ಮಲೆ ಮಾದೇಶ್ವರ ಕಾವ್ಯವನ್ನು ಇತಿಹಾಸದ ದೃಷ್ಟಿಯಿಂದ ನೋಡಬೇಕೇ ಅಥವಾ ಬೌದ್ಧಿಕ ದೃಷ್ಟಿಯಿಂದ ನೋಡಬೇಕೇ ಎಂಬ ಜಿಜ್ಞಾಸೆಯಲ್ಲಿ ನಾನು ಹಲವು ವರ್ಷಗಳನ್ನು ಕಳೆದೆ. ಮಾದಪ್ಪ ಐತಿಹಾಸಿಕ ವ್ಯಕ್ತಿಯೇ ಅಥವಾ ಸ್ಪಿರಿಚುಯಲ್ ಆದ ಸಾಂಕೇತಿಕ ವ್ಯಕ್ತಿತ್ವವೇ ಎಂಬ ಗೊಂದಲ ನನ್ನಲ್ಲಿ ಹಲವು ಕಾಲ ಇತ್ತು. ರಾಮ, ಕೃಷ್ಣ, ಶಿವನನ್ನು ಡಾ. ರಾಮಮನೋಹರ ಲೋಹಿಯಾ ಸ್ಪಿರಿಚುಯಲ್ ಆದ ವ್ಯಕ್ತಿತ್ವಗಳನ್ನಾಗಿ ನೋಡಿದರು. ಆದರೆ ಡಾ. ಅಂಬೇಡ್ಕರ್ ಇತಿಹಾಸ ಮತ್ತು ಸಾಮಾಜಿಕ ವಿಶ್ಲೇಷಣೆ ದೃಷ್ಟಿಯಿಂದ ಐತಿಹಾಸಿಕ ವ್ಯಕ್ತಿಗಳನ್ನಾಗಿ ನೋಡಿದರು. ಇದರಲ್ಲಿ ಯಾವುದು ಸರಿ? ನನ್ನ ಪ್ರಕಾರ ಎರಡೂ ಸರಿಯೇ. ಆದರೆ ಇಂದಿನ ಕಾಲಮಾನದ ದೃಷ್ಟಿಯಿಂದ ಹಾಗೂ ಸಮಾಜದಲ್ಲಿ ಪ್ರಸ್ತುತ ಇರುವ ಸಾಮಾಜಿಕ ವಿಸಂಗತಿಗಳ ದೃಷ್ಟಿಯಿಂದ ಇತಿಹಾಸದ ದೃಷ್ಟಿಕೋನದಿಂದ ನೋಡಿ ಪುನರವಲೋಕನಕ್ಕೆ ಒಡ್ಡುವ ಅಗತ್ಯವಿದೆ ಎಂಬುದು ನನ್ನ ಅಭಿಮತ. ಅದರಲ್ಲಿಯೂ ಈ ಕಾವ್ಯ ಹದಿನೈದು ಹದಿನಾರನೇ ಶತಮಾನದಿದ್ದಿರಬಹುದು ಎಂಬ ಅಂಶದ ದೃಷ್ಟಯಿಂದ ಕೂಡ ಇದನ್ನು ಐತಿಹಾಸಿಕ ದೃಷ್ಟಿಯಿಂದ ನೋಡಬೇಕು ಎಂದು ನಾನು ವಾದಿಸಿದ್ದೆನಲ್ಲದೆ ಅಂಥ ಒಂದೆರಡು ಲೇಖನಗಳನ್ನು ಬರೆದಿದ್ದೂ ಉಂಟು.

ಮಲೆ ಮಾದೇಶ್ವರ ಕಾವ್ಯವನ್ನು ಐತಿಹಾಸಿಕ ದೃಷ್ಟಿಯಿಂದ ನೋಡಬೇಕಾದ ಎರಡು ತುರ್ತುಗಳು ನಮ್ಮ ಮುಂದಿವೆ. ಒಂದನೆಯ ತುರ್ತು ಸಮಾಜದಲ್ಲಿ ಮುಂದುವರಿದ ಜಾತಿಯೊಂದು ಇದೀಗ ಮಾದಪ್ಪನನ್ನು ಮಾದೇಶ್ವರನ್ನಾಗಿ ಸ್ವೀಕರಿಸಿ, ಅವನು ಮೂಲದಲ್ಲಿ ತಮ್ಮ ಜಾತಿಗೆ ಸೇರಿದವನು ಎಂಬ ಅಭಿಪ್ರಾಯ ಸೃಷ್ಟಿಸುವ ಮೂಲಕ ಜಾತಿಯ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಹೊರಟಿರುವುದು. ಅದರಲ್ಲೂ ಮಲೆ ಮಾದೇಶ್ವರ ಕಾವ್ಯದ ಪ್ರಕಾರವೇ ಹೇಳುವುದಾದರೆ ಮಠವೊಂದು ರಾಗಿ ಬೀಸಲು ಇಟ್ಟುಕೊಂಡ ಅನಾಥ ಹುಡುಗನೊಬ್ಬನನ್ನು ಇಂದು ತಮ್ಮ ಕುಲದೈವ ಎಂದು ಪ್ರತಿಪಾದಿಸುವ ವಿಚಾರವೇ ಕುತೂಹಲಕರ. ಎರಡನೆಯ ತುರ್ತು ಬುಡಕಟ್ಟುಗಳ ಅಥವಾ ಕೆಳಜಾತಿಯ ದೈವವೆಂದು ನಂಬಿರುವ ಮಾದಪ್ಪನ ಕಥನದ ಮೂಲಕ ಮೂಲ ಪರಂಪರೆಯ ಮೌಲ್ಯಗಳನ್ನು ಹಾಗೂ ಅದರ ಸಂಘರ್ಷಾತ್ಮಕ ಬೆಳವಣಿಗೆಗಳನ್ನು ಗುರುತಿಸಲು ಸಾಧ್ಯವಾಗಬಹುದು ಎಂಬ ಆಶಯ.

ನನ್ನ ಪ್ರಕಾರ ಈ ಕಾವ್ಯದಲ್ಲಿ ಮೂರು ಐತಿಹಾಸಿಕ ಹಂತಗಳಿವೆ.

ಮೊದಲ ಹಂತ : ಸೋಲಿಗ ಸಮುದಾಯದ ಪ್ರಾಚೀನ ಜೀವನ ಪದ್ಧತಿ ಮತ್ತು ಅವರು ನಂಬಿದ್ದ ಮೌಲ್ಯಗಳ ಅನಾವರಣ ಹಾಗೂ ಕ್ರಮೇಣ ಆ ನಂಬಿಕೆಗಳಲ್ಲಿ ಉಂಟಾಗುವ ಸಂಘರ್ಷ.

ಈ ಹಂತ ಮನುಷ್ಯ ಜೀವನದ ಆರ್ಥಿಕ ಚಕ್ರದ ಮೊದಲ ಹಂತ ಎನಿಸಿದ ಆಹಾರ ಸಂಗ್ರಹಣೆಯ ಬಗೆಗಳನ್ನು ಸೂಚಿಸುವ ಸಾಂಸ್ಕೃತಿ ಇತಿಹಾಸವೂ ಹೌದು. ಇಲ್ಲಿ ಸ್ತ್ರೀಯ ಸ್ವಾತಂತ್ರ್ಯದ ಪ್ರಶ್ನೆ ಪ್ರಮುಖವಾಗುತ್ತದೆ. ‘ಮಾಟ’ ಎಂಬ ಪ್ರಾಚೀನ ವಿಜ್ಞಾನದ ಪ್ರಯೋಗಾತ್ಮಕ ಪಳೆಯುಳಿಕೆಗಳ ದರ್ಶನವೂ ಇಲ್ಲಿ ಆಗುತ್ತದೆ. ಕಾವ್ಯದ ನಾಯಕಿ ಸಂಕಮ್ಮನ ಗೆಲವು ಹಾಗೂ ನಾಯಕ ನೀಲಯ್ಯನ ಸೋಲು ಆ ಕಾಲದ ಬದುಕಿನ ಸಂಘರ್ಷವನ್ನು ಕಟ್ಟಿಕೊಡುತ್ತದೆ.

ಎರಡನೆಯ ಹಂತ : ಎರಡನೇ ಹಂತದಲ್ಲಿ ಒಡೆತನದ ಪ್ರಶ್ನೆ ಉದ್ಭವಿಸುತ್ತದೆ. ಅಂದರೆ, ಆಹಾರ ಸಂಗ್ರಹಣೆಯ ಕಾಲ ಸರಿದು, ಪಶುಸಂಗೋಪನೆ, ಕೃಷಿ ಹಾಗೂ ಆ ಮೂಲಕ ಭೂಮಿಯ ಒಡೆತನದ ಆರ್ಥಿಕ ಹಂತ ಆರಂಭವಾದ ಕಾಲ ಅದು.

ನೆಲೆ ನಿಂತ ಕುರುಬರ ಕೃಷಿಯ ಜೀವನ, ಅದರ ಒಡತಿಯಾದ ಬೇವಿನಹಟ್ಟಿ ಕಾಳಮ್ಮನ ದರ್ಪಭರಿತವಾದ ಸ್ವಾಭಿಮಾನ ಇಲ್ಲಿ ಪ್ರಕಟವಾಗುತ್ತವೆ. ಒಡೆತನವನ್ನು ಒಪ್ಪದ ಮಾದಪ್ಪ ಕಾಳಮ್ಮನನ್ನು ಸಂಪೂರ್ಣವಾಗಿ ನಿರ್ವಸಿತಳನ್ನಾಗಿ ಮಾಡುತ್ತಾನಾದರೂ ಅವಳ ಸ್ವಾಭಿಮಾನವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಆ ಮೂಲಕ ಮೇಲ್ನೋಟಕ್ಕೆ ಕಾಳಮ್ಮ ಪರಾಭವಗೊಳ್ಳುತ್ತಾಳಾದರೂ ಪರೋಕ್ಷ ಗೆಲವು ಅವಳದೇ. ಅಂದರೆ ಈ ಪ್ರಸಂಗ ಭೂಮಿಯ ಒಡೆತನದ ಸಂಘರ್ಷವಾಗಿ ನಮಗೆ ಕಾಣುತ್ತದೆ.

ಮೂರನೇ ಹಂತ: ಮೂರನೇ ಹಂತದಲ್ಲಿ ಸಾಮ್ರಾಜ್ಯ ಸ್ಥಾಪನೆಯ ತವಕ ಎದ್ದು ಕಾಣುತ್ತದೆ. ಅಂದರೆ ಆಹಾರ ಸಂಗ್ರಹಣೆ, ಪಶುಸಂಗೋಪನೆ ಹಾಗೂ ಕೃಷಿಯ ಆರ್ಥಿಕ ಚಕ್ರದ ನಂತರ ಉದ್ಭವವಾಗುವುದೇ ಈ ಸಾಮ್ರಾಜ್ಯಶಾಹಿ ಮನೋಭಾವ. ಆ ಮನೋಭಾವದ ಪ್ರತೀಕವಾಗಿ ಶ್ರವಣದೊರೆ ಕಾಣಿಸಿಕೊಳ್ಳುತ್ತಾನೆ. ಅವನ ಸಾಮ್ರಾಜ್ಯಶಾಹಿ ಅಹಂಕಾರದ ಅಧಿಕಾರವನ್ನು ಜನಮನ್ನಣೆ ಪಡೆದ ಮಾದೇಶ್ವರ ಎಂಬ ಬೈರಾಗಿ ಇಲ್ಲವಾಗಿಸುತ್ತಾನೆ.

ಹೀಗೆ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ನಿರೂಪಿಸುವ ಮೂರು ಹಂತಗಳು ಮಲೆ ಮಾದೇಶ್ವರ ಕಾವ್ಯದಲ್ಲಿ ನಿಚ್ಚಳವಾಗಿ ನಿರೂಪಿತವಾಗುತ್ತವೆ. ಈ ಹಿನ್ನೆಲೆಯಲ್ಲಿ ಈ ಕಾವ್ಯದಲ್ಲಿ ಬರುವ ಪ್ರಮುಖ ಆಶಯಗಳು ಹೀಗಿವೆ:

. ನಿಸರ್ಗದ ಜೊತೆಗಿನ ಅನುಸಂಧಾನ

೧. ನಿಸರ್ಗದ ಒಂದು  ಭಾಗವಾದ ಬುಡಕಟ್ಟು ಜೀವನ

೨. ಆಹಾರ ಸಂಗ್ರಹಣೆಯ ವಿಧಿವಿಧಾನಗಳು

೩. ಮಾಟ, ಕೂಟ ಮೂಲಕ ನಿಸರ್ಗವನ್ನು ನಿಯಂತ್ರಿಸುವ ಪ್ರಯತ್ನ

೪. ಹುಲಿ, ಹಾವು, ಪ್ರಾಣಿ ಪಕ್ಷಿಗಳ ಜೊತೆಗಿನ ಸಹಜ ಜೀವನ

೫. ಹೆಣ್ಣು ಗಂಡಿನ ನಿಸರ್ಗ ಸಹಜ ಸಂಬಂಧ

. ಒಡೆತನದ ವಿರುದ್ಧ ಘರ್ಷಣೆ

೧. ಮಾತೃಮೂಲೀಯ ಕುಟುಂಬ ವೈಭವೀಕರಣ

೨. ಒಡೆತನಕ್ಕೆ ಪೂರಕವಾದ ಅಹಂಕಾರ

೩. ದಾನ, ಧರ್ಮಷ ದಾಸೋಹಗಳ  ಅವಹೇಳನ

೪. ಒಡೆತನ ಶಿವನದೋ ಮನುಷ್ಯನದೋ ಎಂಬ ಆಧ್ಯಾತ್ಮಿಕ ವಾದ

. ಸಾಮ್ರಾಜ್ಯದ ವಿರುದ್ಧದ ಘರ್ಷಣೆ

೧. ಸಾಮ್ರಾಜ್ಯಶಾಹಿಯ ದರ್ಪ ಧೋರಣೆ

೨. ಸಾಮ್ರಾಜ್ಯಶಾಹಿಯ ಪಿತೂರಿ

೩. ಮಾದಪ್ಪನ ಮೂಲಕ ಜನತೆಯ ಗೆಲವು, ಸಾಮ್ರಾಜ್ಯಶಾಹಿಯ ನಾಶ

ಈ ಆಶಯಗಳ ಹಿನ್ನೆಲೆಯಲ್ಲಿ ಇದು

ಪೋಡಿನ ಕಥೆ (ಸಂಕಮ್ಮನ ಸಾಲು)

ಗ್ರಾಮದ ಕಥೆ (ಕಾಳಮ್ಮನ ಸಾಲು)

ಸಾಮ್ರಾಜ್ಯದ ಕಥೆ (ಶ್ರವಣದೊರೆ ಸಾಲು)

ಇತಿಹಾಸದ ದೃಷ್ಟಿಯಿಂದ ನೋಡಿದಾಗ ಇವು ಮೂರು ಬೇರೆ ಬೇರೆ ಕಾಲಮಾನದ ಕಥೆಗಳು. ಈ ಒಂದೊಂದು ಸಾಂಸ್ಕೃತಿಕ ಹಂತವನ್ನು ಮಾದಪ್ಪನೆಂಬ ಆಧ್ಯಾತ್ಮಿಕ ನಾಯಕನ ಮೂಲಕ ಸುಸಂಬದ್ಧವಾಗಿ ಬೆಸೆಯಲಾಗಿದೆ. ಈ ದೃಷ್ಟಿಯಿಂದ ಮಾದಪ್ಪ ಇಲ್ಲಿ ಒಂದು ಸಂಕೇತ. ಕಾವ್ಯದ ಉದ್ದಕ್ಕೂ ಅವನೊಬ್ಬ ಸ್ಪಿರುಚಿಯಲ್ ಲೀಡರ್ ಎನ್ನುವುದೂ ನಿಜ. ಆದರೆ ಕಾವ್ಯದಲ್ಲಿನ ನಾನಾ ಸನ್ನಿವೇಶಗಳು ಇತಿಹಾಸದ ಸಂಕೇತಗಳಾಗಿ ನಮಗೆ ಕಾಣಿಸುತ್ತವ. ಪ್ರಾಚೀನ ಜೀವನದ ಪಳೆಯುಳಿಕೆಗಳಾಗಿ ನಮಗೆ ಗೋಚರವಾಗುತ್ತವೆ. ಆದ್ದರಿಂದ ಈ ಕಾವ್ಯ Spiritual Identity ಯೂ ಹೌದು, ಈ ನನ್ನ ಅಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಲೆ ಮಾದೇಶ್ವರ ಕಾವ್ಯದ ಸಂಕಮ್ಮನ ಸಾಲು ಮತ್ತು ಬೇವಿನಹಟ್ಟಿ ಕಾಳಮ್ಮನ ಸಾಲುಗಳನ್ನು ಇನ್ನಷ್ಟು ವಿಶ್ಲೇಷಣೆಗೆ ಒಳಪಡಿಸಲು ಬಯಸುತ್ತೇನೆ.

ಸಂಕಮ್ಮನ ಸಾಲು

ಜನಪದ ಕಾವ್ಯ ಅಕ್ಷರದ ಸಹಾಯವಿಲ್ಲದೆ ಬೆಳೆದು ಬಂದದ್ದು. ಅನಾದಿ ಕಾಲದ ಭಾಷೆಯೇ ಕಾವ್ಯದ ರೂಪದಲ್ಲಿರುತ್ತಿತ್ತು. ಮನುಷ್ಯನಲ್ಲಿ ಪ್ರತಿಭೆ ಮತ್ತು ಚಿಂತನೆಯ ದೃಷ್ಟಿ ಬೆಳೆದಂತೆ ಭಾಷೆಯನ್ನು ಇನ್ನಷ್ಟು ದುಡಿಸಿಕೊಂಡು ಕಾವ್ಯ ಕಟ್ಟಲ್ಪಡತೊಡಗಿತು. ಇಂದಿನದು ಭಾಷೆ ಮತ್ತು ಲಿಪಿಗಳೆರಡನ್ನು ಬಳಸಿಕೊಂಡ ಕಾವ್ಯವಾದರೆ ಅಂದಿನದು ಭಾಷೆಯನ್ನು ಮಾತ್ರ ದುಡಿಸಿಕೊಂಡ ಕಾವ್ಯ. ಲಿಪಿಯ ಸೌಲಭ್ಯ ಪಡೆದ ಇಂದಿನ ಕಾವ್ಯ ಒಬ್ಬನಿಂದಲೇ ಓದಿಸಿಕೊಳ್ಳುತ್ತಾ ಮನೋರಂಗದಲ್ಲಿ ಕಲ್ಪಿಸಿಕೊಳ್ಳಬಲ್ಲ ಶಕ್ತಿಯನ್ನು ತಂದುಕೊಟ್ಟಿದೆ. ಆದರೆ ಅದು, ಒಬ್ಬ ಹೇಳತೊಡಗಿದಾಗ ಇನ್ನೊಬ್ಬ ಅಥವಾ ಒಂದು ಗುಂಪು ಕೇಳುತ್ತಿತ್ತು. ಹೀಗಾಗಿ ಅದು ಒಬ್ಬನದಾಗದೆ ಹಲವರದಾಯಿತು. ಮತ್ತೊಬ್ಬನಿಗೆ ಹೇಳುವ ಕ್ರಿಯೆಯಲ್ಲಿ ಅದು ಕೇವಲ ಕಾವ್ಯವಾಗಿ ಉಳಿಯದೆ ಪ್ರದರ್ಶನ ಕಲೆಯ ಜೊತೆಗಿನ ಪೂರಕ ಸಾಹಿತ್ಯವೂ ಆಯಿತು ಎಂಬುದ ಇಲ್ಲಿ ಮುಖ್ಯ. ಈ ಹಿನೆಲೆಯಲ್ಲಿ ಇವತ್ತಿನ ಜನಪದ ಕಾವ್ಯ ಕೇವಲ ಕಾವ್ಯವಲ್ಲ. ಅಭಿನಯಗಾರ ವಕ್ತೃವನ್ನೂ, ಕೇಳುವ ಶ್ರೋತೃವನ್ನೂ, ನೋಡುವ ಪ್ರೇಕ್ಷಕನನ್ನೂ ಒಟ್ಟಿಗೆ ಇಟ್ಟುಕೊಳ್ಳುವ ಮೂಲಕ ಸಂಕೀರ್ಣ ಅನುಭವ ನೀಡುವ ವಿಶಿಷ್ಟತೆ ಅದಕ್ಕಿದೆ. ಇಂಥ ಹಗಲವು ಸಂಬಂಧಗಳನ್ನು ಪಡೆದ ಈ ಕಾವ್ಯ ಎಂದೂ ಸ್ಥಾಯಿಯಲ್ಲ ಚಲನಶೀಲವಾದದ್ದು. ಈ ಹಿನ್ನೆಲೆಯಲ್ಲಿಯೇ ಕನ್ನಡದ ಮೌಖಿಕ ಪರಂಪರೆಯ ಮಲೆಮಹದೇಶ್ವರರ ಕಾವ್ಯವನ್ನು ನೋಡಬೇಕಾಗಿದೆ. ಆದರೆ ಮತ್ತೊಂದು ಅಳುಕು ನನ್ನನ್ನಿಲ್ಲಿ ಕಾಡತೊಡಗಿದೆ. ಸಂದರ್ಭ ಹಾಗೂ ಹೇಳುವ ಮತ್ತು ಕೇಳುವ ವ್ಯಕ್ತಿಗಳಿಗೆ ತಕ್ಕಂತೆ ಸದಾ ಚಲನಶೀಲವಾಗುತ್ತ ಹಲವು ಸ್ಥಿತ್ಯಂತರಗಳಿಗೆ ಒಳಪಡುವ ಈ ಕಾವ್ಯವನ್ನು ಹಿಡಿದಿಟ್ಟುಕೊಂಡು ವಿಮರ್ಶಿಸಲು ಸಾಧ್ಯವೇ ಎಂಬುದು. ಹಾಗೆ ನೋಡಿದರೆ ನಿಖರ ವಿಮರ್ಶೆ ಸಾಧ್ಯವಾಗುವುದು, ಒಂದು ಗೊತ್ತಾದ ಸಂದರ್ಭದಲ್ಲಿ ನಡೆಯುವ ಪ್ರತ್ಯೇಕ ಪ್ರದರ್ಶನಕ್ಕೆ ಮಾತ್ರ. ಆದ್ದರಿಂದ ನಾನಿಲ್ಲಿ ಮಾಡುತ್ತಿರುವುದು ಮಲೆಮಹದೇಶ್ವರ ಕಾವ್ಯದಲ್ಲಿನ ಆಶಯಗಳನ್ನು ಕುರಿತ ಚಿಂತನೆಯೇ ಹೊರತು ವಿಮರ್ಶೆಯಲ್ಲ. ಯಾಕೆಂದರೆ ಕಾವ್ಯದ ಸಾಹಿತ್ಯ ಮತ್ತು ಚೌಕಟ್ಟು ಪ್ರದರ್ಶನಕ್ಕೆ ತಕ್ಕಂತೆ ಬದಲಾಗಬಹುದಾದರೂ ಆಶಯಗಳ ಬದಲಾವಣೆ ಆಗುವುದಿಲ್ಲ ಎಂಬ ನಂಬಿಕೆ ನನಗಿದೆ. ಪ್ರಸ್ತುತ ಚಿಂತನೆಗೆ ಮಹದೇಶ್ವರ ಕಾವ್ಯದ ಸಂಕಮ್ಮನ ಸಾಲಿನ ಆಯ್ದ ಭಾಗಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲಾಗಿದೆ. ‘ಸಂಕಮ್ಮನ ಸಾಲಿ’ನ ಈ ಭಾಗಕ್ಕೆ ಎರಡು ಪ್ರಮುಖ ಉದ್ದೇಶಗಳಿವೆ. ಅವುಗಳನ್ನು ಕಾವ್ಯೋದ್ದೇಶ ಎಂದು ಬೇಕಾದರೂ ಕರೆಯಬಹುದು. ಈ ಕಥಾನಕದ ನಾಯಕನಾದ ಮಾದೇಶ್ವರ ತನ್ನ ಮಹಿಮೆಯ ಹೆಚ್ಚಳವನ್ನು ಮರೆಯಬೇಕಾಗಿದೆ. ಇದು ಇಡೀ ಕಾವ್ಯದ ಪ್ರಧಾನ ಉದ್ದೇಶ. ಎರಡನೆಯದು ಸಂಕಮ್ಮನ ಮನವೊಲಿಸಿಕೊಳ್ಳುವ ಮೂಲಕ ತನ್ನ ಪಂಥ ಕ್ಕೆ ಸೇರಿಸಿಕೊಂಡು ಒಕ್ಕಲನ್ನು ವಿಸ್ತರಿಸುವುದು. ಇದು ಮುಖ್ಯವಾಗಿ ಕಾಡಿನ ಜೀವಿಗಳಾದ ಸೋಲಿಗ ದಂಪತಿಗಳ ಕಥೆ. ಸೋಲಿಗರ ನೀಲಯ್ಯ ಒಬ್ಬ ಪಶುಪಾಲಕ. ಈತನ ಮಡದಿ ಸಂಕಮ್ಮ ಸದ್ಯಕ್ಕೆ ಬಂಜೆ. ಇವರಿಬ್ಬರ ನಡುವೆ ಮಾದೇಶ್ವರನ ಪ್ರವೇಶವಾಗುತ್ತದೆ. ಈ ಮೂರು ಪಾತ್ರಗಳ ನಡುವೆ ಮಾತ್ರ ಕಥೆ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ಪ್ರಮುಖವಾಗಿ ಏಳು ಸಂಗತಿಗಳನ್ನು ನಾವು ಗಮನಿಸಬೇಕಾಗಿದೆ. ೧. ಸೋಲಿಗರ ಬೇಟೆ, ೨. ಬೇಟೆಯ ಅವಧಿ, ೩. ಸಂಕಮ್ಮನ ಫಲಾಪೇಕ್ಷೆ, ೪. ನೀಲಯ್ಯನ ಅನುಮಾನ ೫. ಮಾಟದ ಪ್ರಾಮುಖ್ಯತೆ, ೬. ಮಕ್ಕಳ ಭಾಗ್ಯ ನೀಡುವ ಕ್ರಿಯೆ, ೭. ಹುಟ್ಟಿದ ಮಕ್ಕಳನ್ನು ಮೀಸಲು ಬಿಡುವ ಒಪ್ಪಂದ.

ಇಲ್ಲಿನ ಸಂಕಮ್ಮನ ಫಲಾಪೇಕ್ಷೆಯ ಹಂಬಲಕ್ಕೂ ಕುಲದ ಬೇಟೆಯ ಸಂಪ್ರದಾಯಕ್ಕೂ ಒಳಸಂಬಂಧವೇರ್ಪಡುತ್ತದೆ. ಸಂಕಮ್ಮನಿಗೆ ಬಂಜೆತನ ಅಳಿಯಬೇಕು. ಮಾದಯ್ಯನಿಗೆ ಸಂಕಮ್ಮನ ಮಕ್ಕಳು ಒಕ್ಕಲಾಗಬೇಕು. ಅದರಲ್ಲೂ ಈ ಸಾಂಪ್ರದಾಯಿಕ ಬೇಟೆಯ ಅವಧಿ ಒಂಬತ್ತು ತಿಂಗಳು ಎನ್ನುವಾಗ ಇಲ್ಲಿನ ಕಾವ್ಯೋದ್ದೇಶ ನಿಚ್ಚಳವಾಗುತ್ತದೆ. ದೈವವೆಂದು ಪರಿಗಣಿಸಲ್ಪಡುವ ಮಾದೇವ ಬ್ರಹ್ಮ, ವಿಷ್ಣು, ಮಹೇಶ್ವರರಂತೆ ತಥಾಸ್ತು ಎಂದು ಹೇಳುವ ಮೂಲಕ ಸಂಕಮ್ಮನಿಗೆ ಮಕ್ಕಳ ಫಲ ಕರುಣಿಸಬಹುದಾಗಿತ್ತು. ಆದರೆ ಇಲ್ಲಿ ಹಾಗಾಗುವುದಿಲ್ಲ. ಮಾದೇಶ್ವರನ ಹವು ಮಹಿಮೆಗಳನ್ನು ಹೇಳುತ್ತಲೇ ವಾಸ್ತವದ ಕಡೆಗೆ ಮುಖ ತಿರುಗಿಸುವ ಇಲ್ಲಿನ ಹಲವು ಸಂದರ್ಭಗಳು ಕುತೂಹಲಕಾರಿಯಾಗಿ ಬೆಳೆಯುತ್ತವೆ. ಕುಲದ ಬೇಟೆ ಹಾಗೂ ಸೋಲಿಗರ ಆಹಾರ ಸಂಗ್ರಹಣೆಯ ರೀತಿನೀತಿಗಳು ಬುಡಕಟ್ಟು ಸಮಾಜವೊಂದರ ಜೀವನಕ್ರಮದ ಬಗ್ಗೆ ಬೆಳಕು ಚೆಲ್ಲುತ್ತವೆ. ಕುಲದ ಹಿರಿಯರ ಆದೇಶದಂತೆ ಒಂಬತ್ತು ತಿಂಗಳ ಬೇಟೆಗೆ ಹೊರಟ ನೀಲಯ್ಯ ರೂಪಸಿಯಾದ ಹೆಂಡತಿಯ ಪಾತಿವ್ರತ್ಯ ಉಳಿಯುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾನೆ. ಸಂಕಮ್ಮನ ಬಂಜೆತನಕ್ಕೆ ತಾನೂ ಕಾರಣನಿರಬಹುದೆಂಬ ಒಳದನಿ ಅವನನ್ನು ಈ ಅನುಮಾನಕ್ಕೆ ತಳ್ಳಿರಬಹುದು. ಫಲಾಪೇಕ್ಷೆಯ ತೀವ್ರ ಹಂಬಲದಲ್ಲಿರುವ ಸಂಕಮ್ಮ ಸಹಜವಾಗಿ ಯಾರಿಗಾದರೂ ತನ್ನ ಗೈರುಹಾಜರಿಯಲ್ಲಿ ಒಲಿದುಬಿಟ್ಟರೆ? ಆದರೆ ಹೆಂಡತಿಯ ಮಾತಿನಲ್ಲಿ ಅವನಿಗೆ ನಂಬಿಕೆ ಇದೆ. ಅದಕ್ಕಾಗಿ ಅವನು ಸಂಕಮ್ಮನನ್ನು ಭಾಷೆ ಕೊಡುವಂತೆ ಕೇಳುತ್ತಾನೆ. ಇಲ್ಲಿಂದ ಕಥೆ ಬೇರೆಯದೇ ತಿರುವನ್ನು ಪಡೆದುಕೊಳ್ಳುತ್ತದೆ. ಇದು ಪರಸ್ಪರರ ಸ್ವಾಭಿಮಾನವನ್ನು ಕೆರಳಿಸುವ ಪ್ರಶ್ನೆಯಾಗುತ್ತದೆ. ಈ ಬಿಕ್ಕಟ್ಟಿನ ಸಂದರ್ಭ ಕಾವ್ಯಕ್ಕೆ ಸೊಗಡು ತುಂಬುತ್ತದೆ. ಯಾವುದೇ ಮಹಾಕಾವ್ಯಗಳೂ ಪ್ರತಿಭೆಯ ತಾರಕಕ್ಕೆ ಮುಟ್ಟುವುದು ಇಂಥ ಧರ್ಮ ಸೂಕ್ಷ್ಮದ ಸಂದರ್ಭಗಳಲ್ಲಿಯ. ಸಂಕಮ್ಮ ಮತ್ತು ನೀಲಯ್ಯರ ನಡುವಿನ ನೀತಿ ಅನೀತಿಗಳ ಹಾಗೂ ನ್ಯಾಯ ಅನ್ಯಾಯಗಳ ಈ ಸಂಘರ್ಷ ಹಾಡುವ ಗಾಯಕನ ಪ್ರತಿಭೆಗೆ ಅನುಸಾರವಾಗಿ ಬೆಳೆಯುತ್ತದೆ ಮತ್ತು ಗಾಂಭೀರ್ಯಗೊಳ್ಳುತ್ತದೆ. ಕಡೆಗೆ ಸಂಕಮ್ಮ ನೀಲಯ್ಯನ ತೆರವನ್ನು ಹಿಂದಕ್ಕೆ ಕೊಟ್ಟು ಅವನನ್ನು ತೊರೆಯಲು ಸಿದ್ಧಳಾಗುತ್ತಾಳಾದರೂ ಭಾಷೆ ನೀಡುವ ಮೂಲಕ ಕಟ್ಟುಪಾಡಿಗೆ ಒಳಗಾಗಲು ಬಯಸುವುದಿಲ್ಲ. ಮುಕ್ತತೆಯನ್ನು ಬಯಸುವ ಮಾತೃಮೂಲ ಬುಡಕಟ್ಟಿನ ಪಳಿಯುಳಿಕೆಯಾಗಿ ಸಂಕಮ್ಮ ಗೋಚರಿಸುತ್ತಾಳಾದರೆ, ಒಂದು ಬುಡಕಟ್ಟು ಪುರುಷ ಪ್ರದಾನ ವ್ಯವಸ್ಥೆಗೆ ಅವಸ್ಥಾಂತರಗೊಳ್ಳುತ್ತಿರುವ ಸಂದರ್ಭದ ಪ್ರತೀಕವಾಗಿ ನೀಲಯ್ಯ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಪರಸ್ಪರ ವಿರುದ್ದವಾದ ಎರಡು ಮೌಲ್ಯಗಳ ಈ ಸಂಘರ್ಷ ಒಂದು ಸಮಾಜದ ಸಾಂಸ್ಕೃತಿಕ ವೈರುಧ್ಯವಾಗಿ ಕೂಡ ಕಾಣಿಸಿಕೊಳ್ಳುತ್ತದೆ.

ಕಡೆಗೂ ಭಾಷೆಯನ್ನು ಪಡೆಯಲಾರದ ನೀಲಯ್ಯ ‘ಮಾಟ’ದ ಕ್ರಿಯೆಗಳಿಂದ ಅವಳನ್ನು ಬಂಧಿಸಿ, ಕಾವಲಿಗೆ ಸೃಷ್ಟಿಸಲ್ಪಟ್ಟ ರಾಕ್ಷಸರನ್ನು ನಿಲ್ಲಿಸಿ ಕುಲದ ಬೇಟೆಗೆ ಹೊರಡುತ್ತಾನೆ. ಇವಿಷ್ಟು ಅಂಶಗಳು ಮಾದೇಶ್ವರನ ಪ್ರಧಾನ ಉದ್ದೇಶಕ್ಕೆ ಅನುಗುಣವಾಗಿಯೇ ನಡೆಯುತ್ತವೆ. ಕಷ್ಟದಲ್ಲಿದ್ದವರನ್ನು ರಕ್ಷಿಸುವುದು ದೈವದ ಕರ್ತವ್ಯ ತಾನೇ? ಇಲ್ಲಿ ಮಾದಪ್ಪ ಒಬ್ಬ ಕರುಣಿಯಾಗಿ, ಅಬಲೆಯರನ್ನು ರಕ್ಷಿಸುವ ಆಪತ್ಪಾಂಧವನಾಗಿ ಕಾಣಿಸಿಕೊಳ್ಳುತ್ತಾನೆ. ಇಲ್ಲಿ ಮಾದೇಶ್ವರನಿಗೆ ಕೆಲವು ಪ್ರಮುಖ ನಾಯಕತ್ವದ ಲಕ್ಷಣಗಳಿವೆ.

ಅ. ಇವನು ಅನ್ಯಾಯದ ವಿರುದ್ಧ ಇರುತ್ತಾನೆ.

ಆ. ಇವನು ಅಹಂಕಾರಿಗಳನ್ನು ವಿವೇಕಿಗಳನ್ನಾಗಿಸುತ್ತಾನೆ.

ಇ. ಹಿಂಸೆಯ ಬದಲು ತಂತ್ರಗಳನ್ನು ಮಾತ್ರ ಬಳಸುತ್ತಾನೆ.

ಈ. ಇವೆಲ್ಲದರ ಜೊತೆಗೆ ಮಾಟಕ್ಕೆ ಪ್ರತಿಮಾಟ ತಂತ್ರಕ್ಕೆ ಪ್ರತಿತಂತ್ರ ಬಳಸಬಲ್ಲ ಮಹಾ ಮೋಡಿಕಾರನಾಗಿರುತ್ತಾನೆ.

ಉ. ಸಾಮಾನ್ಯರು ನೋಡಲು ಹೆದರುವ ದುಷ್ಟಮೃಗವೆನಿಸಿದ ಹುಲಿಯೇ ಇವನ ವಾಹನವಾಗಿರುತ್ತದೆ.

ಆದಿವಾಸಿ ಸಮಾಜದ ಸಾಂಸ್ಕೃತಿಕ ಬದುಕಿನ ಬಹುಮುಖ್ಯ ಅಂಶ ಈ ಮೋಡಿ. ಆ ಸಮಾಜದ ನೀಲಯ್ಯ ಒಬ್ಬ ಮಹಾಮೋಡಿಕಾರನಾಗಿ ಈಗಾಗಲೇ ಇಲ್ಲಿ ಚಿತ್ರಿತವಾಗಿದ್ದಾನೆ. ಪ್ರಕೃತಿಯ ಎಲ್ಲವನ್ನು ಒಲಿಸಿಕೊಳ್ಳುವ ಮನುಷ್ಯನ ಮಹತ್ವಾಕಾಂಕ್ಷೆಯ ಫಲವಾದ ಈ ಮೋಡಿ ವಿದ್ಯೆ ಇಡೀ ಮಹದೇಶ್ವರ ಕಾವ್ಯದ ಜೀವಾಳ. ಇಲ್ಲಿನ ಆ ಮೋಡಿ ಮಾದೇಶ್ವರನ ಉದ್ದೇಶಕ್ಕೆ ಸಹಕಾರಿಯಾಗುವ ಅಂಶವಾಗೇ ಚಿತ್ರಿತಗೊಳ್ಳುತ್ತದೆ. ನಿರೀಕ್ಷೆಯಂತೆ ಮಾದೇವ ನೀಲಯ್ಯನ ಎಲ್ಲ ಮಂಡಲಗಳ್ನು ಮತ್ತು ಕಟ್ಟುಗಳನ್ನು ನಿರರ್ಥಕಗೊಳಿಸಿ ಸಂಕಮ್ಮನನ್ನು ರಕ್ಷಿಸುತ್ತಾನೆ. ಕುಮಾರವ್ಯಾಸ ಕವಿ ಶ್ರೀಕೃಷ್ಣನ ವಿಷಯದಲ್ಲಿ ಮೈದುಂಬುವಂತೆ ನಮ್ಮ ಕಂಸಾಳೆ ಸಂಪ್ರದಾಯದ ಗಾಯಕರು ಮಾದೇಶ್ವರನ ವಿಷಯದಲ್ಲಿ ಮೈದುಂಬುತ್ತಾರೆ. ಮುದ್ದು ಮಾದಯ್ಯನ ಹಲವು ಲೀಲೆಗಳು ಇಲ್ಲಿ ಕಂಸಾಳೆ ತಾಳದೊಡನೆ ನಿನಾದಿಸುತ್ತವೆ.

ಸಂಕಮ್ಮ ನೀಲಯ್ಯನ ಮಾಟದ ಮಂಡಲದಿಂದ ಬಿಡಿಸಿಕೊಂಡಳೆಂದರೆ ಪಾತಿವ್ರತ್ಯದ ಸಂಕೋಲೆಯಿಂದ ಬಿಡಿಸಿಕೊಂಡಳು ಎಂದೇ ಅರ್ಥ. ಮಾದೇಶ್ವರನ ಪಂಥಕ್ಕೆ ಸೇರಿದ ಗಾಯಕರು ಮಾದೇಶ್ವರನನ್ನು ದೈವದ ಸ್ಥಾನಕ್ಕೆ ಏರಿಸಿರುವ ಕಾರಣ ಈ ಮಕ್ಕಳ ಫಲ ಕೊಡುವ ಪ್ರಸಂಗವನ್ನು ‘ಸಂಭೋಗ’ ಎಂದು ಹೇಳಲಾರರು. ಬೇಡುವ ಭಕ್ತೆ ಮತ್ತು ನೀಡುವ ಪರಮಾತ್ಮನನ್ನಾಗಿಯೇ ಕಾಣಲು ಅವರು ಆಶಿಸುತ್ತಾರಾದರೂ ಕಾವ್ಯದಲ್ಲಿ ಪರಂಪರೆಯ ಲಾಗಾಯ್ತು ಅವರಿಂದಲೇ ಬಳಸಲಾಗುವ ಪ್ರತಿಮೆಗಳು ಮಾತ್ರ ಸತ್ಯಕ್ಕೆ ಹತ್ತಿರವಾಗುತ್ತವೆ. ಪಶ್ಚಿಮಕ್ಕೆ ಬೆನ್ನು ಹಾಕಿ ಈರಮಂಡಿಗಾಲೂರಿ ಕೂತ ಸಂಕಮ್ಮನಿಗೆ ಕಾಡು ಬೆಂಡಕಾಯಿಯಲ್ಲಿ ‘ಪಿಂಡುಪರಸಾದ’ ತುಂಬಿ ಬೆನ್ನುಭಾಗದಿಂದ ಪರಸಾದ ನೀಡುತ್ತಾನೆ ಮಾದೇವ! ಇದಕ್ಕೆ ಪೂರಕವಾಗಿ ಈ ಫಲ ನೀಡುವ ಕ್ರಿಯೆಗೆ ಮೊದಲು ಮಾದೇವನ ಬಾಯಿಂದಲೇ ಬರುವ “ಮಕ್ಕಳ ಫಲಾ ಕೊಡೋದ್ಕೆ ನಾನೇನ ಇಸ್ಣು ಬ್ರಮ್ಮ ಈಸ್ವರ ಕೆಟ್ಟೋದ್ನ, ಯಾರ ಮಕ್ಳ ತಂದು ನಿನ್ನೊಟ್ಟೇಲಿ ಕೊಡ್ಲಿ ಕಂದಮ್ಮ ಒಣಮರವನ್ನು ನೆಟ್ಟಿ ಪಾತಿ ತುಂಬ ನಿರೂದ್ರೆ ಒಣ್ಮರ ಚಿಗ್ರಿ ಹೂವ್ಬುಡ್ತದ ಕಂದ’’ ಎಂಬ ಮಾತುಗಳು ತುಂಬ ಅರ್ಥಗರ್ಭಿತವಾಗಿದೆ. ಕಾಡು ಬೆಂಡೇಕಾಯಿ ಪಿಂಡು ಪರಸಾದ ಈರಮಂಡಿಗಾಲು ಅಲ್ಲಿ ನಡೆದಿರಬಹುದಾದ ಮಿಲನವನ್ನು ಸಂಕೇತಿಸುತ್ತಿರಬಹುದಾಗಿದೆ ನೀಲಯ್ಯ ಬೇಟೆಗೆ  ಹೊರಡುವ ಮೊದಲು ‘ಬರೋದು ಒಂಬತ್ತು ತಿಂಗಳಾಗುತ್ತದೆ’ ಎಂದು ಹೇಳುವುದಕ್ಕೂ ಮಾದೇವ ಕೊಟ್ಟ ‘ಪಿಂಡ ಪರಸಾದ’ ಫಲ ನೀಡುವುದಕ್ಕೂ ಇರುವ ಸಮಯದಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ. ಕಾವ್ಯದ ಈ ವಿವೇಚನಾಯುಕ್ತ ಬಂಧ ಸತ್ಯವನ್ನು ಕಾಣುವ ಮನಸ್ಸಿಗೆ ನಿರಾಸೆ ಉಂಟು ಮಾಡುವುದಿಲ್ಲ.

ಸಂಕಮ್ಮನೊಂದಿಗೆ ಕೂಡುವ ಅಥವಾ ಭೋಗಿಸುವ ಉದ್ದೇಶ ಮಾದೇವನದಲ್ಲ. ಈ ಸಂಬಂಧವನ್ನು  ಏರ್ಪಡಿಸಿಕೊಳ್ಳುವ ಮೂಲಕ ಹುಟ್ಟುವ ಮಕ್ಕಳನ್ನು ಹಾಗೂ ಆ ಕುಲವನ್ನು ತನ್ನ ಪಂಥಕ್ಕೆ ಸೇರಿಸಿಕೊಳ್ಳುವುದು ಇಲ್ಲಿ ಮುಖ್ಯ. ಮುಂದೆ ಹುಟ್ಟುವ ಕಾರಯ್ಯ – ಬಿಲ್ಲಯ್ಯ ಎಂಬ ಮಕ್ಕಲು ಮಾದೇವನ ಸೇವೆಗೆ ಮೀಸಲಾದವರಾಗಿ ದೀಕ್ಷೆ ಪಡೆದು ಗುಡ್ಡರಾಗುತ್ತಾರೆ. ಇದನ್ನು ಸಾಧಿಸುವುದಕ್ಕಾಗಿ ಮಕ್ಕಳ ಫಲ ಕೊಡಲು ಒಪ್ಪುವ ಮೊದಲೇ ಈ ಮಕ್ಕಳನ್ನು ತನಗೇ ಮೀಸಲು ಬಿಡುವ ಭಾಷೆ ಪಡೆಯುತ್ತಾನೆ.  ಮಾದೇಶ್ವರನ ಈ ಪ್ರಧಾನ ಉದ್ದೇಶಕ್ಕೆ ನೆರವಾಗುವಂತೆ ಮೂಡಿಬರುವ ಬೇಟೆ, ಭಾಷೆ, ಬಂಜೆ, ಮಾಟ, ಪಿಂಡುಪರಸಾದ ಮುಂತಾದ ಆಶಯಗಳು ಜನಪದ ಕಾವ್ಯವೊಂದರ ಅಂತಃಸತ್ವವನ್ನು ತೆರೆದಿಡುವ ರೀತಿಯನ್ನು ನೋಡಿದಾಗ, ಈ ಕಾವ್ಯ ಗಾಯಕರ ಮೂಲಕ ಇವತ್ತಿಗೆ ಸ್ಪಂದಿಸುತ್ತಲೇ ಪ್ರಾಚೀನ ಜೀವನ ಪದ್ಧತಿಯ ಸಾಂಸ್ಕೃತಿಕ ಪಳೆಯುಳಿಕೆಗಳ ಮೇಲೆ ಕೂಡ ಬೆಳಕು ಚೆಲ್ಲುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಈ ರೀತಿಯಾಗಿ ಕೆಲವು ಉದ್ದೇಶಗಳಿಗೆ ಅಂಟಿಕೊಂಡ ಕಾವ್ಯ ಇದಾದರೂ ಇಲ್ಲಿಯ ಕಥನ ಕಲೆ, ಸಹಜ ಜೀವನದ ವಿಚಾರಗಳು, ಅವುಗಳನ್ನು ಕಥಾನಕವಾಗಿ ಮುಂದುವರಿಸುವ ರೀತಿ ಅದ್ಭುತವಾದದ್ದು. ಲೌಕಿಕದಿಂದ ಅಲೌಕಿಕಕ್ಕೆ, ಅಲೌಕಿಕದಿಂದ ಲೌಕಿಕಕ್ಕೆ, ತಟತಟನೆ ಹಾರಬಲ್ಲ ಕಥನದ ವೈಖರಿ ಎಲ್ಲೂ ಆಯಾಸಗೊಳ್ಳುವುದಿಲ್ಲ. ಹಲವು ಗಾಯಕರ ಅಸಾಮಾನ್ಯ ಪ್ರತಿಭೆಯ ಮೊತ್ತ ಈ ಕಾವ್ಯ. ಮೈಸೂರು ಸೀಮೆಯ ಪ್ರಾದೇಶಿಕ ಸೊಗಡಿನ ಭಾಷೆ ಅಭ್ಯಾಸವಿದ್ದವರಿಗೆ ಸೋಲಿಗರ ಜೇನುತುಪ್ಪದಷ್ಟೇ ಆಪ್ತವಾಗುತ್ತದೆ.

ಬೇವಿನಹಟ್ಟಿ ಕಾಳಮ್ಮನ ಸಾಲು

ಕಾವ್ಯದ ‘ಬೇವಿನಹಟ್ಟಿ ಕಾಳಮ್ಮ’ನ ಸಾಲು ಸಂಕಮ್ಮನ ಸಾಲಿಗಿಂತ ಸಂಪೂರ್ಣ ವ್ಯತಿರಿಕ್ತವಾದದ್ದು. ಇಲ್ಲಿ ಗಂಡಿನ ಪ್ರಾಮುಖ್ಯ ಏನೂ ಇಲ್ಲ ಎಂಬಷ್ಟರ ಮಟ್ಟಿಗೆ ಮಾತೃ ಮೂಲ ಕುಟುಂಬದ ಲಕ್ಷಣಗಳು ಎದ್ದು ಕಾಣುತ್ತವೆ. ಬೇವಿನಹಟ್ಟಿ ಕಾಳಮ್ಮ ನಮ್ಮ ಇಡೀ ದಕ್ಷಿಣ ಭಾರತದಲ್ಲಿ ಚಾಲ್ತಿಯಲ್ಲಿದ್ದ ಮಾತೃ ಪ್ರಾಧಾನ್ಯತೆಯ ಪ್ರತೀಕವಾಗಿ ಇಲ್ಲಿ ವಿಜೃಂಭಿಸುತ್ತಾಳೆ. ಕೃಷಿ ಸ್ತ್ರೀಯ ಅನ್ವೇಷಣೆ ಎಂದು ಹೇಳುತ್ತಾರೆ. ಈ ಮಾತಿನ ಯಥಾರ್ಥತೆ ಕಾಳಮ್ಮನಲ್ಲಿ ಕಾಣಸಿಗುತ್ತದೆ. ಗಂಡನಾದ ಕೆಂಡೇಗೌಡ ಕಾಳಮ್ಮನ ದನ ಕುರಿ ಆಡು ಎಮ್ಮೆಗಳನ್ನು ಮೇಯಿಸಿಕೊಂಡು ಸದಾ ಹೊರಗೆ ಬಿದ್ದಿರುವ ಜೀತಗಾರನಂತೆ ಕಂಡು ಬರುತ್ತಾನೆ. ಅವನು ನೆಪಮಾತ್ರಕ್ಕೆ ಕಾಳಮ್ಮನ ಗಂಡ ಎಂಬಂತೆ ಆಗೀಗ ಕಾಳಮ್ಮನ ಬಾಯಿಂದಲೇ ನಮಗೆ ಗೊತ್ತಾಗುತ್ತದೆಯೇ ಹೊರತು ನೇರವಾದ ಪಾತ್ರವಾಗಿ ಗೋಚರಿಸುವುದೇ ಇಲ್ಲ. ಹಾಗೆಯೇ ಕಾಳಮ್ಮನ ಸೊಸೆಯರ ಪಾತ್ರವೂ ಇಲ್ಲಿ ಮುಖ್ಯವಾಗಿ ಬರುತ್ತದೆ. ಆದರೆ ಅವರ ಗಂಡಂದಿರ ಹೆಸರು ಕೂಡ ಪ್ರಸ್ತಾಪವಾಗುವುದಿಲ್ಲ. ಇಡೀ ವಹಿವಾಟು ಹೆಂಗಸರದೇ. ವರ್ಷದ ಬಹುಭಾಗವನ್ನು ಅಲೆಮಾರಿಗಳಂತೆ ಕಳೆಯುತ್ತಿದ್ದ ಗಂಡಸರು ಬೇಟೆ, ಆಹಾರ ಸಂಗ್ರಹಣೆ ಹಾಗೂ ಪಶುಸಂಗೋಪನೆಯಲ್ಲಿ ತೊಡಗುತ್ತಿದ್ದರು. ಮಕ್ಕಳು ಮರಿಗಳ ಪಾಲನೆ ನೋಡಿಕೊಂಡು ಒಂದು ಗೊತ್ತಾದ ಸ್ಥಳದಲ್ಲಿ ಬಿಡಾರ ಹೂಡುತ್ತಿದ್ದ ಹೆಣ್ಣು ತನ್ನ ಬಿಡುವಿ ವೇಳೆಯಲ್ಲಿ ಬಿತ್ತಿ ಬೆಳೆಯುವ ಮೂಲಕ ಕೃಷಿಯ ಉಪಯುಕ್ತತೆಯನ್ನು ಕಂಡುಕೊಂಡಳು. ಇದು ಪ್ರದಾನವಾಗುತ್ತಾ ಬಂದ ಹಾಕೆ ಆರ್ಥಿಕ ಸಬಲತೆಯನ್ನು ಸಾಧಿಸಿದ ಹೆಣ್ಣು ಇಡೀ ಕುಟುಂಬದ ಗೌರವದ ಸ್ಥಾನಕ್ಕೆ ಏರಿದಳು. ಸಂತಾನೋತ್ಪತ್ತಿಯಲ್ಲದೆ ಆಹಾರೋತ್ಪತ್ತಿಗೂ ಕಾರಣಳಾದ ಹೆಣ್ಣಿನ ಶ್ರಮ ಅವಳಿಗೊಂದು ಆಡಳಿತ ಶಕ್ತಿಯನ್ನು ತಂದು ಕೊಟ್ಟಿತ್ತು. ಸದಾ ಹೊರಗೆ ತಿರುಗುವ ಗಂಡಸು ನೆಪಮಾತ್ರದವನಾಗಿ ಹೆಣ್ಣು ಬಯಸಿದಂತೆ ನಡೆಯಬೇಕಾದ ಪ್ರಸಂಗವೂ ಇರುತ್ತಿತ್ತು. ಇಂಥ ಮಾತೃಪ್ರಧಾನ ಕುಟುಂಬದ ಪಳೆಯುಳಿಕೆ ಮಹದೇಶ್ವರ ಕಾವ್ಯದ ಬೇವಿನ ಹಟ್ಟಿ ಕಾಳಮ್ಮ.

ಕಟ್ಟಿ ಮೇಯವು ಇಪ್ಪತ್ನಾಲ್ಕು ಏರಿತ್ತು
ಬುಟ್ಟು ಮೇಯ್ಸವು ಇಪತ್ನಾಲ್ಕು ಏರಿತ್ತು
ನಲವತ್ತೆಂಟು ಏರ್ಕಟ್ಟಿ ಆರಂಬ ಮಾಡುತ್ತಿರುವಳು
ನಲವತ್ತೆಂಟು ಜನ ಜೀತ್ಕಾರ್ರ ತಡುದವ್ಳೆ.

ಇಂಥ ಅಪಾರ ವಹಿವಾಟಿನ ಕಾಳಮ್ಮ ತನ್ನ ಕೃಷಿಯನ್ನು ಆ ಮೂಲಕ ತನ್ನ ಕಾಯಕವನ್ನು  ದೈವ ಎಂದು ನಂಬಿದವಳು. ಮಹಾಸ್ವಾಭಿಮಾನಿಯಾದ ಕಾಳಮ್ಮನನ್ನು ಕೆಣಕುವ ಗಂಡುಗಳುಂಟೇ ಎಂಬ ಸಂದರ್ಭದಲ್ಲಿ ಮಾದೇವನಿಗೂ ಕಾಳಮ್ಮನಿಗೂ ಸಂಘರ್ಷ ಆರಂಭವಾಗುತ್ತದೆ.

ಬಲಾಢ್ಯರಾದ ಕುಳಗಳನ್ನು ಹಿಡಿದುಕೊಂಡು ತನ್ನ ಪ್ರಬಾವಲಯದಲ್ಲಿ  ಆಕರ್ಷಿಸಿ ತನ್ನ ಒಕ್ಕಲುಗಳನ್ನಾಗಿ ಪರಿವರ್ತಿಸಿಕೊಳ್ಳುವ ಮೂಲಕ ತನ್ನ ಪಂಥವನ್ನು ಬಲಪಡಿವುದು ಮಾದೇಶ್ವರನ ಉದ್ದೇಶ. ಇದು ಸುಲಭದಲ್ಲಿ ಸಾಧ್ಯವಾಗದೇ ಹೋದಾಗ ತನ್ನ ಮಾಯ, ಮಾಟ, ಮಂತ್ರಗಳ ಎಲ್ಲಕುಟಿಲ ತಂತ್ರಗಳನ್ನು ಬಳಸಿ ಕಡೆಗೂ ತನ್ನ ಭಕ್ತರನ್ನಾಗಿ ಪರಿವರ್ತಿಸುವುದು ಕಾವ್ಯದುದ್ದಕ್ಕೆ ವರ್ಣಿಸಲ್ಪಡುತ್ತದೆ. ಈ ಮೂಲಕ ಮಾದೇಶ್ವರನಿಗಿದ್ದ ಭಕ್ತರ ದಾಸ ಬಯಲಾಗುತ್ತದೆ. ಇದೀಗ ಮಾದೇಶ್ವರನ ಕಣ್ಣು ಬೇವಿನಹಟ್ಟಿ ಕಾಳಮ್ಮನ ಮೇಲೆ ಬಿದ್ದಿದೆ. ಸ್ವಾಭಿಮಾನಿಯಾದ ಹಾಗೂ ಸ್ತ್ರೀ ಪ್ರಧಾನ ವ್ಯವಸ್ಥೆಯ ಪ್ರತಿರೂಪವಾದ ಕಾಳಮ್ಮ ಮಾದೇಶ್ವರನನ್ನು ಧಿಕ್ಕರಿಸುತ್ತಾಳೆ.

“ದೇವ್ರು ದಿಂಡ್ರು ಅಂತ್ಹೇಳಿ ಜೀವ್ಣ ಹಾಕೊ ಕಳ್ಮಕ್ಕುಳ್ಗೆ
ಪಾದು ಪೂಜೆ ಮಾಡಿ ಕ್ವಾರಣ್ಯ ಕೊಟ್ಟು
ನನ್ನ ಬದುಕ್ನೆ ಹಾಳ್ಮಾಡ್‌ದೆಯ’’

ಮಾದೇಶ್ವರನಿಗೆ ಭಿಕ್ಷೆ ಕೊಡಲು ಹೊರಟ ಸೊಸೆಗೆ ಕಾಳಮ್ಮ ಹೇಳುವ ಈ ಮಾತು ಇಡೀ ಮಾದೇಶ್ವರನ ಪಂಥವನ್ನೇ ಹೀಯಾಳಿಸುತ್ತಿದೆ. ಆದರೆ ಮಾದೇವ ತಾಳ್ಮೆ ಕಳೆದುಕೊಳ್ಳುವವನಲ್ಲ. ತನಗೆ ಭಿಕ್ಷೆ ಕೊಟ್ಟರೆ (ಅರ್ಥಾತ್ ಒಕ್ಕಲಾದರೆ) ಕಾಳಮ್ಮನಿಗೆ ಮತ್ತು ಅವಳ ಗಂಡನಿಗೆ ಏನೆಲ್ಲಾ ಸಿರಿತನ ಕೊಡುತ್ತೇನೆಂದು ನಂಬಿಸುವ ಪ್ರಯತ್ನ ಮಾಡುತ್ತಾನೆ. ಅದಕ್ಕೆ ಒಪ್ಪದ ಕಾಳಮ್ಮನ ಸಂಸಾರವನ್ನು ನಾಶ ಮಾಡುವ ಬೆದರಿಕೆಯನ್ನು ಹಾಕುತ್ತಾನೆ. ಅದಕ್ಕೆ ಕಾಳಮ್ಮ ಕೊಡುವ ಉತ್ತರ ಕೇವಲ ಕಾಳಮ್ಮನ ಉತ್ತರವಲ್ಲದೆ ಒಂದು ಸಂಸ್ಕೃತಿಯೇ ಕೊಡುವ ಉತ್ತರವಾಗಿದೆ. “ತನ್ನ ಗಂಡನಾದ ಕೆಂಡೇಗೌಡನನ್ನು ಹುಲಿ ಹಿಡುದು ರಕ್ತ ಕುಡಿದು, ಅವನ ಖಂಡವನ್ನು ತುಂಡು ತುಂಡು ಮಾಡಿ ಎಸೆಯುವಂತೆ ಮಾಡುವ ಮೂಲಕ ತಾನು ಮುಂಡೆಯಾದರೂ’’ ಅವಳು ಭಿಕ್ಷೆ ಕೊಡಲು ತಯಾರಿಲ್ಲ. ಅಷ್ಟೇ ಅಲ್ಲ,

“ಆನೆ ಗಾತ್ರದ ಕಿಡಿ ಹಾರ್ಬಂದು
ನನ್ನ ಅರವತ್ಮೊಳದ ಗರೀಸೀರೆ ಮೇಲೆ ಕೂತ್ರೂ ಸರಿಯೆ
ಕುದ್ರೆ ಗಾತ್ರ ಕಿಡಿ ಕುಪ್ರುಸಿ ಬಂದು
ನನ್ನ ಕುಪ್ಸ ಸುಟ್ಟೋದ್ರೂ ಸರಿಯೆ
ನಾನುಟ್ಟಿದ್ದಸೀರೆ ರವ್ಕೆ ಸುಟ್ಟೋಗಿ
ಉಡೋದ್ಕೆ ಸೀರೆ ಇಲ್ದೆ ಹುಟ್ಟುದ ನಿರ್ವಾಣದಲ್ಲಿ
ನಾನು ದಾರೀಲಿ ಕೂತ್ಕೊಂಡ್ರೂ ಸರಿಯೆ
ನಿನ್ಗೆ ಭಿಕ್ಷಾ ಕೊಡುವಂತ ಮಗಳಲ್ಲ ಕಾಣಪ್ಪ’’

ಇಲ್ಲಿ ಕಾಳಮ್ಮನಿಗೆ ತನ್ನ ಗಂಡ ಹುಲಿಬಾಯಿಗೆ ಸಿಕ್ಕಿ ತುಂಡುತುಂಡಾದರೂ ಅದು ಮುಖ್ಯ ಅಲ್ಲ. ತನ್ನ ಬೆಳೆ ಹಾಗೂ ಅದರ ರಕ್ಷಣೆ ಮುಖ್ಯ. ಗಂಡನ ಅಸ್ತಿತ್ವವಾಗಲೀ, ಗಂಡಸರು ಆರೋಪಿಸುವ ‘ಮಾನದ ರಕ್ಷಣೆ’ ಯಾಗಲೀ ಇಲ್ಲಿ ಮುಖ್ಯವಲ್ಲ. ಕಾಳಮ್ಮನ ಇಲ್ಲಿಯ ಸ್ವಾಭಿಮಾನ ಒಂದು ಮಹತ್ವದ ವಿಚಾರ. ಮಾತೃ ಪ್ರಧಾನ್ಯತೆಗೆ ಬಲವಾದ ಸಾಕ್ಷಿ ಈ ಪ್ರಸಂಗ. ಭಿಕ್ಷೆಯಿಂದ ಅವಳ ಎಳ್ಳು ಧಾನ್ಯ ಕಡಿಮೆಯಾಗುತ್ತದೆ ಅನ್ನುವುದಕ್ಕಿಂತ ಭಿಕ್ಷೆ ಕೊಡುವ ಮೂಲಕ ಮಾದಯ್ಯನ ಹೆಚ್ಚಳತನಕ್ಕೆ ಬಗ್ಗುವುದಿಲ್ಲ. ಶರಣಾಗುವುದಿಲ್ಲ ಎಂಬ ಹಠ ಇಲ್ಲಿ ಗಮನ ಸೆಳೆಯುತ್ತದೆ. ಈ ಹಠವನ್ನು ಕಾವ್ಯದಲ್ಲಿ ಜಿಪುಣತನ ಎಂದು ವರ್ಣಿಸಲಾಗಿದೆಯಾದರೂ ಅದು ಅವಳ ಸ್ವಾಭಿಮಾನವಾಗಿಯೇ ಮೆರೆಯುತ್ತದೆ.

ಯಾವ ಕಾರಣಕ್ಕೂ ತನ್ನ ಅಸ್ತಿತ್ವವನ್ನು ಬಿಟ್ಟುಕೊಡಲೊಪ್ಪದ ಕಾಳಮ್ಮನ ಸ್ವಾಭಿಮಾನ ಮಾದೇಶ್ವರನಿಗೆ ಅಹಂಕಾರವಾಗಿ, ಸೊಕ್ಕಾಗಿ ಕಾಣುತ್ತದೆ. ದೈವ ಇಲ್ಲಿ ದಾರಿ ತಪ್ಪುತ್ತದೆ. ಸಂಕಮ್ಮನ ಪ್ರಸಂಗದಲ್ಲಿ ಕರುಣಿಯಾಗಿ ವಿವೇಕಿಯಾಗಿ ಕಾಣಿಸಿಕೊಂಡ ಮಾದೇವ ಇಲ್ಲಿ ವಿವೇಕ ತಪ್ಪುತ್ತಾನೆ. ನಿಷ್ಕರುಣಿಯಾಗುತ್ತಾನೆ. ತನ್ನ ಹಲವು ಮಾಟ ಮಂತ್ರಗಳಿಂದ ಕಾಳಮ್ಮನ ಇಡೀ ಹಟ್ಟಿ ಉರಿಯುವಂತೆ ಮಾಡುತ್ತಾನೆ. ಕಾಳಮ್ಮನ ಸೀರೆ ಕುಪ್ಪಸ ಬೆಂದು ಅವಳು ಬೆತ್ತಲೆಯಾಗಿ ಅಲೆಯುವಂತೆ ಮಾಡುತ್ತಾನೆ. ಬೆತ್ತಲಾಗಿ ಸಂಕಟದಲ್ಲಿದ್ದ ಸಂಕಮ್ಮನಿಗೆ ಮಾನ ಮುಚ್ಚುವ ವಸ್ತ್ರ ನೀಡಿದ ಮಾದೇವ ಕೇವಲ ತನಗೆ ಭಿಕ್ಷೆ ನೀಡಲಿಲ್ಲ ಎಂಬ ಕಾರಣಕ್ಕೆ ಕಾಳಮ್ಮನ ವಸ್ತ್ರ ಸುಟ್ಟು ಮಾನ ತೆಗೆಯುತ್ತಾನೆ. ಕಾಳಮ್ಮನ ಸರ್ವನಾಶ ಮಾಡಿ ಅವಳ ಹಟ್ಟಿಯನ್ನು ತನ್ನ ಭಕ್ತರು ಓಡಾಡುವ ದಾರಿಯನ್ನಾಗಿ ಪರಿವರ್ತಿಸುತ್ತಾನೆ. ಮಾತೃಮೂಲ ಕುಟುಂಬದ ಪಳೆಯುಳಿಕೆಯಾಗಿ ಕಂಡುಬರುವ ಈ ಕಾಳಮ್ಮನ ಹಟ್ಟಿಯ ನಾಶ ಎಂದರೆ, ಅದು ಮಾತೃಮೂಲದ ಪ್ರತೀಕಗಳಾದ ಗ್ರಾಮದೇವತೆಯ ಆರಾಧಕರ ನಾಶ ಎಂದೇ ಅರ್ಥ. ಇದಕ್ಕೆ ಪೂರಕವೆಂಬಂತೆ ಮಾದೇಶ್ವರನ ಇಡೀ ಕಾವ್ಯದಲ್ಲಿ ‘ಮಾರಿ’ಗೆ ಸಂಬಂಧಿಸಿದ ದೇವತೆಗಳನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗಿದೆ. ತನ್ನ ಕೆಲಸಗಳಿಗಾಗಿ ಮಾದೇವ ಮಾರಿಯರ ಜುಟ್ಟು ಹಿಡಿದು ಎಲೆ ತರುತ್ತಾನೆ. ಇದರ ಆಶಯ ಆ ಸಂಸ್ಕೃತಿ ಮಾದೇವನಿಗೆ ಅಧೀನವಾಗಿರಬೇಕು ಎಂಬುದೇ ಹೊರತು ಬೇರೇನಲ್ಲ. ಇದು ಸ್ಥಳೀಯವಾಗಿ ಇದ್ದ ಮತ್ತು ಹೊರಗಿನಿಂದ ಬಂದ ಎರಡು ಸಂಸ್ಕೃತಿಗಳ ನಡುವಿನ ಘರ್ಷಣೆ. ಒಟ್ಟಾರೆ ಈ ಕಾಳಮ್ಮನ ಪ್ರಸಂಗ ಪುರುಷಪ್ರಧಾನ ಸಂಸ್ಕೃತಿ ಮಾತೃಪ್ರಧಾನ ಸಮಾಜದ ಮೇಲೆ ಸಾಧಿಸಿದ ಗೆಲುವಿನ ಸಂಕೇತವಾಗಿ ಉಳಿಯುತ್ತದೆ.

ಸಂಕಮ್ಮ ಹೆಣ್ಣಿಗೆ ಇರಬೇಕಾದ ಮುಕ್ತತೆಯ ಉಳಿವಿಗಾಗಿ ಹೋರಾಟ ಮಾಡಿ ಗೆಲ್ಲುತ್ತಾಳಾದರೆ, ಕಾಳಮ್ಮ ಹೆಣ್ಣಿನ ಕೈಲಿ ಉಳಿಯಬೇಕಾದ ಒಡೆತನಕ್ಕಾಗಿ ಹೋರಾಡಿ ಸೋಲುತ್ತಾಳೆ. ಒಂದು ಕಡೆಯ ಗೆಲುವು ಹಾಗೂ ಮತ್ತೊದು ಕಡೆಯ ಸೋಲಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುವ ಮಾದೇವ ವೈರುಧ್ಯದ ವ್ಯಕ್ತಿಯಾಗಿ ಕಂಡರೂ, ಅವನ ಸ್ವಾರ್ಥ ಇರುವುದು ತನ್ನ ಒಕ್ಕಲುಗಳನ್ನು ಹೆಚ್ಚು ಮಾಡಿಕೊಳ್ಳುವ ವ್ಯವಹಾರದಲ್ಲಿ ಮಾತ್ರ.