ಓದಿಗೆ ಮೊದಲು : ಮಾದಪ್ಪನ ಕ್ಷೇತ್ರವಾದ ಕೊಳ್ಳೇಗಾಲ ತಾಲ್ಲೂಕು ನನ್ನ ಹುಟ್ಟೂರು. ‘ಮಾದಪ್ಪನ ಕಾವ್ಯ’ ನನಗೆ ಪರಿಚಯವಾದುದು ೧೯೮೫ರಲ್ಲಿ. ಅಂದರೆ ಜಾನಪದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಅನಂತರ. ಆದರೆ ‘ಮಾದಪ್ಪನ ಪದ’ವನ್ನು ಕೇಳಲು ಅವಕಾಶ ದೊರೆತದ್ದು ಆರನೇ ವಯಸ್ಸಿನಲ್ಲಿ. ೧೯೬೦ರ ದಶಕದಲ್ಲಿ ತರಾವರಿ ವೇಷ ಧರಿಸಿದ ಬೇರೆ ಬೇರೆ ದೇವರ ಗುಡ್ಡರುಗಳು, ದಾಸಯ್ಯಗಳು, ಗೊರವಪ್ಪಗಳು ಜೋಗಿಗಳು ವರ್ಷವಿಡೀ, ವಾರ, ಅಮಾವಾಸೆ, ಹುಣ್ಣಿಮೆ, ಹಬ್ಬ-ಹರಿದಿನ, ಜಾತ್ರೆ-ಉತ್ಸವ ಮುಂತಾದ ಸಂದರ್ಭಗಳಲ್ಲಿ ಹಳ್ಳಿಹಳ್ಳಿಗೆ ಹೋಗಿ ಕೇರಿ – ಕೇರಿಗಳಲ್ಲಿ ತಿರುಗಿ ಮನೆ – ಮನೆಯ ಮುಂದೆ ತಮ್ಮ ತಮ್ಮ ಆರಾಧ್ಯ ದೈವಗಳನ್ನು ಕುರಿತು ಹಾಡು ಹೊಗಳುತ್ತಿದ್ದರು. ಆ ಮೂಲಕ ಧರ್ಮ ಪ್ರಚಾರ ಕಾರ್ಯವನ್ನು ಮಾಡುತ್ತಾ ಸಾರ್ವಜನಿಕರಿಗೆ ಬದುಕಿನ ಭವಣೆಯ ಭಾರವನ್ನು ಇಳಿಸುತ್ತಾ ತಮ್ಮ ಜೀವನದ ನಿರ್ವಹಣೆಗಾಗಿ ದವಸ-ಧಾನ್ಯ ಮತ್ತು ಹಣವನ್ನು ಪಡೆಯುತ್ತಿದ್ದರು. ಇವರನ್ನು ಯಾರೂ ಸಹ ಭಿಕ್ಷುಕರು, ತಿರುಕರು ಎಂಬ ಭಾವನೆಯಿಂದ ಕಾಣುತ್ತಿರಲಿಲ್ಲ. ಆದರೆ ಬಂದವರನ್ನು ಗೌರವದಿಂದ ಬರಮಾಡಿಕೊಂಡು ಮನೆಯ ಮುಂದಿನ ಪಡಸಾಲೆ ಅಥವಾ ಹಜಾರದಲ್ಲಿ ಚಾಪೆ ಹಾಸಿ ಕೂರಿಸುತ್ತಿದ್ದರು. ಅಷ್ಟೇ ಅಲ್ಲ ಊದು ಬತ್ತಿಯನ್ನು ಹಚ್ಚಿ ಬಹಳ ಭಕ್ತಿಯಿಂದ ಮಾದಪ್ಪನನ್ನು ನೆನೆದು ಅನಂತರ ಪದವನ್ನು ಹಾಡಿಸಿ ಕೇಳುತ್ತಿದ್ದರು.

ದೇವರಗುಡ್ಡರು ಅಥವಾ ಜನಪದ ಗಾಯಕರು ತಾವು ಆಡುವ ಮೊದಲು ಭಕ್ತಿರೆಗ ಇಷ್ಟವಾದುದನ್ನು ಕೇಳಿ ಆಡುವುದು ವಾಡಿಕೆಯಾಗಿತ್ತು. ಸಾಮಾನ್ಯವಾಗಿ ಮಾದಪ್ಪನ ಕಥೆ ಕೇಳಲು ಇಷ್ಟಪಡುತ್ತಿದ್ದರಾದರೂ ಅದರಲ್ಲಿ ಸಂಕಮ್ಮನಸಾಲು ಜನರಿಗೆ ಹೆಚ್ಚು ಪ್ರಿಯವಾಗಿರುತ್ತಿತ್ತು. ಹೀಗೆ ಒಂದು ಮನೆಯ ಮುಂದೆ ಹಾಡು ಹೇಳಲು ಆರಂಭಿಸಿದಾಗ ಸುತ್ತಲಿನ ಹತ್ತಾರು ಮನೆಯ ಹಿರಿಯ ಕಿರಿಯ ಹೆಂಗಸರು ಬಂದು ಸೇರುತ್ತಿದ್ದರು. ಸುಮಾರು ಒಂದು ಗಂಟೆಯ ಕಾಲ ಹಾಡಿದ ಬಳಿಕ ಗಾಯಕರು ದೀನ ಧ್ವನಿಯಲ್ಲಿ “ಮುಂದಲ ಮನೆಗ್ ಹೋಗ್ ಬೇಕ್ ಕಣ್ರವ್ವ, ನಮ್ ಹೊಟ್ಟೆ ಜೀವ್ನ ನಡೀಬೇಕಲ್ಲ ತಾಯ್ಗಳೆ, ಒಂದೇ ತಪ ಕೂತ್ಗಂಡ್ರಾದದ’’ ಎಂದು ವಿನಂತಿಸುತ್ತಿದ್ದರು. ಆಗ ಸಂಕಮ್ಮನ ಸಂಕಟವನ್ನು ತಾವೇ ಅನುಭವಿಸಿದಂತೆ ಅತ್ತು ಸೆರಗಿನಿಂದ ಕಣ್ಣೀರು ಒರೆಸಿಕೊಂಡು “ಆಯ್ತು ದಯಮಾಡ್ರೆಪ್ಪ ಇದು ಮೂರ್ ರಾತ್ರ ಏಳುದ್ರೂ ಮುಗಿಲಾರ‍್ದ ಕತಾ ಮೂರ್‌ಗಳಿಗ್ ಮುಗ್ದದಾ’’  ಎಂದು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರೀತಿಯಿಂದ ತಮ್ಮ ಯೋಗ್ಯತಾನುಸಾರ ದವಸ ಧಾನ್ಯವನ್ನು ಮೊರದಲ್ಲಿ ತಂದು ಜೋಳಿಗೆಗೆ ಹಾಕಿ ವಂದಿಸಿ ಕಳುಹಿಸಿ ಕೊಡುತ್ತಿದ್ದುರು. ಇದು ಆ ಕಾಲದ ಪದ್ಧತಿಯಾಗಿತ್ತು.

ಹಾಡಿನ ಇಂಪಿಗೋ, ಕಂಸಾಳೆ ನಾದಕ್ಕೋ ಆಕರ್ಷಿತರಾದ ಏಳೆಂದು ವರ್ಷಕ್ಕೆ ಮೇಲ್ಪಟ್ಟ ಪಡ್ಡೆ ಹುಡುಗರು ಈ ಗಾಯಕರನ್ನು ಹೋದಲೆಲ್ಲಾ ಹಿಂಬಾಲಿಸುತ್ತಿದ್ದರು. ಅಂಥವರಲ್ಲಿ ನಾನು ಒಬ್ಬನಾಗಿದ್ದುದನ್ನು ಮರೆಯಲಾಗುವದಿಲ್ಲ. ಆದರೆ ಎಷ್ಟೇ ತಿರಿಗುದರು. ಎಷ್ಟೇ ವರ್ಷಗಳಾದರೂ ಬೇರೆ ಬೇರೆ ಗಾಯಕರು ಬಂದು ಹೋದರೂ ಮಾದಪ್ಪನ ಸಂಪೂರ್ಣ ಕಥೆಯನ್ನು ಮಾತ್ರ ಕೇಳಲಾಗಿರಲಿಲ್ಲ. ಏಕೆಂದರೆ ಪ್ರತಿಯೊಬ್ಬರು ಇಷ್ಟಪಡುತ್ತಿದ್ದ ಸಂಕಮ್ಮನ ಸಾಲು ಇಲ್ಲವಾದರೆ ಮಾದಪ್ಪನ ಹುಟ್ಟಿಬೆಳೆದ ಸಾಲು, ಜುಂಜೇಗೌಡರ ಸಾಲು ಅಥವ ಶ್ರಾವಣನ ಸಾಲು ಮಾತ್ರ. ಆದರೆ ವರ್ಷದಲ್ಲಿ ಒಮ್ಮೆ  ಗ್ರಾಮದಲ್ಲಿ ಯಾರಾದ್ರೂ ಹರಕೆ ಮಾಡಿಕೊಂಡವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾದಪ್ಪನ ಸಂಪೂರ್ಣ ಕಥೆಯನ್ನು ಓದಿಸುತ್ತಿದ್ದ ಒಂದು ಸತ್‌ಸಂಪ್ರದಾಯ ರೂಢಿಯಲ್ಲಿತ್ತು. ಆಗ ಮಕ್ಕಲು, ವಯಸ್ಕರು ಮತ್ತು ಮುಪ್ಪಿನ ಮನುಷ್ಯರು ಸಹ ಕಥೆಯನ್ನು ಕೇಳಲು ಬರುತ್ತಿದ್ದರು. ಆದರೆ ಮಕ್ಕಳು ಮಾತ್ರಕೆಲವು ಗಂಟೆಗಳ ಬಳಿಕ ನಿದ್ದೆ ಹೋಗುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನಿತ್ಯವು ಮಾದಪ್ಪನ ಪದವನ್ನು ಕೇಳಿಸಿಕೊಳ್ಳುವ ಅವಕಾಶವಿತ್ತು. ಹಾಗೆಯೇ ವರ್ಷದಲ್ಲಿ ಮೂರು ನಾಲ್ಕು ಬಾರಿ ನಮ್ಮೂರ ಮಾರ್ಗವಾಗಿ ಮಾದಪ್ಪನ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತಂಡೋಪತಂಡವಾಗಿ ಮಾದಪ್ಪನ ಪದ ಹಾಡುತ್ತಾ ಸಾಗುತ್ತಿದ್ದರು. ಒಟ್ಟಿನಲ್ಲಿ ಅಂದಿನ ಕಾಲಕ್ಕೆ ಮಾದಪ್ಪನ ಪೂಜೆ ಪುರಸ್ಕಾರ ನೆನವರಿಕೆ ಹರಕೆಗಳನ್ನು ಸಲ್ಲಿಸುವುದಕ್ಕಾಗಿ ತಮ್ಮ ತಮ್ಮ ಊರುಗಳಿಂದ ಕಾಲ್ನಡಿಗೆಯಲ್ಲೇ ಹೋಗಿ ಬರುವುದು ಮಾಮೂಲಿಯಾಗಿತ್ತು. “ಮೂರು ಲೋಕದ ಒಡೆಯ, ಮಾಯಕಾರ ಗಂಡ ಮಾದಪ್ಪ’’ ಎಂಬ ಖ್ಯಾತಿಯನ್ನು ಪಡೆದಿದ್ದ. ನೆನೆದರೆ ನೇರ್ಪಲ್ಲಿ ಕಾದು ಕಾಪಾಡುವವ, ಮರೆತವರ ಮನೆ ಮುರಿಯುವವ’’ ಎಂಬ ಭಯ ಜನರಲ್ಲಿ ಬೇರೂರಿತ್ತು. ಹೀಗೆ ಮಾದಪ್ಪ ಅಂದು ಮನ – ಮನೆಯ ಮಾತಾಗಿದ್ದನು. ಅಷ್ಟೇ ಅಲ್ಲ ತಮ್ಮ ಕಷ್ಟ-ಕೋಟಲೆಗಳನ್ನು ನಿವಾರಿಸುವ ಸುಧಾರಕನಾಗಿದ್ದ ಕೂಡ.

ವಿದ್ಯಾರ್ಥಿ ದಿಸೆಯಲ್ಲಿ ಮಾದೇಶ್ವರ ಕಾವ್ಯದ ಓದು

ಸ್ನಾತಕೋತ್ತರ ಪದವಿಯ ಓದಿನ ಸಂದರ್ಭದಲ್ಲಿ ಹಲವಾರು ವಿಷಯಗಳ ಜೊತೆಯಲ್ಲಿ ಒಂದು ವಿಷಯವಾಗಿ ಓದುವ ಕಾರಣಕ್ಕೆ ಅಗತ್ಯವಿದ್ದಷ್ಟನ್ನು ಮಾತ್ರ ಓದುವುದು ಅನಿವಾರ್ಯವಾಗಿತ್ತು. ಆದ್ದರಿಂದ ಮಾದಪ್ಪನ ಸಂಪ್ರದಾಯ, ದೇವರಗುಡ್ಡರು. ಹೀಗೆ ಕೆಲವು ಉಪಶೀರ್ಷಿಕೆಗಳ  ಅಡಿಯಲ್ಲಷ್ಟೆ ಓದು ಸಾಗಿತ್ತು. ಆದರೆ ಮಾದಪ್ಪನ ಕಥೆ ಮಾತ್ರ ಸಂಪೂರ್ಣ ಅಲ್ಲದಿದ್ದರೂ ಮೂಲದಿಂದ ಆರಂಭಿಸಿ ಮಂಗಳಾರತಿವರೆಗೆ ಬೇರೆ ಬೇರೆ ಕಾರಣದಿಂದ ತಿಳಿದಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಕಥೆ ಕಥೆಯಾಗಿ ತಿಳಿದಿತ್ತೆ ಹೊರತು ಅದನ್ನು ಸಂಶೋಧನೆ ದೃಷ್ಟಿಯಿಂದ ಓದುವುದು ಸಾಧ್ಯವಿರಲಿಲ್ಲ.

ಓದಿಗೆ ಮುಂಚೆ

ಜನಪದ ಸಂದರ್ಭಧಲ್ಲಿ ಅರವು ಗಾಯಕರಾಗಿರಲಿ, ಕಲಾವಿದರಾಗಿರಲಿ, ದೇವರಗುಡ್ಡ ರಾಗಿರಲಿ, ಜೋಗಿಗಳಾಗಿರಲಿ, ದಾಸಯ್ಯಗಳಾಗಿರಲಿ ಅಥವಾ ಗೊರವಪ್ಪ ಗಳಾಗಿರಲಿ, ಸಾಮಾನ್ಯ ಭಕ್ತನೆ ಆಗಿರಲಿ ತಾನು ನಂಬಿದ ದೈವಕ್ಕೆ ಬದ್ಧನಾಗಿರುತ್ತಾನೆ. ಅದನ್ನು ತಮ್ಮ ಜೀವನವಿಡೀ ಪಾಲಿಸುವುದರೊಂದಿಗೆ ಬದುಕಿಗೊಂದು ಅರ್ಥವನ್ನು ಕಂಡುಕೊಳ್ಳುತ್ತಾನೆ. ಮಾನವ ಸಹಜ ಗುಣದಂತೆ ಆಕಸ್ಮಿಕ ತಪ್ಪುಗಳು ಸಂಭವಿಸಿದಾಗ ತನ್ನ ದೈವಕ್ಕೆ ಕ್ಷಮೆ ಕೇಳಿಕೊಳ್ಳುತ್ತಾನೆ. ಅಂದರೆ ನೇರವಾಗಿ ದೇವರ ಜೊತೆ ಸಂಭಾಷಿಸುತ್ತಾನೆ. ಸದಾ ತನ್ನ ಜೊತೆಗಿದ್ದು ಕಾಪಾಡುತ್ತಾನೆ ಎಂಬುದು ಅವರ ಬಲವಾದ ನಂಬಿಕೆ. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮ ಸಾಧನೆಯನ್ನು ಕುರಿತು ಹಾಡಿನ ರೂಪದಲ್ಲಿ ಆಡುವುದನ್ನು ರೂಢಿಸಿಕೊಂಡುದು ಇಂದಿಗೂ ಒಂದು ದೊಡ್ಡ ಮೌಖಿಕ ಪರಂಪರೆಯಾಗಿ ಮುಂದುವರಿದುಕೊಂಡು ಬಂದಿದೆ. ಸಹಜ ಮತ್ತು ಸಾಮಾನ್ಯವಾಗಿದ್ದ ಪದಗಳು ಇಂದು ಅಧ್ಯಯನಕಾರರಿಗೆ ಅಥವಾ ಸಂಶೋಧಕರಿಗೆ ಬಹಳ ಮಹತ್ವದ ಸಂಗತಿಗಳಾಗಿವೆ. ಆದ್ದರಿಂದಲೇ ಅವುಗಳನ್ನು ನೂರಾರು ವರ್ಷಗಳ ಹಿಂದೆಯೇ ಸಂಗ್ರಹಿಸುವ ಕಾರ್ಯ ಆರಂಭವಾಯಿತು. ೧೯೭೦ರಲ್ಲಿ ಡಾ.ಸಿ.ಕೆ. ರಾಜಶೇಖರ್ ಅವರು ಮಲೆ ಮಾದೇಶ್ವರ ಕಾವ್ಯವನ್ನು ಸಂಗ್ರಹಿಸಿ ಸಂಪಾದಿಸಿಕೊಟ್ಟಿದ್ದಾರೆ (ಬಹುಪಠ್ಯ). ಇದಾದ ೨೫ ವರ್ಷಗಳ ಅನಂತರ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಬುಡಕಟ್ಟು ಅಧ್ಯಯನ ವಿಭಾಗದ ಬುಡಕಟ್ಟು ಮಹಾಕಾವ್ಯಮಾಲೆ ಯೋಜನೆ ಅಡಿಯಲ್ಲಿ ಮಲೆ ಮಾದೇಶ್ವರ ಕಾವ್ಯವನ್ನು ಸಂಗ್ರಹಿಸಿ ಸಂಪಾದಿಸುವ ಅವಕಾಶ ನನಗೆ ದೊರೆಯಿತು. ಆ ಹಿನ್ನೆಲೆಯಲ್ಲಿ ಮಲೆ ಮಾದೇಶ್ವರ ಕಾವ್ಯವನ್ನು ಹಲವಾರು ಸಾರಿ ಓದುವುದು ಸಾಧ್ಯವಾಯಿತು. ಇದಲ್ಲದೆ ಡಾ. ಸಿ. ಎನ್. ರಾಮಚಂದ್ರನ್ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು ಎಮಿರೈಟ್ ಶಿಷ್ಯವೇತನ ಪಡೆದು ಆ ಯೋಜನೆಯ ಅಡಿಯಲ್ಲಿ ಮಲೆ ಮಾದೇಶ್ವರ ಸಂಪೂರ್ಣ ಕಾವ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಆ ಸಂದರ್ಭದಲ್ಲಿ ಕೂಡ ಕಾವ್ಯದ ಪುಟ ಪುಟದಲ್ಲಿ ದಾಖಲಾಗಿರುವ ಸಾವಿರಾರು ಸಾಂಸ್ಕೃತಿಕ ಮತ್ತು ಪ್ರಾದಶಿಕ ಪದಗಳಿಗೆ ಅರ್ಥವಿವರಣೆಯನ್ನು ನೀಡುವ ಸಲುವಾಗಿ ಮಲೆ ಮಾದೇಶ್ವರ ಕಾವ್ಯದ ಓದು ಅನಿವಾರ್ಯವಾಯಿತು.

ಓದಿನ ಅನಂತರದ ಅನಿಸಿಕೆ

ಈ ಮೊದಲೇ ನಾನು ಪ್ರಸ್ತಾಪಿಸಿರುವಂತೆ ಯಾವುದೇ ಒಂದು ಮೌಖಿಕ ಕಾವ್ಯ ಬರಹಕ್ಕೆ ಬಂದ ಬಳಿಕ ಅನೇಕ ಕಾರಣಗಳಿಗಾಗಿ ವಿದ್ವಾಂಸರು ಅವುಗಳಿಗೆ ಆಕರ್ಷಿತರಾಗುತ್ತಾರೆ. ಅವರವರ ಗ್ರಹಿಕೆಯ ಹಿನ್ನೆಲೆಯಲ್ಲಿ ಜನಪದ ಕಾವ್ಯವನ್ನು ವ್ಯಾಕ್ಯಾನಿಸುತ್ತಾರೆ. ಇದು ಸಹಜವಾಗಿ ವಿದ್ವಾಂಸರಿಂದ ವಿದ್ವಾಂಸರಿಗೆ ಭಿನ್ನವಾಗಿರುತ್ತದೆ. ಕೆಲವೊಮ್ಮೆ  ಜನಪದರ ದೃಷ್ಟಿಯಲ್ಲಿ ಸಾಮಾನ್ಯವೆನಿಸಿದ್ದ ಸಂಗತಿಗಳು ಅಸಾಮಾನ್ಯವಾಗಿ ಬಿಂಬಿತವಾಗಿಬಿಡುತ್ತವೆ. ಪ್ರಸ್ತುತ ಮಾದಪ್ಪನ ಕಾವ್ಯದಸಂದರ್ಭದಲ್ಲೂ ಆಗಿರುವುದು ಅದೇ ಎಂಬುದು ಅದನ್ನು ಕುರಿತು ವಿದ್ವಾಂಸರು ನಡೆಸಿರುವ ಚರ್ಚೆಗಳು ಹಾಗೂ ಬರಹಗಳಿಂದ ಅಭಿವ್ಯಕ್ತಗೊಂಡಿದೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಮಾನವ ಜೀವಿಯ ಹುಟ್ಟಿನಿಂದಲೇ ಆತನ ಜೀವಿತಕಾಲದ ಚರಿತ್ರೆಯು ಪೂರ್ವನಿಧಾರಿತವಾಗಿರುತ್ತದೆ. ಇದು ವೈಜ್ಞಾನಿಕವೂ ಹೌದು. ಇದರ ಅನ್ವಯ ಮಾದಪ್ಪ ಅಥವಾ ಆತನಂತೆ ಸಾಂಸ್ಕೃತಿಕ ನಾಯಕರಾಗಿ, ವೀರರಾಗಿ, ಸಮುದಾಯದ ಆರಾಧಕರಾಗಿ ಕ್ರಮೇಣ ಸೀಮೆಯನ್ನು ಮೀರಿ ದೈವವಾಗಿರುವುದಲ್ಲದೆ ದೇವಸ್ಥಾನಗಳನ್ನು ನಿರ್ಮಿಸಿ ನಾಡಿನಾದ್ಯಂತ ಪೂಜಿಸುವ ಉದಾಹರಣೆಗಳು ಸಾಕಷ್ಟಿವೆ. ಬಹಳಷ್ಟು ಸಾಂಸ್ಕೃತಿಕ ನಯಾಕರು ಕೇವಲ ತಾನು, ತನ್ನ ಸಂಸಾರ ಎಂಬ ಸೀಮಿತ ಬದುಕಿಗೆ ಸಮಾಜ ಮತ್ತು ಮೀಸಲಾಗದ ಅವರ ಒಳಿತಿಗಾಗಿ ತಮ್ಮನ್ನೇ ಒಪ್ಪಿಸಿಕೊಳ್ಳುವುದನ್ನು, ಒಪ್ಪಿಸಿಕೊಂಡಿರುವುದನ್ನು ನಾವು ನೋಡಬಹುದಾಗಿದೆ. ಅಂಥವರನ್ನು ಹಾಡಿ ಹೊಗಳುವುದು, ಅವರ ಸಾಧನೆಯನ್ನು ಪ್ರಚುರಪಡಿಸುವುದು ಮೌಖಿ ಪರಂಪರೆಯಲ್ಲಿ ಸಾಗಿಬಂದ ಒಂದು ಸಂಪ್ರದಾಯ. ಹೀಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದ ಇಂಥ ಪದಗಳು ಹೊಸ ಹೊಸ ಅಂಶಗಳ ಸೇರ್ಪಡೆ – ಬೇರ್ಪಡೆಯಿಂದ ಬೆಳೆಯುತ್ತಲೇ ಇದೆ. ಇದು ಜನಪದ ಗಾಯಕನ ಅಥವಾ ದೇವರಗುಡ್ಡರ ಪ್ರತಿಭೆ ಮತ್ತು ಹಾಡುಗಾರಿಕೆಯ ಸಾಮರ್ಥ್ಯವನ್ನು ಅವಲಂಭಿಸಿರುತ್ತದೆ.

ಆದರೆ ಈಗ ಮಾದಪ್ಪನ ಕಾವ್ಯದ ಬಗೆಗೆ ಹೇಳುವುದಾದರೆ ಪ್ರಸ್ತುತ ಎರಡು ಸಂಪಾದನ ಕೃತಿಗಳು ಮಾತ್ರ ಲಭ್ಯವಿದ್ದರೂ ನಾಡಿನಾದ್ಯಂತ ನೂರಾರು ಗಾಯಕರು ಅಥವಾ ಮಾದಪ್ಪನ ಗುಡ್ಡರು ಇಂದಿಗೂ ಅವರದೇ ಅರಿವಿನ ಆಳದಲ್ಲಿ ಹುದುಗಿರುವ ಪದವನ್ನು ಬಿಚ್ಚಿಡುತ್ತಾರೆ. ಅದು ಮೂಲ ಅಂಶಗಳಿಗೆ ಯಾವುದೇ ದೋಷವಿಲ್ಲದೆ ಪ್ರತಿಭಾರಿಯೂ ವಿನೂತನ ರೀತಿಯಲ್ಲಿ ಹಾಡುವುದು ಅವರ ಜಾಯಮಾನ. ಹೊಸ ಪದ ಪ್ರಯೋಗಗಳು, ಒಂದಿಷ್ಟು ಹೆಚ್ಚುವರಿ ವೈಭವೀಕರಣ, ಹೊಗಳಿಕೆ ಇಂತಹ ಅನೇಕ ಅಂಶಗಳು ಸೇರಿಕೊಳ್ಳುತ್ತಾ ಹೋಗುತ್ತವೆ.

ಇಲ್ಲಿ ಒಂದು ವಿಷಯವು ಸಾಮಾನ್ಯವಾಗಿ ಎಲ್ಲಾ ಸಂಸ್ಕೃತಿಕ ವ್ಯಕ್ತಿಗಳ, ದೈವೀಕರಿಸಲ್ಪಟ್ಟ ವ್ಯಕಿತಗಳ ಹುಟ್ಟು ಎಲ್ಲರಂತೆ ಸಹಜವಾಗಿದ್ದಿರುವುದು ವೈಜ್ಞಾನಿಕ ಸತ್ಯ. ಆದರೆ ಆತನಿಗೆ ಅತಿಮಾನುಷ ಗುಣ ದೈವತ್ವವನ್ನು ಕಲ್ಪಿಸಿದ ಜನತೆ ನಮ್ಮಂಥೆ ಆತನ ಹುಟ್ಟು ಸಲ್ಲದು ಎಂಬ ಭಾವನೆಯಿಂದ ಬೇರೊಂದು ರೀತಿಯಲ್ಲಿ ಹುಟ್ಟನ್ನು ಕಲ್ಪಿಸುತ್ತಾರೆ. ಹಾಗೆಯೇ ಸಾವನ್ನು ಸಹ.

ಭಿನ್ನ ಸಾಮಾಜಿಕ ಹಾಗೂ ಭೌಗೋಳಿಕ ಹಿನ್ನೆಲೆಯನ್ನು ಹೊಂದಿರುವ ಗಾಯಕರು ಮತ್ತು ಗುಡ್ಡರು ಮಾದಪ್ಪನ ಪದವನ್ನು ಆಡುವಾಗ ಅದರ ಪರಿಣಾಮಗಳನ್ನು ಗುರುತಿಸಬಹುದಾಗಿದೆ. ಇದಲ್ಲದೆ ಕಾಲವು ಕೂಡ ತನ್ನ ಪ್ರಭಾವವನ್ನು ಬೀರದಿರದು. ಉದಾಹರಣೆಗೆ ಕಳೆದ ೪೦-೫೦ ವರ್ಷಗಳ ಹಿಂದೆ ಮಾದಪ್ಪನ ಸೇವೆಗೆ ಹೋಗುವ ಪರಿಸೆ ಅಥವಾ ಭಕ್ತರು ಮಾಂಸಾಹಾರವನ್ನು ಒಯ್ಯುವುದು ಸಾಮಾನ್ಯವಾಗಿತ್ತು. ಆದರೆ ಮಾದಪ್ಪ ಮಾದೇಶ್ವರನಾಗಿ ಅಲ್ಲಿದ್ದ ವೀರಶೈವ ಮಠದ ಪ್ರಬಾವ ಹೆಚ್ಚಾದುದರ ಪರಿಣಾಮ ಇಂದು ಮಾಂಸಾಹಾರ ನಿಷಿದ್ಧ ಎಂಬ ಅಲಿಖಿತ ನಿಯಮವು ಜಾರಿಯಲ್ಲಿದೆ. ಒಂದು ಪಕ್ಷ ಇದನ್ನು ಮೀರಿದರೆ ಏನಾಗಬಹುದು ಎಂಬ ವಿವರಣೆಗಳು ಜನರಲ್ಲಿ ಚಾಲ್ತಿಯಲ್ಲಿವೆ. ಒಟ್ಟಾರೆ ವ್ಯಕ್ತಿಯೋರ್ವನಿಗೆ ಶಕ್ತಿ ನೀಡಿ, ಶಕ್ತಿಗೆ ಮಹತ್ವವನ್ನು ತುಂಬಿ ಆತನಿಗೆ ತಮ್ಮ ನಿರೀಕ್ಷೆಗಳನ್ನು ಫಲಿಸುವಂಥ ದೈವತ್ವವನ್ನು ಸಾರ್ವತ್ರಿಕವಾಗಿ ಒಪ್ಪಿತನನ್ನಾಗಿ ಮಾಡುವರು. ಇದಿಷ್ಟು ಕೆಲಸ ಕಷ್ಟದ್ದಲ್ಲ. ಆದರೆ ಮುಂದುವರಿದು ಆತ ದೈವ ಎಂದು ತೀರ್ಮಾನಿಸಿದ ಬಳಿಕ ತಮ್ಮ ತಮ್ಮ ನಿರೀಕ್ಷೆಯಂತೆ ಫಲವನ್ನು ಬಯಸುವುದು, ಸರ್ವಸ್ವವೂ ಆತನಿಂದಲೇ ಎಂಬ ಹೊಣೆಗಾರಿಕೆಯನ್ನು ಹೊರಿಸಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಪಡೆದುಕೊಳ್ಳುವ ಈ ಜನಪದರ ಅಥವಾ ಭಕ್ತವೃಂದದ ಸಾಹಸ ಸಾಮಾನ್ಯವಾದುದಲ್ಲ.

ಒಂದು ಉದಾಹರಣೆಯ ಮೂಲಕ ಮೇಲಿನ ಮಾತನ್ನು ಮತ್ತಷ್ಟು ಪುಷ್ಟೀಕರಿಸಲು ಬಯಸುತ್ತೇನೆ. ಇದೇನೆಂದರೆ ಕಷ್ಟದಲ್ಲಿದ್ದ ಕಟ್ಟಾಭಕ್ತನಿಗೆ ತಾನು ನಂಬಿದ ದೈವದಿಂದ ನಿರೀಕ್ಷಿ ಫಲ ದೊರೆಯಲಿಲ್ಲ ಎಂದು ಆತನ ಜೊತೆ ನೇರವಾಗಿ ವಾಗ್ವಾದಕ್ಕೆ ಇಳಿಯುವುದು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಆತನಿಗೆ ಮಾಡುವ ಸೇವೆಯನ್ನು ಮಾಡುವುದಿಲ್ಲ. ನಿನ್ನ ಬಿರುದುಗಳು ನಿಷ್ಪ್ರಯೋಜಕ ಅವುಗಳನ್ನು ಕೆರೆಗೆ ಎಸೆಯುತ್ತೇನೆ ಎಂದು ಸವಾಲು ಹಾಕುವುದು ಸಾಮಾನ್ಯ ಸಂಗತಿಗಳಲ್ಲ. ಇಷ್ಟೆಲ್ಲಾ ನಡೆದ ಮೇಲೆ ಭಕ್ತನ ಕನಸಲ್ಲಿ ಅಸ್ಪಷ್ಟ ರೀತಿಯಲ್ಲಿ ಒಂದು ಭರವಸೆ ನೀಡಿದಂತೆ ಅಥವಾ ಏನೋ  ಒಂದು ಭರವಸೆ ನೀಡಿದಂತೆ ಅಥವಾ ಏನೋ ಒಂದು ವಿಚಿತ್ರ ಅನುಭವವಾಗುವಂಥ ಘಟನೆಗಳು ನಡೆದಿರುವುದನ್ನು ಭಕ್ತರಿಂದ ಕೇಳಿ ತಿಳಿದುಕೊಂಡಿದ್ದೇನೆ (ಇಂತದ್ದೇ ಒಂದು ಸಂದರ್ಭ ಹೆಬ್ಬಣಿ ಮಾದಯ್ಯ ಅವರಲ್ಲೇ ಆಗಿರುವುದನ್ನು ಕುರಿತು ವಿವರಣೆ ನೀಡಿದ್ದಾರೆ.)

ಇಲ್ಲಿ ಒಂದು ವಿಷಯ ನನಗೆ ಸ್ಪಷ್ಟವಾಗುತ್ತದೆ. ಇಂದಿಗೂ ಮಾನವನಲ್ಲಿ ಇರಬಹುದಾದ ಅಗಾಧ ಶಕ್ತಿಯ ಬಗೆಗೆ ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಸಾಂಸ್ಕೃತಿಕ ನಾಯಕ ಮಾದಪ್ಪ ಒಂದು ವಿಶಿಷ್ಟವೆನಿಸಿದರೆ, ಅಂತಹ ಶಕ್ತಿಯನ್ನು ಗುರುತಿಸಿ ತಮ್ಮ ಇಚ್ಛೆಗೆ ಅನುಗುಣವಾಗಿ ಆತನಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಕಂಡುಕೊಳ್ಳುವುದರ ಮೂಲಕ ಮಾನಸಿಕ ರೋಗಿಗಳ ಕೇಂದ್ರವಾಗಿ, ಕಷ್ಟಕೋಟಲೆಗಳ ಬೀಡಾಗಬೇಕಾಗಿದ್ದ ಸಮಾಜ ಮಾದಪ್ಪನಂತ ವ್ಯಕ್ತಿ ಶಕ್ತಿಯ ಕೇಂದ್ರವಾಗಿ ಜನರಿಗೆ ಬದುಕಲು ಭರವಸೆ ನೀಡಿರುವುದ್ನು ಒಂದು ಸೋಜಿಗವಾದರೂ ಅದು ಸತ್ಯ. ಆ ಕಾರಣಕ್ಕಾಗಿ  ಮಾದಪ್ಪನ ಪದ ನಿತ್ಯ ನೂತನ, ಸತ್ಯಮಾರ್ಗಕ್ಕೆ ಸಾಧನವೆಂದೇ ಜನರು ಭಾವಿಸಿದ್ದರೆ ಇದೆಲ್ಲವೂ ತಮಗೆ ತಾವೇ ರೂಪಿಸಿಕೊಂಡಿರುವ ನಿಯಮಗಳೇ ಹೊರತು ಯಾವ ದೈವವೂ ಬಂದಿಲ್ಲ. ಅಥವಾ ಅವರ ಸಾಂಸ್ಕೃತಿಕ ನಾಯಕನು ಆಜ್ಞೆ ಮಾಡಿಲ್ಲ. ಮಾನವನ ಮಿತಿ ಮೀರುವಿಕೆಯನ್ನು ಅವರ ತಿಳಿವಳಿಕೆಯ ಹಾಗೂ ಜ್ಞಾನದ ಸಾಮರ್ಥ್ಯದಿಂದ ತಿದ್ದುವ ಪ್ರಯತ್ನ ಮಾಡಿರುವುದೇ ಈ ಎಲ್ಲಾ ಕಾವ್ಯದ ಸೃಷ್ಟಿಗೆ ಕಾರಣ.

ಪದ (ಕಾವ್ಯ) ಸೃಷ್ಟಿ ಮತ್ತು ವರ್ಣನೆ

ಕಣ್ಣಲ್ಲಿ ಕಂಡು ಕಿವಿಯಲ್ಲಿ ಕೇಳಿದ ಸಂಗತಿಗಳನ್ನು ಅಂದು ಬರೆದಿಡುವ ಸಾಧ್ಯತೆ ಹಾಗೂ ಸಂಪ್ರದಾಯ ಇದ್ದಿರಲಿಲ್ಲ. ಆದ್ದರಿಂದ ಅಪಾರ ಜ್ಞಾಪಕಶಕ್ತಿಯನ್ನು ಹೊಂದಿದ್ದು, ಕಂಡ ಯಾವುದೇ ಘಟನೆಯನ್ನು ಕೇಳುಗರಿಗೆ ಮನಮುಟ್ಟುವಂತೆ ಇಂಪಾಗಿ ರಾಗಬದ್ಧವಾಗಿ ಹಾಡಿ ಹೇಳುವ ಸಾಮರ್ಥ್ಯವುಳ್ಳವರು ಆಯಾ ಕಾಲಘಟ್ಟದ ಹಲವಾರು ಮಹತ್ವದ ಸಂಗತಿಗಳನ್ನು ಪದವಾಗಿ ಹಾಡಿದ್ದಾರೆ. ಕಥೆಯಾಗಿ ಹೇಳಿದ್ದಾರೆ. ಹಾಗೆಯೆ ಮುಂದಿನ ಪೀಳಿಗೆಗೆ ಅದನ್ನು ಮೌಖಿಕ ಸಂಪ್ರದಾಯದಲ್ಲೇ ಧಾಟಿಸುವ ಕಾಯಕಕ್ಕಾಗಿ ಒಂದೊಂದು ದೈವದ ಸಲುವಾಗಿ ನಿರ್ದಿಷ್ಟ ಪಂಥಗಳು ಅಥವಾ ಅನುಯಾಯಿಗಳು ಹುಟ್ಟಿಕೊಂಡಿವೆ. ಅದೇ ರೀತಿ ಮಾದಪ್ಪನ ಸಂದರ್ಭದಲ್ಲಿ ‘ಗುಡ್ಡರು’ ಎಂಬ ಅನುಯಾಯಿಗಳು ಅಥವಾ ಶಿಷ್ಯ ಮಕ್ಕಳು ಆ ಜವಾಬ್ದಾರಿಯನ್ನು ನಿರ್ವಹಿಸುವವರಾಗಿದ್ದಾರೆ. ವಿಶೇಷವೆಂದರೆ ಈ ಕಾಯಕದಲ್ಲಿ ಯಾವುದೇ ಒಂದು ಸಮುದಾಯ ಮಾತ್ರ ಪಾಲ್ಗೊಂಡಿಲ್ಲ, ಬದಲಿಗೆ ಹತ್ತು-ಹಲವಾರು (ಹೊಲೆಯ, ಮಾದಿಗ, ಕುರುಬ, ಒಕ್ಕಲಿಗ, ಕೆಲಸಿ, ಸೋಲಿಗ, ಕೊಂಗಜನ, ಅಚಾರಿಗಳು, ಬೇಡಕಂಪಣ, ಲಿಂಗಾಯತ, ಬಣಜಿಗ, ಗಾಣಿಗ ಮುಂತಾದವರು) ಸಮುದಾಯಗಳು ಪಾಲ್ಗೊಳ್ಳುತ್ತಾರೆ. ಆದರೆ ಭಕ್ತರಾಗಿ ಯಾವುದೇ ಧರ್ಮ ಅಥವಾ ಪಂಥದ ನಿರ್ಬಂಧವಿಲ್ಲದೆ ಮಾದಪ್ಪನ ಮಹಿಮೆ – ಮಹತ್ವವನ್ನು ಅರಿತವರು ಆರಾಧಿಸುವುದುಂಟು.

ಮಾದಪ್ಪನ ಕಾವ್ಯದ ವರ್ಣನೆಯನ್ನು ಗಮನಿಸಿದಾಗ ಒಂದು ಅಂಶ ಗಮನ ಸೆಳೆಯುತ್ತದೆ. ಅದೆಂದರೆ, ಇದು ಹಲವಾರು ತಲೆಮಾರನ್ನು ದಾಟಿ ಬಂದಿದ್ದರು, ಇಂದಿಗೂ ಆ ಗಾಯಕ ಅಥವಾ ಗುಡ್ಡರು ಹಾಡುವಾಗ ತಾನೇ ಆ ಘಟನೆಗಳನ್ನು ಕಣ್ಣಾರೆ ಕಂಡಂತೆ ವರ್ಣಿಸುವ ಪರಿ ಮತ್ತು ಆ ತನ್ಮಯತೆ ನಿಜವಾಗಿಯೂ ಅನನ್ಯವಾದುದು. ಜೊತೆಗೆ ಭಕ್ತಿ ಪರವಶರಾಗುವುದರಿಂದ ಇಡಿ ಭಕ್ತವೃಂದವನ್ನು ಭವನಾಲೋಕಕ್ಕೆ ಕೊಂಡೊಯ್ದು ಎಲ್ಲವೂ ನಮ್ಮ ಕಣ್ಮುಂದೆ ಘಟಿಸುತ್ತಿದೆ ಎಂಬ ಸ್ಥಿತಿಯನ್ನು ನಿರ್ಮಿಸಿಬಿಡುತ್ತಾರೆ. ಹಿಮ್ಮೇಳ ಮುಮ್ಮೇಳದವರ ಕಂಚಿನ ಕಂಠ, ಕೈಯಲ್ಲಿ ಹಿಡಿದ ಕಂಚಿನಕಂಸಾಳೆಯ ಲಯಬದ್ಧ ತಾಳ ಅದೆಂಥ ನಾಸ್ತಿಕನನ್ನು ತನ್ನತ್ತ ಸೆಳೆದು ಮನಪರಿವರ್ತನೆ ಮಾಡಿಬಿಡುವ ಸಾಮರ್ಥ್ಯ ಇವರಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ. ಸಂಗೀತಕ್ಕೆ ಇರುವ ಅಪಾರ ವಿಶೇಷ ಗುಣಗಳನ್ನು ಅಧ್ಯಯನ ನಡೆಸಿದ್ದಾರೆ. ನಿತ್ಯ ಸಂಗೀತ ಕೇಳಿಕೊಂಡ ಗಿಡಮರಗಳು ಸಹಾ ಅತ್ಯುತ್ತಮ ಫಸಲು ನೀಡಬಲ್ಲವು. ಆಕಳುಗಳಿಗೆ ಸಂಗೀತ ಕೇಳಿಸಿದಾಗ ಮಾಮೂಲಿಗಿಂತ ಹೆಚ್ಚು ಹಾಲನ್ನು ಹಿಂಡಿಬಲ್ಲವು. ಮನುಷ್ಯನಿಗೆ ಬರುವ ಅನೇಕರೋಗಗಳನ್ನು ಸಂಗೀತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಸಂಗೀತಕ್ಕೆ ಮಕ್ಕಳ ಅಳುವನ್ನು ನಿಲ್ಲಿಸುವ ಶಕ್ತಿ ಇದೆ. ನಗುವವರನ್ನು ಶೋಕತಪ್ತರಾಗಿಸುವುದು ಸಾಧ್ಯವುಂಟು.

ಎಂದೋ ನಡೆದ, ಎಲ್ಲೋ ನಡೆದ ಘಟನೆಯು ಎಂದೆಂದಿಗೂ ಏಕೆ ಪ್ರಸ್ತುತವೆನಿಸುತ್ತದೆ. ನೂರಾರು, ಸಾವಿರಾರು ವರ್ಷಗಳಾದರೂ ಜನರು ಯಾವ ಕಾರಣಕ್ಕೆ ಪದವಾಗಿಸಿ ಹಾಡುವುದನ್ನು ಒಪ್ಪಿಕೊಳ್ಳುತ್ತಾರೆ ಎಂದರೆ ಇಂದು ತಾವು ಬದುಕಿರುವ ಸುತ್ತಮುತ್ತಲಿನ ಊರು, ಕೇರಿ, ಗುಡ್ಡ ಬೆಟ್ಟ, ಕಲ್ಲುಬಂಡೆ, ಮನೆ-ಮಠ, ಗುಡಿಸಲು, ಗಿಡ-ಮರ, ಪ್ರಾಣಿ-ಪಕ್ಷಿ, ಕೆರೆ-ಕಟ್ಟೆ, ಕಾಲುವೆ, ಹಳ್ಳ-ಕೊಳ್ಳ, ಹೂವು-ಮೊಗ್ಗು, ಕಾಯಿ-ಹಣ್ಣು ಸಕಲವನ್ನು ಒಳಗುಮಾಡಿಕೊಳ್ಳುವುದರಿಂದ ಅದು ಇಲ್ಲೆ ನಡೆದ ಘಟನೆ ಆಗ ನನ್ನ ಪೂರ್ವಜರು ಇದರಲ್ಲಿ ಭಾಗಿಯಾಗಿದ್ದರು ಎಂದು ಅದಕ್ಕೆ ವಾಸ್ತವದ ಜೀವವನ್ನು ತುಂಬುತ್ತಾನೆ. ಇಷ್ಟೆಲ್ಲಾ ವಿವರಗಳು, ಕಣ್ಣಿಗೆ ಕಟ್ಟುವ ದಾಖಲೆಗಳ ಸಮೇತ ನೀಡುವ ಘಟನೆಯನ್ನು ಕೇವಲ ಕಲ್ಪನೆ ಎಂದು ನಂಬಿಸುವುದಕ್ಕೆ ಯಾರ ಮನಸ್ಸು ಸಹ ಒಪ್ಪುವುದಿಲ್ಲ.

ಈ ಪದ ಅಥವಾ ಕಾವ್ಯ ಸ್ಥಳೀಯ ಘಟನೆಯನ್ನುಕಟ್ಟಿಕೊಡುವುದರ ಜೊತೆಗೆ ಅದರ ಆರಂಭ-ಅಂತ್ಯ ಮತ್ತು ಅಗತ್ಯವಿದ್ದಾಗ ಇಡೀ ಜಗತ್ತನ್ನೇ ಒಳಗು ಮಾಡುತ್ತಾರೆ. ಅದರ ಕಲ್ಪನೆಯ ಮೂರು ಲೋಕಗಳು ಇಲ್ಲಿ ಸಾಂದರ್ಭಿಕವಾಗಿ ಬಂದು ಹೋಗುತ್ತವೆ. ಅಂತಿಮವಾಗಿ ಈ ಕಾವ್ಯಕ್ಕೆ ಸಾರ್ವತ್ರಿಕತೆ ಅಥವಾ ವಿಶ್ವಮಾನ್ಯತೆ ಏಕೆ ಲಭ್ಯವಾಗುತ್ತದೆ ಎಂಬುದು ಬಹು ಮುಖ್ಯವಾಗಿ ಚರ್ಚಿಸಬೇಕಾದ ಸಂಗತಿ. ಇದನ್ನೇ ಒಂದು ಉದಾಹರಣೆಯ ಮೂಲಕ ಸಾಧ್ಯತೆಗಳೇನು ಎಂಬುದನ್ನು ತಿಳಿಸಬಯಸುತ್ತೇನೆ. ಮದರ್ ತೆರೆಸಾ ಎಂಬ ಓರ್ವ ಕ್ರೈಸ್ತ ಮಹಿಳೆ ೧೯೬೦ರ ದಶಕದಲ್ಲಿ ಭಾರತಕ್ಕೆ ಬಂದು ರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಕೊಳಚೆ ಪ್ರದೇಶವನ್ನು ಹೊಂದಿದ ರಾಜ್ಯವಾದ ಪಶ್ಚಿಮ ಬಂಗಾಲದ ರಾಜಧಾನಿಯೂ ಆದ ಕೊಲ್ಕತ್ತವನ್ನು ತನ್ನ ಕಾರ್ಯಸ್ಥಾನವನ್ನಾಗಿ ಆಯ್ಕೆ ಮಾಡಿಕೊಂಡು, ವಾಸಕ್ಕೆ ನೆಲೆಯಿಲ್ಲದ, ಒಂದು ಹೊತ್ತಿಗೂ ಊಟಕ್ಕಿಲ್ಲದೆ, ತಮ್ಮ ರೋಗಗಳಿಗೆ ಚಿಕಿತ್ಸೆಯಿಲ್ಲದೆ ಅನಾಥರಾಗಿ, ಭಿಕ್ಷುಕರಾಗಿ ಬೀದಿಯಲ್ಲಿ ಬದುಕಿದ್ದ ಸಾವಿರಾರು ಜನರನ್ನು ಒಂದು ಸೂರಿನಡಿಯಲ್ಲಿ ಕರೆತಂದು ನಿಮಗೂ ಒಂದು ಬದುಕಿದೆ. ನೀವುಸಹಾ ನೆಮ್ಮದಿಯಿಂದ ಸಾಯಬಹುದು ಎಂದು ಅವರ ಬದುಕಿಗೆ ಭರವಸೆಯನ್ನು ತುಂಬಿದರು. ಇದಕ್ಕಾಗಿ ಅವರು ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ನಗರದ ಬೀದಿಬೀದಿಯನ್ನು ತಿರುಗಿ ಅಲ್ಲಿ ಕಾಣಿಸಿಕೊಂಡ ಅನಾಥರನ್ನು ಕರೆತರುವುದು ದಿನಚರಿಯಾಗಿತ್ತು.

ಮದರ್ ತೆರೆಸಾ ಅವರ ಈ ಕೆಲಸ ಆರಂಭದಲ್ಲಿ ಒಂದು ಹುಚ್ಚು ಪ್ರಯತ್ನ ಎಂದು ನಕ್ಕು ವ್ಯಂಗ ಮಾಡಿರಬಹುದು. ಅವರಿಗೆ ಮಾಡಲು ಕೆಲಸವಿಲ್ಲ ಎಂದೋ ಅಥವಾ ಧರ್ಮ  ಪ್ರಚಾರ ಮಾಡಿ ಎಲ್ಲರನ್ನು ತಮ್ಮ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆ ಎಂದು ಬೊಬ್ಬೆ ಹಾಕಿದ್ದು ಉಂಟು. ಆದರೆ ಇದಾವುದನ್ನು ಕೇಳಿಯೂ ಕೇಳಿಸಿಕೊಳ್ಳದಂತೆ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರೂ ಶಾಪಗ್ರಸ್ತರು ಎಂದೇ ಕರೆಯಲ್ಪಡುವ ಕುಷ್ಟರೋಗಿಗಳ ಬಗ್ಗೆ ಅಪಾರ ಕಾಳಜಿಯನ್ನು ವಹಿಸಿದರು. ಈ ಜಗತ್ತಿನಲ್ಲಿ ಕೊರತೆಯಿದ್ದ ಮಾನವ ಪ್ರೀತಿಯನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿ ಜಗತ್ತಿಗೆ ಮಾದರಿಯಾದರು, ದಂತಕತೆಯಾದರು. ‘ಮದರ್ ತೆರೆಸಾ’ ಎಂದರೆ ‘ಮಾನವೀಯತೆ-ಮಾನವೀಯತೆ ಎಂದರೆ ಮದರ್ ತೆರೆಸಾ’ ಎನ್ನುವಷ್ಟರ ಮಟ್ಟಿಗೆ ಪರಿಚಿತರಾಗಿದ್ದಾರೆ. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿ ಎಲ್ಲೋ ಬೆಳೆದು ಯಾವುದೋ ಒಂದು ರಾಷ್ಟ್ರದಲ್ಲಿ ತನ್ನ ಸೇವೆಯನ್ನು ಸಲ್ಲಿಸುವುದರೊಂದಿಗೆ ಜಗತ್ತಿನ ಕಣ್ಣು ತೆರೆಸಿದ ತೆರೆಸಾ ಇಂದು ‘ಸಂತೆ’ ಎದ ಕರೆಸಿಕೊಂಡು ದೈವ ಸಮಾನರಾಗಿದ್ದಾರೆ. ಇದಕ್ಕೆ ಇವರಲ್ಲಿದ್ದ ಅರ್ಹತೆಯಾದರು ಏನು? ಎಂಬ ಪ್ರಶ್ನೆ ಉದ್ಭವವಾದರೆ ಅದಕ್ಕೆ ಉತ್ತರ ಉಪ್ಪಟ ಮನುಷ್ಯರಾಗಿ ಬದುಕಿದ್ದು, ತನ್ನನ್ನೇ ಈ ಮಾನವ ಕುಲಕ್ಕೆ ಸೇವೆಯ ಮೂಲಕ ಒಪ್ಪಿಸಿಕೊಂಡದ್ದು, ಜಗತ್ತಿನ ಯಾವ ಮಾತಿಗೂ ಯಾರ ಮಾತಿಗೂ ಪ್ರತಿಕ್ರಿಯಿಸದೆ ಎಲ್ಲದಕ್ಕೂ ಮೌನವಾಗಿ ಮಾನವ ಸೇವೆಯನ್ನು ಮಾಡಿದ್ದು ಯಾವ ಆಮಿಷ ಕಾಮಿಸಗಳಿಗೆ ಬಲಿಯಾಗದೆ ತಾನು ಹುಟ್ಟಿದ ಉದ್ದೇಶ ಮತ್ತು ಬದುಕಿರುವುದು ಮಾನವ ಸೇವೆಗಾಗಿಯೆ ಎಂದು ನಂಬಿ ಸಾಯುವ ಕೊನೆಯ ದಿನದವರೆಗೆ ಅದೇ ಮಂತ್ರವನ್ನು ಜಪಿಸಿದ ಮದರ್ ತೆರೆಸಾ ಕೇವಲ ಒಂದು ಧರ್ಮಕ್ಕಲ್ಲ, ಒಂದು ರಾಷ್ಟ್ರಕ್ಕಲ್ಲ! ಒಂದು ಕಾಲಕ್ಕಲ್ಲ, ಸರ್ವ ಧರ್ಮಗಳು ಸರ್ವ ಕಾಲಕ್ಕೂ ವಿಶ್ವವೇ ಸ್ಮರಿಸಬೇಕಾದ ವ್ಯಕ್ತಿತ್ವ.

ಇಂತಹ ಮಾನವ ಪ್ರೀತಿಯನ್ನೇ ಮಾದಪ್ಪ ಎಂಬ ವ್ಯಕ್ತಿ ಸುಮಾರು ಐದುನೂರು ವರ್ಷಗಳ ಹಿಂದೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅರಣ್ಯ ಪ್ರದೇಶದಲ್ಲಿದ್ದ ಕಾಡುಜನರ ಬಹಳಿಗೆ ಬಂದು ಅವರ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡಿದನು. ರೋಗ ರುಜಿನಗಳನ್ನು ಗುಣಪಡಿಸಲು ಔಷಧಿ ನೀಡಿದನು. ಅನಾಗರಿಕ ಬದುಕನ್ನು ಬದಲಿಸಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಸಲಹೆ ನೀಡಿದನು. ಅವರ ಹಿತೈಷಿಯಾದನು, ಗುರುವಾದನು, ಸರ್ವವಸ್ವವೂ ಆದನು. ಸಾವಿನ ಅನಂತರ ಆರಾಧನೆಗೆ ಪಾತ್ರನಾದನು, ದೈವವಾದನು. ಮಾನವ ಕುಲಕ್ಕೆ ಮಾನವೀಯತೆಯನ್ನು ತೋರಿ ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿದ ಮಾದಪ್ಪನು ವಿಶ್ವಮಾನ್ಯ. ಆತನ ಜೀವನ ತತ್ವವನ್ನು ಬಿತ್ತರಿಸುವ ಪದವೇ ಜನಪದರ ಬಾಯಿಂದ ಮೂಡಿಬಂದ ವರ್ಣನಾತ್ಮಕ ಕಾವ್ಯದ ಸೃಷ್ಟಿ.

ಉಪಸಂಹಾರ

ಜೀವಿಗಳು ಹುಟ್ಟುವುದು ಸಾಯುವುದು ನಿರತಂರ ಮತ್ತು ಪ್ರಕೃತಿಯ ನಿಯಮ. ಆದರೆ ತಾನು ಇರುವ ಕಾಲದಲ್ಲಿ ಸುಸಂಸ್ಕೃತರಾಗಿ, ಮಹಾಜ್ಞಾನಿಗಳಾಗಿ, ಸಮಾಜ ಸುಧಾರಕರಾಗಿ, ತ್ರಿಕಾಲ ಜ್ಞಾನಿಗಳಾಗಿ ಸಮಾಜಕ್ಕೆ ಅರಿವು ಮೂಡಿಸುವುದು ಜಾಗ್ರತರಾಗಿಸುವುದು ಅನಾದಿಕಾಲದಿಂದಲೂ ನಡೆದು ಬಂದಿರುವ ಸಾಮಾನ್ಯ ಸಂಗತಿ. ಅದೇ ಸಾಲಿನಲ್ಲಿ ಮಾದಪ್ಪ ಎಂಬ ವ್ಯಕ್ತಿಯೂ ಸಹಾ ಓರ್ವ ಸಮಾಜ ಸುಧಾರಕನಾಗಿ ಕಾಡಿನ ಜನರಿಗೆ ಬದುಕಲು ಕಲಿಸಿದ ಮಹಾಸಾಹಸಿ ಎಂದೇ ಹೇಳಬೇಕು. ಆತನ ಈ ಸಾಹಸಕ್ಕಾಗಿ ಹುಟ್ಟಿಕೊಂಡ ಉತ್ಸಾಹದ, ಹುಮ್ಮಸ್ಸಿನ ಪದವೇ ಮಾದಪ್ಪನ ಕಾವ್ಯ. ವಿದ್ವಾಂಸರ ದೃಷ್ಟಿಯಲ್ಲಿ ಜನಪದ ಮಹಾಕಾವ್ಯ.

ಜನಪದರ ಈ ಅಗಾಧ ಸಾಮರ್ಥ್ಯಕ್ಕೆ ಕಾರಣವಾದರು ಏನು? ವಿಶ್ವದ ವಿದ್ವಾಂಸರನ್ನು ಯಾಕಾದರು ವಿಸ್ಮಯಗೊಳಿಸಿದೆ, ಗೊಳಿಸುತ್ತಿದೆ ಎಂಬುದಕ್ಕೆ ನಾನು ಒಂದು ಸಣ್ಣ ಸಮಜಾಯಿಸಿಯನ್ನು ನೀಡಬಯಸುತ್ತೇನೆ. ಮಾನವ ತನ್ನ ಏಕಾಗ್ರತೆಯಿಂದ ಏನೆಲ್ಲವನ್ನು ಸಾಧಿಸಿದ್ದಾನೆ ಎಂಬುದನ್ನು ಇತಿಹಾಸ ತಿಳಿಸಿಕೊಡತ್ತದೆ. ಉದಾಹರಣೆಗೆ ಋಷಿಮುನಿಗಳು, ಸಾಧು-ಸಂತರು ಏಕಾಂತವಾಗಿ ವರ್ಷಾನುಗಟ್ಟಲೆ ತಪಸ್ಸನ್ನು ಮಾಡಿ ಅಥವಾ ಧ್ಯಾನಾಸಕ್ತರಾಗಿ ತಮ್ಮ ನಿರೀಕ್ಷಿತ ಗುರಿಯನ್ನು ತಲುಪಿದ ಅಥವಾ ಫಲವನ್ನು ಪಡೆದ ಬಗ್ಗೆ ನಾವುಗಳೆಲ್ಲರು ಕೇಳಿದ್ದೇವೆ. ಇದಕ್ಕೆ ಬುದ್ಧನನ್ನು ಹೆಸರಿಸಬಯಸುತ್ತೇನೆ.  ಅಂದರೆ ಹತ್ತು ಹಲವಾರು ಗೊಂದಲಗಳಿಲ್ಲದೆ ಒಂದೇ ಉದ್ದೇಶಕ್ಕಾಗಿ ತನ್ನ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನಿಸುವುದರ ಮೂಲಕ ಸಮಸ್ಯೆಗೆ ಉತ್ತರ ಲಭ್ಯವಾಗುತ್ತದೆ ಎಂಬುದನ್ನು ಬುದ್ಧನ ಸಂದರ್ಭದಲ್ಲಿ ನಾವು ಅರಿಯಬಹುದಾಗಿದೆ. ಹಾಗೆಯೇ ನೂರಾರು ಅಥವಾ ವಾಸಿರಾರು ವರ್ಷಗಳ ಹಿಂದಕ್ಕೆ ಹೋದರೆ ಮಾನವನಿಗೆ ಸಂಸಾರದಲ್ಲಿ ಈಗಿನಷ್ಟು ಗೊಂದಲ, ಆತಂಕ, ಸಮಸ್ಯಾತ್ಮಕವಾಗಿರಲಿಲ್ಲ. ಬದುಕು ಸಹಜವಾಗಿ ಸಾಗಿತ್ತು. ಒಂದಿಷ್ಟು ಉತ್ತಮ ಆಲೋಚನೆ ಮಾಡಲು ಕೆಲವರಿಗಾದರೂ ಸಾಧ್ಯವಾಗುತ್ತಿತ್ತು. ಅಂತಹ ಕೆಲವರಿಂದ ಜನಪದ ಕಾವ್ಯಗಳು ಹುಟ್ಟಿವೆ. ಅಂದರೆ ಈ ಪ್ರಯತ್ನವು ಕೇವಲ ಸಾಧಾರಣವಾಗಿದ್ದಾಗ ಉತ್ತಮ ಫಲ ಹೇಳಿದೆರ ತಪ್ಪಾಗಲಾರದು. ಏಕೆಂದರೆ ನಾವು ನಿತ್ಯವೂ ನೋಡುವ ಸೂರ್ಯ ನಮಗೆ ಆಯಾ ಕಾಲಕ್ಕೆ ಅನುಗುಣವಾಗಿ ಬಿಸಿಲನ್ನು ಚೆಲ್ಲುತತಾನೆ. ಅದರಿಂದ ಜಗತ್ತಿನ ಸಕಲ ಜೀವರಾಶಿಗಳು ಜೀವಂತಿಕೆಯನ್ನು ಪಡೆದುಕೊಂಡು ಮಾಮೂಲಿ ಬದುಕನ್ನು ಸಾಗಿಸುತ್ತವೆ. ಇದರಲ್ಲಿ ಯಾವುದೇ ಮಹತ್ವ ಅಥವಾ ಹೆಚ್ಚುಗಾರಿಕೆ ಇಲ್ಲ. ಇದನ್ನು ಸಹಜವೆಂದು ಸಹಜವಾಗಿ ಪರಿಗಣಿಸಿಬಿಡುತ್ತೇವೆ. ಆದರೆ ಇದೇ ಸೂರ್ಯನ ಬಿಸಿಲಿಗೆ ಒಂದು ಭೂತ ಕನ್ನಡಿಯನ್ನು ಹಿಡಿದಾಗ ಆ ಕನ್ನಡಿಯ ಮೂಲಕ ಹಾದುಹೋದ ಬಿಸಿಲು ತೀಕ್ಷ್ಣವಾಗಿ ಅತ್ಯಂತ ಹೆಚ್ಚಿನ ಶಾಖವನ್ನು ಹೊರಹೊಮ್ಮಿಸುತ್ತದೆ. ಯಾವುದೇ ಒಣಗಿದ ವಸ್ತುವನ್ನು ಸುಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಕಾರಣವೇನು? ಸೂರ್ಯನ ಸಾವಿರ ಕಿರಣಗಳು ಅಥವಾ ಬಿಸಿಲು ಭೂತ ಕನ್ನಡಿಯಿಂದ ಹೊರಹೊಮ್ಮುವ ಸಂದರ್ಭದಲ್ಲಿ ಒಂದಾಗಿ ಅಗಾದ ಶಕ್ತಿಯನ್ನು ಪಡೆದುಕೊಳ್ಳುವುದೇ ಆಗಿದೆ. ಇದೇ ತತ್ವ ನಮ್ಮ ಜನಪದರ ಮನಸ್ಸಿಗೆ ಹೋಲಿಕೆಯಾಗುತ್ತದೆ ಎಂಬುದು ನನ್ನ ನಂಬಿಕೆ.