ಆಲಂಬಾಡಿಯಲ್ಲಿ ತಂದು ಕೊಡ್ಬುಟ್ರು
ಏಳ್ಜೆನ ಜೀತಗಾರರೂ ತಮ ತಮ್ಮ ಕೆಲಸ ಮಾಡ್ತಾಯಿದ್ದಾರೆ
ಏಳು ಗಂಟೆಯಾಯ್ತು ರಾತ್ರೆ
ಮಲ್ಲಾಜಮ್ಮನವರು ಜೀತಗಾರರ ಕರ್ಕೊಂಡು
ಒಂದು ಕಡೆಯಿಂದ ಕರುವನ್ನು ಬಿಟ್ಟು ಹಾಲಕರ್ಕೊಂಡ್ ಬತ್ತಾವ್ರೆ
ಎಲ್ಲ ಬಸವಣ್ಣನಲ್ಲೂ ಹಾಲು ಕರೆದ್ರು
ಎಲ್ಲ ಹಸ್ತುಗಳಲ್ಲೂ ಹಾಲು ಕರ್ದುಬಿಟ್ಟು
ಈ ಜಲಗೊಂಬಿನ ಬಸವಣ್ಣನಿಗೆ ಬಂದು ಕರುಬುಟ್ಟು ಹಾಲಕರೆದ್ರು
ಆವಾಗ ಮಲ್ಲಾಜಮ್ಮ
ಹಾಲ ಕರೀಕೆ ಕೂತ್ಕಂಡಾಗ

ಅವನು ರಕುತಾ ಕರೆದವನೇ ಬಸವಣ್ಣಾ || ನೋಡಿ ನಮ್ಮ ಶಿವನಾ ||

ನಾಲ್ಕು ಎದೆತೊಟ್ನಲ್ಲೂವೆ
ರಕ್ತ ಬಂದ್ಬುಡ್ತು
ಮಲ್ಲಾಜಮ್ಮ ನಿಲ್ಲಿಸ್ಬುಟ್ರು
ಜುಂಜಪ್ಪನವರ ಪಾದಕ್ಕೆ ನಮಸ್ಕಾರವನ್ನು ಮಾಡಿ

ಅವರು ಪತಿಗೆ ದೂರ ಹೇಳವರೇ ಮಲ್ಲಾಜಮ್ಮಾ || ನೋಡಿ ನಮ್ಮ ಶಿವನಾ ||

ಯಜಮಾನ್ರೆ ಯಜಮಾನರೆ
ಇನ್ನೀಗ ನಮ್ಮ ಒಗತಾನ ಕೆಟ್ಟೋಯ್ತು ಅಂದ್ರು
ಏನಾಯ್ತು ಮಲ್ಲಾಜಿ ಅಂದ್ರು
ಏನುಗುವುದು ಯಜಮಾನ್ರೆ
ನಮ್ಮ ಹಿಂಡಿಗೆ ಮೇಲಾಗಿರ್ತಕ್ಕಂಥ ಜಲಗೊಂಬಿನ ಬಸವಣ್ಣ
ರಕುತಾ ಕರೆದ್ಬುಟ್ಟಿದಾನೆ
ಯಾವ ಕಾಡಿಗೋಗಿದ್ರೊ
ಯಾವ ಯಂತ್ರಗಾರ ಮಂತ್ರಗಾರ
ಅಡ್ಡಸ್ವಾಲುಗ ಬಿಡ್ಡ ಸ್ವಾಲುಗ ಏನುಮಾಡಿದನೋ
ನೋಡಿ ಬನ್ನಿ ಯಜಮಾನ್ರೆ ಅಂದ್ರು
ಆವಾಗ ಜುಂಜಪ್ಪನವರು
ಮಡದಿಯಾದ ಮಲ್ಲಾಜಮ್ಮನವರಿಗೆ ಸಮಾಧಾನ ಮಾಡಿದರು
ಏಳುಜನ ಜೀತಗಾರರ ಕರ್ದು
ಏನಪ್ಪಾ ಆಳುಗಳೇ
ಯಾವ ಕಾಡಿಗೋಗಿದ್ರಿ
ಯಾರು ಸಿಕ್ಕಿದ್ರು ನಿಮಗೆ ಅಂತ ಕೇಳುದ್ರು
ಇಲ್ಲಾ ಗೌಡರೇ
ಹಿಂದೆ ನಾವು ಯಾವ ಕಾಡಿಗೆ ಹೋಗಿದ್ವೋ
ಅದೇ ರೀತಿಯಾಗಿ ಮೂಡಲ ಗಿಡುವಿನಲ್ಲಿ
ಮೆಯಿಸ್ಕೊಂಡು ದನಾ ನೀರ್ಕುಡಿಸ್ಕೊಂಡು ಬಂದೋ ಅಂದ್ರು
ಮಲ್ಲಾಜಿ ದುಃಖ ಮಾಡಬೇಡ
ಆಳುಗಳನ್ನು ನಾವು ಏನೂ ಕೊಲೆ ಕೊಡಬಾರ್ದು
ನಾನೇ ಪರೀಕ್ಷೆ ಮಾಡ್ತೀನಿ ನಾಳೆ ಅಂತ್ಹೇಳಿ
ಸಮಾಧಾನ ಮಾಡ್ಕಂಡು ಜುಂಜಪ್ಪನವರು

ಅವರು ನಿದ್ರೆ ಮಾಡಿ ಮಲಗವರೇ ಜುಂಜಯ್ಯಾ || ನೋಡಿ ನಮ್ಮ ಶಿವನಾ ||

ಆವಾಗಲೀಗ ಬೆಳಗಾಗುತ್ತಲೇ ಎದ್ದು
ಎಲ್ಲಾ ಕೈಕಾಲು ಮುಖ ತೊಳಕೊಂಡ್ರು
ಆವಾಗಲೀಗ ಏಳು ಎಂಟುಗಂಟೆ ಟೈಮಾಯ್ತು
ಮಲ್ಲಾಜಮ್ಮ ಒಂದ್ಕಡೆಯಿಂದ ಎಲ್ಲಾ
ಕರ ಬುಟ್ಟು ಹಾಲ ಕರ್ಕೊಂಡ್ಬಂದ್ರು
ಜಲಗೊಂಬಿನ ಬಸವಣ್ಣಿನ ಮುಟ್ನಿಲ್ಲ
ಆವಾಗ ಜುಂಜಪ್ಪನರು ಏಳುಜನ ಜೀತಗಾರರ ಕರುದ್ರು
ಅಯ್ಯಾ ಆಳುಗಳೇ
ಇವತ್ತು ಆ ಜಲಗೊಂಬಿನ ಬಸವಣ್ಣನಿಗೆ
ಕತ್ತಿಗೆ ಒಂದು ಗಂಟೆಯನ್ನ ಕಟ್ಟಿ
ಒಂದು ದಂಡಿ ಮರ ಕಟ್ಬುಡಿ
ನಾನು ಕೂಡ ಬರ್ತೀನಿ
ನಿಮಗೆ ಏನೂ ತೊಂದರೆ ಕೊಡೂದಿಲ್ಲ ಅಂತ್ಹೇಳಿ
ಜೀತಗಾರ‍ರಿಗೆ ತಾಕೀತಿ ಮಾಡ್ಕಂಡು
ಆವಾಗ ಜುಂಜಪ್ಪನವರು ಹತ್ತು ಗಂಟೆಗೆ ಸರಿಯಾಗಿ
ಏಳುಂಡಿ ದನ ಬಿಟ್ಕೊಂಡು
ಬೀಸು ಮಚ್ಚ ಹೆಗಲಮೇಲೆ ಇಟ್ಕೊಂಡು

ಅವರು ಮೂಡಲ ಗಿಡುವಿಗೆ ಬರುತಾವ್ರೆ ಜುಂಜಯ್ಯಾ || ನೋಡಿ ನಮ್ಮ ಶಿವನಾ ||

ಮೂಡಲ ಗಿಡುವಿಗೆ ಬರುವಾಗ
ನಿನ್ನೆ ಮಾಡಿದ ಪ್ರಕಾರವಾಗಿ ಬಸವಣ್ಣ
ಕಾಡಿನ ತಲೆಗೆ ಬಂದ ತಕ್ಷಣ ಎರಡು ಕಿವಿ ನೆಟ್ಟಗೆ ಮಾಡ್ದ
ಬಾಲವನ್ನೆತ್ತಿ ಬೆನ್ನಮ್ಯಾಲೆ ಮಡಗಿದ
ಓಡಿಬಂದು ಜುಂಜಪ್ಪ ಬಸವಣ್ಣನ ಬಾಲ ಇಡ್ಕೊಂಡ್ರು
ಎಲ್ಲಿಗೋದ್ರು ಬುಡಬಾರ್ದು ಅಂತ್ಹೇಳಿ
ಆದರೂ ಕೂಡ ಬಸವಣ್ಣ ಜುಂಜಪ್ಪನ್ನೂ ಬುಡನಿಲ್ಲ
ಜುಂಜಪ್ಪುನ್ನ ಕೂಡ ಎಳಕೊಂಡು

ಅವನು ಏಳುಮಲೆಗೆ ಬರುತಾವನೇ ಬಸವಣ್ಣಾ || ನೋಡಿ ನಮ್ಮ ಶಿವನಾ ||

ಆವಾಗಲೀಗ ಜುಂಜಪ್ಪ ಎಳಕೊಂಡು ಬರ್ತಾಯಿದ್ರೆ
ಮಾದಪ್ಪ ಕೂತ್ಕಂಡು ನೋಡುದ್ರು
ಜುಂಜಯ್ಯ ಬಂದು ಬುಡ್ತಾಯಿದ್ದಾನೆ
ಏಕ್ ದಂ ಅವನಿಗೆ ನಾನು ಗೋಚರ ಕೊಡಬಾರ್ದು
ಅವನಿಗೆ ಏನಾದ್ರೂ ಒಂದು ತೊಂದರೆ ಕೊಟ್ಟು
ಪತ್ತೆ ಮಾಡಬೇಕು ಅಂತ್ಹೇಳಿ
ಮಾದಪ್ಪ ಅವತ್ತಿನ ಮೆಳೆಗುಂಪಿನ ದಾರಿಬಿಡ್ನಿಲ್ಲ
ಆವಾಗ ಬಸವಣ್ಣ
ಮೆಳೆಗುಂಪಿನ ಸುತ್ತಾ
ಜುಂಜಪ್ಪನ್ನಾ ಕೂಡ ಎಳ್ಕಂಡು ತಿರುಗ್ತಾಯಿದೆ
ಆವಾಗಲೀಗ ಮಾದೇವ
ಇವನಿಗೊಂದು ಸೂಕ್ಷ್ಮ ಕೊಡಬೇಕು ಅಂತ್ಹೇಳಿ
ಮುಂಗಾರು ಮಿಂಚಿದಪ್ಪಂದವಾಗಿ
ಮುಂಗಾರು ಮಿಂಚಿ ಬರಸಿಡಿಲು ಹೊಡೆದಪ್ಪಂದವಾಗೊ
ಒಳಗಡೆ ಕೂತ್ಕಂಡು ಏಳುಬಾಯಿ ಹೊನ್ನುತ್ತದೊಳಗೆ

ಅವರು ಒಂದು ಸಾರಿ ಗುಡುಗವರೇ – ಮಹದೇವಾs || ನೋಡಿ ನಮ್ಮ ಶಿವನಾ ||

ಒಂದು ಸಾರಿ ಯಾವಾಗ ಗುಡುಗಿನ ಶಬ್ಧವಾಯ್ತೋ
ಜುಂಜಪ್ಪನ ಕಣ್ಣಿಗೆ ಕಾಡುಗತ್ತಲೆಯಾಗ್ಬುಡ್ತು
ಬಸವಣ್ಣನ ಬಾಲ ಬುಟ್ಟಬುಟ್ಟ
ಕಣ್ಣೆಗೆಲ್ಲ ಅಂಜನ ಹೊಡೆದಪ್ಪಂದವಾಯ್ತು
ಸುತ್ತಾ ಏಳ್ಜೆನ ಜೀತಗಾರ‍ರು ಬಂದ್ರು
ಆವರ್ಗೂ ಕೂಡ ಅಂಜನ ಹೊಡೆದಪ್ಪಂದವಾಯ್ತು
ಎಲ್ಲ ಮೂರ್ಚೆ ಬಂದು ಬಿದ್ದೋಗ್ಬುಟ್ರು
ಆ ಟೈಮಿಗೆ ಸರಿಯಾಗಿ
ಬಸವಣ್ಣನಿಗೆ ಮುಳ್ಳಿನದಾರಿ ಬಿಟ್ಬುಬುಡ್ತು
ಹೋಗಿ ಬಂಡೆ ಮೇಲೆ ನಿಂತ್ಕೊಂಡು
ಹಾಲುಮಜ್ಜನ ಮಾಡ್ತಾವನೆ ಬಸವಣ್ಣ
ಆವಾಗ ಜುಂಜಪ್ಪ
ಮ್ಯಾಲ್ಕೆದ್ದು ಕಣ್ಣು ಕಾಲ್ನೆಲ್ಲ ವಸೀಕೊಂಡು
ಕಣ್ಣು ಬಿಟ್ಟು ನೋಡ್ತಾವನೆ
ಬಸವಣ್ಣ ಇಲ್ಲ
ಎಲ್ಲಯ್ಯ ಆಳುಗಳೇ ಅಂದ್ರು
ಎಲ್ಲಿ ಮಾಯವಾಯ್ತೊ ಕಾಣಿ ಗುರುವೇ ಅಂದ್ರು
ಯಾರೋ ಈ ಗುಂಪಿನೊಳಗೆ
ಯಂತ್ರಗಾರ ಮಂತ್ರಗಾರ
ಕಾಡುಕಟ್ಟೋನು ಮೇಘಕಟ್ಟೋನು
ಬೆಟ್ಟ ಸ್ವಾಲುಗ ಹಟ್ಟಸ್ವಾಲುಗ ಇರಬೋದು
ಒಂದು ಕಡೇಯಿಂದ ಕಡೀಯೋ ಅಂತ್ಹೇಳಿ
ಬೀಸುಮಚ್ಚು ಕೊಡಲಿ ತಕ್ಕೊಂಡು

ಅವನು ಒಂದುಕಡೆಯಿಂದ ಕಡಿದವನೇ ಜುಂಜಯ್ಯ || ನೋಡಿ ನಮ್ಮ ಶಿವನಾ ||

ಬೆಟ್ಟೆಲ್ಲ ಜೋಲುs ಮಾದೇವ ಬಿದಿರೆಲ್ಲ ಜೋಲುs
ಬೆಟ್ಟದರಸು ಮಾದಪ್ಪ ನಿಮ್ಮ ಮುಟ್ಟಿದರೆ ಜೋಲುs

ಜುಂಜಪ್ಪ ಒಂದು ಕಡೆಯಿಂದ ಕಡಕೊಂಡೊಯ್ತಾಯಿದ್ದರೆ
ಮತ್ತೊಂದು ಕಡೆ ದಾರಿ ಬಿಡಿಸ್ಬುಟ್ರು ಗುರುವೇ
ಬಸವಣ್ಣ ಆ ಕಡೆ ಹೊರಟೋದ
ಯಾವಾಗ ಕೋಪ್ದಲ್ಲಿ ಹೊಡೀತಾಯಿದ್ರೋ
ಏಳು ಬಾಯಿ ಹೊನ್ನುತ್ತದಲ್ಲಿ ಮಾದಪ್ಪ
ಇವರಿಗೆ ನಾನು ನಿಜ ರೂಪು ತೋರಬಾರದು ಅಂತೇಳಿ
ಪುಟುಲಿಂಗವಾಗಿದ್ರು
ಆ ಲಿಂಗಕ್ಕೆ ಬೀಸು ಮಚ್ಚಿನ ಏಟು ತಗುಳಿಬಿಡ್ತು
ಬಲಗಡೆ ಯಾವಾಗ ಮಚ್ಚು ತಗುಲಿಬಿಡ್ತೊ ಲಿಂಗಕ್ಕೆ
ಲಿಂಗ ಮ್ಯಾಲಕ್ಕೆ ಹಾರಿಬುಡ್ತು
ಅ ಲಿಂಗದಲ್ಲಿ ರಗುತವಾಗಿರ್ತಕ್ಕಂತಾದ್ದು
ಚಿಲ್ಲನೆ ಮೇಲಕ್ಕೆ ಆರಿಬುಡ್ತು
ಮಾದಪ್ಪ ಕೋಪ ತಾಳಬಾರ್ದು
ಈ ಗೌಡನಿಂದ ನಾನು ನೆರಳು ಮಾಡ್ಕೊಳ್ಳಬೇಕಂತೇಳೀ

ಅಲ್ಲಿ ಪ್ರತ್ಯಕ್ಷವಾಗಿ ನಿಂತವರೇ ಮಾಯ್ಕಾರಾs || ನೋಡಿ ನಮ್ಮ ಶಿವನಾ ||

ಆಹಾ ಜುಂಜಪ್ಪ ಜುಂಜಪ್ಪ
ಜುಂಜಯ್ಯ ನಿಲ್ಲಿಸು ಅಂದರು
ಪ್ರತ್ಯಕ್ಷವಾಗಿ ಎಳಗಾವಿ ಎಳೆದ್ಹೊದ್ದು
ಸುಳಿಗಾವಿ ಮುಸುಕಿಟ್ಟುಕೊಂಡು
ಒಕ್ಕಳಗಂಟೆ ಹುಲಿ ಚರ್ಮ
ಅಷ್ಟಪಾದಕ್ಕೆ ಅಮೀರಾಗೆಜ್ಜೆ
ಕೊರಳು ತುಂಬ ರುದ್ರಾಕ್ಷಿ
ಉಕ್ಕಿನ ಕುಲಾವಿ ಧರಿಸ್ಕೊಂಡು
ಕೈಯನ್ನ ಎತ್ಕೊಂಡ್ರು
ಜುಂಜಪ್ಪ ಅಲ್ಲೇ ಮಜ್ಜು ಬಿಟ್ಟುಟ್ಟ
ಯಾರಪ್ಪ ಮುನಿಗಳೇ
ಯಾರಪ್ಪ ಜಂಗುಮರೇ
ಯತಿಗಳೇ ಮುನಿಗಳೇ ಯಾರಾಗಿರಬಹುದು ಗುರುವೇ
ನಿಮ್ಮ ಹೆಸರ ಹೇಳಿ ಅಂತವರೇs ಜುಂಜಯ್ಯ || ನೋಡಿ ನಮ್ಮ ಶಿವನಾ ||

ಜುಂಜಪ್ಪ ನನ್ನ ಹೆಸರ ಕೇಳ್ತಾಯಿದ್ದೀಯಲ್ಲಪ್ಪ
ಆದರೆ ನೀನು ನನಗೆ ಭಕ್ತನಾಗಬೇಕು
ನನ್ನ ಯಾರೆಂಬುದಾಗಿ ತಿಳಿದಿರುವೆ
ನಾನು ಹುಟ್ಟಿದ್ದು ಉತ್ತುರು ದೇಶ
ಬಂದದ್ದು ಬಾಳೆಲೆ ಸೀಮೆ
ಸೇರಿದ್ದು ಆದಿ ಕುಂತೂರು ಮಠ
ಕುಂತೂರು ಮಠದಲ್ಲಿ ಪಂಚೇಳು ದೀಕ್ಷವಾಗಿ
ಪರನಾರಿಯರಿಗೆ ಸೋದರ ಸಮನಾದೆ
ಹೆಣ್ಣುಬಾಲ ಮರ್ತ್ಯಕಂಡ ಬಾಲ ತೊರೆದೆ
ಕರೀಜಾತಿ ಕಣ್ಣೆತ್ತಿ ನೋಡ್ನಿಲ್ಲ
ಕನ್ನೆಂಬ ಕೈಲಾಸವನ್ನು ಮರೆತೆ
ಗಿರಿಜಾ ಕಲ್ಯಾಣವನ್ನು ಮರೆತೆ
ಈ ಏಕಾಂಗಿ ಏಳು ಮಲೆವೊಳುಗೆ ಬಂದು
ಕಲಿಯನ್ನ ಕಟ್ಟಾಉವುದಕ್ಕೋಸ್ಕರವಾಗಿ
ಪಾತಾಳಲೋಕದಲ್ಲಿ ಸಿದ್ಧಪೂಜೆಯಾಗ್ಲಿ ಅಂತ್ಹೇಳಿ
ಪಟುಲಿಂಗವಾಗಿ ನೆಲೆಗೊಂಡ್ತಾಯಿದ್ದೀನಿ

ನನ್ನ ಉತ್ತುರ ದೇಶದ ಮಾದೇವ ಅಂತವರೇs ಜುಂಜಯ್ಯ || ನೋಡಿ ನಮ್ಮ ಶಿವನಾ ||

ಉತ್ತುರು ದೇಶದ ಮಾದೇವ ಅಂತೇಳಿ ಕರೀತಾಯಿದ್ದಾರೆ
ಈ ಏಳುಮಲೆಗೆ ಬಂದಮೇಲೆ
ನನ್ನ ಏಳುಮಲೆ ಮಾದೇಶ್ವರ ಅಂತೇಳಿ ಕೂಗ್ತಾರೆ ಕಂದ
ಜುಂಜಪ್ಪ ನಿನ್ನ ಮೆಚ್ಚಿನ ಏಟು ತಗುಲಿದ್ದರಿಂದ
ನನಗೆ ಶಾಶ್ವತವಾದ ಹೆಸರಾಗುತ್ತೆ
ಮಚ್ಚು ಮಲೆ ಮಾದಪ್ಪನೆಂದು ನಾಮಕರಣವಾಗಲಿ
ಇನ್ನು ಮುಂದೆ ನೋಡು
ನನ್ನ ಎಡಗಡೆ ಬಲಗಡೆ
ಹನ್ನೆರಡೆಜ್ಜೆ ಹುಲಿಗಳು ಮನಗಿದ್ದಾವೆ
ಆ ಹುಲಿಕೈಲಿನಿನ್ನ ಒಂದು ಕುಕ್ಕನ್ನೇ ಕುಕ್ಕಿಸ್ತಾಯಿದ್ದಿ
ಒಂದು ಕುಕ್ಕು ಕುಕ್ಕಿದ ತಕ್ಷಣ
ಮೂಗಳ ರಕ್ತ ಸುರೀಬೇಕು
ಬೇಲಿಗೊಂದು ಕಣ್ಣ ಬಿಸಿಲಿಗೊಂದು ಕಣ್ಣ ಮಾಡ್ತಾಯಿದ್ದೆ
ನಿನ್ನಿಂದ ನನಗೆ ಹಾಲು ಮಜ್ಜನವಾಗಬೇಕು
ನೆರಳಾಗಬೇಕು ದೇವಸ್ತಾನವಾಗಬೇಕು
ಅದಕ್ಕೋಸ್ಕರ ಬಿಟ್ಟಿದ್ದೀನಿ ಜುಂಜಪ್ಪ
ನನ್ನ ಈ ಮುಳ್ಳು ಸೀಗೆ ಸಿರುಗಂಧ
ಕೆಮ್ಮಚ್ಚಿ ಬಾಡು ಬಾಕನಗುತ್ತಿಯನ್ನೆ
ತರಿಸಿಬಿಟ್ಟು ಜುಂಜಪ್ಪ ನೀನು
ಒಂದಂಕಣ ಕಲ್ಲು ದೇವಸ್ತಾನ ಕಟ್ಟಿಸ್ಬುಟ್ಟು
ನನ್ನ ಮುಟ್ಟಿ ಪೂಜೆಮಾಡುವುದಕ್ಕೆ
ಪೂಜಾರಿ ನೇಮಿಸಿ ಬುಟ್ರೆ

ನಿನಗೆ ಇನ್ನಷ್ಟೈಶ್ವರ್ಯ ಕೊಡುವೆನು ಜುಂಜಯ್ಯs || ನೋಡಿ ನಮ್ಮ ಶಿವನ ||

ಅಯ್ಯೋ ಉತ್ತುರುದೇಶದ ಮಾದಪ್ಪನಾದರೆ
ಮಯ್ಯಾರ ನೀನು
ಗುರುವೇ ನಾನು ವೆಂಕಟರಮಣ ಸ್ವಾಮಿ
ಪಟ್ಟದ ರಂಗಸ್ವಾಮಿ ಒಕ್ಕಲಲ್ಲ ಗುರುವೇ
ನಿನಗೆ ಹ್ಯಾಗೆ ಒಕ್ಕಲಾಗಲಿ ಅಂದ್ರು
ನೋಡಪ್ಪ ನೀನು ಮನದೇವ್ರು ಬಿಡಬೇಡ ಜುಂಜಪ್ಪ
ನಿನ್ನ ಮನೆದೇವ್ರು ಹೆಸರ ಹೇಳಿ ಎರಡ ಬಿಳ್ಳಿನಾಮ ಇಟ್ಕೊ
ನನ್ನ ಹೆಸ್ರ ಹೇಳಿ ಮಧ್ಯ ಇರುವಂಥ ಕೆಂಪುನಾಮ ತಗುದ್ಬುಡು
ನಿನಗೆ ಪಟ್ಟದ ರಂಗಸ್ವಾಮಿ ಮನೆ ದೇವರಾಗಲಿ
ನಾನು ನಿನಗೆ ಒಕ್ಕಲಾಗಬೇಕು

ಇನ್ನು ಮುಂದೆ ಒಂದಂಕಣ ದೇವಸ್ಥಾನ ಕೇಳುದ್ರಲ್ಲ ಗುರುವೇ
ನೀವೇಳಿದ ಪ್ರಕಾರವಾಗಿ ನನಗೇನು ನೀವು ತೊಂದರೆ ಕೊಡಬೇಡಿ
ಒಂದಂಕಣವಲ್ಲ ಗುರುವೇ
ಏಳೇಳು ಹದಿನಾಲ್ಕಂಕಣ ಕಟ್ಟಿಸಬಲ್ಲೆ
ನೀನು ಕೊಟ್ಟಿರುವಂತ ಭಾಗ್ಯ ಐಶ್ವರ್ಯದಲ್ಲಿ
ಆದರೆ ಹಿಂದಿನವರು ಹೇಳ್ತಾಯಿದ್ರು
ಯಾರು? ನಮ್ಮ ತಾತ ಮುತ್ತಾತಂದಿರು
ಏನಪ್ಪ ಒಂದು ಗಾದಿ ಮಾತು ಅಂದರೆ

ಋಷಿಯ ಸೇರಲುಬಹುದು
ವಿಷವ ಕುಡಿಯಲೂಬಹುದು
ನಿಮ್ಮ ದುಸ್ ಮಾನ್ ರ ಸಂಗ ತರವಲ್ಲ
ಮಾಯಿಕಾರ ಮಾದೇವ
ನಿಮ್ಮ ಮಾಯಾ ಬಲ್ಲವರಾರಯ್ಯ
ಮನವ ಒಪ್ಪಿ ದುಡುಗಳ ನೋಡೋ
ದುಂಡುಳ್ಳು ಮಾದೇವಾ

ಹ್ಯಾಗೆ ಜುಂಜಪ್ಪ ಅಂದ್ರು
ಹಾಗಲ್ಲ ಗುರುವೇ
ನಿಮ್ಮಂಥ ದುಸುಮಾನರು
ತೋರುವಾಗ ಬೆರಳುತೋರ್ತೀರಿ
ನುಂಗುವಾಗ ಹಸ್ತಾನೆ ನುಂಗ್ಬುಡ್ತೀರಲ್ಲಪ್ಪ
ಅದಕ್ಕೆ ಭಯ ಅಂದ್ರು
ಹಾಗೆಲ್ಲ ಭಯಪಡಬೇಡ ಜುಂಜಯ್ಯ
ನಿನಗೆ ಮತ್ತಷ್ಟೈಶ್ವೈರ್ಯ ಕೊಡುತೀನಿ
ನಾನು ಹೇಳುದಕ್ಕೆ ದೇವಸ್ತಾನ ಕಟ್ಟಿಸು ಅಂದ್ರು
ಆಗಲಿ ಗುರುವೇ ಅಂದ
ಆಗಲೀ ಅಂದರೆ ನಾನು ಒಪ್ಪೋದಿಲ್ಲ

ನನಗೆ ಭಾಷೆ ಕೊಡು ಅಂತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಗುರುವೇ ಮಾಯ್ಕಾರಗಂಡ ಮಾದಪ್ಪ
ನಿನ್ನ ಪಾದ ಸಾಕ್ಷಿಯಾಗಿ ನಿನಗೆ ಒಕ್ಕಲಾಗಿ
ನಾನು ದೇವಸ್ಥಾನ ಕಟ್ತೀನಂತೇಳಿ ಭಾಷೆ ಕೊಟ್ಬುಟ್ಟ್ರು
ಆಗಲೀ ನೀನು ಇನ್ನೂ ಮತ್ತಷ್ಟು ಐಶ್ವರ್ಯವಾಗಿ ಬಾಳಪ್ಪ
ಅಂತ್ಹೇಳಿ ಆಶೀರ್ವಾದ ಮಾಡುದ್ರು
ಮಾದೇವನಿಗೆ ಭಾಷೆ ಕೊಟ್ಬುಟ್ಟು
ಏಳುಂಡಿ ದನವನ್ನೆ ಕೂಗಿ ಕರಕೊಂಡು
ಏಳುಜನ ಜೀತಗಾರರ ಕರ್ಕೊಂಡು

ಅವನು ಮಠಮನೆಗೆ ಬರುತವನೇs ಜುಂಜಯ್ಯಾ || ನೋಡಿ ನಮ್ಮ ಶಿವನಾ ||

ಮಠಮನೆಗೆ ಬಂದು ಏಳುಂಡಿ ದನವನ್ನು
ಕೂಡುಬುಟ್ರು ಹುಂಡಿವೊಳಗೆ
ಏಳುಜನ ಜೀತಗಾರರು ಬಂದ್ರು
ಜುಂಜಪ್ಪನವರು ಬಂದು
ಎಲ್ಲಾ ಕೈಕಲುಮೊಖ ತೊಳಕೊಂಡು
ಜಗಲೀಮ್ಯಾಲೆ ಕೂತ್ಕಂಡ್ರು
ಮಲ್ಲಾಜಮ್ಮನವರು ಬಂದು
ಸತಿ ಪತೀವ್ರತೆ
ಜುಂಜಪ್ಪನವರ ಪಾದಕ್ಕೆ ನಮಸ್ಕಾರವನ್ನು ಮಾಡಿ
ಏನಾಯ್ತು ಯಜಮಾನರೇ ಅಂದ್ರು
ಮಲ್ಲಾಜಿ ದುಃಖಮಾಡಬೇಡ
ಭಯ ಪಡಬೇಡ
ನಮಗೆ ಏನೂ ಆಗೋದಿಲ್ಲ
ಈ ಏಳು ಮಲೆ ಕೈಲಾಸದಲ್ಲಿ
ಸೀಗೆ ಸಿರುಗಂಢ ಕೆಮ್ಮಚ್ಚಿ ಬಾಡುಬಾಕುನ ಗುತ್ತಿವೊಳಗೆ
ಏಳುಬಾಯಿ ಹೊನ್ನುತ್ತದೊಳಗೆ
ಆ ಬಿದಿರುಮಳೆ ಪೊದೆವೊಳಗೆ ತಪಸ್ಸು ಮಾಡ್ತಾಯಿದ್ದ
ಒಬ್ಬ ಜಂಗುಮಯ್ಯ
ಕ್ವಾಪದಲ್ಲಿ ನಾನು ಹೊಡಕೊಂಡು ಹೋಯ್ತಾಯಿದ್ದಿ
ಮೆಳೆನೆಲ್ಲ ಕಡಿದಾಕ್ತಾಯಿದ್ದಿ
ಆ ಜಂಗುಮಯ್ಯನಿಗೆ ನನ್ನ ಹಸ ಹೋಗಿ
ದಿವಸಾ ಹಾಲು ಕರೆದ್ಬುಟ್ಟು ಬತ್ತಾಯಿತ್ತು
ಮೆಳೆನೆಲ್ಲ ತರ್ಕೊಂಡೋಗ್ತಾಯಿದ್ದಿ
ಆ ಜಂಗುಮಯ್ನ ನೆತ್ತಿಗೆ ಏಟುಬಿದ್ಬುಟ್ಟು
ರಕ್ತ ಹಾರ್ಬುಡ್ತು ಮಲ್ಲಾಜಿ
ಆದರೂ ಕೂಡ ಧೈರ್ಯವಾಗಿ ನಿಂತುಕೊಂಡು ಆ ಜಂಗುಮಯ್ಯ
ಏಳುಮಲೆ ಮಾದೇಶ್ವರನಂತೆ
ಮಾಯ್ಕಾರನಂತೆ
ನನ್ನಿಂದ ಭಾಷೆ ತಕ್ಕಂಡಿದ್ದಾರೆ ಮಲ್ಲಾಜಿ ಅಂದ್ರು
ಯಾತಕ್ಕೋಸ್ಕರ ಯಜಮಾನ್ರೆ ಅಂದ್ರು
ದೇವಸ್ಥಾನ ಕಟ್ಟಿಸ್ಬೇಕಂತ್ಹೇಳಿ ಮಲ್ಲಾಜಿ
ನಾವು ಒಕ್ಕಲಾಗಬೇಕಂತೆ
ಪೂಜಾರಿ ನೇಮಿಸಬೇಕಂತೆ ಅಂದ
ಮಲ್ಲಾಜಮ್ಮ ಪತಿಮಾತಿಗೆ ಪ್ರತಿ ಉತ್ತರ ಹೇಳಲಿಲ್ಲ
ಆಗಲೀ ಯಜಮಾನರೇ
ಆ ಮಾದಪ್ಪನಿಗೆ ನಾವು ಒಕ್ಕಲಾಗೋಣ
ದೇವಸ್ಥಾನ ಕಟ್ಟೋಣ
ನಮ್ಮ ಆರುಜನ ಮಕ್ಕಳಿಎ ಇನ್ನೂ ಹಾಲು ಅಗ್ರವಾಗಲಿ
ಅಂತ್ಹೇಳಿ ಒಪ್ಕೊಂಡು
ಗಂಡಾ ಹೆಂಡ್ತಿರು ಸಮಾಧಾನವಾಗಿ ಊಟಮಾಡ್ಕಂಡು

ಅವರು ನಿದ್ದೆಮಾಡಿ ಮಲಗವರೇs ಮಲ್ಲಾಜಮ್ಮs || ನೋಡಿ ನಮ್ಮ ಶಿವನಾ ||

ಆವಾಗ ತಿರುಗ ಮಾರನೇ ದಿವ್ಸಕ್ಕೆ ಬೆಳಿಗ್ಗೆ ಎದ್ರು
ಕೈಕಲು ಮೊಕ ತೊಳ್ಕಂಡ್ರು ಜುಂಜಪ್ಪ
ಏಳುಜನ ಜೀತಗಾರರಿಗೆ ತಾಕೀತಿ ಕೊಟ್ಬುಟ್ರು
ಉಸಾರಾಗಿ ದನಗಳ ಮೆಯಿಸ್ಕೊಂಡು ಬನ್ನಿ ಅಂತ್ಹೇಳಿ
ಆವಾಗ್ಹೋಗಿ ಕಬ್ಬಿಣದ ಬೀರನ್ನು ಬಿಚ್ಬಟ್ಟು
ಬೇಕಾದಷ್ಟು ದುಡ್ಡ ತಕ್ಕೊಂಡ್ರು
ಆವಾಗೇನು ಹಿಂದಲಕಲ
ಈ ಕಾಲ್ದಂಗೆ ನೋಟಿಲ್ಲ
ಬೆಳ್ಳಿ ರೂಪಾಯಿ
ಒಂದು ನಾಡಿ ಚೀಲಕ್ಕೆ ತುಂಬಿಕೊಂಡ ಜುಂಜಪ್ಪ
ನಡೀಗೆ ಕಟ್ಕೊಂಡು
ಮೇಲೆ ಪಂಚೆ ಕಟ್ಕೊಂಡು
ಮಲ್ಲಾಜೀ ನಾನು ಕೊಯ್ಮತ್ತೂರಿಗ್ಹೋಗಿ
ವಡ್ಡರ ಕರ್ಕೊಂಡು ಬಂದು
ಏಳುಮಲೆ ಕೈಲಾಸ್ದಲ್ಲಿ ದೇವಸ್ಥಾನಕ್ಕೆ ಪಾಯ ಹಾಕ್ಸಿ
ಸ್ವಾಮಿಗೆ ದೇವಸ್ಥಾನ ಕಟ್ಸಿ
ಅನಂತರವಾಗಿ ನಾನು ಬರೂವರ್ಗೂವೆ ಉಸಾರಾಗಿರು ಅಂತ್ಹೇಳಿ
ಮಲ್ಲಾಜಮ್ಮನಿಗೆ ಬುದ್ಧಿ ಹೇಳ್ಬುಟ್ಟು

ಅವರು ಆಲಂಬಾಡಿಯ ಬಿಡುತವರೇ ಜುಂಜಯ್ಯ || ನೋಡಿ ನಮ್ಮ ಶಿವನಾ ||