ಉರಿಚಮ್ಮಾವುಗೆ ಸುಡುಮದ್ದು

ಶ್ರವಣದೊರೆ ಸಂಹಾರದ ಪ್ರಸಂಗ ಮಾದಯ್ಯನ ಕಾವ್ಯ ಮತ್ತು ಪರಂಪರೆಯಲ್ಲಿ ಒಂದು ಪ್ರಮುಖ ಘಟನೆ. ಮಾದಯ್ಯ ದೇವಲೋಕದಿಂದ ಭುವಿಗೆ ಅವತರಿಸುವುದೇ ಇದಕ್ಕಾಗಿ. ಶ್ರವಣ ಮತ್ತು ಈ ಪ್ರಸಂಗ ಮಾದಯ್ಯ ಎದುರುಗೊಂಡ ಚಾರಿತ್ರಿಕ ವ್ಯಕ್ತಿಯನ್ನೊ, ರಾಜನನ್ನೋ ಅಥವಾ ಆ ಕಾಲದಲ್ಲಿ ಆ ಭಾಗದಲ್ಲಿ ಪ್ರಚಲಿತದಲ್ಲಿದ್ದ ಒಂದು ಧರ್ಮವನ್ನೋ ಇದು ಸೂಚಿಸುತ್ತಿದೆ. ಇದು ಆ ಕಾಲದಲ್ಲಿ ನಡೆದಿರಬಹುದಾದ ಘಟನೆ ಮತ್ತು ವ್ಯಕ್ತಿಗೆ ಸಂಬಂಧಿಸಿದ್ದು ಚರಿತ್ರೆ, ಐತಿಹ್ಯ, ಪುರಾಣಗಳೆಲ್ಲ ಇಲ್ಲಿ ಮಿಶ್ರಣವಾಗಿದೆ. ಶ್ರವಣಜೈನಧರ್ಮವನ್ನೋ ಜೈನ ರಾಜನನ್ನೋ ಅಥವಾ ಗುರುವನ್ನೋ ಪ್ರತಿನಿಧಿಸುತ್ತಿದ್ದಾನೆ. ಅವನು ದೇವಾನು ದೇವತೆಗಳನ್ನು ಬಿಡುಗಡೆ ಮಾಡಿ ತಾನೇ ದೈವವಾಗುತ್ತಾನೆ. ಇದು ಚಾರಿತ್ರಿಕವಾಗಿ ವಿಜಯನಗರ ಸಾಮ್ರಾಜ್ಯ ಅವನತಿ ನಂತರದ ಕಾಲಘಟ್ಟದಲ್ಲಿ ನಡೆದಿರಬಹುದಾದ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸಂಘರ್ಷ ಆಗಿರಬಹುದು? ಎಲ್ಲಾ ದೇವತೆಗಳನ್ನು ಸರೆಯಲ್ಲಿಡುವುದು ಇಲ್ಲಿ ಸಾಂಕೇತಿಕವಾಗಿದೆ. ಹಾಗೆ ಜೈನನೊ ಇನ್ನಾವುದೊ ಪ್ರಬಲ ರಾಜ ಮುಖಂಡ ಆ ಭಾಗದಲ್ಲಿ ಸಾಧಿಸಿದ್ದಿರಬಹುದಾದ ಹಿಡಿತವೂ ಇಲ್ಲಿ ಅಂತರ್ಗತವಾಗಿರಬಹುದು?ಇಂತಹ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಶಕ್ತಿ ವ್ಯಕ್ತಿಗಳ ನಡುವಿನ ಸಂಘರ್ಷ ಶ್ರವಣ ಸಂಹಾರದ ಕತೆಯಾಗಿದೆ.

ಮಾದಯ್ಯ ಆದಿಮ ದ್ರಾವಿಡ ಶೈವ ಸಂಸ್ಕೃತಿಯ ಪ್ರತಿನಿಧಿಯಾಗಿ ಈ ಪ್ರಸಂಗದಲ್ಲಿ ಶ್ರವಣನ ಜೊತೆ ಮುಖಾಮುಖಿಯಾಗುತ್ತಾನೆ. ಶ್ರವಣ ಸಾಧಿಸಿದ್ದು ಧಾರ್ಮಿಕ ಸಾಂಸ್ಕೃತಿಕ ಪ್ರಾಬಲ್ಯವನ್ನು ಮುರಿಯಲು ಮಾದಯ್ಯ ತನ್ನ ಕುಲಕಸುಬಿನ ಉತ್ಪಾದನೆಯಾದ ಚರ್ಮವನ್ನೇ ಅಸ್ತ್ರವನ್ನಾಗಿ ಬಳಸುತ್ತಾನೆ. ಚರ್ಮದ ಆಭರಣ ಶೈವ -ನಾಥ ಸಿದ್ಧರು ಧರಿಸುತ್ತಿದ್ದ ಬಿರುದುಗಳಲ್ಲೊಂದಾಗಿದ್ದು ಅಂತಹ ಮಾದಯ್ಯ ಉರಿಚಮ್ಮಾವುಗೆ ಮೂಲಕ ಶ್ರವಣನನ್ನು ಸಂಹರಿಸುವುದು ಒಂದು ರೂಪಕವಾಗಿದೆ. ಇಲ್ಲಿ ತನ್ನದೇ ಪಾರಂಪರಿಕ, ತಾತ್ವಿಕ ನೆಲೆಯಿಂದಲೂ, ಶೈವ ಸಿದ್ದಿಯಿಂದಲೂ ತನ್ನ ಸಮಕಾಲೀನ ಪಂಥಗಳ ವಿರುದ್ಧ ಮಾದಯ್ಯ ಮೇಲುಗೈ ಸಾಧಿಸುತ್ತಾನೆ. ಆ ಮೂಲಕ ಜನರನ್ನು ಪ್ರಭಾವಿಸಿ ಒಕ್ಕಲು ಪಡೆದು ನಡುಮಲೆಯಲ್ಲಿ ನೆಲೆಸುತ್ತಾನೆ. ಮಾದಯ್ಯ ಚಮ್ಮಾವುಗೆಗಳ ಮಾಡಿಸಿ ತರಲು ಹರಳಯ್ಯನ ಬಳಿಗೇ ಹೋಗುವುದು, ಅದಕ್ಕಾಗಿ ಮಾದಯ್ಯ ಹರಳಯ್ಯನಿಗೆ ಒಂದು ಪೂಜೆ ನೇಮಿಸಿ ಕುರುಬನಕಟ್ಟೆಯಲ್ಲಿ ನೆಲೆಗೊಳ್ಳುವಂತೆ ಹೇಳುವುದು ಗಮನಾಗರ್ಹ.

“ಮಾದೇಶ್ವರ ಶ್ರವಣನನ್ನು ಸಂಹರಿಸಿ ‘ಶ್ರವಣನ ಬೆಟ್ಟ’ ಕೊಯಮತ್ತೂರು ಜಿಲ್ಲೆಯ ಸತ್ಯಮಂಗಲಂ ರಸ್ತೆಯಲ್ಲಿ ಗೋಪಿ ತಾಲ್ಲೂಕಿನ ಗೇರ್ಮಾಳದ ಬಳಿ ಇದೆ. ಇಲ್ಲಿ ಶ್ರವಣಚಮ್ಮಾಳಿಗೆ ಮೆಟ್ಟಲು ಹೋಗಿ ಕಾಲು ಜಾರಿದ ಹೆಜ್ಜೆ ಗುರುತುಗಳು ಬಂಡೆಯ ಮೇಲಿವೆ.” ಎಂಬುದಾಗಿ ಸ್ಥಳ ಪುರಾಣವಿದೆ. ಮಲೆಮಾದಯ್ಯನ ಬೆಟ್ಟ ಸಾಲಿನ ಸಮೀಪವೆ ಪೂರ್ವಘಟ್ಟದಲ್ಲೇ ಬಿಳಿಗಿರಿ ರಂಗನ ಬೆಟ್ಟವಿದೆ. ಇದು ಮೂಲದಲ್ಲಿ ನಾಥವೊ, ಜೈನ ಬೌದ್ಧವೊ ಆಗಿದ್ದಿರಬೇಕು. ಹೊಯ್ಸಳ ರಾಜ ವಿಷ್ಣುವರ್ಧನನ (೧೧೦೮-೧೧೫೨) ಕಾಲಕ್ಕೆ ತಮಿಳುನಾಡಿನಿಂದ ನೀಲಗಿರಿಬೆಟ್ಟ ಸಾಲುಗಳ ಮೂಲಕ ಬಿಳಿಗಿರಿ ರಂಗನಾಥ ಕ್ಷೇತ್ರವನ್ನು ಹಾದು ಕನ್ನಡ ನಾಡಿಗೆ ಬರುವ ರಾಮಾನುಜಾಚಾರ್ಯರು(೧೦೧೭-೧೧೩೭) ಬಿಳಿಗಿರಿ ಕೇಂದ್ರವನ್ನು ವೈಷ್ಣವೀಕರಿಸಿದರು ಎಂಬುದು ಚರಿತ್ರೆ. ಶ್ರವಣನ ವಿರುದ್ಧ ಮಾದಯ್ಯನು ಮೇಲುಗೈ ಸಾಧಿಸುವುದೂ ಕೂಡ ಆ ಪ್ರಾಂತ್ಯವನ್ನು ಶೈವೀಕರಿಸಿದಂತೆ. ಆ ಬಿಳಿಗಿರಿರಂಗನಾಥನಿಗೆ ಇಂದಿಗೂ ಒಂದು ವಿಶಿಷ್ಟ ಆಚರಣೆ ನಡೆಸುವ ಪದ್ಧತಿ ಇದೆ. ದೊಡ್ಡ ಆಕಾರದ ಚರ್ಮದ ಚಪ್ಪಲಿಗಳನ್ನು ರಂಗನಾಥನಿಗೆ ಮಾಡಿಕೊಡುವುದು, ಅವುಗಳಿಂದ ಜನರು ತಲೆಯ ಮೇಲೆ ಹೊಡೆಸಿಕೊಳ್ಳುವುದು ಆ ಕ್ಷೇತ್ರದಲ್ಲಿ ಪದ್ಧತಿಯಾಗಿದೆ. ಈ ಚಪ್ಪಲಿಗಳನ್ನು ಬಿಳಿಗಿರಿ ಬೆಟ್ಟ ಸಾಲಿನ ತಪ್ಪಲಲ್ಲೇ ಬರುವ ಯಳಂದೂರು ತಾ. ಮದ್ದೂರು ಸಮೀಪದ ಬೂದಿತಿಟ್ಟು ಗ್ರಾಮದ ಮಾದಿಗ ಸಮುದಾಯದ ಜವರಯ್ಯನ ಲಿಂಗಯ್ಯನ ಮನೆಯವರು ಮಾಡಿಕೊಡುತ್ತಾರೆ. ಬಿಳಿಗಿರಿ ರಂಗನಾಥನಿಗೆ ಅರ್ಪಿತವಾಗುತ್ತಿರುವ ಈ ಚಮ್ಮಾವುಗೆಗಳು ಒಂದು ವೇಳೆ ಮಾದಯ್ಯ ಶ್ರವಣ ಸಂಹಾರಕ್ಕೆ ಮಾಡಿಸಿ ತಂದ ಚಪ್ಪಲಿಗಳ ಅವಶೇಷರೂಪದ ಆಚರಣೆ ಇರಬಹುದೇ? ಎಂಬುದು ಕುತೂಹಲಕಾರಿಯಾಗಿದ್ದು ಹೆಚ್ಚಿನ ಸಂಶೋಧನೆಗೆ ಪ್ರೇರೇಪಿಸುತ್ತದೆ.

ಶಾಕ್ತ ಶೈವ ಸಂಘರ್ಷ

ಮಾದಯ್ಯ ಬಡಗು ಸೀಮೆಯಿಂದ ಕತ್ತಲ ರಾಜ್ಯಕ್ಕೆ ಪ್ರವೇಶಿಸುತ್ತಾನೆ. ಎಪ್ಪತ್ತೇಳು ಮಲೆಗಳ ಈ ಪ್ರಮಾಣದುದ್ದಕ್ಕು ಅವನು ಕೆಲವು ಪ್ರಮುಖ ಎನ್ನುವ ‘ಮಾತೃಪ್ರಧಾನರ’ ಜೊತೆ ಸಂಘರ್ಷ ನಡೆಸುತ್ತಾನೆ. ಅವರೆ ಇಕ್ಕೇರಿ ದೇವಮ್ಮ, ಬೇವಿನಹಟ್ಟಿ ಕಾಳಮ್ಮ, ಮೂಕಳ್ಳಿ ಮಾರಮ್ಮ. ಆಶ್ಚರ್ಯ ವೆಂದರೆ ಈ ಹೆಂಗಸರು ಸೋಲಿಗರ ಸಂಕಮ್ಮನ ಹಾಗಲ್ಲ. ಇವರು ಮಾದಯ್ಯನಿಗೆ ಯಾವುದಕ್ಕೂ ಬಗ್ಗದೆ ಅವನ ಕೋರಿಕೆಗಳನ್ನೆಲ್ಲಾ ತಿರಸ್ಕರಿಸುತ್ತಾರೆ. ಅಷ್ಟೇ ಅಲ್ಲ ಆತನನ್ನು ಕೊಲ್ಲುವ ಸಂಚು ಮಾಡುತ್ತಾರೆ. ಏಳುಮಲೆ ರಾಜ್ಯದ ಇಂತಹ ಮಾತೃ ಪ್ರಧಾನರಲ್ಲಿ ಇಕ್ಕೇರಿ ದೇವಮ್ಮ ಒಬ್ಬಳು. ಈಕೆ ತಂಬಾ ಜಿಗುಟು ಹೆಂಗಸು. ಹಣಕಾಸು, ಸಿರಿಸಂಪತ್ತನ್ನು ಕಿಂಚಿತ್ತು ಲಯ ಮಾಡಲೊಲ್ಲದ ಸ್ವಭಾವದವಳು. ದಾಸಯ್ಯ, ಜೋಗಯ್ಯ, ಬಿಕ್ಷುಕರನ್ನು ಕಂಡರೆ ಆಗದವಳು. ಅಂತವರಿಗೆ ವಿಷವಿಕ್ಕಿ ಕೊಲ್ಲುವ ಸ್ವಭಾವದವಳು. ಇಂತಹ ಹೆಂಗಸನ್ನು ಮಣಿಸಲು ಮಾದಯ್ಯ ತನ್ನ ಗೆಳೆಯರಾದ ಬಿಳಿಗಿರಿ ರಂಗಯ್ಯ, ಮುಡುಕು ತೊರೆ ಮಲ್ಲಯ್ಯರನ್ನು ಜತೆ ಮಾಡಿಕೊಂಡು ಭಿಕ್ಷೆಕ್ಕೆ ಹೋಗುತ್ತಾನೆ. ದೇವಮ್ಮ ಬಂದವರಿಗೆ ಊಟ ಹಾಕುವ ನೆಪದಲ್ಲಿ ವಿಷವಿಕ್ಕಿ ಕೊಂದು ಅವರ ಒಡವೆಗಳ ದೋಚಿ ಹಿತ್ತಲಲ್ಲಿ ಹೂಳುವ ಯೋಜನೆ ಹಾಕುತ್ತಾಳೆ. ವಿಷ ಉಂಡರು ಬದುಕುವ ಮಾದಯ್ಯ ಅವಳನ್ನೇ ನಾಶ ಮಾಡುತ್ತಾನೆ.

ಬೇವಿನಹಟ್ಟಿ ಕಾಳಮ್ಮನೂ ಇದೇ ಸ್ವಭಾವದವಳು. ಮಾದಯ್ಯ ತನ್ನ ಎಣ್ಣೆ ಮಜ್ಜನಕ್ಕೆ ಬೇಕಾದ ಎಳ್ಳುಭಿಕ್ಷೆಗಾಗಿ ಕಾಳಮ್ಮನ ಮನೆಗೆ ಬರುತ್ತಾನೆ. ಕಾಳಮ್ಮ ನಿನ್ನ ಹೆಂಡತಿ ಮಕ್ಕಳಿಗೆಲ್ಲಾ ಉತ್ತು ಬಿತ್ತು ಬೆವರು ಸುರಿಸಿ ಬೆಳೆದು ಸಾಕಾಗಿದೆ. ಅದಕ್ಕೆ ನಿನಗೆ ಎಳ್ಳುದಾನ ಕೊಡಲ? ಎಂದು ಪ್ರಶ್ನಿಸುತ್ತಾಳೆ. ಸಾಧು, ಸಂತರು ಸನ್ಯಾಸಿಗಳು ಅಂತ ಬರುವ ಕಳ್ಳಮಂಡೆ ಮಕ್ಕಳಿಗೆ ಭಿಕ್ಷೆನೇ ಕೊಡಬೇಡಿ ಎಂದು ಕಾಳಮ್ಮ ಸೊಸೆಯರಿಗೂ ತಾಕೀತು ಮಾಡಿರುತ್ತಾಳೆ. ಏನೇ ಆದರೂ ಕಾಳಮ್ಮ ಮಾದಯ್ಯನಿಗೆ ಭಿಕ್ಷೆ ಕೊಡುವುದಿಲ್ಲ. ಆಗ ಮಾದಯ್ಯ ಕೋಪಗೊಂಡು ಕಾಳಮ್ಮನ ಆಸ್ತಿ ಮನೆ ಮಠಗಳನ್ನೆಲ್ಲಾ ಧೂಳಿಪಟ ಮಾಡ್ತಾನೆ. ಅವಳು ನೆಲೆನಿಂತಿದ್ದ ತಾಣ ಮಾದಯ್ಯನ ಪರಿಶೆ ನಡೆದುಹೋಗುವ ಹಾದಿಯಾಗುತ್ತದೆ.

ಮೂಕಳ್ಳಿಮಾರಿ ಕುಂತೂರುಮಠ ಬಿಟ್ಟು ಬಂದುಬಿಡುವ ಮಾದಯ್ಯನನ್ನು ಹಿಂದಕ್ಕೆ ಕರೆದಯ್ಯಲು ಬರುವ ಹೆಂಗಸು. ಆದರೆ ಮಾದಯ್ಯ ಹಿಂದಕ್ಕೆ ಹೋಗಲು ಒಪ್ಪುವುದಿಲ್ಲ. ಆಗ ಮಾರಮ್ಮ ಅವನನ್ನು ತಬ್ಬಿ ಎತ್ತಿ ಹೊತ್ತುಕೊಂಡಾದರೂ ಹೋಗಲು ಯತ್ನಿಸುತ್ತಾಳೆ. ಆಗ ಮಾದಯ್ಯ ಅವಳು ತಬ್ಬಲಾಗದಷ್ಟು ದಪ್ಪವಾಗುತ್ತಾ ಹೋಗುತ್ತಾನೆ. ಆಗ ಮಾರಮ್ಮ ಓಹೋ ಮಾ-ದಪ್ಪ (ಮಹಾದಪ್ಪ) ಎಂದು ಬೆಟ್ಟುಬಿಡುತ್ತಾಳೆ. ಅವಳು ಕರೆದದ್ದೇ ಅವನಿಗೆ ಮಾದಪ್ಪ, ಮಾದಯ್ಯ ಅಂತ ಹೆಸರಾಯಿತು.

ಮಾರಮ್ಮರ ಜತೆಗಿನ ಮಾದಯ್ಯನ ಈ ಪ್ರಸಂಗಗಳು ಸಾಂಸ್ಕೃತಿಕ ಸಂಘರ್ಷದ ಚರಿತ್ರೆಯಾಗಿದೆ. ದೇವಮ್ಮ, ಕಾಳಮ್ಮ, ಮಾರಮ್ಮ ಮೂಲ ದ್ರಾವಿಡ ಸಂಸ್ಕೃತಿಯ ಮಾತೃ ದೇವತಾ ಪ್ರತಿನಿಧಿಗಳಾಗಿದ್ದಾರೆ. ೧೫–೧೬ ನೇ ಶತಮಾನದ ಸಂದರ್ಭದಲ್ಲೂ ಮಾತೃದೇವತಾ ಆರಾಧನೆ ಅಥವಾ ಗ್ರಾಮ ದೇವತಾ ಸಂಸ್ಕೃತಿ ಕತ್ತಲ ರಾಜ್ಯದಲ್ಲಿ ದಟ್ಟ ವಾಗಿದ್ದುದನ್ನು ಇದು ಸೂಚಿಸುತ್ತದೆ. ಮಾದಯ್ಯ ತನ್ನ ಶೈವಸಿದ್ಧ ಪಂಥವನ್ನು ಊರ್ಜಿತಗೊಳಿಸಲು ಮೂಲ ಮಾತೃದೇವತಾ ಸಂಸ್ಕೃತಿಯ ಜತೆ ಕೂಡ ಸೆಣೆಸಬೇಕಾಯಿತು ಎಂಬುದನ್ನು ಈ ಪ್ರಸಂಗಗಳು ಹೇಳುತ್ತವೆ. ಮಾದಯ್ಯನ ಸಾಂಸ್ಕೃತಿಕ ಚರಿತ್ರೆ ಮಾತೃದೇವತಾ ಸಂಸ್ಕೃತಿಯ ಆದಿಮ ಅಂಶಗಳಿಂದಲೂ ಕೂಡಿದೆ. ಇದು ಮಾತೃದೇವತಾ ಲಕ್ಷಣಗಳನ್ನು ಧರಿಸಿದ ಶಾಕ್ತ ಮತ್ತು ಶೈವ ಪಂಥಗಳ ನಡುವಿನ ಹೋರಾಟವಾಗಿದೆ.

ಕಾಳಮ್ಮ ಇಡೀ ಕುಟುಂಬದ ಮುಖ್ಯಸ್ಥೆ ಹಾಗೂ ಕೃಷಿ ಚಟುವಟಿಕೆಯ ಮುಖ್ಯಸ್ಥೆ ಕೂಡ. ಗಂಡ ಮತ್ತು ಮಕ್ಕಳು ಇಲ್ಲಿ ಗೌಣ. ಮೂಲತಃ ಕೃಷಿ ಸಂಶೋಧಕಿಯಾದ ಹೆಣ್ಣು ಭೂಮಿ, ಕುಡುಂಬ, ಕೃಷಿ ಎಲ್ಲಕ್ಕೂ ಪ್ರಧಾನಗಳು. ಅದಕ್ಕೆ ಹೆಣ್ಣು ಮಾತೃದೇವತೆಯಾಗಿ ಆರಾಧನೆಗೆ ಒಳಗಾದಳು. ಇಂತಹ ದ್ರಾವಿಡ ಮಾತೃದೇವತಾ ಸಂಸ್ಕೃತಿಯ ಪ್ರತಿನಿಧಿ ಕಾಳಮ್ಮ. ಗಂಡು ಕೃಷಿ ಚಟುವಟಿಕೆಯಿಂದ ಆಚೆ ಇದ್ದು ಸದಾ ಅಲೆಮಾರಿಯಾಗಿದ್ದ. ಆದ್ದರಿಂದಲೇ ಅಂತಹ ಅಲೆಮಾರಿ ಪುರುಷ ಪ್ರತಿನಿಧಿಯಾಗಿ ಕೃಷಿಯ ಫಲಾಫೇಕ್ಷೆಗೆ ಮಾತ್ರ ಬರುವ ಮಾದಯ್ಯನಿಗೆ ಕಾಳಮ್ಮ ಎಳ್ಳು ಭಿಕ್ಷೆ ಕೊಡಲು ನಿರಾಕರಿಸುತ್ತಾಳೆ. ಅಷ್ಟೇ ಅಲ್ಲದೆ, ಇದು ಶಾಕ್ತ- ಮಾತೃ ದೇವತಾಪಂಥ ಪುರುಷ ಶೈವ ಪಂಥದ ವಿರೋಧವನ್ನು ದಾಖಲಿಸುತ್ತದೆ ಎಂಬುದು ಗಮನಾರ್ಹ. ದಾಸಯ್ಯ, ಜೋಗಯ್ಯ, ಸಾಧುಸಂತರು, ಸಂನ್ಯಾಸಿಗಳು ಎಂದರೆ ದೇವಮ್ಮ, ಕಾಳಮ್ಮರಿಗೆ ಆಗುವುದೇ ಇಲ್ಲ. ಅಂತವರು ಕಳ್ಳರು. ಅಂತವರನ್ನು ಕೊಂದು ಹಿತ್ತಲಲ್ಲಿ ಹೂಳುವ ಯೋಜನೆ ಇರುತ್ತದೆ. ಶೈವ, ವೈಷ್ಣವ ನಾಥ ಪಂಥಗಳೆಲ್ಲವನ್ನು ಶಾಕ್ತ ತಿರಸ್ಕರಿಸುವುದರ ಸೂಚನಗಳೇ ಇವು.

ಕಾಳಮ್ಮ ತನ್ನ ಗಂಡನನ್ನು ಹುಲಿಕೊಂದು ತಾನು ಮಂಡೆಯಾದರೂ ಸರಿ, ಉಟ್ಟ ಬಟ್ಟೆಯಲ್ಲ ಸುಟ್ಟು ತಾನು ಹುಟ್ಟು ನಿರ್ವಾಣದಲ್ಲಿ ನಿಂತರೂ ಸರಿ ಭಕ್ಷೆ ಕೊಡಲಾರದವಳು.ಶಾಕ್ತ ಪಂಥ ಅಳಿದು ಬೆತ್ತಲಾದರೂ ಮತ್ತೊಂದು ಸಿದ್ಧಶೈವನಿಗೆ ತಲೆಬಾಗದ ಅಸ್ತಿತ್ವ ಬಿಟ್ಟುಕೊಡದ ಹಠ. ಕಡೆಗೆ ಸಂಘರ್ಷದಲ್ಲಿ ಗೆಲ್ಲುವ ಮಾದಯ್ಯ ಕಾಳಮ್ಮನ ಮನೆಯನ್ನು ಸುಟ್ಟು ಭಸ್ಮ ಮಾಡುತ್ತಾನೆ. ಆ ಪ್ರಾಂತ್ಯದಲ್ಲಿ ತಾನೇ ದೈವವಾಗುವ ಮೂಲಕ ತನ್ನ ಪಂಥ ಸ್ಥಾಪಿಸುತ್ತಾನೆ. ಮೂಕಳ್ಳಿ ಮಾರಮ್ಮ ತಬ್ಬಲಾಗದಷ್ಟು ‘ಮಾದಪ್ಪ’ನಾಗುವುದು ಇದೇ ಅರ್ಥದಲ್ಲಿ ಬಿಳಿಗಿರಿರಂಗನಾಥನ ಗುಡಿಯಲ್ಲಿ ಶಂಕು, ಜಾಗಟೆಗೆ ಜಾಗ ಕೊಟ್ಟಾಗ ಬೆಳಗಾಗುವುದರೊಳಗೆ ಅವು ಭೂಮಿ ಆಕಾಸಕ್ಕೆ ವ್ಯಾಪಿಸಿ ಬೆಳೆದಿರುತ್ತವೆ. ಇದು ನಾಥ ಕೇಂದ್ರ ಒಂದು ವೈಷ್ಣವ ಕೇಂದ್ರವಾದ ಸೂಚನೆಗಳು. ಮುಡುಕು ತೊರೆ ಮಲ್ಲಯ್ಯ, ಬೀಳಿಗಿರಿರಂಗಸ್ವಾಮಿ, ಶ್ರವಣ, ದೇವಮ್ಮ, ಕಾಳಮ್ಮರ ನಡುವೆ ಏಳುಮಲೆ ರಾಜ್ಯದಲ್ಲಿ “ಮಾದಪ್ಪ”, ಮಾದೇವ, ಮಾದೇಶ್ವರನಾಗುವುದು ಆತನ ಬೆಳವಣಿಗೆಯ ಸೂಚನೆಯೇ ಆಗಿದೆ.

ತಲಕಾಡಿನ ವಿ. ಮಾದಯ್ಯ ಕ್ರಿ.ಶ. ೧೯೬೬ ಬರೆದ “ಮಲೆಮಾದೇಶ್ವರ ಚರಿತ್ರೆ” ಎಂಬ ಕೃತಿಯಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳಿವೆ. ಆ ಕೃತಿಯ ಪ್ರಕಾರ ಬೇವಿನ ಕಾಳಿ “ಕಟ್ಟೆಹಳ್ಳ” ಎಂಬ ಊರಿನಲ್ಲಿ ವಿಮಲಬ್ಬೆ ಎಂಬ ಜೈನ ಯುವತಿ. ಶ್ರೀಮಂತಿಕೆಯಿಂದ ಮರೆಯುತ್ತಿದ್ದ ಅವಳು ಗಂಗರಸರ ಆಶ್ರಯದಲ್ಲಿ ನಾಟ್ಯ ಪ್ರವೀಣೆಯಾಗಿದ್ದಾಕೆಯ ಮಗಳು ಇವರಿಗೆ ರಾಜ ಹಲವಾರು ಕಾಣಿಕೆಗಳನ್ನು ಕೊಟ್ಟಿದ್ದ ಎಂಬ ಉಲ್ಲೇಖವಿದೆ.”

ಅದೇ ರೀತಿ ಆ ಕೃತಿಯಲ್ಲಿ ಶ್ರವಣನೆಂಬ ಜೈನ “ಕಂಬದಹಳ್ಳಿ” ಬೆಟ್ಟದಲ್ಲಿ ಕ್ರಿ.ಶ. ೧೧೨೦ ರಲ್ಲಿದ್ದನೆಂದು. ಇಲ್ಲಿ ಉಲ್ಲೇಖಗೊಳ್ಳುವ ಕಟ್ಟೆಹಳ್ಳ ಎಂಬುದು ಜೈನ ಯುವತಿಯ ಊರ ಹೆಸರಾಗಿದ್ದು ಶ್ರವಣ ಇದ್ದನೆಂದು ಹೇಳುವ ಕಂಬದಹಳ್ಳಿ ಬೆಟ್ಟ ಎಂಬ ಬೆಟ್ಟದ ಹೆಸರುಗಳು ಒಂದೇ ಎಂಬುದು ಗಮನಾರ್ಹ. ಈ ಮಾಹಿತಿಗಳು ಮಾದಯ್ಯನಿಗಿಂತ ಮುಂಚೆ ಕತ್ತಲ ರಾಜ್ಯದ ಏಳುಮಲೆಯ ಪ್ರಾಂತ್ಯ ಜೈನ ಧರ್ಮದ ಪ್ರದೇಶವಾಗಿರಬಹುದು ಎಂಬುದನ್ನು ಸೂಚ್ಯವಾಗಿ ಹೇಳುತ್ತವೆ.

ಕ್ರಿ.ಶ. ೧೧೨೦ ರಷ್ಟು ಹಳೆಯದಾದ ಅಥವಾ ಅದಕ್ಕಿಂತಲೂ ಹಿಂದಿನ ಅಥವಾ ಆನಂತರದ ಘಟನೆಗಳೂ ಸಹ ಕಾವ್ಯವಸ್ತುವಾಗಿ ಆದು ಐತಿಹ್ಯವೊ, ಪುರಾಣಗಳೊ ಆಗಿ ಸೇರಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ಹಾಲುಮತದ ನೆಲೆಯ ನರಸಿ

ಮಾದಯ್ಯ ನಡುಮನೆಯಲ್ಲಿ ನೆಲೆನಿಂತ ಮೇಲೆ ತನಗೊಂದು ಗುಡಿ ಕಟ್ಟಿಸಿಕೊಳ್ಳಲು ಆಲಂಬಾಡಿಯ ಜುಂಜೇಗೌಡನನ್ನು ಮೊರೆ ಹೋಗುತ್ತಾನೆ.ಜಂಜೇಗೌಡ ಹಾಲುಮತದವ.ಆಲಂಬಾಡಿಯ ದೊಡ್ಡ ಕುಳ ಮತ್ತು ಸಂಪತ್ತುಗಾರ. ಕಾವ್ಯದಲ್ಲಿ ಈತನ ಊರನ್ನು ಆಲಂಬಾಡಿ ರಾಜ್ಯವೆನ್ನಲಾಗುತ್ತದೆ. ಬಹುಶಃ ಇದು ೧೫-೧೬ನೇ ಶತಮಾನದ ವೇಳೆಗೆ ಏಳು ಮಲೆಗಳ ನಡುವಿನ ಪ್ರಮುಖ ಕುರುಬರ ತಾಣ. ಜುಂಜೇಗೌಡ, ಮಾದಯ್ಯನಿಗೆ ಗುಡಿ ಕಟ್ಟಿಸಿಕೊಡಲು ಮೊದಲಿಗೆ ಒಪ್ಪುವುದಿಲ್ಲ. ಆಗ ಮಾದಯ್ಯ ಅವನಿಗೆ ಕಷ್ಟ ಕೊಟ್ಟು, ಪರೀಕ್ಷೆಗಳನ್ನು ಒಡ್ಡಿ, ತಾನೇ ಪರಿಹರಿಸಿ ಅವನ ಒಲಿಸಿಕೊಂಡು ಒಕ್ಕಲು ಪಡೆದು ಗುಡು ಕಟ್ಟಿಸಿಕೊಳ್ಳುತ್ತಾನೆ. ಇದು ಒಪ್ಪದ ಕುರುಬರ ಬೊಪ್ಪೇಗೌಡನನ್ನು ಒಪ್ಪಿಸಿ ಬೊಪ್ಪಗಣಪುರದಲ್ಲಿ ಮಠಮನೆ ಮಾಡಿಸಿಕೊಳ್ಳುವ ಮಂಟೇಸ್ವಾಮಿ ಕಾವ್ಯದ ಪ್ರಸಂಗದಂತೇ ಇದೆ. ಇದು ಕಾಕತಾಳೀಯವಾದರೂ ನಕಲಲ್ಲ.

ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಒಡೆಯರ ಕಾಲಕ್ಕೆ ಈ ಪ್ರಾಂತ್ಯದಲ್ಲಿ ಹಲುಮತದ ಕುರುಬರು, ಕಂಪಣರು ಪ್ರಾಬಲ್ಯವಿದ್ದ ಸೂಚನೆಗಳಿವು. ಬಹುಪಾಲು ಶೈವಸಿದ್ಧ, ನಾಥಸಿದ್ಧರ ತಂಗುದಾಣಗಳು ಹಾಲುಮತದವರ ನೆಲೆಗಳೇ ಆಗಿದ್ದವು. ಮಂಟೇಸ್ವಾಮಿಗೆ ಮಠಮನೆಯಾಗುವುದು ಕುರುಬರ ಬೊಪ್ಪೇಗೌಡನ ತಾಣ. ಮಂಟೇಸ್ವಾಮಿಗಳ ಗುರು, ಗುರು ಬಾರ ಲಿಂಗಯ್ಯ, ಶಿಶು ಮಕ್ಕಳಾದ ಲಿಂಗಯ್ಯ ಚನ್ನಯ್ಯ ನೆಲೆಯಾದ ಕುರುಬನ ಕಟ್ಟೆ ಕೂಡ ಕುರುಬರ ತಾಣ. ಬಹುತೇಕ ಆದಿಮ ಶೈವ ಸಾಂಸ್ಕೃತಿಕ ನೆಲೆಗಳೆಲ್ಲವೊ ಕುರುಬರ ತಾಣಗಳೇ. ಇವು ಕಾಲಕ್ರಮೇಣ ಅಸ್ಪೃಶ್ಯ ಕುಲಗಳ ಸಿದ್ಧರ ನೆಲೆಗಳಾಗಿವೆ. ಕುರುಬರ ಕುಲದ ರೇವಣ ಸಿದ್ಧ, ಮಾದಿಗರ ಮರುಳಸಿದ್ಧನ ಗುರು ಎಂಬುದನ್ನು ಗಮನಿಸಬೇಲು. ಆಲಂಬಾಡಿ ಹಾಲಸಾಗರ ಎಂಬ ಭಾವಾರ್ಥ ಉಳ್ಳದ್ದಾಗಿದ್ದು ಆಲಂಬಾಡಿ ಬಸಪ್ಪನಿಗೂ ಮಾದಯ್ಯನಿಗೂ ಬಿಡಿಸಲಾಗದ ನಂಟಿದೆ. ಎಂಬ ನಂಬಿಕೆ ಇದೆ.

“ಮಾದೇಶ್ವರ ದೇವಾಲಯದ ಸುಕನಾಸಿ ಬಗಿಲ ಮೇಲಿನ ಶಾಸನ ೧೭ ನೇಶತಮಾನದಲ್ಲಿ ರಚಿತವಾದುದು ಎಂದು ಹೇಳಲಾಗಿದೆ. ಇದರಲ್ಲಿ ಬೆಳಕವಾಡಿ ಹೊನ್ನ ಮಲಗಶೆಟ್ಟರ ಮಗ ಗುರುಬ ಶೆಟ್ಟಿ ಎಂಬಾತ ಯುವ ಸಂವತ್ಸರದ ಪುಷ್ಯ ಮಾಸ ಬಹುಳ ಬಿದಿಗೆಯಲ್ಲಿ ಕಲ್ಲುಗುಡಿಯ ಬಸದಿಯನ್ನು ಕಟ್ಟಿಸಿದ ಎಂಬ ಉಲ್ಲೇಖವಿದೆ. ಇದು೧೭ ನೇ ಶತಮಾನದಲ್ಲೇ ಕಟ್ಟಲ್ಪಟ್ಟ ಜೈನ ಬಸದಿ ಎಂದು ಸಿದ್ಧಿಯಾದರೆ ಆ ವೇಳೆಗೆ ಅದು ಮಾದಯ್ಯನ ಗುಡಿಯಾಗಿರಲಿಲ್ಲ. ಕಾಲ ಕ್ರಮೇಣ ಜೈನಬಸದಿ ಮಾದಯ್ಯನ ಕೇಂದ್ರವಾಗಿ ಪರಿವರ್ತನೆಯಾಗಿರಬೇಕು ಎಂಬ ಅಭಿಪ್ರಾಯವನ್ನು ಒಪ್ಪಬೇಕಾಗುತ್ತದೆ. ಅದರ ಜೊತೆಗೆ ಮಾದಯ್ಯನ ಐಕ್ಯ ಸ್ಥಳ ಇನ್ನಾವುದಿರಬಹುದೆಂಬ ಪ್ರಶ್ನೆ ಹುಟ್ಟುತ್ತದೆ.

“ಸರಗೂರ ಉಪ್ಪಲಿಗರು ಗುಡ್ಡರಾಗಿ ಆವೇಶ ಬಂದು ಏಳುಮಲೆ ಮದ್ಯದಲ್ಲಿ ಪಶ್ಚಿಮಾಭಿಮುಖವಾಗಿ ಗುಡಿ ಕಟ್ಟಿಸಿ ಮಾದನಾದುದರಿಂದ ಮಾದೇಶ್ವರನೆಂದು ಹೆಸರಿಟ್ಟರು. ಈ ಮದೇಶ್ವರನನ್ನು ಅನೇಕ ರೀತಿಯಿಂದ ಪೂಜಿಸುತ್ತಾ ಬಂದು ಜಗತ್ ಪ್ರಸಿದ್ದಿಯಾಯಿತು. ಸರಗೂರ ಗುಡ್ಡನೇ ಅಲ್ಲಿದ್ದು ಜಾತ್ರೆ, ತೇರು, ತಿರುನಾಳಂದು ವರ್ಷಂಪ್ರತಿ ನಡೆಸುತ್ತಾ ಬಂದನು. ಎಂಬುದಾಗಿ ದೇವಚಂದ್ರ ತನ್ನ ರಾಜಾವಳಿ ಕಥಾಸಾರದಲ್ಲಿ ಬರೆಯುತ್ತಾನೆ.

ಮೇಲಿನ ಮಾಹಿತಿಗಳು ಮಾದಯ್ಯನಿಗೆ ಗುಡಿ ಕಟ್ಟಿಸಿದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ತಿಳಿಸುತ್ತವೆ. ಒಂದು ಬೆಳಕವಾಡಿಯ ಗುರುಬಶೆಟ್ಟಿ ಕಟ್ಟಿಸಿದನೆಂದರೆ, ಇನ್ನೊಂದು ಸರಗೂರ ಉಪ್ಪಲಿ ಗರು ಎನ್ನುತ್ತದೆ. ಈ ಉಲ್ಲೇಖಿತ ಬೆಳಕವಾಡಿ- ಸರಗೂರಗಳು ಒಂದೇ ಪರಿಸರದಲ್ಲಿ ಅಕ್ಕಪಕ್ಕ ಬರುವ ಊರುಗಳು ಎಂಬುದನ್ನು ಹಾಗೂ ಗುರಬಶೆಟ್ಟಿ ಮತ್ತು ಸರಗೂರವನು ಇಬ್ಬರೂ ಜಾತಿಯಲ್ಲಿ ಉಪ್ಪಾರ ಜಾತಿಯವರೇ ಎಂಬುದನ್ನು ಗಮನಿಸಬೇಕು. ಇವೆರಡು ಒಂದೇ ಜಾತಿಯ ಒಬ್ಬ ವ್ಯಕ್ತಿಯನ್ನೇ ಹೇಳುತ್ತಿರಬಹುದು. ಆದರೆ ಕವ್ಯ ಮತ್ತು ಪರಂಪರೆಗಳು ಮಾತ್ರ ಮಾದಯ್ಯನಿಗೆ ಗುಡಿ ಕಟ್ಟಿಸಿದವನು ಜುಂಜೇಗೌಡ ಎಂದು ಹೇಳುತ್ತವೆ. ಮಾದಯ್ಯನ ದೇವಸ್ಥಾನದ ಉತ್ತರಕ್ಕೆ ೧೨ ಮೈಲಿ ದೂರದಲ್ಲಿ ಈಗ ಸೋಲಿಗರ ನೆಲೆಯಾಗಿ ಪರಿವರ್ತನೆಯಾಗಿರುವುದೇ ಜುಂಜೇಗೌಡನ ಆಲಂಬಾಡಿ ರಾಜ್ಯವೆಂದು ಹೇಳಲಾಗುತ್ತದೆ.

ಸಂಕಮ್ಮ ಸಂಕರ ರೂಪಕ

ಮಾದಯ್ಯನ ಕಾವ್ಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಸಂಕಮ್ಮನ ಪ್ರಸಂಗ ಮುಖ್ಯವು, ದೀರ್ಘವು ಅತ್ಯಂತ ರಂಜನೀಯವೂ ಆದ ಒಂದು ಅಧ್ಯಾಯವಾಗಿದೆ. ಮಾದಯ್ಯ ಒಂದು ಪಂಥ, ಸಂಸ್ಕೃತಿ ಮತ್ತು ನಾಗರೀಕ ಲೋಕವನ್ನು ಪ್ರತಿನಿಧಿಸಿದರೆ ಸೋಲಿಗರ ಸಂಕಮ್ಮ ಮತ್ತು ನೀಲೆಗೌಡ ಬುಡಕಟ್ಟು ಸಮಾಜ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ಸ್ಥೂಲವಾಗಿ ಹೊಸ ಬದಲಾವಣೆ ಗಳಿಗೆ ಬುಡಕಟ್ಟು ಸಮಾಜವೊಂದು ಪ್ರತಿಕ್ರಿಯಿಸುವುದನ್ನು ಹಾಗೂ ಅವರ ಸಂರ್ಘದ ಚರಿತ್ರೆಯನ್ನು ಇಲ್ಲಿ ಕಾಣುತ್ತೇವೆ. ಕಂಪಣ ಬೇಡರು, ಸೋಲಿಗರೂ ಮೂಲತಃ ಬಡಕಟ್ಟು ಸಮುದಾಯಗಳೆ. ಮಾದಯ್ಯನ ಪಂಥ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ಕಂಪಣ ಬೇಡರು ಮೊದಲಿಗೆ ಸಾಮಾಜಿಕ, ಸಾಂಸ್ಕೃತಿಕ ಎಚ್ಚರ ಪಡೆದವರು. ಸೋಲಿಗರು ನಂತರ ಬರುವವರು. ಆದರೆ ಸೋಲಿಗರು ತಮ್ಮತನವನ್ನು, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಬಂದವರಲ್ಲ. ಅದಕ್ಕೆ ಸಂಕಮ್ಮನ ಗಂಡ ನೀಲೇಗೌಡನ ಮನೋಭಾವ, ವರ್ತನೆ, ನಡವಳಿಕೆ ಸಾಕ್ಷಿಯಾಗುತ್ತವೆ. ಸಂಕಮ್ಮ ಮತ್ತು ನೀಲೆಗೌಡ ದಂಪತಿಗಳಲ್ಲೇ ಮಾದಯ್ಯನ ಪಂಥ ಮತ್ತು ಸಂಸ್ಕೃತಿಗೆ ತೆರೆದು ಕೊಳ್ಳುವುದರಲ್ಲಿ ಅಂತರವಿದೆ. ಸಂಕಮ್ಮ ಮುಂದಿದ್ದರೆ ನೀಲೇಗೌಡ ಒಂದು ಹೆಜ್ಜೆ ಹಿಂದಿದ್ದಾನೆ. ಇವರ ಈ ಸಂಸ್ಕೃತಿ ಸಂವಾದವೆ ಆದಿಮ ಬುಡಕಟ್ಟು ಸಂಸ್ಕೃತಿಯ ಚರಿತ್ರೆ ಕೂಡ ಆಗಿದೆ. ಮಾದಯ್ಯನ ಸಾಂಸ್ಕೃತಿಕ ಚರಿತ್ರೆಯೂ ಆಗಿದೆ.

ಈ ಸೋಲಿಗ ದಂಪತಿಗಳಲ್ಲಿ ಹೆಂಡತಿ ಸ್ವಲ್ಪಮಟ್ಟಿನ ನಯ, ನಾಜೂಕು, ನಾಗರೀಕತೆ ಬಲ್ಲವಳಂತೆ. ಗಂಡನಿಗಿಂತ ಅಲ್ಪಸ್ವಲ್ಪ ತಿಳಿದವಳು. ಚದಿ ಚಾತೂರ್ಯ ಕಲಿತವಳು. ಲೋಕ ಬಲ್ಲವಳು. ಹಾಗಾಗಿ ಮಾದಯ್ಯನಿಗೆ ಸಂಕಮ್ಮ ಓಗೊಡುವಂತೆ, ನಿಲೇಗೌಡ ಅಷ್ಟು ಸುಲಭವಾಗಿ ಓಗೊಡಲಾರ. ನೀಲೇಗೌಡ ಮುಗ್ಧ ಸೋಲಿಗ, ಸಂಕಮ್ಮ ಸೆನ್ಸಿಬಲ್ ಸೋಲಗಿತ್ತಿ. ಇದು ಪರಸ್ಪರ ಇವರಿಬ್ಬರ ನಡುವಿನ ನಂಬಿಕೆ ಗಂಡನಿಗೆ ಹೆಂಡತಿ ಮೇಲೆ ಇರುವುದಿಲ್ಲ. ಇವರಿಬ್ಬರ ನಡುವಿನ ನಂಬಿಕೆ ವಿಷಯದಲ್ಲೂ ಕಾಣಿಸುತ್ತದೆ. ಹೆಂಡತಿಗೆ ಗಂಡನ ಮೇಲಿರುವಷ್ಟು ನಂಬಿಕೆ ಗಂಡನಿಗೆ ಹೆಂಡತಿ ಮೇಲೆ ಇರುವುದಿಲ್ಲ. ಇವರಿಬ್ಬರ ನಡುವಿನ ಇಂತಹ ಅಂತರವನ್ನು ಭಿನ್ನತೆಯನ್ನು ವಿವರಿಸುವುದೇ ಸಂಕಮ್ಮನ ಕಾವ್ಯವೂ, ಚರಿತ್ರೆಯೂ ಆಗಿದೆ.

ಒಂಬತ್ತು ತಿಂಗಳ ಕಾಲ ‘ಹೆಜ್ಜೇನು ಬೇಟೆಗೆ’ ಹೋಗಬೇಕಾದ ನೀಲೇಗೌಡನಿಗೆ ಹೆಂಡತಿಯನ್ನು ಅಷ್ಟು ಕಾಲ ತೊರೆದಿರಲಾಗದ ತಾಕಲಾಟ. ಜೊತೆಗೆ ಅವಳ ಅನುಪಮ ಸೌಂದರ್ಯ ಇನ್ನಾರನ್ನಾದರು ಸೆಳೆದರೆ? ಅಥವಾ ಅವಳೆ ಹೊರ ನಾಗರೀಕ ಲೋಕದಿಂದ ಬರುವವರಿಗೆ ಒಲಿದುಬಿಟ್ಟರೆ ಎಂಬ ಮುಗ್ಧ ಆತಂಕ. “ಸೀರೆ ರೌಕೆ ಒಡವೆ ವಸ್ತ್ರನೆಲ್ಲ ಕಳೆಸಿ ತಾಯಿ ಹೊಟ್ಟೆಯಿಂದ ಹುಟ್ಟುದಂಗೆ ನಿಂತಿದ್ದ ಸಂಕಮ್ಮ ಸೂರ್ಯನಂಗ ಸುಳೀತಾಳಂತೆ ಚಂದ್ರನಂಗೆ ಹೊಳೀತಾಳಂತೆ, ಧಗಾಧಗ್ನೆ ಕತ್ಕೊಂಡು ಧಿಗಿಧಿಗ್ನೇ ಉರಿತಾಳಂತೆ. ಇಂತಹ ಅಪ್ರತಿಮ ಕಾಡ ಸುಂದರಿ ತನ್ನೊಬ್ಬನಿಗೆ ನಿಷ್ಟೆಯಿಂದಿರಬೇಕು ಎಂಬುದು ನೀಲೇಗೌಡನ ಬಯಕೆ. ಅದಕ್ಕೆ ಸಂಕಮ್ಮನಿಂದ ಭಾಷೆ ಕೇಳುತ್ತಾನೆ. ಗಂಡ ಅಂದುಕೊಳ್ಳವಂತಹ ಯಾವುದಕ್ಕೂ ಆಸ್ಪದವಿಲ್ಲದಂತ ನಿಷ್ಕಳಂಕ ಮನಸ್ಸಿನ ಸಂಕಮ್ಮ ಅದನ್ನು ನಿರಾಕರಿಸುತ್ತಾಳೆ. ಗಂಡನ ಮುಗ್ಧ ಅನುಮಾನಕ್ಕೂ ಮರುಗಿ ನಂಬಿಕೆ ಇಲ್ಲದಿದ್ದರೆ ತಂದೆತಾಯಿ, ಅತ್ತೆಮಾವ,ಬಂಧು ಬಳಗ ಸೇರಿಸಿ ನನ್ನ ತಪ್ಪುನೆಪ್ಪು ತೋರಿಸಿ ಕಟ್ಟಿರುವ ತೆರವ ತಕ್ಕಂದು ಬಿಟ್ಟುಬಿಡು ಎನ್ನುತ್ತಾಳೆ.

ಮಾತು ಕೊಡದೆ ಹೋದರೂ ಕಡೆಗೆ ನೀಲೇಗೌಡ ಹೆಂಡತಿಯನ್ನು ಸುಲಭದಲ್ಲಿ ಬಿಟ್ಟು ಹೋಗುವುದಿಲ್ಲ. ಅವಳಿಗೆ ಒಂದು ರೀತಿ ಗೃಹಬಂಧನ ವಿಧಿಸುತ್ತಾನೆ. ಗುಡಿಸಲ ಮುಂದೆ ಮಾಟದ ಗೊಂಬೆಗಳನ್ನು ಕೆತ್ತಿ ಕಾವಲು ನಿಲ್ಲಿಸಿ,ಬಂದವರ ತಲೆತರಿಯಲು ಹೇಳುತ್ತಾನೆ. ಸಂಕಮ್ಮನ ತಲೆದೇಸು ಏಳುತಲೆ ಸರ್ಪವ ಕಾವಲಾಕುತ್ತಾನೆ.ಗುಡಿಸಲ ಸುತ್ತ ಎಪ್ಪತ್ತೇಳು ಮಂಡಲ ಬರೆಯುತ್ತಾನೆ. ಇದು ಆದಿಮ ಬುಡಕಟ್ಟು ಸಮುದಾಯದ ತಂತ್ರ – ಮಾಟ ವಿಧ್ಯೆಯ ಪ್ರದರ್ಶನ ಮತ್ತು ಪಳೆಯುಳಿಕೆ ಗಳಾಗಿ ಉಳಿದಿವೆ. ಬುಡಕಟ್ಟು ಜನ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಕಲಿತಿದ್ದ ವಿದ್ಯೆ ಕೂಡ ಇದಾಗಿದೆ. ಇವೆಲ್ಲವೂ ಸೋಲಿಗನೊಬ್ಬ ಮಾದಯ್ಯನಂತಹ ಮಾಯಾಕಾರನಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಊಡುವ ತಂತ್ರವಿದ್ಯೆ. ಅದು ಆತನ ಸಮುದಾಯದ ಶಕ್ತಿ ಕೂಡ.

ಆದರೆ ಸಂಕಮ್ಮನ ಮನೆಗೆ ಮಕ್ಕಳ ಭಿಕ್ಷೆಗೂ, ಒಕ್ಕಲು ಪಡೆಯಲು ಬರುವ ಮಾದಯ್ಯ ಅವಳಿಗಾಗಲೇ ಪರಿಚಿತ. ಅಂದರೆ ಅವಳ ಅಪ್ಪನ ಒಕ್ಕಲು ಪಡೆದು ಅವಳ ಅಪ್ಪನ ಮನೆಯ ದೈವವಾಗಿದ್ದ. ಇಲ್ಲಿ ಸಂಕಮ್ಮ ಬುಡಕಟ್ಟು ಸಮುದಾಯದ ಮಾತೃದೇವತಾ ಆರಾಧನ ಸಂಸ್ಕೃತಿಯ ಇನ್ನೊಂದು ಮುಖವಾಗಿ ಕಾಣುತ್ತಾಳೆ ಕಾಳಮ್ಮ, ದೇವಮ್ಮ ತನ್ನ ಅಸ್ಥಿತ್ವ ಬಿಟ್ಟುಕೊಡಲಾಗದ ಶಾಕ್ತ, ಮಾತೃದೇವತಾ ಪಂಥದ ಸಂಕೇತಗಳಾಗಿ ಸೆಣಿಸಿದರೆ ಸಂಕಮ್ಮ ತನ್ನ ಅಪ್ಪನ ಮನೆಯ ದೈವ ಎಂದು ವಿರೋಧವಿಲ್ಲದೆ ಮಾದಯ್ಯನನ್ನು ಸ್ವೀಕರಿಸುವುದು ಶಾಕ್ತಾ ಪಂಥ ತಾನಾಗೆ ಸ್ಥಾನ ತೆರವು ಮಾಡುವ ಸೂಚನೆ ಕೊಡುತ್ತದೆ. ಹಾಗೂ ಮಾದಯ್ಯನಿಗೆಬುಡಕಟ್ಟು ಸಂಸ್ಕೃತಿ ಮತ್ತು ಶಾಕ್ತ ಪಂಥವು ಮಣಿಯುತ್ತದೆ. ಹಾಗೆಯೇ ನೀಲೆಗೌಡ ಸಂಕಮ್ಮನಿಗೆ ವಿಧಿಸಿದ್ದ ಎಲ್ಲಾ ರೀತಿಯ ಬಂಧನ, ಉಗ್ರಶಿಕ್ಷೆಗಳೆಂಬ, ಸೋಲಿಗರ ತಂತ್ರ ವಿದ್ಯೆಯನ್ನು ಮಾದಯ್ಯ ಶೈವಸಿದ್ಧ ವಿದ್ಯೆಯಿಂದ ಹೂ ಎತ್ತಿದಷ್ಟು ಸುಲಭವಾಗಿ ವಿಫಲಗೊಳ್ಳುತ್ತಾನೆ. ಅಂತಿಮವಾಗಿ ನೀಲೆಗೌಡ ಸಂಕಮ್ಮ ಮಾದಯ್ಯನ ಪಂಥ ಸಂಸ್ಕೃತಿಯನ್ನು ಸ್ವೀಕರಿಸುವುದಷ್ಟೇ ಅಲ್ಲದೆ ತಮ್ಮ ಮಕ್ಕಳಾದ ಕಾರಯ್ಯ, ಬಿಲ್ಲಯ್ಯರನ್ನು ಅವನಿಗೆ ಶಿಸು ಮಕ್ಕಳಾಗಿ ಕೊಡುತ್ತಾರೆ. ಇದೊಂದು ಸಂಸ್ಕೃತಿಗಳ ಸಂಕರ ರೂಪಕ. ಹುಟ್ಟು ಬಂಜೆ ಯಾಗಿದ್ದ ಸಂಕಮ್ಮ ಗಂಡನ ಒಂಭತ್ತು ತಿಂಗಳ ಹೆಜ್ಜೇನು ಬೇಟೆ ಅವಧಿಯಲ್ಲಿ ಗರ್ಭ ಧರಿಸುತ್ತಾಳೆ. ಗಂಡು ಮಕ್ಕಳಿಬ್ಬರ ಹಡೆದು ತಾಯಿಯಾಗುತ್ತಾಳೆ. ಸಕಲ ಸಂಪತ್ತನ್ನು ಪಡೆದಿರುತ್ತಾಳೆ. ನೀಲೆಗೌಡ ಬೇಟೆಯಾಡಿ ಫಲಸಂಗ್ರಹಿಸಿ ಹಿಂದಿರುಗುವ ಸಮಯಕ್ಕೆ ಸರಿಯಾಗಿ ಸಂಕಮ್ಮನ ಮಡಿಲಲ್ಲೂ ಮಕ್ಕಳ ಫಲವಿರುತ್ತದೆ. ಒಂಭತ್ತು ತಿಂಗಳ ಅವಧಿಯಲ್ಲಿ ನೀಲೇಗೌಡನ ನಿರ್ಗಮನದ ನಂತರ ಮಾದಯ್ಯನ ಆಗಮನವಾಗುತ್ತದೆ. ಮಾದಯ್ಯನಿಗೆ ಒಕ್ಕಲು ಮತ್ತು ಮಕ್ಕಳ ಭಿಕ್ಷೆ ಪಡೆಯಬೇಕಿರುತ್ತದೆ. ಸಂಕಮ್ಮ, ನೀಲೇಗೌಡರಿಬ್ಬರು ಮಾದಯ್ಯನನ್ನು ಒಪ್ಪಿ ಮಕ್ಕಳನ್ನು ದಾನ ಕೊಡುವುದು ಶಾಕ್ತಾ, ಶೈವ, ನಾಥ, ಬುಟಕಟ್ಟು ಸಂಸ್ಕೃತಿಗಳ ಸಂಕರವಾಗಿ ಕಾಣಿಸಿಕೊಳ್ಳುತ್ತದೆ.

ಇಂದಿನ ಮಾದಯ್ಯನ ದೇವಸ್ಥಾನದ ಎದುರಿಗಿರುವ ಸುಮಾರು ಮೂರು ಮೈಲಿ ದೂರದಲ್ಲಿರುವ ಬೆಟ್ಟವನ್ನು ‘ಎದುರು ಬೋಳಿ’ ಎಂದು ಕರೆಯುತ್ತಾರೆ. ಈ ಬೆಟ್ಟದಲ್ಲಿ ಮಾದಯ್ಯನ ಶಿಶು ಮಕ್ಕಳಾದ ಕಾರಯ್ಯ, ಬಿಲ್ಲಯ್ಯರ ಗದ್ದಿಗೆಗಳಿವೆ.

ಕಂಪಣ ಬೇಡ

ಆ ಕಾಲದ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದರೆ ನಡುಮಲೆ ಬೇಡಗಂಪಣರ ರಾಜ್ಯ. ‘ಕಂಪಣ’ ಬೇಡರು ವಿಜಯನಗರ ಕಾಲದಿಂದಲೂ ಪ್ರಮುಖ ಜನಾಂಗವಾಗಿತ್ತು. ‘ಕಂಪಣ’ ಎಂಬುದು ಹೆಸರೂ ಹೌದು. ‘ವೀರ ಕಂಪಣ’ ವಿಜಯನಗರ ಅರಸನೊಬ್ಬನ ಮಗನ ಹೆಸರೂ ಆಗಿತ್ತು. ಒಂದು ನಿರ್ಧಿಷ್ಟ ವ್ಯಾಪ್ತಿಯ ಆಡಳಿತ ಘಟಕಕ್ಕೂ ‘ಕಂಪಣ’ ಎಂದು ಕರೆಯುವುದಿತ್ತು. ಆ ಹಿನ್ನೆಲೆಯ ಬೇಡಗಂಪಣರು ನಡುಮಲೆಯಲ್ಲಿದ್ದು ಮಾದಯ್ಯನ ಒಕ್ಕಲಾಗಿ, ಭಕ್ತರಾಗಿ, ಅವನ ಪೂಜಾಕಾರ್ಯದ ಹಕ್ಕುದಾರರಾಗುತ್ತಾರೆ. ತಮ್ಮನ್ನು ಅವರು ನಾವು ಬೇಡರ ಕಣ್ಣಯ್ಯನ ಮೂಲದ ವರು ಎಂದು ಹೇಳಿಕೊಳ್ಳುತ್ತಾರೆ. ಹೀಗೆ ಆದಿಶೈವ ಪಂಥಿಯನಾದ ಬೇಡರ ಕಣ್ಣಪ್ಪನ ಮೂಲ ಹೇಳುವ ಬೇಡರೆ ಮಾದಯ್ಯನ ತಮ್ಮಡಿಗಳಾಗಿ ನಿಲ್ಲುವುದು ಇಂದಿಗೂ ಅವರೆ ಆ ಬಾಬನ್ನು ಹೊಂದಿರುವುದು ಗಮನಾರ್ಹ ಸಂಗತಿ. ಶೈವನಾಥ ಹಿನ್ನೆಲೆಯ ಇವರು ಲಿಂಗ ನಿರಾಕರಿಗಳಾಗಿದ್ದು ವೀರಶೈವ ‘ದೀಕ್ಷೆ’ ಮೀರಿದವರು. ಆದರೆ ವೀರಶೈವಕ್ಕೆ ಇಂದು ಜೋತುಬಿದ್ದು ವೀರಶೈವೀಕರಣಕ್ಕೆ ತುತ್ತಾಗಿದ್ದಾರೆ.

ಸೌಹಾರ್ದ ದೇವ ದೇವ

ಮಾದಯ್ಯನ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದರೆ ಆತ ಒಬ್ಬ ಸೌಹಾರ್ಧಯುತ ಶೈವ ದೇವತೆಯಾಗಿ ಕಾಣುತ್ತಾನೆ. ವೈದಿಕ ಸ್ವಭಾವಗಳನ್ನು ಮೈಗೂಡಿಸಿಕೊಂಡ ವೀರಶೈವ ಮಠಗಳಿಂದ ಮಾದಯ್ಯ ದೂರ ನಿಲ್ಲುತ್ತಾನೆ. ಅವೈದಿಕ, ನಾಥಸಿದ್ಧ ತನಗಳ ಮಾದಯ್ಯ ತಾನು ನೆಲೆನಿಲ್ಲ ಬಯಸಿದ ಆಸುಪಾಸಿನ ಪಂಥ -ಸಂಸ್ಕೃತಿಗಳ ಜೊತೆ ಸೌಹಾರ್ದ ನೀತಿ ಅನುಸರಿಸುತ್ತಾನೆ. ಬಿಳಿಗಿರಿಯ ರಂಗಸ್ವಾಮಿ, ಮುಡುಕು ತೊರೆ ಮಲ್ಲಯ್ಯ, ಶಾಕ್ತರಾದ ದೇವಮ್ಮ, ಕಾಳಮ್ಮ ಮೊದಲಾದವರ ಜೊತೆ ಈತ ನಡೆದುಕೊಳ್ಳುವುದರಲ್ಲಿ ಸ್ನೇಹ ಮತ್ತು ಹೊಂದಾಣಿಕೆ ನೀತಿಯನ್ನು ಕಾಣಬಹುದು. ದೇವಮ್ಮನ ಮನೆಗೆ ಭಿಕ್ಷಕ್ಕೆ ಹೋಗುವಾಗ ಮಾದಯ್ಯ ತನ್ನ ಸಹಾಯಕ್ಕೆ ಎಂಬಂತೆ ರಂಗಯ್ಯ, ಮಲ್ಲಯ್ಯರನ್ನು ಕರೆದೊಯ್ಯುತ್ತಾನೆ. ಹಾಗೇ ಕಂಪಣ ಬೇಡರ, ಸೊಲಿಗರ ಸೇವೆ, ಆಹಾರ, ಆರೈಕೆಯ ಏಕತಾನತೆಯನ್ನು ಮುರಿಯಲು ಎಣ್ಣೆ ಮಜ್ಜನ ಸೇವೆ ಬಯಸುತ್ತಾನೆ. ಅದಕ್ಕಾಗಿ ನಾಡಿನ ನಡುವೆ ಇರುವ ರಾಮವ್ವ ಮೂಗಪ್ಪ ಶರಣರ ಒಕ್ಕಲು ಪಡೆಯಬಯಸುತ್ತಾನೆ. ರಾಮವ್ವ ಮೂಗಪ್ಪ ಮುಡುತೊರೆ ಮಲ್ಲಯ್ಯನ ಬೆಟ್ಟದ ತಪ್ಪಲಿನ ಸರಗೂರಿನವರು. ಜವುಳು ಮಣ್ಣಲ್ಲಿ ಉಪ್ಪು ತಯಾರಿಸುವ ಉಪ್ಪಾರರು. ಭಗೀರಥನ ಕುಲದವರು. ಶಿವ ನಿವಾಸ ಗೌರಿಶಂಕರ ಶಿಖರದಿಂದ ಗಂಗೆಯನ್ನು ಭೂಮಿಗೆ ಹರಿಸಿ ಜನಕಲ್ಯಾಣಕಾರಕ ನಾಗರೀಕತೆ ಬೆಳೆಯಲು ಕಾರಣನಾದವ ಭಗೀರಥ. ಈತ ಆದಿಶೈವ ಕುಲದವನಾಗಿದ್ದು ರಾಮವ್ವ ಮೂಗಪ್ಪ ಇಂತಹ ಹಿನ್ನೆಲೆಯವರು. ಇವರು ಮಲ್ಲಯ್ಯ, ರಂಗಯ್ಯನ ಒಕ್ಕಲಿನವರು ಮಾದಯ್ಯ ಈ ಶರಣರೇ ತನಗೆ ಎಣ್ಣೆ ಮಜ್ಜನ ಸೇವೆ ಮಾಡಲು ಒಕ್ಕಲಾಗಬೇಕೆಂದು ಅವರನ್ನು ತನಗೆ ಒಕ್ಕಲು ಕೊಡುವಂತೆ ತನ್ನ ಸ್ನೇಹಿತರಾದ ಮಲ್ಲಯ್ಯ, ರಂಗಯ್ಯರನ್ನೇ ಕೇಳುತ್ತಾನೆ.

ರಾಮವ್ವ ಟಿ. ನರಸೀಪುರ ತಾ. ಕುರುಬೂರು ಕೊತ್ತೇಗಾಲದ ಬಲ್ಲಮ್ಮನ ಮಗಳು. ಅಲ್ಲಿಂದ ಸರಗೂರ ಉಪ್ಪಾರ ಮನೆತನಕ್ಕೆ ಮದುವೆಯಾಗಿ ಬರುತ್ತಾಳೆ. ತಾಯಿ ಮನೆ ಕಡೆಯಿಂದ ರಾಮವ್ವ ಮಲ್ಲಯ್ಯನ ಒಕ್ಕಲು, ಗಂಡನ ಮನೆಯಲ್ಲಿ ರಂಗಯ್ಯನ ಒಕ್ಕಲು. ಮೂಗಪ್ಪ ರಾಮವ್ವ ಮಗ. ಆಗಾಗಿ ಇವರು ಶೈವ ವೈಷ್ಣವ ಒಕ್ಕಲಿನವರು. ಈ ಶರಣರನ್ನು ಬಿಟ್ಟುಕೊಡಲು ಮಾದಯ್ಯ ತನ್ನ ಗೆಳೆಯರನ್ನು ಕೇಳಿಕೊಳ್ಳುವುದು ಸೌಜನ್ಯ, ಸೌಹಾರ್ದತೆ ಸಂಕೇತ. ಮಲ್ಲಯ್ಯ, ರಂಗಯ್ಯ ದೈವಗಳೇ ಬಿಟ್ಟುಕೊಡಲು ಸಮ್ಮತಿಸಿದರು ಭಕ್ತರಾದ ರಾಮವ್ವ, ಮೂಗಪ್ಪ, ಮಾದಯ್ಯನ ಒಕ್ಕಲಾಗಲು ಒಪ್ಪುವುದಿಲ್ಲ. ಆಗ ಮಾದಯ್ಯ ಸ್ವತಃ ಭಕ್ತರನ್ನು ಬೇಡುತ್ತಾನೆ, ಕಾಡುತ್ತಾನೆ. ಒಪ್ಪದಿದ್ದಾಗ ಅವರಿಗೆ ಕಷ್ಟಗಳನ್ನು ಕೊಟ್ಟು, ಪರೀಕ್ಷೆಗಖನ್ನು ಒಡ್ಡಿ ಒಪ್ಪುವಂತೆ ಮಾಡುತ್ತಾನೆ. ಆಗ ಮಾದಯ್ಯ ಮತ್ತು ಸರಗೂರ ಶರಣರ ಜತೆ ಒಂದು ಒಪ್ಪಂದವಾಗುತ್ತದೆ. ರಾಮವ್ವ ಮೂಗಪ್ಪ ತಾವು ಯಾವ ದೈವದ ಒಕ್ಕಲಾಗಿದ್ದಾರೊ ಹಾಗೇ ಇರಬಹುದು. ಹಾಗಿದ್ದುಕೊಂಡೆ ಮಾದಯ್ಯ ಎಣ್ಣೆಮಜ್ಜನ ಸೇವೆ ನಡೆಸಿಕೊಡಬಹುದು. ಅಂದರೆ ಅವರು ಮಲ್ಲಯ್ಯನ ಶೈವಪಂಥಕ್ಕೂ, ರಂಗಯ್ಯನ ವೈಷ್ಣವ ಪಂಥಕ್ಕೂ ನಿಷ್ಟುರಾಗಿದ್ದು ಮಾದಯ್ಯನ ಸೇವೆ ಮಾಡುವುದು. ಅದರಂತೆ ಇಂದಿಗೂ ಸರಗೂರ ಸಮೀಪವಿರುವ ರಾಮವ್ವ ಮೂಗಪ್ಪನ ವಂಶಸ್ಥರು ವೈಷ್ಣವ ದಾಸ ಪಂಥದವರಾಗೇ ಇರುವುದು ಗಮನಾರ್ಹ.

ಹೀಗೆ ಮಾದಯ್ಯ ಸೌಹಾರ್ದಯುತವಾಗಿ ತನ್ನ ಸಮಕಾಲೀನ ಪಂಥ ಪರಂಪರೆಗಳ ಜೊತೆ ನಡೆದುಕೊಳ್ಳುತ್ತಾನೆ. ಮುಡುಕುತೊರೆ ಬೆಟ್ಟದ ಮೇಲೆ ಮಲ್ಲಯ್ಯನ ಗುಡಿ ಪಕ್ಕದಲ್ಲೇ ಮಾದಯ್ಯನ ಪಾದ ಊರಿದ ಗದ್ದಿಗೆ ಇದೆ. ಅಲ್ಲಿ ಮಾದಯ್ಯನ ಪೂಜೆ ನಡೆಯುತ್ತದೆ. ಬೆಟ್ಟದ ತಪ್ಪಲಿನ ಸರಗೂರು ತೋಪಲ್ಲ ಮಾದಯ್ಯ ತಂಗಿದ್ದನೆಂದು ಪ್ರತೀತಿ ಇದೆ. ಅಲ್ಲಿ ಮಾದಯ್ಯನ ದೇವಾಲಯ ಕಟ್ಟಲಾಗಿದೆ. ಬಿಳಿಗಿರಿ ರಂಗನಾಥನ ಬೆಟ್ಟದ ದೊಡ್ಡ ಸಂಪಿಗೆ ಮತ್ತು ಹಲವು ಕಡೆಗಳಲ್ಲಿ ಮಾದಯ್ಯನ ನೆಲೆಗಳಿವೆ. ಇವು ರಂಗಸ್ವಾಮಿಯ ಜತೆಗಿನ ಸೌಹಾರ್ದತೆಯನ್ನು ಸೂಚಿಸುತ್ತವೆ. ಏಳುಮಲೆಯ ಮಾರ್ಗ ಮಧ್ಯದಲ್ಲಿ ಸಿಗುವ ರಂಗಸ್ವಾಮಿಗೆ “ರಂಗಸ್ವಾಮಿ ಒಡ್ಡಿ”ನಲ್ಲಿ ಪೂಜೆ ನೇಮಿಸುತ್ತಾನೆ. ಇದು ಅವನ ಸೌಹಾರ್ದತೆ ಹೇಳುತ್ತದೆ.

ಮುಡುಕುತೊರೆ ಬೆಟ್ಟದ ಮೇಲಿನ ಮಾದಯ್ಯನ ಗದ್ದಿಗೆ, ಸರಗೂರ ದೇವಾಲಯ ಮಾದಯ್ಯನ ಇಲ್ಲಿನ ಬೇಟಿಯನ್ನು ದೃಢೀಕರಿಸುತ್ತವೆ. ರಾಮವ್ವೆ ಮೂಗಪ್ಪನ ಮನೆತನದವರು ಸರಗೂರ ಸಮೀಪದ ಅಯ್ಯನವರ ಹುಂಡಿಯಲ್ಲಿ ಇನ್ನು ಇದ್ದಾರೆ. ಮೂಗಪ್ಪನಿಗೆ ದೊಡ್ಡ ದಾಸಪ್ಪ, ವೃಂದಾವನ ಸ್ವಾಮಿ, ಚಿಕ್ಕಸ್ವಾಮಿ ಎಂಬ ಮೂರು ಜನ ಮಕ್ಕಳಿದ್ದರು. ಆ ಮೂರು ಜನ ಮಕ್ಕಳ ಮನೆತನ ಇಂದಿಗೂ ಇದ್ದಾರೆ. ಅವರು ಮಾದಯ್ಯನ ಎಣ್ಣೆ ಮಜ್ಜನ ಸೇವೆ ಮುಂದುವರಿಸುತ್ತಿದ್ದಾರೆ. ಸರಗೂರ ತೋಪಿನಲ್ಲಿ ಮಾದಯ್ಯನ ಗುಡಿ ಕೆಳಗೆ ತೋಪಿನಲ್ಲಿ ರಾಮವ್ವ, ಮೂಗಪ್ಪನವರ ಸಮಾದಿಗಳಿವೆ. ಅವುಗಳನ್ನು ದೇವಾಲಯ ಗಳನ್ನಾಗಿ ಪರಿವರ್ತಿಸಿ ರಾಮಾಂಬಿಕ, ಶಂಕರಪ್ರಿಯ ದೇವಸ್ಥಾನಗಳೆಂದು ಕರೆಯಲಾಗುತ್ತಿದೆ. ಇದೇ ತೋಪಿನಲ್ಲಿ ಇವರ ಮಕ್ಕಳಾದ ದೊಡ್ಡ ದಾಸಪ್ಪ, ವೃಂದಾವನ ಸ್ವಾಮಿ, ಚಿಕ್ಕಸ್ವಾಮಿ ಮತ್ತವರ ವಂಶಸ್ಥರ ಸಮಾಧಿಗಳಿವೆ.

ಹೀಗೆ ಮಾದಯ್ಯ ವೈಷ್ಣವಪಂಥ ಮತ್ತು ಭಕ್ತರ ಜತೆ ಸೌಹಾರ್ಧತೆ ತೋರುತ್ತಾನೆ. ಸಿದ್ಧಪ್ಪಾಜಿ ಕೂಡ ತನ್ನ ಗುರು ಮಂಟೇಸ್ವಾಮಿಗೆ ಮಠಮನೆ ಮಾಡಲು ಬೇಕಾದ ಕಬ್ಬಿಣ ಭಿಕ್ಷೆ ತರಲು ಹಲಗೂರಿಗೆ ಹೋಗುವಾಗ ಮುತ್ತತ್ತಿರಾಯನ ಜತೆ ಸ್ನೇಹ ಬೆಳೆಸುವ ಪ್ರಸಂಗವಿದೆ. ಅದೇ ರೀತಿ ಚಿಕ್ಕಲ್ಲೂರ ಸಿದ್ಧಪ್ಪಾಜಿಯಲ್ಲಿ ಮುತ್ತತ್ತಿರಾಯನಿಗೆ ಒಂದು ದಿನದ ಸೇವೆ ಇದೆ. ಇದು ಸಿದ್ಧಪ್ಪಾಜಿ – ಮುತ್ತತ್ತಿರಾಯನ ಮೈತ್ರಿಯ ಸಂಕೇತ. ಅಂದು ಖಂಡಾಯಗಳು ಮತ್ತು ನಾರಾಯಣ ದೇವರು ಅರಿಗೆಗಳು ಒಟ್ಟಿಗೆ ಪೂಜೆಗೊಳ್ಳುತ್ತವೆ. ದಾಸರು ಮತ್ತು ನೀಲಗಾರರು ಒಟ್ಟಾಗಿ ಸೇರಿ ನಾಮ ಸೇವೆ ಮಾಡುತ್ತಾರೆ. ಮಾದಯ್ಯ, ಸಿದ್ಧಪ್ಪಾಜಿಯರ ಈ ರೀತಿಯ ದೈವ ಮತ್ತು ಪಂಥಗಳ ಜತೆಗಿನ ಸಂಬಂಧಗಳು ಸೌಹಾರ್ಧತೆಯ ಸಂಕೆತಗಳೆ?