ಬರೆಯಬೇಕಾದ ಚರಿತ್ರೆ

ಒಂದು ಸಲ ಹೀಗೆ ಏಳುಮಲೆ ಕಾಡುದಾರಿಯಲಿ ಹೋಗತ ಇರಬೇಕಾದರೆ ಒಂದು ಹುಲಿಗೂ ಒಬ್ಬ ಮನುಷ್ಯನಿಗೂ ಮಾತಿಗೆ ಮಾತು ಬೆಳೆಯಿತು. ಹುಲಿ ನಾನೆ ಹೆಚ್ಚು ಅಂತ. ಮನುಷ್ಯ ನಾನೆ ಹೆಚ್ಚು ಅಂತ. ಹುಲಿ ಹೇಳಿತು ನಾನು ಒಂದು ಸಲ ಕಣ್ಣು ಕೆಕ್ಕರಿಸಿ ಘರ್ಜಿಸಿದರೆ ಸಾಕು ನೀನು ನಡುಗಿ ಹೋಗುತೀಯ. ಮನಸ್ಸು ಮಾಡಿದರೆ ನಿನ್ನನ್ನು ಸಿಗಿದು ತಿಂದುಬಿಡಬಲ್ಲೆ. ಆದ್ದರಿಂದ ನಾನೇ ಹೆಚ್ಚು ಎಂದಿತು. ಮನುಷ್ಯ ಹೇಳಿದ ನೀನು ಎಷ್ಟೇ ಕ್ರೂರಿಯಾದರೂ ನಿನ್ನನ್ನು ಹಿಡಿದು ಪಳಗಿಸಿ ಹೇಗೆ ಬೇಕಾದರೂ ಆಟ ಆಡಿಸುವ ಜಾಣತನ ನನಗಿದೆ. ನಾನೇ ಹೆಚ್ಚು ಎಂದ.

ಹೀಗೆ ವಾದ ಪ್ರತಿವಾದ ಮಾಡುತ್ತಾ ಹೋಗಬೇಕಾದರೆ ದಾರಿಯಲ್ಲಿ ಮಲೆಮಾದಯ್ಯ ಹುಲಿ ಮೇಲೆ ಕುಳಿತ ಒಂದು ಚಿತ್ರಪಟ ಕಾಣಿಸಿತು. ಆಗ ಅದನ್ನು ಹುಲಿಗೆ ತೋರಿಸಿ ಮನುಷ್ಯ ಹೇಳಿದ ನೋಡು ಮೇಲೆ ನಾನು ಕುಳಿತಿದ್ದೇನೆ. ಈಗ ಯಾರು ಹೆಚ್ಚು ನೀನೇ ಹೇಳು ಎಂದ. ಹುಲಿ ಆ ಚಿತ್ರಪಟವನ್ನು ದಿಟ್ಟಿಸಿ ನೋಡಿತು. ಚಿತ್ರಪಟ ಕೆಳಗೆ ಬಲಗಡೆ ಅದನ್ನು ಬರೆದವನ ಹೆಸರಿತ್ತು. ಆಗ ಹುಲಿ ಮನುಷ್ಯನಿಗೆ ಹೇಳಿತು. ಇದು ಮನುಷ್ಯ ಬರೆದ ಚಿತ್ರಪಟ. ಆದ್ದರಿಂದ ಹುಲಿಯ ಮೇಲೆ ಮನುಷ್ಯ ಕುಳಿತಿದ್ದಾನೆ. ಇದನ್ನು ಒಂದು ಹುಲಿ ಬರೆದಿದ್ದರೆ ಮನುಷ್ಯನ ಮೇಲೆ ಹುಲಿ ಕುಳಿತಿರುತ್ತಿತ್ತು ಎಂದು ಹೇಳಿತು.

ಇತಿಹಾಸ ಬರೆದವನದಾಗಿರುತ್ತದೆ. ಇತಿಹಾಸ ವಂಚಿತರು ಹುಲಿಯ ಹಾಗೆ ತಳದಲ್ಲಿರುತ್ತಾರೆ. ತಳದಲ್ಲಿರುವವರ ಚರಿತ್ರೆಯನ್ನು ತಳದವರು ಬರೆಯಬೇಕು. ಹುಲಿ ಮತ್ತು ಮಾದಯ್ಯ ಇಲ್ಲಿ ಚರಿತ್ರೆಯ ಎರಡು ಮುಖಗಳು. ಆದರೆ ಅವು ಒಂದೇ ಪ್ರತಿಮೆ.

ಮಾದಯ್ಯ ಮಾಕಾವ್ಯ

ಮಲೆಯ ಮಾದಯ್ಯ ಕನಾಟಕ ಜನಪದ ಮಹಾಕಾವ್ಯವಾದ ‘ಮಲೆಮಾದೇಶ್ವರ ಕಾವ್ಯ’ ಮತ್ತು ಪರಂಪರೆಯ ನಾಯಕ. ಹಾಗೆ ಕರ್ನಾಟಕದ ಜನಪದ ಕಲೆಗಳಲ್ಲೊಂದಾದ ಕಂಸಾಳೆ ಕಲೆಯ ಕರ್ತೃ ಮತ್ತು ಮಲೆಯಮಾದೇಶ್ವರ ಪಂಥ ಅಥವಾ ಕಂಸಾಳೆ ದೇವರ ಗುಡ್ಡರ ಪಂಥದ ದೈವ. ಮಲೆಮಾದಯ್ಯನ ಮಹಾಕಾವ್ಯ ನಮ್ಮ ದೇಶದ ಮಹಾಕಾವ್ಯಗಳಷ್ಟೇ ಮುಖ್ಯವಾದದ್ದು. ಫಿನ್ ಲ್ಯಾಂಡಿನ ‘ಕಲೇವಾಲ’ ವಿಶ್ವದ ಮೊದಲ ಸುದೀರ್ಘ ಜನಪದ ಕಾವ್ಯ ಎನಿಸಿದ್ದು, ಇದು ೨೨,೭೯೫ ಸಾಲುಗಳಿಂದ ಕೂಡಿದೆ. ಕನ್ನಡದ ಮಲೆಮಾದೇಶ್ವರ ಜನಪದ ಮಹಾಕಾವ್ಯ ೩೨,೦೦೦ಕ್ಕೂ ಹೆಚ್ಚು ಸಾಲುಗಳ ಸುಧೀರ್ಘ ಕಾವ್ಯವಾಗಿದೆ. ಇದು ಭಾರತ ಹಾಗೂ ವಿಶ್ವದ ಜನಪದ ಮಹಾಕಾವ್ಯಗಳಿಗೆ ಸ್ಪರ್ಧಿಯಾಗಿ ನಿಲ್ಲಬಲ್ಲ ಕಾವ್ಯ. ಇದು ಹಾದಿಯೊಳಗಲ ಕಾವ್ಯ, ಬೀದಿಯೊಳಗಲ ಕಾವ್ಯ. ತಿಪ್ಪೆ ಮೇಗಲ ಕಾವ್ಯ. ಕುಲೇಳು ಹದಿನೆಂಟು ಜಾತಿ, ಮತಗಳನ್ನು ಒಂದು ಮಾಡುವ ಕಾವ್ಯ. ಹೊಟ್ಟೆಪಾಡಿಗೆ ಕಾವ್ಯ ಹಾಡುವುದನ್ನೇ ವೃತ್ತಿ ಮಾಡಿಕೊಂಡು ಕತ್ತಲರಾಜ್ಯದ ಅನಕ್ಷರಸ್ಥರಿಂದ ಇದು ಇಂದಿಗೂ ಉಳಿದುಬಂದಿದೆ. ಬೆಳೆದುಬಂದಿದೆ.

ಮಲೆಮಾದಯ್ಯ ಕನ್ನಡ ನೆಲದಲ್ಲಿ ತನ್ನದೇ ಸಂಸ್ಕೃತಿ, ಪಂಥ ಒಂದರ ಹುಟ್ಟಿಗೆ ಕಾರಣನಾಗಿದ್ದಾನೆ. ಇದು ವೀರಶೈವವಲ್ಲದ ಅವೈದಿಕ ದ್ರಾವಿಡ ಶೈವ ಪರಂಪರೆಯ ದೇವರ ಗುಡ್ಡರ ಪಂಥವಾಗಿದೆ. ‘ಮಲೆಯ ಮಾದಯ್ಯ’ ಎಂಬುದೇ ಒಂದು ಆದಿಮ ಪರಿಕಲ್ಪನೆ. ಅವನಿಗೆ ಅಷ್ಟೊಂದು ಪ್ರಾಚೀನತೆ ಇಲ್ಲದಿದ್ದರೂ ಅಂತಹದೊಂದು ಹಿನ್ನೆಲೆಯ ಪಂಥವನ್ನು ಮುಂದುವರೆಸಿದವನಾಗಿದ್ದಾನೆ. ೧೨ ನೇ ಶತಮಾನದ ವಚನ ಚಳುವಳಿಯು ಸ್ಥಾವರಗೊಂಡ ನಂತರದಲ್ಲಿ ಮಾನವತೆ, ಸಮಾನತೆ ನೆಲೆಯಲ್ಲಿ ಜಾತ್ಯಾತೀತ, ಧರ್ಮಾತೀತಾವಾಗಿ ಕಾಣಿಸಿಕೊಂಡವ ಮಲೆಯ ಮಾದಯ್ಯ. ಈತ ಬುದ್ಧ, ಅಲ್ಲಮ ಗೋರಖ, ಮಚ್ಚೇಂದ್ರ, ಮಂಟೇಸ್ವಾಮಿ, ಮರ್ಧಾನೆಗಯಿಬ್ ರಂತೆ ಸ್ವತಂತ್ರ ಐಡೆಂಟಿಟಿಯನ್ನು ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಚರಿತ್ರೆಯಲ್ಲಿ ಉಳ್ಳವನಾಗಿದ್ದಾನೆ. ಹಾಗೆ ತನ್ನದೇ ಒಂದು ಪಂಥದ ಸ್ಥಾಪಕನಾಗಿದ್ದಾನೆ.

ಅತೀತನ ಕಾಲವ ಹುಡುಕುತ

ಮಲೆಯ ಮಾದಯ್ಯ ಒಬ್ಬ ಐತಿಹಾಸಿಕ ವ್ಯಕ್ತಿ. ಅವನು ಮೈಸೂರು ಸೀಮೆಯ ಕತ್ತಲ ರಾಜ್ಯದ ಏಳು ಮಲೆಯೊಳಗೆ ನೆಲೆಸಿದ ಬಹುಸಂಖ್ಯಾತರ ದೈವ. ಈ ಮಾದಯ್ಯ ಯರು? ಯಾವ ಪ್ರದೇಶದವನು? ಇವನ ಜನನ, ಕುಲಮೂಲ, ಸ್ಥಳಮೂಲ, ಇವನ ಅಂತ್ಯ ಮೊದಲಾದ ವಿಷಯಗಳು ಸ್ಪಷ್ಟತೆ ಇಲ್ಲದಿದ್ದರೂ ಒಂದಿಷ್ಟು ಆಧಾರಗಳು ಆ ಬಗ್ಗೆ ಬೆಳಕು ಚೆಲ್ಲುತ್ತವೆ.

ಮಾದಯ್ಯನ ಕುರಿತಾದ ಹಳೆಯ ದಾಖಲೆ ಎಂದರೆ ಚಾಮರಾಜ ನಗರ ತಾ. ಹರದನ ಹಳ್ಳಿಯ ಕ್ರಿ. ಶ. ೧೩೨೪ ರ ಹೊಯ್ಸಳ ವೀರಬಲ್ಲಳನ ಕಾಲದ ತಾಮ್ರ ಶಾಸನ. ಇದು ಮಾದಯ್ಯ ಶ್ರವಣನನ್ನು ಸಂಹರಿಸಿ, ಪ್ರಭುಲಿಂಗಾರಾಧ್ಯರಿಂದ ಲಿಂಗಾಧಾರಣೆ ಮಾಡಿಸಿಕೊಂಡು, ವಜ್ರಮಲೆಯಲ್ಲಿ ನೆಲೆಸಿ, ಆಲಂಬಾಡಿ ಜುಂಜೇಗೌಡನಿಂದ ದೇವಾಲಯ ಕಟ್ಟಿಸಿಕೊಂಡು, ಬೇಡರ ಕನ್ನಯ್ಯನಿಂದ ಪೂಜಿಸಿಕೊಂಡು, ಅವರಿಗೆ ಕಾಣಿಕೆ ಪಡೆಯುವ ಹಕ್ಕನ್ನು ನೀಡಿದ್ದಾಗಿ ಹೇಳುತ್ತದೆ.

ಕ್ರಿ.ಶ. ೧೭೯೬ರ ಹೈದರಾಲಿಯ ತಾಮ್ರಶಾಸನ ಮೇಲಿನ ಶಾಸನದ ಮಾಹಿತಿಗಳನ್ನೇ ಪುನರುಚ್ಚರಿಸುತ್ತಾ ಸರಗೂರ ಉಪ್ಪಲಿಗರನ್ನು ಎಣ್ಣೆಮಜ್ಜನಕ್ಕೆ ನೇಮಿಸಿಕೊಂಡ ಅಂಶವನ್ನು ಒಳಗೊಂಡಿದೆ.

ಮಲೆಮಾದಯ್ಯನ ಬೆಟ್ಟದ ತಪ್ಪಲಿನ ಊರಾದ ಮೀಣ್ಯದ ಗುರುಸಿದ್ಧ ಕವಿ ಕ್ರಿ.ಶ. ೧೭೫೦ ರಲ್ಲಿ ಬರೆದ “ಶ್ರೀ ಮಾದೇಶ್ವರ ಸಾಂಗತ್ಯ” ಮಾದಯ್ಯ ಎಪ್ಪತ್ತೇಳುಮಲೆ ದಾಟಿ, ಬೇಡಗಂಪಣ ರಾಜ್ಯ, ಆಲಂಬಾಡಿಗೆ ಬಂದು ಕಾರಯ್ಯನ ಒಕ್ಕಲು ಪಡೆದು ನಡುಮನೆಯಲ್ಲಿ ನೆಲೆಸುತ್ತಾನೆ. ಕಂಪಣ ರಾಯಣ್ಣ ಬಿಲ್ಲಯ್ಯನಿಗೆ ಭೂಮಿ ನೀಡುತ್ತಾನೆ. ಕಂತೂರು ಮಠದ ಸ್ವಾಮಿಗಳಿಂದ ಬಿಲ್ಲಯ್ಯನಿಗೆ ಲಿಂಗದಿಕ್ಷೆಯಾಗುತ್ತದೆ. ಎಂಬುದಾಗಿ ವಿವರಿಸುತ್ತದೆ.

ಕ್ರಿ.ಶ. ೧೮೩೮ರ ಜೈನ ಕವಿ ಚಾಮರಾಜನಗರದ ಮಲೆಯೂರ ದೇವಚಂದ್ರನು ಬರೆದ ‘ರಾಜಾವಳಿ ಕಥಾಸಾರ ‘ ಕುಂತೂರು ಮಠದೊಳು ನಂಜಯ್ಯನೆಂಬ ಜೋಳಿಗೆ ಒಡೆಯರಿದ್ದಲ್ಲಿಗೆ ಮಲೆಮಾದಯ್ಯ ಬಂದನೆಂದು, ಅಲ್ಲಿ ಪವಾಡಗಳ ಮಾಡಿ ಏಳುಮಲೆಯಲ್ಲಿ ಶ್ರವಣನ ಸಂಹರಿಸಿ ‘ಮಾದ’ನಾಗಿದ್ದವನು ಮದೇಶ್ವರನಾಗಿ ವಿವಿಧ ರೀತಿಯಲ್ಲಿ ಪೂಜಿತನಾದನೆಂದು ಉಲ್ಲೇಖಿಸುತ್ತಾನೆ.

ಕ್ರಿ.ಶ. ೧೯೩೩ರಲ್ಲಿ ಸಂಗಪ್ಪಶಾಸ್ತ್ರಿ ಬರೆದ ‘ಸುತ್ತೂರು ಸಿಂಹಾಸನದ ಗುರು ಪರಂಪರೆ’ ಕೃತಿಯಲ್ಲಿ ಸುತ್ತೂರು ಶಿವಾಚಾರ್ಯರ ಮಹಿಮೆ ಕೇಳಿದ ಕಲ್ಯಾಣದ ಕೆಲವು ಶರಣರು ಶ್ರೀಶೈಲದ ಬಳಿಬಂದು ದಾರಿ ಕೇಳಿದರು. ಶಿವನಂಶವಾದ ಮಾದೇಶ್ವರ ಬಾಲಕನಾಗಿ ಅವರನ್ನು ಸತ್ತೂರಿಗೆ ಕರೆತಂದ. ಆಗ ಸುತ್ತೂರು ಮಠದ ಪೀಠಾಧಿಪತಿಗಳಾಗಿದ್ದ ಸಿದ್ಧನಂಜ ದೇಶಿಕರು ಅವನನ್ನು ರಾಗಿ ಬೀಸುವ ಕೆಲಸಕ್ಕೆ ನೇಮಿಸಿದರು. ಅಲ್ಲಿ ಹಲವು ಪವಾಡಗಳನ್ನು ಮೆರೆದ.ಹಾವು ಕಚ್ಚಿ ಸತ್ತ ಯಾತ್ರಿಕನನ್ನು ಬದುಕಿಸಿದ. ಎಳೆಯಲಾಗದ ರಥವ ಎಳೆವಂತೆ ಮಾಡಿದ. ದನಗಳ ಸಂಕ್ರಾಮಿಕ ರೋಗ ನಿವಾರಿಸಿದ. ಆಗ ಸಿದ್ಧನಂಜ ದೇಶಿಕರಿಗೆ ಮದೇಶ್ವರ ಪರಶಿವರೂಪಿ ಎನಿಸಿದ. ಅಷ್ಟಕ್ಕೆ ಅವನು ಮಠ ಬಿಟ್ಟು ಹೊರಟು ಹೋಗಿದ್ದ ಎಂಬ ಮಾಹಿತಿಗಳಿವೆ.

ಈ ಕೆಲವು ಮಾಹಿತಿಗಳನ್ನಿಟ್ಟುಕೊಂಡು ಅವನ ಕಾಲವನ್ನು ಪರಿಶೀಲಿಸಬಹುದು. ಕ್ರಿ. ಶ. ೧೩.೨೪ರ ಹರದನಹಳ್ಳಿ ಶಾಸನ ಮಾದೇಶ್ವರ ಕಾವ್ಯದ ಪ್ರಸಂಗಗಳನ್ನೇ ಉಲ್ಲೇಖಿಸುತ್ತದಾದರೂ ಕ್ರಿ.ಶ. ೧೧೭೦-೧೨೪೯ ರ ಅವಧಿಯ ಸಿದ್ಧನಂಜ ದೇಶಿಕರ ಕಾಲಕ್ಕೆ ಮಾದಯ್ಯನ ಕಾಲವನ್ನು ಲಗತ್ತಿಸುವುದು ಅಸಂಭವನೀಯ ಎನ್ನಲಾಗಿದೆ.

“ದೇವಚಂದ್ರನು ತನ್ನ ದಾಖಲೆಯ ಸರಣಿಯಲ್ಲಿ ಮಾದೇಶ್ವರನ ವಿಷಯವನ್ನು ವಿಜಯನಗರ ಸಾಮ್ರಾಜ್ಯ ಕ್ಷೀಣಿಸುತ್ತಿದ್ದ ಕಾಲಕ್ಕೆ ಸೇರಿಸಿದ್ದಾನೆ. ಬಹುಶಃ ಅವನ ದೃಷ್ಟಿಯಲ್ಲೂ ಮಾದೇಶ್ವರನ ಕಾಲ ೧೫-೧೬ನೇ ಶತಮಾನದ ಅಂತರವೇ ಇರಬೇಕು”

“ಮಾದೇಶ್ವರ ಸುತ್ತೂರು ಮಠಕ್ಕೆ ಬಂದಿದ್ದನೆಂಬ ಹೇಳಿಕೆಗಿಂತಲೂ ಖಚಿತವಾಗಿ ಕುಂತೂರು ಮಠಕ್ಕೆ ಬಂದಿದ್ದನೆಂಬುದು ಹೈದರಾಲಿಯ ಶಾಸನ ಹಾಗೂ ಜನಪದ ಸಾಹಿತ್ಯಗಳಿಂದ ತಿಳಿದುಬರುವುದರಿಂದ ಕಂತೂರು ಮಠದ ಪ್ರಾಚೀನತೆ ಕ್ರಿ.ಶ. ೧೫೧೨ ಎಂದು ಕುಂತೂರು ಶಾಸನದಿಂದ ತಿಳಿದು ಬರುವುದರಿಂದ ಮಾದೇಶ್ವರನ ಕಾಲ ನಿರ್ವಿವಾದವಾಗಿ ೧೬ ನೇ ಶತಮಾನವೆಂದು ಒಪ್ಪಬೇಕಾಗುತ್ತದೆ.”

“ತೋಟಂದ ಸಿದ್ಧಲಿಂಗ ವಚನವೊಂದರಲ್ಲಿ ತನ್ನ ಗುರು ಪರಂಪರೆಯನ್ನು ನೀಡಿದ್ದು ೩ನೇ ಯುವ ನಿರ್ಮಾಣ ಗಣೇಶ್ವರರು ಎಂದಿದ್ದಾನೆ. ನಿರಂಜನವಂಶ ರತ್ನಾಕರ ಇವರನ್ನೇ ಮಾದೇಶ್ವರರು ಎನ್ನುತ್ತದೆ. ಇದನ್ನು ನಂಬುವುದಾದರೆ ಮಾದೇಶ್ವರ ಸಿದ್ಧಲಿಂಗರ ಸಮಕಾಲೀನರಲ್ಲ. ಬಸವಪೂರ್ವ ಯುಗದ ಶೈವ ಪರಂಪರೆಗೆ ಸೇರಿದವರು.”

“ಅನಾದಿ ಗಣೇಶ್ವರರು ಕ್ರಿ. ಶ. ೧೦೦೦ ದಲ್ಲಿರಬಹುದೆಂದು ಡಾ. ಆರ್. ಸಿ ಹಿರೇಮಠದ ಊಹೆ. ಅವರ ಅಭಿಪ್ರಾಯ ಸರಿ ಎನ್ನುವುದಾದರೆ ಮಲೆಮಾದೇಶ್ವರ ಕ್ರಿ. ಶ. ೧೦೫೦ ರ ಸುಮಾರಿನ ಕಾಳಮುಖ ಮಠಾಧೀಶ”. ಎಂಬುದಾಗಿ ವಿಭಿನ್ನ ಅಭಿಪ್ರಾಯಗಳನ್ನು ಮಂಡಿಸಲಾಗಿದೆ.

ಹೀಗಾಗಿ ಮಾದಯ್ಯನ ಕಾಲನಿರ್ಣಯ ಗೊಂದಲದಿಂದ ಕೂಡಿದೆ. ಐತಿಹಾಸಿಕವಾಗಿ ಮಾದಯ್ಯ ಪುರಾತನ ಇರಬಹುದೇ? ಅಥವಾ ವಚನ ಚಳಿವಳಿ ನಂತರದ ವಿಜಯನಗರ ಅವನತಿಯಷ್ಟಿನವನಿರಬಹುದು? ಆದ್ದರಿಂದ ೧೫- ೧೬ನೇ ಶತಮಾನದ ನಡುವೆ ಇವನ ಕಾಲ ಇರಬಹುದೆಂಬುದಕ್ಕೆ ಹೆಚ್ಚಿನ ಆಧಾರಗಳು ಪೂರಕವಾಗುತ್ತವೆ.

ತಳ; ಕುಲ; ತಾಯಿತಂದೆ

ಮಾದಯ್ಯನ ಜನ್ಮಸ್ಥಳ ತಾಯಿ-ತಂದೆಯರ ಕುರಿತು ಸಹ ಸ್ಪಷ್ಟತೆಗಳಿಲ್ಲ, ಕಾವ್ಯದ ವಿಭಿನ್ನ ಪಠ್ಯಗಳು ಬೇರೆ ಬೇರೆ ರೀತಿ ವಿವರಿಸುತ್ತವೆ. “ಉತ್ತರಾಜಪಟ್ಟಣದ ಉತ್ತರಾಜಮ್ಮ ಪತಿವ್ರತೆ. ಅವಳ ಪತಿ ಚಂದ್ರಶೇಖರ ಮಾರ್ತಿ. ಇವರು ಮದುವೆಯಾಗಿದ್ದರೂ ಪರಸ್ಪರ ದೂರ ಇರುತ್ತಾರೆ. ಉತ್ತ ರಾಜಮ್ಮ ಉತ್ತರಾಜಪಟ್ಟಣದಲ್ಲಿ, ಚಂದ್ರಶೇಖರಮೂರ್ತಿ ಕಲ್ಯಾಣ ಪಟ್ಟದಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ಮಾದೇವ ಮಾವಿನ ಹಣ್ಣಾಗಿ ಉತ್ತರಾಜಮ್ಮನ ಗರ್ಭ ಸೇರಿದಾಗ, ಅವಳು ಕದ್ದು ಬಸುರಿಯಾಗಿದ್ದಾಳೆಂದು ಬಿಜ್ಜಳನಿಗೆ ದೂರು ಹೋಗುತ್ತದೆ. ಆಗ ಮಾದೇವ ಉತ್ರಾಜಮ್ಮನ ಬೆನ್ನು ಮಚ್ಚೆಲಿ ಹುಟ್ಟಿ ಬರುತ್ತಾನೆ” ಎಂಬುದು ಒಂದು ಕಾವ್ಯದ ಪಾಠ.

ಉತ್ತರ ದೇಶದ ಉತ್ತಮಪುರದ ಮಾದಿಗ ಕಾಳೇಕಲ್ಯಾಣ ದೇವರು, ಮಡದಿ ಉತ್ತರಾಜಮ್ಮ. ಇವರು ಗಂಡಾ-ಹೆಂಡತಿ ಒಂದಾಗನಿಲ್ಲ. ಯಾವನೋ ಪುಂಡ ಜಂಗಮನಗ ಇವಳು ಕಳ್ಳ ಬಸುರಾಗವಳೆ ಅಂತ ಆದಿಕಲ್ಯಾಣದಲ್ಲಿ ಸುದ್ಧಿಯಾಗುತ್ತೆ. ಆಗ ಉತ್ತರಾಜಮ್ಮ ಬಿಜ್ಜಳನ ಆಸ್ಥಾನ ದಲ್ಲಿ ವಿಚಾರಣೆಗೊಳಗಾಗುತ್ತಾಳೆ. ಕಡೆಗೆ ಮಾದೇವ ಬೆನ್ನಮಚ್ಚೆಯಲ್ಲಿ ಹುಟ್ಟಿ ಉತ್ತರಾಜಮ್ಮ, ಕಾಳೇಕಲ್ಯಾಣ ದೇವರನ್ನ ತಾಯಿ- ತಂದೆಯಾಗಿ ಪಡಿತಾನೆ” ಎಂಬುದು ಕಾವ್ಯದ ಇನ್ನೊಂದು ಪಾಠ.

ಕಂತೂರಿನ ಸಿದ್ಧಪ್ಪಶಾಸ್ತ್ರಿಗಳ “ಮಲೆಮಾದೇಶ್ವರ ನಿಜಪುರಾಣ” ಕೃತಿಯಲ್ಲಿ ಚುಂಚ ದಂಪತಿಗಳು ಮಾದೇಶ್ವರನ ತಂದೆ-ತಾಯಿಗಳೆಂದು ಉಲ್ಲೇಖವಿದೆ. ಇದು ಶಿಷ್ಟ ಸಾಹಿತ್ಯದ ಮಾಹಿತಿ.

ಮೇಲಿನ ಆಧಾರಗಳಲ್ಲಿ ಉತ್ತರಾಜಮ್ಮ ಎಂಬುವಳು ಮಾದಯ್ಯನ ತಾಯಿ ಎಂಬ ಅಂಶ ಸಾಮಾನ್ಯವಾಗಿ ಬಂದಿದೆ. ಒಂದರಲ್ಲಿ ಚಂದ್ರಶೇಖರಮೂರ್ತಿ ತಂದೆ ಎಂತಲೂ, ಇನ್ನೊಂದರಲ್ಲಿ ಕಾಳೇಕಲ್ಯಾಣ ದೇವರು ತಂದೆ ಎಂತಲೂ ಹೇಳಿದೆ. ಉತ್ತಮಪುರ ಎಂಬುದುಈತನ ಸ್ಥಳ ಎಂತಲೂ ಹೇಳುವುದಿದೆ. ಈತನ ತಂದೆ-ತಾಯಿಗಳೂ ಮಾದಿಗರು ಎಂಬುದು ಗಮನಾರ್ಹ ಅಂಶ “ಚುಂಚ” ದಂಪತಿಗಳು ಎಂಬ ಬುಡಕಟ್ಟು, ಕುರುಬ ಹಿನ್ನೆಲೆಯ ಹೆಸರಿನವರೂ ತಂದೆ-ತಾಯಿಗಳಿರ ಬಹುದೆಂಬುದನ್ನು ಗಮನಿಸಬೇಕು.

ಉತ್ತರ ದೇಶ ಅಥವಾ ಉತ್ತಮಪುರ ಅಥವಾ ಕಲ್ಯಾಣ ಮಾದಯ್ಯನ ಜನ್ಮಸ್ಥಳ ಎಂಬುದಾಗಲಿ, ಉತ್ತರಾಜಮ್ಮ, ಚಂದ್ರಶೇಖರಮೂರ್ತಿ, ಕಲ್ಯಾಣ ದೇವರು ಈತನ ತಾಯಿ ತಂದೆಯರೆಂಬುದಾಗಲಿ ಕೇವಲ ಕಾಲ್ಪನಿಕ. ಗಂಡನಿದ್ದರೂ ಅಸಹಜವಾಗಿ ಅಥವಾ ಕಳ್ಳಬಸುರಿಯಾದಳು ಎಂಬುದು ಮತ್ತು ಮಾದಯ್ಯನ ತಾಯಿ- ತಂದೆಯರೂ ಮಾದಿಗರು ಎಂಬುದು ಮಾದಯ್ಯನ ಕುಲಮೂಲವನ್ನು ಒತ್ತಿ ಹೇಳುತ್ತದೆ. ಮಾದಯ್ಯ ಕಾವ್ಯದಲ್ಲಿ ವಿವರಿಸುವಂತೆ ತಂದೆ-ತಾಯಿ ಯಾರೆಂಬುದು ತಿಳಿಯದ ಹುಡುಗ. ತಾಯಿ-ತಂದೆಯರನ್ನು ನಂತರ ಪಡೆಯುತ್ತಾನೆ. ಈ ಪಡೆಯುವುದು ಮತ್ತು ತಂದೆ ಯಾರೆಂದು ತಿಳಿಯದ ತಾಯಿಯೊಬ್ಬಳು ಮಗನಾಗಿರುವುದು, ಬೆನ್ನ ಮಚ್ಚೆಯಲ್ಲಿ ಜನಿಸುವುದು ಈತನ ಜನವನ್ನು, ತಂದೆ-ತಾಯಿಯರ ಮೂಲ ಕೆಳವರ್ಗದ್ದು ಎಂಬುದನ್ನು ಮರೆಮಾಚುವುದಾಗಿದೆ. ಶ್ರವಣ ಮಾದಯ್ಯನನ್ನು ತಂದೆ ಇಲ್ಲದೆ ಹುಟ್ಟಿದವ, ಮಾದಿಗರಿಗೆ ಹುಟ್ಟಿದವ ಎಂದು ಬಯ್ಯುತ್ತಾನೆ.

ಕಾವ್ಯದ ಉಲ್ಲೇಖಗಳು ಮಾದಯ್ಯನೆಂಬ ಸಾಮಾನ್ಯನನ್ನು ಬಸವ ಪರಂಪರೆಗೆ ಲಗತ್ತಿಸಿ ಶ್ರೇಷ್ಟತ್ವಕ್ಕೆ ಏರಿಸುವ, ಪುರಾಣಿಕರಿಸುವ ಪ್ರಯತ್ನಗಳಾಗಿವೆ. ಈತ ಶ್ರೀಶೈಲದವನೂ ಅಲ್ಲ, ಕಲ್ಯಾಣದವನೂ, ಉತ್ತಮಪುರದವನು ಅಲ್ಲ. ಮಾದಯ್ಯ ದಕ್ಷಿಣ ಭಾಗದವನು ಎಂಬುದನ್ನು ಪುರಸ್ಕರಿಸಬೇಕಾಗುತ್ತದೆ. ಇದಕ್ಕೆ ಪರಂಪರೆಯಲ್ಲಿ ಪೂರಕ ಮಾಹಿತಿಗಳಿವೆ.

ಕ್ರಿ.ಶ. ೧೮೩೮ರ ದೇವಚಂದ್ರನ ‘ರಾಜಾವಳಿ ಕಥಾಸಾರ’ ಮಾದಯ್ಯನನ್ನು ಕುರಿತು “ಬಡಗು ಸೀಮೇಯಿಂದ ಬಂದ ಒಬ್ಬ ಮಾದಿಗರ ಹುಡುಗ” ಎಂದು ಉಲ್ಲೇಖಿಸುವುದರಲ್ಲಿ ಈತ ಮಾದಿಗರವನು ಎಂಬ ಜಾತಿಮೂಲವನ್ನು ಹೇಳುವುದಲ್ಲದೆ ಆತನ ಸ್ಥಳ ಮೂಲವನ್ನು ‘ ಬಡಗು ಸೀಮೆ’ ಎಂದು ಹೇಳುತ್ತಿರುವುದನ್ನು ಗಮನಿಸಬೇಕು.

“ಮಾದೇಶ್ವರ ಯಾವ ಜಾತಿ ಅನ್ನುವುದನ್ನು ಈ ಕಾಲದ ಗುಡ್ಡಗಳು ಹೇಳುವುದಕ್ಕೆ ಹೆದರುತ್ತಾರೆ. ನಾಲ್ಕಾರು ಜನರ ಮುಂದೆ ಈ ಕಥೆ ಮಾಡುವಾಗ ಮಾದೇಶ್ವರನನ್ನು ಮಾದಿಗನೆಂದು ಹೇಳಿದರೆ ಗುರುಗಳು, ಭಕ್ತರು, ಕೋಪಿಸಿಕೊಳ್ಳುವ ಸಂಭವವಿದ್ದು ಅದು ತಮ್ಮ ಸಂಪಾದನೆಗೆ ಕೊಡಲಿ ಪೆಟ್ಟೆಂದು ಬಗೆದು ಇತ್ತೀಚೆಗೆ ಬದಲು ಮಾಡಿದ್ದಾರೆ”. ಎಂಬ ಹಿರಿಯ ಜನಪದ ಗಾಯಕನ ಹೇಳಿಕೆ ಮಹತ್ವದ್ದಾಗಿದೆ.

ಮಾದಯ್ಯನ ಕುಲಮೂಲ ಸ್ಪಷ್ಟವಾಗುವಂತೆ ಅವನ ಸ್ಥಳಮೂಲ ಸ್ಪಷ್ಟವಾಗುವುದಿಲ್ಲ. ಕಾವ್ಯದಲ್ಲಿ ಈತ ದೇವಲೋಕದಿಂದ ಅಥವಾ ಶ್ರೀಶೈಲದಿಂದ ಬರುತ್ತಾನೆ. ನಂತರ ಅವನು ಭೀಮನ ಕೊಲ್ಲಿಯಲ್ಲಿ ಅಥವಾ ಸತ್ತೂರಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಮಾದಯ್ಯನ ಬಾಲ್ಯದ ಆಟಪಾಠಗಳು ಕಲ್ಲೂರು ತೋಪಿನಲ್ಲಿ ನಡೆಯುತ್ತವೆ. ಅದೇ ರೀತಿ ಇಂದಿನ ಹೆಗ್ಗಡದೇವನ ಕೋಟೆಯ ಭೀಮನ ಕೊಲ್ಲಿಯಿಂದ ಈತನ ಒಕ್ಕಲು ಪಡೆಯುವ, ಭಕ್ತರನ್ನು ಪಡೆಯುವ ಕ್ರಿಯೆಗಳು ಶುರುವಾಗುತ್ತವೆ. ನಂತರ ಪಿರಿಯಾಪಟ್ಟಣ, ಚಾಮರಾಜನಗರ, ಮಗ್ಗಾಮರಳ್ಳಿ ಸುತ್ತೂರು, ಕುಂತೂರು,ಕೊಳ್ಳೇಗಾಲ ಪರಿಸರದಲ್ಲಿ ಅವನು ಓಡಾಡುತ್ತಾ ಬೆಳೆದಂತೆ ಕಾವ್ಯದ ಪ್ರಸಂಗಗಳು ಬೆರಳು ಮಾಡುತ್ತವೆ.

ಕೆಂಡಗಣ್ಣಸ್ವಾಮಿ ಗದ್ದಿಗೆ ಸಮೀಪ ಹುಣಸೂರಿನ ಬಸವನಹಳ್ಳಿ ಗದ್ದಿಗೆಯಲ್ಲಿ ಮಾದೇಶ್ವರ ಸ್ವಲ್ಪ ಕಾಲ ತಂಗಿದ್ದ ಎನ್ನಲಾಗುತ್ತದೆ. ಕೆಂಡಗಣ್ಣ ಸ್ವಾಮಿಯನ್ನು ಮಾದೇಶ್ವರನ ತಮ್ಮ ಎನ್ನಲಾಗುತ್ತದೆಯಾದರೆ ಕಾವ್ಯದಲ್ಲಿ ಮದೇಶ್ವರನನ್ನೇ ಕೆಂಡಗಣ್ಣಸ್ವಾಮಿ ಎಂದು ಕರೆಯಲಾಗುತ್ತದೆ. ಮಾದೇಶ್ವರ ಪಿರಿಯಾಪಟ್ಟಣದ ಬಳಿಯ ತಮ್ಮಡಿಹಳ್ಳಿ ಗವಿಯೊಂದರಲ್ಲಿ ನೆಲೆಸಿದ್ದು ಪುರದ ಲಿಂಗಯ್ಯನೆಂದು ಹೆಸರುವಾಸಿಯಾಗಿದ್ದನೆನ್ನಲಾಗಿದೆ. ಹೆಗ್ಗಡ ದೇವನ ಕೋಟೆಯ ಭೀಮನಕೊಲ್ಲಿ ಕಪಿಲಾ ನದಿ ದಡದ ಹಳ್ಳಿ. ಮಾದೇಶ್ವರ ಒಕ್ಕಲು ಪಡೆದ ಹಲಗೇಗೌಡನ ವಂಶಜರು ಇಂದಿಗೂ ಆ ಗ್ರಾಮದಲ್ಲಿದ್ದಾರೆ. ಮಡುಕು ತೊರೆಗೆ ಮಾದಯ್ಯ ಭೇಟೀ ನೀಡಿ ತಪ್ಪಲಿನ ಸರಗೂರು ತೋಪಲ್ಲಿ ನೆಲೆಸಿದ್ದ. ನಂತರ ಅಯ್ಯನವರ ಹುಂಡಿಯ ರಾಮವ್ವ, ಮೂಗಪ್ಪ ಶರಣರ ಒಕ್ಕಲು ಪಡೆದ. ಮಾದಯ್ಯನಿಂದಾಗಿ ಅಯ್ಯನವರ ಹುಂಡಿಯಾಯಿತು. ಮೂಗಪ್ಪನ ವಂಶಸ್ಥರು ಇಂದಿಗೂ ಅಲ್ಲಿದ್ದಾರೆ ಎಂಬುದನ್ನು ಪರಿಗಣಿಸಬೇಕು. ದೀಪಾವಳಿ, ಶಿವರಾತ್ರಿಗೆ ಯಳಂದೂರಿನ ವೀಳೆದಲೆ, ಅಗರದ ಅಡಿಕೆ ಮದೇಶ್ವರ ಬೆಟ್ಟಕ್ಕೆ ಇಂದಿಗೂ ಹೋಗುವ ಪದ್ಧತಿ ಇದೆ.

ಈ ಎಲ್ಲಾ ಮಾಹಿತಿಗಳು ಮಾದಯ್ಯನ ಮೂಲಸ್ಥಳ ಮೈಸೂರು ಪ್ರಾಂತ್ಯದ ಯಾವುದೋ ಊರಿರಬೇಕೆಂಬುದನ್ನು ಸೂಚಿಸುವಂತಿದೆ. “ಚಾರಿತ್ರಿಕವಾಗಿ ಮಾದೇಶ್ವರನ ಜನ್ಮಸ್ಥಳವನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ. ಗಾಯಕರ ದೃಷ್ಟಿಯಲ್ಲಿ ಉತ್ತರ ದೇಶ ಎಂದರೆ ಎಷ್ಟುಮೈಲಿಗಳ ಅಂತರವಿರಬಹುದು ಎಂಬುದನ್ನು ಸರಿಯಾಗಿ ಹೇಳಬರುವುದಿಲ್ಲ. ಮೈಸೂರು ಜಿಲ್ಲೆಯ ದಕ್ಷಿಣದ ತುದಿಯಲ್ಲಿರುವ ಗಾಯಕರಿಗೆ ಉತ್ತರ ಎಂದರೆ ಎಷ್ಟು ಮೈಲಿಗಳಿರಬಹುದೆ? ಬಹಳ ಸ್ವಲ್ಪವೆ ಅಂತರ ಆಗಿರಬಹುದು. ಇಲ್ಲವೆ ಉತ್ತರ ದ್ರುವದವರೆಗೂ ಹೋಗಬಹುದು? ಅಲ್ಲದೆ ಮಾದೇಶ್ವರನಿಗೆ ಸಂಬಂಧಿಸಿದ ಐತಿಹ್ಯಗಳೆಲ್ಲವೂ ಮೈಸೂರು ಜಿಲ್ಲೆ (ಚಾ. ನಗರ ಜಿಲ್ಲೆ ಒಳಗೊಂಡು) ಯಲ್ಲೇ ಅಂತರ್ಗತವಾಗಿದೆ.” ಎಂಬ ಅಭಿಪ್ರಾಯ ಈತನ ಮೂಲ ನೆಲೆಯನ್ನು ಸೂಚಿಸುತ್ತದೆ.

ತಿರುಗಾಡಿದ ಪಥ

ಮಾದಯ್ಯನ ಚಲನೆಯ ಆರಂಭ ಮತ್ತು ಅಂತ್ಯವನ್ನು ಗುರುತಿಸುವುದು ಕಷ್ಟವೆ. ಈತನ ಆಚರಣಾ ನೆಲೆಗಳು, ಶ್ರದ್ಧಾಕೆಂದ್ರಗಳು, ಸ್ಥಳಪುರಾಣಗಳು, ಜನರ ನಂಬಿಕೆಗಳನ್ನಿಟ್ಟು ಕೊಂಡ ಅವನು ನಡೆದ ಪಥವನ್ನು ಗುರುತಿಸುವ ಪ್ರಯತ್ನ ಮಾಡಬಹುದು. ಭೀಮನ ಕೊಲ್ಲಿಯಿಂದ ಯಾತ್ರೆ ಆರಂಭವಾಗುತ್ತದೆ. ಆಚೆ, ಈಚೆಗೆ ಕೊಡಗು, ಪಿರಿಯಾಪಟ್ಟಣ, ಹಾಸನ, ಅರಸೀಕೆರೆಗಳ ಕಡೆ ಸಂಚರಿಸದಂತೆ ಕಾವ್ಯ ಬಿಂಬಿಸುತ್ತವೆ. ಅದರೂ ಚಾಮರಾಜ ನಗರ, ಮೈಸೂರು ಜಿಲ್ಲೆಗಳಲ್ಲಿ ಇವನ ಹೆಜ್ಜೆ ಗುರುತುಗಳನ್ನು, ತಂಗುದಾಣಗಳನ್ನು ಶ್ರದ್ಧಾಕೆಂದ್ರಗಳನ್ನು ಗುರುತಿಸಬಹುದು. ತಮಿಳುನಾಡು, ಕರ್ನಾಟಕ ಗಡೀ ಪ್ರದೇಶವಾದ ಚಾಮರಾಜನಗರ ಜಿಲ್ಲೆಯ ಬರಗೂರು, ತಾಳವಾಡಿಯಿಂದ ಬದನವಾಳು, ಸುತ್ತೂರು, ಚಾಮರಾಜನಗರವನ್ನೊಳಗೊಂಡು ಮಾದಯ್ಯನ ತಿರುಗಾಟ ಈ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣುತ್ತದೆ. ಕಲ್ಲೂರು ತೋಪಲ್ಲಿ ಆಟವಾಡುತ್ತ ಆತ ಹೊಡೆದ ಚಂಡು ಅಗರಮಾಂಬಳ್ಳಿಯ ಮಾರಿಗುಡಿ ಅಂಗಳಕ್ಕೆ ಬಂದು ಬೀಳುವ ಕಾವ್ಯದ ಆಶಯ ಏನಿರಬಹುದು. ಈ ಪ್ರಾಂತ್ಯ ಆತ ಬಾಲ್ಯವನ್ನು ಕಳೆದದ್ದನ್ನು ಸೂಚುಸುತ್ತಿರಬಹುದು. ಈ ಪ್ರಾಂತ್ಯ ಆತ ಬಾಲ್ಯವನ್ನು ಕಳೆದದ್ದನ್ನು ಸೂಚಿಸುತ್ತಿರಬಹುದು.

ಸುತ್ತೂರು, ಕುಂತೂರು ಮಠಗಳನ್ನು ತಲುಪುವ ವೇಳೆಗಾಗಲೆ ಆತ ಪವಾಡಪುರುಷನಾಗದ್ದ. ಕುಂತೂರು ಬಿಡುವವರೆಗಿನ ಇವನ ಹೆಜ್ಜೆಗುರುತುಗಳು. ಹಿಂದೆಮುಂದೆ ಆಗಿವೆ.ಕುಂತೂರು ಬಿಟ್ಟ ನಂತರ ಕೊಳ್ಳೇಗಾಲದ ಮರಡೀಗುಡ್ಡದಲ್ಲಿ ಮಂಡಿಯೂರಿ ತನ್ನೆಲ್ಲ ಹಳೆಯ ತಾಣಗಳನ್ನು ನೋಡಿ ನಮಸ್ಕರಿಸಿ ಏಳುಮಲೆ ಕಡೆಗೆ ಹೊರಡುತ್ತಾನೆ. ನಂತರ ಸಿದ್ಧಯ್ಯನಪುರ, ಮಧುವನಹಳ್ಳಿ, ಸಿಂಗನಲ್ಲೂರು, ಕಾಮಗೆರೆ ಹನೂರು, ಅಜ್ಜೀಪುರ, ರಾಮಾಪುರ, ಕೌದಳ್ಳಿಗಳನ್ನು ಹಾದು ತಾಳು ಬೆಟ್ಟ ತಲುಪಿ ಏಳುಮಲೆ ರಾಜ್ಯ ಪ್ರವೇಶಿಸುತ್ತಾನೆ. ತಾಳು ಬೆಟ್ಟದ ಎದುರಿನ ‘ತವಸರೆ’ಯಲ್ಲಿ ತಪಸ್ಸು ಮಾಡಿದನೆಂದು ಪ್ರತೀತಿ ಇದೆ. ಅಲ್ಲಿಂದ ರಂಗಸ್ವಾಮಿ ಒಡ್ಡು, ಆನೆತಲೆದಿಂಬ, ರಾಮವ್ವ, ಕೊಳ, ಬೇವಿನಹಟ್ಟಿ ಕಾಳಿಯ ನೆಲೆಗಳನ್ನು ಹಾದು ನಡುಮಲೆರಾಜ್ಯಕ್ಕೆ ಬರುತ್ತಾನೆ. ಸೀಗೆ ಸಿರುಗಂಧದ ಗುತ್ತಿ, ಕೆಮ್ಮತ್ತಿ ಬಾಡಬಾಕಲ ಒತ್ತೆ ಒಳಗೆ ಏಳು ಬಾಯಿ ಹೊನ್ನುತ್ತದಲ್ಲಿ ನೆಲೆಸುತ್ತಾನೆ. ಇದು ಮಾದಯ್ಯ ಸಾಗಿ ಬಂದ ಚಿತ್ರಣ, ನಡುಮಲೆಯಲ್ಲಿ ಇಂದು ದೇವಸ್ಥಾನವಿರುವ ಸ್ಥಳದಲ್ಲಿ ಲಿಂಗರೂಪಿಯಾಗಿ ಐಕ್ಯವಾದನೆಂದು ನಂಬಲಾಗಿದೆ. ಕಾಲಾ ನಂತರ ನಡುಮಲೆ ತೊರೆದು ಮಾದಯ್ಯ ನಾಗಮಲೆಗೆ ತೆರಳಿದ. ತನ್ನ ಕೊನೆಯ ದಿನಗಳನ್ನು ಅಲ್ಲೇ ಕಳೆದ. ಅವನ ಮೂಲ ಸಮಾಧಿ ಅಲ್ಲೇ ನಾಗಮಲೆಯಲ್ಲಿದೆ ಎಂದೂ ನಂಬಿಕೆ ಇದೆ.

ಅಲೆವ ಹರಿವ ಚರಿತ್ರೆ

ಜನಪದ ಒಂದು ರೀತಿಯಲ್ಲಿ ಅರೆ ಇತಿಹಾಸ, ಬದಲಾದ ರೂಪದಲ್ಲಿ ಅಲೆದಾಡುವ ಚರಿತ್ರೆ. ಹಾಗಾಗಿ ಮಾದಯ್ಯನ ಹೆಸರಿನ ಜನಪದ ಮಾಹಾಕಾವ್ಯವೆ ಅವನ ಸಾಂಸ್ಕೃತಿಕ ಚರಿತ್ರೆಯೂ ಆಗಿದೆ. ಹಾಗೆ ನೋಡಿದರೆ ಈ ಕಾವ್ಯ ಮಾದಯ್ಯನೊಟ್ಟಿಗೆ ಹಲವು ಕಾಲ ಘಟ್ಟಗಳ ಹಲವು ವ್ಯಕ್ತಿ ಸಮುದಾಯ ಮತ್ತು ಪಂಥಗಳ ಅಸಲಿ ಚರಿತ್ರೆ ಕೂಡ ಆಗಿದೆ. ಮಾದಯ್ಯನ ಕಾವ್ಯವಾಗಲೀ ಯಾವುದೇ ಜನಪದ ಮಹಾಕಾವ್ಯಗಳಾಗಲಿ ಅವು ಒಂದು ನಿರ್ದಿಷ್ಟ ವ್ಯಕ್ತಿ ಮತ್ತು ಕಾಲದ ಕತೆಗಳನ್ನಷ್ಟೆ ಹೇಳುವುದಿಲ್ಲ. ಕಾವ್ಯದ ನಾಯಕ ಮತ್ತು ಘಟನೆ ನೆಪಮಾತ್ರ. ಇಡೀ ಜನಪದ ಕಾವ್ಯ ಆದಿಮ ಮಾನವ ಇತಿಹಾಸ ಮತ್ತು ಸಂಸ್ಕೃತಿಯ ಪಲ್ಲಟಗಳನ್ನು ಹೇಳುತ್ತಿರುತ್ತದೆ. ಒಂದು ಪ್ರದೇಶದ ಸಮಸ್ತ ಜನರ ಇತಿಹಾಸ ಮತ್ತು ಸಂಸ್ಕೃತಿಯನ್ನು, ಸಂಘರ್ಷ ಮತ್ತು ವಿಕಾಸವನ್ನು ಒಬ್ಬ ವ್ಯಕ್ತಿ ಮತ್ತು ಆತನಿಗೆ ಸಂಬಂಧಿಸಿದ ಘಟನೆಯ ಮೂಲಕ ಹೇಳುತ್ತಿರುತ್ತದೆ. ಮಲೆಮಾದಯ್ಯನ ಜನಪದ ಮಹಾಕಾವ್ಯದಲ್ಲಿಯೂ ಇದನ್ನೇ ಕಾಣುತ್ತೇವೆ. ಇಂತಹ ಪ್ರಕ್ರಿಯೆಯಲ್ಲಿ ಮಾದಯ್ಯನ ಚರಿತ್ರೆ ಇದೆ.

ಮಾದಯ್ಯನ ಕಾಲ ಸ್ಥೂಲವಾಗಿ ೧೫-೧೬ನೇ ಶತಮಾನ ಎಂದು ಇಟ್ಟುಕೊಂಡರೆ ಅದು ಚಾರಿತ್ರಿಕವಾಗಿ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ಕಾಲ. ಕತ್ತಲರಾಜ್ಯವೆಂಬ ಮೈಸೂರು ಸೀಮೆಯ ಆ ಕಾಲದ ಅಂದಿನ ನಾಡು ಮತ್ತು ಕಾಡಿನ ಸಮುದಾಯಗಳ ಮುಖಾಮುಖಿಯನ್ನು ಸೀಮೆಯ ಆ ಕಾಲದ ಅಂದಿನ ನಾಡು ಮತ್ತು ಕಾಡಿನ ಸಮುದಾಯಗಳ ಮುಖಾಮುಖಿಯನ್ನು ವಿಕಾಸವನ್ನು ಮಾದಯ್ಯನ ಕಾವ್ಯದಲ್ಲಿ ಕಾಣುತ್ತೇವೆ. ಎಪ್ಪತ್ತೇಳು ಮಲೆಗಳಲ್ಲೇ ಇದ್ದ ಕಂಪಣ ಬೇಡರು, ಸೋಲಿಗರು, ಜುಂಜೇಗೌಡ, ನೀಲೆಗೌಡ, ಸಂಕಮ್ಮ, ಕಾಳಮ್ಮ, ದೇವಮ್ಮ, ನಾಡಿನಲ್ಲಿದ್ದ ಸುತ್ತೂರು ಮಠ, ಕುಂತೂರು ಮಠ, ಬದನವಾಳು ಮಠ, ಮುಡುಕು ತೊರೆ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಸರಗೂರ ಮಠ ಮೊದಲಾದ ಕಾವ್ಯದಲ್ಲಿ ಬರುವ ವ್ಯಕ್ತಿ ಮತ್ತು ವಿಷಯಗಳು, ಸಮುದಾಯ ಮತ್ತು ಸಂಸ್ಥೆಗಳನ್ನು ಪ್ರತಿನಿಧಿಸುತ್ತವೆ. ಇವು ಅಂದಿನ ಕಾಲದ ಒತ್ತಡ ಹಾಗೂ ಅಗತ್ಯಗಳಿಗೆ ತಕ್ಕಂತೆ ಪ್ರತಿಕ್ರಿಯಿಸುವುದನ್ನು ಕಾವ್ಯದಲ್ಲಿ ನೋಡುತ್ತೇವೆ. ಅಲ್ಲದೆ, ಜನಪದರು ಆದಿಮ ಸಮಾಜ ಮತ್ತು ಸಂಸ್ಕೃತಿಯನ್ನು ಬೇರೆ ಬೇರೆ ಕಾಲಘಟನೆಗಳನ್ನು ಪ್ರಚಲಿತಕ್ಕೆ ಕಾವ್ಯ ನಾಯಕನ ಜೊತೆ ಬೆಸೆದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಮಾದಯ್ಯನ ಕಾವ್ಯದ ಬೆಳಕಲ್ಲಿ ಸಾಂಸ್ಕೃತಿಕ ಚರಿತ್ರೆಯನ್ನು ಹೇಳಬೇಕಾಗುತ್ತದೆ. ಈ ಮಲೆಮಾದಯ್ಯನ ಕಾವ್ಯ ಸಂಸ್ಕೃತಿ ಕಥನವು ಹೌದು, ಚರಿತ್ರೆಯ ಕಥನವು ಹೌದು. ಮಾದಯ್ಯ ಒಂದು ಪಂಥವನ್ನು, ಒಂದು ಸಂಸ್ಕೃತಿಯನ್ನು,ಒಂದು ಧರ್ಮವನ್ನು, ಮೌಲ್ಯವನ್ನು ಪ್ರತಿನಿಧಿಸುತ್ತಾ ಪರ್ಯಾಯ ಧರ್ಮ ಮತ್ತು ಸಂಸ್ಕೃತಿಯ ನೆಲೆಗಳನ್ನು ಸೃಷ್ಟಿಸುತ್ತಾ ಹೋಗುತ್ತಾನೆ.

ಎನ್ ಲೈಟನ್ಡ್ ಶೈವಸಿದ್ಧ

ಮಲೆಯ ಮಾದಯ್ಯನ ಸಾಂಸ್ಕೃತಿಕ ಚರಿತ್ರೆ ನಿರಂತರ ಸಂರ್ಘರ್ಷದ ಚರಿತ್ರೆಯಾಗಿದೆ. ಹಾಗಾಗಿ ಮಾದಯ್ಯ ಸಂಘರ್ಷದ, ಬಂಡಾಯದ, ಪ್ರತಿಭಟನೆಯ ಸಂಕೇತ. ಪುರಾತನ ಆದಿಯ ಸಂಸ್ಕೃತಿ ಮತ್ತು ಚರಿತ್ರೆಯ ಬಹುಪಾಲು ವಾರಸುದಾರರು ಅಸ್ಪೃಶ್ಯರು. ಅದೇ ರೀತಿ ಅವರು ಅವೈದಿಕ ಮತ್ತು ಶೈವ ಮೂಲದವರಾಗಿರುತ್ತಾರೆ. ಮಾದಯ್ಯ ಅದೇ ಹಿನ್ನೆಲೆಯ ಚಾರಿತ್ರಿಕ ವ್ಯಕ್ತಿ ಮತ್ತು ಜನಪದ ದೈವ. ಸಾಂಸ್ಕೃತಿಕವಾಗಿ ಮಾದಯ್ಯ ಶಿವನ ಪ್ರತಿನಿಧಿ ಮತ್ತು ಮುಂದುವರಿಕೆ. ಕಾವ್ಯದಲ್ಲಿ ಕೂಡ ಶಿವನೇ ಮಾದಯ್ಯನಾಗಿ ಅವತರಿಸುವಂತೆ ಬಿಂಬಿಸಲಾಗುತ್ತದೆ. ಅಥವಾ ಮಾದಯ್ಯನೆಂದರೆ ಶಿವನಲ್ಲದೆ ಬೇರೆಯಲ್ಲ ಎಂದು ನಂಬಲಾಗಿದೆ. ಹಾಗಾಗಿ ಈತ ಆದಿಮ ಅವೈದಿಕ ಶೈವ. ಅವನು ೧೫-೧೬ ನೇ ಶತಮಾನದ ಶೈವ ಸಿದ್ಧನಾದರೂ ಆದಿಮ ಲಕ್ಷಣಗಳನ್ನೇ ಹೊಂದಿದ್ದಾನೆ. ಹುಲಿಯ ಮೇಲಿನ ಸವಾರಿ,ಹುತ್ತದ ವಾಸ, ನಾಗಾಭರಣ, ನಾಗಮಲೆವಾಸ, ಆನೆಯನ್ನೇ ತಲೆದಿಂಬಾಗಿಸುವುದು, ಎಪ್ಪತ್ತೇಳು ಮಲೆಗಳ ಮಾದೇವನಾಗುವುದು, ಬೇಡ ಕಂಪಣ ಭಕ್ತರಿಂದ ಪೂಜೆಗೊಳ್ಳುವುದು, ಸೋಲಿಗ ಶಿಷ್ಟರ ಪಡೆಯುವುದು, ಬುಡಕಟ್ಟು ಆಹಾರದ ಎಡೆ ಇಕ್ಕಿಸಿಕೊಳ್ಳುವುದು ಹೀಗೆ. ಇಂತಹ ಮಾದಯ್ಯ೧೫-೧೬ ನೇ ಶತಮಾನ ಅವಧಿಯಲ್ಲಿದ್ದ ಕತ್ತಲರಾಜ್ಯದೊಳಗಿನ ಸಮಕಾಲೀನ ಪಂಥಗಳ ಜೊತೆ ಮುಖಾ ಮುಖಿಯಾಗುತ್ತಾನೆ. ಆದಿಶೈವವನ್ನು ಪ್ರತಿಪಾದಿಸುತ್ತಾ ತನಗೆ ಒಗ್ಗಿದವರನ್ನು ಒಳಗೊಳ್ಳುತ್ತಾ, ಒಗ್ಗಿಕೊಳ್ಳುವುದನ್ನು ಪಕ್ಕಕ್ಕೆ ಸರಿಸಿ ಮೆಟ್ಟಿ ನಾಡಿನಿಂದ, ಕಾಡಿನೆಡೆಗೆ ಸಾಗುತ್ತಾನೆ.

ಮಾದಯ್ಯ ನಾಡು ಬಿಡುವ ಮೊದಲೇ ಎನ್ ಲೈಟನ್ಡ್ ಮಾದಯ್ಯನಾಗಿದ್ದ. ಆತ ಇದ್ಧಿ ಶಕ್ತಿ ಪಡೆದವನಾಗಿ, ಪವಾಡಗಳನ್ನು ಮರೆಯ ಬಲ್ಲವನಾಗಿದ್ದ. ಬದನವಾಳುಮಠ, ಕುಂತೂರುಮಠ, ಸುತ್ತೂರುಮಠಗಳ ಭೇಟಿಯ ಉದ್ದೇಶ ವೀರಶೈವ ಕಲ್ಪನೆಯ “ಲಿಂಗಧೀಕ್ಷೆ” ಪಡೆಯುವುದಾಗಿತ್ತು ಎಂಬುದು ಹಾಸ್ಯಾಸ್ಪದದಂತೆ ಕಾಣುತ್ತದೆ. ನಂತರವೂ, ಇಂದಿಗೂ ಆತ ಲಿಂಗಕ್ಕೆ ಬದಲು ಕೊರಳ ತುಂಬ ರುದ್ರಾಕ್ಷಿ ಧರಿಸುತ್ತಾನೆ. ಮಠಗಳ ಅವನ ಭೇಟಿ ಲಿಂಗದೀಕ್ಷೆಗೆ ಬದಲಾಗಿ ಅವರನ್ನು ಪರೀಕ್ಷೆಗೆ ಗುರಿಪಡಿಸುವುದು ಮತ್ತು ಅವರಿಗೆ ತಾನು ಏನೆಂಬುದನ್ನು ತೋರಿಸುವುದಾಗಿತ್ತು. ಅಂದಿನ ಸಾಮಾಜಿಕ ಸಂದರ್ಭಕ್ಕೆ ಅದು ಬೇಕಾಗಿತ್ತು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಮಾನತೆ ಮತ್ತು ಶ್ರೇಷ್ಠತೆ ಯನ್ನುಪಡೆದು ನಂತರ ನಿರಾಕರಿಸುವುದು ಮಾದಯ್ಯನ ನಡೆಗಳ ನಿಲುವಾಗಿ ಕಾಣುತ್ತದೆ. ಈತ ವೀರಶೈವದ ಆಚೆಗೆ ಶೈವ-ನಾಥ ಸಿದ್ಧನಾಗಿ ನಿಂತು ಸಮಾನತೆ, ಸ್ವಾತಂತ್ರ, ಬ್ರಾತೃತ್ವಕ್ಕಾಗಿ ಅವರನ್ನು ಕಾಡುತ್ತಾನೆ. ಮಂಟೇಸ್ವಾಮಿಯ ಕಲ್ಯಾಣ ಪಟ್ಟಣದ ಪ್ರವೇಶ ಕೂಡ ಇಂತದ್ದೆ. ಲಿಂಗವಂತ ಜಂಗಮ ರನ್ನು ಪರೀಕ್ಷಿಸುವುದು. ದ್ವಾರಪಾಲಕ ಲಿಂಗ ತೋರಿಸು ಎಂದಾಗಿ ಮಂಟೇಸ್ವಾಮಿ ತನ್ನ ಜಡೆಮುಡಿಯನ್ನ ಒದರಿ ರಾಶಿ-ರಾಶಿ ಲಿಂಗ ಧರಿಸುತ್ತಾನೆ. ಇದು ಲಿಂಗ ನಿರಾಕಾರಿ ಬೋಳು ಜಂಗಮತನ. ಮಾದಯ್ಯನೂ ಅದೇ ಲಿಂಗಧಾರಣೆ ನಿರಾಕರಿಸಿದ ಜಂಗಮ.

ಬದನವಾಳು ಮಠದಲ್ಲಿ ಮಾದಯ್ಯ ಬದನೆ ಸಸಿ ನೆಟ್ಟು ಬದನೆ ಬೆಳೆಯಬೇಕಾದ ಕಾಯಕಕ್ಕೆ ನೇಮಕವಾಗುತ್ತಾನೆ. ಸುತ್ತೂರು ಮಠದಲ್ಲಿ ರಾಗಿ ಬೀಸುವ ಕಾಯಕ ಮಾಡಬೇಕಗುತ್ತದೆ. ಕುಂತೂರು ಮಠದಲ್ಲಿ ಹೂವಿನ ಊಳಿಗಕ್ಕೆ ನೇಮಕವಾಗುತ್ತಾನೆ, ಈ ಎಲ್ಲಾ ಕೆಲಸಗಳನ್ನು ತಾನು ಕಲಿತಿದ್ದ ತಂತ್ರ ವಿದ್ಯೆ ಪವಾಡಗಳ ಮೂಲಕ ಮಾಡಿ ವೀರಶೈವ ಜಗದ್ಗುರುಗಳನ್ನು ಬೆಚ್ಚಿ ಬೀಳಿಸುತ್ತಾನೆ. ಅಂದಿನ ವೀರಶೈವ ಮಠಗಳು ಮಾದಯ್ಯನಿಗೆ ನೀಡಿದ ಕೆಲಸಗಳನ್ನು ನೋಡಿದರೆ ಹೊಲೆಮಾದಿಗರು ತಮ್ಮ ಒಡೆಯನ ಮನೆಯಲ್ಲಿ ಮಾಡುತ್ತಿದ್ದ ಕೆಲಸಗಳಂತೆ ಕಾಣುತ್ತವೆ.ಮಾದಯ್ಯನನ್ನು ವೀರಶೈವ ಮಠಗಳು ನಡೆಸಿಕೊಂಡಿದ್ದು ಮಾತ್ರ ಕೆಳಜಾತಿಯವನಾಗಿಯೆ. ಮಠಗಳಲ್ಲಿ ಮಾದಯ್ಯ ಮಾಡಿದ ಸೇವೆಗಳು, ಸುತ್ತೂರು ಮಠದ ರಾಗೀಕಲ್ಲು ಜೀತಗಾರಿಕೆಯ ಸಂಕೇತವಾಗಿ ಉಡುಪಿಯ ಕನಕನ ಕಿಂಡಿಯಂತೆ ಇಂದಿಗೂ ಉಳಿದು ವೀರಶೈವ ಜಗದ್ಗುರುಗಳನ್ನು ಅಣಕಿಸುವಂತಿದೆ.

ಹೀಗಿದ್ದರೂ ಮಾದಯ್ಯ ಮಠಗಳು, ಜಗದ್ಗುರುಗಳಿಗೆ ತೋರಿದ ಪ್ರತಿಕ್ರಿಯೆ ಅಂದಿನ ಗುರುಗಳಾರಿಗೂ ಅರಗಿಸಿಕೊಳ್ಳಲಾಗದ್ದಗಿದೆ. ಮಾದಯ್ಯ ಬರಿ ಮಾದಯ್ಯನಲ್ಲ ಅವನು ‘ಮಾ’ ದಯ್ಯನೂ, ‘ಮಾ’ ದೇವನೂ ( ಮಹಾದೇವನೂ), ತಮ್ಮಿಂದ ಪೂಜೆಗರ್ಹನೂ ಎಂಬಂತೆ ಮಾಡಿದನು. ಬದನ ವಾಳಲ್ಲಿ ಬದನೆ ಬೆಳೆದದ್ದು, ಸುತ್ತೂರಲ್ಲಿ ರಾತ್ರಿಯೊಳಗೆ ರಾಶಿ ರಾಗಿಬೀಸಿದ್ದು, ಹಾವು ಕಚ್ಚಿದವನ ಬದುಕಿಸಿದ್ದು, ಹರಿಯಲಾರದ ರಥವ ಹರಿಸಿದ್ದು, ದನಗಳ ರೋಗ ನಿವಾರಿಸಿದ್ದು, ಕುಂತೂರು ಮಠದದಲ್ಲಿ ಸತ್ತ ಗೊದ್ದಗೋಸುಂಬೆಗಳ ಘಮಘಮಿಸುವ ಹೂ ಮಾಡಿದ್ದು ಮೊದಲಾದ ಪವಾಡಗಳು ಮಾದಯ್ಯನನ್ನು ಮಾದೇಶ್ವರನನ್ನಾಗಿ ಮಾಡಿತು.ಈಶ್ವರ, ಪರಮೇಶ್ವರ, ಶಿವರೂಪಿಯಾಗುವಂತೆ ಮಾಡಿತು. ಆ ಮೂಲಕ ಮಾದೇವ ವೀರಶೈವ ಮಠಗಳು, ಗುರುಗಳನ್ನು ಮೀರಿನಿಂತ.