ಚೈತ್ರಮಾಸದ ಪ್ರಾತಃಕಾಲದ ವಾಯುಮಂಡಲ ಸ್ಫಟಿಕದಂತೆ ನಿರ್ಮಲವಾಗಿತ್ತು. ನಮ್ಮ ಮನೆಯ ಮುಂದುಗಡೆ ಕೊಬ್ಬಿ ನಳನಳಿಸಿ ದಟ್ಟವಾಗಿ ಬೆಳೆದ ಕಾಡುತುಂಬಿದ ಬೆಟ್ಟದ ಸಾಲಿನ ನೆತ್ತಿಯ ಹಿಂದುಗಡೆಯಲ್ಲಿ ಅರುಣರಾಗ ನಿಮಿಷ ನಿಮಿಷಕ್ಕೂ ಹೊರೆಯೇರುತ್ತಿತ್ತು. ಸುತ್ತಮುತ್ತಲೂ ಮರಗಳಿಂದಲೂ ಪೊದೆಗಳಿಂದಲೂ ನೂರಾರು ಪಕ್ಷಿಗಳ ಮಂಗಲ ಮಂಜುಲಗಾನ ತೇಲಿಬಂದು ಹೃದಯ ಸಮುದ್ರದಲ್ಲಿ ಹರ್ಷತರಂಗಗಳನ್ನೆಬ್ಬಿಸಿತ್ತು. ನಾನು ನಮ್ಮ ಮನೆಯ ಉಪ್ಪರಿಗೆಯ ಮೇಲೆ ಪೂರ್ವಮುಖವಾಗಿ ಕುಳಿತು ರನ್ನನ ವೀರಕೌರವನ ವಿಚಾರವಾಗಿ ಯೋಚಿಸುತ್ತಿದ್ದೆ. ನೋಡುತ್ತಿದ್ದ ಹಾಗೆಯೆ ಬಾಲಸೂರ್ಯನ ಕೋಮಲಕಿರಣಗಳು ಗಿರಿಶಿಖರದಿಂದ ಹಸುರು ಬನಗಳ ಮೇಲೆ ಓರೆಯಾಗಿ ಕೆಳಗಿಳಿದು ಬಂದು ನನ್ನ ಮುಖವನ್ನು ತಮ್ಮ ಹೊಂಬೆಳಕಿನಿಂದ ಮೀಯಿಸಿದವು; ಕಣ್ಣನ್ನು ಸೊಗದ ನೀರಿನಿಂದ ತೋಯಿಸಿದುವು. ಹಸುಳೆಬಿಸಿಲಿನ ಮುದ್ದು ಮುತ್ತಿನ ಮಿದುಬಿಸಿ ಅರೋಗದೃಢಕಾಯವಾಗಿದ್ದ ನನ್ನ ದೇಹಸಮಸ್ತವನ್ನೂ ನವಚೇತನದ ಮಿಂಚಿನಿಂದ ನಡುಗಿಸಿತು. ನಿರ್ನಿಮಿತ್ತವಾಗಿ ಮುಗುಳುನಗೆಯೊಂದು ನನ್ನ ಮೊಗದ ಮೇಲೆ ನಲಿದಾಡಿತು. ಜೀವನವೂ ಜಗತ್ತೂ ಸುಖಮುದ್ರಿತವಾದಂತೆ ತೋರಿತು. ಅಡಕೆತೋಟದ ನಡುವೆ ಬಾಳೆ ಎಲೆಗಳಮೇಲೆ ರಮಣೀಯವಾಗಿ ಕುಣಿಕುಣಿಯುತ್ತಿದ್ದ ಹಸುರುಗಟ್ಟಿದ ಬಿಸಿಲುಕೋಲುಗಳು ನನ್ನ ಅನುಭವವನ್ನೆ ಸಮರ್ಥಿಸುವಂತೆ ತೋರುತ್ತಿತ್ತು.

ಅಷ್ಟು ಹೊತ್ತಿಗೆ ಪುಟ್ಟಣ್ಣ ಬಂದು “ಜೇನುಕೀಳಲು ಹೋಗೋಣ” ಎಂದನು.

ನಾನು ಧ್ಯಾನನಿದ್ರೆಯಿಂದ ತಟಕ್ಕನೆ ಎಚ್ಚತ್ತು ಅವನ ಕಡೆ ನೋಡಿದೆ. ಅವನ ಮುಖ ನಗುತ್ತಿತ್ತು; ಹೊಸ ಸಾಹಸದ ಹುರುಪು ಕಣ್ಣುಗಳಲ್ಲಿ ಮಿಂಚಿತ್ತು. ನನಗೆ ಹಿಂದಿನ ದಿನ ಸಾಯಂಕಾಲ ನಾವು ಮಾಡಿದ ನಿರ್ಣಯದ ನೆನಪಾಗಿ ಹಿಗ್ಗಿದೆ.

“ಎಷ್ಟು ದೂರ?” ಎಂದೆ.

“ಹೆಚ್ಚು ದೂರ ಇಲ್ಲ; ಇಲ್ಲೇ ಬಹಳ ಸಮೀಪ” ಎಂದನು. ಆಮೇಲೆ ಅವನ ‘ಸಮೀಪ’ದ ಅರ್ಥ ನನಗೆ ಚೆನ್ನಾಗಿ ಅನುಭವಕ್ಕೆ ಬಂತು.

ಅಷ್ಟರಲ್ಲಿಯೆ ನನ್ನ ಮಿತ್ರರಾದ ಹೆಗ್ಗಡೆಯವರೂ ಏಣಿಯ ಮೆಟ್ಟಲುಗಳನ್ನು ಕಿರಚಿಕೊಳ್ಳುವಂತೆ ಮಾಡುತ್ತಾ ಮೇಲೆ ಬಂದು “ಹೋಗೋಣ? ಏಳಿ!” ಎಂದರು. ರನ್ನನವೀರ ಕೌರವನನ್ನು ಗದಾಯುದ್ಧದಲ್ಲಿಯೆ ಮುಚ್ಚಿಟ್ಟು ಅವಸರದಿಂದ ಮೇಲೆದ್ದ. ಬೇಟೆಯುಡುಪು ಹಾಕಿಕೊಂಡು, ಕೋವಿಗಳನ್ನು ಹೆಗಲಿಗೇರಿಸಿ, ಹೆಬ್ಬಾಗಿಲಿಂದ ಹೊರಬಿದ್ದೆವು.

ಹೊರಟವನು ನಾವು ಒಟ್ಟು ಐದು ಮಂದಿ; ನಾನು, ಪುಟ್ಟಣ್ಣ, ಹೆಗ್ಗಡೆಯವರು, ಇಬ್ರಾಹಿ, ಹಳೆಪೈಕದ ಪುಟ್ಟ. ಇಬ್ರಾಹಿ ನಮ್ಮ ಮನೆಯಲ್ಲಿ ಕಲ್ಲು ಕಟ್ಟಣೆ ಕೆಲಸ ಮಾಡುತ್ತಿದ್ದ ಸಾಬರಹುಡುಗ. ಇವೊತ್ತು ಭಾನುವಾರವಾದ್ದರಿಂದ ಅವನ ಹಿರಿಯವರೆಲ್ಲ ಕೊಪ್ಪದ ಸಂತೆಗೆ ಹೋಗಿದ್ದರು. ಇಬ್ರಾಹಿಗೆ ಸ್ವಾತಂತ್ರ್ಯದ ಹಬ್ಬ! ನಾವು ಕಾಡಿಗೆ ಹೊರಡಲು ಅವನೂ ಹೊರಟ. ಅವನ ಕೈಯಲ್ಲಿ ಒಂದು ಕೈಗೊಡಲಿ ಹೊರಿಸಿದೆವು. ಹಳೆಪೈಕದ ಪುಟ್ಟ ನಮ್ಮ ಒಕ್ಕಲು. ಅವನು ಒಂದು ಜೇಡನು ಕಂಡಿದ್ದ. ಅದನ್ನು ತೋರಿಸಲೆಂದೇ ಅವನು ನಮ್ಮ ಜೊತೆಗೆ ಬಂದದ್ದು. ಅವನ ತಲೆಯ ಮೇಲೆ ಜೇನು ತುಂಬಲು ಬೇಕಾಗಿದ್ದ ಒಂದು ಬೋಗುಣಿ ಹೇರಿದೆವು. ಇನ್ನು ಹೆಗ್ಗಡೆಯವರು ಯಾರೆಂದು ನಿಮಗೆ ಕುತೂಹಲ ಹುಟ್ಟಬಹುದು. ಬಹು ಸಂಕ್ಷೇಪವಾಗಿ ಹೇಳುವುದಾದರೆ, ಅವರು ನಮ್ಮ ಮನೆಯಲ್ಲಿ ಕರಣಿಕರಾಗಿದ್ದರು. ಇನ್ನು ಪುಟ್ಟಣ್ಣ! ಅವನ ಕತೆ ದೊಡ್ಡದು. ಇನ್ನಾವಾಗಲಾದರೂ ಸಮಯ ಬಿದ್ದಾಗ ಪ್ರಸ್ತಾಪಿಸುತ್ತೇನೆ. ಆದರೆ ಈಗಿನ ಸಂದರ್ಭಕ್ಕೆ ಅಗತ್ಯವಾಗಿ ಬೇಕಾಗಿರುವ ಒಂದೇ ಒಂದು ಮಾತು ಹೇಳುತ್ತೇನೆ: ಅವನೊಬ್ಬ ಕೆಚ್ಚೆದೆಯ ಕಡುಗಲಿ ಬೇಟೆಗಾರ!

ನಾವೆಲ್ಲರೂ ಹೆಬ್ಬಾಗಿಲು ದಾಟಿ ಹೊರ ಅಂಗಳಕ್ಕೆ ಹೋಗಲು, ಪುಟ್ಟಣ್ಣ ಸಿಳ್ಳು ಹಾಕಿ ನಾಯಿಗಳನ್ನು ಕರೆದ. ಎಲ್ಲವೂ ಓಡಿಬಂದು ಕಾಡಿಗೆ ಹೋಗುವ ಸಂತೋಷದಿಂದ ನಮ್ಮ ಮೈಮೇಲೆ ಹಾರಿ ನೆಗೆದು ಕುಣಿದು ಬಾಲವಲ್ಲಾಡಿಸಿ ಬೊಗಳುತ್ತ ಗಲಾಟೆ ಎಬ್ಬಿಸಿದುವು. ಡೈಮಂಡನ್ನು ಮಾತ್ರ ಪುಟ್ಟಣ್ಣ ಹೆದರಿಸಿ ಹಿಂದಕ್ಕೆ ಅಟ್ಟಿದನು. ಏಕೆಂದರೆ, ಹಿಂದಿನ ದಿನದ ಬೇಟೆಯಲ್ಲಿ ಅದನ್ನು ಕಾಡು ಹಂದಿಯೊಂದು ಕೋರೆಯಿಂದ ತಿವಿದು ಪೂರಾ ಗಾಯಮಾಡಿತ್ತು. ಆ ನಾಯಿಯಂತೂ ಹಿಂದಕ್ಕುಳಿದು ಖಿನ್ನಮುಖದಿಂದ ನಾವು ಹೋಗುವುದನ್ನೇ ನಿರ್ನಿವೇಷವಾಗಿ ನೋಡುತ್ತಿತ್ತು.

ನಮ್ಮ ಗದ್ದೆ, ಹಡಗಿನ ಮಕ್ಕಿಯ ಗಡಬಡೆಹಳ್ಳ, ಅಲ್ಲಿಂದ ಮೇಲೆ ಕಲ್ಲು ಕೊಡಿಗೆಯ ಬಳಿಯ ಸರ್ಕಾರಿ ರಸ್ತೆ, ಎಲ್ಲವನ್ನೂ ಬೇಗಬೇಗನೆ ಹಿಂದೆ ಬಿಟ್ಟು ಕಾಡು ಹತ್ತಿದೆವು. ದಾರಿಯಲ್ಲಿ ಹರಟೆಗಳಿಗೇನೂ ಬಡತನವಿರಲಿಲ್ಲ. ಪುಟ್ಟಣ್ಣ ಹಿಂದಿನ ದಿನದ ಬೇಟೆಯಲ್ಲಿ ಸದಿಸೆಟ್ಟಿ ಬಹು ಸುಲಭದಲ್ಲಿ ಹಂದಿಯೊಂದನ್ನು ಹೊಡೆಯದೆ ಬಿಟ್ಟ ವಿಚಾರವನ್ನು ವರ್ಣಿಸಿ ವರ್ಣಿಸಿ ವಿಷಾದಪಟ್ಟನು. ಹಳೆ ಪೈಕದ ಪುಟ್ಟ ಬರ್ಲಹರೆ ಕಾನಿಗೆ ಮಿಗಹಂದಿಗಳು ಬಂದ ಸುದ್ದಿ ತೆಗೆದು ಅರ್ಧ ಗಂಟೆ ಉಪನ್ಯಾಸ ಮಾಡಿದ. ಮಧ್ಯೆಮಧ್ಯೆ ದಾರಿಯಲ್ಲಿ (ದಾರಿಯೆಂದರೆ ದಾರಿಯಲ್ಲ ; ನಾವು ಹೋಗುತ್ತಿದ್ದುದೇ ದಾರಿ!) ಪುಟ್ಟಣ್ಣ ಅಲ್ಲಲ್ಲಿ ನಿಂತು ಅರಣ್ಯದ ಸುಪ್ರಸಿದ್ಧ ಐತಿಹಾಸಿಕ ಸ್ಥಳಗಳನ್ನು ತೋರಿಸದ. ಒಂದೆಡೆ ಜಟ್ಟಿನ ಮಕ್ಕಿ ಸುಬ್ಬಯ್ಯಗೌಡರು ಹುಲಿ ಬಿಟ್ಟ ಸ್ಥಳವೆಂದು ತೋರಿದ. ಅವರು ಕೂತಿದ್ದ ಮರದ ಹರೆಯನ್ನೂ ಹುಲಿ ಬಂದ ಮಾರ್ಗವನ್ನೂ ಹುಲಿ ಕುಳಿತ ಜಾಗವನ್ನೂ ಎಲ್ಲಾ ತೋರಿಸಿ, ಅವುಗಳ ಮೇಲೆ ವ್ಯಾಖ್ಯಾನ ಟೀಕೆಗಳನ್ನೂ ಮಾಡಿಬಿಟ್ಟ. ಮತ್ತೊಂದೆಡೆ ತಾನೇ ಒಂದು ದೊಡ್ಡ ಹಂದಿ ಹೊಡೆದ ಸ್ಥಳವೆಂದು ತೋರಿದ. ಅವನು ಕೂತಿದ್ದ ಮರದ ಬುಡವನ್ನೂ ಹಂದಿ ಅರಣ್ಯದಲ್ಲಿ ಬಂದ ದಿಕ್ಕನ್ನೂ ಗುರುತುಹಚ್ಚಿ ತೋರಿದಮೇಲೆ, ತಾನು ಮೊದಲನೆಯ ಗುಂಡು ಹಾರಿಸಿದ ಜಾಗವನ್ನೂ ಎರಡನೆಯ ಈಡುಹೊಡೆದ ಸ್ಥಳವನ್ನೂ ತೋರಿಸಿದ. ಹೀಗೆ ಹರಟೆ ಹೊಡೆಯುತ್ತ, ನೇರಿಲಹಣ್ಣು, ಮಾವಿನ ಹಣ್ಣು, ಕಲ್ಲು ಸಂಪಿಗೆಹಣ್ಣು ಮೊದಲಾದುವುಗಳನ್ನು ಮನಸ್ಸು ಬಂದಂತೆ ತಿನ್ನುತ್ತ ಮುಂದೆಮುಂದೆ ಜವದಿಂದ ಸಾಗಿದೆವು. ನಾಯಿಗಳಂತೂ ಅವಿಶ್ರಾಂತ ಸಾಹಸದಿಂದ ಕಾಡನ್ನೆಲ್ಲ ಹುಡುಕುತ್ತ ಬರುತ್ತಿದ್ದುವು.

ಸಹ್ಯಾದ್ರಿಗಳ ಚೈತ್ರಮಾಸದ ಅರಣ್ಯ ನಮ್ಮೆಲ್ಲರ ಹೃದಯಗಳಲ್ಲಿಯೂ ಶಾಂತಿ ಸಂತೋಷಗಳ ಚಿಲುಮೆ ಚಿಮ್ಮುವಂತೆ ಮಾಡಿತ್ತು. ನಾನು ತಿಳಿದು ಆನಂದಪಡುತ್ತಿದ್ದೆ; ನನ್ನ ಜೊತೆಯವರು ತಿಳಿಯದೆ ಆನಂದಪಡುತ್ತಿದ್ದರು. ಎತ್ತ ನೋಡಿದರೂ ಕಣ್ಣಿಗೆ ತಣ್ಣಗಿದ್ದ ಹಸುರಿನ ಸಾಗರ ಮೇಲೇರುತ್ತಿದ್ದ ಸೂರ್ಯನ ಉರಿಜೀವವನ್ನು ಆರಿಸಿಬಿಟ್ಟಿತ್ತು. ಸಾಂದ್ರ ತರುಸಮೂಹದ ಮಧ್ಯೆ ಮೆಲ್ಲಗೆ ಬೀಸುತ್ತಿದ್ದ ತಂಗಾಳಿ ಬಿಜ್ಜಣವಿಕ್ಕುತ್ತಿತ್ತು. ನಾನು ಮೆಲ್ಲಮೆಲ್ಲನೆ ಹಾಡಲಾರಂಭಿಸಿದೆ. ಆ ವನದ ನೀರವತೆಯಲ್ಲಿ ತುಂಬಿ ತುಳುಕುವಮತೆ ಹೊರಹೊಮ್ಮುತ್ತಿದ್ದ ನನ್ನ ದನಿಗೆ ನಾನೇ ಮಾರುಹೋದೆ. ಜೊತೆಯವರೂ ಮಾತನ್ನೆಲ್ಲ ನಿಲ್ಲಿಸಿ ಆಲಿಸುತ್ತ ಬರುತ್ತಿದ್ದರು. ಹಠಾತ್ತಾಗಿ ನಾಯಿ ಕೂಗಿದುವು! ಪುಟ್ಟಣ್ಣ ಬಲಕ್ಕೆ ಓಡಿದ. ಹೆಗ್ಗಡೆಯವರು ಎಡಗಡೆಗೆ ನುಗ್ಗಿದರು. ನಾನೂ ಕೋವಿಯನ್ನು ತಟಕ್ಕನೆ ಸಿದ್ಧಮಾಡಿಕೊಂಡು ನಡುವೆ ನುಗ್ಗಿದೆ. ಪುಟ್ಟಣ್ಣ, ಹೆಗ್ಗಡೆ ಇಬ್ಬರೂ ಕಣ್ಮರೆಯಾದರು. ಇಬ್ರಾಹಿ, ಹಳೆಪೈಕದ ಪುಟ್ಟ ಹಿಂದೆಯೇ ನಿಂತುಬಿಟ್ಟಿದ್ದರು. ಅಷ್ಟರಲ್ಲಿ ಪುಟ್ಟಣ್ಣ “ಢಂ! ಢಂ” ಎಂದು ಎರಡು ಗುಂಡು ಹಾರಿಸಿ “ಹಂದಿ ಹಂದಿ” ಎಂದು ಕೂಗಿದನು. ನನ್ನ ಎದೆಯಲ್ಲಿ ನೆತ್ತರು ಬೇಗ ಬೇಗ ನುಗ್ಗಹತ್ತಿತು. ನೋಡುತ್ತಿದ್ದ ಹಾಗೆಯೆ ಹಂದಿಯೊಂದು ಹೂಂಕರಿಸುತ್ತ ನನ್ನೆದುರು ನುಗ್ಗಿತು, ಅತಿ ವೇಗದಿಂದ! ಮರದ ಮರೆಯಲ್ಲಿ ನಿಂತು ಒಂದು ಗುಂಡುಹಾರಿಸಿದೆ. ಮತ್ತೊಂದು ಗುಂಡು ಹೊಡೆಯಲೆಂದು ಕೋವಿಯ ಕುದುರೆಯನ್ನು ಎತ್ತಿ ಬಿಲ್ಲು ಎಳೆದೆ. ಆದರೆ ಎಡಗಡೆ ನಳಿಗೆಗೆ ಹಾಕಿದ್ದ ತೋಟಾದ ಕೇಪು ಕೆಟ್ಟಿತ್ತು. ಗುಂಡು ಹಾರಲೆ ಇಲ್ಲ, ಹಂದಿ ಪಲಾಯನ ಮಾಡಿತು. ನಾಯಿಗಳು ಅದರ ಹಿಂದೆ ಬೊಗಳುತ್ತ ಓಡಿದುವು…

ಹೆಗ್ಗಡೆಯವರು, ಪುಟ್ಟ, ಇಬ್ರಾಹಿ ಎಲ್ಲರೂ ನಮ್ಮಿಬ್ಬರನ್ನೂ ಒಳ್ಳೆಯ ಗುರಿಗಾರರೆಂದು ಹಾಸ್ಯಮಾಡಿದರು.

ಪುಟ್ಟ ಕಂಡ ಜೇನನ್ನು ಸಮೀಪಿಸಿದೆವು; ಅವನು ಮಾತ್ರ ನಿರಾಶೆಯಿಂದ “ಓಹೋ, ಜೇನು ಗರಕುಬಿದ್ದು ಬಿಟ್ಟುಹೋಗ್ಯದೆ” ಎಂದನು. ಹಿಂದಿನ ದಿನದ ಕಾಳ್ಕಿಚ್ಚು ಮರದ ಬುಡದ ಹುತ್ತದಲ್ಲಿದ್ದ ತುಡುವೆಜೇನಿಗೆ ಹೊಗೆ ಹಾಕಿ ಓಡಿಸಿಬಿಟ್ಟಿತ್ತು.

ನಿರಾಶೆಯಿಂದ ಹಿಂತಿರುಗಿ, ಪುಟ್ಟಣ್ಣ ಕಂಡ ಜೇನಿಗಾಗಿ ಹೊರಟೆವು. ಇನ್ನೊಂದು ಕಾಲುಗಂಟೆಯಲ್ಲಿಯೆ ಅಲ್ಲಿಗೆ ಹೋಗಿ ಸೇರಿದೆವು. ಅಲ್ಲಿ ಕಾಡುಬೆಂಕಿ ಬಿದ್ದಿರಲಿಲ್ಲ! ಜೇನೂ ಇತ್ತು! ಜೇನುಹುಳುಗಳು ಒಂದೊಂದಾಗಿ ಹುತ್ತದೊಳಗೆ ಹೋಗಿಬರುತ್ತಿದ್ದುದನ್ನು ಕಂಡು ನಾನಂತೂ ಹಿಗ್ಗಿದೆ. ಇಬ್ರಾಹಿ ಆನಂದಾತಿಶಯದಿಂದ ಹಲ್ಲುತೆರೆದು ಬಾಯಿ ಅರಳಿಸಿದ್ದ.

ಪುಟ್ಟಣ್ಣ ಹುಳುಗಳನ್ನು ಪರೀಕ್ಷಿಸಿನೋಡಿ “ಕರಿತುಡುವೆಯಪ್ಪಾ! ಕೀಳಲು ಬಹುಕಷ್ಟ! ನನ್ನಿಂದಾಗದು!” ಎಂದನು.

ಜೇನಿನಲ್ಲಿ, ಹೆಜ್ಜೇನು, ತುಡುವೆ, ಕೋಲುಜೇನು, ನಸರಿ ಎಂಬ ಪ್ರಭೇದಗಳುಂಟು. ತುಡುವೆಯಲ್ಲಿ ಕರಿ, ಬಿಳಿ ಎಂಬ ಎರಡು ಜಾತಿ. ಇವುಗಳ ತುಪ್ಪವೆಲ್ಲ ತಿನ್ನಲು ಮಧುರವಾದರೂ ಅವುಗಳ ಕಡಿತ, ಕಾಟ, ರುಚಿ, ಗುಣ ಇವುಗಳಲ್ಲಿ ವ್ಯತ್ಯಾಸವಿದೆ. ಹೆಜ್ಜೇನನ್ನು ಪ್ರಾಯಶಃ ಎಲ್ಲರೂ ನೋಡಿದ್ದಾರೆ. ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಸೌಧಗಳಲ್ಲಿ ಕರ‍್ರಗೆ ನೇತಾಡುವುವು. ಮಲೆನಾಡಿನಲ್ಲಿ ದೊಡ್ಡ ದೊಡ್ಡ ಮರಗಳ ಶಾಖೆಗಳಿಂದ ಹಲ್ಲೆಗಳು ನೇತುಬೀಳುತ್ತವೆ. ಅವನ್ನು ಕೀಳಬೇಕಾದರೆ ಅಥವಾ ಕೊಯ್ಯಬೇಕಾದರೆ ಜೇನು ಕಟ್ಟಿರುವ ಕೊಂಬೆಗೆ ನೇರವಾಗಿ ಕೆಳಭಾಗದಲ್ಲಿ ನೆಲದಮೇಲೆ ಬೆಂಕಿಹಾಕಿ, ಬೆಂಕಿಗೆ ಹಸುರೆಲೆಗಳನ್ನು ಒಟ್ಟಿ ಹೊಗೆಮಾಡುತ್ತಾರೆ. ಆ ಧೂಮಪಾನವನ್ನು ಸಹಿಸಲಾರದ ಮಧುಪಗಳು ಹಲ್ಲೆಯನ್ನು ಬಿಟ್ಟು ದೂರ ಹೋಗುತ್ತವೆ. ಆಗ ಮರವನ್ನು ಹತ್ತಿ ಹಗ್ಗಕೆಟ್ಟಿದ ಬೋಗುಣಿಗೆ ಅದನ್ನು ಕೊಯ್ದು ಹಾಕಿ ಮೆಲ್ಲಗೆ ಇಳಿಸುತ್ತಾರೆ. ಒಂದು ಜೇನಿಗೆ ಒಂದೇ ಹಲ್ಲೆ ಇರುತ್ತದೆ. ಆದರೆ ಬಹಳ ದೊಡ್ಡದು. ಹೆಜ್ಜೇನುಹುಳು ಕಡಿದರೆ ತುಂಬಾ ಯಾತನೆ. ಎಷ್ಟೋ ಜನರೂ ಪ್ರಾಣಿಗಳೂ ಅವುಗಳ ಕೈಗೆ ಸಿಕ್ಕಿ ಪ್ರಾಣಬಿಟ್ಟಿದ್ದಾರೆ. ಆದ್ದರಿಂದಲೆ ಹೆಜ್ಜೇನನ್ನು ಸಾಧಾರಣವಾಗಿ ಹಗಲು ಕೀಳುವುದಿಲ್ಲ.

ತುಡುವೆ, ಕೋಲುಜೇನು ಇವುಗಳನ್ನು ನೋಡಲು ಬಹಳ ಜನರಿಗೆ ಅವಕಾಶವಿಲ್ಲ. ಕೋಲುಜೇನು ಬಹಳ ಸಾಧುವಾದದು. ಇದರ ಗೂಡು, ದೊಡ್ಡದು ಎಂದರೆ, ಚೆನ್ನಾಗಿ ಬೆಳೆದ ಚಕ್ಕೋತದ ಕಾಯಿಯಷ್ಟು ದಪ್ಪವಿರುತ್ತದೆ. ಇದರಲ್ಲಿಯೂ ಒಂದು ಜೇನಿಗೆ ಒಂದೇ ಹಲ್ಲೆ. ಹಲ್ಲೆ ಪೊದೆಗಳಲ್ಲಿ ಸಣ್ಣ ಕೋಲುಗಳಿಂದ ನೇತುಬಿದ್ದಿರುತ್ತದೆ. ನನಗಿನ್ನೂ ನೆನಪಿದೆ: ನಾವು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಾಗ ಒಂದು ದಿನ ಕುಶಾವತಿ ನದಿಗೆ ಈಜಲು ಹೋಗಿದ್ದೆವು. ಅದರ ತೀರದಲ್ಲಿ ಒಂದು ನೆಕ್ಕಿಯ ಹೊದೆಯಲ್ಲಿ ಬಡಪಾಯಿ ಕೋಲುಜೇನು ಕಟ್ಟಿತ್ತು. ಆಗ ನಮಗೆ ಅದು ಸಾಧುವಾದ ಜೇನೆಂಬುದು ಗೊತ್ತಿರಲಿಲ್ಲ. ಹುಳುಗಳನ್ನು ಓಡಿಸಲು ದೊಡ್ಡ ಬೆಂಕಿ ಹಾಕಿದೆವು. ಒಂದು ಹುಳುವೂ ಹಾರಿಹೋಗಲಿಲ್ಲ! ನಮ್ಮ ಮನಸ್ಸಿಗೆ ಅದು ಬಹಳ ಹಠಮಾರಿ ಜೇನೆಂದು ತೋರಿ ಮತ್ತೂ ದೊಡ್ಡದಾಗಿ ಬೆಂಕಿ ಮಾಡಿದೆವು. ಆದರೂ ಒಂದು ಹುಳುವೂ ಹಾರಲಿಲ್ಲ! ನಮಗೆಲ್ಲಾ ಆಶ್ಚರ್ಯವಾಗಿ ಬೆಂಕಿ ಆರಿಸಿ ನೋಡಿದಾಗ ಹುಳುಗಳೂ ಇರಲಿಲ್ಲ. ಹಲ್ಲೆಯೂ ಇರಲಿಲ್ಲ! ಜೇನು ಕಟ್ಟಿದ್ದ ಗುರುತೇ ಇರಲಿಲ್ಲ! ನಿಜಾಂಶವೇನೆಂದರೆ, ಬೆಂಕಿಯ ಜ್ವಾಲೆ ಮಿತಿಮೀರಿ ಹುಳುಗಳೆಲ್ಲವೂ ಹಾರುವ ಮೊದಲೇ ಸತ್ತು ಉರಿದು ಬೂದಿಯಾಗಿಹೋಗಿದ್ದುವು! ಹಲ್ಲೆಯೂ ಕರಗಿ ಹೋಗಿತ್ತು! ಅಂತೂ ನಮ್ಮ ಅತ್ಯಾಶೆಗೆ ಸರಿಯಾದ ಫಲ ಸಿಕ್ಕಿತು!

ಪಾಠಕನು ಕಾಡುನಾಡಿನ ಹಳ್ಳಿಯವನಾಗಿದ್ದರೆ ಆತನಿಗೆ ನಸರಿಯ ಪರಿಚಯ ಚೆನ್ನಾಗಿರುತ್ತದೆ. ಪುರದ ಪಾಠಕನೇ, ನೀನು ಎಂದಾದರೂ ಮಿಠಾಯಿ ಅಂಗಡಿಗಳಿಗೆ ಹೋಗಿದ್ದೀಯಾ? ಈ ಪ್ರಶ್ನೆಯೆ ಅನಾವಶ್ಯಕ! ಕಾಫಿ ಹೋಟಲು, ಮಿಠಾಯಿ ಅಂಗಡಿಗಳಿಗೆ ಹೋಗದಿದ್ದ ಪಟ್ಟಣೆಗನುಂಟೆ? ಒಂದು ವೇಳೆ ಇದ್ದರೆ, ಅವನನ್ನು ಪಟ್ಟಣಿಗ, ನಾಗರಿಕ ಎಂದು ಕರೆಯುವುದು ಉಪಚಾರಕ್ಕೆಂದೇ ಹೇಳಬೇಕು.

ಮಿಠಾಯಿರಾಶಿಗೆ ಸಾವಿರಾರು ಸಣ್ಣ ಹುಳುಗಳು ಬಂದು ಮುತ್ತಿರುತ್ತವೆ. ನಿನಗೆ ನೊಣಗಳ ಗುರುತು ಚೆನ್ನಾಗಿದೆಯಷ್ಟೆ! ಅವುಗಳನ್ನು ಬಿಟ್ಟರೆ ಅಲ್ಲಿರುವ ಮತ್ತೊಂದು ಬಗೆಯ ಹುಳುಗಳೇ ನಸರಿಹುಳುಗಳು. ಅವು ಕಚ್ಚುವುದಿಲ್ಲ, ಕಡಿಯುವುದಿಲ್ಲ. ತುಂಬಾ ಕೀಟಲೆ ಕೊಡುತ್ತವೆ. ಕಿವಿಗೆ ನುಗ್ಗುತ್ತವೆ. ತಲೆ ಕೂದಲು ತುಂಬಾ ಮಂಗಮುಷ್ಟಿ ಹಿಡಿದು ಕಚ್ಚಿಕೊಳ್ಳುತ್ತವೆ. ಇದನ್ನು ಕೇಳಿ ನಸರಿತುಪ್ಪ ಸುಲಭಸಾಧ್ಯವೆಂದು ತಿಳಿಯಬಾರದು. ಅದು ಗೂಡುಮಾಡುವುದು ಮರದ ಪೊಟರೆ, ಮನೆಯ ಗೋಡೆಯ ಟೊಳ್ಳಿರುವ ಬಿರುಕು, ಬೊಂಬು ಇಂತಹ ಜಾಗಗಳ್ಲಿ. ಅದರ ಮರಿಗಳನ್ನು ತಂದಿಟ್ಟು ಕೊಡಗಳಲ್ಲಿಯೂ ತುಪ್ಪಮಾಡಿಸಬಹುದು. ಇದರ ತುಪ್ಪ ಬಹಳ ರುಚಿ. ಹೆಚ್ಚಾಗಿ ತಿನ್ನಲೂ ಬಹುದು. ಔಷಧಿಗಳಿಗೂ ಉಪಯೋಗಿಸುತ್ತಾರೆ.

ಒಂದುಸಾರಿ ನಸರಿ, ಶ್ರೀಕಂಠ ಇವರಿಬ್ಬರ ದೆಸೆಯಿಂದ ನನಗೆ ಸ್ಕೂಲು ಬಿಡಲು ಕಾಲ ಬಂದಿತ್ತು. ಪರೀಕ್ಷೆ ಸಮೀಪಿಸಿದ ಸಮಯ. ಸ್ಕೂಲಿನ ಬೋಳು ಮಹಡಿಯ ಮೇಲೆ ಹತ್ತಿ ಹೆಡ್ಮಾಸ್ಟರ ಆಫೀಸಿನ ಮೇಲುಗಡೆಯೇ ಓದುತ್ತಿದ್ದೆವು. ಗೋಡೆಯೊಳಗೆ ಒಂದು ನಸರಿಗೂಡು ಇತ್ತು. ಮೂರು ದಿನಗಳ ತನಕ ಶ್ರೀಕಂಠ ನಸರಿಹುಳುಗಳನ್ನು ನೊಣಗಳೆಂದೇ ತಿಳಿದಿದ್ದನು. ಗ್ರಹಚಾರಹಿಡಿದ ನಾನು ಒಂದು ದಿನ ನಿಜಸ್ಥಿತಿ ತಿಳಿಸಿದೆ. ಶ್ರೀಕಂಠ ನಸರಿ ಕೀಳೋ ಎಂದು ಹಠಿಹಿಡಿದ. ನಾನೆಷ್ಟೋ ಹೇಳಿದೆ, “ಹೆಡ್ಮಾಸ್ಟರ ಆಫೀಸಿದೆಯಪ್ಪಾ ಕೆಳಗೆ, ಬೇಡ; ಪರೀಕ್ಷೆಯ ಸಮಯ, ಸರ್ಕಾರೀ ಕಟ್ಟಡ! ಕಿತ್ತರೆ ನಮ್ಮ ಮಾನ ಉಳಿಯುವುದಿಲ್ಲ” ಎಂದು. ಮರುದಿನ ಅವನೊಬ್ಬನೇ ಬಂದು ಕಿತ್ತೇಬಿಟ್ಟ! ಕಿತ್ತೂಕಿತ್ತ; ಆಮೇಲೆ ಜುಲ್ಮಾನೆಯನ್ನೂ ಕೊಟ್ಟ! ಅವನ ದೆಸೆಯಿಂದ ಹೆಡ್ಮಾಸ್ಟರು ನನಗೂ ‘ಸ್ವಲ್ಪ’ ಬೈದರು! ಅದುವರೆಗೂ ಅವರ ಮುಂದೆ ಮೆಹನತ್ತಿನಿಂದ ಇರುತ್ತಿದ್ದ ನನಗೆ ಅವರ ಬೈಗಳೇ ಜುಲ್ಮಾನೆಗಿಂತ ಹೆಚ್ಚಾಯಿತು. ಶ್ರೀಕಂಠನನ್ನು ಕೇಡಿ ರಿಜಿಸ್ಟರಿಗೂ ದಾಖಲೆ ಮಾಡಿದರೆಂದು ತೋರುತ್ತದೆ. ನನಗೆ ಸರಿಯಾಗಿ ನೆನಪಿಲ್ಲ. ಈ ಸಂಗತಿ ಆಗ ನಮ್ಮ ಇಸ್ಕೂಲಿನಲ್ಲೆಲ್ಲ “ನಸರಿ ಕೇಸು” ಎಂದು ಪ್ರಸಿದ್ಧವಾಗಿತ್ತು!

ಬಿಳಿತುಡುವೆ ಕರಿತುಡುವೆಗಿಂತ ಸ್ವಲ್ಪ ಸಾಧು. ಮರಗಳಲ್ಲಿ ಸಣ್ಣ ತೂತು ಇರುವ ಪೊಟರೆ ಗೆದ್ದಲಿಲ್ಲದ ಹುತ್ತ ಇಂಥಾ ಅಂತರಂಗದ ಸ್ಥಳಗಳಲ್ಲಿಯೆ ತುಡುವೆ ಜೇನು ಗೂಡುಮಾಡುವುದು. ಕೋಲುಜೇನು, ಹೆಜ್ಜೇನು ಇವುಗಳಂತೆ ಇದು ಎಂದಿಗೂ ಬಹಿರಂಗವಾಗಿರುವುದೆ ಇಲ್ಲ. ಇದರಲ್ಲಿ ಒಂದೊಂದು ಜೇನಿಗೆ ಆರು ಏಳು ಹಲ್ಲೆಗಳ ತನಕ ಇರುತ್ತವೆ. ಇದರ ಹಲ್ಲೆಗಳನ್ನು ಹೆಜ್ಜೇನು ಹಲ್ಲೆಗಳಿಗೆ ಹೋಲಿಸಿದರೆ ಬಹು ಸಣ್ಣ. ಈ ಜಾತಿ ಜೇನುಹುಳು ಹೆಜ್ಜೇನು ಹುಳುವಿಗಿಂತ ಚಿಕ್ಕದು. ಕೋಲುಜೇನು ಹುಳುವಿಗಿಂತ ದೊಡ್ಡದು. ಸಾಕು; ನಾನೇನು ಪ್ರಾಣಿ ಶಾಸ್ತ್ರಜ್ಞನಲ್ಲ. ಪ್ರಬಂಧಕಾರನಿಗೆ ಶಾಸ್ತ್ರಕಾರನ ಹಕ್ಕೂ ಇಲ್ಲ. ಅದೂ ಅಲ್ಲದೆ ನೀವೆಲ್ಲ ಆಕಳಿಸುತ್ತಿದ್ದೀರಿ!

ನಮ್ಮ ಬಂದೂಕಗಳನ್ನೆಲ್ಲ ಒಂದು ದೊಡ್ಡ ಮರದ ಬುಡಕ್ಕೆ ಒರಗಿಸಿದೆವು. ನಾನು ಪುಟ್ಟಣ್ಣ ಇಬ್ಬರೂ ಜೇನು ಕಟ್ಟಿದ್ದ ಹುತ್ತದಿಂದ ದೂರ ಹೋಗಿ ಕುಳಿತೆವು! ನಮ್ಮಿಬ್ಬರಿಗೂ ಜೇನುಹುಳುಗಳೆಂದರೆ ಸ್ವಲ್ಪ ಎದೆಯಲ್ಲಿ ಹಾಗೆ ಹಾಗೆ! ಹಳೆಪೈಕದ ಪುಟ್ಟ ಕಾಡುಮೆಣಸಿನ ಎಲೆಗಳನ್ನು ಚೆನ್ನಾಗಿ ಅಗಿದು, ಅದರ ರಸವನ್ನು ಹುತ್ತದ ತೂತಿಗೆ ಉಗಿದು, ಆ ತೂತಿನೊಳಕ್ಕೆ ಬುಸ್‌ಬುಸ್ ಎಂದು ಉಸಿರೂದತೊಡಗಿದನು. ತುಡುವೆಜೇನು ಕೀಳಲು ಇದೊಂದು ಉಪಾಯ. ಮೆಣಸಿನ ಎಲೆ, ಬೆಳ್ಳುಳ್ಳಿ ಮುಂತಾದ “ಘಾಟು” ಇರುವ ಪದಾರ್ಥಗಳನ್ನು ಅಗಿದು ತೂತಿನೊಳಕ್ಕೆ ಉಗಿದು ಗಾಳಿ ಊದುತ್ತಾರೆ. ಜೇನುಹುಳುಗಳಿಗೆ ತಲೆತಿರುಗಿ (ಒಂದೊಂದು ಸಾರಿ ಉಸುರೂದುವವನಿಗೂ ಹಾಗಾಗುವುದುಂಟು!) ಹಲ್ಲೆಗಳನ್ನೆಲ್ಲ ಬಿಟ್ಟು ದೂರ ಸರಿಯುತ್ತವೆ. ಆಗ ತೂತನ್ನು ಅಗಲಮಾಡಿ ಹಲ್ಲೆಗಳನ್ನು ತೆಗೆಯುತ್ತಾರೆ.

ಪುಟ್ಟನ ಉಪಾಯಕ್ಕೆ ಕರಿತುಡುವ ಬಗ್ಗಲಿಲ್ಲ. ನಾಲ್ಕೈದು ಹುಳುಗಳೂ ಅವನಿಗೆ ಹೊಡೆದುವು. ಕಾಲಿಗೆ ಬುದ್ಧಿ ಹೇಳಿದ. ಆಗ ಜೇನುಕೀಳುವುದರಲ್ಲಿ ಪ್ರವೀಣರಾದ ಹೆಗ್ಗಡೆಯವರು ತಮ್ಮ ಜೇಬಿನಲ್ಲಿದ್ದ ಬೆಳ್ಳುಳ್ಳಿಯನ್ನು ತೆಗೆದು, ಚೆನ್ನಾಗಿ ಅಗಿದು, ಮುಂದಿನ ಕ್ರಮ ಜರುಗಿಸಿದರು. ಆದರೂ ಹುಳುಗಳು ಮತ್ತೂ ರೋಷದಿಂದ ನುಗ್ಗಿಬಂದು ಮೂಗು ಕಣ್ಣು ತುಟಿ ಕೆನ್ನೆ ಎಲ್ಲ ಕಡೆಗೂ ಹೊಡೆಯಲಾರಂಭಿಸಿದುವು! ಪಾಪ! ವೀರರಾದರೂ ಎಷ್ಟೆಂದು ತಾಳಿಯಾರು? ನಾವಿಬ್ಬರೂ ಕುಳಿತಕಡೆಗೆ ಓಡಿಬಂದರು. ಹುಳುಗಳೂ ಅವರನ್ನು ಹಿಂಬಾಲಿಸಿದುವು. ಪುಟ್ಟಣ್ಣ ಅಬ್ಬರಿಸಿ ಕೂಗಿ ಓಡಿದನು. (ಸ್ವಲ್ಪ ಹಾಸ್ಯಕ್ಕಾಗಿಯೇ ಇರಬಹುದು!) ನಾನೂ ಅವನ ಹಿಂದೆ ಓಡಿದೆ. (ಹಾಸ್ಯಕ್ಕಲ್ಲ!) ಓಡಿಹೋದವನು ಒಂದು ಕಡಿದಾದ ಬಂಡೆಯ ಮೇಲೆ ಕುಳಿತನು. ನಾನೂ ಕುಳಿತೆ. ಕುಳಿತವನು ಕೆಳಗೆ ಬಾಗಿ ನೋಡಿದೆ. ಸುಮಾರು ಮೂವತ್ತು ನಾಲ್ವತ್ತು ಅಡಿಗಳಷ್ಟು ಎತ್ತರವಾಗಿತ್ತು.

“ಪುಟ್ಟಣ್ಣ, ಕೆಳಗಿಳಿಯೋಣ” ಎಂದೆ. ಇಬ್ಬರೂ ಚತುಷ್ಪಾದಿಗಳಾಗಿ ಜಾಗರೂಕತೆಯಿಂದ ಇಳಿದೆವು. ನೋಡುವಾಗ ಬಂಡೆಯ ಸಂದುಗಳಲ್ಲಿ ಏಳೆಂಟು ಕಣೆಹಂದಿಯ ಗುದ್ದು (ಗುಹೆ)ಗಳು ಕಂಡುಬಂದುವು. ಉದ್ದವಾದ ಕಣೆಗಳು ಗುದ್ದಿನ ಬಾಯಿಯಲ್ಲಿ ಬಿದ್ದಿದ್ದುವು. ಮುಳ್ಳುಹಂದಿಗಳು ಹಿಂದೆ ಮುಂದೆ ತಿರುಗಿ ತಿರುಗಿ ನೆಲವೆಲ್ಲ ಸಮೆದುಹೋಗಿತ್ತು. ಉದ್ವೇಗದಿಂದ ಗುದ್ದುಗಳನ್ನು ಪರೀಕ್ಷಿಸುತ್ತಿದ್ದೆವು. ಅಷ್ಟರಲ್ಲಿಯೆ ಹೆಗ್ಗಡೆಯವರು ಕರೆದರು. ಮನಸ್ಸಿಲ್ಲದ ಮನಸ್ಸಿನಿಂದ ಬಂಡೆಗಳನ್ನೇರಿ ಮೇಲೆ ಬಂದೆವು.

ಹೆಗ್ಗಡೆಯವರ ಮುಖವೆಲ್ಲ ಊದಿಹೋಗಿತ್ತು. “ಈಗೇನು ಮಾಡೋದು?” ಎಂದರು. ಪುಟ್ಟಣ್ಣ “ಸಾಮ, ದಾನ, ಭೇದ ಎಲ್ಲಾ ಪೂರೈಸಿತು. ಇನ್ನು ದಂಡ. ಹಾಕಿ ಬೆಂಕೀನ!” ಎಂದು ತನ್ನ ಜೇಬಿನಲ್ಲಿದ್ದ ಬೆಂಕಿಪೆಟ್ಟಿಗೆಯನ್ನು ತೆಗೆದು ಅವರ ಕೈಗೆ ಕೊಟ್ಟನು.

ಆಮೇಲೆ ಬೆಂಕಿ ಮಾಡಿ ಹೊಗೆಮಾಡಿದರು. ಪಾಪ! ಎಷ್ಟೋ ಹುಳುಗಳು ಸತ್ತುವು! “ಅದರಂತಹುದೆಷ್ಟೂ ಆಗಲೆ ಬೇಕಲ್ಲ ಲೋಕಪ್ರಸಿದ್ಧಿಯ ಜಯದಲಿ!” ನಮ್ಮ ಬೆಂಕಿಯ ಮುಂದೆ ಹುಳುಗಳಾಟ ಏನು ಸಾಗೀತು? ನಾವೇ ಜಯಿಸಿದೆವು. ಲೂಟಿಗೆ ಪ್ರಾರಂಭವಾಯಿತು. ಅದುವರೆಗೂ ಪತ್ತೆಯಿಲ್ಲದೆ ದೂರ ಅಡಗಿದ್ದ ಇಬ್ರಾಹಿ ಬಾಯಿತೆರೆದುಕೊಂಡು ಓಡಿಬಂದ. ಹೆಗ್ಗಡೆಯವರು ಐದಾರು ಹಲ್ಲೆಗಳನ್ನು ಕಿತ್ತು ಬೋಗುಣಿಗೆ ಹಾಕಿದರು. ನಮಗೆಲ್ಲಾ ಹರುಷದ ಹಬ್ಬ! ಎಷ್ಟುಹೊತ್ತಿಗೆ ಜೇನು ಬಾಯಿಗೆ ಬೀಳುವುದೋ ಎಂದು ಕಾತರಿಸಿದ್ದೆವು.

ಜೇನು ತಿನ್ನುವ ಮೊದಲು ನಾನು “ಜೈ ಭಗವಾನ್ ರಾಮಕೃಷ್ಣ” ಎಂದು ಇಬ್ರಾಹಿಯ ಕಡೆ ತಿರುಗಿ “ಲೋ, ಇಬ್ರಾಹಿ, ನಿಮ್ಮ ದೇವರ ನೆನೆಯೋ ಜೇನು ತಿನ್ನುವುದಕ್ಕೆ ಮುಂಚೆ. ಅಲ್ಲಾ ಹೋ ಅಕ್ಬರ್‌!” ಎಂದೆ. ಇಬ್ರಾಹಿ “ನಮ್ಮ ದೇವರು ಬೇರೆ, ನಿಮ್ಮ ದೇವರು ಬೇರೆಯೋ?” ಎಂದ. ಮುಂದೇನು ಸಂಭಾಷಣೆ ನಡೆಯುತ್ತಿತ್ತೋ ಗೊತ್ತಿಲ್ಲ. ಹಠಾತ್ತಾಗಿ ಟೈಗರು ರೋಜಿಯನ್ನು ಕಚ್ಚಿ ಮುರಿಯಲು ಪ್ರಾರಂಭಿಸಿ ದೊಡ್ಡ ದಾಂದಲೆ ಎಬ್ಬಿಸಿತು. ಪುಟ್ಟಣ್ಣ ದೊಡ್ಡದೊಂದು “ಲೊಟ” ತೆಗೆದುಕೊಂಡು ಏಳೆಂಟು ಕಡಬು ಹೇರಿ ಜಗಳ ನಿಲ್ಲಿಸಿದ. ಜಗಳಕ್ಕೆ ಕಾರಣ ಹಳೆಪೈಕದ ಪುಟ್ಟ ಜೇನು ತಿಂದು ಮೇಣ ಎಸೆದುದೇ!

ಇಬ್ರಾಹಿ ಊದಿ ವಿಕಾರವಾಗಿದ್ದ ಹೆಗ್ಗಡೆಯವರ ಮುಖ ನೋಡಿ ಅಳ್ಳೆ ಹಿಡಿದು ನಕ್ಕ. ಪುಟ್ಟಣ್ಣ “ಯಾರಾದರೂ ಕೇಳಿದರೆ ಒಳ್ಳೇ ಹವದ ಕಾಡಿಗೆ ಹೋಗಿದ್ದೆ. ಸ್ವಲ್ಪ ಪುಷ್ಟಿಯಾಗಿ ಬಂದಿದ್ದೇನೆ ಎಂದುಬಿಡಿ” ಎಂದನು. ಎಲ್ಲರೊಡನೆ ಹೆಗ್ಗಡೆಯವರೂ ನಕ್ಕರು. ಅವರ ಮುಖ ಮತ್ತಷ್ಟು ವಿಕಾರವಾಯಿತು. ಮತ್ತೆ ಎಲ್ಲರೂ ನಗೆಗಡಲಲ್ಲಿ ಮುಳುಗಿ ಹೋದರು. ನಾಯಿಗಳೆಲ್ಲ ಸುತ್ತ ಕುಳಿತು ನಮ್ಮನ್ನೇ ದುರುದುರು ನೋಡುತ್ತಿದ್ದುವು. ಕೆಲವು ಜೇನು ಹುಳುಗಳು ಜೇನುತುಪ್ಪದಲ್ಲಿ ಬಿದ್ದು ರೆಕ್ಕೆ ತೊಯ್ದು ಒದ್ದಾಡುತ್ತ ಹರಿಯುತ್ತಿದ್ದುವು. ಕಾಡು ಮೌನವಾಗಿತ್ತು. ಹೊತ್ತು ನೆತ್ತಿಗೇರಿತ್ತು. ಬನಗತ್ತಲೆ ಗಾಢವಾಗಿತ್ತು.

ಜೇನುತುಪ್ಪ ತಿನ್ನಲು ಸವಿಯಾಗಿತ್ತೆಂದು ಹೇಳಿದರೆ, ಓದಿದವರೆಲ್ಲ “ಹೌದೇ? ನಿಜವಾಗಿಯೂ?” ಎನ್ನದಿರುವುದಿಲ್ಲ. ಚೆನ್ನಾಗಿ ಮಾಗಿದ ಕೊಡಗಿನ ಕಿತ್ತಿಳೆಹಣ್ಣಿನ ತೊಳೆಯನ್ನು ಸಿಗಿದರೆ ಒಳಗಡೆ ಯಾವ ಬಣ್ಣ ಕಂಗೊಳಿಸುತ್ತದೆಯೋ ಅದೇ ಬಣ್ಣವಿತ್ತು ಜೇನು ಹಲ್ಲೆಗಳಿಗೆ!

ಜೇನುತುಪ್ಪವನ್ನೇನೋ ತಿಂದು ನಮಗೆಲ್ಲ ಸಂತೋಷವಾಯಿತು. ಆದರೆ ಒಂದು ವಿಷಾದದ ವಿಷಯ. ಅದೇನೆಂದರೆ, ಆಸೆಗೆ ತಕ್ಕಹಾಗೆ ತುಪ್ಪ ತಿನ್ನಲು ಆಗಲಿಲ್ಲ. ತುಪ್ಪ ಕಡಿಮೆಯಾಗಿತ್ತು ಎಂದಲ್ಲ; ಜೇನು ಯಥೇಚ್ಛವಾಗಿತ್ತು. ಮನೆಗೂ ಮುಕ್ಕಾಲು ಬೋಗುಣಿ ತುಂಬಾ ತೆಗೆದುಕೊಂಡು ಹೋದೆವು. ಆದರೆ ಸ್ವಲ್ಪ ತಿನ್ನುವುದರೊಳಗಾಗಿ ನನಗಂತೂ ಅದರ ಅತಿ ಮಾಧುರ್ಯ ಮುಖ ಮುರಿದುಬಿಟ್ಟಿತು. “ಆಸೆ ಭೀಮ, ಸಾಮರ್ಥ್ಯ ಸುಧಾಮ!” ಹೀಗಾಗಿ ಬಿಟ್ಟಿತು ನನ್ನ ಗತಿ! ಅವರೆಲ್ಲ ಹೊಡೆದೇ ಹೊಡೆದರ ಕಂಠಪೂರ್ತಿಯಾಗಿ!

* * *


*      ‘ಈ ಪ್ರಬಂಧವನ್ನು ಬರೆದದ್ದು ಐದು ವರುಷಗಳ ಹಿಂದೆ. ಆಗಲೇ ಜೀವನ ರಂಗದಲ್ಲಿ ಎಷ್ಟೋ ವ್ಯತ್ಯಾಸಗಳಾಗಿ ಹೋಗಿವೆ. ಒಂದು ವಿಷಾದದ ಸುದ್ಧಿಯೆಂದರೆ, ಹೋದ ವರುಷ ನಾನು ಬೇಸಗೆ ರಜಕ್ಕೆ ಹೋದಾಗ ಎಂಟು ದಿನಗಳ ಹಿಂದೆ ಪುಟ್ಟಣ್ಣ ಹಠಾತ್ತಾಗಿ ತೀರಿಕೊಂಡನೆಂದು ಕೇಳಿ ಬಹಳ ಮರುಗಿದೆ.