ಕುಂಬಾರಗೇರಿಯಲ್ಲೋಗಿ ಮಣ್ಣಾಬಟ್ಲ ತಂದು ಮಡಗ್ಬುಟ್ಟು
ಅಡಿಗೆಯಾದ ಮೇಲೆ ಗಂಡಾ ಹೆಂಡಿರಿಬ್ಬರೂವೆ
ಹಾಲು ತುಪ್ಪ ತಕ್ಕೊಂಡು
ಹೊನ್ನುತ್ತಕ್ಕೋಗಿ
ಹೊನ್ನುತ್ತಕ್ಕೆ ಎರೆದ್ಬುಟ್ಟು
ಹುತ್ತವನ್ನು ಬಳಸ್ಬುಟ್ಟು
ಗಂಡಾ ಹೆಂಡಿರಿಬ್ಬರೂ ಕಣ್ಮುಚ್ಚಿ ಕೊಂಡು
ತಾಯಿ ಮಲ್ಲಾಜಮ್ಮನ ಮುತ್ತಿನ ಸೆರಗು ಹಾಸ್ಬುಟ್ಟು
ಕಾಳಿಂಗನ ಕೂಗ್ಬಿಡಿ
ಕಾಳಿಂಗ ನಿಮಗೆ ಹೆಡೆ ಬಿಚ್ಚೋದಿಲ್ಲ
ಕಣ್ಮುಚ್ಕೊಂಡು ಹಾಗೆ ಬಂದು ಮಲಗುತಾನೆ
ಮಲ್ಲಾಜಮ್ಮನ ಕಣ್ಣಿಗೆ ತೋರಿಸ್ಬೇಡ
ನೀನು ಮುದುರಿ ತಾಯಮ್ಮನ ಸೆರಗಿನಲ್ಲ್ಡಕೊಂಡ್ಬಂದು
ನಡುಮನೆಯೊಳಗೆ ಬಿಟ್ಟು ಬಿಡು
ಆ ಸರ್ಪ ಏನೂ ಮಾಡೋದಿಲ್ಲ
ತೆಕ್ಕೆ ಮಾಡ್ಕೊಂಡು ಮಲಗ್ತಾನೆ ಜುಂಜಪ್ಪ
ಅದರ ಮೇಲೆ ಮಣ್ಣ ಬಟ್ಲ ಮಡಗಿ
ಹಸೀ ಅವರೆ ಎಸರು ಹೊಸರಾಗಿ ಮುದ್ದೆ ಮಾಡಿ ಮಡಗಿ
ಎಡೆಬತ್ತೀನಿ ಅಂತೇಳುದ್ರು
ಮಾದೇವನ ಮಾತ ಕೇಳ್ಕೊಂಡು
ಜುಂಜಪ್ಪ ಕೈಮುಗಿದುಬಿಟ್ಟು ಮಾದಪ್ಪನಿಗೆ

ಅವರು ಆಲಂಬಾಡಿಗೆ ಬರುತವರೇ ಜುಂಜಯ್ಯಾs || ನೋಡಿ ನಮ್ಮ ಶಿವನಾ ||

ಆವಾಗ ಜುಂಜಪ್ಪನವರು ಆಲಂಬಾಡಿಗೆ ಬಂದ್ರು
ಮಲ್ಲಾಜಮ್ಮ ತನ್ನ ಪದ್ದತಿಯಂತೆ
ಯಜಮಾನ್ರಿಗೆ ಕೈಕಾಲಿಗೆ ನೀರು ಕೊಟ್ಟು
ಕಾಲಿಗೆ ನಮಸ್ಕಾರ ಮಾಡ್ದಳು
ಪತಿವ್ರತಾ ಧರ್ಮ
ಆದರೆ ನಮಸ್ಕಾರವನ್ನು ಮಾಡಿ
ಯಜಮಾನರೇ ಮಾದೇಶ್ವರ ಯಾವಾಗ ಬರ್ತರೆ ಭಿನ್ನಕ್ಕೆ ಅಂದ್ರು
ಮಡದಿ ಮಲ್ಲಾಜಿ
ನಾಳೆ ಸೋಮವಾರ
ಕಾರ್ತೀಕ ಸೋಮವಾರ
ಮೊದಲು ಸೋಮವಾರ ಬರೋದಿಲ್ಲ
ಎರಡನೇ ಸೋಮವಾರ ಬರ್ತಾರೆ ಮಾದಪ್ಪ
ಆದರೆ ಹಸೀ ಅವರೆ ಎಸ್ರು ಹೊಸರಾಗಿ ಮುದ್ದೆ ಆಗಬೇಕಂತೆ
ತಕ್ಕೊಂಡ್ಬತ್ತೀನಿ ಮಲ್ಲಾಜಿ
ನೀನೇನೂ ಮಾತನಾಡಬೇಡ
ಆದರೆ ಮಣ್ಣ ಬಟ್ಟಲಾಗಬೇಕಂತೆ
ಏಳು ತಲೆ ಸರ್ಪಹೆಡೆ ಮಾಡಬೇಕಂತೆ
ಎಡೆ ಮಾಡೋಣ ಮಲ್ಲಾಜಿ ಧೈರ್ಯವಾಗಿರು ಅತೇಳಿ
ಸ್ನಾನ ಮಡಿಯನ್ನು ಮಾಡ್ಕಂದ್ರು
ಮನೆ ಕೋಣೆ ತಾರಿಸಿ
ಮಕ್ಕಳಿಗೆಲ್ಲ ಸರಿಯಾಗಿ ಸ್ನಾನ ಮಾಡ್ಸು ಬತ್ತೀನಿ ಅಂದ್ಬುಟ್ಟ್ರು

ಅವರು ಬಾಣಗಾರ ಕೆಬ್ಬೇ ಹೊಲಕೆ ಹೊಯ್ತಾವರೆ ಜುಂಜಯ್ಯಾs || ನೋಡಿ ನಮ್ಮ ಶಿವವಾ ||

ಬಾಣಗಾರ ಕೆಬ್ಬೇ ಹೊಲದಲ್ಲಿ ಹೋಗಿ
ಕಡ್ಡೀ ಕರ್ಪೂರ ಹಸ್ಸುಬುಟ್ಟು
ಆವಾಗಲೀಗ ಕೈಮುಗಿದು ಮಾದೇವ
ಹುಲಿವಾನದಯ್ಯ ಉತ್ತುರದೇಶದವನೇ ಅಂತೇಳಿ
ಬಲಗಡೆ ಒಂದು ಬಳಸುಬಳಸಿ ತಿರುಗಿ ನೋಡುದ್ರು
ಅವರೆ ಗೊನೆ ಒಂದು ಗೊನೆ ಕಂಡ್ಬುಡ್ತು ಮೊಳುದ್ದ
ಗೊಬ್ಬರದ ಗುಡ್ಡೆವೊಳಎ ರಾಗೀತೆನೆ
ಐದುರಾಗಿ ತೆನೆ ಕಂಡ್ಬುಟ್ಟೊ
ಗೊಬ್ಬರದ ಗುಡ್ಡೆ ಅಂದರೆ ಯಾವಾಗ್ಲೂ ಗೊಬ್ಬರ ಬುಡ್ತಾರೆ
ಆ ಗುಡ್ಡುಗುಡ್ಡೇಲಿ ತೆನೆ ಗೊಬ್ಬರ ಉಳ್ದಿರ್ತದೆ
ಅಲ್ಲಿ ಐದು ರಾಗಿ ತೆನೆ ಕಂಡ್ಬುಡ್ತು
ರಾಗಿ ತೆನೆಯನ್ನು ಕುಯ್ಕೊಂಡು
ಅವರೇ ಗೊನೆಯನ್ನು ಕುಯ್ಕೊಂಡು
ಮಡಿಲಲ್ಲಿ ಕಟ್ಕೊಂಡು
ಮಠ ಮನೆಗೆ ಬಂದು ಮಲ್ಲಾಲಮ್ಮನ ಕೈಗೆ ಕೊಟ್ರು
ಮಲ್ಲಜಮ್ಮ ಜುಂಜಪ್ಪನವರು ಬರುವ ಹೊತ್ತಿಗೆ
ಮನೆ ಕೋಣೆಯನ್ನ ಸಾರಿಸಿಕೊಂಡು
ಹಸು ಮಕ್ಕಳೀಗೆ ಹಾಲಿಲ್ಲ
ಶಿಶು ಬಾಲರಿಗೆ ಊಟವಿಲ್ಲ
ಆ ರೀತಿಯಾಗಿ ಹೋಮ ನೇಮದಲ್ಲಿ
ಕಾದು ಕುಂತಿದ್ರು
ತಂದು ಕೊಟ್ಟಂಥ ರಾಗಿಯನ್ನು
ಅಂಗೈಯ ಉರುಳು ಮಾಡಿ ಅಂಗೈಯಲ್ಲಿ ತೀಡಿ
ರಾಗಿ ಒರಳಿಗೆ ಹಾಕ್ಕೊಂಡು
ರಾಗಿಯನ್ನ ಬೀಸ್ಕೊಂಡು
ಮಲ್ಲಾಜಮ್ಮನವರು
ಹಸೀ ಅವರೆಕಾಯಿ ಎಡಕೊಂಡು
ಹಸೀ ಅವರೇ ಹೆಸರು ಮಾಡಿ

ಅವರು ಹೊಸ ರಾಗಿ ಮುದ್ದೆ ಮಾಡವರೇ ಮಲ್ಲಾಜಮ್ಮಾ || ನೋಡಿ ನಮ್ಮ ಶಿವನಾ ||

ಮಲೆಗಳ ನೋಡಯ್ಯಾ
ಮಾದೇವ ಹೊನ್ನೆ ಗಿಡಗಳ ನೋಡಯ್ಯಾ
ಮಲೆಯೊಳಗಿರುವ ಮಾದೇವ ನಿಮ್ಮ ಮಾಯಾ ಬಲ್ಲಾರ್ಯಾರೋ
ಆವಾಗ ತಾಯಿ
ಹಸೀ ಅವರ ಹೊಸರಾಗಿ ಮುದ್ದೆ ಮಾಡುದ್ರು
ಜುಂಜಪ್ಪನವರು ಕುಂಬಾರಗೇರಿಯಲ್ಲೋಗಿ
ಆ ಕುಂಬಾರ‍ಶೆಟ್ಟರಿಗೆ ಹೇಳಿ
ಅಪ್ಪಾ ಬೆಂಕಿ ಮೇಲೆ ಮಡಗಬೇಡ
ಮಾದಪ್ಪನಿಗೆ ಒಂದು ಮಣ್ಣಬಟ್ಲು ಮಾಡಿಕೊಡಪ್ಪ
ಮಧ್ಯಲಿಂಗ ಮಡುಗಪ್ಪ ಈಶ್ವರ ಲಿಂಗದಂಗೆ
ಈಶ್ವರ ಬತ್ತಾನೆ ಊಟಮಾಡಕ್ಕೆ ಅಂತ್ಹೇಳಿ
ಮಣ್ಣಬಟ್ಟಲು ಮಾಡಿಕೊಂಡು ಬಂದು
ನಡುಮನೆವೊಳಗೆ ಮಡುಗಿಬಿಟ್ಟು
ಅಡಿಗೆಯೆಲ್ಲಾ ಆಯಿತಲೇ
ಬಾರವ್ವ ಮಲ್ಲಾಜಿ ಮಲ್ಲಾಜಮ್ಮ ಬಾ
ಅಂತ್ಹೇಳಿ ಕರಕೊಂಡು
ಹಾಲು ತುಪ್ಪ ಕರ್ಕೊಂಡು ಹೋಗಿ ಹೊನ್ನುತ್ತದಲ್ಲಿ
ಊರಮುಂದಲ ಜಗುಲಿಕಟ್ಟೆ ಪಕ್ಕದಲ್ಲಿ
ಹೊನ್ನುತ್ತಕೆ ಹಾಲು ತುಪ್ಪ ಎರೆದುಬಿಟ್ಟು
ಕೈ ಮುಗಿದ್ಬುಟ್ಟು
ಮಲ್ಲಾಜಿ ಭಯ ಪಡಬೇಡ
ಕಾಳಿಂಗ ಸರ್ಪ ಬರ್ತಾಯಿದ್ದಾನೆ
ಧೈರ್ಯವಾಗಿರು ಎಲ್ಲಾ ಆ ಮಾದೇವನ ದಯ ಅಂತೇಳಿ
ತನ್ನ ಮಡದಿ ಮಲ್ಲಾಜಮ್ಮನ ಸೆರಗ ತೆಗೆದು
ಹೊನ್ನುತ್ತದ ಬಾಯಿ ಬಾಗಿಲಿಗೆ ಹಾಸ್ಬುಟ್ಟು

ಅವರು ಕೈ ಮುಗಿದು ಕುಳಿತವರೇ ಜಂಜಯ್ಯಾs  || ನೋಡಿ ನಮ್ಮ ಶಿವನಾ ||

ಯಾವಾಗ ಕೈ ಮುಕ್ಕೊಂಡು ಕಣ್ಣು ಮುಚ್ಕೊಂಡು ಕೂತ್ಕಂಡ್ರೊ
ಕರಿಯ ಕಾಳಿಂಗ ಸರ್ಪ
ಹೆಡೇ ಬಿಚ್ಚನಿಲ್ಲ ನೀವು ಸತ್ಯವಂತರು ಭಾಗ್ಯವಂತರು ಅಂತ್ಹೇಳೀ
ಮೆಲ್ಲಗೆ ಬಂದು ಆ ಸೆರಗಿನಲ್ಲಿ ಮಲೀಕೊಂಡ
ಆವಾಗ ಜುಂಜಪ್ಪನವರು
ಮಲಗಿದ ತಕ್ಷಣವೇ
ನಾಲ್ಕು ಮೂಲೆಗೂ ಸೆರಗ ಎತ್ತಿಹಿಡ್ಕಂಡು
ಮಲ್ಲಜಮ್ಮನಿಗೆ ತೋರ್ನಿಲ್ಲ
ಮಲ್ಲಾಜಮ್ಮುನ್ನೂ ಕೂಡ ಕರ್ಕೊಂಡು ಬಂದು
ನಡು ಮನೆವೊಳೂಗೆ ಮಲಗಿಸಿ ಬಿಟ್ಟು
ತುಂಬಿದ ಸೋಮವಾರ‍
ಹಸೀ ಮಣ್ಣ ಬಟ್ಟಲ ಮಡತಿದರು
ಮಲ್ಲಾಜಮ್ಮನವರು
ಹಸೀ ಅವರೆ ಎಸ್ರು ಹೊಸರಾಗಿ ಮದ್ದೆ ಇದ್ದುದ್ರು
ಮಹಾದೇವನಿಗೆ ತುಂಬೇ ಪುಷ್ಮ
ಕಿರುಕಣಗಲೇ ಹೂವು
ಬೇವುಗಣಗಲೇ ಹೂವು
ಬಿಲ್ವಪತ್ರೆ ಲಕ್ಕೀಪತ್ರೆ ತಂದು
ತಟ್ಟೆವೊಳಗೆ ಮಡಗುದ್ರು
ಈಭೂತಿಗಟ್ಟಿ ಮಡಗುದ್ರು
ಅಗ್ನಿ ತಪ್ಪೇಲಿ ಒಂದ್ಕಡೆ ಬೆಂಬನಲ್ಲಿ ನೀರು ಮಡಗಿದ್ರು
ತಾವು ಮಲಗುವಂತ ಜಾಗದಲ್ಲೋಗಿ
ಎಲ್ಲಾ ಮಲೀಕೊಳ್ಳಿ ಅಂತೇಳುಬುಟ್ಟು
ಮಾದೇಶ್ವರನಿಗೆ ಎಡೆ ಮಾಡಿದ ಜಾಗ್ದಲ್ಲಿ ಚಿನ್ನದಗಂಟೆ ಕಟ್ಟುದ್ರು
ಕಡೇ ಬಾಗ್ಲಲ್ಲಿ ಕಂಚಿನ ಗಂಟೆ ಕಟ್ಬುಟ್ಟು

ಅವರು ನಿದ್ರೆ ಮಾಡಿ ಮಲಗವರೇs ಮಲ್ಲಾಜಮ್ಮs || ನೋಡಿ ನಮ್ಮ ಶಿವನಾ ||

ಯಾವಾಗ ನಿದ್ದೆ ಮಾಡಿ ಮಲೀಕೊಂಡ್ರೋ
ಹನ್ನೆರಡು ಗಂಟೆ ರಾತ್ರಿಯಾಯ್ತು
ಕಲ್ಲು ನೀರು ಕರಗುವ ಹೊತ್ತು ಅಂದರೆ
ಹಕ್ಕಿ ಗಲಗಿರಬಾರದು ಪಕ್ಷೀ ಗಲಗಿರಬಾರದು
ಹರಿಯುವಂತ ಗಂಗಮ್ಮ
ಅರಗಳಿಗೆ ನಿಂತು ಹೋಗ್ತಾಳೆ
ಅದೇ ನಿದ್ರೆ ಮಾಡುವಂತ ಟೇಮು
ಗಂಗಮ್ಮ ನಿದ್ರೆ ಮಾಡುವಂಥ ಟೇಮು
ಆ ಟೈಮಿನಲ್ಲಿ ಮಾದಪ್ಪ
ಮುತ್ತಿನ ಜೋಳಿಗೆ ಮುಂಗೈಲಿ ಧರಿಸ್ಕಂಡ್ರು
ಕಂಚಿನ ಕಂಸಾಳೆ ಹಿಡಕೊಂಡು
ಧರೆಗಾತ್ರ ದಂಡಗೋಲು ಹಿಡಕೊಂಡು
ಕೊರಳ ತುಂಬ ರುದ್ರಾಕ್ಷಿ ಉಕ್ಕುನ ಕುಲಾವಿ ಧರಿಸ್ಕಂಡಿ
ಹಿಂದಲ ಪಾದಕ್ಕೆ ಇನ್ನೂರು ಜಂಗು
ಮುಂದಲ ಪಾದಕ್ಕೆ ಮುನ್ನೂರು ಜಂಗು
ಅಷ್ಟಪಾದಕ್ಕೆ ಅಮೀರಗೆಜ್ಜೆ

ಮಾದೇವ ಅಲಂಬಾಡಿ ಬಿನ್ನಕ್ಕೆ ಬರುತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಬೆಟ್ಟದ ಮಾದೇವ ಬರುವಾಗs
ಗುರುವೇ ಹುಟ್ಟುಗಲ್ಲು ಗಡುಗಟ್ಟಿದವುs
ಕತ್ತಾಲ ರಾಜ್ಯದ ಕೋಗಿಲೆ ಎದ್ದು
ಸ್ವರವೆತ್ತಿ ಕೂಗಿದವೊs

ಆವಾಗ ಮಾದೇವ
ಲಿಂಗದ ಮೊರ್ತ ಜಂತಿನ ಶಬ್ಧ ಮಾಡ್ಕಂಡು ಬರ್ತಾಯಿದ್ರು
ಆಲಂಬಾಡಿ ಬಾರ್ಡರಿಗೆ ಬಂದ ತಕ್ಷಣ ನಿಲ್ಲಿಸ್ಬುಟ್ರು
ಯಾತಕ್ಕೋಸ್ಕರ ಅಂದರೆ
ಗ್ರಾಮ್ದಲ್ಲಿ ಜನಗಳು ಎದ್ದುಬುಡ್ತಾರೆ
ಕಂಚಿನ ಕಂಸಾಳೆ ಶಬ್ಧಕ್ಕೆ ಅಂತೇಳಿ
ಸದ್ದಿಲ್ಲದೇ ಬಂದು ಮಾದಪ್ಪ
ಜುಂಜಪ್ಪನ ಮನೆ ಬಾಗಿಲಲ್ಲಿ ನಿಂತ್ಕಂಡು ನೋಡುದ್ರು
ನಡು ಮನೆವೊಳುಗೆ ಕೈಯೆಣ್ಣೆ ದೀಪ ಉರೀತಾಯಿದೆ
ನಡು ಮನೆವೊಳುಗೆ ಎಡೆ ಬಡಿಸಿರೋದನ್ನ ನೋಡುದ್ರು
ಮಹದೇವಾ ಇದು ಭಕ್ತರ ಮನೆ ಪ್ರಸಾದ
ಇನ್ನು ಮುಂದೆ ನನ್ನ ಮೈಸೂರು ಮೇಲ್ನಾಡಿನಲ್ಲಿ
ಸಾವಿರಾರು ಒಕ್ಕಲಿದ್ದಾರೆ
ಆ ಒಕ್ಕುಲಿನಲ್ಲಿ ಮೊದಲಾಗಿ ಎಡೆ ಮಾಡಿದಮ್ಥ ಎಡೆ
ಇದೇ ರೀತಿಯಾಗಿ ಎಡೆಯಾಗಬೇಕು
ಮೊದಲಾಗಿ ಒಕ್ಲಲ್ಲಿ ಹುಟ್ಟಿದಂಥ ಮಗನಿಗೆ
ಸಾಲೂರು ಮಠದಲ್ಲಿ ಕರೆತಂದು
ನಮ್ಮ ಶಾಂತಮಲ್ಲಿಕಾರ್ಜುನಸ್ವಾಮಿ ಗುರುಗಳಿಂದ ದೀಕ್ಷೆ ಮಾಡಿಸ್ತಾರೆ
ಗುಡ್ಡುನ ಮಾಡ್ತಾರೆ
ನೀಲಗಾರ ಅಂತ್ಹೇಳ್ತರೆ
ದೀಕ್ಷೆ ಮಾಡಿದರೆ ದ್ಯಾವರೆ ಗುಡ್ಡ ಅಂತೇಳ್ತಾರೆ
ಇದೇ ರೀತಿಯಾಗಿ ಗುಡ್ಡನ ಬಿಟ್ಟವನಿಗೆ
ಇದೇ ರೀತಿ ಮಣ್ಣ ಬಟ್ಲು ಆಗಲೀ
ಇದೇ ಥರ ಕಾಳಿಂಗ ಸರ್ಪ ಬಿದಿರ ತೆಕ್ಕೆ ಆಗಲೀ
ಮೊದಲಾಗಿ ನನ್ನ ಮೈಸೂರು ನಾಡಿನಲ್ಲಿ
ಇನ್ನೂ ಸಾವಿರಾರು ಒಕ್ಕಲುಗಳು
ಅದೇ ಗುಡ್ಡಪ್ಪನನ್ನು ಕರೆದು
ಮೊದಲು ಮನೆವೊಳುಗೆ
ಬಿನ್ನ ಮಾಡಿಸ್ತರೆ
ಆವರಿಗೆ ಮತ್ತಷ್ಟು ಐಶ್ವರ್ಯ
ಮಕ್ಕಳ ಸಿರಿ ಮನೆ ಸಿರಿ
ಕೋಟಿ ಐಶ್ವರ್ಯ ಕುಮಾರ ಭಾಗ್ಯ ಕೊಡಬೇಕು
ನಂಬಿದವರ ಮನೊವೊಳುಗೆ
ಇದೇ ಐಶ್ವರ್ಯವಂತವಾಗಲಿ ಅಂತ್ಹೇಳಿ
ಮಾದೇವ ಭಕ್ತರ ಮನೆಯ ಪ್ರಸಾದ ಅಂತ್ಹೇಳಿ
ಆವಾಗಲೀಗ ಕುನ್ನೀರು ಬೆಂಬ್ನಲ್ಲಿ ನೀರೊತ್ಕೊಂಡ್ಹೋಗಿ
ಕೈಕಾಲು ಮುಖವನ್ನು ತೊಳೆದು
ಭಸ್ಮ ಧಾರಣೆಯನ್ನ ಮಾಡಿ
ಗುರು ಕೊಟ್ಟಿದ್ದರಲ್ಲ ಗುರುವಿನ ಲಿಂಗಕ್ಕೆ
ಶಿವಪೂಜೆಯನ್ನ ಮಾಡಿಕೊಂಡು
ಮಾದೇವ ಆಲಂಬಾಡಿ ಸೀಮೆವೊಳಗೆ

ಗುರು ಭಿನ್ನ ಮಾಡ್ತಾ ಕುಂತವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಚಿನ್ನದ ಗಂಟೇಲಿ ನಾದ ಮಾಡ್ಬುಟ್ಟು ಬಿನ್ನಕ್ಕೆ ಕೂತ್ಕಂಡ್ರು
ಜುಂಜಪ್ಪ ಮಲ್ಲಾಜಮ್ಮ ಎದ್ದು ಬರ್ನಿಲ್ಲ
ಮಲಗಿದ್ದ ಜಾಗ್ದಲ್ಲೇ ಕೈಮುಗಿತಾವರೇ
ಮಹದೇವಾ ಮಾಯ್ಕಾರಗಂಡ
ನಮ್ಮ ಮನೆ ಬಿನ್ನಕ್ಕೆ ಬಂದಿಯಲ್ಲಪ್ಪ
ನಮಗೆ ಸಂತೋಷ ಅಂತ್ಹೇಳಿ ಮಲಗಿದ ಜಾಗ್ದಲ್ಲಿ ಕೈಮುಗಿತಾವ್ರೆ
ಮಾದಪ್ಪ ಬಿನ್ನ ಮಾಡ್ಕೊಂಡು
ಆಲಂಬಾಡಿ ಹದಿನಾರು ಸೀಮೆ
ಹಾಲು ಸಾಗರವಾಗಿ ಬಾಳಲಿ
ಇನ್ನು ಹಾಲು ಮಜ್ಜನಕ್ಕೆ ಒಕ್ಕಲಾದ ಜುಂಜಪ್ಪ
ಜುಂಜಪ್ಪ ಇನ್ನೂ ಹಾಲು ಸಾಗರವಾಗಿ ಬಾಳು ಅಂತೇಳುಬಿಟ್ಟು
ನಿನ್ನ ಏಳುಂಡಿ ದನಗಳಾಗಿರ್ತಕ್ಕಂತಾದ್ದು
ಆ ಆಲಂಬಾಡಿ ಸೀಮೆವೊಳುಗೆ ಒಂದು ಜಾನುವಾರು ಬಿಡಬೇದ
ಗಂಡು ಪ್ರಾಣಿಯೇನಾದರೂ ಹುಟ್ಟಿದರೆ ಮಾರ್ಕೊಂಡು ಬಿಡಪ್ಪ
ಹೆಣ್ಣು ದನಗಳಿರಲಿ
ದನಗಳು ಮದ ಮತ್ಸರ ಬಂದಾಗ
ನನ್ನ ಬಸವಣ್ಣನ ಕಡೆ ನಿಂತ್ಕಂಡು
ಆಲಂಬಾಡಿ ಬಸವಣ್ಣ ಅಂತ್ಹೇಳಿ
ಮೂಡಲಾಗಿ ತಿರುಗಿದ್ದ ಬಸವಣ್ಣನ ಈ ಕಡೆಗೆ ತಿರುಗಿಸಿವ್ನಿ
ಸೂರ್ಯ ಚಂದ್ರಾದಿಗಳು ಇರೂವರ್ಗುವೆ
ಆಲಂಬಾಡಿ ಬಸವಣ್ಣ ಅಂತ್ಹೇಳಿ ನಾಮ್ಕರಣ ಮಾಡಿದ್ದೀನಿ
ಆ ಬಸವಣ್ಣನ ನೋಡ್ಬುಟ್ಟು
ಒಂದು ಸಾರಿ ಅಮ್ಮಾ ಅಂತ್ಹೇಳಿ ಕೂಗುದ್ರೆ
ನಿನ್ನ ಏಳುಂಡಿ ಧನೂವೆ ಗರ್ಭಧಾರಣೆಯಾಗ್ತವೆ ಅಂತ್ಹೇಳಿ
ಜುಂಜಪ್ಪನಿಗೆ ಆತೀರ್ವಾದ ಮಾಡ್ಬುಟ್ಟು ಮಾದಪ್ಪ
ಕಡೇ ಬಾಗಿಲಲ್ಲಿ ಬಂದು ಕಂಚಿನ ಗಂಟೇಲಿ ನಾದ ಮಾಡ್ಬುಟ್ಟು

ಅವರು ಧೀರ ಹೊರಟವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಸಾಲೂರು ಮಠದ ಶರಣಾರು ಬರುವಾರೂs
ಗುರುವೇ ಸಡಗರವಲ್ಲ ಮಲೆಯೊಳಗೆ
ಸ್ವಾಲುಗರ ಕೆನ್ವಾಲುಗದಲ್ಲಿ ದೇವರೆದ್ದು ಬಂದ

ಮಾದಪ್ಪ ಏಳು ಮಲೆ ಕೈಲಾಸದಲ್ಲಿ ಏಕವಾಗಿ ಒರಗಿದ್ದಾರೆ
ಆ ವೋಷ್ಟ್ರುಮಯ್ಯ ಪೂಜೆಗೆ ಬಂದ ತಕ್ಷಣೇವೇ
ಸಾಲೂರು ಮಾಠದ ಸ್ವಾಮಿಗಳು ಗುರುಗಳ ಕರ್ಕಂಡು ಬಂದು
ಆವಾಘ ಲಿಂಗಕ್ಕೆ ಏನು ಪೂಜೆ ನೈವೇದ್ಯ ಮಾಡಬೇಕು
ಅದೇ ಪೂಜೆ ನೈವೇದ್ಯ ಹೋಮ ನಿಯಮ
ಅದೇ ಅಭಿಷೇಕ ಮಾಡಿಸ್ಬುಟ್ಟು
ಪೂಜಾರಿ ದಿನಕ್ಕೊಂದ್ಸಾರಿ ಮಾಡ್ಕಂಡು ಆಲಂಬಾಡಿಗೆ ಹೊಯ್ತಾಯಿದ್ದ
ಆವಾಗ ಗುರುಗಳು
ಅಲ್ಲಿರ್ತಕ್ಕಂಥ ಬ್ಯಾಡಗಂಪಣದವರ್ನೆಲ್ಲ ಕರ್ದು
ಗುಂಪು ಸೇರಿಸ್ಕಂಡ್ರು
ಯಾರು ? ನಮ್ಮ ಸಾಲೂರು ಮಠದ ಗುರುಗಳು
ಶಾಂತ ಮಲ್ಲಿಕಾರ್ಜುನ ಸ್ವಾಮಿ
ಇನ್ನು ಮುಂದೆ ನಿಮ್ಮಿಂದಲೇ ಪೂಜೆಯಾಗಬೇಕು
ನಿಮಗೆಲ್ಲ ಲಿಂಗಧಾರಣೇ ಮಾಡ್ತೀನಿ ಅಂತ್ಹೇಳಿ
ಆ ಬೇಡಗಂಪಣದವರಿಗೆಲ್ಲ ಗುರುಗಳು ಲಿಂಗಧಾರಣೇ ಮಾಡಿ
ಈ ಲಿಂಗಕ್ಕೆ ನೀವು ನೂರೊಂದು ಜನ ತಮ್ಮಡಿ ಮಕ್ಕಳು
ದಿನಕ್ಕೊಂದು ಸಾರಿ ಪೂಜೆ ಮಾಡ್ಕೊಂಡು ಹೋಗಬೇಕು
ಮಜ್ಜನ ತಕ್ಕೊಂಡೋಗಬೇಕು
ಆದರೆ ನಾನಿದ್ದೀನಿ
ಯಾವುದಕ್ಕೋಸ್ಕರ ನಾನು ಬರ್ತಾಯಿದ್ದೀನಿ ಅಂತ್ಹೇಳಿ
ಆವಾಗ ಸಾಲೂರು ಮಠದ ಗುರುಗಳು
ನೂರೊಂದು ಜನ ತಮ್ಮಡಿ ಮಕ್ಕಳಿಗೂವೆ
ಬುದ್ಧಿ ಹೇಳ್ಕಂಡು

ಅವರು ಏಳುಮಲೆಯಲ್ಲಿ ಕುಂತವರೇ ಗುರುಗಳೂs || ನೋಡಿ ನಮ್ಮ ಶಿವನಾ ||

ಅಂತರಗಂಗೆ ನೋಡಯ್ಯ
ಮಾದೇವ ಕುಂತಿರುವ ಚೆಂದ ನೋಡು
ಹುಲ್ದಿವಾನ ನೋಡು ಅಯ್ಯನ ಭೋಗಾವಾ ನೋಡೊ

ಆವಾಗಲೀಗ ಮಾಯ್ಕಾರಗಂಡ ಮಾದಪ್ಪ
ಏಳು ಮಲೆವೊಳಗೆ ಕೂತುಕೊಂಡು
ದಿವ್ಸಾ ಇವರ ಪೂಜೆ ನೋಡ್ತಾವರೆ
ಗುರುಗಳು ಒಂದ್ಕಡೆ ಪೂಜೆ ಮಾಡ್ಬುಟ್ಟುಹೋದರೆ
ಈ ಪೂಜಾರಿ ಒಂದ್ಕಡೆ ಪೂಜೆಮಾಡ್ತನೆ
ಮರಾಳೆ ಎಣ್ಣೆ ತಂದು ಮಂಡೆಗೆ ಒತ್ತುತಾವ್ನೆ
ಬೇಡಗಂಪಣದವರು ಹುಚ್ಚೆಳ್ಳೆಣ್ಣೆ ತಂದು ನೆತ್ತಿಗೊತ್ತುತಾಯಿದ್ದಾರೆ
ಆದರೆ ಕಣ್ಣು ಕಾಣುವುದಿಲ್ಲ
ದಿನಾದಿನಾಕೆ ಕಿವಿ ಕೇಳುವುದಿಲ್ಲ
ನನ್ನ ಪುಟ್ಟಲಿಂಗವೆಲ್ಲ ಮಂಕಾಗ್ತಾಯಿದೆ
ಬರಗಣ ಅಕ್ಕಿ ಎಡೆಮಾಡ್ತರೆ
ಬೂದು ಬಾಳೆಹಣ್ಣು ಮುಂದೆ ಮಡುಗ್ತಾರೆ
ನನ್ನ ಗುರೂಪೂಜೆ ಆದ್ಮೇಲೆ ಇವರೊಂದು ಪೂಜೆ ಮಾಡ್ತರೆ
ಈ ಮದನಾಡು ಸೀಮೆವೊಳಗೆ

ನನ್ನ ಮಾದೇವ ಅನ್ನುವವರೇ ಮೊದಲಿಲ್ಲs || ನೋಡಿ ನಮ್ಮ ಶಿವನಾ ||

ಏಳು ಮಲೆ ಮಾದಪ್ಪ ನಿಮಗೆ
ಎತ್ತಿದರು ಮಂಗಳಾರತೀಯಾs ಭೂದೇವಾ
ಎತ್ತಿ ಮೆರೆದರು ಮಾದೇವರ ಗಂಡುಲಿಯಾಮ್ಯಾಲೆ

ಆನೆದಿಂಬದ ಮಲೆಯಂತೆ
ಗುರುವಿಗೆ ಬಳಬಳಸುಬೇಡರ ಗಣವಿ ಮಾದೇವಾ ಮಾದೇವಾ
ಸ್ವಾಮಿ ಎದ್ದು ಬಂದಾs