ಮೇಲುಸಕ್ಕರೆಯರ ಒಕ್ಕಲಿಗಾಗಿ ಮುಡುಕುತೊರೆ ಸುತ್ತ

ಮಲೆ ಮಾದೇಶ್ವರ ಕಾವ್ಯದ ಸರಗೂರಯ್ಯನ ಸಾಲು ಮಾದೇಶ್ವರ ಪಂಥ ನೆಲೆಯನ್ನು ಕಂಡುಕೊಳ್ಳಲು ಎಂತಹ ಸವಾಲುಗಳನ್ನು ಎದುರಿಸಬೇಕಾಯಿತು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಇದು ಮಾದೇಶ್ವರ ಏಳುಮಲೆಯಲ್ಲಿ ನೆಲೆನಿಂತ ಮೇಲೆ ಎಣ್ಣೆ ಮಜ್ಜನ ಸೇವೆಗೆ ತಕ್ಕ ಭಕ್ತರನ್ನು ಹುಡುಕಿ ತರುವುದನ್ನು ವಿವರಿಸುತ್ತದೆ. ಜೊತೆ ಜೊತೆಗೆ ಮಾದೇಶ್ವರ ಪಂಥ ಊರ್ಜಿಥಗೊಳ್ಳುವ ಸಂದರ್ಭದಲ್ಲಿ ವೈಷ್ಣವ ಪಂಥದ ಪ್ರಭಾವ ಎಷ್ಟಿತ್ತು, ಶ್ರೀಶೈಲ ಮೈಲಾರ ಮೂಲದ ಮಲ್ಲಯ್ಯನ ಶೈವ ಪಂಥದ ಪ್ರಭಾವ ಎಷ್ಟಿತ್ತು. ಅವುಗಳ ನಡುವೆ ಮಾದೇಶ್ವರ ಹೇಗೆ ಸ್ಪರ್ಧಿಸಿ ನೆಲೆ ನಿಲ್ಲುತ್ತಾನೆ ಎಂಬುದು ವ್ಯಕ್ತವಾಗುತ್ತದೆ. ಕಾವ್ಯದಲ್ಲಿ ಉಲ್ಲೇಖವಾಗುವಂತೆ ಮೈಸೂರು ಮೇಲ್ನಾಡಿಗೆ ಹೋಗುತ್ತೇನೆ, ಅಲ್ಲಿ ನನ್ನ ಸರಿಸಮನಾದ ದೇವ್ರಿದ್ದಾರೆ, ಅವರು ಯಾರು ಅಂದ್ರೆ ಮುಡುಕುತೊರೆ ಮಲ್ಲಿಕಾರ್ಜುನ, ಬಿಳಿಗರಿರಂಗ ಸ್ವಾಮಿ, ಮೇಲುಕೋಟೆ ಚೆಲುವನಾರಾಯಣ, ಪಟ್ನದ ಪಟ್ಟದ ರಂಗಸ್ವಾಮಿ, ಇವರುಗಳ ಒಕ್ಕಲಲ್ಲಿ ಒಂದು ಒಕ್ಕಲ ಪಡೆದು ತರುತ್ತೇನೆ ಎನ್ನುತ್ತಾನೆ ಮಾದೇಶ್ವರ. ಅಂದರೆ ಆ ವೇಳೆಗಾಗಲೆ ಈ ಭಾಗದಲ್ಲಿ ಶ್ರೀಶೈಲ ಮೂಲದ ಮುಡುಕು ತೊರೆ ಮಲ್ಲಯ್ಯನ ಶೈವ ಪಂಥ, ಬಿಳಿಗಿರಂಗನ ಬೆಟ್ಟ, ಮೇಲುಕೋಟೆ ನಾರಾಯಣ ಪ್ರಧಾನ ವೈಷ್ಣವ ಪಂಥಗಳು ಅಸ್ತಿತ್ವದಲ್ಲಿದ್ದವು. ಈ ಪಂಥಗಳ ಜೊತೆ ಅಥವಾ ನಡುವೆ ಹೋರಾಡಿ, ಸಮನ್ವಯತೆ, ಸೌಹಾರ್ದತೆ ಬೆಳೆಸಿ ತಾನೂ ಒಂದು ನೆಲೆ ಕಂಡುಕೊಳ್ಳುವುದನ್ನು ಈಸಾಲು ಅಭಿವ್ಯಕ್ತಿಸುತ್ತದೆ.

ಮೈಸೂರು ಪ್ರಾಂತ್ಯದ ಗಂಗರ ರಾಜಧಾನಿಯಾಗಿದ್ದ ತಲಕಾಡು ಕಾವೇರಿ ನದಿಯ ದಡದಲ್ಲಿದೆ. ಇಲ್ಲಿಗೆ ಸಮೀಪ ನದಿ ದಂಡೆಯಲ್ಲೆ ದಕ್ಷಿಣ ಕರ್ನಾಟಕದ ಕೈಲಾಸವೆಂದು ಹೆಸರಾದ ಮಲ್ಲಯ್ಯ ಅಥವಾ ಮಲ್ಲಿಕಾರ್ಜುನನ ನೆಲೆಯಾದ ಮುಡುಕುತೊರೆ ಬೆಟ್ಟವಿದೆ. ವಾಸ್ತವವಾಗಿ ಇದು ಶ್ರೀಶೈಲ – ಮೈಲಾರ ಮೂಲದ ಒಂದು ಶೈವ ಕೇಂದ್ರ. ಇಲ್ಲಿನ ಮಲ್ಲಯ್ಯನ ಬಳಿ ಒಕ್ಕಲು ಪಡೆಯ ಮಾದೇಶ್ವರ ಇಲ್ಲಿಗೆ ಬರುತ್ತಾನೆ. ಮಲೆ ಮಾದೇಶ್ವರ ಕಾವ್ಯದ ಉಲ್ಲೇಖಕ್ಕೆ ಪೂರಕವಾಗಿ ಈ ಪ್ರಾಂತ್ಯಗಳ ಸಾಂಸ್ಕೃತಿಕ ಹಾಗೂ ಜನಪದ ನಂಬಿಕೆಗಳು ಸಹ ಈ ಪ್ರಸಂಗವನ್ನು ಪುಷ್ಟೀಕರಿಸುತ್ತವೆ. ಜೊತೆಗೆ ಮಾದೇಶ್ವರ ತನ್ನ ಸಮಕಾಲೀನ ಪಂಥ ಮತ್ತು ಸಂತರಿಗಿಂತ ಹೇಗೆ ಪ್ರಭಾವಿಯಾಗಿದ್ದನೆಂಬುದಕ್ಕೆ ಕಾವ್ಯದಲ್ಲಿ ಕೆಲವು ಸಾಂಕೇತಿಕ ಘಟನೆಗಳ ಉಲ್ಲೇಖಗಳಿವೆ. ಈಗಾಗಲೇ ಬೇರೆ ಪಂಥಗಳ ಒಕ್ಕಲಾಗಿರುವವರನ್ನು ತಾನು ಒಕ್ಕಲಾಗಿಸಿಕೊಳ್ಳಲು ಬರುತ್ತಾನೆ. ಮತ್ತೆ ಮಲ್ಲಯ್ಯನನ್ನು ತನ್ನ ಸರೀಕನೆಂದುಕೊಳ್ಳುತ್ತಾನೆ ಮಾದೇಶ್ವರ. ಇದು ಅವನಿಗಿದ್ದ ಒಂದು ರೀತಿಯ ಸವಾಲು ಮತ್ತು ಸಂದಿಗ್ಧತೆ. ಮಲ್ಲಯ್ಯನನ್ನು ಕಾಣಲು ಬಂದಾಗ ಆತ ಹೆಂಡತಿ ಪಾರ್ವತಿ ಜೊತೆ ಪಗಡೆ ಆಡುತ್ತಿರುತ್ತಾನೆ. ತನ್ನ ತಪಸ್ಸಿನ ಮೂಲಕ ಅವರೇ ತನ್ನ ಬಳಿ ಬರುವಂತೆ ಮಾಡುತ್ತಾನೆ. ಬೆಟ್ಟದ ತಪ್ಪಲಿನ ಕಾವೇರಿ ದಡದಲ್ಲಿ ಮಾದೇಶ್ವರ ತಪಸ್ಸಿಗೆ ಕೂರುವ ವಿವರ ಹೀಗೆ: ಹುಲ್ಲೆಚರ್ಮ ಹಾಸಿ, ಹುಲಿಚರ್ಮ ಉಟ್ಟು, ವಿಭೂತಿಗಟ್ಟಿ ಇಟ್ಟು, ಎಲೆ ಅಡಿಕೆ ಇಟ್ಟು, ಅದರ ಮೇಲೊಂದು ನಿಂಬೆಹಣ್ಣಿಟ್ಟು, ಅದರ ಮೇಲೆ ಸೂಜಿ ನಿಲ್ಲಿಸಿ, ಆ ಸೂಜಿ ಮೊನೆಯ ಮೇಲೆ ಮಾದೇಶ್ವರ ಒಂಟಿಕಾಲಲ್ಲಿ ನಿಂತು ಉಗ್ರ ತಪಸ್ಸು ಮಾಡುತ್ತಾನೆ. ಒಂಟಿ ಕಾಲಿನ ಈ ತಪಸ್ಸಿನ ರೀತಿ ಗಮನಾರ್ಹವಾದುದು. ಇದು ಆರೂಢ, ಅವಧೂತ, ನಾಥ, ಸೂಫಿ, ಶೈವ ಸಿದ್ಧರ ತಪಸ್ಸಿನ ಕ್ರಮ ಮತ್ತು ಲಕ್ಷಣ. ಮಾದೇಶ್ವರನ ಒಂಟಿಕಾಲ ತಪಸ್ಸು ಮಲ್ಲಯ್ಯ ಪಾರ್ವತಿಯರ ಪಗಡೆಕಾಯಿ ಸಿಡಿದು ಬೀಳುವುದು, ಅವರಿಗಿಂತಲೂ ಪ್ರಭಾವಿ ಶರಣನ ಆಗಮನವನ್ನು ಸೂಚಿಸುತ್ತದೆ. ತಕ್ಷಣ ಅವರು ಮಾದೇಶ್ವರನ ‘ಬಳಿಬಂದು ಏನೇ ಬೇಡಿಕೆ ಇದ್ದರೂ ಈಡೇರಿಸುವ ಭರವಸೆ ಕೊಟ್ಟು ತಪಸ್ಸು ಕೈಬಿಡುವಂತೆ ಪ್ರಾರ್ಥಿಸುತ್ತಾರೆ.’

ಆಗ ಮಾದೇಶ್ವರ ಹೇಳುತ್ತಾನೆ. ‘ನಿನ್ನ ಒಕ್ಕಲಲ್ಲಿ ನಿಜಶರಣರಾಗಿರುವವರನ್ನು ಎಣ್ಣೆ ಮಜ್ಜನ ಸೇವೆಗೆ ನನಗೆ ಒಕ್ಕಲಾಗಿ ಕೊಡು’ ಎಂದು. ಆಗ ಮಲ್ಲಯ್ಯ ಹೇಳುವುದು ‘ಅಷ್ಟೊಂದು ಉತ್ತಮರು ಬೇಕೆಂದರೆ ನೀನು ಆದಿಕಲ್ಯಾಣಕ್ಕೆ ಹೋಗು ಬೇಕಾದ ಶರಣರು ಸಿಗುತ್ತಾರೆ’ ಎಂದು. ಅದಕ್ಕೆ ಮಾದೇಶ್ವರ ‘ಅಯ್ಯಾ ಮಲ್ಲಯ್ಯ ಅವರು ನಮಗಿಂತ ದೊಡ್ಡ ಶರಣರು’ ಎನ್ನುತ್ತಾನೆ. ಅಂದರೆ ನಿಜಶರಣರು ಇರುವುದು ಆದಿಕಲ್ಯಾಣದಲ್ಲಿ ಎಂಬುದನ್ನು ಹಾಗೂ ಕಲ್ಯಾಣ ಶರಣ ಪರಂಪರೆ ತನಗಿಂತಲೂ ಹಿರಿಯದು, ದೊಡ್ಡದು ಹಾಗೂ ಪ್ರಭಾವೀ ಪಂಥ ಎಂಬುದನ್ನು ಕಾವ್ಯ ಗ್ರಹಿಸಿದೆ. ಕೊನೆಗೆ ಮಲ್ಲಯ್ಯ ಮತ್ತು ಬಿಳಿಗಿರಿರಂಗ ಸ್ವಾಮಿಗಳಿಬ್ಬರೂ ಸೇರಿ ಸರಗೂರು ರಾಮವ್ವೆ, ಮೂಗಪ್ಪ ಶರಣರು ನಿನಗೆ ಸೂಕ್ತ, ಅವರ ಒಕ್ಕಲು ಪಡೆದುಕೋ ಎಂದು ಸೂಚಿಸುತ್ತಾರೆ. ಆದರೆ ರಾಮವ್ವ, ಮೂಗಪ್ಪ ಮಾದೇಶ್ವರನಿಗೆ  ಒಕ್ಕಲಾಗಲು ಒಪ್ಪುವುದಿಲ್ಲ. ಆಗ ಮಾದೇಶ್ವರ ಪವಾಡಗಳನ್ನು ಸೃಷ್ಟಿಸಿ ಅವರೇ ಒಕ್ಕಲಾಗಲು ಒಪ್ಪುವಂತೆ ಮಾಡುತ್ತಾನೆ. ಮದುಮಗನಾಗಿದ್ದ ಮೂಗಪ್ಪ ಹಾವು ಕಡಿದು ಸಾಯುವಂತೆ ಮಾಡುತ್ತಾನೆ. ಆಗ ರಾಮವ್ವೆ ತನ್ನ ಮನೆದೇವರು, ಕುಲದೇವರು ಬಿಟ್ಟರೂ ಸರಿ ಪರದೇವರಿಗೆ ಒಕ್ಕಲಾದರೂ ಸರಿ, ನನ್ನ ಮಗನ ಜೀವ ಉಳಿಸಿದವರಿಗೆ ಒಕ್ಕಲಾಗುವೆ ಎಂದು ನಿರ್ಧರಿಸುತ್ತಾಳೆ. ಆಗ ಮಾದೇಶ್ವರ, ಮಲ್ಲಯ್ಯ, ರಂಗಯ್ಯರಿಗೆ ಮೂಗಪ್ಪನನ್ನು ಬದುಕಿಸಿಕೊಳ್ಳಿರಿ ಎಂದು ಹೇಳುತ್ತಾರೆ. ಆಗ ಅವರು ನೀನೇ ಬದುಕಿಸಿ ಒಕ್ಕಲು ಮಾಡಿಕೊಳ್ಳುವಂತೆ ಹೇಳುತ್ತಾರೆ. ಆಗ ಮಾದೇಶ್ವರ ಮೂಗಪ್ಪನನ್ನು ಬದುಕಿಸುತ್ತಾನೆ. ಕೊಟ್ಟ ಮಾತಿನಂತೆ ರಾಮವ್ವ-ಮೂಗಪ್ಪ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆಗೆ ಒಕ್ಕಲಾಗುತ್ತಾರೆ.

ಮಾದೇಶ್ವರ ರಾಮವ್ವ, ಮೂಗಪ್ಪರನ್ನು ತನ್ನ ಒಕ್ಕಲಾಗಿಸಿಕೊಳ್ಳುವಾಗ ಮಲ್ಲಯ್ಯ, ರಂಗಯ್ಯರು ಸುಮ್ಮನಿರುತ್ತಾರೆ. ಅಡ್ಡಿಪಡಿಸುವುದಿಲ್ಲ. ಹಾವು ಕಡಿದು ಸಾಯುವವನನ್ನೂ ಸಹ ಮಾದೇಶ್ವರ ಬದುಕಿಸಿಕೊಳ್ಳಿ ಎಂದಾಗಲೂ ಅವರನ್ನು ನೀನೇ ಒಕ್ಕಾಲಾಗಿಸಿಕೊ ಎನ್ನುತ್ತಾರೆ. ತಪಸ್ಸುನಿರತ ಮಾದೇಶ್ವರನ ಬಳಿ ಬಂದು ಬೇಡಿಕೆ ಈಡೇರಿಸುವಂತೆ ವಿನಂತಿಸುತ್ತಾರೆ. ಇವುಗಳೆಲ್ಲವು ಸಮಕಾಲೀನ ಪಂಥಗಳ ಸಂದರ್ಭದಲ್ಲಿ ಮಾದೇಶ್ವರ ಎಷ್ಟು ಪ್ರಬಾವಿಯಾಗಿದ್ದ, ಜನಪ್ರಿಯತೆ ಗಳಿಸಿದ್ದನೆಂಬುದನ್ನು ಸೂಚ್ಯವಾಗಿ ಹೇಳುತ್ತವೆ. ಬಹಳ ಮುಖ್ಯವಾಗಿ ಮಲ್ಲಯ್ಯ ತುಂಬಾ ಸುಲಭವಾಗಿ ತನ್ನ ಒಕ್ಕಲನ್ನು ಮಾದೇಶ್ವರನಿಗೆ ಬಿಟ್ಟುಕೊಡುವುದು. ಹಾಗೂ ಅತ್ಯಂತ ಆತ್ಮೀಯ ಗೆಳೆಯ ಎಂಬಂತೆ ಪರಸ್ಪರ ಇಬ್ಬರೂ ನಡೆದುಕೊಳ್ಳುವುದು. ಸ್ವತಃ ಮಲ್ಲಯ್ಯ, ಪಾರ್ವತಿ ರಂಗಸ್ವಾಮಿ ಮಾದೇಶ್ವರನ ಏಳಿಗೆಗೆ ಸಹಕರಿಸುವುದು ಈ ಪಂಥಗಳ ನಡುವಿನ ಸೌಹಾರ್ದತೆ, ಸಹಬಾಳ್ವೆ, ಸಮನ್ವಯತೆಗಳನ್ನು ಸೂಚಿಸುತ್ತವೆ. ಬಹಳ ಮುಖ್ಯವಾಗಿ ಮಾದೇಶ್ವರನ ಈ ಏಳಿಗೆಗೆ ಸಹಕಾರಕ್ಕೆ ಕಾರಣ ಈತನೂ ಸಹ ಶ್ರೀಶೈಲ ಮೂಲದ ಶೈವ ಸಿದ್ಧ ಪಂಥದ ಪ್ರತಿಪಾದಕ ಎಂಬುದು, ಮುಡುಕು ತೊರೆ ಮಲ್ಲಯ್ಯ ಸಹ ಶ್ರೀಶೈಲ-ಮೈಲಾರ ಮೂಲದ ಶೈವ ಪಂಥದವ. ಮಾದೇಶ್ವರ ಇದೇ ಶ್ರೀಶೈಲ ಮೈಲಾರ ಮೂಲದ ಶೈವ ಪಂಥದ ಮುಂದುವರಿಕೆಯಾಗಿರುವುದರಿಂದ ಇಂತಹ ಒಂದು ಸಾಮರಸ್ಯ, ಸಮನ್ವಯತೆಯನ್ನು ಕಾಣಲಾಗುತ್ತದೆ. ಆದರೆ ಮಾದೇಶ್ವರ ಪಂಥಕ್ಕೆ ಬಿಳಿಗಿರಿ ರಂಗಸ್ವಾಮಿಯ ವೈಷ್ಣವ ಪಂಥದ ಜೊತೆಗೆ ಸಂಘರ್ಷ ಬೇಧವಿದ್ದಿರಬಹುದು.

ಸರಗೂರಯ್ಯನ ಸಾಲಿನಲ್ಲಿ ಕಾವ್ಯದುದ್ದಕ್ಕೂ ರಾಮವ್ವ, ಮೂಗಪ್ಪನ ಒಕ್ಕಲು ಪಡೆಯಲು ಮಾದೇಶ್ವರ ಹಠಕ್ಕೆ ಬೀಳುತ್ತಾನೆ. ಬೇರೊಬ್ಬರ ಒಕ್ಕಲಾಗಿದ್ದವರನ್ನು ತನ್ನ ಒಕ್ಕಲು ಮಾಡಿಕೊಳ್ಳುವಲ್ಲಿ ಮಾದೇಶ್ವರ ತೋರುವ ಹಠ ಮಾದೇಶ್ವರ ಪಂಥ ನೆಲೆ ಕಂಡುಕೊಳ್ಳುವಲ್ಲಿ ಹಠ ಬಿಡದೆ ಹೋರಾಡಿ ಗೆಲ್ಲುವುದರ ಸೂಚನೆ ಕೂಡ ಆಗಿದೆ. ಕಾವ್ಯದಲ್ಲಿ ಚಿತ್ರಿಸುವಂತೆ ರಾಮವ್ವ ಮೂಗಪ್ಪ ತುಂಬಾ ಕೊಳಕು. ಜಾತಿಯಲ್ಲಿ ಉಪ್ಪಲಿಗರು. ಉಪ್ಪು ಮಾಡುವ ಕಾಯಕದ, ಮೀನು ಮಿಡತೆ ತಿನ್ನುವ ಚೊಂಗು ವಾಸನೆಯ ಜನ. ಆದರೆ ಆತ್ಮಶುದ್ಧಿಯ, ಅಂತರಂಗ ಶುದ್ಧಿಯ ಜನ. ಇಂತಹ ಹಿಂದುಳಿದ ಕೊಳಕು ಜನರನ್ನು ಬಿಡದೆ ಒಕ್ಕಲು ಪಡೆವ ಮಾದೇಶ್ವರ ತಾನೊಬ್ಬ ಸಮಾಜದ ಅತ್ಯಂತ ಕಟ್ಟಕಡೆಯ, ಕೊಳಕು, ಅಸ್ಪೃಶ್ಯ ಎನಿಸಿದ ಮನುಷ್ಯನ ಪರವಾದವನು ಎಂಬುದನ್ನು ತೋರಿಸುತ್ತಾನೆ.

ಸರಗೂರಯ್ಯನ ಸಾಲಿನಲ್ಲಿ ಉಲ್ಲೇಖವಾಗುವ ಹಲವು ಘಟನೆಗಳು ಮೈಸೂರು ಸೀಮೆಯ ಭೌಗೋಳಿಕ ಪರಿಸರದಲ್ಲಿ ಸಾಂಸ್ಕೃತಿಕ ವಾಸ್ತವಗಳಾಗಿ, ಚಾರಿತ್ರಿಕ ಎಂಬಂತೆ ಹೆಗ್ಗುರುತುಗಳಾಗಿ ಉಳಿದುಕೊಂಡಿವೆ. ಇಂತಹ ಚಾರಿತ್ರಿಕ, ಸಾಂಸ್ಕೃತಿಕ ಗುರುತಗಳನ್ನು  ಕ್ಷೇತ್ರಕಾರ್ಯ ಸಂದರ್ಭದಲ್ಲಿ ಗಮನಿಸಲಾಗಿದೆ. ಕಾವ್ಯದಲ್ಲಿ ಉಲ್ಲೇಖವಾಗುವಂತೆ ಸರಗೂರ ರಾಮವ್ವ ಮೂಗಪ್ಪರನ್ನು ಒಕ್ಕಲು ಪಡೆಯಲು ಮಾದೇಶ್ವರ, ಮಲ್ಲಯ್ಯನನ್ನು ಕಾಣಲು ಮುಡುಕುತೊರೆ ಬೆಟ್ಟಕ್ಕೆ ಬರುತ್ತಾನೆ. ಬೆಟ್ಟದ ಮೇಲಿರುವ ದೇವಸ್ಥಾನದ ಬಲಭಾಗದ ಬಾಗಿಲ ಬಳಿ ಮಾದೇಶ್ವರನ ಪಾದದ ಗುರುತುಗಳುಳ್ಳ ಗದ್ದಿಗೆ ಇದೆ. ಇದು ಮಾದೇಶ್ವರನ ಮುಡುಕುತೊರೆ ಬೇಟೆಗೆ ಸಾಂಕೇತಿಕವಾದ ಸಾಕ್ಷ್ಯಾಧಾರವೆಂದು ಮುಡುಕುತೊರೆ ಅರ್ಚಕರಾದ ನಟರಾಜಮೂರ್ತಿ, ನಾಗರಾಜಪ್ಪ, ಮೂರ್ತಪ್ಪ ಹೇಳುತ್ತಾರೆ. ರಾಮವ್ವ ವಂಶಸ್ಥರಾದ ಅಯ್ಯನವರ ಹುಂಡಿಯ ಪುಟ್ಟ ರಾಮಪ್ಪ ಸಹ ಈ ಮಾತನ್ನು ದೃಢಪಡಿಸುತ್ತಾರೆ.

ಮುಡುಕುತೊರೆ ಬೆಟ್ಟ ಹಾಗೂ ಕಾವೇರಿ ನದಿ ದಡದಲ್ಲೇ ಮಾದೇಶ್ವರನ ಭೇಟಿಯ ಸಂಕೇತವಾಗಿ ಒಂದು ಮಾದೇಶ್ವರ ದೇವಸ್ಥಾನ ಕೂಡ ಇದೆ. ರಾಮವ್ವ, ಮೂಗಪ್ಪ ಈ ದೇವಸ್ಥಾನ ಮತ್ತು ಮುಡುಕುತೊರೆಗೂ ಸಮೀಪದ ಊರಿನವರು. ಮಂಡ್ಯ ಜಿಲ್ಲೆ ಮಳವಳ್ಳಿ ತಾ. ಬೊಪ್ಪೇಗೌಡನಪುರ ಹೋಬಳಿಯ ಅಯ್ಯನವರ ಹುಂಡಿ ಅಥವಾ ಅಯ್ಯನ ಸರಗೂರು ಎಂಬುದು ಈ ಶರಣರ ಊರು. ಇದನ್ನೆ ಕಾವ್ಯದಲ್ಲಿ ಸರಗೂರ ಮಠ ಎಂದು ಉಲ್ಲೇಖಿಸಲಾಗುತ್ತದೆ.

ಅಯ್ಯನವುರ ಹುಂಡಿ ಗ್ರಾಮದಲ್ಲಿ ರಾಮವ್ವ, ಮೂಗಪ್ಪನ ವಂಶಸ್ಥರು ಇಂದಿಗೂ ಇದ್ದಾರೆ. ಮೂಗಪ್ಪನಿಗೆ ದೊಡ್ಡದಾಸಪ್ಪ, ವೃಂದಾವನಸ್ವಾಮಿ, ಚಿಕ್ಕಸ್ವಾಮಿ ಎಂಬ ಮೂರು ಜನ ಮಕ್ಕಳಿದ್ದರು. ಈ ಮೂವರ ಮುರು ಮನೆತನಗಳು ಇಂದಿಗೂ ಇವೆ. ರಾಮವ್ವ ಮೂಲತಃ ಟಿ. ನರಸೀಪುರ ತಾಲೂಕು ಕುರುಬೂರು ಕೊತ್ತೇಗಾಲದ ಬಲ್ಲಮ್ಮನ ಮಗಳು. ಇವಳು ಮುಡುಕುತೊರೆ ಮಲ್ಲಯ್ಯನ ಒಕ್ಕಲಾಗಿದ್ದಳು. ಇವಳನ್ನು ಸರಗೂರ ಉಪ್ಪಲಿಗರು ಸೊಸೆಯಾಗಿ ತಂದರು. ಇವಳ ಮಗ ಮೂಗಪ್ಪ, ಈತನ ತಂದೆ ಬಿಳಿಗಿರಿ ರಂಗಸ್ವಾಮಿ ಒಕ್ಕಲು. ಹೀಗಾಗಿ ರಾಮವ್ವ ಮೂಗಪ್ಪ ಶೈವ ವೈಷ್ಣವ ಪಂಥಗಳಿಗೆ ಸೇರಿದವರು ಎಂಬುದಾಗಿ ನೀಲಗಾರ ಕುಂತೂರು ಕಾಳಶೆಟ್ಟಿ, ಅಯ್ಯನವರ ಹುಂಡಿಯ ಪುಟ್ಟರಾಮಪ್ಪ, ಗೋವಿಂದ ಸ್ವಾಮಿ ಹೇಳುತ್ತಾರೆ. ಜೀ.ಶಂ.ಪ. ಅವರ ಕುಕ್ಕರಹಳ್ಳಿಯ ಮರಿಯಯ್ಯ ಹಾಡಿರುವ ಕಾವ್ಯ ಪ್ರಕಾರ ರಾಮವ್ವ ಮೂಗಪ್ಪ ತಾಯಿ ಮಗ. ಅನೇಕ ಹಳೇ ಪಠ್ಯಗಳಲ್ಲಿ ಹೀಗೆ ಇದೆ. ಆದರೆ ನಂತರ ಕೆಲವು ಕಾವ್ಯಗಳಲ್ಲಿ ಇವರನ್ನು ಗಂಡ ಹೆಂಡತಿಯರಂತೆ ಚಿತ್ರಿಸಲಾಗಿದೆ. ಒಟ್ಟಾರೆ ಇವರು ಉಪ್ಪಾರ ಜನಾಂಗದವರಾಗಿದ್ದು ಚಾರಿತ್ರಿಕವಾಗಿ ಬದುಕಿದ್ದವರು. ಮಲೆಮಾದೇಶ್ವರನಿಗೆ ಬೆಟ್ಟದಲ್ಲಿ ಎಣ್ಣೆ ಮಜ್ಜನ ಸೇವೆ ನಡೆಸುತ್ತಾ ಬಂದವರು. ದೇವಚಂದ್ರ ತನ್ನ ರಾಜಾವಳಿ ಕಥಾಸಾರದಲ್ಲಿ ಇವರ ಬಗ್ಗೆ ಉಲ್ಲೇಖಿಸುತ್ತಾನೆ. “ಸರಗೂರ ಉಪ್ಪಲಿಗರು ಗುಡ್ಡರಾಗಿ ಆವೇಶ ಬಂದು ಏಳುಮಲೆ ಮಧ್ಯದಲ್ಲಿ ಪಶ್ಚಿಮಾಭಿಮುಕವಾಗಿ ಗುಡು ಕಟ್ಟಿಸಿ ಮಾದನಾದುದರಿಂದ ಮಾದೇಶ್ವರನೆಂದು ಹೆಸರಿಟ್ಟರು. ಈ ಮಾದೇಶ್ವರನನ್ನು ಅನೇಕ ರೀತಿಯಿಂದ ಪೂಜಿಸುತ್ತಾ ಬಂದು ಜಗತ್ಪ್ರಸಿದ್ಧಿಯಾಯಿತು. ಸರಗೂರು ಗುಡ್ಡನೇ ಅಲ್ಲಿದ್ದು ಜಾತ್ರೆ, ತೇರು ತಿರುನಾಳೆಂದು ವರ್ಷಂಪ್ರತಿ ನಡೆಸುತ್ತಾ ಬಂದನು. ಬಹುದೇಶದ ಜನರೆಲ್ಲಾ ಮರುಳಾಗಿ ಕಾಣಿಕೆ ಕಪ್ಪವನ್ನು ಕೊಡುತ್ತಾ ಬಂದರು.’’[1] ಆದರೆ ಆಲಂಬಾಡಿಯ ಜುಂಜೇಗೌಡ ಮಾದೇಶ್ವರನಿಗೆ ದೇವಾಲಯ ಗುಡಿಗೋಪುರಗಳನ್ನು ಕಟ್ಟಿಸಿದನೆಂದು ಜನಪದಕಾವ್ಯ ಚರಿತ್ರೆ ಮತ್ತು ಐತಿಹ್ಯಗಳಿರುವುದು ಗಮನಾರ್ಹ.

ಮುಡುಕುತೊರೆ ಬೆಟ್ಟಕ್ಕೂ, ಮೂಗಪ್ಪರಾಮವ್ವ ಊರಾದ ಅಯ್ಯನವರ ಹುಡಿಗೂ ಮಧ್ಯ ಇರುವ ಮಾದೇಶ್ವರ ದೇವಸ್ಥಾನವಿರುವ ತೋಪನ್ನು ಅಯ್ಯನ ಸರಗೂರುತೋಪು ಎಂದು ಕರೆಯುತ್ತಾರೆ. ಈ ತೋಪಿನ ಮಾದೇಶ್ವರ ದೇವಸ್ಥಾನದ ಸಮೀಪ ರಾಮಾಂಬಿಕೆ, ಶಂಕ್ರಪ್ರಿಯ ಎಂಬ ಹೆಸರಿನ ದೇವರ ಗುಡಿಗಳಿವೆ. ಇವುಗಳ ಸಮೀಪವೆ ಕೆಲವು ಗುಡಿಗಳು, ಮಂಟಪಗಳು, ಸಮಾಧಿ ಸ್ಥಳಗಳಿವೆ. ರಾಮವ್ವ ಮೂಗಪ್ಪನವರು ಮಾದೇಶ್ವರನ ಎಣ್ಣೆ ಮಜ್ಜನ ಸೇವೆಗೆ ಒಕ್ಕಲಾಗಿದ್ದ ಚಾರಿತ್ರಿಕ ವ್ಯಕ್ತಿಗಳು. ಇವರು ಕಾಲವಾದ ಮೇಲೆ  ಇವರನ್ನು ಸರಗೂರುತೋಪಿನ ಮಾದೇಶ್ವರ ದೇವಸ್ಥಾನದ ಪಕ್ಕದಲ್ಲೇ ಸಮಾಧಿ ಮಾಡಲಾಯಿತು. ಇಂದು ರಾಮಾಂಬಿಕ, ಶಂಕರಪ್ರಿಯ ಎಂದು ದೇವಸ್ಥಾನಗಳಾಗಿರುವ ಗುಡಿಗಳು ರಾಮವ್ವ ಮೂಗಪ್ಪನವರ ಸಮಾಧಿಗಳಾಗಿವೆ. ಇವುಗಳ ಸಮೀಪವಿರುವ ಮಂಟಪ, ಗುಡಿ ಮಾದರಿಯ ಸಮಾಧಿಗಳು ಇವರ ಮಕ್ಕಳು ಮತ್ತು ವಂಶಸ್ಥರಾದ ದೊಡ್ಡ ದಾಸಪ್ಪ, ವೃಂದಾವನಸ್ವಾಮಿ,  ಚಿಕ್ಕಸ್ವಾಮಿಯವರುಗಳ ಸಮಾಧಿಗಳು ಎಂಬುದಾಗಿ ರಾಮವ್ವ ಮೂಗಪ್ಪನ ವಂಶಸ್ಥರಾದ ಅಯ್ಯನವರ ಹುಂಡಿಯ ಪುಟ್ಟರಾಮಪ್ಪ, ಗೋವಿಂದಸ್ವಾಮಿ ಹೇಳುತ್ತಾರೆ. ಇಂದು ರಾಮಾಂಬಿಕ, ಶಂಕರಪ್ರಿಯ ದೇವಸ್ಥಾನಗಳು ಮತ್ತು ಮಾದೇಶ್ವರ ದೇವಸ್ಥಾನಗಳನ್ನು ಪೂಜಿಸುವ ಅರ್ಚಕರುಗಳಾದ ಚಂದ್ರಶೇಖರ ಮೂರ್ತಿ ಮತ್ತು ಕುಮಾರ ಸ್ವಾಮಿಯವರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.’’[2]

ಮಲೇ ಮಾದೇಶ್ವರ ಬೆಟ್ಟದಲ್ಲಿ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಮಾಡುವ ಸಾಂಸ್ಕೃತಿಕ ಹಕ್ಕು ರಾಮವ್ವ ಮೂಗಪ್ಪನವರ ವಂಶಸ್ಥರದು. ಅದು ಬಹುಕಾಲ ನಡೆದು ಬಂತು. ಅದೇ ರೀತಿ ಮುಡುಕುತೊರೆ ಸಮೀಪದ ಸರಗೂರು ತೋಪಿನ ಮಾದೇಶ್ವರ ದೇವಸ್ಥಾನದ ಪೂಜೆಯ ಹಕ್ಕು, ರಾಮವ್ವ, ಮೂಗಪ್ಪನವರ ಗುಡಿಗಳ ಪೂಜೆಯ ಹಕ್ಕುಗಳು ಸರಗೂರು ಮೂಗಪ್ಪನವರ ವಂಶಸ್ಥರಿಗೆ ಸೇರಿತ್ತು. ಆದರೆ ಕಾಲಾನಂತರದಲ್ಲಿ ಮುಜರಾಯಿ ಕಾನೂನುಗಳು ಜಾರಿಯಾಗಿ, ರಾಮವ್ವ ವಂಶಸ್ಥರ ದಾಯಾದಿ ಕಲಹಗಳಿಂದಾಗಿ ಈ ಎರಡು ಕಡೆಗಳಲ್ಲಿ ಇಂದು ಸರಗೂರು ಉಪ್ಪಲಿಗರು ತಮ್ಮ ವಂಶಪಾರಂಪರರ್ಯವಾಗಿ ಬಂದಿದ್ದ ಸಾಂಸ್ಕೃತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಈ ವಿಷಯ ನ್ಯಾಯಾಲಯದ ಕಟಕಟೆ ಹತ್ತಿದೆ.

ಪಾದದರೆಗೂ – ಕುಂತೂರು ಬೆಟ್ಟಕ್ಕು ಆಗುವ ಚಮ್ಮಾಳಿಗೆ ಆಗಬೇಕು

ಶ್ರವಣದೊರೆ ಸಾಲು ಮಲೆ ಮಾದೇಶ್ವರ ಕಾವ್ಯದ ಬಹುಮಹತ್ವದ ಕಾವ್ಯಭಾಗ. ಇದು ಇಡೀ ಪಂಥದ ಸ್ಥಾಯಿಭಾವವಾಗಿದೆ. ಕಾವ್ಯದುದ್ದಕ್ಕೂ ನಾವು ಮಾದೇಶ್ವರ ಸದಾ ಹುಡುಕಾಡುವ, ಹೋರಾಡುವ ಕ್ರಿಯೆಗಳನ್ನು ಕಾಣುತ್ತೇವೆ. ಯಾವುದಕ್ಕಾಗಿ ಇಂತಹ ನಿರಂತರ ಚಲನೆ ಮತ್ತು ಸಂಘರ್ಷವನ್ನು ನೋಡುತ್ತೇವೆಂದರೆ ತನ್ನತನವನ್ನು ಕಂಡುಕೊಳ್ಳಲು ಮತ್ತು ಸ್ಥಾಪಿಸಲು ಈಗಾಗಲೇ ಸ್ಥಾಪಿತವಾಗಿರುವ ಮೌಲ್ಯಗಳು, ಸಂಸ್ಕೃತಿ, ನಾಯಕತ್ವ ಅಥವಾ ಪಂಥಗಳನ್ನು ಪ್ರಶ್ನಿಸುತ್ತಾ, ಪ್ರತಿಭಟಿಸುತ್ತಾ, ಅವುಗಳ ಜೊತೆ ಅನುಸಂಧಾನ ನಡೆಸುತ್ತಾ ಪರ್ಯಾಯ ತಳಸಮುದಾಯಪರ ಪಂಥದ ಸ್ಥಾಪನೆಗಾಗಿ ಬಹುಶಃ ಮಾದೇಶ್ವರನ ಕಾಲಕ್ಕೆ ಸಮಕಾಲೀನವಾಗಿದ್ದ ಮಾತೃಪ್ರಧಾನ ಹಾಗೂ ವೈಷ್ಣವ, ಜೈನ ಪಂಥಗಳಲ್ಲಾಗಿದ್ದ ದೊಡ್ಡ ಪ್ರಮಾಣದ ಮನುಷ್ಯವಿರೋಧಿ ನಿಲುವುಗಳಂತಹ ಬಗದಲಾವಣೆಗಳಿಂದ ಮಲೆ ಮಾದಶ್ವರ ಪಂಥ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿರಬೇಕು. ಶ್ರವಣದೊರೆ ಇಂತಹ ಅಪಮೌಲ್ಯಗಳ ಪಂಥ ಪರಂಪರೆಗಳ ಸಂಕೇತವಾಗುತ್ತಾನೆ.

ಈ ಸಾಲಿನಲ್ಲಿ ಕಾವ್ಯವನ್ನು ಹೇಗೆ ಶಿಷ್ಟದೇವತೆಗಳು ಮತ್ತು ಶಿಷ್ಟ ಪುರಾಣಗಳಿಗೆ ಪ್ರತಿಯಾಗಿ ಹಾಗೂ ಪರ್ಯಾಯವಾಗಿ ಜನಪದ ಕವಿಗಳು ಸೃಷ್ಟಿಸುತ್ತಾರೆಂದರೆ, ನಾರಾಯಣ, ಬ್ರಹ್ಮ, ವಿಷ್ಣು ಮೊದಲಾದ ಶಿಷ್ಟದೇವತೆಗಳೆಲ್ಲಾ ತಮ್ಮ ಬಿಡುಗಡೆಗೆ ಪರಿಶಿಷ್ಟ ದೇವತೆಗಳನ್ನೂ ದೇವಲೋಕದಿಂದ ನರಲೋಕಕ್ಕೆ ಬರುವಂತೆ ಪೂಜಿಸುತ್ತಾರೆ. “ಸರ್ವ ಮುನ್ನೂರು ಕೋಟಿ ದೇವತೆಗಳು ಶ್ರವಣದೊರೆಯ ಸೆರೆಯಲ್ಲಿರುವಾಗ, ನವಕೋಟಿನಾರಾಯಣ ಹಚ್ಚಿದ ಕಡ್ಡೀ ಕರ್ಪೂರದ ಸಾಂಬ್ರಾಣಿಹೊಗೆ ದೇವಲೋಕಕ್ಕೆ ಅರಿವಾಯಿತು. ದೇವಲೋಕದ ದೇವಮಾನ್ಯರು ನಾಳೆ ಹನ್ನೆರಡು ಗಂಟೆಗೆ ನರಲೋಕಕ್ಕೆ ಇಳೀಬೇಕು. ಮಾದೇಶ್ವರ, ಮಂಟೇಲಿಂಗಯ್ಯ, ಕೊಂಗಳ್ಳಿಮಲ್ಲಪ್ಪ ತ್ರಿಮೂರ್ತಿಗಳು ನಾರಾಯಣನ ಮಾತಿನಂತೆ ನರಲೋಕಕ್ಕೆ ಬಂದರು.’’[3]

ಮಾದೇಶ್ವರ, ಮಂಟೇಸ್ವಾಮಿ, ಮಲ್ಲಪ್ಪ ತಳ ಸಮುದಾಯಗಳ ಜನಪದ ಮಹಾಕಾವ್ಯಗಳ ನಾಯಕರು, ಪರಿಶಿಷ್ಟ ದೇವತೆಗಳು, ಶ್ರವಣದೊರೆ ರೂಪದ ಅಪಮೌಲ್ಯಗಳ ಶಿಷ್ಟಧರ್ಮ, ಸಂಸ್ಕೃತಿ, ಪಂಥಗಳನ್ನು ಬಿಡುಗಡೆಗೊಳಿಸಲು ಎಂದರೆ ನಾಶಗೊಳಿಸಲು ಅಥವಾ ಪರ್ಯಾಯ ಮೌಲ್ಯಗಳನ್ನು ಸ್ಥಾಪಿಸಲು ಮಾದೇಶ್ವರ, ಮಂಟೇಸ್ವಾಮಿಗಳೇ ಬರಬೇಕು. ಶ್ರವಣದೊರೆಯ ಕೈಸೆರೆಯಾಗುವ ದೇವತೆಗಳು ಅಂದು ಅಪ್ರಸ್ತುತ, ಅಸಮರ್ಥ, ಅಮಾನವೀಯ, ಪ್ರಭಾವವಿಲ್ಲದ ಪಂಥಗಳ ಸಂಕೇತವಾಗಿವೆ. ಶ್ರವಣ ಮತ್ತೊಂದು ಅರ್ಥದಲ್ಲಿ ಯಾವುದೋ ಒಂದು ಅಪಮೌಲ್ಯಗೊಂಡ ಧರ್ಮ ಅಥವಾ ಪಂಥ ಒಂದನ್ನೂ ಪ್ರತಿನಿಧಿಸಬಹುದು. ಅದು ಆಶ್ಚರ್ಯಕರವಾಗಿ ಜೈನ ಪಂಥವೊ, ವೈಷ್ಣವ ಪಂಥವೊ ಆಗಿರಬಹುದು ಕೂಡ.

ಜನಪದರು ಅನೇಕ ಸಂಕೇತ ಮತ್ತು ಪ್ರತಿಮೆಗಳನ್ನು ಶಿಷ್ಟಕಾವ್ಯದಿಂದಲೂ ಎರವಲು ಪಡೆಯುತ್ತಾರೆ. ವೈದಿಕೀಕರಣಕ್ಕೆ ಒಳಗಾಗುತ್ತಾರೆ. ಅದೇ ರೀತಿ ಶಿಷ್ಟಧರ್ಮ ಮತ್ತು ದೇವತೆಗಳನ್ನು ಸಹ ಜನಪದೀಕರಿಸಿಕೊಳ್ಳುವುದನ್ನು ಮಾಡುತ್ತಾರೆ ಎಂಬುದನ್ನು ಕಾವ್ಯದಲ್ಲಿ  ಗುರುತಿಸಬಹುದು. “ಶನಿವಾರ ಸಪ್ಪಟ್ಟು ಸರಿರಾತ್ರಿ ಒಳಗೆ ಕಲ್ಲೂ ನೀರು ಕರಗುವ ಹೊತ್ತಲ್ಲಿ, ಗಂಡನಿಗೆ ಹರಿಯೋಳು ಮಂಡೋದರಿ ಬಾರಮ್ಮ ಎಂದು, ಒಂದು ಕಪ್ಪೆ ಹಿಡಿದು ಅದರ ಹೊಟ್ಟೆ ಚಕ್ಕಳದಿಂದ ಒಂದು ಬುಡಬುಡಿಕೆ ಮಾಡಿ, ಬರಿಮೈಲಿ ತಿಪ್ಪೆ ಮೇಲೆ ನಿಂತು ದೇವಲೋಕಕ್ಕೆ ಕಂಟಕ ಕಡಿದರು ಎಂಬುದಾಗಿ ಕಾವ್ಯದಲ್ಲಿ ಉಲ್ಲೇಖ ಬರುತ್ತದೆ. ತಿಪ್ಪೆ ಮತ್ತು ಕಪ್ಪೆಯ ಚಕ್ಕಳದ ಉಲ್ಲೇಖಗಳು ಮಂಟೇಸ್ವಾಮಿ ಎಮ್ಮೆಚಕ್ಕಳ ಮತ್ತು ಹರಳಯ್ಯನ ತಿಪ್ಪೆಗುಂಡಿಗಳ ಉಲ್ಲೇಖದಂತೆ. ಇವು ಇವರ ಅಸ್ಪೃಶ್ಯ ಮೂಲವನ್ನು, ದ್ರಾವಿಡದೇಶೀ ಸಂಸ್ಕೃತಿಯನ್ನು ಸಂಕೇತಿಸುತ್ತವೆ. ಅತ್ಯಂತ ನಿಕೃಷ್ಟ ಎನಿಸಿದ ಮನುಷ್ಯ ಮತ್ತು ಸಂಸ್ಕೃತಿಯನ್ನು ಶ್ರೇಷ್ಠ ಮತ್ತು ಪ್ರಧಾನವೆಂದು ಎತ್ತಿಹಿಡಿಯುವ, ಸ್ಥಾಪಿಸುವ ಆಶಯಗಳನ್ನು ಜನಪದರು ಕಾವ್ಯಗಳ ಮೂಲಕ ಮಾಡುತ್ತಾರೆ. ಇವು ಒಂದು ರೀತಿಯ ದಲಿತೀಕರಣ ಹಾಗೂ ಶಿಷ್ಟ ಸಮಾಜ ಮತ್ತು ಸಂಸ್ಕೃತಿಗೆ ಪರಿಶಿಷ್ಟರು ತೋರುವ ಪ್ರತಿಭಟನೆ ಕೂಡ.

ಮಾದೇಶ್ವರ ಬಂಕಾಪುರ ಶ್ರವಣದೊರೆಯನ್ನು ನೋಡಲು ಹೋಗುತ್ತಾನೆ. ಶ್ರವಣ ನಿನ್ನ ಹೆಸರೇನು ಎಂದು ಪ್ರಶ್ನಿಸಿದಾಗ, ಮಾದೇಶ್ವರ ತನ್ನ ಹೆಸರು ಮಾದಯ್ಯ ಎಂದು ಹೇಳುವುದನ್ನು ಶ್ರವಣ ‘ಮಾದಾರಿ’ ಎಂದು ಕೇಳಿಸಿಕೊಳ್ಳುತ್ತಾನೆ. ಏಳು ದಿನಗಳೊಳಗೆ ತನಗೊಂದು ಜೊತೆ ಚಮ್ಮಾವುಗೆ ಮಾಡಿ ತರಲು ಆಜ್ಞಾಪಿಸುತ್ತಾನೆ. ಕಾವ್ಯದಲ್ಲಿ ಹೀಗೆ ಶ್ರವಣ ಮಾದಾರಿ ಎಂದು ಕೇಳಿಸಿಕೊಳ್ಳುವುದು ಆಕಸ್ಮಿಕ ಅಲ್ಲ. ಅದು ಉದ್ದೇಶಪೂರ್ವಕ. ಮಾದೇಶ್ವರ ‘ಮಾದಿಗ’ ಎಂಬುದನ್ನು ಧ್ವನಿಸುವುದು, ಎತ್ತಿಹೇಳುವುದೇ ಇದರ ಉದ್ದೇಶ. ದೇವಚಂದ್ರ ಕೂಡ ಒಂದು ರೀತಿಯ ತಿರಸ್ಕಾರದ ಧ್ವನಿಯಿಂದಲೇ ಮಾದೇಶ್ವರ ಮಾದಿಗರ ಹುಡುಗ ಎಂದು ದಾಖಲಿಸಿದಂತೆ ಅನ್ನಿಸುತ್ತದೆ.

ಮಾದೇಶ್ವರ ಕಾವ್ಯ ಹೇಗೆ ತನ್ನತನವನ್ನು ಸ್ಥಾಪಿಸುತ್ತದೆ ಎಂದರೆ, ತನ್ನದೇ ಸ್ವಂತ ಸಂಕೇತಗಳ ಮೂಲಕವೆ ಎಲ್ಲವನ್ನು ಪ್ರತಿಭಟಿಸುವ ಮತ್ತು ಪರ್ಯಾಯ ಸೃಷ್ಟಿಸುವುದನ್ನು ಮಾಡುತ್ತದೆ. ಯಾವ ವೃತ್ತಿ ಮತ್ತು ಮನುಷ್ಯನನ್ನು ಶಿಷ್ಟ ಸಮಾಜ, ಸಂಸ್ಕೃತಿ ಅತ್ಯಂತ ಕೀಳಾಗಿ ಅವಮಾನಿಸಿ ಅಸ್ಪೃಶ್ಯವಾಗಿ ಕಂಡಿತೋ ಅದೇ ವ್ಯಕ್ತಿ ಮತ್ತು ವೃತ್ತಿಯ ಸಂಕೇತಗಳ ಮೂಲಕವೇ ಮಲೆ ಮಾದೇಶ್ವರ ಅಸಮಾನ, ಅಮಾನವೀಯ, ಮತಾಂಧ, ಅಪಮೌಲ್ಯಗಳನ್ನು ಒಡೆದುರುಳಿಸುತ್ತಾನೆ. ಅದಕ್ಕಾಗಿ ಮಲೆ ಮಾದೇಶ್ವರ ತನ್ನ ಪೂರ್ವಿಕ ಹರಳಯ್ಯನನ್ನು ಮುಖಾಮುಖಿಯಾಗುವುದು ಅತ್ಯಂತ ಅರ್ಥವಂತಿಕೆಯ ಪ್ರತಿಮೆಯಾಗಿದೆ. ಮಧುವರಸನ ದುಷ್ಟತನದ ವಿರುದ್ಧ ಕಲ್ಯಾಣದ ಹರಳಯ್ಯನ ಉರಿಚಮ್ಮಾವುಗೆ ಮಹಿಮೆ ತಣ್ಣನೆಯ ಪ್ರತಿಭಟನೆ ಆದರೆ ಅದರ ಪರಿಣಾಮ ಮಾತ್ರ ತೀವ್ರ ಸ್ವರೂಪದ್ದೆ. ಹರಳಯ್ಯನ ಉರಿಚಮ್ಮಾವುಗೆಯ ಅತ್ಯಂತ ಉಗ್ರರೂಪದ ದರ್ಶನ ಮಾಡಿ ಕೊಟ್ಟವನು ಮಲೆ ಮಾದೇಶ್ವರ. ಉರಿಚಮ್ಮಾಳಿಗೆಗಳು ಶ್ರವಣದೊರೆಯ ಸಂಹಾರಕ್ಕೆ ಬಳಕೆಯಾಗಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಸಾಂಕೇತಿಕ. ಶ್ರವಣದೊರೆ ಎಂಬ ಅಪಮೌಲ್ಯಗಳ, ದುಷ್ಟ, ಶಿಷ್ಟ ಮತಪಂಥಗಳನ್ನು ಉರಿಚಮ್ಮಾಳಿಗೆಗಳ ಮೂಲಕ ನಾಶ ಮಾಡಿ ಅವುಗಳಿಗೆ ಪ್ರತಿಯಾಗಿ ಮತ್ತು ಪರ್ಯಾಯವಾಗಿ ಉರಿಚಮ್ಮಾವುಗೆ ಪ್ರಧಾನ ಪಂಥವನ್ನೇ ಸ್ಥಾಪಿಸುವ ಮೂಲಕ ತಳಸಮುದಾಯಗಳ ಶ್ರಮ ಸಂಸ್ಕೃತಿಯೇ ಪ್ರಧಾನ ಮತ್ತು ಪ್ರಬಲ ಎಂಬುದನ್ನು ಕಾವ್ಯ ಎತ್ತಿಹಿಡಿಯುತ್ತದೆ.

ಈ ಶ್ರವಣದೊರೆ ಇಲ್ಲಿ ಯಾವುದೋ ಅಪಮೌಲ್ಯಗೊಂಡ ಧರ್ಮ ಅಥವಾ ಪಂಥವನ್ನು ಪ್ರತಿನಿಧಿಸುತ್ತಾನೆಂಬುದಕ್ಕೆ ಪೂರಕವಾಗಿ ದೇವಚಂದ್ರ ಹೀಗೆ ಉಲ್ಲೇಖಿಸುತ್ತಾನೆ, “ಹದಿನಾಡು ಮೊದಲಾದ ಆರುನಾಡುಗಳನ್ನು ಸೋಮವಂಶದ ಅಭಿಚಂದ್ರನು ಆಳುತ್ತಿದ್ದನು. ಆಗ ಕುಂತೂರು ಮಠದಲ್ಲಿ ನಂಜಯ್ಯ ಎಂಬ ಜೋಳಿಗೆ ಒಡೆಯರಿದ್ದರು. ಅಲ್ಲಿಗೆ ಬಡಗಲ ಸೀಮೆಯಿಂದ ಒಬ್ಬ ಮಾದಿಗರ ಹುಡುಗ ಬಂದ. ಜೋಳಿಗೆ ನಂಜ ಒಡೆಯನಿಗೆ ದೊರೆತನ ಮಾಡಿಕೊಡುವೆನೆಂದು ನಂಬಿಸಿದನು. ಆ ನಾಡ ಅರಸ ಅಭಿಚಂದ್ರನಲ್ಲಿ ಕಪಟ ಸ್ನೇಹದಿಂದ ಆಪ್ತನಾಗಿ ಮಂತ್ರಿ ಪ್ರಧಾನಿಗಳೆಲ್ಲರನ್ನೂ ವಶಪಡಿಸಿಕೊಂಡಿದ್ದನು. ಆತನು ಆ ಮಲೆನಾಡ ಬೆಟ್ಟದ ಬೋಳರೆಯಲ್ಲಿ ಯೋಗದಲ್ಲಿ ನಿರತನಾಗಿ ನಿಂತ ಭಾನುಕೀರ್ತಿಗಳೆಂಬ ಜಿನಮುನಿಗೆ ನಮಸ್ಕರಿಸಿ ಬರೋಣ ಬನ್ನಿ ಎಂದು ರಾಜನನ್ನು ಕರೆದುಕೊಂಡು ಹೋದನು. ರಾಜನಿಗೆ ಲಾಕ್ಷದ ಪಾದುಕೆಯನ್ನು ತೊಡಿಸಿ ಕಾಸಿದರೆಯ ಮೇಲೆ ನಿಲ್ಲಿಸಿ ಅಲ್ಲಿಯೇ ಆತನನ್ನು ಹತಮಾಡಿದ ಮಾದಿಗರ ಹುಡುಗನು ನಂಜರಾಜ ಒಡೆಯನಿಗೆ ಪಟ್ಟ ಕಟ್ಟಿದನು. ಅನಂತರ ಆತನು ಗುಡ್ಡನಾಗಿದ್ದು ಪರ್ವತದ ಬೋಳರೆಯಲ್ಲಿ ಯೋಗದಲ್ಲಿದ್ದ ಶ್ರವಣ ಮುನಿಯನ್ನು ಪಾಪಕ್ಕಂಜದೆ ಕೊಂದು, ಆ ನಂಜರಾಜಯ್ಯನ ರಾಜ್ಯಕ್ಕೆ ತಾನೇ ಅರಸನಾಗಿ ಮಾದರಸನೆಂದು ಪ್ರಸಿದ್ಧಿಯಾದನು.’’[4]

ದೇವಚಂದ್ರನು ಉಲ್ಲೇಖಿಸುವಂತೆ ಮಾದಿಗರ ಹುಡುಗ ಅಬಿಚಂದ್ರನೆಂಬ ಜೈನ ರಾಜನನ್ನು, ಭಾನುಕೀರ್ತಿ ಎಂಬ ಜೈನ ಮುನಿಗಳನ್ನು ಕೊಲ್ಲುತ್ತಾನೆ. ಇದೇ ಘಟನೆ ಮಲೆ ಮಾದೇಶ್ವರ ಕಾವ್ಯದಲ್ಲಿ ಶ್ರವಣದೊರೆ ಸಂಹಾರ ಪ್ರಸಂಗವಾಗಿರಬೇಕು. ಅಥವಾ ಶ್ರವಣ ಸಂಹಾರ ಪ್ರಸಂಗ ದೇವಚಂದ್ರನ ಗ್ರಂಥಕ್ಕೆ ವಸ್ತುವಾಗಿರಬೇಕು. ದೇವಚಂದ್ರ ಪ್ರಸ್ತಾಪಿಸುವ ಅಂಶಗಳು ಮತ್ತು ಕಾವ್ಯದ ಆಶಯಗಳ ಹಿನ್ನೆಲೆಯಲ್ಲಿ ಇದೊಂದು ಧರ್ಮ, ಸಂಸ್ಕೃತಿ, ಪಂಥಗಳ ಮೇಲ್ಮೆ ಮತ್ತು ಸ್ಥಾಪನೆಗಾಗಿ ನಡೆದ ಸಂಘರ್ಷವೋ ಸಂವಾದವೋ ಆಗಿರುವಂತಿದೆ. ಶ್ರವಣ ಜೈನ ಪಂಥವನ್ನೋ, ವೈಷ್ಣವ ಪಂಥವನ್ನೋ ಪ್ರತಿನಿಧಿಸುತ್ತಿದ್ದು, ಮಾದೇಶ್ವರ ತನ್ನ ಪಂಥದ ಉಳಿವಿಗಾಗಿ ಹಾಗೂ ಅಪಮೌಲ್ಯಗೊಂಡಿದ್ದ ಇತರ ಪಂಥಗಳ ಅಳಿವಿಗಾಗಿ ಉರಿಚಮ್ಮಾಳಿಗೆ ಎಂಬ ಪ್ರತಿಭಟನಾ ಅಸ್ತ್ರದ ಮೂಲಕ ಶ್ರವಣ ಸಂಹಾರ ಮಾಡುತ್ತಾನೆ. “ಶ್ರವಣ ದೊರೆಯನ್ನು ಜೈನ ಧರ್ಮದ ಪರಿಭಾಷೆಯಲ್ಲಿ “ಸವಣ’’  ಎಂದು ಭಾವಿಸುವುದಾದರೆ ಜೈನಧರ್ಮ ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚು ಪ್ರಾಬಲ್ಯಕ್ಕೆ ಬಂದಕಾಲದಲ್ಲಿ ಮಾದೇಶ್ವರರಂಥ ಮಹಿಮಾನ್ವಿತ ತಲೆಯೆತ್ತಿಕೊಂಡು ಶೈವಧರ್ಮವನ್ನು ಎತ್ತಿಹಿಡಿದಿರಬೇಕು ಎಂಬ ಹಿನ್ನೆಲೆಯಲ್ಲಿ ಮಾದೇಶ್ವರರ ಕಥೆ ನಿಲ್ಲುತ್ತದೆ.’’

ಮಲೆ ಮಾದೇಶ್ವರ ಕಾವ್ಯದ ಆಶಯಗಳು, ದೇವಚಂದ್ರನ ಉಲ್ಲೇಖಗಳು, ಜೀಶಂಪ ಅವರ ಅಭಿಪ್ರಾಯಗಳನ್ನು ಗಮನಿಸುತ್ತಾ ಹೋದರೆ ಹಲವು ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಶ್ರವಣ ಸಂಹಾರ ಮತ್ತು ಉರಿಚಮ್ಮಾಳಿಗೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ದೊರೆತ ಕೆಲಮಾಹಿತಿಗಳು ಹೊಸದೊಂದು ಸಾಧ್ಯತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಜನಪದ ಕಾವ್ಯಗಳ ಉಲ್ಲೇಖಗಳು ಅಥವಾ ವಿವರಗಳು ಕೆಲವು ಸಾರಿ ಆಯಾ ಪ್ರಾಂತ್ಯ, ಭೌಗೋಳಿಕ ಪರಿಸರಗಳಿಗೆ ಪೂರಕವಾಗಿರುತ್ತವೆ. ಅಥವಾ ಆಯಾ ಸ್ಥಳ, ಪರಿಸರ, ಭೌಗೋಳಿಕಾಂಶಗಳ ಹಿನ್ನೆಲೆಯಲ್ಲೇ ಸ್ಥಳ ಪುರಾಣಗಳ ಮಾದರಿ ಹುಟ್ಟಿರುತ್ತವೆ. ಅವು ಚಾರಿತ್ರಿಕ ಘಟನೆಗಳ ಆಧಾರದಮೇಲು ಹುಟ್ಟಿಕೊಂಡಿರುತ್ತವೆ ಕೂಡ.

ಮಾದೇಶ್ವರ ಸುತ್ತೂರು ಮಠಕ್ಕೆ ಹೋಗುತ್ತಾರೆ. ಲಿಂಗದೀಕ್ಷೆಗಾಗಿ ಅಲ್ಲಿ ಗುರುಗಳು ಅವನನ್ನು ರಾಗಿ ಬೀಸುವ ಕಾಯಕಕ್ಕೆ ನೇಮಿಸುತ್ತಾರೆ. ಇದಕ್ಕೆ ಪೂರಕವಾಗಿ ಸುತ್ತೂರು ಮಠದಲ್ಲಿ ಇಂದಿಗೂ ಮಾದೇಶ್ವರ ರಾಗಿ ಬೀಸಿದ ರಾಗಿಕಲ್ಲು ಇದೆ. ಮುಂದೆ ಮಾದೇಶ್ವರ ಕುಂತೂರು ಮಠಕ್ಕೆ ಬರುತ್ತಾನೆ. ಅಲ್ಲಿನ ಗುರು ಅವನನ್ನು ಹೂವಿನ ಊಳಿಗಕ್ಕೆ ನೇಮಿಸುತ್ತಾರೆ. ಅಲ್ಲಿ ಗೊದ್ದ ಗೋಸುಂಬೆ ಸಾಯಿಸಿ ಕೊಳ ಒಂದರಲ್ಲಿ ಮುಳುಗಿ ಮಾದೇಶ್ವರ ಅವುಗಳನ್ನು ಪರಿಮಳಭರಿತ ಪುಷ್ಪಗಳನ್ನಾಗಿ ಪರಿವರ್ತಿಸುವ ಪವಾಡ ಮಾಡುತ್ತಿದ್ದ. ಕುಂತೂರು ಬೆಟ್ಟದ ಮೇಲೆ ಇಂದಿಗೂ ಆ ಕೊಳವಿದೆ. ಮುಡುಕುತೊರೆ ಬೆಟ್ಟಕ್ಕೆ ಬಂದನೆಂಬುದಕ್ಕೆ ಬೆಟ್ಟದ ದೇವಾಲಯದ ಬಲಬಾಗಿಲಲ್ಲಿ ಮಾದೇಶ್ವರನ ಪಾದದ ಗುರುತುಗಳಿವೆ. ಕೊಳ್ಳೇಗಾಲದ ಗುಡ್ಡದ ಮೇಲೆ ಮಂಡಿಯೂರಿದ್ದಕ್ಕೆ ಇಂದಿಗೂ ಪುರಾವೆಗಳಿವೆ. ಹೀಗೆ ಕಾವ್ಯದ ಹಲವು ಪ್ರಸಂಗಗಳಿಗೆ ಪೂರಕವಾಗಿ ಹಲವು ಆಚರಣೆಗಳು, ನಂಬಿಕೆಗಳು, ಸಾಕೇಂತಿಕ ಕುರುಹುಗಳು ಉಳಿದು ಬಂದಿವೆ. ಆದರೆ ಮಲೆ ಮಾದೇಶ್ವರ ಕಾವ್ಯದ ಉರಿಚಮ್ಮಾಳಿಗೆ ಮತ್ತು ಶ್ರವಣ ಸಂಹಾರದ ಸಾಂಕೇತಿಕ ಕುರುಹುಗಳು ಆಚರಣೆಗಳು ಪರಂಪರೆಯೊಳಗೆ ಕಾಣಿಸವುದಿಲ್ಲ. ಈ ಪ್ರಸಂಗಕ್ಕೆ ಪೂರಕವಾಗುವ ಕೆಲವು ಮಾಹಿತಿಗಳು ಕ್ಷೇತ್ರಕಾರ್ಯ ಸಂದರ್ಭದಲ್ಲಿ ದೊರೆತಿದ್ದು ಅವುಗಳನ್ನು ಉಲ್ಲೇಖಿಸಬಯಸುತ್ತೇನೆ’’

ಬಿಳಿಗಿರಿ ರಂಗಸ್ವಾಮಿ ಕೂಡ ಒಂದು ಬುಡಕಟ್ಟು ಜನಪದ ದೈವ. ಈ ದೇವತೆಗೂ ಒಂದು ಜನಪದ ಕಾವ್ಯ, ಒಕ್ಕಲಾದ ಜನಸಮುದಾಯವಿದೆ. ಇವರ ಸಾಂಸ್ಕೃತಿಕ ಕೇಂದ್ರ ಬಿಳಿಗಿರಿರಂಗನ ಬೆಟ್ಟ. ಇದು ಮಲೆ ಮಾದೇಶ್ವರ ಬೆಟ್ಟದಂತೆ ಚಾಮರಾಜ ನಗರ ಜಿಲ್ಲೆಯಲ್ಲೇ ಬರುತ್ತದೆ. ಬಿಳಿಗಿರಿರಂಗಸ್ವಾಮಿ ವೈಷ್ಣವ ಪಂಥೀಯ ಎಂದು ಗುರುತಿಸಲಾಗಿದೆ. ಆದರೆ ಇದು ಪೂರ್ವದಲ್ಲಿ ಮೂಲತಃ ಬೌದ್ಧ, ಜೈನ ಪಂಥದ ಕೇಂದ್ರವಾಗಿತ್ತು. ನಂತರ ರಾಮಾನುಜಾಚಾರ್ಯರ ಕಾಲದಲ್ಲಿ ಇದು ವೈಷ್ಣವೀಕರಣವಾಗಿ ವೈಷ್ಣವ ಪಂಥಕ್ಕೆ ಸೇರಿತೆಂಬುದು ಚರಿತ್ರೆ. ಭೌಗೋಳಿಕವಾಗಿ ಬಿಳಿಗಿರಿರಂಗನ ಬೆಟ್ಟ, ಮಲೆ ಮಾದೇಶ್ವರ ಬೆಟ್ಟಗಳ ಒಂದೇ ಘಟ್ಟ ಸಾಲುಗಳಲ್ಲಿ ಬರುತ್ತವೆಂಬುದು ಬಹುಮುಖ್ಯ ಸಂಗತಿ. ಇಲ್ಲಿ ಪ್ರತೀವರ್ಷ ಜಾತ್ರೆ, ತೇರು ನಡೆಯುತ್ತವೆ. ಇಲ್ಲೊಂದು ವಿಶೇಷ ಆಚರಣೆ ಇದೆ. ದನದ ಚರ್ಮದಿಂದ ಮಾಡಿದ ಬೃಹತ್ ಗಾತ್ರದ ಒಂದು ಜೊತೆ ಚಮ್ಮಾವುಗೆಗಳು ದೇವಸ್ಥಾನದಲ್ಲಿವೆ. ಇವು ದೈವ ಸಮಾನವಾಗಿದ್ದು ಪೂಜೆ ಕೂಡ ಉಂಟು. ಭಕ್ತರು ಇವುಗಳಿಂದ ಹೊಡೆಸಿಕೊಳ್ಳುವ ಆಚರಣೆಯು ಇದೆ. ಇವುಗಳನ್ನು ದೇವಸ್ಥಾನಕ್ಕೆ ಮಾಡಿಕೊಡುವುದಕ್ಕೆ ನಿರ್ದಿಷ್ಟವಾದ ಒಂದು ಜಾತಿಯ ಒಂದು ಗ್ರಾಮದ ಜನರಿದ್ದಾರೆ. ಯಳಂದೂರು ತಾಲೂಕು ಬೂದಿತಿಟ್ಟು ಗ್ರಾಮದ ಮಾದಿಗ ಸಮುದಾಯದವರು ಈ ಬೃಹತ್ ಚಮ್ಮಾಳಿಗೆಗಳನ್ನು ಮಾಡಿಕೊಡುವ ಹಕ್ಕನ್ನು ಹೊಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಕತೆ ಇದೆ.

ತಮಿಳಿನಾಡಿನಿಂದ ಬಂದು ಯರಿಯೂರಿನಲ್ಲಿ ನೆಲೆನಿಂತ ಸಿದ್ಧಂಕದಾಸಯ್ಯನಿಗೆ ಒಮ್ಮೆ ಕನಸಾಯಿತು. ಸ್ವಾಮಿ ಕನಸಿನಲಿ ಬಂದು, ಪಾದದವರೆಗೂ ಕುಂತೂರು ಬೆಟ್ಟಕ್ಕೂ ಆಗುವಷ್ಟು ಉದ್ದ ಅಗಲದ ಚಮ್ಮಾಳಿಗೆ ಮಾಡಿ ತರಲು ಹೇಳಿದ. ಈ ವಿಷಯವನ್ನು ಸಿದ್ಧಂಕದಾಸಿ (ಹೊಲೆಯ) ಪಕ್ಕದ ಮದ್ದೂರಿನ ವಾದ್ಯದಟ್ಟಿ ಗುಂಪಿನವರಿಗೆ ಹೇಳಿದ.ಅವರು ಬೂದಿತಿಟ್ಟನ ಜವರಯ್ಯನ ನಿಂಗಯ್ಯನ ಅಟಿಟ ಗುಂಪಿಗೆ (ಮಾದಿಗ) ಹೇಳಿದರು. ಹಾಗಾಗಿ ಬೂದಿತಿಟ್ಟಿನ ಮಾದಿಗರು ಈ ಚಮ್ಮಾವುಗೆ ಮಾಡುವ ಜವಾಬ್ದಾರಿ ನಿರ್ವಹಿಸುಂತಾಯಿತು. ಈ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.

ಶ್ರವಣದೊರೆ ಸಾಲಿನಲ್ಲಿ ಹಾಗೂ ದೇವಚಂದ್ರನ ರಾಜಾವಳಿ ಕಥೆಯಲ್ಲಿ ವಿವರಿಸುವ ಕಾದ ಕಲ್ಲಿನ ಅರೆ, ಬೆಟ್ಟ ಮತ್ತು ಶ್ರವಣದೊರೆ ಇದೇ ಬಿಳಿಕಲ್ಲ ಬೆಟ್ಟವೂ, ಬಿಳಿಗಿರಿರಂಗನಾಥನ ರೂಪದ ಜೈನ, ವೈಷ್ಣವನೋ ಆಗಿರಬೇಕು? ಅಬಿಚಂದ್ರರಾಜ ಮತ್ತು ಜೈನ ಮುನಿಗಳ ಸಂಹಾರ ಶ್ರವಣನ ಸಂಹಾರವನ್ನು, ಶ್ರವಣ ಬಿಳಿಗಿರಿ ರಂಗಸ್ವಾಮಿಯನ್ನು ಪ್ರತಿನಿಧಿಸುತ್ತಿರಬೇಕು. ಹರಳಯ್ಯನ ಕುಲದ ಬೂದಿ ತಿಟ್ಟಿನ ಮಾದಿಗರು ಹರಳಯ್ಯ ಹಾಗೂ ಮಾದೇಶ್ವರನನ್ನು ಪ್ರತಿನಿಧಿಸುತ್ತಿರಬೇಕು. ಬಿಳಿಗಿರಿ ರಂಗನ ದೇವಸ್ಥಾನದಲ್ಲಿರುವ ಬೃಹತ್ ಚಮ್ಮಾಳಿಗೆಗಳು ಶ್ರವಣದೊರೆ ಸಂಹಾರಕ್ಕೆ ಮಾದೇಶ್ವರ ಬಳಸಿದ ಉರಿ ಚಮ್ಮಾಳಿಗೆಗಳನ ನು ಪ್ರತಿನಿಧಿಸುತ್ತಿರಬೇಕು. ಬಿಳಿಗಿರಿರಂಗನ ಬೆಟ್ಟದ ಆಚರಣೆಗಳು ಮತ್ತು ಬಿಳಿಗಿರಿ ರಂಗ ಶ್ರವಣ ದೊರೆ ಸಂಹಾರದ ಫಲವಾಗಿದ್ದು ನಂತರದಲ್ಲಿ ಅನೇಕ ಸೇರ್ಪಡೆಗಳು ಆಗಿದ್ದು ಮಾದೇಶ್ವರ ಪರಂಪರೆ ಜೊತೆಗಿನ ಸಂಬಂಧ ಕಡಿದು ಹೋಗಿರಬಹುದು.

ಸಿದ್ಧಂಕದಾಸಿಯ ಕನಸಿನ ಆಶಯ ಬಹಳ ಮುಖ್ಯವಾದದ್ದು. ಕನಸಿನಲ್ಲಿ ಸ್ವಾಮಿ  ಪಾದದವರೆಗೂ ಕುಂತೂರು ಬೆಟ್ಟಕ್ಕೂ ಆಗುವಷ್ಟು ಉದ್ದದ ಚಮ್ಮಾಳಿಗೆಗಳನ್ನು ಕೇಳುತ್ತಾನೆ. ಇಲ್ಲಿ ಸ್ವಾಮಿ ಎಂದರೆ ಜನರ ದೃಷ್ಟಿಯಲ್ಲಿ ಬಿಳಿಗಿರಿರಂಗ ಎಂಬ ಭಾವನೆ ಇದೆ. ಆದರೆ ಇದು ವಾಸ್ತವವಾಗಿ ಮಾದೇಶ್ವರ. ಚಮ್ಮಾವುಗೆ ಮಾಡಿಕೊಡುವಂತೆ ಹರಳಯ್ಯನನ್ನು ಕೇಳುವವನು ಮಾದೇಶ್ವರ, ಬಿಳಿಗಿರಿರಂಗ ಅಲ್ಲ. ಕನಸಿನಲ್ಲಿ ಹೇಳಿದ ಎಂದು ಉಲ್ಲೇಖವಾಗುವ ಈ ಪಾದದರೆ, ಕುಂತೂರು ಬೆಟ್ಟ ಪದಗಳು ಮಾದೇಶ್ವರನಿಗೆ ಸಂಬಂಧಿಸಿದವು. ಇವು ಮಾದೇಶ್ವರ ಕಾವ್ಯ ಮತ್ತು ದೇವಚಂದ್ರನ ಕಥೆಯಲ್ಲೂ ಉಲ್ಲೇಖವಾಗುತ್ತವೆ. ಇವು ಮಾದಿಗರು ಹರಳಯ್ಯ ಮತ್ತು ಮಾದೇಶ್ವರನನ್ನು ಪ್ರತಿನಿಧಿಸುವುದನ್ನು ಸೂಚಿಸುತ್ತವೆ. ಅಲ್ಲದೆ ಬಿಳಿಗಿರಿ ರಂಗನ ಒಕ್ಕಲಾದ ಇವರು ಅಂತರಂಗದಲ್ಲಿ ಮಲೆ ಮಾದೇಶ್ವರ ಪರಂಪರೆಯ ಸಂಬಂಧಗಳನ್ನು ಹೊಂದಿರುವುದು ಕಡಿದು ಹೋಗಿರುವ ಸಾಂಸ್ಕೃತಿಕ ಕೊಂಡಿಯಾಗಿದೆ.

ದೇವಚಂದ್ರನಿಗೆ ಮಾದಿಗರ ಹುಡುಗನ ಬಗ್ಗೆ ಯಾಕೆ ತಿರಸ್ಕಾರ ಇರಬೇಕು? ಮಾದಾರಿ ಅಭಿಚಂದ್ರ ಎಂಬ ಜೈನರಾಜನನ್ನು, ಚಾರುಕೀರ್ತಿ ಎಂಬ ಜೈನ ಮುನಿಯನ್ನು ಕೊಂದ ಎಂಬ ಕಾರಣಕ್ಕಿರಬಹುದು. ಈ ಧಾರ್ಮಿಕ, ಸಾಂಸ್ಕೃತಿಕ ಸಂಘರ್ಷ ಖಂಡಿತವಾಗಿ ಮಾದೇಶ್ವರ ಮತ್ತು ಜೈನರ ಸಂಘರ್ಷದ ಸಂಕೇತ. ಒಂದು ಕಾಲಕ್ಕೆ ಜೈನ ಕೇಂದ್ರವಾಗಿದ್ದ ಬಿಳಿಗಿರಿರಂಗನ ಬೆಟ್ಟ ಮತ್ತು ರಂಗಸ್ವಾಮಿ ಈ ಸಂಘರ್ಷದ ಪ್ರತೀಕ. “ಶ್ರವಣ ಸಂಹಾರ’’ ಬಿಳಿಗಿರ ರಂಗನ ಪಂಥದಲ್ಲಿ ಸಮೀಕರಣವಾಗಿರುವ ಸಾಧ್ಯತೆಗಳನ್ನು ಈ ಪ್ರಸಂಗ ತೋರಿಸುತ್ತದೆ. ಹಾಗಾಗಿ ಬಿಳಿಗಿರಿರಂಗನ ಬೆಟ್ಟದ ಚಮ್ಮಾಳಿಗೆಗಳು ಮಲೆ ಮಾದೇಶ್ವರನು ಜೈನ, ವೈಷ್ಣವ ಪಂಥದಸಂಕೇತವಾದ ಶ್ರವಣನ ವಿರುದ್ಧ ಬಳಸಿದ ಉರಿಚಮ್ಮಾಳಿಗೆಗಳ ಪ್ರತಿನಿಧಿಗಳಾಗಿ ಕಾಣುತ್ತವೆ.

ಮುಗಿಯದ ಸೊಲ್ಲು

ಮಂಟೇಸ್ವಾಮಿ ನೀಲಗಾರ ಪರಂಪರೆಯಂತೆ, ಕಂಸಾಳೆ ಗುಡ್ಡರ ಮಲೆ ಮಾದೇಶ್ವರ ಪಂಥ ಕೂಡ ೧೨ನೇ ಶಮತಾನದ ನಂತರದ ಶರಮರ ಮೂಲದಿಂದ ಹೊರಡುವ ಪಂಥ. ಇದಕ್ಕೆ ವಚನ ಚಳುವಳಿಯ ಪೂರ್ವ ಮತ್ತು ಉತ್ತರದ ಹಾಗೂ ದಕ್ಷಿಣದ ದ್ರಾವಿಡ, ಶೈವ ಮೂಲಗಳು ಜೊತೆಯಾಗಿವೆ. ವಚನ ಚಳುವಳಿಯ ಪ್ರಮುಖರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ, ಮಾದರಾ ಚನ್ನಯ್ಯ, ಹರಳಯ್ಯರಂತಹ ಪೂರ್ವಿಕರ ಪ್ರತಿಮೆಗಳು ಮಲೆ ಮಾದೇಶ್ವರರಲ್ಲಿ ಮೇಳೈಸಿವೆ ಎಂಬುದಕ್ಕೆ ಮಲೆ ಮಾದೇಶ್ವರ ಕಾವ್ಯದಲ್ಲಿ ಸಾಕಷ್ಟು ಸಾಂಕೇತಿಕ ಉಲ್ಲೇಖಗಳು ಸಿಗುತ್ತವೆ. ಮುಡುಕುತೊರೆ ಮಲ್ಲಯ್ಯನ ಒಕ್ಕಲಲ್ಲೇ ಮಾದೇಶ್ವರ ರಾಮವ್ವ ಮೂಗಪ್ಪರ ಒಕ್ಕಲು ಪಡೆಯುತ್ತಾರೆ. ಮಾದೇಶ್ವರ ಪೂರ್ವದಲ್ಲೇ ಮುಡುಕುತೊರೆ ಮಲ್ಲಯ್ಯ ಈ ಭಾಗದಲ್ಲಿ ಪ್ರಬಲನಾಗಿದ್ದ. ಅದೇ ಸ್ರೀಶೈಲ ಮೂಲದ ಮಾದೇಶ್ವರ ಅದರ ಮುಂದುವರಿಕೆಯಾಗಿ, ವಚನಚಳಿವಳಿ ನಂತರ ಚನ್ನಯ್ಯ, ಹರಳಯ್ಯರ ಪ್ರತಿನಿಧಿಯಾಗಿ ನಾಥ ಶೈವ ಸಿದ್ಧನಾಗಿ ಸಮಕಾಲೀನರ ಅವಮಾನ, ಅಸಮಾನತೆ, ಅಪಮೌಲ್ಯಗಳ ವಿರುದ್ಧ ಪಂಥವನ್ನು ಪುನರ್ ಸ್ಥಾಪಿಸುತ್ತಾನೆ. ಇದು ೧೨ನೇ ಶತಮಾನದ ವಚನ ಚಳುವಳಿಯ ಮತ್ತು ಅದರ ಪೂರ್ವದ ಶೈವ ಪಂಥಗಳ ಜೊತೆಗೆ ನಾಥ ಸೂಫಿಗಳನ್ನು ಸೇರಿಸಿಕೊಡು ಮೂಡಿಬಂದ ಪಂಥವಾಗಿ ನಿಲ್ಲುತ್ತದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ದ.ಕ.ಜತಕಾ.ಪ್ರ., ಜೀ.ಶಂ.ಪ. ಪುಟ೯೨,

[2] ಅದೇ

[3] ದೇವಚಂದ್ರನರಾಜಾವಳಿಕಥಾಸಾರ, ಸಂ. ಬಿ.ಎಸ್.ಸಣ್ಣಯ್ಯ, ಪುಟ೧೯೮

[4] ಬೂದಿತಿಟ್ಟುಕ್ಷೇತ್ರಕಾರ್ಯ, ಅಕ್ಟೋಬರ್೭-೨೦೦೨ಮಾಹಿತಿದಾರರು : ನಿಂಗರಾಜು, ಮರಯ್ಯ, ಚಾಮರಾಜು, ಮಂಜುನಾಥ.