ಸ್ನೇಹಿತರೆ, ನೀವೆಲ್ಲ ಮಂಟೇಸ್ವಾಮಿ ಕಾವ್ಯವನ್ನೋ ಅಥವಾ ಮಾದೇಶ್ವರ ಕಾವ್ಯವನ್ನೋ ಓದಿಕೊಂಡು ಅದರ ತಳಕ್ಕೇನೋ ಇಳಿದಿದ್ದೀರಿ. ನಾನು ಆ ಗುಂಪಿಗೆಸೇರಿದವನಲ್ಲ. ನಾವು ಗೋಲಿ-ಗೆಜ್ಗ ಆಡಿಕೊಂಡು ಮಾದಪ್ಪನ ಬೆಟ್ಟದಿಂದ ಬರೋ ಪರಸೇನೇ ಕಾಯುತ್ತಾ ಅವರು ಕೊಡೋವಂತ ವಿಭೂತಿ ಉಂಡೆ ಮತ್ತು ಗೊಂಡೆ ದಾರ ಇವುಗಳನ್ನು ನಮ್ಮ ಕತ್ತುಗಳಿಗೆ ನೇತಾಕ್ಕೊಂಡು, ನಮ್ಮ ಹಣೆಗಳಿಗೆ ಬಸ್ಮ ಹಾಕ್ಕೊಂಡು ಪುಟ್ಟಪುಟ್ಟ ಮಾದಪ್ಪಗಳಾಗಿ ನಾವು ಹಳ್ಳಿಗಳಲ್ಲಿ ಕುಣೀತಾ ಇದ್ದೋರು. ಈ ಮಲೆ ಮಾದೇಶ್ವರ ಶೂದ್ರ ಜನದ ಸಾಂಸ್ಕೃತಿಕ ನಾಯಕ ಎನ್ನುವಂತ ಘೋಷಣೆಯನ್ನು ನಾವು ಈಗಾಗಲೇ ಮೊಳಗಿಸಿದ್ದೇವೆ. ನಮ್ಮ ಬಾಲ್ಯ ಲೀಲೆಯನ್ನು ನಾನು ಈಗ ಪ್ರಸ್ತಾಪ ಮಾಡಿದ ರೀತಿ ನಾವು ಅಕ್ಷರವನ್ನು ಕಲಿತು ಈ ಕೃತಿಗಳನ್ನು ಅಧ್ಯಯನ ಮಾಡುವ ಕಾಲದವರೆಗೂ ನಾವು ಮೌಖಿಕವಾಗಿದ್ದಂತ ಈ ಪರಂಪರೆಯನ್ನು ಯಾವ ರೀತಿ ಹಾಡುಗಾರರು ನಮ್ಮ ಊರುಗಳಿಗೆ ಬಂದು ಹಾಡುತ್ತಾ ಇದ್ದರೋ ಅಂತ ಸಂದರ್ಭಗಳಲ್ಲೇ ಕೇಳಿ ಅವನು ಮಹಿಮೆಯನ್ನು ಅರ್ಥಮಾಡಿಕೊಂಡು ಅವನ ಅನುಯಾಯಿಗಳಾಗಿ, ಭಕ್ತರಾಗಿ, ಕುಲದವರಾಗಿ ಬದುಕುತ್ತಾ ಇದ್ದವರು. ನಂತರ ಬೆಳೆದಂಗೆ ಒಂದು ಕಡೆ ಮನುಷ್ಯರನ್ನೇ ಭಕ್ಷಿಸುವಂತ ಹುಲಿಯನ್ನ ತನ್ನ ವಾಹನವನ್ನಾಗಿ (ಹುಲಿ ಅಂತಂದ್ರೆ ಸಮಾಜವನ್ನು ತನ್ನ ವಾಹವನ್ನಾಗಿ) ಮಾಡಿಕೊಂಡು ಅವರನ್ನೆಲ್ಲ ಮಟ್ಟಿಸಿ ನಮ್ಮಂತ ಕೆಳವರ್ಗಧವರನ್ನು ಒಂದು ಮಾನವೀಯ ನೆಲೆಗೆ ತಂದಂತ ಈ ಸಾಂಸ್ಕೃತಿಕ ನಾಯಕನನ್ನು ಓಲೈಸುತ್ತಾ ನಂತರ ಈ ವರ್ಗ ಅದರಲ್ಲೂ ದಲಿತವರ್ಗ ಸು. ೧೯೭೦ನೇ ಸಾಲಿವರೆಗೂ ಈ ರೀತಿಯ ಮೌಖಿಕ ಪರಂಪರೆಯ ಈ ಮೂಢನಂಬಿಕೆ ಕಂದಾಚಾರ ಅಂತ ಏನು ಹೇಳುತ್ತಿದ್ದರೋ ಅದರ ಒಳಗಡೇನೇ ಅವನೇನು ಪರಿಭಾವಿಸದೆ ಅದೇ ಸತ್ಯ ಅಂತ ಹೇಳಿ ಭಾವಿಸಿ ಬದುಕುತ್ತಿದ್ದಂತ ನಮ್ಮಂತವರಿಗೆ ಸು. ೭೦ನೇ ಸಾಲಿನಲ್ಲಿ ದಲಿತ ಸಂಘರ್ಷ ಸಮಿತಿ ಎನ್ನುವಂತ ಒಂದು ಸಂಘಟನೆ ಯಾವ ಈ ತುಳಿತಕ್ಕೆ ಒಳಗಾದ ವರ್ಗದವರಿಗೆ, ದಲಿತವರ್ಗದವರಿಗೆ ಒಬ್ಬ ನಾಯಕ ಇದಾನೆ ಅಂತವನು ಈಗಾಗಲೇ ಪರಿಚಿತ ಆಗಿತ್ತೋ ಅದನ್ನು ಮೀರಿ ಈ ವರ್ಗಕ್ಕೆ ಆಗುತ್ತಿರುವಂತ ಅನ್ಯಾಯಗಳನ್ನು ಈ ಅಕ್ಷರ ಪರಂಪರೆಯ ಜನ ಏನು ಕಟ್ಟಿದರೋ ಆ ಸಂಘಟನೆಗಳಲ್ಲಿ ನಾವು ಬೆಳೀತಾ ಮಾದಪ್ಪನನ್ನೇ ನಾವು ತಿರಸ್ಕಾರ ಮಾಡುವಂತ ಸಂದರ್ಭಗಳಲ್ಲೂ, ಆ ಸಂದರ್ಭ ಮತ್ತು ಈ ಸಂದರ್ಭ ಈ ಎರಡು ಸಂದರ್ಭಗಳ ನಡುವೆ ನಾನು ಸಿಕ್ಕು ಹಾಕಿಕೊಂಡಿದ್ದೀನಿ ಅಂತ ನನಗೆ ಅನಿಸ್ತಾ ಇದೆ. ಒಂದು ನೆಲೆಯಲ್ಲಿ ಈ ತುಳಿತಕ್ಕೆ ಒಳಗಾದ ಜನರ ಸಾಂಸ್ಕೃತಿಕ ನಾಯಕ ಅಂತ ಹೇಳಿ ಮಾದೇಶ್ವರ ಈಗಾಗಲೇ ಏನು establish ಆಗಿದ್ದನೋ ಅವನು ಒಂದು ಕಡೆ,  ಆದರೆ ಇಂದಿನ ಕಾಲಕ್ಕೆ ನಾವು ಈ ಜನ ಏನು ತುಳಿತಕ್ಕೆ ಒಳಗಾಗಿದ್ದೀವೋ ಅವರ ಬಿಡುಗಡೆ ಇಲ್ಲಲ್ಲ ಇರೋದು, ಈ ರೀತಿಯ ಹೋರಾಟದಲ್ಲಿ ಅಂತ ಹೇಳಿ ಯಾವುದೋ ಒಂದು ಸಂಘಟನೆ  ಹುಟ್ಟುತ್ತದೋ ಆ ಸಂಘಟನೆಯಲ್ಲೂ ಗುರುತಿಸಿಕೊಂಡು, ಅಲ್ಲಿ ಬೆಳೆದಂತೋರು ಈ ಸಂಘಟನೆಯಲ್ಲಿ ಗುರುತಿಸಿಕೊಂಡು, ಇವರನ್ನೇ ದಿಕ್ಕಾರ ಮಾಡುವಂತ ಎರಡೂ ಸಂದರ್ಭಗಳಲ್ಲಿ ಬೆಳೆದು ಈ ಹೊತ್ತು ನಿಮ್ಮ ಮುಂದೆ ನಾನು ನಿಂತಿದ್ದೇನೆ. ಈ ನನಗೆ ಇಂದ್ವಾಡಿ ಅವರು ಹೇಳಿರೋದು ‘ಸೃಜನಶೀಲ ಲೇಖಕರ ಅನುಸಂಧಾನ’ ಅಂತ ಹೇಳಿ ವಿಷಯ ಕೊಟ್ಟಿದ್ದಾರ ಈ ಕಾವ್ಯವನ್ನು ನಾನು ಓದಿದಾಗ ಒಬ್ಬ ಲೇಖಕನಾಗಿ ಅದರ ಆನಂದವನ್ನು ನಾನು ಆಗಲೇ ಪಡೆದುಕೊಂಡಿದ್ದೆ. ನಾನು ಬರೆಯೋದಕ್ಕೆ ಸುರುಮಾಡೋದಕ್ಕಿಂತ ಮುಂಚೇನೇ. ಏಕೆಂದರೆ ಈ ಮಾದಪ್ಪನ ಕಾವ್ಯವನ್ನು ಹೆಚ್ಚಿನ ಜನ ಬಹಳ ತಲ್ಲೀನವಾಗಿ ಸ್ವಾದನೆ ಮಾಡ್ತಾ ಇರೋದು ಏಕೆಂದರೆ, ಈಗ ಬೆಳಿಗ್ಗೆ ನಮ್ಮ ಮಾದೇಶ್ವರದವರು ಹಾಡ್ತಾ ಇದ್ದರು, ನನಗೆ ಬಹಳ ಭಾವುಕನಾಗಿ ಅದನ್ನು ಅನುಭವಿಸುತ್ತಾ ನನಗೆ ಕಣ್ಣಲ್ಲಿ ನೀರು ಬರುವ ಸಂದರ್ಭಾನೇ ಬಂದು ಬಿಡ್ತು ಏಕೆಂತ ಹೇಳಿದರೆ ಆ ತುಳಿತಕ್ಕೆ ಒಳಗಾದಂತ ನಾಯಕ ಎಷ್ಟು ಸ್ಪಂದಿಸುತ್ತಾ ಇದ್ದ ಅಂತ ಹೇಳಿದರೆ ಅವನ ಆ ಇಡೀ ಕಾವ್ಯ ಓದುತ್ತಾ ಹೋದರೆ, ಹೆಣ್ಣು ಮಕ್ಕಳಿಗೆ ಕಂದ, ಮಗಳೆ ಅಂತ ಅನ್ನುವ ವಾಕ್ಯವನ್ನು, ಅಲ್ಲಿ ಬೇರೆ ಏನು ಹೇಳೋದಿಲ್ಲ. ಆ ಇಂಟಿಮಸಿ ಏನು ಇದೆಯಲ್ಲ, ಮಗಳೆ ಏನು ಬೆಚ್ಚಬೇಡ ನೀನು, ಬೆದರ ಬೇಡ ನೀನು ನಾನು ಇದೀನಿ ಕಂದ ಈ ರೀತಿಯ ಒಂದು ಅಸೂರೆನ್ಸ್ ಅಥವಾ ಒಂದು ಭರವಸೆಯನ್ನು ಈ ಜನಕ್ಕೆ ಕೊಡುತಕ್ಕಂತ ನಾಯಕರುಗಳು ನಾವು ಈ ಹೊತ್ತು ಬಯಸುತ್ತಾ ಇದೀವಿ. ಆದರೆ ಆ ತರ ಯಾರೂ ಸಿಕ್ಕಿಲ್ಲ. ಆ ರೀತಿಯ ಚೌಕಟ್ಟಿನಲ್ಲಿ, ಆ ರೀತಿಯ ಭಾಷೆಯಲ್ಲಿ ಆ ರೀತಿಯ ವಣಯಲ್ಲಿ, ಆ ರೀತಿಯ ಅಲಂಕಾರದಲ್ಲಿ ಪ್ರತಿಯೊಂದು ರೀತಿಯಲ್ಲೂ ಸಹಿತ ಮಲೆಯ ಮಾದೇಶ್ವರರು ಈ ನಮ್ಮ ತಳವರ್ಗಧ ಜನಗಳ ಜೊತೆಗೆ Intimate ಆಗಿದ್ರಲ್ಲ.ಅದನ್ನ ಒಂದು ಕಡೆ ಬಿಡೋಕೆ, ತುಂಬ ಕಷ್ಟವಾದ್ರೂನೂ, ಈ ಹೊತ್ತಿನ ಈ ಕಾಲಘಟ್ಟದಲ್ಲಿ ಆ ಮಾದೇಶ್ವರ ಕಾವ್ಯವನ್ನೇ ಮುಂದುರೆಸಿಕೊಂಡು ಹೋಗಬೇಕಾ ಅಥವಾ ಅದರ ಬಗ್ಗೆ ಬೆಳಿಗ್ಗೆ ಚರ್ಚೆ ಆದಂಗೆ ಬೇರೆ ಬೇರೆ ಮುಖಗಳಲ್ಲಿ, ಬೇರೆ ಬೇರೆ ಆಂಗಲ್‌ಗಳಲ್ಲಿ ಅದನ್ನು ಅರ್ಥೈಸುತ್ತಾ ಈ ಹೊತ್ತಿನ ಕಾಲ ಸಂದರ್ಭಕ್ಕೆ ಅದನ್ನು ಯಾವ ರೀತಿ ನಾವು ಅದನ್ನು ರೂಪಿಸಬಹುದು ಅನ್ನುವ ನೆಲೆನಲ್ಲಿ ನಾವು ಯೋಚನೆ ಮಾಡಬೇಕು ಅನ್ನುವ ರೀತಿಯಲ್ಲಿ  ಬೆಳಿಗ್ಗೆ ಮಾತನಾಡಿದ್ದಾರೆ. ನನಗನಿಸುತ್ತೆ, ಒಬ್ಬ ಲೇಖಕನಿಗೆ ಈ ಕೃತಿಯನ್ನು ಒಪ್ಪಿಕೊಳ್ಳುತ್ತಾ ಹೋದಂತ ಸಂದರ್ಭದಲ್ಲಿ ಎಲ್ಲೊ ಒಂದು ಕಡೆ ನಾವು ಅಲ್ಲೆ stagnet (ಸ್ಟ್ಯಾಗ್‌ನೆಟ್) ಆಗಿ ನಿಂತುಬಿಡ್ತೀವೇನೋ ಅನ್ನುವ ಒಂದು ಅನುಮಾನವೂ ಕೂಡ ನನಗೆ ಬರುತ್ತೆ. ಆದರೆ ಯಾತ್ರೆ ನೋಡ್ರಿ, ನನ್ನನ್ನ ರೂಪಿಸಿದಂತ, ನನ್ನನ್ನ ಬೆಳಿಸಿದಂತ ಈ ಕಾವ್ಯವನ್ನು ನಾನೇ ಒಂದು ಕಾಲ ಘಟ್ಟದಲ್ಲಿ ಅದನ್ನು ವಿಮುಖವಾಗಿ ಅದರ ವಿರುದ್ಧ ನಿಂತುಕೊಂಡು ಅದನ್ನ ಬೇರೆ ರೀತಿ ಅರ್ಥೈಸುವಂತ ಒಂದು ಭಾಗ್ಯ ಇದೆಯಲ್ಲ ಅದು ನಮ್ಮಂತೋರ ಪಾಲಿಗೆ ಬಂದುಬಿಟ್ಟಿದೆ. ಈ ಕಾವ್ಯದ ಎಳೆ ಜುಂಜಪ್ಪನ ಆರಂಭದಿಂದ ಹಿಡಿದುಕೊಂಡ ಸಂಕಮ್ಮ ಮತ್ತೆ ದುಂಡಮ್ಮ ಈ ರೀತಿ ಬೇರೆ ಬೇರೆ ಮಹಿಳೆಯರ ಕಥೆಗಳೆಚ್ಚು ಇಲ್ಲಿ ಬರುತಾ ಹೋಗುತ್ತವೆ. ಈ ಕಥೆಗಳನ್ನು ಈ ಜಾಡನ್ನು ಹಿಡುಕೊಂಡು ನಾವು ಮುಂದಕ್ಕೆ ಹೋಯಿತಾ ಹೋದರೆ, ಈ ಹೊತ್ತಿನ ಆಧುನಿಕ ಕಾಲದ ಮೀಮಾಂಸೆಗಳೇನಿದಾವೆ ಅಥವಾ ಈ ಆಧುನಿಕ ಕಾಲದ ನಮ್ಮ ಬೇಕು ಬೇಡಿಕೆಗಳೇನಿದಾವೆ ಈ ಎಲ್ಲವೂ ನಮಗೆ ತಾಳೆ ಮಾಡಿಕೊಂಡು ನೋಡಿಕೊಂತ ಹೋದಂಗೆ ನಮಗೆ ಬೇರೆ ಒಂದು ವಿಚಿತ್ರ, ಭಿನ್ನವಾದಂತಹ ಒಂದು ಮನಸ್ಥಿತಿಯನ್ನು ಈ ಕಾವ್ಯ ನಿರ್ಮಾಣ ಮಾಡ್ತಾ ಹೋಗ್ತದೆ. ಎಲ್ಲೋ ಒಂದು ಕಡೆ ಈಗ ಬೆಳಿಗ್ಗೆ ಮಾದೇಶ್ವರರು ಹಾಡಿದಂತ ಕತೆಗಳನ್ನೇ ನಮ್ಮ ಊರಿನಲ್ಲಿ ಅಥವಾ ಹಳ್ಳಿಗಳಲ್ಲಿ ಹಾಡಿಕೊಂತ ಕೂತುಗೊಂಡರೆ ಎಷ್ಟು Intimate ಆಗಿ ಇರ‍್ತಾರೆ ಜನಗಳು ಅಂತಂದ್ರೆ ಅವರು ಭಾವುಕರಾಗಿ ಅಳ್ತಾ ಕುಳಿತುಗೊಂಡು ಬಿಡುತ್ತಾರೆ. ಶರಣಾಗಿ ಬಿಡ್ತಾರೆ. ನನಗೆ ಒಂದು ರೀತಿಯಲ್ಲಿ ಯಾವ ಅಭಿಲಾಷೆಗಳನ್ನು, ಯಾವ ಆಸೆಗಳನ್ನು, ಯಾವುದೇ ಆರ್ಥಿಕ ಫೆಸಿಲಿಟೀಸ್‌ಗಳನ್ನು ಮಾದೇಶ್ವರನಿಂದಾಗಲಿ, ಮಂಟೇಸ್ವಾಮಿಯಿಂದಾಗಲೀ ಬಯಸದೆ ಇಡೀ ಜನ ಅವರಿಗೆ ಒಕ್ಕಲಾಗಿ ನಡೆದುಕೊಳ್ಳುತ್ತಾ ಇರತಕ್ಕಂತ ಒಂದು ಸನ್ನಿವೇಶ ಇದೆಯಲ್ಲ ಅದು ಯಾವ ರೀತಿ ಅದು, ತೀರ ಸೆಂಟಿಮೆಂಟಲ್ ಆಗಿರುವಂತದಾ, ತೀರ ಭಾವುಕರಾಗಿರುವಂತದಾ, ಯಾವ ರೀತಿಯಾಗ ಇಟ್ಟುಕೊಂಡು ನಾವು ಅರ್ಥೈಸಬೇಕು, ಯಾವ ರೀತಿಯಾಗಿ ನಾವು ಅದನ್ನು ನೋಡಬೇಕು. ಅನ್ನುವುದರ ಬಗ್ಗೇನೇ ಒಂದು ವಿಚಿತ್ರವಾದಂತ ಒಂದು ಮನಸ್ಥಿತಿ ನನ್ನಲ್ಲಿ ನಿರ್ಮಾಣ ಆಗೋದಿಕ್ಕೆ ಶುರುವಾಗ್ತದೆ. ನಾವು ಮಂಟೇಸ್ವಾಮಿ ಕಾವ್ಯವನ್ನು, ‘ಮಂಟೇಸ್ವಾಮಿ ಪ್ರತಿಷ್ಠಾನ’ ಅನ್ನುವ organisation ಮಾಡಿಕೊಂಡು ಪ್ರತಿ ವರ್ಷವೂ ಆ ಸಂಘಟನೆಯಲ್ಲಿ ಕಾವ್ಯದ ಬಗ್ಗೆ, ಹಾಡ್ತಾ ಇರುವಂತ ನೀಲಗಾರರ ಬಗ್ಗೆ ಒಂದು ಪ್ರಶಸ್ತಿಯನ್ನು ನಿರ್ಮಾಣ ಮಾಡಿಕೊಂಡು ಅವರಿಗೆ ಕೊಡ್ತಾ ಬಂದಿದ್ದೇವೆ. ನಾನು ಎಷ್ಟೋ ಸಾರಿ ಅವರ ಜತೆ ಮಾತಾಡುತ್ತಾ ಹೇಳ್ತಾ ಇದ್ದೆ. ನೋಡಿ ಬೆಳಗ್ಗೆ ರಾಜಶೇಕರವರು ಹೇಳಿದರು ‘ಕೃತಿಯನ್ನು ಓದೋದಕ್ಕಿಂತ ಅದನ್ನು ಆಲಿಸುವುದರಲ್ಲಿ ಹೆಚ್ಚಿನ ಖುಷಿ ಸಿಗುತ್ತೆ’ ಅಂತ. ನನಗೆ ಇದನ್ನು ಒಂದು ರೀತಿ ಈ ಮೌಖಿಕವಾಗಿರುವಂತ ಒಂದು ಪರಂಪರೆಯನ್ನು ನಾವು ಮುದ್ರಿಸದೆ ಹೋಗಿಬಿಟ್ಟರೆ ದ್ರೋಹ ಆಗಿ ಬಿಡ್ತದೆ ಅಂತೇಳಿ ನಾವು ಮುದ್ರಿಸಲಿಕ್ಕೆ ಪ್ರಯತ್ನ ಮಾಡುವುದಂತೂ ನಿಜ. ಇನ್ನೊಂದು ರೀತೀಲಿ ಈ ಪರಂಪರೆಯನ್ನು ಬೆಳೆಸಬೇಕು ಅಂತ ಹೋಗೋದಾದರೆ, ನಾವು ಶಾಲ ಓಪನ್ ಮಾಡಿದೀವಿ. ಆ ಶಾಲೆ ಕಲಿಯಲಿಕ್ಕೆ ಬರುವಂತ ಮಕ್ಕಳಿಗೆ ಈ ಮಂಟೇಸ್ವಾಮಿ ಕಾವ್ಯವನ್ನು ಕಲಿಸುವಂತ ಶಾಲೇನೂ ನಾವು ಓಪನ್ ಮಾಡಿದೀವಿ. ನನಗೆ ಎಷ್ಟೋ ಸಾರಿ ಬಹಳ ಬೇಜಾರಾಗೋದು ಏನು ಅಂತ ಹೇಳಿದ್ರೆ. ಈ ಮಕ್ಕಳು ಕಲಿತಾ ಇರುವಂತ ವಿದ್ಯಾರ್ಥಿಗಳು ಈ ಆಧುನಿಕವಾದಂತ ಎಲ್ಲ ಸವಲತ್ತುಗಳನ್ನು ಅವರಿಗೆಲ್ಲ ವಂಚಿತ ಆಗುತಾ ಇದೆ ಏನೋ, ಅವರು ನಾಳೆ ಗುಡ್ಡರಾಗಿ ಭಿಕ್ಷೆ ಬೇಡುವಂತ ಪರಿಸ್ಥಿತೀನ ನಾವೇ ನಿರ್ಮಾಣ ಮಾಡ್ತಿದೀವಿ ಏನೋ, ಅನ್ನುವ ಸಂದರ್ಭಾನೂ ಕೂಡ ಒಂದೊಂದು ಸಾರಿ ನಮಗೆ ಹಿಂದುಗಡೆಯಿಂದ ಚುಚ್ಚುತಾ ಇರ‍್ತದೆ. ಹಾಗಾಗಿ ಒಂದು ರೀತಿಯಲ್ಲಿ ಈ ಮಂಟೇಸ್ವಾಮಿ ಮತ್ತು ಮಾದೇಶ್ವರರು ಇಲ್ಲೇ ಉಳಿದಿದ್ದರೆ ಈ ಭಾಗದ ಜನ, ಹಳೆಯ ಮೈಸೂರು ಭಾಗದ ಜನ ಯಾರ ತೆಕ್ಕೆಗೆ ಹೋಗ್ತಾ ಇದ್ದರು, ಯಾರ ಆಶ್ರಯವನ್ನು ಪಡಕೊಂಡ ಅವರ ಅಭಿಲಾಷೆಗಳನ್ನು ಈಡೇರಿಸಿಕೊಳ್ತಾ ಇದ್ದರು. ಅನ್ನುವಂತ ಪ್ರಶ್ನೆಯನ್ನು ನಾವು ಹಾಕ್ಕೊಂಡಾಗ ನಾವು ಸಹಜ ಇವರ ಮೊರೆ ಹೋಗಬೇಕಾದ ಸಂದರ್ಭಾನೂ ಬರ‍್ತದೆ. ಹಾಗಾಗಿ ನನಗೆ ಒಬ್ಬ ಲೇಖಕನಾಗಿ ಅದರ ಸೌಂದರ್ಯವನ್ನು ಸ್ವಾದಿಸತಕ್ಕಂತ, ನನ್ನ ಬರವಣಿಗೆಯಲ್ಲಿ ಅದನ್ನು ಯಾವ ರೀತಿ ರೂಢಿಸಿಕೊಳ್ಳಬೇಕು ಅನ್ನುವುದಕ್ಕಿಂತ ಹೆಚ್ಚಾಗಿ ಅದರ ಸಾಮಾಜಿಕ ಘಟನೆಗಳಿದಾವಲ್ಲ ಆ ಘಟನೆಗಳನ್ನು ನಾನು ಹೆಂಗೆ ನಿಭಾಯಿಸಬಲ್ಲ ಅನ್ನೋದರ ಬಗ್ಗೇನೇ ನನಗೆ ಬಹಳ ಆತಂತಕಗಳು ಇರತಕ್ಕಂತದು. ಮಂಟೇಸ್ವಾಮಿ ಮತ್ತು ಮಾದೇಶ್ವರ ಕಾವ್ಯಗಳಲ್ಲಿ ಇರತಕ್ಕಂತ ಸನ್ನಿವೇಶಗಳು, ಈಗ ಉದಾ. ಸಂಕಮ್ಮನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮಾದೇಶ್ವರ ಬಂದು ಅವಳಿಗೆ ಮಕ್ಕಳಾಗುವಂತ ವರವನ್ನು ಘೋಷಣೆ ಮಾಡಿದ, ಕೊಟ್ಟ ಅಂತ ಹೇಳುವಂತ ರೀತಿ ಈ ಹೊತ್ತಿನ ಆಧುನಿಕ ಕಾಲಕ್ಕೆ ಆಯಮ್ಮ ಅಷ್ಟೆಲ್ಲ ಕಷ್ಟ ಪಡಬೇಕಾದಂತ ಅಗತ್ಯ ಖಂಡಿತ ಇಲ್ಲ.  ಈ ಹೊತ್ತು ನಿಮಗೆ ಮಕ್ಕಳಿಲ್ಲ ಅಂತಂದ್ರೆ ಮಕ್ಕಳು ಪಡೀಬೇಕಾದಂತ ರೀತಿಗಳು ಆಧುನಿಕವಾಗಿ ಬೆದಷ್ಟು ರೀತಿಗಳಲ್ಲಿ ವ್ಯವಸ್ಥೆ ನಮಗೆ ಈಗಾಗಲೇ ಒದಗಿಸಿಕೊಟ್ಟಿದೆ. ಇಂಥದನ್ನು ಈ ಕಾವ್ಯವನ್ನು ಇಟ್ಟುಕೊಂಡು ಈ ಹೊತ್ತಿನ ಪ್ರಚಲಿತ ಸಮಾಜದ ಜೊತೆಗೆ ಸಮೀಕರಣಗೊಳಿಸುವಂತ ಸಂದರ್ಭದಲ್ಲಿ ಜನಗಳು ಯಾವುದನ್ನು ಆಯ್ಕೆ ಮಾಡಿಕೊಳ್ತಾರೆ ಅನ್ನುವ ಸಂದರ್ಭ ಬಂದಾಗೆಲ್ಲ ಸಹಿತ, ನಾನು ಇಲ್ಲಿ ಈ ಕೃತಿಯನ್ನು ಇಟ್ಟುಕೊಂಡು ಹೇಳೋದಿಕ್ಕೆ ಪ್ರಯತ್ನ ಮಾಡ್ತಿದಿನಿ ಅಂತಾನೇ ನನಗನಿಸೋದು. ಹಾಗಾಗಿ ಇವರನ್ನು ಸಾಂಸ್ಕೃತಿಕ ನಾಯಕರು ಅಂತ ಒಪ್ಪಿಕೊಳ್ಳುತ್ತಾ, ಮತ್ತೆ ಅವರು ನಮ್ಮಜಾತಿಯವರೇ ಅಂತೇಳಿ ನಾವು ಘಂಟಾಘೋಷವಾಗಿ ಹೇಳೋಕೆ, ಈಗ ಅಧ್ಯಯನ ಮಾಡಿದಂತ ವಿದ್ವಾಂಸರುಗಳಿಗೇ ಸಂದೇಹ ಇದೆ. ಅವನು ಮಾದಿಗರೋನೋ, ಹೊಲೆಯರವನೋ ಅಂತ. ನಾನು ಅವನ್ನ ನಮ್ಮವನು, ಇವನು ಮಾದಿಗರವನು, ಇವನು ಹೊಲೆಯರವನು ಅಂತೇಳಿ ಅವರನ್ನು ಸಮೀಕರಣ ಮಾಡಿಕೊಂಡು, ಅವರು ನಮ್ಮ ನಾಯಕರು ಅಂತ ಹೇಳಿಕೊಂಡು, ಆ ಕಾರಣಕ್ಕೋಸ್ಕರ ನಾನು ಬಹಳ ಸೆಂಟಿಮೆಂಟಲ್ ಆಗಿ, ಅವರು ಮಾಡಿದ ಪವಾಡಗಳು, ಮಾಯ-ಮಂತ್ರಗಳು, ಇವೆಲ್ಲವನ್ನು ಒಪ್ಪಿಕೊಂಡು ಅವರನ್ನು ಪೂಜಿಸುವಂತಹ ಕ್ರಿಯೆಯನ್ನು ಇನ್ನೂ ಮುಂದುವರಿಸಿಕೊಂಡು ಹೋಗುವಂತಹ ಸಂದರ್ಭಗಳಿದಾವಲ್ಲ ಅದು ಯಾಕೋ ಒಂದು ರೀತಿ ಒಗ್ಗುವಂತದಲ್ಲ ಅಂತನೇ ಈಗ ನನಗೆ ಅನಿಸೋದು. ಏಕೆಂದರೆ ಯಾವನೇ ಒಬ್ಬ ಸೃಜನಶೀಲ ಲೇಖಕ ಜಾತಿಯನ್ನ ಮೀರಿ, ಈ ಸಂಪ್ರದಾಯವನ್ನು ಮೀರಿ, ಈ ಧಾರ್ಮಿಕ ಹಿನ್ನೆಲೆಗಳನ್ನು ಮೀರಿ, ಎಲ್ಲರ ನಡುವೆಯೂ ಅವನು ಐಡೆಂಟಿಪೈ ಮಾಡಿಕೊಳ್ಳುವುದಿದೆಯಲ್ಲ ಅದೇ ನಿಜವಾದಂತ ಒಬ್ಬ ಸೃಜನಶೀಲ ಲೇಖಕನ ಸ್ಥಾನ ಈ ಹೊತ್ತು ಅಂತ ನಾನು ಅಂದುಕೊಂಡಿದೀನಿ. ಹಾಗಾಗಿ ನಾನು ತುಂಬ ಅದರ ಬಗ್ಗೆ ಏನು ಅಧ್ಯಯನ ಮಾಡಿಲ್ಲ.  ನಾನು ನನಗೆ ಅನಿಸಿರುವ ಮಾತುಗಳನ್ನು ನಿಮ್ಮ ಮುಂದೆ ಹೇಳಿದೀನಿ. ಚರ್ಚೆಯಾಗುವ ಸಂದರ್ಭದಲ್ಲಿ ಹೆಚ್ಚು ವಿವರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ಇಷ್ಟಪಡ್ತೀನಿ, ಧನ್ಯವಾದ.