ಸಂಸ್ಕೃತಿಯನ್ನು ಯುರೋಪಿನ ಚಾರಿತ್ರಿಕ, ಭೌಗೋಳಿಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಕ್ರಮ ನಮ್ಮಲ್ಲಿ ಕಂಡುಬರುತ್ತದೆ. ಜನಪದರು ಕಟ್ಟುವ ಚರಿತ್ರೆ ಮತ್ತು ಭೌಗೋಳಿಕ ಯುರೋಪಿಯನ್‌ ಮಾದರಿಗಿಂತ ಭಿನ್ನವಾಗಿದೆ. ಜನಪದರು ತಮ್ಮ ಸಾಂಸ್ಕೃತಿಕ ನಾಯಕನ ಚರಿತ್ರೆಯನ್ನು ಕ್ರಮಬದ್ಧವಾಗಿ ಕಟ್ಟುವವರಲ್ಲ, ಒಂದು ನಿರ್ದಿಷ್ಟ ಕಾಲಗತಿಯಲ್ಲಿ ಅವನ ಅಸ್ತಿತ್ವವನ್ನು  ಗುರುತಿಸಿ ಕೈಬಿಡುವವರಲ್ಲ, ಕಾಲಾತೀತ ಪರಿಕಲ್ಪನೆಯ ಹಿನ್ನೆಲೆಯಲ್ಲಿ ತಮ್ಮ ನಾಯಕರನ್ನು ಅಖಂಡವಾಗಿಸಿಕೊಂಡವರು. ಆದ್ದರಿಂದ ಮಾದಪ್ಪ ಮಂಟೇದರಿಬ್ಬರೂ ಕೈಲಾಸ – ಕಲ್ಯಾಣ – ಕಲಿಗಾಲದಲ್ಲೂ ಕಾಣಿಸಿಕೊಳ್ಳುತ್ತಾರೆ. ಭೌಗೋಳಿಕ ಪರಿಸರವೂ ಸಹ ಸಾಂಸ್ಕೃತಿಕ ಉದ್ದೇಶಗಳಿಗೆ ಬದ್ಧವಾದದ್ದು. ನಾಯಕರು ವಿಕ್ರಮಿಸಿದ ದಾರಿಗಳಲ್ಲಿ ಒಕ್ಕಲಿನವರು ‘ಪರುಸೆ’ಗಳಾಗಿ ಹಿಂಬಾಲಿಸಿದರು. ಈ ಸಾಂಸ್ಕೃತಿಕ ದಾರಿಗಳಿಗೆ ದೇಸಿ ಸಾಮ್ರಜ್ಯಗಳಿಂದ ಹೆಚ್ಚಿನ ತೊಂದರೆಗಳು ಉಂಟಾಗಲಿಲ್ಲ. ಹೊರಗಿನಿಂದ ಬಂದ ಮೊಘಲರು ಮೊಟ್ಟ ಮೊದಲಿಗೆ ಮ್ಯಾಫ್‌ (Map)ಗಳನ್ನು ಪರಿಚಯಿಸಿದರೂ ಅದನ್ನು ಇನ್ನಷ್ಟು ಕ್ರಮಬದ್ಧವಾಗಿ ಅಳವಡಿಸಿಕೊಂಡವರು ಬ್ರಿಟಿಷರು. ವಸಾಹತುಶಾಹಿ ಸಂದರ್ಭದಲ್ಲಿ ಭೂಮಿಯನ್ನು ಅಳೆದು-ಹಂಚಿ ಕಂದಾಯ ವಸೂಲಿ ಕ್ರಮಗಳನ್ನಿಟ್ಟುಕೊಂಡು ಆಯಾಯ ಭೂಭಾಗದ ಮೇಲೆ ಅಧಿಕಾರದ  ಒಡೆತನವನ್ನು ಸಾಧಿಸಲು ಅನೇಕ ಹೊಸ ರಸ್ತೆಗಳನ್ನು ನಿರ್ಮಿಸಿದರು. ರಾಜಕೀಯ-ಆರ್ಥಿಕ ಉದ್ದೇಶಗಳಿಗೆ ಅನುಗುಣವಾಗಿದ್ದ ಈ ದಾರಿಗಳು ಸಾಂಸ್ಕೃತಿಕ ದಾರಿಗಳನ್ನು ಮುಚ್ಚಿಹಾಕಿದವು. ಉದಾಹರಣೆಗೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ‘ಪರುಸೆ’ ತೋಪುಗಳಿದ್ದಲ್ಲಿ, ಕೆರೆಗಳಿದ್ದಲ್ಲಿ ತಂಗುತ್ತಿತ್ತು. ಪೂರ್ವಿಕ ಮಾದಪ್ಪನಿಗೂ ಈ ಸ್ಥಳಗಳಿಗೂ ಸಂಬಂಧ ಏರ್ಪಡುವ ಐತಿಹ್ಯಗಳು ಕತೆಗಳಾಗುತ್ತಿದ್ದವು. ಮತ್ತೆ ದಾರಿಗಳನ್ನು ವಿಕ್ರಮಿಸುವಾಗ  ಈ ಕತೆಗಳಿಗೆ ಮಟ್ಟುಗಳು ಸೇರಿ ಕಾವ್ಯವಾಗಿ ಮೈದುಂಬುತ್ತಿತ್ತು. ಹೀಗೆ ನಾಯಕರು ಹೊರಟ ದಾರಿಗೂ ‘ಪರುಸೆ’ ಹೋಗುವ ದಾರಿಗೂ ಹೆಚ್ಚಿನ ವ್ಯತ್ಯಾಸವಿರುತ್ತಿರಲಿಲ್ಲ. ಈ ತರದ ಭೌಗೋಳಿಕತೆಯನ್ನು ವಸಾಹತುಶಾಹಿ ಸಂದರ್ಭದಲ್ಲಿ ಉಂಟಾದ ಭೌಗೋಳಿಕ ರಚನೆ ದಿಕ್ಕೆಡಿಸಿತು. ನಂತರ ಬಂದ ರಾಜಕೀಯ ವ್ಯವಸ್ಥೆಗಳು ಬ್ರಿಟಿಷ್‌ ಮಾದರಿಯನ್ನೇ ಅನುಸರಿಸಿದವು. ಭೂಮಿಯನ್ನು ಅಳೆಯುವುದು ಅವರ ನಂಬಿಕೆ ಮಾಡಿದ ಮೊದಲ ದ್ರೋಹ. ಸರ್ವೆ ಮಾಡಿ ಟ್ರೇಸಿಂಗ್‌ ಮಾಡಿ ಒಂದು ನಿರ್ದಿಷ್ಟ ಕಾಲಮಾನಕ್ಕೆ ಸೀಮಿತ ಪಡಿಸಿ ನೋಡುವ ‘ಮ್ಯಾಪ್‌ಕಲ್ಚರ್‌’ ನಮ್ಮದಾಗಿರಲಿಲ್ಲ. ಜನಪದರು ತಮ್ಮ ನಾಯಕರನ್ನು ಯಾವ ಕಾಲದವನು ಎಂದು ಪ್ರಶ್ನಿಸಿದವರಲ್ಲ. ಎಲ್ಲ ಕಾಲದ ಸಾಂಸ್ಕೃತಿಕ ಅನಿವಾರ್ಯತೆಯನ್ನು ತುಂಬಿ ನೋಡಿದವರು.

ಮಾದಪ್ಪ ಚಾರಿತ್ರಿಕ ವ್ಯಕ್ತಿಯಾದರೂ ಇದನ್ನು ತಿಳಿಸುವ ಯಾವ ಶಾಸನಗಳು ಇಲ್ಲ. ಮಿಣ್ಯದ ಗುರುಸಿದ್ಧಕವಿಯ ‘ಮಹದೇಶ್ವರ ಚರಿತೆ’ ಓಲೆಗರಿಗಳಲ್ಲಿ ಲಭ್ಯವಾದರೂ ಇಂದು ದೇವರಗುಡ್ಡರು ಹಾಡುವ ‘ಮೌಖಿಕ ಮಹಾಕಾವ್ಯ’ ಕ್ಕಿಂತ ಭಿನ್ನವಾದ ವಿವರಗಳೆನು ಸಿಗುವುದಿಲ್ಲ. ಆದ್ದರಿಂದ ಮಾದಪ್ಪನ ನೆಲೆಗಳನ್ನು ಅರಿಯಲು ನಮಗಿರುವ ಆಕರ ದೇವರಗುಡ್ಡರು ಹಾಡುವ ಮೌಖಿಕ ಮಹಾಕಾವ್ಯವೇ ಆಗಿದೆ. ದೇವರ ಗುಡ್ಡರು ಮಾದಪ್ಪನ ಕತೆಯನ್ನು ‘ಉತ್ತರ ದೇಶದ ಕತೆ’, ‘ಕತ್ತಲ ರಾಜ್ಯದ ಕತೆ’ ಎಂದು ಕರೆದುಕೊಂಡಿದ್ದಾರೆ. ಜನಪದರ ಈ ಭೌಗೋಳಿಕ ಪರಿಕಲ್ಪನೆಯ ಹಿನ್ನೆಲೆಯಲ್ಲೇ ಮಾದಪ್ಪನ ನೆಲೆಗಳನ್ನು ಕಾಣುವ ಪ್ರಯತ್ನ ಮಾಡಬಹುದು.

ಹುಟ್ಟಿದ್ದು ಉತ್ತರ ದೇಶ

ಗಾಯಕರು ಕತೆ ಕಟ್ಟುವ ಪ್ರಕ್ರಿಯೆಯಲ್ಲಿ ‘ಉತ್ತರ ದೇಶ’ ಎಂಬುದು ಅಭೌತಿಕ ನೆಲೆಗಳನ್ನು ವಿಸ್ತರಿಸುವ ಕ್ರಮ. ಇಲ್ಲಿ ಪುರಾಣ (ಮಿಥ್‌)ಗಳು ಅದ್ಭುತ ರಮ್ಯ (ಫ್ಯಾಂಟಸಿ)ಗಳು ಹೆಚ್ಚು ಬಳಕೆಯಾಗುತ್ತವೆ. ನಾಯಕರ ಹುಟ್ಟು ನಿಗೂಢವಾದದ್ದು. ಅವರೆಲ್ಲ ಅತಿಮಾನುಷಶಕ್ತಿಗಳನ್ನು ಆವಾಹಿಸಿಕೊಂಡಿದ್ದರಿಂದ ಅವರ ಹುಟ್ಟು ತಂದೆ ತಾಯಿಗಳ ಸಂಯೋಗದಿಂದ ಆದದ್ದಲ್ಲ. ಮಾದಪ್ಪ ‘ಉತ್ತರಾಜಮ್ಮ’ (ಹೆಸರು ಅಷ್ಟೇ ಸಾಂಕೇತಿಕ)ನ ಬೆನ್ನು ಸೀಳಿಕೊಂಡು ಹುಟ್ಟಿಸಿದರೆ ಮಂಟೇದರು ‘ತಾವರಕಮಲ’ದಲ್ಲಿ  ದುಂಬಿರೂಪವಾಗಿ ಹುಟ್ಟುತ್ತಾರೆ. ಹೀಗೆ ಹುಟ್ಟಿ ‘ನರಮುಂದಾ ಮಕ್ಕಾ’ ಬಿತ್ತಿ ಬೆಳೆಯಲು ಭೂದೇವಿ ಪಡೆಯುತ್ತಾರೆ. ತಮ್ಮ ಬೆವರನ್ನೇ ಎಣ್ಣೆ ಮಾಡಿ ‘ಜ್ಯೋತಿ’ ಬೆಳಗುತ್ತಾರೆ. ತಕ್ಷಣ ಕತೆ ಯುಗ-ಯುಗಾಂತರಗಳನ್ನು ದಾಟಿ ಕಲ್ಯಾಣಕ್ಕೆ ಬಂದು ಬಿಡುತ್ತದೆ.

ಶೈವ-ಸಂಸ್ಕೃತಿಯ ಅನೇಕ ಅಂಶಗಳನ್ನು ರೂಪಿಸಿಕೊಂಡಿದ್ದ ಈ ಪರಂಪರೆಗೆ ಹನ್ನೆರಡನೆಯ ಶತಮಾನದ ವೀರಶೈವ ಸಂಸ್ಕೃತಿಯ ಸಾಂಸ್ಕೃತಿಕ ಪ್ರಭಾವವನ್ನು ಗೆಲ್ಲುವುದು ದೊಡ್ಡ ಸವಾಲಾಗಿತ್ತು. ವಚನಯುಗ ಮುಗಿದು ಅದರ ಪ್ರಭಾವ ಅನುಯಾಯಿಗಳಲ್ಲಿ ಗಾಢವಾಗಿ ಬೆಳೆದು ಸಾಂಸ್ಥಿಕ ರೂಪ ಪಡೆದಿತ್ತು. ವೀರಶೈವ ಧರ್ಮದ ಸೈದ್ಧಾಂತಿಕ ಬಿಗಿತನ ಹಾಗೂ ಧರ್ಮದ ಸಾಂಸ್ಥಿಕತೆಯ ವಿರುದ್ಧ ಈ ಕೆಳವರ್ಗದ ನಾಯಕರು ಹೋರಾಡಲೇಬೇಕಾಗಿತ್ತು. ಆದ್ದರಿಂದ ಮಾದಪ್ಪ ಮಠಗಳಲ್ಲಿ ಹೋಗಿ ಭಿಕ್ಷೆ ಬೇಡಿ ಪವಾಡಗಳನ್ನು ಮಾಡಿ ಗೆಲ್ಲುತ್ತಾನೆ. ಮಂಟೇದ ಶರಣರ ಲಿಂಗ ಮಾಯ ಮಾಡಿ ಬಸವಣ್ಣನಿಗೆ ಗುರುವಾಗಿ ಕಲ್ಯಾಣದಿಂದ ನೇರ ಕೈಲಾಸಕ್ಕೆ ಕಳುಹಿಸುತ್ತಾರೆ. ಉತ್ತರ ದೇಶದ ಕತೆಯಲ್ಲಿ ಕೈಲಾಸ ಮತ್ತು ಕಲ್ಯಾಣಗಳೆರಡು ಮಿಥ್‌ಗಳಾಗಿ ರೂಪುಗೊಂಡಿವೆ. ಜನಪದರು ಪ್ರಜ್ಞೆಯ ಭೌತಿಕ ವಿವರಗಳಿಗೆ ದಕ್ಕದ ಈ ನೆಲೆಗಳನ್ನು ಪುರಾಣೀಕರಣಗೊಳಿಸುತ್ತಾರೆ. ಆದ್ದರಿಂದ ಇಲ್ಲಿ ಹೆನ್ನೆರಡನೆಯ ಶತಮಾನದ ಶರಣರ ಬೌದ್ಧಿಕತೆಯ ವಿರುದ್ಧ ನಡೆಸುವ ಸಂವಾದವಷ್ಟೆ ಮುಖ್ಯವಾಗುತ್ತದೆ. ಕಾಲ-ನೆಲೆಗಳೆರಡು ಗೌಣಗೊಳುತ್ತವೆ.

ಉತ್ತರ ದೇಶದ ಕತೆಯಲ್ಲಿ ಸೃಷ್ಟಿಸುವ-ಪುರಾಣೀಕರಿಸುವ ಜೊತೆಗೆ ಪ್ರಭಾವಿಸಿ ದಾಟುವ ಕ್ರಿಯೆಯನ್ನು ಕಾಣುತ್ತೇವೆ. ಉತ್ತರದ ಗಡಿಗಳನ್ನು ದಾಟುವುದು ಪ್ರಭಾವಿಸುವುದು ಅಂದಿನ ರಾಜಕೀಯ-ಧಾರ್ಮಿಕ ಸಂದರ್ಭಗಳಲ್ಲಿ ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಇದಕ್ಕೆ ಎರಡು ಮುಖ್ಯವಾದ ಶಕ್ತಿಗಳ ಅಗತ್ಯವಿತ್ತು. ಒಂದು: ಸೈನಿಕ ಬಲದಿಂದ ಯುದ್ಧ ಮಾಡಿ ಗೆಲ್ಲುವ ರಾಜಕೀಯ ಶಕ್ತಿಯಾದರೆ ಎರಡು: ಜನಪರವಾದ ನೈತಿಕಶಕ್ತಿಯಿಂದ (ವೈದಿಕ ಪರಿಭಾಷೆಯಲ್ಲಿ ಆಧ್ಯಾತ್ಮಿಕ ಉನ್ನತಿ ಎಂದು ಕರೆಯುತ್ತಾರೆ) ಗೆಲ್ಲುವುದು, ಉತ್ತರದಿಂದ ಬಂದ ಮಾದಪ್ಪನ ಆಯ್ಕೆಯೂ ಎರಡನೆಯದಾಗಿದೆ. ಇವರು ಒಬ್ಬ ರಾಜನ ವಿರುದ್ಧ ಹೋರಾಡುವುದು ಆತನ ಸಂಪತ್ತು-ರಾಜ್ಯಗಳಿಗಾಗಿ ಅಲ್ಲ. ಅವರ ನಡುವೆಯೇ ಇರುವ ಇನ್ನೊಬ್ಬನ ನೈತಿಕ ಗೆಲುವಿಗಾಗಿ. ಆದ್ದರಿಂದ ಮಾದಪ್ಪ ಜೈನ ದೊರೆ ಶ್ರವಣನನ್ನು ಸಂಹರಿಸಲು ಹರಳಯ್ಯನ ಉರಿಚಮ್ಮಾಳಿಗೆ ಬೇಕಾಗುತ್ತದೆ. ಇಲ್ಲಿ ಶ್ರವಣದೊರೆಯ ರಾಜ್ಯಶಕ್ತಿಗಿಂತ ಹರಳಯ್ಯನ ಕಾಯಕ ಶಕ್ತಿ ದೊಡ್ಡದಾಗುತ್ತದೆ. ರಾಜಕೀಯ ಶಕ್ತಿಗಳನ್ನು ಈ ರೀತಿ ದಾಟಿದರೆ ಧಾರ್ಮಿಕ ಸಂಸ್ಥೆಗಳ (ಮಠಗಳ) ವಿರುದ್ಧ ತಾನೇ ನಿಂತು ಹೋರಾಡುತ್ತಾನೆ. ಇಲ್ಲಿ ಪವಾಡಗಳನ್ನು ತಂತ್ರಗಳನ್ನು ಅವರು ಬಳಸುತ್ತಾರೆ. ಉತ್ತರ ಕರ್ನಾಟಕದಲ್ಲಿ ವೀರಶೈವ ಧರ್ಮದಷ್ಟೇ ಪ್ರಭಾವಿತವಾಗಿದ್ದ ಮತ್ತೊಂದು ಪಂಥ ‘ಸೂಫಿ ಸಂತರದು’. ಸೂಫಿ ಸಂತರಿಗೆ ತಾಂತ್ರಿಕ ಪಂಥಗಳ ಸಂಬಂಧವಿತ್ತು. ‘ತಂತ್ರ’ ವಿದ್ಯೆಗಳ ಪರಿಣತಿ ಇವರಿಗಿತ್ತು. ಉತ್ತರದಿಂದ ಬಂದ ಮಾದಪ್ಪ-ಮಂಟೇದರಿಬ್ಬರಿಗೂ ತಾಂತ್ರಿಕ ಪಂಥದ ಪ್ರಭಾವಿರುವುದನ್ನು ಅವರ ಪವಾಡಗಳ ಸಾದೃಶ್ಯದಲ್ಲಿ ಗಮನಿಸಬಹುದು.

ಹೀಗೆ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಅವರ ಸಾಂಸ್ಕೃತಿಕ ಚಲನೆಗೆ ಅವರ ಜೀವಿತದ ಅರ್ಧ ಆಯಸ್ಸೇ ಬಳಸಿದ್ದಾರೆ. ಒಮ್ಮೆ ಪ್ರವೇಶಿಸಿ ಪ್ರಭಾವಿಸಿದ ನಂತರ ಮತ್ತೆ ಅಲ್ಲಿಗೆ ಹೋಗಿ-ಬರುವ ಚಲನೆಗಳೇ ಇಲ್ಲ. ಇವರು ಹೋದ ದಾರಿಗಳೇ ಮುಂದೆ ‘ಪರುಸೆ’ ಹೋಗುವ ದಾರಿಗಳಾಗಿ ಪರಿವರ್ತನೆಗೊಂಡವು. ಈ ಭೌತಿಕ ಶರೀರಗಳು ವಿಕ್ರಯಿಸಿದಷ್ಟು ಪ್ರಭಾವಗಳನ್ನು ಬಿಟ್ಟು ಹೋದರು. ಈ ನಾಯಕರ ‘ಸಾವು’ ಆಯಾಮ ಜನಾಂಗದ ಹೊಸ ಸಂಸ್ಕೃತಿಯ ‘ಹುಟ್ಟಿಗೆ’ ಕಾರಣವಾಗಿದೆ. ಜೀವಪರವಾದ ಅನೇಕ ಜೀವನಾಂಶಗಳನ್ನು ತಮ್ಮ ನಾಯಕನಿಗೆ ಆರೋಪಿಸಿ ದೈವೀಕರಿಸಿಕೊಂಡಿದ್ದಾರೆ. ಆದ್ದರಿಂದ ‘ಉತ್ತರ ದೇಶದ ಕತೆ’ಗೆ ಪವಾಡ-ಪುರಾಣ ದೈವೀಕರಣಗಳ ಆಯಾಮಗಳು ಬಂದಿವೆ.

ಬೆಳೆದದ್ದು ಕತ್ತಲರಾಜ್ಯ

ಜೀವಿತದ ಅವಧಿಯಲ್ಲಿ ಅರ್ಧ ಆಯಸ್ಸನ್ನು ವಿಕ್ರಿಯಿಸುವುದರಲ್ಲಿ ಕಳೆದುಕೊಂಡ ಇವರಿಗೆ ‘ಕತ್ತಲರಾಜ್ಯ’ ನೆಲೆಗೊಳ್ಳುವ ಆಸಕ್ತಿ ಬೆಳೆಯುತ್ತದೆ.  ‘ಕತ್ತಲರಾಜ್ಯ’ ಎಂಬುದು ಗಾಯಕರು ಬಳಸುವ ರೂಪಕ (ಮೆಟಾಫರ್‌) ಕತ್ತಲೆ ರಾಜ್ಯದ ಭೌತಿಕ ವಿವರಗಳಿಂದ ಕೂಡಿದೆ. ಇಂದಿನ ಪ್ರಾದೇಶಿಕತೆಗೆ ಅನುಗುಣವಾಗಿ ಕತ್ತಲ-ರಾಜ್ಯವೆಂದರೆ ಮೈಸೂರು-ಮಂಡ್ಯ ಜಿಲ್ಲೆಯ ಗಡಿಭಾಗಗಳಾಗಿವೆ. ಈ ಪ್ರದೇಶದ ಉತ್ತರಕ್ಕೆ ಕಾವೇರಿ ನದಿ ಹರಿದರೆ ದಕ್ಷಿಣಕ್ಕೆ ಪೂರ್ವಘಟ್ಟದ ಬೆಟ್ಟ ಸಾಲುಗಳಿವೆ. ನದಿ ಮತ್ತು ಬೆಟ್ಟಗಳಿಂದ ಸುತ್ತುವರಿದಿರುವ ಭೌಗೋಳಿಕ ಪರಿಸರ ಇದಾಗಿದೆ. ಮಂಟೇದರು ನದಿ ದಾರಿಯನ್ನು ಹಿಡದು ಬಂದವರು. ಆದ್ದರಿಂದ ಈ ಪರಂಪರೆಯ ನಾಯಕ ಗದ್ದುಗೆಗಳು ನದಿಗೆ ಸಮೀಪವಾಗಿವೆ. ಕಪ್ಪಡಿ ಸಂಗಮದಲ್ಲಿ (ಕೆ.ಆರ್‌. ಪೇಟೆ ತಾಲ್ಲೂಕು) ರಾಚಪ್ಪಾಜಿ ಗದ್ದುಗೆಯಿದೆ. ತಲಕಾಡಿನ ಮಾಲಂಗಿ ಮಡುವಿಗೆ ಹತ್ತಿರದ ಬೊಪ್ಪೇಗೌಡನಪುರದಲ್ಲಿ ಮಳವಳ್ಳಿ ತಾಲ್ಲೂಕು ಮಂಟೇದರ ಗದ್ದುಗೆಯಿದೆ. ಮುತ್ತತ್ತಿಯ ಹತ್ತಿರ ಚಿಕ್ಕಲ್ಲೂರಿನಲ್ಲಿ (ಕೊಳ್ಳೇಗಾಲ ತಾಲ್ಲೂಕು) ಸಿದ್ಧಪ್ಪಾಜಿ ಗದ್ದುಗೆಯಿದೆ. ಈ ಮೂರು ಮಾದಪ್ಪ ಬೆಟ್ಟಗಳನ್ನು ಹಾದು ಬಂದವರು. ಕುಂತೂರು ಬೆಟ್ಟದಿಂದ – ಮರಡಿಗುಡ್ಡ – ಕನ್ನಿಕೇರಿ – ಕಟ್ಟೆ ಬಸಪ್ಪನಗುಡಿ – ಅಜ್ಜಪುರದಬೆಟ್ಟ – ಕೌದಳ್ಳಿ ಸಾಲು – ತಾಳುಬೆಟ್ಟ – ರಂಗನಾಥಸ್ವಾಮಿ ಒಡ್ಡು-ಆನೆ ತಲೆದಿಂಬ-ರಾಮವ್ವೆಕೊಳ ಹಾದು ಮಾದೇಶ್ವರಬೆಟ್ಟದಲ್ಲಿ ನೆಲೆಗೊಂಡವರು. ಆದ್ದರಿಂದ ಇವರ ವಾಹನ ಹುಲಿ (ಮಂಟೇದರಿಗೆ ವಾಹನವಿಲ್ಲ).

ಕತ್ತಲ ರಾಜ್ಯದಲ್ಲಿ ಈ ನಾಯಕರ ಎರಡು ಪ್ರಧಾನ ಕ್ರಿಯೆಗಳೆಂದರೆ ಒಕ್ಕಲುಗಳನ್ನು ಪಡೆಯೋದು ಮತ್ತು ಸಿಸುಮಕ್ಕಳನ್ನು ಪಡೆಯೋದು. ‘ಒಕ್ಕಲು’ ಎನ್ನುವ ಪದವೇ ಕೃಷಿ ಸಮಾಜವನ್ನು ಪ್ರತಿನಿಧಿಸುವ ಪದ. ಬುಡಕಟ್ಟು ಸಮಾಜ ವ್ಯವಸ್ಥೆ ಕೃಷಿ ಸಂಗೋಪನೆಗೆ ತಿರುಗುತ್ತಿದ್ದ ಸಂದರ್ಭದಲ್ಲಿ ಈ ನಾಯಕರ ಪ್ರವೇಶವಾಗಿರಬಹುದು. ಆಲಂಬಾಡಿ ಜುಂಜೇಗೌಡ ಹಸು ಮನೆಯಲ್ಲೇ ಹಾಲು ಕೊಡಬೇಕಾದ ವ್ಯವಸ್ಥೆಯಿದೆ. ಕಾಡುಗೊಲ್ಲರ ‘ಜುಂಜಪ್ಪ’ನ ಕಾವ್ಯದಲ್ಲಿ ಹಸುಗಳೇ ಸ್ವಯಂ ವ್ಯಕ್ತಿ ಪಾತ್ರದಂತೆ ಕಾಣುತ್ತವೆ. ಅವು ಯಾರ ಹದ್ದುಬಸ್ತಿನಲ್ಲೂ ಇರದೆ ತಮ್ಮ ದೈವದ ಮನೋ ಇಚ್ಛೆಗೆ ಅನುಗುಣವಾಗಿ ನಡೆಯುವ ಪಾತ್ರಗಳು. ಆದರೆ ಮಾದಪ್ಪನ ಕತೆಯಲ್ಲಿ ಅದು ಜುಂಜೇಗೌಡ ಸಾಕಿದ ಹಸುವಾಗಿದೆ. ಅಂದರೆ ಬೇಸಾಯವನ್ನು ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡು ನೆಲೆಗೊಂಡ ಜೀವನ ‘ವ್ಯವಸ್ಥೆ’ಯನ್ನು ಕಾಣುತ್ತೇವೆ. ಆದ್ದರಿಂದ ಉತ್ತರದಿಂದ ಬಂದ ಈ ಕೆಳವರ್ಗದ ನಾಯಕರು ನೆಲೆಗೊಳ್ಳಲು ‘ವ್ಯವಸ್ಥೆ’ಯಾಗಿದ್ದ ಒಂದು ದೈವಕ್ಕೆ ನೆಡೆದುಕೊಳ್ಳುವವರ ವಿರುದ್ಧ ಹೋರಾಡಿ ಒಕ್ಕಲುಗಳನ್ನು ಪಡೆಯಬೇಕಾಗುತ್ತದೆ. ಮಾದಪ್ಪ ಮೊದಲು ನೆಲೆಗೊಳ್ಳುವ ಪ್ರಕ್ರಿಯೆ ಆಲಂಬಾದಿ ಜುಂಜೇಗೌಡನಿಂದ ಹನ್ನೆರಡು ಅಂಕಣ ಗುಡಿ ಕಟ್ಟಿಸಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ಅನಂತರ ಬೇವಿನಹಟ್ಟಿಕಾಳಮ್ಮನಿಂದ ಎಣ್ಣೆ ಮಜ್ಜನಕ್ಕೆ ಎಳ್ಳು ಪಡೆದು ಒಕ್ಕಲು ಮಾಡಿಕೊಳ್ಳುತ್ತಾನೆ. ಸಟ್ಟಿ ಸರಗೂರಯ್ಯನ ಸೇವೆ ನೇಮಕಟ್ಟುಗಳಿಗೆ ಪಡೆಯೊಂದನ್ನು ಕಾಣುತ್ತೇವೆ. ಹೀಗೆ ಒಕ್ಕಲುಗಳನ್ನು ಪಡೆಯೋದು ಕತ್ತಲರಾಜ್ಯದ ಕತೆಯಲ್ಲಿ ಕಂಡುಬರುತ್ತದೆ. ನಂತರ ಈ ತರದ ಒಕ್ಕಲುಗಳನ್ನು ಕಾಪಾಡಿಕೊಂಡು ಹೋಗಲು ‘ಸಿಸು ಮಕ್ಕಳನ್ನು’ ಪಡೆಯುವುದನ್ನು ಕಾಣುತ್ತೇವೆ. ಅದಕ್ಕಾಗಿ ಶರಣೆಸುಂಕಮ್ಮನಿಗೆ ನೀಲಯ್ಯನ ಶಿಕ್ಷೆಯಿಂದ ತಪ್ಪಿಸಿ ಮಕ್ಕಳ ಫಲ ಕೊಡುತ್ತಾನೆ. ಇವರು ಕಾರಯ್ಯ-ಬಿಲ್ಲಯ್ಯರೆಂಬ ಸಿಸು ಮಕ್ಕಳಾಗುತ್ತಾರೆ. ಬೆಟ್ಟಗುಡ್ಡಗಳಿಂದ ಆವರಿಸಿದ ಫಲವತ್ತಾದ ಪ್ರದೇಶವಾಗಿ ಒಕ್ಕಲುತನದ ವ್ಯವಸ್ಥೆ ಇದ್ದರೂ ಗಾಯಕ ಸಮುದಾಯ ಕತ್ತಲು ರಾಜ್ಯವೆಂಬ ರೂಪಕ ಬಳಸಲು ಕಾರಣವೇನು ಎಂಬುದನ್ನು ಕತೆಯ ವಿವರಗಳಲ್ಲಿ ಹುಡುಕಬೇಕಾಗಿದೆ.

ಪ್ರಪಂಚದಲ್ಲಿ ಮುಡುಕ್ದೂರ ಮಲ್ಲಪ್ಪುಂಗೆ
ಸ್ವಾಮಾರದ ಒಕ್ಲು ಅರ್ಧ ಸೇರ್ಕೊಂಡದೆ
ಆದಿನಾರಾಯಣ ಸ್ವಾಮ್ಗೆ ಸನುವಾರದಕ್ಲು
ಅರ್ಧ ಸೇರ್ಕೋಂಡದೆ, ಇಷ್ಟೂಕ್ಕುಲ್ನಲ್ಲಿ ನಾನೊಂದೊಕ್ಲುನಾರೂವೆ
ನನ್ನೆಣ್ಮುಜ್ಜುಣ್ಣಾಗಿ ಪಡಿಬೇಕು
(ಸಂ.ಪಿ.ಕೆ. ರಾಜಶೇಖರ, ಪುಟ ೮೯೪, ೧೯೭೮)

ಶೈವ (ಮುಡುಕುತೊರೆಮಲ್ಲಪ್ಪ), ವೈಷ್ಣವ (ಆದಿನಾರಾಯಣ) ಶಿಷ್ಟ ಸಂಪ್ರದಾಯಗಳಿದ್ದರೂ, ಅದು ಕತ್ತಲ ರಾಜ್ಯ ಆಗಿತ್ತು. ಶಿಷ್ಟ ಸಂಸ್ಕೃತಿಯಿಂದ ನಿರಾಕರಣೆಗೆ ಒಳಗಾದ ಜನರ ಸಾಂಸ್ಕೃತಿಕ ಶೂನ್ಯತೆಯನ್ನು ತುಂಬುವ ನಾಯಕರಾಗಿ ಮಾದಪ್ಪ ಮಂಟೇದರು ಕಾಣಿಸಿಕೊಳ್ಳುತ್ತಾರೆ. ನಿರಾಕರಿಸಿದ ವಸ್ತುಗಳಿಂದಲೇ ಒಂದು ಸಾಕಾರ ಸಂಸ್ಕೃತಿಯನ್ನು ಕಟ್ಟಿ ತೋರಿಸಿದವರು ಈ ಕೆಳವರ್ಗದ ನಾಯಕರು. ಆದ್ದರಿಂದ, ಕಪ್ಪು-ಧೂಳ್ತ ಇವರ ತಿಲಕವಾಗುತ್ತದೆ. ಮಾದಪ್ಪ ಮಠಗಳಿಂದ ನಿರಾಕರಿಸಿದ ವ್ಯಕ್ತಿಯಾಗಿ ಕಾಣುತ್ತಾನೆ. ಕಾವ್ಯದ ಅನೇಕ ಉದಾಹರಣೆಗಳ ಮೂಲಕ ಇದನ್ನು ಸಮರ್ಥಿಸಬಹುದು. ಆದ್ದರಿಂದ, ಉತ್ತರದಿಂದ ಈ ನಾಯಕರು ಬರುವವರೆಗೆ ಕೆಳವರ್ಗದ ಜನರಿಗೆ ಸಾಂಸ್ಕೃತಿಕ ಶೂನ್ಯತೆಯಿದ್ದ ‘ಕತ್ತಲ ರಾಜ್ಯ’ವಾಗುತ್ತದೆ.

ಕೊನೆಯದಾಗಿ ಜನಪದರು ಭೌಗೋಳಿಕತೆಯನ್ನು ವಿಸ್ತರಿಸುವುದಕ್ಕೆ ಉದಾಹರಣೆಯಾಗಿ ಸದ್ಯದ ಎರಡು ಸ್ಥಳಗಳನ್ನಿಟ್ಟುಕೊಂಡು ನೋಡಬಹುದು. ಆಲಂಬಾಡಿ ಮತ್ತು ನಾಗಮಲೈಗಳು ಮಾದಪ್ಪನ ಗದ್ದುಗೆ ಹಿಂಬದಿಯ ಸಾಲಿನಲ್ಲಿರುವ ಈ ಪರಂಪರೆಯ ಎರಡು ಮುಖ್ಯಸ್ಥಳಗಳು. ಆಲಂಬಾಡಿಯ ವೈಭವವನ್ನು ದೇವರಗುಡ್ಡರು ಹಾಡುವ ಕತೆಯಲ್ಲಿ ಗಮನಿಸಬಹುದು. ಆದರೆ ಈಗ ಆಲಂಬಾಡಿಯಲ್ಲಿ ಮಾದಪ್ಪನ ಒಕ್ಕಲಿನವರಾಗಲಿ, ಆಚರಣೆಗೆ ಪೂರಕವಾದ ಗದ್ದುಗೆಗಳಾಗಲಿ ಯಾವುದೂ ಇಲ್ಲ. ಜುಂಜೇಗೌಡನ ಒಕ್ಕಲಿನವರಿದ್ದರೂ ಆಲಂಬಾಡಿಯಲ್ಲಿ ವಾಸವಿಲ್ಲ ಇದರ ಇನ್ನೊಂದು ಬದಿಗೆ ನಾಗಮಲೆಯಿದೆ. ನಾಗಮಲೆ ಸ್ಥಳದ ಬಗ್ಗೆ ಸದ್ಯಕ್ಕಿರುವ ಜನಪದವೆಂದರೆ ‘ಮಹದೇಶ್ವರ ಬೆಟ್ಟದಲ್ಲಿ ಅನ್ಯಾಯ- ಅನಾಚಾರಗಳು ಹೆಚ್ಚಾದುದರಿಂದ ಮಾದಪ್ಪ ಈಗ ಇಲ್ಲಿ ಇಲ್ಲ. ನಾಗಮಲೈಗೆ ಹೋಗಿ ನೆಲೆಯಾಗಿದ್ದಾರೆ’ ಎನ್ನುತ್ತಾರೆ. ಪರುಸೆ ನಾಗಮಲೈಗೆ ಹೋಗಿ ಸೇವೆ ಸಲ್ಲಿಸಿ ಬರುತ್ತದೆ. ಆಲಂಬಾಡಿ ಹಳೆಯ ವೈಭವದ ಸಂಕೇತವಾದರೆ ‘ನಾಗಮಲೈ’ ಇಂದಿನ ವೈಭವದ ಸಂಕೇತವಾಗುತ್ತದೆ. ಜನಪದರು ಭೌಗೋಳಿಕತೆಯನ್ನು ವಿಸ್ತರಿಸುವ ಕ್ರಮ ಹಾಗೂ ಒಕ್ಕಲಿನವರು ತಮ್ಮ ಸಂಸ್ಕೃತಿಯ ನಿರಂತರ ಜೀವಂತಿಕೆ ಕಾಯ್ದುಕೊಳ್ಳುವ ಕ್ರಮವೂ ಆಗಿದೆ. ಹಾಗೆ ತಮಿಳುನಾಡಿನ ಧರ್ಮಪುರಿಯ ಪರುಸೆ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ನಮ್ಮ ಇಂದಿನ ಗಡಿ ಎಲ್ಲೆಗಳನ್ನು ಗುರುತಿಸುವ ನಿರ್ದಿಷ್ಟ ಕಾಲವನ್ನು ಹುಡುಕುವ ಅಧ್ಯಯನಗಳ ಕ್ರಮಕ್ಕೆ, ಈ ಸಂಸ್ಕೃತಿಗಳ ನಿರಂತರತೆ ಸವಾಲಾಗಿ ತಮ್ಮ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿವೆ.