿದ್ಯುತ್ ಯೋಜನೆಗಳು, ನೆಡುತೋಪು, ಜನಸಂಖ್ಯೆ ಏರಿಕೆ, ಅರಣ್ಯ ಅತಿಕ್ರಮಣಗಳು ನಡೆದಿವೆ, ಕೃಷಿ ಬೆಳೆದಿದೆ, ಕಾಡು ಕರಗಿದೆ. ಈಗ ಪರಿಸ್ಥಿತಿ ಹೇಗಿದೆ? ಮತ್ತೆ  ೮೦ ವರ್ಷಗಳ ಬಳಿಕವೂ ಕೃಷಿಕರು ಮಂಗಗಳ ಹಾವಳಿ ಬಗೆಗೆ ದೂರುತ್ತಿದ್ದಾರೆ! ಇತ್ತೀಚಿಗೆ ಶಿರಸಿಯಲ್ಲಿ ಮಂಗಗಳ ಹಾವಳಿ ಬಗೆಗೆ ಕೃಷಿಕರ ಸಮಾಲೋಚನ ಸಭೆ ನಡೆದಿದೆ. ಅಡಿಕೆ, ಭತ್ತ, ತೆಂಗು, ಬಾಳೆ, ಏಲಕ್ಕಿ, ಕಾಫಿ, ಕಬ್ಬು, ಗೇರು, ಮಾವು, ತರಕಾರಿ, ಹಲಸು ಹೀಗೆ ಬಹುತೇಕ ಬೆಳೆಗಳೆಲ್ಲ  ಈಗ ಮಂಗಗಳು ಉಳಿಸಿದರೆ ಕೃಷಿಕರಿಗೆ ಎನ್ನುವ ಪರಿಸ್ಥಿತಿ ತಲೆದೋರಿದೆ. ಈಗ ಹೊಸದಾಗಿ ಶುಂಠಿಗೂ ಕಾಟ ಶುರುವಾಗಿದೆ. ಅರಣ್ಯದ ನಡುವಿನ ಪ್ರದೇಶದಲ್ಲಿ ಇರುವ ಮಂಗಗಳ ಸಾಂದ್ರತೆಗಿಂತ ಕೃಷಿ ವಲಯದ ಸುತ್ತ, ಹಳ್ಳಿ, ಪೇಟೆಗಳಲ್ಲಿರುವ ಮಂಗಗಳ ಸಂಖ್ಯೆ ಜಾಸ್ತಿಯಾಗಿದೆ. ಕಾಗೆ, ಗುಬ್ಬಿಗಳು ಹೇಗೆ ಮಾನವ ವಸತಿಗಳ ಸುತ್ತ ನೆರೆಯುತ್ತವೆಯೋ ಹಾಗೇ ಮಂಗಗಳೂ ಹೊಸ ಸೇರ್ಪಡೆಯಾಗಿವೆ.

ಕಪ್ಪು ಮೂತಿಯ ಹಾಗೂ ಬಿಳಿ(ಕೆಂಪು)ಮೂತಿಯ ಎರಡು ಜಾತಿಯ ಮಂಗಗಳನ್ನು ನಾವು ಮಲೆನಾಡಿನಲ್ಲಿ ಗಮನಿಸಬಹುದು. ಈ ಎರಡು ಜಾತಿಯವೂ ಕೃಷಿ ಬೆಳೆಗೆ ಹಾನಿ ಮಾಡುತ್ತವೆಯಾದರೂ ಹೆಚ್ಚು ಸವಾಲು ಒಡ್ಡಿರುವವು ಬಿಳಿ ಮೂತಿಯವು! ಅತಿಯಾದ ಬುದ್ದಿವಂತಿಕೆ, ತಂಡದಲ್ಲಿ ಕಾರ್ಯಾಚರಣೆ, ಕಣ್ತಪ್ಪಿಸಿ ಬೆಳೆ ಲಪಟಾಯಿಸುವ ಚಾಣಾಕ್ಷತೆ, ನಿಯಂತ್ರಣದ ಹೊಸ ಹೊಸ ತಂತ್ರಗಳನ್ನು ಎದುರಿಸಿ ಬದುಕಬಲ್ಲ ಗಟ್ಟಿತನ ಮಲೆನಾಡಿಗೆಲ್ಲ ಇವುಗಳ ಸಮಸ್ಯೆ ವ್ಯಾಪಿಸಿದೆ. ಒಂದೊಂದು ತಂಡದಲ್ಲಿ ಕನಿಷ್ಟ ೧೦ರಿಂದ ೫೦-೬೦ ಸಂಖ್ಯೆಯಲ್ಲಿ  ಇರುವದು ವಿಶೇಷ. ವರ್ಷಕ್ಕೆ ಒಂದು ಮರಿ ಹಾಕುತ್ತವೆ, ೧೫-೨೦ವರ್ಷ ಬದುಕುತ್ತವೆ. ಆಹಾರ, ತರಕಾರಿಗಳಲ್ಲಂತೂ ಬೆಳೆ ನಾಟಿಯಿಂದ ಫಸಲು ಬರುವವರೆಗೂ ಇವು ಹಾನಿನೀಡುತ್ತಿವೆ. ಇನ್ನು ತೋಟಗಾರಿಕಾ ಬೆಳೆಗಳಲ್ಲಂತೂ ಹೂವಿನಿಂದ ಹಣ್ಣಾಗುವರೆಗೂ  ಹಾವಳಿ ನೀಡುತ್ತಿವೆ. ಮನೆಯ ಅಂಗಳದಲ್ಲಿಟ್ಟ ಫಸಲನ್ನು ಎತ್ತಿ ತಿನ್ನುವಷ್ಟು ಪ್ರಭಾವಿಯಾಗಿವೆ. ನಗರಗಳಲ್ಲಂತೂ ಅಡುಗೆ ಮನೆಯ ಹೆಂಚು ತೆಗೆದು ತಯಾರಿಸಿದ ಆಹಾರ ಲಪಟಾಯಿಸಿದ ಪ್ರಸಂಗಗಳಿವೆ.

ಮಲೆನಾಡಿನಲ್ಲಿ ಅಲೆಮಾರಿಗಳಾಗಿದ್ದ ಹಾವುಗೊಲ್ಲರು ತೋಟಗಳಲ್ಲಿ ಮಂಗಗಳ ಬೇಟೆ ನಡೆಸುತ್ತಿದ್ದರು. ಹಳ್ಳಿಯ ಮನೆ ಮನೆಗಳಲ್ಲಿರುವ ನಾಯಿಗಳು ಮಂಗಗಳನ್ನು ಹಿಡಿಯುವಲ್ಲಿ ಪಳಗಿದ್ದವು. ಕೃಷಿಕರು ಕಲ್ಲೆಸೆದರೆ, ಕೂಗು ಹಾಕಿದರೆ ಭಯದಿಂದ ತೋಟದಿಂದ ಕಾಲ್ತೆಗೆಯುತ್ತಿದ್ದವು. ಈಗ ಇವು ಯಾವುದಕ್ಕೂ ಅಂಜುತ್ತಿಲ್ಲ! ಶಿವಮೊಗ್ಗ ಹೊಸನಗರ ತಾಲೂಕಿನ ಅರಮನೆಕೊಪ್ಪದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮಂಗಗಳ ಬಗೆಗೆ ದೊಡ್ಡ ಚರ್ಚೆ ನಡೆದಿತ್ತು.  ಮಂಗಗಳ ಹಾವಳಿಯಿಂದ ಬಾಳೆಗೊನೆ ನಾಶವಾಯಿತೆಂದೂ, ಈಗ ದೂರದ  ತಮಿಳುನಾಡಿನ ಬಾಳೆಹಣ್ಣು ಮಾರುಕಟ್ಟೆಯಿಂದ ತಂದು ತಿನ್ನುತ್ತಿದ್ದೇವೆಂದು ಜನ ದೂರಿದರು. ವಿವರ ಕೆದಕಿದರೆ ಬಾಳೆಗೊನೆ, ಎಳೆ ಅಡಿಕೆ, ತೆಂಗು, ಲಿಂಬು, ಹಲಸು, ನುಗ್ಗೆ, ಪಪಾಯ, ತರಕಾರಿ ಎಲ್ಲವೂ ಮಂಗಗಳ ಪಾಲಾಗುತ್ತಿವೆಯಂತೆ!. ಏಲಕ್ಕಿ ಬೆಳೆಯುತ್ತಿದ್ದ ಅಡಿಕೆ ತೋಟಿಗರು ಈಗ ಮಂಗಗಳಿಗೆ ಅಂಜಿ ಕೃಷಿ ಕೈಬಿಟ್ಟಿದ್ದಾರೆ. ಮಂಗಗಳ ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕು, ಬೋನುಗಳಲ್ಲಿ ವಹಿಡಿದು ದೂರದ ಕಾಡಿಗೆ ಬಿಡಬೇಕು, ಕಾಡಲ್ಲಿ ಮಂಗಗಳಿಗೆ ಆಹಾರ ನೀಡುವ ಸಸ್ಯ ಬೆಳೆಸಬೇಕು ಎಂಬ ಸಲಹೆಗಳು ವ್ಯಕ್ತವಾದವು. ದಕ್ಷಿಣ ಕನ್ನಡದಲ್ಲಿ ಕೃಷಿಕರೊಬ್ಬರು ಮಂಗವೊಂದನ್ನು ಸಾಕಿದ್ದಾರೆಂದೂ, ಸಾಕಿದ ಮಂಗ ಹಿಡಿದು ತೋಟ ಅಡ್ಡಾಡಿದರೆ ಕಾಡಿನ ಮಂಗಗಳು ತೋಟಕ್ಕೆ ಬರುವದಿಲ್ಲವೆಂದು ಕೆಲವರು ಸಲಹೆ ಎದುರಿಟ್ಟರು. ಕೈಯಲ್ಲಿ ಹಿಡಿದ ಬಾಳೆಹಣ್ಣು ಕಸಿದು ಕೊಳ್ಳುವಷ್ಟು ಸಲುಗೆ ಇವಕ್ಕೆ ಬೆಳೆದಿದೆ ಎಂದು ಪರಿಸ್ಥಿತಿ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

ಮಂಗಗಳು ತಿನ್ನುವ ಹಣ್ಣು ಹಂಪಲು ಸಸಿ ಅರಣ್ಯದಲ್ಲಿ ಬೆಳೆಸಬೇಕು ಸಲಹೆ  ಉತ್ತಮ. ‘ಈಗ ಹಣ್ಣು ಹಂಪಲು ಸಸಿ ನೆಟ್ಟರೆ ಇನ್ನು ೨೫-೩೦ವರ್ಷಕ್ಕೆ ಅವು ಮರವಾಗಿ ಫಲ ಕೊಡಬಹುದು, ಅಲ್ಲಿಯವರಗೆ ನಮ್ಮ ಕೃಷಿ ಕತೆ ಏನಾಗುತ್ತದೋ !’ ಆತಂಕಕ್ಕೆ ಯಾರಲ್ಲಿಯೂ ಉತ್ತರವಿರಲಿಲ್ಲ. ರಣ ಹದ್ದುಗಳು ಮಂಗಗಳ ಮರಿಗಳನ್ನು ಹೊತ್ತು ಒಯ್ಯುತ್ತಿದ್ದವು. ಇದರಿಂದ ನಿಯಂತ್ರಣವಾಗುತ್ತಿತ್ತು. ಈಗ ರಣಹದ್ದು ನಾಶವಾಗಿದ್ದರಿಂದ ಮಂಗಗಳ ಸಂಖ್ಯಾಸ್ಪೋಟವಾಗಿದೆಯೆಂಬ ಮಾತಿದೆ.

ಅರಣ್ಯ ಇಲಾಖೆಯಲ್ಲಿ ಹುಲಿ, ಆನೆ, ಚಿರತೆ, ಜಿಂಕೆಗಳಿಗೆ ಇರುವ ಗಮನ ಮಂಗಗಳತ್ತ ಇಲ್ಲ. ಎಲ್ಲ ಅರಣ್ಯ ಅಧಿಕಾರಿಗಳು   ‘ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು…..’ಎಂಬ ಸಾಲು ಶಾಲೆಯಲ್ಲಿ ಓದಿದವರು. ಹೀಗಾಗಿ  ಕೃಷಿ ಜೊತೆಗೆ ನಾವು ಮಂಗಗಳನ್ನು ಸಾಕುತ್ತೇವೆಂದು ಖಾತ್ರಿಯಾಗಿ ತಿಳಿದವರು. ಆದರೆ ಒಂದು ಕಾಲದಲ್ಲಿ ಆಗಾಗ ತೋಟಕ್ಕೆ ಬರುತ್ತಿದ್ದವು ಈಗ ತೋಟದ ಮೂಲ ನಿವಾಸಿಗಳಾದದ್ದು ಎಲ್ಲಡೆ ದೊಡ್ಡ ಸಮಸ್ಯೆಯಾಯಿತು. ಶಿರಸಿ ನಗರಸಭೆ ಕೊಲ್ಲಾಪುರದಿಂದ ಕೋತಿ ಹಿಡಿಯುವವರನ್ನು ಕರೆಸಿ ಪ್ರತಿ ಮಂಗಕ್ಕೆ ತಲಾ ೫೦ ರೂಪಾಯಿ ನೀಡಿ  ೪೦೦ಕ್ಕೂ ಹೆಚ್ಚು ಮಂಗಗಳನ್ನು ಹಿಡಿಸಿ ಕಾಡಿಗೆ ರವಾನಿಸಿತು. ಈಗ ‘ಪೇಟೆ ಮಂಗಗಳ ಕಾಡಿನ ಲೈಫು’ ಕಾರ್ಯಕ್ರಮ ಶುರುವಾಯ್ತು. ಪೇಟೆ ಬದುಕಿಗೆ ಅಂಟಿದವು ಕಾಡಲ್ಲಿ ಆಹಾರ ಹುಡುಕಲು ಸೋತವು! ಮರದ ಸೊಪ್ಪು, ಹಣ್ಣು ಯಾವುದರತ್ತಲೂ ಗಮನ ಹರಿಸದೇ ಹೆದ್ದಾರಿಗೆ ಬಂದು ಸಾಲು ಹಚ್ಚಿ ಘಟ್ಟಗಳಲ್ಲಿ ನಿರಶನಕ್ಕೆ ಕುಳಿತವು. ದಾರಿಹೋಕರಿಂದ ಏನಾದರೂ ತಿಂಡಿ ಸಿಗುವ ಆಸೆ ಅವಕ್ಕೆ!

ವನ್ಯ ಸಂಕುಲಗಳ ದೈನೇಸಿ ಬದುಕಿಗೆ ಮೂಲಕಾರಣ ಏನು ಎಂದು ಇವತ್ತಿಗೂ ನಾವು ಯೋಚಿಸಿಲ್ಲ. ಅರಣ್ಯದ ಮೇಲೆ ನಮ್ಮ ಆಕ್ರಮಣವೂ ಒಂದು ಕಾರಣ ಎಂದು ಒಪ್ಪಬೇಕಾಗಿದೆ. ಇದರ ಜತೆಗೆ ನಮ್ಮ ಅರಣ್ಯಾಭಿವೃದ್ಧಿಯ ಆದ್ಯತೆಯ ಪರಿಣಾಮವೂ ಇದರಲ್ಲಿದೆ. ನೈಸರ್ಗಿಕ ಅರಣ್ಯದ ರಕ್ಷಣೆಗೆ ಜಾಗೃತಿ ಮೂಡಿಸುವದು, ರಕ್ಷಣೆಗೆ ಬೇಲಿ ನಿಮಿಸುವ ಕೆಲಸ ಮರೆತರು. ಸಾಗವಾನಿ, ನೀಲಗಿರಿ, ಅಕೇಸಿಯಾ, ಗಾಳಿ ಮುಂತಾದ ಎಕಜಾತಿ ನೆಡುತೋಪು ಅಭಿವೃದ್ಧಿಗೆ ಹಣ ವಿನಿಯೋಗಕ್ಕೆ ಮಾತ್ರ ಆದ್ಯತೆ ನೀಡಿದರು. ಹಸಿಮರ ಕಟಾವು, ಒಣಮರ ಕಟಾವು ಎಂದು ಕಾಡು ಕರಗಿಸುವ ಕಾಯಕ ನಡೆಸಿದರು. ಅರಣ್ಯ ನಾಶವಾದಲ್ಲಿ  ಒಂದೊಂದು ಪ್ರದೇಶದಲ್ಲಿ  ಭತ್ತದ ಸಸಿ ನೆಡುವಂತೆ ಒಂದೊಂದು ಊರಲ್ಲಿ ನೂರಾರು ಹೆಕ್ಟೇರ್ ಅಕೇಸಿಯಾ ನೆಟ್ಟರು. ವನ್ಯಪ್ರಾಣಿಗಳ ಆಹಾರಕ್ಕೆ ಅಗತ್ಯ ಸೊಪ್ಪು ನೀಡುವ ಸಸ್ಯ ಬೆಳೆಸಲು ಗಮನ ನೀಡಲಿಲ್ಲ. ಈಗ ಆಹಾರ ಹುಡುಕುತ್ತ ಕಾಡಿನ ಜೀವಿ ನಾಡಿಗೆ ಬಂದವು. ಅಬ್ಬಾ! ಇಲ್ಲಿ ವನ್ಯಜೀವಿಗಳು ವನವಾಸಿ ಬದುಕು ಮರೆತವು! ನಮ್ಮ ಈಗಿನ ಪರಿಸರ ಮಂಗಗಳಿಗೆ ಹೇಗೆ ಅನುಕೂಲವಾಗಿದೆಯೋ ಹಾಗೇ ಮಂಗಗಳ ನೈಸರ್ಗಿಕ ಶತ್ರುವಿಗೆ ಪ್ರತಿಕೂಲವಾಗಿದೆ. ನೈಸರ್ಗಿಕ ಶತ್ರುಗಳಾದ ಚಿರತೆಗಳೂ ಕಡಿಮೆಯಾಗಿವೆ. ಈಗ ಕಾಡು(ವ) ಕೋತಿ ನಿಯಂತ್ರಣ ಹೇಗೆ? ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸಬೇಕು, ಅವುಗಳ ಕಾಡಿನ ಆಹಾರ ದೊರೆಯುವಂತೆ ಮಾಡಬೇಕು ಎಂಬ ಸಲಹೆಗಳಿವೆ. ವನ್ಯಜೀವಿಯ ಹಾನಿ ಅಂದಾಜಿಸಿ ಕೃಷಿ ಬೆಳೆಗೆ ಕೋತಿ ಪ್ಯಾಕೇಜ್ ನೀಡಬೇಕು, ಬೆಳೆ ರಕ್ಷಣೆಗೆ ಬಲೆ ಕಟ್ಟಲು ನೆರವು ನೀಡಬೇಕು ಸಲಹೆಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಕ್ರಮೇಣ ಕೃಷಿಗೂ, ಕಾಡಿಗೂ ಸಂಬಂಧವಿರುವಂತೆ ನಮ್ಮ ಬೆಳೆ ಸ್ವರೂಪಗಳಲ್ಲಿ  ಅನಲಾಗ್ ಫಾರೆಸ್ಟ್ (ಕಾನ್ ತೋಟ) ಮಾರ್ಪಾಟು ಮಾಡುವ ತಂತ್ರ ಅಳವಡಿಸುವದು ಮುಖ್ಯವಾದುದು. ಕಾಡು-ಕೃಷಿಯಲ್ಲಿ ಬೆಳೆ ವೈವಿಧ್ಯ ಪೋಷಣೆಗೆ ಆದ್ಯತೆ ನೀಡುವ ಕ್ರಮ ಭವಿಷ್ಯದ ದೃಷ್ಟಿಯಿಂದ ಅನುಕೂಲವಾಗಬಹುದು.