ಮಲೆಯ ಮಾದಪ್ಪನ ಪರಂಪರೆಯನ್ನು ಸಾಂಸ್ಕೃತಿಕವಾಗಿ ಮುಖಾಮುಖಿ ಮಾಡುವ ಮೊದಲು ನೂರೈವತ್ತು ವರ್ಷಗಳ ಇತಿಹಾಸವಿರುವ ಜಾನಪದ ಎಂಬ ಶಾಸ್ತ್ರಶಿಸ್ತಿನ ಸ್ವರೂಪ, ಚರಿತ್ರೆ, ಆತಂಕಗಳನ್ನು ಹಂಚಿಕೊಳ್ಳುವ ಒಂದು ಸುಸಂದರ್ಭ ಇದಾಗಿದೆ. ಅಕಾಡಮಿಕ್ ಆಗಿ ಹೇಳುವುದಾದರೆ ಇಂದು ಯಾವ ಶಾಸ್ತ್ರಶಿಸ್ತುಗಳ ಸ್ವಾಯತ್ತವಾಗಿಲ್ಲ. ಅನ್ಯ ಜ್ಞಾನಗಳ ಸಂಬಂಧವಿಲ್ಲದೆ ಅವು ಸ್ವಯಾರ್ಜಿತವಾಗುವ ನೆಲೆಯಲ್ಲಿ ಇಲ್ಲ. ಸಾಹಿತ್ಯವೆಂದರೆ ಅದೊಂದು ಸೌಂದರ್ಯಶಾಸ್ತ್ರ ಎನ್ನುವ ಕಾಲ ಒಂದಿತ್ತು. ಜನಪದವನ್ನು ಸಮಾಜ ಶಾಸ್ತ್ರಶಿಸ್ತಿನ ಭಾಗವೆಂದು ಗುರುತಿಸಿದರೂ ಕರ್ನಾಟಕದಲ್ಲಿ ಅದು ಸಾಹಿತ್ಯದೊಡನೆಯೇ ಹೆಚ್ಚು ಗುರುತಿಸಿಕೊಂಡಿದೆ. ಇಂದು ಜನಪದವನ್ನು ಅಧ್ಯಯನ ಮಾಡಿರುವವರು, ಮಾಡುತ್ತಿರುವವರು ಎಲ್ಲ ಹೆಚ್ಚಿನ ಸಂಖ್ಯೆಯವರು ಸಾಹಿತ್ಯದ ಎಂ.ಎ. ಮಾಡಿದವರೇ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಮೊದಲು ಇದನ್ನು ಒಂದು ಪಠ್ಯಕ್ರಮವಾಗಿ ಜಾರಿಗೆ ತಂದಿತು, ಆದರೆ ಒಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಎಂ.ಎ. ಮಾಡಿದವರಿಗೆ ಕಾಲೇಜುಗಳಲ್ಲಿ ಉದ್ಯೋಗದ ಅವಕಾಶಗಳು ಇರುವ ಹಾಗೆ ಜನಪದ ಎಂ.ಎ. ಮಾಡಿದವರಿಗೆ ಇರಲಿಲ್ಲಾ, ಕರ್ನಾಟಕದ ಸಂಸ್ಕೃತಿಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದ್ದದ್ದು ಈ ಶಾಸ್ತ್ರಶಿಸ್ತಿಗೆ ಮಾತ್ರ. ಆದರೆ ಶಿಷ್ಟ ಸಾಃಇತ್ಯದ ಆರಾಧಕರ ಗುಂಪು ಇದನ್ನು ಮುನ್ನೆಲೆಗೆ ತರುವಲ್ಲಿ ಬಹುದೊಡ್ಡ ರಾಜಕಾರಣಮಾಡಿ ಅದನ್ನು ಮೂಲೆ ಗುಂಪಾಗಿಸುವ ಪ್ರಯತ್ನ ಮಾಡಿತು. ಈಗಲೂ ಜನಪದ ಎಂಬ ಶಾಸ್ತ್ರಶಿಸ್ತು ಕಲಾ ಪ್ರಕಾರವೋ, ಸಮಾಜ ವಿಜ್ಞಾನಗಳ ಪ್ರಕಾರವೋ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ವಸಾಹತುಶಾಹಿ ಉಂಟುಮಾಡಿರುವ ಬಿಕ್ಕಟ್ಟು ಇದು. ಹೀಗೆ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಈ ಶಾಸ್ತ್ರಶಿಸ್ತನ್ನು ಮುನ್ನೆಲೆಗೆ ತರಲಾಗದೆ ಅದನ್ನು ಸಾಂಸ್ಥಿಕಗೊಳಿಸುವ ಪ್ರಯತ್ನದ ಭಾಗವಾಗಿ ಜಾನಪದ ಯಕ್ಷಗಾನ ಅಕಾಡೆಮಿಯನ್ನು ಹುಟ್ಟು ಹಾಕಲಾಯಿತು. ಶಿಷ್ಟ ಪರಂಪರೆಯ ಮುಖ್ಯ ವಾರಸುದಾರರಾಗಿ ಗುರುತಿಸಿಕೊಂಡ ಬ್ರಾಹ್ಮಣ ಮತ್ತು ಲಿಂಗಾಯತ ಪಾಲಿಟಿಕ್ಸ್‌ಗೇ ಸವಾಲು ಹಾಕುವ ತರದಲ್ಲಿ ಕರ್ನಾಟಕದ ಶೂದ್ರ ಜಾತಿಯವರು ಅಕಾಡೆಮಿಯ ಅಧ್ಯಕ್ಷ ಸ್ಥಾನಪಡೆಯುವಲ್ಲಿ ಯಶಸ್ವಿಯಾದರು. ಮೂರು ವರ್ಷಗಳ ಅವಧಿಯಲ್ಲಿ ಪ್ರಶಸ್ತಿಗಳನ್ನು ಕೊಡುವುದು, ವಿಚಾರ ಸಂಕಿರಣಗಳನ್ನು ನಡೆಸುವುದು, ಕಲಾ ಮೇಳಗಳನ್ನು ಮಾಡುವುದು, ಅಳಿದುಳಿದ ಜನಪದ ಸಾಹಿತ್ಯವನ್ನು ಸಂಗ್ರಹಿಸುವುದು ಇತ್ಯಾದಿಗಳಲ್ಲಿ ತೊಡಗಿಕೊಂಡರೇ ಹೊರತು ಕರ್ನಾಟಕದಲ್ಲಿ ಈ ಒಂದು ಜ್ಞಾನಶಿಸ್ತಿನ ಮಹತ್ವವೇನು ಅದನ್ನು ಇತರ ಜ್ಞಾನ ಶಿಸ್ತುಗಳ ತರ ಮುನ್ನೆಲೆಗೆ ತರುವುದು ಹೇಗೆ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಲಿಲ್ಲ, ಇವೆಲ್ಲಾ ಕಾರಣಗಳಿಂದ ಈ ಶಾಸ್ತ್ರಶಿಸ್ತು ಅವನತಿಯ ದಾರಿ ಹಿಡಿದಿದೆ. ಉದಾಹರಣೆಗೆ ಈ ವರ್ಷ ಜನಪದವನ್ನು ಮೊಟ್ಟಮೊದಲಿಗೆ ಪ್ರಾರಂಭಿಸಿದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಬ್ಬ ವಿದ್ಯಾರ್ಥಿಯೂ ಜನಪ ಎಂ.ಎ.ಗೆ ಅರ್ಜಿ ಸಲ್ಲಿಸಿಲ್ಲ. ಇದನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಎಂ.ಎ.ಗೂ ಇದೇ ಸ್ಥಿತಿ ಪ್ರಾಪ್ತವಾಗುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಇದರ ಆಚೆಗೆ ಇಂದು ಜನಪದ ಕ್ಷೇತ್ರದಲ್ಲಿ ಮಾತ್ರ ಸಂಶೋಧನೆಗಳನ್ನು ಮಾಡಲು ಸಾಧ್ಯ ಎನ್ನುವ ಅರಿವು ಉಂಟಾಗುತ್ತಿದೆ. ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗದಲ್ಲಿ ಪಿಎಚ್‌.ಡಿಗೆ ನೋಂದಾಯಿಸುವಾಗ ಜನಪದ ವಸ್ತುವನ್ನು ತರುವವರೇ ಹೆಚ್ಚು. ಇದು ಏನನ್ನು ಸೂಚಿಸುತ್ತಿದೆ ಎಂದರೆ ಏನಾದರೂ ಅಧ್ಯಯನ ಮಾಡಬೇಕು ಎಂದರೇ ಅಥವಾ ಮೌಲಿಕವಾದ ಕೆಲಸ ಮಾಡಬೇಕು ಎಂದರೆ ಇದು ಜನಪದದಲ್ಲಿ ಮಾತ್ರ ಎನ್ನುವ ನಂಬಿಕೆ ಬೆಳೆಯುತ್ತಿದೆ.

ಕನ್ನಡ ಸಾಹಿತ್ಯ ಪಂಪನಿಂದ ಮುದ್ದಣ್ಣನವರೆಗೆ ಆಧುನಿಕದಲ್ಲಿ ನವೋದಯದಿಂದ ದಲಿತ ಬಂಡಾಯದವರೆಗೆ ವಿಸ್ತರಿಸಿದ್ದರು, ಈ ಶಾಸ್ತ್ರಶಿಸ್ತಿನ ಸಮಸ್ಯೆ ಎಂದರೆ ತನ್ನನ್ನು ತಾನು ವಿಸ್ತರಿಸಿಕೊಳ್ಳದೇ ಹಳೆಯ ಪಠ್ಯಕ್ರಮಗಳಿಗೆ ಜೋತು ಬಿದ್ದಿದೆ. ಆದ್ದರಿಂದ ಇದು ತನ್ನ ಅರಿವಿಗೆ ಬರದೋಪಾದಿಯಲ್ಲಿ ಜನಪದ ಎಂಬ ಕನ್ನೆನೆಲೆದ ಬೆನ್ನತ್ತಿದೆ. ಆದರೆ ಸಾಂಸ್ಥಿಕ ನಿಯಾಮಾನುಸಾರ ಜನಪದಕ್ಕೂ ಸಾಹಿತ್ಯಕ್ಕೂ ಸಂಬಂಧವಿಲ್ಲ ಎಂದು ಕೆಲವರು ಆಕ್ಷೇಪ ತೆಗೆದುಕೊಳ್ಳುತ್ತಾರೆ. ಆದರೆ ಜನಪದ ಏಕೆ ಮುಖ್ಯ ಎಂದರೆ ಅದು ಸಾಹಿತ್ಯದ ಚರ್ಚೆಯ ಒಟ್ಟೊಟ್ಟಿಗೆ ಸಮುದಾಯವನ್ನು ಒಳಗೊಂಡ ಚರ್ಚೆಯಾಗಿ ಬೆಳೆದು ಬಂದಿರುವುದರಿಂದ ಅದಕ್ಕೊಂದು ಶಕ್ತಿ ಉಳಿದುಕೊಂಡಿದೆ. ಮಾದಪ್ಪನ ಪಠ್ಯದ ಬಗ್ಗೆ ಮಾತಾಡುವಾಗ ನಾವು ಅವರು ಹಾಡುವ ಪಠ್ಯವೊಂದನ್ನೇ ಕೇಂದ್ರ ಮಾಡಿಕೊಳ್ಳುವುದಿಲ್ಲ. ಇಲ್ಲಿ ಅನಕ್ಷರಸ್ಥನೆಂದು ಕಲೆಯಲ್ಪಟ್ಟ ಕಾರಾಪುರದ ಪುಟ್ಟಮಾದಯ್ಯ ಇದ್ದಾನೆ, ನಾವು ಕಂಡ ಅನುಭವಿಸಿದ ಅನೇಕ ಆಚರಣೆಗಳು ಇವೆ, ಆ ಕ್ಷೇತ್ರದ ರಾಜಕೀಯ ಇರುತ್ತದೆ, ನಂಬಿಕೆಯ ಲೋಕವಿರುತ್ತದೆ, ಇದೆಲ್ಲವನ್ನು ಹೇಗೆ ವಿವರಿಸಬೇಕೆಂಬ ನಮ್ಮ ಆಧುನಿಕ ಮನಸ್ಸಿನ ತಲ್ಲಣಗಳು ಇರುತ್ತವೆ.

ನಾವು ಈ ವಿಚಾರ ಸಂಕಿರಣದಲ್ಲಿ ಕಾರಾಪುರದ ಪುಟ್ಟಮಾದಯ್ಯ ಹಾಡಿದ ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿದ ಮಲೆಯ ಮಾದಪ್ಪನ ಪಠ್ಯವನ್ನು ಮುಖ್ಯವಾಗಿಸಿಕೊಂಡಿದ್ದೇವೆ. ದೇವರ ಗುಡ್ಡರ ಪರಂಪರೆಯನ್ನು ಆ ಪರಂಪರೆಯ ನಂಬಿಕೆ ಆಚರಣೆಗಳನ್ನು ಆಕರವಾಗಿಸಿಕೊಂಡಿದ್ದೇವೆ. ಆದರೆ ಸಾಂಸ್ಥಿಕ ನಿಯಮಗಳು ಎಷ್ಟು ಕಠೋರವಾಗಿದೆ ಎಂದರೆ ಕಲಾವಿದನಿಗೆ ನಮ್ಮ ನಿಯಮದಲ್ಲಿ ಯಾವ ಸ್ಥಾನವನ್ನು ಕಲ್ಪಿಸಿಲ್ಲ. ಇನ್‌ಸ್ಟಿಟ್ಯೂಷನ್‌ ಆಗುವುದರ ಹಿಂದಿನ ದುರಂತ ಇದು. ಆದ್ದರಿಂದ ನೂರೈವತ್ತು ವರ್ಷಗಳ ಚರಿತ್ರೆ ಇರುವ ಜನಪದ ಸಾಹಿತ್ಯವನ್ನು ಶಿಷ್ಟ ಸಾಹಿತ್ಯದವರು ತಮ್ಮ ಉಳಿವಿಗಾಗಿ ಬಳಸಿಕೊಂಡರೇ ಹೊರತು, ಜನಪದರಿಗೆ ಸಲ್ಲಬೇಕಾದ ನ್ಯಾಯದ ಬಗ್ಗೆ ಯಾವ ನಿಯಮವನ್ನು ರೂಪಿಸಲ್ಲ. ನೂರೈವತ್ತು ವರ್ಷಗಳ ಈ ಚಾರಿತ್ರಿಕ ಪಲ್ಲಟಗಳ ನಡುವೆಯೂ ಮಾದಪ್ಪನ ಪಠ್ಯ ಇಂದು ಮುಖ್ಯವಾಗಿ ಸಾಹಿತ್ಯ ಅಭ್ಯಾಸಿಗರ ಗಮನ ಸೆಳೆದು ಮರು ಚಿಂತನೆ ಮಾಡುವ ಅವಕಾಶ ಕಲ್ಪಿಸಿದೆ.

ದಕ್ಷಿಣ ಕರ್ನಾಟಕದ ಕಾವೇರಿ ನದಿಯ ಇಕ್ಕೆಲಗಳಲ್ಲಿ ದೇವರಗುಡ್ಡರ, ನೀಲಗಾರರ ಪರಂಪರೆಗಳು ಹಬ್ಬಿಕೊಂಡಿವೆ. ಇವೆರಡನ್ನು ಅವಳಿ ಸಂಪ್ರದಾಯಗಳೆಂದು ಜೀಶಂಪಾ ಮುಂತಾದ ವಿದ್ವಾಂಸರು ಕರೆದಿದ್ದಾರೆ. ಇದಕ್ಕೆ ಬಹಳ ಮುಖ್ಯ ಕಾರಣ ಈ ಎರದು ಪರಂಪರೆಗಳ ದೀಕ್ಷಾ ಸಂಪ್ರದಾಯ ಒಂದೇ ಆಗಿದೆ ಮತ್ತು ಪರಂಪರೆಯ ಸಾಂಸ್ಕೃತಿಕ ನಾಯಕರನ್ನು ಕುರಿತು ಹಾಡುವವರು ನೀಲಗಾರರು ದೇವರಗುಡ್ಡರು ಆಗಿರುತ್ತಾರೆ. ಆದರೆ ಈ ಮಹಾಕಾವ್ಯಗಳ ಇಬ್ಬರು ನಾಯಕರು ಸಮಕಾಲೀನರೇ ಎಂಬುದಕ್ಕೆ ಯಾವುದೇ ಆಕರಗಳು ಇಲ್ಲ.

ನೀಲಗಾರ ಪರಂಪರೆಯನ್ನು ಕುರಿತು ಅಧ್ಯಯನಕ್ಕೆ ಪ್ರಾರಂಭಿಸಿದಾಗ ಕೊಡೇಕಲ್ಲಿನಿಂದ ಕಾಡಂಕನದೊಡ್ಡಿಯವರೆಗೆ (ಬೊಪ್ಪೇಗೌಡನಪುರ) ಉತ್ತರ ದಕ್ಷಿಣಕ್ಕೆ ಹಬ್ಬಿಕೊಂಡಿರುವ ಸುದೀರ್ಘ ಸಿದ್ಧಪಥ ಗೋಚರಿಸಿತು. ಸುಮಾರು ನಾಲ್ಕು ನೂರು ವರ್ಷಗಳಿಂದ ವಿಸ್ಮೃತಿಗೆ ಒಳಗಾಗಿದ್ದ ಒಂದು ಲೋಕವೇ ತೆರೆದುಕೊಂಡಿತು. ಕಳೆದ ಹತ್ತು ವರ್ಷಗಳಲ್ಲಿ ಈ ಪರಂಪರೆಗಳನ್ನು ಕುರಿತ ಹತ್ತಾರು ವಿಚಾರ ಸಂಕಿರಣಗಳು, ಐದಾರು ಪಿಎಚ್‌.ಡಿ. ಮಹಾಪ್ರಬಂಧಗಳು, ನೂರಾರು ಲೇಖನಗಳು ಬೆಳಕಿಗೆ ಬಂದಿವೆ. ಕೊಡೇಕಲ್ಲು ಮಠದಲ್ಲಿದ್ದ ಆ ಕಾಲದ ಸಾಹಿತ್ಯ ಕೃತಿಗಳು ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡು ಅಧ್ಯಯನಕಾರರಿಗೆ ಒಂದು ಹೊಸ ಹುಮ್ಮಸ್ಸನ್ನೇ ಹುಟ್ಟಿಸಿದೆ. ಆದರೆ ಮಲೆಯ ಮಾದಪ್ಪನ ದೇವರಗುಡ್ಡ ಪರಂಪರೆಗೆ ಇಷ್ಟು ದೊಡ್ಡ ವ್ಯಾಪ್ತಿ ಇಲ್ಲ. ಮಾದಪ್ಪ ಉತ್ತರದೇಶದಿಂದ ಬಂದವನು  ಎಂಬುದು ಮಂಟೇಸ್ವಾಮಿಗಳಿಗೆ ಅನ್ವಯಿಸಿದ ಹಾಗೆ ಮಾದಪ್ಪನಿಗೆ ಅನ್ವಯವಾಗುವುದಿಲ್ಲ. ಇಲ್ಲಿ ಉತ್ತರ ದೇಶ ಎಂಬುದು ಕಾವ್ಯ ಪ್ರತಿಮೆಯಾಗಷ್ಟೇ ಉಳಿದು ಕೊಂಡಿದೆ. ಭೀಮನಕೊಲ್ಲಿಯಿಂದ ಏಳುಮಲೈಯವರೆಗೆ ಮಾತ್ರ ಅವನ ಸಂಚಾರ ಕಂಡು ಬರುತ್ತದೆ, ಅವನು ಸಂಚರಿಸಿದ ಕಡೆ ಒಕ್ಕಲಿನವರು ಇದ್ದಾರೆ. ಈ ಎರಡು ಸ್ಥಳಗಳ ನಡುವೆ ಅನೇಕ ತೋರು ಗದ್ದುಗೆಗಳು ಇವೆ. ಇದರ ಅರ್ಥ ಚರಿತ್ತೆಯನ್ನು ಹುಡುಕುವ ಅಧ್ಯಯನ ಮಾದರಿ ಮಾದಪ್ಪನ ಪರಂಪರೆಗೆ ಸಲ್ಲುವುದಿಲ್ಲ. ಚರಿತ್ರೆಯನ್ನು ಹುಡುಕುವ ಹಲವು ಚರಿತ್ರೆಗಳ ಹಿನ್ನೆಲೆಯಲ್ಲಿ ನೋಡುವ ಒಂದು ಅಧ್ಯಯನ ಮಾದರಿಯು ಹುಟ್ಟುತ್ತಿದೆ ಎಂಬುದಕ್ಕೆ ಈ ಸಾಂಸ್ಕೃತಿಕ ಮುಖಾಮುಖಿಯೇ ಸಾಕ್ಷಿಯಾಗಿದೆ.

ಯಾವುದೀ ಹಲವು ಚರಿತ್ರೆಗಳು

ಅ. ಸೋಲಿಗರ ಕಟ್ಟಿರುವ ಮಾದಪ್ಪ

ಆ. ಬೇಡಗಂಪಣರ ಮಾದಪ್ಪ

ಇ. ವೀರಶೈವ ಮಠಗಳು ಕಟ್ಟುತ್ತಿರುವ ಮಾದಪ್ಪ

ಈ. ನಾಲ್ಕು ನೆಲೆಗಳಲ್ಲಿ ಯಾವುದನ್ನು ನಿರಾಕರಿಸದೆ ಇಲ್ಲ ಸಿದ್ಧತೆಗಳು ಅಧ್ಯಯನಕ್ಕೆ ಏಕೆ ಮುಖ್ಯ ಎಂಬ ಚರ್ಚೆಯನ್ನು ಬೆಳೆಸಲಾಗಿದೆ.

ಅ. ಸೋಲಿಗರ ಮಾದಪ್ಪ

ಮಾದಪ್ಪ ತನ್ನ ಸಂಚಾರಕ್ಕೆ ಬೆಟ್ಟಗಳನ್ನು ಬೆಂಬತ್ತಿ ಬಂದವರು (ಮಂಟೇಸ್ವಾಮಿ ನದಿ ದಾರಿಗಳನ್ನು ಬೆಂಬತ್ತಿ ಬಂದವನು), ಪಶ್ಚಿಮ ಘಟ್ಟಗಳ ಬೆಟ್ಟ ಸಾಲಿನಿಂದ ಅವನ ಚಲನೆ ಕಾಣಿಸುತ್ತದೆ. ಭೀಮನಕೊಲ್ಲಿಯ ಕಾಕನಕೋಟೆ ಬೆಟ್ಟ ಪ್ರದೇಶದಿಂದ (ಹೆಗ್ಗಡದೇವನಕೋಟೆ ತಾಲೂಕು) ಗುಂಡಿಮಾಳ ಶ್ರವಣದೊರೆ ಬೆಟ್ಟ (ಕೊಳ್ಳೇಗಾಲ ತಾಲೂಕು) ಉಡುತೊರೆ ಹಳ್ಳ ಮಿಣ್ಯ ಬೆಟ್ಟಸಾಳು ಇಲ್ಲಿಂದ ಏಳುಮಲೆ ಹೀಗೆ ಅವನ ಸಂಚಾರ ಸಾಗಿದೆ. ಇಲ್ಲೆಲ್ಲಾ ಅವನ ತೋರು ಗದ್ದುಗೆಗಳು, ಒಕ್ಕಲಿನವರು ಇದ್ದಾರೆ. ಇಡೀ ಅರ್ಧಭಾಗದ ಕತೆ ಇಲ್ಲಿ ನಡೆಯುತ್ತದೆ. ಇದೆಲ್ಲ ದಟ್ಟ ಅರಣ್ಯ ಪ್ರದೇಶ. ಸೋಲಿಗರು ಹಾಡುವ ‘ಒಲ್ಗ’ ಎಂದು ಕರೆಯುವ ಕಥನದಲ್ಲಿ (ಇನ್ನು ಪ್ರಕಟವಾಗಿಲ್ಲ) ಲಿಂಗಾಯತರಿಗೇ ಪ್ರವೇಶವೇ ಇಲ್ಲ, ಮಂಡಲಗಳು, ಮಾಟದ ವಿವರಗಳು, ಹೆಣ್ಣು ಗಂಡು ಕೊಡುವಾಗ ಅನುಸರಿಸಬೇಕಾದ ಪದ್ಧತಿಗಳು, ಒಕ್ಕಲಿನ ರಕ್ಷಣೆಗೆ ಅವನು ಮಾಡು ನೇಮ ಕಟ್ಟುಗಳು ಇವು ಮಾತ್ರ ಬರುತ್ತವೆ. ಕೃಷಿಗೆ ಸಂಬಂಧಪಟ್ಟ ಯಾವ ವಿವರಗಳು ಇಲ್ಲಿ ಸೊಗೋಲ್ಲ. ಅಲೆಮಾರಿ ಜೀವನ, ಕಾಡಿನ ಗೆಡ್ಡೆಗೆಣಸು, ಜೇನುಬೇಟೆ, ಕಾಡು ಪ್ರಾಣಿಗಳನ್ನು ಹೇಗೆ  ಒಲಿಸಿಕೊಳ್ಳಬೇಕು ಇತ್ಯಾದಿಗಳು ಮಾತ್ರ. ಅವರಿಗೆ ಕರಿ ಹೈದನೆಂದರೆ ಮಾದಪ್ಪ. ಇವರಿಗೆ ಒಬ್ಬ ಹೈದ. ಬೇಡರ ಕಣ್ಣಪ್ಪ ಶಿವನಿಗೆ ಹೇಗೆ ಮಾಂಸವನ್ನು ಎಡೆ ಮಾಡುತ್ತಾಣೆ ಹಾಗೆ ಸೋಲಿಗರು ಹಬ್ಬ ಹರಿದಿನಗಳಲ್ಲಿ ಮಾದಪ್ಪನಿಗೆ ಮಂಶವನ್ನು ಎಡೆ ಹಾಕುತ್ತಾರೆ ಇವರ ಕುಲ ಕಥನದಲ್ಲಿ ಅವನಿಗೆ ಏಳಕಣ ಗುಡಿ ಇಲ್ಲ, ತಮ್ಮ ಆದಿಮ ದೈವವಾದ ಬೊಮ್ಮಪ್ಪನ ಹಾಗೆ ಇವನಿಗೂ ಸೊಲ್ಲಿನ ಗುಡಿಸಲು, ಆದರೆ ಇತ್ತೀಚೆಗೆ ಸಂಸ್ಕೃತೀಕರಣ ಪ್ರಕ್ರಿಯೆ ಪ್ರಭಾವ ಇವರ ಕಡೆಯೂ ಹರಿದು ಅವರು ಹಿಂದಿನಂತೆ ಮಾಂಸದ ಎಡೆ ಮಾಡಲು ಹೆದರುತ್ತಾರೆ. ಆದರೆ ಈ ಹಂತದಲ್ಲಿ ಅವನು ನೆಲೆಗೊಂಡ ದೈವವಾಗಿ ಕಾಣಿಸಿಕೊಳ್ಳುವುದೇ ಇಲ್ಲ. ಅವನೊಬ್ಬ ಕಾಡು ಜನರ ನೆಲೆಯಾಗದೇ ಅಲೆಯುವ ದೈವ.

ಆ. ಬೇಡಗಂಪಣರನ್ನು ಪೂಜಿಸುವ ಮಾದಪ್ಪ

ಇದೇ ದೈವ ಬೇಡ ಕಂಪಣರ ಮೂಲಕ ನಿರ್ವಚಿಸುವಾಗ ಅವನು ನೆಲೆಗಾಗಿ ಹೋರಾಡುವ ಗುಡಿಯನ್ನು ಕಟ್ಟಿಕೊಳ್ಳುವ ಆ ಮೂಲಕ ಬೇಡ ಕಂಪಣರ ಅನನ್ಯತೆಯನ್ನು ಕಾಪಾಡುವ ದೈವವಾಗಿ ಬಿಡುತ್ತಾನೆ. ಇದೊಂದು ಕಟ್ಟುವ ಕೆಲಸವಾದ್ದರಿಂದ ಸಂಘರ್ಷಗಳು ಅನಿವಾರ್ಯ. ಮಹಾಕಾವ್ಯ ಈ ಭಾಗದಲ್ಲಿ ಆಧುನಿಕ ಓದುಗರಿಗೆ ಅದರಲ್ಲೂ ಸ್ತ್ರೀವಾದಿ ಅಧ್ಯಯನಕಾರರಿಗೆ ಮಾದಪ್ಪ ವೈರಿಯಾಗಿಬಿಡುತ್ತಾನೆ. ಒಕ್ಕಲುತನದ ಪ್ರತಿನಿಧಿಯಾದ ಜುಂಜೇಗೌಡ ಇವನಿಗೆ ಏಳು ಅಂಕಣದ ಗುಡಿಕಟ್ಟಿಸಿಕೊಡುತ್ತಾನೆ. ಆದರೆ ಬೇಡರಾದ ನಮಗೆ ಮಾತ್ರ ನಿನ್ನ ಪೂಜೆ ಮಾಡುವ ಹಕ್ಕು ಬೇಕೆಂದು ಶರತ್ತು ಹಾಕುತ್ತಾರೆ. ಮಾದಪ್ಪ ಒಪ್ಪಿಕೊಳ್ಳುತ್ತಾನೆ. ಆದರೆ ಮಾದಪ್ಪನ ಈ ಅಗೋಚರ ಚಲನೆ ಅಲ್ಲಿಗೆ ನಿಂತಿಲ್ಲ ಅದು ಮುಂದೆ ಲಿಂಗಾಯತರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮುಂದುವರಿದಿದೆ. ಇದು ಮೌಖಿಕ ಕಾವ್ಯಗಳ ಬಿಕ್ಕಟ್ಟು. ಆದರೆ ಕಾವ್ಯದ ಭಾಗದಲ್ಲಿ ಅವನನ್ನು ಪೂಜಿಸುವ ಹಕ್ಕು ಇರುವುದು ಬೇಡಕಂಪಣರಿಗೆ ಮಾತ್ರ. ಇದು ಯಾವ ಕಾಲದಲ್ಲಿ ವೀರಶೈವರ ಹಕ್ಕಾಯಿತು ಎಂಬುದಕ್ಕೆ ಕಾವ್ಯದಲ್ಲಿ ಉದಾಹರಣೆಗಳು ಇಲ್ಲದಿದ್ದರು ಮುಂದೆ ಮಾದಪ್ಪ ವೀರಶೈವ ಶಿವನಾಗಿ ಬೆಳೆಯುವ ಪ್ರಕ್ರಿಯೆ ಪ್ರಾರಂಭವಾಗವಾಗುತ್ತದೆ. ಹಿಂದೆ ಕಾಡು ದೈವವಾಗಿದ್ದು ನಂತರ ಬೇಡೆ ದೈವವಾಗುವುದು, ಈ ಫ್ಲೆಕ್ಸಿಬಲಿಟಿ ಕಾವ್ಯದಲ್ಲಿ ಇರುವುದರಿಂದ ಅದು ವೀರಶೈವವಾಗುವ ಪ್ರಕ್ರಿಯೆಯನ್ನು ನಾವು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಆದರೆ ವೀರಶೈವ ಸಾಂಸ್ಥಿಕವಾಗಿ ಬಲವಾದ್ದರಿಂದ ಅದು ಉಳಿದೆಲ್ಲಾ ಸಾಧ್ಯತೆಗಳನ್ನು ನಿರಾಕರಿಸಿ ನನ್ನದು ಮಾತ್ರ ಸತ್ಯ ಎಂಬುದನ್ನು ಪ್ರತಿಪಾದಿಸುತ್ತದೆ. ಆದ್ದರಿಂದ ಅವರು ಲಿಖಿತ ಆಧಾರಗಳ ಮೂಲಕ ಮಾದಪ್ಪ ವೀರಶೈವ ಎಂದು ಚರಿತ್ರೆ ಕಟ್ಟುವ ಪ್ರಯತ್ನ ಮಾಡುತ್ತಾರೆ. ಆ ಮೂಲಕ ಅವನನ್ನು ಆಸ್ತಿ ಮಾಡಿಕೊಳ್ಳುತ್ತಾರೆ. ಈ ಪ್ರಕ್ರಿಯೆಯಿಂದ ನಿಜವಾದ ತೊಂದರೆಗಳಿಗೆ ಒಳಗಾದವರು ಮಾದಪ್ಪ  ತಮ್ಮಡಿಗಳೆಂದು ಕರೆಯಲ್ಪಡುವ ಬೇಡಗಂಪಣರು ಅದೊಂದು ಪವಿತ್ರವಾದ ಕ್ಷೇತ್ರ ಪ್ರವಾಸಿ ತಾಣವಾದ ಗಳಿಗೆಯಿಂದಲೇ ವ್ಯಾಪಾರೀಕರಣವಾಗುತ್ತದೆ. ಪ್ರಬಲಕೋಮಿನವರು ಅದರ ವಾರಸುದಾರರಾಗುತ್ತಾರೆ. ಭವನಗಳನ್ನು ನಿರ್ಮಾಣ ಮಾಡಲು ಬೇಡಗಂಪಣರ ಹೊಲಗಳನ್ನು ಬಳಸಿಕೊಂಡಿದ್ದಾರೆ. ಎಳಂಕಣದ ಗುಡಿ ರಾಜಗೋಪುರದ ದೇವಾಲಯವಾಗಿದೆ. ಪೂಜಾ ವಿಧಾನಗಳು ಬದಲಾಗಿದೆ. ದೇವಾಧ್ಯಯನ ಮಾಡಿರುವವರು ಮಾತ್ರ ಪೂಜೆಗೆ ಅರ್ಹರು ಎಂದು ಮಾಂಸಮಡ್ಡಿ ತಿನ್ನುವ ಬೇಡರಲ್ಲಿ ಕೀಳರಿಮೆ ಹುಟ್ಟಿಸುತ್ತಾರೆ.

ಕೊನೆಗೆ ಅವರು ಪೂಜೆಯ ಹಕ್ಕನ್ನು ಕಿತ್ತುಕೊಳ್ಳುವ ಸ್ಥಿತಿ ಬಂದಾಗ ಬೇಡಗಂಪಣರು ನ್ಯಾಯಲಯದ ಮೊರೆ ಹೋಗಿದ್ದಾರೆ. ಕೋರ್ಟ್‌ ಅವರ ಪೂಜೆಯ ಹಕ್ಕನ್ನು ಎತ್ತಿ ಹಿಡಿದಿದೆ. ಇಷ್ಟೆಲ್ಲಾ ಇದ್ದರು ಅವರ ಪೂಜೆಯ ಹಕ್ಕು ನೆಪವಾಗಿ ಉಳಿದುಕೊಂಡಿದೆ. ದೇವಸ್ಥಾನ ಧರ್ಮದರ್ಶಿಗಳಲ್ಲಿ ಪ್ರಬಲಕೋಮಿನವರ ಸಂಖ್ಯೆ ಹೆಚ್ಚಿದ್ದು ಅವರದೇ ಕಾರುಬಾರು ನಡೆದಿದೆ. ಆದ್ದರಿಂದ ಆಧುನಿಕ ಮಾದಪ್ಪ ಬೇಡಗಂಪಣರಿಗೆ ದುಸ್ವಪ್ನವಾಗಿದ್ದಾನೆ.

ಇ. ವೀರಶೈವರು ಕಟ್ಟುತ್ತಿರುವ ಮಾದಪ್ಪ

ಲಿಖಿತ ಆಕರವೇ ಅಧಿಕೃತ ಎಂದು ನಂಬುವ ವೈಧಾನಿಕರು ಮಾದಪ್ಪ ವೀರಶೈವನೆಂದು ಪ್ರತಿಪಾದಿಸುವುದಕ್ಕೆ ಬಳಕೆಯಾಗುತ್ತಿರುವ ಆಕರಗಳು ಹತ್ತೊಂಬತ್ತನೇ ಶತಮಾನದ ಅನಾಮಧೇಯ ಕವಿಯ ‘ನಿರಂಜನ ವಂಶ ರತ್ನಾಕರ’, ಬಹದ್ದೂರು ಹೈದರಾಲಿ ಶಾಸನ, (೧೭೭೬) ‘ಶ್ರೀ ಸುತ್ತೂರು ಸಿಂಹಾಸನ ಗುರು ಪರಂಪರೆ’ (೧೯೩೩) ಮುಂತಾದವು. ‘ನಿರಂಜನ ವಂಶ ರತ್ನಾಕರ’ ದೇವಚಂದ್ರನ ರಾಜಾವಳಿ ಕತೆಯ ತರವೇ ಇರುವ ಒಂದು ವಸಾಹತುಶಾಹಿ ಪಠ್ಯ. ಬ್ರಿಟಿಷರು ಬಂದು ಚರಿತ್ರೆಯ ಪುನಾರಚನೆಯನ್ನು ಮಾಡುವಾಗ ವೈದಿಕ ಸಂಸ್ಕೃತಿಗೆ ಹೆಚ್ಚಿನ ಪ್ರಾಶಸ್ತ್ಯಕೊಟ್ಟು ಕರ್ನಾಟಕದ ಸ್ಥಳೀಯ ಧರ್ಮವಾದ ವೀರಶೈವವನ್ನು ಅವಜ್ಞೆ ಮಾಡುವ ಹೊತ್ತಿನಲ್ಲಿ ಅನೇಕ ತಲ್ಲಣಗಳನ್ನು ಹೊತ್ತುಕೊಂಡು ಹುಟ್ಟಿದ ಪಠ್ಯ. ಆದ್ದರಿಂದ ಅದು ತನ್ನ ಗುರು ಪರಂಪರೆಗೆ ದೊಡ್ಡದೆಂದು ಬಿಂಬಿಸಲು ಸ್ಥಳೀಯ ದೈವಗಳನ್ನೆಲ್ಲಾ ಸೇರಿಸಿಕೊಂಡಿದೆ. ನಾಯಕನಟ್ಟಿ ತಿಪ್ಪೇಸ್ವಾಮಿಯು ಇದರಲ್ಲಿ ಸೇರಿಹೋಗಿದ್ದಾನೆ. ಇನ್ನು ಮೌಖಿಕ ಕಾವ್ಯದಲ್ಲಿ ಆಂಶಿಕವಾಗಿ ಒಂದು ಪಾತ್ರ ಬರುತ್ತದೆ. ಅವಳು ವೀರಶೈವಳಾದ ಇಕ್ಕೇರಿ ದೇವಮ್ಮ ಅವಳನ್ನು ಮಾದಪ್ಪ ಒಕ್ಕಲಾಗಿಸಿಕೊಳ್ಳುತ್ತಾನೆ. ಇವರ ಆಕರಗಳು ತುಂಬ ದುರ್ಬಲವಾಗಿದ್ದರು ವಾಸ್ತವದಲ್ಲಿ ವೀರಶೈವವೇ ಏಕೆ ಪ್ರಭಾವಿ ಎಂದರೆ ಅದಕ್ಕೆ ಬಹಳ ಮುಖ್ಯ ಕಾರಣ ಶರಣ ಚಳುವಳಿಯಷ್ಟೇ ದಕ್ಷಿಣದಲ್ಲಿ ನಡೆದ ಮತ್ತೊಂದು ಮೂಮೆಂಟ್ ಸಿದ್ಧಲಿಂಗಯತಿಗಳ ಏಳುನೂರು ಎಪ್ಪತ್ತೇಳು ಯತಿಗಳ ಮೂಮೆಂಟ್. ವಿರಕ್ತ ಪರಂಪರೆಗೆ ಸೇರಿದ ಇವರು ಉತ್ತರದಲ್ಲಿ ಪಂಚಪೀಠಗಳಿಗೆ ಸರಿ ಸಮಾನವಾಗಿ ಇಲ್ಲಿ ವೀರಶೈವ ಮೂಮೆಂಟ್‌ನ್ನು ಬೆಳೆಸಿದರು. ಇವರ ಪ್ರಭಾವ ಕಾಡುದೈವ ಮಾದಪ್ಪನನ್ನು ಆವಾಹಿಸಿಕೊಂಡಿದೆ.

ಈ. ದಲಿತನಾಗಿ ಮಾದಪ್ಪ

ಎಪ್ಪತ್ತರ ದಶಕ ಕನ್ನಡ ಸಾಹಿತ್ಯದ ಮಹತ್ವದ ಘಟ್ಟ. ತುರ್ತು ಪರಿಸ್ಥಿತಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಚರ್ಚೆಗೆ ಒಳಗಾಯಿತು. ಬಸಲಿಂಗಪ್ಪನವರ ಬೂಸಾ ಪ್ರಕರಣದಿಂದ ಇದುವರೆಗಿನ ಕನ್ನಡ ಸಾಹಿತ್ಯದ ದಾರಿಗಳನ್ನು ಬದಲಿಸುವ ಒತ್ತರ ಉಂಟಾಯಿತು. ಮೈಸೂರಿನಲ್ಲಿ ಬ್ರಾಹ್ಮಣೇತರ ಸಾಹಿತ್ಯ ಚಳುವಳಿ ಹುಟ್ಟಿ, ದಲಿತ ಬಂಡಾಯ ಚಳುವಳಿಗೆ ಕಾರಣವಾಯಿತು. ಇದುವರೆಗೂ ಬರೆದರೇ ಇದ್ದ ಕೆಳವರ್ಗದವರ ಸಾಹಿತ್ಯವು ಶಿಷ್ಯ ಸಾಹಿತ್ಯವನ್ನು ಬೆರಗುಗೊಳಿಸುವಂತೆ ಇತ್ತು. ಸಾಮಾಜಿಕ ಸಂಗತಿಗಳನ್ನು ಸಾಹಿತ್ಯದ  ವಸ್ತುವಾಗಿಸುವಲ್ಲಿ   ಶೂದ್ರರು ಮತ್ತು ದಲಿತರು ಸಮರ್ಥವಾಗಿ ಪಾತ್ರವಹಿಸಿದರು. ಆದರೆ ವೈದಿಕಶಾಹಿ ವಿರೋಧದ ಭರದಲ್ಲಿ ಎಲ್ಲವನ್ನು ವೈಚಾರಿಕವಾಗಿ ನೋಡಿ, ಇದಕ್ಕೆ ಒಗ್ಗದ ಸಂಗತಿಗಳನ್ನು ನಿರಾಕರಿಸುತ್ತಾ ಬಂದರು ಆದರೆ ಕೆಳವಗ್ಗದ ಸಂಸ್ಕೃತಿಯಲ್ಲಿ ದೈವರ ನಂಬಿಕೆ ಮುಖ್ಯ ಪಾತ್ರವನ್ನು ವಹಿಸಿತ್ತು. ಇದರಿಂದ ಈ ಸಾಹಿತ್ಯ ಚಳವಳಿ ಎಷ್ಟೇ ಸಾಮಾಜಿಕ ಕಾಳಜಿಯನ್ನು ಒಳಗೊಂಡಿದ್ದರೂ ಸಮುದಾಯದ ಸಾಮೂಹಿಕ ಪ್ರಜ್ಞೆಯಿಂದ ಪ್ರತ್ಯೇಕಗೊಂಡು ಐಸೋಲೆಟ್ ಆಯಿತು. ನಂತರ ದಲಿತ ಬಂಡಾಯ ಚಳುವಳಿಯ ಮುಂಚೂಣಿಯಲ್ಲಿದ್ದವರು ತಮ್ಮ ಚಳುವಳಿಯ ಅವನತಿಯ ಕಾರಣಗಳನ್ನು ಹುಡುಕಲು ಈ ಹೊತ್ತಿಗೆ ದಲಿತ ಸಂಸ್ಕೃತಿಯ ಅನನ್ಯತೆಯ ಹುಡುಕಾಟದ ಭಾಗವಾಗಿ ಮಲೆಯ ಮಹಾದೇಶ್ವರ ಪಠ್ಯವನ್ನು ಬಳಸಲಾಗಿದೆ. ೧೯೭೩ರಲ್ಲಿ ಡಾ.ಪಿ.ಕೆ. ರಾಜಶೇಖರ್‌ ಅವರು ಮಲೆಯ ಮಹಾದೇಶ್ವರ ಪಠ್ಯವನ್ನು ಸಂಪಾದಿಸಿ, ಅದರ ಪ್ರಸ್ತಾವನೆಯಲ್ಲಿ ಮಲೆಯ ಮಾದಪ್ಪ ಮಾದಿಗರ ಮೂಲದವನು ಎಂದು ಉಲ್ಲೇಖಿಸಿದರು. ಇದನ್ನು ವಿರೋಧಿಸಿ ಕೆಲವು ಲಿಂಗಾಯತ ಸಂಸ್ಥೆಗಳು, ವಿದ್ವಾಂಸರು ಕೃತಿಗಳನ್ನು ರಚಿಸಿದರು. ಅದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖವಾಣಿ ಪತ್ರಿಕೆಯಾದ ‘ಪಂಚಮ’ದಲ್ಲಿ ಡಾ.ಪಿ.ಕೆ. ರಾಜಶೇಖರ್ ಅವರು ಇನ್ನಷ್ಟು ಆಕರಗಳ ಮೂಲಕ ಮಾದಪ್ಪ ಮಾದಿಗ ಎನ್ನುವುದನ್ನು ಸಮರ್ಥಿಸಿಕೊಂಡರು. ಇದರ ಸಮರ್ಥನೆಗೆ ಅವರು ಬಳಸಿಕೊಂಡ ಮುಖ್ಯ ಆಕರ ದೇವಚಂದ್ರನ ರಾಜಾವಳಿಕತೆ. ದೇವಚಂದ್ರ ಮಾದಪ್ಪನನ್ನು ಮಾದಿಗರ ಹುಡುಗ ಎಂದು ಹೇಳುವುದಷ್ಟೇ ಅಲ್ಲ, ಬಸವಣ್ಣನನ್ನು ಮಿಂಡ ಜಂಗಮ ಎಂದು ಬೈದಿದ್ದಾನೆ. ದೇವಚಂದ್ರನಿಗೆ ಇದ್ದ ಸಿಟ್ಟು ಬಸವಣ್ಣ ಎಷ್ಟೇ ಆದರ್ಶವಾದಿಯಾದರು, ದೇವಚಂದ್ರನ ಕಾಲಕ್ಕೆ ಶರಣಧರ್ಮ ಅವನ ಅನುಯಾಯಿಗಳಿಂದ ಅದು ಜಾತಿಯಾಗಿ ಮಾರ್ಪಟ್ಟಿತ್ತು. ಅನೇಕ ಬಸದಿಗಳು ಮಠಗಳಾಗಿ ಮಾರ್ಪಾಟಾಗಿದ್ದವು. ವೀರಶೈವದಿಂದ ಜೈನಧರ್ಮಕ್ಕೆ ಧಕ್ಕೆಯಾಗಿತ್ತು. ಈ ಕಾರಣ ವಚನ ಚಳುವಳಿಯ ಅನುಯಾಯಿಗಳನ್ನು ಅವನನ್ನು ನಿಂದನಾತ್ಮವಾಗೇ ನೋಡುತ್ತಾನೆ. ಇದು ಮಾದಪ್ಪನಿಗೂ ಅನ್ವಯಿಸಿರಬಹುದು.

ದಲಿತ ಸಾಹಿತ್ಯ ಚಳುವಳಿಯ ಮುಂಚೂಣಿಯಲ್ಲಿದ್ದ ದೇವನೂರು ಮಹಾದೇವ ಅವರು ಮಲೆಯ ಮಾದಪ್ಪನ ಪಠ್ಯದಿಂದ ಪ್ರೇರಣೆ ಪಡೆದು ‘ಕುಸುಮಬಾಲೆ’ ಕಾದಂಬರಿಯನ್ನು ಬರೆದರು. ಕೃತಿಯನ್ನು ಪೂರ್ವಿಕ ಮಲೆಮಾದೇಶ್ವರಂಗೆ ಅರ್ಪಿತ ಎಂದು ಮಾದಪ್ಪನಿಗೆ ಅರ್ಪಿಸಿದರು. ಕನ್ನಡದ ಖ್ಯಾತ ಕವಿಗಳಾದ ಎಚ್.ಎಸ್. ಶಿವಪ್ರಕಾಶ್ ಅವರು ಎಡಪಂಥೀಯ ಆಲೋಚನೆಗಳ ಹಿನ್ನೆಲೆಯಲ್ಲಿ ಮಾದಪ್ಪನ ಕಥೆಯನ್ನು ಬಳಸಿ ‘ಮಾದಾರಿ ಮಾದಯ್ಯ’ ನಾಟಕ ರಚನೆ ಮಾಡಿದರು. ಇದನ್ನು ಸಿ. ಬಸಲಿಂಗಯ್ಯ ಅವರು ನಿರ್ದೇಶಿಸಿ ಮಾದಪ್ಪನನ್ನು ನಗರ ವರ್ಗದ ಜನರಲ್ಲಿ ಹೆಚ್ಚು ಪ್ರಚಾರಕ್ಕೆ ತಂದರು. ನಂತರದ ಮಹಿಳಾ ಅಧ್ಯಯನಗಳು ಸಂಕಮ್ಮನ ಪಾತ್ರವನ್ನು ಹೈಲೈಟ್ ಮಾಡಿ ಕನ್ನಡದ ಮೊದಲ ಸ್ತ್ರೀವಾದಿ ಸಂಕಮ್ಮ ಎಂದು ಚರ್ಚಿಸಿದವು. ಹೀಗೆ ಮಾದಪ್ಪನ ಕಥೆಯು ಸ್ತ್ರೀ ಸ್ವಾತಂತ್ರ್ಯದ ಭಾಗವಾಗಿಯೂ ಬಳಕೆಯಾಗಿದೆ. ದಲಿತ ಅಲ್ಪಸಂಖ್ಯಾತ ರಾಜಕೀಯ ಸಂಘಟನೆಗಳು ದಲಿತರ ಸಾಂಸ್ಕೃತಿಕ ಅನನ್ಯತೆಯ ಹುಡುಕಾಟಕ್ಕೆ ಮಾದಪ್ಪನನ್ನು ಮುಖ್ಯವಾಗಿಟ್ಟುಕೊಂಡರು. ಅದರಲ್ಲೂ ಸಮತಾ ಸೈನಿಕ ದಳ ದಲಿತ ಸಂಸ್ಕೃತಿಯ ಆರಾಧನೆಯ ಭರದಲ್ಲಿ ‘ಭೌದ್ಧಬಿಕ್ಕು ಮಾದಪ್ಪನಿಗೆ ಜಯವಾಗಲಿ’ ಎಂದು ಗೋಡೆ ಬರಹಗಳನ್ನು ಬರೆಯುವ ಮಟ್ಟಕ್ಕೆ ಮಾದಪ್ಪನ ಪ್ರಭಾವ ಕನ್ನಡದಲ್ಲಿ ಉಂಟಾಯಿತು. ಈ ಎಲ್ಲ ಕಾರಣಗಳಿಂದ ಮಾದಪ್ಪನ ಪಠ್ಯಕ್ಕೆ ಹೊಸ ಸಾಹಿತ್ಯ ಪಂಥಕ್ಕೆ ಪ್ರೇರಣೆ ನೀಡಿದ ಕೀರ್ತಿಯೂ ಇದೆ. ಅಧ್ಯಯನಗಳು ಮಾದಪ್ಪನನ್ನು ಈ ಎಲ್ಲ ಮಾದರಿಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದರು, ಅವನ ಒಕ್ಕಲಿನಲ್ಲಿ ಯಾವುದೇ ವ್ಯತ್ಯಾಸಗಳಾಗದೆ ಲಿಂಗಾಯತ, ಉಪ್ಪಲಿಗ, ಸೋಲಿಗ, ಬಡಗ, ಹೊಲೆಮಾದಿಗ ಎಲ್ಲರೂ ನಡೆದುಕೊಳ್ಳುತ್ತಾರೆ. ಇಲ್ಲಿರುವ ಪ್ರಶ್ನೆಯೆಂದರೆ ಮಧ್ಯಕಾಲೀನ ಸಂದರ್ಭದಲ್ಲಿ ಅಸಂಖ್ಯಾತ ಚಾರಿತ್ರಿಕ ವ್ಯಕ್ತಿಗಳು ದೈವವಾಗಿದ್ದರೂ ಮಾದಪ್ಪ, ಮಂಟೇಸ್ವಾಮಿಗಳು ಮಾತ್ರ ಕೆಳವರ್ಗದ ಎಡಗೈ-ಬಲಗೈ ಚರ್ಚೆಗೆ ಬರುವುದು. ಇನ್ನೊಂದು ಪ್ರಶ್ನೆ ಆ ದೈವಕ್ಕೆ ನಡೆದುಕೊಳ್ಳುತ್ತಿರುವ ಭಕ್ತರಿಗೆ ಜಾತಿ ಪ್ರಶ್ನೆ ಮುಖ್ಯವಾಗದಿರುವುದು. ಈ ಎಲ್ಲಾ ವೈರುಧ್ಯಗಳ ನಡುವೆ ಹಲವು ಚರಿತ್ರೆಗಳ ಮಾದಪ್ಪ ನಮ್ಮ ನಡುವೆ ಜೀವಂತವಾಗಿದ್ದಾನೆ.

ಡಾ. ವೆಂಕಟೇಶ ಇಂದ್ವಾಡಿ