ಶಿರಸಿಯ ಬೆಂಗಳೆ ಊರಿನಲ್ಲಿ ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಶಿಬಿರ ಆಯೋಜಿಸಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದ  ೬೦ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಬರಹಗಾರರು, ಸಂಪನ್ಮೂಲ ವ್ಯಕ್ತಿಗಳಿಗೆ ಇಲ್ಲಿನ ಕೃಷಿಕರ ಮನೆಗಳಲ್ಲಿ ವಾಸದ ವ್ಯವಸ್ಥೆಯಿತ್ತು !. ತರಬೇತಿ ಕೇಂದ್ರ, ಹೊಟೆಲ್‌ಗಳಲ್ಲಿ  ಕಾರ್ಯಕ್ರಮ ನಮಗೆಲ್ಲ ಸರಳ ದಾರಿ. ಎರಡೇ ಎರಡು ದಿನದ ತಯಾರಿಯಲ್ಲಿ ನೂರಾರು ಜನರಿಗೆ ವ್ಯವಸ್ಥೆ ಮಾಡಬಹುದು. ಆದರೆ ಮನೆಗಳಲ್ಲಿ ಕಾರ್ಯಕ್ರಮ ಸುಲಭವಲ್ಲ, ಇಡೀ ಕುಟುಂಬದವರು ಅಪರಿಚಿತರನ್ನು  ಮನೆಯಲ್ಲಿ ಉಳಿಸಿಕೊಳ್ಳಲು ಸಮ್ಮತಿಸಬೇಕು! ಇಲ್ಲಿನ ಸಂಸ್ಕೃತಿ,ಆಚಾರ, ವಿಚಾರ ಅರ್ಥಮಾಡಿಕೊಂಡು ಮನೆವಾಸಕ್ಕೆ ಎಲ್ಲರ ಮನಸ್ಸು ಸಿದ್ದಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತ್ಯೇಕ ಕೊಠಡಿಗಳಲ್ಲಿ ರಾತ್ರಿ ಮಲಗಿ ಅಭ್ಯಾಸವಿರುವವರು  ವಿಶಾಲ ಜಗುಲಿ, ಮಹಡಿಗಳಲ್ಲಿರಬೇಕು. ಪ್ರತಿ ಮನೆಗಳಲ್ಲಿ ೩-೪ ಜನಕ್ಕೆ ವಸತಿ ಕಲ್ಪಿಸಿ ಹೊಸ ನೆಂಟರ ಹಾಗೇ   ಹಳ್ಳಿಗರ ಜತೆ ಒಡನಾಡಿ ಮಾಧ್ಯಮ ಅಧ್ಯಯನ ನಡೆಸುವದು ವಿಶೇಷ ಪ್ರಯತ್ನ. ಅತಿಥಿ ಸತ್ಕಾರಕ್ಕೆ ಹೆಸರಾದ ಉತ್ತರ ಕನ್ನಡದ ಸಮೃದ್ಧ ನೆಲಕ್ಕೆ ಇಂತಹ ಕಾರ್ಯಕ್ರಮಗಳು ಹೊಸತಲ್ಲ. ಊರಿಗೆ ಬಂದ ಅತಿಥಿಗಳ ವ್ಯವಸ್ಥೆಯನ್ನು ಒಂದು ಕುಟುಂಬವಾಗಿ ನಡೆಸಿಕೊಳ್ಳುವ  ಪಾಠ ಪರಿಸರ ಹೇಳಿದೆ.

ಕಾಡಿನ ಊರಲ್ಲಿ ಅಲ್ಲೊಂದು ಇಲ್ಲೊಂದು ಮನೆಗಳು, ಪರಸ್ಪರ ಸಹಕಾರ ಅತ್ಯಗತ್ಯ. ಅಬ್ಬರದ ಮಳೆಯಲ್ಲಿ ಹಳ್ಳ ದಾಟುವಾಗ, ಕೃಷಿ ಉತ್ಪನ್ನ ಸಾಗಿಸುವಾಗ, ಅನಾರೋಗ್ಯದಲ್ಲಿ ಬಳಲುವವರನ್ನು ಮೋಟಾರು ಓಡಾಡುವ ರಸ್ತೆಗೆ ಒಯ್ಯುವಾಗ ಮನೆ ಮನೆಯ ಜಗಳ ಮರೆಯಬೇಕು. ರಸ್ತೆಗೆ ಅಡ್ಡವಾಗಿ ಮರ ಮಲಗಿದಾಗ, ನೆರೆಮನೆಯ ಹಸು ಕಾಲುಮುರಿದು ಕಣಿವೆ ಸೇರಿದಾಗ, ದಾರಿತಪ್ಪಿ ಕಗ್ಗತ್ತಲ ರಾತ್ರಿ ಅಪರಿಚಿತರು ಊರು ಸೇರಿದಾಗ ಹಳೆಯ ದ್ವೇಷ ಲೆಕ್ಕಹಾಕಲು ಯಾರಿಗೂ ಬಿಡುವಿಲ್ಲ. ಕಾಡೊಳಗಿನ ಬದುಕಲ್ಲಿ ಸಂಪರ್ಕ ಸಹಜ ಕೊರತೆ, ಮಾತಾಡಲು ಯಾರಾದರೂ ಒಬ್ಬ ಸಿಕ್ಕರೆ ದೊಡ್ಡ ಸಂತೋಷ . ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ….ಎಂದು ಕವಿ ಗುರುತಿಸಿದ್ದು ಇದನ್ನೇ !

ನಾವು ಚಿಕ್ಕವರಿದ್ದಾಗ ಬಯಲುಸೀಮೆಯಿಂದ ಬರುವ ಅಲೆಮಾರಿಗಳು, ಕೈಯಲ್ಲಿ ದೇವರು ಹಿಡಿದ ಅಮ್ಮನೋರು ತರುವವರು, ಹಗಲು ವೇಷಧಾರಿಗಳು, ಹಕ್ಕಿಕಣಿಯರು, ಹಾವುಗೊಲ್ಲರು, ಗಿಣಿಶಾಸ್ತ್ರದವರು, ಹಗ್ಗ ಮಾರುವ ಕೊರಚರು ಹೀಗೆ ಹಲವು ಮಂದಿ ಬರುತ್ತಿದ್ದರು. ಇವರು ಅಕ್ಕಿ, ಕಾಣಿಕೆ, ವ್ಯಾಪಾರ ಬಳಿಕವೂ ಕೊಂಚ ಹೊತ್ತು ಇದ್ದು ಸುಖದುಃಖ ಮಾತಾಡುತ್ತಿದ್ದರು. ಮನೆಗೆ ಬಂದವರ ಕೆಲಸ ಪೂರೈಸಿ ತಟ್ಟನೆ ಬಾಗಿಲು ಹಾಕುವದು ಜಾಯಮಾನವಲ್ಲ. ಊಟ, ಬೆಲ್ಲ ನೀರು, ಕವಳ ಹೀಗೆ ಅವರು ಕೇಳಿದ್ದು ನೀಡಿ ಒಂದಿಷ್ಟು ಹೊತ್ತು ಜತೆ  ಹರಟಬೇಕು. ಲೋಕದ ರೋಚಕ ವಿಚಾರಗಳನ್ನು ಅವರು ಹೇಳುತ್ತಿದ್ದರು. ಜಾತಿ, ಅಂತಸ್ತುಗಳ ಗೋಡೆಯಿಲ್ಲದೇ ಕೌತುಕದಿಂದ ಅವರ ಸುತ್ತ ಸೇರುತ್ತಿದ್ದೆವು. ಸಂಜೆ ಐದು ಗಂಟೆಗೆ ಒಂಟಿ ಮನೆಗೆ ಬಂದವರು ರಾತ್ರಿ ಉಳಿದು ಮುಂದಿನ ಊರಿಗೆ ಪಯಣ. ಅಪರಿಚಿತರಿಗೆ ಆಶ್ರಯ ನೀಡುವ ಆ ದಿನಗಳಲ್ಲಿ  ನಮಗೆ ರಾತ್ರಿ ವಸತಿಗೆ  ಕಂಬಳಿ, ಚಾದರ ವ್ಯಾಪಾರಿಗಳು ಬಂದರೂ ನೆಂಟರು ಬಂದ ಉಮೇದಿ ಕಾಣುತ್ತಿತ್ತು.

ಈಗ ೩೦ ವರ್ಷದ ಹಿಂದೆ ಮಲೆನಾಡಿನ ಶಾಲಾ ಮಾಸ್ತರರು ಪ್ರತ್ಯೇಕ ಮನೆ ಮಾಡುತ್ತಿರಲಿಲ್ಲ, ಬಾಡಿಗೆ ರೂಮು ಹಿಡಿಯುತ್ತಿರಲಿಲ್ಲ, ಸ್ವಂತ ಅಡುಗೆ ಮಾಡುವ ಪ್ರಮೇಯವಿರಲಿಲ್ಲ. ಪ್ರತಿ ಊರಿನಲ್ಲಿಯೂ  ಶಾಲಾ ಮಾಸ್ತರ್ ಉಳಿಯುವ ಮನೆಗಳಿದ್ದವು! ಮನೆಯ ಎಲ್ಲರ ಜತೆ ಬೆರೆತು  ಊಟ, ಸ್ನಾನ ಪೂರೈಸಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಸರಕಾರಿ ನೌಕರರು ಎಂಬುದಕ್ಕಿಂತ ನಮ್ಮೂರ ಶಾಲಾ ಮಾಸ್ತ್ರರ್ರುಎಂಬ ಪ್ರೀತಿಯಿತ್ತು. ಊಟ ಮಾಡಿದ್ದಕ್ಕೆ, ವಸತಿ ಮಾಡಿದ್ದಕ್ಕೆ ಹಣ ವಸೂಲಿ ಇಲ್ಲ, ಒಂದು ಪ್ರೀತಿ, ವಿಶ್ವಾಸದಲ್ಲಿ ಇದು ಸಾಧ್ಯವಿತ್ತು.  ಇನ್ನು ಮಧ್ಯಾನ್ಹ ಊಟದ ಸಮಯಮೀರಿ ಯಾರಾದರೂ ಅತಿಥಿಗಳು ಬಂದರೆ ಹಿತ್ತಲ ದಾರಿಯಲ್ಲಿ ಪಕ್ಕದಮನೆಯಿಂದ ಅನ್ನ, ಸಾಂಬಾರ ತಂದು ತಕ್ಷಣಕ್ಕೆ ಊಟ ಬಡಿಸುವ ಮಹಿಳೆಯರ ಸಹಬಾಳ್ವೆ ಈಗಲೂ ಕಾಣಬಹುದು. ಒಟ್ಟಿನಲ್ಲಿ ಮನೆಗೆ ಬಂದವರು ಮಾತಾಡಬೇಕು, ಊಟ ಮಾಡಬೇಕುಎಂಬ ಆಸೆ.

ಈಗ ಕಾಲ ಬದಲಾಗಿದೆ. ಊರಿಗೆ ರಸ್ತೆ ಸಾರಿಗೆ ವ್ಯವಸ್ಥೆಗಳಾಗಿವೆ, ಕೃಷಿ ಉತ್ಪನ್ನ ಮಾರುಕಟ್ಟೆ ವಿಸ್ತರಿಸಿದೆ. ಅವಿಭಕ್ತ ಕುಟುಂಬಗಳು ಒಡೆದು ನಿಧಾನಕ್ಕೆ ಮಲೆನಾಡ ಸಂಸ್ಕೃತಿ ಚಹರೆ ಬದಲಾಗುತ್ತಿದೆ. ಕೊಲೆ, ದರೋಡೆ, ಸುಲಿಗೆಗಳು ಅನುಮಾನದ ಬೀಜ ಬಿತ್ತಿವೆ. ಕಣ್ಮುಚ್ಚಿ ಸತ್ಕರಿಸುತ್ತಿದ್ದವರ ಎದೆಯಲ್ಲಿ ಭಯ ಉದಯಿಸಿದೆ. ಕೃಷಿ ಕೆಲಸದ ಒತ್ತಡಗಳ ಮಧ್ಯೆ ಮನೆಗೆ ಬಂದವರ ಜತೆ ತಾಸುಗಟ್ಟಲೆ ಮಾತಾಡುವ ಬಿಡುವು ಯಾರಿಗೂ ಇಲ್ಲ. ಹಬ್ಬ ವಿಶೇಷ ದಿನ ಬಿಟ್ಟು ಊಟಕ್ಕೆ ಅತಿಥಿಗಳು ಬರುವದು ಅಪರೂಪ ಎಂಬ ಸ್ಥಿತಿ ತಲುಪಿದೆ. ಒತ್ತಡಗಳಲ್ಲಿ  ಓಡುವ ನಮಗೆ ಈಗ ಮಾತಾಡಲು, ಹರಟಲು, ಖುಷಿ ಹಂಚಿಕೊಳ್ಳಲು ಸಮಯವಿಲ್ಲ! ಮಾತುಕತೆಗಳ ಮಧ್ಯೆ ವ್ಯವಹಾರ ಇಣುಕಿದೆ. ನಾವು-ನಮ್ಮ ಕೃಷಿ ಬದುಕುಇಷ್ಟೇ ಪ್ರಪಂಚದಲ್ಲಿ ಅನೇಕ ಕುಟುಂಬಗಳು ಮುಳುಗಿವೆ. ಒಂದಾನೊಂದು ಕಾಲಕ್ಕೆ ಬಾಗಿಲಿಲ್ಲದ ಮನೆಗಳಿದ್ದವು, ಕೋಟೆಯಿಲ್ಲದ ಕೇರಿಗಳಿದ್ದವು. ಈಗ ಮನೆ ಮನೆಯ ನಡುವೆ ಗೋಡೆಗಳೆದ್ದಿವೆ. ಇಂತಹ ಹೊತ್ತಿನಲ್ಲಿ ಮಾಧ್ಯಮ ಸಹಬಾಳ್ವೆಯ ಸಾಧ್ಯತೆ ತೋರಿಸಿದ ಹಳ್ಳಿ ಹಾದಿ ಹುಡುಕಬೇಕಿದೆ.