ಸಂಘರ್ಷದ ನೆಲೆ

“ಭಾರತದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕೆನ್ನುವವರೆಲ್ಲರೂ, ಇದು ಬ್ರಾಹ್ಮಣ ಧರ್ಮ ಹಾಗೂ ಬೌದ್ಧ ಧರ್ಮಗಳ ನಡುವೆ ಹಿರಿಮೆಗಾಗಿ ನಡೆದ ಸಂಘರ್ಷಧ ಚರಿತ್ರೆ ಎಂಬುದನ್ನು ತಿಳಿಯಬೇಕಿದೆ’’.[1]

ಮಲೆ ಮಾದೇಶ್ವರ ಕಾವ್ಯ ಅಥವಾ ಯಾವುದೇ ಜನಪದ ಕಾವ್ಯಗಳನ್ನು  ಕೇಳುತ್ತಾ, ಓದುತ್ತಾ ಹೋದರೆ ಇವು ಡಾ. ಅಂಬೇಡ್ಕರ್‌ರವರ ಈ ವಿಚಾರ ವ್ಯಾಪ್ತಿಯಲ್ಲಿ ಅಥವಾ ದೃಷ್ಟಿಕೋನದಲ್ಲೆ ಸಂವಾದಿಸುತ್ತವೆ ಹಾಗೂ ಮೈದಾಳುತ್ತವೆ ಎನಿಸುತ್ತದೆ. ಅಂದರೆ ಮಲೆ ಮಾದೇಶ್ವರ ಕಾವ್ಯ ಅಥವಾ ಯಾವುದೇ ಜನಪದ ಕಾವ್ಯ ತನ್ನ ಸಮಕಾಲೀನ ಹಾಗೂ ಸುತ್ತಮುತ್ತಲಿನ ಮತ ಪಂಥಗಳ ಜೊತೆಗೆ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಸ್ಥಾಪಿತ ಮೌಲ್ಯಗಳ ಜೊತೆಗೆ ಸಂಘರ್ಷಕ್ಕೆ ಇಳಿಯುತ್ತವೆ. ಬಹುಮುಖಿ ಸಂಘರ್ಷಗಳನ್ನು ನಡೆಸುತ್ತಾ ಮಲೆ ಮಾದೇಶ್ವರ ತನ್ನತನವನ್ನು ತನ್ನ ಪಂಥ ಹಾಗೂ ತನ್ನ ಮೌಲ್ಯಗಳ ಊರ್ಜಿತಕ್ಕಾಗಿ ತುಡಿಯುವುದನ್ನು ಹಾಗೂ ಜನಪದರು ದುಡಿಯುವುದನ್ನು ಕಾಣುತ್ತೇವೆ. ಇಡೀ ಮಲೆ ಮಾದೇಶ್ವರ ಕಾವ್ಯವನ್ನು ಅವಲೋಕಿಸುತ್ತಾ ಹೋದರೆ ನಮಗೆ ಕಾಣುವುದು ಇದೆ. ಮಾದೇಶ್ವರ ಅಥವಾ ಕಾವ್ಯ ಪರಂಪರೆ ಕಟ್ಟುವ ಒಕ್ಕಲ ಜನ ಸಮುದಾಯ ಚಲಿಸುವ ಪ್ರಕ್ರಿಯೆಯಲ್ಲಿ ಅಥವಾ ಕಾವ್ಯ ಪರಂಪರೆ ಕಟ್ಟುವ ಒಕ್ಕಲ ಜನ ಸಮುದಾಯ ಚಲಿಸುವ ಪ್ರಕ್ರಿಯೆಯಲ್ಲಿ ಹೀಗೆ ಪ್ರತಿಕ್ರಿಯಿಸುತ್ತದೆ. ಇದು ಸಹಜ ಮತ್ತು ಅನಿವಾರ್ಯ. ಯಾವ ಕಾಲದಲ್ಲಿ ಶ್ರೇಷ್ಠ, ಪ್ರದಾನ, ಆಳುವ ಸಮಾಜ, ಧರ್ಮ ಮತ್ತು ಸಂಸ್ಕೃತಿಗಳು ಯಾರನ್ನು ನಿರ್ಲಕ್ಷಿಸಿ ಕೀಳಾಗಿ ಅಥವಾ ಗುಲಾಮ ಸ್ಥಿತಿಗೆ ತಳ್ಳಿ, ನಿಕೃಷ್ಟವಾಗಿ ನಡೆಸಿಕೊಳ್ಳುತ್ತ ಎಲ್ಲ ಕಡೆ ಅಸ್ಪೃಶ್ಯತೆ ಆಚರಣೆ ಮಾಡುತ್ತದೊ, ಆಗ ಇಂತ ಸಂಘರ್ಷ, ಪ್ರತಿಭಟನೆ, ಪರ್ಯಾಯ ಕ್ರಿಯೆಗಳು ಆರಂಭವಾಗುತ್ತವೆ. ಇದರ ಫಲವೇ ಮಲೆ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ ಕಾವ್ಯಗಳು.

ಮಲೆ ಮಾದೇಶ್ವರ ಇಂತಹ ನಿರ್ಲಕ್ಷಿತ ದಲಿತ, ಬುಡಕಟ್ಟು, ಹಿಂದುಳಿದ, ಅಲ್ಪಸಂಖ್ಯಾತ ಸಮಾಜ ಸಂಸ್ಕೃತಿ ಧರ್ಮ ಸಂಘರ್ಷದ, ಪ್ರತಿಭಟನೆಯ ಸಂಕೇತವಾಗಿದ್ದಾನೆ. ಈ ಕಾವ್ಯದ ಆರಂಭದಿಂದ ಅಂತ್ಯದವರೆವಿಗೂ ಮಾದೇಶ್ವರ ತನ್ನ ಗುರುಗಳು, ಸಹಪಾಠಿಗಳು, ಹಲಗೇಗೌಡ, ನೀಲೇಗೌಡ, ಕಾಳಮ್ಮ ಮೊದಲಾದವರ ಜೊತೆ ಜೊತೆಗೆ ವ್ಯವಸ್ಥೆಯ ಸ್ಥಾಪಿತ ಮೌಲ್ಯಗಳ ಜೊತೆಗೆ ಹೋರಾಡುತ್ತಲೇ ಹೋಗುತ್ತಾನೆ. ಈತನ ಹೋರಾಟ ಮತ್ತು ಸಂಘರ್ಷ ಈತ ಎದುರಿಸಬೇಕಾಗುವ ಸವಾಲುಗಳ ರೂಪದಲ್ಲಿ ನಿಲ್ಲುತ್ತವೆ. ಸ್ಥಾಪಿತ ಮೌಲ್ಯಗಳು ಹೇಗೆ ಮಾದೇಸ್ವರನಿಗೆ ಸವಾಲಾಗುತ್ತದೆ ಮತ್ತು ಮಾದೇಶ್ವರ ಹೇಗೆಲ್ಲಾ ಹೋರಾಡಬೇಕಾಗುತ್ತದೆಂದರೆ, ಕಾವ್ಯದ ಆರಂಭದಲ್ಲೆ ಆತ ‘ತಾಯಿತಂದೆ’ ಇಲ್ಲದವ ಎಂಬ ಆಪಾದನೆಗೆ ಗುರಿಯಾಗುತ್ತಾನೆ.  ತಾಯಿ ತಂದೆ ಪಡೆಯುವುದೇ ಆತನ ಮೊದಲ ಸಮಸ್ಯೆಯಾಗುತ್ತದೆ. ನಂತರ ಹಸಿವಿನ ಸಮಸ್ಯೆ ಎದುರಾಗುತ್ತದೆ. ಶಿಷ್ಯರನ್ನೂ, ಒಕ್ಕಲನ್ನೂ ಪಡಯುವ ಮಹತ್ಕಾರ್ಯಕ್ಕೆ ಕೈಹಾಕುತ್ತಾ ಇಕ್ಕೇರಿ ದೇವಮ್ಮ, ಬೇವಿನಹಟ್ಟಿ ಕಾಳಮ್ಮ, ಮೂಗಪ್ಪರಾಮವ್ವ, ನೀಲೇಗೌಡ, ಜುಂಜೇಗೌಡರಂತಹ “ಅಹಂ’’ ಪ್ರಧಾನ, ಪ್ರಬಲ ಸಮಾಜ, ಸಂಸ್ಕೃತಿ, ಧರ್ಮ ಸಂಕೇತಗಳನ್ನು ತನ್ನ ಸಿದ್ಧಿಶಕ್ತಿಗಳಿಂದ ಬಗ್ಗಿಸಿ ತನ್ನದೇ ಪಂಥ, ಸಾಂಸ್ಕೃತಿಕ ಮೌಲ್ಯಗಳನ್ನು ಸ್ಥಾಪಿಸುತ್ತಾನೆ. ಶ್ರವಣ ದೊರೆಯಸಾಲು, ಸಂಕಮ್ಮನ ಸಾಲುಗಳು ಕಾವ್ಯದ ಅತ್ಯಂತ ಪ್ರಮುಖ ಸಾಲುಗಳು. ಒಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಘರ್ಷವನ್ನು ಸಂಕೇತಿಸಿದರೆ ಮತ್ತೊಂದು ಹೆಣ್ಣನ್ನು ಅತ್ಯಂತ ಆತ್ಮೀಯ ಭಕ್ತಿ ಭಾವ ಪ್ರೀತಿಪೂರ್ವಕವಾಗಿ ಸ್ಪಂದಿಸುವ ಮೂಲಕ ಹೇಗೆ ಮನಸ್ಸನ್ನು, ಮನುಕುಲವನ್ನೂ ಕಟ್ಟಬೇಕೆಂಬುದನ್ನು ಕಾವ್ಯಸಾಲುಗಳು ಧ್ವನಿಸುತ್ತವೆ.

ಜನಪದವು ಇತಿಹಾಸವೂ ಆಗಿ

ಮಲೆ ಮಾದೇಶ್ವರ ಕಾವ್ಯ ಒಂದು ರೀತಿಯಲ್ಲಿ ಬುಡಕಟ್ಟು, ಜನರ, ದಲಿತ ಹಿಂದುಳಿದವರ ಸಾಂಸ್ಕೃತಿಕ, ಸಾಹಿತ್ಯ, ಸಂಗೀತ, ಭಾಷಾ ಜನಾಂಗೀಯ ಚರಿತ್ರೆಯಾಗುತ್ತದೆ. ಯಾವದೇ ಜನಪದ ಕಾವ್ಯಗಳು ಚಾರಿತ್ರಿಕ ಘಟನೆಗಳ ನೆಲೆಗಳನ್ನು ಹೊಂದಿರುತ್ತವೆ. ಮಲೆ ಮಾದೇಶ್ವರ ಕಾವ್ಯ ಕೂಡ ಅದೇ ಗುಣವನ್ನು ಹೊಂದಿದೆ. ಅಸ್ಪೃಶ್ಯ ಕುಲದ ಮಾದೇಶ್ವರ ತನ್ನ ಸಮಕಾಲೀನ ಸಮಾಜ, ಸಂಸ್ಕೃತಿ, ಧರ್ಮಗಳು ಬಹುಜನರನ್ನು ನಿರ್ಲಕ್ಷ್ಯ ಮಾಡಿದಾಗ, ಅಮಾನವೀಯವಾಗಿ ವರ್ತಿಸಿದಾಗ, ಅಪಮೊಲ್ಯಗೊಂಡಾಗ ಅವುಗಳನ್ನೂ ನಿರಾಕರಿಸಿ ಮಾನವೀಯ, ಜಾತ್ಯತೀತ, ಸಮಾನತೆ ತತ್ವಗಳಿಗನುಗುಣವಾಗಿ ಪರ್ಯಾಯ ವ್ಯವಸ್ಥೆಯನ್ನು ನಿರ್ಮಿಸುತ್ತಾನೆ. ಇದೇ ಮಲೆ ಮಾದೇಶ್ವರ ಕಾವ್ಯದ ಆಶಯ. ಇದು ಒಂದು ಚಾರಿತ್ರಿಕವಾದ ಕ್ರಿಯೆ. ಇಂತಹ ಕೆಲ ಚಾರಿತ್ರಿಕ ಘಟನೆಗಳನ್ನು ಜನಪದರು ಮಹಾಕಾವ್ಯವಾಗಿಸುತ್ತಾರೆ. ಇಲ್ಲಿ ಶಿಷ್ಟಕಾವ್ಯಗಳ ಅನುಕರಣೆ ಇರಬಹುದು. ಜೊತೆಗೆ ಅವುಗಳಿಗೆ ಬಂಡಾಯವಾಗಿ, ಪರ್ಯಾಯವಾಗಿ ಕೂಡ ಕಾವ್ಯ ನಿಲ್ಲುತ್ತದೆ.

ಚರಿತ್ರೆಯನ್ನು ಪುರಾಣೀಕರಿಸುವುದು ಅಥವಾ ಮೌಖಿಕವಾಗಿಡುವುದು ದೇಶೀ ದಲಿತ ಬುಡಕಟ್ಟು ಜನಸಮುದಾಯಗಳಿಗಿದ್ದ ಒಂದು ಮಾರ್ಗ. ಅಕ್ಷರ ಕಲಿಕೆ ಮತ್ತು ಲಿಖಿತ ಕ್ರಿಯೆಯಿಂದ ವಂಚಿತರಾದವರಿಗೆ ಇದು ಅನಿವಾರ್ಯವೂ, ಅಗತ್ಯವೂ ಆಗಿದ್ದಿರಬೇಕು. ಹಾಗಾಗಿ ತಮ್ಮ ನಾಯಕರು ಸಾರಿದ ಬಂಡಾಯ ಮತ್ತು ಪರ್ಯಾಯ ವ್ಯವಸ್ಥೆಗಳ ಹೋರಾಟದ ಘಟನಾವಳಿಗಳನ್ನು ಮೌಕಿಕವಾಗಿ ಇಡಲಾರಂಭಿಸಿದರು. ಜೊತೆಗೆ ಶಿಷ್ಟ ಕಾವ್ಯ ಮತ್ತು ಸಂಸ್ಕೃತಿಗಳಂತೆ ಪುರಾಣೀಕರಿಸುವುದನ್ನು, ದೈವೀಕರಿಸುವುದನ್ನು ಮಾತ್ರವಲ್ಲದೆ ವೈಭವೀಕರಿಸುವುದನ್ನು ಕಲಿತರು. ಹೀಗಾಗಿ ಜನಪದ ನಾಯಕರು ಶಿಷ್ಟ ದೇವತೆಗಳಂತೆ, ಕೆಲವೊಮ್ಮೆ ಅವರನ್ನು ಮೀರಿದ ಧರೆಗೆ ದೊಡ್ಡವರಾಗಿ ನಿರ್ಮಾಣಗೊಂಡರು, ಸ್ಥಾಪಿತರಾದರು. ಕೇವಲ ಭಾರತೀಯ ಜನಪದ ವಿಷಯದಲ್ಲಿ ಮಾತ್ರ ಹೀಗಾಗಿಲ್ಲ. ವಿಶ್ವದ ಹಾಗೂ ಇಡೀ ಭಾರತದ ಚರಿತ್ರೆಯೇ ಇಂತಹ ಒಂದು ಸಂದರ್ಭದಲ್ಲಿ ಸಂಘರ್ಷ ಹಾಗೂ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಇದು ಚರಿತ್ರೆಕಾರರ ದೃಷ್ಟಿಯಲ್ಲಿ ತಪ್ಪಾಗಬಹುದು. ಆದರೆ ಸಮುದಾಯಗಳ ಸಾಂಸ್ಕೃತಿಕ ನಡಿಗೆಯಲ್ಲಿ ಮತ್ತು ಜನಪದ ಧಾರ್ಮಿಕ ಸಂದರ್ಭದಲ್ಲಿ ಸಹಜ. ಭಾರತದ ಇತಿಹಾಸ ಬಹುತೇಕ ಪುರಾಣವಾಗಿದ್ದರೆ, ಭಾರತದ ಬಹುತೇಕ ಜನಪದಕಾವ್ಯಗಳು ಇತಿಹಾಸ ಕೂಡ ಆಗಿವೆ. ಹಾಗಾಗಿ ಮಲೆಮಾದೇಶ್ವರ ಕಾವ್ಯ ಮತ್ತು ಚರಿತ್ರೆ ಕೂಡ ಹೌದು. ಇದನ್ನು ಹಲವು ಐತಿಹಾಸಿಕ ದಾಖಲೆಗಳು ಸ್ಪಷ್ಟೀಕರಿಸುತ್ತವೆ.

“ಸಿದ್ಧನಂಜ ದೇಶಿಕರು ಸುತ್ತೂರು ವೀರ ಸಿಂಹಾಸನ ಮಠಕ್ಕೆ ಕ್ರಿ.ಶ. ೧೧೭೦-೧೨೪೦ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದವರು. ಇವರ ಕಾಲದಲ್ಲಿ ಸುತ್ತೂರು ಮಠಕ್ಕೆ ಮಾದೇಶ್ವರರು ಬಂದಿದ್ದರೆಂದೂ’’[2] ವೇದ ಸಂಗಪ್ಪ ಶಾಸ್ತ್ರಿಗಳ “ಸುತ್ತೂರು ಸಿಂಹಾಸನದ ಗುರು ಪರಂಪರೆ’’ ಎಂಬ ಕಾವ್ಯದಲ್ಲಿ ಸುತ್ತೂರು ಮಠಕ್ಕೆ ಶ್ರೀಮಾದೇಶ್ವರರು ವಟುವಿನ ರೂಪದಲ್ಲಿ ಸಿದ್ಧನಂಜದೇಶೀಕೇಂದ್ರರ ಕಾಲದಲ್ಲಿ ಬಂದಿದ್ದರೆಂದೂ’’[3], ಶ್ರೀನಂಜುಂಡಾರಾಧ್ಯರು ಬರೆದ ‘ಶ್ರೀ ಶಿವಾತ್ರಿ ಶಿವಾಚಾರ್ಯ’ ಎಂಬ ಗ್ರಂಥದಲ್ಲಿ ಮಾದೇಶ್ವರರು ಶ್ರೀಶೈಲದ ಕಡೆಯಿಂದ ಬಂದ ಬಾಲ ಜಂಗಮರೊಡನೆ ಅವರಿಗೆ ಸುತ್ತೂರಿಗೆ ದಾರಿ ತೋರಿಸಿಕೊಂಡು ಬಂದರೆಂದು ಹೇಳಲಾಗಿದೆ.’’[4] “ಮಿಣ್ಯಂನ ಗುರುಸಿದ್ಧ ಕವಿ ಕ್ರಿ.ಶ. ೧೭೫೦ರಲ್ಲಿ “ಮಾದೇಶ್ವರ ಸಾಂಗತ್ಯ’’ ಕೃತಿ ರಚಿಸುತ್ತಾನೆ. ಮಾದೇಶ್ವರ ಚರಿತ್ರೆ ಪ್ರತಿಪಾದಿಸುವ ಗ್ರಂಥಗಳಲ್ಲಿ ಇದು ಹಳೆಯದು’’[5] “ಮಲೆಯ ಮಾದೇಶ್ವರರನ್ನು ಕುರಿತು ಅತ್ಯಂತ ಹಳೆಯ ಉಲ್ಲೇಖ ಎಂದು ಹೇಳಬಹುದಾದ ತಾಮ್ರ ಶಾಸನವೊಂದು ಚಾಮರಾಜನಗರ ತಾಲ್ಲೂಕು ಹರದನಹಳ್ಳಿಯಲ್ಲಿ ದೊರೆತಿದೆ. ೧೩೪೫ರ ಈ ಶಾಸನದ ಉತ್ತರಾರ್ಧ ಪೂರ್ಣವಾಗಿ ಮಾದೇಶ್ವರರ ಚರಿತ್ರೆಯನ್ನು ವಿವರಿಸುತ್ತದೆ. ಮಾದೇಶ್ವರನು ಕತ್ತಲರಾಜ್ಯದೊಳು ಶ್ರವಣಸಂಹಾರ ಮಾಡಿ, ಪ್ರಭುಲಿಂಗಾರಾಧ್ಯರಿಂದ ಲಿಂಗಧಾರಣೆಮಾಡಿಸಿಕೊಂಡು, ವಜ್ರಮಲೆಯಲ್ಲಿ ನೆಲೆಸಿ ಆಲಂಬಾಡಿ ಜುಂಜೇಗೌಡನಿಂದ ದೇವಾಲಯ ಕಟ್ಟಿಸಿಕೊಂಡು ಬೇಡರ ಕನ್ನಯ್ಯನಿಂದ ಪೂಜಿಸಿಕೊಂಡು ಅವನಿಗೆ ಮೋಕ್ಷ ಕೊಟ್ಟನೆಂದು ಉಲ್ಲೇಖವಿದೆ.’’[6]

“ಕ್ರಿ.ಶ. ೧೭೬೧ರ ಹೈದರಾಲಿಯ ತಾಮ್ರ ಶಾಸನವೊಂದು ಗುರುತಿಸಲ್ಪಟ್ಟಿದೆ. ಇನ್ನೂರು ವರ್ಷಗಳ ಹಿಂದಿನ ಈ ಶಾಸನ ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಹರದನಹಳ್ಳಿ ಶಾಸನದಲ್ಲಿ ಬಂದಿರುವ ಮಾದೇಶ್ವರನ ಗುಡಿಯನ್ನು ಕಟ್ಟಿದ ಆಲಂಬಾಡಿ ಜುಂಜೇಗೌಡ, ಎಣ್ಣೆಮಜ್ಜನಕ್ಕೆ ಹಕ್ಕನ್ನು ಪಡೆದುಕೊಂಡ ಸರಗೂರು ಉಪ್ಪಲಿಗ ಶೆಟ್ಟಿ, ಮಾದೇಶ್ವರರಿಂದ ಹತನಾದ ಶ್ರವಣ-ಮುಂತಾದ ಕೆಲವು ವಿಷಯಗಳೂ ಬಂದಿವೆ. ಇವು ಮಾದೇಶ್ವರರ ಮಹಿಮೆಗಳನ್ನೇ ಶ್ರುತಪಡಿಸುವ ವಿಷಯಗಳಾಗಿದ್ದರೂ ಐತಿಹಾಸಿಕ ಅಂಶಗಳನ್ನೂ ಒಳಗೊಂಡಂತೆ ಕಾಣುತ್ತವೆ. ಮಾದೇಶ್ವರ ಕತೆಯ ಅನೇಕ ಸಾಲುಗಳಲ್ಲಿ ಜುಂಜೇಗೌಡನ ಸಾಲು, ಸರಗೂರಪ್ಪನ ಸಾಲು, ಶ್ರವಣದೊರೆಸಾಲು ಶಾಸನದ ಘಟನೆಗಳಿಗೆ ತೀರ ಹತ್ತಿರವಾಗಿವೆ. ಮಾದೇಶ್ವರರು ಐತಿಹಾಸಿಕ ವ್ಯಕ್ತಿಯಾಗಿದ್ದರೆಂಬುದಕ್ಕೆ ಸಾಕ್ಷಿಯಾಗುತ್ತವೆ’’[7] ಜೈನ ಕವಿ ದೇವಚಂದ್ರ ಕ್ರಿ.ಶ. ೧೮೪೧ರಲ್ಲಿ ಬರೆದ ರಾಜಾವಳಿ ಕಥಾಸಾರದಲ್ಲಿ ಮಾದೇಶ್ವರನನ್ನು ಮಾದಿಗರ ಹುಡುಗನೆಂದು ಹೆಸರಿಸುತ್ತಾನೆ. ಅಲ್ಲದೆ ಶ್ರವಣಸಂಹಾರ ಮತ್ತು ಈತ ದೇವತೆಯಾದ ಹಾಗೂ ದೇವಸ್ಥಾನ ಸ್ಥಾಪನೆ ಬಗ್ಗೆ ವಿಭಿನ್ನ ಅಂಶವನ್ನು ದಾಖಲಿಸುತ್ತಾನೆ. ಅಂದರೆ ಮಲೆ ಮಾದೇಶ್ವರ ಮತ್ತು ಈ ಜನಪದ ಕಾವ್ಯ ಸಾಕಷ್ಟು ಐತಿಹಾಸಿಕ ಘಟನೆಗಳ ಮೇಲೆಯೇ ನಿರ್ಮಾಣವಾಗುವ ಕಾವ್ಯ ಎಂಬುದಕ್ಕೆ ಇಂತಹಹಲವು ದಾಖಲೆಗಳು ಲಭ್ಯ ಇವೆ.

ಮೌಲ್ಯ ಹಾಗೂ ವ್ಯವಸ್ಥೆಗಳಿಗೆ ಪ್ರತಿಪಟ್ಟು

ಕಾವ್ಯದ ಆರಂಭದಲ್ಲೆ ಮಾದೇಶ್ವರನಿಗೆ ಎದುರಾಗಿ ಕಾಡುವ ‘ತಾಯಿತಂದೆ’ ಇಲ್ಲದವ ಎಂಬುದು ತುಂಬಾ ಸರಳ ಸಾಮಾನ್ಯದ ಪ್ರಶ್ನೆಯಿಲ್ಲ. ಅಸ್ಪಶ್ಯ ಸಮುದಾಯದಿಂದ ಬಂದು ದೊಡ್ಡ ಸಾಂಸ್ಕೃತಿಕ ನಾಯಕನಾಗಿ ಬೆಳೆದ ಮಾದೇಶ್ವರನನ್ನು ತಿರಸ್ಕರಿಸುವ ಅಥವಾ ಶ್ರೇಷ್ಠ ಮೂಲಕಲ್ಪಿಸುವುದು ಇಂತಹ ಪ್ರಶ್ನೆ ಎತ್ತುವುದರ ಹಿಂದಿನ ಉದ್ದೇಶವಾಗಿದೆ. ಮತ್ತೆ ಶಿಷ್ಟ ಕಾವ್ಯ ಮತ್ತು ಪ್ರಧಾನ ಧರ್ಮ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುವ ಪರಿಶಿಷ್ಟ ಪಂಥ, ಪರಂಪರೆ ಮತ್ತು ಒಕ್ಕಲು ಜನ ಸಮುದಾಯ ಇಂತಹ ಸಂದರ್ಭಗಳಲ್ಲಿ ಹೀಗೆ ಚಿಂತಿಸುವುದು, ಶ್ರೇಷ್ಠ ಮೂಲ ಕಲ್ಪಿಸುವುದು ಒಂದು ದೌರ್ಬಲ್ಯ ಹಾಗೂ ಕೀಳರಿಮೆಯ ಬಾರದಲ್ಲಿ ಕುಸಿದುಹೋಗುವ ಗುಣ.

ತಾಯಿತಂದೆ ಇಲ್ಲದವ ಎಂದರೆ ಅಂಥವನು ಅನೈತಿಕ ಸಂಬಂಧಕ್ಕೆ ಜನಿಸಿದವನಿರಬೇಕು? ಅಥವಾ ಯಾವುದೋ ಉತ್ತಮ ಕುಲದ ಪುರುಷ ಕೆಳವರ್ಗದ ಸ್ತ್ರೀಗೆ ಜನಿಸಿದವನಿರಬೇಕು? ಎಂಬುದಾಗಿ ಬ್ರಾಂಡ್ ಮಾಡುವ ಧ್ವನಿ ಇದರ ಹಿಂದೆ ಇರುತ್ತದೆ. ಇಡೀ ದಲಿತ ಬುಡಕಟ್ಟು, ಹಿಂದುಳಿದ ಸಮುದಾಯಗಳ ನಾಯಕರ ಅಥವಾ ಸಮಾಜ ಮತ್ತು ಸಂಸ್ಕೃತಿಯ ಸ್ಥಿತಿಯನ್ನು ಈ ಪ್ರಸಂಗ ಸೂಚ್ಯವಾಗಿ ಹೇಳುತ್ತದೆ. ಆದರೂ ಮಾದಿಗರ ಹುಡುಗನಿಗೆ ಕಲ್ಯಾಣದ ಬಸವ ಪರಂಪರೆಯ ಶರಣರಾದ ಉತ್ತರಾಜಮ್ಮ, ರಾಜಶೇಖರ ಮೂರ್ತಿಗಳನ್ನು ತಂದತಾಯಿಯಾಗಿಸುವುದು, ತಾಯಿಯ ಬೆನ್ನ ಮಚ್ಚೆಯಲ್ಲಿ ಹುಟ್ಟಿಬರುವುದು ಇವು ಮಾದೇಶ್ವರನ ಹುಟ್ಟು ಒಂದು ಅಸಹಜ ಅಥವಾ ವರ್ಣ ಸಂಕರದ ಫಲ ಎನ್ನುವಂತೆ ಮಾಡಿ ಬಿಡುತ್ತದೆ. ತಾನು ಹೆಂಡತಿಯನ್ನು ಕೂಡದೆ ಮಗು ಹೇಗೆ ಹುಟ್ಟಿತು ಎಂದು ಶರಣ ಚಂದ್ರಶೇಖರ ಮೂರ್ತಿ ಹುಟ್ಟಿದ ಮಗುವನ್ನು ಕೊಲ್ಲುವ ಸಂಚು ಮಾಡುತ್ತಾನೆ. ಇದು ಪ್ರಧಾನ ಸ್ಥಾಪಿತ ಸಂಸ್ಕೃತಿಯ ಮೌಲ್ಯವನ್ನು ಮುರಿಯಲು ಸಾಧ್ಯವಾಗದ ಹಾಗೂ ಸಮಕಾಲೀನ ಸಮಾಜದ ಮನಸ್ಥಿತಿಯನ್ನು ಕಾವ್ಯದ ಈ ಪ್ರಸಂಗ ಬಿಂಬಿಸುತ್ತದೆ.

ಬಹುಶಃ ಆ ವೇಳೆಗೆ ಶಿಷ್ಟ ಸಮಾಜ ಮತ್ತು ಜಮೀನುದಾರಿ ಪುರುಷ ಪ್ರಧಾನ ವ್ಯವಸ್ಥೆಯ ಜೊತೆಗೆ ಮಾತೃಪ್ರಧಾನ ನೆಲೆಯ ಸಮಾಜ ಮತ್ತು ಸಂಸ್ಕೃತಿ ಕೂಡ ಅಹಂ ಪ್ರಧಾನ, ಮೂಢನಂಬಿಕೆಗಳು, ಅಸಮಾನತೆ, ಅಮಾನವೀಯ ಆಚರಣೆಗಳಿಂದ ತುಂಬಿ ಹೋಗಿರಬೇಕು. ಪರಿಣಾಮ ಮಲೆ ಮಾದೇಶ್ವರ ವ್ಯಕ್ತಿಯಾಗಿ ಮತ್ತು ಕಾವ್ಯ ಅವುಗಳ ಸುಧಾರಣೆಗೆ, ಪರಿವರ್ತನೆಗೆ ಇಲ್ಲವಾದರೆ ನಾಶಕ್ಕೆ ತೊಡಗುತ್ತವೆ. ಹಾಗಾಗಿ ದುರಹಂಕಾರದ, ಅಪಮೌಲ್ಯಗಳ ಸಂಕೇತಗಳಾದ ಸ್ತ್ರೀ ಪುರುಷರನ್ನು ಮಾದೇಶ್ವರ ಬಗ್ಗುಬಡಿಯುತ್ತಾನೆ. ಜೊತೆಗೆ ಮಾನವೀಯಗೊಳಿಸಿ ತನ್ನ ಒಕ್ಕಲಾಗಿ ಪಡೆದು ತನ್ನ ಪಂಥ ಸ್ಥಾಪನೆಗೆ ಬಳಸಿಕೊಳ್ಳುತ್ತಾನೆ. ಭಿಕ್ಷಕ್ಕೆ ಬಂದವರನ್ನೆಲ್ಲಾ ವಿಷದ ಕಜ್ಜಾಯ ಹಾಕಿ ಕೊಲ್ಲುತ್ತಿದ್ದ, ಇಕ್ಕೇರಿ ದೇವಮ್ಮನನ್ನು ಮಾದೇಶ್ವರ ಮಣಿಸುತ್ತಾನೆ.

ಬೇವಿನಹಟ್ಟಿ ಕಾಳಮ್ಮ ಎಂತಹ ಜಿಪುಣತನದ ಹೆಣ್ಣು ಎಂಬುದನ್ನೂ ಕಾವ್ಯ ಅತ್ಯಂತ ವಾಸ್ತವ ನೆಲೆಯಲ್ಲಿ ಸಹಜವಾಗಿ ಕಟ್ಟಿಕೊಡುತ್ತದೆ. ಸಮಾಜದಲ್ಲಿ ಇಂದಿಗೂ ಇಂತಹ ಜೀವಂತ ಉದಾಹರಣೆಗಳಿರಲು ಸಾಧ್ಯ. ಅರ್ಧಪಾವು ಹಾಲನ್ನು ಏಳು ಜನ ಮೊಮ್ಮಕ್ಕಳಿಗೆ ಹಂಚುವುದು, ಎಳ್ಳು ಬಡಿಯುವ ಆಳುಗಳು ಎಳ್ಳು ತಿಂದರೆ ಕೊಡುವ ಕೂಲಿಯಲ್ಲಿ ಕಡಿತ ಮಾಡುವುದು, ಎಳ್ಳು ತಿಂದಿರುವುದನ್ನೂ ಖಾತರಿ ಮಾಡಿಕೊಳ್ಳಲು ನೀರನ್ನು ಮುಕ್ಕಳಿಸಿ ಕಲ್ಲಿನ ಮೇಲೆ ಉಗಿಸುವುದು ಆಕೆಯ ಜಿಗುಟುತನದ ಪರಮಾವಧಿಯ ಚಿತ್ರಿಗಳು. ಇರುವೆಗಳು ಸಹ ಎಳ್ಳು ಕಾಳು ಕಚ್ಚಿಹೋಗದಂತೆ ಕಣದಸುತ್ತ ಕೊಂಡದ ಗುಳಿ ತೆಗೆಸುತ್ತಾಳೆ. ಭಿಕ್ಷಾ ಕೇಳಿದರೆ ನಿನ್ನ ಹೆಂಡ್ತಿ ಹೊಲಕ್ಕೆ ಹಿಟ್ಟಿನ ಕುಕ್ಕೆ ಹೊತ್ತು ತಲೆಕೂದ್ಲು ಉದುರೋಗಿದ್ದದೆ, ನಿನ್ನ ಗಂಡು ಮಕ್ಳ ಉಳಿಮೆ ಮಾಡಿ ಗುಳ ಗುದ್ಲಿ ಸವೆದು ಹೋಗಿದ್ದೂದೆ, ಅದಕ್ಕೆ ನಿನಗೆ ಭಿಕ್ಷಾ ಕೊಡಲೆ ಎಂದು ಕೇಳುತ್ತಾಳೆ ಕಾಳಮ್ಮ. ಇಂತಹ ಜಿಪುಣತನವನ್ನು ಹಠಮಾರಿತನವನ್ನೂ ತನ್ನ ಸಿರಿ ಸಂಪತ್ತು ನಾಶವಾದರೂ, ವಂಶಹಾಳಾದರೂ ಬಿಡಲೊಲ್ಲದ ಕಾಳಮ್ಮ ಅಹಂಕಾರದ, ತ್ಯಾಗಗುಣವಿಲ್ಲದ ಅಪಮೌಲ್ಯಗಳ ಸಂಕೇತವಾಗಿದ್ದಾಳೆ. ಮಾದೇಶ್ವರನಿಂದ ಇವುಗಳ ನಾಶವನ್ನು ಅಥವಾ ಪರಿವರ್ತನೆಯನ್ನು ಕಾಳಮ್ಮನ ಸಾಲು ಧ್ವನಿಸುತ್ತದೆ. ಆದರೆ ಅದೇ ಒಕ್ಕಲಿನವಳೇ ಆದ, ಮುಗ್ಧೆ, ಭಕ್ತೆ ಸಂಕಮ್ಮನ ವಿಷಯದಲ್ಲಿ ಮಾದೇಶ್ವರ ಅತ್ಯಂತ ಮಾನವೀಯವಾಗಿ ಭಕ್ತಿಗೆ, ಪ್ರೀತಿಗೆ ಒಲಿದ ದೈವವಾಗುತ್ತಾನೆ. ಒಬ್ಬ ಪ್ರಾಮಾಣಿಕ ಶೀಲವಂತ ಹೆಣ್ಣಿನ ಕೂಗಿಗೆ, ಕಣ್ಣೀರಿಗೆ ಮಾದೇಶ್ವರ ಸ್ಪಂದಿಸುವ ರೀತಿ ಸಹಜ ಸ್ವಾಭಾವಿಕವಾಗಿ, ಮಾನವೀಯವಾಗಿ, ಸ್ತ್ರೀಪರ ನಿಲುವುಳ್ಳ ಮನುಷ್ಯನಾಗಿ ಕಾಣಿಸುತ್ತಾನೆ.

ಮಕ್ಕಳ ಭಾಗ್ಯ ಕೊಡೊ ಏಳುಮಲೆ ಭಸ್ಮ

ಮಲೆ ಮಾದೇಶ್ವರ ಕಾವ್ಯದತುಂಬಾ ಪ್ರಧಾನವಾದ ಭಾಗ ಸಂಕಮ್ಮನ ಸಾಲು. ಮಾದೇಶ್ವರ ಬುಡಕಟ್ಟು ಸಮುದಾಯದ ಒಕ್ಕಲು ಪಡೆದು ಎಪ್ಪತ್ತೇಳು ಮಲೆಯೊಳಗೆ ಐಕ್ಯವಾಗುವುದು ಕಾವ್ಯ ಮತ್ತು ಪರಂಪರೆಯ ಬಹು ಮುಖ್ಯ ಘಟನೆ. ಇದನ್ನು ಸಾಂಕೇತಿಕವಾಗಿ ಮತ್ತು ಚಾರಿತ್ರಿಕವಾಗಿ ಕಟ್ಟಿಕೊಡಲಾಗಿದೆ. ಇದಲ್ಲದೆ ಬುಡಕಟ್ಟು ಸಂಸ್ಕೃತಿ, ಆಹಾರ ಪದ್ಧತಿ, ವೈದ್ಯ ಪದ್ಧತಿ, ತಂತ್ರವಿದ್ಯೆ ಮೊದಲಾದ ಅಂಶಗಳನ್ನು ಪ್ರಸ್ತಾಪಿಸುವ ಮೂಲಕ ಈ ಎಲ್ಲಾ ವಿರಗಳನ್ನೂ ಕಾವ್ಯದಲ್ಲಿ ದಾಖಲಿಸಲಾಗಿದೆ.  ಶ್ರೀಶೈಲದಂತಹ ಪ್ರಸಿದ್ಧ ತಾಂತ್ರಿಕ ಕೇಂದ್ರದಿಂದ ಹೊರಡುವ ಮಾದೇಶ್ವರ ಸುತ್ತೂರು, ಕುಂತೂರುಗಳಂತಹ ಶೈವ ಪರಂಪರೆಗಳ ಸ್ಥಾವರಸ್ಥಿತಿಗಳನ್ನು ಘಾಸಿಗೊಳಿಸುತ್ತಾ ಬಯಲು ಸೀಮೆಗಳಲ್ಲಿ ದಲಿತ, ಹಿಂದುಳಿದ ಸಮುದಾಯಗಳ ಒಕ್ಕಲು ಪಡೆಯುತ್ತಾ ತನ್ನ ತಿರುಗಾಟವನ್ನು ಮುಂದುವರಿಸುತ್ತಾನೆ. ಅಂತಿಮವಾಗಿ ಘಟ್ಟಾವಳಿಗಳ ನಡುವಿನ ಬುಡಕಟ್ಟು ಸಮುದಾಯಗಳಲ್ಲಿ ಶಿಷ್ಯವರ್ಗವನ್ನು ಪಡೆದು ಏಳುಮಲೆಯಲ್ಲಿ ಐಕ್ಯವಾಗುತ್ತಾನೆ. ಇದು ಆತನ ಮೂಲ ನೆಲೆಯಾದ ಶ್ರೀಶೈಲದಂತಹ ಮತ್ತೊಂದು ಸಾಂಸ್ಕೃತಿಕ ನೆಲೆಯನ್ನು ಹುಡುಕಿಕೊಂಡು ಇದನ್ನು ಮತ್ತೊಂದು ಶಾಖೆಯಾಗಿ ವಿಸ್ತರಿಸಿದಂತಾಯಿತು.

ಮಲೆ ಮಾದೇಶ್ವರ ಕಾವ್ಯದಲ್ಲಿ ಮಾದೇಶ್ವರ ಪ್ರಮುಖ ನಾಯಕ. ಆದರೆ ಅಷ್ಟೇ ಪ್ರಭಾವಿ ಹಾಗೂ ಪ್ರತಿ ನಾಯಕನಾಗಿ ಕಾಣಿಸುವವನು ಸೋಲಿಗರ ನೀಲೇಗೌಡ. ಬುಡಕಟ್ಟುಗಳ ನಡುವೆ ಈತ ಎಷ್ಟು ಪ್ರಬಲ, ಎಷ್ಟು ನಿಷ್ಠುರ ಮುಖ್ಯ ಎಂಬುದನ್ನು ಸಂಕಮ್ಮನ ಸಾಲಿನಲ್ಲಿ ಗಮನಿಸಬಹುದು. ಹಾಗೇ ಮಾದೇಶ್ವರನಿಗಿಂತ ಪೂರ್ವದಲ್ಲಿ ಬುಡಕಟ್ಟುಗಳ ನಡುವಿನ ತಂತ್ರವಿದ್ಯೆ ಸಾಧಕ ಈ ಸೋಲಿಗರ ನೀಲೇಗೌಡ. ಈತನ ಮಹತ್ವ ಎಷ್ಟೆಂದರೆ ಕಾವ್ಯದಲ್ಲಿ ಉಲ್ಲೇಖವಾಗುವಂತೆ ಈತ ಮಲೆಯ ಸೋಲಿಗ ನೀಲಯ್ಯ ಮಲೆಯ ಸೋಲಿಗನ ಎದುರು ಮಾದಿಗರ ಮಾದೇವ ಮಲೆಯ ಮಾದೇಶ್ವರನಾಗಿ ಕಾವ್ಯದ ನಾಯಕನಾಗುತ್ತಾನೆ. ಸೋಲಿಗ ನೀಲಯ್ಯನನ್ನು ಮಣಿಸಿ ಆ ಮೂಲಕ ಬುಡಕಟ್ಟುಗಳ ಒಕ್ಕಲು ಮತ್ತು ಶಿಶುಮಕ್ಕಳ ಪಡೆಯುವಲ್ಲಿ ಮಾದೇಶ್ವರ ಸಂಕಮ್ಮನಿಗಿದ್ದ ಬಂಜೆತನವನ್ನು ನಿವಾರಿಸುವ ಮೂಲಕ ಸಫಲನಾಗುತ್ತಾನೆ.

ಸಂಕಮ್ಮ ಶಿವಶರಣೆ, ಸೋಲಿಗರ ಕಡುಚಲುವ, ಶೀಲವಂತೆ, ಏಳೇಳು ಹದಿನಾಲ್ಕು ದೊಡ್ಡಿ ತಿರುಗಿದರೂ ತಕ್ಕ ಹೆಣ್ಣು ಸಿಗದಿದ್ದಾಗ ನೀಲೇಗೌಡನ ತಾಯಿತಂದೆ ಹೇಳುವುದು ನಿನಗೆ ತಕ್ಕ ಹೆಣ್ಣನ್ನು ನೀನೇ ನೋಡಿಕೊ ಲಗ್ನ ಮಾಡುತ್ತೇನೆ ಎಂದು. ಇದು ಬುಡಕಟ್ಟು ಸಂಸ್ಕೃತಿಯ ಪ್ರತೀಕ. ಪರಸ್ಪರ ಗಂಡು ಹೆಣ್ಣು ಮೆಚ್ಚಿಜೊತೆಯಾದರೆ ಅವರೆ ಗಂಡ ಹೆಂಡತಿಯರು. ಸಂಕಮ್ಮನ ನಡೆನುಡಿ, ಸೌಂದರ್ಯಕ್ಕೆ ಸೋತು ನೀಲೇಗೌಡ ಅವಳನ್ನೇ ಮದುವೆಯಾಗುತ್ತಾನೆ. ಮದುವೆ ನಂತರ ನೀಲೇಗೌಡನ ದೊಡ್ಡಿಯಲ್ಲಿ ಅತ್ತಿಗೆ ನಾದಿನಿಯರು ಸಂಕಮ್ಮನನ್ನು ಬಂಜೆ ಎಂದು ಜರಿಯುತ್ತಾರೆ. ಆದಕಾರಣ ನೀಲೇಗೌಡ ತನ್ನ ದೊಡ್ಡಿಯನ್ನು, ಬಂಧು ಬಳಗವನ್ನು ಬಿಟ್ಟು ಬೇರೆಯಾಗುತ್ತಾನೆ. ಗಂಡ ಹೆಂಡತಿಯರಿಬ್ಬರೇ ಬೇರೆ ಬದುಕು ಕಟ್ಟಿಕೊಳ್ಳುವ ಕಾಲಕ್ಕೆ ಕುಲದ ಆಚಾರದ ಪ್ರಕಾರ ಬೇಟೆಗೆ ಹೋಗಬೇಕಾಗುತ್ತದೆ. ಒಂಟಿಹೆಣ್ಣು ಸಂಕಮ್ಮನನ್ನು ಏಕಾಂಗಿಯಾಗಿ ಬಿಟ್ಟು ಆರು ಮೂರು ಒಂಬತ್ತು ತಿಂಗಳು ಬೇಟೆಗೆ ಹೋಗಲು ನೀಲೇಗೌಡನಿಗೆ ಮನಸ್ಸಾಗುಮದಿಲ್ಲ. ಆದರೆ ಹೋಗುವುದು ಅನಿವಾರ್ಯ. ಹೋಗದಿದ್ದರೆ ಕುಲದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಗುವ ಭೀತಿ. ಅದಕ್ಕೆ ತಾನು ಬೇಟೆಗೆ ಹೋಗಲು ನೀಲೇಗೌಡ ಸಂಕಮ್ಮನಿಂದ ಭಾಷೆ ಕೇಳುತ್ತಾನೆ. ಗಂಡನನ್ನು ಬಿಟ್ಟು ಯಾರೇ ಏನೇ ಮೋಡಿ ಮಾಡಿದರೂ, ಯಾರಿಗೂ ಮನಸೋಲುವುದಿಲ್ಲ ಎಂದು ಸಂಕಮ್ಮ ಭಾಷೆ ಕೊಡಬೇಕೆಂಬುದು ನೀಲೇಗೌಡನ ವಾದ. ಸಂಕಮ್ಮ ತನ್ನ ಗಂಡನ ಕೋರಿಕೆಯನ್ನು ಒಪ್ಪುವುದಿಲ್ಲ. ತೀವ್ರವಾಗಿ ನಿರಾಕರಿಸುತ್ತಾಳೆ. ಇದು ಕಾವ್ಯದ ಮುಖ್ಯ ಪ್ರಸಂಗ.

ನೀಲೇಗೌಡ ಹೆಜ್ಜೇನು ಮಲೆಗೆ ಹೋದ ಸಮಯದಲ್ಲಿ ಹೆಂಡತಿ ಸಂಕಮ್ಮ ಏನು ಮಾಡಬಹುದು ಎಂಬುದನ್ನು ಊಹಿಸಿಕೊಂಡು ಆತಂಕಕ್ಕೊಳಗಾಗುತ್ತಾನೆ. ಒಂದು ವೇಳೆ ಸಂಕಮ್ಮ ಇನ್ನಾರಿಗಾದರೂ ಮನಸೋತು ಬಿಟ್ಟರೆ? ಅಥವಾ ಯಾರಾದರೂ ಅವಳ ಮನಸ್ಸನ್ನು ಒಲಿಸಿಕೊಂಡು ಬಿಟ್ಟರೆ? ಇವು ಆತನ ಆತಂಕಗಳು. ಅದಕ್ಕೆ ಅಂತಹ ಯಾವುದೇ ಅಚಾತುರ್ಯ ಮಾಡುವುದಿಲ್ಲ ಎಂಬ ವಾಗ್ದಾನವನ್ನು ಸಂಕಮ್ಮನಿಂದ ನೀಲೇಗೌಡ ಬಯಸುತ್ತಾನೆ. ತಾನೇ ಮೆಚ್ಚಿ ಮದುವೆಯಾದ, ಶೀಲವಂತೆ ಹೆಂಡತಿ ಬಗ್ಗೆ ನೀಲೇಗೌಡ, ಆಕೆಯ ಕನಸು ಮನಸ್ಸಿನಲ್ಲಿಯೂ ಇಲ್ಲದ ಕಲ್ಪನೆಗಳನ್ನು ವಾಸ್ತವವಾಗಿ ನಡೆದೇ ನಡೆಯುತ್ತದೆ, ನನ್ನ ಹೆಂಡತಿ ಹಾಗೆ ಮಾಡುವಳೇ ಅನ್ನುವಂತೆ ಭಾವಿಸುವ ನೀಲೇಗೌಡನ ಮನಸ್ಥಿತಿ ಸಂಕಮ್ಮನಂತಹ ಶೀಲವಂತ ಹೆಣ್ಣಿಗೆ ದೊಡ್ಡ ಆಘಾತವನ್ನು, ಅವಮಾನವನ್ನು ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸಂಕಮ್ಮ ನೀಲೇಗೌಡನ ಭಾವನೆ, ಕಲ್ಪನೆಗಳ ವಿರುದ್ಧ ಆತನ ಆರಪಗಳ ವಿರುದ್ಧ ಪ್ರತಿಭಟಿಸಿ, ತಿರಸ್ಕರಿಸಿ ಭಾಷೆ ಕೊಡಲು ನಿರಾಕರಿಸುತ್ತಾಳೆ. ಹಾಗೆಲ್ಲಾ ತಪ್ಪು ಎಸಗದಂತ ತಾನು ಹಾಗೆಲ್ಲಾ ಮಾಡುವುದಿಲ್ಲವೆಂದು ಭಾಷೆ ಕೊಡುವುದು ಕೂಡ ಸಂಕಮ್ಮನ ಅರ್ಥದಲ್ಲಿ ಅದು ಹೆಣ್ಣಿನ ಸೋಲು. ಅದಕ್ಕೆ ಅವಳು ಗಂಡನಿಗೆ ಭಾಷೆ ಕೊಡುವುದಿಲ್ಲ. ಮಾತು ಕೊಡುವುದಿಲ್ಲ.

ಸಂಕಮ್ಮ ಈ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಗಂಡನ ಮುಂದೆ ಪ್ರತಿಭಟಿಸುತ್ತಾಳೆ, ತಿರುಗಿ ಬೀಳುತ್ತಾಳೆಂದರೆ “ಕಟ್ಟಿದ ತೆರವ ತಕ್ಕಂದು ನೀನು ಬಿಟ್ಟು ಬಿಡಯ್ಯ ಮಡದೀಯ’’ ಎಂದು ಹೇಳ್ತಾತಳೆ. ಮದುವೆಯಾಗುವಾಗ ಹೆಣ್ಣಿಗೆ ಇಷ್ಟು ಅಂತ ಹಣ ಕಟ್ಟುವುದು ದಲಿತ, ಬುಡಕಟ್ಟು ಸಂಸ್ಕೃತಿಯಲ್ಲಿದೆ. ಹಾಗೆ ನೀನು ಕಟ್ಟಿರುವ ಹಣವನ್ನು ವಾಪಸ್ಸು ತಕ್ಕೊ, ನಿನ್ನ ಹೆಂಡತಿಯಾಗಿ ನಾನು ಇರುವುದಿಲ್ಲ ಎಂದು ಹೇಳುತ್ತಾಳೆ. ಅಂದರೆ ನನ್ನ ಮೇಲೆ ನಂಬಿಕೆ ಇಲ್ಲ ಎಂದರೆ ನಾನು ನಿನ್ನ ಹೆಂಡತಿಯಾಗಿರಲು ಇಷ್ಟವಿಲ್ಲ ನನಗೆ. ನನ್ನನ್ನು ಬಿಟ್ಟುಬಿಡು ಬೇಕಾದರೆ, ಭಾಷೆ ಮಾತ್ರ ಕೊಡಲಾರೆ ಎಂಬುದು ಸಂಕಮ್ಮನ ನಿಲುವು.

ನೀಲೇಗೌಡ ಬೇಟೆಗೆ ಹೋಗುವಾಗ ಸಂಕಮ್ಮನನ್ನು ಒಂದು ರೀತಿ ಗೃಹಬಂಧನದಲ್ಲಿಟ್ಟು ಹೋಗುತ್ತಾನೆ. ಯಾರಿಂದಲೂ ಬೇಧಿಸಲಾಗದಂತಹ, ಯಾರಿಗೂ ತಿಳಿಯಲಾಗದಂತಹ ಒಂದು ಮಾಯಾಲೋಕವನ್ನೂ ಸೃಷ್ಟಿಸುತ್ತಾನೆ. ಜೊತೆಗೆ ಈ ಪ್ರಸಂಗ ಬುಡಕಟ್ಟು ಸಮುದಾಯದಲ್ಲಿನ ಮೋಡಿ ವಿದ್ಯೆ ಮತ್ತು ನೀಲೇಗೌಡನ ತಂತ್ರವಿದ್ಯೆಯ ಪ್ರತಿಭಾ ಶಕ್ತಿಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಕಾವ್ಯದಲ್ಲಿ ವಿವರಿಸುವ ಪ್ರಕಾರ ನೀಲಯ್ಯದಟ್ಟ ಅರಣ್ಯದೊಳಗೆ ಒಂಟಿ ದೊಡ್ಡಿಯನ್ನು ಕಟ್ಟಿ ಅಲ್ಲಿ ಸಂಕಮ್ಮನಿಗೆ ಕೊಡಬಾರದ ಶಿಕ್ಷೆ ಕೊಟ್ಟು ಕೆಡವುತ್ತಾನೆ. ಸಂಕಮ್ಮ ಉಟ್ಟಿದ್ದ ಬಟ್ಟೆ ಕಳಚಿ ಉಗನಿಯ ಸೊಪ್ಪು ಉಡಿಸಿ, ಎಕ್ಕದೆಲೆಯಲಿ ಎದೆಕಟ್ಟಿ, ಕಬ್ಬಾಳಂಬಲಿ ನಡುಕಟ್ಟಿ, ತೇಗದೆಲೆಯಲಿ ಮುಸುಕಾರೆ, ಸೊಪ್ಪಿನುಡುಗೆ ಉಡಿಸುತ್ತಾ. “ಅಯ್ಯಾ ಕಣ್ಣಿಗೆ ಸೂಜಿ ಹಾಕವನೆ, ಕರ್ಣಕೆ ದಬ್ಳವ ಬಡದವನೆ, ಬಾಯಿಗೆ ಬೀಗ ಹಾಕವನೆ, ಹಿಂಗೈ ಮುರುದು ಕಟ್ಟವನೆ, ಮುಂಗೈ ಮುರುದು ಕಟ್ಟವನೆ, ಕಾಲಿಗೆ ಬೇಡಿ ಹಾಕವನೆ, ಮುದುರಿ ಮೂಟೆ ಕಟ್ಟವ್ನೆ ಮೊಕ್ಕಣ್ಣಾಗಿ ಕೆಡುಗವನೇ, ಎತ್ತುಬಾರದ ಗುಂಡ ತಂದವನೆ ಬೆನ್ನ ಮೇಲೆ ಮಡಗವನೆ, ಅಯ್ಯ ನಗ್ಗಾಲು ಮುಳ್ಳಾ ತಂದವನೆ, ಮಗ್ಗಾಲು ಹಾಸಿಗೆ ಮಾಡಾವನೆ’’[8] ಇಂತಹ ಕಠಿಣ ಶಿಕ್ಷೆ ವಿಧಿಸಿದರೂ ಸಮಾಧಾನಗೊಳ್ಳದ ನೀಲಯ್ಯ ಇಷ್ಟೆಲ್ಲವನ್ನೂ ನಿವಾರಿಸಿಕೊಂಡು ತನ್ನ ಹೆಂಡತಿಯಾಗಲಿ, ಇನ್ನಾರೇ ಆಗಲಿ ಸುಲಭವಾಗಿ ಮನೆ ಪ್ರವೇಶಿಸಿ ಅವಳನ್ನು ಮುಟ್ಟಲಾಗದಂತೆ ಗುಡಿಸಲು ಸುತ್ತ ಮೋಡಿ ಹಾಕುತ್ತಾನೆ.

ಬಾಗೇ ಮರದ ಎರಡು ಗೊಂಬೆಗಳನ್ನು ಮಾಡಿ ಅವುಗಳಿಗೆ ತನ್ನ ಜೀವ ತುಂಬಿ, ಅವುಗಳ ಕೈಗೆ ಖಡ್ಗಗಳನ್ನು ಕೊಟ್ಟು ಗುಡಿಸಲ ಬಾಗಿಲ ಬಳಿ ನಿಲ್ಲಿಸುತ್ತಾನೆ. ಯಾರೇ ಆಕ್ರಮವಾಗಿ ಮನೆ ಪ್ರವೇಶಿಸಲು ಬಂದರೆ ಅವರ ತಲೆ ತರಿ ಗುಡಿಸಲ ಬಾಗಿಲಿಗೆ ಕಟ್ಟಿ ಎಂದು ಆಜ್ಞೆ ಮಾಡುತ್ತಾನೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಗುಡಿಸಲು ಸುತ್ತಾ ಉಳುಕುಮಂಡಲ, ಕೊಳಕುಮಂಡಲಗಳೇ ಆದ ಎಪ್ಪತ್ತೇಳು ಮಂಡಲಗಳ ಮೋಡಿ ಕಾವಲು ಹಾಕಿ ಇವುಗಳ ದಾಟಿದವರ ಕೈಕಾಲು ಸೇದು ಹೋಗಲಿ, ಕಣ್ಣುಗಳು ಹಿಂಗಿಹೋಗಲಿ, ತಲೆ ಸಹಸ್ರ ಹೋಳಾಗಲಿ ಎಂದು ಮೋಡಿ ಹಾಕುತ್ತಾನೆ. ಇದು ಸೋಲಿಗರ ಹಾಗೂ ಅಂದಿನ ದೇಶಿ ಜನರ ತಂತ್ರ ವಿದ್ಯೆಯಾಗಿ, ದೇಶೀ ವಿಜ್ಞಾನ ಪ್ರತಿಭೆಯ ಪ್ರತೀಕಗಳಾಗಿವೆ. ಹೀಗೆ ನಡೆದುಕೊಳ್ಳುವ ಮೂಲಕ ನೀಲೇಗೌಡ ಮಾದೇಶ್ವರನಿಗೆ ಪ್ರಬಲ ಸ್ಪರ್ಧಿಯಾಗಿ, ಸವಾಲಾಗಿ ನಿಲ್ಲುತ್ತಾನೆ.

ಹೀಗೆ ಗಂಡನಿಂದ ಘನ ಘೋರವಾದ ಶಿಕ್ಷೆಗೆ ಒಳಗಾಗಿ ಸೊಪ್ಪಿನ ಗುಡಿಸಲ ಒಳಗೆ ಬಿದ್ದಿದ್ದ ಸಂಕಮ್ಮ ತನ್ನ ಕಷ್ಟ ಪರಿಹರಿಸಿ, ಬಂಧ ಮುಕ್ತಿಗಾಗಿ ಹಲವು ದೇವತೆಗಳನ್ನು ಪ್ರಾರ್ಥಿಸುತ್ತಾಳೆ. ಗಮನಾರ್ಹ ಅಂಶವೆಂದರೆ ಕಾವ್ಯದಲ್ಲಿ ಉಲ್ಲೇಖವಾಗುವಂತೆ ಸಂಕಮ್ಮ ಮೊದಲು ತನ್ನ ಗಂಡನ ಮನೆಯ ದೇವತೆಗಳಾದ ತಿರುಪತಿ ವೆಂಕಟರಮಣ, ಮೇಲುಕೋಟೆ ಚಲುವನಾರಾಯಣ, ಅಕ್ಕಮ್ಮ ಚಿಕ್ಕಮ್ಮ, ಮೂಗೂರು ತಿಬ್ಬಾದೇವಿಯವರನ್ನು ಬೇಡುತ್ತಾಳೆ. ಆದರೆ ಅವರ್ಯಾರು ಅವಳ ಸಹಾಯಕ್ಕೆ ಬರುವುದಿಲ್ಲ. ಈ ಪ್ರಸಂಗ ಮುಖ್ಯವಾಗಿ ಎರಡು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಒಂದು ಮಲೆ ಮಾದೇಸ್ವರ ಪರಂಪರೆ ಊರ್ಜಿತವಾಗಿ ಅಸ್ತಿತ್ವಕ್ಕೆ ಬರುವ ಸಂದರ್ಭದ ಸಾಂಸ್ಕೃತಿಕ ಚಿತ್ರಣ. ಶಕ್ತಿ ಅಥವಾ ಮಾತೃಪ್ರಧಾನ ಪಂಥಗಳು, ವೈಷ್ಣವ ಪಂಥಗಳು ಪಥನವಾಗುವ, ಪ್ರಾಮುಖ್ಯತೆ ಕಳೆದುಕೊಳ್ಳುವ ಸೂಚನೆಯಾಗಿವೆ. ಅವುಗಳ ಜನಪ್ರಿಯತೆ ಕುಗ್ಗಿ ಹೊಸ ಪಂಥಗಳ ಅಸ್ತಿತ್ವಕ್ಕೆ ಪ್ರಶಸ್ತ ಸಮಯವಾಗಿದ್ದು ಹಾಗಾಗಿಯೇ ಮಲೆ ಮಾದೇಶ್ವರ, ಮಂಟೇಸ್ವಾಮಿ ಪಂಥಗಳು ಏಳಿಗೆಗೆ ಬರಲು ಸಾಧ್ಯವಾಗಿರಬೇಕು. ಇಡೀ ಕಾವ್ಯದಲ್ಲಿ ಎಲ್ಲ ಕಡೆ ಮಾದೇಶ್ವರನೇ ಗೆಲ್ಲುವುದು ಈ ಪಂಥದ ಯಶಸ್ವಿಯ ಸೂಚನೆಯಾಗಿದೆ. ನೀಲೇಗೌಡ ಮೊದಲು ಮಾದೇಶ್ವರನ ಒಕ್ಕಲಾಗಿರುವುದಿಲ್ಲ. ಅವನ ಮೂಲಕ ಇಡೀ ಬುಡಕಟ್ಟು ಸಮುದಾಯವನ್ನು ಒಕ್ಕಲಾಗಿಸಿಕೊಳ್ಳಲು ಮಾದೇಶ್ವರ ಈಗಾಗಲೇ ಒಕ್ಕಲಾಗಿದ್ದ ಸಂಕಮ್ಮನ ಮೂಲಕ ಪ್ರವೇಶಿಸುತ್ತಾನೆ. ಹಾಗಾಗಿ ಸಂಕಮ್ಮ ಗಂಡನ ಮನೆಯ ದೇವತೆಗಳು ಸಹಾಯಕ್ಕೆ ಬರದೇ ಹೋದಾಗ ತನ್ನ ಅಪ್ಪನ ಮನೆಯ ದೇವರಾದ ಮಾದೇಶ್ವರನನ್ನು ಮೊರೆಹೋಗುತ್ತಾಳೆ.

ಸಂಕಮ್ಮ ಹಾಕಿದ ಕಣ್ಣೀರು “ಮಾದೇಶ್ವರನ ಮುತ್ತಿನ ಜೋಳಿಗೆ ಮೇಲೆ ಮೂರನಿಬಿದ್ದು, ನಾಗ ಬೆತ್ತದ ಮೇಲ ನಾಲ್ಕನಿ ಬಿದ್ದು, ಅವರ ಲಿಂಗದ ಮೇಲ ಧರಿಸಿದ್ದಂತ ಪಾರಿಜಾತ ಪುಷ್ಪ ಗರಗರನೆ ತಿರುಗಿ ಧರೆಯ ಮೇಲೆ ಬಿದ್ದು ಬಿಡುತ್ತದೆ. ಕಣ್ಣೀರು ಅನೋದು ಏಳುಮಲೆ ಕೈಲಾಸದಲ್ಲಿ ಹೊಳೆಯಾಗಿ ಹರೀತು. ಆಗ ಮಾದೇಶ್ವರ ಗಕ್ಕನೆ ಕಣ್ಣು ಬಿಟ್ಟು ನೋಡುತ್ತಾರೆ. ಎಪ್ಪತ್ತೇಳು ಮಲೆ ಧಗಧಗನೆ ಕತ್ತಿ ಬಗಬಗನೆ ಉರೀತಾ ಇದೆ. ಇದು ಯಾರ ಕಣ್ಣೀರು ಎಂದು ಮಾದೇಶ್ವರ ನೋಡುತ್ತಾನೆ. ಇದು ತನ್ನ ಕುಲದ, ಒಕ್ಕಲ ಹೆಣ್ಣುಮಗಳಾದ ಸಂಕಮ್ಮನ ಕಣ್ಣೀರು, ಇವಳ ಕಷ್ಟ ಕೇಳದೇ ಹೋದರೆ, ಪರಿಹರಿಸದೇ ಹೋದರೆ ಈ ಭೂಮಿಯಲ್ಲಿ ಮಳೆ ಇಲ್ಲ, ಬೆಳೆ ಇಲ್ಲ, ನನ್ನ ಏಳಮಲೆ ಕೈಲಾಸ ಉಳಿಯೋದಿಲ್ಲ ಅಂತೇಳಿ ಮಾದೇಶ್ವರ ಸಂಕಮ್ಮನ ಮನೆಯ ಮುಂದಕ್ಕೆ ಓಡೋಡಿ ಬರುತ್ತಾನೆ’’[9]

ಇಂದಿಗೂ ಬುಡಕಟ್ಟುಗಳ ನಡುವೆ ಅವರದೇ ಆದ ವೈದ್ಯ ಪದ್ಧತಿ ಇದೆ. ಅದರ ಸೂಚ್ಯವಾಗಿ ಮಾದೇಶ್ವರ ಸಂಕಮ್ಮನಿಗೆ ಪಿಂಡಪ್ರಸಾದ ಕೊಟ್ಟು ಮಕ್ಕಳ ಫಲ ಕರುಣಿಸುತ್ತಾನೆ. ಇದು ಬುಡಕಟ್ಟು ವೈದ್ಯದ ಫಲದ ಸಂಕೇತ. ಜೊತೆಗೆ ಮಲೆ ಮಾದೇಶ್ವರ ಕಾವ್ಯ ಈ ಪ್ರಸಂಗದಲ್ಲಿ ಸಮಕಾಲೀನ ಸಮಾಜದ ಮನುಷ್ಯ ಸಹಜ ಗಂಡು ಹೆಣ್ಣಿನ ಒಳತೋಟಿಗಳನ್ನೂ ಸಾಂಕೇತಿಕವಾಗಿ ದಾಖಲಿಸುತ್ತದೆ. ಬುಡಕಟ್ಟು ಹಾಗೂ ಮಾನವೀಯ ಸಮಾಜ ತುಂಬಾ ಮುಕ್ತವಾದ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಕೆಲವು ಸಂದೇಶಗಳನ್ನು ಅಭಿವ್ಯಕ್ತಿಸುತ್ತದೆ. ಒಬ್ಬ ಅಸಹಾಯಕ ಹೆಣ್ಣು ಸರಿಯೋ ತಪ್ಪೋ ತಾನು ಬಂಜೆಯಲ್ಲವೆಂಬುದನ್ನು ಋಜುವಾತು ಮಾಡಲು, ಅನೈತಿಕತೆ ಎಂಬ ಶಿಷ್ಟ ಸಾಮಾಜಿಕ ಮೌಲ್ಯವನ್ನು ಒಡೆಯುವ ಮೂಲಕ ಅನಿವಾರ್ಯವಾದ ಹಾಗೂ ಮನುಷ್ಯ ಸಹಜವಾದ ವರ್ತನೆಯನ್ನು ಕಾವ್ಯ ಧವನಿಸುತ್ತದೆ.

ಮಾದೇಶ್ವರ ಸಂಕಮ್ಮನಿಗೆ ಕುಲದೇವತೆಯಾಗಿ ಬಂಜೆತನ ಪರಿಹರಿಸಿ, ಮಕ್ಕಳ ವರಕೊಟ್ಟು ಸಮಾಜ ಆಡಿಕೊಳ್ಳುವುದನ್ನು ತಪ್ಪಿಸುವ ಭರವಸೆ ನೀಡುತ್ತಾನೆ. ಪ್ರತಿಯಾಗಿ ತಾನು ವರವಾಗಿ ಕೊಡುವ ಮಕ್ಕಳನ್ನು ಶಿಷ್ಯರಾಗಿ ಪಡೆಯುವ ಉದ್ದೇಶ ಹೊಂದಿರುತ್ತಾನೆ. ಈ ಮಕ್ಕಳ ವರವನ್ನು ಹೇಗೆ, ಎಲ್ಲಿ ಕೊಡುತ್ತೇನೆಂದು ಸಂಕಮ್ಮನಿಗೆ ತಿಳಿಸುವುದಿಲ್ಲ. ಮುಂಜಾನೆ ಸೂರ್ಯೋದಯಕ್ಕೆ ಅರಳೀಮರದ ಹತ್ತಿರ ಬರಲು ಹೇಳುತ್ತಾನೆ. ಅಲ್ಲಿ ಅವಳ ಅರಿವಿಗೆ ಬರದಂತೆ ನಡೆವ ಘಟನೆಯಲ್ಲಿ ಅವಳು ವರ ಪಡೆಯುತ್ತಾಳೆ. ಅರಳೀಮರ ಅಥವಾ ಬೋಧಿವೃಕ್ಷ ಸಾಮಾನ್ಯ ಮನುಷ್ಯನೊಬ್ಬನನ್ನು ಮಹಾಜ್ಞಾನಿಯನ್ನಾಗಿ ಪರಿವರ್ತಿಸಿದ ಸಂಕೇತ. ಅಂತಹ ಸ್ಥಳದಲ್ಲಿ ಸಂಕಮ್ಮನ ಬಂಜೆತನವೆಂಬ  ಬದುಕು ಕೊನೆಗೊಂಡು ಹೊಸ ಬದುಕು ಆರಂಭವಾಗುತ್ತದೆ. ಇಂತಹ ಒಂದು ಮುಖ್ಯ ಪರಿವರ್ತನೆಯನ್ನು ಅರಳೀಮರ ಸಂಕೇತಿಸುತ್ತದೆ. ಮಾದೇಶ್ವರ ಮುದಕನಾಗಿ ವೇಷ ಮರೆಸಿ ಬರುವುದು ಸಂಕಮ್ಮನಿಗೆ ತಿಳಿಯುವುದಿಲ್ಲ. ಮುದುಕನ ಕಜ್ಜಿ ತುರಿಸಿಕೊಳ್ಳುವ ಬಯಕೆ ಮನುಷ್ಯ ಸಹಜವಾದ ಬಯಕೆ ಮತ್ತು ಅಗತ್ಯದ ಪ್ರತಿಮೆ. ಹಾಗೇ ಅತ್ಯಂತ ಮುಗ್ಧವಾಗಿ ನಡೆದುಕೊಳ್ಳುವ ಸಂಕಮ್ಮನ ನಡವಳಿಕೆ ಕೂಡ ಸ್ತ್ರೀ ಸಹಜವಾದದ್ದೇ ಆಗಿದೆ. ಗಂಡಸೊಬ್ಬನ ಶರೀರದ ರಕ್ತ ಮತ್ತು ಬೆವರು ಹೆಣ್ಣೊಬ್ಬಳ ಒಡಲು ಸೇರುವುದನ್ನು ಗರ್ಭಧಾರಣೆಗೆ ಸಂಕೇತವಾಗಿ ಕಾವ್ಯದಲ್ಲಿ ತಂದಿರುವುದು ಅದ್ಭುತ ಕಲ್ಪನೆಯಾಗಿದೆ. ನಾಗ ಬೆತ್ತ ಕಾಮದ ಸಂಕೇತವಾಗಿದ್ದರೂ ನಾಥಪಂಥೀಯ ಸಾಧುಗಳಲ್ಲಿ ಕಾಮ ಮುಕ್ತಿಯನ್ನು, ಕಾಮದ ವಿರುದ್ಧ ಗೆಲುವನ್ನು ಸೂಚಿಸುತ್ತದೆ. “ನಾಗ’’ ಕಾಮದಮನಕ್ಕಾಗಿ ಕೂಡ ಸಾಧುಗಳಲ್ಲಿ ಗುರುತಿಸಿಕೊಳ್ಳುತ್ತದೆ. ಆದರೆ ಸಂಕಮ್ಮನ ಬೆನ್ನಮೇಲೆ ನಾಗಬೆತ್ತದಿಂದ ಬರೆಯುವುದು ಮಕ್ಕಳ ಫಲ ನೀಡಿದ ಫಲವಂತಿಕೆಯ ಸಂಕೇತವೇ ಆಗಿದೆ. ಮನೆ ಹೊಸಿಲ ದಾಟಿ ಬರುವುದು ಶಿಷ್ಟ ಸಮಾಜದ ಕಟ್ಟಳೆಗಳನ್ನು ದಾಟಿಬರುವುದರ ಸೂಚನೆಯನ್ನು, ಹೆಣ್ಣು ಕೂಡ ಸ್ವತಂತ್ರ ಚಿಂತನೆ ಮಾಡಬೇಕಾದ ಅಗತ್ಯವನ್ನು ಅಭಿವ್ಯಕ್ತಿಸುತ್ತವೆ.

 

[1] ಬಾಬಾಸಾಹೇಬ್ಅಂಬೇಡ್ಕರ್ಬರಹಗಳುಮತ್ತುಭಾಷಣಗಳು, ಸಂಪುಟ-೩, ಪುಟ೩೯೮

[2] ಅದೇ

[3] ಅದೇ

[4] ದ.ಕ.ಜಕಾ.ಪ್ರ., ಜೀಶಂಪ, ಪು೮೯, ೯೦, ೯೧

[5] ಅದೇ

[6] ಅದೇ

[7] ಅದೇಪುಟ೯೩

[8] ಅದೇಪುಟ೧೮೮

[9] ಮುದುಮಲೆಬೆಟ್ಟ, ಕುಣಗಳ್ಳಿ, ಸೂರಾಪುರ, ಕ್ಷೇತ್ರಕಾರ್ಯವರದಿ, ದಿನಾಂಕಜೂನ್೧೬, ೧೮, ೨೦೦೩, ಜುಲೈ೧೦, ೧೧, ೨೦೦೩ಮಾಹಿತಿದಾರರು : ಗವಿನಿಂಗಯ್ಯ (ಬೂದಿತಿಟ್ಟು), ತಮ್ಮಯ್ಯಮೇಷ್ಟ್ರು (ಸೂರಾಪುರ) ಕೆ.ಎಂ. ಲಿಂಗನಾಯ್ಕ (ಕುಣಗಳ್ಳಿ) ಮುನೀಶ್ವರಗವಿಭಕ್ತರು.