ಕನ್ನಡದ ಜಾನಪದ ಅಧ್ಯಯನಗಳಲ್ಲಿ ಬಳಸಲಾಗುತ್ತಿರುವ ‘ಜನಪದ ಮಹಾಕಾವ್ಯ’ ಎಂಬುದು ಒಂದು ಸೀಮಿತ ಪರಿಭಾಷೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ‘ಶಿಷ್ಟ’ ಎನ್ನಲಾಗುವ ಬರೆಹ ಪರಂಪರೆಯ ಸಾಹಿತ್ಯಕ್ಕೆ ಸರಿ ಸಮಾನವಾಗಿ ಜನಪದ ಸಾಹಿತ್ಯವನ್ನೂ ನೋಡಬೇಕೆಂಬ ಒತ್ತಾಸೆಯಲ್ಲಿ ಈ ಪರಿಭಾಷೆ ಹುಟ್ಟಿಕೊಂಡಿತು. ಆದರೆ ತನಗೆ ತಕ್ಕ ಸ್ಥಾನ ಪಡೆಯುವ ಉದ್ದೇಶದಲ್ಲಿ ಹುಟ್ಟಿದ ಈ ಪರಿಭಾಷೆಯು ವಾಸ್ತವದಲ್ಲಿ ತನ್ನ ಮಹತ್ವವನ್ನು ತಾನೇ ಕಡಿಮೆಗೊಳಿಸಿಕೊಂಡಿತು. ಯಾಕೆಂದರೆ, ಕಥೆ, ಕಾವ್ಯ, ಸಂಗೀತ, ಚರಿತ್ರೆ ಮುಂತಾದ ಬಹು ಆಯಾಮವುಳ್ಳ ಕಥನವನ್ನು ‘ಜನಪದ ಮಹಾಕಾವ್ಯ’ ಎಂಬ ಪರಿಭಾಷೆಯ ನಿಜವಾಗಿ ಪ್ರತಿನಿಧಿಸುವುದಿಲ್ಲ. ಇದಕ್ಕೆ ಹೋಲಿಸಿದರೆ ಕರಾವಳಿಯಲ್ಲಿ ಸಿಗುವ ಸಿರಿ ಕಥನಕ್ಕಿರುವ ‘ಪಾಡ್ದನ’ವು ಈ ಸಮುದಾಯ ಕಥನಗಳಿಗೆ ಹೆಚ್ಚು ಹತ್ತಿರದ ಪರಿಭಾಷೆ. ಸದ್ಯಕ್ಕೆ ಈ ಲೇಖನದಲ್ಲಿ ‘ಜನಪದ ಮಹಾಕಾವ್ಯ’ ಎಂಬುದಕ್ಕೆ ‘ಸಮುದಾಯ ಕಥನ’ ಎಂಬ ಪರ್ಯಾಯ ಪರಿಭಾಷೆಯನ್ನು ಬಳಸಿದೆ. ಕಾರಣ, ಇವುಗಳ ಹಿಂದೆ ಸಾಮಾಜಿಕವಾಗಿ ಕೆಲವು ಸಮುದಾಯಗಳಿವೆ. ಕಲಾವಿದರು ಈ ಸಮುದಾಯಗಳ ಆಶೋತ್ತರಗಳನ್ನು ಪ್ರತಿನಿಧೀಸುವಂತೆ ಸಾಂಸ್ಕೃತಿಕ ನಾಯಕರ ಬದುಕನ್ನು ಕುರಿತು ಒಂದು ಕಥನವನ್ನು ಮಾಡುತ್ತಾರೆ. ಈ ಕಥನದಲ್ಲಿ ಕತೆ ಸಂಗೀತ ನಾಟಕ ನೃತ್ಯ ನಂಬಿಕೆ ಆಚರಣೆ ಅಧ್ಯಾತ್ಮ ರಾಜಕಾರಣ ಸಮಾಜಶಾಸ್ತ್ರ ಎಲ್ಲವೂ ಇವೆ.

ಪ್ರಸ್ತುತ ಲೇಖನದಲ್ಲಿ ಸಮುದಾಯ ಕಥನಗಳಲ್ಲಿರುವ ವಿಶ್ವಸೃಷ್ಟಿಯ ಕಥನಗಳನ್ನು ವಿಶ್ಲೇಷಿಸುವ ಅವುಗಳಲ್ಲಿರುವ ಲೋಕಸೃಷ್ಟಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಯತ್ನವನ್ನು ಮಾಡಲು ಯತ್ನಿಸಲಾಗುವುದು. ಇಲ್ಲಿ ‘ವಿಶ್ವಸೃಷ್ಟಿ’ ಎಂದರೆ ಭೂಮಿ ಗಗನ ಸೂರ್ಯ ಚಂದ್ರ ಮಾನವ ಪಶು ಪಕ್ಷಿ ಬೆಳೆ ಗಿಡಮರ ಹಾಗೂ ಭಾಷೆಗಳನ್ನು ಸೃಷ್ಟಿಸುವ ಕಥೆಗಳು. ಇಲ್ಲಿ ‘ಲೋಕಸೃಷ್ಟಿ’ ಎಂದರೆ ಭೂಮಿಯ ಮೇಲೆ ಸಾಂಸ್ಕೃತಿಕ ನಾಯಕರು ಸ್ಥಾಪಿಸಲು ಬಯಸುವ ಸಮಾಜ. ಈ ವಿಶ್ವಸೃಷ್ಟಿ ಮತ್ತು ಲೋಕಸೃಷ್ಟಿಗಳೂ ಪರಸ್ಪರ ಪೂರಕವಾಗಿದ್ದು ಅವುಗಳ ಒಳಗೆ ಒಂದು ಲೋಕದೃಷ್ಟಿಯಿದೆ. ‘ಲೋಕದೃಷ್ಟಿ’ ಎಂದರೆ ವಿಶ್ವ ಮತ್ತು ಲೋಕ ಎರಡರ ಬಗ್ಗೆಯೂ ಇರುವ ದೃಷ್ಟಿಕೋನ. ಗಂಡು, ಮಹಿಳೆ, ಆಸ್ತಿ, ಬಡತನ, ಲೌಕಿಕ ಜಗತ್ತು, ಅಲೌಕಿಕತೆ, ಜಾತಿ, ಧರ್ಮ, ಹಿಂಸೆ, ಅಹಿಂಸೆ, ಪ್ರಭುತ್ವ, ಅಧಿಕಾರ ಇತ್ಯಾದಿ ಸಂಗತಿಗಳನ್ನು ಕುರಿತಂತೆ ಈ ಕಥನಗಳು ತಾಳುವ ತಾತ್ವಿಕ ನಿಲುವು.

‘ಮಹಾಕಾವ್ಯ’ ಎನ್ನಲಾಗುವ ಜಗತ್ತಿನ ಎಲ್ಲ ಸಮುದಾಯ ಕಥನಗಳು ಸಮಾನ್ಯವಾಗಿ ವಿಶ್ವ ಅಥವಾ ಬ್ರಹ್ಮಾಂಡ ಸೃಷ್ಟಿಯ ವರ್ಣನೆಯಿಂದ ಆರಂಭವಾಗುತ್ತವೆ. ಜಗತ್ತಿನ ಬಹುತೇಕ ಧರ್ಮಗಳ ಧಾರ್ಮಿಕ ಪಠ್ಯಗಳು ಕೂಡ ವಿಶ್ವಸೃಷ್ಟಿಯ ವರ್ಣನೆಯ ಮೂಲಕವೇ ಶುರುವಾಗುತ್ತವೆ. ಈ ವರ್ಣನೆಗಳಲ್ಲಿ ಸಮುದಾಯಗಳ ಆದಿಮ ಕುತೂಹಲ, ವಿಸ್ಮಯ ಕಲ್ಪನೆ, ವಿಚಾರ ಮತ್ತು ಅನುಭವಗಳಿವೆ. ಮುಖ್ಯವಾಗಿ ಭೂಮಿ ಅಥವಾ ವಿಶ್ವವು ಹೇಗೆ ಸೃಷ್ಟಿಯಾಯಿತು, ಅದಕ್ಕೆ ವಿನಾಶವಿದೆಯೆ, ಇದ್ದರೆ ಹೇಗಾಗುತ್ತದೆ, ಭೂಮಿಯ ಮೇಲೆ ಜೀವಸೃಷ್ಟಿ ಏಗೆ ಶುರುವಾಯಿತು ಮುಂತಾದ ಪ್ರಶ್ನೆಗಳು ಆದಿಮ ಸಮುದಾಯಗಳಿಗೆ ಕಾಡಿವೆ. ಇವು ಆಧುನಿಕ ವಿಜ್ಞಾನಕ್ಕೆ ಕೂಡ ಕಾಡುತ್ತಿರುವ ಮೂಲಭೂತ ಪ್ರಶ್ನೆಗಳು. ಆದಿಮ ಸಮುದಾಯಗಳು ಈ ಪ್ರಶ್ನೆಗಳಿಗೆ ತಮ್ಮದೇ ಆದ ಉತ್ತರವನ್ನು ಕಂಡುಕೊಂಡಿದ್ದು, ಅವು ಆ ಕಥನಗಳಲ್ಲಿ ರೂಪಕಗಳ ವಿನ್ಯಾಸದಲ್ಲಿವೆ. ಸಮುದಾಯಗಳ ಆದಿಮ ವೈಜ್ಞಾನಿಕ ತಿಳುವಳಿಕೆಯನ್ನು ಒಳಗೊಂಡಿರುವ ಕಾರಣದಿಂದ ಈ ಸಮುದಾಯ ಕಥನಗಳನ್ನು ಆದಿಮ ಜನರ ಜ್ಞಾನಕೋಶಗಳೆಂದೂ ಕರೆಯಬಹುದು. ಹೀಗೆ ಸಮುದಾಯಗಳ ಪಾರಂಪರಿಕ ಜ್ಞಾನಮೀಮಾಂಸೆಗೂ ಈ ಕಥನಗಳಿಗೂ ನೇರ ಸಂಬಂಧವಿದೆ.

ಸೋಜಿಗವೆಂದರೆ, ಈ ಜ್ಞಾನಕೋಶಗಳಿಗೂ, ಜಗತ್ತಿನ ಪ್ರಮುಖ ಕ್ಲಾಸಿಕಲ್ ಎನ್ನಲಾಗುವ ಧರ್ಮಗಳ ಧಾರ್ಮಿಕ ಗ್ರಂಥಗಳಿಗೂ ವಿಶ್ವಸೃಷ್ಟಿಯ ವಿಷಯದಲ್ಲಿ ಆಶ್ಚರ್ಯಕರ ಸಾಮ್ಯವಿರುವುದು. ಇದು ಸೂಚಿಸುವ ಸಂಗತಿಗಳು ಎರಡು. ೧. ಜಗತ್ತಿನ ಕ್ಲಾಸಿಕಲ್ ಧರ್ಮಗಳ ‘ಪವಿತ್ರ’ ಪಠ್ಯಗಳು ಆಯಾ ದೇಶದ ಸಮುದಾಯಗಳ ಜನಪದ ಕಲ್ಪನೆಗಳ ಆಧಾರದಿಂದಲೇ ಹುಟ್ಟಿವೆ. ೨. ‘ಜನಪದ’ ಎನ್ನಲಾಗುವ ಈ ಸಮುದಾಯ ಕಥನಗಳು ಸಮುದಾಯಗಳ ನಿಜವಾದ ಧಾರ್ಮಿಕ ಪಠ್ಯಗಳಾಗಿವೆ.

ಕನ್ನಡದಲ್ಲಿ  ಸಮುದಾಯ ಕಥನಗಳಲ್ಲಿರುವ ವಿಶ್ವಸೃಷ್ಟಿ ಮತ್ತು ವಿನಾಶದ ವರ್ಣನೆಗಳು ಪರಸ್ಪರ ಸಾಮ್ಯತೆ ಹೊಂದಿರುವ ಹಾಗೆಯೆ ಭಿನ್ನತೆಯನ್ನೂ ಹೊಂದಿವೆ. ಮ್ಯಾಸಬೇಡರ ಗಾದ್ರಿಪಾಲನಾಯಕ, ಮೈಸೂರು ಭಾಗದ ಮಂಟೇಸ್ವಾಮಿ ಮತ್ತು ಮಾದೇಶ್ವರ, ಮಧ್ಯಕರ್ನಾಟಕದ ಕುರುಬರ ಮೈಲಾರಲಿಂಗ ಮತ್ತು ಗೊಲ್ಲರ ಜುಂಜಪ್ಪ, ಉತ್ತರ ಕರ್ನಾಟಕದ ಹಾಲುಮತದ ಸಾಂಸ್ಕೃತಿಕ ನಾಯಕರ ಮೇಲಿರುವ ಈ ಕಥನಗಳಲ್ಲಿ ಬೇರೆ ಬೇರೆ ಬಗೆಯ ವಿಶ್ವಸೃಷ್ಟಿಯ ಪರಿಕಲ್ಪನೆಗಳಿವೆ. ಪ್ರತಿಯೊಂದು ಕಥನದ ಪರಿಕಲ್ಪನೆಯೂ ವಿಶಿಷ್ಟವಾಗಿದೆ. ಈ ವಿಶಿಷ್ಟತೆಯು ಆಯಾ ಕಥನವನ್ನು ಕಟ್ಟಿ ಹಾಡುವ ಮತ್ತು ಕೇಳುವ ಜನಸಮುದಾಯಗಳಿಗೂ, ಅವು ಬದುಕುವ ಪ್ರದೇಶದ ಸ್ಥಳೀಯ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಲೋಕಗಳಿಗೂ ಸಂಬಂಧಪಟ್ಟಿದೆ. ಸಮುದಾಯ ಕಥನಗಳಲ್ಲಿರುವ ಈ ಜ್ಞಾನರೂಪಿ ರೂಪಕಗಳನ್ನು ಒಡೆದು ಅರ್ಥ ತೆಗೆದು, ಅದರ ಸಾಮಾಜಿಕ, ಮಾನವಶಾಸ್ತ್ರೀಯ ಮತ್ತು ಚಾರಿತ್ರಿಕ ವಿಶ್ಲೇಷಣೆ ಮಾಡುವ ವಿಧಾನವೊಂದು ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಈ ರೂಪಕಗಳು ಕಥನ ಮಾಡುವವರ ಅಥವಾ ಅವರ ಸಮುದಾಯಗಳ ವಾಸ್ತವಿಕ ಬದುಕಿನ ಕೆಲವು ಅಂಶಗಳನ್ನು ಪ್ರತಿಬಿಂಬಿಸುತ್ತಿವೆ. ಇವುಗಳಲ್ಲಿ ಸ್ಥಳೀಯ ಜನರ ದೇಶೀಯ ವಿಜ್ಞಾನದ ಕಲ್ಪನೆಗಳ ಜೊತೆಗೆ ಅವರ ಚಾರಿತ್ರಿಕ ಸಂಘರ್ಷದ ಆಶಯಗಳಿವೆ. ಅವರ ವರ್ತಮಾನದ ರಾಜಕೀಯ ಸಾಮಾಜಿಕ ಪ್ರತಿಕ್ರಿಯೆಗಳಿವೆ. ಅವರ ಸ್ಮೃತಿಯ ತಳದಲ್ಲಿ ಅಡಗಿರುವ ಆದಿಮ ತಿಳಿವಳಿಕೆಯ ಭಾಗಗಳಿವೆ. ಧಾರ್ಮಿಕ ನಂಬಿಕೆಗಳಿವೆ ಹಾಗೂ ಆಧ್ಯಾತ್ಮಕ ಅನುಭಾವಿಕ ಹುಡುಕಾಟಗಳಿವೆ.

ಹೀಗಾಗಿ ಇವು ಕೇವಲ ಜನಪದರ ಜ್ಞಾನಕೋಶಗಳು ಅಲ್ಲ ಅಥವಾ ಅವರ ಚೌರಿತ್ರಿಕ ಇಲ್ಲವೇ ವರ್ತಮಾನದ ಬದುಕಿನ ವಾಸ್ತವಿಕ ಪ್ರತಿಬಿಂಬಗಳೂ ಅಲ್ಲ. ಇವೆರಡರ ಜತೆಗೆ ಸಮುದಾಯಗಳ ಈಡೇರದ ಆದರ್ಶಗಳೂ ಭವಿಷ್ಯದ ಕನಸುಗಳೂ ಸೇರಿವೆ. ಯಾಕೆಂದರೆ, ಬಡವರು ಹಿಂದುಳಿದವರು ಕೇವಲ ತಮ್ಮ ಹಸಿವು ಬಡತನ ಕೀಳರಿಮೆ ಮುಂತಾದ ಲೌಕಿಕ ಕಷ್ಟಗಳ ವಿರುದ್ಧ ಮಾಡುವ ಹೋರಾಟಕ್ಕೆ ಬದಲಾಗಿ, ಇಲ್ಲದ ಸಮೃದ್ಧಿಯನ್ನು ಕುರಿತು ಹಾಡುತ್ತಿರುವ ಸಾಧ್ಯತೆಯಿದೆ. ಸಮುದಾಯಗಳ ಸುಪ್ತಪ್ರಜ್ಞೆಯೊಳಗಿನ ಯಾವೆಲ್ಲ ಸಂಗತಿಗಳನ್ನು ಕೂಡಿಕೊಂಡು ರೂಪಾಂತರ ಪಡೆದು, ಈ ವಿಶ್ವಸೃಷ್ಟಿಯ ಕಥನಗಳನ್ನು ಹುಟ್ಟಿಸಿವೆಯೊ ಖಚಿತವಾಗಿ ಹೇಳುವುದು ಕಷ್ಟ. ಇವು ರೂಪಕ, ಪುರಾಣ, ಮಿತ್, ಇತಿಹಾಸ ಎಲ್ಲವೂ ಕಲಸಿಹೋಗಿರುವ ರಚನೆಗಳು. ಆದ್ದರಿಂದ ಈ ಕಥನಕಗಳನ್ನು ಬಳಸಿ ಸಮುದಾಯಗಳ ಸಾಮಾಜಿಕ ರಾಜಕೀಯ ಆರ್ಥಿಕ ಬದುಕಿನ ಚರಿತ್ರೆಯನ್ನು ತಾರ್ಕಿಕವಾಗಿ ಕಟ್ಟುವುದು ಕಷ್ಟ. ಇಂತಹ ಪಠ್ಯಗಳನ್ನು ಅಧ್ಯಯನ ಮಾಡಲು ಹೊರಡುವುದಕ್ಕೆ ಹೊಸದೊಂದು ದೃಷ್ಟಿಕೋನ ಅರ್ಥಾತ್ ಹೊಸ ಅಧ್ಯಯನ ವಿಧಾನವನ್ನೆ ಹುಡುಕಿಕೊಳ್ಳಬೇಕಿದ್ದು, ಅದನ್ನು ಕನ್ನಡ ಚಿಂತಕರು ಕೂಡಿ ಅರಸಬೇಕಿದೆ ಸದ್ಯಕ್ಕೆ ಈ ಲೇಖನದಲ್ಲಿ ಕೇವಲ ವಿಶ್ವಸೃಷ್ಟಿಯ ಕಥನಗಳನ್ನು ವಿಶ್ಲೇಷಿಸಲು ಮತ್ತು ಅವು ಪಠ್ಯಗಳ ಒಳಗೆ ಇರುವ ಲೋಕಸೃಷ್ಟಿಯ ಜತೆ ಇಟ್ಟುಕೊಂಡಿರುವ ಅಂತರ ಸಂಬಂಧವನ್ನು ಪರಿಶೀಲಿಸಲು ಯತ್ನಿಸಿದೆ.[1] ಮಲೆ ಮಾದೇಶ್ವರ ಕಥೆಯನ್ನು ಇಲ್ಲಿ ಮುಖ್ಯವಾಗಿ ಇಟ್ಟುಕೊಂಡಿದ್ದರೂ, ಕನ್ನಡದ ಪ್ರಮುಖ ಸಮುದಾಯ ಕಥನ ಹಾಗೂ ಸಮುದಾಯ ಪುರಾಣಗಳನ್ನು ಚರ್ಚೆಗೆ ಪೂರಕವಾಗಿ ಬಳಸಿಕೊಳ್ಳಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಹುಟ್ಟಿದ ಧರ್ಮಗಳ ಧರ್ಮಗ್ರಂಥಗಳಾದ ಕುರಾನ್ ಮತ್ತು ಬೈಬಲ್ಲುಗಳಲ್ಲಿ ಮೊದಲು ಬೆಳಕಿನ ಸೃಷ್ಟಿಯಾಗುತ್ತದೆ. ಇದನ್ನು ಬಿಟ್ಟರೆ ಜಗತ್ತಿನ ಬಹುತೇಕ ಸಮುದಾಯಗಳು ಕಟ್ಟಿಕೊಂಡಿರುವ ಸೃಷ್ಟಿ ಪುರಾಣಗಳಲ್ಲಿ ಮೊದಲು ನೀರು ಮತ್ತು ಭೂಮಿ ಸೃಷ್ಟಿಯಾಗುತ್ತದೆ. ಆಧುನಿಕ ಜೀವವಿಜ್ಞಾನ ಕೂಡ ಜಲ ಸೃಷ್ಟಿಯು ಉಳಿದೆಲ್ಲ ಸೃಷ್ಟಿಗೆ ಮೂಲವೆಂದು ಹೇಳುತ್ತದೆ. ಹಾಲುಮತ, ಬೈಗರು, ಸಿಂಧ್ ಮಾದಿಗರು, ಕೊರಗರು ಕಟ್ಟಿಕೊಂಡಿರುವ ಪುರಾಣ ಕಥನಗಳು ಕೂಡ ಜಗತ್ತಿನ ಸೃಷ್ಟಿಯ ಆದಿಯಲ್ಲಿ ಸರ್ವತ್ರವೂ ಜಲ ತುಂಬಿಕೊಂಡಿತ್ತು ಎಂದು ಹೇಳುತ್ತವೆ. ಜಲಸೃಷ್ಟಿಯ ಹಿಂದೆಯೇ ಭೂಸೃಷ್ಟಿಯ ಕಥನಗಳು ಬರುತ್ತವೆ. ಸಿಂಧ್ ಮಾದಿಗರ ಪುರಾಣಗಳ ಪ್ರಕಾರ ಆದಿ ಕಾಲದಲ್ಲಿ ಸರ್ವತ್ರ ಜಲವು ಹೇಗೆ ತುಂಬಿಕೊಂಡಿತ್ತು ಎಂದರೆ, ಕಾಮಧೇನು ಮೇಯಲು ಗಟ್ಟಿಯಾದ ಭೂಮಿ ಕೂಡ ಇರುವುದಿಲ್ಲ. ಆಗ ಜಾಂಬವಂತನು ತನ್ನ ಮಗ ಹೆಪ್ಪುಮುನಿಯನ್ನು ಕೊಂದು, ರಕ್ತವನ್ನು ಚೆಲ್ಲಿ ಭೂಮಿಯನ್ನು ಹೆಪ್ಪುಗಟ್ಟಿಸುತ್ತಾನೆ. ನಂತರ ಅಲ್ಲಿ ಹುಲ್ಲು ಹುಟ್ಟಿ ಹಸು ಮೇಯಲು ಜಾಗವಾಗುತ್ತದೆ. ಬುಕಟ್ಟು ಸಮುದಾಯಗಳ ಮೇಲೆ, ಜೀವನ ದೃಷ್ಟಿಯ ಮೇಲೆ ಅಪೂರ್ವವಾದ ಕೆಲಸ ಮಾಡಿರುವ ಬ್ರಿಟೀಷ್ ಮಾನವಶಾಸ್ತ್ರಜ್ಞ ವೆರಿಯಲ್ ಎಲ್ವಿನ್ನನು, ಮಧ್ಯಭಾರತದ ಬುಡಕಟ್ಟು ಜನರಿಂದ ಸಂಗ್ರಹಿಸಿದ ಕತೆಯಲ್ಲೂ ಮಣ್ಣು ಸೃಷ್ಟಿಯಾಗುವ ಕಥನಗಳಿವೆ. ಅಲ್ಲಿ ದೇವರ ಮಗಳಾದ ಕಾಗೆಯು, ಸಮುದ್ರದ ಅಡಿಯಲ್ಲಿರುವ ಕೀಟದ ಹೊಟ್ಟೆಯಿಂದ ೨೨ ಬಗೆಯ ಮಣ್ಣುಗಳನ್ನು ವಾಂತಿ ಮಾಡಿಸುತ್ತಾಳೆ.

ಈ ಗಗನದಿಂದ ಬೀಳುವ ನೀರು ಮತ್ತು ಕೆಳಗಿನ ಭೂಮಿಗಳು ಬಹುಶಃ ಸೃಷ್ಟಿ ಕ್ರಿಯೆಯಲ್ಲಿ ತೊಡಗುವ ಗಂಡುಹೆಣ್ಣುಗಳ ಸಂಕೇತಗಳು. ಹಾಲುಮತದ ಕಥನದಲ್ಲಿ ನೀರು ಪುರುಷ ಮತ್ತು ವೀರ್ಯದ ಸಂಕೇತವಾಗಿಯೂ, ಭೂಮಿಯು ಕ್ಷೇತ್ರ ಮತ್ತು ಅಂಡಾಣುವಿನ ಸಂಕೇತವಾಗಿಯೂ ಬರುತ್ತದೆ. ಬೈಬಲ್ ಮತ್ತು ಕುರಾನ್‌ಗಳಲ್ಲಿ ಮೊದಲು ಗಂಡಿನ ಉಗಮವಾಗಿ ನಂತರ ಅವನ ಪಕ್ಕೆಲುಬಿನಿಂದ ಮಹಿಳೆಯ ಸೃಷ್ಟಿಯಾಗುತ್ತದೆ. ಹೆಚ್ಚಿನ ಪಠ್ಯಗಳಲ್ಲಿ ಮೊದಲು ನೀರಿರುವುದು ಕೂಡ ಗಂಡನ್ನು ಮೊದಲಿಗನಾಗಿ ಸ್ಥಾಪಿಸುತ್ತಿರುವುದನ್ನೆ ಸಂಕೇತಿಸುತ್ತಿರಬಹುದು. ಇದಕ್ಕೆ ತಕ್ಕಂತೆ ಬಹುತೇಕ ಕಥನಗಳಲ್ಲಿ ಸೃಷ್ಟಿಯ ಹಕ್ಕನ್ನು ಬಹುತೇಕ ಕಥನಗಳಲ್ಲಿ ಗಂಡೇ ಚಲಾಯಿಸುತ್ತಾನೆ. ಕುರಾನ್ ಮತ್ತು ಬಬಲುಗಳಲ್ಲಿ ಸೃಷ್ಟಿಕಾರ್ಯವನ್ನು ಗಂಡಾಗಿರುವ ದೇವರು ಮಾಡುತ್ತಾನೆ. ಮಂಟೇಸ್ವಾಮಿ ಕಥನದಲ್ಲಿ ಮಂಟೇಸ್ವಾಮಿ ಮಾಡುತ್ತಾನೆ ‘ನಾನೊಂದು ಲೋಕವ ಕಟ್ಟಬೇಕು’ ಎಂದು ಯೋಚಿಸುವ ಮಂಟೇಸ್ವಾಮಿಯು, ವಿಭೂತಿಯ ಉಂಡೆಯನ್ನು ನಾಗಬೆತ್ತದಿಂದ ಹೊಡೆದು ಎರಡು ಹೋಳನ್ನಾಗಿಸಿ ಒಂದರಿಂದ ಭೂಮಿಯನ್ನೂ ಇನ್ನೊಂದರಿಂದ ಮರಗಿಡಗಳನ್ನು ಸೃಷ್ಟಿಸುತ್ತಾನೆ. ಸೃಷ್ಟಿಕ್ರಿಯೆಗೆ ಕಾರಣವಾಗಿರುವ ನಾಗಬೆತ್ತವು (ಸರ್ಪವು) ಪುರುಷಶಕ್ತಿಯ ಸಂಕೇತದಂತೆ ಭಾಸವಾಗುತ್ತದೆ. ಭಾರತದಲ್ಲಿ ಯೋಗಿಗಳು ಮತ್ತು ವಿರಕ್ತರು ಸಾಂಸ್ಕೃತಿಕ ನಾಯಕರಾಗಿರುವ ಸಮುದಾಯ ಕಥನಗಳು ಸಹಜವಾಗಿ ಪುರುಷ ಪ್ರಧಾನವಾಗಿವೆ. ಇವುಗಳಲ್ಲಿ ಮಾದೇಶ್ವರ ಮತ್ತು ಮಂಟೇಸ್ವಾಮಿಗಳೂ ಸೇರಿವೆ.

ವಿಶೇಷವೆಂದರೆ, ಮಂಟೇಸ್ವಾಮಿ ಕಥನದಲ್ಲಿ ಸೃಷ್ಟಿಯ ಕೆಲಸ ಮಾಡುವುದು ಬ್ರಹ್ಮನಲ್ಲ. ಅವನ ಹೆಂಡತಿ ವಿಧಿಯಮ್ಮ. ಹಾಲುಮತದ ಕಥನದಲ್ಲಿ ಶಿವನಲ್ಲ. ಪಾರ್ತತಿ. ಹೆಣ್ಣು ಹೊಸ ಜೀವಿಯೊಂದನ್ನು ತನ್ನ ಹೊಟ್ಟೆಯೊಳಗೆ ಸೃಷ್ಟಿಸಿ ಜಗತ್ತಿಗೆ ಕೊಡುವ ಪವಾಡವನ್ನು ಕಂಡಿರುವ ಆದಿಮ ಸಮಾಜಗಳು ಬಹುಶಃ ಮಾತೃದೇವತೆಯ ಆರಾಧನೆಯನ್ನು ಆರಂಭಿಸಿದವು. ಈ ಆರಾಧನೆಗೂ ಶಾಕ್ತ ಕೌಳ ಮುಂತಾದ ಸ್ತ್ರೀ ಪ್ರಧಾನ ಪಂಥಗಳಿಗೂ ಸಂಬಂಧವಿದೆ. ಹೆಣ್ಣು ಸೃಷ್ಟಿಶೀಲತೆಯ ಸಂಕೇತವಾಗಿದ್ದು ಹೀಗೆ. ಈ ಕುರಿತ ಬೆರಗು ಇಲ್ಲಿನ ಕಥನಗಳಲ್ಲಿ ರೂಪಕ ಮತ್ತು ಸಂಕೇತ ಕಥೆಗಳ ಮೂಲಕ ಪ್ರಕಟವಾಗುತ್ತದೆ. ಸೃಷ್ಟಿಶೀಲತೆಯ ಹಕ್ಕನ್ನು ಪುರುಷರು ಸ್ತ್ರೀಯರಿಂದ ಕಿತ್ತುಕೊಂಡು ತಮ್ಮದೆಂದು ಸಾಧಿಸುವ ಕಥೆಗಳು ಬಹುಶಃ ನಂತರದ ಕಾಲಘಟ್ಟದಲ್ಲಿ ಬಂದು ಸೇರಿದಂತೆ ತೋರುತ್ತದೆ. ಮಂಟೇಸ್ವಾಮಿ ಕಥೆಯಲ್ಲಿ ಹೆಣ್ಣು ಆದಿಪರಾಶಕ್ತಿ. ಇಲ್ಲಿನ ‘ಆದಿ’ ಎಂಬುದು ಕಾಲ ಸೂಚಕವೂ ಘಟ್ಟ ಸೂಚಕವೂ ಆಗಿದೆ. ಹೆಣ್ಣು ಸೃಷ್ಟಿಗೆ ಮೂಲಭೂತಳಾದವಳು ಎಂಬುದನ್ನು ಇದು ಸೂಚಿಸುತ್ತಿರಬಹುದು. ಇದಕ್ಕೆ ಪೂರಕವಾಗಿ ಜಗತ್ತಿನ ಸೃಷ್ಟಿಕ್ರಿಯೆಗೆ ಯಾರು ಹಕ್ಕುದಾರರು, ಬ್ರಹ್ಮನೊ ವಿಧಿಯಮ್ಮನೊ ಎಂಬ ಪ್ರಶ್ನೆ ಇಲ್ಲಿ ಕಾಣಿಸಿಕೊಳ್ಳುತ್ತದೆ. ಮಂಟೇಸ್ವಾಮಿ ಕಥನದಲ್ಲಿ ಬ್ರಹ್ಮನಿಗೆ ಸೃಷ್ಟಿ ರಹಸ್ಯವನ್ನು ಹೇಳಿಕೊಟ್ಟ ಬಳಿಕ ತಾನೊಬ್ಬಳೇ ಇರುವ ಬೇಸರವನ್ನು ನೀಗಲು ವಿಧಿಯಮ್ಮ ‘ಮಣ್ಣಿಂದ ಬೊಂಬೆ ಮಾಡಿ ಆಡಪಾಟ ಮಾರಬೇಕು, ಬೇಜಾರು ಕಳೀಬೇಕು’ ಎಂದು ಯತ್ನಿಸುತ್ತಾಳೆ. ಪುರುಷನೊಬ್ಬನೇ ಕಾರಣವೆಂದರೆ ಅವಾಸ್ತವವಾಗುತ್ತದೆ. ಸ್ತ್ರೀಯೂ ಕಾರಣಳೂ ಎಂದು ಒಪ್ಪಿಕೊಳ್ಳಲು ಪುರುಷ ಅಹಂಕಾರ ಒಪ್ಪುತ್ತಿಲ್ಲ. ಇದರ ಬಗೆಗಿನ ವಾಗ್ವಾದಗಳು ಇಲ್ಲಿ ಪ್ರಕಟವಾಗುತ್ತವೆ. ಸೃಷ್ಟಿ ಕಾರ್ಯಕ್ಕೆ ಸಂಬಂಧಿಸಿದಂತಿರುವ ಗಂಡು ಹೆಣ್ಣಿನ ಸಂಘರ್ಷಗಳು, ಮುಂದೆ ಕಥೆಯೊಳಗೆ ಕಥಾನಾಯಕರು ಸ್ತ್ರೀದೇವತೆಗಳ ಜತೆ ಮಾಡುವ ಸಂಘರ್ಷಗಳಲ್ಲಿ ಮುಂದುವರೆಯುತ್ತದೆ. ಮಂಟೇಸ್ವಾಮಿ ಕಥೆಯಲ್ಲಿ ಹಲಗೂರಿನ ಪಾಂಚಾಳರನ್ನು ಸೋಲಿಸಲು ಹೊರಡುವ ಸಿದ್ಧಪ್ಪಾಜಿಯ ದಾರಿಯಲ್ಲಿ ಅಡ್ಡಬರುವ ಮಾರಿಯರನ್ನು ದಂಡಿಸುವ ಭಾಗವಾಗಲಿ ಮಾದೇಶ್ವರ ಕಥೆಯಲ್ಲಿ ಬೇವಿನಹಟ್ಟಿ ಕಾಳಿಯ ಜತೆ ಮಾದೇಶ್ವರನು ಮಾಡುವ ಸಂಘರ್ಷವಾಗಲಿ ಇದಕ್ಕೆ ಸಾಕ್ಷಿ.

ವಿಶೇಷವೆಂದರೆ, ಇಲ್ಲಿ ಸೃಷ್ಟಿಯಾಗುವ ವಿಶ್ವವು ಮಾನವ ಕೇಂದ್ರಿತವಾಗಿರುವುದು. ವಿಶ್ವಸೃಷ್ಟಿಯ ಕೆಲಸ ಮುಗಿದ ಬಳಿಕ ‘ಈ ಭೂಮಿತಾಯ ಮೇಲೆ ಹುಟ್ಟಿದಂತ ಗುರುವೆ ಗಿಡಮರಗಳೆಲ್ಲ ನಾನು ಪಡೆದಂತೆ ಮಕ್ಕಳಿಗೆ ಆಹಾರವಾಗಲೆಂದರಂತೆ” ಎಂದು ಮಂಟೇಸ್ವಾಮಿ ನುಡಿಡಿಯುತ್ತಾನೆ. ವಿರಕ್ತ ಯೋಗಿಗಳು ಹೆಣ್ಣಿನ ಸಹವಾಸ ಮಾಡಲು ಹಿಂಜರಿಯುವರು, ಸಂಸಾರ ಮಾಡದವರು, ಸೃಷ್ಟಿಕ್ರಿಯೆಗೆ ತೊಡಗುತ್ತಾರೆ ಮತ್ತು ತಮ್ಮ ಸೃಷ್ಟಿಗಳ ಬಾಯಲ್ಲಿ ಅಪ್ಪಾಜಿ ಅನಿಸಿಕೊಳ್ಳುತ್ತಾರೆ. ಇವರು ತಂದೆಯಲ್ಲದ ತಂದೆಗಳು. ಸಂಸಾರಿಗಳಲ್ಲವಾದರೂ ಈ ಯೋಗಿಗಳಿಗೆ ಅವರದೇ ಆದ ಸಂಸಾರ ಮತ್ತು ವ್ಯವಸ್ಥೆಯು ರೂಪುಗೊಳ್ಳುತ್ತದೆ. ಬೈಬಲ್ ಮತ್ತು ಕುರಾನುಗಳ ಸೃಷ್ಟಿಕತೆಗಳು ಸಹ ಮಾನವ ಕೇಂದ್ರಿತವಾಗಿವೆ. ಇಲ್ಲಿ ಮಾನವ ಎಂದರೆ ಬಹುಮಟ್ಟಿಗೆ ಗಂಡೇ. ದೇವರು ಮೊದಲು ಮಾನವರನ್ನು ಸೃಷ್ಟಿಸಿ ಬಳಿಕ ಅವರ ಉಪಯೋಗಕ್ಕಾಗಿ ಸಸ್ಯ ಪ್ರಾಣಿಜಗತ್ತುಗಳನ್ನು ನಿರ್ಮಿಸುತ್ತಾನೆ. ಮಾನವ ಸಸ್ಯ ಪ್ರಾಣಿಗಳ ಸಹಬಾಳ್ವೆಯು ಮಾನವಕೇಂದ್ರಿತ ಲೋಕ ದೃಷ್ಟಿಯ ಅಪಾಯಗಳನ್ನು ಕುರಿತು ಈಗ ನಾವು ಚಿಂತಿಸುತ್ತಿದ್ದೇವೆ. ಅಂತಹ ಸರ್ವಜೀವಿ ಕೇಂದ್ರಿತ ದೃಷ್ಟಿ ಈ ಕಥನಗಳಲ್ಲಿ ಕಡಿಮೆಯಿದೆ.

ಇಲ್ಲಿನ ಕಥನಗಳಲ್ಲಿನ ಸೃಷ್ಟಿಕತೆಗಳು ವಿಚಿತ್ರವೆನಿಸುವ ಅಸಹಜ ಹುಟ್ಟಿನ ಕಲ್ಪನೆಗಳನ್ನು ಒಳಗೊಂಡಿವೆ. ದೇಹದ ಬೆವರು ಮತ್ತು ಮೈಕೊಳೆಯಿಂದ ಮನುಚ್ಯರು ಹುಟ್ಟುವ ಸಂಗತಿ ಇಲ್ಲಿ ಮತ್ತೆ ಮತ್ತೆ ಬರುತ್ತದೆ. ಬೈಗರ ಕತೆಗಳಲ್ಲಿ ದೇವರು ತನ್ನ ಮೈ ಕೊಳೆಯಿಂದ ಕಾಗೆ ಎಂಬ ಮಗಳನ್ನು ಹುಟ್ಟಿಸುತ್ತಾನೆ. ಮಂಟೇಸ್ವಾಮಿ ತನ್ನ ಮೈಯ ಬೆವರಿನಿಂದ ಚಿಟ್ಹರಳಿನ ಬೀಜ ಹುಟ್ಟಿಸಿ ಅದರ ಎಣ್ಣೆಯಿಂದ ಜ್ಯೋತಿ ಹೊತ್ತಿಸುತ್ತಾನೆ. ಜುಂಜಪ್ಪನ ಕಥನದಲ್ಲಿ ಶಿವನು ಕೈಲಾಸದಲ್ಲಿ ನಾಟ್ಯವನ್ನಾಡುವಾಗ ಹುಟ್ಟುವ ಬೆವರಿನ ಜಲದೊಳಗಿಂದ ಚಿತ್ರಲಿಂಗ ಕಾಟಮಲಿಂಗರು ಹುಟ್ಟುತ್ತಾರೆ. ಹಾಲುಮತದ ಕಥನದಲ್ಲಿ ಶಿವನ ಬೆವರನ್ನು ಸೂರಮ್ಮ ಮತ್ತು ಬಾಳಭರಮರು ಕುಡಿದ ಬಳಿಕ ಬೀರಪ್ಪ ಹುಟ್ಟುತ್ತಾನೆ. ಮೊದಲ ಮಾನವರಾದ ಮುದ್ದುಗೊಂಡ ಮುದ್ದಮ್ಮರನ್ನು ಪಾರ್ವತಿಯು ತನ್ನ ಮೊಲೆವಾಲಿನಿಂದ ಮಣ್ಣನ್ನು ಕಲಸಿ ಸೃಷ್ಟಿಸುತ್ತಾಳೆ. ಪಾರ್ವತಿಯ ಮೈಕೊಳೆಯಿಂದಾದ ಗೊಂಬೆಯೇ ಹಾಲುಮತದ ಅಮೋಘಸಿದ್ಧನಾಗಿ ಬೆಳೆಯುತ್ತಾನೆ. ದೇಹದಿಂದ ಹುಟ್ಟುವ ಘನ ಮತ್ತುದ್ರವಗಳ ಮೂಲಕ ಹೊಸ ಸೃಷ್ಟಿ ಆಗುವುದು ಮಾರ್ಮಿಕವಾಗಿದೆ. ಎಷ್ಟೇ ಅಲೌಕಿಕ ನೆಲೆಯಲ್ಲಿ ಹುಟ್ಟನ್ನು ಕಲ್ಪಿಸಿಕೊಂಡರೂ ದೇಹದ ಮೂಲದಿಂದ ಅವು ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಹೆಚ್ಚಿನ ಕಥನಗಳಲ್ಲಿ ಹೆಣ್ಣು ಪುರುಷ ಸಂಪರ್ಕವಿಲ್ಲದೆ ಸಂತಾನವನ್ನು ಪಡೆಯುವ ಪ್ರಸಂಗಗಳಿವೆ. ಬೈಬಲಿನಲ್ಲಿ ಮೇರಿಯು ತನ್ನ ಪತಿ ಜೋಸೆಫನ ಸಂಪರ್ಕವಿಲ್ಲದೆ ಗರ್ಭಿಣಿಯಾಗಿ ಯೇಸುವನ್ನು ಪಡೆಯುವ ಪ್ರಸಂಗವು ಪ್ರಸಿದ್ಧವಾಗಿದೆಯಷ್ಟೆ. ಮಾದೇಶ್ವರ ಕಥೆಯಲ್ಲಿ ಉತ್ಸಾಜಮ್ಮನು ತಾವರೆಯ ದಂಟನ್ನು ಲಿಂಗದ ಕರಡಿಗೆಯಲ್ಲಿ ಇಟ್ಟುಕೊಂಡು ಮಲಗಿದಾಗ, ಅದರೊಳಗಿದ್ದ ಶಿವಲಿಂಗವೇ ಮಗುವಾಗಿ ಮಾದೇಶ್ವರ ಜನಿಸುವ ಪ್ರಸಂಗವಿದೆ. ಸೂರ್ಯನ ಬಿಸಿಗೆ ಅರಳುವ ಮತ್ತು ಮುದುಡುವ ಕಮಲ ಮತ್ತು ಅದಕ್ಕೆ ಲಗತ್ತಾಗಿರುವ ದಂಟುಗಳು ಇಲ್ಲಿ ಸಾಂಕೇತಿಕವಾಗಿವೆ. ಫಿನ್‌ಲ್ಯಾಂಡಿನ ಕಲೆವಾಲ ಕಥನವು ಗಾಳಿಕುವರಿಯಾದ ಇಲ್ಮತಾರಳು, ತನ್ನ ಸಂಗಾತಿಯ ಹುಡುಕಾಟದಲ್ಲಿ ಮಕ್ಕಳಿಗಾಗಿ ಪಡುವ ತವಕದಿಂದ ಶುರುವಾಗುತ್ತದೆ. ಕಡಲ ಅಲೆ ಮತ್ತು ಗಾಳಿಯ ಮೂಲಕ ಆಕೆ ಬಸಿರಾಗಿ ವೆಯ್ನಮೊಯ್ನನ್ ಎಂಬ ಮಗನನ್ನು ಹಡೆಯುತ್ತಾಳೆ. ಕರ್ಣ ಮುಂತಾದ ಅನೇಕರು ನಿಸರ್ಗದ ಅಂಶಗಳಿಂದ ಹೆಣ್ಣು ಗರ್ಭಧಾರಣೆಯಾಗಿ ಹುಟ್ಟುವ ಕಥನಗಳು ನಮ್ಮಲ್ಲಿ ಮೊದಲಿಂದಲೂ ಇವೆಯಷ್ಟೆ.

ಪುರುಷರ ದೈಹಿಕ ಸಂಪರ್ಕವಿಲ್ಲದೆ ಸಂತಾನ ಪಡೆಯುವ ಮಹಿಳೆಯರಿಗೆ ಪ್ರತಿಯಾಗಿ, ಮಹಿಳೆಯರ ನೆರವಿಲ್ಲದೆ ಸಂತಾನ ಸೃಷ್ಟಿಸುವ ಯೋಗಿಗಳ ಕಥನಗಳೂ ಇವೆ. ಭಾರತದ ಯೋಗಿಗಳಿಗೆ ಗುರು ಸ್ವರೂಪಿಯಂತಿರುವ ಗೋರಖನಾಥ ಮತ್ತು ಮಚೇಂದ್ರನಾಥರ ಹುಟ್ಟಿನ ಕಥನಗಳಲ್ಲಿ ಇದನ್ನು ನೋಡಬಹುದು. ಶಿವನ ವೀರ್ಯವು ಜಾರಿ ನೀರಲ್ಲಿ ಬಿದ್ದಾಗ, ಅದನ್ನು ಮೀನು ನುಂಗಿ ಅದರ ಹೊಟ್ಟೆಯಲ್ಲಿ ಮಚೇಂದ್ರನಾಥನು ಹುಟ್ಟುತ್ತಾನೆ. ಇದೇ ಮಚೇಂದ್ರನು ಮಹಿಳೆಯೊಬ್ಬಳಿಗೆ ಪ್ರಸಾದವಾಗಿ ಕೊಟ್ಟ ಬೂದಿಯನ್ನು ಆಕೆ ತಾತ್ಸಾರದಲ್ಲಿ ತಿಪ್ಪೆಯಲ್ಲಿ ಬಿಸಾಡಿದಾಗ, ಆ ಸಗಣಿಗುಡ್ಡೆಯಲ್ಲಿ ಗೋರಖನು ಹುಟ್ಟುತ್ತಾನೆ. ಇಲ್ಲಿ ಶುಕ್ಲಬಣ್ಣದ ವಿಭೂಮಿಯು ಸಾಂಕೇತಿಕವಾಗಿ ಗಮನಾರ್ಹವೆಂದರೆ, ಅದನ್ನು ಧರಿಸಲು ನಿರಾಕರಿಸುವ ಹೆಣ್ಣು ತಿಪ್ಪೆಗೆ ಚೆಲ್ಲುವುದು. ಮಲಮೂತ್ರಗಳು ಇರುವ ಹೊಟ್ಟೆಯಲ್ಲಿ ಮಗು ಹುಟ್ಟುವುದನ್ನು ವಿರಕ್ತ ಧಾರೆಗಳು ತಿಪ್ಪೆಯ ರೂಪಕದಲ್ಲಿ ಕಾಣಿಸಿದ್ದರೆ ಸೋಜಿಗವಿಲ್ಲ. ಯೋಗಿಗಳ ಹುಟ್ಟಿಗೆ ಸಂಬಂಧಿಸಿದಂತೆ ಇರುವ ಈ ರೂಪಕ ಕಥನಗಳ ಹಿಂದಿರುವುದು ಮೂಲತಃ ಅಯೋಜಿನ ಕಲ್ಪನೆ. ಅಂದರೆ ಹೆಣ್ಣಿನ ಗರ್ಭದ ಹಂಗಿಲ್ಲದೆ ಹುಟ್ಟುವ ಪುರುಷರ ಸ್ವಾಭಿಮಾನದ ಕಲ್ಪನೆ. ವಿವಾಹಿತ ಪುರುಷನ ಸಂಗವಿಲ್ಲದೆ ಗರ್ಭಧಾರಣೆ ಮಾಡಿದ ಸಿನ್ನಮ್ಮನ ಹೊಟ್ಟೆಯಲ್ಲಿ ಬೆಳೆಯುವ ಜುಂಜಪ್ಪನು, ಲೋಕಕ್ಕೆ ಬರುವಾಗ ಯೋನಿಯ ಮೂಲಕ ಬರಲು ನಿರಾಕರಿಸುತ್ತಾನೆ. ಇದನ್ನು ಅವನು ಕೊಡುವ ಕಾರಣ – “ಹೊಟ್ಟೆವೊಳುಗುಟ್ಟಿದರೆ ಸೂತಕು ಬೆರಿಕ್ಯಾಗತೈತೆ, ಬಾಯೊಳಗುಟ್ಟಿದರೆ ಎಂಜಲು ಬೆರಕ್ಯಾಗುತೈತೆ”. ಸೂತಕವುಳ್ಳ ಹೆಣ್ಣಿನ ಯೋನಿಯನ್ನು ಸಂಭೋಗಕ್ಕಾಗಿ ಬಳಸುವುದು ಮತ್ತು ಅಲ್ಲಿಂದ ಹುಟ್ಟಿ ಬರುವುದು – ಎರಡಕ್ಕೂ ಈ ವಿರಕ್ತ ಪುರುಷರು ಆತಂಕ ಪಡುವುದು ಗಮನಾರ್ಹ. ಹೆಣ್ಣಿನ ದೇಹ ಮತ್ತು ರಕ್ತದ  ಸಂಪರ್ಕದಿಂದ ತಪ್ಪಿಸಿಕೊಳ್ಳುವುದಕ್ಕೆ ಈ ವಿರಕ್ತರು ಅಥವಾ ಯೋಗಿಗಳು ಪಡುವ ಪಾಡು, ಸ್ತ್ರೀವಾದಿ ಪಂಥಗಳ ಜತೆಗೆ ಪುರುಷವಾದಿ ಪಂಥಗಳು ನಡೆಸಿರುವ ಕದನಗಳ ಪಳೆಯುಳಿಕೆಗಳಂತೆ ತೋರುತ್ತವೆ. ಮಂಟೇಸ್ವಾಮಿಯು ಸೃಷ್ಟಿಸುವ ಆದಿಪರಾಶಕ್ತಿಯು, ತನ್ನನ್ನು ಕೊಡಬೇಕೆಂದು ಆಹ್ವಾನ ಕೊಟ್ಟಾಗ, ಅವನು “ಕರಿತಲಾ ಜಾತಿ ಕಂದಾ ಕಣ್ಣೆತ್ತಿ ನೋಡಲಾರೆ” ಎಂದು ನಿರಾಕರಿಸುತ್ತಾನೆ. ಆದರೂ ಮಂಟೇಸ್ವಾಮಿ ಕಥನದಲ್ಲಿ ಸೃಷ್ಟಿಯ ಹಕ್ಕನ್ನು ಪಡೆಯಲು ವಿಧಿಯಮ್ಮನು ತನ್ನ ಗಂಡನ ಜತೆ ಹೋರಾಡುವ ಪ್ರಸಂಗವು ಅದ್ಭುತವಾಗಿ ಬರುತ್ತದೆ. ಆಕೆಯ ಸೃಷ್ಟಿಯ ಹಕ್ಕನ್ನು ಮಂಟೇಸ್ವಾಮಿ ಕೊನೆಗೆ ಮಾನ್ಯಮಾಡುತ್ತಾನೆ. ಇದು ಸೃಷ್ಟಿಕ್ರಿಯೆಯಲ್ಲಿ ಮಹಿಳೆಯ ಭಾಗವಹಿಸುವಿಕೆಯನ್ನು ತಡೆಯಲು ಅಸಾಧ್ಯವಾಗಿರುವುದನ್ನು ಸೂಚಿಸುತ್ತದೆ. ಇದಕ್ಕೆ ಹೋಲಿಸಿದರೆ, ಮಾದೇಶ್ವರ ಮತ್ತು ಹಾಲುಮತದ ಕಥೆಗಳು ಹೆಣ್ಣಿನ ಬಗ್ಗೆ ಸಾಕಷ್ಟು ಪಾಸಿಟಿವ್ ಆಗಿವೆ. ಆದರೆ ಜುಂಜಪ್ಪ ಹಾಗೂ ಮಂಟೇಸ್ವಾಮಿ ಕಥನಗಳು ಈ ಬಗ್ಗೆ ಕೊಂಚ ಕಟುವಾಗಿವೆ. ಹೀಗೆ ಈ ಸಮುದಾಯ ಕಥನಗಳು ಹೆಣ್ಣನ್ನು ಕುರಿತು ತಾಳಿರುವ ನೇತ್ಯಾತ್ಮಕ, ಸಂಘರ್ಷಾತ್ಮಕ ಮತ್ತು ಪೂರಕವಾದ ನಿಲುವುಗಳನ್ನೆಲ್ಲವನ್ನೂ ಒಳಗೊಂಡಿವೆ.

ಆದರೂ ಪುರುಷ ಮತ್ತು ಸ್ತ್ರೀಯರು ಪರಸ್ಪರ ಸಂಪರ್ಕ ಮತ್ತು ಸಮಾಗಮವನ್ನು ನಿರಾಕರಿಸುವ ಕಥನಗಳನ್ನು ಸಮುದಾಯಗಳು ಯಾಕಾಗಿ ಕಟ್ಟಿಕೊಂಡವು ಎಂಬ ಸಂಗತಿಯನ್ನು ವಿವರಿಸುವುದು ಸರಳವಾಗಿಲ್ಲ. ಸಾಮಾನ್ಯವಾಗಿ ಬೇಟೆಗಾರ, ಪಶುಪಾಲಕ ಮತ್ತು ವ್ಯಾಪಾರಿ ಸಮುದಾಯಗಳಲ್ಲಿ ಸ್ತ್ರೀಯ ಲೈಂಗಿಕ ಪಾವಿತ್ರ್ಯ ಮತ್ತು ಪತಿನಿಷ್ಠೆಯ ಪ್ರಶ್ನೆಗಳು ಮುಖ್ಯವಾಗಿರುತ್ತವೆ. ಹೀಗಾಗಿ ಅಲ್ಲಿ ಸ್ತ್ರೀ ಕುರಿತ ಪುರುಷ ಶಂಕೆಗಳು ಸಹಜ. ಪರಶುರಾಮನು ತನ್ನ ತಾಯಿಯ ಶೀಲವನ್ನು ಶಂಕಿಸಿ ಆಡುವ ಮಾತುಗಳು ಎಲ್ಲಮ್ಮನ ಕಥೆಯಲ್ಲಿವೆ. ಕಾಡುಗೊಲ್ಲರ ಜುಂಜಪ್ಪ, ಮಾದೇಶ್ವರ ಕಥನದ ಬೇಟೆಗಾರ ನೀಲಯ್ಯ, ವ್ಯಾಪಾರಿಯ ಕಥನವಾದ ಬಪ್ಪಬ್ಯಾರಿಯ ಪಾಡ್ದನಗಳಲ್ಲೆಲ್ಲ ಸ್ತ್ರೀಯು ಲೈಂಗಿಕ ಸೆಳೆತದ ವಿಷಯದಲ್ಲಿ ನಂಬಿಕೆ ಅನರ್ಹ ಎಂಬ ಆಶಯಗಳಿವೆ. ಮೂಲತಃ ವ್ಯಾಪಾರಿ ಸಂಸ್ಕೃತಿಯುಳ್ಳ ಸಮಾಜದಲ್ಲಿ ಹುಟ್ಟಿದ ಇಸ್ಲಾಮಿಕ್ ಪುರಾಣಗಳಲ್ಲೂ ಈ ನಿಲುವಿನ ಕಥೆಗಳಿವೆ. ಇವಕ್ಕೆ ಹೋಲಿಸಿದರೆ, ಕೃಷಿಕ ಸಮಾಜದಲ್ಲಿ ಪುರುಷನಿಗೆ ಸ್ತ್ರೀಯ ಸಹಕಾರ ಬಹಳ ಮುಖ್ಯ. ಆಕೆಯು ಪುರುಷನನ್ನು ಅಗಲುವ ಪ್ರಸಂಗಗಳು ಕೂಡ ಕಡಿಮೆ. ಒಂದೊಮ್ಮೆ ಗಂಡನಾದವನು ಅಗಲುವ ಪ್ರಸಂಗ ಬಂದರೆ ತಮ್ಮ ಗಂಡುಮಕ್ಕಳ ಮೂಲಕ ಅವರು ಕೃಷಿ ಮಾಡಿಸುತ್ತಾರೆ. ಕರ್ನಾಟಕದ ಕರಾವಳಿಯ ಸಿರಿ ಪಾಡ್ದನಗಳಲ್ಲಿ ಸಿರಿಯು ಹಾಗೂ ಬಪ್ಪಬ್ಯಾರಿಯ ಪಾಡ್ದನದಲ್ಲಿ ಆತನ ತಾಯಿಯು ತಮ್ಮ ಗಂಡುಮಕ್ಕಳಿಗೆ ಗದ್ದೆ ಕೆಲಸಕ್ಕೆ ಹಚ್ಚುವುದು ಗಮನಾರ್ಹ. ಸ್ತ್ರೀ ಕೇಂದ್ರಿತ ಸಮಾಜದಲ್ಲಿ ಹುಟ್ಟುವ ಕಥನಗಳು ಸಾಮಾನ್ಯವಾಗಿ ಕೃಷಿಕೇಂದ್ರಿತವಾಗಿರುತ್ತವೆ ಅಥವಾ ಕೃಷಿಕ ಸಮಾಜದಲ್ಲಿ ಸ್ತ್ರೀ ಕೇಂದ್ರಿತ ಕಥನಗಳು ಹುಟ್ಟುತ್ತವೆ.

ಬಹುತೇಕ ಸಮುದಾಯ ಕಥನಗಳಲ್ಲಿ ಮಾನವ ರೂಪವನ್ನು ಸೃಷ್ಟಿಸಲು ಮಣ್ಣು (ಇದು ಹೊಲ ಮತ್ತು ದೇಹದಿಂದ ಬರುವ ಮಣ್ಣು) ಬಳಕೆಯಾಗುತ್ತದೆ. ಮಾನವ ಶರೀರವು ಪೃಥ್ವಿಯಿಂದ ಬಂದ ಕಾರಣದಿಂದಾಗಿ ಅದನ್ನು ಪಾರ್ಥಿವ ಎಂದು ಕರೆಯುವುದು. ದೇಹಕ್ಕೆ ಮೃತ್ಯುವಿರುವ ಕಾರಣ ಅದರದು ಮರ್ತ್ಯದ ಬದುಕು. ಮರ್ತ್ಯ ಮತ್ತು ಮೃತ್ಯು ಶಬ್ದಗಳ ಮೂಲದಲ್ಲಿ ಮೃತ್ತಿಕೆ (ಮಣ್ಣು) ಇದೆ. ಈ ಮಣ್ಣಿನ ಬಳಕೆಯು ರೈತಾಪಿ ಸಂಸ್ಕೃತಿಗೆ ಇರುವ ಸಂಬಂಧದ ಸೂಚನೆ ಇದ್ದೀತು. ಹಾಲುಮತದ ಕಥನದಲ್ಲಿ ಪಾರ್ವತಿಯು ಹೊಲದ ಎರೆಮಣ್ಣಿನಿಂದ ತನ್ನ ಮಕ್ಕಳನ್ನು ಸೃಷ್ಟಿಸುವ ಪ್ರಸ್ತಾಪ ಹಿಂದೆ ಬಂದಿತು. ಮಂಟೇಸ್ವಾಮಿ ಕಥೆಯಲ್ಲೂ ಇದಿಯಮ್ಮನು ಮಣ್ಣಿನ ಬೊಂಬೊಮಾಡಿ ನಂತರ ಅದಕ್ಕೆ ಜೀವಕೊಡುತ್ತ ಹೋಗುತ್ತಾಳೆ. ಬೈಬಲ್‌ಮತ್ತು ಕುರಾನುಗಳಲ್ಲೂ ದೇವರು ಮಣ್ಣಿನ ಬೊಂಬೆ ಮಾಡಿ ಅದಕ್ಕೆ ತನ್ನ ಉಸಿರನ್ನು ಊಡುತ್ತಾನೆ. ಆದರೆ ಇಲ್ಲಿ ಮೊದಲು ಗಂಡಸಿನ ಸೃಷ್ಟಿಯಾಗಿ, ಬಳಿಕ ಅವನ ಪಕ್ಕೆಲುಬಿನಿಂದ ಹೆಣ್ಣನ್ನು ಹುಟ್ಟಿಸಲಾಗುತ್ತದೆ. ಇದಕ್ಕೆ ಹೋಲಿಸಿದರೆ, ಹಾಲುಮತದ ಕಥನದಲ್ಲಿ ಏಕಕಾಲಕ್ಕೆ ಗಂಡು –ಹೆಣ್ಣುಗಳು ಪಾರ್ವತಿಯ ಮೂಲಕ ಹುಟ್ಟುವುದು ವಿಶೇಷವಾಗಿದೆ.

ಸಮುದಾಯಗಳು ಸೃಷ್ಟಿಸಿಕೊಂಡಿರುವ ಈ ಧಾರ್ಮಿಕ ಕಥನಗಳಲ್ಲಿರುವ ವಿಶ್ವಸೃಷ್ಟಿಯ ಕಲ್ಪನೆಗಳಿಗೂ ಲೋಕಸೃಷ್ಟಿಗೂ ಆಂತರಿಕ ಸಂಬಂಧಗಳಿವೆ. ಈ ಸಂಬಂಧಗಳ ಪರಿಶೀಲನೆ ಮಾಡಿದರೆ, ಈ ಕಥನಗಳು ಚಾರಿತ್ರಿಕ ಮತ್ತು ಸಮಕಾಲೀನ ಸಮಾಜದ ಅನೇಕ ಸಂಘರ್ಷ ಮತ್ತು ವಲನಶೀಲತೆಯ ಸಂಗತಿಗಳನ್ನು ತಮ್ಮ ಗರ್ಭದಲ್ಲಿ ಧರಿಸುವುದು ತಿಳಿಯುತ್ತದೆ. ಮಂಟೇಸ್ವಾಮಿ ಕಥನದ ಆರಂಭದಲ್ಲಿ ಮಂಟೇಸ್ವಾಮಿಯು ‘ನಾನೊಂದು ಲೋಕವ ಕಟ್ಟಬೇಕು’ ಎಂದು ಘೊಷಿಸಿದ ಕೂಡಲೇ ‘ನಾನೊಂದು ರಾಜ್ಯವ ಕಟ್ಟಬೇಕು’ ಎಂಬ ಹೇಳಿಕೆ ಮಾಡುವುದು ಗಮನಾರ್ಹ. ಮೇಲುನೋಟಕ್ಕೆ ಒಂದು ಲೌಕಿಕ ಮತ್ತೊಂದು ಅಲೌಕಿಕ ಲೋಕ ಅನಿಸಿದರೂ, ಇವುಗಳಲ್ಲಿ ಒಂದು ದ್ವಂದ್ವಾತ್ಮಕ ಸಂಬಂಧವಿದೆ. ಈ ಎರಡೂ ಲೋಕಗಳು ಒಂದರ ಒಳಗೊಂದು ಸೇರಿಕೊಂಡಿವೆ. ಮೊದಲು ಅಲೌಕಿಕ ಎನ್ನಬಹುದಾದ ಕಾಸ್ಮಿಕ್ ವಿಶ್ವದ ಸೃಷ್ಟಿಯಾಗುತ್ತದೆ. ನಂತರ ಇದರ ಮುಂದುವರಿಕೆಯಾಗಿ ಲೌಕಿಕ ಎನ್ನಬಹುದಾದ ಲೋಕವೊಂದು, ಮಂಟೇಸ್ವಾಮಿ ಮಾತಲ್ಲಿ ಹೇಳುವುದಾದರೆ ರಾಜ್ಯವೊಂದು, ತೆರೆದುಕೊಳ್ಳುತ್ತದೆ. ಆ ಲೋಕ ಅಥವಾ ರಾಜ್ಯದಲ್ಲಿ ಈ ಕಥನಗಳ ಸಾಂಸ್ಕೃತಿಕ ನಾಯಕರ ಸಂಘರ್ಷ ಮತ್ತು ಸೆಣಸಾಟಗಳು ಆರಂಭವಾಗುತ್ತವೆ. ಇವು ಮುಗಿದು, ವಿಜಯಪ್ರಾಪ್ತಿ ಮತ್ತು ಹೊಸ ಸಮಾಜದ ಪ್ರತಿಷ್ಠಾಪನೆ ಆದ ಬಳಿಕ, ಸಾಂಸ್ಕೃತಿಕ ನಾಯಕನ ಅಲೌಕಿಕ ಪ್ರಯಾಣ ಆರಂಭವಾಗುತ್ತದೆ. ಉದಾಹರಣೆಗೆ ಕಥೆಯ ಕೊನೆಯಲ್ಲಿ ಮಂಟೇಸ್ವಾಮಿಯು ಬಾರಿಗುಂಡನ್ನು ಚಾಚಿಕೊಂಡು ಸಮಾಧಿಗೆ ಹೋಗುತ್ತಾನೆ. ಈ ಅವತರಣ, ಸೆಣಸಾಟದ ಜೀವನ ಮತ್ತು ಅವರೋಹಣದ ವಿನ್ಯಾಸವು ವಿಷ್ಣುವಿನ ದಶಾವತಾರ ಕಲ್ಪನೆಯಿಂದ ಹಿಡಿದು, ಜೈನ ತೀರ್ಥಂಕರರ ಪುರಾಣ ಇಲ್ಲವೇ ಹರಿಹರನ ರಗಳೆಯಲ್ಲಿಯ ತನಕ, ಬೇರೆ ರೂಪದಲ್ಲಿ ಭಾರತದ ಪುರಾಣ ಕಥನಗಳಲ್ಲಿ ಇರುವಂತಹದ್ದೇ ಆಗಿದೆ. ಜನಪದ ಎನ್ನುವ ಸಮುದಾಯ ಕಥನಗಳಿಗೆ ಈ ಪ್ರಯಾಣವು ವಿಶಿಷ್ಟವಾದುದೇನಲ್ಲ.

ಸಮುದಾಯ ಕಥನಗಳಲ್ಲಿ ಭೂಮಿ ಗಗನ ನೀರು ಗಿಡ ಮರ ಕೀಟ ಮುಷ್ಯರ ಸೃಷ್ಟಿಯ ಮುಂದಿನ ಸಹಜ ಘಟ್ಟವಾಗಿ ಸಮಾಜ ಸೃಷ್ಟಿಯು ಬರುತ್ತದೆ. ಎಲ್ಲ ಬಗೆಯ ಸೃಷ್ಟಿಗಳ ತರ್ಕವು ಕೊನೆಗೆ ನೆಲೆ ನಿಲ್ಲುವುದು ಹೊಸ ಕಲ್ಪನೆಯ ಸಮಾಜ ಸೃಷ್ಟಿಯಲ್ಲೆ. ಕಾಸ್ಮಿಕ್ ವಿಶ್ವದ ಸೃಷ್ಟಿಯು ಮಾನವ ಸಮಾಜದ ಲೋಕಸೃಷ್ಟಿಗೆ ಮುನ್ನುಡಿಯಾಗಿದೆ. ಫಿನ್‌ಲ್ಯಾಂಡಿನ ‘ಕಲೆವಾಲಾ’ದಲ್ಲಿ ಇಲ್ಮತಾರಳ ಚಾಚಿಕೊಂಡ ಕಾಲಿನಲ್ಲಿ ಗೂಡುಕಟ್ಟಿ ಹಕ್ಕಿಯಿಡುವ ತತ್ತಿಯಿಂದ ಭೂಮಿ ಗಗನ ಚಂದ್ರತಾರೆಗಳು ನಿರ್ಮಾಣವಾಗುತ್ತವೆ. ಬಳಿಕ ಇಲ್ಮತಾರಳಿಗೆ ಮಗನೊಬ್ಬನು ಹುಟ್ಟುತ್ತಾನೆ. ಆತ ಹುಟ್ಟಿ ಬೆಳೆದ ಬಳಿಕ ಮಾಡುವ ಮೊದಲ ಕೆಲಸವೆಂದರೆ, ಬೀಜಬಿತ್ತಿ ಬಗೆಬಗೆಯ ಗಿಡಗಳನ್ನು ಬೆಳೆಯುವುದು. ವಿಶ್ವಸೃಷ್ಟಿಯ ಪ್ರಸಂಗಗಳಲ್ಲಿರುವ ನೀರು ಬೆಳಕು ಭೂಮಿ ಗಿಡಮರ ಹಾಗೂ ಪ್ರಾಣಿಪಕ್ಷಿಗಳು ಕೃಷಿಗೆ ಪೂರಕವಾದ ನೈಸರ್ಗಿಕ ಅಂಶಗಳೂ ಆಗಿವೆ ಎಂಬುದನ್ನು ಮರೆಯುವಂತಿಲ್ಲ. ವಿಶ್ವಸೃಷ್ಟಿಯ ಕಥನಗಳು ಮಾನವ ಸಮಾಜದ ಆರ್ಥಿಕ ಚಟುವಟಿಕೆಯ ಕೃಷಿ, ಬೇಟೆ ಮತ್ತು ಪಶುಪಾಲನೆ ಮತ್ತು ಕರಕುಶಲ ವೃತ್ತಿಗೆ ಸಂಬಂಧಪಟ್ಟಿರುವುದು ಸಹಜ. ಹೀಗಾಗಿ ಈ ಕಸುಬುಗಳಿಗೆ ಬೇಕಾದ ಉಪಕರಣಗಳ ಸೃಷ್ಟಿಯ ಪ್ರಸಂಗಗಳೂ ಇಲ್ಲಿ ಬರುತ್ತವೆ. ಸಿಂಧ್ ಮಾದಿಗರ ಪುರಾಣಗಳಲ್ಲಿ, ಜಾಂಬವ ಮುನಿಯು ತನ್ನ ಎರಡನೇ ಮಗನನ್ನು ಕೊಂದು, ಅವನ ಎಲುಬುಗಳಿಂದ ಬ್ರಹ್ಮನಿಗೆ ಸೃಷ್ಟಿಕ್ರಿಯೆಗೆ ಬೇಕಾದ ಹತ್ಯಾರಗಳನ್ನು ಮಾಡಿಕೊಡುತ್ತಾನೆ. ವಿಶೇಷವೆಂದರೆ, ದಲಿತರು ಮತ್ತು ಕೆಳಜಾತಿಯ ಶ್ರಮಿಕ ಸಮುದಾಯಗಳು ಕಟ್ಟಿರುವ ಸೃಷ್ಟಿ ಕಥನಗಳಲ್ಲಿ, ಜನ ತಮ್ಮನ್ನು ಬಲಿಗೊಟ್ಟು ಲೋಕಕಲ್ಯಾಣ ಮಾಡುವ ಸಂಗತಿಗಳಿರುವುದು. ಬ್ರಾಹ್ಮಣ ಪುರಾಣಗಳಲ್ಲಿ ಶತ್ರುವನ್ನು ಉಪಾಯದಿಂದ ವಂಚಿಸಿ ಕೊಲ್ಲುವ ಕಥನಗಳಿಗೆ ಹೋಲಿಸಿದರೆ ಇವುಗಳ ವಿಶಿಷ್ಟತೆ ತಿಳಿಯುತ್ತವೆ. ಬೇರೆ ಬೇರೆ ಸಮುದಾಯಗಳು ತಮ್ಮ ಅಸ್ತಿತ್ವ ಮತ್ತು ಯಜಮಾನಿಕೆ ಸ್ಥಾಪಿಸಲು ಚರಿತ್ರೆಯಲ್ಲಿ ನಡೆಸಿರುವ ಹೋರಾಟಗಳು ಈ ಕಥನಗಳಲ್ಲಿ ಬರುತ್ತ ಹೋಗಿವೆ. ಅರಬ್ ಜಗತ್ತಿನ ಆಂತರಿಕ ಸಂಘರ್ಷಗಳನ್ನು ಅವರ ಧಾರ್ಮಿಕ ಗ್ರಂಥಗಳು ಸೂಚಿಸುತ್ತವೆ. ಬೈಬಲ್ಲಿನ ಮೊದಲನೇ ಒಡಂಬಡಿಕೆಯಲ್ಲಿ ಇರುವ ಶತ್ರುನಾಶದ ಕಥನಗಳನ್ನು ಗಮನಿಸಬೇಕು. ಇವು ವೇದಗಳಲ್ಲೂ ಇವೆ. ಇವು ಭೇರೆ ರೂಪದಲ್ಲಿ, ಜನಪದ ಎನ್ನಲಾಗುವ ನಮ್ಮ ಕನ್ನಡದ ಸಮುದಾಯ ಕಥನಗಳಲ್ಲೂ ಇವೆ. ಮಾದೇಶ್ವರನು ಬೇವಿನಹಟ್ಟಿ ಕಾಳಿಯ ಜತೆ ಮತ್ತು ಶ್ರವಣದೊರೆಯ ಜತೆ ಮಾಡುವ ಸಂಘರ್ಷಗಳು, ಮಂಟೇಸ್ವಾಮಿಯು ಸಖರಾಯ ಪಟ್ಟಣದ ದೊರೆಯ ಜತೆ ಮಾಡುವ ಕದನಗಳು ಹಾಗೂ ಜುಂಜಪ್ಪನು ತನ್ನ ರೈತಾಪಿ ಕೆಲಸದ ಮಾವಂದಿರ ಜತೆ ಮಾಡುವ ಕದನಗಳು ಇಂತಹವು. ವಿಭಿನ್ನ ಆರ್ಥಿಕ ಸಾಮಾಜಿಕ ಚಟುವಟಿಕೆಗಳಿರುವ ಸಮುದಾಯಗಳು ಪರಸ್ಪರ ಸಂಘರ್ಷ ಮಾಡಿಕೊಳ್ಳದ ಸಮುದಾಯ ಕಥನವೇ ಇಲ್ಲವೆನ್ನಬಹುದು. ಮೊಹರಂ ಪುರಾಣವು, ಅರಬಸ್ಥಾನದಲ್ಲಿ ದಾಯಾದಿಗಳು ರಾಜಕೀಯ ಅಧಿಕಾರಕ್ಕಾಗಿ ಮಾಡಿದ ಘೋರ ಯುದ್ಧದ ಕಥನವಾಗಿದೆ. ಮಂಟೇಸ್ವಾಮಿ ಕಥೆಯಲ್ಲಿ ಸಿದ್ಧಪ್ಪಾಜಿಯು ತನ್ನವರೇ ಆದ ಪಾಂಚಾಳರ ವಿರುದ್ಧ ಮಾಡುವ ಸಂಘರ್ಷದಲ್ಲೂ ಇದನ್ನು ನೋಡಬಹುದು.

ಹೀಗೆ ನೀರು ಗಗನ ಬೆಳಕು ಭೂಮಿ ಬೆಳೆ ಬೀಜ ಪಶು ಪಕ್ಷಿ ಮಾನವ ಸೃಷ್ಟಿಯ ಕಾಸ್ಮಿಕ್ ವಿಶ್ವಸೃಷ್ಟಿಯ ಕಥನವೂ, ಗಂಡು ಹೆಣ್ಣು ಬಡತನ ಜಾತಿ ಆಸ್ತಿ ಪ್ರಭುತ್ವ ಸಂಘರ್ಷಗಳು ಸಾಮಾಜಿಕ ಆರ್ಥಿಕ ರಾಜಕೀಯವಾದ ಲೋಕಸೃಷ್ಟಿಯ ಕಥನವೂ ಪರಸ್ಪರ ಸಂಬಂಧವನ್ನು ಪಡೆದುಕೊಂಡಿವೆ. ವಿಶ್ವಸೃಷ್ಟಿಯ ಕಥನಗಳಲ್ಲಿ ನಾಗತಿಕವಾಗಿ ಅನೇಕ ಸಾಮ್ಯಗಳಿದ್ದರೂ, ಅವು ಮೂಲತಃ ಸ್ಥಳೀಯ ಸಮುದಾಯಗಳ ಜನಾಂಗೀಯ ಭಾಷಿಕ ಜಾತೀಯ ಮತ್ತು ಲಿಂಗತಾರತಮ್ಯದ ಸಂಘರ್ಷಗಳನ್ನೂ ಒಳಗೊಂಡಿವೆ. ಬೈಬಲ್ ಮತ್ತು ಕುರಾನುಗಳಲ್ಲಿರುವ ಸ್ತ್ರೀ ಕುರಿತ ಪೂರ್ವಗ್ರಹಗಳು ಕ್ರೈಸ್ತ ಮತ್ತು ಮುಸ್ಲಿಮರ ಸಮಾಜಗಳಲ್ಲಿ ಬೇರೆ ತರಹ ಮುಂದುವರೆದಿರುವುದನ್ನು ಗಮನಿಸಬೇಕು. ಜುಂಜಪ್ಪನ ಕಥನದಲ್ಲಿ ಅಯೋನಿಜರಾಗಿ ಹುಟ್ಟುವ ಚಿತ್ರಲಿಂಗ ಕಾಟಮಲಿಂಗ ಎಂಬ ಸೋದರರು ಭೂಮಿಗೆ ಬಂದಾಗ, ಬೊಮ್ಮಲಿಂಗಯ್ಯನ ಜತೆ ಮಾತಾಡುವುದಕ್ಕೇ ನಿರಾಕರಿಸುತ್ತಾರೆ. ಇದಕ್ಕೆ ಅವರು ಕೊಡುವ ಕಾರಣ, ಹೆರಿಗೆಯಾದ ಹೆಂಗಸನ್ನು ಮನೆಯಲ್ಲಿ ಇಟ್ಟುಕೊಳ್ಳುವ ಸೂತಕದ ಜನ ನೀವು ಎಂಬುದು. ಗೊಲ್ಲರಲ್ಲಿ ಇಂದಿಗೂ ಮುಟ್ಟಾದ ಹೆಂಗಸರನ್ನು ಅಸ್ಪೃಶ್ಯರಾಗಿ ನಡೆಸಿಕೊಳ್ಳುವ ಆಚರಣೆಗಳಿವೆ. ಮಂಟೇಸ್ವಾಮಿ ಮತ್ತು ಮಾದೇಶ್ವರರು ಮೂಲತಃ ಯತಿ ಪರಂಪರೆಗೆ ಸೇರಿದ ವಿರಕ್ತರಾದ ಕಾರಣ, ಅವರ ಹೆಸರಲ್ಲಿರುವ ಕಥನಗಳಲ್ಲಿ ಸಹಜವಾಗಿ ಸ್ತ್ರೀ ಪೂರ್ವಗ್ರಹಗಳಿವೆ. ಮಂಟೇಸ್ವಾಮಿಯು ಆದಿಶಕ್ತಿಯನ್ನು ನಡೆಸಿಕೊಳ್ಳುವ, ಮಾದೇಶ್ವರನು ಬೇವಿನಹಟ್ಟಿ ಕಾಳಿಯನ್ನು ನಡೆಸಿಕೊಳ್ಳುವ ಹಾಗೂ ಮಂಟೇಸ್ವಾಮಿ ಕಥೆಯಲ್ಲಿ ಬರುವ ಪಾಂಚಾಳರ ಕುಲದೇವತೆಯರಾದ ಮಾರಿಯರನ್ನು ಶಿಕ್ಷಿಸುವ ಭಾಗಗಳನ್ನು ಗಮನಿಸಬೇಕು. ಇಲ್ಲಿ ಬರುವ ಮೂರು ದೇವತೆಗಳು ಶಿವನ ಮಡದಿ ಶಕ್ತಿಯ ರೂಪಗಳೇ ಆಗಿವೆ. ಇದು ಕರ್ನಾಟಕದಲ್ಲಿ ಸಿದ್ಧರು ಮತ್ತು ಶಾಕ್ತರ ನಡುವಣ ತಾತ್ವಿಕ ಸಂಘರ್ಷಗಳ ಚಾರಿತ್ರಿಕ ಅಭಿನಯವೂ ಆಗಿರುವ ಸಾಧ್ಯತೆಯಿದೆ. ಆದರೂ ಈ ಎರಡೂ ಕಥನಗಳಲ್ಲಿ ಮಹಿಳೆಯರು ತಮ್ಮ ಸ್ವಾಭಿಮಾನಕ್ಕಾಗಿ ಹೋರಾಟುವ ಪ್ರಸಂಗಗಳಿವೆ. ವಿಧಿಯಮ್ಮ, ಬೇವಿನಹಟ್ಟಿ ಕಾಳಿ, ಶಂಕಮ್ಮ ಮುಂತಾದ ಮಹಿಳೆಯರು ಇಲ್ಲಿ ಧೀಮಂತರಾಗಿ ಚಿತ್ರಗೊಂಡಿದ್ದಾರೆ. ಈ ಅರ್ಥದಲ್ಲಿ ಈ ಕಥನಗಳು ಏಕಮುಖಿಯಾದ ಆಶಯಗಳನ್ನೇನೂ ಒಳಗೊಂಡಿಲ್ಲ.

ಕರ್ನಾಟಕದಲ್ಲಿ ಸಮುದಾಯ ಕಥನಗಳನ್ನು ಹಾಡುವವರು, ದಲಿತರು, ಗೊಲ್ಲರು, ಕುರುಬರು ಮತ್ತು ಇತರ ಕೆಳಜಾತಿಯವರು. ಕಸುಬಿನ ದೃಷ್ಟಿಯಿಂದ ಹೇಳುವುದಾದರೆ, ಕೃಷಿಕರು, ಕೃಷಿಕಾರ್ಮಿಕರು, ಕುಶಲಕಸುಬುದಾರರು ಮತ್ತು ಪಶುಪಾಲಕರು, ಸಿರಿಯನ್ನು ಬಿಟ್ಟರೆ ಉಳಿದಂತೆ ಹೆಚ್ಚಿನ ಗಾಯಕರು ಪುರುಷರು. ಈ ಹಿನ್ನೆಲೆಯಲ್ಲಿ ಈ ಸಮುದಾಯ ಕಥನಗಳನ್ನು, ಕರ್ನಾಟಕದ ವಿಭಿನ್ನ ಸಮುದಾಯಗಳು, ತಮ್ಮ ಅಸ್ಮಿತೆ ಕಂಡುಕೊಳ್ಳಲು ತಮ್ಮ ಪರಿಸರದ ಜತೆಗೆ, ಸಹವಾಸಿ ಜಾತಿಗಳ ಜತೆಗೆ, ತಮ್ಮ ಸೀಮೆಯ ಪ್ರಭುತ್ವಗಳ ಜತೆಗೆ ನಡೆಸಿದ ಚಾರಿತ್ರಿಕ ಸಂಘರ್ಷ, ಸೋಲು, ಗೆಲುವು, ಹೊಂದಾಣಿಕೆ, ಸಾಮರಸ್ಯಗಳ ಸ್ಮೃತಿಗಳೆನ್ನಬಹುದು. ಜುಂಜಪ್ಪನ ಕಥನದಲ್ಲಿ ಹೆಣ್ಣು ನೋಡಲು ಹೋಗುವವರಿಗೆ ಕಾರಣಿಕದ ಉಪಾಯವನ್ನು ಉಗನಿಬಳ್ಳಿ ಬೆಳೆಯುವುದರ ಮೂಲಕ ಹೇಳಿಕೊಡುವ ಪ್ರಸಂಗವನ್ನು ಪರಿಶೀಲಿಸಬೇಕು. ಇದು ಬ್ರಾಹ್ಮಣರ ಪುರೋಹಿತಿಕೆಯನ್ನು ನಿವಾರಿಸಿಕೊಳ್ಳುವ ಹಾಗೂ ತಮಗೆ ಪರ್ಯಾಯವಾದ ಧಾರ್ಮಿಕ ಆಚರಣೆ ಕಂಡುಕೊಳ್ಳುವ ಉಪಾಯವಾಗಿದೆ. ಕರ್ನಾಟಕದ ಕೆಳಸ್ತರದ ಸಮುದಾಯಗಳ ಬದುಕಿನಲ್ಲಿ ಈಗಲೂ ಬ್ರಾಹ್ಮಣ ಪುರೋಹಿತ ಶಾಹಿಗೆ ಹೆಚ್ಚಿನ ಅವಕಾಶವಿಲ್ಲ. ಜ್ಯೋತಿರ್ಲಿಂಗಯ್ಯ ಎಂಬ ಹೆಸರುಳ್ಳ ಮಂಟೇಸ್ವಾಮಿಯ ಕಥನವು ಜ್ಯೋತಿಯ ವರ್ಣನೆಯಿಂದ ಶುರುವಾಗುವುದನ್ನು ಗಮನಿಸಬೇಕು. ಮಾತೆಂಬುದು ಜ್ಯೋತಿರ್ಲಿಂಗ ಎಂಬುದು ಅಲ್ಲಮನ ಮಾತು. ಮಂಟೇಸ್ವಾಮಿಯು ಅಲ್ಲಮನ ಜತೆ ಸಮೀಕರಣಗೊಂಡವನು. ಜ್ಯೋತಿಯು ಜ್ಞಾನ ಸಂಕೇತ ಮಾತ್ರವಲ್ಲ. ಕತ್ತಲ ಮನೆಯಲ್ಲಿ ಬೆಳಕು ಕೊಡುವ ಸರಳ ದೀಪವೂ ಹೌದು. ಇದಕ್ಕೆ ಇರುವ ಪಾರಲೌಕಿಕ ಆಯಾಮಕ್ಕಿಂತ ಅದರಲ್ಲಿ ತುಡಿಯುವ ಸಮಾನತೆಯ ಗುಣವು ದೊಡ್ಡದಾಗಿ ಕಾಣುತ್ತದೆ. ಈ ಜ್ಯೋತಿಯು ಬಡವರ ಮನೆಯಲ್ಲೂ ಸತ್ತವರ ಮನೆಯಲ್ಲೂ ತಿಪ್ಪೆಯ ಮೇಲೂ ಭೇದ ಮಾಡದೆ ಒಂದೇ ಸಮನಾಗಿ ಉರಿಯುತ್ತದೆ. ಈ ಆಶಯಕ್ಕೂ ಈ ಕಾವ್ಯವನ್ನು ದಲಿತರೇ ಹೆಚ್ಚಾಗಿ ಹಾಡುವುದಕ್ಕೂ ಸಂಬಂಧವಿದ್ದಂತಿದೆ. ದಲಿತರು ಕೆಳಜಾತಿಯವರು ಅನಾಥರು ತಂದೆಯಿಲ್ಲದೆ ಹುಟ್ಟಿದವರು ಮಾನ್ಯಗೊಳ್ಳುವ ವಿನ್ಯಾಸವನ್ನು ಹೆಚ್ಚಿನ ಸಮುದಾಯ ಕಥನಗಳು ಒಳಗೊಂಡಿರುವುದನ್ನು ಇದೇ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಅದರಲ್ಲೂ ಮಂಟೇಸ್ವಾಮಿ ಮತ್ತು ಆದೇಶ್ವರರ ಕಥನಗಳು ಯೋಗಿಗಳೇ ನಾಯಕರಾಗಿರುವ ಕಥನಗಳಾಗಿದ್ದು, ಅವರು ಕೈಲಾಸದಿಂದ ಹೊಸ ಸಮಾಜವನ್ನು ಕಟ್ಟಲು ಇಳಿದು ಬಂದು, ತಮ್ಮ ಕಾರ್ಯ ಮುಗಿಸಿ, ಇನ್ನೊಂದು ಲೋಕಕ್ಕೆ ತೆರಳುವ ಈ ಪ್ರಯಾಣದ ವಿನ್ಯಾಸವೇ ಸಾಂಕೇತಿಕವಾಗಿದೆ. ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಅವತರಿಸುವ ಮತ್ತು ನಿರ್ಗಮಿಸುವ ಈ ಚಲನೆಯು, ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಆಧ್ಯಾತ್ಮಕ ಪ್ರಯಣ ಮಾಡಬಯಸುವ ರೂಪಾಂತರ (ಟ್ರಾನ್ಸ್) ಪ್ರಕ್ರಿಯೆ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮನುಷ್ಯರು ಪ್ರಾಣಿಗಳಾಗುವ ಮತ್ತು ಪ್ರಾಣಿಗಳು ಮನುಷ್ಯರಾಗುವ ರೂಪಾಂತರಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮಾದೇಶ್ವರನ ಕಥೆಯಲ್ಲಿ ಹಲ್ಲಿಗೊದ್ದಗಳು ಹೂವುಗಳಾಗುತ್ತವೆ. ಮಣ್ಣಿನ ಬೊಂಬೆಗಳು ಜೀವಂತ ಮಾನವರಾಗಿ ಬದಲಾಗುತ್ತವೆ. ಯೋಗಿಯೊಬ್ಬ ಶಸ್ತ್ರಧಾರಣೆ ಮಾಡಿ ಪ್ರಭುತ್ವದ ಸಂಕೇತವಾದ ದೊರೆಯ ವಿರುದ್ಧ ಹೋರಾಡುವ ಸೈನಿಕನಾಗುತ್ತಾನೆ. ಮಂಟೇಸ್ವಾಮಿಯು ತನ್ನನ್ನು ಬೆಳಕಿನ ಹುಳದ ರೂಪದಲ್ಲಿ ಪರಿಭಾವಿಸುವುದಂತೂ ಅದ್ಭುತ ಕಲ್ಪನೆಯಾಗಿದೆ. ಸ್ವಯಂಭೂವಾಗಿ ಹುಟ್ಟಿ ಜ್ಞಾನವನ್ನು ತನ್ನೊಳಗೆ ಪಡೆದುಕೊಳ್ಳುವ ಈ ಕ್ರಿಯೆಗೂ ತನ್ನ ದೇಹದಿಂದಲೇ ಬೆಳಕನ್ನು ಪಡೆಯುವ ಹುಳುವಿಗೂ ತನ್ನ ತಾನರಿವಿನ ಮೂಲಕವೇ ಸಿದ್ಧಿಯನ್ನು ಪಡೆಯುವ ಅನುಭಾವಿ ಪಂಥಗಳಿಗೂ ರೂಪಕಾತ್ಮಕ ಸಂಬಂಧವಿದೆ.[2] ಇಲ್ಲಿನ ಯೋಗಿಗಳು ತಮ್ಮ ಒಳಗಿರುವ ಸ್ವಶಕ್ತಿಯನ್ನು ಸಾಕ್ಷಾತ್ಕಾರ ಮಾಡಿಕೊಂಡು, ದೇಹ ಸೂಸುವ ಬೆಳಕಿನಿಂದಲೇ ತನ್ನ ದಾರಿಯನ್ನು ಕಂಡುಕೊಳ್ಳುವ ಬೆಳಕಿನ ಹುಳದ ಹಾಗೆ, ದೊಡ್ಡ ನಾಯಕರಾಗಿ ಬೆಳೆಯುತ್ತಾರೆ.

ಹೀಗೆ ಈ ಕಥನಗಳಲ್ಲಿ ಬರುವ ನಾನಾಬಗೆಯ ರೂಪಾಂತರದ ಪ್ರಸಂಗಗಳಿಗೆ ಸಾಮಾಜಿಕ ರಾಜಕೀಯ ಆಧ್ಯಾತ್ಮಿಕ ಆಯಾಮಗಳಿವೆ, ಮಂಟೇಸ್ವಾಮಿ ಮಾದೇಶ್ವರರು ತಮ್ಮ ಎದುರಾಳಿಗಳನ್ನು ಸೋಲಿಸಲು ಬಳಸುವ ಉಪಾಯಗಾರಿಕೆಗಳು ಯೋಗಿಗಳು ತಮಗೆ ಪ್ರತಿಕೂಲವಾದ ರಾಜಕೀಯ ಧಾರ್ಮಿಕ ಸನ್ನಿವೇಶದಲ್ಲಿ ತಮ್ಮ ಅಸ್ವಿತ್ವ ಮತ್ತು ಚಹರೆಗಾಗಿ ಆಡುವ ಹೋರಾಟಗಳೂ ಆಗಿವೆ. ಸಾಮಾನ್ಯ ಸ್ತರದಿಂದ ಬರುವ ವ್ಯಕ್ತಿಗಳು, ಗುರುಬೋಧೆ ಪಡೆದು ತಪಸ್ಸು ಮಾಡಿ ಸಾಧನೆಯಿಂದ ದೊಡ್ಡ ಯೋಗಿ ಇಲ್ಲವೇ ಸಾಂಸ್ಕೃತಿಕ ನಾಯಕರಾಗಿ ಏರುವುದನ್ನೇ ಆರೂಢತನ ಎನ್ನುತ್ತಾರೆ. ಆರೂಢ ಎಂದರೆ ಏರುವುದು ಎಂದರ್ಥ. ಇದು ಎಲ್ಲ ಕೆಳಜಾತಿ ವರ್ಗಗಳಿಗೆ ಪರೋಕ್ಷವಾಗಿ ಈ ಪಠ್ಯಗಳು ಸೂಚಿಸುತ್ತಿರುವ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಿಹಾರವಾಗಿದೆ. ಇದನ್ನೇ ಬೇರೆ ಅರ್ಥದಲ್ಲಿ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗುವುದನ್ನು ಪ್ರತಿಪಾದಿಸಿದ ಕುವೆಂಪು ಅವರ ‘ಜಲಗಾರ’ ಮತ್ತು ‘ಶೂದ್ರತಪಸ್ವಿ’ ನಾಟಕಗಳ ನಾಯಕರೂ ಆಡುತ್ತಾರೆ ಎನ್ನುವುದು ಸ್ವಾರಸ್ಯಕರವಾಗಿದೆ.

ಸಮುದಾಯ ಕಥನಗಳಲ್ಲಿ ಇರುವ ಲೋಕಸೃಷ್ಟಿಯ ವರ್ಣನೆಗಳು ಅವುಗಳ ಲೋಕದೃಷ್ಟಿಯ ಜತೆಯಿಟ್ಟು ನೋಡುವ ಅಧ್ಯಯನಗಳನ್ನು ತಮ್ಮ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಮತ್ತಷ್ಟು ಸೂಕ್ಷ್ಮವಾಗಿ ಆರಂಭಿಸುವ ಅಗತ್ಯವಿದೆ. ಇದಕ್ಕಾಗಿ ಇಲ್ಲಿನ ಎಲ್ಲ ರೂಪಕಾತ್ಮಕ ವಿವರಗಳನ್ನು ಸಾಮಾಜಿಕ ವಾಸ್ತವದ ಪ್ರತಿಬಿಂಬಗಳೆಂದು ಮಂಡಿಸುವ ಹಠವನ್ನು ಮಾಡಬೇಕಿಲ್ಲ. ಯಾಕೆಂದರೆ ಈ ಕಥನಗಳು ಕೇವಲ ಚಾರಿತ್ರಿಕ ಸ್ಮೃತಿಗಳನ್ನು ಅಥವಾ ಸಮಕಾಲೀನ ಸಮಾಜದ ಬಿಕ್ಕಟ್ಟುಗಳನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ. ಇವು ಇನ್ನೂ ಹುಟ್ಟಲಿರುವ ಆದರ್ಶ ಸಮಾಜದ ಕನಸುಗಳನ್ನು ಒಳಗೊಂಡಿವೆ.

 

[1]ಇಲ್ಲಿಬಳಸಿರುವಪಠ್ಯಗಳವಿವರಹೀಗಿದೆ: ವೀರಣ್ಣದಂಡೆಯವರುಸಂಪಾದಿಸಿದ‘ಜನಪದಹಾಲುಮತಮಹಾಕಾವ್ಯ’, ಬೋರಲಿಂಗಯ್ಯನವರುಸಂಪಾದಿಸಿದ‘ಮಂಟೇಸ್ವಾಮಿಕಾವ್ಯ’, ವೆಂಕಟೇಶಇಂದ್ವಾಡಿಸಂಪಾದಿಸಿದ‘ಧರೆಗೆದೊಡ್ಡವರಕಥೆ’. ಕೇಶವನ್ಪ್ರಸಾದ್ಸಂಪಾದಿಸಿದ‘ಮಲೆಮಾದೇಶ್ವರಕಾವ್ಯ’, ಚಲುವರಾಜುಸಂಪಾದಿಸಿದ‘ಜುಂಜಪ್ಪನಕಾವ್ಯ’, ವೆರಿಯರ್ಎಲ್ವಿನ್ರಚಿಸಿರುವ‘ಪ್ರಪಂಚದಬಾಲ್ಯ’, ಹಾಗೂಕುರಾನ್ಮತ್ತುಬೈಬಲ್ಲು.

[2] ಇದನ್ನುಕುರಿತುಡಿ.ಆರ್. ನಾಗರಾಜಅವರುಒಳನೋಡದವಿಶ್ಲೇಷಣೆಯನ್ನುಮಾಡುತ್ತಾರೆ. ಬೆಳಕಿನಹುಳದಕಥೆ, ಅಲ್ಲಮಪ್ರಭುಮತ್ತುಶೈವಪ್ರತಿಭೆ, ೧೯೯೯.