ಮಲೆನಾಡಿನ ಗೋಪಾಲಕರು ದಿಟ್ಟರು; ಕೆಚ್ಚೆದೆಯಾಳುಗಳು! ಅಲ್ಲದೆ ಕಷ್ಟಸಹಿಷ್ಣುಗಳು. ಗಿರಿವನಗಳಲ್ಲಿ ಮಳೆಬಿಸಿಲೆನ್ನದೆ ಅಲೆದು ಅಲೆದು ಗಟ್ಟಿ ಮುಟ್ಟಾಗಿರುವರು. ಅವರ ಉಡುಪೆಂದರೆ, ಮೊಳಕಾಲು ಮೀರದ ಕೊಳಕಾದ ಪಂಚೆ ಒಂದು, ಯಾರಾದರೂ ಪುಣ್ಯಾತ್ಮರು ಧರ್ಮಮಾಡಿದ ಹರಕು ಅಂಗಿ ಒಂದು! ಇಷ್ಟೇ ಹೊರತು ಮತ್ತೇನೂ ಇಲ್ಲ. ಕಂಬಳಿಯೊಂದು ಮಾತ್ರ, ಹರಕಾಗಲಿ ಒಳ್ಳೆಯದಾಗಲಿ, ಇದ್ದೇ ಇರುತ್ತದೆ. ಸೊಂಟಕ್ಕೆ ಒಡ್ಯಾಣವೆಂಬ ದಟ್ಟಿಯನ್ನು ಬಿಗಿಯುತ್ತಾರೆ. ಒಡ್ಯಾಣ ಅವರ ಸ್ವಂತ ತಯಾರಿ. ಅದಕ್ಕೆ ಹಿಂಭಾಗದಲ್ಲಿ ಒಂದು ಕಬ್ಬಿಣದ ಕೊಂಡಿಯನ್ನಿಡುವರು. ಆ ಕೊಂಡಿಯಲ್ಲಿ ಅವರು ಸದಾ ತಮ್ಮ ಕೆಲಸದ ಕತ್ತಿ (ಖಡ್ಗವಲ್ಲ) ಯನ್ನು ಸಿಕ್ಕಿಸಿಕೊಂಡೇ ಇರುತ್ತಾರೆ. ಅದಿಲ್ಲದೆ ಅವರು ಹೊರಗೆ ಹೊರಡುವುದೇ ಇಲ್ಲ. ಬಣ್ಣದಲ್ಲಿ ಅವರು ‘ಸ್ವಲ್ಪ’ ಕಪ್ಪು. ಮೊರಡಾದ ಅವರ ದೇಹ ಅವರ ಜೀವನದ ಕಾಠಿನ್ಯವನ್ನು ತೋರ್ಪಡಿಸುವುದು. ಆಧರೂ ಅವರು ನಡೆನುಡಿಗಳಲ್ಲಿ ಬಹಳ ವಿನಯರು, ಗರ್ವವಿಲ್ಲ. ಅತ್ಯಾಶೆಯಿಲ್ಲದೆ, ಬಂದುದನ್ನು ತಿಂದುಂಡು ಸುಖದಲ್ಲಿ ಕಾಲ ಕಳೆಯುವವರಲ್ಲದೆ, ಹಾಳು ವ್ಯಾಜ್ಯಗಳಿಗೆ ಕೈ ಹಾಕುವುದಿಲ್ಲ. ಅವರ ಜೀವನದ ಮಹಿಮೆ ಬ್ರಹ್ಮನಿಗೆ ತಿಳಿಯುವುದಲ್ಲದೆ ಬೇರೆ ಯಾರಿಗೂ ಚೆನ್ನಾಗಿ ಗೊತ್ತಾಗುವುದಿಲ್ಲ. ಅಂಥಾ ಸೌಜನ್ಯ ಅವರಿಗೆ ಗೋವುಗಳ ಸಹವಾಸದಿಂದ ಬಂದಿದೆಯೋ ಏನೋ ಗೊತ್ತಾಗುವುದಿಲ್ಲ!

ಅವರು ದಿನದಿನವೂ ಬೆಳಗ್ಗೆ ಎದ್ದು ಗಂಜಿಯುಡು, ಹಾಲುಕರೆದ ಮೇಲೆ ತುರುಗಳನ್ನೆಲ್ಲಾ ಮೇಯಿಸಲು ಹೊಡೆದುಕೊಂಡು ಹೋಗುವರು. ಪುನಃ ಅವರು ಹಿಂತಿರುಗುವುದ ಸುಮಾರು ಸಾಯಂಕಾಲು ಐದು ಗಂಟೆಗೆ. ಅಷ್ಟು ಹೊತ್ತಿನವರಗೆ ದನಗಳನ್ನು ಹುಲ್ಲು ಹುಲುಸಾಗಿರುವ ಜಾಗಗಳಿಗೆಲ್ಲಾ ಹೊಡೆದುಕೊಂಡು ಹೋಗಿ ಚೆನ್ನಾಗಿ ಮೇಯಿಸುವರು. ಬೇಸಗೆಯಲ್ಲಾದರೆ ನಡುಹಗಲಿನಲ್ಲಿ ಗೋವುಗಳನ್ನೆಲ್ಲ ನೆರಳಿರುವ ತಂಪಾದ ಕಡೆಗೆ ‘ಅಟ್ಟಿಕೊಂಡು ಹೋಗಿ ಬಿಡುವರು. ಅಲ್ಲಿ ಅವುಗಳೆಲ್ಲ ಸ್ವಲ್ಪ ಹೊತ್ತು ಮಲಗಿ ಮೆಲುಕು ಹಾಕುತ್ತಾ ವಿಶ್ರಮಿಸಿಕೊಳ್ಳುತ್ತವೆ. ಹೀಗೆ ವಿಶ್ರಮಿಸಿಕೊಳ್ಳುವ ಸ್ಥಳ ದಿನ ದಿನವೂ ಬದಲಾಯಿಸಲ್ಪಡುವುದಿಲ್ಲ. ಅದೊಂದು ವಂಶ ಪಾರಂಪರ್ಯವಾಗಿ ಬಂದ ಗೊತ್ತಾದ ಸ್ಥಳ. ಅದಕ್ಕೆ ಗೋಪಾಲರು ತಮ್ಮ ಪರಿಭಾಷೆಯಲ್ಲಿ “ತರುಬುಗುಣಿ” ಎಂದು ಕರೆಯುತ್ತಾರೆ. ಇಂಥಾ ‘ತರುಬುಗುಣಿ’ಯನ್ನು ನೋಡಿದ ಕೂಡಲೆ ಎಂದು ಕರೆಯುತ್ತಾರೆ. ಇಂಥಾ ‘ತರುಬುಗುಣಿ’ಯನ್ನು ನೋಡಿದ ಕೂಡಲೆ ತಿಳಿದುಕೊಳ್ಳಬಹುದು; ಏಕೆಂದರೆ ಅಲ್ಲಿ ಒಂದು ಹಸುರು ಎಸಳಾದರೂ ಹುಟ್ಟಿರುವುದಿಲ್ಲ. ದನಗಳ ಗುಂಪು ಎಷ್ಟೊ ವರ್ಷಗಳಿಂದ ಮಲಗಿ ಮಲಗಿ ಆ ನೆಲ ಕಾಲುದಾರಿಯಂತೆ ಸಂಪೂರ್ಣವಾಗಿ ಸಮೆದಿರುತ್ತದೆ.

ಗೋವುಗಳು ‘ತರುಬುಗುಣಿ’ಯಲ್ಲಿ ವಿಶ್ರಮಿಸಿಕೊಳ್ಳುತ್ತಿರುವಾಗ ಗೋಪಾಲಕರು ತಮ್ಮ ಸಾಂಪ್ರದಾಯಿಕ ಕಾರ್ಯಗಳನ್ನೆಸಗುತ್ತಾರೆ. (ಮಲೆನಾಡಿನ ಅರಣ್ಯಗಳಲ್ಲಿ ಹಣ್ಣು ಹಂಪಲುಗಳಿಗೇನು ಬರಗಾಲವಿಲ್ಲ. ಒಂದು ಋತುವಿನಲ್ಲಿ ಒಂದೊಂದು ಬಗೆಯ ಫಲವಿದ್ದೇ ಇರುತ್ತದೆ. ಹಲಸಿನ ಹಣ್ಣು ಪ್ರಾಮುಖ್ಯವಾದುದು. ಅದು ಸಮೃದ್ಧಿಯಾಗಿ ಬೆಳೆಯುವುದು. ಎಲ್ಲಿ ನೋಡಿದರೂ ಹಲಸಿನಮರಗಳೆ! ಮುಂಗಾರುಮಳೆಗೆ ಸ್ವಲ್ಪ ಮುಂಚೆಯೆ ಹಲಸಿನಫಲ ಪ್ರಾರಂಭವಾಗುತ್ತದೆ. ಅದಕ್ಕಿಂತಲೂ ಮುನ್ನ ಕಲ್ಲುಸಂಪಗೆ ಹಣ್ಣು, ಬೆಮ್ಮಾರಲ ಹಣ್ಣು, ಕಾಡುಮಾವಿನ ಹಣ್ಣು ಇವೇ ಮೊದಲಾದುವು ಸಿಕ್ಕುತ್ತವೆ.) ಒಬ್ಬನು ಮರಹತ್ತಿ ಚೆನ್ನಾಗಿ ಬೆಳೆದ ಅಥವಾ ಹಣ್ಣಾದ ಹಲಸಿನ ಕಾಯನ್ನು ಕೆಡಹುವನು. ಎಲ್ಲರೂ ಸೇರಿ ಮರದ ನೆರಳಿನಲ್ಲಿ ತಮ್ಮ ತಮ್ಮ ಕಂಬಳಿಗಳನ್ನು ಹಸುರಿನ ಮೇಲೆ ಹಾಸಿ ಕುಳಿತುಕೊಳ್ಳುವರು. ಒಡ್ಯಾಣದಲ್ಲಿರುವ ಕತ್ತಿಯಿಂದ ಹಲಸಿನಕಾಯನ್ನು ಕೆತ್ತಿ ಅಥವಾ ಕೊಯ್ದು ಎಲ್ಲರೂ ಸಾವಕಾಶವಾಗಿ ತಿನ್ನುವರು. ತಿಂದಾದ ಮೇಲೆ ಕೊಳಲೂದುವರು.

ಕೊಳಲು ಪ್ರತಿಯೊಬ್ಬ ದನಗಾಹಿಯ ಪರಮಗೆಳೆಯ! ಅದಿಲ್ಲದಿದ್ದರೆ ದನಕಾಯುವ ಪದವಿಗೆ ಗೌರವ ಕಡಮೆ. ಆ ಕಾಡಿನ ಮಧ್ಯೆ ಕೊಳಲಗಾನ ಎಷ್ಟು ಇಂಪಾಗಿ ಕೇಳಿಬರುವುದೆಂದರೆ, ಅದನ್ನು ಆಲಿಸಿದವನಿಗೇ ಗೊತ್ತು!

ನಮ್ಮೂರಿನಲ್ಲಿ ‘ಹಿರಗೆ’ ಎಂಬ ದನ ಕಾಯುವವನಿದ್ದಾನೆ. ಅವನ ನಿಜವಾದ ಹೆಸರು ಹಿರಿಯಣ್ಣ ಎಂದು. ಅದರ ಮೇಲುಜಾತಿಯವರು ಕೀಳು ಜಾತಿಯವರನ್ನು ‘ಹಿರಿಯಣ್ಣ’ ಎಂದು ಕರೆಯಲು ಸಂಕೋಚಪಟ್ಟು ‘ಹಿರಗ’, ‘ಹಿರಗ’, ಎಂದು ಕರೆಯುತ್ತಾರೆ. ಅವನು ದನಕಾಯುವವರಿಗೆಲ್ಲಾ ಮಾದರಿ, ಮಾರ್ಗದರ್ಶಿ. ಅವನ ದಿನಚರ್ಯೆಯೆಲ್ಲಾ ಇತರ ಗೋಪಾಲಕರಂತೆಯೇ. ಅವನೂ ಬೆಳಗ್ಗೆ ಎದ್ದು ದನಗಳನ್ನು ಅಟ್ಟಿಕೊಂಡು ಹೋಗಿ ಸಾಯಂಕಾಲ ಕೊಟ್ಟಿಗೆಗೆ ಹೊಡೆದುಕೊಂಡು ಬರುವನು. ಆದರೆ ಅವನಲ್ಲಿ ಒಂದು ವಿಧವಾದ ಓಜಸ್ಸಿದೆ. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕೊಳಲೂದುವುದರಲ್ಲಿ ಆತನ ಸಮಾನರಿಲ್ಲವೆಂದೇನೋ ಪಕ್ಕದ ಹಳ್ಳಿಗಳಲ್ಲೆಲ್ಲಾ ಪ್ರಸಿದ್ಧಿಯಾಗಿದೆ. ಅದಕ್ಕೆ ನಾನೂ ಒಂದು ಸಾಕ್ಷಿ! ನಾನು ಏಕಾಂಗಿಯಾಗಿ ವನಗಳಲ್ಲಿ ಸಂಚರಿಸುತ್ತಿರುವಾಗ ದೂರದಿಂದ ನಲಿನಲಿದು ಇಂಪಾಗಿ ಮನ ಮೋಹಿಸಿ ಬರುವ ಆತನ ವೆಣುನಾದವನ್ನು ನಿಸ್ಪಂದನಾಗಿ ನಿಂತು ಏಕಾಗ್ರ ಚಿತ್ತದಿಂದ ಎಷ್ಟೋ ಸಾರಿ ಆಲಿಸಿರುವೆನು. ಪಟ್ಟಣಗಳಲ್ಲಿ ಸಂಗೀತಶಾಸ್ತ್ರದಲ್ಲಿ ಕೋವಿದರೆನ್ನಿಸಿಕೊಂಡಿರುವವರು ಹಣ ಸಂಪಾದನೆಗಾಗಿ ನಡೆಯಿಸುವ ಸಂಗೀತಕಛೇರಿಗಳಿಗೆ ರೂಪಾಯಿಗಳನ್ನು ಕೊಟ್ಟು ಹೋಗಿ ಕೊಳಲನ್ನು ಕೇಳಿರುವೆನು! ಆದರೆ ಅವರ ವೇಣುನಾದ ಹಿರಗನ ಕೊಳಲಗಾನದಂತೆ ನನ್ನನ್ನು ಮನಮೋಹಿಸಿಲ್ಲ; ಮೈಮರೆಯಿಸಿಲ್ಲ. ಹೃದಯವನ್ನು ತಳಮಳಗೊಳಿಸಿಲ್ಲ! ಭಾವಪರವಶನನ್ನಾಗಿ ಮಾಡಿಲ್ಲ; ಆನಂದ ಬಾಷ್ಪಗಳನ್ನು ಸುರಿಸಿಲ್ಲ –  ಹಿನ್ನೆಲೆಯ ಪ್ರಭಾವವೂ ಕಾರಣವಾಗಿರಬಹುದು ಅದಕ್ಕೆ.

ಹಿರಗನನ್ನು ದೊಡ್ಡವರು ಆದರಿಸುವುದಂತೂ ಇರಲಿ. ಮಕ್ಕಳಿಗೆ ಅವನಲ್ಲಿ ಇಲ್ಲದ ಸಲಿಗೆ. ಬೆಳಗ್ಗೆ ಹಿರಗ ‘ದನಬಿಡ’ಲು ಬಂದನೆಂದರೆ ಸರಿ ಹುಡುಗರೆಲ್ಲ ಅವನನ್ನು ಮುತ್ತಿಕೊಳ್ಳುತ್ತಾರೆ. ಮೇಲುಜಾತಿಯವರು ಕೀಳುಜಾತಿಯವರನ್ನು ಮುಟ್ಟಬಾರದೆಂಬ ನಿಯಮವಿದ್ದರೂ ಹುಡುಗರು ಅದನ್ನು ಉಲ್ಲಂಘಿಸದೆ ಬಿಡುವುದಿಲ್ಲ. ದೇವರ ರಾಜ್ಯದವರಾದ ಮಕ್ಕಳು ಸೈತಾನನ ಅನುಯಾಯಿಗಳಾದ ದೊಡ್ಡವರ ಮತಭೇವನ್ನೇನೆಂದು ಬಲ್ಲರು? ಮಕ್ಕಳಿಗೆ ಪ್ರೇಮವೆ ಜಾತಿಯನ್ನು ನಿರ್ಣಯಿಸುವ ಸಾಧನ. ಯಾರು ಹೆಚ್ಚಾಗಿ ತಮ್ಮನ್ನು ಪ್ರೀತಿಸುತ್ತಾರೆಯೊ ಅವರೆ ಉತ್ತಮ ಜಾತಿಯವರು. ಯಾರು ಹೆಚ್ಚಾಗಿ ತಮ್ಮನ್ನು ಪ್ರೀತಿಸುವುದಿಲ್ಲವೊ ಅವರೆ ಅಧಮಜಾತಿಯವರು! ‘ಹಿರಗ’ನಿಗೂ ಹುಡುಗರನ್ನು ಕಂಡರೆ ಬಲು ಪ್ರೀತಿ. ಅವನು ಯಾವುದಾದರೂ ಒಂದು ಹೊಸ ಕರುವಿಗೆ ನಾಮಕರಣಮಾಡಬೇಕಾದರೆ ಮಕ್ಕಳನ್ನೆ ಕೇಳುತ್ತಾನೆ. ಅವರು ಹೇಳಿದ ಹೆಸರನ್ನೆ ಆ ಕರುವಿಗೆ ಇಡುತ್ತಾನೆ. ಮಕ್ಕಳೂ ಅವನಿಗೆ ಅನೇಕ ಕೆಲಸಗಳನ್ನು ಹಚ್ಚುತ್ತಿದ್ದರು. ಒಬ್ಬನು “ಹಿರಗಾ, ನನಗೊಂದು ಕೊಳಲುಬೇಕು”; ಮತ್ತೊಬ್ಬನು “ನನಗೊಂದು ಬುಗುರಿ”; ಇನ್ನೊಬ್ಬನು “ನನಗೊಂದಿಷ್ಟು ಕಲ್ಲುಸಂಪಗೆಹಣ್ಣು!” ಮಗದೊಬ್ಬನು “ನನಗೊಂದು ಪೆಟ್ಲು” (“ಪೆಟ್ಳು” ಎಂದರೆ ಸುಣ್ಣ ರಂಧ್ರವುಳ್ಳ ಬಿದಿರಿನಿಂದ ಮಾಡಿದ ಒಂದು ಆಟದ ಕೋವಿ. ಸಣ್ಣ ತೂತುಳ್ಳ ಸುಮಾರು ಒಂದಂಗುಲ ದಪ್ಪದ ಬಿದಿರನ್ನುಒಂದು ಗೇಣುದ್ದ ಕಡಿದು ಅದಕ್ಕೊಂದು ‘ಗಜ’ವನ್ನು ಮಾಡುವರು. ಗಜವೆಂದರೆ ಅದೇ ಬಿದಿರಿನ ತುಂಡನ್ನು ಎರಡಂಗುಲ ಕಡಿದು ಅದಕ್ಕೆ ಒಂದು ಗೇಣು ಎರಡಂಗುಲದುದ್ದ, ಬಿದಿರಿನ ರಂಧ್ರದ ಗಾತ್ರವುಳ್ಳ, ಬಲವಾದ ಕಡ್ಡಿಯೊಂದನ್ನು ಜೋಡಿಸುವರು. ಉದ್ದವಾದ ಬಿದಿರಿನ ತೂತಿನಲ್ಲಿ ಒಂದು ಅರಮರಲಕಾಯಿಯನ್ನಾಗಲಿ ಜುಮ್ಮನಕಾಯಿಯನ್ನಾಗಲಿ ಇಟ್ಟು ‘ಗಜ’ದಿಂದ ನೂಕುತ್ತಾರೆ. ಆ ಕಾಯಿ ಬಂದು ಅದರ ಅಗ್ರಭಾಗದಲ್ಲಿ ಗಾಳಿಯಾಡದಂತೆ ಬಿಗಿದುನಿಲ್ಲುತ್ತದೆ. ಹಾಗೆಯೆ ಗಜವನ್ನು ಹಿಂದಕ್ಕೆ ಎಳೆದು ರಂಧ್ರಕ್ಕೆ ಮತ್ತೊಂದು ಬಿಗಿಯಾದ ಕಾಯನ್ನು ಹಾಕಿ ಗಜದಿಂದ ನೂಕಿದರೆ ಒಳಗಿನ ಗಾಳಿಯ ಒತ್ತಡದಿಂದ ಅಗ್ರಭಾಗದ ಕಾಯಿ ಹಾರಿ ‘ಟಾಪ್‌’ ಎಂಬ ದೊಡ್ಡ ಶಬ್ದವಾಗುವುದು. ಈ ಯಂತ್ರಕ್ಕೆ ‘ಪೆಟ್ಳು’ ಎಂದು ಹೆಸರು) ಮತ್ತೊಬ್ಬನು “ಹಿರಗಾ, ಬಿಲ್ಲು ಮರೆತೀಯೊ?”; ಹೆಣ್ಣುಮಕ್ಕಳಾದರೆ “ಹಿರಗಾ, ಸೀತಾಳಿದಂಡೆ ಹೂ ತಗೊಂಡು ಬಾರೊ” “ಕೇದಗೆ ಹೂ ಮರೆಯಬೇಡೊ” –  ಹೀಗೆ ಎಲ್ಲರೂ ಒಂದೊಂದು ಕೆಲಸ ಹೇಳುತ್ತಾರೆ. ಅವನಂತೂ ಒಂದಕ್ಕೂ ‘ಇಲ್ಲ’ ಎನ್ನುವುದೇ ಇಲ್ಲ. ಎಲ್ಲದಕ್ಕೂ ‘ಹೂಂ’ ಎನ್ನುವನು. ಅವನ ಕೈಯಲ್ಲಾದ ಮಟ್ಟಿಗೂ ತಂದುಕೊಡುವನು. ಅಂತೂ ಪ್ರತಿದಿನ ಸಾಯಂಕಾಲ ಒಬ್ಬರಲ್ಲ ಒಬ್ಬರಿಂದ ಅವನಿಗೆ ಬೈಗುಳ ತಪ್ಪುವುದಿಲ್ಲ.

‘ಹಿರಗ’ನಿಗೊಂದು ನಾಯಿಯಿದೆ; ಅವನು ಅದರ ಬಾಲ ಕಡಿದಿದ್ದಾನೆ. ಯಾರಾದರೂ ಅದು ಎಂಥಾ ನಾಯಿ ಎಂದರೆ ಹಿರಗ ಸ್ವಲ್ಪವೂ ಸಂಕೋಚ ಪಡದೆ ಧೈರ್ಯವಾಗಿ “ಚೀನಿನಾಯಿ” ಎನ್ನುತ್ತಾನೆ. ನಿಜವಾಗಿಯೂ ಅದೇನೊ ಕಂತ್ರಿನಾಯಿಯೆ. ಅವನು ಮಾತ್ರ ಅದು ಜಾತಿ ನಾಯಿಯೇ ಹೌದೆಂಬ ಹುಸು ನಂಬಿಕೆಯನ್ನಿಟ್ಟುಕೊಂಡಿದ್ದಾನೆ. ಬಾಲ ಕಡಿದ ನಾಯಿಗಳೆಲ್ಲಾ ‘ಚೀನಿನಾಯಿ’ಗಳೇ ಆಗುತ್ತವೆಂದು ಆತನ ಸಿದ್ಧಾಂತ. ಇದು ಅವನೊಬ್ಬನ ನಂಬಿಕೆಯೆ ಅಲ್ಲ. ಹೆಚ್ಚು ಕಡಮೆ ನಮ್ಮೂರು ಮತ್ತು ಅದರ ಸುತ್ತಮುತ್ತಲಿನ ಊರಿನವರ ಅಭಿಪ್ರಾಯವೆಲ್ಲಾ ಹಾಗೆಯೆ ಇದೆ. ಹೀಗಾಗಲು ಒಂದು ಕಾರಣವುಂಟು. ಮೊದಮೊದಲು ಬೆಂಗಳೂರಿನಿಂದ ಜಾತಿ ನಾಯಿಗಳನ್ನು ತಂದಾಗ ಅವುಗಳೊಂದಕ್ಕೂ ಬಾಲವೆ ಇರಲಿಲ್ಲ! ಅಂದರೆ ಬಾಲವೆ ಸ್ವಾಭಾವಿಕವಾಗಿ ಇರಲಿಲ್ಲವೆಂದಲ್ಲ; ಕತ್ತರಿಸಿತ್ತು ಎಂದರ್ಥ! ಹೀಗೆ ಪಟ್ಟಣಗಳಿಂದ ನಾಯಿಗಳನ್ನು ಕೊಂಡುಕೊಂಡು ಬರುವವರೆಲ್ಲ ಬಾಲ ಕಡಿದ ನಾಯಿಗಳನ್ನೆ ವಿಶೇಷವಾಗಿ ತರುತ್ತಿದ್ದುದರಿಂದ ಸಾಮಾನ್ಯ ಜನರಲ್ಲಿ ಬಾಲಕಡಿದ ನಾಯಿಗಳೆಲ್ಲ ಜಾತಿನಾಯಿಗಳಾಗುವುವೆಂಬ ಹುಸಿನಂಬಿಕೆಯುಂಟಾಯಿತು. ಎಲ್ಲರಿಗೂ ‘ಚೀನಿನಾಯಿ’ಗಳನ್ನು ಇಡಬೇಕೆಂಬ ಕುತೂಹಲವುಂಟಾದುದರಿಂದ ನಮ್ಮೂರ ನಾಯಿಬಾಲಗಳಿಗೆ ಕಾಲಬಂದಿತು. ಪ್ರತಿಯೊಬ್ಬರೂ ತಮ್ಮ ತಮ್ಮ ನಾಯಿಗಳ ಬಾಲಗಳನ್ನು ತುಂಡುಮಾಡಲಾರಂಭಿಸಿದರು. ಈ ತಿಳಿಗೇಡಿತನದ ಅಭ್ಯಾಸ ಹರಡಿ ಎಷ್ಟರಮಟ್ಟಿಗೆ ಮುಂದುವರಿಯಿತೆಂದರೆ, ಕೆಲದಿನಗಳಲ್ಲಿ ನಮ್ಮ ಪ್ರಾಂತದಲ್ಲಿ ಬಾಲವಿರುವ ನಾಯಿಯೆಂದರ ಕೌತುಕವಾಗಿಯೂ ಪರಿಣಮಿಸಿತು. ಇದೇನೋ ಹಳ್ಳಿಯ ಬೆಪ್ಪುತನವಾಯಿತು! ಪುರಜನರ ಮರುಳಾದವನ್ನೇನೆಂದು ಹೇಳಬೇಕು? ಮೊದಮೊದಲು ವಿದ್ಯಾವಂತರಾದ ಕೆಲವರು ಪಾಶ್ಚಾತ್ಯರ ಉಡುಪು ತೊಟ್ಟಿದ್ದನ್ನು ಕಂಡು, ಆಮೇಲೆ ಪಾಶ್ಚಾತ್ಯರಂತೆ ಪೋಷಾಕು ಹಾಕಿಕೊಂಡವರೆಲ್ಲ ನಾಗರಿಕರೆಂಬ ಭಾವನೆ ಪಟ್ಟಣಿಗರಲ್ಲಿ ಹುಟ್ಟಿ ಅನರ್ಥಕಾರಿಯಾಗಲಿಲ್ಲವೆ? ಹಾಗೆಯೆ ಹಳ್ಳಿಯವರು ಬಾಲ ಕಡಿದ ನಾಯಿಗಳ ವಿಚಾರವಾಗಿ ಮೋಸಹೋದರು.

ಹಿರಗನ ನಾಯಿಯಂತೂ ಪೂರಾ ಕಂತ್ರಿ! ಬಾಲವಿದ್ದಿದ್ದರಾದರೂ ಸ್ವಲ್ಪ ನೋಡಲು ಲಕ್ಷಣವಾಗಿಯಾದರೂ ಇರುತ್ತಿತ್ತು. ಬಾಲವಿಲ್ಲದೆ ಅದು ನೋಡುವುದಕ್ಕೆ ಅತಿವಿಕಾರವಾಗಿದ್ದಿತು. ಅದರಲ್ಲಿಯೂ ನಮ್ಮೂರಿನವರಿಗೆ ಬಾಲಕಡಿಯುವುದಕ್ಕೆ ಅಳತೆ ಪ್ರಮಾಣಗಳು ಒಂದೂ ಇಲ್ಲ. ಕೆಲವು ನಾಯಿಗಳ ಬಾಲವನ್ನು ನೋಡಿ ನಾನು ಎಷ್ಟೋ ಸಾರಿ ಅಳ್ಳೆ ಹಿಡಿಯುವವರೆಗೂ ನಕ್ಕುಬಿಟ್ಟಿದ್ದೇನೆ. ಕೆಲವು ನಾಯಿಗಳಿಗೆ ಬಾಲವಿತ್ತೆಂದೋ ಗೊತ್ತಾಗುವುದಿಲ್ಲ. ಅಷ್ಟು ಬುಡಕ್ಕೆ ಸರಿಯಾಗಿ ಕಡಿಯುತ್ತಾರೆ. ಕೆಲವು ನಾಯಿಗಳಿಗೆ ಬಾಲ ಕಡಿದಿರುವರೆಂದೇ ತಿಳಿದಿರುವುದಿಲ್ಲ. ಅಷ್ಟು ಸ್ವಲ್ಪವೇ ಕಡಿಯುತ್ತಾರೆ. ಈಚೀಚೆಗೆ ಬಾಲಕಡಿಯುವುದು ತಿಳಿಗೇಡಿತನವೆಂದು ತಿಳದಮೇಲೆ ಕೆಲವು ಅಪಹಾಸ್ಯಕ್ಕೀಡಾಗಲಾರದ ನಿಪುಣರು ತಮ್ಮದೇ ಒಂದು ನೂತನ ಉಪಪತ್ತಿಯನ್ನು ಕೊಟ್ಟು ಒಂದು ನೂತನ ಸಿದ್ಧಾಂತವನ್ನು ಪ್ರಚುರಪಡಿಸಿರುತ್ತಾರೆ. ಅದೇನೆಂದರೆ, ಬಾಲಕಡಿದ ನಾಯಿಗಳು ಚೆನ್ನಾಗಿ ಓಡುವುವಂತೆ, ಬಾಲವಿದ್ದರೆ ಅವುಗಳಿಗೆ ಒಂದು ವಿಧವಾದ ಅಡಚಣೆಯಾಗುವುದಂತೆ. ಇದನ್ನು ಸಾಧಿಸಲಿಕ್ಕೆ ಅವರು ಕೊಡುವ ಉಪಮಾನ ಯಾವುದೆಂದರೆ, ಎತ್ತಿಗೆ ಕಟ್ಟುವ ಲಾಳ! ನಾಯಿಯ ಬಾಲಕ್ಕೂ ಎತ್ತಿನ ಲಾಳಕ್ಕೂ ಇರುವ ಸಂಬಂಧ – ಪ್ರಾಸ ವಿನಾ – ನನ್ನ ಅಲ್ಪ ಬುದ್ಧಿಗೆ ಅತೀತವಾಗಿದೆ!

ಹಿರಗ ಬಾಲ ಕಡಿದು ಚೀನಿಯನ್ನಾಗಿ ಮಾಡಿದ ತನ್ನ ಕಂತ್ರಿನಾಯಿಗೆ ಇಂಗ್ಲೀಷು ಹೆಸರಿಡಬೇಕೆಂದು ಯಾರನ್ನೋ ಕೇಳಿದನಂತೆ. ಅದಕ್ಕೆ ಅವರು ‘ರಾಸ್ಕಲ್’ (Rasca) ಎಂದು ಹೆಸರಿಡು ಎಂದರಂತೆ. ಈಗ ಆ ಹೆಸರು ಯಾವ ಯಾವ ಅವಸ್ಥೆಗಳನ್ನೆಲ್ಲಾ ದಾಟಿ ‘ರಾಸಿಕಲ್ಲು’ ಎಂದಾಗಿದೆ. ಮುಂದೆ ಅದರ ಪರಿಣಾಮವೇನಾಗುವುದೊ ಬಲ್ಲವರಾರು? ನಾಯಿ ಸಾಕಿದ ಪ್ರತಿಯೊಬ್ಬರಿಗೂ ಇಂಗ್ಲೀಷು ಹೆಸರಿನ ಹುಚ್ಚು. ನಿರಕ್ಷ ಕುಕ್ಷಿ ಕೂಡ ತನ್ನ ನಾಯಿಗಳಿಗೆ ‘ಟೈಗರ್’ ‘ಡೈಮಂಡ್’ ‘ನೆಟ್ಲ್‌’ ‘ರುಬೀ’ ‘ರೋಸ್’  ಎಂದು ಹೆಸರಿಡುತ್ತಾನೆ. ‘ಹಂಡ’ ‘ಕೆಂಪ’ ಮೊದಲಾದ ಹಳ್ಳಿಯ ಹೆಸರುಗಳು ಯಾರ ಮನಸ್ಸಿಗೂ ಬರುವುದಿಲ್ಲ. ಈ ತೆರದ ಹುಚ್ಚಿಗೆ ಆಸ್ಪತ್ರೆಯಾದರೂ ಇರುವುದೆಲ್ಲಿ?

ಹಿರಗ ದನಕಾಯಲು ಹೋಗುತ್ತಾ ಈ ನಾಯಿಯನ್ನು ಸಂಗಡ ಕರೆದುಕೊಂಡು ಹೋಗುವನು. ಅದು ಯಾವಾಗಲೂ ಅವನನ್ನು ಕಾಡಿನಲ್ಲಿಯೆ ಬಿಟ್ಟು ಮನೆಗೆ ಪರಾರಿಯಾಗುವುದಿಲ್ಲ. ಕಂತ್ರಿನಾಯಿಯಾದರೂ ಚುರುಕಾಗಿದೆ. ಕೆಲವರಿಗೆ ನಾಡನಾಯಿಗಳೆಂದರೆ ಬಹು ಅಲಕ್ಷ, ತಿರಸ್ಕಾರ! ದುಡ್ಡು ಕೊಟ್ಟು ಬಂದ ಚೀನಿ ನಾಯಿಗಳೆಂದರೆ ಅತ್ಯಾದರ! ಇದೊಂದು ಮೂರ್ಖತನದ ದುರಾಗ್ರಹ! ಪಟ್ಟಣಗಳಿಂದ ತಂದ ಕೆಲಸಕ್ಕೆ ಬಾರದ ಚಂದದ ಜಾತಿನಾಯಿಗಳನ್ನು ಎಷ್ಟೋ ನೋಡಿದ್ದೇನೆ. ಕಾಡೆಂದರೆ ಅವುಗಳಿಗೆ ಪುರಜನರಿಗಿರುವಂತೆಯೆ ಮಹಾಭಯ. ಬಂದೂಕಿನ ಶಬ್ದವೆಂದರೆ ಅವಕ್ಕೆ ಜೀವವೆ ಹಾರುವುದು! ಪ್ರಾಣ ನೆತ್ತಿಗೇರುವುದು! ನಾಡನಾಯಿಗಳಾದರೊ ಕಾಡಿಗೆ ಸ್ವಲ್ಪವೂ ಭಯಪಡುವುದಿಲ್ಲ. ಕೋವಿಯ ಗುಂಡು ಹಾರಿದಲ್ಲಿಗೆ ಹೋಗಿ ಹಾಜರಾಗುತ್ತವೆ. ಆದರೂ ಅವುಗಳನ್ನು ಅಲ್ಲಗಳೆಯುವುದು ಮುಖನೋಡಿ ಮಣೆಕೊಡುವಂತೆ ಶುದ್ಧ ಮೂರ್ಖತನ! ಜಾತಿನಾಯಿಗಳ ಡೌಲಿಗೆ ನಾವೇಕೆ ಮೋಹಪಡಬೇಕು? ಅವು ಪುರದ ರಾಜಬೀದಿಗಳಲ್ಲಿ ಸಾಯಂಕಾಲ ಸಂಚಾರ ಹೊರಡುವ ಸೊಗಸುಗಾರ ಪುಟ್ಟಸ್ವಾಮಿಗಳ ಸಂಗಡ ಬೀದಿಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುತ್ತಾ ಹೆಣ್ಣು ನಾಯಿಗಳನ್ನು (ಒಡೆಯನ ಗುಣವೆ ಅಳಿಗೂ ಅಲ್ಲವೆ?) ಗೊತ್ತು ಹಚ್ಚುತ್ತಾ ಅಡ್ಡಾಡಲು ಅರ್ಹವಾದುವೆ ಹೊರತು, ಮಲೆನಾಡಿನ ಘೋರಾರಣ್ಯಗಳಲ್ಲಿರುವ ಉಗ್ರ ಜಂತುಗಳನ್ನು ಬೇಟೆಯಾಡಬಲ್ಲುವೆ? ಇರಲಿ; ನಾಡನಾಯಿಗಳೇನು ನೋಡುವುದಕ್ಕೆ ಅಂದವಾಗಿರುವುದಿಲ್ಲವೆ? ಕೆಲವಂತೂ ಜಾತಿನಾಯಿಗಳನ್ನು ರೂಪದಲ್ಲಿ ಮೀರಿಸುತ್ತವೆ. ಹಾಗೆಂದ ಮೇಲೆ ಜಾತಿನಾಯಿಗಳ ಗುಣಪ್ರಶಂಸೆ ದುರಾಗ್ರಹಜನಿತವಾದುದೆಂದೇ ಹೇಳಬೇಕು.

ಹಿರಗನ ನಾಯಿ ತುಂಬಾ ಧೈರ್ಯಶಾಲಿ. ಅವನೇ ಅದರ ಸಾಹಸ ಕೃತ್ಯಗಳನ್ನು ವರ್ಣಿಸುವನು. ನನಗೂ ಒಂದು ದಿನ ಅದರ ವಿಚಾರ ಹೇಳಿದನು. ನನಗೇನೋ ಅವನ ವರ್ಣನೆಯಲ್ಲಿ ಉತ್ಪೇಕ್ಷೆಯಿದೆಯೆಂದು ಗೊತ್ತಾದರೂ ಅವನ ಮನಸ್ಸು ನೋಯಿಸಬಾರದೆಂದು ನಾನೂ ಅವನ ನಾಯಿಯನ್ನು ಮತ್ತಷ್ಟು ಹೊಗಳಿದೆ! ಅವನೂ ಪಕ್ಕದಲ್ಲಿಯೆ ನಿಂತಿದ್ದ ತನ್ನ ಮೋಟು ಬಾಲದ ‘ಚೀನಿ’ಯನ್ನು ತಲೆತಟ್ಟಿ ಮುದ್ದಿಸಿದನು.

ಇದುವರೆಗೆ ಹೇಳಿದುದನ್ನೆಲ್ಲಾ ಆಲಿಸಿದ ವಾಚಕ ಮಹಾಶಯನು ಗೋಪಾಲಕರ ಜೀವನ ಅತಿಸುಖಕರವಾದುದೆಂದು ಊಹಿಸಿರಬಹುದು. ಜೀವನದ ಎಲ್ಲಾ ಮಾರ್ಗಗಳಲ್ಲಿಯೂ ಹಳ್ಳ ದಿಣ್ಣೆ ಕಲ್ಲು ಮುಳ್ಳುಗಳಿರುವಂತೆ ಗೋಪಾಲಕರ ಜೀವನದಲ್ಲಿಯೂ ಇದೆ. ಇದುವರೆಗೆ ಅವರ ಬಾಲಿನ ಶುಕ್ಲಪಕ್ಷವನ್ನು ನೋಡಿದೆವು. ಇನ್ನು ಕೃಷ್ಣಪಕ್ಷವನ್ನು ಸ್ವಲ್ಪ ನೋಡೋಣ! ಮಾದರಿ ಗೋಪಾಲಕನಾದ ಹಿರಗನ ಜೀವನವನ್ನೇ ತೆಗೆದುಕೊಂಡರೆ ಸಕಲವೂ ವಿಶದವಾಗುತ್ತದೆ.

ಹಿರಗನ ಜೀವನ ತುಂಬಾ ಉದ್ವೇಗಪೂರ್ಣವಾದುದು. ಏಕೆಂದರೆ ಊರಿನವರ ನಿಂದೆ ಅವನಿಗೆ ತಪ್ಪುವುದೇ ಇಲ್ಲ. ತುಂಟದನಗಳು ಹಿಂಡಿನಿಂದ ತಪ್ಪಿಸಿಕೊಂಡು ಹೋಗಿ ಯಾರ ಗದ್ದೆತೋಟಗಳಿಗಾದರೂ ನುಗ್ಗಿ ಲೂಟಿ ಮಾಡುವುವು. ಅಂಥ ಪೋಲಿಜಾನುವಾರುಗಳನ್ನು ಕೊಟ್ಟಿಗೆಗೆ ಅಟ್ಟಿಕೊಂಡು ಬರುವುದು, ಭೀಮ ಪುರಷಾಮೃಗವನ್ನು ತಂದುದಕ್ಕಿಂತಲೂ ಹೆಚ್ಚಾದ ಸಾಹಸಕೃತ್ಯ! ಎಷ್ಟೋ ಸಾರಿ ಅಟ್ಟಿಅಟ್ಟಿ ಸೋತು ಹಿರಗ ಮಕ್ಕಳಂತೆ ಅತ್ತುಬಿಟ್ಟಿದ್ದಾನೆ. ಅದರಲ್ಲಿಯೂ ಮಳೆಗಾಲವಾದರಂತೂ ದನ ಕಾಯುವವರ ಗೋಳು ಕೇಳುವವರೇ ಇಲ್ಲ. ಹೀಗೆ ತಪ್ಪು ಮಾಡಿದ ದನಗಳಿಗೆ ಗೋಪಾಲಕರ ಕಾನೂನಿನಂತೆ ತಪ್ಪಿಗೆ ತಕ್ಕ ಶಿಕ್ಷೆಯಿರುವುದು. ತುಂಬ ತುಂಟದನವಾದರೆ ಅದರ ಕೊರಳಿಗೂ ಮುಂಗಾಲಿಗೂ ಒಟ್ಟು ಒಂದು ಒಂದೂವರೆ ಮೊಳದುದ್ದ ನೇಣನ್ನು ಬಿಗಿದು ಕಟ್ಟುವರು. ಹೀಗೆ ಮಾಡುವುದರಿಂದ ಅದಕ್ಕೆ ಚುರುಕಾಗಿ ಓಡಲು ಆಗುವುದೆ ಇಲ್ಲ. ಕೊರಳನ್ನು ಯಾವಾಗಲೂ ಬಗ್ಗಿಸಿಕೊಂಡೆ ಇರಬೇಕಾಗುವುದು. ಅದಕ್ಕಿಂತಲೂ ಸ್ವಲ್ಪ ಕಡಮೆ ತುಂಟದನಕ್ಕೆ ಕುಂಟೆ ಕಟ್ಟುವರು: ಒಂದು ನಾಲ್ಕೈದು ಅಡಿ ಉದ್ದವಾದ ಸುಮಾರು ಒಂಬತ್ತು ಅಂಗುಲ ಅಡ್ಡಳತೆಯುಳ್ಳ ಬಲು ಭಾರವಾದ ಮರದ ಕೊರಡೊಂದನ್ನು ಹುರಿಯ ಮೂಲಕ ಕುತ್ತಿಗೆಗೆ ಕಟ್ಟುವರು. ಕೊರಡಿನ ಒಂದು ತುದಿ ಸದಾ ನೆಲದ ಮೇಲೆ ಎಳೆಯುತ್ತಿರುತ್ತದೆ. ಇನ್ನೂ ಸ್ವಲ್ಪ ಸಾಧುವಾದ ದನಕ್ಕೆ ದೊಂಟೆ ಕಟ್ಟುವರು. (ದೊಂಟೆಯೆಂದರೆ ಬಿದಿರಿನಗಂಟೆ) ಆ ದೊಂಟೆ ಅದು ಹೋದೆಡೆಯೆಲ್ಲಾ ಶಬ್ದಮಾಡುತ್ತಾ ಹೋಗುವುದು. ಆ ಶಬ್ದ ಸಹಾಯದಿಂದ ಗೋಪಾಲಕರು ದನವನ್ನು ಕಂಡು ಹಿಡಿಯುವರು. ಆ ಶಿಕ್ಷೆಗಳು ಕ್ರೂರವಾದುವುಗಳೆಂದು ತೋರಬಹುದು. ನನಗೂ ಹಾಗೆಯೆ ತೋರಿ ಹಿರಗನಿಗೆ ಹೇಳಿದೆ; ಅವನೂ ಪಶ್ಚಾತ್ತಾಪಪಟ್ಟು ಬೇರೆ ದಾರಿ ತೋರಿಸುವಂತೆ ಕೇಳಿದನು. ಬೇರೆ ದಾರಿಯೆ ನನಗೆ ಬಗೆಹರಿಯಲಿಲ್ಲ. ರಾಜಕಾರ್ಯದಲ್ಲಿ ಕೆಲವು ಶಿಕ್ಷೆಗಳು ಕ್ರೂರವೆಂದು ತಿಳಿದರೂ ಬೇರೆ ಉಪಾಯವಿಲ್ಲದೆ ಅವುಗಳನ್ನೆ ಪ್ರಯೋಗಿಸುವಂತೆ ಹಿರಗನೂ ಸಂಪ್ರದಾಯವನ್ನೆ ಅನುಸರಿಸುತ್ತಿದ್ದಾನೆ.

ಮಲೆನಾಡಿನ ಮಳೆ ಜಿರ್ರೆಂದು ಸುರಿಯುವ ದಿನಗಳಲ್ಲಿ ದನಕಾಯುವವರ ಗತಿ ನಿರ್ಗತಿ! ಅವರು ಕಂಬಳಿಕೊಪ್ಪೆ ಹಾಕಿಕೊಂಡು ಗುಡ್ಡದಿಂದ ಗುಡ್ಡಕ್ಕೆ ಹೋಗಬೇಕು. ದಿನವೆಲ್ಲಾ ನೀರಿನಲ್ಲಿಯೆ ನಡೆಯಬೇಕು. ಕುಳಿತುಕೊಳ್ಳುವುದೂ ಕೂಡ ಕಷ್ಟವೆ! ಅದರ ಮಧ್ಯೆ ಪತ್ತೆಯಿಲ್ಲದೆ ರಕ್ತಹೀರುವ ಜಿಗಣೆಗಳ ಕಾಟ! ಆ ಭೀಕರವಾದ ಅಡವಿಗಳ ಸೊಳ್ಳೆಗಳ ಕಡಿತ! ಪ್ರಚಂಡ ಮಾರುತನೊಂದು ಕಡೆ ಇಡೀ ಅರಣ್ಯಗಳನ್ನೇ ಅಲ್ಲೋಲಕಲ್ಲೋಲ ಮಾಡುತ್ತ ಆರ್ಭಟಿಸುವನು. ಒಂದು ಕಡೆ ಉಕ್ಕಿಹರಿಯುವ ತೊರೆಗಳ ಭೋರಾಟ. ಪಾಪ! ಇಂಥಾ ಸಮಯದಲ್ಲಿ ಗೋಪಾಲಕರ ಕೊಳಲು ಎಲ್ಲಿ ಅಡಗುವುದೋ ಏನೋ! ಆ ಮಳೆ, ಆ ಚಳಿ, ಆ ಗಾಳಿಯ ಆರ್ಭಟ, ಆ ನೀರಿನ ಭೋರಾಟ ಇವು ಅವರ ಎದೆಯ ಮೇಲೆ ಭಾರವಾಗಿ ಕುಣಿಯುತ್ತವೆ. ಅವರಿಗೆ ಬಟ್ಟೆಯಾದರೂ ಇದೆಯೇ? ಮೊಳಕಾಲವರೆಗಿನ ಕೊಳಕಾದ ಪಂಚೆ, ಹರಕು ಅಂಗಿ, ಇವೆ ಗತಿ! ಇದನ್ನೆಲಾ ಸಹಿಸಿಕೊಂಡು ಅವರು ತಮ್ಮ ಗುಡಿಸಲುಗಳಿಗೆ ಚಗಟೆಗಿಡ ಬಾಗಿಲುಮುಚ್ಚುವ ಹೊತ್ತಿಗೆ (ಸೂರ್ಯನು ಮುಳುಗಿದ ಕೂಡಲೆ ಚಗಟೆಗಿಡದ ಎಲೆಗಳು ಮುಚ್ಚಿಕೊಳ್ಳುತ್ತವೆ. ಮಳೆಗಾಲದಲ್ಲಿ ಸೂರ್ಯನನ್ನು ಅಲ್ಲಿ ಕಾಣುವುದೇ ಅಪರೂಪ. ಆದ್ದರಿಂದ ಕೆಲಸಗಾರರು ಹೊತ್ತುಮುಳುಗುವುದನ್ನು ಚಗಟೆ ಗಿಡದ ಎಲೆಗಳು ಮುಚ್ಚುವುದರಿಂದ ತಿಳಿಯುವರು.) ಸರಿಯಾಗಿ ಬಂದು ಒಲೆಯ ಹತ್ತಿರ ಹೋಗಿ ಚಳಿಕಾಯಿಸಿಕೊಳ್ಳುವರು. ಆಗ ಅವರಿಗೆ ಒಲೆಯ ಬೆಂಕಿಯೆಂದರೆ ಸ್ವರ್ಗಸದೃಶ! ಇಷ್ಟಾದರೂ ಅವರಿಗೆ ಸುಖವುಂಟೋ? ದಿನ ಬೆಳಗಾಯಿತೆಂದರೆ ಹುಲಿಗಳ ಹಾವಳಿ. ಇಂದೇನು? ‘ಕಾಳಿ’ ದನ ಇಲ್ಲ! ಇಂದೇನು ಗಂಗೆ ಕರು ಇಲ್ಲ! ಹುಡುಕುವವರಾರು? ಗೋಪಾಲಕರೇ! ಸರಿ; ಹುಡುಕಿ ಹುಡುಕಿ ಎಲ್ಲಿಯಾದರೂ ಹುಲಿಹಿಡಿದ ಸ್ಥಳವನ್ನು ಕಂಡುಹಿಡಿದು ಉಸ್ಸೆಂದು ಹಿಂತಿರುಗಿ ಬಂದು ಒಡೆಯರಿಗೆ ಹೇಳುವರು. ಸರಿ, ತಿಳಿಸುವುದೇ ತಡ, ಬೈಗುಳದ ಮಳೆಯೇ ಅವರ ಮೈಮೇಲೆ ಸುರಿಯುವುದು. ಅವರಂತೂ ಬೈಸಿಕೊಂಡು ಮೊಂಡರಾಗಿ ಹೋಗಿದ್ದಾರೆ. ಇದೀಗ ಗೋಪಾಲಕರ ಬಾಳಿನ ಕೃಷ್ಣಪಕ್ಷದ ಚಿತ್ರ! ಅವರ ಬಾಳಿನ ಕೃಷ್ಣಪಕ್ಷ ಶುಕ್ಲಪಕ್ಷಕ್ಕೇನೂ ಕಡಮೆಯಾಗುವುದಿಲ್ಲ!

ಇನ್ನೊಂದು ಸತ್ಯಾಂಶವಿದೆ. ಅದನ್ನು ಹೇಳಲಿಷ್ಟವಿಲ್ಲದಿದ್ದರೂ ಹೇಳಬೇಕಾಗಿದೆ. ಊರಿದ್ದಲ್ಲಿ ಹೊಲಗೇರಿ ಎಂಬಂತೆ ಇವರಲ್ಲಿಯೂ ಠಕ್ಕರೂ ಮೋಸಗಾರರೂ ಅಪರೂಪವಾಗಿಯಾದರೂ ಇದ್ದಾರೆ. ಕೆಲವರು ಕಾಲ್ನಡೆಗಳು ಕಳೆದು ಹೋದರೆ ತಿಳಿಸುವುದೇ ಇಲ್ಲ. ಒಂದು ದಿನ ಒಬ್ಬ ದುಷ್ಟನಾದ ದನಗಾಹಿಯ ಸಂಗತಿಯನ್ನು ಕೇಳಿ ತುಂಬಾ ವಿಷಾದಪಟ್ಟೆ. ಅವನು ಕಾಡಿನಲ್ಲಿ ಒಂದೆರಡು ಎಕಿರೆ ಜಾಗಕ್ಕೆ ಮುಳ್ಳಿನ ಬಲವಾದ ಒಡ್ಡನ್ನು ಹಾಕಿ ಒಂದು ಸ್ವಂತ ದೊಡ್ಡಿಯನ್ನು ಮಾಡಿಟ್ಟುಕೊಂಡಿದ್ದನಂತೆ. ಕೊಟ್ಟಿಗೆಯಿಂದ ಹಸಿದ ಜಾನುವಾರುಗಳನ್ನು ಅವನು ನೆಟ್ಟಗೆ ಆ ಅರಣ್ಯದ ದೊಡ್ಡಿಗೆ ಅಟ್ಟಿಕೊಂಡು ಹೋಗಿ ಅಲ್ಲಿ ಕೂಡಿಹಾಕಿ ತನ್ನ ಕೆಲಸದ ಮೇಲೆ ಹೋಗುತ್ತಿದ್ದು, ಸಾಯಂಕಾಲಕ್ಕೆ ಸರಿಯಾಗಿ ಅಲ್ಲಿಂದ ಮನೆಗೆ ಅಟ್ಟಿಕೊಂಡು ಬರುತ್ತಿದ್ದನಂತೆ. ಪಾಪ! ಬಾಯಿಲ್ಲದೆ ಆ ಪ್ರಾಣಿಗಳು ಹಸಿವೆಯಿಂದ ‘ಅಂಬಾ! ಅಂಬಾ’ ಎಂದು ಕೂಗುಕೊಳ್ಳುತ್ತಿದ್ದರೆ ಇವನು ಅವುಗಳನ್ನು ಗದರಿಸಿ ಹೊಡೆಯುತ್ತಿದ್ದನಂತೆ. ದನಗಳೆಲ್ಲಾ ದಿನದಿನಕ್ಕೂ ಬತ್ತಿ ಬಡವಾಗುತ್ತಿದ್ದುದನ್ನು ನೋಡಿ ಮನೆಯ ಯಜಮಾನ ಒಂದು ದಿನ ಗೋಪಾಲಕನನ್ನು ಗುಟ್ಟಾಗಿ ಹಿಂಬಾಲಿಸಿದನಂತೆ. ಆಗ ಎಲ್ಲಾ ರಹಸ್ಯವೂ ಗೊತ್ತಾಗಿ ದನ ಕಾಯುವವನನ್ನು ಚೆನ್ನಾಗಿ ಹೊಡೆದು ಅಟ್ಟಿದನಂತೆ. ಹೀಗೆಯೆ ಗೋಪಾಲಕರಲ್ಲಿಯೂ ಕೂಡ ತೈಮೂರರು ಸಿಕ್ಕಿಯೇ ಸಿಕ್ಕುವರು.

ದನಕಾಯುವವರ ಜೀವನ ಏಕದೇಶೀಯವಾಗಿಲ್ಲ. ಪ್ರಪಂಚದ ಇತರ ಜೀವಗಳಂತೆ ಅವರ ಜೀವನವೂ ಸುಖದುಃಖಮಿಶ್ರವಾದುದಾಗಿದೆ. ಬಹು ಶಾಖೆಯುಳ್ಳದ್ದಾಗಿದೆ. ಅವರೂ ಒಳ್ಳೆಯವರಾಗಿರಬಹುದು; ಕೆಟ್ಟವರಾಗಿರಬಹುದು! ಮಹಾತ್ಮರಾಗಿರಬಹುದು; ಹೀನಾತ್ಮರಾಗಿರಬಹುದು! ಅವರ ಜೀವನ ತನ್ನದೇ ಒಂದು ಪ್ರಪಂಚವನ್ನು ಕಲ್ಪಿಸಿಕೊಂಡಿದೆ. ಜೀವನದ ಮಹಾಮಾರ್ಗಗಳಲ್ಲಿ ಅವರ ಮಾರ್ಗವೂ ಒಂದು. ಜಗತ್ತಿನ ಮಹಾಪದವಿಗಳಲ್ಲಿ ಅವರ ಪದವಿಯೂ ಒಂದು!

*  * *