ಒಂದು ಪ್ರಾದೇಶಿಕ ಸಮುದಾಯದ ನಾಯಕರಾದ ಮಾದೇಶ್ವರರ ಜೀವಿತದ ಕಾಲಮಾನ ಸು. ೧೪ನೇ ಶತಮಾನ.[1] ಅವರ ಕಾರ್ಯಕ್ಷೇತ್ರ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಕೌದಳ್ಳಿ ಗ್ರಾಮವನ್ನು ದಾಟಿದರೆ ಸಿಗುವ ದಟ್ಟವಾದ ಘಟ್ಟ ಪ್ರದೇಶವೇ ನಡುಮಲೆ (ತಮ್ಮ ಸಾಮಾಜಿಕ ಆಂದೋಲನದ ಮೂಲಕ ದಟ್ಟ ಅರಣ್ಯವೊಂದರ ಬೇಟೆಯೇ ಜೀವನಾಧಾರವಾದ ಬೇಡಸಮುದಾಯದ ಬದುಕಿನಲ್ಲಿ ಮಹತ್ತರ ಪರಿವರ್ತನೆಯನ್ನು ತಂದು, ಶಿವಯೋಗಿಸಿದ್ದಿಯ ಮೂಲಕ ಜನತೆಯ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ, ದೈವತ್ವಕ್ಕೇರಿದ ಮಾದೇಶ್ವರರ ಮಹಿಮೆಯ ಪ್ರತೀಕವಾಗಿ ಅವರು ವಾಸಿಸಿದ್ದ ಏಳು ಮಲೆಯ ನಡುವಿನ ಭಾಗವನ್ನು ಮಾದೇಶ್ವರಬೆಟ್ಟವೆಂದು ಜನತೆ ಗುರುತಿಸಿದೆ). ಮಾದೇಶ್ವರರು ಸೂರ್ಯರಶ್ಮಿ ಪ್ರವೇಶಿಸದಷ್ಟು ದಟ್ಟವಾದ ಅರಣ್ಯದ ಅಲೆಮಾರಿ ಬದುಕು ನಡೆಸುತ್ತಿದ್ದ ಬೇಟೆಗಾರರ ಒಂದು ಪೋಡಿನಲ್ಲಿ ಜನಸಿದವರಲ್ಲ, ಶ್ರೀಶೈಲದಿಂದ ವಲಸೆ ಬಂದು ಅಲ್ಲಿ ನೆಲೆಸಿದವರು.

ಮಾದೇಶ್ವರರ ತಂದೆ ತಾಯಿಯರನ್ನು ಚಂದ್ರಶೇಖರಮೂರ್ತಿ – ಉತ್ತರಾಜಮ್ಮ ಎಂದು ಜನಪದ ಮಹಾಕಾವ್ಯಗಳ ಕರ್ತೃಗಳು ಹೇಳಿದ್ದರೂ ಮಾದೇಶ್ವರರ ಜನನವನ್ನು ಅತಿಮಾನುಷವಾಗಿಸಲು ಕೈಲಾಸದಿಂದ ಧರೆಗೆ ಅವತರಿಸಿ ಬಂದು ಶ್ರೀಶೈಲದ ಪಾತಾಳ ಗಂಗೆಯ ಸ್ನಾನಗಂಗೆಯ ಬಳಿ ಕಾಣಿಸಿಕೊಂಡನು (ಶ್ರೀ ಸುತ್ತೂರು ಸಿಂಹಾಸನ ಗುರುಪರಂಪರೆ (೧೯೩೩) ಸಂಧಿ ೪ ಪದ್ಯ ೨೧); ಶ್ರೀಶೈಲ ಮಲ್ಲಿಕಾರ್ಜುನ ಲಿಂಗದ ಬಳಿ ಕಾಣಿಸಿಕೊಂಡನು. (ಮಲೆಮಹದೇಶ್ವರ ನಿಜಪುರಾಣ (೧೯೭೦) ಪು. ೫-೬); ಅಯೋನಿಜನಾಗಿ ಜನಿಸಿದನು (ಎಪ್ಪತ್ತೇಳು ಹೆಬ್ಬು ಮೇಲೆ ಎಣ್ಣೆಮಜ್ಜನದ ವ್ಯಾಘ್ರವಾಹನ ಮುದ್ದು ಮಹದೇಶ್ವರಸ್ವಾಮಿ ಚರಿತ್ರೆ (೧೯೩೯) ಪು. ೫೧) – ಹೀಗೆ ವೈಭವೀಕರಿಸಿ ಹೇಳಲಾಗಿದೆ. ಶ್ರೀಶೈಲದ ಭಕ್ತಿಮಯ ಪರಿಸರದಿಂದ ದಕ್ಷಿಣಕ್ಕೆ ಪ್ರಯಾಣ ಬೆಳೆಸಿದ ಮಾದೇಶ್ವರರು ಸುತ್ತೂರು, ಕುಂತೂರು, ಏಳುಮಲೆಯ ನಡುವಿನ ಪ್ರದೇಶವಾದ  ನಡುಮಲೆಯಲ್ಲಿ ತಮ್ಮ ಬಾಲ್ಯ, ಯೌವನ ಹಾಗೂ ಮುಪ್ಪಿನ ಕಾಲವನ್ನು ಕಳೆದಿರುವರು. ಬಹುಶಃ ಅವರು ತಮ್ಮ ಯೌಗಿಕ ಶಕ್ತಿಯಿಂದ ಅನೇಕ ಮಹಿಮೆಗಳನ್ನು ಪ್ರದರ್ಶಿಸಿ ನಡುಮಲೆಯ ಪೋಡುಗಳಲ್ಲಿನ ಜನರನ್ನು ಆಕರ್ಷಿಸಿರಬಹುದು. ಮಾದೇಶ್ವರರನ್ನು ಕುರಿತ ಮಹಾಕಾವ್ಯಗಳಲ್ಲಿ ಅವರು ಮಾಡಿದ ನೂರಾರು ಪವಾಡಗಳು ಬಣ್ಣನೆಗೊಂಡಿವೆ. ಬಹದ್ದೂರ್ ಹೈದರಲ್ಲಿ ಖಾನನ ತಾಮ್ರ ಶಾಸನದಲ್ಲಿ (೧೭೭೬) ಮಾದೇಶ್ವರರನ್ನು ಮಹಾಜಗದ್ಗುರು ಎಂದು ಕರೆಯಲಾಗಿದೆ. ಈ ಶಾಸನದಲ್ಲಿ ಬರುವ ‘ಕತ್ತಲೆರಾಜ್ಯ’ ಎಂಬ ಪ್ರಯೋಗವನ್ನೂ ಗಮನಿಸಬೇಕು. ಎತ್ತರವಾಗಿರುವ ಮರಗಿಡಗಳಿಂದ ಇಡಿಕಿರಿದು ತುಂಬಿದ ದಟ್ಟವಾದ ಅರಣ್ಯ ಪ್ರದೇಶ; ನಾಗರಿಕತೆಯ ಗಂಧಗಾಳಿ ಸುಳಿಯದ ಮೃಗೀಜೀವನ ನಡೆಸುತ್ತಿದ್ದ ಪ್ರದೇಶ, ವಿದ್ಯೆಯ ಅರಿವಿಲ್ಲದೆ ತಮ್ಮದೇ ಆದ ನಂಬಿಕೆ, ಆಚರಣೆಗಳಲ್ಲಿ ಸ್ವಚ್ಛಂದ ಬದುಕು ನಡೆಸುತ್ತಿದ್ದ ಜನರ ಪ್ರದೇಶ ಎಂಬೆಲ್ಲ ಅರ್ಥಗಳನ್ನು  ಕತ್ತಲೆರಾಜ್ಯ ಎನ್ನುವ ಪದ ಕೊಡುತ್ತದೆ. ಈ ಶಾಸನದಲ್ಲಿ ಮಾದೇಶ್ವರರು ವೀರಶೈವ ಸಂಪ್ರದಾಯಕ್ಕೆ ಸೇರಿದವರೆಂಬುದನ್ನು ಪಂಚಮಠಗಳ ಉಲ್ಲೇಖದ ಮೂಲಕ ಹೇಳಲಾಗಿದೆ. (ಮಾದೇಶ್ವರಸ್ವಾಮಿ, ಸಿದ್ಧೇಶ್ವರಸ್ವಾಮಿ, ಬ್ರಹ್ಮೇಶ್ವರ, ಶಿವಲೆಂಕಾರೇಶ್ವರ ಮತ್ತು ಹಿರಿಮಡುವಾಳಸ್ವಾಮಿ) ಹೊಯ್ಸಳ ಬಲ್ಲಾಳದೇವರ ಶಾಸನದಲ್ಲೂ (೧೩೨೪) ಚಂದ್ರಣಿ ಮಠ, ಕಂಚಿ ತೆಲುಗಾಣ್ಯದ ಮಠ, ವಾಣಿಜ್ಯಪುರಿ ಮಠ, ಕೆಂಬಲ್ಲೂರಮಠ ಮತ್ತು ಮಹಾಲಿಂಗಿಮಠಗಳ ಪ್ರಸ್ತಾಪ ಬಂದಿದೆ. ಕಂಚಿ ತೆಲುಗಾಣ್ಯಮಠವು ಮಾದೇಶ್ವರರಿಗೆ ಸಂಬಂಧಿಸಿದುದೆಂದು ಈ ಶಾಸನ ಹೇಳುತ್ತದೆ. ಈ ಶಾಸನದಲ್ಲಿ ಬರುವಂತೆ ಶ್ರವಣದೊರೆಯನ್ನು ಸಂಹಾರ ಮಾಡಿದ ಮೇಲೆ ಮಾದೇಶ್ವರರು ಪ್ರಬುಲಿಂಗಾರಾಧ್ಯರಿಂದ ಲಿಂಗಧಾರಣೆಯನ್ನು ಮಾಡಿಸಿಕೊಂಡರು ಎನ್ನುವುದು ಲಕ್ಷಿಸಬೇಕಾದ ಸಂಗತಿ.

ಪ್ರಾದೇಶಿಕ ನಾಯಕ

ಮಾದೇಶ್ವರ ಭಕ್ತ ಸಮೂಹ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಚೆದುರಿದಂತೆಯೂ, ತಮಿಳುನಾಡಿನ ಗಡಿಭಾಗಗಳಲ್ಲಿ ವಿಶೇಷವಾಗಿಯೂ ಇರುವರು. ಮಾದೇಶ್ವರರು ಶ್ರೀಶೈಲದಿಂದ (ಉತ್ತರದೇಶದಿಂದ) ದಕ್ಷಿಣದೇಶಕ್ಕೆ ಬಂದರೆಂದು ಮಲೆ ಮಾದೇಶ್ವರರನ್ನು ಕುರಿತ ಎಲ್ಲ ಜನಪದ ಮಹಾಕಾವ್ಯಗಳೂ ಹೇಳಿವೆ. ಅವರ ಬದುಕಿನ ಮಹತ್ವದ ಭಾಗ ಕಳೆದದ್ದು ನಡುಮಲೆಯಲ್ಲಿ. ಅವರು ತಮ್ಮ ಈ ಕಾರ್ಯಕ್ಷೇತ್ರವನ್ನು ಅಲ್ಲಿನ ಜನರ ಸಾಮಾಜಿಕ ಜೀವನದ ಪರಿವರ್ತನೆಗಾಗಿ ಬಳಸಿಕೊಂಡರು. ಈ ಹಿನ್ನೆಲೆಯಲ್ಲಿ ಅರವು ದೈವತ್ವದ ಸಿದ್ಧಿ ಪಡೆದ ಓರ್ವ ಪ್ರಸಿದ್ಧ ಪ್ರಾದೇಶಿಕ ನಾಯಕ.

ಪ್ರಾದೇಶಿಕ ನಾಯಕನ ವೈಲಕ್ಷಣ್ಯಗಳು

ಮಾದೇಶ್ವರರನ್ನು ಒಂದು ಗುಡ್ಡಗಾಡು ಪ್ರದೇಶದ ಅನಾಗರಿಕ ಸಂಸ್ಕೃತಿಯ ವಕ್ತಾರರಾಗಿದ್ದ ಒಂದು ಜನಾಂಗವನ್ನು ನಾಗರಿಕರನ್ನಾಗಿ, ಸಂಸ್ಕೃತಿಸಂಪನ್ನರನ್ನಾಗಿ ಮಾಡಿದ ಒಂದು ಸಮುದಾಯದ ನಾಯಕನನ್ನಾಗಿ ಮೊದಲಿಗೆ ಪರಿಗಣಿಸಬೇಕು. ಅನಂತರದ ಅವರ ವರ್ಚಸ್ವೀ ಗುಣಗಳು, ಶಿವಯೋಗಸಿದ್ಧ ಆ ತಿರಸ್ಕೃತ ಸಮುದಾಯದ ಒಳತಿಗೆ ಬಳಕೆಯಾಗಿ ಅವರು ದೈವತ್ವದ ಸ್ಥಾನಕ್ಕೇರಿದುದನ್ನು ವಿಶ್ವದ ಸಾಮಾಜಿಕ ಆಂದೋಲನದ ನಾಯಕರ ಬದುಕಿನಲ್ಲಿ ಸಂದ ಮರ್ಯಾದೆಯ ಹಿನ್ನೆಲೆಯಲ್ಲಿ ಗುರುತಿಸಬಹುದು. ಸಾಂಸ್ಕೃತಿಕ ನಾಯಕನೊಬ್ಬನ ಚಹರೆಗಳನ್ನು ನಾವು ಮಾದೇಶ್ವರರಲ್ಲಿ ಗುರುತಿಸಬಹುದು. ಅವರು ಅನಾಗರಿಕ ಸಂಸ್ಕೃತಿಯ ಪ್ರತಿನಿಧಿಗಳಂತಿದ್ದ ಒಂದು ಸಮುದಾಯದ ಬದುಕಿನಲ್ಲಿ ತಂಗಾಳಿಯಾಗಿ ಸುಳಿದವರು. ಆ ಸಮುದಾಯದ ಬದುಕಿನೊಂದಿಗೆ ಬೆರೆಯುವ ಮೂಲಕ ಅವರ ವಿಶ್ವಾಸ ಗಳಿಸಿ ಬೇಟೆ ಸಂಸ್ಕೃತಿಯಿಂದ ಬೇಸಾಯ ಸಂಸ್ಕೃತಿಗೆ ಪರಿವರ್ತಿಸಿದುದು; ವಲಸೆ ಸಂಸ್ಕೃತಿಯಿಂದ ಸ್ಥಾವರ ಸಂಸ್ಕೃತಿಯತ್ತ ಅವರ ಮನಸ್ಸನ್ನು ಹೊರಳಿಸಿದುದು; ಒಂದೆಡೆ ನಿಂತು ಪಶುಪಾಲನೆ ಹಾಗೂ ವ್ಯವಸಾಯದ ಕಡೆಗೆ ಅವರನ್ನು ಆಕರ್ಷಿಸಿ ಹೊಸ ಜೀವನ ನಿರ್ವಹಣೆಯ ಮಾರ್ಗದರ್ಶಿಯಾದುದು; ಬೇಟೆಯಾಡಿ ಜೀವಹಿಂಸೆ ಮಾಡುವ ಪದ್ಧತಿಯಿಂದ ಅವರನ್ನು ಬಿಡಿಸಿ ಸಾತ್ವಿಕ ಆಹಾರ ಪರಿಕ್ರಮಕ್ಕೆ ಅವರ ಜೀವನ ಶೈಲಿಯನ್ನು ಬದಲಿಸಿದುದು; ನೆಮ್ಮದಿಯ ಬದುಕಿಗೆ ಆಶ್ರಯವಾಗಿ ಶಿವಯೋಗಪಥದಲ್ಲಿ ಅವರನ್ನು ಕರೆದೊಯ್ದುದು; ಅಕ್ಷರ ಸಂಸ್ಕೃತಿಯ ಮೂಲಕ ಅವರ ಚಿಂತನಕ್ರಮದಲ್ಲಿ ಒಂದು ದೊಡ್ಡ ಬದಲಾವಣೆ ತಂದುದು; ‘ಜ್ಞಾನದ ಬಲದಿಂದ ಅಜ್ಞಾನದ ಕೇಡು’ ಎನ್ನುವಂತೆ ಅವರ ಪರಂಪರಾಗತ ಆಚರಣೆ ಪದ್ಧತಿಗಳು, ನಂಬುಗೆಗಳು, ಬಹುದೇವತೋಪಾಸನಾ ಕ್ರಮಗಳು, ಕ್ಷುದ್ರದೈವತೋಪಾಸನೆಗಳು – ಇವನೆಲ್ಲಾ ಕ್ರಮಕ್ರಮವಾಗಿ ಅವರ ಮನಸ್ಸಿನಿಂದ ದೂರುಮಾಡುತ್ತಾ ತಮ್ಮಲ್ಲೇ ನೆಲೆಗೊಂಡಿರುವ ದೈವವನ್ನು ಅರಿಯುವ ಮಾರ್ಗವನ್ನು ತಿಳಿಸಿದುದು – ಇವು ಮಾದೇಶ್ವರರು ಓರ್ವ ಸುಧಾರಣಾವಾದಿಯಾಗಿ ಕಂಡ ಕನಸುಗಳ ಬೀಜ ಬಿತ್ತಿ ಬೆಳೆಯುವಲ್ಲಿ ಯಶಸ್ವಿಯಾದುದು ಗಮನಾರ್ಹ. ೧೨ನೇ  ಶತಮಾನದ ಬಸವಾದಿಶರಣರ ಸಾಮಾಜಿಕ, ಧಾರ್ಮಿಕ ಕ್ರಾಂತಿ ಇಡೀ ನಾಡಿನ ಜನತೆಯ ಕ್ಷೇಮಚಿಂತನೆಯ ಕಡೆಗೆ ಮುಖಮಾಡಿದರೆ ಇಲ್ಲಿ ನಿರ್ದಿಷ್ಟ ಪ್ರದೇಶವೊಂದರ ಸಮುದಾಯದ ಸರ್ವಾಂಗೀಣ ಬೆಳವಣಿಗೆಯ ಕಡೆಗೆ ಮಾದೇಶ್ವರರ ಸಮಸ್ತ ಶ್ರಮಶಕ್ತಿ ಹೊರಳಿದುದನ್ನು ನಾವು ಕಾಣಬಹುದು. ಸಾಂಸ್ಕೃತಿಕ ಮುಖಾಮುಖಿಯಲ್ಲಿ ಒಂದು ಸಮುದಾಯದ ಕ್ಷೇಮ ಚಿಂತನೆಯೇ ಪ್ರಧಾನವಾದದ್ದನ್ನು ಮಾದೇಶ್ವರರ ಕಾರ್ಯಚಟುವಟಿಕೆಗಳಲ್ಲಿ ನಾವು ಮನಗಾಣಬಹುದು. ತುಕ್ಕುಗಟ್ಟಿದ ಜಡ ವ್ಯವಸ್ಥೆಯೊಂದರ ವಿರುದ್ಧ ಮುಖಾಮುಖಿಯಾದ ಮಾದೇಶ್ವರರು ಅಲ್ಲಿ ಕಾಣಬಯಸಿದ್ದು ಪರಿವರ್ತನೆಯ ಶಿಖರಶ್ರೇಯವನ್ನು. ಹೀಗೆ ಪ್ರಾದೇಶಿಕ ನಾಯಕನೊಬ್ಬ ಜೀವಪರವಾದ ಕಳಕಳಿಯ ಮೂಲಕ ದೈವತ್ವದ ನೆಲೆಗೇರಿದ ಒಂದು ಪವಾಡವನ್ನೂ ನಾವು ಕಾಣುವೆವು.

ವ್ಯಕ್ತಿ – ಸಮಾಜ

ಮಾದೇಶ್ವರರು ವ್ಯಕ್ತಿ – ಸಮಾಜಗಳ ಸಂಬಂಧವನ್ನು ಪರಿಭಾವಿಸಿದರು, ಗೌರವಿಸಿದರು. ದುಷ್ಟಶಿಕ್ಷೆ, ಶಿಷ್ಟರಕ್ಷೆ – ಇವು ಮಾದೇಶ್ವರರು ಸಾಮಾಜಿಕ ನೆಲೆಯಲ್ಲಿ ಅನುಸರಿಸಿದ ಕ್ರಮಗಳು. ಶ್ರವಣದೊರೆ, ಬೇವಿನಕಾಳಿ, ಕೊಂಗರಾಜ – ಇವರ ಘಟನೆಗಳು ದುಷ್ಟ ಶಿಕ್ಷೆಗೆ ಉದಾಹರಣೆಯಾದರೆ ಭಕ್ತೆ ಸಂಕಮ್ಮನ ಕಥೆ ಶಿಷ್ಟ ರಕ್ಷಣೆಗೆ ಉದಾಹರಣೆಗಳು.

ಇತಿಹಾಸವನ್ನು ಬೇಕಾದಂತೆ ಬದಲಿಸುವುದು

ಕಾಶೀಪುರದ ಪುಟ್ಟಮಾದಯ್ಯನವರು ಹೇಳುವ ಮಾದೇಶ್ವರರ ಕಥೆಯಲ್ಲಿ ಮಾದೇಶ್ವರರು ಎಡಗೈ ಜಾತಿಯವನೆಂದು ಹೇಳುವರು. ‘ಮಲೆಯ ಮಾದೇಶ್ವರ’ ಜನಪದ ಮಹಾಕಾವ್ಯದ ಸಂಪಾದಕರಾದ ಪಿ.ಕೆ. ರಾಜಶೇಖರ್‌ರವರು ತಮ್ಮ ಪ್ರಸ್ತಾವನೆಯಲ್ಲಿ ಸಲೂರುಮಠವನ್ನು ಸೋಲಿಗರ ಮಠವೆಂದು ಹೇಳಿದರು. ಇವು ಸತ್ಯಕ್ಕೆ ಬಗೆದ ಅಪಚಾರ. ಇವುಗಳ ಬಗೆಗೆ ಹ.ಜ. ಶಿವಶಂಕರಯ್ಯನವರು ‘ಮಲೆಯ ಮಾದೇಶ್ವರ ಗ್ರಂಥದಲ್ಲಿಯ ಮಿಥ್ಯಾರೋಪಗಳು’ ಎಂಬ ಕಿರುಹೊತ್ತಿಗೆಯಲ್ಲಿ ವಿಸ್ತಾರವಾಗಿ ಚರ್ಚಿಸಿರುವರು (ನೋಡಿ: ಮಾದೇಶ್ವರ ಸಮೀಕ್ಷೆ, ಪೂರ್ವೋಕ್ತ, ಪು. ೧-೩೬) ಮಾದೇಶ್ವರರು ಸಂಕಮ್ಮನಿಂದ ಪಡೆದುಕೊಂಡ ಮಗು ಕಾರಯ್ಯನೊಬ್ಬನೆ ಎಂದು ಎಚ್.ವಿ. ನಂಜುಂಡಯ್ಯ ಮತ್ತು ಅನಂತಕೃಷ್ಣ ಅಯ್ಯರ್ ವಾದಿಸಿರುವರು (The Mysore tribes and Castes (1931) Vol.iv p. 593). ಇದನ್ನು ಎಸ್.ಜಿ. ಮೊರ್ಯಾಬ್ ಎತ್ತಿಹಿಡಿದಿರುವರು (Soligas of Biligirirangana hills (1971) p.5) ಮಾದೇಶ್ವರರನ್ನು ಕುರಿತು ಪದ ಕಟ್ಟಿ ಹಾಡಿರುವವರು ಕಾರಯ್ಯ ಬಿಲ್ಲಯ್ಯರು ಸಂಕಮ್ಮನ ಅವಳಿ ಜವಳಿ ಮಕ್ಕಳೆಂದು ತಪ್ಪಾಗಿ ಹೇಳಿರುವರು. ಅವರು ಸಹೋದರರಂತೆ ವಾಸಿಸುತ್ತಿದ್ದರೇ ಹೊರತು ಸಹೋದರರಾಗಿರಲಿಲ್ಲ. ಮಿಣ್ಯದ ಗುರುಸಿದ್ಧಕವಿಯ ಮಾದೇಶ್ವರ ಸಾಂಗತ್ಯದಲ್ಲಿಬರುವಂತೆ ಬಿಲ್ಲಯ್ಯನು ಸೋಲಿಗನಲ್ಲ, ಕುರುಬ ಒಕ್ಕಲಿಗ (ಲಿಂಗವ ಕಂಡ ಸಂಧಿ, ಪು. ೮) ಕಾರಯ್ಯನು ಸೋಲಿಗ ಪಂಗಡಕ್ಕೆ ಸೇರಿದವನು. ಡಿ. ಕೃಷ್ಣ ಅಯ್ಯಂಗಾರ್‌ರವರು ಪ್ರಬುದ್ಧ ಕರ್ಣಾಟಕದಲ್ಲಿ ಬರೆದ ಲೇಖನವೊಂದರಲ್ಲಿ (ಸಂ. ೨೬ ಸಂ. ೨) ಸೋಲಿಗರ ಬಗ್ಗೆ ಪ್ರಚಲಿತವಿದ್ದ ದಂತಕಥಗಳನ್ನು ಹೇಳುತ್ತ ಕಾರಯ್ಯ ಮಾದೇಶ್ವರರೆಂಬುವರು ಸೋಲಗರ ಮೂಲ ಪುರುಷರಾದ ಅಣ್ಣತಮ್ಮಂದಿರು ಎಂದು ಅಭಿಪ್ರಾಯಪಡುವರು. ಅವರು ಕೇಳಿದ ದಂತಕಥೆಯೊಂದರಲ್ಲಿ ಮಾದೇಶ್ವರರು ಸೋಲಿಗರ ಮೂಲಪುರಷನಾದ ಸೋಲಿಗಯ್ಯನೆಂಬುವನು ಹೆಂಡತಿ ಸಂಕಮ್ಮನ ಮನೆಗೆ ಹೋಗಿ ಆಕೆಯ ಆತಿಥ್ಯವನ್ನು ಸ್ವೀಕರಿಸಿ ಹಿರಿಯ ಪುತ್ರವತಿಯಾಗೆಂದು ಆಶೀರ್ವದಿಸಿದರು.ಅವಳ ಮಕ್ಕಳೇ ಸೋಲಿಗರು ಎಂದು ಹೇಳುವರು. ಸೋಲಿಗರ ಬುಡಕಟ್ಟು ಸು.ಹತ್ತುಸಾವಿರ ವರ್ಷಗಳಷ್ಟು ಪ್ರಾಚೀನತೆಯನ್ನು ಹೊಂದಿದೆ ಎಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಡುವರು. ಹೀಗಿರುವಾಗ ಸು. ೬೦೦ ವರ್ಷಗಳ ಹಿಂದಿದ್ದ ಮಾದೇಶ್ವರರು ಸೋಲಿಗರ ಮೂಲ ಪುರುಷರಾಗಿರುವುದು ಹೇಗೆ ಸಾಧ್ಯ?

ಮಾದೇಶ್ವರರು ನಿರ್ದಿಷ್ಟ ಜನಾಂಗವೊಂದಕ್ಕೆ ಸೇರಿದವರಲ್ಲ, ಅವರ ಭಕ್ತರಲ್ಲಿ ಎಲ್ಲ ಜಾತಿಯ, ವರ್ಗಧ ಜನರೂ ಇರುವರು. ತಮಿಳುನಾಡಿನ ಬಹುತೇಕ ಭಕ್ತರು ವೀರಶೈವರೇನಲ್ಲ. ಸಾಂಸ್ಕೃತಿಕ ನಾಯಕನ ವೈಲಕ್ಷಣ್ಯಗಳನ್ನು ಎಲ್ಲರನ್ನೂ ಸಮಾನರಾಗಿ ಕಾಣುವುದು, ಜಾತಿಮುಕ್ತ, ವರ್ಣಮುಕ್ತ ಸಮಾಜದ ಪ್ರೀತಿ ವಿಶ್ವಾಸಗಳನ್ನು ಗಳಿಸುವುದು ಮುಖ್ಯವಾದುದು. ಮಾದೇಶ್ವರರು ತಮ್ಮ ಅಂತ್ಯೋದಯದ ಅಪೂರ್ವ ಕಾರ್ಯಾಚರಣೆಗಳ ಮೂಲಕ ಜಾತ್ಯತೀತ ಮನೋಭಾವವನ್ನು ಪ್ರಕಟಪಡಿಸಿರುವರು. ಮಾದೇಶ್ವರರು ತಮ್ಮ ಬದುಕಿನುದ್ದಕ್ಕೂ ಮಾನವತಾವಾದಿಯಾಗಿ ಕಾಣಿಸಿಕೊಳ್ಳುವ ಮೂಲಕ ಪ್ರಾದೇಶಿಕ ಸಮುದಾಯವೊಂದರ ಸಾಂಸ್ಕೃತಿಕ ನಾಯಕರಾಗಿ ಸಮುದಾಯದ ಸರ್ವಾಂಗೀಣ ಪ್ರಗತಿಯೇ ಧ್ಯೇಯವಾಕ್ಯವಾಗಿ ಸೇವೆಯೆಸಗುವ ಮೂಲಕ ಮಾನವ ನೆಲೆಯಿಂದ ದೈವತ್ವದ ನೆಲೆಗೇರಿರುವರು. ಈ ಸಾಂಸ್ಕೃತಿಕ ನಾಯಕ ಆರಾಧ್ಯಮೂರ್ತಿಯಾಗಿ ನಡುಮಲೆಯಲ್ಲಿ ಲಿಂಗರೂಪಿಯಾಗಿ ಪೂಜೆಗೊಳ್ಳುತ್ತಿರುವುದು,. ಜನತೆಯ ಹೃದಯಮಂದಿರದಲ್ಲಿ ಆ ಮಹಾತ್ಮನು ನೆಲೆಗೊಂಡಿರವುದು ಒಂದು ವಿಶೇಷ.

 

[1] ಹ.ಜ. ಶಿವಶಂಕರಪ್ಪ, ಮಾದೇಶ್ವರಸಮೀಕ್ಷೆ (೧೯೮೦) ಪು. ೩೧೯, ಶ್ರೀಮಾದೇಶ್ವರಸ್ವಾಮಿಯಇತಿಹಾಸಸಂಶೋಧನಸಂಸ್ಥೆ, ಮಧುವನಹಳ್ಳಿ, ಕೊಳ್ಳೇಗಾಲತಾ. ಬಹದ್ದೂರ್ಹೈದರಲಿಖಾನನತಾಮ್ರಶಾಸನ (ಕಾಲ೧೭೭೬) ಗರಿಷ್ಠಕಾಲಮಿತಿಯಾದರೆ, ಹೊಯ್ಸಳಬಲ್ಲಾಳದೇವರತಾಮ್ರಶಾಸನ (ಕಾಲ೧೩೨೪) ಕನಿಷ್ಠಮಿತಿಯದಾಗುತ್ತದೆ.