ಕಂಸಾಳೆ ದೇವರ ಗುಡ್ಡರ ಪಂಥ

ಕರ್ನಾಟಕದ ಜನಪದ ಸಂಸ್ಕೃತಿ ಹಿನ್ನೆಲೆಯ ಹಲವು ಪಂಥ ಪರಂಪರೆಗಳಿವೆ. ಅಂತಹಪಂಥಗಳಲ್ಲಿ ಮೈಸೂರು ಸೀಮೆಯ ಕಂಸಾಳೆ ದೇವರ ಗುಡ್ಡರ ಪಂಥವು ಒಂದು. ಇವರು ಕರ್ನಾಟಕದ ದಕ್ಷಿಣ ಭಾಗದಲ್ಲಿ ಭಕ್ತ ಸಮೂಹವನ್ನು ಪಡೆದಿರುವ ಮಾದಯ್ಯನ ಶಿಶು ಮಕ್ಕಳು. ಇವರನ್ನು ಸ್ಥಳೀಯವಾಗಿ ‘ದೇವರ ಗುಡ್ಡರು’ ಎಂದು ಕರೆಯುತ್ತಾರೆ. ‘ದೇವರ ಗುಡ್ಡ’ ಅಂದರೆ ದೈವ ಒಂದು ನೆಲೆಸಿದ ಗುಡ್ಡ ಎಂತಲೂ, ಬೆಟ್ಟದ ದೈವದ ಶಿಷ್ಯ ಎಂದೂ ಅರ್ಥವಾಗುತ್ತದೆ. ಆದರೆ ಗುಡ್ಡ ಎಂಬುದನ್ನು ಇಲ್ಲಿ ಶಿಶು ಮಕ್ಕಳು ಎಂಬ ಅರ್ಥದಲ್ಲಿ ಬಳಸಲಾಗಿದೆ. ಇವರು ಮಾದಯ್ಯನ ಜೀವನ, ಸಾಧನೆ, ಪಂಥ, ಸಂಸ್ಕೃತಿಯನ್ನು ಮುಂದುವರೆಸಲು ಮತ್ತು ಪ್ರಚಾರ ಮಾಡಲು ಮುಡಿಪಾದವರು.

ಮಾದಯ್ಯನ ಒಕ್ಕಲಾದ ಪ್ರತೀ ಕುಟುಂಬದ ಹಿರಿಯ ಮಗನಿಗೆ ದೇವರ ಗುಡ್ಡನ ದೀಕ್ಷೆ ಕೊಡಿಸಲಾಗುತ್ತದೆ. ಹೀಗೆ ದೀಕ್ಷೆ ಪಡೆದವ ಈ ಪಂಥದ ಸದಸ್ಯ. ಈತನ ಕುಟುಂಬ ಈ ಸಂಸ್ಕೃತಿ ಮತ್ತು ಪರಂಪರೆಯ ವಾರಸುದಾರರು. ಇದನ್ನು ಮಾದಯ್ಯನ ಪಂಥ ಅಥವಾ ಧರ್ಮ ಎನ್ನಬಹುದು. ಈ ಪಂಥದ ನೆಲೆ ಆದಿಮ ಶೈವ, ದ್ರಾವಿಡ, ಅವೈದಿಕ ಎಂದೆಲ್ಲ ಹೇಳಬಹುದು. ಶೈವ ಆರೂಢ, ಅವಧೂತ, ನಾಥ, ವಿರಕ್ತ ಲಕ್ಷಣಗಳನ್ನು ಇದರಲ್ಲಿ ಕಾಣಬಹುದು. ಮಂಟೇಸ್ವಾಮಿ ನೀಲಗಾರರ ಪಂಥಕ್ಕಿರುವಂತಹ ವಚನ ಚಳುವಳಿಯ ಹಿನ್ನೆಲೆ ಇಲ್ಲಿ ಕಾಣದು. ಆದರೂ ಅದೇ ರೀತಿ ೧೫-೧೬ ನೇ ಶತಮಾನದಲ್ಲಿ ಬಸವ ಮಾದರಿ ಯಲ್ಲೇ ತನ್ನದೇ ಆದ ಪಂಥದ ಏಳಿಗೆಗೆ ಮಾದಯ್ಯ ಕಾರಣನಾದ. ವೀರಶೈವನಾಗದೆ ಅದಕ್ಕೆ ಮತ್ತು ವೈದಿಕಕ್ಕೆ ಪ್ರತಿರೋದ ತೋರುತ್ತ ಹಾಗೂ ಪರ್ಯಾಯವಾಗಿ ಅವೈದಿಕ ಉದಾರ ಶೈವ ಸಿದ್ಧನಗಿ, ನಾಥಸಿದ್ಧನಾಗಿ ಮಾದಯ್ಯ ಕಾಣಿಸಿಕೊಳ್ಳುತ್ತಾನೆ.

ಎಳೆಗಾವಿ, ಸುಳಿಗಾವಿ ಹೊದ್ದು, ಕೊರಳ ತುಂಬ ರುದ್ರಾಕ್ಷಿ ಧರಿಸಿ, ಮುಂದಲ ಪಾದಕ್ಕೆ ಮುನ್ನೂರು ಜಂಗು, ಹಿಂದಲ ಪಾದಕ್ಕೆ ಇನ್ನೂರು ಜಂಗು ತೊಟ್ಟು, ಮೈ, ಕೈಗೆಲ್ಲಾ ವಿಭೂತಿಬಸು ಮಂಗವ ಧರಿಸಿ, ಮುತ್ತಿನ ಜೋಳಿಗೆಯ ಮುಂಗೈಗಾಧಾರ ಮಾಡ್ಕಂದು, ಬಲಗೈಲಿ ನಾಗಬೆತ್ತವ ಹಿಡಿದು, ಹೊನ್ನುತ್ತವ ಬಿಟ್ಟುಬಂದು, ಭಾರೀ ಬರಗನ ಮೇಲೆ ಮಾದಯ್ಯ ಬರುವುದನ್ನು ಕಾವ್ಯ ವರ್ಣಿಸುತ್ತದೆ. ಈ ಚಿತ್ರಣ ಆತನಿಗಿದ್ದ ಎಲ್ಲಾ ತಾಂತ್ರಿಕ ಸಿದ್ಧ ಲಕ್ಷಣಗಳನ್ನು ಸಂಕೇತಿಸುತ್ತವೆ. ಈ ಪಂಥ ಕಾಲಕ್ರಮದಲ್ಲಿ ಶಾಕ್ತಾ, ಶೈವ, ದ್ರಾವಿಡ ಪರಂಪರೆಯ ಭಾಗವೂ ಮುಂದುವರಿಕೆಯು ಆದ ಪಂಥವಾಗಿ ರೂಪುಗೊಂಡಿರುವುದು ಕಾಣುತ್ತದೆ.

ಮಾದಯ್ಯ ದೇವರ ಗುಡ್ಡರಪಂಥ ನೆಲೆಸಿದ ಕತ್ತಲ ರಾಜ್ಯದ ಪರಿಸರ ಮತ್ತು ಪರಂಪರೆಯಲ್ಲಿ ಹಲವು ತಾಂತ್ರಿಕ ಲಕ್ಷಣಗಳು ಕಾಣುತ್ತವೆ. ಮಾದಯ್ಯ ಹುಲಿಯ ಮೇಲೆ ಕುಳಿತು ಸಂಚರಿಸುವುದು ಆ ಸಂತನೊಬ್ಬನ ವಲಸೆಯನ್ನು ಹಾಗೂ ಆತನ ಪಂಥದ ಮೂಲ ವನ್ನು ಸೂಚಿಸುತ್ತವೆ. ಮಾದಯ್ಯನ ನಾಗರಹೆಡೆ ಅಭರಣ, ನಾಗಮಲೆವಾಸ, ನಾಗಬೆತ್ತ ಹಿಡಿಯುವುದು, ಹುತ್ತವನ್ನೇ ವಾಸಸ್ಥಳವಾಗಿಸಿ ಕೊಳ್ಳುವುದೆಲ್ಲವೂ ನಾಥ ಲಕ್ಷಣಗಳಾಗುವುದನ್ನು ಗಮನಿಸಬೇಕು.

“ಷಟ್‌ಸ್ಥಲ ಬ್ರಹ್ಮ” ತೋಂಟದ ಸಿದ್ಧಲಿಂಗ ಪರಂಪರೆ ನಾಥ ಸಿದ್ಧರ ಕೇಂದ್ರವಾಗಿದ್ದ ಹರದನಹಳ್ಳಿಯಿಂದ ಮೊದಲಾಗುತ್ತದೆ. ಈ ಪರಂಪರೆಯಲ್ಲಿ ಬರುವ ಸಿದ್ಧ ವೀರ ದೇಶಿ ಕೇಂದ್ರನ ವಚನ ಒಂದು ತೋಂಟದ ಸಿದ್ಧಲಿಂಗನು ನಾಥ ಸಿದ್ಧರನ್ನು ಗೆದ್ದು ಲಿಂಗಧಾರಣೆ ಗೈದನೆಂದು ನಿರಂಜನ ವಂಶರತ್ನಾಕರ ಹೇಳಿದರೆ, ತೋಂಟದ ಸಿದ್ಧಲಿಂಗನ ಅಂಕಿತದಲ್ಲೇ ಇರುವ ವಚನವುನಾಥ ಸಿದ್ಧರಾದ ಗೋರಕ್ಷ- ಮಚ್ಚೇಂದ್ರರನ್ನು ಯೋಗ ರಹಸ್ಯ ತೋರಿದ ಗುರುಗಳೆಂದು ನೆನೆಯುತ್ತದೆ. ನಿರಂಜನ ವಂಶರತ್ನಾಕರ ಕೃತಿಯು ನಿರ್ಮಾಯ ಗಣೇಶ್ವರನೇ ಮಾದೇಶ್ವರನೆಂದು ಅವನ ಗುರು ಆದಿ ಗಣನಾಥನೆಂದು ಹೇಳುವುದು ಮಾದೇಶ್ವರ ನಾಥ ಪಂಥೀಯನೆಂಬುದಕ್ಕೆ ಪೂರಕವಾಗಿದೆ. ನಾಥಸಿದ್ಧರು ಮತ್ತು ಕೆಲವುವಚನಕರರಲ್ಲೂ ಲಿಂಗದೀಕ್ಷೆ ನಿರಾಕರಿಸಲ್ಪಟ್ಟಿತ್ತು ಎಂಬುದು ಗಮನಾರ್ಹ. ಮಾದಯ್ಯನ ಪಂಥ ಮತ್ತು ಪರಂಪರೆ ಇಂತಹ ಹಿನ್ನೆಲೆಯದ್ದಾಗಿದೆ.

ಗುಡ್ಡರ ಪೂರ್ವಪರ

ಬೌದ್ಧ ಧರ್ಮದ ತಾಂತ್ರಿಕರಾದ ವಜ್ರಯಾನಿ ಪಂಥಿಗಳೆ ಬೌದ್ಧಸಿದ್ದರು. ಇಂತಹ ೮೪ ಜನ ಸಿದ್ಧರು ಪ್ರಸಿದ್ದರಾಗಿ ಬೇರೆ ಬೇರೆ ಕಡೆಗಳಿಗೆ ಹರಿದು ಹಂಚಿ ಹೋಗಿ ನಿಗೂಢವಾಗುತ್ತಾರೆ. ಗೋರಖನಾಥ ಇಂತಹ ಬೌದ್ಧ ತಾಂತ್ರಿಕ ಪಂಥಕ್ಕೆ ಶೈವ ದೀಕ್ಷೆ ಕೊಟ್ಟು ಅದನ್ನು ನಾಥ ಪಂಥ ವಾಗಿಸುತ್ತಾನೆ. ಇಂತಹ ಪರಿವರ್ತನೆ ಭಾರತದಾದ್ಯಂತ ನಡೆಯುತ್ತದೆ. ಆಗಲೆ ಮಂಗಳೂರಿನ ಬೌದ್ದ ಸಿದ್ಧ ಕೇಂದ್ರವಾಗಿದ್ದ ಕದ್ರಿನಾಥ ಕೇಂದ್ರವಾಯಿತು. ಅಂದರೆ ವಜ್ರಾಯಾನಿ ಬೌದ್ಧಸಿದ್ಧ ಮತ್ತು ಶೈವಸಿದ್ಧ ಪಂಥಗಳ ಸಂಕರ ರೂಪವೆ ನಾಥಪಂಥ. ಪರೋಕ್ಷವಾಗಿ ನಾತ ಸಿದ್ಧರಾಗಿ ಕಾಣಿಸಿಕೊಳ್ಳುವ ಮಾದಯ್ಯ ಮತ್ತು ಮಂಟೇಸ್ವಾಮಿ ಬೌದ್ಧ-ಶೈವ ಸಂಕರ ರೂಪಿ ಪ್ರತಿನಿಧಿಗಳಾಗಿಯು ಮಂದುವರೆದಿದ್ದಾರೆ. ಕಂಸಾಳೆ ದೇವರ ಗುಡ್ಡರ ಮಾದಯ್ಯನ ಪಂಥದಲ್ಲಿ ನಾಥ ಲಕ್ಷಣಗಳು ದಟ್ಟವಾಗಿವೆ. ಇವು ಮಾದಯ್ಯನ ಪೂರ್ವವೂ ಇರಬಹುದು. ಏಳುಮಲೆ, ನಡುಮಲೆಗಳ ಸುತ್ತಮುತ್ತ ಹಿಂಡಿಗನತ್ತ, ನಾಗದತ್ತ, ಪಡಗಲನತ್ತ, ಬೈರನತ್ತ ಹೆಸರಿನ ಸೋಲಿಗ, ಕಂಪಣ ಬೇಡ, ಮಾದಿಗರ ಜನ ವಸತಿಗಳಿವೆ. ‘ನಾಥ’ ಎಂಬುದು ‘ನತ್ತ’ ಆಗಿದೆ. ನಾಗಮಲೆಯ ಮಾರ್ಗದಲ್ಲಿ ‘ಹಿಂಡಿಗನತ್ತ’ ಊರಿದೆ. ಇಲ್ಲಿ ಮಾದಯ್ಯ ಹಿಂಡುಲಿಗಳ ಜತೆ ತಂಗಿದ್ದನೆಂದು ಹೇಳುತ್ತಾರೆ. ‘ಹಂಡಿಗ ನಾಥ’ ಎಂಬುದು ‘ಹಿಂಡಿಗ ನತ್ತ’ ಆಗಿರಬೇಕು. ‘ಹಂಡಿಗ’ ಎಂದರೆ ‘ಹಂಡಿ’ ಹಿಡಿದವನು ಎಂಬ ಅರ್ಥವಿದೆ. ನಾಥಸಿದ್ದರು ಭಿಕ್ಷೆಗಾಗಿ ಬಳಸುತ್ತಿದ್ದ ಮಣ್ಣಿನ ಬಟ್ಟಲು ಅಥವಾ ಬೋಗುಣಿ ಯನ್ನು ‘ಹಂಡಿ’ ಎನ್ನುವುದಿದೆ. ಹಂಡಿಗನಾಥ ಅಥವಾ ಹಿಂಡಿಗನತ್ತ ಮಣ್ಣಿನ ಬೋಗುಣಿ ಹಿಡಿದ ನಾಥ ಸಿದ್ಧನನ್ನು ಸೂಚಿಸುವ ಪದವಾಗಿದೆ. ಇಂತವರ ವಾಸದ ನೆಲೆಗಳನ್ನೇ ಆ ಊರು ಹೆಸರುಗಳು ಸೂಚಿಸುತ್ತಿವೆ.

ಮಾದಯ್ಯನ ಕಾವ್ಯದಲ್ಲಿ ಶ್ರವಣ ದೊರೆ ಮಾದಯ್ಯನನ್ನು ‘ಬೂದ್ ಬಡ್ಕ’ನೆಂದು ಬಯ್ಯುತ್ತಾನೆ. ಮೈಕೈಗೆಲ್ಲಾ ವಿಭೂತಿ ಬಸುಮಂಗ ಬಳಿದುಕೊಳ್ಳುವ ವಿವರಗಳೂ ಕಾವ್ಯದಲ್ಲಿದೆ. ಇವು ನಾಥರ ಮುಖ್ಯ ಲಕ್ಷಣ. ಕೊಂಡದ ಗುಳಿ, ದೂಪದ ಗುಳಿಗಳೆಂಬ ದೇವಾಲಯದ ಹೊರಗಿನ ಬೂದಿ ಹೊಂಡಗಳಲ್ಲಿ ಬೂದಿ ಬಳಿದುಕೊಳ್ಳುವುದು ನಾಥಸಿದ್ಧರಲ್ಲಿ ಕಾಣುತ್ತದೆ. ಕಾವ್ಯದಲ್ಲಿ ಹುಟ್ಟಿ ಬೆಳೆದ ಸಾಲಲ್ಲಿ ಮಾದಯ್ಯ “ನಾನು ಊಟ ಮಾಡಬೇಕಾದ್ರೆ ಮಣ್ಣಿನ ಬಟ್ಲಾಗ್ಬೇಕು, ಮಣ್ಣಿನ ಬಟ್ಲ ಮಧ್ಯ ಲಿಂಗ ಇರಬೇಕು ಅಂತಾ ಬಟ್ಲಾದ್ರೆ ಮಾತ್ರ ನಾನು ಊಟ ಮಡ್ತೀನಿ ಅಂತಾನೆ. ಒಂದು ರೀತಿ ಮಾದಯ್ಯ ಹಂಡಿಗನಾಥ. ಇಂದಿಗೂ ಸಹ ಮಾದಯ್ಯನ ದೇವರ ಗುಡ್ಡರು ಊಟ ಮಡೋದು ಮಣ್ಣಿನ ಬಟ್ಟಲುಗಳಲ್ಲಿ ( ಹಂಡಿ) ಎಂಬುದು ಗಮನಾರ್ಹ. ನಮ್ಮೂರು ಶಂಕನಪುರ ಹಾಗೂ ಕೊಳ್ಳೇಗಾಲದ ಸುತ್ತಮುತ್ತಲಲ್ಲಿ ಮಾದಯ್ಯನ ಗುಡ್ಡರು, ಮೈಲಾರ ಮೂಲದ ಮುಡುಕು ತೊರೆ ಮಲ್ಲಯ್ಯ -ಪಾರ್ವತಿ ಗುಡ್ಡರು ಇಂದಿಗೂ ಊಟ ಮಡಲು ಮಣ್ಣಿನ ಬಟ್ಟಲುಗಳನ್ನೇ ಬಳಸುತ್ತಾರೆ. ಇದನ್ನು ನಾನು ಕಂಡಿದ್ದು ಹೊಲೆಯರ ಮನೆಗಳಲ್ಲಿ. ಆದರೆ ಈ ಗುಡ್ಡರು ಭಿಕ್ಷಕ್ಕೆ ಹೋದಾಗ ಕಂಚಿನ ಕಂಸಾಳೆ ಅಥವಾ ಜಾಗಟೆಯನ್ನು ನುಡಿಸುತ್ತಾರೆ. ಬಟ್ಟೆಯ ಜೋಳಿಗೆಗಳಲ್ಲಿ ಭಿಕ್ಷೆ ಸ್ವೀಕರಿಸುತ್ತಾರೆ. ಸ್ವತಃ ಮಾದಯ್ಯ ಕಂಸಾಳೆ ನುಡಿಸುತ್ತಾ ಭಿಕ್ಷೆ ಮಾಡಿದ ಎಂಬ ಪ್ರತೀತಿ ಇದೆ. ಗುಡ್ಡರು ಕಾವ್ಯ ಹಾಡಲು, ಕುಣಿಯಲು ಕಂಸಾಳೆ ಬಳಸುತ್ತಾರೆ. ಬೀಸು ಕಂಸಾಳೆ, ಕಂಸಾಳೆ ನೃತ್ಯ ಎಂಬ ಜನಪದ ಕಲೆಗಳು ಮಾದಯ್ಯನ ಗುಡ್ಡರದೆ ಕೊಡುಗೆ.

೧೫-೧೬ನೇ ಶತಮಾನದ ನಡುವಿನ ನಾಥ ಪಂಥೀಯರೂ ಆಗಿರುವ ಮಾದಯ್ಯ ಮತ್ತು ಮಂಟೇಸ್ವಾಮಿ ಪಂಥಗಳನ್ನು ಅಳಿದುಳಿದ ಬೌದ್ಧ ಸಿದ್ಧ, ಶೈವಸಿದ್ಧ ಪಳೆಯುಳಿಕೆಗಳಂತಿರುವುದನ್ನು ಮತ್ತಲವು ಹಿನ್ನೆಲೆಯಲ್ಲೂ ಪರಿಶೀಲಿಸಬಹುದು. ನೀಲಗಾರರು ಮತ್ತು ದೇವರ ಗುಡ್ಡದ ದೀಕ್ಷೆ ಆಚರಣೆ ಮತ್ತು ಅವರ ಮುಂದುವರಿಕೆಗಳು ಬೌದ್ಧಸಿದ್ಧರ ಮುಂದುವರಿಕೆಗಳಿಗೆ ಹತ್ತಿರವಿದೆ. “ಅಶೋಕ ಚಕ್ರವರ್ತಿಯ ಕಾಲದಲ್ಲಿ (ಕ್ರಿ. ಪೂ. ೨೭೩-೨೩೧) ಪಾಟಲೀಪುತ್ರದಲ್ಲಿ ಕ್ರಿ.ಪೂ. ೨೪೦ ರಲ್ಲಿ ನಡೆದ ಮೂರನೆ ಬೌದ್ದ ಮಹಾಸಮ್ಮೇಳನವು ದೇಶ ವಿದೇಶಗಳಲ್ಲಿ ಧರ್ಮಪ್ರಚಾರ ಕೈಗೊಳ್ಳಲು ನಿರ್ಧರಿಸುತ್ತದೆ. ಅದರಂತೆ ಮಹಾದೇವ ಮತ್ತು ರಕ್ಖಿತ ಎಂಬ ಬೌದ್ದ ಬಿಕ್ಕುಗಳು ಕರ್ನಾಟಕದ ಮಹಿಷಮಂಡಲ ಮತ್ತು ಬನವಾಸಿಗೆ ಬಂದು ಬುದ್ಧ ಧರ್ಮ ಪ್ರಚಾರ ಮಾಡುತ್ತಾರೆ. ಮಹಾದೇವ ಮಹಿಷಮಂಡಲದಲ್ಲಿ ೪೦,೦೦೦ ಜನರಿಗೆ ಪಬ್ಬಜ್ಜಾ ದೀಕ್ಷೆ ಕೊಟ್ಟನು. ರಕ್ಖಿತ ಬನವಾಸಿಯಲ್ಲಿ ೬೦,೦೦೦ ಜನರನ್ನು ಬೌದ್ದ ಧರ್ಮಕ್ಕೆ ಮತಾಂತರಿಸಿ ೩೭,೦೦೦ ಜನರಿಗೆ ಪಬ್ಬಜ್ಜಾ ದೀಕ್ಷೆ ಕೊಟ್ಟನು ಎಂಬುದಾಗಿ ಶ್ರೀಲಂಕದ ಬೌದ್ಧಸಾಹಿತ್ಯ ಕೃತಿ ‘ಮಹಾವಂಶ’ ವಿವರಿಸುತ್ತದೆ.” ಮಹಿಷಮಂಡಲವೆಂಬ ಮೈಸೂರಿಗೆ ಶತಮಾನಗಳ ಹಿಂದೆಯೇ ಮಹಾದೇವ ಬೌದ್ಧಬಿಕ್ಕು ಪಾಟಲೀಪುತ್ರವೆಂಬ ಉತ್ತರ ದೇಶದಿಂದ ಬರುತ್ತಾನೆ. ಅಂದರೆ ಕತ್ತಲ ರಾಜ್ಯವೆಂಬ ಮೈಸೂರು ಸೀಮೆಗೆ ಬೌದ್ಧ ಧರ್ಮ ಹಳೆಯದು. ಇಂತಹ ಮೈಸೂರು ಸೀಮೆಯ ಕತ್ತಲ ರಾಜ್ಯಕ್ಕೆ ಜನಪದ ಕಾವ್ಯ ನಾಯಕ ಮಾದಯ್ಯನು ಪ್ರವೇಶಿಸುವುದು ಉತ್ತರದಿಂದಲೆ ಬಂದು. ಕದ್ರಿಯ ಬೌದ್ಧಸಿದ್ಧ ಕೇಂದ್ರ ನಾಥಸಿದ್ಧಕೇಂದ್ರವಾದಂತೆ ಮೈಸೂರು ಸೀಮೆಯಲ್ಲಿ ಆಗಿರುವ ಕೇಂದ್ರಗಳನ್ನು ಶೋಧಿಸಬೇಕು. ಮಾದಯ್ಯ ಅಂತಹ ಬದಲಾದ ನಾಥಸಿದ್ಧನಾಗಿ ೧೫- ೧೬ನೇ ಶತಮಾನದಲ್ಲಿ ಮುಂದುವರಿದನೆ ಎಂಬ ಹಿನ್ನೆಲೆಯಲ್ಲಿಯೂ ಮಾದಯ್ಯನ ಪರಂಪರೆಯನ್ನು ಪರಿಶೀಲಿಸಬಹುದು.

ದೇವರ ಗುಡ್ಡರ ದೀಕ್ಷೆ

ಮಾದಯ್ಯನ ಪಂಥದ ಉಳಿವು ಮತ್ತು ಮುಂದುವರಿಕೆ ಈ ದೀಕ್ಷೆಯನ್ನು ಅವಲಂಬಿಸಿದೆ. ಕಂಪಣ ಬೇಡರು, ಸೋಲಿಗರು, ಹೊಲೆಯ, ಮಾದಿಗ, ಕುರುಬ, ಕುಂಬಾರ, ಉಪ್ಪಾರ,ಪರಿವಾರ ನಾಯಕ, ಗಾಣಿಗ, ಮಡಿವಾಳ, ಒಕ್ಕಲಿಗ ಗೌಡ ಲಿಂಗಾಯಿತ ಹೀಗೆ ಬಹುತೇಕ ಎಲ್ಲಾ ಸಮುದಾಯಗಳು ಒಕ್ಕಲಾಗಿ ದೀಕ್ಷೆ ಪಡೆಯುತ್ತಾರೆ. ಇವರೇ ದೇವರು ಗುಡ್ಡರು.

ವಿವಾಹ ಪೂರ್ವದಲ್ಲಿ ಕುಟುಂಬದ ಗಂಡುಮಗನಿಗೆ ದೀಕ್ಷೆ ಕೊಡಲಾಗುತ್ತದೆ. ದೀಕ್ಷೆ ಒಂದು ಶುಭಕಾರ್ಯವಾಗಿದ್ದು, ವ್ಯಕ್ತಿಯೊಬ್ಬನನ್ನು ಮಾದಯ್ಯನ ಪಂಥದ ಪ್ರತಿನಿಧಿಯನ್ನಾಗಿ ಮಾಡಿ ಅದನ್ನು ಪ್ರಚಾರ ಮಾಡಲು ಅಪೇಕ್ಷಿಸುವ ಆಚರಣೆಯಾಗಿದೆ. ಸೋಮವಾರ, ಶುಕ್ರವಾರಗಳು ದೀಕ್ಷೆಗೆ ಪ್ರಶಸ್ತ ದಿನಗಳು. ದೀಕ್ಷೆಗೆ ಒಳಗಾಗುವ ಹುಡುಗನಿಗೆ ತಲೆ ಬೋಳಿಸಿ, ಸ್ನಾನ ಮಡಿ ಮಾಡಿಸಿ ಬಿಳಿ ಅಂಗಿ, ಪಂಚೆ, ಟವಲ್ಲು ಹಾಕಿಸುತ್ತಾರೆ. ಪುರುಷಕಾರಿ ಎಂಬ ಹಿರಿಯ ದೇವರ ಗುಡ್ಡಯ್ಯಾ, ಮಾದಯ್ಯನ ಹೆಸರಲ್ಲಿ ರುದ್ರಾಕ್ಷಿ ಧಾರಣೆ ಮಾಡಿ “ಶೈವ ದೀಕ್ಷೆ” ನೀಡಿ ಗುಡ್ಡನಿಗೆ ನೀತಿ ಬೋಧನೆ ಮಾಡುತ್ತಾನೆ. ಇದುವರೆಗೆ ನಾನು ನನ್ನತಂದೆ, ತಾಯಿ ಮಗನಾಗಿದ್ದೆ, ಇನ್ನುಮುಂದೆ ಮಾದಯ್ಯನ ಮಗ. ವಂಚನೆ, ಅನ್ಯಾಯ, ಅತ್ಯಾಚಾರ, ಹಿಂಸೆ ಮಾಡದೆ ಒಳ್ಳೆಯ ಮಾತನಾಡುತ್ತ ನಾಲ್ಕು ಮನೆ ಭಿಕ್ಷ ಮಾಡಿದರೂ, ಹಂಚಿ ಉಣ್ಣುವೆ ಎಂದು ಗುಡ್ಡನಾದವ ಎಲ್ಲರ ಸಮ್ಮುಖದಲ್ಲಿ ವಾಗ್ಧಾನ ಮಾಡುತ್ತಾನೆ. ನಂತರ ಅವನು ನಗಬೆತ್ತ, ಜಾಗಟೆ ಅಥವಾ ಕಂಸಾಳೆ,ಜೋಳಿಗೆ ಸ್ವೀಕರಿಸುತ್ತಾನೆ. ಇದನ್ನು ದೀಕ್ಷೆ ಎನ್ನಲಾಗುವುದು. ದೀಕ್ಷೆ ನಂತರ ಗುಡ್ಡಯ್ಯ ವಿವಾಹವಾಗಬಹುದು. ಪ್ರತೀ ಸೋಮವಾರ, ಶುಕ್ರವಾರ ಮಾದಯ್ಯನ ಗದ್ದಿಗೆ ಪೂಜಿಸಿ ನಾಲ್ಕಾರು ಮನೆ ಬಿಕ್ಷಾ ಮಾಡುತ್ತಾ ಮಾದಯ್ಯನ ಸ್ತುತಿ ಮಾಡುತ್ತಾನೆ. ತಂಬೂರಿ ನುಡಿಸುವುದು ಮತ್ತು ಕಾವ್ಯ ಹಾಡುವುದನ್ನು ಕಲಿತ ಗುಡ್ಡಯ್ಯರು ಅದನ್ನೇ ವೃತ್ತಿ ಮಾಡಿಕೊಂಡು ಊರೂರ ಮೇಲೆ ಹಾಡುತ್ತಾ ಭಿಕ್ಷಾ ಸಾರುತ್ತಾರೆ.

ದೇವರ ಗುಡ್ಡರ ದೀಕ್ಷೆ ಎಂದರೆ ವೀರಶೈವ ಪರಿಕಲ್ಪನೆಯ ಲಿಂಗಧಾರಣೆಯ ದೀಕ್ಷೆಯಲ್ಲ. ರುದ್ರಾಕ್ಷಿಧಾರಣೆ ಜೊತೆಗೆ ಮಾದಯ್ಯನ ಹೆಸರಿನ ಶಿವ ದೀಕ್ಷೆಯಾಗಿರುತ್ತದೆ. ಈ ಆಚರಣೆಯು ಮಾದಯ್ಯನ ಪಂಥ ವೀರಶೈವವಲ್ಲ ಎಂಬುದಕ್ಕೆ ಇಂದಿಗೂ ಪುರಾವೆಯಾಗಿ ಉಳಿದಿದೆ. ಮಾದಯ್ಯನ ದೇವರ ಗುಡ್ಡರ ಈ ಪಂಥ ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಮಂಡ್ಯ, ಬೆಂಗಳೂರು ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡು ಭಾಗಗಳಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ. ಇದು ಚರಿತ್ರೆಯಲ್ಲಿ ದಾಖಲಾಗದೆ ಜನಸಮುದಾಯಗಳ ನಡುವೆ ಇಂದಿಗೂ ಜೀವಂತವಿರುವ ಒಂದು ಸಂಸ್ಕೃತಿ, ಧರ್ಮ ಮತ್ತು ಜನಪದವೆಂಬ ಜನಚರಿತ್ರೆಯಾಗಿದೆ. ನಾಗಬೆತ್ತ, ಜೋಳಿಗೆ, ಜಾಗಟೆ, ಕಂಸಾಳೆ, ಹುಲಿ ಮತ್ತು ಮಾದಯ್ಯ ಈ ಸಂಸ್ಕೃತಿಯ ಸಂಕೇತಗಳಾಗಿವೆ.

ಹೆಣ್ಣು ಮಕ್ಕಳನ್ನು ಗುಡ್ಡಮ್ಮ ಅಥವಾ ಗುಡ್ಡಿ ಬಿಡುವ ಪದ್ಧತಿ ಹರಿಜನರಲ್ಲಿ ಮಾತ್ರ ತೀರ ವಿರಳವಾಗಿ ನಡೆದುಕೊಂಡುಬರುತ್ತದೆ. ಅದರೆ ಸೂತಕವಾಗುವ ಹೆಂಗಸನ್ನು ಗುಡ್ಡಿ ಬಿಡಬಾರದೆಂದು ಕೆಲವರು ಹೇಳುತ್ತಾರೆ. ಗುಡ್ಡಿ ಮಾದೇವನ ಶಿಶು ಮಗಳಾದ ಮೇಲೆ ಅವಳಿಗೆ ವಿವಾಹವಿಲ್ಲ. ಯಾವನಾದರು ಗುಡ್ಡ ಇಷ್ಟಪಟ್ಟರೆ ಅವನ ಸೇವೆಯನ್ನು ಗುಡ್ಡಿ ಮಾಡಬೇಕಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಆಕೆಗೆ ಗೌರವಾಧಾರಗಳು ಸಲ್ಲುತ್ತವೆ. ಇತ್ತೀಚೆಗೆ ಈ ಪದ್ಧತಿ ಮರೆಯಾಗುತ್ತದೆ. ಗಂಡಸರು ಮಾತ್ರ ಗುಡ್ಡರಾಗುವುದು ಸರ್ವೇಸಾಮನ್ಯ.

ಆಚರಣೆಗಳು

ನಡುಮಲೆಯ ಗುಡಿಯೊಳಗೆ ಮಾದಯ್ಯ ಲಿಂಗರೂಪದಲ್ಲಿ ಪೂಜೆಗೊಳುತ್ತಿದ್ದಾನೆ.ಐಕ್ಯಸ್ಥಳವೆನ್ನಲಾಗುವ ಅಲ್ಲಿರುವ ಪೀಠವಿರುವ ಲಿಂಗವಲ್ಲ. ಪೀಠವಿಲ್ಲದ ಕಪ್ಪುಕಲ್ಲಿನ ಏಕಲಿಂಗ ಕೂಡಲ ಸಂಗಮದ ಬಸವಣ್ಣನ ಐಕ್ಯಸ್ಥಳದ ಲಿಂಗದ ರೀತಿ ಇದರ ಮೇಲೆ ನಾಗಾಭರಣದ ಚಿನ್ನದ, ಬೆಳ್ಳಿಯ ಕೊಳಗಳನಿಟ್ಟು ಪೂಜಿಸಲಾಗುತ್ತದೆ. ಇಲ್ಲಿ ದೀಪಾವಳಿ, ಯುಗಾದಿ, ಶಿವರಾತ್ರಿ, ಸಂಕ್ರಾಂತಿ, ಗೌರಿ, ಕಾರ್ತಿಕ ತಿಂಗಳಂದು ವಿಶೇಷ ಪೂಜೆ, ಜಾತ್ರೆಗಳು ನಡೆಯುತ್ತವೆ. ಹಾಲರುವೆ ಮಾದಯ್ಯನಿಗೆ ಸಲ್ಲುವ ವಿಶೇಷ ಆಚರಣೆ. ಬೇಡಗಂಪಣ ಋತುಮತಿಯಾಗದ ಹೆಣ್ಣುಮಕ್ಕಳು ಗುಡಿಗೆ ಸಮೀಪದ ಹಾಲಳ್ಳದಿಂದ ಹೂ ಹೊಂಬಾಳೆ ಧರಿಸಿ ಕರಗ ಪೂಜಿ ತರುವುದು ಹಲರವೆ, ಈ ಸಂದರ್ಭದಲ್ಲಿ ಬೇಡಗಂಪಣರು ಕತ್ತಿ ಪವಾಡ ಮಾಡುತ್ತಾರೆ. ದೇವಾಲಯದಲ್ಲಿ ಜಾಗಟೆ, ನಗಾರಿ ಬಾರಿಸುತ್ತಾರೆ. ಶಿವರಾತ್ರಿಗೆ ಕೊಂಡೋತ್ಸವ ಮಡುವ ಆಚರಣೆ ಮಾದಯ್ಯನ ಪರಂಪರೆಯಲ್ಲೂ ಇದೆ. ತಮ್ಮಡಿಗಳು ಗುರುಗಳ ಮೂಲಕ ಇದನ್ನು ಮಾದಯ್ಯನಿಗೆ ಅರ್ಪಿಸುತ್ತಾರೆ. ವಿಶೇಷವೆಂದರೆ ಬರುವ ಪರಿಶೆ ಎಲ್ಲರು ಕೊಂಡ ಹಯಬಹುದು. ಇದು ತಮ್ಮನ್ನು ತಾವೇ ಸತ್ಯ ಪರೀಕ್ಷೆಗೆ ಒಡ್ಡಿ ಕೊಳ್ಳುವ ಮತ್ತು ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸುವುದಾಗಿದೆ.

ಪ್ರತೀ ತಿಂಗಳು ಹಾಗೂ ಎಲ್ಲ ಹಬ್ಬಗಳಂದು ಮಾದಯ್ಯನಿಗೆ ಎಣ್ಣೆ ಮಜ್ಜನ ಸೇವೆ ನಡೆಯುತ್ತದೆ. ಸರಗೂರ ಶರಣರಾದ ರಾಮವ್ವ ಮೂಗಪ್ಪನ ವಂಶಸ್ಥರು ಇಂದಿಗೂ ಇದನ್ನು ನಡೆಸಿಕೊಡುತ್ತಾರೆ. ಎಳ್ಳನ್ನು ಅರೆದು ಎಣ್ಣೆ ತೆಗೆದು ಲಿಂಗಕ್ಕೆ ಹಚ್ಚಿ ನೀರು, ಎಳನೀರಿನಿಂದ ತೊಳೆಯುವುದನ್ನು ಎಣ್ಣೆ ಮಜ್ಜನ ಎನ್ನುವರು, ಮೂರು ನಾಮ ಧರಿಸಿದ ವೈಷ್ಣವ ಪಂಥದ ದಾಸಯ್ಯಗಳ ವೇಷದಲ್ಲೇ ಸರಗೂರ ಶರಣರು ಈ ಆಚರಣೆ ನಡೆಸುವುದು ಗಮನಾರ್ಹ. ಇದು ಮಾದಯ್ಯ ಮತ್ತು ಬಿಳಿಗಿರಿ ರಂಗಯ್ಯನ ಸ್ನೇಹ ಸೌಹಾರ್ದತೆ ಕುರುಹೊ ಅಥವಾ ವೈಷ್ಣವ ಭಕ್ತರ ಭಾಗವಹಿಸುವಿಕೆಯ ಪಳಯುಳಿಕೆಯೂ ಇರಬೇಕು. ಎಳ್ಳು, ಬೆಲ್ಲ, ಏಲಕ್ಕಿ ಸೇರಿಸಿ ಕುಟ್ಟಿ ಮಾಡುವ ಮಿಶ್ರಣವನ್ನು ಎಣ್ಣೆ ಮಜ್ಜನ ಪ್ರಸಾದವೆಂದು ಹಂಚಲಾಗುವುದು.

ದೂಪದ ಸೇವೆ, ಪಂಜಿನ ಸೇವೆ, ಉರುಳು ಸೇವೆ, ಮಡಿ ಸೇವೆ ಒಚ್ಚಮಗ್ಗಲ ಸೇವೆ ಎಂಬ ಹೆಸರಲ್ಲಿ ಪರಿಶೆ ಮಾದಯ್ಯನಿಗೆ ವಿವಿಧ ಆಚರಣೆಗಳನ್ನು ಸಲ್ಲಿಸುತ್ತದೆ. ‘ರಜ’ ಹೊಡೆಯುವುದು ಬಹತೇಕ ಹೆಂಗಸರು ಮಾಡುವ ಆಚರಣೆ. ಮಕ್ಕಳ ಫಲವನ್ನು ಒಳಗೊಂಡು ವಿವಿಧ ಕೋರಿಕೆಗಳ ಈಡೇರಿಕೆಗಳಿಗಾಗಿ ಮಹಿಳೆಯರು ದೇವಾಲಯದ ಒಳಾಂಗಣ, ಹೊರಾಂಗಣಗಳ ಕಸ ತೆಗೆಯುವುದನ್ನು ರಜ (ದೂಳು) ಹೊಡೆಯುವುದು ಎನ್ನಲಾಗುವುದು. ದೇವಾಲಯದ ಸುತ್ತಲೂ ಒಂದೇ ಮಗ್ಗಲಲ್ಲಿ ತೆವಳುವುದು ಒಚ್ಚಮಗ್ಗಲ ಸೇವೆ. ಇದು ಬಹುತೇಕ ಹೆಂಗಸರು ಸಲ್ಲಿಸುವ ಆಚರಣೆ.

ಭಕ್ತಾದಿಗಳು ತಾವು ಬೆಳೆದ ಬೆಳೆಯ ಮುಂದಲ ಧವಸದಾನ್ಯಗಳನ್ನು ತಂದು ಮಾದಯ್ಯನ ತೇರಿಗೆ ಎರಚುವುದಿದೆ. ಹಣ್ಣು ಜವನ ತೆಂಗಿನಕಯಿಗಳನ್ನು ಎಸೆಯುವುದಿದೆ. ಹಿಟ್ಟಿನ ಮುದ್ದೆ, ಕೋಳಿಗಳನ್ನು ತೇರಿಗೆ ಎಸೆಯುವುದು ವಿಶೇಷ ಆಚರಣೆ. ಇದು ಕ್ರಮೇಣಮಾಂಸಾಹರದ ನಿಷಿದ್ಧದ ನಂತರದ ಸಾಂಕೇತಿಕ ಆಚರಣೆಯಾಗಿಬಹುದು. ಮಾದಯ್ಯನ ತೇರಿನ ಮಾಳದಲ್ಲಿ ಹೆಂಗಸರು ಮಾಡುವ ಮಗ್ಗಲ ಸೇವೆ ತಿಂಗಳ ಸೇವೆಗಳು ಗಮನಾರ್ಹ.

ಮಂಗಳ

ಮಾದಯ್ಯನ ಪಂಥ ಮತ್ತು ಸಂಸ್ಕೃತಿಯಲ್ಲಿ ಆತ ತಂಗಿದ್ದ ಸ್ಮೃತಿಯ ಸ್ಥಳಗಳು ಇಂದಿಗೂ ಅವನ ಹೆಸರಿನಲ್ಲಿ ದೇವಾಲಯಗಳಾಗಿವೆ. ಕೇರಳ, ತಮಿಳುನಾಡುಗಳನ್ನೊಳಗೊಂಡು ದಕ್ಷಿಣ ಕರ್ನಾಟಕದಾದ್ಯಂತ ಇವನ ಶ್ರದ್ಧಾಕೆಂದ್ರಗಳಿವೆ. ಇಂತ ಕೇಂದ್ರಗಳಲ್ಲಿ ಏಳುಮಲೆ ಅವನ ಕರ್ಮ ಭೂಮಿ. ಸಾಮಾನ್ಯವಾಗಿ ಮಾದಯ್ಯ ಗುಡಿಗಳಲ್ಲಿ ಲಿಂಗರೂಪಿಯಾಗಿ, ನಾಗ ಬೆತ್ತ ರೂಪದಲ್ಲಿ, ಕಂಸಾಳೆ, ಜೋಳಿಗೆ ರೂಪದಲ್ಲಿ, ದಲಿತರ ಗದ್ದಿಗೆಗಳ ರೂಪದಲ್ಲಿ ಆರಾಧಿಸಲ್ಪಡುತ್ತಾನೆ. ಮಾದಯ್ಯನವೆಂದು ಹೇಳಿಕೊಳ್ಳುವ ಕೆಲವು ವಸ್ತುಗಳು ಸಾಲೂರು ಮಠದಲ್ಲಿವೆ ಎನ್ನಲಾಗಿದೆ.

ಮಾದಯ್ಯನ ಬೆಟ್ಟದಲ್ಲಿ ಸಾಲೂರು ಮಠವಿದೆ. ಇದು ಮಾದಯ್ಯನಿಂದಲೇ ಆರಂಭವಾಯಿತು ಎಂಬ ಮಾತಿದೆ. ಸಂಕಮ್ಮನ ಒಕ್ಕಲು ಪಡೆದು ಅವಳ ಮಕ್ಕಳನ್ನು ಶಿಷ್ಯರನ್ನಾಗಿ ಮಾಡಿಕೊಂಡನು. ಅವರಿಗೆ ಸ್ಥಾಪಿಸಿದುದೇ ಇದು. ಸೋಲಿಗರ ಮಠ ಕ್ರಮೇಣ ಸಾಲೂರು ಮಠವಾಗಿದೆ. ಮಾದಯ್ಯನ ಪಂಥ, ಸಂಸ್ಕೃತಿ, ಪರಂಪರೆಯಲ್ಲಿ ಈ ಮಠದ ಸ್ಥಾನ, ಪಾತ್ರೇನೂ ಇಲ್ಲ. ಈ ಮಠದಲ್ಲಿ ಮಾದಯ್ಯ ಬಳಸುತ್ತಿದ್ದನೆಂದು ಹೇಳಲಾಗುವ ಜೋಳಿಗೆ, ನಾಗಬೆತ್ತ, ಪದರಕ್ಷೆ, ಕರಡಿಗೆ, ಕಂಸಾಳೆ, ಶಂಖ ಇನ್ನೂ ಮೊದಲಾದ ವಸ್ತುಗಳಿವೆ. ಇವು ಮಾದಯ್ಯನ ಜೀವನ ಪರಿಕರಗಳೇ ಆಗಿದ್ದರೆ ಅವು ಆತನ ಸಾಂಸ್ಕೃತಿಕ ಚರಿತ್ರೆಯ ಭಾಗವೂ ದೊಡ್ಡ ದಾಖಲೆಗಳು ಆಗಿರುತ್ತವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪೂರ್ವಘಟ್ಟಗಞಲ ಎಪ್ಪತ್ತೇಳು ಮಲೆಗಳ ನಡುವೆ ಮಲೆಯ ಮಾದಯ್ಯ ನೆಲೆಸಿದ ಸಂಸ್ಕೃತಿ ಕೇಂದ್ರವಿದೆ. ಇದೆ ಕೋಟಿ ಭಕ್ತರ ಜಾತ್ರೆ, ಪೂಜೆ, ಆಚರಣೆಯ ಶ್ರದ್ಧಾಕೇಂದ್ರವಾಗಿದೆ. ಇದನ್ನು ನಮ್ಮ ಜನಪದರು ‘ಕತ್ತಲ ರಾಜ್ಯ’ ಎಂದು ಕರೆದಿದ್ದಾರೆ. ಇಲ್ಲಿ ಮಾದಯ್ಯ, ಮಂಟೇದರು ಜೋತಿಯಾಗಿ ಬೆಳಗಿದ್ದಾರೆ.

 

ಟಿಪ್ಪಣಿಗಳು

೧. ಡಾ. ಪಿ. ಕೆ. ರಾಜಶೇಖರ, ಮಲೆಮಾದೇಶ್ವರ ಕಾವ್ಯ, ಪುಟ೧೨

೨. ಅದೇ ಪುಟ ೧೦

೩. ಪ್ರೊ. ಎಸ್.ಎಸ್. ಹಿರೇಮಠ, ಮಲೆಮಾದಪ್ಪನ ಕಾವ್ಯ : ಸಾಂಸ್ಕೃತಿಕ ಮುಖಾಮುಖಿ, ಪುಟ ೯೨

೪. ಅದೇ, ಪುಟ ೯೮

೫. ಜಿ.ಶಂ. ಪರಮಶಿವಯ್ಯ, ದಕ್ಷಿಣ ಕರ್ನಾಟಕದ ಜನಪದ ಕಾವ್ಯಗಳು, ಪುಟ ೯೪

೬. ಡಾ. ಪಿ. ಕೆ. ರಾಜಶೇಖರ, ಮಲೆಮದೇಶ್ವರ ಕಾವ್ಯ, ಪುಟ ೧೦೩

೭. ಅದೇ, ಪುಟ ೪೪

೮ ಅದೇ, ಪುಟ ೬೬

೯. ಅದೇ, ಪುಟ ೧೨

೧೦. ಡಾ. ಬಂಜಗೆರೆ ಜಯಪ್ರಕಾಶ ಮಲೆಮಾದಪ್ಪನ ಕಾವ್ಯ : ಸಾಂಸ್ಕೃತಿಕ ಮುಖಾಮುಖಿ, ಪುಟ ೪೨

೧೧. ಅದೇ ಪುಟ ೩೨

೧೨. ಬಿ. ಎಸ್, ಸಣ್ಣಯ್ಯ, ದೇವಚಂದ್ರನ ರಾಜಾವಳಿ ಕಥಾಸಾರ, ಪುಟ ೧೯೮

೧೩ ಡಾ. ಪಿ.ಕೆ. ರಾಜಶೇಖರ, ಮಲೆಮಾದೇಶ್ವರ ಕಾವ್ಯ ಪುಟ ೫೬೬

೧೪. ರಹಮತ್ ತರೀಕೆರೆ, ಕರ್ನಾಟಕದ ಸೂಫಿಗಳು, ಪುಟ

೧೫. ಪ್ರೊ ಬಿ ಷೇಕ್‌ಅಲಿ, ಪ್ರೊ. ಅ ಸುಂದರ ಚರಿತ್ರೆ ಸಂಪುಟ ೧. ೨೯೨

೧೬ ಡಾ. ಪಿ. ಕೆ. ರಾಜಶೇಖರ, ಮಲೆಮಾದೇಶ್ವರ ಕಾವ್ಯ ೨೯