ಕ್ರಿ.ಶ. ೧೮೦೦ರ ಹೊತ್ತಿಗೆ ಸರ್ ವಾಲ್ಟರ್ ಸ್ಕಾಟ್‌ನ ಶಿಷ್ಯನಾದ ಜಾನ್ ಲೇಡನ್ (John Laden) ನಿಂದ ಆರಂಭಗೊಂಡ ಕನ್ನಡ ಜನಪದ ಸಂಗ್ರಹ-ಸಂಪಾದನಾ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ಹಲಸಂಗಿ ಸೋದರರ ಗರತಿಯ ಹಾಡು ಕೃತಿಯಿಂದ ಜನಪದ ಮಹಾಭಾರತದವರೆಗೆ ಸಂಗ್ರಹ ಸಂಪಾದನೆ ಕಾರ್ಯ ಅಡೆತಡೆಯಿಲ್ಲದೆ ನಡೆದಿದೆ. ಆರಂಭದ ದಿನಗಳಲ್ಲಿ ಕ್ಷೇತ್ರಕಾರ್ಯದ ಫಲಪ್ರಾಪ್ತಿಯನ್ನು ಸಂಗ್ರಾಹಕರಿಗೆ ತೋಚಿದಂತೆ ಸಂಪಾದನೆ ಮಾಡುತ್ತಿದ್ದರು. ಆದರೆ ಜನಪದ ಒಂದು ಶಿಸ್ತುಬದ್ಧ ಅಧ್ಯಯನಕ್ಕೆ ಒಳಪಟ್ಟ ಮೇಲೆ, ಜೊತೆಗೆ ಪಾಶ್ಚಾತ್ಯ ಸಂಪಾದನಾ ರೀತಿ-ನೀತಿಗಳ ಪರಿಚಯವಾದ ಮೇಲೆ, ಸಂಗ್ರಹಿತ ವಸ್ತುವನ್ನು ನಿಯಮಬದ್ಧವಾಗಿ ಕ್ರಮವರಿತು ಸಂಪಾದಿಸಲು ಆರಂಭಿಸಿದರು. ಹಾಗಿದ್ದರೂ ಒಂದು ಜನಪದ ಕೃತಿಯನ್ನು ಹೀಗೆಯೇ ಸಂಪಾದಿಸಬೇಕೆಂಬ ಕಟ್ಟುಪಾಡಿಗೆ ಒಳಪಟ್ಟು ಯಾವ ಸಂಗ್ರಾಹಕರೂ ಸಂಪಾದಿಸಿದ್ದಿಲ್ಲವೆಂಬುದೂ ಗಮನಿಸತಕ್ಕದ್ದೆ. ಹೀಗೆಯೇ ಸಂಪಾದಿಸಬೇಕೆಂಬ ಕಟ್ಟುಪಾಡು ಕೂಡ ಇರಲಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಒಂದು ಜನಪದ ಕೃತಿ ನಿಂತುಕಳ್ಳಬೇಕಾದರೆ ಅದಕ್ಕೆ ಒಂದು ಸಾರ್ವತ್ರಿಕ ಚೌಕಟ್ಟಿನ ಬದ್ಧತೆಯ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಜನಪದ ಕೃತಿಗಳ ಸಂಪಾದನಾ ವಿಧಾನವನ್ನು ವ್ಯಾಖ್ಯಾನಿಸಬೇಕಾಗುತ್ತದೆ; ವಿಮರ್ಶಗೆ ಒಡ್ಡಬೇಕಾಗುತ್ತದೆ. ಜನಪದ ಮಹಾಕಾವ್ಯಗಳನ್ನಂತೂ ತೌಲನಿಕ ಅಧ್ಯಯನಕ್ಕೆ ಒಳಪಡಿಸುವ ಅನಿವಾರ್ಯತೆ ತುರ್ತಾಗಿ ಇದೆ. ಮಹಾಕಾವ್ಯಗಳ ಸಂಪಾದನಾ ರೀತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಇದರಿಂದ ಮಹಾಕಾವ್ಯಗಳಿಗೆ ಜಾಗತಿಕ ಮನ್ನಣೆ ಪ್ರಾಪ್ತವಾಗುತ್ತದೆ.

ಒಂದು ರಾಷ್ಟ್ರದ ಸಮಷ್ಟಿ ಪ್ರಜ್ಞೆಯ ಪ್ರತಿನಿಧಿಯಾಗಿ ಆ ರಾಷ್ಟ್ರದ ಔನ್ನತ್ಯದ ಸಂಕೇತವಾಗಿ ಆವಿರ್ಭವಿಸುವ ಕೃತಿ ವಿಭೂತಿಯನ್ನು ನಾವು ‘ಮಹಾಕಾವ್ಯ’ ಎಂದು ಕರೆಯುತ್ತೇವೆ. ಈ ಕೃತಿ ಏಕ ಕವಿಕೃತವಾಗಿರದೆ ಸಮಷ್ಟಿಕೃತವಾಗಿರುವುದರಿಂದ ಇದನ್ನು ‘ಜನಪದ ಮಹಾಕಾವ್ಯ’ ಎಂದು ಕರೆಯುತ್ತೇವೆ[1]

ಮಹಾಕಾವ್ಯಕ್ಕೆ Epic ಎಂಬ ಗ್ರೀಕ್ ಪದವನ್ನೇ ಇಂಗ್ಲೀಷ್ ತೆಗೆದುಕೊಂಡಿದೆ. Epic ಎಂಬ ಶಬ್ದಕ್ಕೆ Epopee ಎಂಬ ಪ್ರಯೋಗವೂ ಉಂಟು. Epos-Epikos ಅಂದರೆ Oral recitation or song ಎಂಬ ಅರ್ಥವಿದ್ದು ಇದು ಜನಪದ ಮಹಾಕಾವ್ಯದ ಒಂದು ಬಗೆಯ ಉದ್ಭವ ಸೂಚಕ ಉಗಮಾಂತರ್ಗತ ಪದವಾಗಿದೆ. ವಾಚಿಕ ಪರಂಪರೆಯ ಕೃತಿರೂಪದ ಸೂಚನೆಯಾಗಿದೆ.

ಮಹಾಕಾವ್ಯಗಳನ್ನು ಅಧ್ಯಯನತಜ್ಞರು Tribal Epic, National Epic, Literary Epic ಮತ್ತು Flok Epic ಎಂದು ವಿಂಗಡಿಸಿದ್ದಾರೆ. ಬಹುಕವಿಕೃತವಾದ Folk Epic ಅನ್ನು Epic ಅನ್ನು Epic of Growth ಎಂಬ ವರ್ಗಕ್ಕೆ ಸೇರಿಸುವುದು ಔಚಿತ್ಯಪೂರ್ಣವಾಗಿದ್ದರೂ, ಇದರಲ್ಲಿ ವೀರಕಾವ್ಯಗಳೇ ಹೆಚ್ಚಾಗಿ ಕಂಡುಬರುವುದರಿಂದ ಇವನ್ನು Heroic Epic ಎಂದು ಕರೆದಿದ್ದಾರೆ. ಏಕಕವಿಕೃತವಾದ ಮಹಾಕಾವ್ಯವನ್ನು Epic of Art ವರ್ಗಕ್ಕೆ ಸೇರಿಸಿದ್ದಾರೆ. ಇದರಲ್ಲಿ ಕವಿ ತನ್ನ ಇಡೀ ಜನಾಂಗದ ಬದುಕನ್ನು ತನ್ನ ಕಾವ್ಯದ ಕಲಾವಲಯ ಕ್ಷೇತ್ರದಲ್ಲಿ ಸಂಚರಿಸುವಂತೆ ಮಾಡುತ್ತಾನೆ. ಜನತೆಯ ಆಸೆ, ಆಕಾಂಕ್ಷೆ, ಅಭೀಪ್ಸೆ ಹಾಗೂ ಮನೋಧರ್ಮಗಳ ಝರಿಗಳು, ತೊರೆಗಳು, ಹೊಳೆಗಳು, ನದಿಗಳು ಎಲ್ಲವೂ ಕವಿಯ ಹೃದಯಸಾಗರದಲ್ಲಿ ಸಂಗಮವಾಗಿ ಅವನ ಕಾವ್ಯದಲ್ಲಿ ಆ ಸಮಷ್ಟಿ ಪ್ರಜ್ಞೆಯನ್ನು ಪ್ರತಿನಿಧಿಸಿದಾಗ ಆ ಕಾವ್ಯಗಳು ಜಗದ್ಭವ್ಯ ಮೇರುಕೃತಿಯಾಗಿ ಮೆರೆಯುತ್ತವೆ.[2] ಮಹಾಕವಿಯಾದವನು ಧರ್ಮ, ನೀತಿ, ನ್ಯಾಯ ಮುಂತಾದ ಧಾರ್ಮಿಕ, ನೈತಿಕ, ದಾರ್ಶನಿಕ ಹಾಗೂ ರಾಜಕೀಯ ವಿಚಾರಗಳನ್ನು ತನ್ನ ಕಾವ್ಯ ಮಾಧ್ಯಮದಲ್ಲಿ ತಿಳಿದೋ ತಿಳಿಯದೆಯೋ ಸಾಕಾರಗೊಳಿಸಲು ಪ್ರಯತ್ನಿಸುತ್ತಾನೆ. ಜನಪದ ಕವಿ ಕೂಡ ಇದೇ ಕೆಲಸವನ್ನು ಮಾಡುತ್ತಾನೆ. ಆದರೆ ಇದು ಬಾಯಿಂದ ಬಾಯಿಗೆ ಬೆಳೆಯುತ್ತ ಘಟನಾವಳಿಗಳನ್ನು ಮೈಗೂಡಿಸಿಕೊಳ್ಳುತ್ತಾ ಅನಾಯಾಸವಾಗಿ ಹುತ್ತದಂತೆ ಮೈಚಾಚಿಕೊಂಡು ಬೆಳೆಯುವ ಗುಣಲಕ್ಷಣಗಳಿಂದಾಗಿ ಜನಪದ ಮಹಾಕಾವ್ಯವನ್ನು  Accretion Epic ಎಂದು ಕರೆಯುತ್ತಾರೆ. Primative Epic, Oral Epic, Inventive Epic ಎಂದೆಲ್ಲಾ ಕರೆಯಲ್ಪಡುವ ಇದೇ ನೀಜವಾದ ಮಹಾಕಾವ್ಯ ಮತ್ತು ಸಹಜವಾದ ಮಹಾಕಾವ್ಯ.

ಕರ್ನಾಟಕದ ವ್ಯಾಪ್ತಿಯಲ್ಲಿ ಇಂದು ಹತ್ತಾರು ಜನಪದ ಮಹಾಕಾವ್ಯಗಳು ಲಭ್ಯವಿವೆ. ಮಲೆಯ ಮಾದೇಶ್ವರ, ಮಂಟೇಸ್ವಾಮಿ ಮಹಾಕಾವ್ಯ, ಜನಪದ ಹಾಲುಮತದ ಪುರಾಣ, ಜುಂಜಪ್ಪ, ಜನಪದ ಮಹಾಭಾರತ, ಮೈಲಾರಲಿಂಗನ ಕಾವ್ಯ ಇತ್ಯಾದಿ. ಇವುಗಳಲ್ಲಿ ಮಲೆಯ ಮಾದೇಶ್ವರ ಮಹಾಕಾವ್ಯ ಮೊತ್ತಮೊದಲಿಗೆ ಸಂಪಾದಿತವಾದ ಜನಪದ ಮಹಾಕಾವ್ಯ. ೧೯೭೩ರಲ್ಲಿ ಡಾ.ಪಿ.ಕೆ. ರಾಜಶೇಖರ ಮಲೆಯ ಮಾದೇಶ್ವರ ಎಂಬ ಹೆಸರಿನಲ್ಲಿ ಈ ಜನಪದ ಮಹಾಕಾವ್ಯವನ್ನು ಕನ್ನಡಿಗರಿಗೆ ಸಂಪಾದಿಸಿಕೊಟ್ಟಿದ್ದಾರೆ. P.K. Rajashekhara was the first to collect and publish this narrative. Having A.F. Hilferding’s compilation of Bilini, the folk epic of central Asia, as his model. Rajashekhara got together ten different singers of this epic, and bringing together the ‘best’ versions of each singer, he have a form of his own to the epic, and with a long introduction published it in two volumes in 1973. Both the volumes put together, this version runs to approximately 30,000 lines[3]

ರಾಷ್ಟ್ರೀಯ ಮಹಾಕಾವ್ಯಗಳ ಸಾಲಿಗೆ ಸೇರಿಸಬಹುದಾದ ಡಾ. ಪಿ.ಕೆ. ರಾಜಶೇಖರ ಅವರ ಮಲೆಯ ಮಾದೇಶ್ವರ ಮಹಾಕಾವ್ಯ ಗಾತ್ರದಲ್ಲಿ ಹೆಚ್ಚು ಕಡಿಮೆ ಫಿನ್‌ಲ್ಯಾಂಡಿನ ಕಲೇವಾಲ (Kalevala) ಕ್ಕಿಂತಲೂ ದೊಡ್ಡದಾಗಿದೆ.  ಈ ಮಹಾಕಾವ್ಯದ ಪ್ರತಿಯೊಂದು ಕಥನಭಾಗವನ್ನು ‘ಸಾಲು’ ಎನ್ನಲಾಗಿದೆ. ಏಕಘಟನಾತ್ಮಕವಾದ ಈ ‘ಸಾಲು’ಗಳನ್ನು ಲಾವಣಿ (ಖಂಡಕಾವ್ಯ) ಎಂದೂ ಕರೆಯಬಹುದು. ಡಾ. ರಾಗೌ ಅವರು ಇದನ್ನು Ballad Epic ಎಂಬ ಅರ್ಥದಲ್ಲಿ ‘ಲಾವಣಿಗಳ ಸರಣೀ’ ಅಥವಾ ‘ಲಾವಣಿ ಮಹಾಕಾವ್ಯ’ ಎಂದು ಕರೆದಿದ್ದಾರೆ. ಏಕೆಂದರೆ ಈ ಮಹಾಕಾವ್ಯದಲ್ಲಿ ಒಟ್ಟು ಹದಿನಾಲ್ಕು ಕಥಾಭಾಗಗಳು ಮೇಳೈಸಿವೆ. ‘ಮಲೆಯ ಮಾದೇಶ್ವರ’ದ ಯಾವುದೇ ‘ಸಾಲ’ನ್ನು ಅಥವಾ ಕಾವ್ಯವನ್ನು ‘ಲಾವಣಿ’ ಎಂದು ಕರೆಯುವುದು ಸರಿಯಲ್ಲ. ಇವೆಲ್ಲ ಲಾವಣಿ ಛಂದಸ್ಸಿಗೆ ಭಿನ್ನವಾದ ದೀರ್ಘ ಕಥಾನಕಗಳು.

ಕನ್ನಡ ನಾಡಿನ ಮಹಾಮಹಿಮನಾದ, ಪ್ರಭಾವಶಾಲಿ ವ್ಯಕ್ತಿತ್ವವನ್ನು ಪಡೆದಿದ್ದ ಮಲೆಯ ಮಾದೇಶ್ವರ ಒಬ್ಬ ಐತಿಹಾಸಿಕ ವ್ಯಕ್ತಿ. ಆದರೆ ಆತನ ಕಾಲದ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ. ಒಟ್ಟಿನಲ್ಲಿ ಮಾದೇಶ್ವರ ಉತ್ತರ ದೇಶದಿಂದ ದಕ್ಷಿಣಕ್ಕೆ ಬಂದು ಕುಂತೂರು ಮಠಾಧಿಪತಿಗಳಿಂದ ಲಿಂಗದೀಕ್ಷೆ ಪಡೆದು, ಆನುಮಲೆ, ಜೇನುಮಲೆ, ಗುಂಜಿಮಲೆ, ಗುರುಗಂಜಿಮಲೆ, ಕಾನುಮಲೆ, ಕಂಬತ್ತಿಮಲೆ, ಕಡುದಾಕ್ಷಿಮಲೆ, ಪದುಮಮಲೆ, ಪಚ್ಚಮಲೆ, ಪೂಜೆಮಲೆ, ಪೊನ್ನಾಚಿಮಲೆ, ಕೊಂಗುಮಲೆ, ಭಸುಮಂಗಮಲೆ, ಗಾಳಿಮಲೆ, ಗೌಳಮಲೆ, ನಾಗಮಲೆ, ನಡುಮಲೆ ಹೀಗೆ ಎಪ್ಪತ್ತೇಳು ಮಲೆಗಳನ್ನು ಸಂಚರಿಸಿ ನಡುಮಲೆಯಲ್ಲಿ ನೆಲೆಗೊಂಡು ಭಕ್ತಾದಿಗಳ ಮನಗೆದ್ದು ತನ್ನ ಭಕ್ತರನ್ನಾಗಿಸಿಕೊಂಡು ಸಾಲೂರು ಮಠವನ್ನು ಕಟ್ಟಿ, ಶ್ರವಣ ದೊರೆಯನ್ನು ಸಂಹಾರ ಮಾಡಿ ಏಳುಮಲೆಯಲ್ಲಿ ನೆಲೆಗೊಂಡು ಪೂಜಿತನಾಗುತ್ತಾನೆ.

ಮಲೆಯ ಮಾದೇಶ್ವರ ಒಕ್ಕಲ್ಲ (cult) ಪಡೆಯಲು ಅನೇಕ ಪವಾಡಗಳನ್ನು ಮೆರೆಯುತ್ತಾನೆ. ಆ ಪವಾಡಗಳನ್ನು ಜನಪದ ವೃತ್ತಿಗಾಯಕರು ಕಂಸಾಳೆ ವಾದ್ಯದೊಂದಿಗೆ ಹಾಡಿ ಜನಮನವನ್ನು ಗೆದ್ದು ಒಂದು ಮಹಾಕಾವ್ಯ ನಿರ್ಮಿತಿಗೆ ಕಾರಣರಾಗುತ್ತಾರೆ. ‘ಕಾಂಸ್ಯತಾಲ’ ಎಂಬ ಸಂಸ್ಕೃತ ಪದದ ತದ್ಭವ ರೂಪ ಕಂಸಾಳೆ. ಕಂಸಾಳೆ ಕಂಚಿನಿಂದ ಮಾಡಿದ ಅಂಗೈ ಅಗಲದ ಒಂದು ಬಟ್ಟಲು. ಅದಕ್ಕೊಂದು ಕಂಚಿನ ತಟ್ಟೆಯಾಕಾರದ ಮುಚ್ಚಳ. ಇದು ಸುಮಾರು ಹತ್ತು ಸೆಂಟಿಮೀಟರ್ ವ್ಯಾಸದ್ದಾಗಿರುತ್ತದೆ. ಇದರ ಮಧ್ಯೆ ಸ್ವಲ್ಪ ಉಬ್ಬಿದ ಭಾಗವಿದ್ದು, ಅಲ್ಲಿ ಒಂದು ರಂಧ್ರವಿರುತ್ತದೆ. ಅದಕ್ಕೆ ಬಣ್ಣ ಬಣ್ಣದ ದಾರಗಳನ್ನ ಜೋಡಿಸಿ, ಗಗ್ಗರ ಹಾಗೂ ಐದಾರು ಗೊಂಡೆಗಳಿಂದ ಅಲಂಕಾರ ಮಾಡಿ ಬಲಗೈಲಿ ಹಿಡಿದುಕೊಂಡು ಎಡಗೈನ ಬಟ್ಟಲಿನ ಮೇಲೆ ಬಡಿದರೆ ಕಂಚಿನ ‘ಕಣಿಕಣಿ’ನಾದ ಹೊರಹೊಮ್ಮುತ್ತದೆ. ತಮ್ಮ ಹಾಡಿನ ಮೋಡಿಗೆ ತಕ್ಕಂತೆ ಕಂಸಾಳೆಯನ್ನು ನುಡಿಸುತ್ತ ಮಾದೇಶ್ವರನ ಕತೆ ಮಾಡುವವರನ್ನು ದೇವರ ಗುಡ್ಡರು ಎಂದು ಕರೆಯುತ್ತಾರೆ. ಇವರು ಮಾದೇಶ್ವರನ ಹೆಸರಿನಲ್ಲಿ ದೀಕ್ಷೆ ಪಡೆದು ಕ್ವಾರಣ್ಯ (ಭಿಕ್ಷೆ) ಮಾಡಿ, ಮಾದೇಶ್ವರನ ಚರಿತ್ರೆಯನ್ನು ಹಾಡಿ ಹೊಗಳುತ್ತಾ ‘ಗುಡ್ಡನ’ ಜೀವನವನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ.

ಮಾದೇಶ್ವರನ ಗುಡ್ಡರಲ್ಲಿ ಹೆಚ್ಚಿನವರು ಮಾದೇಶ್ವರ ಸ್ವಾಮಿಯ ಇಡೀ ಚರಿತ್ರೆಯನ್ನು ಹಲವಾರು ರಾತ್ರಿಗಳು ಹಾಡುತ್ತಾರೆ. ಅವರವರ ಗುರುಪರಂಪರೆಯಲ್ಲಿ ಅವರ ಕಲ್ಪನಾ ಕೌಶಲ್ಯವನ್ನು ಮರೆಯುತ್ತ ಮೂಲಕಥೆಗೆ ಅನೇಕ ಘಟನೆಗಳನ್ನು ಸೇರಿಸುತ್ತ, ಸಭೆಯ ಶ್ರೋತೃಗಳ ಅಭಿಲಾಷಥೆಗೆ ಅನುಗುಣವಾಗಿ ಕಥಾಭಾಗವನ್ನು ಹಿಗ್ಗಿಸಿ ಅಥವಾ ಕುಗ್ಗಿಸಿ ಹಾಡುತ್ತಾರೆ.

ಡಾ. ಕೆ. ಕೇಶವನ್ ಪ್ರಸಾದರು ಹೆಬ್ಬಣಿ ಮಾದಯ್ಯನಿಂದ ಸಂಗ್ರಹಿಸಿರುವ ಮಲೆ ಮಾದೇಶ್ವರ ಕಾವ್ಯದಲ್ಲಿ ಮುಖ್ಯವಾಗಿ ‘ಸಾಲು’ (ಘಟಕ)ಗಳಿವೆ. ಆದರೆ ಡಾ.ಪಿ.ಕೆ. ರಾಜಶೇಖರ ಅವರ ಮಲೆಯ ಮಾದೇಶ್ವರ ಮಹಾಕಾವ್ಯದಲ್ಲಿ ಒಟ್ಟು ಹದಿನಾಲ್ಕು ಸಾಲುಗಳು ಮತ್ತು ಬಿಡಿಹಾಡುಗಳ ಎರಡು ಭಾಗಗಳು ಇವೆ.

೧. ಮಂಗಳ ಮೈಮ ಮಾದೇವ (ಬಿಡಿ ಹಾಡುಗಳು)

೨. ಆದಿಸಕ್ತಿ ಮಾದಪ್ಪನ ಸಾಲು

೩. ಹುಟ್ಟಿ ಬೆಳೆದ ಸಾಲು

೪. ಬೇಡರ ಕನ್ನಯ್ಯನ ಸಾಲು

೫. ಶ್ರವಣದೊರೆ ಸಾಲು

೬. ಇಕ್ಕೇರಿ ದೇವಮ್ಮನ ಸಾಲು

೭. ಆಲಂಬಾಡಿ ಜುಂಜೇಗೌಡನ ಸಾಲು

೮. ಸಂಕಮ್ಮನ ಸಾಲು

೯. ದುಂಡಮ್ಮನ ಸಾಲು

೧೦. ಬೇವುನ್ಹಟ್ಟಿ ಕಾಳಮ್ಮನ ಸಾಲು

೧೧. ಸರಗೂರಯ್ಯನ ಸಾಲು

೧೨. ಪಂಚಲಿಂಗ ಮಾದಪ್ಪನ ಸಾಲು

೧೩. ಕಾರಯ್ಯ-ಬಿಲ್ಲಯ್ಯರ ಸಾಲು

೧೪. ನಾಗುಮಲೆಯಲ್ಲಿ ನೆಲೆಗೊಂಡ ಸಾಲು

೧೫. ದುರ್ಗದ ಮಲ್ಲಮ್ಮನ ಸಾಲು

ಮತ್ತು ೧೬ ಮಂಗಳಾರ್ತಿ ಮಾದೇವನಿಗೆ (ಕಿಲಲಿಯೊ ಪದಗಳು, ಬಿಡಿಹಾಡುಗಳು, ವಾಲುಗೆ ಪದಗಳು, ನೆನೆವಾರ‍್ತೆಗಳು ಮತ್ತು ಮಂಗಳಾರ್ತಿ ಪದಗಳು)

ಈ ಒಂದೊಂದು ಸಾಲೂ ಒಂದು ಅಥವಾ ಎರಡು ರಾತ್ರಿಯ ಅವಧಿಯಲ್ಲಿ ಹಾಡಬಹುದಾದ ವಿಸ್ತಾರವಾದ ಕಥಾನಕಗಳು. ಕೆಲವು ಸಾಲುಗಳು ಒಂದು ರಾತ್ರಿಯ ಸಮಯದಲ್ಲಿ ಮೊದಲೇ ಮುಗಿಯುವಂಥವು.

ಪಿ.ಕೆ. ರಾಜಶೇಖರ ಅವರು ವ್ಯಾಪಕವಾದ ಕ್ಷೇತ್ರಕಾರ್ಯ ನಡೆಸಿ ಸುಮಾರು ೪೦-೫೦ ಜನ ಗಾಯಕರಿಂದ ಈ ಕಾವ್ಯವನ್ನು ಸಂಗ್ರಹಿಸಿದ್ದಾರೆ. ಎಲ್ಲಾ ವಯೋಮಿತಿಯ, ಎಲ್ಲಾ ಜಾತಿಯ ಗಂಡು-ಹೆಣ್ಣುಗಳಿಂದ ಸಂಗ್ರಹಕಾರ್ಯ ಮಾಡಿದ್ದಾರೆ. ತಮಿಳಿನವರಿಂದಲೂ ಸಂಗ್ರಹಿಸಿದ್ದಾರೆ. ಈ ಎಲ್ಲಾ ಸಂಗ್ರಹಗಳನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ ಅವಿಗಳಿಗೆ ಕ, ಖ, ಗ, ಘ, ಚ ಮುಂತಾದ ಸಂಕೇತಗಳನ್ನು ನೀಡಿ ಅವುಗಳನ್ನು ವೈeಜಾನಿಕವಾಗಿ ಸಂಪಾದಿಸಿದ್ದಾರೆ. ಅತ್ಯುತ್ತಮ (the best) ವಾದ ಪಾಠಗಳನ್ನು ಆಯ್ಕೆ ಮಾಡಿಕೊಂಡು ಅವುಗಳಲ್ಲಿನ ಶ್ರೇಷ್ಠ ಘಟನೆಗಳನ್ನು ಉಳಿಸಿಕೊಂಡು ಒಂದು ಕ್ರಮದಲ್ಲಿ ವ್ಯವಸ್ಥಿತವಾಗಿ ಸಂಯೋಜಿಸಿ ಅದಕ್ಕೆ ಮಹಾಕಾವ್ಯದ ಆಕಾರವನ್ನು ತಂದುಕೊಟ್ಟಿದ್ದಾರೆ.

ಡಾ. ರಾಜಶೇಖರ್ ಮಹಾಕಾವ್ಯದ ಪಾಠ ಪರಿಷ್ಕರಣ ವಿಚಾರವಾಗಿ ತಮ್ಮ ಗುರುಗಳಾದ ಡಾ. ರಾಗೌ ಅವರ ಸಲಹೆಯಂತೆ ಶಿಷ್ಟ ಕೃತಿಗಳ ಗ್ರಂಥ ಸಂಪಾದನಾ ಕ್ರಮದ ನಿಯಮಗಳಿಗನುಗುಣವಾಗಿ ತಮ್ಮ ಮಲೆಯ ಮಾದೇಶ್ವರ ಜನಪದ ಮಹಾಕಾವ್ಯವನ್ನು ಸಂಪಾದಿಸಿದ್ದಾರೆ. ಇದಕ್ಕೆ ಮುನ್ನ ಅವರು Oral Epic of Central Asia ಎಂಬ ಗ್ರಂಥವನ್ನು ಅವಲೋಕಿಸಿ, A.F. Hilferding ಎಂಬುವರು ತಮ್ಮ Biliny ಎಂಬ ಮಹಾಕಾವ್ಯವನ್ನು ಸಂಪಾದಿಸಿರುವ ಕ್ರಮದಲ್ಲೇ ಮಲೆಯ ಮಾದೇಶ್ವರ ಕಾವ್ಯವನ್ನು ಸಂಪಾದಿಸಿದ್ದಾರೆ. ಹಿಲ್ ಫರ್ಡಿಂಗ್ ಅವರು ‘ಬೈಲಿನಿ’ ಎಂಬ ಜನಪದ ಮಹಾಕಾವ್ಯವನ್ನು ಹಲವಾರು ಗಾಯಕರಿಂದ ಹಾಡಿಸಿ ಎಲ್ಲರ ಪಾಠಗಳನ್ನು ಒಂದರೊಡನೊಂದನ್ನು ಬೆರಸಿ ಒಂದು ಸಮಗ್ರ ಪಾಠವನ್ನು ಸಿದ್ಧಗೊಳಿಸಿದ್ದಾರೆ. ಅಲ್ಲದೆ ಆಯಾ ಗಾಯಕರ ನಿರೂಪಣೆ, ಭಾಷೆ, ಶೈಲಿ ಮೊದಲಾದ ವೈಶಿಷ್ಟ್ಯಗಳನ್ನು ಕುರಿತು ಪ್ರಸ್ತಾವನೆಯಲ್ಲಿ ವಿವರಗಳನ್ನು ನೀಡಿದ್ದಾರೆ. ಅದನ್ನು ಮಾದರಿಯಾಗಿಟ್ಟುಕೊಂಡು ರಾಜಶೇಖರ್ ತಮ್ಮ ಮಲೆಯ ಮಾದೇಶ್ವರ ಮಹಾಕಾವ್ಯವನ್ನು ಸಂಪಾದಿಸುವಾಗ, ಯಾರ ಪಾಠ ಯಾವುದು ಎಂಬುದನ್ನು ಗುರುತಿಸುವ ಸಲುವಾಗಿ ಗಾಯಕರ ಪಾಠಗಳಿಗೆ ಕ, ಖ, ಗ, ಘ ಎಂದು ಸಂಕೇತಗಳನ್ನು ಕೊಟ್ಟಿದ್ದಾರೆ. ಪ್ರತಿಯೊಂದು ಪಾಠಗಳನ್ನು ಎಚ್ಚರಿಕೆಯಿಂದ ಓದಿ, ಯಾವ ಯಾವ ಪಾಠದಲ್ಲಿ ಯಾವ ಯಾವ ಭಾಗಗಳು ಎಲ್ಲೆಲ್ಲಿ ಬಂದಿವೆ; ಅವುಗಳ ವ್ಯತ್ಯಾಸಗಳೇನೆಂಬುದನ್ನು ಪಟ್ಟಿ ಮಾಡಿ; ಯಾವ ಯಾವ ಕಥಾ ಸನ್ನಿವೇಶಗಳು ಯಾವ ಯಾವ ಪಾಠದಲ್ಲಿ ಸಂಪೂರ್ಣವಾಗಿ ಬಂದಿವೆ ಎಂಬುದನ್ನು ಗುರುತು ಹಾಕಿಕೊಂಡು, ಅವುಗಳ ಪಟ್ಟಿಯನ್ನು ಒಂದರೊಡನೊಂದನ್ನು ತಾಳೆಹಾಕಿ, ಯಾವ ಯಾವ ಭಾಗ ಎಲ್ಲಿರಬೇಕೆಂಬುದನ್ನು ಅಧಿಕಾರಯುತವಾಗಿ ಮಾದೇಶ್ವರನ ಕಥೆಯನ್ನು ಹೇಳಬಲ್ಲ, ಕಾವ್ಯ ಸಾಧನೆಯಿರುವ ಕಲಾವಿದನಿಂದ ತಿಳಿದುಕೊಂಡು ಸಂಪಾದಿಸಿ ಮೂಲಮಾತೃಕೆಯನ್ನು ಸಿದ್ಧಪಡಿಸಿಕೊಟ್ಟಿದ್ದಾರೆ.

ಕಾವ್ಯದ ಕಥಾಬಾಗಗಳು, ಘಟನಾವಳಿಗಳು, ಸನ್ನಿವೇಶಗಳು ಬೆಳೆಯುತ್ತಾ ಸಾಗುವುದು ಜನಪದ ಸಾಹಿತ್ಯದ ಲಕ್ಷಣವಾದ್ದರಿಂದ ಮೂಲದ ಕಾವ್ಯ ಹೇಗಿದ್ದಿರಬಹುದೆಂಬ ಅರಿವಿನೊಂದಿಗೆ, ಶಿಷ್ಟ ಗ್ರಂಥದ ಸಂಪಾದನೆಯ ಸಂದರ್ಭದಲ್ಲಿ ಪ್ರಾಚೀನತಮ ಪ್ರತಿಯನ್ನು ಮೂಲವಾಗಿಟ್ಟುಕೊಳ್ಳುವಂತೆ ಉತ್ತಮ ಗಾಯಕನ ಪಾಠವನ್ನು ಪ್ರಧಾನವಾಗಿ ಇಟ್ಟುಕೊಂಡು ಅದರೊಂದಿಗೆ ಉಳಿದ ಪಾಠಗಳನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಹಾಗೆ ಮಾಡುವಾಗ ಕಥನ ವ್ಯತ್ಯಯ, ಉತ್ತಮ ನಿರೂಪಣೆ, ಸತ್ವಯುತ ಭಾಷೆ, ವಿಶೇಷವಾಗಿ ಬಳಕೆಯಾಗಿರುವ ಪದಪಂಜಗಳು, ಆಶಯಗಳು, ಶೈಲಿ, ಘಟನಾವಳಿಗಳು ಮುಂತಾದವನ್ನು ಎಚ್ಚರಿಕೆಯಿಂದ ಉಳಿಸಿಕೊಳ್ಳಲಾಗಿದೆ.

ಕ, ಖ, ಗ, ಘ ಇತ್ಯಾದಿ ಹೆಸರಿನಿಂದ ಕರೆದ ಎಲ್ಲಾ ಪಾಠಗಳನ್ನು ಓದಿ ಅವುಗಳಲ್ಲಿ ಪ್ರಮುಖವೂ, ಪ್ರಧಾನವೂ ಶ್ರೇಷ್ಠಾತಿಶ್ರೇಷ್ಠವೂ ಆದ ಪಾಠವನ್ನು ಗುರುತಿಸಿ ಅದನ್ನೇ ಪ್ರಧಾನ ಪಾಠವೆಂದು ಇರಿಸಿಕೊಂಡು, ಉಳಿದ ಪಾಠಗಳಲ್ಲಿನ ಉತ್ತಮ ನಿರೂಪಣೆಯ ಭಾಗಗಳನ್ನೂ, ಕಥಾ ಸನ್ನಿವೇಶಗಳನ್ನೂ ಮುರಿದು ಪ್ರಧಾನ ಪಾಠದೊಡನೆ ಸೇರಿಸಲಾಗಿದೆ. ಅಲ್ಲದೆ ಪ್ರತಿಯೊಂದು ಸಾಲಿನ ಉಪವಿಭಾಗವನ್ನು ‘ಕವಟ್ಲು ಎಂಬುದಾಗಿ ಕರೆಯಲಾಗಿದೆ. ಉದಾಹರಣೆಗೆ ‘ಬೇವಿನಟ್ಟಿ ಕಾಳಮ್ಮನ ಸಾಲಿ’’ನಲ್ಲಿ ಬೇವುನಕಾಳಿ ದರಬಾರದ ಕವಟ್ಲು, ದ್ಯಾವಾಜಮ್ಮನ ಭಕ್ತಿಕವಟ್ಲು, ಹಟಮಾರಿ ಕಾಳಮ್ಮನ ಕವಟ್ಲು, ಸತ್ಯಶರಣೆ ದೇವಾಜಮ್ಮನ ಕವಟ್ಲು, ದೇವಾಜಮ್ಮನನ್ನು ಉದ್ಧಾರ ಮಾಡಿದ ಕವಟ್ಲು. ಈ ಕವಟ್ಲುಗಳಲ್ಲಿ ಎಲ್ಲಾ ಪಾಠಗಳು ಚೆನ್ನಾಗಿದ್ದ ಕಡೆ ಪ್ರಧಾನ ಪಾಠವನ್ನು ಕಡೆಗಣಿಸಿ ಒಂದು ಪಾಠದೊಡನೆ ಮತ್ತೊಂದನ್ನು ಬೆರಸಿದ್ದು, ಬೆರಕೆಯಾದ ಭಾಗ ಯಾವ ಗಾಯಕನದು ಎಂದು ತಿಳಿಯುವ ಸಲುವಾಗಿ ಇಂಗ್ಲೀಷ್ ಸಂಖ್ಯೆಗಳನ್ನು ಅಡಿ ಟಿಪ್ಪಣಿಯಲ್ಲಿ ನೀಡಿ ಅವುಗಳ ಮುಂದೆ ಇಂತಹ ಹೆಸರಿನ ಪಾಠದ್ದೆಂದು ಸೂಚಿಸಲಾಗಿದೆ. ಉದಾ.

ಇತ್ಲಾಗೆ ಬಸವಣ್ಣ ಸರ್ಪಣ್ಣ ಎರಡೂ ಬಂದು
ಒಂತಾವೆ ನಿಂತ್ಕೊಂಡು “ಇಲ್ಲಿ ಮಾದೇವ ಸಿಕ್ನಿಲ್ವಲ್ಲ’’
ಅಂತ ಮಾತಾಡ್ಕೊಂಡು ಬತ್ತಿದ್ರೆ೧೪
ಏಳ್ಬಾಯಿ ಹೊನ್ನುತ್ತದಲ್ಲಿ
ಹುಟ್‌ಗಲ್ಗೆ ದ್ರಿಷ್ಟಿ ತುಂಬಿ
ಪಾತಾಳಲೋಕದಲ್ಲಿ ಗಂಗಾದೇವೀಗೆ
ಪಾದಪೂಜೆಯನ್ನು ಕೊಟ್ಕೊಂಡು
…………………………………….
ಒಡುದು ಮೂಡಿದಂತೆ ನಮ್ಮಪ್ಪಾಜಿ ಕಂಡು ೧೫
೧೬“ಇಲ್ಲೆ ಮರಿದೇವ್ರು’’ ಅಂತೇಳಿ
ಬಸವಣ್ಣುವೆ ಸರ್ಪಣ್ಣನೂವೆ ಬಂದ್ರವಲ್ಲ[4]

ಮೇಲಿನ ಸಾಲುಗಳು ಇರುವ ಪುಟದ ಅಡಿಟಿಪ್ಪಣಿಯಲ್ಲಿ ೧೪ (ಗ) ೧೫(ಘ) ೧೫(ಗ) ಎಂದು ಮುದ್ರಿಸುವ ಮೂಲಕ ಸ್ವೀಕೃತ ಪಾಠವನ್ನು ಹೇಳಿದೆ. ಈ ಕ್ರಮವನ್ನು ಮಲೆಯ ಮಾದೇಶ್ವರ ಮಹಾಕಾವ್ಯದಲ್ಲಿ ಬಳಸಿಕೊಳ್ಳಲಾಗಿದೆ.

(ಕ) ಪಾಠದ ಗಾಯಕನ ಆದಿಸಕ್ತಿ ಮಾದಪ್ಪನ ಸಾಲಿನ ಕತೆಯನ್ನು ಕೇಳಿದ (ಚ) ಪಾಠದ ಗಾಯಕ ‘ಎಡಗೈ ಬಲಗೈಯವರು ಹುಟ್ಟಿದ ಕವಟ್ಲು, ಬಿಟ್ಟುಹೋಗಿದೆ ಎಂದು ತಿಳಿಸಿದಾಗ (ಚ) ಪಾಠದ ಗಾಯಕನ ಕಥಾಭಾಗವನ್ನು (ಕ) ಪಾಠದ ಸಾಲಿನ ಕತೆಯ ಸರಣಿಯಲ್ಲಿ ಅಳವಡಿಸುವುದರ ಮೂಲಕ ಎಲ್ಲಾ ಪಾಠಗಳ ಉಪಯೋಗವನ್ನು ಈ ಸಂಪಾದನಾ ಕ್ರಮದಲ್ಲಿ ಕಾಣಬಹುದು. ಉದಾಹರಣೆಗೆ ಉತ್ತರಾಜಮ್ಮ ಗರ್ಭತಾಳಿದ ಪ್ರಸಂಗ, ಸುತ್ತೂರಿನಲ್ಲಿ ಮಾದೇಶ್ವರರಾಗಿ ಬೀಸಿದ ಪ್ರಸಂಗ, ಮಾದೇಶ್ವರನಿಗೆ ‘ಮಾದಪ್ಪ’ ಎಂದು ಹೆಸರು ಬಂದ ಪ್ರಸಂಗ ಮುಂತಾದವು.

ಬೇರೆ ಬೇರೆ ಗಾಯಕರು ಒಂದೇ ಸಂದರ್ಭವನ್ ಹಾಡುವಾಗ ಬರುವ ಸಂಭಾಷಣೆಯ ಮೊದಲನೆಯ ಭಾಗ ಒಬ್ಬ ಗಾಯಕನಲ್ಲಿ ಸತ್ವಯುತವಾಗಿ ಬಂದಿದ್ದು ಬೇರೊಬ್ಬ ಗಾಯಕನಲ್ಲಿ ಮುಂದಿನ ಭಾಗ ಮೆಚ್ಚುವಂತಿದ್ದರೆ ಆ ಎರಡು ಭಾಗಗಳನ್ನೂ ಒಗ್ಗೂಡಿಸಿ ಒಂದು ಸಂಭಾಷಣೆಯನ್ನು ಸಿದ್ಧಪಡಿಸಿರುವುದು ಕಾಣುತ್ತದೆ. ಅಂಥ ಸಂದರ್ಭಗಳಲ್ಲಿ ಭಾಷೆ, ಶೈಲಿ, ನಿರೂಪಣೆಯನ್ನು ಸಿದ್ಧಪಡಿಸಿರುವುದು ಕಾಣುತ್ತದೆ. ಅಂಥ ಸಂದರ್ಭಗಳಲ್ಲಿ ಭಾಷೆ, ಶೈಲಿ, ನಿರೂಪಣೆಗಳಲ್ಲಿ ಗ್ರಾಮ್ಯ ಶಬ್ದಗಳ ಬನಿಯನ್ನು ಉಳಿಸಿಕೊಂಡು, ಸಿನಿಮೀಯ, ನಾಟಕೀಯ ಪ್ರಭಾವವಿರುವ ಪಾಠವನ್ನು ಬಹಳ ಎಚ್ಚರಿಕೆಯಿಂದ ಕಳೆದಿದ್ದಾರೆ. ಅಲ್ಲದೆ ಯಾರೂ ಹಾಡದಿದ್ದ ಭಾಗವನ್ನು ಯಥಾವತ್ತಾಗಿ ಉಳಿಸಿಕೊಂಡಿರುವುದಾಗಿ ತಿಳಿಸುತ್ತಾರೆ. ಪಾಠ ಪಾಠಗಳ ಮಧ್ಯೆ ಕಥಾ ವ್ಯತ್ಯಾಸ ಬಂದ ಕಡೆ ಅವಶ್ಯವೆನಿಸಿದಲ್ಲಿ ಆ ಪಾಠದ ಮೂಲವನ್ನೇ ಅಡಿ ಟಿಪ್ಪಣಿಯಲ್ಲಿ ಹೇಳಿದ್ದಾರೆ. ಕೆಲವು ಕಡೆ ಕಥೆಯನ್ನೇ ಸಂಗ್ರಹಿಸಿ ಹೇಳಿದ್ದಾರೆ. ಅನೇಕ ಕಡೆ ಯಾವುದನ್ನು ಅಡಿಟಿಪ್ಪಣಿಯಲ್ಲಿ ಹೇಳಬೇಕು ಯಾವುದನ್ನು ಪ್ರಧಾನ ಪಾಠದಲ್ಲಿ ಕೊಡಬೇಕು ಎಂಬ ಸಮಸ್ಯೆಯನ್ನು ಅವರು ಸುಲಭವಾಗಿ ನೀಗಿಕೊಂಡಿದ್ದಾರೆ. ಎರಡೂ ಪ್ರಧಾನವೆನಿಸಿದಾಗ ಎರಡನ್ನೂ ಕೊಡಲು ಸಾಧ್ಯವಿಲ್ಲವೆಂದು ಒಂದನ್ನು ಪ್ರದಾನಪಾಠದಲ್ಲಿರಿಸಿಕೊಂಡು ಮತ್ತೊಂದು ಮೂಲಸಹಿತ ಅಡಿಟಿಪ್ಪಣಿಯಲ್ಲಿ ನೀಡಿರುವುದು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಅಡಿಟಿಪ್ಪಣಿಯಲ್ಲಿ ಕೊಟ್ಟಿರುವ ಭಾಗವೇ ಪ್ರಧಾನ ಪಾಠದಲ್ಲಿ ಉಳಿಸಿಕೊಂಡರೂ ಅದು ತಪ್ಪು ಎನಿಸುವುದಿಲ್ಲ.

ಹೀಗೆ ಕಥನ ವ್ಯತ್ಯಯ, ಘಟನಾವಳಿಗಳು, ಆಶಯಗಳು, ಭಾಷೆ, ಶೈಲಿ, ನಿರೂಪಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಲೆಯ ಮಾದೇಶ್ವರ ಕಾವ್ಯದ ಪರಿಷ್ಕರಣ ಕಾರ್ಯವನ್ನು ಪಿ.ಕೆ. ರಾಜಶೇಖರ ಅವರು ಬಹಳ ಜಾಣ್ಮೆಯಿಂದ ನಿರ್ವಹಿಸಿದ್ದಾರೆ. ಈ ಕ್ರಮ ಕನ್ನಡಕ್ಕೆ ತೀರ ಹೊಸದು. ಅಲ್ಲದೆ ಶ್ರಮಸಾಧ್ಯವಾದುದು. ಒಂದೇ ಕಾವ್ಯದ ಅನೇಕ ಪಾಠಾಂತರಗಳನ್ನು ಪ್ರಕಟಿಸುವ ಕಾರ್ಯವನ್ನೆಸಗಲು ಸಂಪಾದಕ ತುಂಬಾ ಜಾಣ್ಮೆಯಿಂದ, ತಾಳ್ಮೆಯಿಂದ, ಕಾಲಗಣನೆ ಮಾಡದೆ ಅಧ್ಯಯನಶೀಲನಾಗಿರಬೇಕಾಗುತ್ತದೆ, ಅದ್ಭುತ ತಜ್ಞನಾಗಿರಬೇಕಾಗುತ್ತದೆ. ಇವೆಲ್ಲಾ ಪಿ.ಕೆ. ರಾಜಶೇಖರ ಅವರಿಗೆ ದತ್ತವಾಗಿ ಬಂದ ಗುಣಗಳಾಗಿವೆ. ಆದ್ದರಿಂದಲೇ ಅವರು ಮಲೆ ಮಾದೇಶ್ವರ ಮಹಾಕಾವ್ಯದ ಮೂವತ್ತಾರು ಪಾಠಗಳ ಒಟ್ಟು ೭೫,೬೦೦ ಪಾದಗಳಿಗೂ ಹೆಚ್ಚು ಪಾದಗಳನ್ನಿರಿಸಿಕೊಂಡು ಶುದ್ಧ ಪಾಠ ಸಿದ್ಧಮಾಡಿ ಸು. ೩೩,೬೭೭ ಪಾದಗಳನ್ನು ಉಳಿಸಿಕೊಳ್ಳುವ ಪಾಠ ಪರಿಷ್ಕರಣಕಾರ್ಯಕ್ಕೆ ಅವರು ತೆಗೆದುಕೊಂಡ ಕಾಲ ಸುಮಾರು ಆರು ತಿಂಗಳು!

ಪ್ರಾಯಶಃ ಕನ್ನಡದಲ್ಲಿ ಜನಪದ ಮಹಾಕಾವ್ಯವೊಂದು ಈ ರೀತಿಯಲ್ಲಿ ಸಂಪಾದನೆಯಾಗಿರುವುದು ಇದೇ ಮೊದಲು. ಅನಂತರ ಪಿ.ಕೆ. ರಾಜಶೇಖರ ಅವರು ಈ ಕ್ರಮವನ್ನು ತಮ್ಮ ಮತ್ತೆರಡು ಕಾವ್ಯಸಂಪಾದನೆಯ ಸಂದರ್ಭದಲ್ಲೂ ಬಳಸಿದ್ದಾರೆ. ಜನಪದ ವೀರಕಾವ್ಯ ಪಿರಿಯಾಪಟ್ಟಣದ ಕಾಳಗದ ಗ್ರಂಥಸಂಪಾದನೆ ಕುರಿತು ಅವರು ಹೀಗೆ ಬರೆಯುತ್ತಾರೆ.

“ದೇವರಗುಡ್ಡರು, ನೀಲಾಗರರು, ತಂಬೂರಿಯವರು, ಚೌಡಿಕೆಯವರು ಹಾಗೂ ಹೆಂಗಸರ ಹಾಡ್ಡತೆ ಈ ಸಂಪ್ರದಾಯಗಳ ಮೂಲದಿಂದ ಕ್ಷೇತ್ರಕಾರ್ಯ ಮಾಡಿ ಎಂಟು ಪಾಠಗಳನ್ನಿಟ್ಟುಕೊಂಡು ಗ್ರಂಥ ಸಂಪಾದನೆ ಮಾಡಿದ್ದೇನೆ. ಜನಪದ ಮಹಾಕಾವ್ಯ ‘ಮಲೆಯ ಮಾದೇಶ್ವರ’ ಹಾಗೂ ದೊಂಬಿದಾಸರು ಹಾಡುವ ಮಾಗಡಿ ಕೆಂಪೇಗೌಡ ಕಾವ್ಯಗಳನ್ನು ಸಂಪಾದಿಸುವಾಗಿನ ಕ್ರಮವನ್ನೇ ಅನುಸರಿಸಿದ್ದೇನೆ…’’[5] ಆದರೆ ರಾಜಶೇಖರ ಅವರು ತಮ್ಮ ಇತ್ತೀಚಿನ ಅಪೂರ್ವವೂ ಅತ್ಯದ್ಭುತವೂ ಆದ ಜನಪದ ಮಹಾಭಾರತವನ್ನು ಮೇಲಿನ ಕ್ರಮದಲ್ಲಿ ಸಂಪಾದಿಸಿಲ್ಲ. ಅದು ಸಂಪೂರ್ಣವಾಗಿ ಏಕ ವ್ಯಕ್ತಿಕೃತಿ.

ಈ ಬಗೆಯಲ್ಲಿ ಒಬ್ಬ ಶ್ರೇಷ್ಠ ಗಾಯಕನ ಪಾಠವನ್ನು ಬೇರೊಂದು ಪಾಠದ ಜೊತೆಗೆ ಸೇರಿಸುವುದರಿಂದ ಆ ಗಾಯಕನಿಗೆ ನ್ಯಾಯ ದೊರಕಿಸಿ ಕೊಟ್ಟಂತಾಗುವುದಿಲ್ಲವೆಂಬುದು ಹಲವು ಜನಪದ ವಿದ್ವಾಂಸರ ಅಭಿಪ್ರಾಯವಾಗಿದೆ. ಆದರೆ ‘ಕಲೇವಾಲ’ ಮತ್ತು ‘ಬೈಲಿನಿ’ ಕಾವ್ಯದ ಬಗೆಗೆ ಇವರ್ಯಾರೂ ಚಕಾರವೆತ್ತಿಲ್ಲ.

ಮಲೆಯ ಮಾದೇಶ್ವರ ಮಹಾಕಾವ್ಯದ ಗಾಯಕರಲ್ಲಿ ಒಬ್ಬನಾದ ಕ್ಯಾತಮಾರನಹಳ್ಳಿ ಮಹದೇವಯ್ಯನ ಬಾಯಿಯಲ್ಲಿ ಈ ಮಾತನ್ನು ಕೇಳಿ:

‘ಅಣ್ಣಾವರೆ ತಾಳಿನಿಂದ ತುದೀಗಂಟ ನಮ್ಮಂಗೆ ಇನ್ಯಾರು ಮಾದಪ್ಪನ ಕತೆ ಹಾಡದಿಲ್ಲ. ನನ್ನುದ್ ಬರ‍್ಕೊಂಡ್ಮೇಲೆ ಇವುರ‍್ನೆಲ್ಲಾ ನೀವು ಕರ‍್ಸಿ ದುಡ್ ಹಾಳ್ಮಾಡ್ಕೋತ್ತೀರಿ’…

‘ನಮ್ಮಾಡುನ ಜೊತೆಗೆ ಬ್ಯಾರೆ ಹಾಡ ಬೆರುಸುದ್ರೆ ಎಲ್ಲಾ ಕೆಟ್ಟೊಯ್ತದೆ ಕಣ್ರಣ್ಣ ಹಂಗ್ಮಾತ್ರ ಮಾಡ್ಬೇಡಿ’[6]

‘ಈ ಹೇಳಿಕೆಯಲ್ಲಿ ದುಡ್ ಹಾಳ್ಮಾಡ್ಕೋತೀರಿ’ ಎಂಬ ಹೇಳಿಕೆಯನ್ನು ಗಮನಿಸಬೇಕು. ಒಂದು ಪಾಠದೊಡನೆ ಮತ್ತೊಂದು ಪಾಠವನ್ನು ಬೆರಸುವ ವಿಚಾರ ಸಂಪಾದಕನದು, ಗಾಯಕನದಲ್ಲ. ಅದು ಅವನಿಗೇನು ಗೊತ್ತು? ಈತನ ಕುಶಾಗ್ರ ಬುದ್ಧಿಯನ್ನು ಸಿ.ಎನ್. ರಾಮಚಂದ್ರನ್ ತಮ್ಮ ಮಲೆ ಮಾದೇಶ್ವರ ಇಂಗ್ಲೀಷ್ ಕೃತಿಯಲ್ಲಿ ಮೆಚ್ಚಿ ಹೀಗೆ ಬರೆಯುತ್ತಾರೆ.

“P.K. Rajashekhara, who wnated to collect as many versions of Male Madeshwara as possible, quotes one experienced singer protesting: “If yo mix what I have sung with that of others, you will ruin everything please don’t do it. It is clear that though the folk singers do nto have any formal education, they possesses a keenmind and a high degree of professional competence”[7]

ವಾಸ್ತವವಾಗಿ ಪ್ರೊ. ಸಿ. ಎನ್. ರಾಮಚಂದ್ರನ್ ಅವರು ಕಲಾವಿದರನ್ನು ತಪ್ಪಾಗಿ ಗ್ರಹಿಸಿದ್ದಾರೆ. ಕಲಾವಿದ ತನಗೆ ಸಿಕ್ಕಿದ  ಹಣ ಮತ್ತು ಸ್ಥಾನ ಬೇರೆಯವರ ಪಾಲಾಗುತ್ತಿದೆಯಲ್ಲ ಎಂಬ ಕಾರಣಕ್ಕಾಗಿ ಬೇಗೆಯ ಮಾತುಗಳನ್ನಾಡಿದ್ದಾನೆ. ಆದರೆ ದೇವರಗುಡ್ಡದಲ್ಲಿ ಅವನಂಥ ಕಲಾವಿದರು ಸಹಸ್ರಾರು ಜನ ಇದ್ದಾರೆಂಬ ಅರಿವು ಪ್ರೊ. ಸಿ.ಎನ್. ರಾಮಚಂದ್ರನ್ ಅವರಿಗಿಲ್ಲ.

ಸಿ.ಎನ್. ರಾಮಚಂದ್ರನ್ ಅವರು ಕನ್ನಡೇತರರಿಗೆ ಪ್ರಕಟಿತ ಬೃಹತ್ಕಾವ್ಯವನ್ನು ಪರಿಚಯಿಸದೆ ಅಪೂರ್ವ ಕಾವ್ಯವೊಂದನ್ನು ಅನುವಾದಿಸಿಕೊಡುವುದರ ಅಗತ್ಯ ಮತ್ತು ಔಚಿತ್ಯಗಳಾದರೂ ಏನಿತ್ತು?

ಜಗತ್ತಿನಾದ್ಯಂತ ಜನಪದ ಅಧ್ಯಯನ ಕ್ಷೇತ್ರದಲ್ಲಿ ಸಂಪಾದನಾ ಕ್ರಮದಲ್ಲಿ ೧೯೬೦ರವರೆಗೆ ಯಾವುದೇ ಒಂದು ಸ್ಥಿರಪಠ್ಯ (fixed text) ಇರಿಸಿಕೊಂಡು ಸಂಪಾದಿಸುತ್ತಿರಲಿಲ್ಲ. ಕ್ರಮೇಣ ೧೯೭೦ರಿಂದ ೮೦ರ ಅವಧಿಯಲ್ಲಿ ಈಬಗೆಯ ಸ್ಥಿರ ಪಠ್ಯ ಅಥವಾ ಮೂಲ ಮಾತೃಕೆ ಇರಿಸಿಕೊಳ್ಳುವ ಪರಿಪಾಠ ಬೆಳೆದು ಬಂದಿತು. ಅನಂತರ ಮಹಾಕಾವ್ಯದ ಯಾವುದೇ ಪಾಠವೂ ಸ್ಥಿರಪಠ್ಯವಲ್ಲ ಎಂಬುದನ್ನು ಕಂಡುಕೊಂಡರು. ಏಕೆಂದರೆ ಅದು ನಿರಂತರವಾಗಿ ವಿವಿಧ ಸಂದರ್ಭಗಳಿಗೆ ಮತ್ತು ಪ್ರೇಕ್ಷಕರಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುವ ಚಲನಶೀಲ ಪಠ್ಯ (dynamic text) ಎಂಬ ಅರಿವಾಯಿತು. ಹಾಗೆಯೇ ಪಠ್ಯಗಳಲ್ಲಿ ವಿವಿಧ ವಿಧದ ಪಠ್ಯಗಳನ್ನು ಗುರುತಿಸಲಾಯಿತು. ಸ್ಥಿರಪಠ್ಯ, ಮಾನಸಿಕ ಪಠ್ಯ (Mental Text), ಪ್ರದರ್ಶಿತ ಪಠ್ಯ (performed text), ಉಕ್ತಲೇಖನ ಪಠ್ಯ (dictated text), ಧ್ವನಿಮುದ್ರಿತ ಪಠ್ಯ (recorded text), ಬೃಹತ್ ಪಠ್ಯ (larger text) ಇತ್ಯಾದಿ. ಒಟ್ಟಿನಲ್ಲಿ ಪಿ.ಕೆ. ರಾಜಶೇಖರ ಅವರು ಹೇಳುವ ಮೂಲ ಪಾಠ ಬೃಹತ್ ಪಠ್ಯವಾಗಿ ಸಾಧಿತವಾಗುತ್ತದೆ. ಇದನ್ನೇ ಯುರೋಪಿಯನ್ನರು Multiforms ಎಂದರೆ ಬಹುರೂಪಿ ಎಂದು ಕರೆಯುತ್ತಾರೆ. ಇದನ್ನೇ ಮೂಲ ಮಾತೃಕೆ ಎನ್ನಬೇಕಾಗುತ್ತದೆ.

ಒಟ್ಟಾರೆ ಹೇಳಬೇಕೆಂದರೆ ಜನಪದ ಮಹಾಕಾವ್ಯ ಕೇವಲ ಸಿದ್ಧವಸ್ತುವಲ್ಲ (product), ಅದು ಒಂದು ಪ್ರಕ್ರಿಯೆ (process) ಅಲ್ಲಿನ ಒಳನೋಟಗಳಿಗೆ ಹಾನಿಯಾಗದಂತೆ ಮಹಾಕಾವ್ಯದ ಸಂಪಾದನೆ ಆಗಬೇಕು. ಅದು ಏಕವ್ಯಕ್ತಿ ಹಾಡಿನ ಮಹಾಕಾವ್ಯದ ಕೈಬರಹವಾಗಿ ಸಂಗ್ರಹಿತ ಸಂಪಾದನೆಯಾಗಬಹುದು ಅಥವಾ ಮಹಾಕಾವ್ಯದ ಹಲವಾರು ಪಾಠಾಂತರಗಳನ್ನು ಸಂಗ್ರಹಿಸಿತ ಸಂಪಾದನೆಯಾಗಬಹುದು ಅಥವಾ ಮಹಾಕಾವ್ಯದ ಹಲವಾರು ಪಾಠಾಂತರಗಳನ್ನು ಸಂಗ್ರಹಿಸಿ ಅವುಗಳನ್ನು ಮೂಲಪಾಠ ಅಥವಾ ಅಧಿಕೃತ ಪಾಠ ಅಥವಾ ಬೃಹತ್ ಪಾಠ ಅಥವಾ ಬಹುರೂಪಿ ಪಾಠವನ್ನು ನಿರ್ಮಿಸಿಕೊಂಡು ಮೂಲನೂಲಿಗೆ ಬಿಡಿಹೂಗಳನ್ನು ಅಂದವರಿತು ಜೋಡಿಸಿ ಕಟ್ಟುತ್ತಾ ಹೋದಂತೆ ಮೂಲಪಾಠಕ್ಕೆ ಬೇರೆ ಪಾಠದ ಭಾಗಗಳನ್ನು ಸೇರಿಸುತ್ತಾ ಹೋಗುವುದು. ಈ ಬಗೆಯ ಸಂಪಾದನಾ ಕ್ರಮ ಶ್ರಮಸಾಧ್ಯವಾದುದು. ಹಾಗೆಯೇ ಸೂಕ್ಷ್ಮತರವಾದುದು.

ಪಿ.ಕೆ. ರಾಜಶೇಖರ ಅವರು ಮಲೆಯ ಮಾದೇಶ್ವರ ಜನಪದ ಮಹಾಕಾವ್ಯವನ್ನು ಸಂಪಾದಿಸಿರುವ ರೀತಿಯಲ್ಲೇ ‘ಪಿರಿಯಾಪಟ್ಟಣದ ಕಾಳಗ’ ಹಾಗೂ ‘ಮಾಗಡಿ ಕೆಂಪೇಗೌಡ’ ಕಾವ್ಯಗಳನ್ನು ಸಂಪಾದಿಸಿದ್ದಾರೆ. ಅವು ಶಾಸ್ತ್ರೀಯ ರೀತಿಯಲ್ಲಿ ಸಂಪಾದಿತವಾಗಿದ್ದರೂ ಅವು ಪರಿಪೂರ್ಣವಲ್ಲ ಎಂದು ಅವರು ಹೀಗೆ ಹೇಳುತ್ತಾರೆ.

“ಬೇರೆ ಬೇರೆ ವೃತ್ತಿಗಾಯಕ ಸಂಪ್ರದಾಯಗಳ ಆಕರಗಳಿಂದ ತುಂಬಿಕೊಂಡಿರುವ ಕೃತಿ ಪರಿಪೂರ್ಣತೆಯನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆಯಾದರೂ ಯಾವುದೇ ಜನಪದ ಕೃತಿ ಎಷ್ಟೇ ಶಾಸ್ತ್ರೀಯವಾಗಿ ಪರಿಷ್ಕರಿಸಲ್ಪಟ್ಟು ಪ್ರಕಟವಾಗಿದ್ದರೂ ಅದು ಅರ್ಪೂವೆಂಬ ಪ್ರಜ್ಞೆ ನನಗಿದೆ. ಏಕೆಂದರೆ ಪ್ರಕಟಿತ ಕೃತಿಗಿಂತಲೂ ಉತ್ತಮ ರೀತಿಯಲ್ಲಿ ಹಾಡುತ್ತಿದ್ದ ಗಾಯಕರು ಈ ಹಿಂದೆಯೇ ಕಣ್ಮರೆಯಾಗಿರಬಹುದು;ಈಗ ಜೀವಿಸಿರಬಹುದಾದ ಉತ್ತಮ ಗಾಯಕ ಸಂಗ್ರಹಕಾರನ ಕಣ್ಣಿಗೆ ಬೀಳದಿರಿಬಹುದು;ಕೆಲವೊಮ್ಮೆ ಉತ್ತಮ ಗಾಯಕರು ಸಿಕ್ಕಿದ್ದರೂ ಕ್ಷೇತ್ರಕಾರ್ಯ ಹಾಗೂ ಸಂಪಾದನಾ ಕಾರ್ಯ ಅಪಕ್ವವಾಗಿರಬಹುದು. ಈ ಕಾರಣಗಳಿಂದ ಯಾವುದೇ ಪ್ರಕಟಿತ ಜನಪದ ಕೃತಿಯೂ ಪರಿಪೂರ್ಣತೆಯನ್ನು ಪಡೆದುಕೊಂಡಿದೆ ಎಂದು ಹೇಳುವಲ್ಲಿ ಎಚ್ಚರ ಅನಿವಾರ್ಯ’’[8] ಎಂಬ ಅವರ ಹೇಳಿಕೆ ಮಾನವೀಯವಾದುದಾಗಿದೆ.

 

[1] ರಾಜಶೇಖರಪಿ.ಕೆ., ಮಲೆಯಮಾದೇಶ್ವರಸಂಪುಟ೧(೧೯೭೨) ಪು೧೪

[2] ಅದೇ, ಪುಟ೧೪

[3] Ramachandra C.N. and Bhat L.N. (Tr) Male Madeshwara (2000) P.Xvii

[4] ರಾಜಶೇಖರಪಿ.ಕೆ. ಮಲೆಯಮಾದೇಶ್ವರಸಂಪುಟ೧(೧೯೭೩) ಪುಟ೨೯೮-೯೯

[5] ರಾಜಶೇಖರಪಿ.ಕೆ., ಪಿರಿಯಾಪಟ್ಟಣದಕಾಳಗ(೧೯೯೦) ಪುxii

[6] ರಾಜಶೇಖರಪಿ.ಕೆ. ಮಲೆಯಮಾದೇಶ್ವರಸಂಪುಟ೧, ೧೯೭೩ಪುಟ೫೦

[7] Ramachandran C.N. and Bhat L.N,. (Tr) Male Madeshwara (2000) P. xivii

[8] ರಾಜಶೇಖರಪಿ.ಕೆ. ಪಿರಿಯಾಪಟ್ಟಣದಕಾಳಗ(೧೯೯೦) ಪುixiii