ಏಳುಮಲೆ ಮಾಯ್ಕಾರಗಂಡ
ಏಗವಾಗಿ ತಪಸ್ಸು ಮಾಡ್ಕಂಡು
ಪ್ರಭುಲಿಂಗವಾಗ್ತಾಯಿದ್ದಾರೆ
ಈ ಕಡೆ ಸಂಸಾರಿ ಸಂಗಪ್ಪ ಗುರುಗಳು
ದಾಸೋಹ ಮಠ ಇಟ್ಕೊಂಡಿದ್ರು
ಅಂತರಗಂಗೆ ಅರಿವಾರದಲ್ಲಿ
ಒಬ್ಬ ಗಂಡ ಸತ್ತ ಮುಂಡೆ ಒಬ್ಬ ಮಗನ ಸಾಕಿದ್ದಳು
ಆ ಮಗ ಅಂದರೆ
ಶೇಷಣ್ಣ ಒಡೆಯ
ಅನ್ನಸಾಲಮ್ಮ ಅಂತ್ಹೇಳಿ
ಅನ್ನಸಾಲಮ್ಮ ಪ್ರಾಣ ಬಿಡುವಾಗ
ಮಾದೇಶ್ವರ ಸ್ವಾಮಿ ಕೈಕೊಟ್ಟನು
ಈ ಮಗನೂ ನಿಮಗ ಕೈವಶವಾಗಲಿ ಗುರುವೇ
ಇವನನ್ನು ಸಾಕಿ ಅಂತ್ಹೇಳಿ
ಆ ಶೇಷಣ್ಣ ಒಡೆಯನ್ನ ಮಾದಪ್ಪನ ಕೈಗೆ ಕೊಟ್ರು
ಮಾದೇಶ್ವರ
ಏಳಪ್ಪ ಶೇಷಣ್ಣ ಒಡೆಯ
ಅಂತರಗಂಗೆ ಅರಿವಾರದಲ್ಲಿ
ನೀನು ಕಾದು ಕುಂತುಕೋ
ನನ್ನ ಸಾವಿರಾರು ಕೋಟಿ ಗಣಂಗಳು ಬಂದವರು
ಒಂದು ತಪ್ಪು ನೆಪ್ಪು ಮಾಡಿದರೆ
ಅವರನ್ನು ಒಳಾ ಹಾಕ್ಕೊಂಡು ಕಾದು ಕೂತಿರು
ಹನ್ನೆರಡು ವರ್ಷಕ್ಕೊಂದ್ಸಾರಿ ನಿನಗೆ ಊಟ
ನನ್ನ ಮೈಸೂರು ಮೇಲ್ನಾಡಿನ ಪರುಸೆ ಬಂದಂಥಾವರು
ನನಗೆ ಕಾಯೊಡೆದು ಕರ್ಪೂರ ಹಸ್ಸಿದರೆ
ನಿನಗೆ ಬಾಳೇಹಣ್ಣು ಸಕ್ಕರೆ ಎಡೆ ಮಾಡ್ತೀನಿ ಅಂದರು
ಆ ಶೇಷಣ್ಣ ಒಡೆಯ
ಮಹಾದೇವಾ ನನಗೆ ಅನ್ನ ಆಹಾರಾದಿ ಇಲ್ವಪ್ಪಾ
ಬರೀ ಬಾಳೇಹಣ್ಣು ಸಕ್ಕರೆ ಕೊಡ್ತೀಯಾ ಅಂದ್ರು
ಹನ್ನೆರಡು ವರ್ಷಕ್ಕೊಂದ್ಸಾರಿ
ನನ್ನ ತಮ್ಮಡಿ ಮಕ್ಕಳು ಬೇಡಗಂಪಣದವರು
ನಿನಗೆ ಎಡೇ ಮಾಡ್ತಾರೆ ಯಾವ ರೀತಿಯಾಗೆ ಅಂದರೆ
ಹನ್ನೆರಡು ಗಂಟೆ ರಾತ್ರಿವೊಳಗೆ
ಹುಟ್ಟಿದ ನಿರ್ವಾಣದಲ್ಲಿ
ಆಳಿಗೆ ಮಡಿಕೊಂಡು ಅಡಿಗೆ ಮಾಡುವಾಗ
ಎಲ್ಲಾ ಸಾಮಗ್ರಿಯನ್ನು ಒಂದೇ ಆಳಿಗೆಯಲ್ಲಿ ಹಾಕಬೇಕು
ಅವನು ಸೌಟು ತಕ್ಕೊಂಡು ಅಡಿಗೆ ಮಾಡುವ ಹಾಗಿಲ್ಲ
ಅವನು ಕೈನಲ್ಲಿ ಅಡಿಗೆ ಮಾಡಬೇಕು
ಅಡಿಗೆ ಮಾಡುವಂತ ಪೂಜಾರಿಗೆ
ಮೈನ ವ್ರಾಮದಲ್ಲಿ ಅಂಗಾಂಗದಲ್ಲಿ
ಒಂದು ಕೂದಲಿರಬಾರದು
ಆ ರೀತಿಯಾಗಿ ಹನ್ನೆರಡುಗಂಟೆ ರಾತ್ರಿವೊಳಗೆ ಅಡಿಗೆಯನ್ನು ಮಾಡಿ
ನಿನಗೆ ಎಡೆಬಡಿಸುಬಿಟ್ಟು ಹೊಯ್ತಾನೆ ಪೂಜಾರಿ
ನೀನು ಒಬ್ನೇ ಊಟ ಮಾಡಬ್ಯಾಡ
ಈ ಏಳು ಮಲೆವೊಳಗೆ
ಯಾವ ಕಾಡುಮೃಗ ಜಾತಿಯಿದೆ
ಹಲ್ಲಿ ಆವ್ರಾಣಿ ಗೊದ್ದ ಗೋಸುಂಬಿ
ಹಾವು ಚೇಳು ಹುಲಿ ಸಿಂಹ ಶರಭ
ಎಲ್ಲಾ ಬಂದು ನಿನ್ನ ಜೊತೇಲಿ ಊಟ ಮಾಡ್ಬೇಕು
ಆ ರೀತಿಯಾಗಿ ಹನ್ನರಡು ವರ್ಷಕೊಂದ್ಸಾರಿ ಅಂತೇಳಿ
ಆ ಶೇಷಣ್ಣ ಒಡೆಯರ ಅಂತರಂಗಂಗೆ ಅರಿವಾರದಲ್ಲಿ
ನಿಲ್ಲಿಸ್ಕಂಡ್ರು ಮಾದಪ್ಪ
ಆವಾಗ ಬೇಡಗಂಪಣದ ಮನೆವೊಳುಗೆ
ಬೇಡರ ಕಣ್ಣಪ್ಪ ಇದ್ನಲ್ಲ
ಬೆನ್ನಿಂದೆ ನಿಲ್ಲಿಸ್ಕಂಡ್ರು
ಕಂದಾ ನನ್ನ ಬೆನ್ನಿಂದೆ ಇರು ಯಾವಾಗು ಅಂತೇಳಿ ಮಹದೇವಾ
ಆ ಸಾಲೂರು ಮಠದೊಳಗೆ
ಸಂಸಾರಿ ಸಂಗಪ್ಪ
ಶಾಂತಮಲ್ಲಿಕಾರ್ಜುನ ಸ್ವಾಮಿ ಗುರುಮಠದಲ್ಲಿ ಇರ್ಸುಬುಟ್ರು
ಆವಾಗ ಮಾದೇವ
ನಾನು ಬಸಿಲಲ್ಲಿ ಒಣಗಬೇಕು
ಮಳೇಲಿ ನೆನೆಯಬೇಕು
ಈ ಬೇಡುಗಂಪಣದವರಿಂದ ಸಾಧ್ಯವಿಲ್ಲ ಅಂತೇಳಿ

ಅವರು ನಾಲ್ಕು ರಾಜ್ಯ ನೋಡವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಈ ಕೊಂಗು ಜನ ಕ್ವಾತ್ ಜನ್ದಲ್ಲಿ
ಈ ಕುಂಪಣೀ ರಾಜ್ಯದಲ್ಲಿ
ನಾನು ಸರಕಾರದವನಿಂದ
ಗುಡೋ ಗೋಪುರ ಕಟ್ಟಿಸ್ಕಂಡ್ರೆ
ಸರಕಾರದವನ ಕೈವಶವಾಗ್ಬುಡ್ತೀನಿ
ಗಂಡ ಹೆಂಡಿರು ನಿಜ ಒಂದಾಗಿರಬೇಕು
ಅಂಥಾ ಭಕ್ತರನ್ನ ಹಿಡಿದು
ನಾನು ನೆರಳು ಮಾಡ್ಕೊಳ್ಳಬೇಕು
ಪೂಜೆ ಮಾಡುವುದಕೆ ಒಬ್ಬ ಪೂಜಾರಿ ನೇಮಿಸಿಕೊಳ್ಳಬೇಕು ಅಂತ್ಹೇಳಿ
ನಾಲ್ಕು ರಾಜ್ಯವನ್ನೆಲ್ಲ ನೋಡುದ್ರು
ಯಾವ ರಾಜ್ಯದಲ್ಲಿ ಅವರಿಗೆ ತಕ್ಕಂಥ ಭಕ್ತರಿಲ್ಲ
ಬಡಗಲಾಗಿ ತಿರುಗಿ ನೋಡಿದ್ದಾರೆ
ಬಡಗಲಾಗಿ ಅಂದರೆ ಆಲಂಬಾಡಿ ಹದಿನಾರು ಸೀಮೆವೊಳಗೆ
ಹನ್ನೆರಡು ಜನ ಹಾಲುಮತಸ್ಥರಿದ್ದರು
ಹಾಲಪ್ಪಗೌಡ ಬ್ಯಾಲಪ್ಪಗೌಡ
ಡೊಳ್ಳೊಟ್ಟೆ ಜುಂಜೇಗೌಡ
ಚಿಕ್ಕಕೊಂಡ ಮರಿಕೊಂಡ ದೊಡ್ಡಕೊಂಡ ಅಂತೇಳಿ
ಇದರೊಳಗೆ ಕರಿಯವನಾಗಿರ್ತಕ್ಕಂಥವನು
ಡೊಳ್ಳೊಟ್ಟೆ ಜುಂಜಪ್ಪ
ಹೆಂಡತಿ ಮಲ್ಲಾಜಮ್ಮ
ಸತಿಪತಿ ಭಕ್ತವಂತರು
ಗಂಡರ ಮಾತು ಹೆಂಡಿರು ಮೀರುವ ಹಾಗಿಲ್ಲ
ಹೆಂಡತಿ ಮಾತು ಗಂಡ ಮೀರುವ ಹಾಗಿಲ್ಲ
ಅಂಥಾವರು
ಆರುಜನ ಗಂಡು ಮಕ್ಕಳಿದ್ದಾರೆ
ಅನ್ನಕ್ಕೆ ಆರುಬಟ್ಟೆಯಾಗಿ ಚಿನ್ನಕ್ಕೆ ಮೂರು ಬಟ್ಟೆಯಾಗಿದ್ರು
ಯಾತಕ್ಕೋಸ್ಕರ ಅಂದ್ರೆ
ಕ್ಷಾಮಗಾಲ ಬಂದು ಬರದಂಥ ಕುಳ
ಆವಾಗ ಮಹದೇವಾ
ಇವರಿಗೆ ಐಶ್ವರ್ಯ ಭಾಗ್ಯಕೊಟ್ಟು
ನನಗೆ ಒಕ್ಕಲು ಪಡೀಬೇಕಂತೇಳಿ

ಅಲಂಬಾಡಿಗೆ ದೃಷ್ಟಿ ಮಡಗದವರೇ ಮಾದೇವಾs || ನೋಡಿ ನಮ್ಮ ಶಿವನಾsss ||

ಆಲಂಬಾಡಿಗೆ ದೃಷ್ಟಿ ಮಡಗಿ
ಅರಗಣ್ಣ ಕಿರುಗಣ್ಣ ಬಿಟು ಐಶ್ವರ್ಯ ಕೊಟ್ಟಿದ್ದಾರೆ
ಹನ್ನೆರಡು ಜನ ಹಾಲುಮತಸ್ಥರು
ಬಾಳ ಪುಣ್ಣವಂತರಾದರು
ಮಾದೇಶ್ವರನ ದಯದಿಂದ
ಆದರೆ ಅವರು ಪಟ್ಟದ ರಂಗಸ್ವಾಮಿ ಒಕ್ಕಲು
ಎಲ್ಲಾ ಹನ್ನೆರಡು ಜನ ಹಾಲುಮತಸ್ಥರೂವೆ
ಐಶ್ವರ್ಯವಂತರಾದರು
ಡೊಳ್ಳೊಟ್ಟ ಜುಂಜಪ್ಪ
ಹೆಂಡ್ತಿ ಮಲ್ಲಾಜಮ್ಮ
ಆರು ಜನ ಗಂಡಮಕ್ಕಳ ಕಟ್ಕೊಂಡು
ಆರು ಜನ ಜೀತಗಾರರ ಕಟ್ಟಕೊಂಡ್ರು
ಏಳೂರು ಗೊಲ್ಲರ ಪೋಡು ಇಟ್ಕೊಂಡ್ರು
ಏಳುಂಡಿ ದನ ಏಳುಂಡಿ ಕುರಿ ಇಟಗೊಂಡು

ಜುಂಜಪ್ಪ ಬಳಾದ ಐಶ್ವರ್ಯದಲ್ಲವರೇ ಜುಂಜಯ್ಯs || ನೋಡಿ ನಮ್ಮ ಶಿವನಾs ||

ಮಹದೇವಾ
ಜುಂಜಪ್ಪನ ದುದ ಭಕ್ತಿ ನೋಡಿ
ಜುಂಜಪ್ಪನಿಂದ ನಾನು ಗುಡಿಗೋಪುರ ಕಟ್ಟಿಸಿಕೊಳ್ಳಬೇಕಂತೇಳಿ
ಕಾರ್ತಿಕ ಸೋಮವಾರ ತುಂಬಿದ ಸೋಮವಾರ
ಸ್ನಾನ ಮಡಿಯನ್ನು ಮಾಡಿ
ಹೋಮ ನೇಮ ಮಾಡಿ
ಗುರು ಕೊಟ್ಟಂಥ ಗುರುವಿನ ಲಿಂಗ ಶಿವಪೂಜೆ ಮಾಡ್ಕಂಡು
ಎಳಗಾವಿ ಎಳೆದ್ದೊದ್ದು ಸುಳಿಗಾವಿ ಮುಸುಕಿಟ್ಕೊಂಡು
ಮುತ್ತಿನ ಜೋಳಿಗೆ ಮುಂಗೈಲಿ ಧರಿಸ್ಕೊಂಡು
ಕಂಚಿನ ಕಂಸಾಳೆ ಕೈಗಾಧಾರ ಮಾಡಿಕೊಂಡು

ಅವರು ಆಲಂಬಾಡಿ ಬಿನ್ನಕ್ಕೆ ಹೊರವರೇ ಮಹದೇವಾs || ನೋಡಿ ನಮ್ಮ ಶಿವನಾs ||

ಆಲಂಬಾಡಿ ಬಿನ್ನಕ್ಕೆ ಬಂದರು ಆಲಂಬಾಡಿ ಸೀಮೆಗೆ
ಮೊದಲಾಗ್ಹೋಗಿ ನಾನು ಊರಲ್ಲಿ ಭಿಕ್ಷೆ ಕೇಳಬಾರದು
ಕೊಟಾರದಲ್ಲಿ ಜುಂಜಪ್ಪ
ಹನ್ನೆರಡು ಕಂಡುಗ ಹಸೀ ಕಡಲೆ
ಒಕ್ಕಣೆ ಮಾಡಿ ರಾಶಿ ಹಾಕ್ಕೊಂಡು ಕಾದು ಕೂತವರೆ
ಅಟ್ನೆ ಗುಡ್ಲೂಳಗೆ
ಆವಾಗ ಮಾದೇವ
ಕೊಟಾರದಲ್ಲಿ ಜುಂಜಪ್ಪನ ದುಡ ನೋಡ ಬೇಕಂತ್ಹೇಳಿ
ಆ ಭಕ್ತರ ಕೊಟಾರವನ್ನು ಮೂರು ಪದ್ರದಕ್ಷಿಣೆ ಬಂದು
ಈಶಾನ್ಯ ಭಾಗದಲ್ಲಿ ನಿಂತುಕೊಂಡು
ಲಿಂಗದ ಮೊರ್ತ ಜಂಗಿನ ಶಬ್ಧ ಮಾಡಿ
ಹರಹರಾ ಹರನ ಭಿಕ್ಷ ಗುರುಧರ್ಮ ಕ್ವಾರಣ್ಯದ ಭಿಕ್ಷ
ಯತಿಗಳ ಮುನಿಗಳ ಭಿಕ್ಷ
ತಂದೆ ಕಲ್ಯಾಣದವರ ಭಿಕ್ಷ
ತಾಯಿ ಉತ್ರಾಜಮ್ಮನ ಭಿಕ್ಷ
ಜ್ಯೋತಿ ಲಿಂಗಯ್ಯನ ಭಿಕ್ಷ
ಜೋಳಿಗೆ ಹಿಡಿದಾತ್ಮನ ಭಿಕ್ಷ
ನಾಲ್ಕು ಪದದ ಜೋಳಿಗೆ ಭಿಕ್ಷ
ನಾಲ್ಕು ಬೆತ್ತದ ಭಿಕ್ಷ ಅಂತ್ಹೇಳಿ

ಅವರು ಪಂಚೇಳಕ್ಷರ ಕೂಗವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಯಾವಾಗ ಭಿಕ್ಷೋ ಭಿಕ್ಷೋ ಅಂತ್ಹೇಳಿ ಕೂಗುದ್ರೋ
ಭವತಿ ಭಿಕ್ಷಾಂದೇಹಿ ಅಂತ್ಹೇಳಿ ಸಾರುದ್ರು
ಜೋರಾಗಿ ಭಿಕ್ಷ ಸಾರುದ್ರು
ಜುಂಜಪ್ಪ ಅಟ್ನೆ ಗುಡ್ನಲ್ಲಿ ನಿದ್ದೆ ಮಾಡ್ತ ಮನಗಿದ್ರು
ಭಿಕ್ಷೆ ಎನ್ನುವಂಥ ಶಬ್ಧ ಕೇಳಿಬುಡ್ತು
ಬಲದ ಮೊಗ್ಗಲಾಗಿ ಎದ್ದು ನೋಡುದ್ರು
ಸೂರ್ಯ ಉದಯವಾಗ್ತಾ ಅವ್ನೆ
ಓ ಯಾರಪ್ಪ ಕಾವಿ ಬಟ್ಟೆ ಜಂಗುಮರು ಬಂದವರೆ
ಹಿಂದೆ ನಮ್ಮ ತಾತಂದಿರು ಮುತ್ತಾತಂದಿರು ಹೇಳ್ತಾಯಿದ್ರು
ಹತ್ತು ಜನಕ್ಕೆ ಊಟಹಾಕಿ ಸೈ ಅನ್ನಿಸುವುದಕ್ಕಿಂತ
ಒಬ್ಬ ಅಯ್ಯನಿಗೆ ಇಕ್ಕುಬುಡಪ್ಪ ಮಗನೆ ಅಂತೇಳಿ ಹೇಳ್ತಾಯಿದ್ರು
ಅದೇ ರೀತಿಯಾಗಿ ಒಬ್ಬ ಕಾವಿ ಬಟ್ಟೆ ಜಂಜುಮರು ಬಂದವಾರೆ
ಆದರೆ ನಾನಿನ್ನೂ ಕೂಡ ಮೇಟಿ ದೇವ್ರ ಪೂಜೆಮಾಡ್ಲಿಲ್ಲ
ಕಳದಲ್ಲಿ ಹೆಚ್ಚು ಮಾಡ್ನಿಲ್ಲ
ದೇವಕೊಳಗಕ್ಕೆ ದಿನಸಿ ಮಡಾಲಿಲ್ವಲ್ಲ
ಆದರೆ ನಮ್ಮ ಮನೆದೇವ್ರು ಕುಲದೇವ್ರಿಗೆ
ಕೊಳಗದಲ್ಲಿ ಅಳೆದು ಮಡಗಬೇಕು
ಈ ಜಂಗಮಯ್ಯನಿಗೆ ಏನು ನಾನು ಕೊಳಗದಲ್ಲಿ ಅಳೆಯುವಂಗಿಲ್ಲ
ನನ್ನ ಕೈ ಸಿಕ್ಕಿದಷ್ಟು ದಾನು ಕೊಟ್ಟುಬುಡುವಾ ಅಂತ್ಹೇಳಿ
ಅಟ್ನೆ ಗುಡ್ಲಿಂದ ಇಳಿದು ಬಂದು ಜುಂಜಪ್ಪ
ರಾಶಿಯ ಮುಂದೆ ನಿಂತ್ಕಂಡು ಕೊಳಗ ಇಟ್ಟುಕೊಂಡು
ರಾಶಿಗೆ ನಮಸ್ಕಾರ ಮಾಡಿ
ಮೂರು ಬಕರೆ ಹಸೀಕಡ್ಲೆ ತುಂಬಿಕೊಂಡು ಬಂದು

ಅವರು ದಾನ ಕೊಡುತಾವರೇ ಜುಂಜಯ್ಯs || ನೋಡಿ ನಮ್ಮ ಶಿವನಾ ||

ಮಲಿಯಲಿ ಮಾದೇವ ಬರುವ ಚೆಂದಾವಾs || ನೋಡಿ ನಮ್ಮ ಶಿವನಾ ||

ಆವಾಗಲೀಗ ದುಡುವುಳ್ಳ ಜುಂಜಪ್ಪನವರು
ದಾನವನ್ನೇ ಕೊಟ್ಟುಬುಟ್ಟು
ಆವಾಗಲೀಗ ನಮಸ್ಕಾರ‍ವನ್ನ ಮಾಡುದ್ರು
ಜುಂಜಪ್ಪ ಕೊಟ್ಟಂಥ ದಾನ ತಕ್ಕಂಡ್ರು ಮಾದಪ್ಪ
ಅಯ್ಯಾ ಜುಂಜಯ್ಯ ನಿನ್ನ ಭಕ್ತಿ ದುಡಕ್ಕೆ ನಾನು ಮೆಚ್ಕೊಂಡೆ
ಒಂದು ಮಾತು ಕೇಳ್ತೀನಿ ನಡೆಸಿಕೊಟ್ಟಿಯಪ್ಪ ಅಂದ್ರು
ಏನಪ್ಪ ಜಂಗುಮರೆ ಅಂದ್ರು
ಏನೂ ಇಲ್ಲ ಜುಂಜಪ್ಪ
ನಿನಗೆ ಭಾಗ್ಯ ಕೊಟ್ಟಂಥ ಶಿವನು
ಏಳು ಮಲೆ ಕೈಲಾಸದಲ್ಲಿ ಬಿಸ್ಲಲ್ಲಿ ಒಣಗ್ತಾಯಿದ್ದಾನೆ
ಮಳೆಯಲ್ಲಿ ನೆನಿತಾಯಿದ್ದಾನೆ ಕಾಣಪ್ಪ
ಅವನಿಗೆ ಒಂದು ಅಂಕಣ ಕಲ್ಲಿನ ದೇವಸ್ಥಾನ ಕಟ್ಟಿಸಿ
ಮುಟ್ಟಿ ಪೂಜೆ ಮಾಡುವುದಕ್ಕೆ ಪೂಜಾರಿ ನೇಮಿಸಿಬುಟ್ರೆ

ನಿನಗೆ ಮತ್ತಷ್ಟು ಭಾಗ್ಯ ಕೊಡುವನು ಮಹದೇವಾs || ನೋಡಿ ನಮ್ಮ ಶಿವನಾ

ಏನಪ್ಪಾ ಜಂಗುಮ ದೇವರೇ
ಎಂಥಾ ಮಾತು ಕೇಳ್ತಾಯಿದ್ದೀರಿ
ತಿಳಿದು ಉಣ್ಣುವುದಕ್ಕೆ ಬಂದಂಥ ಜಂಗಮ
ಹಿರಿ ಹೆಂಡ್ತಿ ಕೇಳಿದಪ್ಪಂದವಾಯ್ತು
ಇವರು ಭಿಕ್ಷಕ್ಕೆ ಬಂದ್ರು ಅಂತ್ಹೇಳಿ
ದಾನು ಕೊಟ್ಟಿದ್ದೀನಿ
ನೀವು ಬಂದಾರಿ ನೋಡಪ್ಪ
ಅಂಥ ಕಾಡ್ನಲ್ಲಿರುವಂಥ ಹಟಮುನಿ ಜಟಮುನಿ
ಕಾಳಮುಕ ಸನ್ಯಾಸಿಗಳಿಗೆ
ಒಂದೊಂದಂಕಣ ದೇವಸ್ಥಾನ ಕಟ್ಟಿಸ್ಕೊಂಡು ಬತ್ತೀನಂದ್ರೆ
ನನ್ನ ಹೆಂಡತಿ ಮಲ್ಲಾಜಮ್ಮನ ಕಗ್ನಲ್ಲಿರುವಂಥಾ
ಮಾಂಗಲ್ಯವೂ ಎಟುಕುವುದಿಲ್ಲ

ನೀನು ಕಡದೋಗಯ್ಯ ಕಾಡ ಪರದೇಶಿs || ನೋಡಿ ನಮ್ಮ ಶಿವನಾs ||

ಮಲೆಗಳ ನೋಡಯ್ಯ
ಮಾದೇವ ಹೊನ್ನೆಗಿಡಗಳ ನೋಡಯ್ಯ
ಮಲೆಯಲ್ಲಿರುವ ಮಾದೇವ ನಿಮ್ಮ ಐಭೋಗ ನೋಡಯ್ಯ

ಆವಾಗಲೀಗ
ಮಾಯ್ಕಾರಗಂಡ ಮಾದಪ್ಪ
ಇವನು ಒಳ್ಳೆ ಮಾತನಲ್ಲಿ ಕೇಳುವುದಿಲ್ಲ ಜುಂಜಪ್ಪ
ಇವನೀಗೇನಾದರೂ ಸೂಕ್ಷ್ಮವನ್ನ ಕೊಟ್ಟು
ಕಷ್ಟ ಕೊಟ್ಟು ನಾನು ಒಕ್ಕಲು ಮಾಡಿಕೊಳ್ಳಬೇಕು ಅಂತೇಳಿ
ಮಾದೇವ ಕೊಟಾರವನ್ನ ಬಿಟ್ಟು

ಅವರು ಆಲಂಬಾಡಿ ಬೀದಿವೊಳುಗೆ ಬರುತಾವರೇ ಮಾದೇವಾs || ನೋಡಿ ನಮ್ಮ ಶಿವನಾ ||

ಆಲಂಬಾಡಿ ಬೀದಿವೊಳುಗೆ ಬಂದು ನಮ್ಮಪ್ಪಾಜಿಯವರು
ಆಲಂಬಾಡಿ ಸೀಮೆ ಐಭೋಗ ನೋಡ್ತಾವರೇ
ಜುಂಜಪ್ಪ ಏಳನೂರು ಗೊಲ್ಲರ ಪೋಡು ಕಟ್ಟಿದ್ದಾನೆ
ಏಳುಂಡಿ ದನ ಏಳುಂಡಿ ಕುರಿ
ಏಳುಜನ ಜೀತಗಾರರ ಇಟ್ಕೊಂಡು
ಆರು ಜನ ಗಂಡುಮಕ್ಕಳ ಇಟ್ಕೊಂಡು
ಬಾಳ ಐಶ್ವರ್ಯದಲ್ಲಿ ಬಾಳ್ತಾಯಿದ್ರು
ಏಳುಂಡಿ ದನಿನೊಳಗೆ
ಹಿಂಡೆಗೆ ಮೀಲಾಗಿರ್ತಕ್ಕಂಥ ಜಲಗೊಂಬಿನ ಬಸವಣ್ಣ
ಕರುವನ್ನ ಹಾಕಿ ಹನ್ನೆರಡು ದಿನವಾಗಿದೆ
ಆರು ಸೇರು ಹಾಲು ಕರೀವಂತ ಬಸವಣ್ಣನಿಗೆ
ಮಾದಪ್ಪ ಮುತ್ತಿನ ಜೋಳಿಗೆಯಿಂದ
ಏಳು ಮಲೆ ಈಭೂತಿಯನ್ನು ತೆಗೆದು ಅಂಗೈಮೇಲಿಟ್ಕೊಂಡು
ನಮ್ಮಪ್ಪ ಶಿವಪ್ಪ
ನನಗೆ ವಿದ್ಯಾಬುದ್ಧಿ ಕಲಿಸಿದಂಥ ಶಾಂತಮಲ್ಲಿಕಾರ್ಜುನ ಸ್ವಾಮಿ
ನಿಮ್ಮ ಗುರು ದಯವಿರಲಿ ಅಂತ್ಹೇಳಿ

ಮಾಯಾದ ಬಸ್ಮ ಪಿಡಿದವರೇ ಮಹದೇವಾs || ನೋಡಿ ನಮ್ಮ ಶಿವನಾ ||

ಯಾವಾಗ ಬಸವಣ್ಣನ ಮೇಲೆ ಮಾಯದ ಬಸ್ಮ ಪಿಡಿದುಬುಟ್ರೋ
ಏಳುಮಲೆ ಕೈಲಾಸಕ್ಕೆ ಹೊರಟೋದ್ರು ಮಾದಪ್ಪ
ಏಳುಮಲೆ ಕೈಲಾಸದಲ್ಲೋಗಿ
ಆ ಸೀಗೆ ಸಿರುಗಂಧ ಕೆಮ್ಮಚ್ಚಿ ಬಾಡು ಬಾಕುನ ಗುತ್ತಿವೊಳುಗೆ
ತಪಸ್ಸು ಮಾಡ್ತಾ ಕುಳ್ತಿದ್ದಾರೆ ಹೊನ್ನುತ್ತದಲ್ಲಿ
ಆವಾಗಲೀಗ ಜುಂಜಪ್ಪನ ಏಳುಜನ ಜೀತಗಾರ‍ರೂವೆ
ಮಲ್ಲಾಜಮ್ಮ ಒಂದು ಕಡೆಯಿಂದ ಕರುವನ್ನು ಬಿಟ್ಟು
ಹಾಲನ್ನು ಕರಕೊಂಡ್ರು
ಏಳುಜನ ಜೀತಗಾರರೂ ಬೀಸುಮಚ್ಚು ಗಂಡುಗೊಡಲಿ
ಎದೆಮ್ಯಾಲಿಟ್ಕೊಂಡು
ಏಳುಂಡಿ ದನವನ್ನು ಬಿಟ್ಕೊಂಡು

ಅವರು ಮೂಡಾಲ ಗಿರುವಿಗೆ ಬರುತಾವ್ರೆ ಆಳುಗಳೂs || ನೋಡಿ ನಮ್ಮ ಶಿವನಾ ||

ಊರನ್ನೇ ಬಿಟ್ಟು ಊರಿನ ರಾಡುಬಾಗಿಲಿಗೆ ಬಂದು
ಬಸವಣ್ನ ಏಳುಂಡಿ ದನ
ರಾಡುಬಾಗಿಲಿಗೆ ಬರೂವರ್ಗೂವೆ ಸುಮ್ಮನೆ ಮಲಗಿದ್ದೊ
ಕಾಡಿನ ತಾಕೆ ಬಂದ ತಕ್ಷಣ
ಅ ಜಲಗೊಂಬಿನ ಬಸವಣ್ಣ
ಎರಡು ಕಿವಿ ನೆಟ್ಟಗೆ ಮಾಡ್ದ
ಬಾಲವನ್ನ ಎತ್ತಿ ಬೆನ್ನಮ್ಯಾಲೆ ಇಟ್ಕೊಂಡು

ಅವರು ಏಳು ಮಲೆಗೆ ಬರುತಾವರೇ ಬಸವಣ್ಣಾs || ನೋಡಿ ನಮ್ಮ ಶಿವನಾ ||

ಏಳು ಮಲೆ ಕೈಲಾಸಕ್ಕೆ ಬಸವಣ್ಣ ಬರ್ತಾಯಿದ್ರೆ
ಬಸವಣ್ಣನ ರಭಸಕ್ಕೆ
ನನ್ನಪ್ಪಾಜಿ ಮಹದೇವ ತಪಸ್ಸು ಮಾಡುವಂಥ
ಸೀಗೆ ಸಿರುಗಂಧ ಕೆಮ್ಮಚ್ಚಿ ಬಾಡು ಬಾಕುಲ ಒತ್ತೆ
ಆ ಮುಳ್ಳಿನ ಗುಂಪಾಗಿರ್ತಕ್ಕಂಥಾದ್ದು
ಎರಡು ಭಾಗವಾಗಿ ದಾರಿ ಬಿಟ್ಬುಡ್ತು
ಬಸವಣ್ಣ ಓಡಿಬಂದು
ಎದೆ ಭಾರ ಜಾಸ್ತಿಯಾಗ್ಬುಡ್ರು
ನಾಲ್ಕು ದಿಕ್ಕಿಗೆ ನಾಲ್ಕು ಪಾದವನ್ನು ಮಡಗಿ

ಆವರು ಹಾಲು ಮಜ್ಜನ ಮಾಡ್ತಾ ನಿಂತವರೇ ಬಸವಣ್ಣಾ
ಹಾಲು ಮಜ್ಜನ ಹರನೀಗೇs
ಮಾದೇವ ಎಳನೀರು ಮಜ್ಜನ ಶಿವನೇಗೆs
ಎನ್ನೊಡೆಯಾ ಮಾದಪ್ಪ ನಿಮಗೆ ಎಣ್ಣೇಲಿ ಮಜ್ಜನಾವೋ

ಆರುಸೇರು ಹಾಲಿನ ಮಜ್ಜನ ಮಾಡ್ಬುಟ್ಟು
ಬಸವಣ್ಣ ಹೊರಗಡೆ ಹೋಗಿ ದನಿನ ಗುಂಪು ಸೇರ್ಕಂಡ
ಆ ಮುಳ್ಳಿನ ಗುಂಪಾಗಿರ್ತಕ್ಕಂಥದ್ದು ಅದೇ ದಾರಿಯಾಗಿ
ದಾರಿ ಮುಚ್ಚಿಕೊಂಡುಬುಡ್ತು
ದನಿನ ಗುಂಪಿನಲ್ಲಿ ಬಸವಣ್ಣ ಮೆಯ್ಕೊಂಡ
ಏಳು ಜನ ಜೀತಗಾರರು ನಿಂತ್ಕಂಡು
ಗುಡ್ಡದ ಮೇಳೆ ದನವನ್ನ ಕೂಗ್ಬುಟ್ಟು
ಹಿಂದೆ ಗೊಲ್ಲಗೌಡ ಕೂಗ್ತಾಯಿದ್ನಲ್ಲ ಹಂಗೆ ಕೂಗ್ತರೆ
ಆ ಕಾಲ್ದಲ್ಲಿ ಹುಂಡಿ ದನವ
ಯಾರೂ ಕೂಡ ಹೋಗಿ ಅಟ್ಟಾಬೆಟ್ದಲ್ಲ ಹೊಡಕೊಂಡು ಬರುವುದಿಲ್ಲ
ಗುಡ್ಡೇ ಮೇಲೆ ನಿಂತ್ಕಂಡು ಕೂಗ್ಬುಟ್ಟು
ಏಳುಂಡಿ ದನಗಳು ಸರಾಸರನೆ ಒಂತಕ್ಕೆ ಸೇರ್ಕೊಂಡೊ
ಏಳುಂಡಿ ದನ ಹೊಡ್ಕಂಡು

ಅವರು ಆಲಂಬಾಡಿಗೆ ಬರುತವರೇ ಬಸವಣ್ಣಾs || ನೋಡಿ ನಮ್ಮ ಶಿವನಾ ||