ನಮ್ಮ ಮನೆಯ ಮಹಡಿಯ ಮೇಲೆ ಮಲಗಿದ್ದೆವು. ನಾವು ಎದ್ದಾಗ ಆರು ಗಂಟೆಯಾಗಿತ್ತು. ಮೂಡಲಿನಲ್ಲಿ ಮುದ್ದು ಬಿಸಿಲಿನ ಚೆಲುವೆ ಚಿಮ್ಮುವಂತಿತ್ತು. ನಾನು ಹೆಳಿದುದರ ಅರ್ಥ ನಿಮಗೆ ಚೆನ್ನಾಗಿ ತಿಳಿಯಬೇಕಾದರೆ, ಚಿತ್ರ ಕಣ್ಣಿಗೆ ಕಟ್ಟಿ ನಿಲ್ಲಬೇಕಾದರೆ, ಇನ್ನೆರಡು ಮಾತುಗಳನ್ನು ಹೆಚ್ಚಾಗಿ ಹೇಳಿಬಿಡುತ್ತೇನೆ. ಚೆನ್ನಾಗಿ ಕಿವಿಗೊಟ್ಟು ಕೇಳಿಬಿಡಿ. ನಾನು ನಿಮ್ಮ ಕಣ್ಣಿಗೆ ಕಟ್ಟುವ ಚಿತ್ರವನ್ನು ಮಾತ್ರ ಮರೆಯಬಾದರು. ಏಕೆಂದರೆ, ನಾನು ಇನ್ನು ಮುಂದೆ ನಿಮ್ಮೊಡನೆ ಮಲೆನಾಡನ್ನು ಕುರಿತು ಆಡುವ ಹರಟೆಗಳಿಗೆಲ್ಲ ಇದು ನಕಾಶೆಯಾಗಬಹುದು. ಮಲೆನಾಡೆಲ್ಲ ನನ್ನದೇ; ಆದರೆ ಮಲೆನಾಡಿಗೆ ಮೊದಲು ಮನೆ ನನ್ನದಷ್ಟೆ? ನಾನು ಹರಟುವ ವಿಷಯಗಳಿಗೆಲ್ಲ ನಮ್ಮ ಮನೆ ಕೇಂದ್ರ ಸ್ಥಾನವಾಗಿ ಬಿಡಬಹುದು. ಆದ್ದರಿಂದ ಕಿವಿಗೊಟ್ಟು ಕೇಳಿ, ಕಣ್ಣಿಟ್ಟು ನೋಡಿ.

ಮಲೆನಾಡಿನಲ್ಲಿ ಹಳ್ಳಿಗಳೆಂದರೆ ವಿಶೇಷವಾಗಿ ಒಂದು ಮನೆಯ ಊರುಗಳೆಂದು ನಿಮಗೆ ಹಿಂದೆ ಅನೇಕ ಸಾರಿ ಹೇಳಿದ್ದೇನೆ. ಮನೆಗಳೆಂದರೆ ಪುಟ್ಟ ಕೋಟೆಗಳಂತೆ ಇರುವುವು. ದೊಡ್ಡ ಹೆಬ್ಬಾಗಿಲು, ದಪ್ಪವಾದ ಸುತ್ತಗೋಡೆ. ಸ್ವಲ್ಪ ಸ್ಥೂಲವಾಗಿ ಹೇಳುವುದಾದರೆ ನಾಜೋಕಿನ ದೃಷ್ಟಿಗಿಂತ ಬಲದ ದೃಷ್ಟಿಯೆ ಹೆಚ್ಚು. ಏಕೆಂದರೆ ಆ ಕಾಡಿನಲ್ಲಿ, ಆ ಮಳೆಯಲ್ಲಿ, ಆ ಬಿರುಗಾಳಿಯಲ್ಲಿ, ಆ ಸಿಡಿಲು ಮಿಂಚುಗಳ ರುದ್ರವಾದ ನಲಿದಾಟದಲ್ಲಿ ಮನೆಗಳು ಭೀಮಾಕಾರವಾಗಿರದಿದ್ದರೆ ಬಹಳ ಕಾಲ ಬಾಳುವುದಿಲ್ಲ.

ನಮ್ಮ ಮನೆಯೂ ಮೇಲೆ ಹೇಳಿದಂಥ ಒಂಧು ಹೆಮ್ಮನೆ. ಅದಕ್ಕೆ ಏತಕ್ಕೋ ಏನೋ ‘ಕುಪ್ಪಳಿ’ ಎಂದು ಹಿರಿಯರು ಹೆಸರಿಟ್ಟಿದ್ದಾರೆ. ಸ್ಥಳ ಪುರಾಣವನ್ನು ಪ್ರಶ್ನೆ ಮಾಡಿದರೆ ಕುಪ್ಪಳಿಸಿಕೊಂಡು ಬರಬೇಕಾಗಿದ್ದುದರಿಂದ ಆ ಮನೆಗೆ ‘ಕುಪ್ಪಳಿ’ ಎಂದು ಹೆಸರಾಯ್ತು ಎಂದು ಗೊತ್ತಾಗುವುದು. ಅದು ನಿಜವೋ ಸುಳ್ಳೋ ಏನಾದರಿರಲಿ. ಸುಳ್ಳಾದ ಮಾತ್ರಕ್ಕೆ ನಮ್ಮ ಅಜ್ಞಾನ ಹೆಚ್ಚುವ ಸಂಭವವೂ ಇಲ್ಲ; ನಿಜವಾದರೆ ನಾವು ಸುಜ್ಞಾನಿಗಳಾಗುವುದೂ ಅಷ್ಟರಲ್ಲಿಯೆ ಇದೆ.

ನಮ್ಮ ಮನೆ ಮಲೆನಾಡಿನ ವನಾಲಂಕೃತ ಗಿರಿಶ್ರೇಣಿಗಳ ತೊಡೆಯ ಮೇಲೆ ಕೂತಿದೆ. ನಮ್ಮ ಮನೆಯ ಹಿತ್ತಲುಕಡೆಯನ್ನು ನಾವು ಬೆಟ್ಟದಿಂದ ಕಡಿದು ಕಡಿದು ಯುದ್ದ ಮಾಡಿ ಗೆದ್ದುಕೊಂಡಿದ್ದೇವೆ. ಮನೆಯಿಂದ ಪೂರ್ವದಿಕ್ಕಿಗೆ ಹತ್ತು ಮಾರು ಹೋಗುವುದರೊಳಗಾಗಿ ಬೆಟ್ಟವೇರಿ ಕಾಡಿನಲ್ಲಿ ತೂರಬೇಕು. ಮನೆಗೆ ಪೂರ್ವೋತ್ತರ ದಕ್ಷಿಣ ಭಾಗಗಳಲ್ಲಿ ಭೀಮಾಕಾರವಾದ ಪರ್ವತಶ್ರೇಣಿಗಳು ದಿಗಂತವನ್ನು ನಡುಬಾನಿಗೆತ್ತಿ ನಿಂತಿವೆ. ಪಶ್ಚಿಮಭಾಗದಲ್ಲಿಯೂ ಬೆಟ್ಟಗಳಿವೆ; ಆದರೆ ಒಂದು ಮೈಲಿಯಷ್ಟು ದೂರ. ನಡುವೆಯೇನೋ ಬೇಕಾದಷ್ಟು ಕಾಡುಗಳಿವೆ. ನಮ್ಮ ಮನೆಗೂ ಪೂರ್ವಾದ್ರಿಗೂ ನಡುವೆ ನಮ್ಮ ಆಡಕೆ ತೋಟದ ಒಂದು ತುದಿ ಸೆರಗು ಹಬ್ಬಿಕೊಂಡಿದೆ. ಆ ಸೆರಗಿನಲ್ಲಿಯೆ ನಮ್ಮ ಮನೆಯ ಕೆರೆಯಿದೆ. ಕೆರೆಗೂ ಮನೆಗೂ ಅರ್ಧ ಫರ್ಲಾಂಗು ದೂರವಿದೆ. ಕೆರೆ ಬೆಟ್ಟದ ಬುಡದಲ್ಲಿ ಅರಣ್ಯದ ಮಡಿಲಲ್ಲಿ ಮಲಗಿದೆ. ಕಾಡಿನ ಹೆಮ್ಮರಗಳು, ಪೊದೆಗಳು, ಬಿದಿರು ಮೆಳೆಗಳು ಆದರ ನೀರಿನ ಮೇಲೆ ಚಾಚಿಕೊಂಡಿವೆ. ಪ್ರಾತಃಕಾಲದ ತರುಣಾರುಣ ಜ್ಯೋತಿಯಲ್ಲಿ ನೋಡಿದರೆ ಮೈಮರೆಸುವಂತೆ ಮನೋಜ್ಞನಾಗಿರುವುದು.

ನಮ್ಮ ಉಪ್ಪರಿಗೆ ಪೂರ್ವದಿಕ್ಕಿಗೆ ತೆರೆದುಕೊಂಡಿದೆ. ಉಳಿದೆಲ್ಲ ದಿಕ್ಕಿಗೂ ಗೋಡೆ ಕಿಟಕಿಗಳಿವೆ. ಅಲ್ಲಿ ಕುಳಿತು ನೋಡಿದರೆ ನಮ್ಮೆದುರಾಗಿ ಇಳಿಜಾರಾಗಿ ಮೇಲೆದ್ದಿರುವ ಅನಂತ ನಿಬಿಡಾರಣ್ಯಶ್ರೇಣಿಗಳು ಗಂಭೀರವಾಗಿ ಸುಂದರವಾಗಿ ರಂಜಿಸುವುವು. ಅಲ್ಲಿ ನಮಗೆ ತಿಳಿಯುತ್ತದೆ, ಹಸುರು ಬಣ್ಣದಲ್ಲಿ ಎಷ್ಟು ಬಗೆಗಳಿರಬಹುದೆಂದು. ಆ ಗಿರಿಗಳಾಚೆಯಲ್ಲಿ ನೀಲಾಕಾಶವು ಪಾತಾಳದಲ್ಲಿ ನಿಂತು ಸ್ವರ್ಗವನ್ನು ಇಣಿಕಿ ನೋಡುವಂತೆ ಧೀರ ಗಂಭೀರವಾಗಿರುವುದು. ಆ ಗಿರಿಶಿಖರ ರೇಖೆಯಲ್ಲಿ ಇತರ ವೃಕ್ಷಗಳಿಗಿಂತ ಹಿರಿದಾಗಿ ಎತ್ತರವಾಗಿ ಬೆಳೆದ ಹೆಮ್ಮರಗಳು ಆಕಾಶ ಪಟದಲ್ಲಿ ಬರೆದು ಕೆತ್ತಿ ಮೆತ್ತಿದ ಸಜೀವ ಸಾರುವ ಗೆಲ್ಗಂಬಗಳ ಮೇಲೆ ಹಾರಾಡುವ ಶ್ಯಾಮಲ ಕೇತನಗಳಂತೆ ಕಂಗೊಳಿಸುವುವು, ಆ ದೃಶ್ಯ ದಿನದಿನಕ್ಕೂ ಹೊತ್ತು ಹೊತ್ತಿಗೂ ಬೇರೆ ಬೇರೆ ಸೌಂದರ್ಯದಿಂದ ನಲಿಯುವುದು. ಅದು ಅನಂತ ಕವಿ ಅನಂತಾನಂತ ಕವನಗಳನ್ನು ವಿರಚಿಸುವ ಕಾವ್ಯರಂಗದಂತೆ ಮೆರೆಯುವುದು. ಮಳೆಗಾಲದಲ್ಲಿ ಒಂದು ದೃಶ್ಯ; ಚಳಿಗಾಲದಲ್ಲಿ ಮತ್ತೊಂದು ದೃಶ್ಯ; ಬೇಸಗೆಯಲ್ಲಿ ಇನ್ನೊಂದು ದೃಶ್ಯ, ಬೆಳಗಿನಲ್ಲಿ ಒಂದು ದೃಶ್ಯ; ಬೈಗಿನಲ್ಲಿ ಇನ್ನೊಂದು ದೃಶ್ಯ, ಹಗಲಿನಲ್ಲಿ ಮತ್ತೊಂದು ದೃಶ್ಯ. ಬೆಳ್ದಿಂಗಳಲ್ಲಿ ಬೇರೊಂದು ಚೆಲುವು; ಕದ್ದಿಂಗಳಲ್ಲಿ ಮಗುದೊಂದು ನೋಟಿ.

ನಮ್ಮ ಉಪ್ಪರಿಗೆಯಲ್ಲಿ ಗದಾಯುದ್ದವೊ ಜೈಮಿನಿ ಭಾರತವೂ ಗದುಗಿನ ಭಾರತವೊ ಪಂಪನೊ ಷೆಲ್ಲಿಯೊ ವರ್ಡ್ಸ್‌ವರ್ತನೊ ಯಾವ ಕಾವ್ಯದೊಡನೆಯಾಗಲಿ ಯಾವ ಕವಿಯೊಡನೆಯಾಗಲಿ ನಾವಿರುವಾಗ ಸುತ್ತಲೂ ನಾನಾ ಪಕ್ಷಿಗಳ ಸಹಸ್ರಾರು ಕಂಠಧ್ವನಿಗಳು ಕೇಳಿಸುತ್ತವೆ. ಅರಣ್ಯದಿಂದ ಹುಲಿ, ಹಂದಿ, ಮಿಗ, ಸಿಂಗಳೀಕ ಮೊದಲಾದ ಜಂತುಗಳ ನಾದಗಳೂ ಕೇಳಿಬರುತ್ತವೆ. ಆಗ ಕಲ್ಪನೆ ಕುರುಡಾಗಿದ್ದರೆ ಅದಕ್ಕೆ ದಿವ್ಯದೃಷ್ಟಿ ದೊರಕುತ್ತದೆ; ಪ್ರತಿಭೆ ಕುಂಟಾಗಿದ್ದರೆ ಅದಕ್ಕೆ ಮಿಂಚಿನ ವೇಗ ಲಭಿಸುತ್ತದೆ; ಆತ್ಮನಲ್ಲಿ ಜಡತನವಿದ್ದರೆ ಅದಕ್ಕೆ ಬದಲಾಗಿ ಚೈತನ್ಯದ ಚಿಲುಮೆ ಚಿಮ್ಮುತ್ತದೆ. ಇವುಗಳಿಗೆಲ್ಲ ನಿದರ್ಶನಗಳೂ ಉದಾಹರಣೆಗಳೂ ನಾನು ಮುಂದೆ ಹೊಡೆಯಬಹುದಾದ ಹರಟೆಗಳಲ್ಲಿ ನಿಮಗೆ ದೊರಕಬಹುದು. ಇಂತಹ ಹರಟೆಗಳಲ್ಲಿ ನಿಮಗೆ ತಾಳ್ಮೆ ತೋರಿದರೆ, ನಿಮಗೆ ಇಷ್ಟವಿದೆ ಎಂದು ತಿಳಿದುಬಂದರೆ, ನಾನು ಬಾಯಿಗೆ ಬೀಗಹಾಕಿಕೊಳ್ಳುವುದಿಲ್ಲ. ಏಕೆಂದರೆ ನಾನೊಬ್ಬ ದೊಡ್ಡ ಹರಟೆಗಾರನೆಂದು ನಿಮಗೆ ಮೊದಲೆ ತಿಳಿಸಿಬಿಡುತ್ತೇನೆ.

ನಾನು ಏನನ್ನೊ ಹೇಳಲು ಹೋಗಿ ಇನ್ನೇನನ್ನೊ ಹರಟುತ್ತಾ ಕುಳಿತುಬಿಟ್ಟೆ. ಹರಟೆಯ ಹಣೆಯ ಬರೆಹವೆ ಹೀಗೆ. ತುದಿಯಿಲ್ಲ, ಬುಡವಿಲ್ಲ; ಗೊತ್ತಿಲ್ಲ, ಗುರಿಯಿಲ್ಲ. ಜಗತ್ತಿನಲ್ಲಿ ದೇವರಿಗೆ ಸರಿಸಮಾನವಾಗಿರುವುದೆಂದರೆ ಹರಟೆಯೊಂದೇ! ಹರಟೆಯೆಂದರೆ ಬೇಜಾರಿಗೆ ಭೇಷಜವಿದ್ದ ಹಾಗೆ. ಪೂರ್ವಾನುಭವಗಳೆಂಬ ಸ್ವಪ್ನಾರಣ್ಯದಲ್ಲಿ ಪೋಲಿ ಪೋಲಿಯಾಗಿ ಅಲೆಯುವುದೇ ಹರಟೆ.

ಆ ದಿನ ನಾವು ಎದ್ದಾಗ ಆರು ಗಂಟೆಯಾಗಿತ್ತು. ನಮ್ಮ ಮಹಡಿಯಿಂದ ನಮ್ಮ ಕಣ್ಣಿಗೆ ಬಿದ್ದ ನೋಟ ಅತೀವ ರಮಣೀಯವಾಗಿತ್ತು. ಪೂರ್ವ ಪರ್ವತ ಶೃಂಗದಾಚೆ ಅರುಣಕಿರಣಗಳ ಮಿಸುನಿಬೆಳಕು ನಲಿದಾಡುತ್ತಿತ್ತು. ಎಚ್ಚತ್ತ ಅರಣ್ಯಗಳ ಸೌಂದರ್ಯ ಕೋಟ್ಯನುಕೋಟಿ ವಿಹಂಗಮಗಳ ಇಂಚರದಿಂದ ಮಂಜು ಮಂಜುಳವಾಗಿತ್ತು. ನನೆದ ಹಸುರುತಳಿರಿನ ಹಿರಿಯ ಕಡಲು ಅಲೆಅಲೆಯಾಗಿ ಉಷಃಕಾಲದ ಮಂದಸಮೀರನಿಂದ ಅಂದೋಳಿತವಾಗಿ ತಲೆದೂಗುತ್ತಿತ್ತು. ಲಕ್ಷೋಪಲಕ್ಷ ಹಿಮಮಣಿಗಳು ಬೆಳೆಯುತ್ತಿದ್ದ ಎಳ ಬಿಸಿಲಿನಲ್ಲಿ ಮಿರುಗಿ ಮಿಂಚಿ ಮಿಣುಕುತ್ತಿದ್ದುವು. ಮೊದಲು ಆಕಾಶ; ಹೊಂಬಣ್ಣದ ಹೊಳೆ ಹರಿಯುತ್ತಿದ್ದ ಆಕಾಶ. ತರುವಾಯ ಹಿಂದೆ ವರ್ಣಿಸಿದಂತಹ ಶ್ಯಾಮಲವನ ಪರಿವೃತಶೈಲಶ್ರೇಣಿ, ಆಮೇಲೆ ಇನ್ನೂ ಕೆಳಗೆ ನೀಳವಾಗಿ ಎತ್ತರವಾಗಿ ಬೆಳೆದು ಗಾಳಿಗೆ ಅತ್ತ ಇತ್ತ ತೂಗಾಡುತ್ತಿದ್ದ ತೋಟದ ಅಡಕೆಮರಗಳು. ಪಕ್ಕದಲ್ಲಿ ತೆಂಗಿನ ಮರಗಳ ಸಾಲು. ಅಲ್ಲಿಯೆ ಕೆರೆಯ ಏರಿಯ ಮೇಲೆ ಬೆಳೆದಿರುವ ನಾಲ್ವತ್ತು ಐವತ್ತು ಅಡಿಗಳಷ್ಟು ಎತ್ತರವಾದ ದೊಡ್ಡ ಸಂಪಗೆ ಮರ, ಚೈತ್ರ ಮಾಸದ ಪಸುಳೆವಿಸಿಲು. ಪಕ್ಷಿಗಳ ತುಮುಲ ಸ್ವರಮೇಳ, ಮೆಲ್ಲಗೆ ಬೀಸುವ ಬನದೆಲರು; ತಳತಳಿಸುವ ಹಿಮಮಣಿಗಳು. ಸ್ನಾನದ ಮನೆಯ ಪೇರೊಲೆಯಿಂದ ಸುತ್ತಿ ಸುತ್ತಿ ಸರ್ಪಗಮನದಿಂದ ಸ್ತೂಪಾಕಾರವಾಗಿ ಎಳಬಿಸಿಲಿನಲ್ಲಿ ಮೇಲೇಳುತ್ತಿದ್ದ ಧೂಮರಾಶಿ. ಜೊತೆಗೆ ಮನೆಯ ಮಂದಿಯ ಮೋಹನತರ ಮಾನವವಾಣಿ! ಎಲ್ಲ ಸುಂದರವಾಗಿತ್ತು; ಸ್ವರ್ಗೀಯವಾಗಿತ್ತು!

ಗೋಪಾಲ ಬಂದು ನಮ್ಮನ್ನು ಸ್ನಾನಕ್ಕೆ ಕರೆದ. ಎಲ್ಲರೂ ಕೆರೆಯ ಬಳಿಯ ಬಚ್ಚಲುಮನೆಗೆ ಹೋದೆವು. ನಮ್ಮ ಕಡೆ ಸ್ನಾನದ ಮನೆಗೆ “ಬಚ್ಚಲು” ಎಂದು ಹೇಳುತ್ತಾರೆ. ನಮ್ಮ ಕಡೆಯ ನುಡಿಗಟ್ಟಿನಂತೆ ಬಣ್ಣಿಸುವುದಾದರೆ “ಬಚ್ಚಲಿಗೆ ಹೋದೆವು.” ನಾನು, ಹಿ – , ವೆಂ, – ಮೂರ್ತಿ ಬಯಲುಸೀಮೆಯವರು; ಅದರಲ್ಲಿಯೂ ಮೈಸೂರು ನಗರದವರು, ನನ್ನೊಂದಿಗೆ ನಮ್ಮ ನಾಡಿನ – ಕಾಡಿನ ಎಂದರೇ ಲೇಸೆಂದು ತೋರುತ್ತದೆ. – ನಮ್ಮ ಕಾಡಿನ ಸೊಬಗು ಸವಿಯಲು ಬೇಸಗೆ ರಜದಲ್ಲಿ ಬಂದಿದ್ದರು. ಸೊಬಗನ್ನು ಸವಿದರೋ ಬಿಟ್ಟರೋ ನಾ ಹೇಳಲಾರೆ; ಮಲೇರಿಯಾಜ್ವರವನ್ನೇನೋ ಸ್ವಲ್ಪ ಮಟ್ಟಿಗೆ ಸವಿದರು! ಹೋಗಲಿ, ಆ ಕತೆ ಈಗ ಬೇಡ; ಇನ್ನೊಂದು ಸಾರಿಗಿರಲಿ!

ನಾನು ಮೀಯುತ್ತಿದ್ದೆ. ಹಿ – , ವೆಂ – , ಮೂರ್ತಿ ಎಲ್ಲರೂ ಕೆರೆಯ ಏರಿಯ ಮೇಲೆ ಕುಳಿತು ಲೋಕಾಭಿರಾಮರಾಗಿ ಮಾತಾಡುತ್ತ ಗಹಗಹಿಸಿ ನಗುತ್ತಿದ್ದರು. ನಮ್ಮ ‘ಶಿಷ್ಯ’ ಗೋಪಾಲ ಕೆಲಸದಲ್ಲಿ ತೊಡಗಿದ್ದ, ಇದ್ದಕ್ಕಿದ ಹಾಗೆ ಹರಟೆ ನಿಂತಿತ್ತು. ಎಲ್ಲರೂ ಏನೋ ಒಂದು ಸದ್ದನ್ನು ಕಿವಿನಿಮಿರಿ ಕೇಳುತ್ತಿದ್ದರು. ನಾನೂ ಆಲಿಸಿದೆ. ಕಾಡಾಗಿದ್ದ ಕೆರೆಯಾಚೆಯ ಮೂಲೆಯಲ್ಲಿ ಏನೋ ಹೂಂಕರಿಸುತ್ತಿತ್ತು. ಒಂದು ಸಾರಿ ಗರ್ಜಿಸಿಂದಂತಾಯ್ತು. ಒಬ್ಬರು ಒಬ್ಬರ ಮೊಗವನ್ನು ನೋಡಿದೆವು. ಎಲ್ಲರ ಮುಖಭಂಗಿಯೂ ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. ಹೂಂಕಾರ ನಿಂತುಹೋದ ಮೇಲೆ ಮೆಲ್ಲನೆ ಮಾತೆತ್ತಿದೆವು. ಒಬ್ಬರು ಕಾಡುಹಂದಿಯಾಗಿರಬೇಕು ಎಂದರು. ಮತ್ತೊಬ್ಬರು ಹುಲಿಯಿರಬಹುದೇ ಎಂದರು. ಅಂತೂ ಪ್ರಾಣಿ ಇಂಥಾದ್ದೆಂಧು ನಿರ್ಣಯವಾಗಲಿಲ್ಲ. ಕಾಫಿ ತಿಂಡಿ ಪೂರೈಸಿಕೊಂಡು ಹೋಗಿ ಪರೀಕ್ಷಿಸಬೇಕೆಂದು ಗೊತ್ತು ಮಾಡಿ, ಬೇಗಬೇಗನೆ ಸ್ನಾನದ ಶಾಸ್ತ್ರವನ್ನು ಮುಗಿಸಿದೆವು.

ಹಿ – ಜೋಡುನಳಿಗೆ ತೋಟಾಕೋವಿ ತೆಗೆದುಕೊಂಡರು. ನಾನು ಹನ್ನೆರಡು ಗುಂಡಿನ ‘ರೈಫಲ್’ ಹಿಡಿದುಕೊಂಡೆ, ವೆ – , ಮೂರ್ತಿ ಬರಿಗೈಯಲ್ಲಿಯೆ ಹೊರಟರು! ಗೋಪಾಲ ನಾಯಿಗಳನ್ನು ಸಿಳ್ಳುಹಾಕಿ ಕರೆದನು. ನಾಯಿಗಳೆಲ್ಲ ಓಡಿಬಂದುವು. ನಾವು ಬೇಟೆಗೆ ಹೊರಟದ್ದನ್ನು ಕಂಡು ಅವುಗಳಿಗೆ ಬಹಳ ಆನಂದವಾಯಿತೆಂದು ತಮ್ಮ ಲಾಂಗೂಲನೃತ್ಯದಿಂದ ಸೂಚಿಸಿದುವು. ವಿಳಂಬಮಾಡದೆ ನಡೆದೆವು. ನಾನು, ಹಿ – ಬಿಲ್ಲಿಗೆ ನಿಂತೆವು. ಉಳಿದ ಮೂವರು ಹಳುವಿಗೆ ಹೋದರು. ನಾಯಿಗಳೇನೋ ಹಳುವಿನಲ್ಲಿ ಬಿಗುಳಿದುವು. ಆದರೆ ಯಾವ ಪ್ರಾಣಿಯೂ ಹೊರಟಲಿಲ್ಲ. ಹಳುವಿನವರು ಸೋವಿಸೋವಿ ಹೊರಹೊರಟರು. ನಮ್ಮ ಹೇರಾಸೆಗಳೆಲ್ಲ ಬಟ್ಟಬಯಲಾದವು. ನಾವು ಉಪಾಹಾರ ಪೂರೈಸಿಕೊಂಡು ಬರುವಷ್ಟರಲ್ಲಿ ಹಂದಿಗಳು ಬಹುಶಃ ಅಲ್ಲಿಂದ ಮುಂದೆ ಹೋಗಿರಬೇಕೆಂದು ನಿರ್ಧರಿಸಿ, ಮೂರ್ತಿ – ವೆಂ – ಗೋಪಾಲರನ್ನು ಮನೆಗೆ ಕಳುಹಿಸಿ, ನಾನು ಹಿ – ಇಬ್ಬರೂ ನಾಯಿಗಳನ್ನು ಕರೆದುಕೊಂಡು ಕಾಡಿಗೆ ಏರಿದೆವು.

ಈ ಕತೆಯನ್ನು ಮುಂದುವರಿಸುವ ಮೊದಲು ನಮ್ಮ ಬೇಟೆಯ ತತ್ವದ ವಿಚಾರವಾಗಿ ಎರಡು ನುಡಿಗಳನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಸಮಯ ಸಿಕ್ಕಿದಾಗ ವಿಸ್ತಾರವಾಗಿ ಹೇಳುತ್ತೇನೆ. ಸದ್ಯಕ್ಕೆ ಬೇಡ.

ಬೇಟೆಗಳಲ್ಲಿ ಅನೇಕ ವಿಧಗಳುಂಟು. ಒಂದನೆಯದು ಕೂಡುಬೇಟೆ! ದೊಡ್ಡ ಬೇಟೆ ಎಂದೂ ಕರೆಯುತ್ತಾರೆ. ಇದರಲ್ಲಿ ಜನರು ಬಹುಸಂಖ್ಯೆ. ಕೆಲವರು ಬಿಲ್ಲಿನವರು: ಕೆಲವರು ಹಳುವಿನವರು. ಬಿಲ್ಲಿನವರಲ್ಲಿ ಪ್ರತಿಯೊಬ್ಬರಿಗೂ ಬಂದೂಕು ಇರಲೇಬೇಕು. ಹಳುವಿನವರಲ್ಲಿ ಇರಲೇಬೇಕೆಂಬ ನಿಯಮವಿಲ್ಲ. ಕೆಲವರಲ್ಲಿ ಮಾತ್ರ ಇರುವುದು ಸಂಪ್ರದಾಯ. ಹಳುವಿನವರು ಕಾಡನ್ನು ನಾಯಿಗಳ ಸಹಾಯದಿಂದಲೂ ಕೂಗುಕಾಕಿನ ಸಹಾಯದಿಂದಲೂ ಸೋವಿಕೊಂಡು ಬರುತ್ತಾರೆ. ಬಿಲ್ಲಿನವರು ಜೀವಾದಿಗಳು ಆ ಕಾಡಿನಿಂದ ಇನ್ನೊಂದು ಕಾಡಿಗೆ ಓಡುವ ಜಾಗಗಳನ್ನು ಅರಿತು ಸ್ವಲ್ಪ ದೂರ ದೂರವಾಗಿ ನಿಲ್ಲುತ್ತಾರೆ. ಅಂತಹ ತಾಣಗಳನ್ನು ಬೇಟೆಗಾರರು ತಮ್ಮ ಪರಿಭಾಷೆಯಲ್ಲಿ “ಕಂಡಿ” ಎಂದು ಕರೆಯುತ್ತಾರೆ. ಪ್ರಾಣಿಗಳು ಹಳುವಿನವರ ಆರ್ಭಟಕ್ಕೆ ಬೆದರಿ ಕಂಡಿಗಳಿಗೆ ಧಾವಿಸಿ ಬಂದಾಗ ಬಿಲ್ಲಿನವರು ಸುಟ್ಟು ಕೆಡಹುತ್ತಾರೆ. ಕೆಲವರೇನೋ ಗುಂಡನ್ನು ಹಾರಿಸಿ ಬಿಡುತ್ತಾರೆ. ಬಂದ ಜೀವ ಜಂತುಗಳು ಅಕ್ಷತವಾಗಿ ಪಾರಾಗುವುದೂ ಉಂಟು! ಎರಡನೆಯ ತರಹದ ಬೇಟೆಯನ್ನು “ಸಾರಕ ಬೇಟೆ” ಎಂದು ಕರೆಯುತ್ತಾರೆ. ಅದರಲ್ಲಿ ಬೇಟೆಗಾರನು ಒಬ್ಬನೇ ಹೊರಟು (ನಾಯಿ ಗೀಯಿ ಒಂದೂ ಇರುವುದಿಲ್ಲ) ಕಾಡಿನಲ್ಲಿ ಸುಮ್ಮನೆ ಅಲೆಯುತ್ತ ಹೋಗುತ್ತಾನೆ. ಆಗ ಕಣ್ಣಿಗೆ ಬಿದ್ದ ಪ್ರಾಣಿಗಳನ್ನು ಹೊಡೆಯುತ್ತಾನೆ. ಮೂರನೆಯದು “ಮರಸು ಬೇಟೆ”: ಇದರಲ್ಲಿ ಬೇಟೆಗಾರನು ಕಾಡಿನಲ್ಲಿ ಪ್ರಾಣಿಗಳು ತಿರುಗಾಡುವ ಕಂಡಿಯಲ್ಲಾಗಲಿ, ಯಾವುದಾದರೊಂದು ಹಣ್ಣಿನ ಮರದಲ್ಲಾಗಲಿ, ಮರೆಮಾಡಿಕೊಂಡು ಕುಳಿತು ಪ್ರಾಣಿಗಳನ್ನು ಕಾಯುತ್ತಾನೆ. ಅವು ನಿಶ್ಯಂಕೆಯಿಂದ ತಿರುಗುತ್ತ ಬಂದಾಗ ಸುಡುತ್ತಾನೆ. ಇದೇ ರೀತಿಯಾಗಿ ಬೆಳ್ದಿಂಗಳ ಬೇಟೆಯೂ ಉಂಟು. ಇವುಗಳಲ್ಲದೆ ಕೋವಿ ಕಟ್ಟವುದೂ ಉಂಠು, – ಅಂದರೆ ಜೀವಿಗಳು ಬರುವ ಜಾಡನ್ನು ಕಂಡುಹಿಡಿದು, ಕೋವಿಯನ್ನು ಕಟ್ಟಿ, ಅದನ್ನು ದಾರಿಗೆ ಅಡ್ಡಲಾಗಿ ಕಟ್ಟುತ್ತಾರೆ. ಅದಕ್ಕೊಂದು ಸಿಡಿಗೋಲಿನ ನೆರವಿರುತ್ತದೆ. ಪ್ರಾಣಿ ಬಂದು ದಾರವನ್ನು ತಗುಲಿದರೆ ಸಾಕು ಗುಂಡು ಹಾರುತ್ತದೆ. ಇವುಗಳನ್ನೆಲ್ಲ ಕುರಿತು ಇನ್ನೊಂದು ಸಾರಿ ವಿಶದವಾಗಿ ವಿವರಿಸುತ್ತೇನೆ. ಸದ್ಯಕ್ಕೆ ದಯವಿಟ್ಟು ಮನ್ನಿಸಿ.

ನಾವು ಆ ದಿನ ಹೊರಟದ್ದು ಒಂದು ವಿಧವಾದ ‘ಸಾರಿಕೆಬೇಟೆ’ ಎಂದೇ ಹೇಳಬಹುದು. ಆದರೆ ನಮ್ಮ ಸಂಗಡ ನಾಯಿಗಳಿದ್ದುವು. ಅವು ಕಾಡಿನಲ್ಲೆಲ್ಲ ‘ಗಾಳಿಹಿಡಿಯುತ್ತ’ ನಮ್ಮೊಡನೆ ಹೋಗುತ್ತಿದ್ದುವು. ನಾನು ಬೆಟ್ಟದ ಮೇಲ್ಭಾಗದಲ್ಲಿ ಹೋಗುತ್ತಿದ್ದೆ. ಹಿ – ನನಗೆ ಒಂದು ಒಂದೂವರೆ ಫರ್ಲಾಂಗು ದೂರದಲ್ಲಿ, ಕೆಳಗಡೆ ನನಗೆ ಸಮದೂರವಾಗಿ ಬರುತ್ತಿದ್ದರು. ನಾನು ಹೋಗುತ್ತಿದ್ದಾಗ ಒಂದು ಮೊಲ ಇದ್ದಕ್ಕಿದ್ದ ಹಾಗೆ ನಾಯಿಗಳಿಗೆ ತಪ್ಪಿಸಿಕೊಂಡು ಹಾರಿಬಂತು. ಹೊಡೆಯಲು ಕೋವಿ ಎತ್ತಿದೆ. ಆದರೆ ನನ್ನ ಕೈಯಲ್ಲಿದ್ದುದು ರೈಫಲ್ ಎಂದು ಹೆದರಿ ಸುಮ್ಮನಾದೆ. ಏಕೆಂದರೆ ಅದರ ಗುಂಡು ಬಹಳ ದೂರದವರೆಗೂ ಹೋಗುತ್ತದೆ. ನನ್ನ ಕೆಳಭಾಗದಲ್ಲಿ ಹಿ – ಇದ್ಯಾರೆಂದು ನನಗೆ ಭಯವಾಯಿತು. ನಾನು ಮೊಲಕ್ಕೆ ಹೊಡೆದರೂ ಗುಂಡು ಮೊಲವನ್ನು ಭೇದಿಸಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ. ಆದರೆ, ಎಲ್ಲಿಯಾದರೂ ಗ್ರಹಚಾರವಶಾತ್ ನನ್ನ ಗುಂಡಿನ ದಾರಿಯಲ್ಲಿಯೆ ಅವರಿದ್ದರೆ ಗತಿಯೇನು? ಹೀಗೆಂದು ಈಡು ಹಾರಿಸಿದೆ ಬಿಟ್ಟೆ;

ಆಗ ಸುಮಾರು ಎಂಟುಗಂಟೆಯ ಸಮಯ. ಹಸುಳೆಬಿಸಿಲು ಬನಗಳ ಹಸುರಿನ ಮೇಲೆ ಬಿದ್ದು ಹಸಿರುಗಟ್ಟಿ ಹೋದಂತಿತ್ತು. ಮಡಿವಾಳ, ಕಾಜಾಣ, ಕೋಗಿಲೆ, ಚೋರೆ, ಮರಕುಟಿಕ, ಮಿಂಗುಲಿ, ಕುಟುರ ಮೊದಲಾದ ಹಕ್ಕಿಗಳ ಪರಿಷತ್ತು ಸೇರಿ ಬನವೆಲ್ಲ ದನಿಯಿಂದ ತುಂಬಿದ್ದಿತು. ನಾನು ಹೋಗುತ್ತಿದ್ದುದು ನಡುಗಾಡಾಗಿರಲಿಲ್ಲ. ನಡುಗಾಡಿನಿಂದ ಕಾಡಿನಂಚಿಗೆ ಬರುತ್ತಿದ್ದ ಕಾಡುಕೋಳಿಗಳ ಚೀರಿಂಚರವು ಬೆಟ್ಟದಿಂದ ಬೆಟ್ಟಕ್ಕೆ ಹಾರಿ ಅನುರಣನವಾಗುತ್ತಿತ್ತು.

ಹಾಗೆಯೇ ಮುಂದುವರಿದೆವು. ಹಿ – ಹೊದರುಮರಗಳೆಡೆ ದೂರದಲ್ಲಿ ಬರುತ್ತಿದ್ದರು. ನನಗೆ ಸ್ವಲ್ಪವೂ ಗೋಚರಿಸುತ್ತಿರಲಿಲ್ಲ. ನಾನು ಒಂದು ‘ಸರು’ (ಸಣ್ಣ ಕಣಿವೆ)ಯನ್ನು ಇಳಿದು ಮತ್ತೊಂದು ದಿಬ್ಬವನ್ನು ಏರಿದೆ. ಅಲ್ಲಿ ಸ್ವಲ್ಪ ಬಯಲುಬಯಲಾಗಿತ್ತು. ತಿರೆವೆಣ್ಣಿನ ಮೈನವಿರು ನಿಮಿರಿದಂತೆ ನೆಲದಿಂದ ಹಸುರು ಹೊಮ್ಮಿದ್ದಿತು. ಕೋಮಲ ಸೂರ್ಯಕಾಂತಿ ಆ ಹಸುರು ರತ್ನಕಂಬಳಿಯ ಮೇಲೆ ಮುದ್ದಾಗಿ ಮಲಗಿ ಮನೋಹರವಾಗಿತ್ತು. ನಾನು ಬೇಟೆಯನ್ನು ಮರೆತು ಸೊಬಗು ಸವಿಯುವುದರಲ್ಲಿ ತೊಡಗಿಬಿಟ್ಟೆ.

ಇದ್ದಕ್ಕಿದಹಾಗೆ ಬೆಚ್ಚಿ ಎಚ್ಚರಗೊಂಡೆ. ನಾಯಿಯೊಂದು ಅನತಿ ದೂರದಲ್ಲಿ ಗಟ್ಟಿಯಾಗಿ ಬಗುಳುತ್ತಿತ್ತು. ಅರಣ್ಯ ಅದರ ಧ್ವನಿಮಾಲೆಯನ್ನು ಮಥಿಸಿ ಪ್ರತಿಧ್ವನಿಮಾಲೆಗಳನ್ನು ತರಂಗತರಂಗವಾಗಿ ಎಸೆಯುತ್ತಿತ್ತು. ನಾನು ನಿಮಿರಿ ನಿಂತು ಸುತ್ತಲೂ ನೋಡಿದೆ. ಏನು ಕಾಣಿಸಲಿಲ್ಲ. ನಾಯಿ ಬಗುಳುತ್ತಿದ್ದ ದಿಕ್ಕಿಗೆ ಓಡಿದೆ. ಸ್ವಲ್ಪ ದೂರದಲ್ಲಿ ಒಂದು ಪೊದೆಯ ಬಳಿಯಲ್ಲಿ ಹಸಿರು ಹುಲ್ಲಿನ ಮೇಲೆ – ಏನು? ಏನೂ ಕಾಣಿಸುವುದಿಲ್ಲ! ಆದರೆ ನಾಯಿ ಮಾತ್ರ ಬಗುಳುತ್ತಿದೆ. ನಾನು ವನವರಾಹವಿರಬೇಕೆಂದು ಭಾವಿಸಿ ಧಾವಿಸಿದ್ದೆ. ಆದರೆ ಏನೂ ಕಾಣಿಸಲಿಲ್ಲ. ಇನ್ನೂ ಸ್ವಲ್ಪ ಮುಂದೆ ಓಡಿಹೋಗಿ ನಿಂತೆ. ನಾಯಿ ಬಗುಳುತ್ತ ಹಿಂದಕ್ಕೂ ಮುಂದಕ್ಕೂ ಹಾರಾಡುತ್ತಿತ್ತು. ನೋಡುತ್ತೇನೆ – ಎಂತಹ ರುದ್ರ ಮನೋಹರ ದೃಶ್ಯ?

ಆ ಪಕ್ಷಿಕೂಜನದಿಂದ ಮನೋಹರವಾದ ಕಾಡಿನಲ್ಲಿ, ಹೆಮ್ಮೆರಗಳ ಬೀಡಿನಲ್ಲಿ, ಮೆತ್ತೆಹಾಸಗೆಯಂತೆ ಕೋಮಲವಾಗಿ ಬೆಳೆದ ಹಸುರು ಹುಲ್ಲಿನ ಕಿರುಬಯಲಿನಲ್ಲಿ, ವಸಂತಸೂರ‍್ಯೋದಯದ ಹೊಂಬಿಸಿಲಿನಲ್ಲಿ ಸುರಂಜಿತವಾಗಿ ಹೆಡೆಯೆತ್ತಿ ನಿಂತಿದೆ ಒಂದು ಸರ್ಪ, ರಾಜಸರ್ಪ! ಗೋಧಿಯ ಬಣ್ಣದ ಅದರ ತನುಕಾಂತಿ ಎಳೆಬಿಸಿಲಿನಲ್ಲಿ ಹೊಳೆಯುತ್ತಿತ್ತು. ಅದರ ಅರ್ಧ ದೇಹ ಪಸಲೆಯ ಮೇಲೆ ವಕ್ರಾಕಾರವಾಗಿ ಹೊರಳುತ್ತಿತ್ತು. ಇನ್ನರ್ಧ ನಿಮಿರಿ ನಿಂತು ಗಾಳಿಯಲ್ಲಿ ಬಳುಕುತ್ತಿತ್ತು. ಅದರ ಹೆಡೆ ಮೂರು ನಾಲ್ಕು ಅಡಿಗಳಷ್ಟು ಎತ್ತರವಾಗಿ ನಿಂತು ಎಡಕ್ಕೂ ಬಲಕ್ಕೂ ಹಿಂದಕ್ಕೂ ಮುಂದಕ್ಕೂ ವಿಶ್ರಾಂತಿಯಿಲ್ಲದೆ ಒಲೆಯುತ್ತಿತ್ತು. ಫಣೆಯಲ್ಲಿ ಕಪ್ಪುಬಣ್ಣದ ‘ಳಿ’ ಕಾರವು ಎನ್ನದೇ ಒಂದು ಠೀವಿಯಿಂದ, ತನ್ನದೇ ಒಂದು ಬಿಂಕದಿಂದ ಪ್ರಕಾಶಿಸುತ್ತಿತ್ತು. ನಾಯಿ ಹಾವಿನ ಹೆಡೆಯ ಚಲನೆಗೆ ಹೊಂದಿಕೊಂಡು ಹಾರಾಡುತ್ತಿತ್ತು. ನಾಗರಹಾವು ಬಿಂಕದಿಂದ ಕೊಂಕಿದ ತನ್ನ ಹೆಡೆಯನ್ನು ಮುಂದೆಸೆಯಲು ನಾಯಿ ಹಿಂದಕ್ಕೆ ಹಾರುವುದು; ಹಾವು ಹೆಡೆಯನ್ನು ಹಿಂದಕ್ಕೆಸೆಯಲು ಅದು ಮುಂದೆ ಹಾರುವುದು, ಒಮ್ಮೆ ಎಡಕ್ಕೆ ಚಿಮ್ಮುವುದು; ಒಮ್ಮೆ ಬಲಕ್ಕೆ ನೆಗೆಯುವುದು; ಚಲಿಸಿದಂತೆ ಹೆಗ್ಗೊರಲಿನಿಂದ ಬಗುಳುವುದು. ಅಂತೂ ಪ್ರಾಣಿಗಳೆರಡೂ ಮಲೆತು ಎದುರುಬದುರಾಗಿ ನಿಂತಿದ್ದುವು. ಒಮ್ಮೆ ಸರ್ಪವು ಇನ್ನೇನು ನಾಯಿಯನ್ನು ಕಡಿಯಿತು ಎಂಬಂತೆ ತೋರುವುದು. ಆದರೆ ನಾಯಿ ಬಹಳ ಚಟುವಟಿಕೆಯಿಂದ ಹಾರಿ ತಪ್ಪಿಸಿಕೊಳ್ಳುವುದು. ಒಮ್ಮೆ, ನಾಯಿ ಸರ್ಪವನ್ನು ಇನ್ನೇನು ಕಚ್ಚಿತು ಎಂಬಂತೆ ತೋರುವುದು. ಆದರೆ ಸರ್ಪ ಮಿಂಚಿನ ವೇಗದಿಂದ ಬಳುಕಿ ತಪ್ಪಿಸಿಕೊಳ್ಳುವುದು, ದೃಶ್ಯ ರುದ್ರಮನೋಹರವಾಗಿತ್ತು. ನನ್ನ ಬಳಿ ಕ್ಯಾಮರಾ ಇದ್ದಿದ್ದರೆ ಎಂತಹ ನೋಟವನ್ನು ಹಿಡಿದಿಡಬಹುದಾಗಿತ್ತು? ಆದರೆ, ರೈಫಲ್ ಇತ್ತು!

ನಾನು ಮೇಲೆ ಮಾಡಿದ ವರ್ಣನೆಯನ್ನೆಲ್ಲ ಆ ಎಡೆಗೆ ಬಂದು ನಿಂತು ಅರ್ಧಕ್ಷಣದಲ್ಲಿಯೆ ನೋಡಿದೆ. ಆದರ ಅಪಾಯವನ್ನು ಬೇಗನೆ ಮನ ಗಂಡ. ವಿಲಂಬನಕ್ಕೆ ಅವಕಾಶವಿರಲಿಲ್ಲ. ನನಗೆ ಸರ್ಪದ ಮೇಲೆ ಮಮತೆಯಿರಲಿಲ್ಲ. ಅದು ಕಾಡಿನ ಹಾವು; ಅದರ ಯೋಗಕ್ಷೇಮಕ್ಕೆ ನಾನು ಹೊಣೆಯಲ್ಲ. ಆದರೆ ರೋಜಿ (ನಾಯಿ ಹೆಸರು) ನನ್ನದು; ನನ್ನ ಮುದ್ದಿನ ನಾಯಿ. ಅದು ನನಗಾಗಿ ತನ್ನ ಜೀವವನ್ನೂ ಲಕ್ಷಿಸುವುದಿಲ್ಲ. ಆದ್ದರಿಂದ ಅದಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಹಾವು ಕಡಿದರೆ ಅದು ಉಳಿಯುವುದಿಲ್ಲ. ನನಗೆ ಮದ್ದು ಮೊದಲೇ ಗೊತ್ತಿಲ್ಲ. ತಿಳಿದವರು ಬರುವ ಮುನ್ನವೇ ಸಾಯಿ ಸತ್ತರೂ ಸಾಯಬಹುದು. ಆದ್ದರಿಂದ ನನ್ನ ಪಕ್ಷಪಾತವೆಲ್ಲ ನನ್ನ ರೋಜಿಯ ಮೇಲಿತ್ತು. “ಹಾಗಾದರೆ ಸರ್ಪದ ಮೇಲೆ ನಿನಗೇನು ದ್ವೇಷ!” ಎಂದು ನೀವು ಪ್ರಶ್ನೆ ಮಾಡಬಹುದು. ಅದಕ್ಕೆ ನನ್ನದೊಂದೇ ಉತ್ತರ: “ನಾನು ಬೇಟೆಗಾರ”. ನನಗೆ ಹಾವನ್ನು ಕೊಲ್ಲಬೇಕೆಂದು ಮನಸ್ಸಾಗಲಿಲ್ಲ. ಹೇಗಾದರೂ ರೋಜಿಯನ್ನು ಅಲ್ಲಿಂದ ಅಟ್ಟಿದರೆ ಸಾಕು ಎಂದು ಆಲೋಚಿಸಿದೆ. ಆದ್ದರಿಂದ ಹಾವಿನ ಗೋಜಿಗೆ ಹೋಗದೆ ನಾಯಿಯನ್ನೇ ಗದರಿಸಿದೆ. ಏಕೆಂದರೆ ನಾನೆಲ್ಲಿಯಾದರೂ ಹಾವಿನ ಮೇಲೆ ಒಂದು ಕಲ್ಲನ್ನು ಎಸೆದೆನೆಂದರೆ ನಾಯಿ ತನ್ನ ಪ್ರಾಣಾಪಾಯವನ್ನು ಸ್ವಲ್ಪವೂ ಗಮನಿಸದೆ ಹಾವಿನ ಮೇಲೆ ಬೀಳುವುದೇ ನಿಶ್ಚಯ. ಆಗಲೇ, ನಾನು ಬಳಿ ಬಂದುದನ್ನು ಕಂಡು, ರೋಜಿಯ ಧೈರ್ಯವೂ ಉತ್ಸಾಹವೂ ಸಾಹಸವೂ ಅರ್ಭಟವೂ ಹೆಚ್ಚಿ ಹೋಗಿದ್ದವು. ಅನುಭವದಿಂದ ನನಗೆ ನಾಯಿಗಳ ಸ್ವಭಾವ ಚೆನ್ನಾಗಿ ಗೊತ್ತು.

ರೋಜಿಯನ್ನು ಗದರಿಸಿದೆ. “ಹಚಾ! ಹಚಾ! ಹಛಾ! ಎಂದು ಒರಲಿದೆ. “ರೋಜಿ! ರೋಜೀ!” ಎಂದು ರೇಗಿದೆ, “ಬಿಡೂ! ಬಿಡೂ!” ಎಂದು ಅಧಿಕಾರವಾಣಿಯಿಂದ ಕೂದಿದೆ. ಆದರೆ ನಾನು ಕೂಗಿದಷ್ಟೂ ರೋಜಿಯ ಆಟೋಪ ಪ್ರಬಲವಾಯಿತು. ನನ್ನ ವಾಣಿಯನ್ನು ಅದು ಉತ್ತೇಜಕವಾಣಿ ಎಂದು ತಿಳಿಯಿತೊ ಏನೊ? ಬೇರೆ ಸಮಯದಲ್ಲಾಗಿದ್ದರೆ ಹಾವು ನನ್ನನ್ನು ಅಟ್ಟಿಯಟ್ಟಿ ಕಡಿಯದೆ ಇರುತ್ತಿರಲಿಲ್ಲ, ಆದರೆ ಈಗ ಅದರ ಗಮನವೆಲ್ಲಾ ರೋಜಿಯ ಮೇಲಿತ್ತು. ನನಗೆ ರಗಳೆಗಿಟ್ಟುಕೊಂಡಿತು. ಸ್ವಲ್ಪಹೊತ್ತು ಏನು ಮಾಡಬೇಕೊ ಗೊತ್ತಾಗಲಿಲ್ಲ.

ಆದರೆ ಮರುಕ್ಷಣದಲ್ಲಿಯೆ ಏನೊ ಮನಸ್ಸಿಗೆ ಹೊಳೆಯಿತು. ಹಾವನ್ನು ಗುಂಡಿನಿಂದ ಸುಟ್ಟುಬಿಡುವೆನೆಂದು ಭಾವಿಸಿದೆ. ಬಂದೂಕವನ್ನು ಎತ್ತಿಹಿಡಿದೆ. ಆದರೇನು? ನನ್ನ ಕೈಯಲ್ಲಿರುವುದು ರೈಫಲ್! ಅದರ ಒಂದೊಂದು ತೋಟಾದಲ್ಲಿ ಒಂದೊಂದೇ ಗುಂಡಿರುವುದು. ಪ್ರಾಣಿ ದೊಡ್ಡದಾಗಿದ್ದರೆ ಸ್ವಲ್ಪ ಹೆಚ್ಚು ಕಡಿಮೆ ಗುರಿ ಬೀಳುತ್ತದೆ. ಇಲ್ಲದಿದ್ದರ ಗುರಿ ತಪ್ಪಬಹುದು. ಇಲ್ಲಿ ಗುರಿತಪ್ಪಿದರೆ ಹಾವಿನ ಬದಲು ನಾಯಿ ಸಾಯಬಹುದು. ಅದರಲ್ಲಿಯೂ ಹಾವು ಹೆಡೆಯನ್ನು ಅತ್ತ ಇತ್ತ ನಿರಂತರವಾಗಿ ಒಲೆಯುತ್ತಲೇ ಇತ್ತು. ನಾಯಿಯೂ ಸುತ್ತುಮುತ್ತ ತಿರುಗುತ್ತಿತ್ತು. ಆದ್ದರಿಂದ ಗುಂಡು ಹೊಡೆಯದೆ ಸ್ವಲ್ಪ ಕೈತಡೆದೆ. ಇಷ್ಟರಲ್ಲಿ ಅನಾಹುತ ಇನ್ನೂ ಹೆಚ್ಚಿತು. ನಾನು ಕೋವಿ ಎತ್ತಿದುದನ್ನು ಕಂಡೊಡನೆ ರೋಜಿಗೆ ಭೀಮಶಕ್ತಿ ಬಂದಂತಾಯಿತು, ಸರ್ಪದ ಮೇಲೆ ಇನ್ನೂ ಉಗ್ರತರವಾಗಿ ಎರಗತೊಡಗಿತು. ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಕಂಗೆಟ್ಟಂತಾಯಿತು. ಕಡೆಗೆ ಏನಾದರೂ ಆಗಲಿ ಎಂದು ಹೆಡೆಗೆ ಗುರಿಯಿಡತೊಡಗಿದೆ. ಅದರ ಕಷ್ಟವನ್ನು ಬಲ್ಲವನೇ ಬಲ್ಲ. ಗುರಿಯಿಡಲಾಗಲಿಲ್ಲ. ಉರಗ ಉಯ್ಯಲೆಯಂತೆ ತೂಗುತ್ತಿತ್ತು. ಇಳಿಸಿದ್ದ ಕೋವಿಯನ್ನು ಮತ್ತೆ ಮೇಲೆತ್ತಿದೆ. ದೇವರೆ ಗತಿಯೆಂದು ಈಡು ಹಾರಿಸಿಯೇ ಬಿಟ್ಟೆ. ನಾಯಿಯೂ ಸಾಯಲಿಲ್ಲ. ಹಾವೂ ಸಾಯಲಿಲ್ಲ. ಗುಂಡು ಸುರಕ್ಷಿತವಾಗಿ ಅರಣ್ಯಪ್ರವೇಶ ಮಾಡಿತು. ಈಡಿನ ‘ಢಂ’ಕಾರ ಬೆಟ್ಟಗುಡ್ಡಗಳಿಂದ ಮರುದನಿಯಾಗಿ ಮೊಳಗಿತು. ಅನಾಹುತ ಮತ್ತೂ ಹೆಚ್ಚಿತು. ನಾನು ಗುಂಡು ಹೊಡೆದ ಕೂಡಲೆ ಅದುವರೆಗೆ ಹಾವನ್ನು ಮೆಲ್ವಾಯ್ದು ಕಚ್ಚಲು ಹಿಂಜರಿಯುತ್ತಿದ್ದ ರೋಜಿ, ಹಾವಿಗೆ ಏಟುಬಿತ್ತೆಂದು ತಿಳಿದು, ಮೈಮೇಲೆ ಬಿದ್ದು ಒಂದು ಸಾರಿ ಹಾವನ್ನು ಕಚ್ಚಿ ಎಳೆಯಿತು, ಹಾವು ಬುಸುಗಟ್ಟಿ ಎರಗಿತು. ದೈವವಶಾತ್ ನಾಯಿ ತಪ್ಪಿಸಿಕೊಂಡಿತು. ನಾನಂತೂ ಕಿಂಕರ್ತವ್ಯ ವಿಮೂಢನಾದೆ. ಇನ್ನೂ ಹನ್ನೊಂದು ತೋಟಾಗಳಿದ್ದುವು ಕೋವಿಯ ಕೆಳನಳಿಗೆಯಲ್ಲಿ. ಇನ್ನೊಂದು ನಿಮಿಷದ ಒಳಗೆ ಹನ್ನೊಂದು ಗುಂಡನ್ನು ಹಾರಿಸಬಹುದಿತ್ತು. ಆದರೆ ಪ್ರಯೋಜನವೇನು? ಹುಲಿಗೂ ಕೂಡ ರೈಫಲ್ಲಿನ ಒಂದೇ ಗುಂಡು ಸಾಕು. ಹಾವಿಗೆ ಹನ್ನೆರಡು ಗುಂಡು ಹೊಡೆದೆನೆಂದರೆ ಜನ ಏನೆಂದಾರು? ಹನ್ನೆರಡನೆಯ ನಂಬರಿನ ತೋಟಾ ಕೋವಿಯಾಗಿದ್ದರೆ ಚರೆಯ ತೋಟಾಗಳಿರುತ್ತಿದ್ದುವು. ಒಂದನೆಯ ಈಡಿಗೇ ಹಾವು ನೆಲಕ್ಕುರುಳುತ್ತಿತ್ತು. ಅದನ್ನು ನೆನೆದು “ಅಯ್ಯೋ ಈ ಹಾಳು ರೈಫಲ್ಲನ್ನು ಏಕೆ ತಂದೆ?” ಎಂದುಕೊಂಡೆ. ಸರಿ, ಕೋವಿಯನ್ನು ಕೆಳಗಿಳಿಸಿ ಬಾಯಿಗೆ ಕೆಲಸ ಕೊಟ್ಟೆ. ರೋಜಿ ಎಂದಿಗಿಂತಲೂ ಹೆಚ್ಚಾಗಿ ಉರುಬೆಯಿಂದ ಉರವಣಿಸುತ್ತಿತ್ತು. “ಹಚಾ! ಹಛಾ!” ಎಂದು ಕೂಗಿದೆ. ಕಡೆಗೆ ಅತ್ತ ನೋಡಿ, ಇತ್ತನೋಡಿ, ದೂರ ಎಲ್ಲಿಯೋ ಇದ್ದ ಹಿ – ಯವರನ್ನು ಗಟ್ಟಿಯಾಗಿ ಕೂಡಿ ಕರೆಯತೊಡಗಿದೆ. ಹತ್ತು ಹನ್ನೆರಡುಸಾರಿ ಕಾಕು ಕಾಕಿ ಕೂಗಿದೆ.

ಪಾಪ, ಅವರು ನಿರುದ್ವೇಗದಿಂದ ಬರುತ್ತಿದ್ದವರು ಇದ್ದಕ್ಕಿದ್ದ ಹಾಗೆ ನಾಯಿಯ ಅರ್ಭಟದಿಂದ ಕಿವಿ ನೆಟ್ಟಗೆ ಮಾಡಿಕೊಂಡಿದ್ದರು. ಅಷ್ಟು ಹೊತ್ತಿಗೆ ನನ್ನ “ಹಚಾ!” ಶಬ್ದ ಕೇಳಿಸಿತ್ತು. ಏನಿರಬಹುದೆಂದು ಯೋಚಿಸುತ್ತಿರುವಷ್ಟರಲ್ಲಿಯೇ ಈಡಿನ ‘ಢಂ’ ಕಾರವೂ ಕೇಳಿಸಿತು. ಅಷ್ಟರಲ್ಲಿ ನಾನು ಕರೆಯುವುದೂ ಕೇಳಿಬಂತು. ಇದನ್ನೆಲ್ಲ ಹೇಳಲು ಇಷ್ಟೊಂದು ಹೊತ್ತಾದರೂ ನಿಜವಾಗಿ ಎರಡು ಮೂರು ನಿಮಿಷಗಳಲ್ಲಿಯೆ ಇಷ್ಟೆಲ್ಲ ಸಾಗಿತ್ತು. ಹಂದಿಯೊ, ಹುಲಿಯೊ, ಏನಪಾಯವೊ ಎಂದು ಭಾವಿಸಿ ಗುಡ್ಡವನ್ನು ಏರಿ ಏರಿ ಏದುತ್ತ ಓಡಿಬಂದರು.

“ಬನ್ನಿ, ಬಿನ್ನಿ, ಬೇಗ ಬನ್ನಿ, ಅಲ್ಲಿ ನೋಡಿ, ನಾಗರಹಾವು ಹೆಡೆಯೆತ್ತಿ ನಿಂತಿದೆ. ಬೇಗ ಹೊಡೆಯಿರಿ. ನಾಯಿ ಕೊಲ್ಲುತ್ತೆ” ಎಂಧು ಬಿರುಬಿರನೆ ಅರಚಿಕೊಂಡೆ.

ಏದುತ್ತ ಬಂದವರು ನೋಡಿದರು. ಅವರ ಕೈಯಲ್ಲಿ ಹನ್ನೆರಡನೆಯ ನಂಬರಿನ ತೋಟಾಕೋವಿಯಿತ್ತು. ಅದರಲ್ಲಿ ಚರೆಯ ತೋಟಾಗಳು ಇದ್ದುವು. “ಹೊಡೆಯಿರಿ! ಹೊಡೆಯಿರಿ!” ಎಂದು ಕೂಗಿಕೊಂಡೆ. ಇಷ್ಟರಲ್ಲಿ ಕಾಡಿನಲ್ಲಿ ಅಲ್ಲಲ್ಲಿ ತಿರುಗುತ್ತಿದ್ದ ಇತರ ನಾಯಿಗಳೂ ಅಲ್ಲಿಗೆ ವೇಗವಾಗಿ ಓಡಿಬಂದುವು. ಸರಿ, ವ್ಯಾಪಾರ ಹೈಲಾಯಿತು. ಎಲ್ಲ ನಾಯಿಗಳೂ ಸೇರಿ ಹಾವನ್ನು ಮುತ್ತಿದುವು. ಆದರೆ ಸರ್ಪ ಎಲ್ಲ ಕಡೆಗೂ ತನ್ನ ಹೆಡೆಯನ್ನು ಎರಗಿಸುತ್ತ ಸ್ವಸರಂಕ್ಷಣೆಯ ಕಾರ್ಯದಲ್ಲಿ ಇನ್ನೂ ಹೆಚ್ಚಾಗಿ ಮುತುವರ್ಜಿವಹಿಸಿಕೊಂಡಿತು. ಹಿ – ಬಹಳ ಪ್ರಯತ್ನಪಟ್ಟರು. ನಾಯಿಗಳನ್ನು ತಪ್ಪಿಸಿ ಹಾವಿಗೆ ಈಡು ಪ್ರಬಲತರವಾಯಿತೆಂದು ತಿಳಿದು ಮೆಲ್ಲಗೆ ಪೊದೆಯ ಕಡೆಗೆ ಬರತೊಡಗಿತ್ತು. ಒಂದೆರಡು ಸಾರಿ ನಾಯಿಗಳು ಅದನ್ನು ಕಚ್ಚಿ ಎಳೆದೂಬಿಟ್ಟವು. ಅಂತೂ ಏನೊ ಬಂಡಾಟದಿಂದ ಹಾವು ಪೊದೆಯಲ್ಲಿದ್ದ ಬಿಲಕ್ಕೆ ನುಗ್ಗಿತು. ಹಿ – ಯವರಿಗೆ ಗುಂಡು ಹೊಡೆಯಲು ಅವಕಾಶ ದೊರೆಯಲೆ ಇಲ್ಲ. ಅಂತೂ ಹಾವೂ ನಾವೂ ನಾಯಿಗಳೂ ಎಲ್ಲರೂ ಗಂಡಾಂತರದಿಂದ ಪಾರಾದೆವು. ನಮ್ಮ ದೊಂಬಿಯ ಸದ್ದು ನಮ್ಮ ಮನೆಯವರೆಗೂ ಕೇಳಿಸಿತ್ತು. ಮೂರ್ತಿ, ವೆಂ – , ಗೋಪಾಲ ಎಲ್ಲರೂ ನಾವೇನೋ ಮಹಾಕಾರ್ಯಸಾಧನೆಯನ್ನೇ ಮಾಡಿರಬೇಕೆಂದು ಊಹಿಸಿ ನಮ್ಮ ಆಗಮನವನ್ನೆ ಕಾಯುತ್ತಿದ್ದರು.

ಬೇಟೆಯನ್ನು ನಿಲ್ಲಿಸಿ ಮನೆಯ ಕಡೆಗೆ ಹೊರಟೆವು. ಆಗಲೆ ಎಳಬಿಸಿಲು ಬೆಳೆಬಿಸಿಲಾಗಿತ್ತು. ಹಿ – ನಾನೂ ಇಬ್ಬರೂ ನಡೆದ ವಿಚಾರವನ್ನೆ ಕುರಿತು ಮಾತಾಡುತ್ತ. ನಗುತ್ತ ನಡೆದೆವು. ದಾರಿಯಲ್ಲಿ ಒಂದು ಒಳಸಂಚು ಮಾಡಿದೆವು. ಏನೆಂದರೆ – ಮನೆಯಲ್ಲಿ ಎಲ್ಲರೂ ನಾಯಿಗಳು ಬೊಬ್ಬೆ, ನಮ್ಮ ಅರ್ಭಟ ಗುಂಡಿನ ಸದ್ದು ಎಲ್ಲವನ್ನೂ ಆಲಿಸಿ, ನಾವು ಹಂದಿಯನ್ನೊ ಹುಲಿಯನ್ನೂ ಸಂಧಿಸಿದೆವೆಂದು ತಿಳಿದಿರಬಹುದು. ನಾವು ಕೂಡ ಅವರ ಊಹೆಯನ್ನೇ ಸಮರ್ಥಿಸಿ ಮೊದಲು ಸುಳ್ಳು ಹೇಳಿ, ಕಡೆಗೆ ಗುಟ್ಟನ್ನು ಬಯಲುಮಾಡಿ ನಗಬೇಕೆಂದು ನಿರ್ಣಯಿಸಿದೆವು. ಅದಕ್ಕೆ ಬೇಕಾದ ಮುನ್ನುಡಿ ಸಂಭಾಷಣೆಗಳನ್ನು ತಯಾರು ಮಾಡಿಕೊಂಡೆವು.

ಮನೆಗೆ ಹತ್ತಿರ ಹತ್ತಿರ ಹೋದಾಗ ಹಂದಿಯನ್ನು ಕಂಡಿದ್ದರೆ ಹೇಗೆ ಮಾತಾಡುತ್ತಿದ್ದೆವೊ ಹಾಗೆಯೆ ಸಂಭಾಷಣೆಮಾಡತೊಡಗಿದೆವು. ಅದೂ ಬಾಗಿಲಲ್ಲಿ ಕಾಯುತ್ತಿದ್ದ ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಮಾತಾಡಿದೆವು.

ನಾನು: – ನಾನೇನು ಮಾಡಲಿ? ಗುಂಡು ಹಾರಿಸುವುದರಲ್ಲಿಯೆ ಹಂದಿ ಹಾರಿ ಬಿಟ್ಟಿತು! ಹಾಳು ನಾಯಿ – ಆ ರೋಜಿ ಇಷ್ಟೆಲ್ಲ ಅನಾಹುತಕ್ಕೆ ಕಾರಣ!

ಹಿ: – ಸಾಕು, ಸಾಕು. ಸುಮ್ಮನಿರಿ. ಕೈಯಲ್ಲಾಗದೆ ತಪ್ಪಿ ಹೊಡೆದು ಈಗ ರೋಜಿಯ ಮೇಲೆ ತಪ್ಪುಹೊರಿಸಿ! ನೀವೇನು ಈಡುಗಾರರೋ ನಾನು ಬೇರೆ ಕಾಣೆ. ಅಷ್ಟು ಹತ್ತಿರವಿದ್ದ ದೆವ್ವದಂಥ ಹಂದಿಯನ್ನು ಯಾರಾದರೂ ಗುರಿ ತಪ್ಪಿ ಹೊಡೆಯುವರೇ? ಕುರುಡ ಕೂಡ ಹೊಡೆಯಬಹುದಾಗಿತ್ತು.

ನಾನು: – ಮಹಾ, ನೀವೊಬ್ಬರೇ ಈಡುಗಾರರು! ಅದೇನು ಕಣ್ಣು ಕೆರಳಿಸಿಕೊಂಡು, ಬೆನ್ನು ಕೂದಲು ನೆಟ್ಟಗೆ ಮಾಡಿಕೊಂಡು, ಮೃತ್ಯು ನಿಂತಹಾಗೆ ನಿಂತಿದೆ! ನಾನೇನು ನುಗ್ಗಿ ಹೋಗಿ ಸಾಯಬೇಕಿತ್ತೇನು? ಹಂದಿ ಹೋದರೆ ಹೋಯಿತು. ಕಾಡಿನ ಜೀವಿ ಕಾಡಿಗಾಯಿತು!

ಇಷ್ಟರಲ್ಲಿ ಮೂರ್ತಿ ಹತ್ತಿ ಓಡಿ ಬಂದು “ಏನಾಯ್ತು?” ಎಂದು ಬಹಳ ಕುತೂಹಲದಿಂದ ಕೇಳಿದರು. ವೆಂ – ದೂರದಿಂದಲೆ “ಓಹೋಹೋ! ಏನು ಬರಿಯ ಬಾಯಿಬೊಬ್ಬೆಬೋ? ಏನಾದರೂ ಕೆಲಸವಾಯಿತೋ?” ಎಂದನು.

ಹಿ – ಬಹಳ ರೇಗಿದಂತೆ ನಟಿಸಿ “ಇಂತಹವರ ಕೂಡ ಬೇಟೆಗೆ ಹೋಗಬಾರದು. ಸತ್ತ ಹಂದಿಗೂ ಕೂಡ ಹೊಡೆಯಲಾರದ ಜನರು!” ಎಂದು ಹುಬ್ಬುಗಂಟು ಹಾಕಿಕೊಂಡರು.

ಮೂರ್ತಿ – ಏನ್ರೀ ಅದು? ಸ್ವಲ್ಪ ಹೇಳ್ರೀ.

ನಾನು – ಯಾಕಪ್ಪಾ ಈ ಗಲಾಟೆ! ನಾನೇ ಹೇಳಿಬಿಡುತ್ತೇನೆ. ಹಂದಿ ಕಂಡೆ. ಈಡು ಹೊಡೆದೆ. ತಪ್ಪಿಹೋಯಿತು.

ವೆಂ – “ಥೂ ನಿನ್ನ!”ಎಂದು ಕೈಚಪ್ಪಾಳೆ ಹೊಡೆದು ನಕ್ಕನು.

ಹಿ – ಇದಕ್ಕಿದ್ದ ಹಾಗೆ ಬಹಳ ಗಂಭೀರವಾಗಿ “ಇಲ್ಲಪ್ಪಾ ಹಂದಿ ಬಿತ್ತು. ತಮಾಷೆ ಮಾಡೋಣ ಎಂದು ಹಾಗೆ ಹೇಳಿದೆವು” ಎಂದರು. ಎಲ್ಲರೂ ಬಹಳ ಗಂಭೀರವಾದರು. ಹಾಸ್ಯಮಾಡುತ್ತಿದ್ದ ವೆಂ – “ಎಲ್ಲಿ? ನೋಡೋಣ ಬನ್ನಿ!” ಎಂದು ಹೇಳುತ್ತ ಬಹಳ ಹಾಸ್ಯಮಾಡುತ್ತಿದ್ದ ವೆಂ – “ಎಲ್ಲಿ? ನೋಡೋಣ ಬನ್ನಿ!” ಎಂದು ಹೇಳುತ್ತ ಬಹಳ ಉತ್ಸಾಹದಿಂದ ಹೊರಡಲನುವಾದನು. ಮೂರ್ತಿಗೆ ಬಹಳ ಆನಂದವಾಯಿತು.

ನಾನು :- ನಿಮಗೇನು ಹುಚ್ಚೇನ್ರಿ! ಹಂದಿ ಎಂದೊ ಮನೆಗೆ ಹೋಯಿತು! ಗುರಿ ತಪ್ಪಿ ಹೋಯಿತು. ಅವರು ನಿಮ್ಮನ್ನು ಲೇವಡಿ ಮಾಡುತ್ತಿದ್ದಾರೆ.

ಪಾಪ, ಅವರೆಲ್ಲ ಕಂಗಾಲಾಗಿ ಹೋದರು. ನಿಜಾಂಶ ಹಂದಿ ಬಿದ್ದಿದ್ದರಲ್ಲಿ ಇಲ್ಲವೆ ಹೋಗಿದ್ದರಲ್ಲಿ, ಇವೆರಡರಲ್ಲಿಯೇ ಇರಬೇಕೆಂದು ನಿರ್ಧರಿಸಿದರು. ಅಂತೂ ಸ್ವಲ್ಪ ಹೊತ್ತು ಹಾಗೆ ಹೀಗೆ ಆಟ ಆಡಿಸಿ, ಹೊಡೆದಿದ್ದೇನೊ ಹಂದಿಯೆ ಹೌದು. ಆದರೆ ಗುರಿತಪ್ಪಿಹೋಯಿತು ಎಂಬುದನ್ನೆ ಕೇವಲ ಸತ್ಯವನ್ನಾಗಿ ಅವರು ತಿಳಿಯುವಂತೆ ಮಾಡಿಬಿಟ್ಟೆವು. ಎಲ್ಲರೂ ನನ್ನನ್ನು ಹಂಗಿಸಿದರು. ಮೂರ್ತಿ “ಏನ್ರೀ, ಮೈಸೂರಿನಲ್ಲಿ ನನ್ನೊಡನೆ ‘ನಾನು ದೊಡ್ಡ ಬೇಟೆಗಾರ, ಬಹಳ ದೊಡ್ಡ  ಗುರಿಗಾರ’ ಎಂದು ಕೊಚ್ಚಿಕೊಳ್ಳುತ್ತಿದ್ದಿರಿ!” ಎಂಧು ಬಹಳ ಲೇವಡಿ ಮಾಡಿದರು. ನಾನು ಒಳಗೊಳಗೆ ನಗುತ್ತ ಅವರನ್ನು ಕೆಣಕುತ್ತಿದ್ದೆ. ಸುಳ್ಳಿಗೆ ಸುಳ್ಳು ಹೇರಿ!

ಆ ದಿನ ಮಧ್ಯಾಹ್ನ ಊಟಮಾಡಿದ ಮೇಲೆ ಮರಳಿ ಬೆಳಗಿನ ಕತೆಯನ್ನೆ ಎತ್ತಿದೆವು. ನಾನು ಹಂದಿ ನಿಂತಿದ್ದ ಭಂಗಿ, ರೋಜಿ ಕೂಗಿದ ರೀತಿ, ನಾನು ಹೊಡೆದ ವಿಧಾನ ಎಲ್ಲವನ್ನೂ ಅಭಿನಯಿಸಿ ವರ್ಣಿಸಿ ಕಡೆಗೆ ‘ಗುಂಡು ಹಾರಿಸಿ ನೋಡುತ್ತೇನೆ! ಏನು ನೋಡುವುದು? ಹಂದಿ ಮಾಯವಾಗಿ ಹಾವು ಹೆಡೆಯೆತ್ತಿ ನಿಂತಿತ್ತು!” ಎಂದೆ ಹಿ – ಗಹಗಹಿಸಿ ನಕ್ಕರು. ಮೊದಲು ನಗುತ್ತಿದ್ದವರು ಮುಖ ಭಂಗವಾದಂತಾಗಿ ಮತ್ತೂ ನಕ್ಕರು. ಒಳಸಂಚನ್ನೆಲ್ಲ ಒಡೆದು ಹೇಳಿದೆವು.

ಇಂತು ಪ್ರಾತಃಕಾಲದಲ್ಲಿ ಕಷ್ಟಪಟ್ಟು ತಯಾರು ಮಾಡಿದ ಹಾಸ್ಯದ ಚಟಾಕಿಯಲ್ಲಿ ಊಟ ಮಡಿದ ಮೇಲೆ ಹಾರಿಸಿದೆವು.

* * *