ಸಿ.ನಾಗಣ್ಣ : ನಿಮ್ಮ ಆರ್‌ಗ್ಯೂಮೆಂಟ್ ಎಲ್ಲ ಒಪ್ತೀನಿ. ಆದರೆ ಇನ್ನೂ ಸ್ವಲ್ಪ ಸ್ಪೆಸಿಫಿಕ್ ಆಗಿ ತಾವು ಉತ್ತರ ಹೇಳಬೇಕು. ಏನು ಅಂತಂದ್ರೆ ಈ ಒಂದು ಇನ್‌ಬಿಲ್ಟ್ ಐರಾರ‍್ಕಿ ಇದೆಯಾ? ಜನಪದ ಕಾವ್ಯಗಳ ಮಟ್ಟದಲ್ಲಿ ಒಂದು ಐರಾರ‍್ಕಿ ಉದ್ಭವ ಆಗಬೇಕಾದರೆ ಅದರಲ್ಲಿ ಒಂದು ವರ‍್ಬಲ್ ಸ್ಪೇಸ್ ಗಾತ್ರವೋ ಅಥವಾ ಭಾಷೆಯ ಒಂದು ಶಕ್ತಿಯೋ ಯಾವುದು ನಿರ್ಧರಿಸೋದು? ಈ ಪ್ರಶ್ನೇನ ನಾನು ಯಾತಕ್ಕೆ ಕೇಳುತಿದ್ದೀನಿ ಅಂತಂದ್ರೆ ನಾವು ಪಂಪನ ಬಗ್ಗೆ ಮಾತನಾಡುವಾಗ ಅನೇಕ ಕಾರಣದಿಂದ ಅವನು ಪ್ರಾರಂಭದಲ್ಲಿ ಹಿಸ್ಟಾರಿಕಲಿ ಕೂಡ ಮತ್ತು ಕ್ವಾಲಿಟಿ ಮತ್ತೆ ಒಂದು ಇಮ್ಯಾಜಿನೇಷನ್ ಕಲ್ಪನೆ ಮೇಲ್ ಸ್ತರದ ಕಲ್ಪನೆ ಇವೆಲ್ಲವನ್ನ ಅದರಲ್ಲಿ ಇಟ್ಟುಕೊಂಡು ಅವನನ್ನ ಐರಾರ‍್ಕಿನಲ್ಲಿ ಎಲ್ಲೋ ಒಂದು ಕಡೆ ಇಡ್ತೀವೋ, ಇಲ್ಲವೋ? ಅದೇ ಪ್ರಕಾರ ನಾವು ಜನಪದ ಕಾವ್ಯಗಳನ್ನ ನಾವು ಪ್ಯಾರಾಮೀಟರ‍್ಸ್‌ನ ಮನಸ್ಸಿನಲ್ಲಿ ಇಟ್ಟುಕೊಂಡು ಒಂದು ಶ್ರೇಣೀಕರಣ ಮಾಡಬಹುದೇ?

ಕಿಕ್ಕೇರಿ : ನಿಮ್ಮ ಜನಪದ ಕಾವ್ಯದಲ್ಲಿ ನಾನು ಆಗಲೇ ಹೇಳಿದಾಗೆ ತನಗೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳುವ ಶಕ್ತಿ ಇರುತ್ತೆ. ಹೈರಾರ‍್ಕಿ ಇಲ್ಲಿ ಇಂಪಾರ್‌ಟೆಂಟ್ ಅಲ್ಲ ತನಗೆ ಏನು ಬೇಕೋ ಯಾವ ಪೊಜಿಷನ್ ತಗೊಳ್ಳುತಾನೋ ಅದು ಇಂಪಾರ್‌ಟೆಂಟ್ ಆಗಿರುತ್ತೆ. ಅವನು ಬಹಳ ಕ್ರೂರಿಯಾಗಿ ವರ್ಣನೆಯಾಗಿರುತ್ತಾನೆ. ಇನ್ನೊಬ್ಬ ಏನು ಮಾಡುತ್ತಾನೆ ಆ ಕ್ರೂರ ವರ್ಣನೆಯನ್ನು ಬಿಟ್ಟು ಬಿಡುತ್ತಾ, ನೋಡಿ ಇನ್‌ಕ್ಲೂಜ್ ಅಂಡ್ ಎಕ್ಸ್‌ಕ್ಲೂಜ್ ಹೇಳಿದೆನಲ್ಲ ಇದು ಹೈರಾರ‍್ಕಿನಲ್ಲಿ ಬಹಳ ಡಾಮಿನೆಂಟ್ ರೋಲ್ ನಾನು ೨೫ ವರ್ಷಗಳ ಹಿಂದೆ ಕಾರಾಪುರದ ಹಾಡಿಯಲ್ಲಿ ಇದನ್ನ ಸಂಗ್ರಹಿಸಿದೆ. ಜೇನು ಕುರುಬರಲ್ಲಿ ಬರುವಂತದು. ‘ಕಾಡುಕೋಳಿ ಜೋಡು ನವಿಲು ಪರಶಿವ ಕಾಯೋ ಕಾಡುಬಿಲ್ಲಯ್ಯ’ ಈ ಕಾಡು ಬಿಲ್ಲಯ್ಯ is very importent for that not Malayamahadeswara swamy. ಏಕೆಂದರೆ ಕಾಡು ಬಿಲ್ಲಯ್ಯ ಟ್ರೈಬಲ್ say they exclude ಯಾರು ಮಹದೇಶ್ವರ but they include ಬಿಲ್ಲಯ್ಯ, ಕಾರಯ್ಯ ಇವರು.

ಸಿ. ನಾಗಣ್ಣ : ಆದರೆ ಇವನ್ನ ಟ್ರಾನ್ಸ್ ಲೇಟ್ ಮಾಡೋಕೆ ಅವಕಾಶ ಸಿಗೋಲ್ಲ. ಆದರೆ ಒಂದು ಇನ್ ಬಿಲ್ಟ್ ಹೈರಾರ‍್ಕಿ ನಮ್ಮ ಮಧ್ಯೆ ಪಂಡಿತರ ಮಧ್ಯೆ, ವಿದ್ವಾಂಸರ ಮಧ್ಯೆ ಸೃಷ್ಟಿಯಾಗಿದೆಯೇ?

ಕಿಕ್ಕೇರಿ : ಪಂಡಿತರ ಫ್ರೀ ಅಕ್ಯುಪೇಷನ್ ಇದು. ಎಲ್ಲದಕೂ ಅಷ್ಟೇನೆ. ವಚನಗಳನ್ನ ಎಲ್ಲ ಹೇಳ್ತಾ ಇರ‍್ತಾರೆ. ಎಂಟುನೂರ ವರ್ಷಗಳಿಂದ ನಾವು ಅದನ್ನ ಗಮನಿಸಲಿಲ್ಲ. ಇಪ್ಪತ್ತನೇ ಶತಮಾನದಲ್ಲಿ ಅದು ಒಂದು ಪಠ್ಯ ಅದಕ್ಕೆ ಒಂದು ಕಾವ್ಯದ ಬೆಲೆ ಇದೆ. ಯಾಕೆ ಅಂತ ಕಾನ್‌ಸೆಪ್ಟ್ ಚೇಂಜ್ ಆಗ್ತಾ ಇರುತ್ತೆ. The power place the role ನೀವು ಯುನಿವರ್ಸಿಟಿಯಲ್ಲಿ ಇದ್ದು ನಿಮಗೆ ಒಂದು ಪೊಜೀಷನ್ ಇದ್ದರೆ ನಿಮಗೆ ದುಡ್ಡು ಹಣ ಹರಿದು ಬರಬಹುದು. ನೀವು ಟ್ರಾನ್ಸ್‌ಲೇಟ್ ಮಾಡಬಹುದು. ಇನ್ನೊಬ್ಬ ಜಿನೈನ್ ಆಗಿದ್ದೋನಿಗೆ ಸಿಗದೆ ಇರಬಹುದು. Again this power place very dominent role. ಯಾವುದೇ ಟೆಕ್ಸ್ಟ್ ನಿಜವಾಗಿ ಇದು ಹೌದು ಅಲ್ಲ ಅನ್ನೋದು ಪವರ್ ಮೇಲೆ ಡಿಪೆಂಡ್ ಆಗುತ್ತೆ. ಆದ್ದರಿಂದ ಅದನ್ನ ಇನ್‌ಕ್ಲೂಡ್ ಮಾಡಿಕೊಳ್ಳೋದಿಕ್ಕೆ ಅವರಿಗೆ ಇಷ್ಟ ಆಗೋಲ್ಲ. ಅದಕ್ಕೆ ತುಂಬ ಸ್ಟ್ರಗಲ್ ಮಾಡಬೇಕಾಗುತ್ತೆ. Again inclusion and exclusion is the power that is contro ling your whether you want translate or in the Hirarchy also. ಯಾತಕ್ಕೆ ನಾವು ಇವತ್ತು ಮಹದೇಶ್ವರ ಕಾವ್ಯವನ್ನು ಅಥವಾ ಇಂತ ಕಾವ್ಯಗಳನ್ನು ಇಂಥ ಕಡೆ ನಾವು ಚರ್ಚೆ ಮಾಡುತ್ತೀವಿ. ಇಷ್ಟು ಸಾವಿರ ವರ್ಷಗಳು ಯಾಕಾಗಲಿಲ್ಲ. ಅಥವಾ ೫೦೦ ವರ್ಷ, ೬೦೦ ವರ್ಷ ಯಾಕೆ ಆಗಲಿಲ್ಲ. ಅದಕ್ಕೆ ಕಾರಣ ಅನ್ನುವಂತದು the question of inclusion exclusion and a power.

ಕ್ಷೀರಸಾಗರ : ನಾನು ಕುರವ ಬಸವರಾಜರವರಿಗೆ ಒಂದು ಪ್ರಶ್ನೆ ಕೇಳ್ತೀನಿ. ಏಕೆಂದರೆ ಮಾದೇಶ್ವರ ಬೇರೆ ಬೇರೆ ವಿಷಯದಲ್ಲಿ ಪಾಂಡಿತ್ಯ ಪಡುಕೊಂಡು  ಇರ‍್ತಾನೆ. ಹಾಗೇನೇ ವೈದ್ಯ ವಿದ್ಯೆಯಲ್ಲಿ ಪಾಂಡಿತ್ಯ ಪಡುಕೊಂಡು ಇರ‍್ತಾನೆ. ಮತ್ತೆ ತಂತ್ರಗಳು ಆತನ ಕಾವ್ಯದಲ್ಲಿ ಬರ‍್ತಾ ಹೋಗ್ತಾವೆ. ಪವಾಡಗಳು ಇದು ಕೂಡ ವೈದ್ಯ ವಿಜ್ಞಾನದ ಒಂದು ಭಾಗ ಅಂತ ಹೇಳ್ತಾ ಹೋಗ್ತಿರ. ನಿನ್ನೆ ಹಿ.ಚಿ. ಬೋರಲಿಂಗಯ್ಯನವರು ಕೂಡ ಇಲ್ಲಿ ಬರುವಂತ ತಂತ್ರಗಳು ಹೊಸ ವೈಜ್ಞಾನಿಕ ರೂಪ ಪಡುಕೊಳ್ಳುವಂತ ಚಿಗುರುಗಳು ಅಲ್ಲಿ ಕಾಣ್ತೀವೆ ಅನ್ನೋ ರೀತಿಯಲ್ಲಿ ಹೇಳಿದರು. ಬಹುಶಃ ಪವಾಡಗಳನ್ನು ತಂತ್ರಗಳನ್ನು, ನಾವು ಇಷ್ಟಕ್ಕೆ ಸೀಮಿತಗೊಳಿಸಿಕೊಂಡರೆ ನಾವು ಅದನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಂಗೆ ಆಗೋದಿಲ್ಲ ಅಂತ ನನಗೆ ಅನಿಸ್ತದೆ. ಏಕೆಂದರೆ ಇಲ್ಲಿ ಪದೇ ಪದೇ ಬಹಳಷ್ಟು ಸಾರಿ ಬಳಕೆ ಆಗೋದು, ಇಲ್ಲಿ ವಾಸ್ತವಿಕ ಸ್ಥಿತಿಯಿಂದ ಬೇರೆಯಾಗಿ ಅಥವಾ ತಮ್ಮ ಕೈಗೆ ಎಟುಕಿಸಲಾರದ ಸತ್ಯಗಳು ಇದ್ದಾಗ ಅದನ್ನ ತಮ್ಮ ಕೈಗೆ ಎಟುಕಿಸಿಕೊಳ್ಳೋದಿಕ್ಕೆ ಅತಿ ಭೌತಿಕ ಶಕ್ತಿಗಳ ಜೊತೆ ಅವರು ಸಂವಾದ ನಡೆಸ್ತಾರೆ. ಅಥವಾ ಅತಿಭೌತಿಕ ಶಕ್ತಿಗಳನ್ನು ಭೌತಿಕ ಮಾಡಿಕೊಳ್ಳುವಂತ ಕ್ರಿಯೆಗಳನ್ನ ನಾವು ಕಾಣ್ತೀವಿ. ಒಟ್ಟಿಗೆ ಗುಡ್ಡರುಗಳು ಇರ‍್ತಾರಲ್ಲ ಆ ಗುಡ್ಡರುಗಳಿಗೆ ಆ ಒಂದು ರೀತಿಯ ಶಕ್ತಿ ಗುಡ್ಡರು ಆಗೋದರಿಂದಲೆ ಬಂದಿರುತ್ತೆ. ಬಹುಶಃ ನಾರಾಯಣ ಅವರಿಗೆ ಚೆನ್ನಾಗಿ ಗೊತ್ತು. ಟ್ರೈಬಲ್ಸ್‌ನಲ್ಲಿ ಗುಡ್ಡರು ಅಂತ ಇರ್ತಾರಲ್ಲ ಅವರು ಮೂರು ಲೋಕಗಳ ಜೊತೆ ಸಂಚರಿಸುತ್ತಾ ಅಲ್ಲಿ ಒಂದು ರೀತಿಯ ನಮಗೆ ಪಡಕೊಳ್ಳೋದಿಕ್ಕೆ ಅಗದಿರುವಂತ ಅನುಭವಗಳನ್ನು ಪಡುಕೊಳ್ಳೋದಿಕ್ಕೆ ಸಾಧ್ಯ ಆಗೋ ರೀತಿಯಲ್ಲಿ ಹೇಳ್ತಾ ಹೋಗ್ತಾರೆ. ಬಹುಶಃ ನಾರಾಯಣವರು ಮಾತನಾಡಿದಾಗಲೂ ಕೂಡ ಮಲೆ ಮಾದೇಶ್ವರನ ಕಾವ್ಯದಲ್ಲಿ ಮಾತಾಗಿ ಬಳಕೆ ಆಗೋದು ಬರೀ ದೈಹಿಕವಾದಂತ ಈ ಭೌತಿಕ ಜಗತ್ತಿನ ಮಾತುಗಳು ಅಷ್ಟೇ ಅಲ್ಲ ಅಭೌತಿಕವಾದಂತಹ ಅನುಭವಗಳನ್ನು ಕೊಡುವಂತ ಪವಾಡಗಳನ್ನು ಇಲ್ಲಿ ಹೇಳ್ತಾ ಹೋಗೋದು ಜಾಸ್ತಿ ಕಾಣ್ತಿವಿ. ಬಹುಶಃ ಅದನ್ನು ಅಷ್ಟಕ್ಕೆ ಲಿಮಿಟ್ ಮಾಡೋದು ಸರಿಯಲ್ಲ ಅಂತ ನನ್ನ ಅಭಿಪ್ರಾಯ.

ಕುರವ ಬಸವರಾಜ್ : ಇದಕ್ಕೆ ನಾನು ಇನ್ನೊಂದು ಉದಾಹರಣೆಯನ್ನು ಹೇಳೋದರ ಮೂಲಕ ಬಿಚ್ಚಿಕೊಳ್ಳದಕ್ಕೆ ಇಷ್ಟಪಡ್ತೀನಿ. ರಾಮನಗರ ಭಾಗದಲ್ಲಿ ಬಹುಶಃ ನೀವು ನೋಡಿರೋ ಹಾಗೆ ಬುಡಕಟ್ಟು ಇದೆ. ಇರುಳರು ಬುಡಕಟ್ಟು ಅಲ್ಲಿ ಕಣಿ ಹೇಳೋರು ಅಂತ ಬರ್ತಾರೆ. ಕಣಿ ಹೇಳೋರು ಅಲ್ಲಿ ತಮಟೆ ಜೊತೆಗೆ ನುಡಿಸ್ತಾ ಕಣಿ ಹೇಳ್ತಾರೆ. ಕಣಿಯಲ್ಲಿ ಏನು ಅಸಾಮಾನ್ಯವಾದ ಪದಗಳೇನು ಇರೋಲ್ಲ. ಬರೀ ದೇವರ ಹೆಸರುಗಳನ್ನು ಹೇಳ್ತಾರೆ. ಆದರೆ ಅವರು ಹೇಳುವ ಕ್ರಮ, ಕಟ್ಟುವ ಧ್ವನಿಯನ್ನು ಬಳಸಿಕೊಳ್ಳುವ ಕ್ರಮ, ಉಂಟು ಮಾಡುವ ಆವರಣ ನಂಬದೇ ಇರುವವನಲ್ಲಿ ಕೂಡ ಪ್ರಭಾವವನ್ನು ಉಂಟು ಮಾಡುತ್ತದೆ. ಈ ಕಣಿ ಹೇಳುವವರು ನಾನು ಆಗಲೇ ಹೇಳಿದ ಹಾಗೆ ಇವರು ಜ್ವರ ಬಂದರೆ ಅಥವಾ ಅನೇಕ ಕಾಯಿಲೆಗೆ ಔಷಧಿ ಕೊಡುವವರು ಹೌದು. ಅಷ್ಟೆ ಮುಖ್ಯವಾಗಿ ಅವರ ಕುಲದ ಹಿರಿಯರಲ್ಲಿ ಯಾರು ತೀರಿ ಹೋಗ್ತಾರೋ ಅವರನ್ನ ಅವರ ಹಿರಿಯರ ಜೊತೆಗೆ ಸೇರಿಸುವವರು. ಹಾಗೆ ಮಾಟ ಮಂತ್ರ ಮೋಡಿಗಳನ್ನು ಮಾಡುವವರು. ಮಹದೇಶ್ವರ ಆಗಲಿ, ಮಂಟೇಸ್ವಾಮಿ ಆಗಲಿ ಈ ವಿದ್ಯೆ ಗೊತ್ತಿದ್ದವರು. ಮನುಷ್ಯರ ಗಮನ ಸೆಳೆಯೋದಿಕ್ಕೆ ತಮ್ಮ ವಿದ್ಯೆಯ ಅನೇಕ ಚಮತ್ಕಾರಗಳನ್ನು ಅವರು ದುಡಿಸಿಕೊಂಡಿದ್ದಾರೆ. ಅವರು ಯಾವ ಉದ್ದೇಶದಿಂದ ದುಡಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕೆ ಅವನ್ನ ನಾವು ಗೌಣವಾಗಿ ಕಾಣುತಾ ಇದ್ದೀವಿ. ಅಷ್ಟೇ ಆದರೆ ಅವರು ಬಳಸಿಕೊಂಡಿರುವುದು ನಿಜ. ಅವರ ಉದ್ದೇಶದಲ್ಲಿ ತೀರ ಯಾಮಾರಿಸುವ ಕ್ರಿಯೆ ಇಲ್ಲದೆ ಇರೋದರಿಂದ ಮಾತ್ರ ನಾವು ಅವರನ್ನ ಬೇರೆಯಾಗಿ ಭಾವಿಸ್ತಾ ಇದೀವಿ.

ಇಂದ್ವಾಡಿ : ಬರಹದ ಮಹಾದೇಶ್ವರ ಅಷ್ಟೆ ಅಲ್ಲ, ಬರಹ ಗೊತ್ತಿಲ್ಲದ ಮೌಖಿಕ ಪರಂಪರೆಯ ಮಹಾದೇಶ್ವರ ಒಬ್ಬ ಇದ್ದಾನೆ. ಅವನನ್ನ ಪರಿಗಣಿಸಿ ಅಂತ ಕೇಳುವ ಒಂದು ನಿಲುವಿಗೆ ನಾವು ಬಂದ್ವೀ. ಇದರಾಚೆಗೆ ಏನ್ ಅನಿಸ್ತಾ ಇದೆ ಅಂತಂದ್ರೆ ಭಾಷೆಗೆ ಅದರದೇ ಆದ ಲಿಮಿಟೇಷನ್‌ಗಳಿವೆಯಲ್ಲ. ಈ ಭಾಷೆಯ ಮೂಲಕ ಅಭಿವ್ಯಕ್ತಿಸಲಿಕ್ಕೆ ಆಗದೆ ಇರುವಂತ ಇನ್ನೊಂದು ಸ್ಪೇಸ್ ಇದೆಯಲ್ಲ, ಮೌನ ಇದೆಯಲ್ಲ, ಅದನ್ನ ಗ್ರಹಿಸುವ ಅಥವಾ ಆ ಸ್ವರೂಪವನ್ನು ಅರ್ಥಮಾಡಿಕೊಳ್ಳಲಿಕ್ಕೆ ನಮ್ಮಲ್ಲಿ ಏನು ಸಾಧನೆಗಳಿದಾವೆ. ಗೆಶ್ಚರ್‌ಗಳಿದಾವೆ, ಸಂಜ್ಞೆಗಳಿದಾವೆ. ಈ ಸಂಜ್ಞೆಗಳನ್ನ ನನ್ನ ಭಾಷೆಯಿಂದ ಪರಿಪೂರ್ಣಗೊಳಿಸಲಿಕ್ಕೆ ಆಗಲ್ಲ. ಅದನ್ನ ಎಕ್ಸ್‌ಪ್ರೆಸ್ ಮಾಡೋದು ಹೇಗೆ ಅನ್ನೋದೂ ಒಂದು. ಇದರ ಜೊತೆಗೆ ರಿಚುವಲ್ಸ್‌ಗಳನ್ನು ನಾವು ಗ್ರಹಿಸುವ ಕ್ರಮಕ್ಕೂ ನೀಲಗಾರರು ಮತ್ತು ಒಕ್ಕಲಿನವರು ಗ್ರಹಿಸುವ ಕ್ರಮಕ್ಕೂ ವ್ಯತ್ಯಾಸವಿದೆ. ಈಗ ಮೌಖಿಕ ಅಂತ ಬಂದಿದ್ದೀವಿ. ಈ ಮೌಖಿಕದ ಆಚೆ ಮೌನ ಇದೆ, ಅದನ್ನ ಈ ಕಾವ್ಯಗಳ ಮೂಲಕ ತುಂಬಿಕೊಳ್ಳುವ ಸ್ವರೂಪದ ದಾರಿಗಳು ಇದಾವಲ್ಲ. ಅವು ನಮಗೆ ಬಹಳ ಮುಖ್ಯ.

ಕಿಕ್ಕೇರಿ : ಬಹಳ Importent ಇದು. ನಾನು ನಿನ್ನೆಯಿಂದಲೂ ಹೇಳ್ತಾ ಇದೀನಿ. ಕುರುಡು ದಾಣಗಳಿರುತ್ತವೆ ಅಂತ. ಈ ಕುರುಡುದಾಣಗಳೇ ಮೌನಗಳು. ಮತ್ತೆ ಇನ್ನೊಬ್ಬ ಏನು ಮಾಡುತಾನೆ ಆ ಮೌನವನ್ನು ಹಿಡುಕೊಂಡು ಇನ್ನೊಂದು ರೀತಿಯ ಸಂವಾದವನ್ನ ಮಾಡುತ್ತಾ ಬರುತ್ತಾನೆ. ಮೌಖಿಕ ಸಂಪ್ರದಾಯದಲ್ಲಿ ಇದು ಯಾವಾಗಲೂ ಆಗ್ತಾ ಇರುತ್ತೆ. ಯಾವುದೇ ಒಂದು ಮೌನವನ್ನು ಮತ್ತೆ ಅದನ್ನ ಮಾತು ಕೊಡೋದಿಕ್ಕೆ ಪ್ರಯತ್ನ ಪಡ್ತಾನೆ ಮತ್ತೆ ಫೇಲಾಗ್ತಾನೆ. ಈಗ ನಮಗೆ ಬೇಕಾದಷ್ಟು ೩೦೦೦ ರಾಮಾಯಣ ಯಾಕೆ ಬಂದಿವೆ ಅಂದ್ರೆ ಇಂಥ ಕುರುಡುದಾಣಗಳಿಂದ ಎಲ್ಲೆಲ್ಲೊ ಇರ‍್ತಾವೆ. ಬ್ಲೈಂಡ್ ಸ್ಪಾಟ್‌ನ್ನ ತಗೊಂಡು ಮತ್ತೆ ಕಟ್ಟುತ್ತಾನೆ. ಅದಕ್ಕೆ ನಾನು ಫೋಕ್ ಟೆಕ್ಸ್ಟ್‌ನ್ನ ಭಾಷೆಯಲ್ಲಿ ಮಾತ್ರ ನೋಡಬೇಡಿ ರಿಚ್ಯುವಲ್ ಮೂಲಕ ಟೆಕ್ಸ್ಟ್ ಮಾಡಿಕೊಂಡು ನೋಡಬೇಕು. ಪ್ರಾಯಶಃ ನಮಗೆ ಈ ಮೌನವನ್ನು ಮತ್ತೆ ಮಾತಾಗಿ ಕನ್‌ವರ್ಟ್ ಮಾಡಿ, ಹೊಸ ಮೌನವನ್ನು ಸೃಷ್ಟಿಮಾಡಿ ಮತ್ತೆ ಆ ಹೊಸ ಮೌನ, ಹೊಸ ಮಾತನ್ನಾಗಿ ಕನ್‌ವರ್ಟ್ ಮಾಡಿ ಈ ಪ್ರಕ್ರಿಯೆ ಜನಪದದಲ್ಲಿ ಯಾವಾಗಲೂ ಟೆಕ್ಸ್ಟ್‌ನಲ್ಲಿ ನಡೀತಾ ಇರುತ್ತೆ. ನಾವು ಪ್ರಿಂಟೆಡ್ ಆದರೆ ಏನಾಗಿರುತ್ತೆ ಅಷ್ಟಕ್ಕೆ ನಿಂತೋಗಿರುತ್ತೆ. ಆದರೆ ಬೇರೆ ಬೇರೆ ರೀತೀಲಿ ಇನ್‌ಟರ್‌ಪ್ರೀಟ್ ಮಾಡಬಹುದು ಅಥವಾ ಎಲ್ಲೋ ಬೇರೆ ರೀತಿ ರಿಯಾಕ್ಟ್ ಮಾಡೋ ಸಾಧ್ಯತೆ ಇದೆ. ಆದರೆ ಇಲ್ಲೇನಾಗಿದೆ, ಟೆಕ್ಸ್ಟ್ ಹೊಸದಾಗಿ ಸೃಷ್ಟಿಯಾಗ್ತಾ ಇರಬೇಕು. ಇಲ್ಲಿ ವರ್‌ಬಲ್, ನಾನ್‌ವರ್‌ಬಲ್ ಅಥವಾ ಬೋತ್. ಈ ಮೂರು ಇಟ್ಟುಗೊಂಡು ಒಂದು ಭಾಷೆ ಇನ್ನೊಂದು ಭಾಷೇತರ ಎರಡು ಸೇರಿ ಆಗುವಂತ ಮೂರನೇ ಕ್ರಿಯೆ. ಈ ಮೂರನ್ನು ನೋಡದೆ ಇದ್ದರೆ ಜನಪದ ಟೆಕ್ಸ್ಟ್‌ನ್ನ ನಾವು ನೋಡ್ಲಿಕ್ಕೆ ಆಗಲ್ಲ.

ವೆಂಕಟಸುಬ್ಬಯ್ಯ : Inclusion and exclusion ಬಗ್ಗೆ ಹೇಳುವಾಗ ಮಲೆ ಮಾದೇಶ್ವರ ಕಾವ್ಯದಲ್ಲಿ ಬ್ರಾಹ್ಮಣರ ಬಗ್ಗೆ ಬಂದಿರೋದು ಏನಾದರೂ ಇದೆಯಾ? ನಾನು ನೋಡಿದ ಯಾವುದೇ ಎಡಿಷನ್‌ನಲ್ಲಿ ಇಲ್ಲ. Why they have excluted brahmins for the text.

ಪಿ.ಕೆ. ರಾಜಶೇಖರ : ಒಂದೇ ಒಂದು ಸಂದರ್ಭ ಆ ತರ ಬಂದಿದೆ. ದೇವಾಲಯವನ್ನು ಕಟ್ಟಿಸಿದಂತ ಆಲಂಬಾಡಿ ಜುಂಜೇಗೌಡ ಪೂಜಾರಿಯನ್ನ ನೇಮಕ ಮಾಡ್ತಾನೆ. ಆದರೆ ಅವನು ಪೂಜೆ ಮಾಡೋಕೆ ಹೋದಾಗ ದೇವಾಲಯವೆಲ್ಲ ಅಲುಗಾಡಿ ಬಿಡುತ್ತೆ. ಆಗ ಅವನು ಹೆದರಿಕೊಂಡು ಓಡಿ ಬಿಡ್ತಾನೆ. ಆಗ ಅಲುಗಾಡುತಾ ಇರುವಾಗ ಅವನು ಹೆದರಿಕೊಂಡು ಓಡಿಹೋದಾಗ ಅಯ್ಯೋ ನಮ್ಮ ಅಪ್ಪಾಜೀನ ದೇವಾಲಯ ಅಡಗಿಸಿಕೊಂಡು ಬಿಡ್ತದೆ ಅಂತ ಹೇಳಿ ಬೇಡರ ಕಣ್ಣಪ್ಪ ಬಂದು ಲಿಂಗವನ್ನು ತಬ್ಬಿಕೊಳ್ತಾನೆ. ಆವಾಗ ಬೇಡರ ಕಣ್ಣಪ್ಪನ್ನ ನೀನೇ ನನ್ನ ಪೂಜಾರಿ ಅಂತ ಒಪ್ಪಿಕೊಳ್ತಾನೆ. ಬ್ರಾಹ್ಮಣರದು ಇದೊಂದೆ ಸಂದರ್ಭ ಎಲ್ಲೂ ಬಂದಿಲ್ಲ.

ಕುರವ ಬಸವರಾಜ್ : ಆದರೆ ಇದೆ ಸ್ಪಷ್ಟಗೊಳಿಸ್ತದೆ. ಅವರೊಳಗಿನ ಆತಂಕಗಳಿದೆಯಲ್ಲ ಪೂಜೆ ಮಾಡೋಕೆ ಹೋಗೋದರ ಹಿನ್ನೆಲೆಯ ಆತಂಕಗಳು ಕೂಡ ಇದೊಂದು ಪ್ರಮಾಣ ಧ್ವನಿಸ್ತದೆ ಅಂತ ಹೇಳಬಹುದು. ಯಾಕೆಂದರೆ ಯಾರನ್ನ ಪೂಜೆ ಮಾಡೋಕೆ ಹೋಗುತಿದೀವಿ ಅನ್ನೋ ಒತ್ತಡವೂ ಇದೆಯಲ್ಲ. ಅದು ಕೂಡ ಇದರಲ್ಲಿ ಬಹಳ ಹೆಚ್ಚು ಸ್ಪಷ್ಟವಾಗಿ ಹೊರಗೆ ಬರ‍್ತಾ ಇದೆ ಅಂತ ಕಾಣ್ತದೆ. ಈ ಉಲ್ಲೇಖ ಕೂಡ ಮುಖ್ಯವಾದ್ದು.

ಪಿ.ಕೆ. ರಾಜಶೇಖರ : ಮಾದಪ್ಪ ಒಕ್ಕಲಿಗರನ್ನು ಕೂಡ ಭಕ್ತರನ್ನಾಗಿ ಮಾಡಿಕೊಳ್ತಾನೆ ಹೊರತು ದೇವರ ಗುಡ್ಡರನ್ನಾಗಿ ಮಾಡಲ್ಲ. ಆಮೇಲೆ ಲಿಂಗಾಯತರಲ್ಲಿ ಒಬ್ಬಳು ಇರ‍್ತಾಳೆ ಚಿಕ್ಕೇರಿ ದೇವಮ್ಮ ಅಂತ ಅವಳನ್ನ ಹೋಗಿ ಸಂಹಾರ ಮಾಡ್ತಾನೆ. ಆದ್ದರಿಂದ ಇಲ್ಲಿ ಒಕ್ಕಲಿಗರಿಗೆ ಯಾರಿಗೂ ಧರ್ಮ ದೀಕ್ಷೆಯನ್ನು ಕೊಟ್ಟು ಗುಡ್ಡರನ್ನಾಗಿ ಮಾಡಿಲ್ಲ. ಒಕ್ಕಲಿಗರ ಹೊರತು; ಉಳಿದ ಎಲ್ಲ ಶೂದ್ರ ವರ್ಗದವರು ದೇವರ ಗುಡ್ಡರಾಗಿದ್ದಾರೆ.

ಕಿ.ರಂ.ನಾಗರಾಜ : ನಾವೇ, ಒಂದು ಗಂಟೆ ಆದ ಮೇಲೆ ಜನಪದ ಸಾಹಿತ್ಯವನ್ನು ಕೇಳೋಕಾಗಲ್ಲ ಅನ್ನೋ ವಾತಾವರಣ ಇದೆ ಈವಾಗ. ನಾವು ದೊಡ್ಡ ಸಾಹಿತ್ಯವನ್ನು ಮಾತನಾಡೋದು ಆದರೆ ಒಂದು ಗಂಟೆ ಆದ ಮೇಲೆ ನಾವು ಅದನ್ನ ಕೇಳಲ್ಲ. ನಾವು ಇರೋದು ಹೇಳಿಬಿಡಬೇಕು ಅದರಲ್ಲಿ ಮುಚ್ಚುಮರೆ ಬೇಕಾಗಿಲ್ಲ ಅಂತ. ಹಾಗೆ ನೋಡೋಕೆ ಹೋದ್ರೆ ಒಂದು ಗುಟ್ಟು ಇದೆ. ಜನಪದ ಸಾಹಿತ್ಯ ಇದೆಯಲ್ಲ ಅದನ್ನ ಬಹಳ ಬೇರೆ ರೀತಿಯಲ್ಲಿ ವಿವರಣೆ ಮಾಡಲಾಗಿದೆ. ಇದನ್ನ ಬಹಳ ಒಳ್ಳೆ ಮೆನ್ಯೂರ್ ಅಂತ ಕರೆಯೋದು ಜನಪದ ಸಾಹಿತ್ಯಾನ. ಗೊಬ್ಬರ ಬಹಳ ಮುಖ್ಯ ತಾನೇ, ಬೇರೆದನ್ನ ರೂಪಿಸಿಕೊಳ್ಳಬಹುದು ಅಂತ. ಹೋಮರ್ ನನ್ನೇ ತಗೊಂಡರೆ ಕ್ರಿ.ಶ. ೬ನೇ ಶತಮಾನದ ಹೊತ್ತಿಗೆ ರೂಪ ಬಂದಿದೆ ಅದಕ್ಕೆ, ಏಕೆಂದರೆ ಟ್ರಾಯ್ ನಗರದ ಪತನ ಆದ ತಕ್ಷಣ ಹೋಮರೈಟ್ಸ್ ಅಂದರೆ ಹೋಮರನ ಮಕ್ಕಳು ತಕ್ಷಣ ಪಾಪಿ ಪರದೇಶಿಗರಾಗಿ ಚೆಲ್ಲಾಪಿಲ್ಲಿಯಾಗಿ ಬಿಟ್ಟರು ಅವರು. ಆ ಚೆಲ್ಲಾಪಿಲ್ಲಿಯಾದಂತವರು ಹಿಂದ್ ಕುಶ್ ಪ್ರಾಂತದ ಕಡೆಗೆ ಬಂದ್ರು. ಅಲ್ಲಿದ್ದಂತಹ ವ್ಯಾಪಾರಿಗಳು ಹಿಡುಕೊಂಡರು. ಏಕೆಂದರೆ ನಾನು ಈ ಟ್ರಾಯ್ ನಗರದ ಪತನ ಆದ ಮೇಲೆ ಗೆದ್ದ ರಾಜನನ್ನೆ ಈ ನಾಲಿಗೇಲೆ ಹ್ಯಾಗೆ ಅವನನ್ನು ಕುರಿತು ಹಾಡೋಣ ನಾವು. ಇಲ್ಲೀತನಕ ಹಾಡುತಾ ಇದ್ದೀವಿ ಬೇರೆ. ಅಖಿಲಸಂ ಕುರಿತು ಹೇಳುತಾ ಇದ್ದೀವಿ ನಾವು. ವಲಿಸಿಯಸ್ ಕುರಿತು ಹಾಡುತಾ ಇದ್ದೀವಿ ನಾವು. ಈವಾಗ ನಾವು ಗೆದ್ದರಾಜನನ್ನು ನಾವು ಹಾಡಬೇಕಲ್ಲ ಆಗ ನಾವು ಹಾಡಲ್ಲ ಅಂತ ಹೇಳಿ ಅವರು ಹೊರಟುಬಿಟ್ರು. ಆಗ ವ್ಯಾಪಾರಿಗಳು ಅವರನ್ನು ಹಿಡಿದು ಬನ್ನಿ ನೀವು ಹಾಡಿ ಅಂತ ಹೇಳಿ ಅವರಿಗೆ ರಕ್ಷಣೆಯನ್ನು ಕೊಟ್ಟು ಅನ್ನ ಬಟ್ಟೆ ಕೊಟ್ಟು ಎಲ್ಲ ಮಾಡಿ ಅವರಿಂದ ಆ ಕಾವ್ಯವನ್ನು ಹೇಳಿಸಿದರು. ಹಾಗೆ ಷೇಕ್ಸ್‌ಪಿಯರ್‌ನ ಪೋಲಿಯೋ ಮತ್ತು ಮಾಂಟೋ ಸಿದ್ಧವಾಯಿತು. ಆ ಲೆಟರ್‌ನ ಹಿಡಿದು ಆರಿಸಿ ಹೋಮರ್ ಕಾವ್ಯ ರಕ್ಷಿಸಲಾಯಿತು. ಕ್ರಿ.ಶ. ೬ನೇ ಶತಮಾನಕ್ಕೆ ಮುಂಚೆ ಹೋಮರ್‌ನ ಕಾವ್ಯ ಅಡ್ಡಾದಿಡ್ಡಿ ಕಾವ್ಯಾನೇ. ಆಮೇಲೆ ಅಷ್ಟೇನೇ ಎಷ್ಟೋ ಕಾಲ ಬೇರೆ ಬೇರೆ ರೀತಿ ಅನುವಾದ ಬಂದವು ಎಲ್ಲ ಆಗಿ ಲೇಟೆಸ್ಟ್, ಆ ರೀತಿ ಪರ್‌ಫಾರ್‌ಮೆನ್ಸ್ ಜೊತೆಯಲ್ಲಿ ನಾವು ಉಳಿಸದೇ ಇದ್ದರೆ ನಮ್ಮ ಫೋಕ್ ಎಪಿಕ್ಸ್ ಕೂಡ ಮುದ್ರಣಗೊಂಡ ಪುಸ್ತಕದ ಮಟ್ಟಕ್ಕೆ ಇಳಿದು ಬಿಡುತ್ತೆ.

ಆ ಶಿವರಾತ್ರಿ ದಿವಸ ನಾವು ‘ಮಂಟೇದಿನ’ ಅಂತ, ಆಚರಿಸಿದೀವಿ ಬೆಂಗಳೂರಲ್ಲಿ, ನೀವು ಯಾರಾದರೂ ನಂಬ್ತೀರಿ, ಬಿಡ್ತೀರಿ ಗೊತ್ತಿಲ್ಲ. ನನಗೆ ಬನ್ನೂರು ಕೆಂಪಮ್ಮ, ರಾಜಮ್ಮ, ಮಾದಪ್ಪ, ಮೂರು ತಂಡ ಸೇರಿ ಎರಡು ತಂಡ ಆದರೂ ಮೂರು ಪ್ರತ್ಯೇಕ ತಂಡ ಅವು. ಆದರೆ ಆ ಹೊತ್ತಿನ ಪರ್‌ಫಾರ್‌ಮೆನ್ಸ್‌ಗೆ ಅವರು ಎರಡು ತಂಡ ಆದರು. ಒಂದು ಬಲಮುರಿ ಇನ್ನೊಂದು ಎಡಮುರಿ. ರಾತ್ರಿ ಆರೂವರೆ ಏಳು ಗಂಟೆಗೆ ಸುರುವಾದ ಕಾವ್ಯ ಮಾರನೆ ದಿವಸ ಬೆಳಿಗ್ಗೆ ಆರುವರೆ ಏಳು ಗಂಟೆವರೆಗೆ ನಿರಂತರವಾಗಿ ನಡೀತು. ನಮಗೆ ಬಂದೋರಿಗೆ ಜಾಗ ಹೊಂದಿಸಿಕೋಡೋದು ಕಷ್ಟ ಆಯ್ತು. ಯಾವೋದು ಕನಕಪುರದಿಂದ ಅದೆಲ್ಲೋ ಪೇಪರಲ್ಲಿ ಬಂದಿದ್ದು ಸಾಕು ಅಷ್ಟೇ ಆಂಗೆ ಹಿಡಕೊಂಡು ಸುಮ್ಮನೆ ಬಂದು ಬಿಟ್ರು. ಅವರ್ಯಾರು ಎದ್ದೋಗ ಸಮಾಚಾರನೇ ಇರಲಿಲ್ಲ. ಕಲಾವಿದರಲ್ಲೂ ಅಷ್ಟೇ ಸ್ಪರ್ಧೆ ಬಂದುಬಿಡ್ತು ಅವರನ್ನ ನಿಯಂತ್ರಣ ತರೋದೆ ಕಷ್ಟವಾಯ್ತು ನಮಗೆ. ಬೆಂಗಳೂರು ಅಂತ ನಗರದ ಒಳಗಡೆ ನ್ಯಾಷನಲ್ ಕಾಲೇಜ್, ಜಯನಗರದ ದೊಡ್ಡ ಹಾಲ್‌ನಲ್ಲಿ ಆವತ್ತು ಕಲೆಕ್ಟ್ ಆದಂತ ಹಣಾನೆಲ್ಲ ಎರಡೂ ತಂಡದವರಿಗೆ ಬಹಳ ಆರಾಮಾಗಿ ಹಂಚಿಬಿಟ್ಟು ನಾವು ಮನೆಗೆ ಹೋದ್ವಿ.

ಪಿ.ಕೆ. ರಾಜಶೇಖರ : ಈಗ ನನ್ನದೊಂದು ಮಾತು. ಈ ಮುದ್ರಿತ ಪಠ್ಯಗಳನ್ನು ಕುರಿತು ನೀವು ಕೇವಲವಾಗಿ ಮಾತನಾಡಿದಿರಿ ಅಂತ ನಾನು ಅಂದುಕೊಂಡಿದೀನಿ. ಬಹುಶಃ ಆ ಪಠ್ಯಗಳ ಸಂಗ್ರಹ ಕಾವ್ಯ ನಡೀದೇನೆ ಮುದ್ರಣ ಆಗದೇ ಇದ್ದ ಪಕ್ಷದಲ್ಲಿ ಈ ವಿದ್ವಾಂಸರುಗಳಿಗೆ ಇಂಥ ಪಠ್ಯಗಳಿವೆ ಅನ್ನೋ ಕಲ್ಪನೇನೇ ಬರ‍್ತಾ ಇರಲಿಲ್ಲ.

ಕಿ.ರಂ : ಸಾರ್, ನಾನು ಅದನ್ನ ನಿರಾಕರಿಸ್ತಾ ಇಲ್ಲ. ನೋಡಿ ಪಠ್ಯ ಅದು ಹೇಗೆ ಅಂತಂದ್ರೆ ನಿಮ್ಮತ್ರ ಇರೋದು ಕಾಲು ಭಾಗದ ಪಠ್ಯ ಅಷ್ಟೆ.

ಪಿ.ಕೆ. ರಾಜಶೇಖರ : ನನಗೆ ಅದು ಒಪ್ಪಿಗೆ ಇದೆ. ಆದರೆ ಆ ಸಂಗ್ರಹಕಾರ್ಯದ ಕ್ಷೇತ್ರ ಕಾರ್ಯದ ದಿನಗಳಲ್ಲಿ ಈ ಹೊತ್ತಿನ ಆಡಿಯೋ, ವಿಡಿಯೋ ಸೌಲಭ್ಯಗಳು ಇಲ್ಲದೇ ಇದ್ದಾಗ ಆ ಕೆಲಸ ಅನಿವಾರ್ಯವಾಗಿತ್ತು. ಅದೇ ಸಾರ್ ಒಬ್ಬನೇ ಕಲಾವಿದ ಮತ್ತೆ, ಮತ್ತೆ ಹಾಡಿದಾಗ ಆಗುವ ಬೇರೆ ಬೇರೆ ವರ್ಷನ್ ಆ ಕಲ್ಪನೆ ನನಗಿದೆ. ಆದರೆ ಕೊನೆ ಪಕ್ಷ ಅಧ್ಯಯನದ ದೃಷ್ಟಿಯಿಂದ ಮೊದಲು ಒಂದು ಪಾಠವನ್ನು ನಾವು ಕೊಡದೆ ಇದ್ದರೆ ಇಂಥದ್ದು ಇದೆ ಅನ್ನೋದರ ಕಲ್ಪನೆಗೆ ನಾಗರಿಕ ಜಗತ್ತಿನ ವಿದ್ವಾಂಸರಿಗೆ ಗೊತ್ತಾಗಲ್ಲ. ಆಮೇಲೆ ಏನು ಚರ್ಚೆ ಮಾಡ್ತೀರಾ? ನೀವು ಈ ಚರ್ಚೆಯೆಲ್ಲ ಮಾಡ್ತಾ ಇರೋದು ಮುದ್ರಿತ ಕೃತಿಯ ಆಧಾರದ ಮೇಲೆಯೇ ಹೊರತು ನೀವು ಸ್ವಂತ ಅದನ್ನ ಯಾರು ಕಲೆಕ್ಟು ಮಾಡಿಲ್ಲ, ಕೇಳಿಯೂ ಇಲ್ಲ.

ಹಳೆಮನೆ : ಸಾರ್ ಒಂದು ಈಗ ನೀವು  ಹೋಮರೈಟ್ಸ್ ನ ಕುರಿತು ಮಾತನಾಡಿದಾಗ ಈ ಪ್ರಶ್ನೆಯನ್ನು ಎತ್ತಬೇಕು ಅನ್ಕೊಂಡಿದ್ದೆ. ಬೇಡ ಆ ಚರ್ಚೆ ಅಂತ ಹೇಳಿ ಸುಮ್ಮನೆ ಇದ್ದೆ. ಈಗ ಇವರು ಎತ್ತಿದರು. ಒಂದು ಸಣ್ಣ ಕಲ್ಪನೆ ಮಾಡಿಕೊಳ್ಳೋಣ. ಆ ಹೋಮರೈಟ್ಸ್‌ನ ವರ್ತಕರು ಹಿಡಿದು ಅವರಿಗೂ ಪ್ರಟೋಕ್ಸ್‌ನ್ ಕೊಡ್ತೀವಿ ಅಂದು ಅದನ್ನ ಟ್ರಾನ್ಸ್‌ಲೇಟ್ ಮಾಡಿದರು. ಒಂದು ಪಕ್ಷ ಮಾಡದೆ ಇದ್ದಿದ್ದರೆ ಈ ಹೊತ್ತಿಗೂ ಆ ಕಾವ್ಯಗಳು, ಎಷ್ಟು ಕಾನ್‌ಟೆಂಪರರಿ ಆಗಿ, ಎಷ್ಟು ಅಡಿಷನ್‌ಗಳನ್ನು ಸೇರಿಸಿಕೊಂಡು ಬೆಳೀತಾ ಹೋಗಿದ್ದಿರಬಹುದು ಅನ್ನೋದು ಒಂದು ಕಲ್ಪನೆ. ಆದರೆ ಅವರು ೭ನೇ ಶತಮಾನದಲ್ಲಿ ಅವನ್ನ ಟೆಕ್ಸ್ಟ್ ಆಗಿ ಕನ್ವರ್ಟ್ ಮಾಡಿದ ಮೇಲೆ ಅದು ಬೆಳಿಯೋದು ನಿಂತೇ ಹೋಯಿತು. ಬಹುಶಃ ಟ್ರಾಯ್‌ನ ಇತಿಹಾಸವೇ ಆಗಲಿ, ಅಥವಾ ಹೆಲನ್ ಅವರದ್ದಾಗಲಿ ಆ ಥರದ್ದು ಆಗಿರುವ ಸಾಧ್ಯತೆ ಇದೆ. ಈ ಹೊತ್ತು ಬಾಡ್ಜ್ ರೂಪದಲ್ಲಿ ಇದೆ ಅಂತ ಹೇಳಿ ನಾನು ನಂಬಲಾರೆ. ಅದನ್ನ ನನಗೆ ಓಡಸ್ಸಿಯಲ್ಲಿ ಆ ಫಾರ್ಮ್‌ಗಳು ಇದೆಯಾ ಅಂತ ಅನುಮಾನಗಳಿವೆ. ಅದನ್ನ ನಾನು ಹೇಳ್ತಾ ಇರೋದು. ಅದಕ್ಕೆ ಕ್ಲಾಸಿಕಲ್ ಸ್ಟೇಟಸ್ಸನ್ನ ಬಹಳ ಹಿಂದೇನೆ ಕೊಟ್ಟಿದ್ದೀವಿ.

ಕಿ.ರಂ : ನೀವು ಹೇಳ್ತಾ ಇರೋದು ಸರಿ, ಈ ಓಲ್ಡ್‌ಗ್ರೀಕ್ ಇದೆಯಲ್ಲ, ಆ ಓಲ್ಡ್‌ಗ್ರೀಕ್ ವ್ಯಾನಿಶ್ ಆಗಿ ಹೋಯ್ತು. ಇಲಿಯಡ್ ಮತ್ತು ಒಡೆಸ್ಸಿ ಓಲ್ಡ್‌ಗ್ರೀಕ್ ಟೆಕ್ಸ್ಟ್ ಅದು. ಈ ಸ್ಕಲಸ್ ಮತ್ತು ಸಾಪೋಕ್ಲಿಸ್ ಕೂಡ ಓಲ್ಡ್‌ಗ್ರೀಕ್ ಟೆಕ್ಸ್ಟ್ ಅದು. ಮಾಡರನ್ ಗ್ರೀಕ್‌ಗೆ ಬರಲೇ ಇಲ್ಲ. ಅದೇ ತರ ಓಲ್ಡ್ ಚೈನೀಸ್ ಟೆಕ್ಸ್ಟ್ ನೂ ಹಾಗೇನೇ. ಜನಪದ ಕಾವ್ಯಗಳ ಸಂರಚನೆ ಹೇಗೆಂದರೆ ಅವನ ಹತ್ತಿರ ಕಾಡಿನ ವರ್ಣನೆ ಇರುತ್ತದೆ, ನದಿಯ ವರ್ಣನೆ ಇರುತ್ತದೆ, ಪರ್ವತದ ವರ್ಣನೆ ಇರುತ್ತದೆ, ಸಾವಿನ ವರ್ಣನೆ ಇರುತ್ತದೆ, ಹುಟ್ಟಿದ ವರ್ಣನೆ ಇರುತ್ತೆ, ಮದುವೆಯ ವರ್ಣನೆ ಇರುತ್ತೆ, ಈ ತರದ ವರ್ಣನೆಗಳೆಲ್ಲ ಇರುತ್ತವೆ. ಆ ಕತೆಗೆ ಅನುಗುಣವಾಗಿ ಆ ವರ್ಣನೆಗಳನ್ನ ಜೋಡಿಸುತ್ತಾ ಜೋಡಿಸುತ್ತಾ ಹೂ ಕಟ್ಟೋ ರೀತೀಲಿ ಕಾವ್ಯ ಕಟ್ಟುತ್ತಾರೆ.

ಪಿ.ಕೆ.ರಾಜಶೇಖರ : ಕರಪಾಲದಲ್ಲಿ ಅದನ್ನ ಇನ್ನೂ ಚೆನ್ನಾಗಿ ಗಮನಿಸಬಹುದು. ಅವನಿಗೆ ಕೆಲವು ಸಿದ್ಧ ಪದ ಜೋಡಣೆಗಳು ಇದಾವೆ. ಅವುಗಳನ್ನ ಯಾವ ಸಂದರ್ಭದ ಕತೆಗೆ ಬೇಕೋ ಆ ಸಂದರ್ಭದೊಳಗೆ ಬಳಸಿಕೊಳ್ತಾರೆ. ಇದೇ ಕತೆಗೆ ಇದೇ ಬೇಕು ಅನ್ನೋ ನಿಯಮಗಳೇನು ಇಲ್ಲ.

ಕಿ.ರಂ : ಅದಕ್ಕೆ ಹೇಳಿದೆನಲ್ಲ ಹೆಣ್ಣು ಮಕ್ಕಳ ಆಭರಣದ ಪೆಟ್ಟಿಗೆ ಇದ್ದಂಗೆ ಇದು ಅಂತ. ಅವರು ರಿಸೆಪ್ಷನ್‌ಗೆ ಹೋಗುವಾಗ ಒಂದು ತರ ಒಡವೆಗಳನ್ನು ಉಪಯೋಗಿಸ್ತಾರೆ. ಯಾವುದೋ ಒಂದು ನಾಮಕರಣಕ್ಕೆ ಹೋಗುವಾಗ ಒಂದು ತರದ ಒಡವೆಗಳನ್ನು ಉಪಯೋಗಿಸ್ತಾರೆ. ಗೌರಿಪೂಜೆಗೆ ಒಂದು ರೀತಿ, ಇನ್ನೊಂದು ಹಬ್ಬದ ದಿವಸ ಇನ್ನೊಂದು ರೀತಿ ಧರಿಸಿಕೊಳ್ಳೋ ಹಾಗೆ ಇವರು ಯಾವ ಕತೆಗೆ ಆದ್ರೂ ಸೇರಿಸ್ತಾ ಇರ‍್ತಾರೆ.