ಪರಿಚಯ

ದಕ್ಷಿಣ ಕರ್ನಾಟಕದ ಮೈಸೂರು, ಮಂಡ್ಯ, ಬೆಂಗಳೂರು ಇತ್ಯಾದಿ ನಾಲ್ಕೈದು ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಅವಳಿ ಮೌಖಿಕ ಮಹಾಕಾವ್ಯಗಳೆಂದರೆ ಮಲೆ ಮಾದೇಶ್ವರ ಮತ್ತು ಮಂಟೇಸ್ವಾಮಿಯ ಕಥೆ. ಕಾರಣಾಂತರಗಳಿಂದ ಕರ್ನಾಟಕದ ಉತ್ತರ ಭಾಗದಿಂದ (ಕಲ್ಯಾಣದಿಂದ) ದಕ್ಷಿಣ ಕರ್ನಾಟಕಕ್ಕೆ ವಲಸೆ ಬಂದು, ಅಲ್ಲಲ್ಲಿ ಸಂಚರಿಸುತ್ತಾ, ಶಿಷ್ಯಗಣವನ್ನು ಪಡೆಯುತ್ತಾ ವೀರಶೈವ ಧರ್ಮದ ತನ್ನದೇ ಆದ ಒಂದು ಕವಲನ್ನು ಸ್ಥಾಪಿಸಿದ ಶಿವಯೋಗಿ ಮಾದೇಶ್ವರನ ಸಾಹಸ-ಸಾಧನೆಗಳನ್ನು ದಾಖಲಿಸುವ ಮಹಾಕಾವ್ಯ ಮಲೆ ಮಾದೇಶ್ವರ.

ಎರಡು ತಾಮ್ರ ಶಾಸನಗಳು ಮತ್ತು ಒಂದು ಶಿಲಾ ಶಾಸನ ಇವುಗಳ ಆಧಾರದ ಮೇಲೆ ಹೇಳುವುದಾದರೆ ಮಾದೇಶ್ವರ (ಮಂಟೇಸ್ವಾಮಿಯಂತೆ) ಐತಿಹಾಸಿಕ ವ್ಯಕ್ತಿ. ಹನ್ನೆರಡನೆಯ ಶತಮಾನದಲ್ಲಿ ನಡೆದ ಕ್ರಾಂತಿಕಾರಕ ಶರಣ ಚಳುವಳಿಯ ನೇತಾರರಾದ ಬಸವಣ್ಣ, ಅಲ್ಲಮ ಪ್ರಭು, ಮುಂತಾದವರ ಪ್ರಸ್ತಾಪ ಕಾವ್ಯದಲ್ಲಿದ್ದರೂ, ಪ್ರಾಯಃ ಅವರುಗಳಿಗಿಂತ ಎರಡು ಮೂರು ಶತಮಾನಗಳ ನಂತರ ಬಂದವರು ಮಾದೇಶ್ವರ ಮತ್ತು ಮಂಟೇಸ್ವಾಮಿ. ೧೩೪೫ರಲ್ಲಿ ರಚಿಸಲ್ಪಟ್ಟಿರುವುದೆಂದು ಹೇಳಲ್ಪಡುವ ಹರದನಹಳ್ಳಿಯ ತಾಮ್ರಶಾಸನದಲ್ಲಿ ಮಾದೇಶ್ವರನ ಪ್ರಸ್ತಾಪವಿದೆ; ಆದರೆ ಆ ತಾಮ್ರಪತ್ರದ ಕಾಲ ಚರ್ಚಾಸ್ಪದವಾಗಿದೆ. ಇಂದಿನ ಹೆಚ್ಚಿನ ವಿದ್ವಾಂಸರುಗಳ ಅಭಿಪ್ರಾಯದಲ್ಲಿ ಮಾದೇಶ್ವರ ಮತ್ತು ಮಂಟೇಸ್ವಾಮಿ ೧೪-೧೫ನೆಯ ಶತಮಾನದಲ್ಲಿ ಜೀವಿಸಿದ್ದ ದಲಿತ ಶರಣರು ಮಹದಾದರ್ಶಗಳಿಂದ ೧೨ನೆಯ ಶತಮಾನದಲ್ಲಿ ಬಸವಣ್ಣನವರಿಂದ ಪ್ರಾರಂಭವಾದ ಶರಣ ಚಳುವಳಿ ಅನಂತರ ಶತಮಾನಗಳಲ್ಲಿ ಸಾಂಸ್ಥೀಕರಣಗೊಂಡು, ತಾನು ವಿರೋಧಿಸಿದ್ದ ವೈದಿಕ ವ್ಯವಸ್ಥೆಯ ಅನೇಕ ಅಂಶಗಳನ್ನು ಒಳಗೊಂಡು, ಒಂದು ‘ಪ್ರತಿ ವ್ಯವಸ್ಥೆ’ಯೇ ಆಗಿದ್ದಿತು. ಆ ಸಂದರ್ಬದಲ್ಲಿ ‘ಮೇಲು’ ಜಾತಿಯ ಶರಣರ ತಿರಸ್ಕಾರವನ್ನು ಮತ್ತು ಚಳುವಳಿಯ ದೌರ್ಬಲ್ಯಗಳನ್ನು ಸಹಿಸಲಾರದೆ ‘ಕೆಳ’ ಜಾತಿಗಳಿಗೆ ಸೇರಿದ ಮಾದೇಶ್ವರ ಮಂಟೇಸ್ವಾಮಿಗಳು ಕಲ್ಯಾಣದಿಂದ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದು ಅಲ್ಲಿ ವೀರಶೈವ ಧರ್ಮದ ಮೂಲ ತತ್ವಗಳನ್ನನುಸರಿಸಿದ ತಮ್ಮದೇ ಆದ ಪಂಥಗಳನ್ನು ಸ್ಥಾಪಿಸಿದರೆಂದು ಹೇಳಬಹುದು. ಇವರ ನೂತನ ಪಂಥ ಹೆಚ್ಚಾಗಿ ಕೆಳವರ್ಗಕ್ಕೆ ಸೇರಿದ ಬೇಡಗಂಪಣರು, ಅರಣ್ಯವಾಸಿಗಳಾದ ಸೋಲಿಗರು, ಮುಂತಾದವರನ್ನು ಆಕರ್ಷಿಸಿತು. ಮಠ-ಮಾನ್ಯಗಳನ್ನೆಲ್ಲಾ ತಿರಸ್ಕರಿಸಿ, ಕೊನೆಗೆ ಮಾದೇಶ್ವರ ನೆಲಸಿದುದೂ ಪೂರ್ವ ಘಟ್ಟಗಳ ದುರ್ಗಮ ಪರ್ವತ ಶ್ರೇಣಿಗೆ ಸೇರಿದ, ಕರ್ನಾಟಕ-ತಮಿಳುನಾಡು ಗಡಿಭಾಗವಾದ ‘ನಡುಮಲೆ’ಯಲ್ಲಿ. ಈ ಕಾರಣದಿಂದಲೇ ಮಾದೇಶ್ವರನ ಭಕ್ತರು ಕರ್ನಾಟಕದಲ್ಲೇ ಅಲ್ಲದೆ ತಮಿಳುನಾಡಿನಲ್ಲೂ ಇದ್ದಾರೆ.

ಕನಿಷ್ಠ ಪಕ್ಷ ೨೦೦-೩೦೦ ವರ್ಷಗಳ ಇತಿಹಾಸವಿರುವ ಮಲೆ ಮಾದೇಶ್ವ ಕಾವ್ಯವನ್ನು ಮೊದಲಿಗೆ ಬೆಳಕಿಗೆ ತಂದ ಶ್ರೇಯಸ್ಸು ಡಾ. ಜಿ.ಶಂ. ಪರಮಶಿವಯ್ಯನವರಿಗೆ ಸೇರಬೇಕು. ಅವರು ತಮ್ಮ ಪಿಎಚ್.ಡಿ. ಸಂಶೋಧನೆಯನ್ನಾಧರಿಸಿದ ಮಹಾ ಪ್ರಬಂಧದಲ್ಲಿ ಮೊದಲ ಬಾರಿಗೆ ಮಲೆ ಮಾದೇಶ್ವರ, ಮಂಟೇಸ್ವಾಮಿಯ ಕಥೆ, ಜುಂಜಪ್ಪ, ಇತ್ಯಾದಿ ಮಹಾಕಾವ್ಯಗಳನ್ನು ಪರಿಚಯಿಸಿದುದೇ ಅಲ್ಲದೆ, ಅವುಗಳನ್ನು ಪ್ರಸ್ತುತಪಡಿಸುವ ಕಂಸಾಳೆಯವರು,  ನೀಲಗಾರರು, ಗಣೆಯವರು, ಚೌಡಿಕೆಯವರು, ಮುಮತಾದ ವೃತ್ತಿಗಾಯಕರನ್ನು ಗುರುತಿಸಿದರು. ಈ ಮೌಖಿಕ ಮಹಾಕಾವ್ಯಗಳನ್ನು ಜೀಶಂಪ ‘ಅರೆ ಧಾರ್ಮಿಕ ಕಾವ್ಯಗಳು’ (ಕಲ್ಟ್‌ ಎಪಿಕ್ಸ್’) ಎಂದು ಕರೆದರು. ಅನಂತರ, ಇಡಿ ಮಲೆಯ ಮಾದೇಶ್ವರ ಕಾವ್ಯವನ್ನು ಹತ್ತು ಭಿನ್ನ ಗಾಯಕರಿಂದ ಸಂಗ್ರಹಿಸಿ, ಅವುಗಳಲ್ಲಿ ‘ಶ್ರೇಷ್ಠ’ವೆಂದು ಕಂಡ ಭಾಗಗಳನ್ನು ಆಯ್ಕೆ ಮಾಡಿ, ದೀರ್ಘ ಮುನ್ನುಡಿಯೊಡನೆ ಎರಡು ಸಂಪುಟಗಳಲ್ಲಿ ಪ್ರಕಟಿಸಿದವರು ಪಿ.ಕೆ. ರಾಜಶೇಖರ. ಇವರು ಸಂಪಾದಿಸಿರುವ ಕಾವ್ಯದಲ್ಲಿ ಸುಮಾರು ೩೦,೦೦೦ ಪಂಕ್ತಿಗಳಿವೆ. ಕನ್ನಡ ವಿಶ್ವವಿದ್ಯಾಲಯ ‘ಬುಡಕಟ್ಟು ಅಧ್ಯಯನ ವಿಭಾಗ’ವನ್ನು ಸ್ಥಾಪಿಸಿದ ನಂತರ ಹೊರಬಂದ ಅನೇಕ ಏಕಗಾಯಕ ಪಠ್ಯಗಳಲ್ಲಿ ಮಲೆ ಮಾದೇಶ್ವರವೂ ಒಂದು. ಇದನ್ನು ಹಾಡಿರುವವರು ಪ್ರಸಿದ್ಧ ಹೆಬ್ಬಣಿ ಆದಯ್ಯನವರು ಮತ್ತು ಸಂಪಾದಿಸಿರುವವರು ಕೇಶವನ್ ಪ್ರಸಾದ್. ಈ ಆವೃತ್ತಿಯಲ್ಲಿ ಸುಮಾರು ೧೬ ಸಾವಿರ ಪಕ್ತಿಗಳಿವೆ.

ಪರಂಪರಾಗತವಾಗಿ ಮಲೆ ಮಾದೇಶ್ವರ ಕಾವ್ಯವನ್ನು ಪ್ರಸ್ತುತಪಡಿಸುವವರನ್ನು ‘ಕಂಸಾಳೆಯವರು’ ಅಥವಾ ‘ದೇವರು ಗುಡ್ಡರು’ ಎಂದು ಕರೆಯುತ್ತಾರೆ. ಇವರೆಲ್ಲರೂ ಮಾದೇಶ್ವರ ಒಕ್ಕಲು. ಹಾಡುವಾಗ ಇವರು ಉಪಯೋಗಿಸುವ ದೊಡ್ಡ ಕಂಚಿನ ತಾಳಗಳಿಗೆ ‘ಕಂಸಾಳೆ’ ಎಂದು ಹೆಸರು; ಆದ್ದರಿಂದಲೇ ಇವರನ್ನು ‘ಕಂಸಾಳೆಯವರು’ ಎಂದು ಕರೆಯುತ್ತಾರೆ. ಕಂಸಾಳೆಯವರ ಒಂದು ಗುಂಪಿನಲ್ಲಿ ಮೂರರಿಂದ ಐದು ಜನರಿರುತ್ತಾರೆ; ಇವರಲ್ಲಿ ಒಬ್ಬರು ಮುಖ್ಯ ಗಾಯಕರು ಮತ್ತು ಇತರರು ಸೊಲ್ಲು ಹಿಡಿಯುವವರು. ಗಾಯನ ಸಂದರ್ಭದಲ್ಲಿ ಇವರು ಕಂಸಾಳೆಯನ್ನಲ್ಲದೆ ದಮ್ಮಡಿ ಮತ್ತು ಚಿಟುಕು ತಾಳಗಳನ್ನು ಉಪಯೋಗಿಸುತ್ತಾರೆ. ಗಾಯನದ ಗತಿ, ಸ್ವರೂಪ ಮತ್ತು ಅವಧಿ ಇವೆಲ್ಲವನ್ನೂ ನಿಧ್ಧಇಸುವವನು ಮುಖ್ಯ ಗಾಯಕ. ಈ ಕಾವ್ಯವನ್ನು ಅಥವಾ ಕಾವ್ಯದ ಭಾಗಗಳನ್ನು ಸಾರ್ವಜನಿಕವಾಗಿ ಪ್ರಸ್ತುತಪಡಿಸುವಾಗ ಈ ಗಾಯಕರು ಮದ್ಯ-ಮಾಂಸಗಳ ನಿಷೇಧ ಇತ್ಯಾದಿ ಅನೇಕ ಕಟ್ಟುಪಾಡುಗಳನ್ನು ಆಚರಿಸುತ್ತಾರೆ.

ಹೆಚ್ಚಿನ ಕಂಸಾಳೆ ತಂಡದವರು ಹಾಡುವ ಮಲೆ ಮಾದೇಶ್ವರ ಕಾವ್ಯದಲ್ಲಿ ಏಳು ‘ಸಾಲುಗಳು’ (ಭಾಗಗಳು) ಇರುತ್ತವೆ; ಆದರೆ, ಹೆಬ್ಬಣಿ ಮಾದಯ್ಯನವರು ಹಾಡಿರುವ ಆವೃತ್ತಿಯಲ್ಲಿ ಆರೇ ಸಾಲುಗಳಿವೆ; ‘ಇಕ್ಕೇರಿ ದೇವಮ್ಮನ ಸಾಲು’ ಎಂಬುದನ್ನು ಇವರು ಕೈಬಿಟ್ಟಿದ್ದಾರೆ. ಇದು ಉದ್ದೇಶಪೂರ್ವಕವೋ ಅಥವಾ (ಕನ್ನಡ ವಿ.ವಿಯಲ್ಲಿ ಹಾಡುವಾಗ) ಸಮಯಾಭಾವದಿಂದ ಸಂಭವಿಸಿದುದೋ ಹೇಳಲಾಗುವುದಿಲ್ಲ. ಪ್ರಾಯಃ, ‘ಏಳು’ ಮಲೆಗಳಲ್ಲಿ ನೆಲೆಸಿರುವ ಮಾದಪ್ಪನ ಕಾವ್ಯದಲ್ಲಿ ‘ಏಳು’ ಸಾಲುಗಳಿರಬೇಕು. ಗಾಯಕರಿಂದ ಗಾಯಕರಿಗೆ ಅಲ್ಪ ಸ್ವಲ್ಪ ಬದಲಾಗುವ ಕಾವ್ಯದ ಸ್ವರೂಪದ ಬಗ್ಗೆ ನಾವು ಗಮನಿಸಬೇಕಾದ ಒಂದು ಕುತೂಹಲಕರ ಸಂಗತಿಯೆಂದರೆ ಪ್ರತಿಯೊಬ್ಬ ಮುಖ್ಯ ಗಾಯಕನೂ ಕಾವ್ಯದ ಒಂದು ಸಾಲನ್ನು (ಭಾಗವನ್ನು) ವಿಶಿಷ್ಟವಾಗಿ ನಿರೂಪಿಸಲು ಕಲಿತಿರುತ್ತಾನೆ. ಹೆಬ್ಬಣಿ ಮಾದಯ್ಯನವರು ವೈಶಿಷ್ಟ್ಯವೆಂದರೆ ಅವರು ನಿರೂಪಿಸುವ ‘ಸಂಕಮ್ಮನ ಸಾಲು’. ಇವರ ನಿರೂಪಣೆಯಲ್ಲಿ ‘ಸಂಕಮ್ಮನ ಸಾಲು’ ೬೨೪೦ ಪಂಕ್ತಿಗಳಷ್ಟು (ಎಂದರೆ ಇಡೀ ಕಾವ್ಯದ ಮೂರನೇ ಒಂದು ಭಾಗದಷ್ಟು) ದೀರ್ಘವಾಗಿದೆ. ಹೆಬ್ಬಣಿ ಮಾದಯ್ಯ ಮತ್ತು ಅವರ ತಂಡದವರು ಪ್ರಸ್ತುತಪಡಿಸಿರುವ ಕಾವ್ಯದ ಮುಖ್ಯಾಂಶಗಳು ಹೀಗಿವೆ.

೧. ಪ್ರಾರ್ಥನೆ: ಈ ಭಾಗದಲ್ಲಿ ಗಾಯಕರು ಮೊದಲು ಗುರುವಿಗೆ ವಂದಿಸಿ, ಅನಂತರ ವೈದಿಕ ದೇವತೆಗಳಾದ ಗಣಪತಿ ಮತ್ತು ಸರಸ್ವತಿ ಇವರನ್ನಲ್ಲದೆ ಶರಣ ಧರ್ಮದ ಪ್ರಮುಖರಾದ ಬಸವಣ್ಣ, ನೀಲಮ್ಮ, ಬೇಡರಕಣ್ಣಪ್ಪ, ಬಿಲ್ಲಯ್ಯ-ಕಾರಯ್ಯ ಮುಂತಾದ ಶಿವಶರಣರಿಗೂ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾವ್ಯದ ಕೊನೆಯ ಭಾಗದಲ್ಲಿ “ಮಂಗಳಾರತಿ” ಯಲ್ಲಿಯೂ ಇದೇ ಬಗೆಯ ಧಾರ್ಮಿಕ ಹೊಂದಾಣಿಕೆ ಕಂಡುಬರುತ್ತದೆ.

೨. ಮಾದಪ್ಪ ಹುಟ್ಟಿ ಬೆಳೆದ ಸಾಲು: ದೇವತೆಗಳ ಅಪೇಕ್ಷೆಯಂತೆ ಶಿವನು ತನ್ನ ಎಂಟನೆಯ ಅವತಾರವಾಗಿ ಶ್ರವಣಾಸುರನನ್ನು ಮತ್ತು ಒಂಬತ್ತನೆಯ ಅವತಾರವಾಗಿ ಮಾದೇಶ್ವರನನ್ನು ಸೃಷ್ಟಿಸುತ್ತಾನೆ. ಶ್ರವಣಾಸುರನು ತ್ರಿಲೋಕಗಳಿಗೂ ಕಂಟಕಪ್ರಾಯನಾಗಿ ಬೆಳೆದರೆ, ಮಾದೇಶ್ವರ ಅಯೋನಿಜನಾಗಿ, ಉತ್ತರಾಜಮ್ಮ ದಂಪತಿಗಳಿಗೆ ಮಗನಾಗಿ ಬೆಳೆಯುತ್ತಾನೆ. ಅನಂತರ, ಶ್ರೀಶೈಲದಲ್ಲಿ ವ್ಯಾಘ್ರಾನಂದ ಸ್ವಾಮಿಗಳ ಶಿಷ್ಯನಾಗಿ, ಅನಂತರ ತಾನಿರಲು ಒಂದು ಯೋಗ್ಯ ಸ್ಥಳವನ್ನು ಅರಸುತ್ತಾ, ಅನೇಕ ಮಠಗಳನ್ನು ತಿರಸ್ಕರಿಸಿ, ಕೊನೆಗೆ ನಡುಮಲೆಯಲ್ಲಿ “ಸೀಗೆ ಸಿರುಗಂಧ ಕೆಮ್ಮಚ್ಚಿ ಬಾಡು ಬಾಕುನ ಒತ್ತೆ ಒಳಗೆ” ನೆಲಸುತ್ತಾನೆ.

೩. ಜುಂಜೇಗೌಡನ ಸಾಲು: ಪ್ರತಿಷ್ಠಿತ ಕೃಷಿಕನಾದ ಜುಂಜೇಗೌಡನನ್ನು ಮಾದಪ್ಪನು ಕಾಡಿ ಬೇಡಿ ತನ್ನ ಒಕ್ಕಲನ್ನಾಗಿ ಮಾಡಿಕೊಂಡು, ಅವನಿಂದ ತನಗೆ ಒಂದಂಕಣದ ಕಲ್ಲಿನ ದೇವಾಲಯವನ್ನು ಕಟ್ಟಿಸಿಕೊಳ್ಳುತ್ತಾನೆ.

೪. ಶ್ರವಣ ದೊರೆ ಸಾಲು: ದೇವ-ಮಾನವರಿಗೆ ಪೀಡಕನಾಗಿದ್ದ ಶ್ರವಣಾಸುರನು ಹರಳಯ್ಯನ ‘ಉರಿ ಚಮ್ಮಾಳಿಗೆ’ಯನ್ನು ಮೆಟ್ಟುವಂತೆ ಮಾಡಿ ಆ ಮೂಲಕ ಅವನನ್ನು ಮಾದಪ್ಪ ಸಂಹರಿಸುತ್ತಾನೆ.

೫. ಸಂಕಮ್ಮನ ಸಾಲು: ಈ ಕಾವ್ಯದ ಅತ್ಯಂತ ಹೃದಯಸ್ಪರ್ಶಿ ಭಾಗ ಇದು. ಸೋಲಿಗರ ನೀಲಯ್ಯ ತಾನೇ ಸಂಕಮ್ಮನನ್ನು ಹುಡುಕಿ, ಮೆಚ್ಚಿ ಮದುವೆಯಾಗುತ್ತಾನೆ. ಆದರೆ, ಅವಳಿಗೆ ಮಕ್ಕಳಾಗದುದರಿಂದ, ಅತ್ತಿಗೆ-ನಾದಿನಿಯರ ಹೀಯಾಳಿಕೆಯನ್ನು ಕೇಳಲಾರದೆ ನೀಲಯ್ಯ-ಸಂಕಮ್ಮ ದೂರ ತಮ್ಮದೇ ಗುಡಿಸಲು ಹಾಕಿಕೊಳ್ಳುತ್ತಾರೆ. ವಾರ್ಷಿಕ ಬೇಟೆಗೆ ಒಂಬತ್ತು ತಿಂಗಳ ಕಾಲ ಹೋಗಬೇಕಾಗಿ ಬಮದಾಗ, ಸಂಕಮ್ಮನ ಶೀಲವನ್ನು ಸಂಶಯಿಸಿ ತನಗೆ ನಿಷ್ಠಳಾಗಿರುವಂತೆ ಬಲಗೈ ಭಾಷೆ ಕೇಳುತ್ತಾನೆ. ಹಾಗೆ ಭಾಷೆ ಕೊಡುವುದು ತನಗೆ ಅಪಮಾನಾಸ್ಪದವೆಂದು ಸಂಕಮ್ಮ ಭಾಷೆ ಕೊಡಲು ನಿರಾಕರಿಸುತ್ತಾಳೆ. ಕೋಪಗೊಂಡ ನೀಲಯ್ಯ ಅವಳ ಕೈಕಾಲು ಕಟ್ಟಿ, ಇನ್ನಿಲ್ಲದ ಚಿತ್ರಹಿಂಸೆ ಕೊಟ್ಟು ಕಾಡಿಗೆ  ಕುಲದವರ ಜೊತೆ ಹೋಗುತ್ತಾನೆ. ಕಷ್ಟವನ್ನು ತಡೆಯಲಾರದೆ ಸಂಕಮ್ಮ ಮಾದೇಶ್ವನನ್ನು ಪ್ರಾರ್ಥಿಸಿದಾಗ ಅವನು ಅವಳ ಎಲ್ಲ ಕಷ್ಟ ನಿವಾರಣೆ ಮಾಡಿ, ಅವಳಿಗೆ ಇಬ್ಬರು ಮಕ್ಕಳ ವರವನ್ನೂ ಕರುಣಿಸುತ್ತಾನೆ. ಬೇಟೆಯಿಂದ ಹಿಂದಿರುಗಿದ ನೀಲಯ್ಯ ಮಕ್ಕಳನ್ನು ನೋಡಿ, ಪತ್ನಿಯ ಚಾರಿತ್ರ್ಯವನ್ನು ಶಂಕಿಸಿ, ಒಂಬತ್ತು ಬಗೆಯ ದಿವ್ಯಗಳ ಮೂಲಕ ತನ್ನ ಪಾತಿವ್ರತ್ಯವನ್ನು ಸಿದ್ಧಪಡಿಸಲು ಸಂಕಮ್ಮನನ್ನು ಬಲಾತ್ಕರಿಸುತ್ತಾನೆ. ಮಾದೇಶ್ವರನ ದಯೆಯಿಂದ ಅಗ್ನಿದಿವ್ಯ, ಜಲದಿವ್ಯ ಇತ್ಯಾದಿ ಎಲ್ಲಾ ದಿವ್ಯಗಳನ್ನೂ ಸಂಕಮ್ಮ ಯಶಸ್ವಿಯಾಗಿ ಎದುರಿಸುತ್ತಾಳೆ. ಕೊನೆಗೆ, ತಮ್ಮ ಮಕ್ಕಳಾದ ಕಾರಯ್ಯ-ಬಿಲ್ಲಯ್ಯರನ್ನು ಎತ್ತಿಕೊಂಡು ಮತ್ತೆ ನೀಲಯ್ಯ-ಸಂಕಮ್ಮ ತಮ್ಮ ಪೋಡಿಗೆ ಹಿಂದಿರುತ್ತಾನೆ.

೬. ಬೇವಿನಟ್ಟೆ ಕಾಳಮ್ಮನ ಸಾಲು: ಕಡು ಬಡವೆಯಾದ ಬೇವಿನಕಟ್ಟಿ ಕಾಳಮ್ಮ ಮಾದೇಶ್ವರನ್ನು ಪ್ರಾರ್ಥಿಸಿ, ಅವನ ಕೃಪೆಯಿಂದ ಶ್ರೀಮಂತಳಾಗುತ್ತಾಳೆ; ಆದರೆ, ಸಿರಿ ಬಂದಾಗ ಅದರಲ್ಲಿ ಸಮಪಾಲು ಮಾದಪ್ಪನಿಗೆ ಕೊಡುವ ತನ್ನ ವಚನವನ್ನು ಮರೆಯುತ್ತಾಳೆ. ಮಾದಪ್ಪ ಅವಳಿಗೆ ತನ್ನ ವಚನವನ್ನು ನೆನಪಿಸಿ, ಎಳ್ಳನ್ನು ದಾನವಾಗಿ ಕೇಳುತ್ತಾನೆ; ಹಠಮಾರಿ ಕಾಳಮ್ಮ ಏನಾದರೂ ಒಂದು ಕಾಳು  ಎಳ್ಳನ್ನೂ ಮಾದಪ್ಪನಿಗೆ ಕೊಡಲು ನಿರಾಕರಿಸುತ್ತಾಳೆ. ಕೊನೆಗೆ, ಇತರರಿಗೆ ಬುದ್ಧಿ ಕಲಿಸಲು ಮಾದಪ್ಪ ಅವಳಿಗೆ ಶಾಪ ಕೊಟ್ಟು ಅವಳು ಉರಿದು ಬೂದಿಯಾಗುವಂತೆ ಮಾಡುತ್ತಾನೆ.

೭. ಸರಗೂರಯ್ಯನ ಸಾಲು: ಈ ಮೊದಲೇ ಇತರ ದೇವತೆಗಳಾದ ಒಕ್ಕಲಾಗಿರುವ ಬಡ ಸರಗೂರಯ್ಯ-ರಾಮವ್ವ ದಂಪತಿಗಳನ್ನು ಅನೇಕಾನೇಕ ತಂತ್ರಗಳಿಂದ ಹೆದರಿಸಿ, ಪುಸಲಾಯಿಸಿ, ಹೊಗಳಿ, ಅವರನ್ನು ತನ್ನ ಒಕ್ಕಲನ್ನಾಗಿ ಮಾದಪ್ಪ ಮಾಡಿಕೊಳ್ಳುತ್ತಾನೆ.

೮. ಮಂಗಳಾರತಿ: ಈ ಭಾಗದಲ್ಲಿ ದೇವತಾ ಸ್ತುತಿಯೊಡನೆ ಇಡೀ ಕಾವ್ಯದ ಸಾರಾಂಶವೂ ಕೊಡಲ್ಪಟ್ಟಿದೆ.

ವಿಶ್ಲೇಷಣೆ

ಧಾರ್ಮಿಕ-ಸಾಂಸ್ಕೃತಿಕ-ಕೌಟುಂಬಿಕ ಇತ್ಯಾದಿ ಅನೇಕ ನೆಲೆಗಳಲ್ಲಿ ಅರ್ಥೈಸಬಹುದಾದ ಪಠ್ಯ ಮಲೆ ಮಾದೇಶ್ವರ. ಇಂತಹ ಬಹುಮುಖೀ ಪಠ್ಯವನ್ನು ಮೊದಲಿಗೆ ಅಂತರ್‌ಪಠ್ಯೀಯತೆಯ ನೆಲೆಯಲ್ಲಿ ಪ್ರವೇಶಿಸಬಹುದು.

ಅ. ಅಂತರ್‌ಪಠ್ಯೀಯತೆ: ಮಾದೇಶ್ವರನ ಕಥೆಯನ್ನು ಆಧರಿಸಿ ಅನೇಕ ಲಿಖಿತ ವಾಙ್ಮಯ ಪ್ರಕಾರಗಳು ರಚಿಸಲ್ಪಟ್ಟಿವೆ. ಇವುಗಳಲ್ಲಿ ಮೊದಲನೆಯದೆಂದರೆ ಗುರುಸಿದ್ಧನೆಂಬ ಕವಿ ೧೭೫೦ರಲ್ಲಿ ಬರೆದಿರುವ ಮಾದೇಶ್ವರ ಸಾಂಗತ್ಯ. ಅನಂತರ, ೧೮೩೬ರಲ್ಲಿ ದೇವಚಂದ್ರನೆಂಬ ಜೈನ ಕವಿ ಗದ್ಯದಲ್ಲಿ ಬರೆದ ರಾಜಾವಳಿ ಕಥೆಯಲ್ಲಿ ಸಂಕ್ಷಿಪ್ತವಾಗಿ ಮಾದೇಶ್ವರನ ಕಥೆ ಬರುತ್ತದೆ. ಇಪ್ಪತ್ತನೆಯ ಶತಮಾನದಲ್ಲಾದರೋ ಅನೇಕ ಕಥೆ ನಾಟಕ ಕಾದಂಬರಿಗಳು ಮಾದೇಶ್ವರ ಬದುಕಿನ ಸುತ್ತಾ ಬರೆಯಲ್ಪಟ್ಟಿವೆ.

ಒಂದೇ ವಸ್ತು ಲಿಖಿತ ಮತ್ತು ಮೌಖಿಕ ಪರಂಪರೆಗಳಲ್ಲಿ ಹೇಗೆ, ಯಾವ ಯಾವ ಭಿನ್ನತೆಗಳಿಂದ ಅಭಿವ್ಯಕ್ತಿಗೊಳ್ಳುತ್ತದೆ ಎಂಬುದನ್ನು ಗುರುತಿಸುವುದಕ್ಕಾಗಿ ದೇವಚಂದ್ರನ ಕೃತಿಯನ್ನು ಅದೇ ವಸ್ತುವನ್ನುಳ್ಳ ಮೌಖಿಕ ಕಾವ್ಯದೊಡನೆ ಹೋಲಿಸಿ ನೋಡಬಹುದು. ಮಾದೇಶ್ವರನ್ನು ಕುರಿತು ರಾಜಾವಳಿ ಕಥೆಯಲ್ಲಿ ಹೀಗೆ ಬರುತ್ತದೆ:

“….ಕುಂತೂರು ಮಠದೊಳು ನಂಜಯ್ಯನೆಂಬ ಜೋಳಿಗೆ
ಒಡೆಯರಿರಲಲ್ಲಿಗೆ ಬಡಗಸೀಮೆಯಿಂದೋರ್ವ ಮಾದಿಗರ ಹುಡುಗಂ
ಪೂರ್ವ ಜನ್ಮದ ಸಂಸ್ಕಾರ…. ವ್ಯಂತರದೇವತಾ ಒಲುಮೆಯಿಂ
ದೇಶಾಂತರಂ ಬಂದಾ ಮಠಮಂ ಸೇರಿ ದನಮಂ ಕಾಯ್ದು ಕೊಂಡಿರ್ದು
ಹೂವಂ ತರಲ್‌ಪೋಗಿ ಹೇರಳೆ ಚಂಡು ಮೊದಲಾದಾಟದೊಳಿರ್ದು
ಕರಡಗೆಯೊಳಗೆ ಸಿಕ್ಕಿದ ಪ್ರಾಣಿಯನಿಟ್ಟು ತರಲದಂ ಪೊವೆಂದು ಶಿಷ್ಯನೊಳತಿ

ಶ್ರದ್ಧೆಯಿಂ ಜೋಳಿಗೆ ನಂಜ ಒಡೆಯಂಗೆ ದೊರೆತನ ಮಾಡಿಕೊಡುವೆನೆಂದು ನಂಬಿಸಿಯಾನಾ ಡರಸಪ್ಪಭಿಚಂದ್ರನೊಳು ಕಪಟಸ್ನೇಹ ದಿಂದಾಪ್ತನಾಗಿಯುಂ ಮಂತ್ರಿಪ್ರಧಾನಿಗಳೆಲ್ಲರಂ ವಶಂ ಮಾಡಿಕೊಂಡಿರ್ದಾ ಮಲೆಯನಾಡ ಬೆಟ್ಟದ ಬೋಳರೆಯೊಳಷ್ಟಾಹ್ನಿಕದಷ್ಟೋಪವಾಸದಿಂ ಯೋಗಕ್ಕೆ ನಿಂದ ಭಾನು ಕೀರ್ತಿಗಳೆಂಬ ಜಿನಮುನಿಯಂ ಬಂಧಿಸಿ ಬಪ್ಪಂ ಬನ್ನಿಮೆಂದು ಲಾಕ್ಷವ ಪಾದುಕಮಂ ತೊಡಿಸಿ ಕಾಸಿದರೆಯ ಮೇಲೆ ನಿಲಿಸಿ ಅಲ್ಲೇ ಪರಿಹರಿಸಿಬಿಟ್ಟು ನಂಜರಾಜ ಒಡೆಯಂಗೆ ಪಟ್ಟಂಗಟ್ಟಿ ತಾನು ಗುಡ್ಡನಾಗಿರ್ದು ಪರ್ವತದ ಬೋಳರೆಯೊಳು ಯೋಗದೊಳಿರ್ದ ಶ್ರವಣಮುನಿಯಂ ಪಾಪಕ್ಕಳುಕದೆ ಕೊಂದಾ ನಂಜರಾಜಯ್ಯನ ರಾಜ್ಯಕ್ಕೆ ತಾನೆ ಅರಸಾಗಿ ಮಾದರಸನೆಂದು ಪ್ರಸಿದ್ಧಿಯಾಗಿ ತನ್ನ ಪೆಸರಿಂದಾ ಹೊಳೆಯ ಮಧ್ಯದೊಳು ಕಟ್ಟೆಯಂ ಕಟ್ಟಿಸಲು ಮಂತ್ರಶಕ್ತಿಯಿಂ ದೊಡ್ಡ ಕಲ್ಲನ್ನು ದೈವಂಗಳಿಂ ತರಿಸುತ್ತೆ ಇಲ್ಲಿಡಲ್ಲಿದೆಂದು ಪೇಳುತ್ತಿರಲೊಮ್ಮೆ ಇಲ್ಲಿಡೆಂಬುದಂ ತಲೆಯ ಮೇಲಿಟ್ಟು ಕೊನೆ ಸತ್ತು ವ್ಯಂತರನಾಗೆ ಆ ನಾಡುಗಳೆಲ್ಲರೊಳು ಅತ್ಯಂತ ರುಜೆ ಮದಲಾದವರಿಂ ಬಹಳ ಜನಂ ಸಾಯುತ್ತಿರ್ಪುದುಂ ಸರಗೂರು ಉಪ್ಪಲಿಗರು ಗುಡ್ಡರಾಗಿ ಆವೇಶ ಬಂದು ಏಳಮಲೆ ಮಧ್ಯದಲ್ಲಿ ಪಶ್ಚಿಮಾಭಿಮುಖದಿ ಗುಡಿ ಕಟ್ಟಿಸಿ ಮಾದನೆಂಬುದರಿಂ ಮಾದೇಶ್ವನೆಂದು ಪೆಸರಿಟ್ಟು ಅನೇಕ ತೆರದಿಂ ಪೂಜಿಸುತ್ತೆ ಜಗತ್ಪ್ರಸಿದ್ಧಿಯಾಗೆ ಸರಗೂರ ಗುಡ್ಡನೆ ಗೊತ್ತಾಗಿ ಜಾತ್ರೆ ತೇರುತಿರನಾಳೆಂದು ವರುಷಂಪ್ರತಿ ನಡೆಸುತ್ತೆ ಬರೆ ಬಹುದೇಶದ ಜನರೆಲ್ಲಂ ಮರುಳಾಗಿ ಕಾಳಿಕಕೆ ಕಪ್ಪಮಂ ಕೊಡುತ್ತಿರಲು ನಾಲ್ಕು ಒಕ್ಕಲು ತಮ್ಮಡಿಗಳನಲ್ಲಿರಿಸಿ ಭೂಮಿಯಂ ಕೊಟ್ಟು ಅರಮನೆ ಅಧಿಕವಿಟ್ಟು ಬಂದ ಕಾಣಿಕೆಯಲ್ಲ ಅರಮನೆಗೆ ತೆಗೆದು ಕೊಂಬಾರಾ ಮಾದನ ಒಲುಮೆ ಬಂಗತರೆಂದು ಅನೇಕ ಜನಂ ಗುಡ್ಡರಾಗುತ್ತಿರಲು….

ಈ ಶಿಷ್ಟ ಕಥನದಲ್ಲಿ ದೇವಚಂದ್ರನು ಸಂಕ್ಷಿಪ್ತವಾಗಿ ಮಾದೇಶ್ವರನ ಬದುಕಿನ ಬಗ್ಗೆ ಕೊಡುವ ವಿವರಗಳು ಹೀಗಿವೆ: ಮಾದೇಶ್ವನು ಬಡಗಸೀಮೆಯಿಂದ ಬರುವುದು; ಮಾದಿಗರ ಹುಡುಗನಾಗಿರುವುದು; ಪ್ರಾಣಿಗಳನ್ನು ಹೊವೆಂದು ಪೂಜೆಗೆ ತರುವುದು; ಆ ನಾಡಿನರಸ ಅಭಿಚಂದ್ರನು ‘ಲಾಕ್ಷಾ ಪಾದುಕೆ’ಯನ್ನು ಮೆಟ್ಟುವಂತೆ ಮಾಡಿ ಅವನನ್ನು ಸಾಯಿಸುವುದು; ಜೈನ ಯೋಗಿ ಶ್ರವಣಮುನಿಯನ್ನು ಕೊಲ್ಲುವುದು; ಕೊನೆಗೆ ತಾನೇ ಮಾದರಸನೆಂಬ ಹೆಸರಿನಿಂದ ಅರಸನಾಗಿ ಪ್ರಸಿದ್ಧನಾಗುವುದು; ಉಪ್ಪಲಿಗರು ಏಳುಮಲೆ ಮಧ್ಯದಲ್ಲಿ ಅವನಿಗೆ ಗುಡಿ ಕಟ್ಟಿಸುವುದು; ಅನೇಕರು ಅವನ ಭಕ್ತರಾಗುವುದು ಇತ್ಯಾದಿ. ಈ ವಿವರಗಳಲ್ಲಿ ಮಾದೇಶ್ವರನು ಅರಸೊತ್ತಿಗೆಯನ್ನು ಪಡೆಯುವುದು ಮತ್ತು ಅಭಿಚಂದ್ರ ಹಾಗೂ ಶ್ರವಣಮುನಿ ಇಬ್ಬರನ್ನು ಕೊಲ್ಲುವುದು ಈ ಅಂಶಗಳನ್ನು ಉಪೇಕ್ಷಿಸಿದರೆ, ಇತರ ವಿವರಗಳೆಲ್ಲವೂ (ಪೂಜೆಗೆ ಪ್ರಾಣಿಗಳನ್ನು ತಂದು ಅವನ್ನು ಹೂವಾಗಿ ಮಾರ್ಪಡಿಸುವುದೂ ಸೇರಿದಂತೆ) ಕಂಸಾಳೆಯವರು ನಿರೂಪಿಸುವ ಕಥೆಯ ವಿವರಗಳಿಗೆ ಸಮಾನವಾಗಿವೆ. ಆದರೆ, ಇಲ್ಲಿ ಗಮನಿಸಬೇಕಾದುದು ಮಾದೇಶ್ವರನ ಬಗ್ಗೆ ದೇವಚಂದ್ರನಿಗಿರುವ ನಿಲುವು: ದೇವಚಂದ್ರನು ‘ಉಚ್ಚ ಕುಲ’ದ ಜೈನ ಬ್ರಾಹ್ಮಣನಾದುದರಿಂದ ನಿರೂಪಣೆಯ ಧಾಟಿಯಲ್ಲಿ ಒಂದು ಬಗೆಯ ಔದಾಸೀನ್ಯ ಮತ್ತು ಅಲಕ್ಷ್ಯ ಎದ್ದು ಕಾಣುತ್ತವೆ: ಅವನು ಮಾದೇಶ್ವರನನ್ನು ಮಾದಿಗರ ಹುಡುಗನೆಂದು, ಕೊನೆಯವರಿಗೂ ‘ಮಾದ’ನೆಂದೇ ಕರೆಯುತ್ತಾನೆ. ಮಾದೇಶ್ವರನಿಗೆ ಪವಾಡ ಸದೃಶ ಶಕ್ತಿ ಬಂದುದು ‘ಪೂರ್ವಜನ್ಮ ಸಂಸ್ಕಾರದಿಂದ’ ಮತ್ತು ‘ವ್ಯಂತರ ದೇವತೆಯ ಒಲುಮೆ’ಯಿಂದ- ಎಂದರೆ, ‘ನೀಚ ಕುಲ’ದವನು ಪೂರ್ವಜನ್ಮ ಸಂಸ್ಕಾರವಿಲ್ಲದಿದ್ದರೆ ಏನನ್ನೂ ಸಾಧಿಸಲಾರ ಎಂಬುದು ಇಲ್ಲಿಯ ಗೃಹೀತ; ಮತ್ತು ಅನೇಕರು ಅವನ ಗುಡ್ಡರಾಗುವುದು ‘ಮರುಳಾಗಿ’. ಅರ್ಥಾತ್, ಇಡೀ ಮಾದೇಶ್ವರನ ಬದುಕು ಸಾಧನೆಗಳ ಬಗ್ಗೆ ಒಂದು ಬಗೆಯ ತಿರಸ್ಕಾರ ಕಂಡು ಬರುತ್ತದೆ (ಜಾತಿ-ಕುಲಗಳ ಬಗ್ಗೆ ಇರುವ ಇದೇ ನಿಲುವನ್ನು, ಪ್ರಾಯಃ, ಸಪ್ತರ್ಷಿಗಳ ಉಪದೇಶದಂತೆ ತಪಸ್ಸು ಮಾಡಿ ಬೇಡನಾಗಿದ್ದವನು ವಾಲ್ಮೀಕಿ ಮುನಿಯಾಗುವುದು; ಹೆಡ್ಡ ಕುರುಬನಾಗಿದ್ದವನು ಕಾಳಿಖಾದೇವಿಯ ಅನುಗ್ರಹದಿಂದ ‘ಮಹಾಕವಿ ಕಾಳಿದಾಸ’ನಾಗುವುದು; ಇತ್ಯಾದಿ ಕಥೆಗಳು ಸೂಕ್ಷ್ಮವಾಗಿ ದಾಖಲಿಸುತ್ತವೆ).

ಈಗ ನಾವು ಕಂಸಾಳೆಯವರು ನಿರೂಪಿಸುವ ಮಲೆ ಮಾದೇಶ್ವರ ಕಾವ್ಯವನ್ನು ಗಮನಿಸಿದರೆ, ಮತ್ತೊಂದು ಬಗೆಯ ಧೋರಣೆ ಕಂಡುಬರುತ್ತದೆ. ಮೊದಲನೆಯದಾಗಿ, ಅವರ ಕಥನದಲ್ಲಿ ಶ್ರವಣಮುನಿ ಮತ್ತು ಅಭಿಚಂದ್ರ ಇಬ್ಬರೂ ಒಂದಾಗಿ ‘ಶ್ರವಣಾಸುರ’ನಾಗುತ್ತಾರೆ ಮತ್ತು ಶ್ರವಣಾಸುರ ವಧೆಯೇ ಮಾದೇಶ್ವರನ ಅವತಾರಕ್ಕೆ ಕಾರಣ. ಆದರೆ, ಗಾಯಕರು ಶ್ರವಣಾಸುರನನ್ನೂ ಶಿವನ ಎಂಟನೆಯ ಅವತಾರವೆಂಬಂತೆ ಚಿತ್ರಿಸುತ್ತಾರೆ. ಮೊದಲಬಾರಿಗೆ ಈ ದೊರೆಯನ್ನು ಕಂಡಾಗ ಮಾದೇಶ್ವರ ಆ ಶ್ರವಣ ಮಹಾತ್ಮನಿಂದ ಆಶೀರ್ವಾದ” ಪಡೆಯುತ್ತಾನೆ. ಶ್ರವಣಾಸುರ ಸತ್ತಮೇಲೂ ಅವನಿಗೆ ಸದ್ಗಿತಿಯನ್ನು ಮಾದೇಶ್ವರ ದಯಪಾಲಿಸುತ್ತಾನೆ. ದೇವಚಂದ್ರನಲ್ಲಿ ಕೇವಲ ಒಂದು ವಸ್ತುವಾಗಿರುವ ‘ಲಾಕ್ಷಾ ಪಾದುಕೆ’ ಮೌಖಿಕ ಕಾವ್ಯದಲ್ಲಿ (೧೨ನೆಯ ಶತಮಾನದಲ್ಲಿದ್ದ) ಮಹಾನ್ ಶರಣ ಹರಳಯ್ಯನ ‘ಉರಿ ಚಮ್ಮಾಳಿಗೆ’ ಯಾಗುತ್ತದೆ. ಮಾದಿಗರ ಕುಲದ ಮಾದಪ್ಪ ಮಾದೇಶ್ವರನಾಗಿ, ಶ್ರವಣಾಸುರನನ್ನು ಉರಿ ಚಮ್ಮಾಳಿಗೆಯ ಮೂಲಕ ವಧಿಸಿದ ನಂತರ ಅವನ ಸೆರೆಯಲ್ಲಿದ್ದ ಎಲ್ಲಾ ದೇವ೦ದೇವತೆಗಳನ್ನು ಬಿಡುಗಡೆ ಮಾಡುತ್ತಾನೆ.

ಎಂದರೆ, ಇಲ್ಲಿ ನೇರವಾಗಿ ನಡೆಯುತ್ತಿರುವುದು ‘ದೈವೀಕರಣ’- ಎಂ.ಎನ್. ಶ್ರೀನಿವಾಸ್ ಮಂಡಿಸಿರುವ ‘ಸಂಸ್ಕೃತೀಕರಣ’ದ ಪರಿಣಾಮ. ದೈವೀಕರಣ, ಅವತಾರ ಕಲ್ಪನೆ, ಮಂತ್ರ-ತಂತ್ರಗಳಿಂದ ಕೂಡಿದ ದೀಕ್ಷಾವಿಧಿ, ಇವೆಲ್ಲವೂ ಈ ಕಾವ್ಯದ ನಾಯಕರನ್ನು ದೈವತ್ವಕ್ಕೇರಿಸುತ್ತವೆ. ಒಂದು ನೆಲೆಯಲ್ಲಿ ಶಿಷ್ಟ ಕಾವ್ಯಗಳು ‘ಕೆಳ’ ಜಾತಿಯವರ ಸಾಧನೆಗಳನ್ನು ಪೂರ್ವಜನ್ಮದ ಫಲ, ‘ದೇವತಾನುಗ್ರಹ’ ಇತ್ಯಾದಿ ಮಾಗ್ಗಗಳಲ್ಲಿ ವಿವರಿಸಿ ಹೀಗಳೆದರೆ,‘ ‘ಕೆಳ’ ಜಾತಿಯವರೂ ದೈವೀಕರಣದ ಮೂಲಕ ಅವರುಗಳ ಸಾಧನೆಗಳನ್ನು ವಿವರಿಸಲು ಪ್ರಯತ್ನಿಸುವುದು ಅದೇ ಪರಿಣಾಮವನ್ನುಂಟುಮಾಡುತ್ತದೆ. ಎಲ್ಲವನ್ನೂ ‘ದೈವೀಕರಣ’ಕ್ಕೊಳಪಡಿಸುವ ಮೌಖಿಕ ಕಥನಗಳೂ ಅರಿವಿಲ್ಲದಂತೆಯೇ ಜಾತಿಗಳ ಶ್ರೇಣೀಕರಣವನ್ನು ಮತ್ತು ಕೆಳ ಜಾತಿಗಳ ಮಾವನ ಸಾಧ್ಯತೆಗಳನ್ನೂ ಹೀಗೆ ಮೂಲೆಗೆ ತಳ್ಳುತ್ತವೆ. ಮಾದಪ್ಪ ‘ಮಾದಪ್ಪ’ನಾಗಿಯೇ ಏನನ್ನೂ ಸಾಧಿಸುವುದಿಲ್ಲ; ಮಾದೇಶ್ವರನಾಗಿ, ಶಿವನ ಅವತಾರವಾಗಿ ಅನೇಕ ಭಕ್ತರನ್ನು ಪಡೆದು ತನ್ನ ಪಂಥವನ್ನು ಜನಪ್ರಿಯ ಗೊಳಿಸುತ್ತಾನೆ.

ಇಲ್ಲಿ ನಾನು ಹೇಳಲು ಪ್ರಯತ್ನಿಸುತ್ತಿರುವುದು ಹೇಗೆ ‘ಕೆಳ’ ವರ್ಗಗಳ ನಾಯಕರ ಸಾಧನೆಗಳನ್ನು ಅದೇ ವರ್ಗಕ್ಕೆ ಸೇರಿದ ಗಾಯಕರು ಕೀರ್ತಿಸುತ್ತಿರುವಾಗ ಇಬ್ಬಗೆಯ ಒತ್ತಡಗಳು ಅಲ್ಲಿ ‌ಕ್ರಿಯಾಶೀಲವಾಗಿರುತ್ತವೆ ಎಂಬ ಸಂಗತಿ. ಈ ಒತ್ತಡಗಳನ್ನು ಅಂತರಂಗೀಕರಿಸಿಕೊಂಡ ಶ್ರೇಣೀಕೃತ ಜಾತಿವ್ಯವಸ್ಥೆಯ ಮೌಲ್ಯಗಳು ಮತ್ತು ತಮ್ಮ ತಮ್ಮ ಜಾತಿಗಳ ಸಮುದಾಯಗಳ ಬಗ್ಗೆ ಬರುವ ಅಸ್ಮಿತೆಯ ತೀವ್ರ ಪ್ರಜ್ಞೆ ಎಂದು ಗುರುತಿಸಬಹುದು. ಮೊದಲನೆಯ ಒತ್ತಡದ ಪರಿಣಾಮವಾಗಿ ದೈವೀಕರಣ, ಅವತಾರ ಕಲ್ಪನೆ, ಮಂತ್ರಶಕ್ತಿ, ಇತ್ಯಾದಿಗಳು ಸೂಚಿಸುವ ‘ಸಂಸ್ಕೃತೀಕರಣ’ವು ಜನ್ಮಿಸಿದರೆ, ಎರಡನೆಯ ಅಸ್ಮಿತೆಯ ಒತ್ತಡದಿಂದ ನಿಗ್ರಹಾನಿಗ್ರಹ ಶಕ್ತಿಯುಳ್ಳ ಈ ಮಹಾಕಾವ್ಯಗಳ ನಾಯಕರೂ ಜಾತಿಸ್ಮರಣೆಯುಳ್ಳ ಸಾಮಾಜಿಕ ವ್ಯಕ್ತಿಗಳಂತೆಯೇ ವರ್ತಿಸುತ್ತಾರೆ (ದೇವ-ಮಾನವ ಕಂಟಕನಾದ ಶ್ರವಣಾಸುರನನ್ನು ‘ಮಾಯ್ಕಾರ’, ಸರ್ವಶಕ್ತಿಯುತ ಮಾದೇಶ್ವರ ತನ್ನ ನೋಟದಿಂದಲೇ ಭಸ್ಮ ಮಾಡಬಹುದಿತ್ತು-ಬೇವಿನಟ್ಟಿ ಕಾಳಮ್ಮನನ್ನು ಭಸ್ಮ ಮಾಡಿದಂತೆ; ಆದರೆ ಅವನು ಅನುಸರಿಸುವ ಮಾರ್ಗವೇ ಬೇರೆ. ತನ್ನನ್ನು ‘ಮಾದಿಗ’ನೆಂದು ತಿರಸ್ಕಾರದಿಂದ ಕರೆದು ತನ್ನ ಕಾಲಿಗೆ ತಕ್ಕಂತಹ ಚಮ್ಮಾಳಿಗೆ ಮಾಡಿಕೊಂಡು ಬರಲು ಹೇಳಲು ಶ್ರವಣಾಸುರನು ಅದೇ ಚಮ್ಮಾಳಿಗೆಯ ಕಾರಣದಿಂದಲೇ ಸಾವನ್ನಪ್ಪುವಂತೆ ಮಾದೇಶ್ವರ ಆಡುತ್ತಾನೆ). ಈ ರೀತಿ ‘ಸಂಸ್ಕೃತೀಕರಣ’ ಮತ್ತು ‘ಸಾಮುದಾಯಿಕ ಅಸ್ಮಿತೆಯ ತೀವ್ರ ಪ್ರಜ್ಞೆ’ ಇವೆರಡರ ಅದ್ಭುತ ಪರಸ್ಪರ ಕರ್ಷಣೆ ಈ ಮಹಾಕಾವ್ಯಗಳನ್ನು ನಿಜವಾದ ಅರ್ಥದಲ್ಲಿ ಮಹಾಕಾವ್ಯಗಳನ್ನಾಗಿಸುತ್ತದೆ.

ಆ. ಧಾರ್ಮಿಕ ಚರಿತ್ರೆ: ಮಲೆ ಮಾದೇಶ್ವರ ಕಾವ್ಯವು (ಮಂಟೇಸ್ವಾಮಿ ಕಾವ್ಯದಂತೆ) ಒಂದು ನೂತನ ಧಾರ್ಮಿಕ ಪಂಠವು ಸಮಾಜದಲ್ಲಿ ನೆಲೆಗೊಳ್ಳಲು ಅನುಭವಿಸುವ ಆತಂಕ ತಲ್ಲಣಗಳು, ಅನುಸರಿಸುವ ಉಪಾಯ-ತಂತ್ರಗಳು ಮತ್ತು ರೂಪಿಸುವ ಆಚಾರ-ವಿಚಾರಗಳು ಇವೆಲ್ಲವುಗಳ ನೂಜ ಹಾಗೂ ನಂಬಲರ್ಹ ದಾಖಲೆ.

ಈ ಎರಡೂ ಮಹಾಕಾವ್ಯಗಳು ದಾಖಲಿಸುವಂತೆ ಮಾದೇಶ್ವರ ಮತ್ತು ಮಂಟೇಸ್ವಾಮಿ ಶಿಷ್ಟ ಶರಣರ ವರ್ತನೆಯನ್ನು ಸಹಿಸಲಾಗದೆ ದಕ್ಷಿಣಕ್ಕೆ ಬಂದು ತಮ್ಮದೇ ಆದ ಒಂದು ಪಂಥವನ್ನು ಸ್ಥಾಫಿಸಲೆತ್ನಿಸಿದಾಗ, ಅವರ ಪಂಥಗಳು ಆಗಲೇ ಜನರ ಮನಸ್ಸಿನಲ್ಲಿ ನೆಲೆಯೂರಿದ್ದ ಇತರ ಅನೇಕ ಧರ್ಮ-ಪಂಥಗಳೊಡನೆ ಸ್ಪರ್ಧಿಸಬೇಕಾಗಿತ್ತು- ರಾಷ್ಟ್ರೀಯ ನೆಲೆಯ ವೈದಿಕ –ಜೈನ-ಬೌದ್ಧ, ಧರ್ಮಗಳು, ಪ್ರಾಂತೀಯ ವ್ಯಾಪ್ತಿಯ ನಾಥ-ಕಾಳಾಮುಖ-ಪಾಶುಪತ ಇತ್ಯಾದಿ ಪ್ರಾಂತೀಯ ನೆಲೆಯ ಶೈವ ಪಂಥಗಳು ಮತ್ತು ಸ್ಥಳೀಯ ಗ್ರಾಮ ದೇವತೆಗಳಾದ “ಕನ್ನಂಬಾಡಿ ಚೆನ್ನಗೋಪಾಲ ರಾಯ / ಮೇಲ್ಕೋಟೆ ಚಲುವರಾಯ ಅಕ್ಕಮ್ಮ ಚಿಕ್ಕಮ್ಮ ಚಿಕ್ಕಾದೇವಿ / ಬದ್ಧರ ಬನ್ನಂಕಾಳಿ / ಬನ್ನೂರು ಯೇಮಾದ್ರಿ…” ಇವರೆಲ್ಲರೊಡನೆ ಸ್ಪರ್ಧಿಸಬೇಕಾಗಿತ್ತು. ಮಧ್ಯಕಾಲೀನ ಹಿಂದೂ ಸಮಾಜದಲ್ಲಿ ದೇವ-ದೇವತೆಗಳು ಎಷ್ಟು ಕಿಕ್ಕಿದಿರು ತುಂಬಿದ್ದರೆಂದರೆ, ಒಂದೇ ಮನೆಯಲ್ಲಿ ಗಂಡನ ಮನೆದೇವರು ಒಬ್ಬರಾದರೆ ಹೆಂಡತಿಯ ಮನೆದೇವರು ಇನ್ನೊಬ್ಬರು; ತಂದೆಯ ಧರ್ಮಪಂಥ ಒಂದಾದರೆ ಮಕ್ಕಳ ಧರ್ಮಪಂಥ ಮತ್ತೊಂದಾಗಿರುತ್ತಿತ್ತು.

ಸ್ಥಾಪಿತ ಸ್ಥಳೀಯ ದೇವ-ದೇವತೆಗಳನ್ನು ಒಲಿಸಿಕೊಂಡು ಅಥವಾ ಮಣಿಸಿ, ಅವರ ಒಕ್ಕಲುಗಳನ್ನು ತನ್ನ ಒಕ್ಕಲುಗಳನ್ನಾಗಿ ಮಾಡಿಕೊಳ್ಳಲು ಹೆಚ್ಚಿನ ಸಂದರ್ಭಗಳಲ್ಲಿ ಮಾದೇಶ್ವರನು ಅನುಸರಿಸುವ ಮಾರ್ಗವೆಂದರೆ ರಾಜಿ ಅಥವಾ ಸಂಧಾನ. ತನ್ನ ಸಂಚಾರದಲ್ಲಿ ತನ್ನನ್ನು ತಡೆದು ಸುಂಕ ಕೇಳಿದ ಸಿಂಗನಲ್ಲೂರು ಬಸವಣ್ಣನನ್ನು ‘ನನ್ನ ಜಾತ್ರೆಗೆ ಬರುವ ಪರಸೆ ನಿನಗೂ ಪೂಜೆ ಮಾಡುತ್ತಾರೆ; ನೀನು ಇಲ್ಲೇ ಕಟ್ಟೆ ಬಸವಯ್ಯನಾಗಿ ನೆಲೆಗೊಳ್ಳು’ ಎಂದು ಅವನನ್ನು ಒಪ್ಪಿಸುತ್ತಾನೆ; ಹನುಮಂತರಾಯ್ನ ಕಣಿವೆಯಲ್ಲಿದ್ದ ಆಂಜನೇಯನನ್ನು ‘ನನ್ನ ಪರಸೆ ಬರುವಂಥವರು ನಿನಗೆ ಧೂಪ ಹಾಕಿ ಮುಂದಕ್ಕೆ ಬರಲಿ’ ಎಂದು ಅವನಿಗೆ ಸಮಾಧಾನ ಹೇಳುತ್ತಾನೆ; ಶಸ್ತ್ರಗಡಿಮೆ ಒಡ್ಡಿನಲ್ಲಿ ಬಿಳಿಗಿರಿ ರಂಗಸ್ವಾಮಿಯನ್ನು ಕಂಡು ನನ್ನ ಪರಿಸೆ ‘ಬೆಳಗಿನ ಮೊದಲ ಪೂಜೆ ನಿನಗೆ ಮಾಡ್ಬಿಟ್ಟು ಮಧ್ಯಾಹ್ನದ ಪೂಜೆ ನನಗೆ ಮಾಡಲಿ’ ಎಂದು ಒಲಿಸಿಕೊಳ್ಳುತ್ತಾನೆ’ ಕೌದಳ್ಳಿಯ ಕಿವುಡು ಮಾರಿ ಮೂಗು ಮಾರಿಯರನ್ನು ‘ನನ್ನ ಪರಿಸೆ ನಿಮಗೂ ಕಾಸಿನ ಧೂಪ ಹಾಕುತ್ತಾರೆ’ ಎಂದು ಸಮಾಧಾನ ಮಾಡುತ್ತಾನೆ;….. ಹೀಗೆ ಎಲ್ಲಾ ಸ್ಥಳೀಯ ದೇವ ದೇವತೆಗಳಿಗೂ ತನ್ನ ಪಂಥದಲ್ಲಿ ಒಂದು ಸ್ಥಾನವನ್ನು ಕೊಟ್ಟು ಅವರನ್ನು ಗೆಲ್ಲುತ್ತಾನೆ ಎಂದರೆ ಅವರ ಭಕ್ತಾದಿಗಳನ್ನು ಅವರು ನಂಬುವವರನ್ನು ತನ್ನ ಪಂಥಕ್ಕೆ ಸೇರಿಸಿಕೊಳ್ಳುತ್ತಾನೆ.

ಈಗಾಗಲೇ ಇತರ ದೇವ-ದೇವತೆಗಳ ಒಕ್ಕಲಾಗಿರುವವವರನ್ನು ಗೆಲ್ಲಲು ಅವರ ನೆಲೆಯಲ್ಲಿಯೂ ಮಾದೇಶ್ವರನು ಪ್ರಯತ್ನಿಸುತ್ತಾನೆ. ಈ ಕಾರ್ಯಕ್ಕಾಗಿ ಅವನು ಹಾಕದ ವೇಷವಿಲ್ಲ, ಅನುಸರಿಸದ ಯುಕ್ತಿಯಿಲ್ಲ. ಆರನೆಯ ಅಧ್ಯಾಯದಲ್ಲಿ ಬರುವ ಮೂಗಯ್ಯ-ರಾಮವ್ವ ಎಂಬ ಬಡ ದಂಪತಿಗಳು ಬಿಳಿಗಿರಿ ರಂಗಸ್ವಾಮಿಯ ಒಕ್ಕಲು. ಅವರನ್ನು ತನ್ನ ಒಕ್ಕಲನ್ನಾಗಿ ಮಾಡಿಕೊಳ್ಳಲು, ಮೊದಲಿಗೆ ಮಾದೇಶ್ವರನು ಮುಡುಕುತೊರೆ ಮಲ್ಲಣ್ಣ ಸ್ನೇಹವನ್ನು ಸಂಪಾದಿಸಿ, ಅನಂತರ ಅವನೊಡನೆ ಬಿಳಿಗಿರಿ ರಂಗಸ್ವಾಮಿಯನ್ನು ಕಂಡು ಅವನು ತನ್ನ ಕೋರಿಕೆಯನ್ನು ಮನ್ನಿಸುವಂತೆ ಮಾಡಿ, ಅನಂತರ ಅವರಿಬ್ಬರೊಡನೆ ಆ ಬಡ ದಂಪತಿಗಳನ್ನು ಭೇಟಿ ಮಾಡಿ ತನ್ನ ಕೋರಿಕೆಯನ್ನು ಅವರ ಮುಂದಿಡುತ್ತಾನೆ. ಅವರು ಒಪ್ಪದಿದ್ದಾಗ, ಅವರಿಗೆ ಇನ್ನಿಲ್ಲದಂತಹ ಸುಖ-ಭೋಗಗಳ ಲೋಭವನ್ನು ತೋರಿ, ಅದು ನಿಷ್ಪಲವಾದಾಗ ಅವರ ಬೆಲೆಯನ್ನೆಲ್ಲಾ ಹಾಳು ಮಾಡಿ ಅವರಿಗೆ ತಿನ್ನುವುದಕ್ಕೆ ಏನೂ ಇಲ್ಲದಂತೆ ಮಾಡಿ, ಆಗಲೂ ಅವರು ತಮ್ಮ ಮನೆದೇವರನ್ನು ಬದಲಾಯಿಸಲು ಒಪ್ಪದಿದ್ದಾಗ ಒಂದು ಸನ್ನಿವೇಶದಲ್ಲಿ ಪೊಲೀಸ್ ದಫೇದಾರನಂತೆ, ಮತ್ತೊಂದು ಸನ್ನಿವೇಶದಲ್ಲಿ ಕಾಲಜ್ಞಾನಿಯಂತೆ ವೇಷ ಹಾಕಿ ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆಗಳು ಅವರು ಒಪ್ಪದಿದ್ದಾಗ, ಮಾದೇಶ್ವರನು ತನ್ನದೇ ಆದ ಒಂದು ರಾಜಿಸೂತ್ರವನ್ನು ಅವರ ಮುಂದಿಟ್ಟು ಅದಕ್ಕೆ ಅವರು ಒಪ್ಪುವಂತೆ ಮಾಡುತ್ತಾನೆ: “ನಿಮ್ಮ ಮನೆ ದೇವ್ರಿಗೆ ಮೂರ್ ನಾಮಾ ಹಾಕ್ತಾ ಇದ್ದೀರಿ / ಮಧ್ಯದ ಒಂದು ಕೆಂಪು ನಾಮ ತೆಗುದುಬುಟ್ಟು ಎರಡು ಬಿಳೀ ನಾಮ ಧರಿಸಿ ನಡುಮನೆಗೆ ಬನ್ನಿ”. ಪರಧರ್ಮ / ಪಂಥ / ನಂಬಿಕೆಯವರೊಡನೆ ಈ ಬಗೆಯಲ್ಲಿ ಮಾದೇಶ್ವರ ವರ್ತಿಸುವುದನ್ನು ಜೈನ-ವೈದಿಕ-ವೀರಶೈವ ಧರ್ಮಾನುಯಾಯಿಗಳ ನಡುವೆ ಇದ್ದ ದ್ವೇಷಕ್ಕೆ ಹಾಗೂ ಘಟಿಸಿದ ರಕ್ತಪಾತಕ್ಕೆ ಹೋಲಿಸಿದಾಗ ಜನಪದ ವಿಶ್ವದೃಷ್ಟಿಗೂ ಶಿಷ್ಟ ವಿಶ್ವದೃಷ್ಟಿಗೂ ಇವರು ಅಗಾಧ ವ್ಯತ್ಯಾಸ ಗೊತ್ತಾಗುತ್ತದೆ; ಒಂದು ಸಹಬಾಳ್ವೆಗಾಗಿ ತಹತಹಿಸುವ ಮನಸ್ಸು, ಮತ್ತೊಂದು ತನಗಿಂತ ಭಿನ್ನರಾದವರನ್ನು ‘ಅನ್ಯ’ರನ್ನಾಗಿ ಕಂಡು ದ್ವೇಷಿಸುವ ಮೂಲಭೂತವಾದಿ ಮನಸ್ಸು.

ಕೂಡಲೇ ಇಲ್ಲಿ ಒಂದು ತಿದ್ದುಪಡಿಯನ್ನು ಸೇರಿಸಬೇಕು. ಮಾದೇಶ್ವರನಾಗಲಿ, ಮಂಟೇಸ್ವಾಮಿಯಾಗಲಿ, ಯಾವಾಗಲೂ ರಾಜಿ-ಹೊಂದಾಣಿಕೆಯ ಮಾರ್ಗವನ್ನೇ ಅನುಸರಿಸುತ್ತಾರೆಂದಲ್ಲ; ಅವರೂ ಕೆಲವು ಸಲ ನಿಷ್ಠುರವಾಗಿ ವರ್ತಿಸಿ, ಶಿಕ್ಷೆಯ ಮಾರ್ಗವನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ; ಮಾದೇಶ್ವರನು ಶ್ರವಣಾಸುರನನ್ನು ಉಪಾಯದಿಂದ ಕೊಲ್ಲುತ್ತಾನೆ; ಬೇವಿನಟ್ಟಿ ಕಾಳಮ್ಮನನ್ನು ಕೊನೆಯವರೆಗೆ ಪರೀಕ್ಷಿಸಿ ಅವಳು ಸುಧಾರಿಸುವುದಿಲ್ಲವೆಂದು ಗೊತ್ತಾದಾಗ ಅವಳನ್ನು ಭಸ್ಮ ಮಾಡುತ್ತಾನೆ. ಆದರೆ ಈ ಕಾರ್ಯಗಳು ಕೇವಲ ಅಪವಾದಗಳಷ್ಟೆ ಮತ್ತು ಕ್ವಚಿತ್ತಾಗಿಯೇ ಅವನು ಈ ಮಾರ್ಗವನ್ನು ಅನುಸರಿಸುತ್ತಾನೆ.

ಇ. ಸಾಂಸ್ಕೃತಿಕ ಚರಿತ್ರೆ: ಮಲೆ ಮಾದೇಶ್ವರದಲ್ಲಿ ಕಂಡು ಬರುವ ಕೆಲವು ಘಟನೆಗಳನ್ನು ಮತ್ತು ಕೆಲವು ಸೂಚನೆಗಳನ್ನು ಇಂದು ನಾವು ಓದಿದಾಗ ನಮಗೆ ಅವು ಆಶ್ವರ್ಯವನ್ನುಂಟು ಮಾಡುತ್ತವೆ; ಕಾವ್ಯದಲ್ಲಿ ಅವು ಸ್ಥಾನ ಪಡೆದಿರುವ ಕಾರಣ ಆ ಸಮುದಾಯದಿಂದ ಹೊರಗಿರುವವರಿಗೆ ಗೊತ್ತಾಗುವುದಿಲ್ಲ ಉದಾಹರಣೆಗೆ: ಮಾದೇಶ್ವರನು ತಾನು ಜನ್ಮ ತಾಳಿದ ಕೂಡಲೇ ತನಗೆ ಸ್ತನ್ಯಪಾನ ಮಾಡಿಸಕೂಡದೆಂದು, ಆ ಮೊಲೆ ಹಾಲನ್ನು ಒಂದು ಬಂಡೆಯ ಮೇಲೆ ಸುರಿಸಬೇಕೆಂದೂ ಅದು ಮುಂದೆ ಶೂರ್ನಾವತಿ ನದಿಯಾಗುತ್ತದೆಂದು ತನ್ನ ತಾಯಿಗೆ ಹೇಳುತ್ತಾನೆ. ಮುಂದುವರೆದು, ತಾನು ನಡುಮಲೆಯಲ್ಲಿ ನೆಲಸಿದ ಮೇಲೆ ನೂರೊಂದು ಕನ್ಯೆಯರು ಆ ನದಿಯಿಂದ ನೀರನ್ನು ತಂದು ತನಗೆ ಮಜ್ಜನ ಮಾಡಿಸಿದಾಗಲೆಲ್ಲಾ ತಾನು ತನ್ನ ತಾಯಿಯನ್ನು ನೆನಪಿಸಿಕೊಳ್ಳುತ್ತೇನೆಂದು, ಅಂತಹ ಆಚರಣೆಗೆ ‘ಹಾಲರಬಿ’ ಎಂಬ ಹೆಸರಗುತ್ತದೆಂದು ತಾಯಿಗೆ ಹೇಳುತ್ತಾನೆ.

ಅಲ್ಲದೆ, ಕಾವ್ಯವು ಕೆಲವು ನಿಷೇಧಗಳನ್ನು ಮತ್ತು ಅವುಗಳನ್ನು ಮುರಿದವರಿಗೆ ಆಗುವ ಶಿಕ್ಷೆಯನ್ನೂ ದಾಖಲಿಸುತ್ತದೆ.: ಜಾತ್ರೆಗೆ ಬಂದ ಹೆಣ್ಣು-ಗಂಡುಗಳು ಮರಳಿ ತಮ್ಮ ಊರಿಗೆ ಹೋಗುವ ತನಕ ದೈಹಿಕ ಸಂಪರ್ಕವನ್ನಿಟ್ಟುಕೊಳ್ಳಬಾರದು; ಅವರೆಲ್ಲರೂ ಮನೆಯಿಂದ ತಂದ ಬುತ್ತಿಯನ್ನೇ ಊಟ ಮಾಡಬೇಕು; ಮುಟ್ಟಾದ ಸ್ತ್ರೀಯರು ಮುಖ್ಯ ದೇವಾಲಯದ ಹತ್ತಿರ ಹೋಗಬಾರದು; ಮಾದೇಶ್ವರನಿಗೆ ಎಳ್ಳೆಣ್ಣೆಯ ಅಭಿಷೇಕ ಅತ್ಯಂತ ಸಂತೋಷವನ್ನು ಕೊಡುತ್ತದೆ; ಇತ್ಯಾದಿ.

ಇಂದು ನಾವು ಮಾದೇಶ್ವರದ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಆಚರಣೆಗಳು ಮತ್ತು ಭಕ್ತರು ಪಾಲಿಸುವ ವಿಧಿ-ನಿಷೇಧಗಳು ಇವುಗಳನ್ನು ಗಮನಿಸಿದರೆ ಇವೆಲ್ಲವನ್ನೂ ಮಾದೇಶ್ವರನ ಭಕ್ತರು ಅನುಸರಿಸುವುದು ಕಂಡುಬರುತ್ತದೆ. ಅವರು (ಹಾಲರಬಿ, ಬುತ್ತಿ, ಊಟ, ಎಳ್ಳು, ಮಜ್ಜನ, ಇತ್ಯಾದಿ) ಆಚರಣೆಗಳಿಗೆ ಕೊಡುವ ಕಾರಣ ಅವೆಲ್ಲವೂ ಮಾದೇಶ್ವರೇ ವಿಧಿಸಿದ್ದಾನೆಂದು ಕಾವ್ಯವು ದಾಖಲಿಸಿದೆ ಎಂದು. ಇದರಿಂದ ನಮಗೆ ಗೊತ್ತಾಗುವುದೇನೆಂದರೆ, ಮೌಖಿಕ ಮಹಾಕಾವ್ಯಗಳ ಒಂದು ಪ್ರಮುಖ ನಿಯೋಗವೆಂದರೆ ಒಂದು ಸಮುದಾಯದಲ್ಲಿ ಪ್ರಚಲಿತವಿರುವ ಆಚರಣೆಗಳು, ನಂಬಿಕೆಗಳು, ವಿಧಿ-ನಿಷೇಧಗಳು ಇವುಗಳನ್ನು ವೈಭವೀಕರಿಸುವುದು ಮತ್ತು ಅಧಿಕೃತಗೊಳಿಸುವುದು.

ಅದೇ ನೆಲೆಯಲ್ಲಿ, ನಾವು ಕಾವ್ಯದಲ್ಲಿ ಬರುವ ಮಾದೇಶ್ವರ ಅಲೆದಾಟದ ವಿವರಗಳನ್ನೂ ನೋಡಬೇಕೆಂದು ತೋರುತ್ತದೆ. ಕಾವ್ಯವು ಮಾದೇಶ್ವರನು ಶ್ರೀಶೈಲದಿಂದ ಸುತ್ತೂರು ಮಠ, ಅಲ್ಲಿಂದ ಕುಂತೂರು ಮಠ, ಅಲ್ಲಿಂದ ಕೊಳ್ಳೆಗಾಲ, ಮಧುವನಳ್ಳಿ, ಸಿಂಗನಲ್ಲೂರು, ಹುಣಸೆಕಟ್ಟೆ ಗುಡ್ಡ, ಹನೂರು, ಸಲಾಮ್‌ಬೋರೆ, ಅಲ್ಲಿಂದ ನಡುಮಲೆಗೆ ಹೋಗಿ ನೆಲಸುವುದು – ಈ ಬಗೆಯ ಮಾದೇಶ್ವರನ ಪ್ರಯಾಣದ ದೀರ್ಘ ವಿವರಗಳನ್ನು ಕೊಡುತ್ತದೆ ಮತ್ತು ಈ ವಿವರಗಳು ಭೌಗೋಳಿಕವಾಗಿ ಇಂದಿಗೂ ನಿಜವಾಗಿವೆ. ಹಾಗೆಯೇ, ತನ್ನ ಪ್ರಯಾಣದಲ್ಲಿ ಮತ್ತು ಅನಂತರ ಮಾದೇಶ್ವರನು ತನ್ನ ಭಕ್ತರೆಂದು ಒಪ್ಪಿಕೊಳ್ಳುವ ಒಂದಂಕಣದ ಕಲ್ಲಿನ ದೇವಾಲಯವನ್ನು ಕಟ್ಟಿಸಿಕೊಟ್ಟ ಜುಂಜೇಗೌಡ, ತನ್ನ ಮಕ್ಕಳನ್ನು ಮಾತಿನಂತೆ ಮಾದೇಶ್ವರನಿಗೆ ಕೊಟ್ಟ (ಎಂದರೆ ಗುಡ್ಡರಾದ) ಸಂಕಮ್ಮನ ಕಾರಯ್ಯ-ಬಿಲ್ಲಯ್ಯ, ಸರಗೂರಯ್ಯ ಮತ್ತು ರಾಮವ್ವೆ ಮುಮತಾದವರು ಕಾವ್ಯದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಇದರರ್ಥ, ಕಾವ್ಯವು ತನ್ನನ್ನು ಸೃಷ್ಟಿಸಿದ ಜನಾಂಗದ ಸಾಮುದಾಯಿಕ ನೆನಪುಗಳನ್ನು, ಎಂದರೆ ಸಮುದಾಯದ ಒಳಿತಿಗಾಗಿ ದುಡಿದ ಹಿಡಿಯರನ್ನು ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು, ಪ್ರಾಚೀನ ಅನುಭವಗಳನ್ನು ಹಾಗೂ ಆಚರಣೆಗಳನ್ನು, ಮುಂದೆ ಬರುವ ಪೀಳಿಗೆಗಳು ಮರೆಯದಂತೆ ಅವನ್ನು ಜೀವಂತವಾಗಿಡುತ್ತದೆ. ಈ ಬಗೆಯಲ್ಲಿ ಗತವನ್ನು ರಕ್ಷಿಸುವ ಹಾಗೂ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುವ ಸಾಂಸ್ಕೃತಿಕವಾಗಿ ಬಹು ಮುಖ್ಯವಾಗುವ ಕಾರ್ಯವನ್ನು ಮನೆ ಮಾದೇಶ್ವರದಂತಹ ಮೌಖಿಕ ಮಹಾಕಾವ್ಯಗಳು ನೆರವೇರಿಸುತ್ತವೆ.

‘ಗತ’ವನ್ನು ಜೀವಂತವಾಗಿಡುವುದೆಂದರೆ, ಗತಕಾಲದಲ್ಲಿ ಒಂದು ವಿಶಿಷ್ಟ ಸಮುದಾಯದ ಆಹಾರ, ವೃತ್ತಿಗಳು, ಜೀವನ ಕ್ರಮ, ಇತ್ಯಾದಿಗಳನ್ನು ದಾಖಲಿಸುವುದು. ಈ ಕಾರ್ಯವನ್ನು ಮಲೆ ಮಾದೇಶ್ವರ ಅತ್ಯಂತ ನಿಖರವಾಗಿ ಹಾಗೂ ವಿಸ್ತೃತವಾಗಿ ನಿರ್ವಹಿಸುತ್ತದೆ. ನಿದರ್ಶನಾರ್ಥವಾಗಿ “ಸಂಕಮ್ಮನ ಸಾಲನ್ನು” ನೋಡಬಹುದು. ನೀಲಯ್ಯನು ಸಂಕಮ್ಮನನ್ನು ಅಕಸ್ಮಾತ್ತಾಗಿ ನೋಡಿ, ಅವಳನ್ನು ಇಷ್ಟಪಟ್ಟು, ಅವಳಿಗೆ ಮದುವೆಯಾಗಿಲ್ಲ ವೆಂದು ತಿಳಿದೊಡನೆ “ಪಂಚಮುಖದ ಕದ್ದೆ ಬಿಟ್ಟು” ನೋಡ್ತಾನೆ; ಅನಂತರ ಹೆಸರುಬಲ, ಗುರುಬಲ, ಕೂಟ-ಗಣ ಇವೆಲ್ಲವನ್ನೂ ಜೋಯಿಸರು ಪರೀಕ್ಷಿಸುತ್ತಾರೆ. ಎಲ್ಲವೂ ಸರಿಯಾಗಿದೆಯೆಂದು ಕಂಡ ಮೇಲೆ, ಗಂಡು ಹೆಣ್ಣಿನ ಕಡೆಯವರು ಸೇರಿ “ಪಂಚ ವೀಳ್ಯ” ದ ಶಾಸ್ತ್ರ ಮಾಡುತ್ತಾರೆ. ಮದುವೆಯ ದಿವಸ,

“ಅಯ್ಯಾ ಕೆಲ್ಸಿ ಕುಳ್ಳಯ್ಯ ಬಂದವರೆ | ತೊಂಡಾಲು ಬಾಸಿಂಗ ತಂದವರೆ
ವಾಜರ ಮಲ್ಲಯ್ಯ ಬಂದವರೆ | ಮಾಂಗಲ್ಯ ಸೂತ್ರ ತಂದವರೆ
ಕಾಸಿ ಪುರೋಯಿತ್ರು ಬಂದವರೆ | ಸಂಬಂಧ ಮಾಲೆ ತಂದವರೆ
ಧರ್ಮ ದೇವತೆ ಬಂದವರೆ | ಧಾರೆಗಾದರೆ ನಿಂತವರೆ
……”

ಈ ರೀತಿ ಸೋಲಿಗ ಜನಾಂಗದ ಮದುವೆಯಲ್ಲಾಗುವ (ಅಥವಾ ಆಗುತ್ತಿದ್ದ)  ಪ್ರತಿಯೊಂದು ಸಣ್ಣಪುಟ್ಟ ಕಾರ್ಯಗಳನ್ನೂ ಈ ಕಾವ್ಯ ದಾಖಲಿಸುತ್ತದೆ. ಹಾಗೆಯೇ ಇದೇ ಕಾವ್ಯದಲ್ಲಿ ಬರುವ ಮತ್ತೊಂದು ನಿದರ್ಶನವವನ್ನು ನೋಡಬಹುದು. ಸೋಲಿಗ ನೀಲಯ್ಯನು ತನ್ನ ಕುಲಸ್ಥರೊಡನೆ ಬೇಟೆಗೆ ಹೋಗುತ್ತಾನೆ. ಅಂದು, ಸೋಲಿಗರ ‘ಬೇಟೆ’ ಎಂದರೇನು ಎಂಬುದು ಈ ಸಾಲುಗಳು ಸ್ಪಷ್ಟಪಡಿಸುತ್ತವೆ

“ಅವರು ಹೆಜ್ಜೇನು ಮನೆಗೆ ಹೋಗವರೆ | ಹೆಜ್ಜೇನು ಬ್ಯಾಟೆ ಮಾಡವರೆ
ಕಿರುಜೇನು ಮಲೆಗೆ ಹೋಗವರೆ | ಕಿರುಜೇನು ಬ್ಯಾಟೆ ಮಾಡವರ
ಕಾಡು ಬಾಳೆ ಕಿತ್ತವರೆ | ಕಟ್ಟೆಯ ನೀರ ಮೊಗದವರೆ
ಬಿದರಕ್ಕಿ ಕೂಡ್ಸವರೆ | ಬೆಲ್ಲೂ ಗೆಣ್ಸ ಕಿತ್ತವರೆ
ಅಲಸುಂದೆ ಹಣ್ಣು ಆದವರೆ |ಮಾಗಳಿ ಬೇರ ಕಿತ್ತವರೆ
….”

ಬದುಕಿನ ವಿವರಗಳನ್ನು ಈ ಬಗೆಯಲ್ಲಿ ಖಚಿತವಾಗಿ ದಾಖಲಿಸುವುದು ಒಂದು ಸಮುದಾಯದ ಇತಿಹಾಸದ ದೃಷ್ಟಿಯಿಂದ ತುಂಬಾ ಮಹತ್ತರವಾದುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ಜನಾಂಗವು ಸೃಷ್ಟಿಸುವ ಮತ್ತು ಜೀವಂತವಾಗಿಡುವ ಮೌಖಿಕ ಮಹಾಕಾವ್ಯವು ಆ ಜನಾಂಗದ ಪೂರ್ವಜರು ಮತ್ತು ಅವರ ಸಾಧನೆ ಅನುಭವಗಳು, ಆ ಜನಾಂಗದ ವೃತ್ತಿ ಹಾಗೂ ಜೀವನಕ್ರಮ, ಆಹಾರ ವಿಹಾರ ಇವೆಲ್ಲವನ್ನೂ ದಾಖಲಿಸುವುದರ ಮೂಲಕ ಅವುಗಳಿಗೆ ಅಧಿಕೃತತೆಯನ್ನು ಕೊಡುವುದಷ್ಟೇ ಅಲ್ಲದೆ ಅವುಗಳನ್ನು ಜೀವಂತವಾಗಿ ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುತ್ತದೆ. ಪರಿಣಾಮತಃ, ಕಳೆದೆರಡು ದಶಕಗಳಿಂದ ಸಂಶೋಧನೆಗಳಲ್ಲಿ ಜನಪ್ರಿಯವಾಗುತ್ತಿರುವ ‘ಜಾನಾಂಗಿಕ ಅಧ್ಯಯನಕ್ಕೆ ಮಲೆ ಮಾದೇಶ್ವರ ಮುಂತಾದ ಮೌಖಿಕ ಮಹಾಕಾವ್ಯಗಳು ಬಹು ಅಮೂಲ್ಯ ಆಕರಗಳಾಗುತ್ತವೆ.

ಇ. ಸ್ತ್ರೀ ಪುರುಷ ಸಂಬಂಧಗಳು: ಮೌಖಿಕ ಮಹಾಕಾವ್ಯಗಳಲ್ಲಿ ಚಿತ್ರಿಸಲ್ಪಡುವ ಸ್ತ್ರೀ ಅನೇಕ ಬಗೆಯ ಸ್ವವಿರೋಧಗಳಿಂದ ಹಾಗೂ ದ್ವಂದ್ವಗಳಿಂದ ಕೂಡಿದ್ದಾಳೆ. ಭಾರತೀಯ ಶಿಷ್ಟ ಸಾಹಿತ್ಯದಲ್ಲಾದರೋ ಸ್ತ್ರೀ-ಪುರುಷ ಸಂಬಂಧವನ್ನು ಕುರಿತ ವೈಚಾರಿಕತೆ ಸಂಪೂರ್ಣವಾಗಿ ಪುರುಷ ಕೇಂದ್ರಿತವಾಗಿದ್ದು, ಆ ಸಾಹಿತ್ಯ ಸ್ತ್ರೀಯ ತ್ಯಾಗ-ಸಂಯಮ-ಆತ್ಮಸಮರ್ಪಣೆ ಇವುಗಳನ್ನೇ ವೈಭವೀಕರಿಸಿ, ಆ ಮೂಲಕ ಸ್ತ್ರೀಯ ಸುತ್ತಾ ‘ಪಾತಿವ್ರತ್ಯ’ವೆಂಬ ಪರಿಕಲ್ಪನೆಯ ಜಾಲವನ್ನೇ ನೇಯುತ್ತದೆ. ಇಂತಹ ವೈಚಾರಿಕತೆಯ ಮೂಲ ಮಾದರಿ ರಾಮಾಯಣದ ಸೀತೆ; ಮತ್ತು ಅವಳ ಜೊತೆಗಿರುವವವರು ಮಂಡೋದರಿ, ದ್ರೌಪದಿ, ಶಕುಂತಲೆ, ಇತ್ಯಾದಿ. ಈ ಮೂಲ ಮಾದರಿಯ ಹೋಲಿಕೆಯಲ್ಲಿ ಜನಪದ ವಾಙ್ಮಯದಲ್ಲಿ ಸ್ತ್ರೀಗೆ ಸ್ವಂತ ಧ್ವನಿಯಿದೆ, ಆತ್ಮಗೌರವವಿದೆ ಒಂದು ಘಟ್ಟದವರೆಗೆ. ಅನಂತರ ಅವಳೂ ಈ ‘ಪಾತಿವ್ರತ್ಯದ’ ಜಾಲದಲ್ಲಿಯೇ ತನ್ನನ್ನು ಬಂಧಿಸಿಕೊಳ್ಳುತ್ತಾಳೆ.

ಮಲೆ ಮಾದೇಶ್ವರ ಕಾವ್ಯದಲ್ಲಿ ನಾವು ನಾಲ್ಕು ಸ್ತ್ರೀಯರ ಪಾತ್ರಗಳನ್ನು ನೋಡುತ್ತೇವೆ: ಮಲ್ಲಾಜಮ್ಮ, ಸಂಕಮ್ಮ, ಬೇವಿನಟ್ಟಿ ಕಾಳಮ್ಮ ಮತ್ತು ರಾಮವ್ವೆ. ಮೊದಲಿಗೆ ಜುಂಜೇಗೌಡನ ಪತ್ನಿಯಾದ ಮಲ್ಲಾಜಮ್ಮ. ಕಾವ್ಯ ಅವಳನ್ನು ಹೀಗೆ ವರ್ಣಿಸುತ್ತದೆ: “ಮಲ್ಲಾಜಮ್ಮ ತನ್ನ ಪದ್ಧತಿಯಂತೆ / ಯಜಮಾನ್ರಿಗೆ ಕೈಕಾಲಿಗೆ ನೀರು ಕೊಟ್ಟು / ಕಾಲಿಗೆ ನಮಸ್ಕಾರ ಮಾಡ್ದಳು ಪತಿವ್ರತಾ ಧರ್ಮ”. ಜುಂಜೇಗೌಡ ಅವಳ ‘ಯಜಮಾನ’ ಮತ್ತು ಅವನಿಗೆ ಎಂದೂ ಎದುರು ನುಡಿಯದ ಸಾಧ್ವಿ ಶಿರೋಮಣಿ ಮಲ್ಲಾಜಮ್ಮ. ಬೇವಿನಟ್ಟಿ ಕಾಳಮ್ಮನಾದರೋ ಸಂಪೂರ್ಣವಾಗಿ ಸ್ತ್ರೀಯ ಜಿಪುಣತನ ಮತ್ತು ಹಠಮಾರಿತನಗಳ ನಕಾರಾತ್ಮಕ ಮಾದರಿ. ಪ್ರಾರಂಭದಲ್ಲಿ ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುತ್ತಿದ್ದ ಕಾಳಮ್ಮ ಮಾದೇಶ್ವರನ ಅನುಗ್ರಹದಿಂದ ಶ್ರೀಮಂತಳಾಗಿ, “ಗಂಧದ ತೊಟ್ಟಿ ಗಾರೆತೊಟ್ಟಿ , ಚಿನ್ನದ ತೊಟ್ಟಿ, ರನ್ನದ ತೊಟ್ಟಿ” ಕಟ್ಟಿಸಿಕೊಂಡು ಮಕ್ಕಳು-ಮೊಮ್ಮಕ್ಕಳೊಡನೆ ಸುಖವಾಗಿ ಇರುವಾಗ ‘ನಿನಗೆ ಒಕ್ಕಲಾಗುತ್ತೇನೆ; ಬೆಳೆದ ಬೆಳೆಯಲ್ಲಿ ನಿನಗೆ ಸಮಪಾಲು ಕೊಡುತ್ತೇನೆ’ ಎಂದು ಮಾದೇಶ್ವರನಿಗೆ ತಾನು ಕೊಟ್ಟಿದ್ದ ವಚನವನ್ನು ಮರೆಯುತ್ತಾಳೆ. ಅವಳಿತ್ತ ವಚನವನ್ನು ನೆನಪಿಸಿ, ಅವಳಿಂದ ಎಣ್ಣಿನ ಭಿಕ್ಷೆಯನ್ನು ಪಡೆಯಲು ಮಾದೇಶ್ವರ ಅವಳ ಬಳಿ ಬಂದಾಗ ಒಂದು ಕಾಳು ಬಿಕ್ಷೆಯನ್ನೂ ನೀಡದೆ ಅವನನ್ನು ಅಟ್ಟಾಡಿಸಿ ಹೊಡೆದೋಡಿಸಲು ಕಾಳಮ್ಮ ಪ್ರಯತ್ನಿಸುತ್ತಾಳೆ. ತನ್ನ ಗಂಡ, ಮಕ್ಕಳು ಮೊಮ್ಮಕ್ಕಳು, ಆಸ್ತಿ, ಪಾಸ್ತಿ, ಎಲ್ಲವನ್ನೂ ಕಳೆದುಕೊಂಡರೂ ಅವಳು ಮಾದೇಶ್ವರನಿಗೆ ಭಿಕ್ಷೆ ಕೊಡಲು, ಎಂದರೆ ಅವನ ಒಕ್ಕಲಾಗಲು ಒಪ್ಪುವುದಿಲ್ಲ. “ಒಂದು ಕಾಳು ಕೊಡುವಂತೆ ಮಗಳಲ್ಲ ಜಂಗಮಯ್ಯ ನನ್ನ ಕೊಟಾರ ಬಿಟ್ಟು ಹೋಗು ಅಂತವಳೆ ಕಾಳಮ್ಮ”. ಹೀಗೆ ತನ್ನ ಹಠದಿಂದಲೇ ತನ್ನವರೆಲ್ಲರನ್ನೂ ತನ್ನದೆಲ್ಲವನ್ನೂ ಕಳೆದುಕೊಂಡು ಕೊನೆಗೆ ಮಾದೇಶ್ವರನ ಶಾಪದಿಂದ ಉರಿದು ಭಸ್ಮವಾಗುತ್ತಾಳೆ. ಮೂಗಯ್ಯನ ಹೆಂಡತಿ ರಾಮವ್ವ “ಸತ್ಯವಂತೆ, ಭಾಗ್ಯವಂತೆ, ಶರಣೆ”; ತನ್ನ ಪೆದ್ದ ಗಂಡನೊಡನೆ ಯಾವ ಪರಿಸ್ಥಿತಿಯಲ್ಲಿಯೂ ಕಂಗೆಡದೆ ಸಂಸಾರವನ್ನು ನಡೆಸಿಕೊಂಡು ಹೋಗುವ ಸಾಧ್ವಿ. “ಕೊತ್ತೇಗಾಲದ ಹೆಣ್ಣಾದ ಅವಳು” ತನ್ನ ಗಂಡನಿಗೆ (ಮಲ್ಲಾಜಮ್ಮನಂತೆ) ‘ಕಾಂತಾಸಮ್ಮಿತಿ’ಯ ಧಾಟಿಯಲ್ಲಿ ಬುದ್ಧಿವಾದ ಹೇಳುತ್ತಾ, ತಾನು ಹೇಳಿದ್ದಕ್ಕೆಲ್ಲಾ ಮಾದೇಶ್ವರನು ಒಪ್ಪಿದ ನಂತರ ಅವನ ಒಕ್ಕಲಾಗುವುದಕ್ಕೆ ಸಮ್ಮತಿಸುತ್ತಾಳೆ.

ಈ ಕಾವ್ಯದ ಅತಿ ಮುಖ್ಯ ಪಾತ್ರವಾದ ಸಂಕಮ್ಮ ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀಯು ಅನುಭವಿಸುವ ಎಲ್ಲಾ ಬಗೆಯ ದ್ವಂದ್ವಗಳನ್ನೂ ನಿದರ್ಶಿಸುತ್ತಾಳೆ. ಒಂದು ಕಡೆ ಬಂಜೆಯೆಂಬ ತನ್ನ ಗಂಡನ ಮನೆಯವರ ಹೀಯಾಳಿಕೆ, ಇನ್ನೊಂದೆಡೆ ತನ್ನ ಶೀಲದ ಬಗ್ಗೆ ಗಂಡನ ಸಂದೇಹ. ಇಷ್ಟಾದರೂ ಒಂದು ಮಟ್ಟದವರೆಗೆ ತನ್ನ ಆತ್ಮಗೌರವವನ್ನು ಸಂಕಮ್ಮ ಕಾಪಾಡಿಕೊಳ್ಳುತ್ತಾಳೆ; ಅದಕ್ಕಾಗಿ ಗಂಡನು ಕೊಡುವ ಎಲ್ಲಾ ಬಗೆಯ ದಾರುಣ ಹಿಂಸೆಯನ್ನೂ ಸಹಿಸುತ್ತಾಳೆ. ಅವಳು ತನ್ನ ಶೀಲವನ್ನು ಕಾಪಾಡಿಕೊಳ್ಳುವ ಬಗ್ಗೆ, ತನಗೆ ಗಂಡನಿಂದ ಎಷ್ಟೇ ಹಿಂಸೆಯಾದರೂ ‘ಬಲಗೈ ಭಾಷೆ’ ಕೊಡುವುದಕ್ಕೆ ಒಪ್ಪುವುದಿಲ್ಲ; ಅದಕ್ಕೆ ಪ್ರತಿಯಾಗಿ “ನಾನು ಹಾದೀಲಿ ನಿಂತಿದ್ದು ಬಂದವಳ / ಹಾಗೇ ನಾನು ಬಂದವಳ / ಒಬ್ಬಾಳೆ ಹುಟ್ಟಿ ಬೆಳೆದವಳ ತಾಯಿ ತಂದೆ ಉಳ್ಳವಳು….” ಎಂದು ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತಾಳೆ; “ನಾನು ಪತಿಗೆ ಭಾಷೆ ಕೊಟ್ಟ ಮೇಲೆ ನನ್ನ ಪತಿವ್ರತಾ ಧರ್ಮ ಏನಾಗುತ್ತದೆ ಯಜಮಾನ ನಾನು ಖಂಡಿತವಾಗ್ಲೂ ಭಾಷೆ ಕೊಡೋದಿಲ್ಲ” ಎಂದು ತನ್ನ ಆತ್ಮಸ್ಥೈರ್ಯವನ್ನು ಪ್ರಕಟಿಸುತ್ತಾಳೆ; ಕೊನೆಗೆ ತನ್ನ ಗಂಡನ “ಕೊಡಬಾರದ ಕೊಲೆ ಮಾಡಬಾರದ ಶಿಕ್ಷೆಯಿಂದ” “ಕೋಳಿ ಹಾಕ್ಕೂಗುತ್ತಾ ನಾಯಿಯಾಗಿ ನರಳ್ತಾ ಇರುವಾಗ ಮಾದೇಶ್ವರನಿಗೆ ಮನಸ್ಸಿನಲ್ಲೇ” ನನ್ನ ಹೆಣ್ಣು ಪ್ರಾಣಿಯ ಗೋಳು ನಿಮಗೆ ಎಲ್ಲರುವಾಯ್ತು ಮಾದೇವ ಎಂದು ಮೊರೆಯಿಡುವಾಗ ಪುರುಷನಿರ್ಮಿತ ವ್ಯವಸ್ಥೆಯಲ್ಲಿ ಬೆಂದು ನರಳುವ ಇಡೀ ಸ್ತ್ರೀ ಜಾತಿಯನ್ನು ಪ್ರತಿನಿಧಿಸುತ್ತಾಳೆ.

ಇಷ್ಟಾದರೂ, ತನ್ನ ಗಂಡ ಅವಳಿಗೆ ‘ಯಜಮಾನನೆ’; ಅವನ ಬದುಕೇ ಅವಳ ಬದುಕು. ಆದ್ದರಿಂದ, ಅವಳು ಗಂಡನ ಅಪ್ಪಣೆಯಂತೆ ಒಂದಕ್ಕಿಂತ ಒಂದು ಕ್ರೂರವಾದ ದಿವ್ಯಗಳನ್ನು ಮಾಡುತ್ತಿರುವಾಗ ಒಂದು ಸಂದರ್ಭದಲ್ಲಿ ಮಾದೇಶ್ವರನು ಸಂಕಮ್ಮನ ಮೇಲಿನ ಕರುಣೆಯಿಂದ ನೀಲಯ್ಯನು ತನ್ನ ಜೀವನವನ್ನೇ ಕಳೆದುಕೊಳ್ಳುವಂತೆ ಮಾಡುತ್ತಾನೆ. ಕೂಡಲೇ “ಮಾದಪ್ಪಾ ನನ್ನಪ್ಪನ ಮನೆದೇವ್ರೆ / ನನ್ನ ಮುತ್ತೈದೆ ಭಾಗ್ಯ ಹಾಳಾಗಿಹೋಯ್ತು” ಎಂದು ಗೋಳಾಡುತ್ತಾಳೆ. ಸಂಕಮ್ಮನ ಪಾತ್ರದಲ್ಲಿ ಗಾಯಕರು ಸೀತೆಯ ಅಸಹಾಯಕತೆ ಮತ್ತು ದ್ರೌಪದಿಯ ಕೆಚ್ಚು ಎರಡನ್ನೂ ಒಂದುಗೂಡಿಸಿದ್ದಾರೆಂದು ಕಾಣುತ್ತದೆ.

ಈ. ಕಾವ್ಯ ಸಂವಿಧಾನ: ಮೊದಲೇ ಹೇಳಿದಂತೆ ಈ ಕಾವ್ಯದಲ್ಲಿ ಸ್ವತಂತ್ರವಾಗಿಯೇ ನಿಲ್ಲಬಹುದಾದ (‘ಇಕ್ಕೇರಿ ದೇವಮ್ಮ’ನ ಸಾಲನ್ನೂ ಸೇರಿಸಿ) ಏಳು ಕಥೆಗಳಿವೆ; ಮತ್ತು ಈ ಎಲ್ಲಾ ಕಥೆಗಳಲ್ಲಿಯೂ ಮಾದೇಶ್ವರನು ಬರುವುದರಿಂದ ಅವೆಲ್ಲವುಗಳು ಒಂದು ಕಾವ್ಯದ ಘಟಕಗಳಂತೆ ಕಾಣುತ್ತವೆ. ಆದರೆ, ಸಮಸ್ಯೆ ಬರುವುದು ಈ ಏಳು ಕಥೆಗಳಿಗೂ ಸಂಬಂಧವೇ ಇಲ್ಲದಂತಹ ಉಪಕಥೆಗಳು ಕಾವ್ಯವನ್ನು ಪ್ರವೇಶಿಸಿದಾಗ-ಉದಾಹರಣೆಗೆ “ಸಂಕಮ್ಮನ ಕಥೆ”ಯಲ್ಲಿ ಬರುವ ಹುಲಿಗಳ ಕಥೆ ಮತ್ತು ‘ಮುಪ್ಪಿನ ಕಾಲದ ಮುದ್ಕಮ್ಮನ ಕಥೆ’. ಈ ಮುದುಕಮ್ಮನ ಕಥೆಯಲ್ಲಿ ತಾನು ಮಾಡಿದ ಹರಕೆಯನ್ನು ತೀರಿಸುವುದಕ್ಕಾಗಿ ಮುಪ್ಪಿನ ಮುದುಕಿಯೊಬ್ಬಳು ಏಗೆ ಕಷ್ಟಪಟ್ಟು ಜಾತ್ರೆಗೆ ಹೋಗುತ್ತಾಳೆ, ಮಾದೇಶ್ವರನ ಕೃಪೆ ಅವಳ ಮೇಲಿರುವುದರಿಂದ ಹೇಗೆ ಆ ವಯಸ್ಸಿನಲ್ಲಿಯೂ “ಅಮ್ಮ / ಕೊಳ್ಳೇಗಾಲದ ಬೀದಿಯೊಳಗೆ ಕುಣ್ಕಂದ್ ಕುಣ್ಕಂದ್ ಹೋಯ್ತಾವಳೆ / ಅಂದವಾದ ಕೊಳದಲ್ಲಿ ಮಾದೇವ ಚಂದದ ಜೋತಿ ಬೆಳಕಲ್ಲಿ”. ಇಂತಹ ಉಪಕಥೆಗಳು ಮತ್ತು ಹುಲಿಗಳ ವರ್ಣನೆಯಂತಹ ಹಾಸ್ಯಪೂರಿತ ಪ್ರಸಂಗಗಳು ಓದುಗರಿಗೆ ಶಿಥಿಲ ಸಂವಿಧಾನದ ಭ್ರಮೆಯನ್ನುಂಟು ಮಾಡಿದರೂ, ಇವುಗಳು ಮೌಖಿಕ ಸಂವಹನೆಯ ಅನಿವಾರ್ಯ ಘಟನೆಗಳು. ಗಾಯಕರೇ ಒಂದು ಸಂದರ್ಭದಲ್ಲಿ ವಿವರಿಸಿದಂತೆ ರಾತ್ರಿಯಲ್ಲಿ ನಡೆಯುವ ಒಂದು ದೀರ್ಘ ಪ್ರದರ್ಶನದ ಅವಧಿಯಲ್ಲಿ ಕೇಳುಗರನ್ನು ಎಚ್ಚರಿಸಲು ಮತ್ತು ಅವರನ್ನು ರಂಜಿಸಲು ಅಲ್ಲಲ್ಲಿ ಆಸ್ಯ ಪ್ರಧಾನವಾದ ಕಥೆ-ಉಪಕಥೆಗಳ ಉಪಯೋಗ ಅನಿವಾರ್ಯವಾಗುತ್ತದೆ ಎಂದರೆ, ‘ಸಂವಿಧಾನ’ದ ಪರಿಕಲ್ಪನೆಯನ್ನು ಲಿಖಿತ ಹಾಗೂ ಮೌಖಿಕ ಕಥನಗಳ ಸಂದರ್ಭದಲ್ಲಿ ಭಿನ್ನ ಭಿನ್ನವಾಗಿಯೇ ಅರ್ಥೈಸಬೇಕಾಗುತ್ತದೆ.

ಅನೇಕ ಪದರುಗಳುಳ್ಳ, ವ್ಯಾಖ್ಯಾನಿಸಿದಷ್ಟೂ ಹೊಸ ಆಯಾಮಗಳನ್ನು ನಮ್ಮ ಮುಂದೆ ದರ್ಶಿಸುವ ಮಲೆ ಮಾದೇಶ್ವರ ಒಂದು ಅದ್ಭುತ ಹಾಗೂ ಅತ್ಯಂತ ಶ್ರೀಮಂತ ವಾಙ್ಮಯ ಪ್ರಕಾರ.

ಆಕರ ಗ್ರಂಥಗಳು:

೧. ಕೇಶವನ್ ಪ್ರಸಾದ್ ಕೆ. (ಸಂ) ಮಲೆ ಮಾದೇಶ್ವರ, ಪ್ರಸಾರಾಂಗ, ಕ.ವಿ.ವಿ. ಹಂಪಿ, ೧೯೯೭.

೨. ರಾಜಶೇಖರ್ ಪಿ.ಕೆ. ಮಲೆಯ ಮಾದೇಶ್ವರ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೭೩

೩. ಬೋರಲಿಂಗಯ್ಯ ಹಿ.ಚಿ. ಕಾಡು ಕಾಂಕ್ರೀಟ್‌ಮತ್ತು ಜನಪದ, ಅಕ್ಷರ ಪ್ರಕಾಶನ, ಸಾಗರ, ೧೯೯೫

೪. ವಿಜಯ್ ಟಿ.ಪಿ., ಪಳಮೆ, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ

೫. ಶಿವಮೂರ್ತಿಶಾಸ್ತ್ರಿ ಬಿ., ಶ್ರೀ ಮಾದೇಶ್ವರ ಚರಿತ್ರೆ, ಮಲೆ ಮಾದೇಶ್ವರ ಸ್ವಾಮಿ ದೇವಾಲಯ, ೧೯೮೨

೬. ಕನ್ನಡ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾಲಯ, ೧೯೭೯

೭. ಕನ್ನಡ ಜನಪದ ವಿಶ್ವಕೋಶ, ಕನ್ನಡ ಪರಿಷತ್ತು, ೧೯೮೫

೮. ವೆಂಕಟೇಶ್‌ ಇಂದ್ವಾಡಿ (ಸಂ) ಮಂಟೇಸ್ವಾಮಿ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ, ಪ್ರಸಾರಾಂಗ, ಕ.ವಿ.ವಿ. ಹಂಪಿ, ೨೦೦೪

೯. ವಸು, ಮೌಖಿಕ ಇತಿಹಾಸ, ಅಂಕಿತ ಪ್ರಕಾಶನ, ೨೦೦೫

೧೦. Felix J Onias, Heroic Epic and Saga, 1978

೧೧. Romila Thapar, “Perceining the Forest: Early India” cited in studies in History, 17 I.ns, sage publications, New Delhi, 2001

೧೨. Bernard S. Cohn, Cultural and Historical Geography.

೧೩. Karnataka State Gazetteer, Mysore Dist, Govt. of Kar. 1988

ಶ್ರೀ ತುಳಸೀರಾಂ, ವಕ್ತೃ ಅವರೊಡನೆ ನಡೆಸಿದ ಚರ್ಚೆ.