ವಾಣಿಜ್ಯ ಬೆಳೆ ಕೃಷಿಕರೊಂದಿಗೆ

ಬೇವಿನ ಕಾಳಿ ಜೊತೆಗಿನ ಘರ್ಷಣೆ ಮತ್ತೊಂದು ಕುಲ ಸಮುದಾಯದ ಜೊತೆ ಮಾದೇಶ್ವ ನಡೆಸಿದ ಸಂಘರ್ಷಕ್ಕೆ ಸಂಕೇತವಾಗಿದೆ. ಜನಪದ ಕಾವ್ಯದ ಪಠ್ಯಗಳು ಬೇವಿನ ಕಾಳಿ ಮರ್ದನದ ಪ್ರಸಂಗವನ್ನು ವಿಶೇಷವಾಗಿ ವರ್ಣಿಸುತ್ತವೆ.

ಈ ಬೇವಿನ ಕಾಳಿ ಯಾರೆಂಬ ಬಗ್ಗೆ ತಲಕಾಡು ವಿ. ಮಾದಯ್ಯ ಎಂಬುವವರು ತಮ್ಮ ‘ಮಲೆಮಹದೇಶ್ವರ ಚರಿತ್ರೆ’ (೧೯೬೬) ಯಲ್ಲಿ ಆಸಕ್ತಿದಾಯಕವಾದ ವಿವರ ಕೊಟ್ಟಿದ್ದಾರೆ. ಇದನ್ನು ಐತಿಹಾಸಿಕವಾಗಿ ದೃಢಪಟ್ಟ ಸಂಗತಿ ಎಂಬ ನೆಲೆಯಲ್ಲಿ ಉಲ್ಲೇಖಿಸದೆ ಒಂದು ಸನ್ನಿವೇಶ ಸಾಮಾಜಿಕ ಸಂಘರ್ಷದ ಆಯಾಮಗಳನ್ನು ಭಿನ್ನ ನೆಲೆಯಲ್ಲಿ ಗ್ರಹಿಸುವ ಪ್ರಯತ್ನ ಎಂದು ಪರಿಗಣಿಸಿ ಉಲ್ಲೇಖಿಸಲಾಗಿದೆ. ವಿ. ಮಾದಯ್ಯನವರ ಪ್ರಕಾರ ಬೇವಿನ ಕಾಳಿ ಕಟ್ಟೆ ಹಳ್ಳವೆಂಬ ಊರಿನಲ್ಲಿದ್ದ ವಿಮಲಬ್ಬೆ ಎಂಬ ಜೈನ ಯುವತಿ. ಶ್ರೀಮಂತಿಕೆಯಿಂದ ಮೆರೆಯುತ್ತಿದ್ದ ಅವಳು, ಗಂಗರಸರ ಆಶ್ರಯದಲ್ಲಿ ನಾಟ್ಯ ಪ್ರವೀಣೆಯಾಗಿದ್ದಾಕೆಯ ಮಗಳು. ಇವರಿಗೆ ರಾಜ ಹಲವಾರು ಕಾಣಿಕೆಗಳನ್ನು ಕೊಟ್ಟಿದ್ದ.

ಬೇವಿನ ಕಾಳೀ ಜೈನ ಯುವತಿ ವಿಮಲಬ್ಬೆ ಆಗಿರಬಹುದು ಅಥವಾ ಇಲ್ಲದಿರಬಹುದು. ಆದರೆ ಶ್ರೀಮಂತಿಕೆಯ ವರ್ಣನೆ ಮತ್ತು ಆಕೆ ಮಾದೇಶ್ವರನಿಗೆ ಕಡೆಗೂ ಒಕ್ಕಲಾಗದೆ ತನ್ನ ವಿನಾಶವನ್ನು ಆಹ್ವಾನಿಸುವುದನ್ನು ನೋಡಿದರೆ ಅದು ಸಾಕಷ್ಟು ಸಬಲವಾದ ಒಂದು ಸಂಘರ್ಷವೆಂಬುದು ಮಾತ್ರ ಸೂಚಿತವಾಗುತ್ತದೆ.

ಮಾದೇಶ್ವರ ಈಕೆಯಿಂದ ಪಡೆಯಬಯಸುವುದು ಎಳ್ಳಿನ ಭಿಕ್ಷೆಯನ್ನು. ಶ್ರೀಮಂತಿಕೆಯಿಂದ ಮೆರೆಯುತ್ತಿದ್ದ ಆಕೆ ಅದನ್ನು ಕೊಡಲು ಒಪ್ಪುವುದಿಲ್ಲ. ಬೇವಿನ ಕಾಳಿಯ ‘ಎಳ್ಳು’ ಈ ಕಥನದಲ್ಲಿ ಅದೇ ಪ್ರಾಂತ್ಯದಲ್ಲಿ ನೆಲೆಗೊಂಡಿದ್ದ ಬಲಿಷ್ಠ ವಾಣಿಜ್ಯ ಬೆಳೆಗಳ ವ್ಯವಸಾಯಿಕ ಸಮುದಾಯವೊಂದರ ಸಂಕೇತವಾಗಿದೆ. ಮಾದೇಶ್ವರನ ಜೊತೆ ಮೊದಲ ಸಂಘರ್ಷ ಮಾಡಿದ ಬಿಲ್ಲಯ್ಯ, ಸರಳ ಜೀವನಾಧಾರ ವ್ಯವಸಾಯಿಕ ಪಂಗಡದ ಪ್ರತಿಭಟನೆಯನ್ನು ಸಂಕೇತಿಸುತ್ತಿದ್ದಾನೆ. ಅದು ಆಗ ನೆಲೆಗೊಳ್ಳುತ್ತಿರುವ ವ್ಯವಸಾಯವಾದ್ದರಿಂದ ಮಾದೇಶ್ವರನ ‘ಪಂಥ’ಕ್ಕೆ ಹೊಂದಿಕೊಳ್ಳುವುದು ಸಂಭವಿಸುತ್ತದೆ. ಆದರೆ ‘ಎಳ್ಳು’ ಬೆಳೆಯುವ ಕಾಳಿ ಕೃಷಿಯಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಸಮುದಾಯವನ್ನು ಸಂಕೇತಿಸುತ್ತಿದ್ದಾಳೆ.

ಎಳ್ಳು ಈಗಲೂ ಮಹದೇಶ್ವರ ಬೆಟ್ಟದ ಸೀಮೆಯಲ್ಲಿ ಬರುವ ಗ್ರಾಮಗಳಲ್ಲಿ ಬಹಳ ಮುಖ್ಯವಾದ ಬಳಕೆಯ ಎಣ್ಣೆ ಕಾಳು. ಮಲೆಯ ಆ ಕಡೆ ಭಾಗದಲ್ಲಿ ಬರುವ ತಮಿಳುನಾಡಿನ ಗ್ರಾಮಗಳಲ್ಲಿಯೂ ಎಳ್ಳೆಣ್ಣೆ ಬಹಳ ವ್ಯಾಪಕವಾಗಿ ಅಡುಗೆಗೂ, ಗೃಹೋದ್ಯಮಗಳಿಗೂ ಬಳಕೆಯಾಗುತ್ತದೆ. ಸಾಕಷ್ಟು ವ್ಯಾಪಕವಾದ ಗ್ರಾಮೀಣ ಮಾರುಕಟ್ಟೆ ಪಡೆದಿದ್ದ ‘ಎಳ್ಳು’ ದಾನ ಪಡೆಯುವುದು ಮಾದೇಶ್ವರನಿಗೆ ಬಹಳ ಮುಖ್ಯವಾದದ್ದು. ಎಳ್ಳಿಗೆ ಕೇವಲ ವಾಣಿಜ್ಯ ಪ್ರಾಮುಖ್ಯತೆ ಇರುವುದು ಮಾತ್ರವಲ್ಲ, ಅದಕ್ಕೊಂದು ಸಾಂಕೇತಿಕವಾದ ಧಾರ್ಮಿಕ ಮಹತ್ವ ಇದೆ. ಹಾಗಾಗಿ ಅದನ್ನು ದಾನವಾಗಿ ಪಡೆಯುವ ಈ ಸಂಘರ್ಷ ಏರ್ಪಟ್ಟಿದೆ ಎಂದು ಕೆಲವು ವಿದ್ವಾಂಸರು ಚರ್ಚೆಯ ಸಂದರ್ಭದಲ್ಲಿ ಸೂಚಿಸಿದ್ದನ್ನು ಕೂಡ ಇಲ್ಲಿ ಗಮನದಲ್ಲಿಡಲಾಗಿದೆ. ಆದರೆ ಎಳ್ಳನ್ನು ಮಾದೇಶ್ವರ ಧಾರ್ಮಿಕ ವಿಧಿ ವಿಧಾನಗಳಿಗೆ ಬಳಸಬಾರದು ಎಂಬ ನಿರ್ಷೇವನ್ನು ಹೇರಬಲ್ಲ ಅಧಿಕಾರವುಳ್ಳ ವ್ಯಕ್ತಿಯಾಗಿ ಬೇವಿನ ಕಾಳಿ ಈ ಕಥನದಲ್ಲಿ ಕಂಡುಬರುವುದಿಲ್ಲ. ಆಕೆ ಬೆಳೆಗಾರರ ಪ್ರತೀಕವಾಗಿಯೇ ಇದ್ದು, ಮಾದೇಶ್ವರ ತನ್ನ ‘ಲೋಕ’ ವ್ಯವಸ್ಥೆಗೆ ಎಳ್ಳು ಹಾಗೂ ಆ ಬಗೆಯ ವಾಣಿಜ್ಯ ಬೆಳೆಗಳನ್ನೂ ಬೆಳೆಯಬಲ್ಲಷ್ಟು ಮುಂದುವರಿದಿದ್ದ ಕೃಷಿಕ ಕುಲವನ್ನು ತನ್ನ ಒಕ್ಕಲನ್ನಾಗಿ ಮಾಡಿಕೊಳ್ಳಲು ನಡೆಸಿದ ಪ್ರಯತ್ನವನ್ನಾಗಿಯೇ ಇದನ್ನು ಪರಿಶೀಲಿಸುವುದು ಹೆಚ್ಚು ಸೂಕ್ತ.

ಹಾಗಾಗಿ ಬೇವಿನ ಕಾಳಿಯನ್ನು ಮಾದೇಶ್ವರ ಒಕ್ಕಲಾಗಿ ಪಡೆಯಲು ಯತ್ನಿಸಿ, ಆ ಸಂಘರ್ಷದಲ್ಲಿ ಸಫಲವಾಗದೆ ಅವಳನ್ನು ‘ಗೋಗಲ್ಲು’ ಮಾಡಿದ. ಈ ‘ಗೋಗಲ್ಲು’ ಎಂಬುದು ಮಾಸ್ತಿ ಕಲ್ಲಿನ ಸೂಚನೆಯಿರಬಹುದೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಹಾಗಾಗಿದ್ದ ಪಕ್ಷದಲ್ಲಿ ಬೇವಿನ ಕಾಳಿ ತನ್ನ ಪಂಗಡದ ಹಿತರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ‘ಮಾಸ್ತಿ’ ಯಾಗುತ್ತಾಳೆ.

ತನ್ನ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ವಾಣಿಜ್ಯ ಬೆಳೆಯ ಉತ್ಪಾದಕರಾಗಿದ್ದ ಕೃಷಿ ಸಮುದಾಯವೊಂದು ಸಾಕಷ್ಟು ಸಾವು ನೋವು ಅನುಭವಿಸಿದುದನ್ನು ಜನಪದ ಕಾವ್ಯಗಳ ವರ್ಣನೆಗಳು ಸೂಚಿಸುತ್ತವೆ. ಕಡೆಗೆ ಬೇವಿನ ಕಾಳಿಯ ಸೊಸೆ ಮಾದೇಶ್ವರನ ಭಕ್ತೆಯಾಗಿ ಎಳ್ಳುದಾನ ಕೊಡಲು ಆರಂಭಿಸುವುದರೊಂದಿಗೆ ಈ ಸಂಘರ್ಷ ಕೊನೆಯೊಂಡಿದೆ. ಹೊಸ ಪಂಥದ ಒಕ್ಕಲಿನಲ್ಲಿ ಈ ಪಂಗಡ ಸೇರಿಕೊಂಡಿದ್ದನ್ನು ಇದು ಸಂಕೇತಿಸುತ್ತಿದೆ.

ಗ್ರಾಮೀಣ ಕಸುಬುದಾರ ಉತ್ಪಾದಕರೊಂದಿಗೆ

ಸರಗೂರು ಮೂಗಯ್ಯನ ಒಕ್ಕಲು ಪಡೆಯೋ ಕಥನ ಸ್ಥೂಲವಾಗಿ ವೈಷ್ಣವ, ಶೈವ ಸಂಘರ್ಷದಂತೆ ಕಂಡು ಬರುತ್ತದೆಯಾದರೂ ಅದು ಮಾದೇಶ್ವರ ಕಾವ್ಯದ ಸಾಂದರ್ಭಿಕತೆಯಲ್ಲಿ ಕುಶಲಕರ್ಮಿ ಸಮುದಾಯವನ್ನು ತನ್ನ ಲೋಕಕ್ಕೆ ಸೇರಿಸಿಕೊಳ್ಳಲು ಮಾದೇಶ್ವರ ನಡೆಸಿದ ಪ್ರಯತ್ನವಾಗಿ ಧ್ವನಿತವಾಗುತ್ತದೆ. ಸರಗೂರಯ್ಯ ಮತ್ತು ಆತನ ಹೆಂಡತಿ ಗೌರವ್ವೆ ಉಪ್ಪಲಿಗ ಜಾತಿಯವರಾಗಿದ್ದು ಉಪ್ಪು ಮಾಡುವ ಕಾಯಕ ನಡೆಸುತ್ತಿದ್ದರು ಎಂಬುದನ್ನು ಜನಪದ ಕಾವ್ಯಗಳ ಕಥಾ ಸಂಪ್ರದಾಯಗಳು ವರ್ಣಿಸುತ್ತವೆ. ಮೂಗಯ್ಯನನ್ನು ತನ್ನ ಒಕ್ಕಲಾಗಿ ಪಡೆಯಬೇಕೆಂದು ಮಾದೇಶ್ವರ ಭಿಕ್ಷೆಗೆ ಬಂದಾಗ ಸರಗೂರಯ್ಯನ ಹೆಂಡತಿ “ನಮ್ಮಮ್ಮನ ಮನೆ ದೇವರು ಮಲ್ಲಣ್ಣ, ಗಂಡನ ಮನೆ ದೇವರು ವೆಂಕಟರಮಣ ಸ್ವಾಮಿ, ನಾವು ಪರ ದೇವರಿಗೆ ಒಕ್ಕಲಾಗುವುದಿಲ್ಲ” ಎಂದು ಕಡ್ಡಿ ಮುರಿದಂತೆ ಉತ್ತರಿಸುತ್ತಾಳೆ. ಈ ಒಕ್ಕಲು ಪಡೆಯುವ ಹಂತದಲ್ಲಿ ಮಾದೇಶ್ವರ ಸರಗೂರಯ್ಯನ ಮಗ ಮೂಗಯ್ಯನನ್ನು ಸಾಯಿಸಿ, ಬದುಕಿಸಿ, ಕಡೆಗೆ ಶಿವರಾತ್ರಿಯ ದಿನ ಎಣ್ಣೆ ಮಜ್ಜನ ನಡೆಸಿಕೊಡುವ ಒಕ್ಕಲನ್ನಾಗಿ ಮಾಡಿಕೊಡುತ್ತಾನೆ.

ಸರಗೂರಯ್ಯನ ಹೆಂಡತಿ ಗೌರವ್ವೆ ತನ್ನ ಮಗನಿಗೆ ಲಗ್ನ ಕಟ್ಟಿಸಲು ಕೊಳ್ಳೇಗಾಲದ ದೇವಾಂಗಶೆಟ್ಟಿಯನ್ನು ಭೇಟಿಯಾಗಲು ಹೋಗುತ್ತಾಳೆ ಎಂಬ ವಿವರ ಜನಪದ ಕಥಾ ಸಂಪ್ರದಾಯದಲ್ಲಿದ್ದು, ಇದೂ ಕೂಡ ಆಸಕ್ತಿದಾಯಕ ವಿಷಯವಾಗಿದೆ. ಉಪ್ಪಲಿಗ ಶೆಟ್ಟಿ, ದೇವಾಂಗ ಶೆಟ್ಟಿ ಇವರು ಗ್ರಾಮೀಣ ಕುಶಲಕರ್ಮಿ ಉತ್ಪಾದಕರಾಗಿದ್ದು ತಮ್ಮ ಮದುವೆ, ಮುಂಜಿ ಇತ್ಯಾದಿ ವಿಚಾರಗಳಿಗೆ ತಮ್ಮದೇ ಪಣಕಟ್ಟಿನ ಕೂಟವೊಂದನ್ನು ಹೊಂದಿರುವ ಸರಗೂರಯ್ಯ, ಮೂಗಯ್ಯ, ರಾಮವ್ವೆ ಇವರುಗಳನ್ನು ಭಕ್ತಾದಿಗಳನ್ನಾಗಿ ಮಾಡಿಕೊಂಡ ವಿವರ ಕುಶಲಕರ್ಮಿ ಉತ್ಪಾದಕರ ಒಕ್ಕಲುತನ ಪಡೆದದ್ದನ್ನು ಸೂಚಿಸುತ್ತಿದೆ.

ಮತ ನಿಯಂತ್ರಣದ ಪರಿವರ್ತನೆ

ಶ್ರವಣನ ಸಂಹಾರ ಇಡೀ ಮಾದೇಶ್ವರ ಕಾವ್ಯದ ಅತ್ಯಂತ ಪ್ರಮುಖ ಪ್ರಸಂಗವೊಂದಾಗಿದ್ದು, ಈ ಶ್ರವಣ ಅಲ್ಲಿ ರಾಜ್ಯವನ್ನೇ ಕಟ್ಟಿ ಆಳುತ್ತಾ ದೇವಾನು ದೇವತೆಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಒಂದು ಜನಪದ ಕಾವ್ಯಗಳು ವಿವರಿಸುತ್ತವೆ. ದೇವಚಂದ್ರ ತನ್ನ ರಾಜಾವಳಿ ಕಥೆಯಲ್ಲಿ ಮಂತ್ರಿ ಮಾನ್ಯರನ್ನೆಲ್ಲ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಭಾನುಕೀರ್ತಿ ಶ್ರವಣ ಎಂಬ ಜೈನ ಮುನಿಯ ವಿವರ ಹೇಳುತ್ತಾನೆ.

ಜೈನ ಮುನಿ ಸಂಹಾರ ಮತ್ತು ಮಾದೇಶ್ವರನ ಮೇಲ್ಗೈ ಎಂಬುದು ಆಗಿನ ಚಾರಿತ್ರಿಕ ಸನ್ನಿವೇಶದಲ್ಲಿ ಸಂಭವಿಸಿದ ಮತಗಳ ನಡುವಿನ ಸಂಘರ್ಷ ಹಾಗೂ ಅದರ ಒಂದು ಅಂಗವಾಗಿ ಶ್ರವಣಿ ಮುನಿಗಿದ್ದ ಪ್ರಾಮುಖ್ಯತೆ ಮಾದೇಶ್ವರನಿಗೆ ಬಂದೊದಗುವುದು ಸಂಭವಿಸುತ್ತದೆ.

೧೬ನೇ ಶತಮಾನದಲ್ಲಿ ಆರಮಭವಾಗಿ ೧೭ ಮತ್ತು ೧೮ನೇ ಶತಮಾನಗಳಲ್ಲಿ ತುಂಬ ವ್ಯಾಪಕವಾಗಿ ದಕ್ಷಿಣ ಕರ್ನಾಟಕದ ಈ ಪ್ರಾಂತ್ಯದಲ್ಲಿ ಸಂಭವಿಸಿದ ಮತ ಪರಿವರ್ತನೆಯ ವಿವರಗಳನ್ನು ಇತಿಹಾಸದ ಕೃತಿಗಳು ನೀಡಿವೆ. ಈ ಪ್ರಾಂತ್ಯದಲ್ಲಿದ್ದ ಹದಿನಾಡ ಪಾಳೇಗಾರರು ಮೊದಲು ಜೈನರಾಗಿದ್ದು, ನಂತರ ವೀರಶೈವ ಧರ್ಮದವರಾಗಿ ಪರಿವರ್ತನೆಗೊಂಡುದನ್ನು ಈ ಮೊದಲು ಉಲ್ಲೇಖಿಸಲಾಗಿದೆ. ಆ ಸಂದರ್ಭದ ನಿಯಂತ್ರಣ ಸ್ಥಿತ್ಯಂತರದ ಸೂಚನೆಯನ್ನು ಈ ಪ್ರಸಂಗ ನಿರ್ದಿಷ್ಟವಾಗಿ ಸೂಚಿಸುತ್ತದೆ.

ದೇವಚಂದ್ರನ ಪ್ರಕಾರ ಜೋಳಿಗೆ ನಂಜಯ್ಯ ಒಡೆಯರಿಗೆ ಪಟ್ಟ ಕಟ್ಟಿದ ಮಾದೇಶ್ವರ ಕಡೆಗೆ ಆ ರಾಜ್ಯಕ್ಕೆ ತಾನೇ ಅಧಿಪತಿ ಎಂಬಂತೆ ಮಾದರಸನೆಂಬ ಖ್ಯಾತಿ ಹೊಂದಿದ್ದ.

ಮಾದೇಶ್ವರ ಉಪಸಾಮಂತೀಕರಣದ ಇಈ ಕಾಲಘಟ್ಟದಲ್ಲಿ ತನ್ನ ಪ್ರಾಮತ್ಯವನ್ನು ಒಂದು ಉಪ ಪಾಳೇಪಟ್ಟಿನ ರೀತಿಯಲ್ಲಿ ರೀತಿಯಲ್ಲಿ ಕಟ್ಟಿ ಆಳಿರುವುದನ್ನು ಸಂಪೂರ್ಣವಾಗಿ ಅಲ್ಲಗೆಳೆಯುವುದಕ್ಕಾಗುವುದಿಲ್ಲ. ಆ ಕಾಲಘಟ್ಟದ ಬೇರೆ ಬೇರೆ ಧಾರ್ಮಿಕ ಪಂಥಗಳ ಮಠ ಮಾನ್ಯಗಳು ಈ ಬಗೆಯಲ್ಲಿ ಉಪ ಸಂಸ್ಥಾನಗಳನ್ನು ನಿರ್ವಹಿಸಿರುವ ನೂರಾರು ಪ್ರಕರಣಗಳನ್ನು ನಾವು ಇಲ್ಲಿ ಗಮನಿಸಬಹುದಾಗಿದೆ. ಹಲವಾರು ಮಠಗಳ ಹೆಸರಿನೊಂದಿಗೆ ಮಹಾ ಸಂಸ್ಥಾನ ಎಂಬ ನಾಮಧೇಯ ಸೇರಿರುವ ಪದ್ಧತಿಯ ಹಿಂದಿರುವ ವಾಸ್ತವಾಂಶವನ್ನು ಈ ಮೊದಲೇ ಬೇರೆ ಒಂದು ಲೇಖನದಲ್ಲಿ ಸೂಚಿಸಲಾಗಿದೆ.

ಇದೇ ಬಗೆಯಲ್ಲಿ ಸಂಸ್ಥಾನವೊಂದರ ಅಧಿಪತಿಯಾಗಿದ್ದ ಗಾದ್ರಿಪಾಲನಾಯಕ ಅನಂತರ ಜನಪದರಲ್ಲಿ ದೈವೀಕರಣಗೊಂಡು ಜಗಲೂರಯ್ಯನಾಗಿ ಪೂಜೆಗೊಳ್ಳುತ್ತಿರುವ ನಿದರ್ಶನ ನಮ್ಮ ಕಣ್ಣೆದುರಿಗಿದೆ. ಒಂದು ಪ್ರಾಂತ್ಯವನ್ನು ಸಾಧು ಸನ್ಯಾಸಿಗಳು, ಸಂತರು ಸಂಸ್ಥಾನವಾಗಿ ನಿರ್ವಹಿಸಿ ಅಲ್ಲಿ ಲೋಕೋಪಕಾರದ ಹಲವಾರು ಕಾರ್ಯಗಳನ್ನು ಕೈಗೊಂಡು ವಿಧಿವಶರಾದ ಮೇಲೆ ದೈವಗಳಾಗಿ ಮಾನ್ಯಗೊಳ್ಳುವುದು, ಪವಾಡ ಪುರುಷರಾಗಿ ಜನಮಾನಸದಲ್ಲಿ ಕೀರ್ತಿತಗೊಳ್ಳುವುದು ನಮ್ಮ ಸಮಾಜದಲ್ಲಿ ಅಪರೂಪದ ವಿದ್ಯಮಾನವೇನಲ್ಲ.

ಪಾಂಥಿಕ ಸ್ವಾಯತ್ತತೆ

ಮಾದೇಶ್ವರ ಕಾವ್ಯ ಶೈವ, ಜೂನ, ವೈಷ್ಣವ ಈ ಸಂಘರ್ಷದ ಒಂದು ಅಂಗವಾಗಿ ಈ ಚಾರಿತ್ರಿಕ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಸಂತನಾದ ಮಾದೇಶ್ವರ ಪರಿಸ್ಕೃತ ವೀರಶೈವದ ಶರಣನಾಗಿ ಇಲ್ಲಿ ಕಾಣಿಸಿಕೊಂಡಿಲ್ಲ ಎಂಬ ಅಂಶವನ್ನು ನಾವು ಪರಿಗಣಿಸಬೇಕು. ಮೂಲತಃ ಈ ಪ್ರಾಂತ್ಯದ ವೀರಶೈವ ಮಠಗಳು ಸ್ಥಳೀಯ ಪಾಳೇಗಾರರ ಆಶ್ರಯ ಹೊಂದಿ ಪ್ರಬಲಗೊಂಡಿದ್ದು ನಿಜವಾದರೂ ಮಾದೇಶ್ವರನ ಪಂಥ ಆ ಬಗೆಯ ನೇರ ರಾಜಾಶ್ರಯ ಹೊಂದಿರಲಿಲ್ಲ ಎಂಬುದನ್ನು ಪರಿಗಣಿಸಲು ಬೇಕಾದಷ್ಟು ಅಂಶಗಳು ನಮಗೆ ಕಾವ್ಯದ ನಿರೂಪಣೆಯಲ್ಲಿ ಕಂಡು ಬರುತ್ತವೆ. “ಹದಿನಾಡು ಗ್ರಾಮಗಳನ್ನಾಡುತ್ತಿದ್ದ ನಂಜರಾಜ ಒಡೆಯರು ತಮ್ಮ ಚತುರಂಗ ಬಲ ಸಮೇತ ಹರದನಹಳ್ಳಿಗೆ ಮೂಗೂರು ಮಾರ್ಗವಾಗಿ ಹೋಗುವಾಗ ಸೈನಿಕರಿಗೆ ಬಾಯಾರಿಕೆಯಾಗಲು, ರಾಜನು ಬಂದು ಮಾದೇಶ್ವರರಲ್ಲಿ ಬೇಡಲು ಸೋರೆ ಬುರುಡೆಯಲ್ಲಿರುವ ನೀರನ್ನು ಎಲ್ಲರಿಗೂ ನೀಡಿ ತೃಪ್ತಿಪಡಿಸಿದರು” ಎಂಬ ವಿವರಣೆ ಕೆಲವು ಕೃತಿಗಳಲ್ಲಿ ಬರುತ್ತದೆ.

ದೇವಚಂದ್ರನು ಮಾದೇಶ್ವರ ಜೋಳಿಗೆ ನಂಜಯ್ಯ ಒಡೆಯರಿಗೆ ಪಟ್ಟ ಕಟ್ಟಿ ನಂತರ ತಾನೇ ರಾಜನೆಂಬಂತೆ ಮೆರೆದನು ಎಂಬ ವಿವರವನ್ನು ಕೊಡುತ್ತಾನೆ. ಹೀಗಿದ್ದರೂ ಇದು ಮಾದೇಶ್ವರನ ಪಂಥ ಅಲ್ಲಿ ಒಂದು ಪ್ರಮುಖ ಪಾಳೆಯಪಟ್ಟಿನ ನೇರವಾದ ಆಶ್ರಯದಲ್ಲಿ ಇತ್ತೆಂದು ಸೂಚಿಸುವಷ್ಟು ಪ್ರಬಲವಾದ ಮಾಹಿತಿಯಿಲ್ಲ. ಮಾದೇಶ್ವರನ ಜೀವನ ವೃತ್ತಾಂತವನ್ನು ಪರಿಶೀಲಿಸಿದರೆ ಆತ ಆಗ ಪ್ರಾಬಲ್ಯದಲ್ಲಿದ್ದ ಎಲ್ಲ ಪಾಳೆಯಪಟ್ಟುಗಳಿಂದಲೂ ಸಮದೂರವನ್ನು ಕಾಯ್ದುಕೊಂಡಿದ್ದ ಅಂಶವನ್ನು ನಾವು ಗಮನಿಸಬಹುದು. ಬೇಡಗಂಪಣದ ರಾಯಣ್ಣನಿಗೆ ಆತನ ಮಗಳು ದೇವಕಿಯನ್ನು ಕೊಂಗರಾಜನೊಬ್ಬ ಬಲಾತ್ಕಾರದ ವಿವಾಹವಾಗಲು ಪ್ರಯತ್ನಿಸಿದಾಗ ಮಾದೇಶ್ವರ ನೆರವು ನೀಡಿದಂತೆ ಉಲ್ಲೇಖವಿದೆ. ಅದೇ ರೀತಿ ಹದಿನಾಡಿನ ನಂಜರಾಜ ಒಡೆಯರ ಸೈನ್ಯಕ್ಕೆ ನೆರವಾದ ಪವಾಡವೂ ಉಲ್ಲೇಖಿತಗೊಂಡಿದೆ. ಕೊಂಗನಾಡಿನ ಅರಸ ಕೂಡ ಮಾದೇಶ್ವರನ ನೆರವು ಪಡೆದು ಆತನಿಗೆ ಕಾಣಿಕೆ ಸಲ್ಲಿಸಿದ ಪ್ರಸಂಬ ಕೆಲವು ಸಂಪ್ರದಾಯಗಳಲ್ಲಿ ಉಲ್ಲೇಖಗೊಂಡಿದೆ. ಈ ಪ್ರಸಂಗವನ್ನು ನೋಡಿದರೆ ಮಾದೇಶ್ವರ ಪ್ರಾಂತ್ಯ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡಿದ್ದ ಒಂದು ಸಂಸ್ಥಾನದಂತಿತ್ತು ಎಂಬುದೇ ಹೆಚ್ಚು ಖಚಿತವಾಗುತ್ತದೆ.

ಈ ಬಗೆಯ ಸ್ವಾಯತ್ತತೆಯನ್ನು ಮಾದೇಶ್ವರ ಪ್ರಾಂತ್ಯ ಪಡೆದಿದ್ದರೆ ಅದು ಆ ಸಂದರ್ಭಕ್ಕೆ ವಿಚಿತ್ರವಾದ ವಿದ್ಯಮಾನವಾಗೇನೂ ಕಾಣುವುದಿಲ್ಲ.

ದಟ್ಟ ಕಾಡಿನ ಪ್ರದೇಶವಾಗಿದ್ದ ಆ ಮಲೆ ಸೀಮೆಯಲ್ಲಿ ತೀರ ಈಚಿನವರೆಗೂ ಕೃಷಿ ಚಟುವಟಿಕೆ ಎಂಬುದು ಹಿಂದುಳಿದುಕೊಂಡಿತ್ತು. ಅಂತಹ ನೈಸರ್ಗಿಕ ಸನ್ನಿವೇಶಗಳಲ್ಲಿ ಕೃಷಿ ಚಟುವಟಿಕೆಯಿಂದ ಬರುವ ಹುಟ್ಟುವಳಿಯೂ ಕೂಡ ಪ್ರಧಾನವಾದುದಾಗಿರುವುದಿಲ್ಲ. ಯಳಂದೂರು, ತೆರಕಣಾಂಬಿ, ಉಮ್ಮತ್ತೂರು ಮುಂತಾದ ಪ್ರದೇಶಗಳಲ್ಲಿ ಕೃಷಿ ಸ್ಥಿರೀಕರಣಗೊಂಡ ಭರಾಟೆಗಿಂತ ಮಾದೇಶ್ವರ ಪ್ರಾಂತ್ಯದ ಕೃಷಿ ಹಿಂದುಳಿದಿರಲು ಕಾರಣಗಳಿವೆ. ಅಂತಹ ಸಂದರ್ಭದಲ್ಲಿ ನೆಲೆಗೊಂಡ ಧಾರ್ಮಿಕ ಸಂಸ್ಥಾನವೊಂದನ್ನು ಆಗಿನ ಪಾಳೆಯಪಟ್ಟುಗಳು ಪ್ರಮುಖ ರಾಜಾದಾಯ ಮೂಲದ ಪ್ರದೇಶವನ್ನಾಗಿ ಪರಿಗಣಿಸದೇ ಇರುವ ಸಾಧ್ಯತೆಗಳು ಹೆಚ್ಚಾಗಿವೆ. ಮಾದೇಶ್ವರ ಸಂತ ಪರಂಪರೆಯ ವಿರಕ್ತನಾದುದರಿಂದಲೂ ಈ ಬಗೆಯ ಸ್ವಾಯತ್ತತೆಗೆ ಮಾನ್ಯತೆ ದೊರಕಿರಬಹುದು.

ಅರಣ್ಯವಾಸಿ ಸಮುದಾಯಗಳಾದ ಸೋಲಿಗರು, ಬೇಡಗಂಪಣದವರು, ಪಶುಪಾಲಕ ಸಮುದಾಯಗಳಾದ ಗೊಲ್ಲರು ಹಾಗೂ ಹಾಲುಮತದವರು ಮುಂತಾದ ಅತೀ ಹಿಂದುಳಿದ ಸಮುದಾಯಗಳ ಅಧಿದೈವವಾಗಿ ಅವರ ಪರಿಷ್ಕಾರವನ್ನು, ಅಭಿವೃದ್ಧಿಯನ್ನು ಸಾಧಿಸತೊಡಗಿದ್ದ ಮಾದೇಶ್ವರ ಆ ದಿಸೆಯಲ್ಲಿ ಪರೋಕ್ಷವಾಗಿ ಉತ್ಪಾದನಾ ವ್ಯವಸ್ಥೆ ವಿಸ್ತರಣೆಯ ಸಾಮಾಜಿಕ ಉದ್ದೇಶಕ್ಕೆ ನೆರವು ನೀಡುತ್ತಿದ್ದವನಾಗಿ ಇದ್ದುದರಿಂದಲೇ ನೆರೆಹೊರೆಯ ಪಾಳೇಪಟ್ಟುಗಳ ತೀಕ್ಷ್ಣ ವಿರೋಧವನ್ನು ಕಟ್ಟಿಕೊಳ್ಳುವ ಸಂದರ್ಭ ಉಂಟಾಗದೆ ಹೆಚ್ಚಿನ ಸಲ ತಮ್ಮ ತಮ್ಮ ನಡುವೆ ಪರಸ್ಪರ ಕಚ್ಚಾಡುತ್ತಿದ್ದ ಪಾಳೇಗಾರರು ಆ ಕಿತ್ತಾಟದ ವ್ಯಾಪ್ತಿಯೊಳಕ್ಕೆ ಮಾದೇಶ್ವರನನ್ನು ಸಿಲುಕಿಸದೆ ಬಿಟ್ಟಿರುವ ಸಾಧ್ಯತೆಯನ್ನು ಈ ಹಿನ್ನೆಲೆಯಲ್ಲಿ ನಾವು ಊಹಿಸಬಹುದಾಗಿದೆ.

ವೀರಶೈವದೊಂದಿಗೆ ಶೈವಸಿದ್ಧ ಸಂಘರ್ಷ

ಆ ಪ್ರಾಂತ್ಯದಲ್ಲಿ ವೀರಶೈವೀಕರಣದ ಪ್ರಯತ್ನಗಳು ನಡೆಯುತ್ತಿದ್ದ ಹಿನ್ನೆಲೆಯನ್ನು ನಾವು ಗಮನಿಸಿದರೆ ಆ ಹೊತ್ತಿಗೆಲ್ಲಾ ಹೆಸರುಗಳಿಸಿದ್ದ ಯಾವ ಮಠಗಳ ಆಶ್ರಯದಲ್ಲೂ ಮಾದೇಶ್ವ ನಿಂತಂತೆ ಕಾಣುವುದಿಲ್ಲ. ಕುಂತೂರು, ಸುತ್ತೂರು ಮುಂತಾದ ಮಠಗಳಲ್ಲಿ ಬೇರೆ ಬೇರೆ ಕಾಯಕಗಳಲ್ಲಿ ನಿರತನಾದ ಮಾದೇಶ್ವರ ಅಲ್ಲಿ ನಿಲ್ಲದೆ, ನಡುಮಲೆಯವರೆಗೆ ತನ್ನ ಪ್ರಯಾಣವನ್ನು ಮುಂದುವರಿಸಿದ ವೃತ್ತಾಂತ ಜನಪದ ಕಾವ್ಯಗಳಲ್ಲಿದೆ. ಮಾದೇಶ್ವರ ಕಾವ್ಯದ ಕಥನದಲ್ಲಿ ಆತ ಯಾವುದೇ ಮಠದ ಶಿಷ್ಯನಾಗಿ ಅಥವಾ ಪೀಠಾಧ್ಯಕ್ಷನಾಗಿ ನೆಲೆಗೊಂಡಂತೆ ಕಾಣುವುದಿಲ್ಲ. ಆ ಹಿಡಿತಗಳಿಂದ ಬಿಡಿಸಿಕೊಂಡು ತನ್ನ ಗುರುಗಳ ಕಣ್ಣಿಗೆ ಮರೆಯಾಗಿ ನಡುಮಲೆಯ ಸೀಗೆ ಮಳೆಯಲ್ಲಿ ಪ್ರತಿಷ್ಠಾಪಿತವಾದ ಲಿಂಗವಾಗಿದ್ದ ಎಂಬ ವಿವರಗಳು ಶಿಷ್ಟ ವೀರಶೈವಕ್ಕೂ ಮಾದೇಶ್ವರ ಪ್ರತಿನಿಧಿಸಿದ ಜನಪದರ ಶೈವಸಿದ್ಧ ಪಂಥಕ್ಕೂ ಇದ್ದ ಭಿನ್ನತೆಯ ಕಡೆಗೆ ಹೆಚ್ಚು ಸೂಚನೆಗಳನ್ನು ಕೊಡುತ್ತಿದೆ. ಸ್ವಲ್ಪ ಕಾಲ ಕುಂತೂರು ಮಠ ಹಾಗೂ ಸುತ್ತೂರು ಮಠಗಳಲ್ಲಿ ಶಿಷ್ಯ ಕಾಯಕ ಆಡಿದ ಆದಪ್ಪ ಅಲ್ಲಿ ನಿಲ್ಲದೆ ಹೊರಟುಬಿಡುವುದೂ, ಹಾಗೆ ಹೊರಟವನನ್ನು ತಡೆಯಲು ಗುರುಗಳು ಬಸವನನ್ನೂ, ಕೈಗೆಟುಕದಷ್ಟು ಪ್ರಮಾಣದಲ್ಲಿ ಬೆಳೆದು ನಿಂತ ಮಾದಪ್ಪನನ್ನು ನೋಡಿ ಮಾರಿ ‘ಮಹಾ ದಪ್ಪ’ ಎಂದು ಕೂಗಿಕೊಂಡಳೆಂದು ಬರುವ ವರ್ಣನೆಗಳೆಲ್ಲಾ ವೀರಶೈವ ಮಠಗಳೊಂದಿಗೆ ಮಾದಪ್ಪ ಹೊಂದಿದ್ದ ಭಿನ್ನಮತೀಯ ಸಂಘರ್ಷಗಳನ್ನು ಸೂಚಿಸುತ್ತಿವೆ.

ಕಾಲಾಂತರದಲ್ಲಿ ಆದಿವಾಸಿಗಳ ದೈವ ಮಾದೇಶ್ವರ ಆತನ ಭಕ್ತಾದಿಗಳ ಜೀವನದಲ್ಲಿ ಬಂದ ಉತ್ಕರ್ಷಕ್ಕೆ ಅನುಗುಣವಾಗಿ ಅಪಾರ ಭಕ್ತ ಸಮೂಹವನ್ನು ರೂಢಿಸಿಕೊಂಡ ಸಂದರ್ಭದಲ್ಲಿ ಮತ್ತೊಮ್ಮೆ ವೀರಶೈವದ ಶಿಷ್ಟ ಧಾರೆ ಮಾದೇಶ್ವರನನ್ನು ತನ್ನ ಪಂಥದ ಒಂದು ಅಂಗವನ್ನಾಗಿ ಮಾಡಿಕೊಳ್ಳು ಪ್ರಯತ್ನ ನಡೆಸಿದಂತಿದೆ. ಹೀಗಿದ್ದರೂ ತನ್ನದೇ ವಿಶಿಷ್ಟ ಜನಪದೀಯ ಆಚರಣೆಗಳಿಂದ ವಿಜೃಂಭಿತನಾಗಿರುವ ಆದೇಶ್ವರ ಶಿಷ್ಟ ವೀರಶೈವದ ಪರಿಧಿಯ ಆಷೆಗೆ ಬೆಳೆದಿದದ್ದಾನೆ. ಅರೆ ಲಿಂಗಾಯತ ಜಾತಿಯಾದ ಬೇಡಗಂಪಣರು ಈಗಲೂ ಮಾದೇಶ್ವರನ ತಮ್ಮಡಿಗಳಾಗಿ ಮುಂದುವರಿದಿರುವುದು, ಯಾವುದೇ ಒಂದು ವೀರಶೈವ ಮಠದ ನೇರ ನಿಯಂತ್ರಣಕ್ಕೊಳಪಡದೆ ಮಲೆ ಮಾದೇಶ್ವರ ದೇವಸ್ಥಾನ ಒಂದು ಸಾರ್ವಜನಿಕ ಟ್ರಸ್ಟ್‌ನ ಆಡಳಿತಕ್ಕೊಳಪಟ್ಟಿರುವುದು ಈ ಪ್ರತ್ಯೇಕ ವ್ಯಾಪ್ತಿಯ ಸಾಂಸ್ಕೃತಿಕಾಂಶವನ್ನು ಪ್ರತಿನಿಧಿಸುತ್ತಿದೆ.

ಆಕರ ಗ್ರಂಥಗಳು

೧. ಕರ್ನಾಟಕ ಚರಿತ್ರೆ, ಸಂ.೩ ಪ್ರೊ. ಕೆ.ಎಸ್. ಶಿವಣ್ಣ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭

೨. ಮಲೆಯ ಮಹದೇಶ್ವರ-ಒಂದು ಅಧ್ಯಯನ, (ಲೇ) ಡಾ. ಬಿ. ಎಸ್. ಸ್ವಾಮಿ, ನವೀನ ಪ್ರಕಾಶನ, ಬೆಂಗಳೂರು, ೧೯೯೩

೩. ಮಾದೇಶ್ವರ ಸಾಂಗತ್ಯ (ಲೇ) ಗುರುಸಿದ್ಧ ಕವಿ, ಕನ್ನಡ ಅಧ್ಯಯನ ಸಂಸ್ಥೆ (ಕೆ.ಟಿ.೩೭೪) ಹಸ್ತಪ್ರತಿ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು.

೪. ಮಾಯಕಾರ ಮಲೆಯ ಮಾದೇಶ್ವರ ಸ್ವಾಮಿ ಚರಿತ್ರೆ, ಲೇ. ಎ.ಎಸ್. ಮಂಜುಳಾದೇವಿ, ಪ್ರ.ಎಂ.ಎಸ್. ಮಹದೇವಪ್ಪ, ಮೈಸೂರು, ೧೯೬೨

೫. ಶ್ರೀಮಲೆ ಮಾದೇಶ್ವರರ ಚರಿತ್ರೆ, (ಲೇ) ತಲಕಾಡು ವಿ. ಮಾದಯ್ಯ, ಪ್ರ. ಎಸ್.ಕೆ.ಎಸ್. ಪ್ರಿಂಟರ್ಸ್, ಬೆಂಗಳೂರು ೧೯೬೬

೬. ಮಲೆಯ ಮಾದೇಶ್ವರ, (ಸಂ) ಡಾ. ಪಿ.ಕೆ. ರಾಜಶೇಖರ, ಮೈಸೂರು, ೧೯೭೩

೭. ಮಲೆ ಮಾದೇಶ್ವರ, (ಸಂ) ಡಾ. ಕೆ.ಕೇಶವನ್‌ಪ್ರಸಾದ್‌, ಪ್ರ. ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.