. ಪೀಠಿಕೆ

ಚಲನಶೀಲ ಸ್ವಭಾವದ ಜನಪದದ ಸಿಂಕ್ರಾನಿಯಲ್ಲಿ (ಸಮಕಾಲೀನತೆ), ಡೈಕ್ರೊನಿಯನ್ನು (ಚಾರಿತ್ರಿಕತೆಯನ್ನು) ಶೋಧಿಸಲೆತ್ನಿಸುವುದು ಸರಿಯೇ? ‘ಸಮಕಾಲೀನತೆ’ ಚಾರಿತ್ರಿಕತೆಯ ಬೆಳೆಯುತ್ತಿರುವ ಶಿಶು. ಹಾಗಾಗಿ ಸಮಕಾಲೀನತೆಯಲ್ಲಿ ಚಾರಿತ್ರಿಕತೆಯ ಅಸ್ತಿತ್ವವನ್ನು ನಿರಾಕರಿಸಲಿಕ್ಕಾಗದು. ಆದರೆ ಇತಿಹಾಸವೆಂಬ ಶಿಷ್ಟ ಪರಂಪರೆಯ ಶಿಸ್ತಿನ ಪರಿಭಾಷೆಯ ಮೂಲಕ ಜನಪದದ ಚಾರಿತ್ರಿಕತೆಯನ್ನು ಅಥವಾ ಜನಪದದಲ್ಲಿ ಚಾರಿತ್ರಿಕತೆಯನ್ನು ತಿಳಿಯಲು ಯತ್ನಿಸುವುದು ಕಷ್ಟ. ಕಾಲಕ್ರಮವೆಂಬ ನಿರ್ದುಷ್ಟತೆ ‘ಇತಿಹಾಸ’ದ ಮಿತಿ. ಅದು ಪರಂಪರೆಯ ವಾಹಿತ್ವವನ್ನು ತುಂಡುಗೊಳಿಸಿ ನೋಡುತ್ತದೆ. ಜನಪದ ಅದನ್ನು ಮೀರಿ ನಿಲ್ಲುತ್ತದೆ.

ಇತಿಹಾಸ ಶಾಸ್ತ್ರಕ್ಕೆ ಭೂತಕಾಲ ಎಂದೂ ತಿರುಗಿ ಬರದ ಸಾವು. ಪ್ರತಿಯಾಗಿ ಜನಪದ ಸಾವಿನಲ್ಲೂ ಮರುಹುಟ್ಟನ್ನು ಪಡೆದು, ಸಮಕಾಲೀನತೆಯಲ್ಲಿ ಚಾರಿತ್ರಿಕಯೆನ್ನು ಬದುಕುತ್ತಿರುವಂಥದು. ಹಾಗಾಗಿ ಜನಪದ ವಿಧಿಯಾಚರಣೆಗಳಲ್ಲಿರುವ ಪುನರಾವರ್ತನೆ ‘ಪಂಥ’ವಾಗುತ್ತದೆ. ಇದು ಅಪಭ್ರಂಶ ಚರಿತ್ರೆ. ಏಕೆಂದರೆ ಇದರಲ್ಲಿ ಐತಿಹ್ಯ, ಇತಿಹಾಸ, ಪುರಾಣಗಲೆಲ್ಲ ಸಂಕೇತಗಳಾಗಿ ಸೇರಿರುತ್ತವೆ. ಮಲೆಯ ಮಾದೇಶ್ವರ ಪಂಥ ಪರಂಪರೆಯನ್ನು ಶೋಧಿಸುವಾಗ ಈ ಮಾತುಗಳನ್ನು ಗಮನಿಸಬೇಕು.

. ಪ್ರಾರಂಭ

ಮಲೆಯ ಮಾದೇಶ್ವರ ಪಂಥದಲ್ಲಿ ಐತಿಹಾಸಿಕ ನೆಲೆಯನ್ನು ಕಂಡುಕೊಳ್ಳುವುದು ಮತ್ತು ಮಾದೇಶ್ವರರ ಮೌಖಿಕ ಮಹಾಕಾವ್ಯ ಮತ್ತು ಲಿಖಿತ ಪರಂಪರೆಯಲ್ಲಿ ಐತಿಹಾಸಿಕಾಂಶಗಳನ್ನು ಗುರುತಿಸುವುದು; ಇವೆರಡರ ನಡುವೆ ಸಂಬಂಧ ಇಲ್ಲವೆ ವ್ಯತ್ಯಾಸಗಲಿದ್ದರೆ ಅದಕ್ಕೆ ಕಾರಣಗಳನ್ನು ಜನಪದ ಆಚರಣೆ ಮತ್ತು ನಂಬಿಕೆಗಳಿಗೆ ಪರ್ಯಾಯಗಳೆಂದು ಭಾವಿಸುವುದಾದರೆ ಮೊದಲು ಇವುಗಳ ನಡುವಿನ ವೈರುಧ್ಯದ ಪ್ರಶ್ನೆ ಎದುರಾಗುತ್ತದೆ. ಜನಪದ ಗತಿಶೀಲ ಸಂಸ್ಕೃತಿಯಾಗಿರುವುದರಿಂದ ಆಚರಣೆ ನಂಬಿಕೆಗಳೆರಡೂ ಬದಲಾಗುತ್ತಿರುತ್ತವೆ. ನಂಬಿಕೆ ಬದಲಾದಂತೆ ಆಚರಣೆಗಳು ಮಾರ್ಪಡಬಹುದು.ಪಂಥವೊಂದರ ಆಚರಣೆಗಳಲ್ಲಿ ಬದಲಾವಣೆಗಳನ್ನು ತರುವ ರಾಜಕೀಯ ಸಾಂಸ್ಕೃತಿಕ ಒತ್ತಡಗಳು ಕಾಲ ಕಾಲಕ್ಕೆ ಎದುರಾಗುತ್ತವೆ. ಇದು ನಂಬಿಕೆಗಳಲ್ಲೂ ಪರಿವರ್ತನೆಯಾಗುವುದಕ್ಕೆ ದಾರಿ ಮಾಡುತ್ತದೆ. ಮೇಲೆ ಹೇಳಿದ ವೈರುಧ್ಯವೆಂಬುದು ಈ ಬಗೆಯದು.

ಮಾದೇಶ್ವರ ಪಂಥ ಮತ್ತು ಮೌಖಿಕ ಪರಂಪರೆಗಳು ಮತೀಯ ಪ್ರಪಂಚಕ್ಕೆ ಸೇರಿವೆ. ಮತ, ರಾಜಕೀಯಾರ್ಥಿಕ ನೆಲೆಗಟ್ಟನ್ನು ಆಧರಿಸಿದ ಅದಿರಚನೆಯಾಗಿ (Super Structure)ಉದ್ಭವಿಸುತ್ತದೆ. ಹಾಗಾಗಿ ಮಾದೇಶ್ವರರ ಬೌದ್ಧಿಕ ಮತ್ತು ಭೌತಿಕ ಕ್ರಿಯಾಸರಣಿಗೆ ಮೂಲಕಾರಣವಾಗಬಲ್ಲಜನತೆಯ ರಾಜಕೀಯಾರ್ಥಿಕ ಚರಿತ್ರೆಯನ್ನು ಪೂರ್ವಭಾವಿ ನೆಲೆಯನ್ನಾಗಿ ಕಲ್ಪಿಸಿಕೊಳ್ಳಬೇಕಾಗುತ್ತದೆ.

ಮಾದಿಗ ಮತ್ತಿತರ ಕಪ್ಪು ವಳಿ ಕುಲಗಳಲ್ಲೇ ಮಾದೇಶ್ವರ ಪಂಥಾಚರಣೆ ಮತ್ತು ಮೌಖಿಕ ವಾಙ್ಮಯವಿರುವುದು ಮತ್ತು ಮದೇಶ್ವರ ಮಾದಿಗ ಕುಲದವನೆಂದು ನಂಬಿರುವುದು ಈ ಪಂಥವನ್ನು ಮೂಲ ಸಂಸ್ಕೃತಿಗಳ ನೆಲೆಯ ಆಧಾರದಲ್ಲಿ ಪರಿಶೋಧಿಸುವ ಅನಿವಾರ್ಯತೆಯನ್ನು ತೋರಿಸುತ್ತದೆ. ಇನ್ನೊಂದೆಡೆ ಲಿಂಗಾಯತ ಲಿಖಿತ ಪರಂಪರೆ ಮಾದೇಶ್ವರರ ಚರಿತ್ರೆಯ ಮೇಲೆ ಒಂದಿಷ್ಟು ಬೆಳಕು ಬೀರುತ್ತಿದೆ. ಶಾಕ್ತ, ಶೈವ, ತಾಂತ್ರಿಕ ಮೊದಲಾದ ದ್ರಾವಿಡ ತತ್ವ ಜ್ಞಾನಾಚರಣೆಗಳ ಪರಂಪರೆಯ ಮಾದೇಶ್ವರರನ್ನು ‘ವೀರಶೈವ’ ತನ್ನವನನ್ನಾಗಿ ಮಾಡಿಕೊಳ್ಳಲು ಯತ್ನಿಸಿದೆ. ಜನಪದ ಶಿಷ್ಟ, ಯಜಮಾನ ಶಿಷ್ಟರ ಬದಲಾವಣೆಗೆ ಒಳಗಾಗುವುದು ಸುಲಭ. ಅಲ್ಪಸಂಖ್ಯೆಯಲ್ಲಿದ್ದರೂ ಯಜಮಾನರಲ್ಲಿ ಅಧಿಕಾರಬಲ, ಧನಬಲಗಳು ಇರುವುದರಿಂದ ಬಹುಸಂಖ್ಯಾತರ ಸಂಸ್ಕೃತಿಗಳು ಅಳುಕಿನಲ್ಲಿರುತ್ತವೆ, ಇಕ್ಕಟ್ಟಿನಲ್ಲಿ ಸಿಕ್ಕಿರುತ್ತವೆ. ಮಾದೇಶ್ವರರು ಮಾದಿಗರು, ಮಂಟೇಸ್ವಾಮಿ ಹೊಲೆಯರು ಎಂದು ಗಟ್ಟಿಯಾಗಿ ಘೋಷಿಸಲು ಎದೆಯಿಲ್ಲದಿರುವುದೇ ಇದಕ್ಕೆ ನಿದರ್ಶನ.

. ಪ್ರವೇಶ

ಜನಪದ ಶಿಷ್ಟ ನೆಲೆಯಿಂದ ಇತಿಹಾಸಕ್ಕೆ:

೧. ಮಾದೇಶ್ವರ ಪಂಥಾಚರಣೆ ಮತ್ತು ೨. ಮೌಖಿಕ ಮಹಾಕಾವ್ಯದ ಮೂಲಕ ಇತಿಹಾಸಕ್ಕೆ ಪ್ರವೇಶಿಸುವ ಅವಕಾಶವಿದೆ.

೨ – ಅ-೧: ಆಚರಣೆಗಳ ಮೂಲಕ ಐತಿಹಾಸಿಕ ನೆಲೆಗೆ ಪ್ರವೇಶ:

ಮಲೆಯ ಮಾದೇಶ್ವರ ಪಂಥದ ಆಚರಣೆ ದ್ರಾವಿಡಸಂಸ್ಕೃತಿಯ ಅವಿಭಾಜ್ಯ ಅಂಗ. ಇಂಥಹಲವಾರು ಪಂಥಾಚರಣೆಗಳು ದ್ರಾವಿಡ ಸಂಸ್ಕೃತಿಯಲ್ಲಿವೆ. ಈ ವಿಷಯದ ಚಚೆ ತುಂಬ ಗಹನ, ವಿಸ್ತಾರ, ಅಂತೆಯೇ ಪ್ರಸ್ತುತ ಸಂದರ್ಭಕ್ಕೆ ಅನಿವಾರ್ಯವಾದ ಕೆಲ ಅಂಶಗಳನ್ನು ನಿದರ್ಶನದಂತೆ ಅವಲೋಕಿಸಿದೆ.

“ದ್ರಾವಿಡ ಜನಪದ ಗುರು ಸಂಪ್ರದಾಯ’’ವೆಂದು ಗುರುತಿಸಬೇಕಿರುವ ಒಂದು ಮಹತ್ವದ ಪದ್ಧತಿಯನ್ನು ಚರ್ಚೆಗೆ ಎತ್ತಿಕೊಳ್ಳಬಹುದು. ‘ಗುರು’ ಎಂಬ ಪದದ ಬಳಕೆ ತೃಪ್ತಿಕರವಲ್ಲ. ಆದರೂ ಸದ್ಯಕ್ಕೆ ಅದನ್ನೇ ಇಟ್ಟುಕೊಳ್ಳುತ್ತೇನೆ. ಭಾರತೀಯ ಸಂಸ್ಕೃತಿಗೆ ದ್ರಾವಿಡ ಪರಂಪರೆ ನೀಡಿದ ಅಮೋಘ ಕೊಡುಗೆ ‘ಗುರು’ ಸಂಪ್ರದಾಯ. ಶಂ.ಬಾ. ಜೋಶಿ ‘ಮುನಿ’ ಸಂಪ್ರದಾಯ ದ್ರಾವಿಡರ ವೈಶಿಷ್ಟ್ಯ ಎಂದಿದ್ದಾರೆ. ಇದಕ್ಕಿಂತ ಪ್ರಮುಖವಾದುದು ‘ಗುರು ಸಂಪ್ರದಾಯ ಸಂಸ್ಕೃತಿ’. ವೈದಿಕರದ್ದು ‘ಋಷಿಮೂಲದ ಯಜ್ಞಯಾಗಾದಿ ಸಂಸ್ಕೃತಿ’ ಇಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂಬ ಮೂರು ವರ್ಣದವರಿಗೆ ಮಾತ್ರ ಶ್ರೇಣೀಕರಣದ ಆಧಾರದ ‘ದ್ವಿಜತ್ವ’ ಇದೆ. ಸ್ಮೃತಿಗಳು ಈ ಮೂರು ವರ್ಣಗಳ ದ್ವಿಜತ್ವದ ತಾರತಮ್ಯವನ್ನು, ಇದರಲ್ಲಿ ಮೇಲ್ತುದಿಯ ಬ್ರಾಹ್ಮಣರ ಶ್ರೇಷ್ಠತ್ವವನ್ನು ಉದ್ದಕ್ಕೂ ಘೋಷಿಸಿಕೊಂಡು ಬಂದಿವೆ. ಇತಿಹಾಸ ಪುರಾಣಗಳೂ ಇದಕ್ಕೆ ದನಿಗೂಡಿಸಿವೆ. ಈ ತಾರತಮ್ಯದ ಕಾರಣಕ್ಕಾಗಿಯೇ ಕ್ಷತ್ರಿಯರು, ವೈಶ್ಯರು, ಬ್ರಾಹ್ಮಣರ ವಿರುದ್ಧ ಹೋರಾಡಿದ ಚರಿತ್ರೆಯೆ ಇದೆ. ಇದರ ವಿವರಗಳು ಇಲ್ಲಿ ಅಪ್ರಸ್ತುತ.

ವೈದಿಕ ಪರಿಭಾಷೆಯಲ್ಲಿ ಹೇಳುವುದಾದರೆ ನೆಲಕಚ್ಚಿದ ಶೂದ್ರಮೂಲದ ದ್ರಾವಿಡ ಸಂಸ್ಕೃತಿ ಪರಂಪರೆಯ ಉದಾತ್ತ ಪರಿಕಲ್ಪನೆಯಾದ ‘ಗುರು ಸಂಪ್ರದಾಯ’ದಲ್ಲಿ; ಹೆಣ್ಣು ಗಂಡು ಎಂಬ ಲಿಂಗಭೇದ; ಮೇಲು ಕೀಳು ಎಂಬ ಜಾತಿಭೇದ ಬಡವ ಬಲ್ಲಿದ ಎಂಬ ವರ್ಗಭೇದಕ್ಕೆ ಆಸ್ಪದವಿಲ್ಲ. ನಿರ್ದಿಷ್ಟ ಗುರುವರ್ಗಕ್ಕೆ ತನ್ನದೇ ಆದ ದೈವವಿರುತ್ತದೆ. ಅದೂ ಪುರುಷ ಅಥವಾ ಸ್ತ್ರೀ ದೈವ. ದೀಕ್ಷೆಯ ಮೂಲಕ ಈ ದೈವಕ್ಕೆ ಅರ್ಪಿಸಿಕೊಂಡು ಗುರುಗಳಾಗುವವರು ಸಾಕ್ಷಾತ್ ದೈವಸ್ವರೂಪಿಯಾಗುತ್ತಾರೆ (ಶಂಕರಾಚಾರ್ಯರ ಅದ್ವೈತ ಎಂಬ ತತ್ವ ಪ್ರತಿಪಾದನೆಗೆ ದ್ರಾವಿಡ ಸಂಸ್ಕೃತಿಯ ಈ ಪೆರೆಡೈಂ (ಸಿದ್ಧಾಂತಾಂಶ  ಕಾರಣವಿರುವಂತಿದೆ). ದೈವದ ವೇಷಭೂಷಣಾದಿ ಬಿರುದಾವಳಿಗಳಿಂದ ಅಲಂಕತರಾಗಿ ಕೆಲ ಸಲ ದೈವದ ಹಾಡುಗಾರರಾಗಿ (ಇವೇ ಇವರ ಮಂತ್ರ, ವೇದೋಪನಿಷತ್ತು) ಭಕ್ತರ ಅಥವಾ ಒಕ್ಕಲುಮನೆಗಳ ಧಾರ್ಮಿಕ ಮತ್ತು ಕೌಟುಂಬಿಕ ವಿಧಿಯಾಚರಣೆಗಳನ್ನು ನಡೆಸಿಕೊಡುವ ಪುರೋಹಿತರಾಗುತ್ತಾರೆ. ಈ ಪದ್ಧತಿ ಎಷ್ಟು ಪ್ರಬಲವಾಗಿದೆ ಎಂದರೆ ದ್ರಾವಿಡ ಕುಲಗಳಿಂದ ಯಾವುದೋ ಕಾಲದಲ್ಲಿ ಬ್ರಾಹ್ಮಣರಾಗಿರುವ ಕುಟುಂಬಗಳಲ್ಲಿ ಮದುವೆ ಮುಂಜಿ ಆಗುವ ಮೊದಲು ಮನೆದೇವರಾದ ಎಲ್ಲಮ್ಮ, ಮೈಲಾರ, ವೀರಣ್ಣ ಮೊದಲಾದ ಪಂಥಗಳ ಜೋಗಪ್ಪ, ಜೋಗಮ್ಮ, ಗ್ವಾರಪ್ಪ, ಗೊಂದಲಿಗರು, ವೀರಗಾಸೆಯವರನ್ನು ಕರೆಸಿ ಹಡ್ಡಲಿಗೆ ತುಂಬುವ, ದೋಣಿ ತುಂಬಿಸುವ, ಗೊಂದಲ ಹಾಕಿಸುವ, ಗುಗ್ಗಳ ಹಾಕಿಸುವ ವಿಧಿಯನ್ನು ಕಡ್ಡಾಯವಾಗಿ ಪೂರೈಸುತ್ತಾರೆ.

ಕರ್ನಾಟಕದ ದ್ರಾವಿಡ ಸಂಸ್ಕೃತಿ ಪರಂಪರೆಗೆ ನಮ್ಮನ್ನು ಸೀಮಿತಗೊಳಿಸಿಕೊಂಡು ಹೇಳುವುದಾದರೆ ಗ್ವಾರಪ್ಪ, ಗ್ವಾರಮ್ಮ, ದಾಸಪ್ಪ, ದಾಸಮ್ಮ, ಜೋಗಪ್ಪ, ಜೋಗಮ್ಮ, ಮಾತಂಗಿ, ರಾಣಿಗ್ಯಾ, ಭೂತೇರು, ದುರುಗೇರು, ಬಿಂಗೇರು (ಸೋಮಲಿಂಗನ ‘ಹೊರೆಹೊತ್ತವರು’) ಪೋತುರಾಜರು, ನೀಲಗಾರರು, ದೇವರಗುಡ್ಡರು, ಗುಡ್ಡಿಯರು ಒಡೇರಪ್ಪ, ಒಡೋರಮ್ಮ, ಅಯ್ಯನವರು ಮುಂತಾದವರು ಇಂಥ ಗುರುಗಳು.  ಮಲೆಯ ಮಾದೇಶ್ವರ ಪಂಥ ದೇವರಗುಡ್ಡರ ಮೂಲಕ ಜೀವಂತವಿರುವುದರಿಂದ ಈ ವಿಷಯದ ಇನ್ನೂ ಕೆಲವು ವಿವರಗಳನ್ನು ನೋಡಬೇಕು. ಜಾತಿವರ್ಗ ಸಮಾಜದ ಹುಟ್ಟಿನ ನಂತರ ಗುರುವರ್ಗದ ಕೆಲಭಾಗ ರಾಜಕೀಯಾರ್ಥಿಕ ಲಾಭ ಪಡೆದು ಶೋಷಕವರ್ಗವಾಯಿತು. ಇದಕ್ಕೆ ಉತ್ತಮ ನಿದರ್ಶನ ಕಾಳಾಮುಖ ಮಠಾಧೀಶರು, ವೀರಶೈವ ಮಠಾಧೀಶರಾದದು.

ಬುಡಕಟ್ಟಿನಲ್ಲಿ (tribe) ದೀಕ್ಷೆಯ ಮೂಲಕ ವ್ಯಕ್ತಿಯನ್ನು ಕುಲದ (clan) ಪೂರ್ಣಸದಸ್ಯನನ್ನಾಗಿ ಮತ್ತು ಟೊಟೆಂ(ಕುಲಲಾಂಛನ) ನ ಬಳಗಕ್ಕೆ ಅರ್ಹನನ್ನಾಗಿ ಮಾಡುವ ಪದ್ಧತಿ ಇತ್ತು (ವಿವರಗಳಿಗೆ ಎಮಿಲಿ ತರ್‌ಕ್ಯಾಂ ಅವರ ‘ದಿ ಫಂಡಮೆಟಲ್ಸ್ ಆಫ್ ರಿಲಿಜಿಯಸ್ ಲೈಫ್’ ನೋಡಬಹುದು). ಈ ಪದ್ಧತಿ ದ್ರಾವಿಡ ಬುಡಕಟ್ಟು, ಕುಲ, ಜಾತಿಗಳಲ್ಲಿ ಗುರುಸಂಪ್ರದಾಯವಾಗಿ ಉಳಿದು ಬಂದಿತು. ಅಂತೆಯೇ ಇದಕ್ಕೆ ದೀಕ್ಷೆ ಕಡ್ಡಾಯ ವಿಧಿ ಜಾತಿ, ಲಿಂಗ, ವರ್ಗ ತಾರತಮ್ಯವನ್ನು ನಾಶಮಾಡುವುವ ದೀಕ್ಷೆ, ವ್ಯಕ್ತಿಯನ್ನು ಸಾಕ್ಷಾತ್ ದೈವವನ್ನಾಗಿ ಮಾಡುತ್ತದೆ. ಈ ಪದ್ಧತಿ ಕೇವಲ ದಕ್ಷಿಣ ಭಾರತದ ದ್ರಾವಿಡ ಜನ ಕುಲಗಳಲ್ಲಿ, ಮಾತ್ರವಲ್ಲ ಉತ್ತರ ಭಾರತದ ಅಸಂಖ್ಯ ಕೆಳ ಜಾತಿಗಳಲ್ಲಿದೆ. ಈ ಜಾತಿಗಳು ದ್ರಾವಿಡ ಮೂಲದವು, ವೈದಿಕೀಕರಣಕ್ಕೆ ಒಳಗಾದರೂ ತಮ್ಮ ಸಾಂಸ್ಕೃತಿಕಾಂಶಗಳನ್ನು ಉಳಿಸಿಕೊಂಡವು. ‘ನಾಥ ಪಂಥ’ ಉತ್ತರ ಭಾರತದಲ್ಲಿ ಇಂಥ ಪ್ರಖ್ಯಾತ ಗುರು ಸಂಪ್ರದಾಯ. ನಾಥ ಎಂದರೆ ಗುರು, ನಾಥಿನಿ ಎಂದರೆ ಮಹಿಳಾಗುರು, ಅಘೋರಿ, ಜೋಗಿ, ಫಕೀರ, ಮಾಟಗಾರರ ಜತೆ ನಾಥರೂ ಸನ್ಯಾಸಿ, ಸನ್ಯಾಸಿನಿಯರು. ದಕ್ಷಿಣ ಭಾರತದ ಗುರುವರ್ಗ ಸಂಸಾರಿ ಅಥವಾ ವಿರಕ್ತರಾಗಿರಬಹುದು.  ಆದರೆ ಉತ್ತರ ಭಾರತದ ಗುರುವರ್ಗ ಹೆಚ್ಚಾಗಿ ವಿರಕ್ತರೆ (ನಾಥರ ಬಗ್ಗೆ ಬ್ರಿಗ್ಸ್ ಅವರ ಗೋರಖನಾಥ ಅಂಡ್ ಕಾನಫಟ್ ಯೋಗೀಸ್, ಮೋತಿಲಾಲ್ ಬನಾರಸಿದಾಸ್, ದೆಹಲಿ, ೧೯೮೯ ನೋಡಬಹುದು). ಇವರಲ್ಲೂ ಜಾತಿಭೇದವಿಲ್ಲ, ಕಿವಿಯ ಕುಂಡಲಿ, ಸಿಂಗನಾದ, ಭಸ್ಮ ಪವಿತ್ರ ವಸ್ತುಗಳು.

ಇತರ ಗುರು ಸಂಪ್ರದಾಯದವರಂತೆ ದೇವರಗುಡ್ಡ ಮತ್ತು ನೀಲಗಾರರಿಗೆ ಬೆತ್ತ, ಜೋಳಿಗೆ, ಕಂಸಾಳೆ, ತಂಬೂರಿ, ಢಕ್ಕೆ, ಗಗ್ಗರ ಮೊದಲಾದ ಬಿರುದಾವಳಿಗಳು ಅವರವರ ದೈವಗಳಿಂದ ದತ್ತವಾಗಿವೆ ಎಂಬ ನಂಬುಗೆಯಿದ್ದು ಅವು ಪೂಜಾರ್ಹ ವಸ್ತುಗಳಾಗಿವೆ.

ಗುರು ಸಂಪ್ರದಾಯದ ಗಮನಾರ್ಹ ಅಂಶಗಳಾದ ಮಾಟ, ಮದ್ದು, ತಂತ್ರ, ಅವಧೂತರ ಲಕ್ಷಣಗಳು ಪ್ರಾಚೀನ ತಾಂತ್ರಿಕ ಶಾಕ್ತ ಪಂಥದ ಅವಶೇಷಗಳಾಗಿವೆ.

ಮಾದೇಶ್ವರ, ಮಂಟೇಸ್ವಾಮಿ ಪಂಥಗಳ ಮೇಲೆ ವೀರಶೈವ ಮತ ಪ್ರಭಾವ ಕಂಡು ಬರುತ್ತಿದ್ದರೂ ಅವುಗಳ ಮೂಲಸತ್ವ ಆದಿಮ ಶೈವ, ಶಾಕ್ತ ಪಂಥಗಳ ತತ್ತ್ವಜ್ಞಾನವೇ. ಈ ಪಂಥಗಳ ವೈಶಿಷ್ಟ್ಯವೆಂದರೆ ಮೊದಲಸ್ಥಾನ ಗುರುವರ್ಗಕ್ಕಿದ್ದರೆ ಅನಂತರದ ಸ್ಥಾನ ತಮ್ಮಡಿ ಅಥವಾ ಪೂಜಾರಿಗಳಿಗೆ ಬಳಿಕ ಭಕ್ತಲೋಕ ಈ ಕಕ್ಷೆಗೆ ಸೇರುತ್ತದೆ. ಹೀಗೆ ಪ್ರಾದೇಶಿಕವಾದ ಒಂದು ಸಾಂಸ್ಕೃತಿಕ ವರ್ತುಲ ಪೂರ್ಣಗೊಳ್ಳುತ್ತದೆ.

ದಕ್ಷಿಣ ಕರ್ನಾಟಕದಲ್ಲಿ ಮಾದೇಶ್ವರ, ಮಂಟೇಸ್ವಾಮಿ ಪಂಥಗಳಿಗಿರುವಂತೆ ಚಲುವರಾಯ, ವೈದ್ಯನಾಥ, ನಂಜುಂಡ ಮೊದಲಾದ ದೈವಗಳಿಗೂ, ಮಧ್ಯ ಕರ್ನಾಟಕದ ಉಚ್ಚಂಗೆಮ್ಮ, ಮೈಲಾರ, ಹುಲಿಗೆಮ್ಮ ಮೊದಲಾದ ದೈವಗಳಿಗೂ ಉತ್ತರ ಕರ್ನಾಟಕದ ಎಲ್ಲಮ್ಮ ಮೊದಲಾದ ದೈವಗಳಿಗೂ ಗುರು, ಪೂಜಾರಿ, ಒಕ್ಕಲು ಸಮುದಾಯವಿದೆ. ಉತ್ತರ ಕರ್ನಾಟಕದ ಜನಪದ ಗುರುವರ್ಗದಲ್ಲಿ ಮಹಿಳೆಯರು ಹೆಚ್ಚಿಗಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಪುರುಷ ಗುರುವರ್ಗದ ಪ್ರಾಬಲ್ಯವಿದೆ. ಪುರುಷ ಪ್ರಧಾನ ಪಶುಪಾಲಕ ದ್ರಾವಿಡ ಜನ ಸಂಸ್ಕೃತಿ ಪ್ರಭಾವ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾದುದೇ ಇದಕ್ಕೆ ಕಾರಣ. ಇಲ್ಲಿಯ ನೆಲುಗಾರ ಮಾತೃ ಪ್ರಧಾನ ಹೊಲೆಯ ಮತ್ತು ಮಾದಿಗ ಕುಲಗಳು ತಮ್ಮ  ಮೂಲ ಸಾಂಸ್ಕೃತಿಕಾಂಶಗಳನ್ನು ಹೆಚ್ಚು ಕಳೆದುಕೊಂಡಿರಬೇಕು. ವೀರಶೈವೀಕೃತ ಮಾದೇಶ್ವರ, ಮಂಟೇಸ್ವಾಮಿ ಎಂಬ ಪುರುಷ ದೈವಗಳ ಪ್ರಾಬಲ್ಯವೆ ಇದಕ್ಕೆ ನಿದರ್ಶನ. ೧೬-೧೭ನೇ ಶತಮಾನದ ಈಚೆಗೆ ದಕ್ಷಿಣ ಕರ್ನಾಟಕದಲ್ಲಿ ಸಿದ್ಧಲಿಂಗಯತಿಗಳ ನೇತೃತ್ವದ ನೂರಾರು ಜಂಗಮರು ಕಾರ್ಯ ಚಟುವಟಿಕೆಗೆ ಇಳಿದುದೇ ವೀರಶೈವೀಕರಣಕ್ಕೆ ಕಾರಣವಾಗಿದೆ. ಆದರೂ ಮೇಲೆ ಹೇಳಿದಂತೆ ಮಾದೇಶ್ವರ ಮಂಟೇಸ್ವಾಮಿ ಪಂಥಗಳಲ್ಲಿ ಮೂಲಶೈವ ಶಾಕ್ತಗಳ ತಾತ್ವಿಕತೆಯೇ ಇದೆ.

ದೇವರಗುಡ್ಡರು ಅಥವಾ ಕಂಸಾಳೆಯವರು ಕಂಡಾಯ ಕಂಸಾಳೆಯನ್ನು ಬಿರುದು ಎನ್ನುತ್ತಾರೆ. ಮೈಲಾರನ ಗೊರವಪ್ಪಗಳಿಗೆ ಡಮರುಗ, ದೋಣಿ ಬಿರುದು, ಇದು ಬುಡಕಟ್ಟು ಕುಲದ ‘ಟೊಟೆಂ’. ದೈವಗಳಿಂದ, ವಂಶಪಾರಪರ್ಯವಾಗಿ ಗುರುಗಳಿಗೆ ಬಂದವುಗಳು. ಮಾದೇಶ್ವರರಿಗೆ ಗುಡ್ಡನನ್ನು ಬಿಡುವ ಪದ್ಧತಿ ಒಟ್ಟಾರೆ ದ್ರಾವಿಡ ಗುರುವರ್ಗದ ಎಲ್ಲ ಲಕ್ಷಣಗಳಿಗೆ ಅನುಗುಣವಾಗಿದೆ. ದೈವ, ದೀಕ್ಷೆ ಕೊಡುವ, ತಗೊಳ್ಳುವವರ ಹೆಸರಷ್ಟೆ ಬದಲಾಗುತ್ತವೆ. ಡಾ.ಪಿ.ಕೆ. ರಾಜಶೇಖರ, ಡಾ.ಬಿ.ಎಸ್.ಸ್ವಾಮಿ ದೇವರಗುಡ್ಡರ ದೀಕ್ಷೆಯ ವಿವರಗಳನ್ನು ಕೊಟ್ಟಿದ್ದಾರೆ. ಈ ಚರ್ಚೆ ಇಲ್ಲಿ ಅನಗತ್ಯ. ನಮಗಿಲ್ಲ ಮುಖ್ಯವೆಂದು ತೋರುವ ಒಂದು ಸಂಗತಿಯಿದೆ. ಮಲೆಯ ಮಾದೇಶ್ವರರ ಮಹಾಕಾವ್ಯದ ತುಂಬ ದ್ರಾವಿಡ ಪಶುಪಾಲಕರ ಪವಿತ್ರ ಸಂಖ್ಯೆಯಾದ ಏಳರ ಪ್ರಸಕ್ತಿಯಿದೆ. ಏಳುಮಲೆ, ಏಳು ಮುಖದ ಹುತ್ತ, ಏಳು ಹೆಡೆ ಸರ್ಪ, ಎಪ್ಪತ್ತೇಳು ಮಲೆ, ಏಳು ಕೋಟಿ ಭಕ್ತರು, ಏಳು ಹಟ್ಟೆ, ಏಳು ಪಲ್ಲಕಾಳು ಇತ್ಯಾದಿ ಆದರೆ ದೀಕ್ಷೆಯ ಸಂದರ್ಭದಲ್ಲಿ ನೆಲಸುಗಾರ ಕೃಷಿಕರ ಪವಿತ್ರ ಸಂಖ್ಯೆಯಾದ ಐದರ ಪ್ರಾಶಸ್ತ್ಯವಿದೆ. ಐದು ಬಾಳೆಹಣ್ಣು, ಐದು ಪಾವು ಅಕ್ಕಿ, ಐದು ಪಾವಲಿ, ಐದು ಅರಣೆಗಡಿಗೆ, ಐದು ಜನ ಮುತ್ತೈದೆಯರು. ಅಕ್ಕಿಕಾಳು ಐದು ಸಲ ಹಣೆಗೆ ಹಚ್ಚುವುದು, ಐದು ಕೊಂಬಿನ ಅರಿಶಿಣ, ಜೋಳಿಗೆಗೆ ಐದು ಬೊಗಸೆ ಅಕ್ಕಿ ಹಾಕುವುದು, ಐದು ಗುಡ್ಡರಿಗೆ ಬಿನ್ನಹ ನೀಡುವುದು ಇತ್ಯಾದಿ. ಮದುವೆಯ ವಿಧಿಯನ್ನು ಹೋಲುವ ದೀಕ್ಷಾವಿಧಿ ಕೃಷಿಕ ಹೊಲೆಯ ಮಾದಿಗ ಸಂಸ್ಕೃತಿಯಲ್ಲಿ ಹುಟ್ಟಿದ್ದೆನ್ನುವುದಕ್ಕೆ ಐದರ ಪ್ರಾಮುಖ್ಯತೆಯೂ ಆಧಾರವಾಗುತ್ತದೆ. ಇಂಥದೆ ಅನುಭವ ಇತರ ಗುರು ಸಂಪ್ರದಾಯಗಳಲ್ಲಿದೆ. ಮೌಖಿಕ ಪರಂಪರೆಯಲ್ಲಿ ಏಳು, ಆಚರಣೆಯಲ್ಲಿ ಐದು ಸಂಖ್ಯೆಗಳಿರುವುದು ವೈರುಧ್ಯವೆ. ಇದರರ್ಥ ನೆಲಸುಗಾರ ಮೂಲ ಕೃಷಿ ಸಂಸ್ಕೃತಿಯಲ್ಲಿ ಪಶುಪಾಲಕ ಸಂಸ್ಕೃತಿ ಸಮನ್ವಯವಾಯಿತು. ಇದು ವೈದಿಕರ ದಾಳಿಯ ಪೂರ್ವದಲ್ಲೆ ನಡೆದ ಘಟನೆ.

ಹರಿಜನರು, ಒಕ್ಕಲಿಗರು, ಕುರುಬರು, ಗಂಗಾಮತದವರು, ಉಪ್ಪಲಿಗರು, ಮಡಿವಾಳರು, ಪರಿವಾರದವರು ಮಾದೇಶ್ವರರ ಗುಡ್ಡರಾಗುತ್ತಾರೆ. ಹರಿಜನರಲ್ಲಿ ಸೂತಕವಾಗದ ಹೆಂಗಸರನ್ನು ಗುಡ್ಡಿಯರನ್ನಾಗಿ ಹಿಂದೆ ಬಿಡುತ್ತಿದ್ದರು. “ಗುಡ್ಡರೆಂದರೆ ಶಿಷ್ಯರು ಎಂಬರ್ಥ ಮಾಡಿಕೊಂಡರೆ ಈಪದಕ್ಕಿರುವ ಬಹುಮುಖ್ಯತೆಯನ್ನು ನಿರಾಕರಿಸಿದಂತಾಗುತ್ತದೆ.’’ ಎಂದು ಹಿ.ಚಿ. ಬೋರಲಿಂಗಯ್ಯ ಹೇಳಿದ್ದಾರೆ. ಇಲ್ಲಿ ಪದಕ್ಕಿರುವ, ಅಲ್ಲಿ ಪರಂಪರೆಗಿರುವ ಬಹುಮುಖತೆ ಎಂದು ಹೇಳುವುದು ಸೂಕ್ತ (ಕರ್ನಾಟಕ ಜನಪದ ಕಲೆಗಳ ಕೋಶ – ಸಂ: ಹಿ.ಚಿ. ಬೋರಲಿಂಗಯ್ಯ – ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ೧೯೯೬). ಗುಡ್ಡ ಗುಡ್ಡಿಯರನ್ನು ಬಿಡುವುದು ವಂಶ ಪಾರಂಪರ್ಯ ಸಂಪ್ರದಾಯ. ಈ ಎಲ್ಲ ಸಂಗತಿಗಳು ಇತರ ಜನಪದ ಗುರು ಸಂಪ್ರದಾಯಗಳಿಗೂ ಅನ್ವಯಿಸುತ್ತದೆಂದು ಮತ್ತೆ ನೆನಪಿಸಬೇಕಿಲ್ಲ. ನಮಗಿಲ್ಲಿ ಮುಖ್ಯವೆಂದು ಕಾಣುವ ಅಂಶ ‘ದೀಕ್ಷೆ’ ಹಲವಾರು ಜಾತಿ – ಜನರನ್ನು ಒಂದೆಡೆ ತರುವ ಪದ್ಧತಿ ಎಂಬುದು. ಆದರೆ ಇದು ಈಗ ನಾವು ವ್ಯಾಖ್ಯಾನಿಸುತ್ತಿರುವ ರೀತಿ. ದ್ರಾವಿಡ ಕುಲಪದ್ಧತಿಯಲ್ಲಿ ಜಾತಿಗೆ ಮಹತ್ವವಿಲ್ಲ. ಹಾಗಾಗಿ ಜನಪದ ಗುರು ಸಂಪ್ರದಾಯಕ್ಕೆ ಜಾತಿಯ ಹಂಗೇ ಇಲ್ಲ ಎಂದು ಹೇಳುವುದೇ ಸರಿ.

ಮಾದೇಶ್ವರರ ಜೀವನ ಅಥವಾ ಪಂಥದ ಹಲವಾರು ಸಂಗತಿಗಳು ಕರ್ನಾಟಕದ ಇತರೆಡೆಯ ಅವಧೂತರು ಅಥವಾ ಅನುಭಾವಿಗಳು ಮತ್ತು ಅವರ ಪಂಥಗಳಲ್ಲಿ ಕಂಡು ಬರುತ್ತವೆ. ಮಂಟೇಸ್ವಾಮಿ ಮಾದೇಶ್ವರರ ಪಕ್ಕದಲ್ಲೇ ಇದ್ದಾನೆ. ಮಧ್ಯ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪಂಚಗಣಾಧೀಶ್ವರ ಪಂಥವಿದೆ. ಕೊಟ್ಟೂರಿನ ಗುರುಬಸವ, ಕೂಲಹಳ್ಳಿಯ ಮದ್ದಾನಸ್ವಾಮಿ, ಹರಪನಹಳ್ಳಿಯ ಕೆಂಪಯ್ಯ ಅರಸೀಕೆರೆಯ ಕೋಲಶಾಂತ, ನಾಯಕನ ಹಟ್ಟಿಯ ತಿಪ್ಪೇರುದ್ರಸ್ವಾಮಿ ಎಂಬ ಐವರನ್ನು ಜನ ಪಂಚಗಣಾಧೀಶ್ವರರು ಎನ್ನುತ್ತಾರೆ. ಇವರಲ್ಲಿ ಕೂಲಹಳ್ಳಿಯ ಮದ್ದಾನಸ್ವಾಮಿ ಹರಪನಙ್ಳಿ ಪಾಳೆಯಗಾರ ಬೇಡರವಂಶದ ಕನಕಾಂಬೆಯನ್ನು ಕೂಡಿದ್ದರಿಂದ ಹುಟ್ಟಿದವ ಗೋಣಿಬಸವ. ಕೂಲಹಳ್ಳಿಯ ಹಿರೇಮಠದಲ್ಲಿ ಇವರ ಸಮಾಧಿ, ಸದರಗಳಿವೆ. ಇಲ್ಲಿ ಬೇಡವಂಶದವರು ಜಂಗಮರ ಆಚಾರವನ್ನು ಅನುಸರಿಸುತ್ತ ಮಠದ ಧರ್ಮಕರ್ತರಾಗಿದ್ದಾರೆ. ಗೋಣಿಬಸವನ ಹೆಂಡತಿ ಕುರುಬರ ವಡ್ಡಟ್ಟೆವ್ವ. ಗೋಣಿಬಸವ ಅನೇಕ ಪವಾಡಗಳನ್ನು ಮಾಡಿದ. ಮಂತ್ರ ಮಾಟಗಳಲ್ಲಿ ಬಲ್ಲಿದನಿದ್ದ. ಇಂದಿಗೂ ಮಠದ ಧರ್ಮಕರ್ತರು ಮಾಟಮದ್ದಿನಲ್ಲಿ ಪ್ರವೀಣರಿದ್ದಾರೆ. ಗೋಣಿಬಸವ ಹುಲಿಗಳನ್ನು ಎತ್ತುಗಳನ್ನಾಗಿ ಮಾಡಿ ಹಾವಿನ ಚುಂಬಕದಿಂದ ಹೊಲ ಉತ್ತ. ಉಪ್ಪಾರರು ಊಟದಲ್ಲಿ ವಿಷವಿಕ್ಕಿಕೊಂದು ಸುಣ್ಣದ ಚೀಲದಲ್ಲಿ ಹಾಕಿ ಹರಪನಹಳ್ಳಿ ಹಿರೇಕೆರೆಯಲ್ಲಿ ಎಸೆದಾಗಲೂ ಮಲ್ಲಿಗೆ ಹೂವಾಗಿ ಹುಟ್ಟಿ ಬಂದ. ಕಲ್ಲುಗಾಣಕ್ಕೆ ಹಾಕಿ ಅರೆದರೂ ಸಾಯಲಿಲ್ಲ, ಮರವೆ ರಿಂಗಿ ಸಾಯಿಸಿದರೂ ಮರುಜೀವ ತಾಳಿದ. ಮಾದೇಶ್ವರ ಕಾವ್ಯದಂತೆ ಈತನ ಕಾವ್ಯವೂ ಇದೆ. ಇದನ್ನು ಹಾಡಿ ಅಭಿನಯಿಸುವ ಮಾದಿಗರ ಒಂದು ಗುಂಪಿಗೆ ‘ಬಾಲಬಸವ’ ರೆನ್ನುತ್ತಾರೆ. ಇವರು ಉಜ್ಜಯಿಸಿ ಮಠದಲ್ಲಿ ದೀಕ್ ಹೊಂದಿ ಕಾಲಜ್ಞಾನ ಹೇಳುತ್ತಾರೆ. ಇವರಲ್ಲಿ ಗೋಣಿ ಬಸವನ ಹೊರೆ ಹೊತ್ತವಳು ಅಂದರೆ ವರವಿನಾತೆ (ಅಂದರೆ ಬಸವಿ)ಗೂ ‘ಪಟ್ಟ’ವಾಗುತ್ತದೆ. ಈಕೆಯೂ ಕಾಲಜ್ಞಾನ ಹೇಳುತ್ತಾಳೆ. ಕಿವಿಗೆ ಕುಂಡಲಗಳನ್ನು ಧರಿಸಿದರೆ ಮಾತ್ರ ಕಾಲಜ್ಞಾನ ಹೇಳಲು ಶಕ್ಯವೆಂದು ಅವರ ನಂಬಿಕೆ. ಗೋಣಿ ಬಸವನ ಪಂಥ ವ್ಯಾಪಕವಾಗಿದ್ದು, ಬಹಳಷ್ಟು ಕಡೆ ಮಠದೇಗುಲಗಳಿವೆ. ಪಂಚಗಣಾಧೀಶ್ವರರು ಮತ್ತು ಗೋಣಿಬಸವ ಮಾದೇಶ್ವರರಂತೆ ಕೈಲಾಸ, ಕಲ್ಯಾಣ ಇಲ್ಲವೆ ಶ್ರೀಶೈಲದ ಕಡೆಯಿಂದ ಬಂದವರು ಎಂಬ ಐತಿಹ್ಯವಿದೆ. ಗೋಣಿಬಸವನ ಕತೆ ಮಾಡುವಾಗ ಬಾಲಬಸವರು ಕಾವಿ ಕಮಂಡಲು, ರುದ್ರಾಕ್ಷಿ ಲಿಂಗ ಧರಿಸಿ ಏಕತಾರಿ ಹಿಡಿದಿರುತ್ತಾರೆ. ವರ್ಷಕ್ಕೊಮ್ಮೆ ಕೂಲಹಳ್ಳಿಯಲ್ಲಿ ಬಹಳ ದೊಡ್ಡ ಜಾತ್ರೆ ನಡೆಯುತ್ತದೆ. ವ್ಯಾಪಾರ ನಡೆಯುತ್ತದೆ. ಜಾತ್ರೆಗೆ ಯಾವ ಯಾವ ಊರವರು, ಯಾವ ಯಾವ ಜಾತಿಯವರು ಏನೇನು ತರಬೇಕು ಸೇವೆ ಮಾಡಬೇಕು ಎಂಬುದನ್ನು ಹಿಂದೆ ಗೋಣಿ ಬಸವೇಶ್ವರರೇ ಪವಾಡ ತೋರಿಸಿ ಗೆದ್ದು ನಿಗದಿ ಮಾಡಿದ್ದಾರೆ. ಈ ಸಂಗತಿ ಮಾದೇಶ್ವರರು ಒಕ್ಕಲು ಮಾಡಿಕೊಳ್ಳುವುದನ್ನು ಹೋಲುತ್ತದೆ. ಪಂಚಗಣಾಧೀಶ್ವರರು ಮಾದೇಶ್ವರರಂತೆ ಅವಧೂತರು; ಹುಚ್ಚರಂತಿದ್ದವರು, ಪವಾಡಗಳನ್ನು ಮಾಡಿದವರು. ಕೊಟ್ಟೂರಿನಲ್ಲಿ ಹರಿಜನ ಭಕ್ತೆಯ ಮನೆಯಲ್ಲಿ ಊಟ ಮಾಡದೆ ಹೊರಟು ಬಿಟ್ಟಾಗ ಕಣ್ಣು ಕಳೆದುಕೊಂಡರಂತೆ. ನಾಯಕನ ಹಟ್ಟಿಯ ಹೊರಮಠದಲ್ಲಿ ಮ್ಯಾಸನಾಯಕರು ಅರ್ಚಕರು. ವರ್ಷಕ್ಕೊಮ್ಮೆ ನಡೆಯುವ ಬಹು ದೊಡ್ಡ ಜಾತ್ರೆಯಲ್ಲಿ ಕುರಿ ಕೋಳಿ ಬಲಿಯಾಗುತ್ತವೆ. ಈ ಮಠ ಮುಸ್ಲಿಂ ವಾಸ್ತು ಶೈಲಿಯಲ್ಲಿದೆ. ಲಿಖಿತ ಪರಂಪರೆಯ ಪ್ರಕಾರ ಮಾದೇಶ್ವರರ ಗುರು ಪರಂಪರೆಯಲ್ಲಿ ತಿಪ್ಪೇರುದ್ರಸ್ವಾಮಿ ಹನ್ನೊಂದನೆಯವರು.

ಕೂಡ್ಲಿಗಿ ತಾಲ್ಲೂಕಿನ ಉಜ್ಜಿನಿಯ ಮರುಳುಸಿದ್ಧ ವೀರಶೈವರು ನಂಬಿರುವ ಜಗದ್ಗುರುಗಳಲ್ಲಿ ಒಬ್ಬ. ಈತನು ಗುರು ಬಾಳೆಹಳ್ಳಿ ಸಿಂಹಾಸನದ ಜಗದ್ಗುರು ರೇವಣಸಿದ್ಧ. ಪಂಚಪೀಠಗಳಲ್ಲಿ ಇವೆರಡೂ ಸೇರಿವೆ. ರೇವಣಸಿದ್ಧ ಹುಟ್ಟಿದ್ದು ಹೈದ್ರಾಬಾದ್ ಹತ್ತಿರದ ಕೊಲ್ಲಿಪಾಕಿಯಲ್ಲಿ. ಅಲ್ಲಿ ಹದಿನೆಂಟು ಜಾತಿಗಳಿಗೆ ಹದಿನೆಂಟು ಹಿರೇಮಠಗಳಿದ್ದು ಜಂಗಮರು ಗುರುಗಳಾಗಿದ್ದರೆ (ನೋಡಿ : “ವ್ಯಾಕರಣತೀರ್ಥ’’ ಚಂದ್ರಶೇಖರಶಾಸ್ತ್ರಿ, ಕ.ಸಾ.ಪ). ಕುರುಬರ ಹಿರೇಮಠಕ್ಕೆ ಕುರುಬರು ಬರುತ್ತಾರೆ. ಹೀಗೆಯೇ ಮಾದಿಗರ ಮಠ, ಈಳಿಗರ ಮಠ, ಇತ್ಯಾದಿ ಹದಿನೆಂಟು ಮಠಗಳಿವೆ. ಬಹುಶಃ ಕುರುಬ ಕುಲದ ರೇವಣಸಿದ್ಧ ಮಾದಿಗರ ಮರುಳಸಿದ್ಧನ ಗುರು. ಸಿರಿಗೆರೆ ಮಠದವರು ಉಜ್ಜಿನಿ ಜಗದ್ಗುರು ಮರುಳಸಿದ್ಧ ಮಾದಿಗ ಕುಲದವನೆಂದು ವಾದಿಸುತ್ತಾರೆ. ಇದು ನಿಜವಿರುವಂತಿದೆ. ಬಾಗಳಿಯ ದೇವಕವಿ ಕ್ರಿ.ಶ. ೧೫೮೨ರಲ್ಲಿ ಬರೆದ ‘ಮರುಳಸಿದ್ಧ ಚಾರಿತ್ರ’ ದಲ್ಲಿ ಮರುಳಸಿದ್ಧರ ಚರಿತ್ರೆ ಇದೆ. ಇದು ಮೆಲೆಯ ಮಾದೇಶ್ವರ ಸಾಂಗತ್ಯವನ್ನು ನೆನಪಿಸುತ್ತದೆ. ಮರುಳಸಿದ್ಧ, ರೇವಣಸಿದ್ಧರ ಚರಿತ್ರೆಗಳೂ ಪವಾಡಗಳಿಂದ ತುಂಬಿವೆ. ಮಾದೇಶ್ವರರು ನೆಲೆಯೂರಿದ, ಕೆಲಸ ಮಾಡಿದ ಸ್ಥಳಗಳನ್ನು ಇಂದಿಗೂ ತೋರಿಸುವಂತೆ ಉಜ್ಜಿನಿ, ಆಸುಪಾಸಿನಲ್ಲಿ ಮರುಳಸಿದ್ಧರ ಬಗ್ಗೆ ತೋರಿಸುತ್ತಾರೆ. ಇವುಗಳ ಸುತ್ತ ಆಚರಣೆಗಳ ಜಾಲವೂ ಹಬ್ಬಿದೆ. ಮಾದಿಗರ ಕೂಚಿಮಾರನಿಗೆ ಜಂಗಮನೊಬ್ಬ ಜೋಡು ಕೇಳಿದಾಗ ಕೂಚಿಮಾರನ ಹೆಂಡತಿ ಸುಪ್ರಭೆ ಮೊಲೆ ಕೂಯ್ದು ಕೊಡುತ್ತಾಳೆ. ಈ ಜಂಗಮನ ವರದಿಂದ ಇವರಿಗೆ ಹುಟ್ಟಿದವನೆ ಮರುಳಸಿದ್ಧ. ಮರುಳ ಎಂದರೆ ಹುಚ್ಚ, ಸಿದ್ಧ-ಸಿದ್ಧ ಪಂಥಕ್ಕೆ ಸೇರಿದವ ಎಂದರ್ಥ. ಮಾದೇಶ್ವರ ಪಂಥದಲ್ಲಿರುವಂತೆ, ಮರುಳಸಿದ್ಧನ ಐತಿಹ್ಯಗಳಲ್ಲೂ ಪಶುಪಾಲಕ ಜನರ ಸಂಸ್ಕೃತಿ ಆಶಯಗಳೇ ಹೆಚ್ಚಿವೆ. ಕೊಪ್ಪಳ ತಾಲೂಕು ಸಿಂದೋಗಿಯಲ್ಲಿ ಮರುಳಸಿದ್ಧರ ಮಠದ ಪೂಜಾರಿಗಳು ಮಾದಿಗರು. ಇವರಿಗೆ ಲಿಂಗದೀಕ್ಷೆ ಇದೆ.

ಮೇಲೆ ಹೇಳಿದ ಕೂಲಹಳ್ಳಿಯ ಹಿರೇಮಠದಲ್ಲಿ ಇಡೀ ವರ್ಷ ಭಕ್ತರಿಗೆ ಕೊಡುವ ಅಂಗಾರ (ಆಧಾರ), ಮಾದಿಗರು ಕಾಕುಳ್ಳಂ ಸುಟ್ಟುಕೊಟ್ಟ ಬೂದಿ, ಗೋಣಿಬಸವ ಮರವೆ ಅಂಗಿ ತೊಟ್ಟು ಸತ್ತಾಗ ಹಾವಾಗಿ ಬಂದು ವಿಷಹೀರಿ ಬದುಕಿಸಿದ ಮಾದಿಗರ ಬಾಲಬಸವ.

ಉತ್ತರ ಕರ್ನಾಟಕದಲ್ಲಿ ಈ ಬಗೆಯ ವ್ಯಕ್ತಿಗಳು ಕಾಡಸಿದ್ಧೇಶ್ವರ, ಸಾರಂಗದೇವ, ಕೊಡೇಕಲ್ಲು ಬಸವಣ್ಣ, ಸಾಲೋಟಗಿ ಶಿವಯೋಗಿ, ತೇರದಾಳ ಪ್ರಭುದೇವ ಮೊದಲಾದವರು. ಕಾಡಸಿದ್ಧೇಶ್ವರನ್ನು ಕಾಣಲು ಮಿರ್ಜಿಯ ಮೀರಾಸಾಹೇಬರು ಹುಲಿಯ ಮೇಲೆ ಕೂತು ಬಂದಾಗ ಕಾಡಸಿದ್ಧೇಶ್ವರ ಕೂತಕಟ್ಟೆಯನ್ನೇ ನಡೆಸಿದನಂತೆ. ಈಗಲೂ ಈ ಕಟ್ಟೆಯನ್ನು ತೋರಿಸುತ್ತಾರೆ. ಗುಂಡೇವಾಡಿಯಲ್ಲಿ ಬೆತ್ತವನ್ನು ನೆಲಕ್ಕೆ ಅಪ್ಪಳಿಸಿದಾಗ ನೀರು ಬಂತು. ಇದಕ್ಕೆ ವಿಭೂತಿಹಳ್ಳ ಎನ್ನುತ್ತಾರೆ. ಕೊಲ್ಲಾಪುರದ ಹತ್ತಿರದ ಸಿದ್ಧಗಿರಿಯಲ್ಲಿ ಇವರ ದೇಗುಲವಿದೆ. ಪ್ರತಿವರ್ಷ ದೊಡ್ಡ ಜಾತ್ರೆ ನೆರೆಯುತ್ತದೆ. ಈ ಭಾಗದ ಕರ್ನಾಟಕದ ಹಲವಾರು ಗ್ರಾಮಗಳಲ್ಲಿ ಕಾಡಸಿದ್ಧೇಶ್ವರರ ಮಠ ದೇಗುಲಗಲಿವೆ. ಇವರ ವಚನದ ಅಂಕಿತ “ಕಾಡಿನೊಳಗಾದ ಶಂಕರಪ್ರಿಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ’’. ಇಲ್ಲಿಯ ಕಾಡು, ನಿರ್ಮಾಯ ಪ್ರಭು ಎಂಬ ಪದಗಳನ್ನು ಗಮನಿಸಿ.

ಈ ಭಾಗದ ಇನ್ನೊಬ್ಬ ಗುರು ಸಾರಂಗದೇವ. ಈತ ಕಾಶಿ ಪಟ್ಟಣದಲ್ಲಿ ಬಾದಶಹನ ಆಳ್ವಿಕೆಯಿದ್ದಾಗ ಮಲೆ ಬರಿಸಿ ಮಳೆಯ ಮಲ್ಲೇಶ ಎಂದು ಖ್ಯಾತನಾದ. ಶ್ರೀಶೈಲದ ಸಾರಂಗದೇವನೆಂಬ ಅರಸನ ಕೈಕಾಲು ರಿಪೇರಿ ಮಾಡಿದ ಸಾರಂಗದೇವನಾದ. ಮಲಬಾರದ ಮೂಲಕ ತುಂಕೂರಿಗೆ ಬಂದ. ಇಲ್ಲೂ ಮಳೆ ತರಿಸಿ ಮಳೆಯ ಮರುಳಸಿದ್ಧೇಶ್ವರನಾದ. ಶಿವಗಂಗೆ, ಗುಮ್ಮಳಾಪುರಗಳಲ್ಲಿ ಮಠ ಸ್ಥಾಪಿಸಿದ. ವಿಜಾಪುರದ ಮುಸ್ಲಿಂ ಅರಸನ ಬೇತಾಳ ಬಾಧೆ ತಪ್ಪಿಸಿದ. ಈತ ಹೋದಲ್ಲೆಲ್ಲ ಸಾರಂಗಮಠ, ದೇಗುಲಗಳು ಸ್ಥಾಪಿತವಾದವು. ಶಿರಹಟ್ಟಿ ಫಕೀರಸ್ವಾಮಿ, ಗದಗದ ಮಡಿವಾಳಪ್ಪ, ನಾಗಲಿಂಗಪ್ಪ, ಸಿದ್ಧಾರೂಢ ಮುಂತಾದವರ ಮೂಲಕ ಈಚಿನವರೆಗೂ ಈ ಪರಂಪರೆ ಪಂಥಗಳು ಮುಂದುವರೆದವು. ನಾಡಿನಾದ್ಯಂತ ಬಹುಶಃ ವಿಜಯನಗರೋತ್ತರ ಕಾಲದಲ್ಲಿ ಈ ಬಗೆಯ ಅವಧೂತರು, ಅನುಭಾವಿಗಳು ಹುಟ್ಟಿಕೊಂಡಿರಲು ಕಾರಣವೇನು? ಇಂಥ ಪಂಥೀಯ ಐತಿಹ್ಯಗಳು ಬರಿ ಅವಧೂತರಿಗೆ, ತಾಂತ್ರಿಕರಿಗಷ್ಟೆ ಸಂಬಂಧಿಸಿಲ್ಲ. ಹರಪನಹಳ್ಳಿ ತಾಲೂಕು ಅರಸೀಕೆರೆ ದಂಡಿನ ದುರುಗಮ್ಮ ಬಳ್ಳಾರಿಯಿಂದ ಮಾದಿಗರ ಮರಿಯಜ್ಜನ ಜೆತೆ ಹೇಗೆ ಬಂದಳು. ಮರಿಯಜ್ಜನಿಂದ ಏನೇನು ಪವಾಡ ಮಾಡಿಸಿದಳು ಎಂಬುದನ್ನು ಅರಸೀಕೆರೆ ಮಾದೀಗ ಪೂಜಾರಿಗಳು ನಾಟಕವನ್ನಾಡುತ್ತಾರೆ. ಪ್ರತಿ ವರ್ಷದ ಜಾತ್ರೆಯಲ್ಲಿ ಮಾದಿಗರ ಪೂಜಾರಿ ಅಮ್ಮನ ಕೇಲುಹೊತ್ತು ಹೊಳೆಯಿಂದ ಬರುವ ಎರಡು ಕಿಲೋಮಿಟರು ದಾರಿಯುದ್ದಕ್ಕೂ ಲಿಂಗಾಯತರಾದಿಯಾಗಿ ಎಲ್ಲ ಜಾತಿ ಜನ ಚಾಪೆ ಹೆಣೆದಂತೆ ಅಡ್ಡಮಲಗುತ್ತಾರೆ. ಅವರನ್ನು ತುಳಿದುಕೊಂಡು ಬರುತ್ತಾನೆ ಪೂಜಾರಿ. ಈ ಸಂದರ್ಭದಲ್ಲಿ ಪೂಜಾರಿ ಮನೆಗಳ ದೇವದಾಸಿಯರು ದುರುಗೆಯರಾಗುತ್ತಾರೆ. ಅವರು ಉಂಡುಬಿಟ್ಟ ಎಡೆಯನ್ನು ಊಟಕ್ಕೆ ನೆರೆದ ಸಾವಿರಾರು ಜನರ ಪಂಕ್ತಿಗೆ ಪ್ರಸಾದವಾಗಿ ಹಂಚಲಾಗುತ್ತದೆ.

ಮೈಲಾರಕ್ಕೆ ಬರುವ ಜನ ‘ಏಳುಕೋಟಿ ಏಳಕೋಟಿಗ್ಯೋ, ಚಾಂಗ ಬಲೋ’ ಎಂದು ಕೂಗುತ್ತಾರೆ. ಮಾದೇಶ್ವರರ ಪರಿಷೆಗೆ ಸೇರುವ ಗಂಡಸರು ಏಳು ಕೋಟಿ ಹೆಂಗಸರು ಏಳು ಕೋಟಿ ಎಂಬ ನಂಬಿಕೆ ಇದೆ. ಮಧ್ಯ ಕರ್ನಾಟಕದಲ್ಲಿ ಕೃಷಿಕ ಹೊಲೆಯ ಮಾದಿಗರು ಕುರುಬರ ಮೈಲಾರದಿಂದ ಹತ್ತಿಕ್ಕಲ್ಪಟ್ಟರೆ, ದಕ್ಷಿಣ ಕರ್ನಾಟಕದಲ್ಲಿ ಕುರುಬ, ಬೇಡ, ಒಕ್ಕಲಿಗ, ಸೋಲಿಗರನ್ನು ಮಾದೇಶ್ವರ, ಮಂಟೇಸ್ವಾಮಿ ಪಂಥಗಳ ಮೂಲಕ ಹೊಲೆಯ, ಮಾದಿಗ ಸಂಸ್ಕೃತಿಗಳು ಗೆಲ್ಲುತ್ತವೆ. ಆದರೆ ಇದಕ್ಕಾಗಿ ಮಾದೇಶ್ವರ ಮಂಟೇಸ್ವಾಮಿ ಜಂಗಮ ರೂಪಧಾರಣ ಮಾಡಬೇಕಾಯಿತು. ಮಾದೇಶ್ವರ ಪರಿಷೆಯಲ್ಲಿ ಜನ ಹರಕೆ ಹೊತ್ತು ಪೂರೈಸುವ ಆಚರಣೆಗಳೆ ಇತರ ಜನಪದ ದೈವ ಕೇಂದ್ರಗಳಲ್ಲಿಯೂ ನಡೆಯುತ್ತವೆ. ಆಡು ಕುರಿ ದನ ಕುರುಗಳನ್ನು ಮಾದಯ್ಯನಿಗೆ ಕಾಣಿಕೆ ನೀಡುವಂತೆ ಅರಸೀಕೆರೆ ದಂಡಿನ ಮರಗಮ್ಮನಿಗೂ ನೀಡುತ್ತಾರೆ: ಅಲ್ಲಿ ಕೋಳಿ ಹಾರಿಸುವಂತೆ ಇಲ್ಲೂ ಹಾರಿಸುತ್ತಾರೆ. ಉರುಳುಸೇವೆ, ಅಡ್ಡಬೀಳುವ ಸೇವೆ, ಎದೆ ತೋಳು ಗಂಟಲಿಗೆ ದಬ್ಬಳ ಚುಚ್ಚಿಕೊಳ್ಳುವ ಸೇವೆ ಎಲ್ಲೆಡೆ ಇವೆ. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಾದೇಶ್ವರ ಬೆಟ್ಟದ ಶೇಷಣ್ಣ ಒಡೆಯರ ಉತ್ಸವದಲ್ಲಿ ಕುದಿಯುವ ಅನ್ನವನ್ನು ಪೂಜಾರಿ ಕೈಹಾಕಿ ತಿರುವುವನು. ಈ ಪದ್ಧತಿ ಹೊಸಪೇಟೆ ಸಮೀಪದ ಹುಲಿಗಿಯ ಹುಲಿಗೆಮ್ಮನ ಜಾತ್ರೆಯಲ್ಲಿದೆ. ಮಾದೇಶ್ವರರ ಗರ್ಭಗುಡಿಯ ಕಪ್ಪುಲಿಂಗಕ್ಕೆ ಬೆಳ್ಳೆ ಅಥವಾ ಬಂಗಾರದ ಕೊಳಗವನ್ನು ಇಟ್ಟು ಪೂಜಿಸುವಂತೆ ಪಂಚಗಣಾಧೀಶ್ವರರ ಮಠ ದೇಗುಲಗಳಲ್ಲೂ ಕೊಳಗಗಳೆ ಪೂಜೆಗೊಳ್ಳುವವು. ತೇರದಾಳದ ಅಲ್ಲಮಪ್ರಭು ದೈವಚಿಹ್ನೆ ಮಗಿಯಂತಿರುವುದರಿಂದ ‘ಮಗಿಯ ಪ್ರಭು’ ಎಂಬ ಹೆಸರಿದೆ. ಮಾದೇಶ್ವರ ಪಂಥದಲ್ಲಿ ಶೇಷಣ್ಣನೆಂಬ ಹಾವಿನ ಆಶಯವಿದ್ದರೆ ಪಂಚಗಣಾಧೀಶ್ವರರ ಮಠದೇಗುಲಗಳ ಶಿಲ್ಪದಲ್ಲಿ ಮತ್ತು ದೇವರ ಮೇಲೆ ಏಳು ಹೆಡೆಯ ಸರ್ಪವಿರುತ್ತದೆ.

ಹಲಕೆಲವು ಸ್ಥಳೀಯ ವ್ಯತ್ಯಾಸಗಳ ಜತೆ ಈ ಬಗೆಯಾಗಿ ಎದ್ದುಕಾಣುವ ಸಾಮ್ಯತೆ ಏನನ್ನು ಸೂಚಿಸುತ್ತವೆ? ಬೃಹತ್ ದ್ರಾವಿಡ ಸಂಸ್ಕೃತಿಯ ಅಖಂಡ ಪರಂಪರೆಯ ಅವಿಚ್ಛಿನ್ನತೆಯನ್ನಲ್ಲವೆ? ಇಲ್ಲಿ ಇತಿಹಾಸವನ್ನು ಹುಡುಕುವುದು ಹೇಗೆ?

ರಾಜಕೀಯಾರ್ಥಿಕ ಹಿನ್ನೆಲೆ

ದಕ್ಷಿಣದಲ್ಲಿ ಊಳಿಗಮಾನ್ಯಕಾಲದ ಮೊದಲ ಸಾವಿರ ವರ್ಷಗಳವರೆಗೆ ಚಕ್ರವರ್ತಿತ್ವ ಸ್ಥಳೀಯ ತುಂಡರಸರು ಮತ್ತು ರಾಜವಂಶಗಳ ಮಧ್ಯೆ ಹಸ್ತಾಂತರವಾಗುತ್ತಿತ್ತು. ಈ ಕಾಲದಲ್ಲಿ ಆಳುವ ವರ್ಗಗಳಲ್ಲಿ ಒಂದು ವಿಧದ ಭದ್ರತೆ, ಆತ್ಮವಿಶ್ವಾಸಗಳಿದ್ದವು. ಪ್ರಾದೇಶಿಕವಾಗಿ ಪರಸ್ಪರ ಎಷ್ಟೇ ಕಾದಾಟಗಳಿದ್ದರೂ ಸಾಂಪ್ರದಾಯಿಕ ಶೋಷಕ ವ್ಯವಸ್ಥೆಗೆ ಧಕ್ಕೆಯಿರಲಿಲ್ಲ. ಇದನ್ನು ಅನಂತರದ ಶಾಸನಗಳು “ಪೂರ್ವ ಮರ್ಯಾದೆ’’ ಎಂದು ಕರೆಯುತ್ತವೆ. ದುಡಿಯುವ ಜನವರ್ಗಗಳ ಜೀವನಕ್ರಮದಲ್ಲೂ ಯಾವ ಬಗೆಯ ಏರುಪೇರಿರಲಿಲ್ಲ. ಕೆರೆ, ಬಾವಿ ನೀರಾವರಿ ಮೂಲಕ ಕೃಷಿ ಆರ್ಥಿಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು. ಕರಕುಶಲ ಕರ್ಮಿ, ಕಲೆಗಾರರಿಗೆ, ವ್ಯಾಪಾರಿಗಳ ಒಳ್ಲೆಯ ಆದಾಯವಿತ್ತು. ಇದು ೧೧ನೇ ಶತಮಾನದವರೆಗಿನ ಸ್ಥಿತಿ. ಅನಂತರದ ಚರಿತ್ರೆಯ ಕೆಲವು ಮುಖ್ಯ ಘಟನೆಗಳು ಈ ಜೀವನ ಕ್ರಮವನ್ನು ಅಲ್ಲೋಲಕಲ್ಲೋಲ ಮಾಡಿದವು.

೧೧ನೇ ಶತಮಾನದ ಆರಂಭದಲ್ಲಿ ತುರ್ಕಮೂಲದ ಮುಸ್ಲಿಮರು ಭಾರತದ ಮೇಲೆ ದಾಳಿ ಮಾಡಿದರು. ಘಜ್ನಿ, ಗೋರಿ ಮಹಮ್ಮದರ ದಾಳಿಯಾದವು. ಗೋರಿ ಮಹಮ್ಮದನ ಹತ್ಯೆಯ ಬಳಿಕ ಕ್ರಿ.ಶ. ೧೨೧೦ರಲ್ಲಿ ಕುತುಬುದ್ದೀನ ಐಬಕ್ ದೆಹಲಿಯಲ್ಲಿ ಸುಲ್ತಾನ ರಾಜ್ಯ ಸ್ಥಾಪನೆ ಮಾಡಿದ.ಈ ಗುಲಾಮ ವಂಶದ ಅನಂತರ ತುರ್ಕ ಖಿಲ್ಜಿ ಬುಡಕಟ್ಟಿನ ಜಲಾಲುದ್ದೀನ ೧೨೯೦ರಲ್ಲಿ ಅಧಿಕಾರಕ್ಕೆ ಬಂದಾಗ ಅವನ ಸಂಬಂಧಿಕ ಅಲ್ಲಾವುದ್ದೀನ ಖಿಲ್ಜಿ ದಕ್ಷಿಣದ ಮೇಲೆ ದಾಳಿ ಮಾಡಿದ. ಈ ಸಂದರ್ಭದಲ್ಲಿ ದಕ್ಷಿಣದ ಸ್ಥಿತಿ ಏನಿತ್ತು?

ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಲುಕ್ಯ ಚಕ್ರವರ್ತಿಗಳ ಸಾಮಂತರಾಗಿದ್ದ ದೇವಗಿರಿ ಸೇವುಣರು ಕಲ್ಯಾಣಿ ಚಾಲುಕ್ಯರ ಪತನ, ಕಳಚೂರಿ, ಹೊಯ್ಸಳರ ಹೋರಾಟದಲ್ಲಿ ತಾವೂ ಸ್ವತಂತ್ರರಾದರು. ಈ ಸಂಕ್ರಮಣ ಕಾಲದಲ್ಲೆ ಶರಮರ ಕ್ರಾಂತಿ ನಡೆಯಿತು. ೧೨೧೦ – ೧೨೪೭ರ ಮಧ್ಯೆ ಆಳಿದ ದೇವಗಿರಿಯ ಸಿಂಘಣ ಉತ್ತರ ಕರ್ನಾಟಕದ ಬಹುಭಾಗವನ್ನು ವಶಪಡಿಸಿಕೊಂಡಿದ್ದ. ಈ ಸೇವುಣರು ಹೊಯಿಸಳರ ಜತೆ ಪಾರಂಪರಿಕ ದ್ವೇಷದಿಂದ ಯುದ್ಧ ಮಾಡುತ್ತಲೆ ಇದ್ದರು. ಆದರೆ ಈ ವಂಶದ ರಾಮಚಂದ್ರ (೧೨೭೧-೧೩೧೯) ೧೨೯೪ರಲ್ಲಿ ಅಲ್ಲಾವುದ್ದೀನ ಖಿಲ್ಜಿಯ ದಾಳಿಗೆ ಸೋತು ೫೦ ಮಣ ಚಿನ್ನವನ್ನು ಕಪ್ಪವಾಗಿ ಕೊಟ್ಟ ಇವನ ಮಗ ಶಂಕರದೇವ ಮತ್ತೆ ಯುದ್ಧ ಮಾಡಿದ್ದರಿಂದ ಮುಸಲ್ಮಾನರಿಗೆ ೬೦೦ ಮಣ ಮುತ್ತುರತ್ನ, ೧೦೦೦ ಮಣ ಬೆಳ್ಳಿ, ೨ ಮಣ ಚಿನ್ನವನ್ನು ಕೊಡಬೇಕಾಯಿತು. ಈ ಹಂತದಲ್ಲಿ ಹೊಯಿಸಳರು ಯಾದವರ ವಿರುದ್ಧ ಗೆದ್ದರೂ ಮುಸ್ಲಿಮರ ದಾಳಿಯಿಂದ ತಪ್ಪಿಸಿಕೊಳ್ಳದಾದರು. ೧೩೦೬, ೧೩೧೩, ೧೩೧೭ರಲ್ಲಿ ಅಲ್ಲಾವುದ್ದೀನನ ಸೇನಾನಿ ಮಲ್ಲಿಕಾಫರನ ದಾಳಿಗೆ ದೇವಗಿರಿ ಸಂಪೂರ್ಣ ನೆಲಸಮವಾಯಿತು. ೧೩೨೬ರಲ್ಲಂತೂ ಮಹಮ್ಮದ್ ಬಿನ್ ತುಘಲಕ್ ದೇವಗಿರಿಯನ್ನು ದೌಲತಾಬಾದ್ ಮಾಡಿ ಆಳತೊಡಗಿದ. ದಕ್ಷಿಣ ಭಾರತದ ಹೊಸ್ತಿಲಂತಿದ್ದ ದೇವಗಿರಿ ಯಾದವರು ನಾಶವಾದ ಮೇಲೆ ಮುಸ್ಲಿಮರು ದಕ್ಷಿಣಕ್ಕೆ ನುಗ್ಗಲು ಸುಲಭವಾಯಿತು. ಅಲ್ಲಾವುದ್ದೀನ ಖಿಲ್ಜಿ ಯಾದವರನ್ನು ಸೋಲಿಸಿದಾಗ ಹಿಂದುಗಳ ಮೇಲೆ ನಾನಾ ವಿಧದ ಒತ್ತಡ ಹೇರಿದ. ಅವರು ಶಸ್ತ್ರ ಹಿಡಿಯುವಂತಿರಲಿಲ್ಲ. ಶ್ರೀಮಂತ ಉಡುಗೆ ತೊಡುಗೆ ಧರಿಸುವಂತಿರಲಿಲ್ಲ, ಕುದುರೆ ಸವಾರಿ ಮಾಡುವಂತಿರಲಿಲ್ಲ. ಸುಗ್ಗಿಯಲ್ಲಿ ಅರ್ಧಪಾಲು ಧಾನ್ಯ ಕೊಡಬೇಕಿತ್ತು. ಈತ ತನ್ನ ರಾಜ್ಯದ ಮೇಲೆ ಏರಿಬಂದ ಮಂಗೋಲರನ್ನು ಓಡಿಸಲು ಸಿದ್ಧಮಾಡಿದ್ದ ೪ ಲಕ್ಷ ೭೫ ಸಾವಿರ ಕುದುರೆ ದಳದ ಪಾಲನೆ ಪೋಷಣೆಗೆ ದಕ್ಷಿಣದ ಮೇಲೆ ದಾಳಿ ಮಾಡಲು ತನ್ನ ಸೇನಾಧಿಪತಿ ಮಲ್ಲಕಾಫರನಿಗೆ ಆಜ್ಞಾಪಿಸಿದ. ಮಲ್ಲಿಕಾಫರ ದೇವಗಿರಿಯಾದವರು, ವಾರಂಗಲ್ಲಿನ ಕಾಕತೀಯರು, ದೋರ ಸಮುದ್ರದ ಹೊಯ್ಸಳರು, ಮಧುರೆಯ ಪಾಂಡ್ಯರನ್ನು ತೊತ್ತಳದುಳಿದು ಕನ್ಯಾಕುಮಾರಿಯನ್ನು ತಲುಪಿಸಿದ. ಅನಂತರ ಪ್ರತಿ ವರ್ಷ ತಪ್ಪದೆ ದೆಹಲಿಗೆ ಕಪ್ಪಕಾಣಿಕೆ ಕೊಡುವ ಸ್ಥಿತಿ ದಕ್ಷಿಣದ ರಾಜ್ಯಗಳಿಗೆ ಉಳಿಯುತ. ಇಲ್ಲಿಂದ ಮುಂದೆ ದಕ್ಷಿಣ ಪರತಂತ್ರವೆ. ೧೩೪೭ರಲ್ಲಿ ಗುಲಬರ್ಗಾದಲ್ಲಿ ಬಹಮನಿ ರಾಜ್ಯ ಸ್ಥಾಪನೆಯಾಯಿತು. ೧೫೨೬ರಲ್ಲಿ ಬಾಬರ ಮೊಗಲ ರಾಜ್ಯ ಸ್ಥಾಪಿಸಿದ ಅನಂತರ ಉತ್ತರದ ಬಲ ಅಧಿಕವಾಯಿತು. ೧೫೬೫ರಲ್ಲಿ ವಿಜಯನಗರದ ಪತನಾನಂತರ ದಕ್ಷಿಣದ ಅನಿಶ್ಚಿತತೆ, ಅಭದ್ರತೆ ಶಿಖರ ಮುಟ್ಟಿತು. ದಾಳಿಕೋರರು ಸಾಂಪ್ರದಾಯಿಕ ಜೀವನಕ್ರಮವನ್ನು ಪಲ್ಲಟಗೊಳಿಸಿದರು. ದಕ್ಷಿಣದ ಇಡೀ ಆರ್ಥಿಕ ಅಡಿಪಾಯ ಭೂಕಂಪಕ್ಕೊಳಗಾಯಿತು. ಇದು ದುಡಿಯುವ ಜನವರ್ಗಗಳ ಮೇಲೂ ಅಗಾಧ ಪರಿಣಾಮ ಬೀರಿತು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮತ್ತು ಅದು ನಾಶವಾಗುವ ಕಾಲದವರೆಗಿನ ಬದುಕು ಸ್ಥಿರವಿರಲಿಲ್ಲ. ಸದಾ ಭಯದ ನೆರಳಿನಲ್ಲಿ ನಲುಗುತ್ತಿತ್ತು ರಾಜಕೀಯ. ಐದು ಸುಲ್ತಾನ ವಂಶಗಳು ಒಂದಾಗಿ ವಿಜಯನಗರವನ್ನು ಹಾಳು ಮಾಡಿದಾಗ ಆತಂಕ ನಿಜವಾಯಿತು. ಸಾಂಪ್ರದಾಯಿಕ ಶೋಷಕ ಹಿಂದು ಮತಧರ್ಮಗಳು ಸಾಮ್ರಾಜ್ಯದ ಕಾಲದಲ್ಲಿ ತಮ್ಮ ಎಂದಿನ ಆಡಂಬರವನ್ನು ಮೆರೆದವು. ಇವುಗಳ ಧನದೌಲತ್ತೂ ಸ್ಥಿರವಾಗುಳಿದೀತೆಂಬ ನಂಬಿಕೆಯಿರಲಿಲ್ಲ. ಅನಂತರದ ಒಂದು ಸಂದರ್ಭದಲ್ಲಿ ಶೃಂಗೇರಿ ಮಠದ ಸಂಪತ್ತನ್ನು ಪರಶುರಾಂ ಬಾವುವಿನಂಥ ಹಿಂದು ಅರಸರೆ ಲೂಟಿ ಮಾಡಿದಾಗ ಟಿಪ್ಪು ಅದನ್ನು ರಕ್ಷಿಸಲು ಮುಂದಾದುದನ್ನು ಗಮನಿಸಬಹುದು. ಆದರೂ ಸಾಮ್ರಾಜ್ಯದ ಕಾಲದ ಸಂಸ್ಥಾನ ಮಠಗಳೆ ಈಗಿನ ಕ್ಯಾಪಿಟೇಶನ್ ಡೊನೇಶನ್ ದೊರೆಗಳಾಗಿ ಮೆರೆಯುತ್ತಿರುವುದನ್ನು ಮರೆಯಬಾರದು.

ಇಂಥ ಅಭದ್ರತೆ ಆಂತಕಗಳ ಮಧ್ಯೆ ಹುಟ್ಟುವ ಮತ ಪಂಥಗಳು ನಿಗೂಢವಾಗಿರುವುದೇ ಸಹಜ. ಭಾರತದಾದ್ಯಂತ ಅವಧೂತರು, ಅನುಭಾವಿಗಳು ಕಾಣಿಸಿಕೊಂಡುದು ಈ ಹಿನನೆಲೆಯಲ್ಲಿಯೆ. ಪ್ರೌಢದೇವರಾಯನ ಕಾಲದ ನೂರೊಂದು ವೀರಶೇವ ವಿರಕ್ತರು ಹುಚ್ಚರಂತಿದ್ದವರು. ಮತ ಕ್ಷೇತ್ರದಲ್ಲಿ ಅದ್ದೂರಿ ಆಡಂಬರಗಳಿಗೆ ಆಸ್ಪದವಿರಲಿಲ್ಲ. ಮುಸ್ಲಿಂ ಸಂಸ್ಕೃತಿಯ ಜತೆ ಹೊಂದಾಣಿಕೆ ಮಾಡಿಕೊಂಡು ಸಮೀಕರಣಕ್ಕೆ ಒಪ್ಪಲಿದ್ದ ಮತಗಳು ನಾಲ್ಕೊಪ್ಪತ್ತು ಬದುಕಿದವು. ಸಂತೆ, ವ್ಯಾಪಾರ ವಹಿವಾಟು ಜಾತ್ರೆ ಪರಿಷೆಗಳಲ್ಲಿ ಮುಂದುವರಿಯಬೇಕಿತ್ತು. ಸಾಂಪ್ರದಾಯಿಕ ಮೌಲ್ಯಗಳು ಜೀವ ಹಿಡಿದಿರಬೇಕಿತ್ತು. ಈ ಕಾರ್ಯವನ್ನು ಆಗು ಮಾಡಿದವರು ಅನುಭಾವಿಗಳು, ಅವಧೂತರು. ಆಧುನಿಕ ಕಾಲಕ್ಕೆ ಪ್ರವೇಶಿಸುವ ಸಂಕ್ರಮಣಾವಸ್ಥೆಯಲ್ಲಿ ತುಂಡರಸರ ಸ್ಥಳೀಯ ಅಭದ್ರ ಆಡಳಿತಗಳೆ ಉಳಿದವು. ಈ ರಾಜಕೀಯಾರ್ಥಿಕತೆಗೆ ಅನುಗುಣವಾಗಿ ಮತಕ್ಷೇತ್ರದಲ್ಲೂ ಸ್ಥಳೀಯ ಅನುಭಾವಿ ಪಂಥಗಳು ಢಾಳಾಗಿ ಕಾಣಿಸಿಕೊಂಡವು. ಮೇಲ್ತುದಿಯಲ್ಲಿದ್ದ ಬ್ರಾಹ್ಮಣರೂ ಸ್ಥಳೀಯ ಭಾಷೆ ಸಂಸ್ಕೃತಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಮಾಧ್ವರಲ್ಲಿ ಹನುಮಂತ ಮುಖ್ಯಪ್ರಾಣನಾಗಿ ಮಹತ್ವದಸ ಸ್ಥಾನ ಗಳಿಸಿದ. ದಾಸಕೂಟದ ಮೂಲಕ ಈ ಮತ ಜನಪ್ರಿಯವಾಯಿತು.