ಬೈಗಿನಿಂದ ಬೆಳಗಾಗುವವರಗೂ ಪೆರಡೂರು ಮೇಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಸಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ‘ಕಾಳಗ’ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಕರಿಸುವುದೊಂದು ಹುಚ್ಚಷ್ಟೆ! ಅದರಂತೆಯೆ ನಾವೆಲ್ಲ – ನಾನು, ತಿಮ್ಮು, ಮಾನು, ಓಬು, ಎಂಕ್ಟು, ವಾಸು, ದಾನಿ, ರಾಜಿ –  ಆ ದಿನ ರಾಮರಾವಣರ ‘ಕಾಳಗ’ ಆಡಬೇಕೆಂದು ಮಸಲತ್ತು ಮಾಡಿದೆವು. ಹುಡುಗರ ಲೋಕದಲ್ಲಿ ಯೋಚನೆ ಮಾಡಿದ್ದೆಲ್ಲ ಆಗಿಯೇ ಆಗುತ್ತದೆ. ಕಾಫಿ ಉಪ್ಪಿಟ್ಟುಗಳನ್ನು ಬೇಗಬೇಗ ಹೊಟ್ಟೆಗೆ ಸುರಿದುಕೊಂಡು, ಮನೆಯ ಹೊರ ಅಂಗಳಕ್ಕೆ ಹೊರಟೆವು. ಅಮ್ಮ, ಚಿಕ್ಕಮ್ಮ, ಅಕ್ಕಯ್ಯ ಇವರೆಲ್ಲ “ರಾತ್ರಿ ನಿದ್ದೆಗೆಟ್ಟಿದ್ದೀರಿ. ಮಲಗಿಕೊಳ್ಳಿ” ಎಂದು ಬಯ್ದರು. ದೊಡ್ವರು ಹುಡುಗರನ್ನು ತಮ್ಮಂತೆಯೆ ಎಂದು ಭಾವಿಸುವುದು ಶುದ್ಧ ತಪ್ಪು. ಅವರಿಗೆ ಆಯಾಸವಾಗಿದ್ದರೆ ನಮಗೂ ಆಯಾಸವೇ? ನಮ್ಮ ರಾಮರಾವಣರ ಯುದ್ಧದ ಮುಂದೆ ಅವರ ನಿದ್ದೆಯೇ? ಅವರ ಮಾತನ್ನು ಕಸದ ಮೂಲೆಗೆ ಒತ್ತಿ, ಹೊರ ಅಂಗಳಕ್ಕೆ ಓಡಿದೆವು. ಒಬ್ಬರನ್ನೊಬ್ಬರು ಆತುರದಿಂದ ಹುರಿದುಂಬಿಸುತ್ತ, ಕೇಕೆಹಾಕುತ್ತ ನುಗ್ಗಿದೆವು. ರಾಜಿ ಹೊಸಲನ್ನು ಎಡವಿದ್ದವಳು, ಮೆಲ್ಲನೆ ಎದ್ದು, ಸುತ್ತಲೂ ನೋಡಿ, ಯಾರೂ ನೋಡದೆ ಇದ್ದುದರಿಂದ ಪದ್ಧತಿಯಂತೆ ಬಿಕ್ಕಿ ಬಿಕ್ಕಿ ಆಳುವುದನ್ನು ತಡೆದು ಗುಂಪನ್ನು ಸೇರಿಕೊಂಡಳು.

ಹೊತ್ತಾರೆಯ ಹೊತ್ತು ಮಲೆನಾಡಿನ ಹಸುರಾದ ಬೆಟ್ಟಗಳ ತುದಿಯಿಂದ ಎಳೆಬಿಸಿಲನ್ನು ಚಿಮುಕಿಸುತ್ತಿತ್ತು. ಹೊರ ಅಂಗಳದಲ್ಲಿದ್ದ ದೊಡ್ಡ ಬಸಿರಿಮರದಲ್ಲಿಯೂ ಹುಣಿಸೆಮರದಲ್ಲಿಯೂ ಹಕ್ಕಿಗಳ ಹಿಂಡು ಚಿಲಿಪಿಲಿಗುಟ್ಟುತ್ತಿತ್ತು. ಹಸುಳೆಬಿಸಿಲು ತುಳು ದಟ್ಟವಾದ ತಳಿರ ನಡುವೆ ನುಗ್ಗಿ ಬರುತ್ತಿದ್ದುದರಿಂದ ಮರದ ನೆರಳು ಬಲೆಬಲೆಯಾಗಿತ್ತು. ಆ ಬಲೆನೆರಳೆ ನಮ್ಮ ‘ರಂಗಸ್ಥಳ’ವಾಯಿತು. ಈಗ ನಮ್ಮ ಮನೆಗೆ ಹೋಗಿ ನೋಡಿದರೆ ಆ ಹುಣಿಸೆಮರವೂ ಮಾಯವಾಗಿದೆ, ಆ ಬಸರಿ ಮರವೂ ಮಾಯವಾಗಿದೆ. ಜೊತೆಗೆ ಅಂದು ನನ್ನೊಡನೆ ಭಾಗವತರಾಟವಾಡಿದ ಸೋದರ ಸೋದರಿಯರೂ ಅನಂತ ವಿಶ್ವದಲ್ಲಿ ಅಡಗಿ ಮಾಯವಾಗಿದ್ದಾರೆ. ಅಂದಿನ ಜನ, ಅಂದಿನ ಮನ, ಅಂದಿನ ಧನ ಎಲ್ಲವೂ ಅಂತರ್ಧಾನವಾದಂತಿವೆ. ‘ಹಾಳೂರು’ ಆಗದಿದ್ದರೂ ಅದರ ನೆನಪು ತರುವಂತಿದೆ. ಕಾಲದ ಮಹಿಮೆ! ‘ಕಾಲೋಸ್ಮಿ ಲೋಕಕ್ಷಯಕೃತ್’ ಎಂದು ಶ್ರೀಕೃಷ್ಣ ಹೇಳಿಲ್ಲವೆ? ‘ಕಾಲಾಯತಸ್ಮೈ ನಮಃ’ –  ಆ ಕಾಲವೊಂದಿತ್ತು!

ಆ ಕಾಲವೊಂದಿತ್ತು! ದಿವ್ಯ ತಾನಾಗಿತ್ತು! ಬಾಲ್ಯವಾಗಿತ್ತು!
ಮಣ್ಣು ಹೊನ್ನಾಗಿ, ಕಲ್ಲೆ ಹೂವಾಗಿ, ನೀರಮೃತವಾಗಿ,
ಮನೆ ಮೇರುವಾಗಿ, ಕವಿಶೈಲ ತಾನೆ ಕೈಲಾಸವಾಗಿ,
ಕಾಡೆ ನಂದನವಾಗಿ, ನೆಲವ ನಾಕವ ನಗುವ ಕಾಲವೊಂದಿತ್ತು!
ಆ ಕಾಲವೊಂದಿತ್ತು! ದಿವ್ಯ ತಾನಾಗಿತ್ತು! ಬಾಲ್ಯವಾಗಿತ್ತು!

ನಾನು ಮಾತ್ರ ನನ್ನ ತಾತ ಮುತ್ತಾತರನ್ನಾದರೂ ಮರೆತೇನು! ಆದರೆ ಆ ಹುಣಿಸೆಮರ ಬಸಿರಿಮರಗಳನ್ನು ಮಾತ್ರ ಎಂದೆಂದಿಗೂ ಮರೆಯಲಾರೆ. ಆ ಬಸಿರಿಮರ ಹೋದುದೇ ನನಗೊಂದು ದೊಡ್ಡ ಸೋಜಿಗ! ಮಹಾ ಸಮಸ್ಯೆ! ಅಂದು ನಾವು ಆ ಬಸಿರಿಮರದ ರಾಕ್ಷಸಗಾತ್ರವನ್ನು ಕಂಡು, ಅದನ್ನು ಕಡಿಯಲು ಯಾರಿಂದಲೂ ಸಾಧ್ಯವಿಲ್ಲ, ತೋಟದಾಚೆಯ ಭೂತನಿಂದಲೂ ಸಾಧ್ಯವಿಲ್ಲ ಎಂದು ಯೋಚಿಸಿ ಹಿಗ್ಗುತಿದ್ದೆವು. ಆದರೆ ವಿಧಿವಿಲಾಸ! ಅಂದು ಅಸಾಧ್ಯವೆಂದು ತೋರಿದುದು ಇಂದು ಸಾಧ್ಯವಾಗಿದೆ. ಅಂದು ಸಾಧ್ಯವಾದುದು ಮಾತ್ರ ಇಂದು ಅಸಾಧ್ಯವಾಗಿ ಪರಿಣಮಿಸಿದೆ!

ಆ ಹುಣಿಸೆಮರ ಬಸಿರಿಮರಗಳ ಅಡಿಯಲ್ಲಿ ಎಷ್ಟು ಸೊಗಸಾದ ಪ್ರಾತಃಕಾಲಗಳನ್ನು ಕಳೆದಿದ್ದೇವೆ! ಎಷ್ಟು ಸಾರಿ ನಮ್ಮ ಜೀವನದ ಭವಿಷ್ಯದ ಬಲೆಯನ್ನು ನಾವರಿಯದಂತೆಯೆ ನೆಯ್ದಿದ್ದೇವೆ! ಎಷ್ಟು ಸಾರಿ ಹೊಂಬಿಸಿಲಿನಲ್ಲಿ ನೆಲದ ಮೇಲೆ ಉದ್ದವಾಗಿ ಮಲಗಿದ್ದ ನಮ್ಮ ನೆಳಲನ್ನು ಅಳೆದಿದ್ದೇನೆ! ಪೂರಯಿಸದಿದ್ದುದಂತಿರಲಿ! ಎಷ್ಟು ಸಾರಿ ಒಬ್ಬರೊಬ್ಬರ ನೆಳಲಿನ ತಲೆಗಳನ್ನು ತುಳಿದು ಜಗಳವಾಡಿದ್ದೇವೆ! ಆಹಾ, ಆ ಇಂಪಾದ ಸನ್ನಿವೇಶಗಳನ್ನು ನೆನೆದುಕೊಂಡರೆ, “ಬಾಲ್ಯವೇ ಹೋದೆಯಾ!” ಎಂದು ಎದೆ ಒಳಗೊಳಗೆ ರೋದಿಸಿ ಮರುಗದಿರುವುದಿಲ್ಲ.

ಬಸಿರಿಮರದ ನೆಳಲಿನ ‘ರಂಗಸ್ಥಳ’ವನ್ನು ಸೇರಿದ ಮೇಲೆ ರಾಮರಾವಣರ ಯುದ್ಧಕ್ಕೆ ಮುನ್ನುಡಿಯ ರೂಪವಾದ ಸಂಭಾಷಣೆ ಪ್ರಾರಂಭವಾಯಿತು. ಮೊದಲು ಯಾರು ಯಾರು ಯಾವ ಯಾವ ಪಾತ್ರಗಳನ್ನು ವಹಿಸಬೇಕೆಂಬ ಪ್ರಬಲವಾದ ಚರ್ಚೆ ನಡೆಯಿತು.

ತಿಮ್ಮು “ನಾನು ರಾಮನ ‘ಪಾರ್ಟ್‌’ ಹಾಕುತ್ತೇನೆ” ಎಂದು ಹಟ ಹಿಡಿದ. ಓಬು (ಸ್ವಲ್ಪ ಕಿಲಾಡಿ) ತಿಮ್ಮು ಹೇಳಿದ್ದು ಕೇಳಿ “ಚೋಟುದ್ದ ಇದಾನೆ ಇವನಿಗೆ ರಾಮನ ವೇಷವಂತೆ!” ಎಂದ.

ಎಂಕ್ಟು ಅದನ್ನು ಸಮ್ಮತಿಸಿ “ಹೌದೊ, ತಿಮ್ಮಣ್ಣಯ್ಯ, ನಿನ್ನ ಭಾಗವತರಾಟದಲ್ಲಿ ರಾಮನ ವೇಷ ಹಾಕಿದ್ದವನು ಭೀಮನ ಹಾಂಗಿದ್ದ” ಎಂದ.

ರಾಮ ವೇಷದ ಹಕ್ಕು ನಿರ್ಣಯವಾಗುವ ಮುನ್ನವೇ, ವಾಸು ತಾನು ಲಕ್ಷ್ಮಣನಾಗುತ್ತೇನೆ ಎಂದ. ಓಬು ಮತ್ತೆ “ಒಂದು ಮಣ ತೂಕಾನೂ ಇಲ್ಲ. ಲಕ್ಷಮಣ ಆಗ್ತಾನಂತೆ! ನೀನು ಹನುಮಂತದ ಪಾರ್ಟಿಗೆ ಲಾಯಖ್ಖು! ನಿನ್ನ ಮುಖಾನೂ ಹಾಂಗೇ ಇದೆ ಕಣೊ” ಎಂದ.

ವಾಸುವಿಗೆ ಎಂದೂ ಬರದ ಸಿಟ್ಟು ಬಂದು ಓಬುವನ್ನು ಹೊಡೆಯಲು ಹೋದ. ಆದರೆ ವಾಸುವಿನ ಸಿಟ್ಟಿಗಿಂತ ಓಬುವಿನ ರಟ್ಟೆಯೇ ಬಲವಾಗಿತ್ತು; ಪೆಟ್ಟು ಬೀಳಲು ಸಿಟ್ಟು ಓಡಿತು.

ಅಷ್ಟರಲ್ಲಿ ನಾನು (ಸುಮ್ಮನಿರಬೇಕೋ ಇಲ್ಲವೋ) ರಾಜಿಯನ್ನು ಕುರಿತು “ರಾಜಿ, ನೀನು ಲಂಕಿಣಿಯ ಪಾರ್ಟು ಹಾಕೇ” ಎಂದು ತಡೆಯಲಾರದೆ ನಕ್ಕುಬಿಟ್ಟೆ. ರಾಜಿ ತನಗೆ ಲಂಕಿಣಿಯ ವೇಷ ಬೇಡವೆಂದು ಹೇಳುವ ಸಿಟ್ಟಿನ ರಭಸದಲ್ಲಿ ಸಾಕ್ಷಾತ್ ಲಂಕಿಣೀಯೇ ಆಗಿಬಿಟ್ಟು ಬಾಯಿಗೆ ಬಂದಂತೆ ನನ್ನ ಮೇಲೆ ಬೈಗುಳದ ಮಳೆಗರೆದಳು.

ಮಾನು (ಕುಚೇಷ್ಟೆಯ ಹುಡುಗ) ರಾಜಿಯನ್ನು ಮತ್ತೂ ಕಣಕಬೇಕೆಂಬು ಯೋಚಿಸಿ ಒಂದು ವಿಧವಾದ ಅಣಕಿಸುವ ದನಿಯಿಂದ “ಓಹೋ, ಮತ್ತೇನು ನಿನಗೆ ಸೀತೆಯ ಪಾರ್ಟು ಕೊಡ್ತಾರೆ ಎಂದು ಹಾರೈಸಿಕೊಂಡಿದ್ದೆಯಾ? ಏನಪ್ಪಾ. ಈ ಹುಡುಗಿಯರಿಗೆ ಈಗಾಗಲೇ ಗಂಡರ ಯೋಚನೆ” ಎಂದ.

ಸೀತೆಯ ವೇಷವನ್ನು ಬಯಸಿದ ರಾಜಿಯ ಮುಖ ಆಗಲೇ ಹನುಮಂತನ ಮುಖವಾಗುತ್ತ ಇತ್ತು. ಅಷ್ಟರಲ್ಲಿ ಓಬು “ಅವಳ ಮುಖವಾದರೂ ಚೆನ್ನಾಗಿದೆಯೇ? ತಿಮ್ಮು, ನೀನೆ ಹೇಳೋ. ಅವಳ ಮುಖ ಯಾರ ವೇಷಕ್ಕೆ ಲಾಯಖ್ಖಾದುದೆಂದು” ಎಂದು ಹೇಳಿ ಕುಣಿಕುಣಿದು ನಕ್ಕ.

ತಿಮ್ಮು ಅವಳ ಮುಖದ ಕಡೆಗೆ ಸ್ವಲ್ಪ ಹೊತ್ತು ನಿಟ್ಟಿಸಿ ನೋಡಿದ. ರಾಜಿ ಮುಖ ಮುಚ್ಚಿಕೊಂಡಳು. ಆದರೂ ತಿಮ್ಮು ಓಬುವಿನ ಕಡೆಗೆ ತಿರುಗಿ “ಅಲ್ಲೋ ಓಬು, ನೀನು ಯಾವ ವೇಷ ಹಾಕ್ತೀಯೋ ಆ ವೇಷದ ತಂಗಿ ಪಾರ್ಟಿಗೆ ರಾಜಿಯೇ ಸರಿ” ಎಂದ.

ಎಲ್ಲರೂ ಗೊಳ್ಳೆಂದು ಕೈಚಪ್ಪಾಳೆ ಹೊಡೆದು ನಕ್ಕರು. ಓಬುವಿಗೆ ಮುಖ ಭಂಗವಾಯಿತು. ರಾಜಿಗೂ ಮುಯ್ಯಿತೀರಿಸಿಕೊಂಡ ಹಾಗಾಗಿ ಸಮಾಧಾನವಾಯಿತು. ಕಡೆಗೆ ಎಲ್ಲರೂ ಸೇರಿ ಮಾನುವೇ ರಾಮನ ಪಾರ್ಟು ಹಾಕುವುದು. ಎಂದು ನಿರ್ಣಯಿಸಿದೆವು. ದಾನಿಯೇ ಸೀತೆಯ ಪಾರ್ಟು ಹಾಕಬಹುದೆಂದು ಕೆಲವರು ಸೂಚನೆ ಕೊಟ್ಟರು. ಆದರೆ ನನಗೇಕೋ ಅದು ಸರಿಬೀಳಲಿಲ್ಲ. ದಾನಿಗೆ ಮಾನು ಕಕ್ಕ, ದಾನಿ ಮಾನುಗೆ ಮಗಳಾದ ಹಾಗಾಯಿತು. ಹಾಗೆಂದ ಮೇಲೆ ಮಾನು ರಾಮನ ವೇಷ ಹಾಕಿದರೆ ದಾನಿ ಸೀತೆ ವೇಷ ಹಾಕುವುದು ನನಗೆ ಸರಿ ಬೀಳಲಿಲ್ಲ. ಕಡೆಗೆ ಓಬು ಒಂದು ಸಮಾಧಾನ ಹೇಳಿದ : ಆಟದ ರಾಮ, ಆಟದ ಸೀತೆ; ಆದ್ದರಿಂದ ಪರವಾ ಇಲ್ಲೆಂದು. ನನಗೂ ಅವನ ಸಿದ್ಧಾಂತ ಮನಸ್ಸಿಗೆ ಒಪ್ಪಿತು ಹುಂ ಎಂದೆ.

ಕಡೆಗೆ ಅತ್ತ ಬಿದ್ದು ಇತ್ತ ಬಿದ್ದು ರಾವಣನ ಪಾರ್ಟು ನನ್ನ ಮೇಲೆ ಬಿತ್ತು ನನಗೆ ಹೇಗಾದರೂ ರಾವಣನ ವೇಷ ಬಿಟ್ಟುಬಿಡಬೇಕೆಂದು ಆಸೆ. ಆದ್ದರಿಂದ ನನಗೆ ಒಂಬತ್ತು ತಲೆ ತಂದುಕೊಟ್ಟ ಹೊರತೂ ನಾನು ರಾವಣನಾಗುವುದೇ ಇಲ್ಲ ಎಂದು ಹಟಹಿಡಿದುಬಿಟ್ಟೆ. ಸೂತ್ರಧಾರನಾದ ಮಾನುವಂತೂ ಕಂಗೆಟ್ಟು ಹೋದ. ದಾನಿಗೂ ತುಂಬಾ ಉದ್ವೇಗ ತನ್ನ ಸೀತೆಯ ಪಾರ್ಟು ರಾವಣನಿಲ್ಲದೆ ಎಲ್ಲಿ ನಿಂತು ಹೋಗುವುದೋ ಎಂದು.

ಓಬು ರಾವಣನಿಗೆ ಹತ್ತುತಲೆ ಇರಲೇ ಇಲ್ಲವೆಂದು ಸಾಧಿಸಲು ಬಹಳ ಪ್ರಯತ್ನಪಟ್ಟ. ನಾನು ಅವನಿಗೆ ಬಿಟ್ಟು ಕೊಡುವೆನೇ?

“ಕಣ್ಣಿಂಗಿ ಹೋಗಿತ್ತೇನೊ ನಿನಗೆ? ನಿನ್ನೆ ಭಾಗವತರಾಟದಲ್ಲಿ ರಾವಣನಿಗೆ ಹತ್ತುತಲೆ ಇರಲಿಲ್ಲವೇನೋ?” ಎಂದು ಕೋಪದಿಂದ ನುಡಿದೆ.

ಅಷ್ಟು ಹೊತ್ತಿಗೆ, ನನ್ನ ದುರದೃಷ್ಟಕ್ಕೆ ಸರಿಯಾಗಿ, ಹಿಂದಿನ ರಾತ್ರಿ ರಾವಣನ ವೇಷ ಹಾಕಿದ್ದ ಸೀನಪ್ಪಯ್ಯನವರು ದೂರದಲ್ಲಿ ಹೋಗುತ್ತಿದ್ದರು. ಓಬು ಅವರನ್ನು ಕಂಡು “ನೋಡಿ, ಎಲ್ಲಾ ನೊಡಿ, ನಿನ್ನೆ ಸೀನಪ್ಪಯ್ಯನವರೆ ರಾವಣನಾಗಿದ್ದದ್ದು. ಅವರಿಗೆ ಹತ್ತುತಲೆ ಇದೆಯೆ? ಒಂದೂ ಪೂರ್ತಿಯಾಗಲ್ಲ” ಎಂದ.

ವಾಸ್ತುವವಾಗಿಯೂ ಸೀನಪ್ಪಯ್ಯನವರಿಗೆ ಒಂದು ತಲೆಯೂ ಪೂರ್ತಿಯಾಗಿರಲಿಲ್ಲ. ಏನೋ ಆಗಿ ಸ್ವಲ್ಪ ಮುಕ್ಕಾಗಿತ್ತು. ನನಗಂತೂ ಪೇಚಾಟಕ್ಕೆ ಬಂತು. ಓಬುವಿನ ಪ್ರತ್ಯಕ್ಷ ಪ್ರಮಾಣದ ಮುಂದೆ ನನ್ನಾಟ ನಡೆಯದೆ ಹೋಯಿತು. ರಾವಣನಾಗಲು ಒಪ್ಪಿಕೊಂಡೆ.

ನನಗೆ ರಾವಣನ ವೇಷ ಕೊಡಲು ಮುಖ್ಯಕಾರಣನಾದ ಓಬುವಿನ ಮೇಲೆ ರಚ್ಚಿಟ್ಟು ಮುಯ್ಯಿತೀರಿಸಿದೆ. ಅದು ಹೇಗೆನ್ನುವಿರೋ? ಓಬು ಹನುಮಂತನಾದರೆ ನಾನು ರಾವಣನಾಗುವ. ಇಲ್ಲದಿದ್ದರೆ ಇಲ್ಲವೆಂದು ಹಟಹಿಡಿದೆ. ಅದರ ಒಳಗುಟ್ಟು ಬೇರೆ. ಏನು ಅನ್ನುತ್ತೀರೋ! ಓಬು ಹನುಮಂತನಾದರೆ ರಾವಣನ ಮೇಲೆ ಯುದ್ಧಕ್ಕೆ ಹೋಗುತ್ತಾನೆ. ಆಗ ನನಗೆ ಅವನನ್ನು ಹೊಡೆಯಲು ಒಂದು ಸುಸಮಯ ದೊರಕುತ್ತದೆ ಎಂದು.

ಓಬು ಹನುಮಂತನಾದ. (ಹೊಸದಾಗೇನೂ ಆಗಲಿಲ್ಲ!) ಬಲಾತ್ಕಾರದಿಂದ ರಾಜಿಗೆ ಲಂಕಿಣೆ ಪಾರ್ಟು ಕೊಟ್ಟೆವು. ನಮ್ಮದೆಲ್ಲಾ ಒಂದೇ ಮದ್ದು; ರಾಜಿ ಲಂಕಿಣಿ ಪಾರ್ಟು ವಹಿಸಿಕೊಂಡರೆ ನಮ್ಮ ಜೊತೆ ಸೇರಿಸಿಕೊಳ್ಳುತ್ತೇವೆ; ಇಲ್ಲದಿದ್ದರೆ ಅವಳ ಸಂಗ ಬಿಟ್ಟುಬಿಡುತ್ತೇವೆ ಎಂದು ಎಲ್ಲರೂ ಹೇಳಿಬಿಟ್ಟೆವು. ಹುಡುಗರ ಭಾಗಕ್ಕೆ ಸಂಗ ಬಿಡುವುದೆಂದರೆ ಗಡಿಪಾರು ಮಾಡಿಸಿಕೊಳ್ಳುವುದಕ್ಕಿಂತಲೂ ಕಠಿಣತರವಾದ ಶಿಕ್ಷೆ. ರಾಜಿ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡಳು; ಲಂಕಿಣಿಯಾದಳು.

ರಾಮನ ಪಾರ್ಟಾಯಿತು; ಸೀತೆಯ ಪಾರ್ಟಾಯಿತು; ಹನುಮಂತ ರಾವಣರ ಪಾರ್ಟುಗಳೂ ಆದುವು. ಲಂಕಿಣಿಯೂ ಸಿಕ್ಕಿದ ಹಾಗಾಯಿತು. ನಾನು ರಾವಣ: ಮಾನು ರಾಮ; ದಾನಿ; ಸೀತೆ; ಓಬು ಹನುಮಂತ; ರಾಜಿ ಲಂಕಿಣಿ; ಇನ್ನು ಉಳಿದವರು ಯಾರು?

ಆಗ ನಮಗೆ ವಾಲ್ಮೀಕಿ ರಾಮಾಯಣವೇ ಪ್ರಮಾಣ ಗ್ರಂಥವಾಗಿರಲಿಲ್ಲ. ಬೇಕಾದರೆ ನಮ್ಮದೇ ಒಂದು ಹೊಸ ರಾಮಾಯಣವನ್ನು ರಚಿಸುತ್ತಿದ್ದವು. ಏಕೆ ರಚಿಸಬಾರದು? ಕೋಟ್ಯಂತರ ರಾಮಾಯಣಗಳಿದ್ದುವಂತೆ. ನಮ್ಮ ರಾಮಾಯಣ ಕಳೆದುಹೋದ ರಾಮಾಯಣಗಳಲ್ಲಿ ಒಂದು!

ರಾಮಾಯಣದಲ್ಲಿ ನ್ಯಾಯವಾಗಿ ಭೀಮ ಬರುವುದಿಲ್ಲ. ಆದರೂ ಚೋಟುದ್ದ ವಾಸು ಭೀಮನಾಗುತ್ತೇನೆ ಎಂದು ಹಟಹಿಡಿದ. ನಾವು ಎಷ್ಟೆಷ್ಟೋ ಹೇಳಿದೆವು. ರಾಮಾಯಣ ಭೀಮಾಯಣವಲ್ಲವೆಂದು. ಆದರೇನು ಮಾಡುವುದು? ಅವನಿಗೆ ಭೀಮನ ಪಾರ್ಟು ಎಂದರೆ ಬಹಳ ಖುಷಿ. ಎಂದೋ ಒಂದುಸಾರಿ ಭಾಗವತರಾಟದಲ್ಲಿ ಭೀಮ ಮಂಡಕ್ಕಿ (ಪುರಿ) ಕಡಲೆ ಮುಕ್ಕುತ್ತಿದ್ದುದನ್ನು ನೋಡಿಬಿಟ್ಟಿದ್ದ. ಭೀಮನ ವೇಷ ಹಾಕಿದಾಗಲೆಲ್ಲ ಕಡಲೆ ಮಂಡಕ್ಕಿ ಸಿಕ್ಕುವು ದೆಂದು ಅವನ ಮಹದಾಕಾಂಕ್ಷೆ; ಆಡುವುದು ರಾಮಾಯಣವಾಗಲಿ. ಶಾಕುಂತಲವಾಗಲಿ, ಚಂದ್ರಹಾಸವಾಗಲಿ, ಮತ್ತೇನೇ ಆಗಲಿ, ವಾಸುವಂತೂ ಭೀಮನ ಪಾರ್ಟು ಹಾಕಲೇಬೇಕು!

ನಮಗೆಲ್ಲ ಒಳ್ಳೆ ರಗಳೆಗೆ ಇಟ್ಟುಕೊಂಡಿತು, ಭೀಮನನ್ನು ರಾಮ ರಾವಣರ ಯುದ್ಧದಲ್ಲಿ ಹೇಗೆ ತರುವುದು ಎಂದು. ರಾಮಾಯಣದಲ್ಲಿ ಭೀಮ ಬರುವುದಿಲ್ಲ ಎಂದರೆ ವಾಸು ಕೇಳಲಿಲ್ಲ; ಅಷ್ಟಕ್ಕೇ ನಿಲ್ಲದೆ ಬಂದೇ ಬರುತ್ತದೆ ಎಂದೂ ಸಾಧಿಸಿಬಿಟ್ಟ. ನಮ್ಮಲ್ಲಿ ಯಾರೂ ರಾಮಾಯಣ ಓದಿರಲಿಲ್ಲ; ನಾವು ಆಡಿದ್ದೆ ರಾಮಾಯಣ! ಆದ್ದರಿಂದ ವಾಸು ಹೇಳಿದ್ದೇ ರಾಮಾಯಣವಾಗಬೇಕಾಗಿ ಬಂತು. ಸರಿ, ಅಭಿನವ ವಾಲ್ಮೀಕಿಯಾದ ಅವನನ್ನೇ ಕೇಳಿದೆವು –  ರಾಮಾಯಣದಲ್ಲಿ ಭೀಮನ ವೇಷ ತರುವುದು ಹೇಗೆ ಎಂದು. ಅವನೂ ಸ್ವಲ್ಪ ಯೋಚಿಸಿದ. ಹೊಸಕವಿತೆ ಬರೆಯಬೇಕಾದರೆ ಪಾಪ, ಆವೇಶ ಬರಬೇಕಷ್ಟೆ! ಕಡೆಗೂ ಆವೇಶ ಬಂತು: ರಾಮ ರಾವಣರಿಬ್ಬರು ಯುದ್ಧಕ್ಕೆ ಹೊರಡುವ ಮುಂಚೆ ಭೀಮಪೂಜೆ ಮಾಡಿ, ಬೇಕು ಬೇಕಾದ ಭಕ್ಷ್ಯಭೋಜ್ಯಗಳನ್ನು ನಿವೇದಿಸಬೇಕೆಂದು ವಾಸು ಸಲಹೆ ಕೊಟ್ಟು.

ಅಯ್ಯೋ ಅವನ ಮಸಣ; ಭಕ್ಷ್ಯ ಭೋಜ್ಯವೆಂದರೇನು? ಮಂಡಕ್ಕಿ, ಕಡಲೆ! ಅಂತೂ ಅಭಿನವ ವಾಲ್ಮೀಕಿಗಳು ಹೇಳುವಾಗ, ಅಲ್ಲ ಎನ್ನುವುದಕ್ಕಾದೀತೆ? ಹುಂ ಎಂದು ಸಮ್ಮತ ಕೂಟ್ಟುಬಿಟ್ಟೆವು. ಇನ್ನು ಉಳಿದವರು ಎಂಕ್ಟು, ತಿಮ್ಮು; ಅವರಿಗೆ ಪಾರ್ಟು ಕೊಡದಿದ್ದರೆ ಅವರೇನೂ ಸುಮ್ಮನಿರುವುದಿಲ್ಲ. ರಾಮಾಯಣವನ್ನೆ ನಿಲ್ಲಿಸಿಯೂ ಬಿಡಬಹುದು ಎಂಬ ಭಯ ಬೇರೆ. ಎಂಕ್ಟು ವಿಭೀಷಣನಾದ; ತಿಮ್ಮು ಕುಂಭಕರ್ಣನಾದ (ತನ್ನ ಸ್ವಭಾವಕ್ಕೆ ತಕ್ಕಂತೆ!) ಅಂತೂ ರಾಮಾಯಣದಲ್ಲಿರುವ ಪಾತ್ರಗಳಿಗೆ ನಮ್ಮ ಪಾತ್ರಗಳನ್ನು ಜೋಡಿಸುವುದಕ್ಕೆ ಬಲದಾಗಿ, ನಮ್ಮ ನಮ್ಮ ಮನಸ್ಸಿಗೆ ಬಂದ ಪಾತ್ರಗಳನ್ನು ಆರಿಸಿಕೊಂಡು ಹೊಸ ರಾಮಯಣ ಮಾಡಿದೆವು.

ರಾಮರಾವಣರು ಯುದ್ಧಕ್ಕೆ ಹೊರಡುವ ಮುನ್ನ “ಭೀಮ ಪೂಜೆ”ಗೆ ಆರಂಭವಾಯಿತು. ವಾಸು (ನಮ್ಮ ಗಾಳಿ ಭೀಮ) ಹುಣಿಸೆಯ ಮರದ ಬೇರಿನ ಮೇಲೆ ಕಲ್ಲಿನ ಮೂರ್ತಿಯಾಗಿ ಕುಳಿತುಕೊಂಡ. ರಾಮರಾವಣರು ಇಬ್ಬರೂ ಒಟ್ಟಿಗೆ ಬಂದು ಪೂಜೆ ಮಾಡಬೇಕೋ ಅಥವಾ ಬೇರೆಬೇರೆಯಾಗಿ ಬಂದು ಪೂಜೆ ಮಾಡಬೇಕೋ ಎಂದು ಅಭಿನವ ವಾಲ್ಮೀಕಿಯನ್ನು ಕೇಳಿದೆವು. ಭೀಮನಾಗಿದ್ದ ವಾಸು “ಬೇರೆ ಬೇರೆಯಾಗಿಯೇ ಬಂದು ಪೂಜೆ ಮಾಡಬೇಕು” ಎಂದು ಅಪ್ಪಣೆ ಮಾಡಿದ. ಇಬ್ಬರೂ ಒಟ್ಟಿಗೆ ಬಂದು ಪೂಜೆ ಮಾಡಿದರೆ ನೈವೇದ್ಯ ಎಲ್ಲಿ ಕಡಿಮೆಯಾಗುವುದೋ ಎಂದು ಅವನಿಗೆ ದೊಡ್ಡ ಭಯ. ಪೂಜೆಗೆ ಮೊದಲು ರಾಮ ಬರಬೇಕೋ? ರಾವಣ ಬರಬೇಕೋ ಎಂದು ಕೇಳಿದೆವು. ವಾಸುವಿಗೆ ಸ್ವಲ್ಪ ರಗಳೆಗಿಟ್ಟುಕೊಂಡಿತು, ಹಾಗೆಯೇ ಯೋಚನೆ ಮಾಡಿ “ರಾವಣನೇ ಮೊದಲು ಬರಲಿ” ಎಂದ. ವನವಾಸದಲ್ಲಿದ್ದ ರಾಮನಿಗೆ ಹೆಚ್ಚಾದ ತಿಂಡಿಯ ಪದಾರ್ಥಗಳು ಸಿಕ್ಕುವುದಾದರೂ ಹೇಗೆ? ಲಂಕಾಧಿಪತಿಯಾದ ರಾವಣನಾದರೋ ರಾಕ್ಷಸ. ದೊಡ್ಡ ಹೊಟ್ಟೆ, ದೊಡ್ಡ ಕೈ, ದೊಡ್ಡ ತಟ್ಟೆ! ಆದ್ದರಿಂದ ತಿಂಡಿ ಹೆಚ್ಚಾಗಿ ಸಿಕ್ಕುವುದೆಂದು ಯೋಚಿಸಿದ.

ವಾಸುವಿನ ಅಂತರಂಗವನ್ನು ಅರಿತ ಓಬು ಅಪಾಯ ಹುಡುಕಿದ. ನಾನೇ ರಾವಣನಾಗಿದ್ದೆನಷ್ಟೆ? ನನ್ನ ಕಿವಿಯ ಹತ್ತಿರಬಂದು ಪಿಸುಮಾತಿನಲ್ಲಿ ಒಂದೆರಡು ಕಟ್ಟಿರುವೆ, ಗೊದ್ದ, ಗೆದ್ದಲು, ಮಿಡತೆ, ಕುಂಬಾರ್ತಿ ಹುಳ ಇವುಗಳನ್ನು ನೈವೇದ್ಯಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದ. ಏಕೆಂದರೆ ರಾವಣ ಮಾಂಸಾಹಾರಿಯಷ್ಟೆ! ಉಪಾಯವನ್ನು ಸೂಚಿಸಿದ ಓಬುವೇ ಹುಳುಗಳನ್ನೂ “ಸಪ್ಲೈ” ಮಾಡಿದ. ರಾವಣನಾಗಿದ್ದ ನಾನು ಹುಳುಗಳನ್ನು ಎಲೆಯಲ್ಲಿ ಮುಚ್ಚಿಕೊಂಡು ಹೋಗಿ ಭೀಮದೇವರ ಎದುರು ನಿಂತೆ. ಅದು ರಾವಣ ಮಾಡುವ ಪೂಜೆಯಾಗಿದ್ದರೂ ಹನುಮಂತನಾದ ಓಬು ಹತ್ತಿರದಲ್ಲಿಯೆ ನಿಂತಿದ್ದ.

ಅವನು ಭೀಮನಾಗಿದ್ದ ವಾಸುವಿಗೆ “ದೇವರು ಯಾವಾಗಲೂ ಕಣ್ಣು ಮುಚ್ಚಿಕೊಂಡೇ ಇರಬೇಕು” ಎಂದನು.

ವಾಸು ಕಣ್ಣು ಮುಚ್ಚಿಕೊಂಡ. ರಾವಣನ ‘ಪೂಜೆ’ಗೆ ಪ್ರಾರಂಭವಾಯಿತು. ನೈವೇದ್ಯವನ್ನು ದೇವರ ಮುಂದಿಟ್ಟ. ದೇವರಿಗೆ ತಿನ್ನುವಂತೆಯೂ ಹೇಳಿದ. ವಾಸು ಕಣ್ಣು ಮುಚ್ಚಿಕೊಂಡೆ ಇದ್ದ. ನಮಗೆಲ್ಲ ಅಳ್ಳಬರಿಯುವ ನಗು. ಆದರೂ ಎರಡು ಕೈಗಳಿಂದಲೂ ಬಾಯಿ ಮುಚ್ಚಿ ಹಿಡಿದುಕೊಂಡಿದ್ದೆವು. ಭೀಮದೇವನು ನೈವೇದ್ಯಕ್ಕೆ ಕೈ ಹಾಕಿದನು. ಕಣ್ಣುಮುಚ್ಚಿಕೊಂಡಿದ್ದ ಅವನ ಚಿತ್ತಭಿತ್ತಿಯಲ್ಲಿ ತನ್ನ ಮುಂದೆ ಮಂಡಕ್ಕಿಯ ರಾಶಿಯೇ ತೋರಿಬಹುದು! ಅವನ ಸಂತೋಷಕ್ಕೆ ಪಾರವೇ ಇಲ್ಲ!

ಓಬು ಇರುವೆಗಳನ್ನು ಸರಿಯಾಗಿ ಕೊಂದಿರಲಿಲ್ಲ. ಒಂದು ಮಿಡತೆಗೂ ಅರೆ ಜೀವವಿತ್ತು. ಭೀಮದೇವರಿಗೆ ತಕ್ಕ ನಯವೇದ್ಯ! ವಾಸು ಕೈಯಿಟ್ಟನೋ ಇಲ್ಲವೋ ನೋವು ಸಿಟ್ಟುಗಳಿಂದ ಒದ್ದಾಡುತ್ತಿದ್ದ ಕಟ್ಟಿರುವೆಯೊಂದು ಕಡಿಯಿತು! ಅನಾಹುತವೋ ಅನಾಹುತ! ವಾಸು ಎಲ್ಲಿ ಯಾರೂ ನಿಜವಾದ ಭೀಮನೇ ಆಗಿದ್ದ ಪಕ್ಷದಲ್ಲಿ ನಮಗೆಲ್ಲ ಏನು ಪರಿಣಾಮವಾಗುತ್ತಿತೊ ದೇವರಿಗೆ ಗೊತ್ತು! ಸ್ವಲ್ಪ ಊಹಿಸಿದರೆ ರಾಮರಾವಣರ ಯುದ್ಧವೇ ನಡೆಯುತ್ತಿರಲಿಲ್ಲ ಎನ್ನಬಹುದು. ವಾಸು ಕಿಟ್ಟನೆ ಕಿರಿಚಿಕೊಂಡು, ಕೋವಿಯ ಮದ್ದಿಗೆ ಕಿಡಿ ಬಿದ್ದಂತೆ ಎದ್ದುನಿಂತ! ಓಬು ಬರಿಯ ಹೈಲು; ಯಾವಾಗ ಹೇಗೆ ನಡೆದುಕೊಳ್ಳಬೇಕೆಂದು ಅವನಿಗೆ ತಿಳಿಯದು. ವಾಸುವನ್ನು ಸಂಭೋದಿಸಿ “ಭೀಮದೇವರೇ, ಕಲ್ಲಾದ ದೇವರು ಅಲ್ಲಾಡಬಾರದು. ಕೂತುಕೊಳ್ಳಿ! ಕೂತುಕೊಳ್ಳಿ!” ಎಂದು ಕೂಗಿಕೊಂಡು ನಗಲಾರಂಭಿಸಿದನು. ಭೀಮ ಗೊಳೋ ಎಂದು ಅಳಲಾರಂಭಿಸಿದ. ದಾನಿ ಸೀತೆಯಾಗಿದ್ದವಳು ಸೀತೆತನವನ್ನು ಬಿಟ್ಟು ಓಡಿಬಂದು ಭೀಮನ ಬಾಯಿ ಮುಚ್ಚಿಹಿಡಿದು, ಅಳಬೇಡ ಎಂದು ಎಷ್ಟು ಹೇಳಿಕೊಂಡರೂ ಭೀಮ ಬೇರೆ ಕೇಳಲಿಲ್ಲ. ಭೀಮಗರ್ಜನೆ ಅಂತರಿಕ್ಷಕ್ಕೂ ಏರಿತು. ಇಂದ್ರನಿಗೆ ಗಾಬರಿಯಾಗಬಹುದು! ರಾಮನಾಗಿದ್ದ ಮಾನುವೂ ಓಡಿಬಂದು ಭೀಮನನ್ನು ಸಂತೈಸಿದ. ರಾಜಿ ಮಾನುವಿಗೆ “ನೀನೆಂಥ ರಾಮನೋ? ಕಟ್ಟಿರುವೆ ಕಡಿದದ್ದನ್ನೂ ಕೂಡ ಫಕ್ಕನೆ ಗುಣಮಾಡಲಾರ!” ಎಂದು ಹೇಳಿ “ವಾಸಣ್ಣಯ್ಯಾ, ಅಳಬೇಡ” ಎಂದು ಸಂತವಿಟ್ಟಳು. ಅವನೇನೋ ಬೊಬ್ಬೆ ಹಾಕಿದ! ಭೀಮನ ಕೂಗಿಗೆ ತಡೆಯುಂಟೆ? ಆಕಾಶಕ್ಕೆ ಮುಟ್ಟಿದ ಭೀಮನ ಕೂಗು ಅಡುಗೆಮನೆಗೆ ಮುಟ್ಟುವುದೊಂದು ದೊಡ್ಡ ಮಾತೇ? ಚಿಕ್ಕಮ್ಮ ಗಾಬರಿಯಿಂದ, ಕೈಲಿ ಹಿಡಿದು ಕೊಂಡಿದ್ದ ಒಗ್ಗರಣೆ ಸೌಟನ್ನು ಹಿಡಿದುಕೊಂಡೇ ಹೊರ ಅಂಗಳಕ್ಕೆ ಬಂದರು. ಬಿಸಿಬಿಸಿಯಾದ ಸಾರಿಗೆ ಅದ್ದಿದ್ದ ಸೌಟಿನಿಂದ ಇನ್ನೂ ಹಬೆಯಾಡುತ್ತಿತ್ತು. ಪಾಪ, ಅವರಿಗೆ ನಮ್ಮ ರಾಮಾಯಣದ ಪೂರ್ವೋತ್ತರವೇನು ಗೊತ್ತು? “ಕುಶಾಲು ಹೋಗಿ ಅಸಾಲಾಯಿತು!” ಆಟಕ್ಕೆ ಬದಲು ಆಟಮಟವಾಯಿತು! ರಾವಣನಾದ ನನ್ನನ್ನು ರಾಮ ಹೊಡೆಯುವ ಬದಲು ಚಿಕ್ಕಮ್ಮ ಗುದ್ದಿದ್ದರು. ಬಿಕ್ಕಿಬಿಕ್ಕಿ ಆಳುತ್ತಿದ್ದ ಅಭಿನವ ವಾಲ್ಮೀಕಿಯನ್ನು ಚಿಕ್ಕಮ್ಮ ಅಡುಗೆ ಮನೆಗೆ ಎಳೆದುಕೊಂಡು ಹೋದರು: ಅಲ್ಲಿ ಸರಿಯಾದ “ಭೀಮಪೂಜೆ” ಯಾಗಿರಬೇಕು!

ಭೀಮ ಹೋದರೆ ರಾಮಾಯಣ ನಿಲ್ಲುವುದೇ? ನಾವೇನೋ ರಾಮರಾವಣರ ಯುದ್ಧ ಮಾಡಿಯೇಬಿಡಬೇಕೆಂದು ಹಟಸಾಧಿಸಿದವು. ಆಟ ಪ್ರಾರಂಭವಾಯಿತು. ಎಲ್ಲಿ? ಲಂಕೆಯಲ್ಲಲ್ಲ! ಬಲೆಬಲೆಯಾದ ತಣ್ಣೆಳಲಲ್ಲಿ! ಭೀಮಪೂಜೋಪಾಖ್ಯಾನ ಕೊನೆಗಂಡ ಮೇಲೆ ಸೇತು ಬಂಧನವಾಯಿತು. ಸೇತುಬಂಧನಕ್ಕೆ ರಾವಣ, ಕುಂಭಕರ್ಣ, ಲಂಕಿಣಿ ಎಲ್ಲರೂ ಸಹಾಯ ಮಾಡಿದರು! ಸಮಯಕ್ಕೆ ತಕ್ಕಹಾಗೆ ರಾಮ ಮೊದಲಾದವರು ಮಂಗಗಳಾದರು. ಹನುಮಂತನಾದ ಓಬು ಸಣ್ಣ ಸಣ್ಣ ಪುಡಿಗಲ್ಲುಗಳನ್ನು ತರುತ್ತಿದ್ದುದನ್ನು ಕಂಡು ನಾನು “ನೀನೆಂಥಾ ಹನುಮಂತನಪ್ಪ! ವಡೆಗಳಂಥ ಕಲ್ಲು ತರುತ್ತಿದ್ದೀಯಲ್ಲ!” ಎಂದೆ.

ಹನುಮಂತ ಕೈಲಾಸಪರ್ವತವನ್ನು ಎತ್ತಲು ಹೋಗಿ ಕೈ ಸಿಕ್ಕಿಸಿಕೊಂಡದ್ದನ್ನು (ನಮ್ಮ ರಾಮಾಯಣದ ಪ್ರಕಾರ) ಅಭಿನಯಿಸಲೇಬೇಕೆಂದು ತಿಮ್ಮು ಹಟ ಹಿಡಿದ. ಸದ್ಯಕ್ಕೆ ಅವನೇ ಶಿವನಾದ. ಲಂಕಿಣಿಯಾಗಿದ್ದ ರಾಜಿ ಪಾರ್ವತಿಯಾದಳು. ಶಿವ ಪಾರ್ವತಿ ಇಬ್ಬರೂ ಮನೆಕಟ್ಟುವುದಕ್ಕೆ ಹೊಸದಾಗಿ ತಂದು ಹಾಕಿದ್ದ ಕಲ್ಲುಚಪ್ಪಡಿಗಳ ಮೇಲೆ ಕುಳಿತರು. ಕಲ್ಲುಚಪ್ಪಡಿಯೆ ಕೈಲಾಸವಾಯಿತು. ಹನುಮಂತ ಕೈಲಾಸದ ಬಳಿಗೆ ಹೋಗಿ ಅದನ್ನು ಎತ್ತುವಂತೆ ನಟಿಸಿ ಸಂದಿಯೊಳಗೆ ಕೈಯಿಟ್ಟನು. ಶಿವ ಕೈಲಾಸವನ್ನು ಕಾಲು ಬೆರಳಿನಿಂದ ಒತ್ತಬೇಕಷ್ಟೆ! ಹಾಗೆಯೆ ತಿಮ್ಮು ಹಾಸರೆಯನ್ನು ಬಲವಾಗಿ ಒತ್ತಿ ಹಿಡಿದನು. ಓಬುವಿಗೆ ಅತಿ ನೋವಾಗಿ ‘ರಾಮ ರಾಮ! ರಾಮ ರಾಮ!’ ಎನ್ನುತ್ತಿದ್ದವನು ಇದ್ದಕ್ಕಿದ್ದ ಹಾಗೆ ಸ್ವರ ಬದಲಾಯಿಸಿ “ತಿಮ್ಮು! ತಿಮ್ಮು! ಕೈ! ಕೈ!!” ಎಂದು ಕೂಗಿಕೊಂಡನು. ಬೆರಳಿನ ಚರ್ಮ ಸುಲಿದುಹೋಯಿತು. ಆದರೂ ಶಿವ ಕೈಲಾಸವನ್ನು ಇನ್ನೂ ಬಲವಾಗಿ ಒತ್ತಿದನು. ಹನುಮನ ಕೂಗು ನಟನೆಯೆಂದೇ ಭಾವಿಸಿ ತಿಮ್ಮು ಇನ್ನೂ ಬಲವಾಗಿ ಅದುಮಿದನು. ಓಬು ಗೊಳೋ ಎಂದು ಅತ್ತನು. ಕಣ್ಣಿನಲ್ಲಿ ನೀರೂ ಜಲಜಲನೆ ಉಕ್ಕಿ ಹರಿಯಿತು. ಬಳಿಯಲ್ಲಿ ನಿಂತಿದ್ದ ನಾವೆಲ್ಲರೂ ಅವನ ಅಭಿನಯ ಕೌಶಲವನ್ನು ನೋಡಿ ಮೆಚ್ಚಿದೆವು. ಅಷ್ಟು ಸಹಜವಾಗಿ ಅಳಲು ಯಾವ ನಟಶ್ರೇಷ್ಠನಿಂದಾದರೂ ಸಾಧ್ಯವಾಗುವುದೇ?

ದೇವರ ಕೃಪೆಯಿಂದ ನಮ್ಮ ರಾಮಾಯಣದಲ್ಲಿ ಕೈಲಾಸದಡಿಯಲ್ಲಿ ಕೈ ಸಿಕ್ಕಿ ಕೂಗಿದವನು ಹನುಮಂತ; ರಾವಣನಲ್ಲ! ಎಲ್ಲಿಯಾದರೂ ರಾವಣನಾಗಿದ್ದ ಪಕ್ಷದಲ್ಲಿ ಈ ಕತೆ ಬರೆಯುವುದಕ್ಕೂ ನನಗೆ ಕೈ ಬೆರಳು ಇರುತ್ತಿರಲಿಲ್ಲ; ನನ್ನ ಅದೃಷ್ಟ ಚೆನ್ನಾಗಿತ್ತು.

ಓಬು ಕೂಗಿದ, ತಿಮ್ಮು ಅದುಮಿದ; ಹನುಮ ಅರಚಿದ, ಶಿವ ಒತ್ತಿದ. ನಿಂತ ನಾವೆಲ್ಲ ನಟನೆಗೆ ಬಹಳ ಹಿಗ್ಗಿದೆವು! ನಮ್ಮ ಪುಣ್ಯಕ್ಕೆ ಸರಿಯಾಗಿ, ರಾಮಾಯಣದಲ್ಲಿ ಗಲ್ಲಿಗೆ ಹಾಕುವ ಪದ್ಧತಿ ಇರಲಿಲ್ಲವೆಂದು ತೋರುತ್ತದೆ. ಅದು ಎಲ್ಲಿಯಾದರೂ ಇದ್ದಿದ್ದರೆ ನಮ್ಮಲ್ಲಿ ಯಾವನಾದರೂ ಒಬ್ಬನ ಗತಿ ಮುಗಿಯುತ್ತಿತ್ತು. ಯಾವನಾದರೂ ಏಕೆ? ನನ್ನ ಗತಿಯೇ ಪೂರೈಸುತ್ತಿತ್ತು. ಏಕೆನ್ನುವಿರೋ? ನಾನು ರಾವಣ. ಈಗಿನ ಕಾಲದಲ್ಲಿ ಸೋತ ರಾಜರನ್ನು ಗಲ್ಲಿಗೆ ಹಾಕುವುದೇ ಧರ್ಮವಷ್ಟೆ! ಹಾಗೆಯೇ ರಾವಣನನ್ನು ಗೆದ್ದ ರಾಮನು ಸುಮ್ಮನೆ ಇರುತ್ತಿದ್ದನೇ? ರಾವಣನನ್ನು ಗಲ್ಲಿಗೆ ಹಾಕಿಸಿಯೇ ಬಿಡುತ್ತಿದ್ದ. ಅಂದರೆ ನನ್ನ ವ್ಯಾಪಾರ ಮುಗಿಯುತ್ತಿತ್ತು!

ಓಬುವಿನ ಕೂಗು ಕೇಳಿ ಅಲ್ಲೆಲ್ಲಿಯೋ ಬಳಿಯಿದ್ದ ಕಕ್ಕಯ್ಯ ಓಡಿ ಬಂದರು. ಬಂದವರು ದೂರನಿಂತು “ಏನ್ರೋ ಅದು, ಗಲಾಟೆ? ಎಂದರು. “ತಿಮ್ಮು ಚಪ್ಪಡಿಕಲ್ಲನ್ನು ಬಲವಾಗಿ ಅದುಮುತ್ತ “ಏನೂ ಇಲ್ಲ, ಕಕ್ಕಯ್ಯ! ರಾಮಾಯಣ ಆಡ್ತೇವೆ! ಹನುಮಂತನ ಕೈ ಕೈಲಾಸದಡಿ ಸಿಕ್ಕಿಕೊಂಡಿದೆ: ಶಿವ ಅಮುಕುತ್ತ ಇದ್ದಾನೆ” ಎಂದನು. ಓಬು ಮಾತ್ರ “ಅಯ್ಯಯ್ಯೋ! ಅಣ್ಣಯ್ಯ ಸತ್ತೇ! ಸತ್ತೇ!” ಎಂದು ಕೂಗಿಕೊಂಡನು.

ಕಕ್ಕಯ್ಯ ಓಡಿಬಂದು ಕೈಲಾಸದ ಮೇಲೆ ಕುಳಿತು ದರ್ಬಾರು ಮಾಡುತ್ತಿದ್ದ ಶಿವ ಪಾರ್ವತಿಯರಿಬ್ಬರನ್ನೂ ಈಚೆಗೆ ಎಳೆದು ಹಾಕಿ, ಕೈಲಾಸವನ್ನು ಎತ್ತಿದರು: ಓಬು ಕೈ ಎಳೆದುಕೊಂಡ. ಚರ್ಮ ಸುಲಿದು ಕೈಬೆರಳೆಲ್ಲ ರಕ್ತಮಯವಾಗಿತ್ತು. ಕಕ್ಕಯ್ಯ ಎಲ್ಲರಿಗೂ ಹುಣಿಸೆಯ ಬರಲಿನಿಂದ ಎರಡೆರಡು ‘ಚಡಿ ಕೊಟ್ಟು’ ಹನುಮಂತನ ಕೈಗೆ ಔಷಧಿ ಮಾಡಲು ಅವನನ್ನು ಎಳೆದುಕೊಂಡು ಹೋದರು. ಚಳಿಗಾಲ! ಪ್ರಾತಃಕಾಲ! ಹುಣಿಸೆಯ ಬರಲಿನ ಪೆಟ್ಟು! ನೀವೇ ಊಹಿಸಿಕೊಳ್ಳಿ!

ರಾಮರಾವಣರ ಯುದ್ಧ ಇಷ್ಟಕ್ಕೆ ಪೂರೈಸಲಿಲ್ಲ. ನಾನು ಮಾನುವನ್ನು ಕುರಿತು “ನೀನೆಂಥ ರಾಮನೋ! ಕೈಲಾಗದ ರಾಮ! ನಿನ್ನ ಭಕ್ತ ಹನುಮಂತ ಒರಲಿದರೆ ನೀನು ಬಂದು ಬಿಡಿಸಬೇಕೋ ಬೇಡವೋ? ಕಲ್ಲು ನಿಂತಂತೆ ನಿಂತುಕೊಂಡು ನೋಡ್ತಾ ಇದ್ದೆ! ನಿನ್ನ ದೆಸೆಯಿಂದ ಭಾಗವತರಾಟ ಆಡದಿದ್ದ ಹಾಗೂ ಆಯಿತು!” ಎಂದೆ –  ಪೆಟ್ಟು ಬಿದ್ದ ಸಿಟ್ಟಿನಿಂದ.

ಮಾನುಗೆ ಸಿಟ್ಟು ಬಂತು. ಮೈಮೇಲೆ ಬಿದ್ದ. ನನಗೂ ಅವನಿಗೂ ಹೊಡೆದಾಟವಾಯಿತು. ನ್ಯಾಯವಾಗಿ ಕತೆಯಂತೆ ನೋಡಿದರೆ ರಾವಣ ಸೋಲಬೇಕು. ವಾಸ್ತವವಾಗಿ ನಾನೇ ಬಲವಾಗಿದ್ದೆ; ರಾಮ ಬಿದ್ದ; ರಾವಣ ಗೆದ್ದ; ಕೆಳಗೆ ಬಿದ್ದ ಮಾನುವಿನ ಮೇಲೆ ನಾನು ಬಲವಾಗಿ ಜಗ್ಗಿಸಿ ಕೂತುಕೊಂಡೆ; ಅವನು ಅಳಅಳುತ್ತ “ಲೋ ಪುಟ್ಟು, ನಾನು ರಾಮ ಕಣೋ! ನೀನು ರಾವಣ ಕಣೋ! ಬಿಡೋ, ನನ್ನ ಮೇಲೆ ನೀನು ಕೂತುಕೊಳ್ಳಬಾರದು!” ಎಂದ.

ನಾನು ಇನ್ನೂ ಬಲವಾಗಿ ಜಗ್ಗಿಸಿ “ಹೋಗೋ ನಿನ್ನ ರಾಮಾಯಣಕ್ಕೆ ಬೆಂಕಿಹಾಕ! ನನ್ನ ರಾಮಾಯಣದಲ್ಲಿ ನಾನೇ ಗೆದ್ದಿದ್ದು” ಎಂದ.

ಕೆಳಗೆ ಬಿದ್ದ ರಾಮನನ್ನು ಬಿಡಿಸಿಕೊಳ್ಳಲು ಲಂಕಿಣಿ, ಸೀತೆ, ಲಕ್ಷ್ಮಣ, ಕುಂಭಕರ್ಣ, ವಿಭೀಷಣ ಎಲ್ಲರೂ ಬಂದರು. ಆದರೂ ನಾನು ಬೇರೆ ಜಗ್ಗಲಿಲ್ಲ. ಕಡೆಗೆ ಕುಂಭಕರ್ಣ ಓಡಿಹೋಗಿ ನಮ್ಮಾಳು ಲಿಂಗನನ್ನು ಕರೆತಂದ. ಅವನು ರಾವಣನನ್ನು ಹಿಡಿದೆಳೆದು ರಾಮನನ್ನು ಬಿಡಿಸಿದೆ. ಸದ್ಯಕ್ಕೆ ರಾವಣವಧೆಗೆ ಬದಲಾಗಿ ರಾಮವಧೆ ಆಗಲಿಲ್ಲ!

ಅಂದು ನಾವಾಡಿದ ಹೊಸ ರಾಮಾಯಣದ ಪ್ರಕಾರ, ರಾಮರಾವಣರ ಯುದ್ಧದಲ್ಲಿ ರಾಮನೇ ಸೋಲುತ್ತಾನೆ! ಭೀಮನು ಕಟ್ಟಿರುವೆ ಕೈಲಿ ಕಡಿಸಿಕೊಂಡು ಹೋಗುತ್ತಾನೆ. ಹನುಮಂತನು ಕೈಲಾಸದ ಕೆಳಗೆ ಕೈ ಚರ್ಮ ಸುಲಿಸಿಕೊಳ್ಳುತ್ತಾನೆ! ರಾಮ ಬಿದ್ದ! ರಾವಣ ಗೆದ್ದ! –  ಇದೇ ನಮ್ಮ ‘ರಾಮರಾವಣರ ಯುದ್ದ!’

* * *