ಪುಟ್ಟಾಚಾರಿಯನ್ನು ನಾವು ನೋಡಿದ್ದೆ. ಎಷ್ಟೋ ಸಾರಿ ಅವನೊಡನೆ ಹರಟೆ ಹೊಡೆದಿದ್ದೆ. ಚಿಕ್ಕವನಾಗಿದ್ದ ನನಗೆ ಅವನ ಹರಟೆಗಳು ರಾಮಾಯಣ ಮಹಾಭಾರತಗಳಂತೆಯೆ ಮನೋಹರವಾಗಿದ್ದುವು. ಅವನ ಹರಟೆ ಎಂದರೆ ಕಾಡು ಹರಟೆಗಳಲ್ಲ; ಕಾಡಿನ ಹರಟೆಗಳು. ನಮ್ಮೂರಿನಲ್ಲಿ ಅವನೊಬ್ಬ ದೊಡ್ಡ ಬೇಟೆಗಾರನಾಗಿದ್ದ. ಅವನದು ನುರಿತ ಕೈ. ಇಟ್ಟ ಗುರಿ ತಪ್ಪುತ್ತಿರಲಿಲ್ಲ. ಪ್ರಾಣಿ ಎಷ್ಟ ವೇಗವಾಗಿ ಹಳುವಿನ ನಡುನಡುವೆ ಮಿಂಚಿ ಬಂದರೂ ಪುಟ್ಟಾಚಾರಿಯ ಕಂಡಿ ಅದರ ಭಾಗಕ್ಕೆ ಸಾವಿನೂರಿಗೆ ಹೆಬ್ಬಾಗಿಲಾಗಿಯೆಬಿಡುತ್ತಿತ್ತು. ಪುಟ್ಟಾಚಾರಿಯ ಈಡು ಎಂದರೆ ಎಲ್ಲಿರಗೂ ಭರವಸೆ. ಒಂದು ವೇಳೆ ಅವನು ಹುಸಿಯಿಡು ಹೊಡೆದರೂ ಅವನನ್ನು ಯಾರೂ ಅಸಡ್ಡೆ ಮಾಡುತ್ತಿರಲಿಲ್ಲ. “ಪ್ರಾಣಿಯ ಸುಕೃತ ಚೆನ್ನಾಗಿತ್ತು” ಎಂದು ಹೇಳಿ. ಗುಂಡು ತಪ್ಪಿದ್ದಕ್ಕೆ ಆಶ್ಚರ್ಯಪಡುತ್ತಿದ್ದರೆ ಹೊರತು ಅವನನ್ನು ದೂರುತ್ತಿರಲಿಲ್ಲ.

ನನಗಿನ್ನೂ ತೆಳ್ಳಗೆ ನೀಳವಾಗಿದ್ದ ಅವನ ಆಕೃತಿ ಕಣ್ಣಿಗೆ ಕಟ್ಟಿದಂತಿದೆ. ಆ ಜಿಡ್ಡುಜಿಡ್ಡಾಗಿರುತ್ತಿದ್ದ ಅವನ ಹಾಸನದ ಟೋಪಿ; ಕೊಳೆಯಿಂದ ಹೊಳೆಯುತ್ತಿದ್ದ, ನೀರು ಬಿದ್ದರೆ ಹೀರದೆ ಸಿಡಿಯುತ್ತಿದ್ದ ಅವನ ಹರಕಲು ಅಂಗಿ; ಯಾವಾಗಲೂ ಮೊಳಕಾಲಿನ ಮೇಗಡೆಗೇ ಇರುತ್ತಿದ್ದ ಅವನ ಸೊಂಟದ ಪಂಚೆ; ಎಡಭುಜದಿಂದ ಬಲಪಕ್ಕೆಯ ಮೇಲೆ ನೇತಾಡುತ್ತಿದ್ದ ಅವನ ಕೋವಿಯ ಚೀಲ; ನಡೆದಾಗ ಅದರೊಳಗೆ ಕಣಿಕಣಿಗುಟ್ಟುತ್ತಿದ್ದ ಈಡಿನ ಸಾಮಾನುಗಳು; ಮಾತಾಡಿದರೆ ಹೊರಹೊರಡುತ್ತಿದ್ದ ಕವರ್ಗ ಪಂಚಮಾಕ್ಷರದ ಧ್ವನಿ; ಆ ಹಳೆಯ ಟೊಪ್ಪಿಗೆಯಿಂದ ನಿರ್ಲಕ್ಷವಾಗಿ ಹೊರಟಿರುತ್ತಿದ್ದ ಎಣ್ಣೆಕಾಣದ ಕೆದರುಗೂದಲು; ಮಲೆನಾಡಿನ ಪದ್ಧತಿಯಂತೆ ಕಿವಿಗಳಲ್ಲಿ ಮಿರುಗುತ್ತಿದ್ದ ಲೋಹದ ಒಂಟಿಗಳು; ಚಪ್ಪಟೆಯಾದ ಮೊರಡು ಮುಖ, ನೀಳವಲ್ಲದ ಮೂಗು; ಅವಿತುಕೊಂಡಿದ್ದರೂ ಕಾಂತಿಯಿಂದ ತೀಕ್ಷ್ಣವಾಗಿದ್ದ ಕಣ್ಣುಗಳು! ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ ಆ ನಮ್ಮೂರ ಕಮ್ಮಾರ ಬೇಟೆಗಾರನ ಚಿತ್ರ!

ಅವನು ಕಬ್ಬಿಣದ ಕೆಲಸದವನು. ನಾನು ಎಷ್ಟೋ ಸಾರಿ ಅವನ ಕಮ್ಮಾರ ಸಾಲೆಗೆ ಹೋಗಿ, ಅವನು ಕಬ್ಬಿಣ ಕಾಸಿ ಬಡಿದಾಗ ಹಾರುತ್ತಿದ್ದ ಕೆಂಗೆದರುಗಿಡಿಗಳನ್ನು ನೋಡಿ ದೂರದೂರ ಓಡಿಹೋಗಿ ನೆಗೆದಾಡಿ ಕೈ ಚಪ್ಪಾಳೆ ಹೊಡೆದು ಕುಣಿಯುತ್ತಿದ್ದೆ. ಕಬ್ಬಿಣವನ್ನು ಕೂಡ ನೀರುಮಾಡಿ ಬಡಿಯುತ್ತಿದ್ದುದರಿಂದ ನನಗೆ ಅವನಲ್ಲಿ ಏನೋ ಒಂದು ವಿಧವಾದ ಗೌರವವಿತ್ತು. ನನ್ನ ಜೀವಿತಯಾತ್ರೆಯಲ್ಲಿ ಪುಟ್ಟಾಚಾರಿಯಂತಹ ಇನ್ನೆಷ್ಟೋ ಜನರು ಕಣ್ಣೆದುರು ಬಂದು ಹೋಗಿದ್ದಾರೆ. ಆದರೆ ಅನೇಕರನ್ನು ಮರೆತುಬಿಟ್ಟಿದ್ದೇನೆ. ಪುಟ್ಟಾಚಾರಿಯನ್ನು ಮಾತ್ರ ಮರೆತಿಲ್ಲ. ಅವನ ವ್ಯಕ್ತಿತ್ವದಲ್ಲಿ ಏನೋ ಒಂದು ವಿಶೇಷವಿತ್ತೆಂದು ತೋರುತ್ತದೆ. ಅವನು ತನ್ನ ಅರಣ್ಯ ಸಾಹಸಗಳನ್ನು ಕುರಿತು ಕತೆ ಹೇಳಲು ತೊಡಗಿದನೆಂದರೆ ಹುಡುಗರಾದ ನಾವಂತೂ ಇರಲಿ, ದೊಡ್ಡವರಾದವರೂ ಕೂಡ ಕಣ್ದೆರದು ಕೇಳುತ್ತಿದ್ದರು. ಅವನ ವಾಣಿಯಲ್ಲಿ ಅದೇನೋ ಒಂದು ಆಕರ್ಷಣಶಕ್ತಿಯಿತ್ತೆಂದು ತೋರುತ್ತದೆ.

ಅವನು ಸತ್ತು ಹತ್ತು ಹನ್ನೆರಡು ವರುಷಗಳಾಗಿ ಹೋದುವು. ಅನೇಕರಂತೆ ಅವನೂ ಸತ್ತುಹೋದನು. ಆ ಬಡವನ ಮರಣ ಪತ್ರಿಕೆಗಳ ಶ್ರೀಮಂತ ದೃಷ್ಟಿಗೆ ಬೀಳಲಿಲ್ಲ. ನಮ್ಮೂರಿನವರು ಕೂಡ ಅವನು ಸತ್ತ ತರುವಾಯ ಕೆಲವು ದಿನಗಳು ಮಾತ್ರ ಅವನ ವಿಚಾರ ಮಾತಾಡುತ್ತಿದ್ದರು. ಆಮೇಲೆ ಜಗತ್ತಿನ ಇತರ ವ್ಯಾಪಾರಗಳ ಪ್ರವಾಹ ಮನೋರಾಜ್ಯದಲ್ಲಿ ಹರಿದುಬಂದುದರಿಂದ ಆ ಬಡವ ಸುಪ್ತಚಿತ್ತದ ವೈತರಣೀನದಿಯಲ್ಲಿ ಮುಳುಗಿಹೋದನು. ಹೋದವರೆಲ್ಲ ಕಂಡಿರುವ, ಇರುವವರಾರೂ ಕಾಣದ, ಹೋಗುವರೆಲ್ಲ ಕಾಣುವ, ಮೇರೆಯನ್ನೇ ಕಾಣದ, ಮಾಯೆಯ ಕಡಲಿಗೆ ತೃಣದಂತೆ ತೇಲಿಹೋದನು.

ಪುಟ್ಟಾಚಾರಿಯ ಅಂತ್ಯ ಅತ್ಯಂತ ಶೋಚನೀಯವಾಗಿತ್ತು. ಯಾವನ ಇಚ್ಚಿಗೆ ಕಬ್ಬಿಣವೂ ತಲೆಬಾಗುತ್ತಿತ್ತೋ ಅಂತಹನು ಅಣಬೆಯಂತೆ ಹುಳು ತಿಂದು ಕೊಳೆತು ತೀರಿಕೊಂಡನು. ಹೊಟ್ಟೆಯಲ್ಲಿ ಏನೋ ಒಂದು ಬಾವೆದ್ದು ಬಹಳ ಕಾಲ ನರಳಿದನು. ಆ ಕಾಡಿನಲ್ಲಿ ಡಾಕ್ಟರುಗಳಿರಲಿಲ್ಲ. ಹಳ್ಳಿಯ ವೈದ್ಯರು ಊಹೆಯ ಮೇಲೆ ಮದ್ದು ಕೊಟ್ಟರು. ರೋಗಿಯು ಚರ್ಮಮಾತ್ರ ಆವೃತವಾದ ಅಸ್ಥಿಪಂಜರವಾದನು. ನೋಡಿಕೊಳ್ಳುವುದಕ್ಕೆ ಹೆಂಡಿರು ಮಕ್ಕಳು ಯಾರೂ ಇರಲಿಲ್ಲ. ಅವನು ಏಕಾಂಗಿಯಾಗಿದ್ದನು. ಎಲ್ಲರನ್ನೂ ಕಳೆದುಕೊಂಡಿದ್ದನು. ಇತರರು ಶುಶ್ರೂಷೆ ಮಾಡಿದರು, ದನಕರುಗಳಿಗೆ ಮಾಡುವಂತೆ. ಅವರ ಸುಶ್ರೂಷೆಯಲ್ಲಿ ನಿಷ್ಕಾಮಕರ್ಮ ಚೆನ್ನಾಗಿ ತೋರುತ್ತಿತ್ತು. ಮಳೆಗಾಲದಲ್ಲಿ ಒಂದು ದಿನ ಪ್ರಕೃತಿಯೆಲ್ಲ ಘೋರವಿಷಣ್ಣವಾಗಿದ್ದ ಸಮಯದಲ್ಲಿ ಜಗನ್ಮಾತೆ ಪುಟ್ಟಾಚಾರಿಯನ್ನು ತಬ್ಬಲಿಭೂಮಿಯಿಂದ ಎತ್ತಿಕೊಂಡು ಹೋದಳು. ಅನೇಕರು ಶಾಸ್ತ್ರಕ್ಕಾಗಿ ಶೋಕವನ್ನು ನಟಿಸಿದರು. ಒಬ್ಬರೂ ಕಣ್ಣೀರು ಸುರಿಸಲಿಲ್ಲ. ಜಡಿಮಳೆ ಮಾತ್ರ ಹೋಗ ಎಂದು ಸುರಿಯುತ್ತಿತ್ತು.

ಅವನು ತೀರಿಹೋದ ಮೇಲೆ ಜನರು ಏನೇನೋ ಮಾತಾಡಿಕೊಂಡರು. ಅವನು ಗೋಹತ್ಯ ಮಾಡಿದ ಪಾಪಕ್ಕಾಗಿಯೆ ಆ ರೀತಿ ಕೊಳೆತು ಸತ್ತನು ಎಂದರು. ಅವನು ಎಷ್ಟೋ ಕಾಡುಪ್ರಾಣಿಗಳನ್ನು ಕೊಂದಿದ್ದನು. ಮಾಂಸಾಹಾರಿಗಳಾದ ನಮ್ಮೂರಿನವರು ಅದನ್ನು ಪಾಪವೆಂದು ಪರಿಗಣಿಸಲಿಲ್ಲ. “ಕೊಂದ ಪಾಪ ತಿಂದ ಪರಿಹಾರ!” ಎಂದು ಧರ್ಮಶಾಸ್ತ್ರವಿಎಯಂತೆ. ಆದರೆ ಪುಟ್ಟಾಚಾರಿ ಪ್ರಮಾದದಿಂದ ಎರಡು ಗಾಡಿಯೆತ್ತುಗಳನ್ನು ಗುಂಡು ಹೊಡೆದು ಕೊಂದಿದ್ದನು. ಆ ಪಾಪದಿಂದಲೇ ಅವನು ಹಾಗೆ ಸತ್ತನೆಂದು ಜನರು ನಿರ್ಣಯಿಸಿದರು.

ಅವನು ಮಾಡಿದ ಗೋಹತ್ಯೆಯ ಉಪಾಖ್ಯಾನವನ್ನು ನಿಮಗೆ ಸಂಕ್ಷೇಪವಾಗಿ ಹೇಳಿಬಿಡುತ್ತೇನೆ.

ಪುಟ್ಟಾಚಾರಿ ಒಂದು ದಿನ ತಿಂಗಳು ಬೆಳಕಿನ ರಾತ್ರಿಯಲ್ಲಿ ನಡುಗಾಡಿನಲ್ಲಿದ್ದ ಒಂದು ಹಣ್ಣಿನ ಮರಕ್ಕೆ ಮರಸಿಗೆ ಹೋದನು. ಆ ಹಣ್ಣಿನ ಮರಕ್ಕೆ ಕಡವೆಗಳು ಬರುತ್ತಿದ್ದವು. ನಡುರಾತ್ರಿಯಲ್ಲಿ ಅವನು ನಿದ್ದೆಗೆಟ್ಟು ತಲೆ ಸರಿಯಿಲ್ಲದೆ ಅರೆ ಎಚ್ಚತ್ತು ಕುಳಿತಿದ್ದಾಗ ಪಕ್ಕದ ಊರಿನ ಶೇಷಣ್ಣನ ಗಾಡಿಯೆತ್ತುಗಳೆರಡು ಮೇಯುತ್ತ ಮೇಯುತ್ತ ಅರಣ್ಯ ಮಧ್ಯದಲ್ಲಿದ್ದ ಆ ಹಣ್ಣಿನ ಮರಕ್ಕೆ ಬಂದುವು. ಮೊದಲು ಒಂದು ಎತ್ತು ಬಂತು. ಆ ಹುಳುವಿನಲ್ಲಿ, ಆ ಮಾಯಕಾರಿಯಾದ ನೆರಳುನೆರಳಾದ ಬೆಳ್ದಿಂಗಳಲ್ಲಿ ಪುಟ್ಟಾಚಾರಿಯ ಕಣ್ಣಿಗೆ ಕಡವೆಯೇ ಬಂದಂತಾಯಿತು. ಒಂದು ಗುಂಡು ಹೊಡೆದನು. ಪ್ರಾಣಿ ಬಿತ್ತು. ಪುಟ್ಟಾಚಾರಿ ಮರದ ಅಟ್ಟಣೆಯ ಮೇಲೆಯೇ ತನ್ನ ಕೇಪಿನ ಕೋವಿಗೆ ಈಡು ತುಂಬಿ ಕೆಳಗಿಳಿಯಬೇಕು ಎನ್ನುವಷ್ಟರಲ್ಲಿ ಮತ್ತೊಂದು ಎತ್ತೂ ಬಂದಿತು. ಕಡವೆ ಬಿತ್ತೆಂದು ಹಿಗ್ಗಿಹೋಗಿದ್ದ ಅವನಿಗೆ ಸಾಕಾದಷ್ಟು ವಿವೇಕವಿರಲಿಲ್ಲ. ಮತ್ತೊಂದು ಕಡವೆ ಬಂತೆಂದು ತಿಳಿದು ಅದಕ್ಕೂ ಒಂದು ಗುಂಡು ಹೊಡೆದನು. ಅದೂಬಿತ್ತು. ಬೇಟೆಗಾರ ಪರಮ ಸಂತೋಷದಿಂದ ಮರಸಿನಿಂದ ಇಳಿದುಹೋಗಿ ನೋಡಿದನು. ಬಹಳ ಗೋಳಾಡಿ ಕಣ್ಣೀರು ಸುರಿದನು. ಬಸವಣ್ಣನನ್ನು ಕೊಂದೆನಲ್ಲಾ ಎಂದು ಅತಿಯಾಗಿ ಪಶ್ಚಾತ್ತಾಪಟ್ಟನು. ಪಶ್ಚಾತ್ತಾಪವೇ ಸರ್ವೋತ್ತಮವಾದ ಪ್ರಾಯಶ್ಚಿತ್ತ ಎಂದು ಹೇಳಿದ ಯೇಸುಕ್ರಿಸ್ತನ ವಾಕ್ಯ ಸತ್ಯವಾದರೆ ಪುಟ್ಟಾಚಾರಿ ಗಂಗಾಸ್ನಾನ ಮಾಡಿದನೆಂದೇ ಭಾವಿಸಬೇಡವೆ? ಜನಗಳು ಅವನನ್ನು ಬಾಯಿಗೆ ಬಂದಂತೆ ಬಯ್ದರು. ಊರ ಪಟೇಲರು ಶೇಷಣ್ಣನಿಗೆ ಅವನಿಂದ ದಂಡ ಕೊಡಿಸಿದರು. ಆದರೂ ಜನರ ಬಾಯಿ ನಿಲ್ಲಲಿಲ್ಲ. “ನಿನಗೆ ದುರ್ಮರಣವಾಗುತ್ತೆ; ನೀನು ಕೊಳತೇ ಸತ್ತು ಹೋಗುವೆ” ಎಂದೆಲ್ಲ ಪುಟ್ಟಾಚಾರಿಗೆ ಹೇಳಿದರು. ಪಾಪ, ಅವನಿಗೂ ಮೂಢ ಭಕ್ತಿ! ನಂಬಿದನು! ಬಹುಶಃ ಅವನ ನಂಬಿಕೆಯೇ ಅವನನ್ನು ಕಡೆಗಾಲದಲ್ಲಿ ಪೀಡಿಸಿತೆಂದು ತೋರುತ್ತದೆ. ಸಾವಿರಾರು ಪ್ರಾಣಿಗಳನ್ನು ನಿರ್ಲಕ್ಷವಾಗಿ ಸುಟ್ಟು ಹಾಕುತ್ತಿದ್ದ ಅವನು ಗೋಹತ್ಯೆಯಿಂದಲೇ ಮಹಾ ಪಾಪ ಎಂದುನಂಬಿಬಿಟ್ಟನು. ಅವನು ಭಗವದ್ಗೀತೆ ಓದಿರಲಿಲ್ಲ.

ಅಂತೂ ಪುಟ್ಟಾಚಾರಿ ಕಡೆಗಾಲದಲ್ಲಿ ದಿಕ್ಕಿಲ್ಲದೆ ನರಳಿ ನರಳಿ ಮನೆಗೆ ಹೋದನು. ಜನರು ಅವನು ಮಾಡಿದ ಒಂದೇ ಒಂದು ಪಾಪವನ್ನು ನೆನಪಿನಲ್ಲಿ ಇಟ್ಟುಕೊಂಡರೆ ಹೊರತು, ಪುಣ್ಯಕಾರ್ಯಗಳೆಲ್ಲ ಮರತೇ ಬಿಟ್ಟರು. ಅವನು ಎಷ್ಟು ಹುಲಿಗಳನ್ನು ಹೊಡೆದು ಕೊಂದಿದ್ದ! ಒಂದುಹುಲಿಯನ್ನು ಕೊಂದರೆ ಕಡೆಯ ಪಕ್ಷ ಐವತ್ತು ಗೋವುಗಳನ್ನು ಕಾಪಾಡಿದಂತಾಗಲಿಲ್ಲವೆ? ಎರಡು ಗೋವುಗಳನ್ನು ಕೊಂದ ಪಾಪವೆಲ್ಲಿ? ನಾಲ್ಕೈದು ಹುಲಿಗಳನ್ನು ಕೊಂದ ಪುಣ್ಯವೆಲ್ಲಿ? ದೇವರು ಎಂತಹ ಕೋಮಟಿಯಾದೂ ಕೂಡ, ಅವನ ತಕ್ಕಡಿ ಎಷ್ಟುಕೃತ್ರಿಮವಾಗಿದ್ದರೂ ಕೂಡ, ಪುಣ್ಯದ ಭಾಗ ಪಾಪಕ್ಕಿಂತ ನೂರೈವತ್ತರಷ್ಟು ಮಿಗಿಲಾಗುವುದಿಲ್ಲವೆ? ನೀವೇ ಆಲೋಚಿಸಿ ನೋಡಿ!

ಏನೇನೋ ಮಾತನಾಡುತ್ತ ರಮಣೀಯವಾಗಿರುವ ಪುಟ್ಟಾಚಾರಿಯ ಕಾಡುಕೋಳಿ ಬೇಟೆಯ ವಿಚಾರ ಹೇಳಲು ಹೋಗಿ ಶೋಚನೀಯವಾಗಿರುವು ಅವನ ಅಂತ್ಯದ ವಿಚಾರ ಹೇಳುತ್ತ ಕುಳಿತುಬಿಟ್ಟೆ. ದಯವಿಟ್ಟು ಕ್ಷಮಿಸಿಬಿಡಿ. ನನ್ನ ಹೊಟ್ಟೆಯಲ್ಲಿ ಏನೊ ಮರುಕ ಉತ್ಪತ್ತಿಯಾಯಿತು; ಅದಕ್ಕೋಸ್ಕರ ಅದನ್ನೆಲ್ಲಾ ಹೇಳಿದ್ದು. ನನಗೆ ಒಂದೊಂದು ಸಾರಿ, ಮನುಷ್ಯ ಮನುಷ್ಯನಿಗೆ ಮಾಡುವ ಅನ್ಯಾಯವನ್ನು ಯೋಚಿಸಿಕೊಂಡರೆ ಕೋಪ ಕಣ್ಣೀರು ಎಲ್ಲಾ ಒಟ್ಟಿಗೆ ಬರುತ್ತವೆ. ಅದಕ್ಕೇ ಸಿಟ್ಟಿನಿಂದ “ತಬ್ಬಲಿಭೂಮಿ” ಎಂದು ಹೇಳಿದ್ದು.

ಮರೆತುಬಿಡಿ. ದಯವಿಟ್ಟು ಮೇಲೆ ಹೇಳಿದ್ದನ್ನೆಲ್ಲ ಮರೆತುಬಿಡಿ. ಇನ್ನು ಪುಟ್ಟಾಚಾರಿಯ ಕಾಡುಕೋಳಿ ಬೇಟೆಯ ವಿಚಾರ! ಇದ್ರೇನ್ರಿ? ದುಃಖ ಮುಖ ಮುದ್ರೆಯಿಂದ ಕುಳಿತುಬಿಟ್ಟಿದೀರಿ! ಇಂಥದನ್ನೆಲ್ಲ ಮನಸ್ಸಿಗೆ ಬಹಳವಾಗಿ ಹಚ್ಚಿಕೊಂಡರೆ ಬದುಕುವುದು ಹೇಗೆ? ಮರೆಯಬೇಕು, ಸ್ವಾಮಿ! ಮರೆಯುವುದೇ ಮಾನವನಿಗೆ ಮದ್ದು! ಈಶ್ವರನು ಸ್ವರ್ಗದಲ್ಲಿ ಕಣ್ಣುಮುಚ್ಚಿಕೊಂಡು ಕುಳಿತಿದ್ದಾನೆ! ನಾವು ಭೂಮಿಯಲ್ಲಿ ಕಣ್ಣುಮುಚ್ಚಿಕೊಂಡೇ ಕಾಲ ನೂಕಬೇಕಾದರೆ! ಅಕಸ್ಮಾತ್ತಾಗಿ ಕಣ್ದೆರೆದಾಗ ಆಗುತ್ತೆ ನರಕದರ್ಶನ! ಆಗ ಫಕ್ಕನೆ ಕಣ್ಣು ಮುಚ್ಚಿಕೊಂಡರಾಯ್ತು! ಅದೇ ಸ್ವರ್ಗ! ಮತ್ತಿನ್ನೇನು ಸ್ವಾಮಿ? ಬೆಳಕೇ ನರಕ, ಕತ್ತಲೆಯೇ ನಾಕ! ಹೋಗಲಿ, ಬೆನ್ನು ತಟ್ಟಿಕೊಂಡು ಹುಷಾರಾಗಿ! ಎಲ್ಲಿ? ಸ್ವಲ್ಪ ನಕ್ಕುಬಿಡಿ! ಹಾಗೆ!! ಅದೀಗ ತತ್ತ್ವಜ್ಞಾನಿಯ ಲಕ್ಷಣ!!!

ಪುಟ್ಟಾಚಾರಿ ಬೆಳಗ್ಗೆ ನಸುಕು ಹರಿಯುವುದರಲ್ಲಿಯೆ ಎದ್ದು ಕಮ್ಮಾರ ಸಾಲೆಯಲ್ಲಿ ಕೆಲಸಕ್ಕೆ ಶುರುಮಾಡಿದ್ದನು. ಮಾಡಬೇಕಾದ ಕೆಲಸಗಳೂ ವಿಪರೀತವಾಗಿದ್ದುವು. ತಿದಿಯನ್ನು ಸರಿಮಾಡಿ, ಇದ್ದಲನ್ನು ಕುಲುಮೆಗೆ ಹಾಕಿ ಬೆಂಕಿ ಹೊತ್ತಿಸಿದನು. ಬೇಕಾದ ಸಾಮಾನುಗಳನ್ನೆಲ್ಲ ಹತ್ತಿರ ರಾಶಿ ಹಾಕಿಕೊಂಡು ಅಡಿಗಲ್ಲಿಗೆ ಎದುರಾಗಿ ಕುಳಿತನು. ಅಷ್ಟರಲ್ಲಿ ಕಾಡಿನಲ್ಲಿ ಕಾಡುಕೋಳಿಗಳು ಕೂಗುವ ನೀಳ್ದನಿಯನ್ನುಕೇಳಿ ಅವನ ಮನಸ್ಸು ಅತ್ತಕಡೆ ಎಳೆಯಲಾರಂಭಿಸಿತು. ಅವನು ಹುಟ್ಟಕಮ್ಮಾರನಾಗಿದ್ದರೂ ಕಬ್ಬಿಣದ ಕೆಲಸಕ್ಕಿಂತ ಬೇಟೆಯ ಕಾಡಿನ ಕೆಲಸದಲ್ಲಿಯೆ ಅವನಿಗೆ ಮಮತೆ ಹೆಚ್ಚು. ಒಲೆಗೆ ಸ್ವಲ್ಪ ನೀರು ಚಿಮುಕಿಸಿ, ಸಾಮಾನುಗಳನ್ನೆಲ್ಲ ಹಿಂದಕ್ಕಿಟ್ಟು, ಕೋವಿ ತೆಗೆದುಕೊಂಡು ಹೊರಟನು. ಅವನ ಕಾಲು ಕಟ್ಟಿಹಾಕಿದ್ದ ಜೂಜಿನ ಕುದುರೆಯ ಕಾಲಾಗಿದ್ದುವು. ಬೇಗಬೇಗನೆ ಕಾಡುಕೋಳಿಗಳ ಆಹ್ವಾನವಾಣಿಯನ್ನು ಕೇಳುತ್ತ ಅಡವಿಯೊಳಗೆ ಹೋಗುತ್ತಿದ್ದನು. ಹಿಂದೆ ಯಾರೊ ಕೂಗಿದಂತಾಯ್ತು! ಆಚಾರಿ ತಿರುಗಿದನು. ನೋಡುತ್ತಾನೆ, ಯಜಮಾನರು! ರಾಮಣ್ಣಗೌಡರು ಸ್ವಲ್ಪ ವ್ಯಂಗ್ಯವಾಣಿಯಿಂದ ” ಆಚಾರ್ಯರ ಸವಾರ ಎಲ್ಲಿಗೆ ಹೊರಟಿತು?” ಎಂದರು. ಕದಿಯುವಾಗಲೆ ಪೊಲೀಸಿನವರ ಕೈಗೆ ಸಿಕ್ಕಿ ಬಿದ್ದ ಕಳ್ಳನಾದನು ಪುಟ್ಟಾಚಾರಿ! ಗೌಡರ ಧ್ವನಿಯಲ್ಲಿ ಕೋಪವಿದೆ ಎಂದು ಗೊತ್ತಾಯಿತು. ನಿಸ್ಸಹಾಯಕ ಮಂದಸ್ಮಿತವನ್ನು ಬೀರಿ ಪುಟ್ಟಾಚಾರಿ “ಎಲ್ಲಿಗೂ ಇಲ್ಲ; ಕಾಡಿನ ಕಡೆ ಹೋಗಿಬರುತ್ತೇನೆ” ಎಂದನು. “ನಿನ್ನ ದೆಸೆಯಿಂದ ಸುಖವಿಲ್ಲ! ನೇಗಿಲ್ಲ ಕುಳಗಳಾಗಲಿಲ್ಲ; ಕತ್ತಿಗಳಾಗಿಲ್ಲ. ಹಾರೆ ಗುದ್ದಲಿಯಂತೂ ಒಂದು ತಿಂಗಳಿಂದ ಅಲ್ಲಿಯೆ ಬಿದ್ದಿವೆ. ಒರಲೆ ಕೈಲಿ ತಿನ್ನಿಸುತ್ತೀಯೊ ಏನೊ ಗೊತ್ತಿಲ್ಲ!! ದಿನ ಬೆಳಗಾದರೆ ಕೋವಿ, ಮರಸು, ಷಿಕಾರಿ! ನೀನು ಹೀಗೆ ಮಾಡಿದರೆ ಕೋವಿ ಕಸಿದಿಟ್ಟುಬಿಡುತ್ತೇನೆ” ಎಂದರು. ಪುಟ್ಟಾಚಾರಿ ಹಲ್ಲುಹಲ್ಲು ಬಿಡುತ್ತ ಮೆಲ್ಲಗೆ ಕಾಡಿಗೆ ಜಾರಿದನು. ಗೌಡರೂ ಗೊಣಗುತ್ತ ಸುಮ್ಮನಾದರು. ಅವರಿಗೆ ಸಂತೋಷವಾಗದೆ ಇರಲಿಲ್ಲ. ಏಕೆಂದರೆ ಪುಟ್ಟಾಚಾರಿ ಕಾಡಿಗೆ ಹೋದರೆ ಏನಾದರೊಂದು “ಪಕಾರ” ವಾಗದಿರುವುದಿಲ್ಲ. ಪಕಾರವೆಂದರೆ ಪಲ್ಯಕ್ಕೆ, ಅದರಲ್ಲಿಯೂ ಮಾಂಸದ ಪಲ್ಯಕ್ಕೆ, ಸೂಚನೆಯ ಹೆಸರು! ಮಾಂಸಾಹಾರಿಗಳಲ್ಲದ ಬ್ರಾಹ್ಮಣರು ಯಾರಾದರೂ ಜೊತೆಯಲ್ಲಿದ್ದರೆ ‘ಪಕಾರ’ ವೆಂಬ ಸಂಕೇತ ಶಬ್ದವನ್ನು ತಮ್ಮ ತಮ್ಮಲ್ಲಿಯೆ ಉಪಯೋಗಿಸಿಕೊಳ್ಳುತ್ತಾರೆ.

ಪುಟ್ಟಾಚಾರಿ ಕಾಡಿಗೇರಿದನು. ಕಾನುಬಾಗಿಲಿನಿಂದ ಮ್ಯಾರರ ಗುಡಿ ಹೊಂಡದ ಮಾರ್ಗವಾಗಿ ಕೆಮ್ಮಣ್ಣುಬ್ಬಿನ ಓರೆಯನ್ನು ಹಾದು ಬಿಳುಗಲ್ಲು ತುಂಡು ನೆತ್ತಿಗೆ ಹೊರಟನು. ಆಗಲೆ ಸುಮಾರು ನಾಲ್ಕೈದು ಮೈಲಿಗಳ ಅರಣ್ಯ ಪೂರೈಸಿತ್ತು. ಹಾಳು ಕಾಡುಕೋಳಿಗಳು ಕೂಗುತ್ತಿದ್ದುವೆ ಹೊರತು ಕಣ್ಣಿಗೆ ಕಾಣುತ್ತಿರಲಿಲ್ಲ. ಬೇಗ ಮರೆಯಾಗಿ ತಪ್ಪಿಸಿಕೊಂಡುವು. ಆಚಾರಿಗೆ ರೇಗಿಹೋಯಿತು. ಒಂದು ಕಡೆ ಕುಳಿತು ಒಂದು ತೆಳುವಾದ ಚಿಗುರೆಲೆಯನ್ನು ಎರಡು ಹೆಬ್ಬೆರಳುಗಳ ನಡುವೆ ಇಟ್ಟುಕೊಂಡು ಹುಂಜದಂತೆ ಕೇಕೆ ಹಾಕಿದನು; ಹೇಂಟೆ ಬರಲಿಲ್ಲ. ಹೇಂಟೆ ಹುಂಜವನ್ನು ಕರೆಯುವಂತೆ ಕೂಗಿದನು. ಹುಂಜವಾವುದೂ ಬರಲಿಲ್ಲ. ವಸಂತಮಾಸವಾಗಿದ್ದರೂ ಪ್ರಾತಃ ಕಾಲವಾಗಿದ್ದುದರಿಂದ ಅವುಗಳಿಗೆ ಕಾಮನ ಕಾಟವಿರಲಿಲ್ಲ ಎಂದು ತೋರುತ್ತದೆ. ಹೊಟ್ಟೆಯ ಕಾಟವೆ ಹೆಚ್ಚಾಗಿದ್ದುದರಿಂದ ಮೇವು ಹುಡುಕುತ್ತಿದ್ದುವೆ ಹೊರತು ಆಚಾರಿಯ ಮೋಹದ ವಾಣಿಗೆ ಮರುಳಾಗಿ ಮಾಯದ ಬಲೆಗೆ ಬೀಳಿಲಿಲ್ಲ.

ಆಚಾರಿಗೆ ಇನ್ನೂ ರೇಗು ಹೆಚ್ಚಾಯಿತು. ಅದರಲ್ಲಿಯೂ ಬೇಟೆಯಾಗದೆ ಬರುಗೈಯಲ್ಲಿ ಹಿಂತಿರುಗಿದರೆ ಗೌಡರು ಮತ್ತೂ ಕೋಪಗೊಳ್ಳುವರು! ಏನಾದರೂ ಮಾಡಿ ಏನನ್ನಾದರೂ ಹೊಡೆದುಕೊಂಡೇ ಹೋಗಬೇಕೆಂದು ದೃಢನಿಶ್ಚಯ ಮಾಡಿಕೊಂಡನು. ಅಷ್ಟರಲ್ಲಿ ಬಿಳುಗಲ್ಲುತುಂಡಿನ ನೆತ್ತಿಯ ಕಾಡಿನಲ್ಲಿ ಒಂದು ಹುಂಜ ಕೇಕೆ ಹಾಕಿತು. ಆಚಾರಿ ಅದನ್ನು ಕೊಂದೇ ಬಿಡುತ್ತೇನೆ ಎಂದು ಶಪಥ ಹಾಕಿಕೊಂಡು ಕೆರಳಿ ಮೇಲೇರಿದನು. ಎತ್ತುಬೀಳು, ಕೆಂಜಿಗೆಮುಳ್ಳು, ಬಳ್ಳಿತುರಚಿ ಯಾವುದನ್ನೂ ಲಕ್ಷ್ಯಮಾಡದೆ ನಡೆದನು. ಅಷ್ಟು ಹೊತ್ತಿಗೆ ಕೋಳಿ ಕೂಗು ನಿಲ್ಲಿಸಿತ್ತು. ದರಿದ್ರ ಜಂತು ಅಲ್ಲೆ ಎಲ್ಲಿಯೋ ಇರಬೇಕೆಂದು ಭಾವಿಸಿ ಆಚಾರಿ ಧಾವಿಸಿದನು.

ಅರಣ್ಯ ಇಳಿಜಾರಾಗಿತ್ತು. ಆಚಾರಿ ಕೆಳಗಿನಿಂದ ಮೇಲೇರುತ್ತಿದ್ದನು. ಹೋಗುತ್ತ ದೂರದಲ್ಲಿ ಏನನ್ನೊ ಕಂಡು ನಿಂತನು. ಮೇಲೆ ಕಾಡಿನ ಮಧ್ಯದಲ್ಲಿ ಒಂದೆರಡು ಮಾರು ಅಗಲ ಬಯಲಾಗಿತ್ತು. ಹುಲ್ಲು ಎದೆಯೆತ್ತರ ಬೆಳೆದಿತ್ತು. ಆ ಹುಲ್ಲಿನ ಮೇಲೆ ಒಂಬತ್ತು ಗಂಟೆಯ ಬಿಸಿಲು ಬಿದ್ದಿತ್ತು. ಅಲ್ಲಿ ಹೆಣ್ಣು ಹೆಬ್ಬುಲಿಯೊಂದು ತನ್ನ ಮರಿಗಳೊಡನೆ ಎಳಬಿಸಿಲಿನಲ್ಲಿ ಮಲಗಿ ಚೆಲ್ಲಾಟವಾಡುತ್ತಿತ್ತು. ಹುಲಿಯ ಬಾಲದ ತುದಿ ಮಾತ್ರ ಬೆಳೆದ ಹುಲ್ಲಿನ ಮೇಲೆ ಬಂದು ಬಿಸಿಲಿನಲ್ಲಿ ಕುಣಿದಾಡುತ್ತಿತ್ತು. ಅದನ್ನು ಆಚಾರಿ ಕಾಡುಕೋಳಿಯ ನೇಲುಪುಕ್ಕದ ನೀಳ್ಗರಿಗಳೆಂದು ನಿರ್ಧರಿಸಿದನು. ಕಾಡುಕೋಳಿಯ ಹುಂಜದ ಪುಕ್ಕದಲ್ಲಿ ಇತರ ಎಲ್ಲ ಗರಿಗಳಿಗಿಂತಲೂ ಉದ್ದವಾಗಿ ಎರಡು ಗರಿಗಳು ಮಾತ್ರ ಬಿಂಕದಿಂದ ಕೊಂಕಿ ತಲೆಯೆತ್ತಿಕೊಂಡಿರುತ್ತವೆ. ಅಂತೂ ಕೆರಳಿದ್ದ ಆಚಾರಿಯ ಕಂಗಳಿಗೆ ಕಾಡುಕೋಳಿಯ ನೀಳ್ಗರಿಗಳಂತೆ ತೋರಿತು ಹುಲಿಯ ತುದಿಬಾಲ. ಶುದ್ಧಪೆಚ್ಚು! ಸ್ವಲ್ಪ ಯೋಚನೆ ಮಾಡಿದ್ದರೆ ಸತ್ಯ ಹೊಳೆಯುತ್ತಿತ್ತು. ಎದೆಯೆತ್ತರ ಬೆಳೆದ ಹುಲ್ಲಿನಲ್ಲಿ ಕಾಡುಕೋಳಿಗಳಿದ್ದರೆ ಎಷ್ಟುದ್ದ ಪುಕ್ಕವಾದರೂ ಹುಲ್ಲಿನ ಮೇಲೆ ಕಾಣುವುದಾದರೂ ಹೇಗೆ? ಕುಣಿಯುವ ನವಿಲಿನ ಪುಕ್ಕವಾದರೂ ಕಾಣುವುದಿಲ್ಲ! ಅಂತೂ ಆಚಾರಿ ಕಾಡುಕೋಳಿ ತನ್ನ ಬಗಲಿಗೆ ಬಿತ್ತೆಂದು ತಿಳಿದು ಹಿಗ್ಗಿದನು. ಅದಕ್ಕೆ ಕಾಣಿಸಿಕೊಳ್ಳಬಾರದೆಂದು ನೆಲದವರೆಗೂ ಹಬ್ಬಿ ಬಾಗಿ ಹಳುವಿನಲ್ಲಿ ತೂರತೊಡಗಿದನು. ಆದಷ್ಟು ಸಮೀಪಕ್ಕೆ ಹೋಗಿ ಮೆಲ್ಲಗೆ ಎದ್ದು ನಿಂತು ಸುಡಬೇಕೆಂದು ನಿಶ್ಚಯಿಸಿ ಬಹಳ ಕಷ್ಟಪಟ್ಟು ಮೆಲ್ಲಮೆಲ್ಲಗೆ ಮುಂದುವರಿದನು.

ಅತ್ತ ತಾಯಿಹುಲಿ ತನ್ನ ಹಸುಳೆಗಳೊಡನೆ ಹಸುಳೆಬಿಸಿಲಿನಲ್ಲಿ ಮುದ್ದಾಟ ವಾಡುತ್ತಿತ್ತು. ಮರಿಗಳು ಒಂದರ ಮೇಲೊಂದು ನೆಗೆದು ತಾಯಿಯ ಸುತ್ತಲೂ ಕುಣಿದಾಡುತ್ತ, ಕೆಲವು ಸಾರಿ ಅಮ್ಮನ ಮೈ ಮೇಲೆ ಹಾರಿ ಕುಳಿತುಕೊಂಡು ಪಲ್ಗಿರಿಯುತ್ತ, ಚರ್ಮವನ್ನು ಆಟಕ್ಕೆ ಕಚ್ಚಿ ಎಳೆಯುತ್ತ, ನಡುನಡುವೆ ಕೆಸ್‌ಪುಸ್ ಎನ್ನುತ್ತ ಚೆಲ್ಲಾಟವಾಡುತ್ತಿದ್ದುವು. ತಾಯಿಹುಲಿ ಮರಿಗಳನ್ನು ಮುಂಗಾಲ್ಗಳಿಂದ (ಹುಲಿಯ ಮುಂದಿನ ಎರಡು ಕಾಲ್ಗಳನ್ನು ಕೈಗಳೆಂದು ಕರೆಯುತ್ತಾರೆ.) ನೂಕಿ ಕೆಡಹುತ್ತ, ಬಾಯ್ದೆರೆದು, ಬಾಯ್ದೆರೆದ ಮರಿಗಳ ದವಡೆಯನ್ನು ಕುಡಿಯುವಂತೆ ನಟಿಸುತ್ತ, ಬಿಸಿನಲ್ಲಿ ತನ್ನ ಬಣ್ಣಬಣ್ಣದ ನುಣ್ ನವರಿನ ಲಾಂಗೂಲವನ್ನು ಎತ್ತಿ ಆಡಿಸುತ್ತಿತ್ತು. ಹೀಗೆ ಆಟದಲ್ಲಿ ತಲ್ಲೀನವಾದ, ತನ್ನ ಮಕ್ಕಳೊಡನೆ ತನ್ನ ಹುಲಿತನವನ್ನು ಬಿಟ್ಟು ಬರಿಯ ತಾಯಿ ಮಾತ್ರವಾಗಿದ್ದ ಆ ಹೆಬ್ಬುಲಿ ದೂರದಲ್ಲಿ ಏನೊ ಸರಸರ ಸದ್ದಾಗುತ್ತಿದ್ದುದನ್ನು ಆಲಿಸಿ ಇದ್ದಕ್ಕಿದ್ದ ಹಾಗೆ ಆಟದ ಭಾವವನ್ನು ತೆಗೆದೊಗೆದು ಹಿಂಗಾಲ್ಗಳ ಮೇಲೆ ಕುಳಿತು ಮುಂಗಾಲ್ಗಳನ್ನು ನೀಳವಾಗಿ ಊರಿಕೊಂಡು ನಿಮಿರಿ ನಿಂತು ಅನಂತವಾದ ಅರಣ್ಯಪ್ರದೇಶವನ್ನು ಅನ್ವೇಷಕ ದೃಷ್ಟಿಯಿಂದ ಪರೀಕ್ಷಿಸತೊಡಗಿತು. ಮರಿಗಳು ಆಟವನ್ನು ನಿಲ್ಲಿಸಿ ತಾಯಿಯ ಹೊಟ್ಟೆಯಡಿ ಮೌನವಾಗಿ ಹುದುಗಿದುವು. ದೂರದಲ್ಲಿ ಹುಲ್ಲು ಬೆಳೆದಿದ್ದ ಹಳು ಮೆಲ್ಲಗೆ ಅಲ್ಲಾಡುತ್ತಿದ್ದುದು ಹುಲಿಯ ಕಣ್ಣಿಗೆ ಬಿತ್ತು. ಹುಲ್ಲಿನ ಅಲ್ಲಾಟ ತನ್ನ ಕಡೆಗೇ ಬರುತ್ತಿದ್ದುದೂ ಗೊತ್ತಾಯಿತು. ಹೆಬ್ಬುಲಿ ಮೀಸೆಯನ್ನು ಹುರಿಮಾಡಿಕೊಂಡು ಉಗ್ರದೃಷ್ಟಿಯಿಂದ ನೋಡತೊಡಗಿತು.

ಪುಟ್ಟಾಚಾರಿ ನೆಲಕ್ಕೆ ಹಬ್ಬಿಕೊಂಡೇ ಮೆಲ್ಲಗೆ ಬರುತ್ತಿದ್ದನು. ಆದಷ್ಟು ಸಮೀಪಕ್ಕೆ ಹೋದರೆ ಕೋಳಿಗೆ ಚೆನ್ನಾಗಿ ಗುರಿ ತಗುಲಿಸಬಹುದೆಂದು ಬಗೆದು ತಲೆಯೆತ್ತಿ ನೋಡದೆ ಬಗ್ಗಿ ಬಗ್ಗಿ ನಡೆದು ಅವನಿಗೆ ಆಯಾಸವಾಗಿತ್ತು. ಇಷ್ಟು ದೂರ ಬಂದದ್ದು ಸಾಕೆಂದು ಭಾವಿಸಿ ನೆಲದಮೇಲೆ ಮಂಡಿಯೂರಿ ಕುಳಿತು, ಕೋವಿಯನ್ನು ಸಿದ್ದಪಡಿಸಿದನು. ಹುಲಿ ತಲೆಯೆತ್ತಿ ನೋಡುತ್ತಿತ್ತು. ಅದರ ತಲೆ ಮಾತ್ರ ಹುಲ್ಲಿನ ಮೇಲಿತ್ತು. ಅದಕ್ಕೂ ಕೂಡ ಪ್ರಾಣಿ ಇಂಥಾದ್ದೆಂದು ಗೊತ್ತಾಗಲಿಲ್ಲ. ಮನುಷ್ಯನೆಂದು ಗೊತ್ತಾಗಿದ್ದರೆ ಮೊದಲೇ ಮರಿಗಳನ್ನು ಕಟ್ಟಿಕೊಂಡು ಓಡಿಹೋಗುತ್ತಿತ್ತು. ನಮಗೆ ಹುಲಿಯನ್ನು ಕಂಡರೆ ಹೇಗೆ ಭಯವೊ ಹಾಗೆಯೆ ಹುಲಿಗೆ ನಮ್ಮನ್ನು ಕಂಡರೆ ಭಯ.

ಆಚಾರಿ ಕಾಡುಕೋಳಿ ಅಲ್ಲಿಯೇ ಮೇಯುತ್ತಿರಬೇಕೆಂದು ಭಾವಿಸಿ, ಕೋವಿಯನ್ನು ಹಾರಿಸಲು ಹವಣಿಸಿ ಹಿಡಿದುಕೊಂಡು, ಎಲ್ಲಿ ಕೋಳಿಗೆ ತಾನು ಕಂಡುಬಿಡುವೆನೋ ಎಂಬ ಭಯದಿಂದ ಮೆಲ್ಲಗೆ ತಲೆಯನ್ನು ನಿಕ್ಕುಳಿಸಿಕೊಂಡು ಅರ್ಧ ಎದ್ದುನಿಂತು ನೋಡಿದನು: ಕೋಳಿಗೆ ಬದಲಾಗಿ ಬಣ್ಣ ಬಣ್ಣದ, ಕಣ್ಣು ಕಣ್ನಿನ, ನಿಂತ ಮೀಸೆಯ, ನಿಮಿರ್ದ ಕಿವಿಗಳ, ಚಿಲಿದ ಹಲ್ಗಳ, ಹೆಬ್ಬುಲಿಯ ಹೆಮ್ಮಂಡೆ! ಆಚಾರಿಗೆ ಹುಲಿಯ ಕಣ್ಗಳು ಬಂದು ತನ್ನ ಕಣ್ಗಳಿಗೆ ತಿವಿದಂತಾಯಿತು. ಮನುಷ್ಯ ಅಷ್ಟು ಸಮೀಪ ತನ್ನ ಕೆಳಗಡೆ ಇರುವುದನ್ನು ಕಂಡು ತುಸು ಬೆಚ್ಚಿದ ಹುಲಿ ಸರಿಯಾಗಿ ನಾಲ್ಕು ಕಾಲುಗಳ ಮೇಲೆಯೂ ಧೀರವಾಗಿ ಎದ್ದುನಿಂತು ಗುರ್ರೆಂದಿತು. ಆಚಾರಿಗೆ ನೆತ್ತರು ನಾಡಿಗಳಲ್ಲಿ ಹೆಪ್ಪುಗಟ್ಟಿದಂತಾಯ್ತು. ಬೇಟೆಯ ಅನುಭವ ಅವನಿಗೆ ಚೆನ್ನಾಗಿತ್ತು. ಹುಲಿಯ ರೀತಿನೀತಿಗಳು ಅವನಿಗೆ ಅಪರಿಚಿತವಾದುವಾಗಿರಲಿಲ್ಲ. ಒಂದುಕ್ಷಣದಲ್ಲಿಯೆ ಹುಲಿ “ಮರಿಹುಲಿ” ಎಂದು ತಿಳಿದನು. ಮರಿಗಳು ಕೆಸ್ ಪುಸ್ ಎನ್ನುತ್ತಿದ್ದುದೂ ಅವನಿಗೆ ಕೇಳಿಸತು. ಸಂದರ್ಭ ಅತ್ಯಂತ ಅಪಾಯಕರವಾಗಿತ್ತು. ಯಾವಾಗ ಹುಲಿ ಎದ್ದು ನಿಂತು ಮೈಮೇಲೆ ನೆಗೆಯುವಂತೆ ನಟಿಸಿತೋ ಆಗಲೇ ಆಚಾರಿಯೂ ಕೋವಿಯನ್ನು ಸಿದ್ಧವಾಗಿ ಹಿಡಿದುಕೊಂಡು ನೆಟ್ಟಗೆ ಎದ್ದುನಿಂತೇಬಿಟ್ಟನು. ಒಂದು ವೇಳೆ ಹುಲಿ ಮೇಲೆ ಬಿದ್ದರೆ ಸುಮ್ಮನೆ ಸಾಯುವುದಕ್ಕಿಂತ ಅದಕ್ಕೂ ಒಂದು ಗುಂಡು ತಗುಲಿಸಿಯೇ ಸಾಯುವೆನೆಂದು ನಿಶ್ಚಯಿಸಿ ನಿಂತನು. ಒಬ್ಬರನ್ನೊಬ್ಬರು ನೋಡುತ್ತ ನಿಂತರು.

ಇಬ್ಬರಿಗೂ ಪ್ರಾಣಸಂಕಟ. ಹುಲಿಗೆ ಮರಿಗಳ ಮೇಲಿನ ಮಮತೆ. ಆಚಾರಿಗೆ ಮನೆಯ ಮೇಲಿನ ಮಮತೆ. ಬಹುಶಃ ಮರಿಗಳಿಲ್ಲದಿದ್ದರೆ ಹುಲಿ ಆಚಾರಿ ತಲೆಯೆತ್ತಿ ನೋಡುವಷ್ಟರಲ್ಲಿಯೆ ಕಂಡು ಮಿಂಚಿ ಕಣ್ಮರೆಯಾಗಿ ಬಿಡುತ್ತಿತ್ತು. ಇಬ್ಬರಿಗೂ ಕಷ್ಟವಿರಲಿಲ್ಲ. ಈಗ ಮರಿಗಳನ್ನು ಬಿಟ್ಟು ಹುಲಿ ಏನೇ ಆಗಲಿ ಓಡುವುದಿಲ್ಲ. ಆಚಾರಿಗೆ ಈಡು ಹೊಡೆಯುವುದಕ್ಕೂ ಭಯ! ಹಿಂತಿರುಗುವುದಕ್ಕೂ ಭಯ! ಆಚಾರಿ ಹುಲಿ ಹಾರಿದರೆ ಹೊಡೆಯೋಣವೆಂದು ನಿಂತನು. ಹುಲಿ ಆಚಾರಿ ಮುಂದೆ ಹೆಜ್ಜೆಯಿಟ್ಟರೆ ಮೇಲೆ ಬೀಳುವುದು ಎಂದು ನಿಂತಿತು. ಇಬ್ಬರಿಗೂ ಮುಂದೇನು ಮಾಡಬೇಕೋ ಗೊತ್ತಾಗಲಿಲ್ಲ.

ಕಡೆಗೆ ಆಚಾರಿ ಒಂದು ಉಪಾಯ ಹೂಡಿದನು. ಹುಲಿಗೆ ಗೊತ್ತಾಗದಂತೆ ಹತ್ತು ಕ್ಷಣಕ್ಕೊಂದು ಹೆಜ್ಜೆಯಂತೆ ಹಿಂದುಹಿಂದಕ್ಕೆ ಮೆಲ್ಲಗೆ ಚಲಿಸತೊಡಗಿದನು. ಅವನ ದೃಷ್ಟಿ ಹುಲಿಯ ಮೇಲೆ ಇತ್ತು. ಕೈಗಳೆರಡೂ ಯಾವಾಗ ಬೇಕೆಂದರೆ ಆಗ ಈಡು ಹಾರಿಸಲು ಸಿದ್ಧವಾಗಿಯೆ ಇದ್ದುವು. ಇಳಿಜಾರಾದ ಮೊರಡುಗುಡ್ಡವನ್ನು ಆ ಹಳುವಿನಲ್ಲಿ ಹಿಮ್ಮೊಗವಾಗಿಇಳಿಯುವುದು ಒಂದು ದೊಡ್ಡ ಸಾಹಸವೆ ಸರಿ! ಆಚಾರಿ ಎರಡು ಹೆಜ್ಜೆ ಹಿಮ್ಮೆಟ್ಟುವನು. ಸ್ವಲ್ಪ ನಿಂತು ವಿಶ್ರಮಿಸಿಕೊಳ್ಳುವನು. ಹೀಗೆ ಮೆಲ್ಲಗೆ ಸರಿದನು. ಹುಲಿಗೆ ಮೊದಲು ಮೊದಲು ಅವನು ಸರಿದುದು ಗೊತ್ತಾಗಲಿಲ್ಲ. ಕಡೆಗೆ ಗೊತ್ತಾಯಿತೆಂದು ತೋರುತ್ತದೆ. ಏಕೆಂದರೆ ಆಚಾರಿ ಹಿಂದೆ ಹೋದಂತೆಲ್ಲ ಹುಲ್ಲಿನ ಮೇಲ್ಭಾಗದಲ್ಲಿರುತ್ತಿದ್ದ ಅವನ ದೇಹ ಕಡಮೆಯಾಗುತ್ತ ಬಂತು. ಹುಲಿ ತನ್ನ ಕತ್ತನ್ನು ನೀಳವಾಗಿ ನಿಕ್ಕುಳಿಸುತ್ತಿತ್ತು. ಒಂದು ಸಾರಿ ಹುಲಿ ಮೇಲೆ ಹಾರುವಂತೆ ಸಂಚು ತೋರಿತು. ಆಚಾರಿ ಕೋವಿಯ ಕುದುರೆಯನ್ನು ಸದ್ದುಮಾಡದೆ ಎಳೆದನು. ಆದರೆ ಹುಲಿ ಹಾರಲಿಲ್ಲ. ಗುರ್ರೆಂದು ಅಲ್ಲಿಯೆ ನಿಂತಿತು. ಅದಕ್ಕೂ ಹಾಳುಮನುಷ್ಯ ತೊಲಗಿದರೆ ಸಾಕಾಗಿತ್ತು. ಆಚಾರಿ ಪುನಃ ಕುದುರೆಯನ್ನು ಕೆಳಗಿಳಿಸಿ ತನ್ನ ಕಾರ್ಯಕ್ಕೆ ಕೈಹಾಕಿದನು. ಬಿಸಿಲೇರುತ್ತಿತ್ತು.

ಆಚಾರಿ ಎರಡು ಗಂಟೆಯ ಹೊತ್ತು ಹೀಗೆ ಹಿಂದಕ್ಕೆ ನಡೆದು ಸ್ವಲ್ಪ ಮರೆಮರೆಯಾದ ಜಾಗಕ್ಕೆ ಬಂದನು. ಹುಲಿ ಇನ್ನೂ ನೋಡುತ್ತಲೇ ಇತ್ತು. ಇನ್ನೂ ಸ್ವಲ್ಪ ದೂರ ಹಾಗೆಯೇ ಹೋಗಿ ಹುಲಿಗೆ ಈಡು ಹೊಡೆಯುವೆನೆಂದು ಆಚಾರಿ ನಿರ್ಧರಿಸಿದನು. ಮತ್ತೆ ಸ್ವಲ್ಪ ಅಳುಕಿದನು. ಏಕೆಂದರೆ ಅವನು ಕೋವಿಗೆ ತುಂಬಿದ್ದುದು ಸಣ್ಣ ಚರೆಯ ಈಡು; ಕಾಡುಕೋಳಿಗೆಂದು. ಆ ಈಡು ಹುಲಿಯ ರೋಮಕ್ಕೂ ಸಾಲದು, ಸುಮ್ಮನೆ ಅದನ್ನು ಕೆಣಕಿ ಮೈಮೇಲೆ ಹಾಕಿಕೊಂಡರೆ ಅನಾಹುತವಾಗುವುದೆಂದು ಅವನು ಅಳುಕಿದ್ದು.

ನಡೆಯುತ್ತ ನಡೆಯುತ್ತ ಆಚಾರಿ ದೂರ ಹೋದನು. ಕಡೆಗೆ ಒಂದು ಬೆದುರುಗುಂಡು ಹೊಡೆಯುವೆನೆಂದು ಬಗೆದು, ನೋಡಿದನು. ಹುಲಿ ತನ್ನ ಮರಿಗಳೊಡನೆ ಮಾಯವಾಗಿತ್ತು. ಆಚಾರಿ ನಿಟ್ಟುಸಿರೆಳೆದನು. ಆದರೆ ಅವನಿಗೆ ಬಹಳ ವ್ಯಸನವಾಯಿತು, ಕೋವಿಗೆ ಗುಂಡು ಹಾಕಿರಲಿಲ್ಲವೆಂದು. ಚರೆಯಲ್ಲದೆ ಗುಂಡು ಹಾಕಿದ್ದರೆ ಅವನು ಹುಲಿಯನ್ನು ಮೊದಲು ಎದುರುಗೊಂಡ ಸ್ಥಳದಲ್ಲಿಯೆ ಧೈರ್ಯವಾಗಿ ಸುಡುತ್ತಿದ್ದನು. ಹಿಂದೆ ಹಾಗೆಯೆ ಹುಲಿಗಳನ್ನು ಹೊಡೆದಿದ್ದನು. ಅವನ ಗುರಿ ಇಟ್ಟಲ್ಲಿಗೆ ತಪ್ಪದೆ ಬೀಳುತ್ತಿತು. ಹುಲಿಯ ಹಣೆಗೆ ಸರಿಯಾಗಿ ಗುಂಡುತಗುಲಿಸಿದ್ದರೆ ಅದು ಅತಿತ್ತ ಅಲ್ಲಾಡದೆ ಬೀಳುತ್ತಿತ್ತು. ಅವನಿಗೂ ಗೌಡರಿಂದ ದೊಡ್ಡ ಶಿಫಾರಸು ದೊರಕುತ್ತಿತ್ತು. ಒಳ್ಳೆಯ ಸಂದರ್ಭ ಕೈತಪ್ಪಿ ಹೋಯಿತಲ್ಲಾ ಎಂದು ಮರುಗಿ ಆಯಾಸಗೊಂಡು ಮನೆಯ ಕಡೆ ತಿರುಗಿದನು.

ಕಾಡುಕೋಳಿಯಂತೂ ಸಿಕ್ಕಲೆ ಇಲ್ಲ. ಅದಕ್ಕೆ ಬದಲಾಗಿ ಸಾಹಸ ಕಥೆಯೊಂದನ್ನು ತೆಗೆದುಕೊಂಡುಹೋದನು. ಗೌಡರು ಅವನು ಬರುಗೈಯಲ್ಲಿ ಬಂದುದಕ್ಕಾಗಿ ಬಯ್ದರು. ಕಥೆಯನ್ನು ಕೇಳಿದ ಇತರರು ಅಸಡ್ಡೆ ಮಾಡಿದರು. ಯಾರೂ ಹೊಗಳಲಿಲ್ಲ. ಹುಲಿಯನ್ನು ಕೊಂದಿದ್ದರೆ ಎಲ್ಲಾ ಹೊಗಳುತ್ತಿದ್ದರು. ಇಂತಹ ಕಥೆಗಳನ್ನು ದಿನದಿನವೂ ಕೇಳುವ ಮೆಲನಾಡಿಗರಿಗೆ ಪುಟ್ಟಾಚಾರಿಯ ಸಾಹಸ ಬಹು ಸಾಮಾನ್ಯವಾಗಿ ತೋರಿತು! ಆದರೆ ಅವನು ಮಾತ್ರ ತಾಳ್ಮೆ ತೋರದೆ, ಸ್ವಲ್ಪ ಅವಿವೇಕಮಾಡಿದ್ದರೆ ಊರಿನವರಿಗೆಲ್ಲ ಫಜೀತಿಗೆ ಬರುತ್ತಿತ್ತು. ಕೋರ್ಟು, ಪೊಲೀಸು ಮೊದಲಾದ ಭಯಂಕರ ವ್ಯಾಪಾರಗಳಿಗೆ ಸಿಕ್ಕಬೇಕಾಗುತ್ತಿತ್ತು.

ಅವನು ಇತರರಿಗೆ ಆ ಕಥೆಯನ್ನು ಹೇಳುತ್ತಿದ್ದಾಗ ಹುಡುಗನಾಗಿದ್ದ ನಾನೂ ಕೇಳಿದ್ದೆ. ಈಗ ಅವನು ಸತ್ತು ಹನ್ನೆರಡು ವರ್ಷಗಳಾಯಿತು. ಆದರೂ ಅವನೂ ಅವನ ಕಥೆಯೂ ನನ್ನ ನೆನಪಿನಿಂದ ಅಳಿಸಿ ಹೋಗಿಲ್ಲ. ತಾನು ಸತ್ತು ಹತ್ತು ಹನ್ನೆರಡು ವರ್ಷಗಳಾದ ಮೇಲೆ ತನ್ನ ಅನೇಕ ಸಾಹಸಗಳಲ್ಲಿ ಒಂದಾದ ಈ ಸಾಹಸ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಪ್ರಸಿದ್ಧಿಗೆ ಬರುವುದೆಂದು ಪುಟ್ಟಾಚಾರಿಗೆ ಆಗಲೇ ಗೊತ್ತಿದ್ದರೆ! ಸ್ವಲ್ಪ ಹೆಮ್ಮೆಯಿಂದ ಸಾಯುತ್ತಿದ್ದನು ಎನ್ನುವಿರಾ? ಇಲ್ಲ; ಇಂದಿಗೂ ಇಲ್ಲ. ಮಹಾತ್ಮರಲ್ಲಿಯೂ ಇರುವ ಯಶೋಭಿಲಾಷೆ ಎಂಬ ಕಟ್ಟಕಡೆಯ ದೌರ್ಬಲ್ಯಪಿಶಾಚಿ ಅವನಿಗೆ ಹಿಡಿದಿರಲಿಲ್ಲ. ಯಾರೂ ಅರಿಯದ ವೀರರ ಗುಂಪಿಗೆ ಸೇರಿದವನವನು. ಮೌನವಾಗಿ ಬಂದು ಮೌನವಾಗಿ ಹೋಗುವರವರು. ಹರತಾಳ ಮಾಡಬೇಕೆಂಬ ವಿದ್ಯಾರ್ಥಿಗಳಿಗೆ ಅಂಥವರಿಂದ ಸ್ವಲ್ಪವೂ ಪ್ರಯೋಜನವಿಲ್ಲ.

* * *