ಜನಪದ ಮಹಾಕಾವ್ಯ ಕಟ್ಟಿಕೊಡುವ ಚರಿತ್ರೆ

ಮಾದೇಶ್ವರ ಪಂಥ ಮೊದಲೋ, ಮಹಾಕಾವ್ಯದ ಉಗಮ ಮೊದಲೋ? ಪಂಥ ಮೊದಲು, ಕಾವ್ಯ ಅನಂತರ ಎಂಬುದು ಈ ಪ್ರಬಂಧದ ಗ್ರಹಿಕೆ.

ನಾವು ಅಕ್ಷರಸ್ಥ ಶಿಷ್ಟರು. ಕಲಿಕೆಯ ಶಿಸ್ತಿನಲ್ಲಿ ತರಬೇತುಗೊಂಡವರು. ಹಲವು ಬಗೆಯ ಶಾಸ್ತ್ರ ಶಿಸ್ತುಗಳನ್ನು ಪ್ರಶ್ನಾತೀತವೆಂದು ಭಾವಿಸಿ ಪೂರ್ವಗ್ರಹಿತರಾದವರು. ಕಾಲದೇಶಬದ್ಧವಾದ ವರ್ಗ, ವರ್ಣ, ಜಾತಿ ಹಿತಾಸಕ್ತಿಗಳ ಕಾಣದ ಕೈವಾಡ ನಮ್ಮ ಅನೇಕ ಪೂರ್ವಗ್ರಹಿಕೆಗಳಿಗೆ ಬಲ ನೀಡುತ್ತಿರುತ್ತದೆ. ಇನ್ನೊಂದೆಡೆ ಸಾಗರದಂತಿರುವ ಅನಕ್ಷರಸ್ಥರ ಜ್ಞಾನಕ್ಷೇತ್ರ. ಇಲ್ಲಿ ಪ್ರವೇಶಿಸಲು ಬೇಕಾದ ಪೂರ್ವತಯಾರಿ ನಮಗಿಲ್ಲ. ಎರಡು ಲೋಕಗಳಂತಿರುವ ಅನಕ್ಷರಸ್ಥ ಅಕ್ಷರಸ್ಥರ ನಡುವೆ ದ್ವಂದ್ವವಿರುವಾಗ ನಾವು ಮಾಡುವ ಚರ್ಚೆಗೆ ಯಾವ ಬೆಲೆ ಬಂದೀತು ಎಂಬ ಅನುಮಾನವಿದೆ.

ಅನಕ್ಷರಸ್ಥರ ಆಚರಣಾಬದ್ಧ ಜಂಗಮರೂಪಿ ಜ್ಞಾನ ಪ್ರಕ್ರಿಯೆಯನ್ನು ಸ್ಥಾವರ ರೂಪಿ ನಿರ್ಜೀವ ಲಿಖಿತ ಪರಂಪರೆಗೆ ಅಳವಡಿಸಲು ಯತ್ನಿಸುವ ನಮ್ಮ ವೈರುಧ್ಯವನ್ನೆ ನೋಡಿ. ಲಿಖಿತ ಶಿಷ್ಟ ಪರಂಪರೆಯ ಅಧ್ಯಯನದ ಮಾನದಂತ ಮತ್ತು ಪರಿಭಾಷೆಗಳ ಅರಕರಗಳನ್ನು ಜನಪದ ಅಧ್ಯನಕ್ಕೆ ಬಳಸಿದರೆ ಆಗಬಹುದಾದ ತಪ್ಪುಗಳಿಗೆ ಈವರೆಗೆ ಪ್ರಕಟವಾಗಿರುವ ಜನಪದ ಸಾಹಿತ್ಯ ಸಂಕಲನಗಳೆ ಸಾಕ್ಷಿ.

ಬೃಹತ್ ಪ್ರಮಾಣದ ಮಲೆಯ ಮಾದೇಶ್ವರ ಕಾವ್ಯದ ವಿವರವಾದ ಚರ್ಚೆಗೆ ಇಲ್ಲಿ ಆಸ್ಪದವಿಲ್ಲ. ಪವಾಡ ಪುರುಷ ಮಾದೇಶ್ವರನನ್ನು ಹೊಗಳುವ ಈ ಕಾವ್ಯದಲ್ಲಿ ಚರಿತ್ರೆಯನ್ನು ಹುಡುಕುವುದು ಕಷ್ಟ. ಕಾವ್ಯದ ತುಂಬ ಹಬ್ಬಿ ನಿಂತಿರುವ ತಾತ್ವಿಕತೆ, ಘಟನಾವಳಿಗಳು ಪರೋಕ್ಷವಾಗಿ ಕೆಲವು ಚಾರಿತ್ರಿಕ ಸೂಚನೆಗಳನ್ನು ನೀಡುತ್ತವೆ; ಕೆಲವು ಊಹೆಗಳಿಗೆ ಅವಕಾಶ ನೀಡುತ್ತವೆ. ಇಲ್ಲಿ ಕೆಲವು ನಿರ್ದಿಷ್ಟ ತಾತ್ವಿಕಾಂಶಗಳಿವೆ. ‘ಆದಿಶಕ್ತಿ ಮಾದಪ್ಪನ ಸಾಲಿ’ ನಲ್ಲಿ ಅನಾರ್ಯರ ತತ್ವಜ್ಞಾನವಾದ ಆದಿಯ ಶಾಕ್ತ, ಲೋಕಾಯತ, ತಾಂತ್ರಿಕ ಪಂಥದ ಪಳೆಯುಳಿಕೆಗಳಿವೆ. ಸೃಷ್ಟಿಯ ಉಗಮದ ಬಗ್ಗೆ ಹೇಳುವ ಈ ಪರಿಕಲ್ಪನೆಗಳು ವೈದಿಕ ತತ್ವಜ್ಞಾನಕ್ಕೆ ವಿರುದ್ಧವಾಗಿವೆ. ಶಾಕ್ತ ಪಂಥದ ಕೃಷಿಕ ಹೊಲೆಯ ಮಾದಿಗರು (ವಿವರಗಳಿಗೆ ನನ್ನ “ಜಾತ್ರೆಗಳು’’ ನೋಡಬಹುದು) ಮಾತೃದೇವತಾರಾಧಕರು. ಪಿತೃಪ್ರಧಾನ ದ್ರಾವಿಡ ಪಶುಪಾಲಕ ಸಂಸ್ಕೃತಿಯ ದಾಳಿಗೆ ತುತ್ತಾದರು. ಚರಿತ್ರೆಯ ಪ್ರಗತಿಶೀಲ ಶಕ್ತಿಗಳು ವೈದಿಕ ಪಶುಪಾಲಕರಾದಾಗ ದ್ರಾವಿಡ ಪಶುಪಾಲಕರು ಅವರ ಜತೆ ಶಾಮೀಲಾದರು. ಇಬ್ಬರು ಮೂಲದ ಬೇಸಾಯಗಾರರನ್ನು ಹತ್ತಿಕ್ಕಿದುದರ ಪರಿಣಾವೆ ಹೊಲೆಯ ಮಾದಿಗರು ಅಸ್ಪೃಶ್ಯರಾದುದು. ವರ್ಗ ವರ್ಣ ರಾಜ್ಯ ಖಾಸಗಿ ಆಸ್ತಿಗಳ ಸೃಷ್ಟಿಗೂ ಅಸ್ಪೃಶ್ಯತೆ ಉಗಮಕ್ಕೂ ಸಂಬಂಧವಿದೆ. ಪಿತೃಪ್ರಧಾನ ಸಂಸ್ಕೃತಿಯ ಪ್ರಬಾವಕ್ಕೆ ಒಳಗಾದ ಮಾದಿಗರು ಮಾದೇಶ್ವರನಂಥ ಪುರುಷದೈವಗಳ ಆರಾಧಕರಾದರು. ಇಷ್ಟಿದ್ದರೂ ಜನಪದ ಮಹಾಕಾವ್ಯ ಕೆಲವಾದರೂ ಆದಿನ ವಿಚಾರಗಳನ್ನು ಒಡಲೊಳಗಿಟ್ಟುಕೊಂಡಿದೆ.

ಹುತ್ತದ ನೆಲಸುಗಾರ ಹೊಲೆಯ ಮಾದಿಗರ ಸಂಸ್ಕೃತಿಯ ಮುಖ್ಯ ಆಶಯ. ಮಾದಯ್ಯ ಯಾವಾಗಲೂ ಹುತ್ತದಲ್ಲೇ ಇರುತ್ತಾರೆ. ಪ್ರತಿಯಾಗಿ ಪಶುಪಾಲಕ ಮೈಲಾರಲಿಂಗ ನೆಲೆಗೊಳ್ಳುವ ಕಡೆಯಲ್ಲೆಲ್ಲಾ ಹುತ್ತಗಳನ್ನು ನಾಶ ಮಾಡುತ್ತಾನೆ. ಹುತ್ತದ ಮೇಲೆ ಹಸು ಹಾಲು ಕರೆಯುವ ಆಶಯವು ಮಾದೇಶ್ವರ ಕಾವ್ಯದಲ್ಲಿ ಬರುತ್ತವೆ. ನಮ್ಮ ನಾಡಿನ ಅನೇಕ ಜನಪದ ದೈವಗಳು ಇದೇ ಬಗೆಯಲ್ಲಿ ಉದ್ಭವವಾಗಿವೆ. ಒಕ್ಕಲು ಮಾಡಿಕೊಳ್ಳುವಾಗ ಭಕ್ತರನ್ನು ಕಾಡಿಸುವ ಮಹದೇವ ಬದನವಾಳು, ಸುತ್ತೂರು,  ಕುಂತೂರು,  ಶಂಭುಲಿಂಗಸ್ವಾಮಿ ಮಠಗಳಲ್ಲಿ ತಾನೆ ಚಾಕರಿ ಮಾಡುತ್ತಾನೆ. ತನ್ನ ಶಕ್ತಿಯನ್ನು ಅರಿಯದ ಈ ಮಠಗಳಲ್ಲಿರಲು ಬೇಸರಪಟ್ಟು ಮಲೆಯ ಮಧ್ಯೆ ನೆಲೆಸುತ್ತಾನೆ.  ಬಸವಣ್ಣ ಮತ್ತು ವೀರಶೈವ ಮಠಗಳು ಮಾದೇಶ್ವರ ಶಕ್ತಿಯ ಮುಂದೆ ಸೋಲುತ್ತವೆ. ಈಗಾಗಲೇ ಕೆಲವು ವಿದ್ವಾಂಸರು ‘ಶ್ರವಣ ದೊರೆಯ ಸಾಲು ಮಾದೇಶ್ವರರು ಜೈನರನ್ನು ನಾಶ ಮಾಡಿದುದಕ್ಕೆ ಸಂಕೇತವೆಂದು ಗುರುತಿಸಿದ್ದಾರೆ. ಕರ್ನಾಟಕದ ಮೊದಲ ಅರಸು ಮನೆತನಗಳಲ್ಲಿ ಒಂದಾದ ಗಂಗರದು ದಕ್ಷಿಣ ಕರ್ನಾಟಕದಲ್ಲಿ ಖ್ಯಾತವಾಗಿತ್ತು. ಅವರು ಜೈನ ಮತಾವಲಂಬಿಗಳಾಗಿದ್ದರು. ಆಗ ಜೈನ ಮತದ ಪ್ರಾಬಲ್ಯ ಹೆಚ್ಚಿರಬೇಕು. ಆ ಕಾಲದಲ್ಲಿ ಮಾದೇಶ್ವರರು ಶೈವ ಮತವನ್ನು ಎತ್ತಿಹಿಡಿದು ಸಾಮಾನ್ಯರನ್ನು ತಮ್ಮ ಮತದತ್ತ ಆಕರ್ಷಿಸುವಲ್ಲಿ ಸಫಲರಾದರು. ಶಾಸನ ಮತ್ತು ಶಿಷ್ಟ ಸಾಹಿತ್ಯ ಈ ಮಾತಿಗೆ ಬೆಂಬಲವಾಗಿದೆ. ಬೇವಿನಹಟ್ಟಿ ಕಾಳಮ್ಮ,ಸೋಲಿಗರ ಸಂಕಮ್ಮನ ಸಾಲಿನ ಬಗ್ಗೆ ಹಿ.ಚಿ. ಬೋರಲಿಂಗಯ್ಯ ಅವರು ಸಮರ್ಪಕವಾಗಿ ಕೆಲವು ಊಹೆ ಮಾಡಿದ್ದಾರೆ. ಕಾಳಮ್ಮ ಮಾತೃ ಪ್ರಾಧಾನ್ಯತೆಯ ಪ್ರತೀಕವಾಗಿದ್ದಾಳೆ. ಆಕೆಯನ್ನು ಮಾದೇಶ್ವರರು ನಾಶ ಮಾಡಿದ್ದು “ಪುರುಷ ಪ್ರಧಾನ ಸಂಸ್ಕೃತಿ ಮಾತೃ ಪ್ರಧಾನ ಸಮಾಜದ ಮೇಲೆ ಸಾಧಿಸಿದ ಗೆಲುವಿನ ಸಂಕೇತ’’ ಎನ್ನುತ್ತಾರೆ. (“ಕಾಡು ಕಾಂಕ್ರೀಟ್ ಮತ್ತು ಜನಪದ’’ ಅಕ್ಷರ ಪ್ರಕಾಶನ ೧೯೯೫). ಕಾವ್ಯದ ಬೇರೆ ಬೇರೆ ಕವಟ್ಲುಗಳನ್ನು ಅನೇಕ ಬಗೆಯ ಸಾಂಸ್ಕೃತಿಕ ಚಾರಿತ್ರಿಕ ಪರೀಕ್ಷೆಗೆ ಒಡ್ಡಲು ಸಾಧ್ಯವಿದೆ.

ಲಿಖಿತ ಪರಂಪರೆಯಲ್ಲಿ ಮಲೆಯ ಮಾದೇಶ್ವರರು ಮತ್ತು ಪಂಥ

ಮಲೆಯ ಮಾದೇಶ್ವರರನ್ನು ಕುರಿತು ರಚಿತವಾದ ‘ಮಾದೇಶ್ವರ ಸಾಂಗತ್ಯ’ ಕ್ರಿ.ಶ. ೧೭೫೦ರ ಕೃತಿ. ಇದಕ್ಕಿಂತ ಮೊದಲಿನ ಕೃತಿಗಳಾವುವೂ ಇಲ್ಲ. ಮಾದೇಶ್ವರ ಬೆಟ್ಟಕ್ಕೆ ಸಮೀಪದ ಮಿಣ್ಯ ಗ್ರಾಮದ ಗುರುಸಿದ್ದ ಕವಿ ಇದರ ಕರ್ತೃ. ಡಾ.ಬಿ.ಎಸ್. ಸ್ವಾಮಿಯವರು ತಮ್ಮ ಮಹಾ ಪ್ರಬಂಧದಲ್ಲಿ ಈ ಕೃತಿಯ ವಿವರಗಳನ್ನು ಸಂಗ್ರಹಿಸಿದ್ದಾರೆ. ಮೂರು ಸಂಧಿಗಳ ೩೬೦ ಪದ್ಯಗಳ ಈ ಕಾವ್ಯ ಮಾದೇಶ್ವರರ ಚರಿತ್ರೆಯ ಮೇಲೆ ಒಂದಿಷ್ಟು ಬೆಳಕು ಬೀರುತ್ತದೆ. ಮೊದಲ ಸಂಧಿಯಲ್ಲಿ ಮಾದೇಶ್ವರರು ಎಪ್ಪತ್ತೇಳು ಮಲೆ ದಾಟಿ ಬೇಡ ಗಂಪಣ ರಾಜ್ಯ ಆಲಂಬಾಡಿಗೆ ಬರುತ್ತಾರೆ. ಸೋಲಿಗರ ಕಾರಯ್ಯನನ್ನು ಕಾಣುತ್ತಾರೆ. ‘ಬೇಸರವಾಯಿತು ಬಂದೆ’ ಎಂದು ನಡುಮಲೆಯಲ್ಲಿ ನೆಲೆಗೊಳ್ಳುತ್ತಾರೆ.

ಮಾದೇಶ್ವರರ ಆಜ್ಞೆಯಂತೆ ನಾಡಿನ ಅಧಿಪತಿ ರಾಯಣ್ಣ ಬಿಲ್ಲಯ್ಯನಿಗೆ ಏಳು ಹೇರು ಭೂಮಿ ನೀಡುತ್ತಾನೆ. ಕಾಡನ್ನು ಕತ್ತರಿಸುತ್ತಿರುವಾಗ ಮಾದೇಶ್ವರ ಲಿಂಗಕ್ಕೆ ಬಿಲ್ಲಯ್ಯನ ಮಚ್ಚು ತಗಲುತ್ತದೆ. ಮೈಮರೆತು ಬೀಳುತ್ತಾನೆ. ಅವನ ಪತ್ನಿ ಅನ್ನಸಾಲಮ್ಮನಿಗೆ ಮಾದೇಶ್ವರರು ಕಣಿ ಹೇಳುವ ವೇಷದಲ್ಲಿ ಬಂದು ಸಮಾಧಾನ ಹೇಳುತ್ತಾರೆ. “ಬಿಲ್ಲಯ್ಯನಿಗೆ ಮಾದೇಶ್ವರರು ಬಂದಿದ್ದಾರೆ ಅವರನ್ನು ಪೂಜಿಸಿರಿ’’ ಎಂದು. ಕುಂತೂರು ಮಠದ ಸ್ವಾಮಿಗೆಳಿಂದ ಬಿಲ್ಲಯ್ಯನಿಗೆ ಲಿಂಗದೀಕ್ಷೆಯಾಗುತ್ತದೆ. ಬಿಲ್ಲಯ್ಯ ಹೂ ತರಲು ಹೋದಾಗ ಮರದಿಂದ ಬಿದ್ದು ಸಾಯುತ್ತಾನೆ. ಅನ್ನಸಾಲಮ್ಮ ಆಗ ಗರ್ಭಿಣಿ. ಮಾದೇಶ್ವರ ಸಮಾಧಾನ ಮಾಡುತ್ತಾರೆ. ಆಕೆಯ ಮಗ ಶೇಷಣ್ಣ. ಮಾದೇಶ್ವರ ಆತನಿಗೂ ಒಲಿಯುತ್ತಾರೆ. ಆತ ಹುಲಿ ಕಚ್ಚಿ ಸತ್ತಾಗ ಅವನ ಪತ್ನಿ ಗರ್ಭಿಣಿ. ಆಕೆಯ ಮಗ ಬೀರಯ್ಯ ಇವರ ವಂಶಸ್ಥರೇ ತಮ್ಮಡಿಗಳಾಗುತ್ತಾರೆ. ಇವರಲ್ಲಿ ದುಂಡಯ್ಯ ಎಂಬವ ಮುಖ್ಯ.

ಕೊಂಗದೊರೆ ರಾಯಣ್ಣನ ಮೇಲೆ ಯುದ್ಧ ಮಾಡಿದಾಗ ಮಾದೇಶ್ವರರು ರಾಯಣ್ಣ ಗೆಲ್ಲುವಂತೆ ಮಾಡುತ್ತಾರೆ. ಬಂಡೆಹಳ್ಳಿ ಆಚಾರಿ ಚಂದಾದ ಬಸವನನ್ನು ಕೆತ್ತಿ ಮಾದೇಶ್ವರರಿಗೆ ಅರ್ಪಿಸುತ್ತಾನೆ. ಮೂರನೆಯ ಸಂಧಿಯಲ್ಲಿ ಮಾದೇಶ್ವರರ ಜಾತ್ರೆಯ ವರ್ಣನೆಯಿದೆ. ೩೩ ಕೋಟಿ ದೇವತೆಗಳು ಜಾತ್ರೆಗೆ ಆಗಮಿಸುತ್ತಿದ್ದರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೂ ಬರುತ್ತಿದ್ದರು. ಹೀಗೆ ಬರುತ್ತಿರುವವರಲ್ಲಿ ‘ಸಪ್ಪೆಯಲಿಂಗ, ಉಪ್ಪಿನಹಳ್ಳಿಯ ಸ್ವಾಮಿ, ಕಪ್ಪುಗೊರಳ ತೋಂಟದಾರ್ಯ, ಮುಪ್ಪುರವೈರಿ ಕೊಟ್ಟೂರು ಬಸವಲಿಂಗಪ್ಪ, ಬೋಳ ಬಸವೇಶ, ಕಟ್ಟಿಗಯ್ಯ, ಭಿಕ್ಷದ ಮಹಂತಯ್ಯ, ಪಶುಪತಿಸ್ವಾಮಿ, ನಿರ್ವಾಣ ಬಸವಲಿಂಗೇಶ ಮುಂತಾದ ಮಹಾತ್ಮರಿದ್ದರು. ನಂಜನಗೂಡು, ಏರಗಂಬಳ್ಳಿ, ಸುತ್ತೂರು, ಹೊಂಡರಬಾಳು, ಕುಂತೂರಿನ ಪಂಚ ಮಠಾಧೀಶ್ವರರೂ ವಿರಕ್ತರೂ ಚರಲಿಂಗಮೂರ್ತಿಗಳೂ ಮಾದೇಶ್ವರರ ಭೆಟ್ಟಿಗೆ ಬರುತ್ತಿದ್ದರು. ಸೋಲಗಿತ್ತಿಗೆ ಒಲಿದ ಮಾದೇಶ್ವರರನ್ನು ನೋಡಲು ಬರಗೂರು ಪಂದೇಶ್ವರ, ಪಾಲಮಲೆ ಸಿದ್ಧೇಶ್ವರ, ಪೊನ್ನಾಚಿ ಮಲೆಯ ಪೊನ್ನ, ಮಲ್ಲೇಶ, ಅಷ್ಟದಿಕ್ಪಾಲಕರು, ರಂಭೆ ಊರ್ವಶಿ ಮುಂತಾದವರು ಬರುತ್ತಿದ್ದರು.

ಮಾದೇಶ್ವರರು ಸೋಲಗಿತ್ತಿಗೆ ಒಲಿದರು ಎಂಬ ಸಾಂಗತ್ಯದ ಮಾತು ಮೌಖಿಕ ಮಹಾಕಾವ್ಯದಲ್ಲಿ ನೀಲಯ್ಯನ ಹೆಂಡತಿ – ಸೋಲಿಗರ ಸಂಕಮ್ಮನ ಕಥೆಯಾಗಿ ವರ್ಣನೆಗೊಂಡಿದೆ. ಆಕೆ ಮಕ್ಕಳ ಫಲ ಬೇಡಿ “ಈರ ಮಂಡಿಗಾಲು ಹಾಕಿ ಕೂತ’’ ಸಂದರ್ಭದಲ್ಲಿ ಮಾದೇಶ್ವರ ‘ಬೆಂಡೆಕಾಯಿ ಪಿಂಡು ಪರಸಾದ’ ನೀಡಿದುದರಿಂದ ಕಾರಯ್ಯ ಬಿಲ್ಲಯ್ಯ ಹುಟ್ಟಿದರೆಂದು ಮಹಾಕಾವ್ಯ ಹೇಳುತ್ತದೆ. ಇವರನ್ನು ಮಾದೇಶ್ವರ ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳುತ್ತಾರೆ. ಸಾಂಗತ್ಯದ ಪ್ರಕಾರ ಶೇಷಣ್ಣ ಬಿಲ್ಲಯ್ಯನ ಮಗ. ಬಸವ ಆಚಾರಿ ಮಾಡಿಕೊಟ್ಟು ಪ್ರತಿಮೆ. ಆದರೆ ಮೌಖಿಕ ಕಾವ್ಯದಲ್ಲಿ ಇವೆರಡೂ ನಾಗಮತ್ತು ಜೀವಂತ ಬಸವ. ಮಾದೇಶ್ವರರಿಗೆ ದುಂಡಯ್ಯ ಪರ್ಯಾಯನಾಮವಾದರೆ ಸಾಂಗತ್ಯ ತಮ್ಮಡಿಗಳಲ್ಲಿ ಒಬ್ಬ ಎನ್ನುತ್ತದೆ. ಮಾದೇಶ್ವರ ಬೆಟ್ಟದಲ್ಲಿ ತಮ್ಮಡಗೇರಿಯಲ್ಲಿ ಬೇಡರ ಕನ್ನಯ್ಯನ ಹೆಂಡತಿ ದುಂಡಮ್ಮನ ಸಮಾಧಿ ಇದೆ. ಮಾದೇಶ್ವರ ಈಕೆಯ ಮನೆಯಲ್ಲಿ ಸಾರು ಮುದ್ದೆ ಊಟ ಮಾಡುತ್ತಿದ್ದರಂತೆ.

ತೋಂಟದ ಸಿದ್ಧಲಿಂಗ ಶಿವಯೋಗಿಗಳ ಚಾರಿತ್ರಿಕ ವಿವೇಚನೆ ಮಾಡುತ್ತ ಡಾ. ಆರ್.ಸಿ. ಹಿರೇಮಠ ಅವರು ಚನ್ನ ಬಸವಪುರಾಣ, ತೋಂಟದ ಸಿದ್ಧಲಿಂಗಪುರಾಣ, ಎಡೆಯೂರು ಶಾಸನ, ಗುರುರಾಜ ಚಾರಿತ್ರ್ಯಗಳಲ್ಲಿ ಬರುವ ೭೦೧ ವಿರಕ್ತರಲ್ಲಿ ಕೆಲವರ ಹೆಸರುಗಳನ್ನು ಕೊಟ್ಟಿದ್ದಾರೆ. (“ಷಟ್‌ಸ್ಥಲ ಪ್ರಭೆ’’ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೬೬) ಮಾದೇಶ್ವರ ಸಾಂಗತ್ಯದಲ್ಲಿ ಬರುವ ಕಪ್ಪುಗೊರಳ ತೋಂಟದಯ್ಯ ಬಹುಶಃ ತೋಂಟದ ಸಿದ್ಧಲಿಂಗಯತಿ. ಏಕೆಂದರೆ ಈ ಸಾಂಗತ್ಯ ಹೇಳುವ ಸಪ್ಪೆಯ ಲಿಂಗ, ಉಪ್ಪಿನಹಳ್ಳಿಯ ಸ್ವಾಮಿ, ಬೋಳ ಬಸವೇಶ, ಮೇಲೆ ಹೇಳಿದ ಎಲ್ಲ ಗ್ರಂಥಗಳಲ್ಲಿ ಸಿದ್ಧಲಿಂಗಯತಿಯ ಬಳಗದವರೆಂದು ಉಲ್ಲೇಖಿತರಾಗಿದ್ದಾರೆ. ಆದರೆ ಸಾಂಗತ್ಯ ಹೇಳುವ ಇತರರು ಮೇಲೆ ಹೇಳಿದ ಆಕರಗಳಲ್ಲಿಲ್ಲ. ಇವರಲ್ಲಿ ಅಂಗತ್ಯ ಮುಪ್ಪುರ ವೈರಿ ಕೊಟ್ಟೂರು ಬಸವಲಿಂಗಪ್ಪನ ಹೆಸರು ಹೇಳಿದೆ. ಈತ ಹಿಂದೆ ಹೇಳಿರುವ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಕೊಟ್ಟೂರಿನ ಗುರುಬಸವ. ತೋಂಟದ ಸಿದ್ಧಲಿಂಗ ವಚನವೊಂದರಲ್ಲಿ ತಮ್ಮ ಗುರುಪರಂಪರೆಯನ್ನು ನೀಡಿದ್ದು ಮೂರನೆಯವ ನಿರ್ಮಾಯ ಗಣೇಶ್ವರರು ಎಂದಿದ್ದಾರೆ. ನಿರಂಜನವಂಶರತ್ನಾಕರ ಇವರೇ ಮಾದೇಶ್ವರರು ಸಿದ್ಧಲಿಂಗರ ಸಮಕಾಲೀನರಲ್ಲ. ಗುರುಪರಂಪರೆಯವರು. ಬಸವಪೂರ್ವ ಯುಗದ ಶೈವ ಪರಂಪರೆಗೆ ಸೇರಿದವರು. ಹಾಗಿದ್ದರೆ ಸಾಂಗತ್ಯ ಮಾದೇಶ್ವರರ ಜಾತ್ರೆಗೆ ಸಿದ್ಧಲಿಂಗಾದಿಗಳು ಬರುತ್ತಿದ್ದ ವಿಷಯವನ್ನು ಹೇಳಿದ್ದೇಕೆ? ಸಿದ್ಧಲಿಂಗ ತಮ್ಮ ಪರಿವಾರದ ಜತೆ ತಮ್ಮ ಪೂರ್ವದ ಪರಂಪರೆಯ ಗುರುಗಳಾದ ಮಾದೇಶ್ವರರ ಜಾತ್ರೆಗೆ ಬರುತ್ತಿದ್ದ ರೂಢಿಯಿಟ್ಟುಕೊಂಡಿರಬೇಕು. ನಿರಂಜನ ವಂಶರತ್ನಾಕರದ ಪ್ರಕಾರ ಈ ಗುರು ಪರಂಪರೆಯಲ್ಲಿ ಸಿದ್ಧಲಿಂಗ ೧೬ನೆಯ ವರು ಅಥವಾ ೧೯ನೆಯವರು. ಮಾದೇಶ್ವರ ಮೂರು ಅಥವಾ ಆರನೆಯವರು. ಮಾದೇಶ್ವರ ಮತ್ತು ಮಂಟೇಸ್ವಾಮಿಗಳ ಕಾವ್ಯಗಳಲ್ಲಿ ಬರುವ ತತ್ವಜ್ಞಾನ ವೀರಶೈವದ್ದಲ್ಲ, ಶೈವ, ತಾಂತ್ರಿಕ ಪಂಥದ್ದಾದ್ದರಿಂದ ಮಾದೇಶ್ವರ ಬಸವಪೂರ್ವ ಯುಗದವರೆಂದು ಅಥವಾ ಅವರ ಸಮಕಾಲೀನರೆಂದು ಊಹಿಸುವುದು ಸೂಕ್ತವಾಗುತ್ತದೆ.

ಕ್ರಿ.ಶ. ೧೮೩೬ರ ಜೈನಕವಿ ದೇವಚಂದ್ರನ ‘ರಾಜಾವಳಿ ಕಥೆ’ ಮಾದೇಶ್ವರರ ಚರಿತ್ರೆಯನ್ನು ಪ್ರಸ್ತಾಪಿಸುವ ಎರಡನೆಯ ಗ್ರಂಥ. ಇದು ಜೈನಕೃತಿಯಾದ್ದರಿಂದ ಸತ್ಯಗಳನ್ನು ಹೇಳುತ್ತಿರಬೇಕೆಂದು ಊಹಿಸುವುದು ತಪ್ಪಲ್ಲ.

ಜೈನ ಲೇಖಕ ಹೇಳುವ ಈ ಕಥೆಯಲ್ಲಿ ಐತಿಹಾಸಿಕ ಅಂಶಗಳ ಜತೆ ಕಟ್ಟುಕತೆ ಸೇರಿ ಗೋಜಲಾಗಿದೆ. ಸಾಸಲರಾಜ, ರಾಯಣ್ಣ, ನಂಜಯ್ಯರ ಬಗ್ಗೆ ತಿಳಿದರೆ ಮಾದೇಶ್ವರ ಚರಿತ್ರೆಯ ಶೋಧನಗೆ ಸಹಾಯವಾಗಬಹುದು.

ಬಹುಶಃ ೨೦ನೆಯ ಶತಚಮಾನದ ನಿರಂಜನವಂಶರತ್ನಾಕರದಲ್ಲಿ ಸಿದ್ಧಲಿಂಗಯತಿಯ ಗುರುಪರಂಪರೆಯಿದೆ. ಅಲ್ಲಮಪ್ರಭು -> ಚನ್ನಬಸವಣ್ಣ  -> ಸಿದ್ಧರಾಮ  -> ಅನಾದಿಗಣನಾಥ  -> ಆದಿಗಣೇಶ್ವರ  -> ನಿರ್ಮಾಯ ಗಣೇಶ್ವರ  -> ನಿರಂಜನಸ್ವಾಮಿ ಇತ್ಯಾದಿ. ನಿರ್ಮಾಯ ಗಣೇಶ್ವರ ೭೭ ಬಿರುದು. ಬಸವ, ಸರ್ಪಗಳನ್ನು ನಿರಂಜನ ಗಣನಾಥನಿಗೆ ಒಪ್ಪಿಸಿ ಸಂಸಾರಿ ಸಂಗಪ್ಪನ ಜತೆ ಬೆಟ್ಟದ ಮಧ್ಯೆ ನೆಲೆಗೊಂಡ. ಸಂಗಪ್ಪನಿಂದ ಶೈವರಿಗೆ ದೀಕ್ಷೆ ಕೊಡಿಸಿ ಸ್ತ್ರೀಸಂಪರ್ಕ ಮಾಡಬಾರದು. ಮದ್ಯಮಾಂಸ ಸೇವಿಸಬಾರದು ಎಂದು ಹೇಳಿ ಶಿವಲಿಂಗದಲ್ಲಿ ಬಯಲಾದ. ಮಾದೇಶ್ವರರ ಶಿಷ್ಯ ನಿರಂಜನಸ್ವಾಮಿಗಳ ಸಮಾಧಿ ಮಠ ಕಲ್ಯಾಣದಲ್ಲಿದ್ದು ಇದಕ್ಕೆ ಮರಿದೇವರ ಗುಡ್ಡ ಎನ್ನುತ್ತಾರೆ. ಈತ ಹರಿಹರ ರಾಘವಾಂಕ ಕೆರೆಯ ಪದ್ಮರಸರಿಗೆ ದರ್ಶನ ನೀಡಿದವ. ಈ ಪರಂಪರೆಯಲ್ಲಿ ೮ನೆಯವ ಪಂಚಗಣಾಧೀಶ್ವರರಲ್ಲಿ ಒಬ್ಬನಾದ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ. ಸಿದ್ಧಲಿಂಗ ಯತಿಗಳು ತಮ್ಮ ವಚನದಲ್ಲಿ ಮೊದಲ ಮೂರು ಜನರು ಬಿಟ್ಟು ಗುರುಪರಂಪರೆ ಪ್ರಾರಂಭಿಸಿದ್ದಾರೆ. ಜನಪದ ಮಹಾಕಾವ್ಯ ಮಾದೇಶ್ವರರಿಗೆ ಮರಿದೇವರು ಎನ್ನುತ್ತದೆ. ಆದರೆ ಲಿಖಿತ ಪರಂಪರೆ ಈತ ಮಾದೇಶ್ವರರ ಶಿಷ್ಯ ಎಂದಿದೆ.

ನಿರಂಜನ ಜಂಗಮ ವಂಶದರ್ಪಣ ನೀಡುವ ವಿವರಗಳು ಚರಿತ್ರೆಗೆ ಹೆಚ್ಚು ಸಮೀಪವಾಗಿವೆ. ಶಿವನ ಅಪ್ಪಣೆಯಂತೆ ನಿರಂಜನ ಜಂಗಮ ಭಕ್ತನ ಹೃದಯದಿಂದ ೮ ವರ್ಷದ ಶಿಶುವಾಗಿ ಜನಿಸಿದ. ಬಣಜಿಗರು ವಾಣಿಜ್ಯಪುರ (ಹರದನಹಳ್ಳಿ) ವೆಂಬ ಪಟ್ಟಣವನ್ನು ನಿರ್ಮಿಸಿ ದಿವ್ಯಲಿಂಗೇಶನ ಸಮಯಾಚಾರಕ್ಕೆ ಮಠವನ್ನು ಕಟ್ಟಿಸಿದರು. ಅನಾದಿ ಗಣೇಶ್ವರನೆಂಬ ಚರಮೂರ್ತಿಯನ್ನು ನೆಲೆಗೊಳಿಸಿದರು. ಈತನ ಶಿಷ್ಯ ಆದಿಗಣನಾಥ, ಈತನ ಶಿಷ್ಯ ನಿರ್ಮಾಯಗಣವರ. ಈತನ ಶಿಷ್ಯ ಸ್ವಯಂಜ್ಯೋತಿರೂಪ. ಈತನ ಶಿಷ್ಯ ನಿರಂಜನಗಣನಾಥ ಇತ್ಯಾದಿ. ಅನಾದಿಗಣೇಶ್ವರ ಕ್ರಿ.ಶ| ೧೦೦೦ದಲ್ಲಿದ್ದಿರಬಹುದೆಂದು ಡಾ. ಆರ್.ಸಿ. ಹಿರೇಮಠರ ಊಹೆ. ಅವರ ಪ್ರಕಾರ ಈತ ಕಾಳಾಮುಖಯತಿ. ಇವರ ಅಭಿಪ್ರಾಯ ಸರಿ ಎನ್ನುವುದಾದರೆ ಮಲೆಯಮಾದೇಶ್ವರ ಕ್ರಿ.ಶ. ೧೦೫೦ರ ಸುಮಾರಿನ ಕಾಳಾಮುಖ ಮಠಾಧೀಶ.

ವಿರಕ್ತ ತೋಂಟದಾರ್ಯ ಬರೆದ “ಶ್ರೀ ಸಿದ್ಧೇಶ್ವರ ಪುರಾಣ’’ ಮತ್ತು ನಿರಂಜನ ವಂಶರತ್ನಾಕರಗಳಲ್ಲಿ ಬರುವ ಕಥೆ – ಮಧುರೆಗೆ ಹೋಗಿ ಬರುವ ಶೈವ ಬಣಜಿಗರು ಮಧ್ಯಮಾರ್ಗದಲ್ಲಿ ಒಂದು ಪಟ್ಟಣವನ್ನು ಕಟ್ಟಿಸಿ ಹರದನಹಳ್ಳಿ ಎಂದು ಹೆಸರಿಟ್ಟು ಅಲ್ಲಿ ಅಮೃತೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದರು. ಈ ಲಿಂಗವೇ ಮುಂದೆ ದಿವ್ಯಲಿಂಗೇಶ್ವರವೆಂದು ಪ್ರಸಿದ್ಧವಾಯಿತು. ಈ ವ್ಯಾಪಾರಿಗಳು ಹರದನಹಳ್ಳಿಯಲ್ಲಿಯೇ ನೆಲಸಿ ಅಮೃತೇಶ್ವರಲಿಂಗದ ಸಮಯಾಚಾರಕ್ಕಾಗಿ ಮಠ ಕಟ್ಟಿಸಿ ಅನಾದಿಗಣೇಶ್ವರನೆಂಬ ಚರಮೂರ್ತಿಯನ್ನು ನೆಲೆಗೊಳಿಸಿದರು. ಇವರೇ ತೋಂಟದ ಸಿದ್ಧಲಿಂಗಯತಿಗಳ ಪರಂಪರೆಯ ಆದಿಗುರು.

ಹಿಂದಲ ಪ್ರಾಚೀನ ಶೈವ ಕೇಂದ್ರಗಳಲ್ಲಿ ಹರದನಹಳ್ಳಿಯೂ ಸೇರಿತ್ತು. ಕರ್ನಾಟಕದ ತುಂಬ ಖ್ಯಾತರಾಗಿದ್ದ ಕಾಳಾಮುಖ, ಲಾಕುಳ ಶೈವಯತಿ ಮಠದೇಗುಲ ಪರಂಪರೆ ಇಲ್ಲಿಯೂ ಇತ್ತು. ಇದು ದ್ರಾವಿಡ ತತ್ವ ಮತ್ತು ಪರಂಪರೆಯಾಗಿದ್ದರಿಂದ ಜಾತಿ ಭೇದವನ್ನು ಮಾಡುತ್ತಿರಲಿಲ್ಲ. ಅನಾದಿಗಣನಾಥ, ಸಿದ್ಧಲಿಂಗಯತಿ ಮಾದೇಶ್ವರ, ಪಂಚಗಣಾಧೀಶ್ವರರು ಮೊದಲಾದವರ ಹುಟ್ಟನ್ನು ನಿಗೂಢವಾಗಿಟ್ಟಿರುವುದರ ಅರ್ಥ ಇವರೆಲ್ಲ ಕಪ್ಪುವಳಿ ಕುಲದವರೆಂದೆ. ಅನಾದಿಗಣನಾಥ ಎಂಬ ಹೆಸರಿನಲ್ಲಿರುವ ನಾಥ ಆ ಕಾಲದ ಉತ್ತರ ಭಾರತದಲ್ಲಿ ಪ್ರಖ್ಯಾತವಾಗಿದ್ದ ನಾಥಪಂಥವನ್ನು ಸೂಚಿಸುತ್ತದೆ. ಈ ಪರಂಪರೆಯ ಮೂರನೆಯ ಗುರು ಮಾದೇಶ್ವರ ಮಾದಿಗರಾದರೂ ಗುರುವಾದರು. ಒಂದೆಡೆ, ಶಿಷ್ಟ ಪರಂಪರೆ ಮಾದೇಶ್ವರರು ‘ಬೇಸರವಾಗಿ ಬೆಟ್ಟ ಸೇರಿದೆ’ ಎಂದು ಹೇಳಿದರೆಂದು (‘ಮಲೆಯ ಮಾದೇಶ್ವರ ಸಾಂಗತ್ಯ’) ‘ಘನವಿರಕ್ತಪಟ್ಟವನ್ನು ತ್ಯಜಿಸಿ’ ಬಂದರೆಂದೂ (‘ನಿರಂಜನವಂಶರತ್ನಾಕರ’) ಹೇಳುವ ಮೂಲಕ; ಇನ್ನೊಂದೆಡೆ ಮೌಖಿಕ ಕಾವಯ್ ಕುಂತೂರು ಸುತ್ತೂರು ಮೊದಲಾದ ಮಠಗಳು ಮಾದೇಶ್ವರರ ಮಹತ್ವವನ್ನು ಅರಿಯದೆ ಹೋದವು ಎಂದು ಹೇಳುವ ಮೂಲಕ ಮಾದೇಶ್ವರರ ಜೀವನದ ಮಹತ್ವದ ಪ್ರಸಂಗದ ಬಗ್ಗೆ ಸೂಚನೆ ನೀಡುತ್ತವೆಂದು ತೋರುತ್ತದೆ. ನಾಡನ್ನು ಬಿಟ್ಟು ಕಾಡನ್ನು ಆಶ್ರಯಿಸಲು ಕಾರಣವಾದ ಘಟನೆ ಏನಿದ್ದಿರಬಹುದು?

ಡಾ. ಆರ್. ಸಿ. ಹಿರೇಮಠ ನಿರ್ಮಾಯ ಗಣೇಶ್ವರರಿಂದಲೆ ಮಲೆಯ ಮಾದೇಶ್ವರ ಬಸವಣ್ಣನ ಸಮಕಾಲೀನನಿರಬಹುದೆಂದು ಊಹಿಸಿದ್ದಾರೆ. ಮೌಖಿಕ ಕಾವ್ಯ ಮಾದೇಶ್ವರರು ಕಲ್ಯಾಣಕ್ಕೆ ಹೋಗಿ ಬಸವಣ್ಣ ಎಲ್ಲ ಜಾತಿ ಜನಕ್ಕೆ ಪಾತ್ರ ಅಪಾತ್ರ ವಿವೇಚನೆ ಇಲ್ಲದಂತೆ ಲಿಂಗಧಾರಣೆ ಮಾಡುತ್ತಿದ್ದ ಕೃತ್ಯವನ್ನು ಕಟುವಾಗಿ ಟೀಕಿಸಿದ್ದನ್ನು, ಪವಾಡಗಳ ಮೂಲಕ ಜಂಗಮರ ಡಾಂಭಿಕತ್ವವನ್ನು ಬಯಲಿಗೆಳೆದರೆಂಬುದನ್ನು ವಿವರಿಸುತ್ತದೆ. ಬಸವಾದಿ ಶರಣ ವಚನಗಳಲ್ಲಿ ಮಾದೇಶ್ವರರ (ನಿರ್ಮಾಯ ಗಣೇಶ್ವರ) ಪ್ರಸ್ತಾಪವಿಲ್ಲದಿರುವುದರಿಂದ ಇದು ಚಾರಿತ್ರಿಕ ಘಟನೆಯಾಗಿರಲಾರದೆಂದು ವಿದ್ವಾಂಸರ ಗ್ರಹಿಕೆ. ನೂರಾರು ಸಂಖ್ಯೆಯ ಶರಣರ ಬರಹಗಳಲ್ಲಿ ಎಲ್ಲಿಯೋ ಒಂದೆಡೆ ಮಾದೇಶ್ವರರು ಉಕ್ತವಾಗಬಹುದಿತ್ತು ಎಂಬುದು ಸಕಾರಣವಾದ ಆದರೆ ವೀರಶೈವರಲ್ಲದ ಶೈವ ಪಂಥೀಯರಾದ ಮಾದೇಶ್ವರರು ಅವರಂಥ ಅನೇಕರನ್ನು ಶರಣರನ್ನು ಉಲ್ಲೇಖಿಸದೆ ಇರುವ ಸಂಭವ ಇದೆ. ಬಹುಶಃ ಕಾಳಾಮುಖ ಶೈವ ಗುರುವಾಗಿದ್ದ ಮಾದೇಶ್ವರರು ಶರಣರ ಲೋಪದೋಷಗಳನ್ನು ಎತ್ತಿತೋರಿಸಿ, ತಮ್ಮ ಪರಂಪರೆಯನ್ನು ಸಮರ್ಥಿಸಿ ಕೊಂಡಿರಬೇಕು. ೧೦-೧೨ ಕಾವ್ಯ ಶಾಸನಗಳಲ್ಲಿ ಸಿದ್ಧಲಿಂಗಯತಿಯ ಚರಿತ್ರೆ ಬರುತ್ತದೆ. ಮಾದೇಶ್ವರರು ಮಾಡಿದಂಥ ಹಲವಾರು ಪವಾಡಗಳನ್ನು ಸಿದ್ಧಲಿಂಗ ಯತಿಯೂ ಮಾಡಿದ ವಿವರಗಳಿವೆ. ಯತಿ ಕೆಗ್ಗೆರೆಯಲ್ಲಿ ಹುತ್ತದಲ್ಲಿ ಕೂತಿದ್ದ, ಶಿಲಾ ವೃಷಭನಿಗೆ ಪ್ರಸಾದ ತಿನ್ನಿಸಿದ, ಮಾಯಿದೇವಿ ವಿಗ್ರಹದಿಂದ ಸೇವೆ ಮಾಡಿಸಿದ, ಸರ್ಪಕ್ಕೆ ಜೀವದಾನ ಮಾಡಿದ, ಬಸವಪುರ, ಹುಲಿಯೂರುಗಳಲ್ಲಿ ಸಾಂಕ್ರಾಮಿಕ ರೋಗ ಪರಿಹರಿಸಿದ, ವಿಷಯ ಊಟ ಉಂಡ ಪವಾಡಗಳು ಮಾದೇಶ್ವರ ಚರಿತ್ರೆಯಲ್ಲೂ ಇವೆ. ಜನಪದ ಮಹಾಕಾವ್ಯ ಸಿದ್ಧಲಿಂಗಯತಿಯ ಪವಾಡಗಳನ್ನು ಮಾದೇಶರವು ಎಂದಿರಬೇಕು. ಅಥವಾ ಮಾದೇಶ್ವರರ ಪವಾಡಗಳು ಸಿದ್ಧಲಿಂಗ ಯತಿ ಜೀವನಕ್ಕಂಟಿರಬೇಕು.

ಪ್ರಾಚೀನ ಶೈವ ಮಠದೇಗುಲಗಳ ಗುರುಗಳು ಮಾಟ ಮದ್ದು ತಂತ್ರ ಯೋಗಗಳಲ್ಲಿ ಪರಿಣತರಿರುತ್ತಿದ್ದರು. ಈ ಪರಂಪರೆಯ ಈಗಿನ ಮಠಗಳಲ್ಲಿ ಮಾಟಮದ್ದು ನೀಡುವ ಪದ್ಧತಿ ಉಳಿದಿವೆ. ಉದಾಹರಣೆಗೆ ಕೂಲಹಳ್ಳಿಯ ಹಿರೇಮಠದ ಬೇಡ ಕುಲದ ಧರ್ಮಕರ್ತರು ಗೋಣಿ ಬಸವನಿಂದ ಬಂದ ಮದ್ದು ಮಾಟಗಳಲ್ಲಿ ಚದುರರು. ಮಾದೇಶ್ವರರು ಮಾಟ ಮದ್ದು ಪವಾಡಗಳಿಂದಲೆ ಜನರನ್ನು ಒಕ್ಕಲನ್ನಾಗಿ ಮಾಡಿಕೊಂಡಿದ್ದನ್ನು ಮೌಖಿಕ ಕಾವ್ಯ ರಂಜಕವಾಗಿ ವರ್ಣಿಸುತ್ತದೆ. ಶಿಷ್ಟಕೃತಿಗಳೂ ಹಿಂದೆ ಬಿದ್ದಿಲ್ಲ. ‘ಸುತ್ತೂರು ಸಿಂಹಾಸನದ ಗುರುಪರಂಪರೆ’ ೧೯೩೩ರಲ್ಲಿ ಸಂಗಪ್ಪಶಾಸ್ತ್ರಿ ಬರೆದ ಕೃತಿ. ಇದರಲ್ಲಿಯ ಕಥೆ ಸುತ್ತೂರು ಶಿವಾಚಾರ್ಯರ ಮಹಿಮೆಯನ್ನು ಕೇಳಿ ಕಲ್ಯಾಣದ ಕೆಲವು ಶರಣರು ಶ್ರೀಶೈಲದ ಬಳಿ ಬಂದು ದಾರಿ ಕೇಳಿದರು. ಪರಶಿವನ ಅಂಶವಾದ ಮಾದೇಶ್ವರ ಬಾಲಕನಾಗಿ ಅವರನ್ನು ಸುತ್ತೂರಿಗೆ ಕರೆತಂದ. ರೇಣುಕಾಚಾರ್ಯರ ರಥೋತ್ಸವ ನಡೆಯುತ್ತಿತ್ತು. ಹಾವು ಕಚ್ಚಿ ಸತ್ತ ಯಾತ್ರಿಕನನ್ನು ಗುರುಗಳ ಅಪ್ಪಣೆಯ ಪ್ರಕಾರ ಮಾದೇಶ್ವರ ಬದುಕಿಸಿದ. ಎಳೆಯಲಾಗದಿದ್ದ ರಥ ಸರಾಗವಾಗಿ ಎಳೆಯಿತು. ಜಾತ್ರೆಯ ದನಗಳಿಗೆ ಬಂದ ಸಾಂಕ್ರಾಮಿಕ ರೋಗವನ್ನು ಮಾದೇಶ್ವರ ಗುರು ಪಾದೋದಕ ಪ್ರೋಕ್ಷಿಸಿ ನಿವಾರಣೆ ಮಾಡಿದ. ಸಿದ್ಧನಂಜದೇಸಿಕರಿಗೆ ಮಾದೇಶ್ವರರು ಪರಶಿವರೂಪಿ ಎಂದು ತಿಳಿಯಿತು. ಒಂದು ರಾತ್ರಿ ಮಾದೇಶ್ವರ ಯಾರಿಗೂ ಹೇಳದೆ ಸಿದ್ಧಗಿರಿಗೆ ಹೊರಟ. ಅಲ್ಲಿ ಪ್ರಭುವಿನಿಂದ ಮಂತ್ರೋದಕ ಪಡೆದು ಕೊಳ್ಳೆಗಾಲದ ಮರಡಿಗುಡ್ಡದಲ್ಲಿ ತಪಸ್ಸಿಗೆ ಕುಳಿತರು. ಗುರು, ಮಾದೇಶ್ವರರನ್ನು ಎಷ್ಟು ಹುಡುಕಿಸಿದರೂ ಸಿಗಲಿಲ್ಲ. ಕಪ್ಪಿನ ನಂಜುಂಡೇಶ್ವರರಿಗೆ ಪಟ್ಟ ಕಟ್ಟಿ ಗುರು ಶಿಷ್ಯನನ್ನು ಹುಡುಕುತ್ತ ಸಾಲೂರು ಮಠಕ್ಕೆ ಬಂದು ಲಿಂಗರೂಪಿ ಮಾದೇಶ್ವರರನ್ನು ಕಂಡ.  ಹುಲಿವಾಹನದ ಮೇಲೆ ಕಾಡೆಲ್ಲಾ ಸುತ್ತಿ ಏಳನೆಯ ಬೆಟ್ಟದ ನಡುವೆ ರಹಸ್ಯ ಸ್ಥಾನದಲ್ಲಿ ಲಿಂಗಾಕಾರದಲ್ಲಿದ್ದೇನೆ ಎಂದು ಮಾದೇಶ್ವರ ಗುರುವಿನ ಕನಸಿನಲ್ಲಿ ಬಂದು ಹೇಳುತ್ತಾರೆ.

ಈ ಕತೆಯಿಂದ ಸುತ್ತೂರು ಮಠದ ಸಿದ್ಧನಂಜದೇಸಿಕರು ತಮ್ಮ ಪೀಠಕ್ಕೆ ಮಾದೇಶ್ವರರನ್ನು ಕೂರಿಸುವ ಯತ್ನದಲ್ಲಿದ್ದರೆಂದೂ ಆದರೆ ಮಾದೇಶ್ವರ ಹೇಳದೆ ಕೇಳದೆ ಹೊರಟುಬಿಟ್ಟರೆಂದು ಊಹಿಸಲು ಅವಕಾಶವಿದೆ. ಜನಪದ ಕಾವ್ಯವೂ ಶಿಷ್ಯನನ್ನು ಹುಡುಕಿಸುವ ವಿಫಲಯತ್ನದ ಬಗ್ಗೆ ನಾನಾಪರಿಯಾಗಿ ವಿವರಿಸುತ್ತದೆ. ಇಷ್ಟಿದ್ದರೂ ಮಾದೇಶ್ವರ ಪೀಠದ ಗುರುಗಳಾಗಿ ಕೆಲದಿನ ನೆಲೆ ನಿಂತಿರುವ ಸಾಧ್ಯತೆ ಇದೆ. ಇಲ್ಲದಿದ್ದರೆ ಸಿದ್ಧಲಿಂಗಯತಿಯ ಗುರುಪರಂಪರೆಯಲ್ಲಿ ನಿರ್ಮಾಯ ಗಣೇಶ್ವರರ ಪ್ರಸ್ತಾಪವಾಗುತ್ತಿರಲಿಲ್ಲ. ಸಿದ್ಧನಂಜದೇಸಿಕರ ಕಾಲ ಸಿ.ಚ. ನಂದಿಮಠರ ಪ್ರಕಾರ ಕ್ರಿ.ಶ. ೧೧೭೦-೧೨೪೦ರ ನಡುವೆ. ಇದೂ ನಮ್ಮ ಊಹೆಗೆ ಬೆಂಬಲವಾಗುವ ಸಂಗತಿ. ಟಿ.ವಿ. ಮಾದಯ್ಯ (ಶ್ರೀ ಮಲೆ ಮಾದೇಶ್ವರ ಚರಿತ್ರೆ) ಶ್ರವಣನೆಂಬ ಜೈನ ಕಂಬದಹಳ್ಳಿ ಬೆಟ್ಟದಲ್ಲಿ ಕ್ರಿ.ಶ. ೧೧೨೦ರಲ್ಲಿದ್ದನೆಂದು ಹೇಳಿರುವ ಮಾತೂ ಅಷ್ಟೇ.

ಇನ್ನು ಶಾಸನಗಳ ವಿಷಯ. ಹರದನಹಳ್ಳಿ ಮತ್ತು ಹೈದರನ ಶಾಸನಗಳಲ್ಲಿ ಮಾದೇಶ್ವರರ ಚರಿತ್ರೆ ಪ್ರಸ್ತಾಪವಾಗಿದೆ. ಇವು ಮತ್ತು ವೀರಶೈವ ಶಿಷ್ಟ ಕೃತಿಗಳ ಆಧಾರದಿಂದ ಮಾದೇಶ್ವರರು ಹರದನಹಳ್ಳಿಯ ಮಠದ ಗುರುಗಳಾಗಿದ್ದಿರಬಹುದೆಂದು ಊಹಿಸಬೇಕಿದೆ.

ಕ್ರಿ.ಶ. ೧೩೨೪ರ ಹರದನಹಳ್ಳಿ ಶಾಸನ ಹೊಯ್ಸಳ ವೀರ ಬಲ್ಲಾಳನ ಕಾಲದ್ದು. ಶಿವನಂಕಾರೇಶ್ವರ, ಮಾದೇಶ್ವರ, ಪಂದೇಶ್ವರ, ಸಿದ್ಧೇಶ್ವರ, ಬ್ರಹ್ಮೇಶ್ವರ ಲಿಂಗಗಳಿಗೆ ಪಂಚಮಠಗಳನ್ನು ಸ್ಥಾಪಿಸಿ ತಮ್ಮಡಿಗಳು, ಬೇಡಗಂಪಣದ ಶಿಷ್ಯರುಗಳನ್ನು ನಿರ್ಧರಿಸಿ ಅವರಿಗೆ ಕಾಣಿಕೆ ಪಡೆಯುವ ಹಕ್ಕನ್ನು ನೀಡಿದ್ದಾಗಿ ಶಾಸನ ಹೇಳುತ್ತದೆ. ಈ ಶಾಸನದ ಪ್ರಕಾರ ಮಾದೇಶ್ವರರು ಆಗಲೆ ಲಿಂಗವಾಗಿದ್ದಾರೆ. ಅವರಿಗೆ ಮಠ ಸ್ಥಾಪನೆಯಾಗುತ್ತಿದೆ. ಕಾಳಾಮುಖರ ಪ್ರಾಬಲ್ಯವಿದ್ದ ಕರ್ನಾಟಕದ ೯, ೧೦, ೧೧ನೇ ಶತಮಾನದ ಅಸಂಖ್ಯ ಶಾಸನಗಳಲ್ಲಿ ಪಂಚಮಠದ ಪ್ರಸ್ತಾಪ ಬರುತ್ತದೆ. ಶಾಸನ ಹೇಳುವ ಪಂಚಮಠಗಳಲ್ಲಿ ಮಾದೇಶ್ವರರದ್ದು ಕಂಚಿ ತೆಲುಗಾಣ್ಯದ ಮಠ; ಪಂದೇಶ್ವರಕ್ಕೆ ವಾಣಿಜ್ಯ ಪುರಿಮಠ (ಹರದನಹಳ್ಳಿ) ಎಂದಿದೆ. ಹರದನಹಳ್ಳಿಯ ಬಣಜಿಗರು ಸ್ಥಾಪಿಸಿದ ದಿವ್ಯ ಲಿಂಗೇಶ ಅಥವಾ ಅಮೃತಲಿಂಗೇಶ್ವರವನ್ನೇ ಈ ಶಾಸನ ಪಂದೇಶ್ವರ ಎಂದು ಹೇಳುತ್ತಿರಬೇಕು.

ಮಾದೇಶ್ವರ ಚರಿತ್ರೆಯಲ್ಲಿ ಬರುವ ರಾಯಣ್ಣ ಕ್ರಿ.ಶ. ೧೩೨೪ರ ಶಾಸನದಲ್ಲಿ ಉಕ್ತನಾಗಿದ್ದಾನೆ. ರಾಜ ಅವನಿಗೆ ಸನ್ಮಾನಮಾಡಿ ಕಂಪಣದ ನಾಯಕತ್ವವನ್ನು ವಹಿಸಿ ಕೊಡುತ್ತಾನೆ. ಪೂಜಾರಿಕೆಯ ಸಂಬಂಧದಲ್ಲಿ ವ್ಯಾಜ್ಯ ತಲೆದೋರಿದ್ದರಿಂದ ಕ್ರಿ.ಶ. ೧೩೨೪ ಮತ್ತು ೧೭೭೬ರ ಹೈದರಾಲಿ ಶಾಸನಗಳು ಹುಟ್ಟಿದವು. ಹರದನಹಳ್ಳಿ ಶಾಸನದಂತೆ ಹೈದರನ ಶಾಸನವೂ ಈ ವ್ಯಾಜ್ಯದ ಬಗ್ಗೆ ಮಾತಾಡಿದೆ. ಎರಡೂ ಶಾಸನಗಳು ಮಾದೇಶ್ವರರ ಪವಾಡಗಳನ್ನು ಸೂಚಿಸುತ್ತವೆ. ಹೈದರಾಲಿ ಶಾಸನ ಮಹಾಜಗದ್ಗುರು ಮಾದೇಶ್ವರ ಎನ್ನುತ್ತದೆ. ಪಂಚಮಠ ಅಥವಾ ಕುಂತೂರು ಮಠ ಉಪ್ಪಲಿಗ, ಬೇಡ, ಒಕ್ಕಲಿಗ ಮೊದಲಾದ ಕಪ್ಪುವಳಿ ಜನಕುಲಗಳಿಗೆ ದೀಕ್ಷೆ ಕೊಡುತ್ತಿದ್ದವು. ಇವರಿಂದ ಕಪ್ಪ ಕಾಣಿಕೆ ಸಂಗ್ರಹಿಸುತ್ತಿದ್ದವು. ಈ ಹಕ್ಕನ್ನು ಕಾಲ ಕಾಲಕ್ಕೆ ರಾಜಶಾಹಿ ದೃಢೀಕರಿಸುತ್ತ ಬಂದಿದೆ. ಪೂಜಾರಿಕೆ ವಿಷಯದಲ್ಲಿ ಆಗಾಗ ವ್ಯಾಜ್ಯಗಳು ನಡೆಯುತ್ತಿದ್ದವು. ಈ ಆರ್ಥಿಕ ವಿಷಯ ಅಧ್ಯಯನದ ದೃಷ್ಟಿಯಂದ ತುಂಬ ಮುಖ್ಯವಾಗಿದೆ. ಹೈದರಾಲಿ ತಾಮ್ರಶಾಸನ ಹರದನಹಳ್ಳಿಯ ಶಾಸನದ ನಕಲಿನಂತೆ ತೋರುತ್ತದೆ. ಬೇಡರು ಪಾಳೆಯಗಾರರಾಗಿ ಆಳಿರುವ ಕಡೆಗಳಲ್ಲಿ ಲಿಂಗಾಯತ ಮಠಗಳ ಸಂಪರ್ಕಕ್ಕೆ ಬಂದದ್ದು ಕಂಡುಬರುತ್ತದೆ. ಹರಪನಹಳ್ಳಿ ಚಿತ್ರದುರ್ಗ ಪಾಳೆಯಗಾರರು ಲಿಂಗಾಯತ ಮಠಗಳಿಗೆ ದಾನದತ್ತಿ ಕೊಟ್ಟು ಪ್ರೋತ್ಸಾಹಿಸಿದ್ದು ತಿಳಿದೇ ಇದೆ.

ಒಟ್ಟಾರೆ ಶಾಸನ, ಶಿಷ್ಟ, ಜನಪದ ಕೃತಿಗಳು ಆಚರಣೆಗಳು ನೀಡುವ ಪರೋಕ್ಷ ಸೂಚನೆಗಳ ಆಧಾರದಲ್ಲಿ ಮಾದೇಶ್ವರರು ೧೦-೧೧ನೇ ಶತಮಾನದ ಹರದನಹಳ್ಳಿಯ ಪಂಚಮಠ ಒಂದರ ಪ್ರಖ್ಯಾತ ಕಾಳಾಮುಖ ಗುರುಗಳಾಗಿದ್ದಿರಬೇಕು.

ಕೊನೆಯದಾಗಿ ಮಾದೇಶ್ವರರ ಜಾತಿ ವಿಚಾರ. ೧೨ನೇ ಶತಮಾನದ ವೀರಶೈವ ಡೋಹರ, ಮಾದರ, ನಟುವರ, ಜಾಡರ (ನೇತಾರ) ಈಡಿಗರ ಮೊದಲಾದ ಕಪ್ಪುವಳಿ ಜನರಿಂದ ಹುಟ್ಟಿದ್ದು. ಹಿಂದಿದ್ದ ಕಾಳಾಮುಖ, ಲಾಕುಳ ಶೈವ ಮಠಗಳಲ್ಲೂ ಜಾತಿ ಭೇದವಿರಲಿಲ್ಲ. ಯಾವ ಜಾತಿ ಕುಲದ ಭಕ್ತನಾದರೂ ತನ್ನ ಹೆಸರಿನ ಲಿಂಗವನ್ನು ಸ್ಥಾಪಿಸಿ ಕಾಳಾಮುಖ ಗುರುಗಳನ್ನು ಪೂಜೆಗೆ ನೇಮಿಸಬಹುದಿತ್ತು. ವ್ಯಕ್ತಿ, ಕುಲ, ವೃತ್ತಿಗಳ ಹೆಸರಿನ ನೂರಾರು ಲಿಂಗಗಳು ಮಠ ಮಂದಿರಗಳು ಸ್ಥಾಪನೆಯಾದವು. ಮಾದಿಗರು ಮಾತಂಗೇಶ್ವರ, ವ್ಯಾಪರಸ್ಥರು ಗವರೇಶ್ವರ, ನಕರೇಶ್ವರ, ನಗರೇಶ್ವರ, ಕುಂಬಾರರು ಕುಂಬೇಶ್ವರ ಮೊದಲಾದ ಲಿಂಗ ದೇಗುಲಗಳನ್ನು ನಿರ್ಮಿಸಿದರೆ, ಕ್ಷೌರಿಕ ದೋರ ದೋರೇಶ್ವರ, ರಾಜ ಸಾಮಂತರು ಅಜ್ಜಮೇಶ್ವರ, ವಿಜಯಾದಿತ್ಯ ಭಟಾರಕ, ಲೋಕೇಶ್ವರ, ಸಿಡಿಲೇಶ್ವರ, ಕೊಂಬೇಶ್ವರ, ನಾಗಲೇಶ್ವರ ಮೊದಲಾದ ಲಿಂಗ ದೇಗುಲಗಳನ್ನು ಸ್ಥಾಪಿಸಿದರು. ಇದು ಮಧ್ಯಯುಗದ ಕರ್ನಾಟಕದ ಊಳಿಗಮಾನ್ಯ ಕಾಲದ ಸ್ಥಿತಿ ಇನ್ನೂ ಹಿಂದಕ್ಕೆ ಹೋದರೆ ಹಿಡಿಂಬ ರಾಕ್ಷಸ ಹಿಡಿಂಬೇಶ್ವರ (ಉಚ್ಚಂಗಿ ದುರ್ಗದ ಶಾಸನ ಕ್ರಿ.ಶ| ೧೦೬೪ S.I.I. IX-I) ಅಂಧಾಸುರನು ಅಂಧಾಸುರದೇವರು (ಹೂಲಿ), ಮದನಾಸುರನು ಮದನಾಸುರದೇವರು (‘ಮಧುರಚನ್ನದ ಲೇಖನಗಳು’ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪುಟ – ೨೦) ಮಾಲಿ, ಸುಮಾಲಿ ಎಂಬ ರಾಕ್ಷಸರು ಸೊಗಲದಲ್ಲಿ ಸುವರ್ಣಾಕ್ಷ ದೇವರನ್ನು (Selected Kannada Inscriptions : M.M. Bhat. ಮದ್ರಾಸ್ ವಿ.ವಿ. ೧೯೫೨) ಸ್ಥಾಪಿಸಿದರೆಂಬುದಕ್ಕೆ ಶಾಸನಾಧಾರಗಳಿವೆ. ಮೌಖಿಕ ಮಹಾಕಾವ್ಯದ ‘ಚಾಮುಂಡಿ ಕವಟ್ಲಿ’ನಲ್ಲಿ ಶಿವ ಪಾರ್ವತಿಯ ಜತೆ ಮೈಸೂರಿಗೆ ಬಂದಾಗ ಮೈಸಾಸುರ, ಐಸಾಸುರರ ಹಾವಳಿ ಹೆಚ್ಚಿತ್ತೆಂಬ ವಿಷಯವಿದೆ. ಪಾರ್ವತಿ ಅವರನ್ನು ಕೊಲ್ಲಲು ಹೇಳಿದಾಗ ಶಿವ, ಇವರು ತನ್ನಿಂದ ವರ ಪಡೆದವರು, ಇವರನ್ನು ಕೊಂದರೆ ತನ್ನ ಮಕ್ಕಳನ್ನೇ ಕೊಂದಂತಾಗುತ್ತದೆ ಎಂದು ನಿರಾಕರಿಸುತ್ತಾನೆ.

ಇತಿಹಾಸಪೂರ್ವ ಯುಗದ ಕರ್ನಾಟಕದಲ್ಲಿ ರಾಕ್ಷಸರು ಲಿಂಗಗಳನ್ನು ಸ್ಥಾಪಿಸುತ್ತಿದ್ದರು. ವೈದಿಕರ ಪ್ರಭಾವ ಶಿಷ್ಟ ಪರಂಪರೆ ಆದಿಮ ಜನರನ್ನು ರಾಕ್ಷಸರೆಂದಿದೆ. ನನ್ನ ಪ್ರಕಾರ ಇವರು ಹೊಲೆಯರು, ಇಲ್ಲವೆ ಮಾದಿಗರು. ಆದಿಮ ಶಾಕ್ತ, ಶೈವ ಪಂಥಗಳಲ್ಲಿ ಕೆಲವು ಗುಂಪು ಶಕ್ತಿ ಆರಾಧಾಕರು. ಇನ್ನು ಕೆಲವು ಶಿವಾರಾಧಕರು. ಇವುಗಳ ಸಮ್ಮಿಲನವೇ ಪೀಠವಿರುವ ಲಿಂಗ. ಇವು ಯೋನಿ ಶಿಶ್ನಗಳ ಐಕ್ಯತೆಯ ಸಂಕೇತವೆಂದು ಆಗಲೇ ವಿದ್ವಾಂಸರು ಗುರುತಿಸಿದ್ದಾರೆ. ಹೊಲೆಯರ ‘ಲಿಂಗ’ ಮುಂದೆ ಪಶುಪಾಲಕ ದ್ರಾವಿಡರ ಶಿವನ (ಮೈಲಾರ, ಮಲ್ಲಯ್ಯ, ಗಿರಿಯಪ್ಪ, ಬೆಟ್ಟಪ್ಪ ಇತ್ಯಾದಿ) ಜತೆ ಸಮೀಕರಣಗೊಂಡಿರುವಂತಿದೆ. ದ್ರಾವಿಡ ಪರಂಪರೆ ಪದ್ದತಿಗಳ ಸರಿಯಾದ ಅಧ್ಯಯನ ಮಾಡಿದರೆ ‘ಲಿಂಗ’ ಶಿವನಲ್ಲ. ಯಾವುದೇ ಜಾತಿಯ ಸ್ತ್ರೀ ಅಥವಾ ಪುರುಷ ಜೀವಂತವಿದ್ದಾಗ ಅಥವಾ ಸತ್ತ ನಂತರ ಪಡೆಯುವ ದೈವೀಸ್ಥಿತಿಯ ಸಂಕೇತವಾಗಿತ್ತು. ಲಿಂಗಸ್ಥಾಪನೆಯಲ್ಲಿ ವರ್ಗ, ಜಾತಿ, ಲಿಂಗಭೇದವನ್ನು ತಿರಸ್ಕರಿಸಲಾಗಿತ್ತು. ಅಂದರೆ ಈ ಪ್ರಬಂಧದ ಪ್ರಾರಂಭದಲ್ಲಿ ಹೇಳಿದ ದ್ರಾವಿಡ ಗುರು ಪರಂಪರೆಯ ಆಶಯಕ್ಕೇ ಮರಳುತ್ತೇವೆ. ಗಮನಾರ್ಹವಾದ ಒಂದಂಶವೆಂದರೆ ಸ್ತ್ರೀಯರೂ ಈಶ್ವರ ಆಗಬೇಕಿತ್ತೆಂಬುದು. ಇದು ಮಾತೃ ಪಂಥಕ್ಕೆ ತದ್ವಿರುದ್ಧವಾದ ಆಚರಣೆ. ಸ್ತ್ರೀ ದೈವ ಮೂಲದ ಶಾಕ್ತ, ತಾಂತ್ರಿಕ ಮತಗಳ ಚರ್ಚೆ ಇಲ್ಲಿ ಅಪ್ರಸ್ತುತ.

ಶೈವ ಮತದ ಬಗ್ಗೆ ಹೇಳುವುದಾದರೆ, ಆದಿಶೈವ, ಮಹಾಶೈವ, ಅನುಶೈವ, ಅವಾಂತರಶೈವ, ಪ್ರವರಶೈವ, ಅಂತ್ಯಶೈವ, ಕಾಪಾಲಿಕ, ಕಾಳಾಮುಖ, ಲಾಕುಳ, ಕಾಶ್ಮೀರಶೈವ, ವೀರಶೈವ, ತಮಿಳುಶೈವ, ಪಾಶುಪತ ಮೊದಲಾದ ಅನೇಕ ಪ್ರಭೇದಗಳು ಲಿಖಿತ ಪರಂಪರೆಯಲ್ಲಿ ದಾಖಲಾಗಿವೆ. ಇವೆಲ್ಲ ಬಹುತೇಕ ವೈದಿಕೀಕರಣ ಪ್ರಕ್ರಿಯೆಗೆ ತುತ್ತಾದವು. ನಿದರ್ಶನಕ್ಕೆ ಸೂಕ್ಷ್ಮಾಗಮದ ಈ ಮಾತುಗಳನ್ನು ಗಮನಿಸಿ (ಅನುವಾದ) ಕೌಶಿಕ, ಕಾಶ್ಯಪ, ಭಾರದ್ವಾಜ, ಅತ್ರಿ, ಗೌತಮ ಈ ಋಷಿ ವಂಶಜರು ದ್ವಿಜರು, ಆದಿಶೈವರು, ಕ್ಷತ್ರಿಯರು, ಮಹಾಶೈವರು, ವೈಶ್ಯರು ಅನುಶೈವರು, ಶೂದ್ರರು ಅವಾಂತರ ಶೈವರು, ಕುಂಬಾರ ಮೊದಲಾದವರು ಪ್ರವರ ಶೈವರು. ಅಂತ್ಯಜರು ಅಂತ್ಯಶೈವರು. ಇವರೆಲ್ಲರಿಗೂ ದೀಕ್ಷೆ ಇದೆ. ಸಿದ್ಧಾಂತ ಶಿಖಾಮಣಿಯ ಪ್ರಕಾರ ಶಕ್ತಿಪರವಾದುದು ವಾಮ, ಭೈರವಪರವಾದುದು ದಕ್ಷಿಣ; ಸಪ್ತಮಾತೃಕಾ ಪರವಾದುದು ಮಿಶ್ರ, ಪರಶಿವಪರವಾದುದು ಸಿದ್ಧಾಂತ. ಕಾಮಿತಾದಿ ಮಹಾತಂತ್ರಗಳು ಸಿದ್ಧಾಂತಗಳು ಇತ್ಯಾದಿ.