ಮಾದೇಶ್ವರರ ಕುರಿತ ಕೆಲವು ಸಂಗತಿಗಳನ್ನು ಒಳಗೊಂಡ ಪ್ರಾಚೀನ ಗ್ರಂಥವೆಂದರೆ ‘ಮಾದೇಶ್ವರ ಸಾಂಗತ್ಯ’. ಈ ಕಿರು ಕಾವ್ಯವನ್ನು ಕ್ರಿ.ಶ. ೧೭೫೦ರಲ್ಲಿದ್ದ (ಕೊಳ್ಳೇಗಾಲದ) ಮಿಣ್ಯ ಗ್ರಾದಮ ಗುರುಸಿದ್ಧ ಕವಿ ಬರೆದುದು. ನಂತರದಲ್ಲಿ ಶಿಷ್ಟಕಾವ್ಯಗಳಲ್ಲಿ, ಶಾಸನಗಳಲ್ಲಿ ಉಲ್ಲೇಖಿತವಾದ ಅಂಶಗಲು ಮಾದೇಶ್ವರನ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತವೆ. ಆಧುನಿಕ ಸಂದರ್ಭದಲ್ಲಿ (೧೯೩೮) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಂಗ್ರಹಿಸಿದ, ‘ಹಳ್ಳಿಯ ಹಾಡುಗಳು’ ಕೃತಿಯಲ್ಲಿ ಮಲೆಯ ಮಾದೇಶ್ವರರನ್ನು ಹಾಡಿ ಹೊಗಳುವ ಕೆಲವು ಗೀತೆಗಳನ್ನು ಹೊರತಂದಿದ್ದಾರೆ. ಇದೇ ಮಾದೇಶ್ವರನ ಕುರಿತು ಜನಪದ ಸಾಹಿತ್ಯ ಸಂಗ್ರಹ ಕಾರ್ಯಕ್ಕೆ ನಾಂದಿಯಾಯಿತು ನಂತರದಲ್ಲಿ ಅನೇಕ ಜನಪದ ಪದ್ಯ ಹಾಗೂ ಗದ್ಯ ಕೃತಿಗಳು ಹೊರಬಂದಿವೆ. ಈ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಚರ್ಚೆಗಳು ನಡೆದಿದ್ದು ದಲಿತ – ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಎಂದು ಹೇಳಬಹುದು.

ಮಾದೇಶ್ವರನ ಕುರಿತು ಬಂದಿರುವ ಸ್ಮರಣ ಸಂಪುಟಗಳು, ಸುಪ್ರಭಾತಗಳು, ಕಾದಂಬರಿಗಳು, ನಾಟಕಗಳು, ವಚನಗಳು, ಲೇಖನಗಳು, ಚಾರಿತ್ರಿಕ ಉಲ್ಲೇಖಗಳು (ಶಿಷ್ಟಕಾವ್ಯ ಮತ್ತು ಶಾಸನಗಳಲ್ಲಿ) ಹಾಗೂ ವಿವಿಧ ಗಾಯಕರಿಂದ ಸಂಗ್ರಹಿಸಿದ ಕಾವ್ಯಗಳು ಮುಂತಾದವುಗಳನ್ನು ಆಕರವಾಗಿಸಿಕೊಂಡು ಅನೇಕ ವಿಚಾರ ಸಂಕಿರಣಗಳು, ವಿಮರ್ಶೆ ಮತ್ತು ಅಧ್ಯಯನ ಕಾರ್ಯಚಟುವಟಿಕೆಗಳು ನಡೆದುಕೊಂಡು ಬಂದಿವೆ, ನಡೆಯುತ್ತಿವೆ. ಹೀಗೆ ಜನಪದ ಕಾವ್ಯಗಳ ಸಂಗ್ರಹ, ಸಂಪಾದನೆ ಮತ್ತು ಅಧ್ಯಯನ ವಿಧಾನಗಳ ಸ್ವರೂಪ ಮತ್ತು ಸಮಸ್ಯೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗುವುದು. ಕೊನೆಯ ಭಾಗದಲ್ಲಿ ಇದುವರೆಗೆ ಮಲೆಯ ಮಾದೇಶ್ವರನನ್ನು ಕುರಿತು ಬಂದಿರುವ ಪಠ್ಯಗಳ ಪಟ್ಟಿಯನ್ನು ಕೊಡಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ಮಟ್ಟಿಗಾದರೂ ಉಪಯುಕ್ತವಾದರೆ ನನ್ನ ಶ್ರಮ ಸಾರ್ಥಕವಾಯಿತೆಂದು ಭಾವಿಸುತ್ತೇನೆ.

ಜನಪದ ಸಾಹಿತ್ಯ ಮೌಖಿಕವಾಗಿದ್ದು. ಅದರ ಉಗಮ ಬೆಳವಣಿಗೆಗಳನ್ನು ಕುರಿತು ಅಧ್ಯಯನ ಮಾಡಲು ನೆರವಾಗುವ ದಾಖಲೆಗಳು ಸಿಕ್ಕುವುದಿಲ್ಲ. ಆದರೆ ಬೇರೆ ಬೇರೆ ಆಧಾರಗಳನ್ನು ಅವಲಂಬಿಸಿ ಜನಪದದ ಹಳಮೆಯನ್ನು ಅರಿತುಕೊಳ್ಳಬಹುದಾಗಿದೆ. ಪ್ರಾಚೀನ ತಮಿಳು ಕಾವ್ಯದ ‘ಶಿಲಪ್ಪದಿಕಾರಂ’ನಲ್ಲಿ ಹಾಡಿಕುಣಿಯುತ್ತಿದ್ದ ಹಾಡುಗಳೇ ಜನಪದವೆಂದು ಪಂಡಿತರು ಊಹಿಸುತ್ತಾರೆ.  ಜನಪದ ಕಾವ್ಯದ ಒಂದು ಮುಖ್ಯ ಛಂದೋರೂಪ ಎಂದರೆ ತ್ರಿಪದಿ. ಇದಕ್ಕೆ ಕಪ್ಪೆ ಅರಭಟ್ಟನ ಬಾದಾಮಿ ಶಾಸನ ತುಂಬ ಪ್ರಸಿದ್ಧವಾದ ಉದಾಹರಣೆಯಾಗಿದೆ. ಹಾಗೆಯೇ ಶ್ರೀವಿಜಯ, ನೇಮಿಚಂದ್ರ, ನಯಸೇನ, ರಾಘವಾಂಕ, ಕನಕದಾಸ, ಕುಮಾರವ್ಯಾಸ ಮುಂತಾದ ಶಿಷ್ಟಕವಿಗಳು ಬರೆದಿರುವ ಕಾವ್ಯಗಳು ಜನಪದ ಪ್ರಭಾವಕ್ಕೆ ಒಳಗಾಗಿರುವುದು ಕಂಡುಬರುತ್ತದೆ. ಆದರೂ ಜನಪದ ಸಾಹಿತ್ಯ ಸಂಪ್ರದಾಯಗಳನ್ನು ಶಿಷ್ಟಕವಿಗಳು ಕೀಳಾಗಿ ನೋಡಿರುವುದು ಆಶ್ಚರ್ಯವೆನಿಸುತ್ತದೆ. ಬಹುಶಃ ಆ ಕಾಲದಲ್ಲಿರಾಜ ಮತ್ತು ಆತನ ಪರಿವಾರದವರು, ಮೇಲ್ಜಾತಿಯವರು ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದರು. ಅವರು ಮಾತ್ರ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿದ್ದರು. ಜನ ಸಮಾನ್ಯರ ಕೆಲಸ ಕಾರ್ಯಗಳಿಗೆ ಯಾವ ಮನ್ನಣೆಯು ಇರಲಿಲ್ಲ. ಹೀಗಾಗಿ ಜನಪದ ಸಾಹಿತ್ಯವು ಜನಸಾಮಾನ್ಯರ ಸಾಹಿತ್ಯವಾಗಿ ಮೌಖಿಕ ಪರಂಪರೆಯಲ್ಲಿ ಮುಂದುವರೆದು ನಿತ್ಯ ಹೊಸತನವನ್ನು ಮೈಗೂಡಿಸಿಕೊಳ್ಳುತ್ತಾ ಬೆಳೆದು ಮುನ್ನಡೆಯುತ್ತಿದೆ.

ಭಾರತದಲ್ಲಿ ವಸಾಹತುಶಾಹಿ ಆಡಳಿತದ ಸಂದರ್ಭದಲ್ಲಿ ಬಂದ ಬ್ರಿಟಿಷ್ ಅಧಿಕಾರಿಗಳಿಗೆ ಭಾರತದಲ್ಲಿ ತಮ್ಮ ಆಡಳಿತದ ಭದ್ರತೆಗಾಗಿ ಭಾರತೀಯರ ಸಾಂಸ್ಕೃತಿಕ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯವಾಗಿತ್ತು. ಲಿಖಿತ ದಾಖಲೆಗಳಿಗೆ ಹೆಚ್ಚು ಮಹತ್ವ ನೀಡಿದ ಈ ಅಧ್ಯಯನಕಾರರು ಹಳೇಕಾಲದ ದಾಖಲೆಗಳನ್ನು (ಶಾಸನ, ಹಸ್ತಪ್ರತಿ ಮುಂತಾದವು) ಹುಡುಕುವ, ಸಂಗ್ರಹಿಸುವ ಮತ್ತು ಸಂಪಾದನೆ ಮಾಡುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿದರು. ಇವರು ಕೂಡ ಹೆಚ್ಚಾಗಿ ಮೌಖಿಕ ಕಥನಗಳಿಗಿಂತ ಲಿಖಿತ ದಾಖಲೆಗಳಿಗೆ ಮಹತ್ವ ಕೊಟ್ಟರು. ಇದು ಮೊದಲಿನಿಂದಲೂ ಶ್ರೇಷ್ಠತೆಗೆ ಪಾತ್ರವಾಗಿದ್ದ ಲಿಖಿತ ಸಾಹಿತ್ಯಕ್ಕೆ ಹೆಚ್ಚು ಉಪಯುಕ್ತವಾಯಿತು. ಹಾಗೆಂದ ಮಾತ್ರಕ್ಕೆ ಜನಪದ ಸಾಹಿತ್ಯ ಸಂಗ್ರಹ, ಸಂಪಾದನಾ ಕಾರ್ಯಚಟುವಟಿಕೆಗಳು ನಡೆದೇ ಇಲ್ಲವೆಂದಲ್ಲ, ಆದರೆ ನಡೆಯಬೇಕಾದ ಪ್ರಮಾಣದಲ್ಲಿ ನಡೆಯಲಿಲ್ಲ. ಕನ್ನಡದಲ್ಲಿ ಜನಪದ ಸಾಹಿತ್ಯ ಸಂಪಾದನೆ ಮತ್ತು ಅಧ್ಯಯನಕ್ಕೆ ಸುಮಾರು ೧೫೦ ವರ್ಷಗಳ ಇತಿಹಾಸವಿದೆ. ಈ ಸಾಹಿತ್ಯ ಸಂಗ್ರಹ/ಸಂಪಾದನೆಗಳಿಗೆ ನಿರ್ದಿಷ್ಟ ವಿಧಾನಗಳು ಬಳಕೆಯಾಗುತ್ತಿವೆ. ಅವು ಮುಖ್ಯವಾಗಿ ಶಿಷ್ಟ ಹಾಗೂ ಸಂಸ್ಕೃತ ಗ್ರಂಥಗಳ ಸಂಪಾದನೆಗಾಗಿ ಹುಟ್ಟಿಕೊಂಡ ಪಾಶ್ಚಾತ್ಯ ಅಧ್ಯಯನ ಮಾದಿರಗಳು. ಅವುಗಳನ್ನು ನಾವು ನಮ್ಮದೇ ಆದ ಸಾಹಿತ್ಯ ಮತ್ತು ಸಾಂಸ್ಕೃತಿಕ ತತ್ವಗಳ ಹಿನ್ನೆಲೆಯಲ್ಲಿ ಪರಿಪೂರ್ಣವಾಗಿ ಗ್ರಹಿಸಲು ಸಾಧ್ಯವಾಗಿಲ್ಲ. ಇವುಗಳನ್ನು ಯಥಾವತ್ತಾಗಿ ಜನಪದ ಸಾಹಿತ್ಯ ಸಂಪಾದನೆಗೆ ಅನ್ವಯಿಸಿ ಹಲವು ಸಮಸಗಳನ್ನು ಸೃಷ್ಟಿಸಿಕೊಂಡಿದ್ದೇವೆ.

ಉದಾಹರಣೆಗೆ ಮಲೆ ಮಾದೇಶ್ವರ ಕಾವ್ಯಗಳ ಸಂಪಾದನೆಯನ್ನು ಕುರಿತು ಹೇಳುವುದಾದರೆ ಒಂದೇ ಕಾವ್ಯವನ್ನು ಹಲವು ಬೇರೆ ಬೇರೆ ಸಮುದಾಯಕ್ಕೆ ಸೇರಿದ ಗಾಯಕರು ಹಾಡುವುದರಿಂದ ಅದನ್ನು ಸಂಪಾದನೆ ಮಾಡುವಾಗ ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಈ ಕುರಿತು ಕೆಲವು ಜನಪದ ವಿದ್ವಾಂಸರೇ ಹೇಳಿರುವಂತೆ “ಹಲವು ಗಾಯಕರಿಂದ ಹಲವು ಪಠ್ಯಗಳನ್ನು ಸಂಗ್ರಹಿಸಿ ಬೇರೆ ಬೇರೆ ಪಠ್ಯದ ಉತ್ತಮಾಂಶಗಳನ್ನು ಹೆಕ್ಕಿ ತೆಗೆದು ಒಂದು ಪಠ್ಯವನ್ನಾಗಿ ಸಂಪಾದಿಸಿ ಉಳಿದ ಭಾಗಗಳನ್ನು ಅನುಬಂಧದಲ್ಲಿ ನೀಡುವುದು ಉತ್ತಮವಂತೆ. ಹಾಗೆಯೇ ಸಂಬಂಧಪಟ್ಟ ಪರಂಪರೆಯ ಅತ್ಯುತ್ತಮ ಗಾಯಕರನ್ನು ಗುರುತಿಸಿ ಒಂದು ಪಠ್ಯವನ್ನು ಸಮಗ್ರವಾಗಿ ಸಂಪಾದಿಸಿದಾಗ ಅಧ್ಯಯನಕ್ಕೆ ಆಗುವ ಅನುಕೂಲ ನಿಜಕ್ಕೂ ಹೆಚ್ಚು ಎನ್ನುತ್ತಾರೆ.’’ ಇಂಥ ಸಂದರ್ಭದಲ್ಲಿ ಸಂಪಾದಕರ ವೈಯಕ್ತಿಕ ವಿಚಾರಗಳು ಸೇರಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಉಂಟಾಗಬಹುದಾದು  ಪರಿಣಾಮಗಳ ಬಗ್ಗೆ ಯಾರು ಯೋಚಿಸುವವರಿಲ್ಲ. ಅಲ್ಲದೆ ಶಿಷ್ಟ ಕಾವ್ಯಗಳೆಂದು ಪರಿಗಣಿಸಲ್ಪಟ್ಟ ಮಹಾಕಾವ್ಯದ ವಸ್ತುವನ್ನು ಬಳಸಿಕೊಂಡು, ಇವತ್ತಿನವರೆಗೆ ರೂಪುಗೊಂಡ ಸಾಹಿತ್ಯ ಕೃತಿಗಳನ್ನು ಸೃಜನಶೀಲ ಕೃತಿಗಳೆಂದು, ಕೃತಿಕಾರರನ್ನು ಸೃಜನಶೀಲ ಬರಹಗಾರರೆಂದು ಪರಿಗಣಿಸುವ ಬುದ್ಧಿವಂತ ವರ್ಗವು ಜನಪದ ಗಾಯಕರನ್ನು ಮತ್ತು ಅವರ ಮೂಲಕ ದಾಖಲೀಕರಣಗೊಂಡ ಕಾವ್ಯವನ್ನು ಸೃಜನಶೀಲ ನೆಲೆಯಲ್ಲಿ ಪರಿಗಣಿಸದೆ ಇರುವುದು ಸಾಹಿತ್ಯ ಲೋಕದ ದುರಂತವೇ ಸರಿ.

ಒಂದು ಜನಪದ ಪಠ್ಯ ಸಾಹಿತ್ಯಿಕವಾಗಿ ಎಷ್ಟೇ ಶ್ರೇಷ್ಠವಾಗಿದ್ದರೂ, ಅದನ್ನು ಜನಪದ ಎನ್ನುವ ಕಾರಣದಿಂದ ಶಿಷ್ಟ ಸಾಹಿತ್ಯದ ಒಳಗಡೆ ಬಿಟ್ಟುಕೊಳ್ಳದೇ ಹೊರಗಿಟ್ಟೇ ನೋಡಲಾಗಿದೆ. ಸಾಹಿತ್ಯ ಪಠ್ಯಕ್ರಮದಲ್ಲಿ ಇವುಗಳನ್ನು ಸೇರಿಸುವುದು ಅನಿವಾರ್ಯವೆನಿಸಿದಾಗ ಗರತಿ ಹಾಡನ್ನೋ ಅಥವಾ ಬೀಸುವ ಪದವನ್ನೋ ಸೇರಿಸಿ ಕೈತೊಳೆದುಕೊಳ್ಳಲಾಗಿದೆ. ಹೀಗೆ ಹಲವಾರು ಕಾರಣಗಳಿಂದಾಗ ಮೌಖಿಕಸಾಹಿತ್ಯವೆನ್ನುವುದು ಮುಖ್ಯವಾಹಿನಿಯಾಗದೆ, ಶಿಷ್ಟಸಾಹಿತ್ಯದ ಅಧೀನ ಪರಂಪರೆಯಾಗಿ ಬೆಳೆದು ಬಂದಿದೆ.

ಅನೇಕ ಸಂದರ್ಭದಲ್ಲಿ ‘ಸಂಸ್ಕೃತಿ’ ಬಗ್ಗೆ ಮಾತನಾಡುವ ನಾವು ಸಂಸ್ಕೃತಿಯೆಂದರೆ, ಈ ನಾಡಿನ ಮೇಲ್ವರ್ಗದವರ, ಮೇಲ್ಜಾತಿಯವರ ಸಂಸ್ಕೃತಿ ಮಾತ್ರ ಎಂಬ ಸಾರ್ವತ್ರಿಕ ಗ್ರಹಿಕೆಯನ್ನು ರೂಡಿಸಿಕೊಂಡಿದ್ದೇವೆ. ದಲಿತ ಬಂಡಾಯ ಸಾಹಿತ್ಯ ಚಳುವಳಿಯು ಈ ಸಾರ್ವತ್ರಿಕ (ಏಕಸಂಸ್ಕೃತಿ) ಅಭಿಪ್ರಾಯವನ್ನು ಪ್ರಶ್ನಿಸುವ ಕಾರ್ಯಕ್ಕೆ ಕೈಹಾಕಿತು. ಪ್ರತಿಯೊಂದು ಸಮುದಾಯದ ಜನತೆಗೂ ತಮ್ಮದೇ ಆದ ಸಂಸ್ಕೃತಿ ಇದೆ ಎನ್ನುವ ವಾಸ್ತವ ನೆಲೆಯಲ್ಲಿ ಅಧ್ಯಯನ ಕಾರ್ಯ ಚಟುವಟಿಕೆಗಳನ್ನು ಮುನ್ನಡೆಸುವ ಅಗತ್ಯವಿದೆ ಎಂಬುದನ್ನು ಕಂಡುಕೊಂಡಿತು. ಇಂತಹ ಸಂದರ್ಭದಲ್ಲಿ ನಾಡಿನ ಹಲವಾರು ವಿದ್ವಾಂಸರು / ಬುದ್ಧಿಜೀವಿಗಳು ತಮ್ಮ ಮತ್ತು ತಮ್ಮಂತೆಯೇ (ಶೋಷಿತ) ಲಕ್ಷಕ್ಕೆ ಒಳಗಾದ ಜನ ಸಮುದಾಯಗಳ ಪೂಜಿಸುವ ದೈವಗಳು ಮತ್ತು ಆ ದೈವಗಳ ಬಗ್ಗೆ ಅವರು ಕಟ್ಟಿಕೊಂಡಿರುವ ಕಥಾನಕಗಳ ಮೂಲಕ ತಮ್ಮ ಸಂಸ್ಕೃತಿಯನ್ನು ನಿರ್ವಚಿಸಿಕೊಳ್ಳುವ ಪ್ರಯತ್ನಗಳು ನಡೆದವು. ಇಂತಹ ಪ್ರಯತ್ನದ ಫಲವಾಗಿ ಹಲವಾರು ತಳಸಮುದಾಯದ ಕಲಾವಿದರು ಶತಮಾನಗಳಿಂದಲೂ ಮೌಖಿಕ ಪರಂಪರೆಯ ಮೂಲಕ ಉಳಿಸಿಕೊಂಡು ಬಂದಿರುವ ಮಂಟೇಸ್ವಾಮಿ, ಮಲೆ ಮಾದೇಶ್ವರ, ಜುಂಜಪ್ಪ, ಸಿರಿ ಮುಂತಾದ ಸಾಂಸ್ಕೃತಿಕ ವೀರರ ಕಥನಗಳನ್ನು ದಾಖಲೀಕರಣ ಮಾಡುವುದು, ಆಮೂಲಕ ತಮ್ಮ ಚರಿತ್ರೆಯನ್ನು ಕಟ್ಟಿಕೊಳ್ಳುವುದರ ಜೊತೆಗೆ ಇದುವರೆಗೂ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನಸಮುದಾಯಗಳಿಗೆ ಒಂದು ಶ್ರೀಮಂತ ಸಂಸ್ಕೃತಿ, ಪರಂಪರೆಯಿವೆಯೆಂದು ನಿರೂಪಿಸುವ ಕಥಾನಕಗಳನ್ನು ಅಧ್ಯಯನ ಮಾಡಿದರು.  ಅಂದರೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಮಾತ್ರ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸತ್ತವೆಂಬ ಅಭಿಪ್ರಾಯವನ್ನು ನಿರ್ಲಕ್ಷಿಸಲಾಯಿತು. ದೇಶಕ್ಕೆ ಒಂದೇ ಸಂಸ್ಕೃತಿ ಎಂಬುದು ಇರಲು ಸಾಧ್ಯವಿಲ್ಲ. ಅದರಲ್ಲೂ ಹಲವಾರು ಭಾಷೆ, ಧರ್ಮ, ಜನಾಂಗಗಳಿಂದ ಕೂಡಿದ ಭಾರತದಂತಹ ದೇಶದಲ್ಲಿ ದಿಗ್ಭ್ರಮೆ ಹುಟ್ಟಿಸುವಷ್ಟು ಸಂಸ್ಕೃತಿಗಳು ಕಾಣಸಿಗುತ್ತವೆ. ಹಾಗೆಯೇ ಆ ಸಮುದಾಯದ ಸಾಂಸ್ಕೃತಿಕ ವೀರರ, ಸರದಾರರ, ಬೈರಾಗಿಗಳ ಮಹಿಮನೆಯನ್ನು ಹೇಳುವ ಕಥಾನಕಗಳು ಇವೆ. ಈ ಕಥನಗಳು ಇವೆ. ಈ ಕಥನಗಳು ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯನ್ನು ನಿರೂಪಿಸುವ ಶಕ್ತಿಯನ್ನು ಹೊಂದಿವೆ. ಮತ್ತು ನಾವು ಇಲ್ಲಿಯವರೆಗೂ ಮಹಾಕಾವ್ಯಗಳೆಂದು ನಂಬಿರುವ ಕಾವ್ಯಗಳ ಗುಣಲಕ್ಷಣಗಳನ್ನು ಹೊಂದಿ ಮೌಖಿಕ ಮಹಾಕಾವ್ಯಗಳೆಂಬ ಖ್ಯಾತಿಯನ್ನು ಪಡೆದುಕೊಂಡಿವೆ. ಈ ಮೌಖಿಕ ಮಹಾಕಾವ್ಯಗಳಲ್ಲಿ ಮಲೆ ಮದೇಶ್ವರ ಕಾವ್ಯವು ಒಂದಾಗಿದೆ.

ಮಹಾಕಾವ್ಯವೆಂದು ಗುರುತಿಸುವ ಮಲೆ ಮಾದೇಶ್ವರ ಕಾವ್ಯವು ಚಾರಿತ್ರಿಕ ಮತ್ತು ಭೌಗೋಳಿಕ ಅಂಶಗಳನ್ನು ಒಳಗೊಂಡು ಧರ್ಮದ ನೆಲೆಗಟ್ಟಿನ ಹಿನ್ನೆಲೆಯಲ್ಲಿ ರೂಪುಗೊಂಡ ಕಾವ್ಯವಾಗಿದೆ. ಸಮಾಜದಲ್ಲಿ ನಡೆಯು ವ ವಿದ್ಯಮಾನಗಳು ನಮ್ಮ ಬೌದ್ಧಿಕ ಚಟುವಟಿಕೆಗಳನ್ನು ಹೇಗೆ ಪ್ರಭಾವಿಸುತ್ತವೆ ಎನ್ನುವುದಕ್ಕೆ ‘ಮಾದೇಶ್ವರಕಾವ್ಯ’ ಕುರಿತ ಚಿಂತನೆಗಳು ಉತ್ತಮ ನಿದರ್ಶನಗಳಾಗಿವೆ. ಈ ಕಾವ್ಯವು ಹೆಚ್ಚು ಚಿಂತನೆಗೆ ಒಳಗೊಂಡದ್ದು ದಲಿತ ಬಂಡಾಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ. ದಲಿತ ಸಂಸ್ಕೃತಿಯ ಅನನ್ಯತೆಯ ಹುಡುಕಾಟದ ಭಾಗವಾಗಿ ಮಲೆ ಮಾದೇಶ್ವರ ಕಾವ್ಯವು  ಬೌದ್ಧಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟಿದೆ. ಜನಪದ ಕಾವ್ಯಗಳಲ್ಲೇ ‘ಮಾದೇಶ್ವರಕಾವ್ಯ’ ಅತಿ ದೊಡ್ಡ ಕಾವ್ಯವೆಂದು ಪರಿಗಣಿಸಲಾಗಿದೆ. ಕನ್ನಡ ಜನಪದರ ಅದರಲ್ಲೂ ತಳ ಸಮುದಾಯಗಳ ಜೀವನ ವಿಧಾನ ಸಂಸ್ಕೃತಿಕ ಆಶಯಗಳು ಇದರಲ್ಲಿ ಮೂಡಿ ಬಂದಿವೆ. ಅಂದರೆ ಸಾಮಾನ್ಯ ಜನರ ಸಾಂಸ್ಕೃತಿಕ ವೀರನಾದ ಮಾದೇಶ್ವರನ ಹಲವು ಪವಾಡ ಸಾಹಸಗಳು ಆತನ ಜಾಣ್ಮೆ, ತಂತ್ರಗಾರಿಕೆ, ದಯೆ, ಕರುಣೆ ಎಲ್ಲವನ್ನು ಈ ಕಾವ್ಯ ಒಳಗೊಂಡಿದೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ  ಕೆಳಸಮುದಾಯಕ್ಕೆ (ಮಾದಿಗ) ಸೇರಿದ ವ್ಯಕ್ತಿಯೊಬ್ಬನು ಮಹಾಕಾವ್ಯದ ನಾಯಕನಾಗಿ ಪರಿಣಮಿಸಿದ್ದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎನಿಸದರೂ ಆರೋಗ್ಯಕರ ಬೆಳವಣಿಗೆ ಎಂದು ಹೇಳಬಹುದು. ಆದರೆ ಡಾ. ಪಿ.ಕೆ. ರಾಜಶೇಖರ ಸಂಪಾದಿಸಿದ (೧೯೭೩) ಮಾದೇಶ್ವರ ಕಾವ್ಯದ ಪ್ರಸ್ತಾವನೆಯಲ್ಲಿ ಮಾದಪ್ಪನು ಮಾದಿಗರ ಮೂಲದವನು ಎಂದು ಉಲ್ಲೇಖಿಸಿದರು. ಇದನ್ನು ಕೆಲವು ಲಿಂಗಾಯತ ಸಂಸ್ಥೆಗಳು, ವಿದ್ವಾಂಸರು ವಿರೋಧಿಸಿ ಮಾದೇಶ್ವರರನ್ನು ಲಿಂಗಾಯತ ಸಮುದಾಯಕ್ಕೆ ಸೇರಿದವನು ಎಂದು ಪ್ರತಿಪಾದಿಸಿದವು. ಕಾವ್ಯದಲ್ಲಿ ದೊರೆಯುವ ಪರಿಭಾಷೆಯ ಹಿನ್ನೆಲೆಯಲ್ಲಿ ಮಾದೇಶ್ವರ ವೀರಶೈವ ಸಮುದಾಯಕ್ಕೆ ಸೇರಿದವನು ಎನ್ನುವುದಕ್ಕೆ ಗುರುಪರಂಪರೆ ಸಮರ್ಥನೆ ನೀಡುತ್ತಾ ಮಾದಪ್ಪನನ್ನು ಮಾದೇಶ್ವರ ಮಾಡಿಕೊಂಡಿದ್ದೇವೆ. ಬಸವಣ್ಣನನ್ನು ಬಸವೇಶ್ವರ ಮಾಡಿಕೊಂಡ ಹಾಗೆ. ಮಾದಪ್ಪ ಮಾದಿಗ, ವೀರಶೈವ ಎಂಬ ಚರ್ಚೆಯ ಜೊತೆಗೆ ಇನ್ನೂ ಕೆಲವು ಸಂಘಟನೆಗಲು ಭಿಕ್ಷೆ ಎನ್ನುವ ಪರಿಭಾಷೆಯ ಹಿನ್ನೆಲೆಯಲ್ಲಿ (ಕೊಳ್ಳೇಗಾಲ ಪ್ರದೇಶದಲ್ಲಿ) ಬೌದ್ಧ ಬಿಕ್ಕು ಮಾದಪ್ಪನಿಗೆ ಜಯವಾಗಲಿ ಎಂಬ ಘೋಷಣೆಯನ್ನು ಇಟ್ಟುಕೊಂಡು ಕನ್ನಡ ಸಮಾಜ ಬೇರೆ ಬೇರೆ ರೀತಿಯ ಸಂಘಟನೆಯನ್ನು ಕಟ್ಟಲು ಪ್ರಯತ್ನಿಸಿರುವ ಉದಾಹರಣೆಗಳಿವೆ.

ಡಾ. ಕೆ. ಕೇಶವನ್ ಪ್ರಸಾದ್‌ರವರು ಸಂಪಾದಿಸಿರುವ ಮಲೆ ಮಾದೇಶ್ವರ ಕಾವ್ಯದ ಮುನ್ನುಡಿಯಲ್ಲಿ ಡಾ. ಚಂದ್ರಶೇಖರ ಕಂಬಾರರು ಮಾದೇಶ್ವರ ಕಾವ್ಯವನ್ನು ಬುಡಕಟ್ಟು ಕಾವ್ಯಕ್ಕೆ ಸೇರಿಸಿ ಆ ಮೂಲಕ ಕನ್ನಡ ಸಂಸ್ಕೃತಿಯನ್ನು ಹುಡುಕುವ ಕಾರ್ಯಕ್ಕೆ ನಾವು ಕೈಹಾಕಿದ್ದೇವೆ. “ಈ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಇತಿಹಾಸವನ್ನು ನಿರೂಪಿಸಬಲ್ಲ ಮುಖ್ಯ ಸಂಗತಿಗಳು. ಈ ಕಥನಗಳನ್ನು ಅಭ್ಯಸಿಸುವುದರಿಂದ ಭಾರತದ ಇದುವೆರಗಿನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಟ್ಟ ಜನ ವರ್ಗಗಳಿಗೆ ಕೂಡ ಒಂದು ಶ್ರೀಮಂತ ಸಂಸ್ಕೃತಿ ಇದೆ ಎಂಬುದನ್ನು, ಆ ಸಂಸ್ಕೃತಿಗೆ ಒಂದು ಪರಂಪರೆ ಇದೆ ಎಂಬುದನ್ನು, ಆ ಪರಂಪರೆಯೇ ಒಂದು ನಾಡಿನ ವಿವೇಕ ಮತ್ತು ಜ್ಞಾನ್ವನ್ನು ಕಾಪಾಡಿಕೊಂಡು ಬಂದಿವೆ ಎಂಬುದನ್ನು ನಾವು ತಿಳಿಯುತ್ತೇವೆ’’ ಎಂದಿದ್ದಾರೆ. ಹೀಗೆ ಈ ಸಂದರ್ಭದಲ್ಲಿ ಮಾದೇಶ್ವರನ ಮತಧರ್ಮಗಳ ಕುರಿತು ಅಗಾಧ ಚರ್ಚೆಗಳು ನಡೆದಿವೆ. ಯಾಕೆ ಮಾದೇಶ್ವರನನ್ನು ಬೇರೆ ಬೇರೆ ಸಮುದಾಯದವರು ತಮ್ಮವನನ್ನಾಗಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿಕೊಂಡಿವೆ ಎಂಬುದು ಮುಖ್ಯವೆನಿಸುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಈಗಾಗಲೇ ಚಂದ್ರಶೇಖರ ಕಂಬಾರ ಹೇಳಿರುವಂತೆ ಶೋಷಿತ ಸಮುದಾಯಗಳ ಮಾದೇಶ್ವರನನ್ನು ಸಮುದಾಯದ ನಾಯಕನನ್ನಾಗಿ ಮಾಡಿಕೊಂಡು  ತಮ್ಮ ಅನನ್ಯತೆಯನ್ನು ಸ್ಥಾಪಿಸಿಕೊಳ್ಳುವುದು ಮತ್ತು ಆ ಸಮುದಾಯದ ಜನರನ್ನು ಸಂಘಟಿಸುವುದರ ಮೂಲಕ ಆ ಸಮುದಾಯಕ್ಕೆ ಆದ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯವನ್ನು ದೊರಕಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ನಾವೇನು ಕಡಿಮೆಯಲ್ಲ ನಮ್ಮಲ್ಲಿಯು ಒಬ್ಬ ವೀರನಿದ್ದಾನೆ. ಹೀಗಾಗಿ ನಾವು ಕೂಡ ಬೇರೆಯವರಂತೆಯೇ ತಲೆಯೆತ್ತಿ ನಿಲ್ಲುವ ನಾವು ನಿಮಗೆ ಸಮ ಎಂದು ಹೇಳಿಕೊಳ್ಳಲು ಆ ಮೂಲಕ ಆತ್ಮವಿಶ್ವಾಸವನ್ನು, ತೃಪ್ತಿಯನ್ನು ಪಡೆಯಲು ಈ ಜನಪದ ಮಹಾಕಾವ್ಯಗಳು ಉಪಯುಕ್ತ ಮಾಧ್ಯಮಗಳಾಗಿವೆ.

ಹಲವು ಜಾತಿ ಜನಾಂಗಗಳಿಂದ ಕೂಡಿದ ಜನಸಮುದಾಯಗಳು ಒಂದೇ ಸಮಾಜದಲ್ಲಿ ಜೀವಿಸುತ್ತಾರೆ. ಇಂಥ ಸಂದರ್ಭದಲ್ಲಿ ತಮ್ಮ ಸಮುದಾಯದ ಶರಣರೊಂದಿಗೆ, ಭೈರಾಗಿಗಳೊಂದಿಗೆ, ವೀರರೊಂದಿಗೆ ಸಮೀಕರಿಸಿಕೊಂಡು ತಮ್ಮ ಸಂಸ್ಕೃತಿಯನ್ನು ನಿರ್ವಚಿಸಿಕೊಳ್ಳುವುದರಿಂದ ಆ ಸಮುದಾಯಗಳಿಗೆ ಸಮಾಜದಲ್ಲಿ ದೊರೆಯಬೇಕಾದ ಅವಕಾಶಗಳು, ಮಾನಮನ್ನಣೆಗಳು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕಾದ ಮಟ್ಟದಲ್ಲಿ ದೊರೆಯುತ್ತಿವೆಯೇ ಎನ್ನುವುದು ಕೂಡ ಮುಖ್ಯ ಸಂಗತಿಯಾಗಿದೆ.  ನನ್ನ ಉದ್ದೇಶ ಈ ರೀತಿ ನಿರ್ವಚಿಸಿಕೊಳ್ಳುವುದು ತಪ್ಪು ಎಂದಲ್ಲ. ಆದರೆ ಪ್ರತಿಯೊಂದು ಸಮುದಾಯವು ತಮ್ಮನ್ನು ತಾವು ಶ್ರೇಷ್ಠವೆಂದು ಹೇಳಿಕೊಳ್ಳುವ ಸಂದರ್ಭದಲ್ಲಿ ತಾವು ಮಾಡಿದ ತಪ್ಪುಗಳನ್ನು ಮರೆಮಾಚಲು ದಾರಿಮಾಡಿಕೊಡುತ್ತವೆ. ಹೀಗಾಗಿ ತಳಸಮುದಾಯಗಳಲ್ಲಿ ಹಲವಾರು ಸಂಘರ್ಷಗಳು ತಲೆದೋರಿ ಮೇಲ್ವರ್ಗದವರ ಒಡೆದಾಳುವ ನೀತಿಗೆ ಪೂರಕವಾಗುತ್ತದೆ. ಅಲ್ಲದೆ ಮೇಲ್ಜಾತಿಯ ಮತ್ತು ಮೇಲ್ವರ್ಗದ ಜನಸಮುದಾಯಗಳು ಈಗಾಗಲೇ ಚಾರಿತ್ರಿಕ ವ್ಯಕ್ತಿಗಳ ಮುಖೇನ ಸಂಸ್ಕೃತಿಯನ್ನು ನಿರ್ವಚಿಸಿಕೊಳ್ಳುವುದರಿಂದ  ಉಂಟಾಗಬಹುದಾದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಭವಿಷ್ಯತ್ತಿನ ಬಗ್ಗೆ ಯೋಚಿಸುತ್ತಿರುವ ಸಂದರ್ಭದಲ್ಲಿ ತಳಸಮುದಾಯಗಳು ಭೂತವನ್ನು ಕಟ್ಟಿಕೊಳ್ಳುವುದರಲ್ಲಿಯೇ ಕಾಲಕಳೆಯುವುದು ಎಷ್ಟು ಸಮಂಜಸ ಎಂದು ಯೋಚಿಸುವ ಅಗತ್ಯವಿದೆ. ಅಲ್ಲದೇ ಮೇಲ್ಜಾತಿ ಮತ್ತು ಮೇಲ್ವರ್ಗ ಜನವಿಸಿಕೊಂಡ ಮಾದರಿ (ವಿಧಾನ)ಯಲ್ಲಿ ಕೆಳಜಾತಿ, ಕೆಳವರ್ಗವೆಂದು ಪರಿಗಣಿಸಲ್ಪಟ್ಟ ಜನಸಮುದಾಯಗಳು ಆ ಮಾದರಿಯಲ್ಲಿಯೇ ತಮ್ಮನ್ನು ನಿರ್ವಚಿಸಿಕೊಳ್ಳುವುದು ದುರಂತವೆನಿಸುತ್ತದೆ. ಆದ್ದರಿಂದ ಮಾದೇಶ್ವರ ಕಾವ್ಯವನ್ನು ಯಾವುದೇ ಒಂದು ಜಾತಿ ಜನಾಂಗಕ್ಕೆ ಸೀಮಿತಗೊಳಿಸದೆ, ಈ ಕಥೆ ಒಳಗೊಂಡಿರುವ ಸಾಂಸ್ಕೃತಿಕ ಸಂಘರ್ಷಗಳು, ಸಾಮಾಜಿಕ ಮುಖವನ್ನು ವಿಶ್ಲೇಷಿಸುತ್ತಾ, ನಮ್ಮ ಇಂದಿನ ಅಗತ್ಯಗಳಿಗೆ ಆ ಕಥೆಯಿಂದ ಕಲಿಯುವ ಪಾಠಗಳನ್ನು ಗುರುತಿಸುವ ಅಗತ್ಯವಿದೆ.

ಮಲೆಯ ಮಾದೇಶ್ವರ ಕಾವ್ಯ ಹಾಡುವವರನ್ನು ಕಂಸಾಳೆಯವರು, ದೇವರ ಗುಡ್ಡರು ಎಂದು ಕರೆಯುತ್ತಾರೆ. ದೇವರ ಗುಡ್ಡರು ಎಂದರೆ, ದೇವರ ಭಕ್ತರು ಎಂದರ್ಥ. ಈ ಕಥನ ಹಾಡುವಾಗ ಬಳಸುವ ವಾದ್ಯವನ್ನು ಕಂಸಾಳೆ ಎನ್ನಲಾಗಿದೆ. ಈ ಮೊದಲೇ ಹೇಳಿರುವಂತೆ ಈ ಕಲಾವಿದರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ವಿವಿಧ ಸಮುದಾಯಗಳವರು (ವೀರಶೈವ ಮತ್ತು ಬ್ರಾಹ್ಮಣರನ್ನು ಹೊರತುಪಡಿಸಿ) ದೀಕ್ಷೆ ಪಡೆಯುವ ಮೂಲಕ ದೇವರ ಗುಡ್ಡರು ಇಲ್ಲವೇ ಕಂಸಾಳೆಯವರು ಎಂದು ಗುರುತಿಸಿಕೊಳ್ಳುತ್ತಾರೆ. ಹೀಗೆ ಮಾದೇಶ್ವರ ಕಾವ್ಯ ಒಬ್ಬನ ಅಥವಾ ಒಂದು ದಿನದ ಸೃಷ್ಟಿಯಲ್ಲ. ಅದು ಸಮಷ್ಟಿಯ ಸೃಷ್ಟಿ. ಈ ಕಾವ್ಯ ಕಾಲ ಕಾಲಕ್ಕೆ ಬದಲಾವಣೆಗೊಳ್ಳುತ್ತಾ ವಿಸ್ತಾರವಾದ ಹರವನ್ನು ಪಡೆದುಕೊಂಡಿದೆ. ಮೂಲತಃ ಮಾದೇಶ್ವರನ ಕಥನ ಒಂದೇ ಆಗಿದ್ದರೂ ಭಿನ್ನತೆಯಿದೆ. ಏಕೆಂದರೆ ವಿಭಿನ್ನ ಸಮುದಾಯಗಳ ಕಲಾವಿದರು ಒಂದೇ ವೀರನ ಪ್ರಧಾನ ವೃತ್ತಿ ಪರಂಪರೆಯಲ್ಲಿ ಅಥವಾ ಆಚರಣಾತ್ಮಕ ಸಂದರ್ಭದಲ್ಲಿ ಕಾಣಿಸಿಕೊಳ್ಳುವುದು ಮತ್ತು ಆಯಾ ಸಮುದಾಯದ ಕಲಾವಿದರು ತಮ್ಮ ತಮ್ಮ ಸಮುದಾಯದ ಹಿತಾಸಕ್ತಿಗೆ ಸಂಬಂಧಿಸಿದಂತೆ ಕಾವ್ಯವನ್ನು ಕಟ್ಟಿಕೊಳ್ಳುತ್ತಾರೆ. ಇದಕ್ಕೆ ಕಲಾವಿದರ ವೈಯಕ್ತಿಕ ಪ್ರತಿಭೆಯ ಜೊತೆಗೆ ಪ್ರಾದೇಶಿಕ,  ಸಾಂಸ್ಕೃತಿಕ ಹಾಗೂ ರಾಜಕೀಯ ಕಾರಣಗಳು ಇರಬಹುದು. ಹೀಗೆ ಹಲವು ಕಾರಣಗಳಿಂದ ಭಿನ್ನತೆಯನ್ನು ಹೊಂದಿರುವ ಮಾದೇಶ್ವರ ಕಥನವನ್ನು ಆಚರಣಾತ್ಮಕ ಹಿನ್ನೆಲೆಯಲ್ಲಿ ಅಂದರೆ ಈ ಕಾವ್ಯವನ್ನು ಯಾರು ಹಾಡುತ್ತಾರೆ, ಯಾರು ಹಾಡಿಸುತ್ತಾರೆ, ಯಾವ ಸಂದರ್ಭದಲ್ಲಿ ಹಾಡಿಸುತ್ತಾರೆ ಎನ್ನನುವ ಕುರಿತು ಅಧ್ಯಯನ ಕಾರ್ಯ ಕೈಗೊಳ್ಳುವ ಅಗತ್ಯವಿದೆ.

ಮಾದೇಶ್ವರ ಕಾವ್ಯವು ಏಳು ಸಾಲು (ಸಾಲು ಎಂದರೆ ಅಧ್ಯಾಯ ಎಂದರ್ಥ)ಗಳಲ್ಲಿ ದೇವರ ಗುಡ್ಡರು ಹಾಡುತ್ತಾರೆ. ಒಂದೊಂದು ಸಾಲುಗಳು ಖಂಡ ಕಾವ್ಯಗಳಷ್ಟು ವಿಶಾಲತೆಯನ್ನು ಹೊಂದಿವೆ. ಹೀಗಾಗಿ ಏಳು ಸಾಲುಗಳನ್ನು ಹಾಡುವ ಕಲಾವಿದರು ಸಿಗುವುದು ವಿರಳ. ಮತ್ತು ಮೇಲೆ ವಿವರಿಸಿದ ಕಾರಣಗಲಿಂದಾಗಿ ವಿವಿಧ ಗಾಯಕರಿಂದ ಸಂಪಾದಕರು ಸಂಪೂರ್ಣ ಕಾವ್ಯವನ್ನು ಇಲ್ಲವೇ ಆಯ್ದ ಭಾಗಗಳ (ಆಯ್ಕೆ ಸಂಗ್ರಹ)ವನ್ನು ಸಂಗ್ರಹಿಸಿ ಸಂಪಾದಿಸಿದ್ದಾರೆ. ಅವುಗಳನ್ನು ಈ ಮುಂದಿನಂತೆ ಪಟ್ಟಿ ಮಾಡಲಾಗಿದೆ.

ಲಿಖಿತ ಪಠ್ಯ (ಮೌಖಿಕ ಪಠ್ಯದ  ಲಿಖಿತ ದಾಖಲೆ)

೧. ಸಂ: ಪಿ.ಕೆ. ರಾಜಶೇಖರ, ಮಲೆಯ ಮಹದೇಶ್ವರ ಕಾವ್ಯ, ಹೊನ್ನಾರು ಪ್ರಕಾಶನ ಮೈಸೂರು ೧೯೭೨ (ವಿವಿಧ ಗಾಯಕರಿಂದ ಸಂಗ್ರಹಿಸಲಾಗಿದೆ)

೨. ಸಂ: ಕೇಶವನ್ ಪ್ರಸಾದ್, ಮಲೆಯ ಮಹದೇಶ್ವರ  ಕಾವ್ಯ, ಪ್ರಸಾರಾಂಗ ಕನ್ಡ ವಿಶ್ವವಿದ್ಯಾಲಯ, ಹಂಪಿ; ವಿದ್ಯಾರಣ್ಯ – ೧೯೯೭ (ಶ್ರೀ ಹೆಬ್ಬಣಿ ಮಾದಯ್ಯ ಹಾಗೂ ಸಂಗಡಿಗರು)

೩.  ಸಂ: ಬಿ.ಎಸ್. ಸ್ವಾಮಿ, ಮಲೆಯ ಮಹದೇಶ್ವರ ಕಾವ್ಯ, ದಾಮಿನಿ ಸಾಹಿತ್ಯ ಬೆಂಗಳೂರು – ೨೦೦೧ (ವಿವಿಧ ಗಾಯಕರಿಂದ ಸಂಗ್ರಹಿಸಲಾಗಿದೆ)

ಆಯ್ಕೆ – ಸಂಗ್ರಹ

೧. ಕ.ರಾ.ಕೃ. ಮಲೆಯ ಮಾದೇಶ್ವರ, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು – ೧೯೪೨.

೨. ಡಾ. ಚೆಕ್ಕೆರೆ ಶಿವಶಂಕರ್, ಕೋರಣ್ಯ ನೀಡವ್ವ ಕೋಡುಗಲ್ಲಯ್ಯನಿಗೆ, ಕಲ್ಯಾಣಿ ಪ್ರಕಾಶನ, ಬೆಂಗಳೂರು – ೧೯೮೮

೩. ಮೊಗಳ್ಳಿ ಗಣೇಶ, ಮಲೆ ಮಾದೇಶ್ವರ ಕಾವ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು – ೧೯೯೬

ಸಾಹಿತ್ಯದಲ್ಲಿ ಪ್ರಾಸಂಗಿಕವಾಗಿ ಉಲ್ಲೇಖಿತ ಚಾರಿತ್ರಿಕ ದಾಖಲೆಗಳು

೧. ಮಿಣ್ಯದ ಗುರುಸಿದ್ಧ ಕವಿಯ ಶ್ರೀ ಮಾದೇಶ್ವರ ಸಾಂಗತ್ಯ, ಸಂ: ಬಿ. ಶಿವಮೂರ್ತಿಶಾಸ್ತ್ರಿ, ಶರಣ ಸಾಹಿತ್ಯ ಮಾಲೆ, ಬೆಂಗಳೂರು – ೧೯೬೧

೨. ದೇವಚಂದ್ರನ ರಾಜಾವಳಿ ಕಥೆ, ಸಂ: ಸಣ್ಣಗುಡ್ಡಯ್ಯ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ-೧೯೮೮

೩. ಅನಾಮಧೇಯ ಕವಿಯ ನಿರಂಜನ ವಂಶ ರತ್ನಾಕರ, ಸಂ: ಫ.ಗು. ಹಳಕಟ್ಟಿ, ವಿಜಯ ಮಹಾಂತೇಶ ಗ್ರಂಥಾಲಯ, ಬೆಳಗಾವಿ – ೧೯೩೨

೪. ಚೀಲಾಳಸ್ವಾಮಿಯ ಷಟ್ಸ್ಥಲ ಶಿವಾಯಣ,  ಸಂ: ಎಂ.ಎಂ. ಕಲಬುರ್ಗಿ, ಸಿ.ಪಿ.ಕೆ. ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯಮಠ, ಗದಗ-೧೯೯೦

ತಾಮ್ರ ಮತ್ತು ಶಿಲಾಶಾಸನಗಳು

೧. ಹರದನಹಳ್ಳಿಯ ತಾಮ್ರ ಶಾಸನ ಕ್ರಿ.ಶ. ೧೩೨೪ ಕ್ರಿ.ಶ.

೨. ಹೈದರಾಲಿ ತಾಮ್ರಶಾಸನ ೧೭೭೬ ಕ್ರಿ.ಶ.

೩. ಶಿಲಾಶಾಸನ ಮಾದೇಶ್ವರ (ದೇವಾಲಯದ ಬಾಗಿಲಿನ ಮೇಲೆ ಇದೆ.) ೧೭ನೇ ಶತಮಾನ

ವಿಮರ್ಶಾತ್ಮಕ ಅಧ್ಯಯನ ಗ್ರಂಥಗಳು ಮತ್ತು ಲೇಖನಗಳು

೧. ಹ.ಜಾ. ಶಿವಶಂಕರಪ್ಪ, ಮಲೆಯ ಮಹದೇಶ್ವರ ಮತ್ತು ಮಿಥ್ಯಾರೋಪಗಳು, ಮಹದೇಶ್ವರ ಮಿಷನ್, ಮಧುವನಹಳ್ಳಿ-೧೯೭೪

೨. ಜಿ.ಶಂ. ಪರಮಶಿವಯ್ಯ, ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಪ್ರಾರಾಂಗ, ಮೈಸೂರು ವಿಶ್ವವಿದ್ಯಾನಿಲಯ-೧೯೭೯

೩. ಸಂ: ಹ.ಜ.ಶಿವಶಂಕರಪ್ಪ, ಮಾದೇಶ್ವರ ಸಮೀಕ್ಷೆ, ಮಾದೇಶ್ವರ ಸ್ವಾಮಿ, ಇತಿಹಾಸ ಸಂಶೋಧನಾ ಸಂಸ್ಥೆ, ಮಧುವನಹಲ್ಳಿ-೧೯೮೦

೪. ರಾಮಯ್ಯ ಕೋಟಗಾನಹಳ್ಳಿ, ಸಿಂದ್ ಮಾದಿಗರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು – ೧೯೯೩

೫. ಸ್ವಾಮಿ ಬಿ.ಎಸ್. ಮಲೆಯ ಮಾದೇಶ್ವರ, ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು – ೧೯೯೫

೬. ಪ್ರೇಮಕುಮಾರಿ ಎಸ್. ಜನಪದ ಸಾಹಿತ್ಯದಲ್ಲಿ ಮಾದೇಶ್ವರ, ಮಾದೇಶ್ವರಸ್ವಾಮಿ, ಇತಿಹಾಸ ಸಂಶೋಧನಾ ಸಂಸ್ಥೆ, ಮಧುವನಹಲ್ಳಿ – ೧೯೯೭

೭. ಸಂ. ತೀ.ನಂ. ಶಂಕರನಾರಾಯಣ, ಕರ್ನಾಠಕ ಜನಪದ ಮಹಾಕಾವ್ಯಗಳು, ಜನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು – ೧೯೯೮

೮. ಸಂ: ಅರವಿಂದ ಮಾಲಗತ್ತಿ, ಮಲೆಯ ಮಹದೇಶ್ವರ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ-೧೯೯೯

೯. ಮುದೇನೂರು ನಿಂಗಪ್ಪ,  ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ನಾಯಕರು, ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು ೨೦೦೫

೧೦. ಎಸ್.ಎಸ್. ಹಿರೇಮಠ, ಮಲೆಯ ಮಹಾದೇಶ್ವರ (ಲೇಖನ) ಜನಪದ ಸಮಾಜ ಸಂಸ್ಕೃತಿ, ಸೂರ್ಯ ಪ್ರಕಾಶನ, ಮಲ್ಲಾಡಿಹಳ್ಳಿ, ಚಿತ್ರದುರ್ಗ ಜಿಲ್ಲೆ-೨೦೦೫

೧೧. ಹಿ.ಚಿ. ಬೋರಲಿಂಗಯ್ಯ, ಮಲೆಯ ಮಹದೇಶ್ವರ ಕಾವ್ಯದಲ್ಲಿನ ಬುಡಕಟ್ಟು ಸಂಸ್ಕೃತಿ ವಿಚಾರಗಳು (ಲೇಖನ) ಕಾಡು ಕಾಂಕ್ರೀಟ್ ಜನಪದ, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-೧೯೯೫.

೧೨. ಹಿ.ಚಿ. ಬೋರಲಿಂಗಯ್ಯ, ಮಲೆಯ ಮಹದೇಶ್ವರ ಕಾವ್ಯದ ಸಂಕಮ್ಮನ ಸಾಲು (ಲೇಖನ) ಕಾಡು ಕಾಂಕ್ರೀಟ್ ಮತ್ತು ಜನಪದ, ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ -೧೯೯೫

೧೩. ಡಾ. ಹಿ.ಶಿ.  ಝಮಚಂದ್ರೇಗೌಡ, ಮಲೆ ಮಾದೇಶ್ವರ ಸಾಂಸ್ಕೃತಿ: ಪುಂಡ, (ಲೇಖನ) ಪ್ರಬುದ್ಧ ಕರ್ಣಾಟಕ (ಸಂ. ೭೮-೭೯) ಸಂಚಿಕೆ ೩೦೭-೩೧೪, ಪುಟ ೭೧

೧೪. ಬಿ.ಎಸ್. ಸ್ವಾಮಿ, ಮಲೆ ಮಾದೇಶ್ವರ ಒಂದು ಅಧ್ಯಯನ, ನವೀನ ಪ್ರಕಾಶನ, ಬೆಂಗಳೂರು – ೧೯೯೩

೧೫. ಸತೀಶ ಸಿ, ಮಲೆ ಮಾದೇಶ್ವರ : ಒಂದು ಅಧ್ಯಯನ, ಪಿಎಚ್.ಡಿ. ಪ್ರಬಂಧ ಕನ್ನಡ ವಿ.ವಿ. ಹಂಪಿ, ೧೯೯೭ (ಅಪ್ರಕಟಿತ)

೧೬. ಎಂ. ತಿಮ್ಮರಾಯಪ್ಪ, ಮಲೆ ಮಾದೇಶ್ವರ: ಒಂದು ಅಧ್ಯಯನ, ಪಿಎಚ್.ಡಿ. ಪ್ರಬಂಧ, ಬೆಂಗಳೂರು ವಿ.ವಿ. (ಅಪ್ರಕಟಿತ)

ಮಲೆಯ ಮಾದೇಶ್ವರನ ಕುರಿತು ನಾಟಕ, ಕಾದಂಬರಿಗಳು

೧. ಎಚ್.ಎಸ್. ಶಿವಪ್ರಕಾಶ, ಮಾದಾರಿ ಮಾದಯ್ಯ, ಸಮುದಾಯ ಪ್ರಕಾಶನ, ಬೆಂಗಳೂರು ೧೯೯೨

೨. ಮಲೆಯೂರು ಗುರುಸ್ವಾಮಿ, ಮಹಾಯಾತ್ರಿಕ, ಸುತ್ತೂರು ಪ್ರಕಾಶನ?

೩. ಸ್ವಾಮಿ ಬಿ.ಎಸ್. ಮಹಾಜ್ಯೋತಿ ಮಾದೇಶ್ವರ, ಬಿ.ಎಸ್. ಬೆಂಗಳೂರು – ೧೯೮೭

ಮಲೆಯ ಮಹಾದೇಶ್ವರನ ಕುರಿತು ರೂಪುಗೊಂಡ ಸಾಹಿತ್ಯ

೧. ಸಂ: ಶಿವರಾಜಪ್ಪ, ದಿವ್ಯದರ್ಶನ, ಅಗ್ನಿಕೊಂಡೋತ್ಸವ ಸಮಿತಿ ಮಾದೇಶ್ವರ ಬೆಟ್ಟ – ೧೯೯೩

೨. ಜಿ.ಮಹಾದೇವ ಪ್ರಸಾದ್. ಎಪ್ಪತ್ತೇಳು ಮಲೆವಾಸಿ ಮಾದಪ್ಪ, ಮಾನಸ ಪ್ರಕಾಶನ, ಬೆಂಗಳೂರು – ೧೯೯೫

೩. ಕೂಗಿ ಗಿರಿಯಪ್ಪ, ಏಳು ಮಲೆಯ ಮಹಾದೇವ, ಮಧು ಪ್ರಕಾಶನ, ಕನಕಪುರ – ೧೯೯೬

೪. ಸಿದ್ದಯ್ಯ ಪುರಾಣಿಕ, ಶರಣ ಚರಿತಾಮೃತ, ವಯಸ್ಕರ ಶಿಕ್,ಣ ಸಂಸ್ಥೆ, ಮೈಸೂರು-೧೯೬೪

೫. ಸಿದ್ಧಪ್ಪಶಾಸ್ತ್ರಿ ಕುಂತೂರು, ಮಲೆ ಮಾದೇಶ್ವರ ನಿಜಪುರಾಣ, ಪ್ರ.ಕೆ.ಎಸ್. ಮಹಾಲಿಂಗಸ್ವಾಮಿ ಅಂಡ್ ಬ್ರದರ್ಸ್‌, ಕುಂತೂರು-೧೯೭೦

೬. ಬಿ.ಪುಟ್ಟಮಲ್ಲಪ್ಪ, ಎಪ್ಪತ್ತೇಳು ಮಲೆಯಲ್ಲಿ ನಾಟ್ಯವಾಡುತ್ತಿರುವ ಮಾಯಕಾರ ಮಲೆಯ ಮಾದೇಶ್ವರನ ಚರಿತ್ರೆ, ಸರಸ್ವತಿ ಬುಕ್ ಡಿಪೋ, ಮೈಸೂರು-೧೯೫೪

೭. ಬಿ.ಶಿವಮೂರ್ತಿಶಾಸ್ತ್ರೀ, ಶ್ರೀ ಮಾದೇಶ್ವರ ಚರಿತ್ರೆ, ಧರ್ಮದರ್ಶಿಗಳ ಸಮಿತಿ, ಮಾದೇಶ್ವರ ದೇವಾಲಯ, ಕೊಳ್ಳೇಗಾಲ ತಾಲ್ಲೂಕು – ೧೯೫೪

೮. ಮಂಜುಳಾದೇವಿ, ಎಂ.ಎಸ್. ಮಾಯಕಾರ ಮಲೆಯ ಮಾದೇಶ್ವರ ಚರಿತ್ರೆ ಪ್ರ..ಎಂ.ಎಸ್. ಮಹಾದೇವಪ್ಪ, ಮೈಸೂರು -೧೯೬೨

೯. ಬಿ.ಶಿವಮೂರ್ತಿಶಾಸ್ತ್ರೀ, ಶ್ರೀ ಮಾದೇಶ್ವರ ಚರಿತ್ರೆ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು – ೧೯೭೨