ಅಲಂಬಾಡಿ ಸೀಮೆಯನ್ನು ಬಿಟ್ಟು ಜುಂಜಪ್ಪನವರು
ಅಡವಿ ಅರಣ್ಯದಲ್ಲಿ ನಡಕೊಂಡು
ಎಲ್ಲಿ ಹೋಗೇನಿಕಲ್ಲು ಅಂದರೆ ಮೆಟ್ಟೂರು
ದಾಟ್ಕೊಂಡು ಭವಾನಿ ದಾಟ್ಕೊಂಡು
ಕೊಯಮತ್ತೂರು ಮಾರ್ಗವಾಗಿ ಹೋಗಿ
ಕೊಯಮತ್ತೂರ್ನಲ್ಲಿ
ಹಿಂದಲ ಕಾಲದ ವಡ್ಡರು
ಅಂದರೆ ಚೋಳರ ಕೆಲಸ
ಬೇಕಾದಷ್ಟು ಜನ ಕರ್ಕೊಂಡು ಬಂದ್ರು
ಆ ಏಳುಮಲೆ ಕೈಲಾಸದಲ್ಲಿ
ಗುಡಾರ ಹುಯ್ಕೊಂಡು ಸೊಪ್ಪುನ ಗುಡ್ಲ ಹಾಕ್ಕೊಂಡು
ನಿಮಗೆ ಅಗತಕ್ಕಂಥ ಊಟಕ್ಕೆ ರೇಷನ್ ಕೊಡ್ತೀನಂತೇಳಿ
ದುಡ್ಡು ಕಾಸು ಕೊಟ್ಕಂಡು
ಆವಾಗಲೀಗ ಜುಂಜಪ್ಪನವರು
ಮುನ್ನೂರು ಮುವತ್ತಂಕಣ ಕಾಡ ತರಿಸ್ತ್ರು
ಹೊನ್ನುತ್ತ ಮಧ್ಯೆ ಬಿಟ್ಕೊಂಡು ಕಾಡು ತರಿಸ್ಬುಟ್ಟು
ಹಾರೆ ಗುದ್ಲಿ ತಗೊಂಡ್ಬಂದು
ಪಾಯ ಪೂಜೆ ಮಾಡುವುದಕ್ಕೆ ನಿಂತ್ಕಂಡ್ರು
ಯಾರು? ಜುಂಜಪ್ಪ
ಆವಾಗ ಮಹದೇವಾ
ಜುಂಜಪ್ಪನಿಗೆ ಒಂದ ಮಾತ ಕೇಳಬೇಕು ಅಂತ್ಹೇಳಿ

ಅಲ್ಲಿ ಪ್ರತ್ಯಕ್ಷವಾಗಿ ನಿಂತವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಏನಪ್ಪಾ ಜುಂಜಯ್ಯಾ
ಯಾವ ರೀತಿಯಾಗಿ ದೇವಸ್ತಾನ ಕಟ್ಸೀಯಪ್ಪ ಅಂದ್ರು
ನೋಡಿ ಗುರುವೇ ಮಹದೇವಾ
ನಿನ್ನ ದೇವಸ್ತಾನ ಅಂದರೆ
ಒಂದಂಕಣ ಕೇಳಿದ್ರಿ
ಏಳಂಕಣ ಗರ್ಭದೇವಸ್ಥಾನ
ಇಪ್ಪತ್ಮೂರಂಕಣ ಚಪ್ಪರ ಮಾಳಿಗೆ
ಮುನ್ನೂರುಮುವತ್ತಂಕಣ ಅದರ ಸುತ್ತಾಲೆ
ನಿನ್ನ ಗರ್ಭ ಗುಡಿಯಲ್ಲಿ
ಹಸುರಂತಾ ಬೆಳಕಲ್ಲಿ
ನನ್ನ ಏಳೂರು ಗೊಲ್ಲರ ಪೋಡು ಕಾಣಬೇಕು
ಎಲ್ಲಿಗೆ ಆಲಂಬಾಡಿ ಸೀಮೆಗೆ
ಆ ರೀತಿಯಾಗಿ ಬಡಗಲಿಗೆ ಬಾಗಿಲು ಇಡ್ತೀನಿ
ನನ್ನ ಗೊಲ್ಲರ ಪೋಡ್ನಲ್ಲಿ ಹಸ್ಸಿವಂತ ದೀಪದ ಬೆಳಕು
ನಿನ್ನ ಗರ್ಭಗುಡಿಯಲ್ಲಿ ಕಾಣಬೇಕು
ಆ ರೀತಿಯಾಗಿ ಮಾಡ್ತೀನಿ ಅಂದ್ರು
ಹಾಗಲ್ಲ ಜುಂಜಯ್ಯ
ನಾನು ಯಾವ ರೀತಿಯಾಗಿ ಪಡುಲಾಗಿ ಕೂತಿದ್ದೇನೋ
ಪಡುವಲ ರಾಜ್ಯ ನೋಡ್ತಾ
ಆ ರೀತಿಯಾಗಿ ನನ್ನ ಗರ್ಭ ದೇವಸ್ಥಾನ ಗುಡಿಬಾಗಿಲೆಲ್ಲ
ಪಡು ಬಾಗಲಾಗಬೇಕು
ನಿನಗೆ ಬೇಕಾದರೆ ಒಂದು ಬಡಗಲು ಬಾಗ್ಲಿಟ್ಟುಬುಟ್ಟು
ಬಸವನ ಗೆಯ್ಸುಬುಡು
ತೆಂಕ ಬಾಗಿಲಿಟ್ಟು ಏಳುನೆಲೆ ಗೋಪುರ ಕಟ್ಸು
ನನ್ನ ಗರ್ಭಾಂಕಣದ ಬಾಗೆಲೆಲ್ಲ

ಪಡು ಬಾಗಿಲ ಯಿಡು ಅಂತವರೇ ಮಹದೇವಾs  || ನೋಡಿ ನಮ್ಮ ಶಿವನಾ ||

ಗುರುವೇ ಗುರುಪಾದವೇ ನನ್ನಪ್ಪಾಜಿ ಮಾದೇವ
ಮೊದಲೇ ಹೇಳಲಿಲ್ಲವ ಗುರುವೇ
ತೋರುವಾಗ ಬೆರಳುತೋರಿ
ನುಂಗುವಾಗ ಹಸ್ತನುಂಗುತಕ್ಕಂತಾವ್ರು
ನಿಮ್ಮಂಥ ದುಸಮಾನರು ಅಂತೇಳುದ್ರಿ
ಈಗ ಎಂಥಾ ಏಟು ಹೇರಾಕ್ಬುಟ್ರಿ ಅಂತೇಳುದ್ರು
ಹೌದು ಜುಂಜಪ್ಪ
ನಾನು ಮೈಸೂರು ಮೇಲ್ನಾಡನ್ನು ನೋಡಬೇಕು
ಅಂತೇಳುದ್ರು ಆವಾಗ
ಗುರುವೇ ಆಗಲೀ
ನಿಮ್ಮ ಮಾತಿನಂತೆ ನನಗೇನೂ ತೊಂದ್ರೆ ಕೊಡಬೇಡಪ್ಪ
ಇದೇ ರೀತಿ ದೇವಸ್ಥಾನ ಕಟ್ತೀನಿ ಅಂತ್ಹೇಳಿ
ಆವಾಗ ಪಾಯ ಪೂಜೆ ಮಾಡ್ಕಂಡು
ಮುನ್ನೂರು ಮೂವತ್ತಂಕಣ ಹೊರಸುತ್ತಾಲೆ ಕಟ್ಸಿ
ತೆಂಕಲಾಗಿ ಗೋಪುರ ಬಾಗಿಲಿಟ್ಟು ಏಳುನೆಲೆ ಗೋಪುರ ಕಟ್ಟಿಸುದ್ರು
ಬಡಗ ಬಾಗಿಲಿಟ್ಟು ಬಸವಣ್ಣನ ಗೆಯಿಸ್ಬುಟ್ಟು
ಬಸವಣ್ಣನ ಮೂಡಲಾಗಿ ತಿರುಗಿ ನಿಲ್ಲಿಸ್ಬುಟ್ಟು
ಆವಾಗ ಮಾದಪ್ಪನಿಗೆ
ಬಂದಂಥ ಪರುಸೆಗಳು ಸ್ನಾನಮಾಡಲಿ
ಬೇಡಗಪಂಣದವರು ಅಂತ್ಹೇಳಿ
ಕೊಳವನ್ನ ತೆಗೆಸ್ತ್ರು ಬಡಗಲಾಗಿ
ಮಜ್ಜನ್ಕೆ ಬೇಕು ಅಂತ್ಹೇಳಿ
ನೈರುತ್ಯ ಮೂಲೆವೊಳಗೆ
ಒಂದು ಬಾವಿ ತೆಗೆಸ್ದ್ರು ಮಜ್ಜನ್ಕೆ
ಮಹದೇವಾ
ನಿನ್ನ ಮಾತಿನ ಪ್ರಕಾರವಾಗಿ ದೇವಸ್ಥಾನವಾಯ್ತು
ಪೂಜೆ ಮಾಡುವುದಕ್ಕೆ ಪೂಜಾರಿ ಕರ್ಕೊಂಡು ಬರ್ತೀನಿ
ದೇವಸ್ಥಾನಕ್ಕೆ ಪುನೋರೊಜನೆ ಮಾಡಿಸ್ತೀನಿ
ಈಗಿನ ಕಾಲದ ಹೊಸ ಮತು ಹೇಳೂದಿಲ್ಲ
ಪುನೋರೋಜನೆ ಮಾಡ್ಸಿ
ಸಂರಕ್ಷಣೆ ಮಾಡ್ತೀನಿ ಕಣಪ್ಪ ಅಂತ್ಹೇಳಿ
ಮಾದಪ್ಪನಿಗೆ ಕೈ ಮುಗಿದ್ಬುಟ್ಟು ಜುಂಜಪ್ಪ

ಅಯ್ಯಾ ಆಲಂಬಾಡಿಗೆ ದಯಮಾಡವರೇ ಜುಂಜಯ್ಯಾs || ನೋಡಿ ನಮ್ಮ ಶಿವನಾ ||

ಆವಾಗಲೀಗ ಆಲಂಬಾಡಿ ಹದಿನಾರು ಸೀಮೆಗೆ ಹೋದ್ರು
ಆವಾಗ ಮಲ್ಲಾಜಮ್ಮನವರು
ಕೈಕಾಲಿಗೆ ನೀರು ಕೊಟ್ಟಿ
ಪತಿ ಪಾದಕ್ಕೆ ನಮಸ್ಕಾರ ಮಾಡುದ್ರು
ಜಗಲಿ ಮ್ಯಾಲೆ ಕೂತ್ಕಂಡ್ರು
ಯಜಮಾನರೇ
ಮಾದೇಶ್ವರನಿಗೆ ಏನು ಯಾಗ ಮಾಡಿದಿರಿ ಅಂದರು
ಮಡದಿ ಮಲ್ಲಾಜಿ
ಕೊಯಮತ್ತೂರ್ನಿಂದ ವಡ್ಡರ ಕರ್ಕೊಂಡ್ಬಂದು
ದೇವಸ್ಥಾನ ಪಾಯ ಹಾಕಿಸ್ತಾಯಿದ್ದಿ
ಮಾದೇಶ್ವರ ಈ ರೀತಿಯಾಗಿ ಪ್ರತ್ಯಕ್ಷವಾಗಿ ನನಗೆ ಹೇಳಿದ್ರು
ಅವರು ಹೇಳಿದ ಮಾತ್ನಂತೆ
ಪಡೂ ಬಾಗಿಲ ಯಿಟ್ಟಿದ್ದೀನಿ
ಹನ್ನೆರಡಂಕಣ ದೇವಸ್ಥಾನವಾಗದೆ
ಬಡಗು ಬಾಗಿಲಿಟ್ಟು ಬಸವನ ಗೆಯ್ಸಿದ್ದೀನಿ
ತೆಂಕ ಬಾಗ್ಲಿಟ್ಟು ಏಳುನೆಲೆ ಗೋಪುರ ಗೆಯ್ಸಿದ್ದೀನಿ
ಸ್ನಾನ ಮಾಡುವುದಕ್ಕೆ ಕೊಳ ತೆಗೆಸಿದ್ದೀನಿ
ಮಜ್ಜನಕ್ಕೆ ಸ್ವಾಮಿಗೆ ಬಾವಿ ತೆಗೆಸಿದ್ದೀನಿ ಮಡದಿ
ಈವಾಗ ಒಬ್ಬ ವೋಷ್ಟುಮಯ್ಯನ ಕರ್ಕೊಂಡು
ಪೂಜೆ ಮಾಡುವುದಕ್ಕೆ ಹೋಗಬೇಕು
ದೇವಸ್ಥಾನಕ್ಕೆ ಸಂರಕ್ಷಣೆ ಮಾಡಬೇಕು
ಅಲ್ಲಿರುವಂಥ ಬ್ಯಾಡಗಂಪಣದವರ ಸೇರ್ಸಿ
ಪರ ಪಾಡ್ಯವನ್ನ ಮಾಡಿ
ಸಂರಕ್ಷಣೆ ಮಾಡಬೇಕು ಮಲ್ಲಾಜಿ ಅಂದ್ರು
ಆಗಲಿ ಹೋಗ್ಬನ್ನಿ ಯಜಮಾನ್ರೆ ಅಂದಳು
ಆವಾಗ ಮಡದಿಗೆ
ಬುದ್ಧಿವಾದವನ್ನ ಹೇಳ್ಬುಟ್ಟು ಜುಂಜಪ್ಪ
ಏಳು ಜನ ಜೀತಗಾರರ ಕರುದ್ರು
ಚೆನ್ನಾಗಿರುವ ನಾಲ್ಕು ಎತ್ಗೊಳ ಎಳ್ಕೊಂಡ್ಬಂದ್ರು
ಆವಾಗ ದಾರಿಯಿಲ್ಲ
ಗಾಡಿಯಿಲ್ಲ ಬಂಡಿಯಿಲ್ಲ
ಆಗ ಎತ್ತಿನ ಹೇರಿನ ಮೇಲೆ
ಅಕ್ಕಿ ಬೇಳೆ ಅಸಿಟ್ಟು
ಕಾರಪುಡಿ ಉಪ್ಪು ಹುಳಿ ಮೊದಲುಗೊಂಡಾಗಿ
ಏರಾಕ್ಕೊಂಡು ಜುಂಜಪ್ಪನವರು
ಒಬ್ಬ ಮೋಟುಮಯ್ಯನ ಕರ್ಕೊಂಡ್ರು
ಅಪ್ಪಾ ಮೋಟುಮಯ್ಯ
ಏಳುಮಲೆಗೆ ಬಾ ನೀನು
ನಿನಗೆ ಹದಿನೈದು ರೂಪಾಯಿ ಸಂಬಳ ಕೊಡ್ತೀನಿ
ಕೊಡುಗೆ ಬಿಡ್ತೀನಿ ಅಂತ್ಹೇಳಿ

ಅವರು ಏಳುಮಲೆಗೆ ಬರುತಾವರೇ ಜುಂಜಯ್ಯಾ || ನೋಡಿ ನಮ್ಮ ಶಿವನಾ ||

ಏಳುಮಲೆ ಕೈಲಾಸಕ್ಕೆ ಬಂದು ಜುಂಜಪ್ಪನವರು
ಎತ್ತಿನ ಹೇರಿನ ಮೇಲಿದ್ದಂಥ ಸಾಮಗ್ರಿಗಳ್ನೆಲ್ಲ ಇಳುಕ್ಬುಟ್ರು
ಅಲ್ಲಿರುವಂತ ಬ್ಯಾಡಗಂಪಣದವರನ್ನೆಲ್ಲ ಕರ್ದು
ಆವಾಗಲೀಗ ಒಬ್ಬ ವೋಟುಮಯ್ಯ ಕರ್ಕೊಂಡು ಬಂದಿದ್ರು
ಪೂಜೆ ಮಾಡುವುದಕ್ಕೆ
ಅಷ್ಟು ಹೊತ್ತಿಗೆ ಮಾದಪ್ಪ
ಅಪ್ಪಾ ಜುಂಜಪ್ಪಾ
ನಿನ್ನ ವೋಟುಮಯ್ಯ ಪೂಜೆ ಮಾಡುವುದಿರಲಿ
ಮೊದಲಾಗಿ ನನ್ನ ಗುರುಮಠದಲ್ಲಿರುವಂಥ
ಶಾಂತಮಲ್ಲಿಕಾರ್ಜುನಸ್ವಾಮಿ
ಆ ಗುರುಗಳ ಕರಿಯಪ್ಪ
ಮೊದಲು ಗುರುಗಳು ಬಂದು
ಆಶೀರ್ವಾದ ಮಾಡಿ ನನಗೆ ಮಜ್ಜನ ಮಾಡಬೇಕು
ಅನಂತರವಾಗಿ ನೀನು ಪೂಜಾರಿ ಮಾಡಬೇಕು
ಅಲ್ಲೀವರುಗೂವೆ ನಿನ್ನ ಪೂಜಾರಿ ಮಾಡುವ ಹಾಗಿಲ್ಲ
ನಮ್ಮ ಗುರುಗಳ ಕರಿ ಅಂದ್ರು
ಆವಾಗ ಜುಂಜಪ್ಪ ವಾದ್ಯ ತಮ್ಮಟೆ ತಕ್ಕೊಂಡು
ಆವಾಗ ಛತ್ರಿ ಚಾಮರ ಇಡಕೊಂಡು

ಅವರು ಸಾಲೂರು ಮಠಕೆ ಬರುತಾವರೇ ಜುಂಜಯ್ಯಾ || ನೋಡಿ ನಮ್ಮ ಶಿವನಾ ||

ಸಾಲೂರು ಮಠದಲ್ಲಿ ಬಂದು ಗುರುಗಳಿಗೆ
ಈಭೂತಿ ಈಳ್ಯ ಮಡಗಿ
ಗುರುಗಳ ಪಾದಕ್ಕೆ ದೀರ್ಘದಂಡವಾಗಿ ನಮಸ್ಕಾರ ಮಾಡುದ್ರು
ಜುಂಜಪ್ಪನವರೇ
ಇದೇ ರೀತಿಯಾಗಿ
ಸೂರ್ಯ ಚಂದ್ರಾದಿಗಳು ಇರುವವರೆಗೂವೆ
ಸಾಲೂರು ಮಠದ ಗುರುಗಳು ಬಂದು
ಆ ಮಾದೇಶ್ವರನ ಲಿಂಗಕ್ಕೆ ಮಜ್ಜನ ಮಾಡಬೇಕು
ಅನಂತರವಾಗಿ ನಿಮ್ಮ ಬ್ಯಾಡಗಂಪಣದವರೆಲ್ಲ
ಪೂಜಾರಿಗಳು ಪೂಜೆ ಮಾಡಬೇಕು
ಇದನ್ನು ಅನುಕಾಲ ತಪ್ಪಿಸಬಾರದು
ಅಂತ್ಹೇಳಿ ಆವಾಗ ಗುರುಗಳು
ಆವಾಗಲೀಗ ಛತ್ರಿ ಚಾಮರ ಈಸ್ಕೊಂಡು
ಕಾಲೂ ನಡಿಗೆಯೊಳಗೆ

ಅವರು ಮಹದೇವ್ನ ಮಠಕೆ ಬರುತವರೇ ಗುರುಗಳುs || ನೋಡಿ ನಮ್ಮ ಶಿವನಾ ||

ಆವಾಗಲೀಗ ಗುರುಮಠಕೆ ಬಂದು
ಮಾದೇಶ್ವರನ ದೇವಸ್ಥಾನಕ್ಕೆ ಬಂದು ಗುರುಗಳೂ
ಆವಾಗ ನಿಂತ್ಕಂಡು
ಜುಂಜಪ್ಪ ತಂದಿರುವಂಥ ಸಾಮಗ್ರಿಯನ್ನು
ತುಂಬಾ ಅಭಿಷೇಕ ಮಾಡ್ತಾಯಿದ್ದಾರೆ
ಹಾಲು ಮಜ್ಜನ ಎಳ್ನೀರು ಮಜ್ಜನ
ಆವಾಗಲೀಗ ತುಪ್ಪದಲ್ಲಿ ಮಜ್ಜನ
ಕುಂಭಾಭೀಷೇಕ ಅಂದರೆ
ಪಂಚಾಮೃತ ಎಲ್ಲಾ ಅಭಿಷೇಕವನ್ನು ಮಾಡಿ
ಸ್ವಾಮಿ ಲಿಂಗುಕ್ಕೆ
ಕಟ್ಟ ಕಡೆಯಲ್ಲಿ
ಎಣ್ಣೆಮಜ್ಜನ ಮಾಡಬೇಕು
ಆ ಬ್ಯಾಡಗಂಪಣದ ಮನೆವೊಳುಗೆ
ಯಾವ ಎಣ್ಣೇನೂ ಇಲ್ಲ ಅಲ್ಲಿ
ಮರಾಳೆ ಎಣ್ಣೆ ಉಚ್ಚೆಳ್ಳೆಣ್ಣೆ
ಮರಾಳೆ ಎಣ್ಣೇ ಅಂದರೆ
ಮರಂಗಲೆ ಎಣ್ಣೆ ಉಚ್ಚೆಳ್ಳೆಣ್ಣೆ
ಇಂಥಾ ಎಣ್ಣೆಗಳಿದ್ದಾವೆ
ಆ ಎಣ್ಣೀನೆ ಒತ್ತಿ ಮಾಡುದ್ರು
ಮಾದಪ್ಪನಿಗೆ ಇಡೀನಿಲ್ಲ ಅದು
ಆದರೂ ಕೂಡ ಮಜ್ಜನ ಮಾಡ್ಬುಟ್ಟು
ಗುರುಗಳು ಹೋಗ್ತಾಯಿದ್ದಾರೆ
ಇವಾಗ ಪೂಜಾರಿ ನೇಮಿಸ್ಬುಟ್ಟು
ಬ್ಯಾಡಗಂಪಣದವರ್ನೆಲ್ಲ ಕರೆದು
ಪರವನ್ನ ಮಾಡಿ
ಎಲ್ಲರಿಗೂ ಅನ್ನದಾನ ದಾಸೋಹವನ್ನು ಮಾಡ್ಬುಟ್ಟು
ಜುಂಜಪ್ಪನವರು
ಹೋಗಿ ಬತ್ತೀನಿ ಗುರುವೆ ಅಂದ್ರು
ಜುಂಜಪ್ಪ ನೀವು ಹೋಗಿಬರಬೇಕಾದ್ರೆ
ನೋಡಪ್ಪ ಹೇಳ್ತಾನಿದ್ದೀನಿ
ಅಲಂಬಾಡಿ ಹಾಲು ಸಾಗರವಾಗಲಿ
ಆಲಂಬಾಡಿಯಿಂದ ಹಾಲರಬಿ ಸೇವೆ ಆಗಬೇಕು
ವರ್ಷಕ್ಕೊಂದ್ಸಾರಿ ದೀಪಾವಳಿಗೆ
ದೀಪಾವಳಿ ಒಳಗೆ
ಜುಂಜಪ್ಪನಿಗೆ ಇನ್ನೂ ವರ ಇದೆ
ಆದರೂ ಹೋಗಿದ್ದು ಬರಲಿ ಅಂತ್ಹೇಳಿ

ಅವರು ಆಶೀರ್ವಾದ ಮಾಡವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಆವಾಗ ಗುರುಗಳು ಸಾಲೂರು ಮಠಕೆ ಹೊರಟೋದ್ರು
ಜುಂಜಪ್ಪ ಆಲಂಬಾಡಿ ಸೀಮೆಗೋದ
ಮಲ್ಲಾಜಮ್ಮ ಆವಾಗಲೀಗ ಕೈಕಾಲಿಗೆ ನೀರುಕೊಟ್ಟು
ಯಜಮಾನರ ಕೇಳ್ತಳೆ
ಯಜಮಾನರೇ ಮಾದೇಶ್ವರನಿಗೆ ಪೂಜೆ ಆಯ್ತ
ಸಂರಕ್ಷಣೆ ಆಯ್ತ ಅಂದರು
ಆಯ್ತು ಮಡದಿ
ಸಂತೋಷವಾಗಿ ಬ್ಯಾಡಗಂಪಣದವರ್ನೆಲ್ಲ ಕಟ್ಕೊಂಡು
ಪರ ಮಾಡಿ ಊಟ ಬಡಿಸ್ಬುಟ್ಟು
ಮಾದೇಶ್ವರನಿಗೆ ಪೂಜೆಗೆ ನೇಮಿಸಿದ್ದೀನಿ ಪೂಜಾರಿಯಾ ಅಂದ್ರು
ಆದರೆ ಯಜಮಾನರೇ
ಆ ಮಾದಪ್ಪನಿಗೆ ಇಷ್ಟೆಲ್ಲ ಖರ್ಚು ಮಾಡ್ದೋ ನಾವು
ಅ ಮಾದೇಶ್ವರನ ಒಂದು ಮಾತು ಕೇಳೂಕ್ಕಿಲ್ಲವಾ ನೀವು ಅಂದರು
ಏನು ಮಲ್ಲಾಜಿ
ಅ ಮಾದೇಶ್ವರ ಸ್ವಾಮಿ ಬಂದು ನಮ್ಮ ಮನೇವೊಳುಗೆ
ಆಲಂಬಾಡಿವೊಳಗೆ ಭಿನ್ನ ಮಾಡ್ಕೊಂಡೋದ್ರೆ
ನಮಗೆ ಸಂತೋಷಾ ಅಂದ್ರು
ಮಲ್ಲಾಜಿ ಇದೊಂದು ಮಾತ ಮರೆತುಬಿಟ್ಟಿದ್ದಿ
ನಾಳೆ ಸೋಮವಾರ
ಮಾದಪ್ನ ಬಿನ್ನಕ್ಕೆ ಕರ್ಕೊಂಡ್ಬತೀನಿ
ಏನು ಅಡುಗೆ ಮಾಡಬೇಕು ಏನು ಊಟ ಮಾಡ್ಬೇಕು
ಅವರಿಗೇನು ಪೂಜೆ ನೈವೇದ್ಯ
ನಾವು ಮಾಡೋಣ ಮಲ್ಲಾಜಿ ಅಂತ್ಹೇಳಿ
ಮಡದಿ ಮಾತ ಕೇಳ್ಕೊಂಡು

ಅವರು ಏಳು ಮಲೆಗೆ ಬರುತಾವರೇ ಜುಂಜಯ್ಯಾs || ನೋಡಿ ನಮ್ಮ ಶಿವನಾ ||

ಆಲಂಬಾಡಿ ಮಾದೇವಾ
ಗುರುವೇ ಅರಗಣ್ಣ ಬಿಟ್ಟು ನೋಡಯ್ಯ
ಹಾಲರಬಿ ಮ್ಯಾಲ್ಹೂವಿನ ದಂಡೆ
ವಾಲಾಡಿ ಬಂದೋ

ಏಳುಮಲೆ ಕೈಲಾಸಕ್ಕೆ ಬಂದರು ಜುಂಜಪ್ಪ
ಬೆಳಗಿನ ಜಾವ ಒಂಭತ್ತು ಗಂಟೆವೊಳಗೆ
ಒಂದು ದೀರ್ಘದಂಡವಾಗಿ ನಮಸ್ಕಾರವನ್ನ ಮಾಡಿ
ಮಹದೇವಾ ಮಾಯ್ಕಾರ ಗಂಡ
ನನಗೆ ಒಂದು ವರ ಕೊಡಪ್ಪ ಮಾತ್ನಾಡಪ್ಪ ಅಂದ್ರು
ಮಾದೇಶ್ವರ ಸ್ವಾಮಿ ಪ್ರತ್ಯಕ್ಷವಾಗಿ
ಏನಪ್ಪ ಜುಂಜಪ್ಪಯ್ಯಾ
ನಿನಗೆ ಹಾಲುಸಾಗರ ಕೊಟ್ಟಿದ್ದೀನಿ ಅಂದ್ರು
ಹೌದು ಗುರುವೇ ಕೊಟ್ಟಿದ್ದೀರಿ
ನನ್ನ ಮನೆಗೆ ಬಂದು ನೀವು ಭಿನ್ನಮಾಡ್ಕಂಡು ಬರಬೇಕು
ಗುರುದೇವಾ ನಿನಗೆ ಒಕ್ಕಲಾಗ್ತೀನಿ ಅಂದ್ರು
ಒಕ್ಕಲಾಗಲೇ ಬೇಕು
ನಿನ್ನ ಮನೆಗೆ ಭಿನ್ನಕ್ಕೆ ಬತ್ತೀನಿ
ನಾನು ಕೇಳಿದಂತ ಅಡುಗೆ ಮಾಡಿಯಪ್ಪ ಅಂದ್ರು
ಅಯ್ಯಯ್ಯೋ ಭಗವಂತ ಮಾದಪ್ಪ
ನೀನು ಕೊಟ್ಟಂಥ ಭಾಗ್ಯ ತುಂಬದೆ
ಏನಡಿಗೆ ಮಾಡಬೇಕಪ್ಪ ಅಂದ್ರು
ನಾನು ಕೇಳಿದಡಿಗೆಯ ಮಾಡ್ತೀನಂತ ಭಾಷೆ ಕೊಡು ಅಂದ್ರು
ಏನಪ್ಪಾ ಮಾದೇವ
ನನ್ನಲ್ಲಿ ಮಾತು ಮಾತಿಗೂ ಭಾಷೆ ಕೇಳ್ತಾಯಿದ್ದೀರಲ್ಲ ಅಂದ್ರು
ಹೌದು ಜುಂಜಪ್ಪ
ನರ ಮನುಷ್ಯರು ನೀವು
ಆದರೆ ಮುಂದೇನಾಗುವುದೋ ಗೊತ್ತಿಲ್ಲ
ಅದಕ್ಕೋಸ್ಕರ ಭಾಷೆ ಕೊಡಪ್ಪ ಅಂತ್ಹೇಳಿ
ಭಾಷೆ ಕೊಟ್ಟ
ನೋಡಪ್ಪ ಜುಂಜಯ್ಯ
ನಿಮ್ಮ ಮನೆಯಲ್ಲಿ ನಾನು ಊಟ ಮಾಡಬೇಕಾದರೆ
ಹಸಿ ಅವರೆ ಎಸುರಾಗಬೇಕು ಹಸಿ ರಾಗಿ ಮದ್ದೆಯಾಗಬೇಕು
ಹಸಿ ಮಣ್ಣು ಬಟ್ಟಲಾಗಬೇಕು
ಕುಂಬಾರಗೇರಿ ವೊಳಗೋಗಿ
ಬೆಂಕಿ ಮೇಲೆ ಮಡಗಿ ಬೇಯೊಸಬಾರ್ದು
ಅಂತಾ ಹಸಿ ಮಣ್ಣ ಬಟ್ಲಾಗಬೇಕು
ಆ ಮಣ್ಣ ಬಟ್ಲ ಅಡೀವೊಳಗೆ
ಏಳು ತಲೆ ಕಾಳಿಂಗ ಸರ್ಪನ ತಂದು
ತೆಕ್ಕೆ ಮಾಡಿಸಿ ಮಡಗಬೇಕು
ಆ ಮಣ್ಣ ಬಟ್ಲಿಗೆ ಹಸೀ ಅವರೆ ಹೆಸ್ರು ಹಸೀ ರಾಗಿ ಮುದ್ದೆ ಇಕ್ಕಿ
ನನಗೆ ಶಿವಪೂಜೆಗೆ
ಹೂವನ್ನ ತಂದು ಮಡಗಿ ಭಸ್ಮಮಡುಗ್ಬುಟ್ಟು
ನೀವು ಮಲಗುವಂತ ಜಾಗ್ದಲ್ಲಿ ಮಲೀಕೊಳ್ಳಿ
ನಾನು ಬಂದು ಭಿನ್ನ ಮಾಡ್ಕೊಂಡು ಬತ್ತೀನಿ ಅಂದ್ರು
ಯಾವ ತೈಮಿಗೆ ಬರ್ತೀಯಾ ಗುರುವೇ
ನಮಗೆ ಗೊತ್ತಾಗಬೇಕಲ್ಲ
ನಿಮಗೆ ಗೊತ್ತಾಗಬೇಕಾದರೆ
ಮನೆ ಕಡೆ ಬಾಗಲಲ್ಲಿ
ಬೆಳ್ಳಿ ಗಂಟೆ ಕಟ್ಬುಡಿ
ಒಳಗಡೆ ನೀವು ಎಡೆ ಪಡಸುವ ಜಾಗ್ದಲ್ಲಿ
ಒಂದು ಚಿನ್ನದ ಗಂಟೆ ಕಟ್ಟಿ
ನಾನು ಬಂದು ಭಿನ್ನ ಮಾಡುವಾಗ
ಚಿನ್ನದ ಗಂಟೆ ನಾದ ಮಾಡ್ತೀನಿ
ಯಾರೂ ಎದ್ದು ಬರಬೇಡಿ
ಕಂಚಿನ ಗಂಟೇಲಿ ನಾದ ಮಾಡ್ಬುಟ್ಟು ಹೋಗುವಾಗ
ನಿನ್ನ ಮಕ್ಳು ಮರಿಗೆಲ್ಲ ಇಕ್ಕಿ ಉಂಡ್ಬುಟ್ಟು ಊಟಮಾಡಪ್ಪ ಅಂದ್ರು
ಆವಾಗ ಅಯ್ಯೋ ಗುರುವೇ
ಊರ್ನಲ್ಲಿ ಇಲ್ಲದೇಯಿದ್ದಂತಹ ಮನ್ಸರ
ಹೆಸರಿಡಿದು ಕರೆದಪ್ಪಂದವಾಯ್ತಲ್ಲ ಗುರುವೇ
ಹಸೀ ಅವರೆ ಹೊಸ ರಾಗಿ ಅಂದರೆ
ರಾಗಿ ಬಿತ್ತನೆ ಮಾಡಿ ಇನ್ನೂ ಎರಡು ತಿಂಗಳಾಯ್ತು
ರಾಗಿ ತೆನೆ ಬಲೀಲಿಲ್ಲ
ಹೊಲ್ದಲ್ಲಿ ಅವರೇಕಾಯಿ ಇಲ್ವಲ್ಲ ಗುರುವೇ ಅಂದ್ರು
ಹಾಗೆನ್ನಬೇಡ ಜುಂಜಪ್ಪ
ನಿನ್ನ ಬಾಣಗೆರೆ ಕೆಬ್ಬೆ ಹೊಲ್ದಲ್ಲಿ ಹೋಗಿ
ಕಡ್ಡೀ ಕರ್ಪೂರ ಹಸ್ಬುಟ್ಟು ಸ್ನಾನ ಮಡಿಯನ್ನ ಮಾಡಿ
ಕೈಮುಗಿದು ಹಿಂದು ಮುಂದಾಗಿ ತಿರುಗು
ಐದು ರಾಗಿ ತೆನೆ ಕಾಣ್ತವೆ
ಒಂದು ಅವರೆ ಗೊನೆ ಕಾಣ್ತದೆ
ಅದನ್ನು ಕುಯ್ಕೊಂಡು ಬಂದು ಮಲ್ಲಾಜಮ್ಮನಿಗೆ ಕೊಡು
ಕುಂಬಾರಗೇರಿಯಲ್ಲೋಗಿ

ಮಣ್ಣ ಬಟ್ಟಲ ತಕ್ಕೊಂಡು ಬಂದು ಮಡಗು ಅಂತವರೇ ಮಹದೇವಾs || ನೋಡಿ ನಮ್ಮ ಶಿವನಾ ||