ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಾಂಸ್ಕೃತಿಕ ಮುಖಾಮುಖಿ ಮಾಲಿಕೆಯಲ್ಲಿ ಇದು ಹದಿನಾಲ್ಕನೇ ಕೃತಿ. ವಿಭಾಗದ ನಾಲ್ಕು ಮಂದಿ ಸದಸ್ಯರು ನಾಲ್ಕು-ನಾಲ್ಕು ಪಠ್ಯಗಳನ್ನು ಆಯ್ಕೆ ಮಾಡಿ ನಲವತ್ತು-ಐವತ್ತು ವಿದ್ವಾಂಸರನ್ನು ಒಳಗೊಂಡು ಒಟ್ಟು ಹದಿನಾರು ಸಂವಾದ ಕಾರ್ಯಕ್ರಮಗಳನ್ನು ಕಳೆದ ಹನ್ನೆರಡು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಇನ್ನೆರಡು ಕೃತಿಗಳು ಈಗ ಅಚ್ಚಿನ ಮನೆಯಲ್ಲಿ ಇವೆ. ಇದು ವಿಭಾಗಕ್ಕೆ ಅಭೂತಪೂರ್ವ ಅನುಭವವಾಗಿದೆ.  ಬಿ.ಎಂ. ಶ್ರೀಯವರ ‘ಇಂಗ್ಲಿಷ್ ಗೀತ’ಗಳಿಂದ ಈಗ ಆಧುನಿಕ ಸಾಹಿತ್ಯದ ಪಠ್ಯಗಳ ಸರದಿ ಪ್ರಾರಂಭವಾಗಿದೆ. ಕರ್ನಾಟಕದ ವಿದ್ವಾಂಸರು ಈ ಪುಸ್ತಕಗಳನ್ನು ಓದಿ ಮೆಚ್ಚಿಗೆ ವ್ಯಕ್ತಪಡಿಸಿ ಯೋಜನೆ ಹೀಗೆ ಮುಂದುವರಿಯಲೆಂದು ಆಶಿಸಿದ್ದಾರೆ. ಮೊದಲ ಕೃತಿಯಾದ ಕವಿರಾಜ ಮಾರ್ಗ ಈ ವರ್ಷ ಮರುಮುದ್ರಣವಾಗುತ್ತಿದೆ. ಮೊದಲ ಕಂತಿನ ಕೃತಿಗಳೆಲ್ಲ ಮಾರಾಟವಾಗಿ ಮರುಮುದ್ರಣಕ್ಕೆ ಅಣಿಯಾಗಿವೆ.

ಮಲೆಯ ಮಾದಪ್ಪನ ಪಠ್ಯದ ಸಂವಾದ ಕಾರ್ಯಕ್ರಮ ಸಿ.ಐ.ಐ.ಎಲ್. ಸಂಸ್ಥೆಯ ಸಹಯೋಗದೊಡನೆ ಮೈಸೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಹಿರಿಯ ಜಾನಪದ ವಿದ್ವಾಂಸರು ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಆದ ಪ್ರೊ. ಎಚ್. ಜೆ. ಲಕ್ಕಪ್ಪಗೌಡರು. ಅಧ್ಯಕ್ಷತೆಯನ್ನು ವಿದ್ವಾಂಸರಾದ ಪ್ರೊ. ಕಾಳೇಗೌಡ ನಾಗವಾರ ಅವರು ವಹಿಸಿದ್ದರು. ಸಮಾರೋಪ ಸಮಾರಂಭವನ್ನು ನಡೆಸಿಕೊಟ್ಟವರು ಹಿರಿಯ ಸಾಹಿತಿಗಳಾದ ಪ್ರೊ. ಕಿ.ರಂ. ನಾಗರಾಜು ಅವರು. ಎರಡು ದಿನದ ಈ ಮಂಥನ ಕಾರ್ಯಕ್ರಮದ ಫಲವನ್ನು ಚರ್ಚೆಗಳ ಭಾಗದಲ್ಲಿ ಗಮನಿಸಬಹುದು.

ಚರ್ಚೆಯಲ್ಲಿ ಮುನ್ನೆಲೆಗೆ ಬಂದ ಮುಖ್ಯ ವಿಚಾರಗಳು ಪುರಾಣ ಮತ್ತು ಚರಿತ್ರೆಗಳು ಹೇಗೆ ಮತ್ತು ಏಕೆ ನಿರ್ಮಾಣಗೊಳ್ಳುತ್ತವೆ ಎಂಬುದು. ಹಳೆ ತಲೆಮಾರಿನ ವಿದ್ವಾಂಸರು ಮತ್ತು ಹೊಸ ತಲೆಮಾರಿನ ತರುಣ ವಿದ್ವಾಂಸರೊಡನೆ ಈ ವಿಷಯದ ಬಗ್ಗೆ ವಾಗ್ಯುದ್ಧಗಳೇ ನಡೆದರೂ ಒಂದು ಆರೋಗ್ಯ ಪೂರ್ಣ ಚರ್ಚೆಗೆ ಸಾಧ್ಯವಾಗಿದೆ. ಅನಾದಿಕಾಲದ ಈ ತಾತ್ವಿಕ ಸಾಹಿತ್ಯಕ ಪ್ರಶ್ನೆಗೆ ಈ ಸಂವಾದದಿಂದಲೇ ಪರಿಹಾರ ಸಾಧ್ಯವಾಗಿದೆ ಎನ್ನುವ ಭ್ರಮೆ ನಮಗೆ ಇಲ್ಲ. ಆದರೆ ಈ ತರದ ಒಂದು ಪ್ರವೇಶ ಮಾತ್ರ ಸಾಧ್ಯವಾಗಿದೆ.

ಎರಡನೆಯದು ಜನಪದ ಪಠ್ಯಗಳ ನಿರ್ಮಾಣದ ಹಿಂದಿನ ತರ್ಕಗಳು ಮತ್ತು ಅದರ ಸ್ವರೂಪ ಕುರಿತ ಚರ್ಚೆ, ವೈಶಿಷ್ಟ್ಯವೆಂದರೆ ಪ್ರಾಚೀನ ಪಠ್ಯಗಳಲ್ಲಿ ಕವಿ ಕಾಲ ಮತ್ತು ಆ ಪಠ್ಯ ನಿರ್ಮಾಣಕ್ಕೆ ಕಾರಣನಾದ ವ್ಯಕ್ತಿಯ ಚರಿತ್ರೆಯನ್ನು ಹುಡುಕುವ ಸವಕಲು ಚರ್ಚೆಗಳನ್ನು ಸಂಪೂರ್ಣ ಬಿಟ್ಟುಕೊಟ್ಟು ಈ ಕಾಲಕ್ಕೆ ಪಠ್ಯ ಮುಖ್ಯವಾಗುವುದಾದರೆ, ಯಾವ ಚರಿತ್ರೆ ಇರಬಹುದು ಎಂಬ ಚರ್ಚೆಯೇ ಮುನ್ನೆಲೆಗೆ ಬಂದಿದೆ.

ಮೂರನೆಯದು ನಮ್ಮ ಅಕಾಡಮಿಕ್ ಆದ ಬದ್ಧತೆಗಳು, ಸಮುದಾಯದ ನಿರ್ಮಾಣ ನೆಲೆಗಳ ನಡುವೆ ಇರುವ ಬಿಕ್ಕಟ್ಟುಗಳು. ಜನಪದ ಕವಿ ಮತ್ತು ಆಧುನಿಕ ವಿದ್ವಾಂಸರ ನಡುವಿನ ಅಂತರಗಳು, ಸಾಹಿತ್ಯ ಪಠ್ಯಗಳು ಸಾಂಸ್ಥಿಕಗೊಂಡ ರಾಜಕೀಯವಾದ ಹಿನ್ನೆಲೆ, ಜನಪದ ಪಠ್ಯಗಳ ಸಮುದಾಯದ ಸಹಭಾಗಿತ್ವ ಇವೆರಡರ ಅಂತರವನ್ನು ಅರ್ಥ ಮಾಡಿಕೊಳ್ಳುವ ಬಗೆ. ಈ ಪ್ರಶ್ನೆಗೆ ಇನ್ನಷ್ಟು ಕಾಲಾವಕಾಶ ಬೇಕಿತ್ತಾದರೂ ಅದನ್ನೂ ಸಂವಾದ ಕಾರ್ಯಕ್ರಮ ಅದಕ್ಕೆ ಒಂದು ಪ್ರವೇಶ ಪಡೆದಿದೆ.

ಈ ಮೂರು ಮುಖ್ಯ ತಾತ್ವಿತ ಸಂಗತಿಗಳು ಮುನ್ನೆಲೆಗೆ ಬಂದರೂ ಒಟ್ಟು ಸಂವಾದ ಕಾಯ್ಯಕ್ರಮದಲ್ಲಿ ಅನೇಕ ಇತರ ಸಂಗತಿಗಳು ಚರ್ಚೆಯಾಗಿವೆ. ಯಾವುದಕ್ಕೂ ಚರಮ ಗೀತೆಯನ್ನು ಹಾಡಿಲ್ಲ. ಈ ಎಲ್ಲ ವಿಚಾರಗಳು ಮುಂದಿನ ಸಾಂಸ್ಕೃತಿಕ ಮುಖಾಮುಖಿಯ ಅನಿವಾರ್ಯತೆಯನ್ನು ಬಯಸಿವೆ ಎಂಬುದು ನಮ್ಮ ನಂಬಿಕೆ.

ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಮಾಜಿ ಕುಲಪತಿಗಳು, ಜನಪದ ವಿದ್ವಾಂಸರು ಆದ ಪ್ರೊ. ವಿವೇಕ ರೈ ಅವರ ಒತ್ತಾಸೆ ಬಹಳ ಮುಖ್ಯವಾಗಿತ್ತು. ಅವರ ಅನೇಕ ಕೆಲಸಗಳ ಒತ್ತಡದಲ್ಲೂ ವಿಭಾಗದ ಈ ಪ್ರಯತ್ನಕ್ಕೆ ಯಾವ ತೊಂದರೆಗಳು ಆಗದಂತೆ ಪ್ರೊ. ಬೋರಲಿಂಗಯ್ಯನವರು ವಿಭಾಗದ ಈ ಮಾಲಿಕೆಯನ್ನು ಮೊದಲಿನಿಂದಲೂ ಪ್ರೋತ್ಸಾಹಿಸುತ್ತಾ, ವಿಶ್ವವಿದ್ಯಾಲಯದ ಕೆಲಸಗಳ ಒತ್ತಡಗಳ ನಡೆಉವೆ ಮನೆಯ ಮಾದಪ್ಪನ ಕಾವ್ಯದ ತಮ್ಮ ಇತ್ತೀಚಿನ ಗ್ರಹಿಕೆಯನ್ನು ಲೇಖನ ಮಾಡಿಕೊಟ್ಟಿದ್ದಾರೆ. ವಿಭಾಗದ ಹಿರಿಯರಾದ ಪ್ರೊ. ರಹಮತ್‌ತರೀಕೆರೆಯವರು ಎಲ್ಲ ಕೆಲಸಗಳ ಹಿಂದೆ ಒತ್ತಾಸೆಯಾಗಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸಾಂಸ್ಕೃತಿಕ ಮುಖಾಮುಖಿ ಮಾಲಿಕೆಯ ಪುಸ್ತಕಗಳೆಂದರೆ ಸದಾ ಎಚ್ಚರವನ್ನು ಕಾಳಜಿಯನ್ನು ವಹಿಸುವ ವಿದ್ವಾಂಸರನ್ನು, ಈ ಪ್ರಕಟಣೆಗೆ ವಿಶೇಷ ಕಾಳಜಿ ವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು, ಸಹಾಯಕ ನಿರ್ದೇಶಕರಾದ ಸುಜ್ಞಾನಮೂರ್ತಿ, ಕಲಾವಿದ ಮಕಾಳಿ ಇವರನ್ನೆಲ್ಲಾ ಪ್ರೀತಿಯಿಂದ ನೆನೆಯುತ್ತೇನೆ.

ಇದು ಪುಸ್ತಕ ರೂಪವಾಗಿ ಬರುವಾಗ ನೆರವಾದವರು ವಿದ್ಯಾರ್ಥಿ ಮಿತ್ರ ಡಾ. ಸತೀಶ ಪಾಟೀಲ. ಅವರು ಈ ಕಾರ್ಯಕ್ರಮ ನಡೆಯುವಾಗ ಮಾತುಗಳನ್ನು ಧ್ವನಿ ಮುದ್ರಿಸುವ ಜವಾಬ್ದಾರಿ ವಹಿಸಿದ್ದರು. ಅವರು ಚರ್ಚೆಯ ಎಲ್ಲ ಭಾಗಗಳು ತಪ್ಪಿಹೋಗದ ಹಾಗೆ ನೋಡಿಕೊಂಡರು. ಅವರಂತೆ ಇನ್ನೊಬ್ಬ ವಿದ್ಯಾರ್ಥಿ ಮಿತ್ರ ಜಗದೀಶ ಕೆರೆನಳ್ಳಿ ಇದನ್ನು  ಅಕ್ಷರ ರೂಪಕ್ಕೆ ತರುವಲ್ಲಿ ಬಹಳ ಶ್ರಮಪಟ್ಟಿದ್ದಾರೆ. ಗೆಳೆಯ ಗಾದೆಪ್ಪ ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಈ ಪಡೆಗೆ ಅಘೋಷಿತ ನಾಯಕರಾಗಿದ್ದ ಕೋಳೂರು ಶಿವಪ್ಪ ಇವರೆಲ್ಲರನ್ನು ಪ್ರೀತಿಯಿಂದ ನೆನೆಯಬೇಕಾದ್ದು ನನ್ನ ಕರ್ತವ್ಯದ ಭಾಗವಾಗಿದೆ.

ಡಾ. ವೆಂಕಟೇಶ ಇಂದ್ವಾಡಿ