ದಕ್ಷಿಣ ಕರ್ನಾಟಕದ ಜನಪದರ ನಡುವಣ ಸಂತರು ಮಲೆಯ ಮಹದೇಶ್ವರ, ಮಂಟೇಸ್ವಾಮಿ, ನಂಜುಂಡೇಶ್ವರ, ಬಿಳಿಗಿರಿರಂಗ ಇವರ ಮೇಲೆಲ್ಲ ದೀರ್ಘಕಥಾನಕಗಳು ಆ ಪ್ರದೇಶದ ಜನಪದರಿಂದ ಧಾರ್ಮಿಕ ಹಿನ್ನೆಲೆಯಲ್ಲಿ, ಆರಾಧನೆಯ ಪರಿಧಿಯೊಳಗೆ ಹಾಡಿಕೊಳ್ಳಲ್ಪಡುತ್ತವೆ. ಈ ಕಥನಗಳ ನಡುವಣ ಮುಖ್ಯ ವ್ಯತ್ಯಾಸವೆಂದರೆ ಬಿಳಿಗಿರ ರಂಗ, ನಂಜುಂಡೇಶ್ವರರ ಕಥಗಳು, ಶೃಂಗಾರದ ನೆಲೆಯಲ್ಲಿ ಬಿತ್ತರಗೊಂಡರೆ ಮಂಟೇಸ್ವಾಮಿ, ಮಹದೇಶ್ವರರ ಮೇಲಿನ ಕಾವ್ಯ ಆ ಸಂತರ ಸಾಮಾಜಿಕ ಚಳುವಳಿ, ಹೋರಾಟ ಮತ್ತು ಸಾಧನೆಗಳ ಹಿನ್ನೆಲೆಯಲ್ಲಿ ನಿರೂಪಿಸಲ್ಪಡುವುದನ್ನು ಗಮನಿಸಬೇಕು. ನಂಜುಂಡೇಶ್ವರ ಮತ್ತು ರಂಗಸ್ವಾಮಿಯರ ಮೇಲೆ ಪ್ರಣಯದ ಕಥೆಗಳು ಹಬ್ಬಿರುವುದಕ್ಕೆ ಕಾರಣ ಇವರ ಭಕ್ತಿಯುಗದ ಕಾಲಕ್ಕೆ ಸಂಬಂಧಿಸಿದ ವೈದ್ಯಸಂತರಿರಬೇಕೆನಿಸುತ್ತದೆ. ಹೀಗಾಗಿ ಶೃಂಗಾರದ ಹಿನ್ನೆಲೆಯ ಕೀರ್ತನೆಗಳಂತೆ ಇವರ ಮೇಲಿನ ಜನಪದ ಕಥನ ಕಾವ್ಯಗಳಿವೆ.

ನಂಜನಗೂಡಿನ ನಂಜುಂಡನನ್ನು ಹಕೀಮನಂಜುಂಡ ಎಂದೇ ಕರೆಯಲಾಗಿದೆ. ಈಗಲೂ ಅಲ್ಲಿ ಬಿ.ವಿ. ಪಂಡಿತರ ಆಯುರ್ವೇದ ವೈದ್ಯಶಾಲೆಯಿದೆ. ಅಷ್ಟೇ ಅಲ್ಲ ಜನಸಾಮಾನ್ಯರು ತಮ್ಮ ಸಣ್ಣಪುಟ್ಟ ಕಾಯಿಲೆಗಳಿಗೆ ನಂಜುಂಡೇಶ್ವರನಿಗೆ ಹರಕೆ ಹೊರುವ ಪದ್ಧತಿಯಿದೆ. ಅಲ್ಲದೆ ಈತನನ್ನು ಸಂತಾನ ಕರುಣಿಸುವ ದೇವತೆಯೆಂತಲೂ ಹೆಸರಿಸಲಾಗಿದೆ. ಈಗಲೂ ತೇರು ಸೇವೆ, ಮೆಳೆಸೇವೆ ಎಂಬ ಆಚರಣೆಗಳು ನಿರ್ದಿಷ್ಟ ಸಮಯದಲ್ಲಿ ಹೆಣ್ಣು ಗಂಡಿನ ನಿಯೋಗ ಸಂಬಂಧವಿದ್ದುದನ್ನು ಸೂಚಿಸುವ ಆಚರಣೆಯ ಪಳೆಯುಳಿಕೆಗಳು ನಂಜನಗೂಡು ಕ್ಷೇತ್ರದ ಸುತ್ತಮುತ್ತಲಲ್ಲಿದೆ. ಆದರೆ ಈ ಬಗೆಯ ಆಚರಣೆಯ ವಿರುದ್ಧ ದಿಕ್ಕಿನಲ್ಲಿ ಮಲೆಯ ಮಾದೇಶ್ವರ ಶರಣನ ಹಿನ್ನೆಲೆಯಲ್ಲಿ ಬೇರೆ ಬೇರೆ ಸಂಪ್ರದಾಯಗಳು ಬೆಳೆದು ಬಂದಿವೆ. ನಂಜುಂಡೇಶ್ವರನಿಗೂ ಚಾಮುಂಡಿಗೂ ಸಂಬಂಧ ಕಲ್ಪಿಸಿ ಇವರಿಬ್ಬರೂ ಪ್ರಣಯಿಗಳಾಗಿದ್ದರೆಂಬಂತೆ ಜನಪದ ಕಥನಗಳು ಚಾಮರಾಜನಗರ ಸುತ್ತಿನಲ್ಲಿವೆ. ಮಹದೇಶ್ವರನಿಗೂ ಚಾಮುಂಡಿಯ ಮೇಲೆ ಪ್ರೇಮವಿದ್ದು, ಆಕೆ ಯಾವಾಗ ನಂಜುಂಡೇಶ್ವರನನ್ನು ಒಲಿದಳೋ ಮಹದೇಶ್ವರ ಮೂಡುಮಲೆಯ ಕಡೆಗೆ ಹೊರಟನೆಂಬುದಾಗಿ ಕೇಳಿಬರುವ ಕುತೂಹಲಕರ ದಂತಕಥೆಯಿದೆ. ಈ ಕಥೆಯ ತಿರುಳು ಅಥವಾ ಐತಿಹಾಸಿಕ ಸತ್ಯಾಸತ್ಯತೆ ಏನೇ ಇರಲಿ ಮಹದೇಶ್ವರ ವೈರಾಗ್ಯಪರನಾಗಿದ್ದು, ತನ್ನ ಬದುಕಿನಲ್ಲಿ ಸ್ತ್ರೀಸಂಬಂಧದಿಂದ ದೂರವಿದ್ದು ಶರಣಸಂತತಿಯ ವಿರಕ್ತನಾಗಿದ್ದ ಎಂಬುದಂತೂ ಆತನ ಪವಾಡಗಳು ಮತ್ತು ಕಥಾ ಹಿನ್ನೆಲೆ ಮತ್ತು ಆಚರಣೆಗಳಿಂದ ತಿಳಿದು ಬರುತ್ತದೆ.

ಎಲ್ಲಕ್ಕಿಂತ ಮೊದಲು ಗಮನಿಸಬೇಕಾದ ಸಂಗತಿಯೆಂದರೆ ಶರಣ ಮಲೆಯ ಮಹದೇಶ್ವರನ ಮೂಲ ಸಮಾಧಿಯಿರುವ ನಾಗಮಲೆಗೆ ಈಗಲೂ ಹೆಂಗಸರು ಹೋಗುವಂತಿಲ್ಲ. ಆತನ ಗದ್ದುಗೆಯಿರುವ ಸ್ಥಳಕ್ಕೆ ಮಾತ್ರ ಹೋಗಬಹುದಾಗಿರುತ್ತದೆ. ಅಲ್ಲದೆ ಮಹದೇಶ್ವರನನ್ನು ಕುರಿತಾದ ಜನಪದ ಕಾವ್ಯದಿಂದಲೇ  ತಿಳಿದು ಬರುವ ಮತ್ತೊಂದು ಮುಖ್ಯ ವಿವರ. ಬೇರೆ ಬೇರೆ ಸಂತರ ಜಾತ್ರೆ ಪರಿಷೆಗಳಲ್ಲಿ ಹೆಣ್ಣು ಗಂಡು ಸೇರಿ ನಡೆಸುವ ಪ್ರೇಮ ಸಲ್ಲಾಪ ತನ್ನ ಪರಿಷೆಯಲ್ಲಿ ನಡೆಸಲಾಗದು. ಹಾಗೆ ನಡೆದರೆ ತನ್ನ ವಾಹನ ಗಂಡು ಹುಲಿಯನ್ನು ಬಿಟ್ಟು ಯಾವ ಭಕ್ತನನ್ನೇ ಸರಿ ರಕ್ತಕಾರಿಸಿ ಬಿಡುವ ಎಚ್ಚರಿಕೆ ಕೊಟ್ಟಿರುತ್ತಾನೆ.

ವಿರಕ್ತ ಪಂಥದಲ್ಲಿ ಬಂದ ಮಹದೇಶ್ವರನ ಕಥೆಯ ಹಿನ್ನೆಲೆಯಲ್ಲಿ ಸ್ತ್ರೀವಿರೋಧಿ ನಿಲುವುಗಳು ದಟ್ಟವಾಗಿಯೇ ಕಂಡುಬರುತ್ತವೆ. ಅಂತೆಯೇ ಅಧಿಕಾರಶಾಹಿ ಪುರುಷನನ್ನೂ ಆತ ಸಹಿಸುವುದಿಲ್ಲ. ದಾನ ಧರ್ಮಕ್ಕೆ ಒಪ್ಪದ ಬೇವಿನಟ್ಟಿಕಾಳಿಯ ಮನೆತನವನ್ನು ಗುರುತಿಲ್ಲದಂತೆ ಮಾಡುತ್ತಾನೆ. ಬೇವಿನಟ್ಟಿಕಾಳಮ್ಮನ ಕಥಾನಕಕ್ಕಿಂತಲೂ, ಸೋಲಿಗರ ನೀಲೇಗೌಡನು ತನ್ನ ಹೆಂಡತಿ ಸಂಕಮ್ಮನ ಪಾತಿವ್ರತ್ಯವನ್ನು ಪರೀಕ್ಷಿಸುವ ಕಥಾಭಾಗ ಮಹದೇಶ್ವರನ, ಶರಣ ತತ್ವದ ಕಡೆಗೆ ಬೆರಳು ಮಾಡಿ ತೋರಿಸುತ್ತದೆ. ಹೀಗಾಗಿ ಶರಣ ಸಂತತಿಯ ಮಹದೇಶ್ವರ ಮಾತ್ರ ಜನಪದರ ಪ್ರಕಾರ ಹುಲಿಯ ಮೇಲೆ ಸವಾರಿ ಮಾಡುವಷ್ಟು ಆಧ್ಯಾತ್ಮ ಶಕ್ತಿ ಮತ್ತು ಶೌಚಗುಣ ಸಂಪನ್ನತೆಯನ್ನು ಪಡೆದಿರುತ್ತಾನೆ. ಜತೆಗೆ ಇವನು ವಿರಕ್ತನಾದ ಕಾರಣ ಇವನ ಸಹಚರಿಗಳಾಗಿ ನಿರಂತರ ಪ್ರಾಣಿಸಮೂಹವಿರುತ್ತವೆ. ಅಲ್ಲದೆ ಮಹದೇಶ್ವರನ ಹೆಸರಿನಲ್ಲಿ ನಡೆಯುವ ಆಚರಣೆಗಳೂ ಸಹ ಈತ ಶರಣ ಸಂತತಿಯವನಾಗಿದ್ದುದನ್ನು ಮತ್ತು ಜನಸಮೂಹದ ನಡುವೆ ದಯೆ ಮತ್ತುಶಾಂತಿಯನ್ನು ಬಿತ್ತುವಂತಿವೆ.

ಮಹದೇಶ್ವರನ ಕಥಾನಕವನ್ನೂ ಗಮನಿಸದರೆ ಅವನು ಕ್ರೂರ ಪ್ರಾಣಿಗಳ ನಡುವೆ ಬದುಕುವವನಾಗಿದ್ದು, ಅಧಿಕಾರಶಾಹಿಗಳಿಗೆ ಮತ್ತು ದಯಾಹೀನರಿಗೆ ಅತ್ಯಂತ ಉಗ್ರ ಸ್ವರೂಪಿಯಂತೆ ಕಾಣಿಸುತ್ತಾನೆ. ಆದರೆ ಈ ಹೊತ್ತಿಗೂ ಮಲೆಯ ಮಹದೇಶ್ವರನ ಬೆಟ್ಟದಲ್ಲಿ ಜರುಗುವ ಕೆಲವು ಆಚರಣೆಗಳನ್ನು ಗಮನಿಸಿದರೆ ಅವನೊಬ್ಬ ಶಾಂತಸ್ವರೂಪದ ಅಹಿಂಸಾತತ್ವವನ್ನು ಸಾರುವ ವಿರಕ್ತನಾಗಿದ್ದಂತೆಯೇ ಕಂಡುಬರುತ್ತದೆ. ಆದರೆ ಆತನ ಬದುಕಿನ ಪರಮ ವೈರಾಗ್ಯ ಜನಸಮೂಹದಲ್ಲಿ, ಆತ ಹೆಣ್ಣು ಮಕ್ಕಳ ವಿಚಾರಕ್ಕೆ ಕಟುವಾಗಿಯೇ ವರ್ತಿಸಿದವನಂತೆ ಚಿತ್ರಣಗೊಳ್ಳುತ್ತದೆ. ವಿರಕ್ತರು ಮತ್ತು ಶರಣಸಂತತಿಯವರ ಮೇಲೆ ಹುಟ್ಟಿಕೊಳ್ಳುವ ಕಥನ ಮಾದರಿಗಳು ಹೀಗಿರುವುದು ಸಹಜವೇ ಆದರೆ ಕಥಾನಕಗಳಿಗಿಂತ ಆಚರಣೆಗಳು ಹೆಚ್ಚು ಸತ್ಯವನ್ನು ಬಿತ್ತಿರಿಸುತ್ತವೆ.

ಶಿವರಾತ್ರಿ ಮತ್ತು ಮಹಾಲಯ ಅಮಾವಾಸ್ಯೆಯ ದಿನಗಳಲ್ಲಿ ಮಹದೇಶ್ವರನಿಗೆ ಎಡೆಯಾಗಿ ಲಕ್ಷಾಂತರ ಗುಡ್ಡರು, ಭಕ್ತರೆನಿಸಿಕೊಂಡವರು ಆ ಸಂತನ ಮಜ್ಜನಕ್ಕೆಂದು ಎಣ್ಣೆ ಮತ್ತು ನೈವೇದ್ಯಕ್ಕೆಂದು ಹಾಲು ತುಪ್ಪುವನ್ನೂ ತೆಗೆದುಕೊಂಡು ಹೋಗುತ್ತಾರೆ. ಆದರೆ ಮಂಟೇಸ್ವಾಮಿ, ಸಿದ್ಧಪ್ಪಾಜಿ ಜಾತ್ರೆಗಳಲ್ಲಿ ಮಾಂಸಾಹಾರ ಪದ್ಧತಿಯಿದೆ. ಮಲೆಯ ಮಾದಯ್ಯನ ನೆಲೆಯಲ್ಲಿ ಹೆಣ್ಣು ಗಂಡಿನ ಸಂಬಂಧಕ್ಕಾಗಲಿ, ಮಾಂಸ ಮದ್ಯ ಸೇವನೆಗಾಗಲಿ ಅವಕಾಶವಿರುವುದಿಲ್ಲ. ವಿರಕ್ತ ಮತ್ತು ಭಕ್ತಿಯೇ ಮಹದೇಶ್ವರನ ಪರಿಷೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಹೀಗಾಗಿ ಆಚರಣೆಗಳ ಹಿನ್ನೆಲೆಯಲ್ಲಿ ಗಮನಿಸಿದರೆ ಮಹದೇಶ್ವರನ ಕಥಾನಕದಲ್ಲಿ ವರ್ಣಿತವಾಗುವಷ್ಟು ಉಗ್ರಸ್ವರೂಪಿಯಲ್ಲ ಎನ್ನಿಸುತ್ತದೆ. ಇದಕ್ಕೆ ಪೂರಕವಾಗಿ ಇನ್ನೊಂದು ಆಚರಣೆಯನ್ನು ಗಮನಿಸುವುದಾದರೆ, ಜಾತ್ರೆಯಲ್ಲಿ ಮಹದೇಶ್ವರನ ಹೆಸರಿನಲ್ಲಿ ಗುಡ್ಡರು ಪಡೆಯುವ ದೀಕ್ಷಾ ಕ್ರಮ! ಈ ದೀಕ್ಷಾಪದ್ಧತಿ ಅಹಿಂಸೆ ಮತ್ತು ಶಾಂತ ಜೀವನವನ್ನು ನಡೆಸುವುದರ ಹಿನ್ನೆಲೆಯಲ್ಲಿದೆ. ಅಧಿಕಾರದ ಅಹಂಕಾರ, ಶ್ರೀಮಂತಿಕೆಯ ವೈಭವವನ್ನೆಲ್ಲ ನಿರಾಕರಿಸುವ ಧಾಟಿಯಲ್ಲಿದೆ. ಇಲ್ಲಿ ಭಕ್ತರೆನಿಸಿಕೊಳ್ಳುವವರು ಸಾರ್ವಜನಿಕವಾಗಿ ಭಿಕ್ಷೆ ಎತ್ತಿ ಹಾಗೆ ಬಂದ ಭಿಕ್ಷೆಯನ್ನು ಬೇರೆಯವರಿಗೂ ಹಂಚಿ ತಾನೂ ಊಟ ಮಾಡುತ್ತೇನೆನ್ನುವ ತೀರ್ಮಾನ ತೆಗೆದುಕೊಳ್ಳುವುದಲ್ಲದೆ ನೆರೆಹೊರೆಯವರನ್ನು ನೋಯಿಸದೆ ಅವರೊಡನೆ ಯಾವುದೇ ಸಂಘರ್ಷವಿಲ್ಲದೆ ಬದುಕುತ್ತೇನೆನ್ನುವ ಮಾತುಗಳು ಉಚ್ಚರಿಸಲ್ಪಡುತ್ತವೆ. ಈ ಪ್ರತಿಜ್ಞೆಯನ್ನು ನೆರವೇರಿಸಲೆಂಬಂತೆ ಎಲ್ಲ ಗುಡ್ಡರೂ ಮಹದೇಶ್ವರನ ಪರಿಷೆಯಿಂದ ವಾಪಸುಬಂದ ಮೇಲೆ ಇದೇ ಸಂಬಂಧ ಇನ್ನೊಂದು ಆಚರಣೆ ಕೈಗೊಳ್ಳುತ್ತಾರೆ. ಹೊಸದಾಗಿ ಗುಡ್ಡನಾದವನಿಗೆ ಇತರೇ ಜಾತಿಯ ಗುಡ್ಡರೆಲ್ಲ ಸೇರಿ ಮತ್ತೊಮ್ಮೆ ಅವನಿಗೆ ಸಜ್ಜನಿಕೆಯ ದೀಕ್ಷೆ ಕೊಡುತ್ತಾರೆ. ಕುರುಬಗೌಡರು, ಒಕ್ಕಲಿಗರು, ಹರಿಜನರು ಹೀಗೆ ಅಲ್ಲ ಮತಸ್ಥರೂ ಮಾದಯ್ಯನಿಗೆ ಗುಡ್ಡರಾಗಿ ಬರುತ್ತಾರೆ. ಮಾದಪ್ಪನ ಸನ್ನಿಧಿಯಲ್ಲಿ ಅವನ ಮಕ್ಕಳು ಅಥವಾ ಶಿಶುಮಕ್ಕಳೆಂದು ದೀಕ್ಷೆ ಪಡೆದು ಬಂದಮೇಲೆ ತಮ್ಮ ಊರ ಬೀದಿಯ ಯಾರದಾದರೂ ಮನೆಯಲ್ಲಿ ಸೇರುತ್ತಾರೆ. ಅಲ್ಲಿಗೆ ವೈಷ್ಣವ ಪಂಥಾನುಯಾಯಿಗಳೆನಿಸುವ ದಾಸಯ್ಯಗಳೂ ಬರಬೇಕು. ಅವರೂ ಯಾವ ಜಾತಿಯವರಾದರೂ ಸರಿ. ಗುಡ್ಡರು ಮತ್ತು ದಾಸಯ್ಯಗಳು ಸೇರಿದ ಆ ಗುಡ್ಡನ ಮನೆಯ ಮುಂದೆ ಚಪ್ಪರ ಹಾಕಲಾಗಿರುತ್ತದೆ. ಗುಡ್ಡರು, ದಾಸರು ಮಡಿಯಾಗಿ ಬಂದಿರುತ್ತಾರೆ. ದಾಸಯ್ಯ ಜಾಗಟೆಯೊಂದಿಗೆ ಬಂದರೆ, ಗುಡ್ಡ ಕಂಸಾಳೆ ಸಹಿತ ಬರುವನು. ಗೊರವ ಕೊಳಲು, ಡಮರುಗ ಹಿಡಿದು ಬರುವನು. ಎಲ್ಲರೂ ಚಪ್ಪರ ಹಾಕಿದ ಮನೆಯ ಹೊಸ ಗುಡ್ಡನೊಂದಿಗೆ ಗಂಗಾದೇವತೆಯ ಕಡೆಗೆ ಮೆರವಣಿಗೆ ಹೊರಡುವರು. ಹೂವು, ಹೊಂಬಾಳೆ ಸಹಿತ ಅಲ್ಲಿಂದ ದೇವರು ತರಲಾಗುತ್ತದೆ. ದೇವರು ಎಂದರೆ ಮನೆಯೊಳಗಿನಸಂತ, ಮಹದೇಶ್ವರನೇ! ಕೆರೆಯಿಂದಲೋ ಭಾವಿಯಿಂದಲೋ ತಂದ ನೀರಿಗೆ ಮನೆಯ ನೀರು ಬೆರೆಸಬೇಕು. ಅದರ ಒಂದು ಭಾಗವನ್ನು ಕಾಯ್ದ ನೀರಿಗೆ ಬೆರೆಸಿಕೊಂಡು ಅದಕ್ಕೆ ಅರಿಷಿಣ ಬೆರೆಸಿ ಆ ನೀರಿನಲ್ಲಿ ಮನೆಯ ಗುಡ್ಡ ಮಡಿಯಾಗಬೇಕು. ಮಡಿಯಾಗಿ ಬಂದ ಗುಡ್ಡ ಬಾಯಲ್ಲಿ ಕೆಟ್ಟ ಮಾತು ಬಳಸುವಂತಿಲ್ಲ. ಗುಡ್ಡರು ಯಾರೇ ಎದುರು ಬಂದರೂ ‘ಶರಣಾರ್ಥಿ’ ಎನ್ನಬೇಕು. ದಾಸಯ್ಯಗಳು ಕಂಡರೆ ‘ಅಡಿದಾಸ’ ಎನ್ನಬೇಕು.

ಬಹುಮಟ್ಟಿಗೆ ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದಲ್ಲಿ ರಾಮಾನುಜಾಚಾರ್ಯರು ತಳವರ್ಗದವರಿಗೆಲ್ಲ ದೀಕ್ಷೆ ಕೊಟ್ಟು ದಾಸಪರಂಪರೆ ಯವರನ್ನಾಗಿಸಿದರೆ, ಬಸವಣ್ಣನವರು ಅನುಭವಮಂಟಪಕ್ಕೆ ಸೇರಿಸಿಕೊಂಡವರನ್ನೆಲ್ಲ ಶರಣ ಪಂಥದವರನ್ನಾಗಿಸಿದರು. ಇದರ ಅರ್ಥವೆಂದರೆ ಯಾರೇ ಆಗಲಿ ಒಬ್ಬರು ಇನ್ನೊಬ್ಬರಿಗೆ ತಲೆಬಾಗಿ ಬದುಕುವುದು. ಸರಳತೆಯೇ ಇದರ ಮಹತ್ವ. ಇದು ಯುದ್ಧ ಮತ್ತು ಮತೀಯ ವೈಷಮ್ಯವನ್ನು ನಿರಾಕರಿಸುವ ಮಹಾಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ಒಬ್ಬ ಹಿರಿಯ ಗುಡ್ಡ ಹೊಸದಾಗಿ ಗುಡ್ಡನಾದವನ್ನು ಪ್ರಶ್ನಿಸುತ್ತಾನೆ.

‘ಅಸ್ವಾ ಗುಡ್ಡಾ ಎಲ್ಲೋ ನೀನು ಹೋಗಿ ಬರುವ ಹಾದಿಯಲ್ಲಿ ಇಬ್ಬರು ಜಗಳ ಮಾಡಿ, ಬೈದಾಡಿಕೊಳ್ಳುತ್ತಿದ್ದಾರೆ ಅಂತ ಮಡಿಗಿಕೋ. ನೀನೇನು ಮಾಡುತ್ತೀಯಾ, ಅವರ ಬೈಗುಳನ್ನ ಮುಖಕ್ಕೆ ಹಾರಿಸಿಕೊಳ್ಳುತ್ತ ನಿಂತಿರುತ್ತೀಯಾ?’

ಕಿರಿಗುಡ್ಡ ‘ಇಲ್ಲ ಇಲ್ಲ ಅವರ ಬೈಗುಳ ಕೇಳಿಸಿಕೊಳ್ಳುವುದಿಲ್ಲ. ನನ್ನ ಕೈಲಾಗುವಷ್ಟು ಅವರ ಜಗಳವನ್ನು ಶಮನ ಮಾಡಲು ಪ್ರಯತ್ನ ಮಾಡುತೀನಿ’ ಎನ್ನಬೇಕು.

ಮುಂದಿನ ಪ್ರಶ್ನೆಯಾಗಿ ‘ಅಲ್ಲದೇನೆ ನೀನು ತಾನೇ ಬದುಕಿರುವ ತನಕ ಯಾರನ್ನಾದರೂ ಒಂದು ಮಾತು ಬಾಯೆತ್ತಿ ಬೈತೀಯೇನಪ್ಪ’ ಎಂದು ಕೇಳುವುದಿದೆ, ಕಿರಿಯ ಗುಡ್ಡ ಇಲ್ಲವೆನ್ನಬೇಕು. ಮುಂದಿನ ಮೂರನೇ ಪ್ರಶ್ನೆ – ‘ಸಟ್ಟಂ ಸಮರಾತ್ರಿಯಲಾದರೂ ಸರಿಯೇ ಒಬ್ಬ ಗುಡ್ಡ ನಿನ್ನ  ಮನೆ ಕಡೆ ಬರಬಹುದು. ಏನು ಮಾಡಿಯೇ’ ಎಂದಿರುತ್ತದೆ. ಮನೆಯಲ್ಲಿದ್ದರೆ ಮಾಡಿಸಿ ಹಾಕುವುದಾಗಿ ಇಲ್ಲದಿದ್ದರೆ ಅಷ್ಟು ಹೊತ್ತಿನಲ್ಲಾದರೂ, ಇನ್ನೊಬ್ಬರ ಮನೆಯಿಂದ ತಂದು ಹಸಿದುಬಂದ ಗುಡ್ಡನಿಗೆ ಅನ್ನ ನೀಡುತ್ತೇನೆ ಎಂಬುದು ಉತ್ತರವಾಗಿರಬೇಕು. ಕೊನೆಯದಾಗಿ ಮನೆದೇವರ ಸತ್ಯವಾಗಿ, ಮಹದೇಶ್ವರನ ಸತ್ಯವಾಗಿ, ನೆರೆದ ಗುಡ್ಡರೆಲ್ಲರ ಮೇಲೆ ಆಶೆಯಾಗಿ ಹಿರಿಯ ಗುಡ್ಡರು ಏನು ಹೇಳಿದರೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣ ಮಾಡಬೇಕು. ಆಗ ಹಿರಿಯ ಗುಡ್ಡರು ಗೋಮೂತ್ರ ಬೆರೆಸಿದ ಹಾಲು ಚಿನ್ನ ಬೆಳ್ಳಿ ಮುಟ್ಟಿಸದ ನೀರನ್ನು ಹೊಸದಾಗಿ ಗುಡ್ಡನಾದವನ ಅಂಗೈಗೆ ಬಿಟ್ಟು ಕುಡಿಸುವರು.

ಭುಜ, ಮಂಡಿ, ನೆತ್ತಿಯ ಮೇಲೆ ಐದು ನಿಂಬೇ ಹಣ್ಣು ಇಟ್ಟು ಅದನ್ನು ಹೋಳು ಮಾಡುತ್ತಾರೆ. ಮೈ ಕೈಗೆಲ್ಲ ಭಸ್ಮ ಧರಿಸುವರು. ಬಿಳಿ ಬಟ್ಟೆ ತೊಡಿಸುವರು. ಆ ಹೊತ್ತು ಗುಡ್ಡ ಬಿಳಿಯ ಬಟ್ಟೆ ಹಾಕಿದ್ದು, ಮುಂದೆ ಯಾವಾಗಲೂ ಬೇರೆ ಬಣ್ಣದ ಬಟ್ಟೆ ಹಾಕುವಂತಿಲ್ಲ. ಯೌವನ ಕಳೆಯುವವರೆಗೆ ಬಿಳಿಯ ಬಟ್ಟೆ ಹಾಕಿ, ಪ್ರಾಯ ಕಳೆದ ನಂತರ ಕಾವಿ ಧಾರಿಸಬಹುದು. ಇಷ್ಟಾದರೂ ಗುಡ್ಡರು ತಾವು ಬದುಕಿರುವವರೆಗೆ ಬಿಳಿಯ ವಸ್ತ್ರ ಧರಿಸುವರೇ ಹೊರತು ಕಾವಿ ಧರಿಸುವುದಿಲ್ಲ. ಬಿಳಿಯ ಬಟ್ಟೆಯನ್ನೇ ತೊಡುತ್ತಾರೆ. ಯಾಕೆಂದರೆ ಬಿಳಿ ಬಟ್ಟೆ ತೊಡ್ಡು ಗುಡ್ಡ ಮದುವೆಯಾಗಬಹುದು ಮತ್ತು ಮಾಂಸಾಹಾರ ಸೇವಿಸಬಹುದು.

ಹದಿನಾರನೆಯ ಶತಮಾನದ ದಾರ್ಶನಿಕ ಸಂತ ಮಹದೇಶ್ವರ ಜಗಳ, ವೈಮನಸ್ಸು ಮತ್ತು ಯುದ್ಧದ ಭೀಕರತೆಯ ಅರಿವು ಇದ್ದವನಂತೆ ತೋರುತ್ತದೆ. ಇದನ್ನು ತಪ್ಪಿಸಲು ಹುಡುಕಿದ ಈ ಬಗೆಯ ದೀಕ್ಷಾ ಮಾರ್ಗ, ಸೌಹಾರ್ದತೆಯ, ಸ್ನೇಹದ ಬಗೆಯನ್ನು ತನ್ನ ಶಿಷ್ಯಸಮೂಹದಲ್ಲಿ ಕೂತು ಉಂಡಮೇಲೆ ಅವನು ಸಾಮೂಹಿಕ ವ್ಯಕ್ತಿ. ಸಮಾಜದ ನಡುವೆ ಬದುಕಬೇಕು. ಸೋಮವಾರ, ಶುಕ್ರವಾರ ಅವನು ಜೋಳಿಗೆ ಬೆತ್ತ ಹಿಡಿದು, ಕಂಸಾಳೆ ಬಡಿದು ದೈವಪಾರಮ್ಯ ಸಾರುತ್ತ ಭಿಕ್ಷಕ್ಕೆ ಹೋಗಬೇಕು. ಭಿಕ್ಷೆ ತಂದವನು, ಯಾರಾದರೂ ಗುಡ್ಡರಿಗೆ ಇಕ್ಕಿ ಅವರೊಂದಿಗೆ ಊಟ ಮಾಡಬೇಕು.

ಮಲೆಯ ಮಹದೇಶ್ವರನ ಗುಡ್ಡರು ಭಕ್ತರೆಲ್ಲ ಅವರವರ ನೆಲೆಯಲ್ಲಿ ಮಾಂಸಾಹಾರಿಗಳಾದರೂ, ಈ ಸಂತನ ಸೇವೆಗೆಂದು ಹೋಗುವಲ್ಲಿ ಮಾತ್ರ ಸಸ್ಯಾಹಾರಿಗಳಂತೆ ವರ್ತಿಸುತ್ತಾರೆ. ಇದೇನೆ ಇರಲಿ ಮನೆಯ ಮಹದೇಶ್ವರ, ಮಂಟೇಸ್ವಾಮಿ, ಸಿದ್ಧಪ್ಪಾಜಿ, ರಾಚಪ್ಪಾಜಿ, ನಂಜುಂಡೇಶ್ವರ ಇವರೆಲ್ಲ ತಳವರ್ಗದಿಂದ ಬಂದವರಲ್ಲದೆ, ಇವರು ದೇವಾಲಯ ಮತ್ತು ವೈದಿಕ ಮಾದರಿಯ ಪೂಜಾ ಪದ್ಧತಿಯನ್ನು ನಿರಾಕರಿಸಿದವರು. ಇದಕ್ಕೆ ಸ್ಪಷ್ಟವಿರುವ ಮತ್ತು ಗಮನಿಸಬಹುದಾದ ಸಂಪ್ರದಾಯವೆಂದರೆ ಕರ್ನಾಟಕದ ಬಹುತೇಕ ದೇವಾಲಯಗಳಲ್ಲಿ ತಳವರ್ಗದವರಿಗೆ ನೇರ ಪ್ರವೇಶವಿರುತ್ತದೆ. ಹಾಗೆ ನೋಡಿಕೊಂಡರೆ ಇವು ದೇವಾಲಯ ಸಂಸ್ಕೃತಿಗೆ ಸಂಬಂಧಪಟ್ಟ ಆರಾಧನೆಯ ಮಾದರಿಗಳಲ್ಲ. ತಮ್ಮ ನಡುವೆ ಬದುಕಿ ತಮ್ಮ ಉದ್ದಾರಕ್ಕೆ ಶ್ರಮಿಸಿದವರನ್ನು ನೆನೆಯುವ ಕ್ರಮ. ಅಲ್ಲದೆ ಹಾಗೆ ನೆನೆಯುವ ವ್ಯಕ್ತಿ ತಮ್ಮ ನಡುವೆಯೇ ಇದ್ದಾನೆಂದು ಹಾಡುಗಳ ಮೂಲಕ, ಆಚರಣೆಗಳ ಮೂಲಕ ಜೀವಂತವಾಗಿರಿಸುವ ಸಂಪ್ರದಾಯ. ಅಲ್ಲದೆ  ತಮ್ಮ ಸಂತಾನದಲ್ಲೆಲ್ಲ ಆ ಸಂತನ ಅಂಶವಿರುತ್ತದೆಂದು ಆತನ ಹೆಸರಿನಿಂದಲೇ ವಂಶವನ್ನು ಬೆಳೆಸುವುದರ ಪರಿಪಾಠವೂ ಇರುತ್ತದೆ. ಹೀಗೆ ಒಂದು ಕಾಲಕ್ಕೆ ತಮ್ಮ ನಡುವೆ ಆಗಿಹೋದ ಸಮಾಜ ಸುಧಾರಕರನ್ನು ಕಾವ್ಯದ ಮೂಲಕ, ದಂತಕಥೆಗಳ ಮೂಲಕ ಆಚರಣೆಗಳು ಮತ್ತು ಆತನ ಹೆಸರಿನಿಂದಲೇ ತಮ್ಮನ್ನು ಕರೆದುಕೊಳ್ಳುವುದರ ಮೂಲಕ ಸಂತರನ್ನು ನಿರಂತರವಾಗಿ ಬದುಕಿಸಿಕೊಂಡಿರುತ್ತಾರೆ. ಕರ್ನಾಟಕದಾದ್ಯಂತ ಈ ಬಗೆಯ ಯಾವುದೇ ಜನಪದ ಸಾಂಸ್ಕೃತಿಕ ನಾಯಕರ ಮೇಲೆ ಪ್ರಚಾರದಲ್ಲಿರುವ ಕಥನಕಾವ್ಯಗಳಿಗಿಂತ ಅವರ ಆರಾಧನೆಯ ಹಿನ್ನೆಲೆಯಲ್ಲಿರುವ ಆಚರಣೆಗಳೇ ಹೆಚ್ಚು ಸತ್ಯವನ್ನು ಹೊರಹಾಕುತ್ತವೆ ಎಂಬುದನ್ನು ಅರಿಯಬೇಕು. ಈ ಹಿನ್ನೆಲೆಯಲ್ಲಿ ಜನಪದಕಾವ್ಯ  ಮಹಾಕಾವ್ಯಗಳ ಸಂಗ್ರಹಕ್ಕಿಂತಲೂ ಆ ಪ್ರದೇಶಗಳಲ್ಲಿ ಜನಸಮೂಹದ ನಡುವೆ ಇರುವ ಆಚರಣೆಗಳ ಅಧ್ಯಯನವೂ ಆಗಬೇಕು.