ನೆನಹು ಬಾಳಿನ ಬುತ್ತಿ; ಅನುಭವಗಳ ಅಕ್ಷಯ ನಿಧಿ. ಜೀವನ ಯಾತ್ರೆ, ಬೇಸರವಾದಗ, ಜೀವನದಲ್ಲಿ ನವೀನತೆ ಮೊಳೆಯದೆ ಮಂಕು ಕವಿದಾಗ, ಜೀವನದಲ್ಲಿ ಬಿಸಿಲ ಬೇಗೆ ಹೆಚ್ಚಿ ಬಳಲಿದಾಗ, ಹಾದಿಯ ಬಳಿ ದಟ್ಟವಾಗಿ ಸೊಂಪಿಡಿದು ಬೆಳೆದ ಮರದ ತಣ್ಣೆಳಲಿನ ತಂಪಿನಲ್ಲಿ, ಮೊರೆದು ಹರಿಯುವ ತೊರೆಯ ಮಂಜುಳ ನಾದವನ್ನು ಆಲಿಸುತ್ತಾ ಅಬುತ್ತಿಯನ್ನು; ಬಿಚ್ಚಿ ಉಣಬಹುದು: ತಣಿಹಬಹುದು; ದಣಿವರಿಸಿ ಕೊಳ್ಳಬಹುದು. ನಮಗೆ ಬೇಕಾದವರು, ನಮ್ಮ ಜೀವನ ಅನುಭವಗಳಲ್ಲಿ ಒಲ್ಮೆಯುಳ್ಳವರು ಬಳಿಯಿದ್ದರೆ ಅವರಿಗೂ ಆ ಬುತ್ತಿಯ ಪರಿಚಯ ಮಾಡಿಕೊಟ್ಟು, ಒಂಟಿಯಾಗಿ ಅನುಭವಿಸುವ ಸುಖವನ್ನು ಇಮ್ಮಡಿಯಾಗಿ ಅನುಭವಿಸಬಹುದು. ಆಲಿಸುವವರಲ್ಲಿ ತಾತ್ಸಾರವಾಗಲಿ, ವ್ಯಂಗ್ಯ ಪರಿಹಾಸ್ಯವಾಗಲಿ, ಜಿಹಾಸೆಯಾಗಲಿ, ಜುಗುಪ್ಸೆಯಾಗಲಿ ತೋರಿ ಬಂದರೆ ಬಾಯಿಮುಚ್ಚಿಕೊಂಡು ಮನದಲ್ಲಿಯೆ ಬುತ್ತಿಯೂಟ ಮಾಡಬಹುದು.

ಅಬುತ್ತಿಯಲ್ಲಿ ಸುಖಗಳಂತೆ ಕಷ್ಟಗಳೂ ಮನೆ ಮಾಡಿಕೊಂಡಿರುತ್ತವೆ. ಆದರೆ ಕಳೆದ ಕಾಲವು ಸ್ಮೃತಿಯ ವಜ್ರಪಂಜರದಲ್ಲಿ ಅ ಅನುಭವಗಳನ್ನು ಬಂಧಿಸಿರುವುದರಿಂದ ನಮಗೆ ಅವುಗಳ ಭಯಂಕರತೆಗಿಂತಲೂ ಮನೋಹರತೆಯೆ ಹೆಚ್ಚಾಗಿ ಎದೆ ಮುಟ್ಟುತ್ತದೆ. ಮೃಗಶಾಲೆಯಲ್ಲಿ ಪಂಜರದೊಳಗಿರುವ ಹುಲಿಯನ್ನೂ ಗಿಳಿಯನ್ನೂ ನಾವು ನಿರ್ಭರತೆಯಿಂದ ನೋಡಿ ಆನಂದಪಡುವಂತೆ ಕಾಲಪಂಜರದಲ್ಲಿ ಸಿಕ್ಕಿ ಬಿದ್ದ ಕಷ್ಟ ಸುಖಾನುಭವಗಳನ್ನು ಸಮದೃಷ್ಟಿಯಿಂದ ನೋಡಲು ಸಮರ್ಥರಾಗುತ್ತೇವೆ. ಒಂದು ವೇಳೆ ನಡುಗಿದರೂ ಬಿಸುಸುಯ್ದರೂ ಕಂಬನಿಗರೆದರೂ ರಂಗಭೂಮಿಯಲ್ಲಿ ರುದ್ರನಾಟಕಗಳನ್ನು ನೋಡಿ ದುಃಖಪಟ್ಟರೂ ಆನಂದಪಡುವಂತೆ ಆಗುತ್ತದೆಯೆ ಹೊರತು ಕಷ್ಟಗಳನ್ನು ಸಾಕ್ಷಾತ್ತಾಗಿ ಅನುಭವಿಸದಂತೆ ಉಗ್ರವಾಗುವುದಿಲ್ಲ. ಆದ್ದರಿಂದ ನೆನಪಿನಲ್ಲಿ ಒಂದು ತೆರನಾದ ನಿಷ್ಕಾಮತೆಯೂ ಶಾಂತಿಯೂ ಇರುತ್ತದೆ.

ಮನಸ್ಸಿಗೆ ಜೀವನದ ಅನುಭಗಳನ್ನು ಆಯ್ದಿಟ್ಟುಕೊಳ್ಳುವ ಶಕ್ತಿಯಿದೆ. ತನಗೆ ಬೇಕಾದುದನ್ನು – ಅದು ಹಿತವಾಗಿರಲಿ ಅಹಿತರವಾಗಿರಲಿ – ಉಳಿಸಿಕೊಂಡು ಉಳಿದುದನ್ನು ಮರೆತುಬಿಡುತ್ತದೆ. ಏಕೆಂದರೆ ಎಲ್ಲ ಸಣ್ಣಪುಟ್ಟ ಸಾಮಾನ್ಯ ನೀರಸ ಅನುಭವಗಳನ್ನು ನೆನಪಿನಲ್ಲಿ ಇಡುವುದೆಂದರೆ ಅದಕ್ಕೆ ಹೊರಲಾರದ ಭಾರವಾಗುತ್ತದೆ.  ಈ ಆಯ್ಕೆಯ ವಿಚಾರದಲ್ಲಿ ಮನಸ್ಸು ನಿರಂಕುಶ ಪ್ರಭು; ಅದು ಯಾವ ಕಟ್ಟುಕಟ್ಟಳೆಗಳಿಗೂ ತಲೆಬಾಗಿ ನಡೆಯುವಂತೆ ತೋರುವುದಿಲ್ಲ. ವಿಚಾರದೃಷ್ಟಿಗೆ ದೊಡ್ಡದಾಗಿ ತೋರುವುದನ್ನು ಮನಸ್ಸು ಸಂಪೂರ್ಣವಾಗಿ ಮರೆತುಬಿಡಬಹುದು; ಕೆಲಸಕ್ಕೆ ಬಾರದಂತೆ ತೋರುವುದನ್ನು ಅದು ಪ್ರೀತಿಯಿಂದ ಕಾಪಾಡಬಹುದು. ದೊಡ್ಡ ಅಧಿಕಾರಿಯೊಡನೆಯೊ ಅಥವಾ ಐಶ್ವರ್ಯವಂತರೊಡನೆಯೊ ಕಳೆದ ಕಾಲವನ್ನಾಗಲಿ ಆಡಿದ ಮಾತುಗಳನ್ನಾಗಲಿ ಅದು ಸಂಪೂರ್ಣವಾಗಿ ತಿರಸ್ಕರಿಸಿ ಮರೆತುಬಿಡಬಹುದು: ದರಿದ್ರನೊಡನೆಯೊ ಅನಾಮೇಧೇಯನೊಡನೆಯೊ ಕಳೆದ ಕಾಲವನ್ನೂ ನುಡಿದ ಮಾತುಗಳನ್ನೂ ಪೂಜ್ಯಬುದ್ಧಿಯಿಂದ ಪಾಲಿಸಬಹುದು: ಈ ವಿಷಯದಲ್ಲಿ ಮನಸ್ಸು ಬಹು ದೊಡ್ಡ ಪಕ್ಷಪಾತಿ.

ಜೀವನದ ಸಂಪತ್ತು ಅದರ ಅನುಭವಗಳಲ್ಲಿದೆ. ನೆನಪು ಆ ಅನುಭವಗಳಲ್ಲಿದೆ. ನೆನಪು ಅ ಅನುಭವಗಳ ನಿಧಿ. ನೆನಹಿನಲ್ಲಿ ಮಹತ್ತಾದ ವಿಷಯಗಳನ್ನಾಗಲಿ ಚಿತ್ರಗಳನ್ನಾಗಲಿ ದೃಶ್ಯಗಳನ್ನಾಗಲಿ ವ್ಯಕ್ತಿಗಳನ್ನಾಗಲಿ ತುಂಬಿಕೊಳ್ಳದ ನರನ ಆತ್ಮ ದಾರಿದ್ರ್ಯ ಸೀಮೆ. ಸ್ಮೃತಿಮಂದಿರದಲ್ಲಿ ಆರಾಧನೆಯ ದೇವತೆಗಳು ಹೆಚ್ಚಿದಷ್ಟೂ ಮನುಷ್ಯ ಶ್ರೀಮಂತನಾಗುತ್ತಾನೆ. ಪವಿತ್ರನಾಗುತ್ತಾನೆ, ಪೂಜ್ಯನಾಗುತ್ತಾನೆ. ಜೀವನದಲ್ಲಿ ನಾವು ಸಂಧಿಸುವ ಮಹಾಘಟನೆಗಳನ್ನೂ ಸನ್ನಿವೇಶಗಳನ್ನೂ ದೃಶ್ಯಗಳನ್ನೂ ಕಲ್ಪನೆಯಲ್ಲಿ ಸೆರೆಹಿಡಿದು, ಕಾಲದೇಶಗಳ ನಶ್ವರ ಜಾಲದಿಂದ ಪೊರೆದು, ಪ್ರತಿಭೆಯ ಅಮೃತ ಸೇಚನೆಯಿಂದ ಅವುಗಳನ್ನು ಬೊಕ್ಕಸದಲ್ಲಿ ಅಪೂರ್ವ ಅನುಭವಗಳು ಸಂಗ್ರಹವಾಗುತ್ತದೆ. ಯಾವಾಗ ಬೇಕೆಂದರಾಗ ಆ ವರ್ಣಮಯವಾದ ಗಾನಮಯವಾದ ರೂಪ ರಸಮಯವಾದ ಮನಸ್ಸಿನ ಅಲಕಾವತಿಯನ್ನು ಕಲ್ಪನೆಯ ಇಂದ್ರಧನುಷ್ಪಥದಿಂದ ಪ್ರವೇಶಿಸಿ ಕಾಲದೇಶಾತೀತರಾಗಿ ನಲಿಯಬಹುದು. ನಾವು ಮೈಸೂರಿನ ಸಂತೇಪೇಟೆಯ ಹೋಟೆಲಿನ ಗಲಿಬಿಲಿ ಗಲೀಜುಗಳಲ್ಲಿದ್ದರೂ ಮಲೆನಾಡಿನ ಕವಿಶೈಲ ನವಿಲುಕಲ್ಲುಗಳ ನೆತ್ತಿಯ ಚೇತೋಹಾರಿಯಾದ ವಾತಾವರಣದಲ್ಲಿ ರಸಋಷಿಗಳಾಗಿರಬಹುದುದು.

ನನ್ನ ಜೀವನವೆಲ್ಲ ಕಲ್ಪನೆ ಸ್ಪೃತಿಗಳ ಕೃಪೆಯಿಂದ ಸುಖಶಾಂತಿ ಪೂರ್ಣವಾಗಿದೆ. ನಾನು ಮನುಷ್ಯ ನಿರ್ಮಿತ ದೇವಾಲಯಗಳಿಗೆ ಹೋಗಬೇಕಾಗಿಲ್ಲ. ಪ್ರಕೃತಿ ಅಲ್ಲಲ್ಲಿ ಆಗಾಗ ದಾನಮಾಡಿರುವ ಭವ್ಯಸುಂದರ ದೃಶ್ಯಗಳು ನನ್ನ ಕಲ್ಪನೆಯಲ್ಲಿ ಸೆರೆಯಾಗಿರುವುದರಿಂದ ನಾನು ಬಯಸಿದಾಗ ಅವುಗಳ ದರ್ಶನವಾಗುತ್ತದೆ. ಆ ದರ್ಶನಗಳ ಮುಂದೆ ನರನಿರ್ಮಿತ ದೇವಾಲಯಗಳು ಕ್ಷುದ್ರವಾಗುತ್ತವೆ. ಉಳಿದ ಹಿರಿಮನೆ ಅರಮನೆಗಳ ಮಾತಂತಿರಲಿ! ನಾನು ಮೈಸೂರಿನಲ್ಲಿದ್ದರೂ ಪ್ರತಿ ಪ್ರಾತಃಕಾಲ ನವಿಲುಕಲ್ಲಿನಲ್ಲಿಯೂ ಪ್ರತಿ ಸಾಯಂಕಾಲ ಕವಿಶೈಲದಲ್ಲಿಯೂ ಕುಳಿತು ಧ್ಯಾನ ಮಾಡುತ್ತೇನೆ. ಆ ಪರ್ವತ ಶ್ರೇಣಿಗಳು, ಆ ವಿಶಾಲ ನೀಲಗಗನ, ಆ ಅಪಾರ ಅರಣ್ಯರಾಶಿ, ಆ ಸಹಸ್ರ ಪಕ್ಷಿಗಳ ವಸಂತಗಾನ, ಆ ಹಸುರಿನ ಹೆಮ್ಮೆ, ಆ ಗಂಭೀರ ಮೌನ, ಆ ದಿನಾಂತ ಸಮಯದ ಪವಿತ್ರಶಾಂತಿ, ಸಂಧ್ಯಾಕಾಶದಲ್ಲಿ ಜರುಗುವ ಆ ಬಣ್ಣಗಳ ಮೆರೆವಣಿಗೆ, ಆ ಮುಗಿಲುಗಳ ವಿವಿಧ ವೈಚಿತ್ರ್ಯಮಯ ವರ್ಣಮಯ ವಿನ್ಯಾಸ ಭೂಮ್ಯಾಕಾಶಗಳ ಮಧ್ಯೆ ಆ ದೂರದ ದಿಗಂತಪಂಕ್ತಿಯ ಮಾಯಾರೇಖೆ, ಮೈಲು ತುತ್ತಿನ ಮರಳಿನ ರಾಶಿಗಳ ತೋರುವ ಆ ಸುದೂರ ಗಿರಿಶಿಖರ ತರಂಗಗಳ ನೀಲ ಲೀಲೆ ಇವುಗಳನ್ನು ನೆನೆದರೆ ತನುವಿನಲ್ಲಿ ಮಿಂಚಿನ ಹೊನಲು ಹರಿದಂತಾಗಿ ವಿಕಂಪಿಸುತ್ತದೆ; ಮನವು ಭಾವಾವೇಗದಿಂದ ಮೈಮರೆಯುತ್ತದೆ. ಯಾವ ತೀರ್ಥ ಸ್ನಾನದಿಂದ ಹೀಗಾಗುತ್ತದೆ? ಯಾವ ಪುಣ್ಯ ಕ್ಷೇತ್ರ ಯಾತ್ರೆಯಿಂದ ಹೀಗಾಗುತ್ತದೆ?

‘ಚಿತ್ರ’ಗಳಿಗಾಗಿ ಬರೆಯುವ ಮುನ್ನುಡಿ ‘ಚಿತ್ರ’ ಗಳಂತೆಯೆ ಶಿಥಿಲವಾಗಿದ್ದರೇನಂತೆ? ಕವಿಶೈಲ ನವಿಲುಕಲ್ಲಗಳ ಮಾತೆತ್ತಿಯಾಯಿತು. ಅವುಗಳ ವಿಚಾರವಾಗಿ ನಿಮಗೆರಡು ಮಾತು ಹೇಳಿಬಿಡುತ್ತೇನೆ. ನೀವು “ಬೇಡ, ಮುನ್ನುಡಿಯಲ್ಲಿ ಹರಟೆ ಲಕ್ಷಣವಲ್ಲ; ನಮಗೆ ಅದನ್ನೆಲ್ಲ ಕೇಳಲು ಇಷ್ಟವಿಲ್ಲ” ಎಂದು ಕೂಗಿಕೊಂಡರೂ ನಾನು ಬೇರೆ ಬಿಡುವಂತಿಲ್ಲ; ಹೇಳಲೇ ಬೇಕು! ನನಗೇನೊ ಹೇಳಬೇಕೆನ್ನುವ ಹುಚ್ಚು ಹಿಡಿದಿದೆ! ಕೇಳುವ ಹುಚ್ಚಿದ್ದವರು ಕೇಳಲಿ! ಉಳಿದವರು ಪುಸ್ತಕವಾನ್ನಾಚೆಗೆ ಬಿಸಾಡಲಿ!

ನಮ್ಮ ಮನೆ ಪರ್ವತಾರಣ್ಯಗಳ ತೊಡೆಯ ಮೇಲೆ ಕೂತಿದೆ ಎಂದು ಮೊದಲಾದ ಅನೇಕ ವಿಚಾರಗಳನ್ನು ನೀವು ‘ಚಿತ್ರ’ಗಳಿಂದ ತಿಳಿಯುತ್ತೀರಿ. ಮನೆಯ ತೆಂಕಣ ದಿಕ್ಕಿಗೆ, ಮನೆಗೆ ಮುಟ್ಟಿಕೊಂಡೇ ಏರಿ ಏರಿ ಹೋಗುವ ಬೆಟ್ಟದೋರೆಯಿದೆ. ಐದು ಹತ್ತು ನಿಮಿಷಗಳಲ್ಲಿಯೆ ಅದರ ನೆತ್ತಿಗೆ ಹೋಗಬಹುದು. ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು ಸುತ್ತಲೂ ಸ್ವಲ್ಪ ಬಯಲಾಗಿ ದೂರದ ದೃಶ್ಯಗಳನ್ನು ನೋಡಲು ಅನುಕೂಲವಾಗಿದೆ. ಮಲೆನಾಡಿನ ಪರ್ವತಗಳಲ್ಲಿ ಅಂತಹ ಸ್ಥಾನಗಳು ಅಪೂರ್ವ. ಎಲ್ಲಿ ನೋಡಿದರೂ ಮಹಾರಣ್ಯಗಳೆ ತುಂಬಿರುವುದರಿಂದ ಶಿಖರಗಳಲ್ಲಿ ಬಂಡೆಗಳಿದ್ದು ಬಯಲಾಗಿರುವುದೇ ಕಷ್ಟ! ಅದರಲ್ಲಿಯೂ ನಮ್ಮ ಮನೆಯಲ್ಲಿರುವಂತೆ ಐದು ಹತ್ತು ನಿಮಿಷಗಳಲ್ಲಿಯೆ ಶಿಖರವನ್ನು ಸೇರುವಷ್ಟು ಸಮೀಪದಲ್ಲಿ ಅಂತಹ ಶೈಲಸ್ಥಾನಗಳು ಮತ್ತೆಲ್ಲಿಯೂ ಇಲ್ಲವೆಂದೇ ಹೇಳಬೇಕು. ನಾನಂತೂ ನೋಡಿಲ್ಲ. ಆ ಸ್ಥಳಕ್ಕೆ ‘ಕವಿಶೈಲ’ ಎಂದು ನಾಮಕರಣವಾದುದು ಇತ್ತೀಚಿನ ಸಂಗತಿ. ಹೆಸರು ಹೊಸದಾದರೂ ಜಾಗ ಹೊಸದಲ್ಲ. ತಲೆತಲೆಯಾಂತರದಿಂದಲೂ ಆ ಕವಿಶೈಲವೂ ಅದರ ಸುತ್ತಣ ಮನೋಹರ ದೃಶ್ಯಗಳೂ ಸದಸ್ಯನಿರಪೇಕ್ಷಣೀಯವಾದ ಧೀರಗಾಂಭೀರ್ಯದಿಂದಲೂ ಕರುಣಾಪೂರ್ಣ ಔದಾಸೀನ್ಯದಿಂದಲೂ ಅಲ್ಲಿಯೆ ಇರುತ್ತವೆ. ಅದರ ಮುಖಾಂತರ ಜನಗಳು ತಿರುಗಾಡಿಯೂ ಆಡಿದ್ದಾರೆ. ಏಕೆಂದರೆ ಕವಿಶೈಲದ ಮಾರ್ಗವಾಗಿ ಕಡೆಮಕ್ಕಿ ಮೊದಲಾದ ಹಳ್ಳಿಗಳಿಗೆ ಹೋಗುವ ಒಂದು ಕಾಲುಹಾದಿಯಿದೆ. ಆದರೆ ಯಾರಿಗೂ ಆ ಸ್ಥಾನದ ಮಹತ್ತು ಬೃಹತ್ತು ಭವ್ಯತೆ ಸೌಂದರ್ಯ ಸುಖ ಶಾಂತಿಗಳ ಪರಿಚಯವಾಗಿರಲಿಲ್ಲ. ನಿಜವಾದ ಯೋಗ್ಯತೆಯ ಪರಿಚಯವಾಗುವುದಕ್ಕೂ ಒಂದು ಯೋಗ್ಯತೆ ಬೇಕು. ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲುಕಾಡು; ಕಲಾವಂತನಿಗೆ ಅದು ಸಗ್ಗವೀಡು. ಮಲೆನಾಡಿನಲ್ಲಿ ಅನೇಕರಿಗೆ ಕಲಾ ಸಂಸ್ಕೃತಿಯ ಅಭಾವದಿಂದ ತಮ್ಮ ನಾಡಿನ ಅಂದ ಚಂದ ಮಹಿಮೆ ಹಿರಿಮೆಗಳೆ ತಿಳಿದಿಲ್ಲ. ಆದರೆ ತಿಳಿಯುವ ಶಕ್ತಿಯಿದೆ ಎಂಬುದು ಈಚೀಚೆಗೆ ಗೊತ್ತಾಗುತ್ತಿದೆ. “ಕಾಡಿನಲ್ಲಿ ಕಳೆದ ಒಂದಿರುಳು” ಎಂಬ ‘ಚಿತ್ರ’ದಲ್ಲಿ ಕೊನೆಯ ಭಾಗದಲ್ಲಿ ಒಂದು ಸ್ವರ್ಗೀಯ ದೃಶ್ಯದ ವರ್ಣನೆಯಿದೆ. ಅದು ಕವಿಶೈಲದಿಂದ ಅರುಣೋದಯ ಸಮಯದಲ್ಲಿ ನಿಂತು ನೋಡಿದ ದೃಶ್ಯ. ಆಗ ಆ ಸ್ಥಳಕ್ಕೆ ಹೆಸರೂ ವ್ಯಕ್ತಿತ್ವವೂ ಇನ್ನೂ ಲಭಿಸಿರಲಿಲ್ಲವಾಗಿ, ಅಲ್ಲಿ ಅದನ್ನು ಹೇಳಿಲ್ಲ. ವಾಚಕರು ಅದನ್ನು ಓದಿ ಇಲ್ಲಿಗೆ ಹೊಂದಿಸಿಕೊಳ್ಳಬೇಕಾಗಿ ಪ್ರಾರ್ಥನೆ.

ಕವಿಶೈಲ ಪಶ್ಚಿಮದಿಕ್ಕಿಗೆ ಮುಖ ಹಾಕಿಕೊಂಡಿದೆ; ಪೂರ್ವ ದಿಕ್ಕಿನಲ್ಲಿ ಎತ್ತರವಾದ ಬೆಟ್ಟಗಾಡುಗಳು ಹಬ್ಬಿರುವುದರಿಂದ ಉಳಿದ ದಿಕ್ಕುಗಳಲ್ಲಿ ನಮಗೆ ಗೋಚರವಾಗುವಂತೆ ದೂರದೃಶ್ಯಗಳು ಕಾಣುವುದಿಲ್ಲ. ಆದ್ದರಿಂದ ಅಲ್ಲಿಗೆ ಸೂರ್ಯೋದಯಕ್ಕಿಂತಲೂ ಸೂರ್ಯಾಸ್ತವೆ ಸಹಸ್ರ ಪಾಲು ಅತಿಶಯವಾಗಿ ತೋರುತ್ತದೆ. ನಾವು ಸಾಧಾರಣವಾಗಿ ಸಂಜೆಯ ಹೊತ್ತಿನಲ್ಲಿಯೆ ಅಲ್ಲಿಗೆ ಹೋಗುವುದು. ಕವಿಶೈಲವನ್ನು ನೆನೆದರೆ ನೂರಾರು ಮಧುರ ಚಿತ್ರಗಳು ಅನುಭವಗಳು ವ್ಯಕ್ತಿಗಳು ಸನ್ನಿವೇಶಗಳು ಮನಸ್ಸಿಗೆ ಬಂದು ಅದನ್ನು ಇನ್ನೂ ಹೆಚ್ಚಾಗಿ ಪ್ರೀತಿಪಾತ್ರವಾಗುವಂತೆ ಮಾಡುತ್ತವೆ. ಒಂದೆರೆಡು ಫರ್ಲಾಂಗುಗಳಷ್ಟು ವಿಸ್ತಾರವಾಗಿ ಹಬ್ಬಿರುವ ಆ ಬಂಡೆಯಲ್ಲಿ ಒಂದು ಕಡೆ ದಪ್ಪ ಅಕ್ಷರಗಳಿಂದ “ಕವಿಶೈಲ” ಎಂಬ ಹೆಸರು ಖಚಿತವಾಗಿದೆ. ಇನ್ನೊಂದು ಕಡೆ ‘ಅನಿರ್ವಚನೀಯ ಮೂರ್ತಿ’ ಎಂಬ ಚಿತ್ರವಿದೆ. ಮತ್ತೊಂದೆಡೆ ಯೇಸುಕ್ರಿಸ್ತನನ್ನು  ಸಿಲುಬೆಗೆ ಹಾಕಿದಂತೆ ಚಿತ್ರವಿದೆ. ಅಲ್ಲಿ ಖಚಿತವಾದ ಹೆಸರುಗಳೆಷ್ಟು! ಅಲ್ಲಿಗೆ ಬಂದವರೆಲ್ಲರೂ ತಮ್ಮ ಹೆಸರುಗಳನ್ನು ಕೆತ್ತದೆ ಬರುವುದಿಲ್ಲ. ನನ್ನ ಬಯಲು ಸೀಮೆಯ ಮಿತ್ರರೂ ಅಲ್ಲಿಗೆ ಬಂದಾಗೆಲ್ಲಾ ಹೆಸರಗಳನ್ನು ಕೆತ್ತಿ ಸ್ಮಾರಕಸ್ತೂಪಗಳನ್ನು ನೆಟ್ಟು ಬಂದಿರುತ್ತಾರೆ. ಅಲ್ಲಿ ಹೆಸರು ಕೆತ್ತಿದ ಪ್ರೀತಿಯ ಬಂಧುಗಳಲ್ಲಿ ಕೆಲವರು ಸ್ವರ್ಗಸ್ಥರಾಗಿದ್ದಾರೆ. ಕೆಲವು ಮಿತ್ರರೂ ದೂರ ದೂರ ದೇಶಗಳಲ್ಲಿದ್ದಾರೆ! ಅಲ್ಲಿ ಸಂಧ್ಯಾಕಾಲದಲ್ಲಿ ಎಂಥವನೂ ಧ್ಯಾನಶೀಲನಾಗದೆ ಹಿಂತಿರುಗುವುದಿಲ್ಲ. ಅನೇಕ ಅನುಭವಗಳಿವೆ. ಅವುಗಳನ್ನು ಇನ್ನಾವಾಗಲಾದರೂ ಹೇಳುತ್ತೇನೆ. ಉದಾಹರಣೆಗೆ ಮಾತ್ರ ಒಂದಿರಲಿ.

ಒಂದು ದಿನ ಸಂಜೆ. ಸೂರ್ಯನು ಮುಳುಗಿದ್ದನು, ಮುಂಗಾರು ಮೋಡಗಳು ಆಕಾಶದಲ್ಲಿ ಅಂಗೈಯಗಲದ ಜಾಗವನ್ನೂ ಉಳಿಸದೆ ಮುತ್ತಿದ್ದುವು. ಶ್ರೀನಿ, ವಿಜಯ, ಎಂಕ್ಟು, ನಾನು ನಾಲ್ವರೂ ಕವಿಶೈಲಕ್ಕೆ ಹೋದೆವು. ನಮಗೆ ಮಳೆ ಬರುವುದೆಂದು ಭಯ ಆದರೂ ಕವಿಶೈಲದ ಮೋಹ. ಮೋಹ ಭಯವನ್ನು ಗೆದ್ದುದರಿಂಧ ಬೆಟ್ಟವೇರಿದೆವು. ಅಂದು ನಮಗಾದ ಅನುಭವ ಚಿರಸ್ಮರಣೀಯವಾದುದು, ಧಾರ್ಮಿಕವಾದುದು, ಅಮೃತವಾದುದು; ಎಷ್ಟು ಮಾತುಗಳನ್ನು ಹಾಕಿದರೂ ಸಾಲದು ಎನ್ನಿಸುವಂಥದು!

ಬೆಟ್ಟವೇರಿದೆವು! ಏರುತ್ತ ಏರುತ್ತ ‘ಭೂತದ ಸಿಲೇಟು’ ಇರುವಲ್ಲಿಗೆ ಹೋಗುತ್ತಲೆ ನನಗೆ ಏನೋ ಒಂದು ಅಸಾಧಾರಣತೆಯ ಅನುಭವವಾಗತೊಡಗಿತು. ಹೊಸ ಮಳೆಯ ಮುದ್ದು ಮುತ್ತಿಗೆ ಪುಲಕಿತಳಾಗಿದ್ದ ಶ್ಯಾಮಲಧಾರಿಣಿಯ ಮೇಲೆ ಅದ್ಭುತವಾದ ಒಂದು ಗೈರಿಕ ಕಾಂತಿ ಹಬ್ಬಿತ್ತು. ಎಲ್ಲರೂ ಬೆಕ್ಕಸಗೊಂಡು ನೋಡಿದುದರಿಂದ ಎಲ್ಲರ ಮನದಲ್ಲಿಯೂ ಅದೊಂದು ವಿಶೇಷವೆಂದು ತೋರಿರಬೇಕು. ಆಶ್ಚರ್ಯ ಆನಂದಗಳನ್ನು ಸೂಚಿಸುವ ಒಂದೆರಡು ಅನುಕರಣ ಶಬ್ದಗಳನ್ನು ಉಚ್ಚರಿಸುತ್ತ ಬೇಗಬೇಗನೆ ಮುಂದುವರಿದೆವು. ಮುಂದುವರಿದಂತೆಲ್ಲಾ ಅ ಅದ್ಭುತ ಜ್ಯೋತಿ ನಾಡನ್ನೂ ನಮ್ಮೆಲ್ಲರ ಹೃದಯಗಳನ್ನೂ ತುಂಬಿತು. ಅಂತೂ ಕವಿಶೈಲವನ್ನು ಸೇರಿ ಬಂಡೆಯ ಮೇಲೆ ಕುಳಿತೆವು. ಸುಮ್ಮನೆ ನೋಡಿದೆವು.

ಸಮಸ್ತ ಆಕಾಶವನ್ನೂ ಸುತ್ತಿಮುತ್ತಿದ ಕಾರ್ಗಾಲದ ಕರ್ಮುಗಿಲು ಪಡುವಣದೆಸೆಯಲ್ಲಿ ಮಾತ್ರ ಹತ್ತು ಹದಿನೈದು ಮಾರು ಅಗಲಕ್ಕೆ ಹಬ್ಬಿರಲಿಲ್ಲ. ಅದೊಂದು ಮಹಾ ಮೇಘಗವಾಕ್ಷದಂತಿತ್ತು. ಸೂರ್ಯನು ಅಸ್ತನಾಗಿದ್ದುದರಿಂಧ ಕಿರಣಗಳಿಲ್ಲದ ಸಂಧ್ಯಾಕಾಂತಿ ವಿಪುಲ ಪ್ರವಾಹ ಆ ಮಹಾ ಗವಾಕ್ಷದಿಂದ ತುಳುಕಿ ತೂರಿ ಪ್ರವಹಿಸಿ ಒಂದು ತರಂಗ ತರಂಗವಾದ ವಿಸ್ತಾರವಾದ ಗಿರಿವನ ಧರೆಯನ್ನು ಆಲಿಂಗಿಸಿತ್ತು. ಆ ಗೈರಿಕ ವರ್ಣದ ಜ್ಯೋತಿಯಲ್ಲಿ ಒಂದು ವಿಧವಾದ ಧಾರ್ಮಿಕತೆ ಪ್ರಸ್ಫುಟವಾಗಿತ್ತು. ಆ ದೀಪ್ತಿಯ ಜೊತೆಗೆ ಮೌನವು ಸೇರಿದ್ದುದರಿದ ಜಗತ್ತು ಗೈರಿಕವಸಧಾರಿಯಾಗಿ ಧ್ಯಾನಸ್ಥನಾದ ಮಹಾತಪಸ್ವಿಯಂತೆ ಭವ್ಯವಾಗಿತ್ತು. ತೆಂಕಣ ದೆಸೆಯಲ್ಲಿ ಬಹುದೂರದಲ್ಲಿ ಪರ್ವತಶಿಖರಗಳಲ್ಲಿ ರಾಶಿರಾಶಿಯಾಗಿದ್ದ ಕರ್ಮುಗಿಲಿನಲ್ಲಿ ಬಳ್ಳಿ ಮಿಂಚು ನಾಗರಹಾವಿನ ನಾಲಗೆಯಂತೆ ಹೊಮ್ಮಿ ಚಿಮ್ಮಿ ಕಣ್ಮರೆಯಾಗುತ್ತಿತ್ತು. ನಾವು ಬಂಡೆಯ ಮೇಲೆ ಕುಳಿತು ಮಾತಿಲ್ಲದೆ ನೋಡಿದೆವು. ನೋಡುತ್ತಿದ್ದ ಹಾಗೆಯೆ ಮೇಘಗವಾಕ್ಷದೆಡೆಯ ಸಂಧ್ಯಾಗಗನ ವೇದಿಕೆಯಲ್ಲಿ ಲೋಕಮೋಹಕವಾದ ಅಸಂಖ್ಯ ವರ್ಣೋಪವರ್ಣಗಳ ಮೆರವಣಿಗೆ ಪ್ರಾರಂಭವಾಯಿತು. ಹಾಗೆಯೇ ನಮ್ಮ ಹೃದಯ ಮಂದಿರಗಳಲ್ಲಿ ಅಸಂಖ್ಯ ಭಾವೋಪಭಾವಗಳ ಮಹೋತ್ಸವವೂ ಪ್ರಾರಂಭವಾಯಿತು. ಆ ಸೌಂದರ್ಯ ಸಮುದ್ರದಲ್ಲಿ ನಾವೆಲ್ಲರೂ ತೆರೆತೆರೆಗಳಾಗಿ ಅಶರೀರಗಳಾಗಿ ವಿಶ್ವವಿಲೀನವಾದೆವು. ನನ್ನ ಕಣ್ಣೆವೆಗಳ ಅನೈಚ್ಛಿಕವಾಗಿಯೆ ಮುಗುಳಿದುವು….. ಕಣ್ದೆರೆದಾಗ ಕತ್ತಲೆಯಾಗಿತ್ತು…. ನಾವು ಕಂಡ ದೃಶ್ಯದ, ನಮಗಾದ ಅನುಭವದ ವಿಚಾರವಾಗಿ ಮಾತನಾಡುವುದಕ್ಕೂ ಬೆದರಿಕೆಯಾಗಿ ಬೇರೆಯ ವಿಷಯಗಳನ್ನು ಕುರಿತು ಸಂಭಾಷಿಸುತ್ತ ಮನೆಗೆ ಬಂದೆವು. ಆದರೂ ದಾರಿನಲ್ಲಿ ಒಬ್ಬರ ಮುಖವನ್ನು ಒಬ್ಬರು ನೋಡಿದಾಗಲೆಲ್ಲ ನೋಟವು ನಾವು ಕಂಡ ದರ್ಶನವನ್ನು ಕುರಿತೇ ನುಡಿಯುವಂತಿತ್ತು.

ಕವಿಶೈಲದಂತೆಯೆ ಅಥವಾ ಅದಕ್ಕಿಂತಲೂ ಒಂದು ಕೈ ಮೇಲಾಗಿದೆ ‘ನವಿಲುಕಲ್ಲು’. ಸುತ್ತಮುತ್ತಣ ಕಾಡುಗಳಲ್ಲಿರುವ ನವಿಲುಗಳು ಬಂದು ಆ ಶಿಲಾಶಿಖರದಲ್ಲಿ ವಿಹರಿಸುವುದರಿಂದ ಅದಕ್ಕೆ ಆ ಹೆಸರು ಬಂದಿದೆ. ಆ ಶಿಖರ ಸಮಸ್ತವೂ ಒಂದು ಅಖಂಡವಾದ ಬಂಡೆಯಾಗಿದೆ. ಅದರ ಮೇಲೆ ನಿಂತು ನೋಡಿದರೆ ಸುತ್ತಲೂ ನಾಲ್ದೆಸೆಯಲ್ಲಿಯೂ ತರಂಗ ತರಂಗವಾಗಿ ಒಂದರೊಡನೊಂದು ಸ್ಪರ್ಧಿಸುತ್ತಿವೆಯೊ ಎಂಬಂತೆ ದಿಗಂತ ವಿಶ್ರಾಂತವಾಗಿ ಗಗನಚುಂಬಿಗಳಾಗಿ ಹಬ್ಬಿರುವ ವನಪರ್ವತ ಶ್ರೇಣಿಗಳ ಚಕ್ರಾಕಾರವಾದ ಭವ್ಯದೃಶ್ಯ ಹೃದಯಂಗಮವಾಗಿ ಮನೋಹರವಾಗಿ ದೃಗ್ಗೋಚರವಾಗುತ್ತದೆ. ದೂರದ ಗಿರಿ ಪಂಕ್ತಿಗಳಂತೂ ಮಾಸಲು ಮಾಸಲಾಗಿ ನೀಲಮೇಘಗಳಂತೆ ಆಕಾಶದ ವಸ್ತುಗಳಾಗಿ ತೋರುತ್ತವೆ. ಹತ್ತಿರದಲ್ಲಿ ಬಹುದೂರ ಕೆಳಗಡೆ ಅಲ್ಲಲ್ಲಿ ಕಣಿವೆಗೂ ಗದ್ದೆ ತೋಟಗಳೂ ಮನೆಗಳೂ ಕಾಣುತ್ತದೆ. ಪೂರ್ವದಿಕ್ಕಿನಲ್ಲಿ ಹಸುರುಕಾಡುಗಳ ನಡುವೆ ಕೊಂಕಿ ಹರಿವ ತುಂಗಾನದಿಯ ಸಲಿಲ ಸೈಕತ ಶ್ವೇತ ರೇಖಾವಿನ್ಯಾಸ ಸಮನೋಹರವಾಗಿ ಕಂಗೊಳಿಸುತ್ತದೆ. ಮೇಲಿನ ವರ್ಣನೆ ನವಿಲುಕಲ್ಲಿನಲ್ಲಿ ಸದಾ ಸಾಮಾನ್ಯವಾಗಿ ತೋರುವ ದೃಶ್ಯದ್ದಾಯಿತು. ಆದರೆ ವಸಂತ ಪ್ರಭಾತದ ನವಿಲುಕಲ್ಲೇ ಬೇರೆ! ಅದನ್ನು ನೋಡಿ ಅನುಭವಿಸಿದಲ್ಲದೆ ಅದರ ಸೌಂದರ್ಯ ಮಹಿಮೆಗಳು ತಿಳಿಯುವುದಿಲ್ಲ. ನಾನಂತೂ ಅದನ್ನು ನೋಡಿ ಸೋತು ಶರಣಾಗಿದ್ದೇನೆ. ಆ ಸ್ವರ್ಗೀಯ ದೃಶ್ಯದ ಮಹಾ ವಿಗ್ರಹ ನನ್ನ ಮನೋಮಂದಿರದಲ್ಲಿ ಚಿರವಾಗಿ ಸ್ಥಾಪಿತವಾಗಿದೆ. ಅದಕ್ಕಲ್ಲಿ ದಿನ ದಿನವೂ ಆರಾಧನೆ ನಡೆಯುತ್ತಿದೆ.

ನಮ್ಮ ಮನೆಗೆ ಕೆಲವು ಜನ ಬಯಲು ಸೀಮೆಯ ಮಿತ್ರರು ಬಿಜಯ ಮಾಡಿದ್ದರು. ನಾವೆಲ್ಲರೂ ಸೇರಿ ನಮ್ಮ ನೆಂಟರ ಮನೆಯೂ ನೆಂಟರಿಗಿಂತ ಹೆಚ್ಚಾಗಿ ಮಿತ್ರರ ಮನೆಯೂ ಆಗಿರುವ ಇಂಗ್ಲಾದಿಗೆ ಹೋಗಿ ಉಳಿದೆವು. ಇಂಗ್ಲಾದಿಗೆ ನವಿಲುಕಲ್ಲು ಎರಡೂವರೆ ಮೈಲಿ. ಮರುದಿನ ಬೆಳಗ್ಗೆ ನವಿಲುಕಲ್ಲಿಗೂ ಅಲ್ಲಿಂದ ಸಿಬ್ಬಲು ಗುಡ್ಡೆಗೂ ಹೋಗಲು ನಿಶ್ಚಯ ಮಾಡಿದೆವು. ಎಲ್ಲರೂ ಬೆಳಗ್ಗೆ ನಾಲ್ಕು ಗಂಟೆಗೆ ಏಳಬೇಕೆಂದು ನಾನು ಹುಕುಂ ಮಾಡಿದೆ. ಅವರಲ್ಲಿ ಕೆಲವರು ಗೊಣಗಿದರು. ಆದರೆ ನಾನು ನಿರ್ದಯನಾಗಿ ಮೂರುಮೂಕ್ಕಾಲು ಗಂಟೆಗೇ ಎಲ್ಲರನ್ನೂ ಎಬ್ಬಿಸಿದೆ. (ನಾನು ಅಷ್ಟು ಹೊತ್ತಿಗೆ ಎದ್ದುದೂ ಆ ಮನೆಯ ಯಜಮಾನರೂ ನನ್ನ ಗೆಳೆಯರೂ ಆದ ವೆಂ – ರವರ ಸಹಾಯದಿಂದ!) ಅಂತೂ ಎಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಥೂಗೂಟುತ್ತ ಶಪಿಸುತ್ತ ಎದ್ದರು. ಮುಖ ತೊಳದು ಕಾಫಿ ತಿಂಡಿ ಪೂರೈಸಿಕೊಂಡು ಹೊರಟೆವು. ಇನ್ನೂ ಕತ್ತಲೆಯಾಗಿಯೆ ಇತ್ತು. ಕಾಡಿನ ಕುಟಿಲ ಪಥಗಳಲ್ಲಿ ಮುಗ್ಗರಿಸುತ್ತಾ ಪ್ರತ್ಯೂಷೆಯ ತಂಗಾಳಿಯನ್ನು ಸೇವಿಸುತ್ತ, ಇನ್ನೇನು ಎಚ್ಚರಲಿರುವ ಮೌನದ ಗಾಂಭೀರ್ಯವನ್ನು ಅನುಭವಿಸುತ್ತ, ಮಡಿವಾಳಗಳ ಉಲಿಯನ್ನು ಆಲಿಸುತ್ತ, ಸುಮಾರು ಐದೂವರೆ ಐದೂ ಮುಕ್ಕಾಲು ಗಂಟೆಗೆ ನವಿಲುಕಲ್ಲನ್ನು ಸೇರಿದೆವು. ಆ ಜಗನ್ಮೋಹನ ದೃಶ್ಯಸೀಮೆ ಅನಂತವಾಗಿ ಅಪಾರವಾಗಿ ಅಸೀಮವಾಗಿ ಅದ್ಭುತವಾಗಿ ನಮ್ಮೆದರು ಪ್ರಸರಿಸಿತ್ತು! ನಾಡಿಗಳಲ್ಲಿ ರಕ್ತ ವೇಗವೇಗವಾಗಿ ಬಿಸಿಬಿಸಿಯಾಗಿ ಹರಿಯ ತೊಡಗಿತು. ಹೃದಯ ಶ್ವಾಸಕೋಶಗಳ ಕರ್ಮ ಚುರುಕಾಯಿತು. ಆನಂದಾವೇಶಗಳ ಭರದಲ್ಲಿ ಕಣ್ಣುಗಳರಳಿದುವು. ಮುಖ ಅಂತರಂಗದ ಭಾವಗಳನ್ನು ಪ್ರತಿಬಿಂಬಿಸಿ ಉಜ್ವಲವಾಯಿತು. ಮಾತು ಮೂರ್ಛೆಹೋಯಿತು!

ನವಿಲುಕಲ್ಲಿಗೆ ಪೂರ್ವಾಭಿಮುಖವಾಗಿದ್ದ ಗಿರಿಕಂದರಗಳಲ್ಲಿ ಹಿಂಜಿ ಹರಡಿದ ಬೂರುಗದರಳೆಯ ರಾಶಿಯಂತೆ ಮಂಜು ತುಂಬಿಕೊಂಡು ಸ್ವಚ್ಛತರ ಧವಳಫೇನದ ವಿಸ್ತಾರವಾದ ಮಹಾ ಸಮುದ್ರದಂತೆ ತರಂಗತರಂಗವಾಗಿ ಅವರ್ತಗರ್ತಗಳಾಗಿ ಸುಳಿಹೊನಲುಗಳಾಗಿ ಶೀಕರನೀಹಾರಗಳಾಗಿ ಚೇತೋಹಾರಿಯಾಗಿ ರಾರಾಜಿಸಿತ್ತು. ದೃಷ್ಟಿಸೀಮಾಪರ್ಯಂತ ದಿಗಂತಪರ್ಯಂತ ಗಗನತಟಾಕ್ರಾಂತವಾಗಿ ಹಬ್ಬಿದ ಆ ನೊರೆ ನೊರೆ ನೊರೆ ಬೆಳ್ನೊರೆಯ ಹೆಗ್ಗಡಲು, ಇರುಳು ಆಕಾಶದಲ್ಲಿ ಮಲಗಲು ತಾವಿಲ್ಲದೆ ಭೂಮಿಗೆ ಇಳಿದು ಬಂದಿ ಕಣಿವೆ ಕಣಿವೆಗಳಲ್ಲಿ ಹರಿದು ನಿದ್ದೆಗೈದ ಬೆಳ್ಮುಗಿಲುಗಳು ಬೆಳಗಾದರೂ ಆಲಸ್ಯದಿಂದ ಮೇಲೇಳಲಾರದೆ ಇರುವವೋ ಎಂಬಂತೆ ತೋರುತ್ತಿತ್ತು. ನಮ್ಮ ಬುದ್ದಿ ಅದು ಕಡಲಲ್ಲವೆಂದು ಉಪದೇಶ ಮಾಡುತ್ತಿದ್ದರೂ ಮನಸ್ಸಿಗೇಣೋ ಆ ಭ್ರಾಂತಿ ತಪ್ಪಲಿಲ್ಲ. ನೊರೆಯ ಹಿರಿಕಡಲಿನಲ್ಲಿ ಕಣಿವೆ ಕಾಡು ಹೊಳೆ ಮನೆ ತೋಟ ಎಲ್ಲವೂ ಮುಚ್ಚಿಹೋಗಿದ್ದುವು. ದೂರ ದೂರ ನಾವು ನಿಂತಿದ್ದ ನವಿಲು ಕಲ್ಲಿನಂತೆ ಮೇಲೆತ್ತಿ ದ್ವೀಪಗಳಂತೆ ಈಜಾಡುತ್ತಿದ್ದುವು. ಮಂಜಿನ ಕಡಲು ಕೆಲವೆಡೆ ಬೆಟ್ಟದಿರುಬುಗಳಲ್ಲಿ ತೂರಿ ಹೋಗಿ ಕೊಲ್ಲಿ ಖಾರಿಗಳಾಗಿತ್ತು. ಆ ಮಂಜಿನ ಇಂದ್ರಜಾಲಾಗಳನ್ನು ಅವಲೋಕಿಸತ್ತ ನಿಂತಿದ್ದ ಹಾಗೆಯೆ ಬಹು ದೂರದ ಪೂರ್ವದಿಗಂತದಲ್ಲಿ ಅರುಣಕಾಂತಿ ತಲೆದೋರಿ ಪರ್ವತ ಶಿಖರ ಪಂಕ್ತಿಗಳಿಂದಾದ ದಿಗಂತರೇಖೆ ಸ್ಪಷ್ಟವಾಯಿತು. ನಾವೆಲ್ಲರೂ ಮಾತಾಡದೆ ಎವೆಯಿಕ್ಕದೆ ಉತ್ಕಂಠಭಾವದಿಂಧ ನಿಂತು ಭಗವಾನ್ ಸೂರ್ಯದೇವನ ಪ್ರಥಮದರ್ಶನದ ಮಹೋತ್ಸವವನ್ನೆ ಎದುರು ನೋಡುತ್ತಿದ್ದೆವು. ಕೆಂಬೆಳಕು ಮತ್ತಿನಿತು ಉದ್ದೀಪನವಾಗಿ ನೋಡುತ್ತಿರೆಯಿರೆ ದಿವಾಕರನ ರಕ್ತಾಕ್ತ ವಿಶಾಲ ಬಿಂಬದ ನೇಮಿರೇಖೆ ಸುದೂರದೂರದ ಪರ್ವತಶಿಖರಗಳ ಮೆಲೆ ಹಠಾತ್ತಾಗಿ ಪ್ರತ್ಯಕ್ಷವಾಯಿತು! ನಮ್ಮೆದೆಗಳಲ್ಲಿ ನೆತ್ತರು ಚಿಮ್ಮಿತು; ಮನದಲ್ಲಿ ಭಾವವುಕ್ಕಿತು. ತಳತಳಿಸುವ ಮಿಂಚಿನ ವಕ್ರರೇಖೆಯಂತೆ ಹೊರಮೂಡಿದ ದಿನಶನು ನೋಡೆ ನೋಡೆ ಕುಂಕುಮದಲ್ಲಿ ಮಿಂದು ಮಿಂಚಿನುಂಡೆಯಾದನು! ಆತನ ಪೂರ್ಣಬಿಂಬದಿಂದ ಸೂಸಿದ ಪ್ರಭಾತಕಾಂತಿ ಪರ್ವತ ಶೃಂಗಗಳ ಮೇಲೆಯೂ ಮಂಜಿನ ಸಮುದ್ರದ ಮೇಲೆಯೂ ಬಿದ್ದು ಮನೋಹರವಾಯಿತು. ತಂಗಾಳಿಯೂ ಹಕ್ಕಿಗಳ ಗಾನವೂ ಸೊಬಗಿನ ಸಂಭ್ರಮದಲ್ಲಿ ಭಾಗಿಗಳಾದುವು. ಗಗನದೆಡೆಗೆ ಒಯ್ಯನೊಯ್ಯನೆ ಏರಲಾರಂಭಿಸಿತು. ನಾವೆಲ್ಲರೂ ಕಣ್ದಣಿಯೆ ನೋಡಿ ಮನದಣಿಯೆ ಸವಿದು, ಮನಸ್ಸಿಲ್ಲದ ಮನಸ್ಸಿನಿಂದ ನವಿಲುಕಲ್ಲನ್ನು ಬೀಳ್ಕೊಂಡು, ಅಲ್ಲಿಂದ ಎರಡೂವರೆ ಮೂರು ಮೈಲಿಗಳ ದೂರದಲ್ಲಿರುವ ‘ಸಿಬ್ಬಲುಗುಡ್ಡೆ’ ಗೆ ಹೋಗಿ ಮೀನುಗಳಿಗೆ ತಿಂಡಿ ಹಾಕಿ, ತುಂಗೆಯಲ್ಲಿ ಮಿಂದು ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಮನೆಗೆ ‘ಸುಸ್ತಾಗಿ’ ಹಿಂತಿಗಿದೆವು. ಅಂದಿನ ಅನುಭವ ಎದೆಯ ನಾಲಗೆಯಲ್ಲಿ ಎಂದಿಗೂ ಸಮೆದುಹೋಗುದ ಪೆಪ್ಪರಮೆಂಟಾಗಿದೆ! ಹೃದಯ ಮಂದಿರದಲ್ಲಿ ಸರ್ವದಾ ಆರಾಧಿತ ಮಹಾವಿಗ್ರಹವಾಗಿದೆ!

ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರುನಾಡಿನ ಚೆಲವು ಗೆಲುವುಗಳನ್ನೂ ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು”

ಒಂದು ದಿನ ಸಾಯಂಕಾಲ ನಾನು ಶ್ರೀಮಾನ್ ವೆಂಕಣ್ಣಯ್ಯನವರೊಡನೆ ಕುಕ್ಕನಹಳ್ಳಿ ಕರೆಯ ಮೇಲೆ ವಾಯು ವಿಹಾರಕ್ಕಾಗಿ ಹೋಗಿದ್ದಾಗ ಯಾವುದೋ ಮಾತು ಬಂದು ಮಲೆನಾಡಿನ ಕೆಲವು ಅನುಭವಗಳನ್ನು ಹೇಳತೊಡಗಿದೆ. ಜೊತೆಯಲ್ಲಿ ತೀ.ನಂ.ಶ್ರೀ., ಡಿ.ಎಲ್.ನ, ಮೊದಲಾದ ಮಿತ್ರರೂ ಇದ್ದರು. ನಾವೆಲ್ಲರೂ ಹುಲುಸಾಗಿ ಹಸುರು ಹೊಮ್ಮಿ ಬೈಗುಗೆಂಪಿನ ಬಿಸಿಲಿನಲ್ಲಿ ಸುಮನೋಹರವಾಗಿದ್ದ ಕೆರೆಯಂಚನ ಬಯಲಿನಲ್ಲಿ ಕುಳಿತಿದ್ದೆವು. ಮೆಲ್ಲೆಲರು ಸುಖದಾಯಕವಾಗಿ ತೀಡುತ್ತಿತ್ತು. ಬಹಳ ಹೊತ್ತು ಕತೆ ಹೇಳಿದೆ. ಅವರೂ ಸಾವಧಾನದಿಂಧ, ಅದಕ್ಕಿಂತಲೂ ಹೆಚ್ಚಾಗಿ ವಿಶ್ವಾಸದಿಂದ ಆಲಿಸಿದರು. ಎಲ್ಲ ಮುಗಿದ ಮೇಲೆ ವೆಂಕಣ್ಣಯ್ಯನವರು ಆ ಅನುಭವಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ಸೂಚನೆ ಕೊಟ್ಟರು. ಚಿತ್ರಗಳನ್ನು ‘ಪ್ರಬುದ್ಧ ಕರ್ಣಾಟಕ’ದಲ್ಲಿ ಅಚ್ಚು ಹಾಕಿಸಬಹುದೆಂದೂ ಉತ್ತೇಜನ ಕೊಟ್ಟರು. ನಾನು ಒಪ್ಪಿಕೊಂಡು ಕೆಲವು ಚಿತ್ರಗಳನ್ನು ಬರೆದು ಅವರಿಗೆ ಓದಿದೆ. “ನೀವು ಬಾಯಲ್ಲಿ ಹೇಳುತ್ತಿದ್ದಾಗ ಇದ್ದ ಸ್ವಾರಸ್ಯ ಈ ಚಿತ್ರಗಳಲ್ಲಿ ಇಲ್ಲ” ಎಂದರು. ನನಗೂ ಹಾಗೆಯೆ ತೋರಿತು. ಸಜೀವವಾದ ವಾಣಿಯೂ ಮುಖ ನಯನ ಅಂಗಗಳ ಅಭಿನಯವೂ ಮಾಡುವ ಕೆಲಸವನ್ನು ನಿರ್ಜೀವವಾದ ಲೇಖಣಿ ಮಾಡಬಲ್ಲುದೆ? ಆದರೆ ಆಲಿಸುವವರಲ್ಲಿ ವಿಶ್ವಾಸವಿದ್ದರೆ ಮೃದಲ್ಲಿಯೂ ಶ್ವಾಸವಾಡುತ್ತದೆ!

ಕುವೆಂಪು ೧೯ – ೬ – ೭೭
ಮೈಸೂರು,