ಮೊದಲೇ ನಿಮ್ಮ ಪಾದವ ನೆನೆವೆನು
ಮತಿಗಳ ಕರುಣಿಸು ಮಾದೇವ
ಯತಿಗಣ ಪ್ರಾಸನ್ನರಿಯೆನು ನಾನು
ದೃಢ ಮೋಕ್ಷ ಕೊಡು ಗುರುದೇವ

ಮಂಗಳ ಮೈಮ ಲಿಂಗದ ರೂಪು
ಸಂಗಾಮೇಶ್ವರ ಮಾದೇವ
ಶಿವಾನುಶಂಕರ ಮಹದೇವಾ
ಲಿಂಗದ ವರಗಳ ಕರುಣಿಸು ಗುರುವೆ
ಜಂಗುಮರಾ ಪ್ರಿಯ ಮಾದೇವಾ

ವಿದ್ಯೆ ಕಲಿಸಿದ ಗುರುವಿನ ಪಾದಕೆ
ಬಿದ್ದು ಬೇಡುತ ಪಾಡುವೆವು
ಇದ್ದುದು ಮತಿಯ ಕರುಣಿಸು ಗುರುವೆ
ಮುದ್ದು ಮಾದೇವ ವರದಿಂದ || ಮಂಗಳ ಮೈಮ ||

ಗುರುವಿಗೆ ಒಂದು ಶರಣಾರ್ತಿ
ಗುರು ಭಕ್ತರಿಗೊಂದು ಶರಣಾರ್ತಿ
ಎನಗೆ ಲಿಂಗಧಾರಣೆ ಮಾಡಿದ ಗುರುವಿನ
ಪಾದಕೆ ಒಂದು ಶರಣಾರ್ತಿ || ಮಂಗಳ ಮೈಮ ||

ಗುರುವೇ ಮಾದೇವನೆಂಬ ನಾಮವ ಧರಿಸಿ
ಬಂದರು ಮರ್ತ್ಯ ಲೋಕಕೆ
ಮೂಡಲ ಮಲೆಯ ಮಹದೇವ
ನಾಗು ಮಲೆಯ ಶಿವಶರಣ
ಮರ್ತ್ಯರ ಮನೆಯ ಮುರಿಯುವರ್ಯಾರೋ
ಕಾರಯ್ಯ ಬಿಲ್ಲಯ್ಯ ಘನಶರಣ || ಮಂಗಳ ಮೈಮ ||

ಸತ್ಯವಂತರ ಮನೆಯ ಒಳುಗೆ ಎತ್ತುವೆ ನಿಮ್ಮ ಶಿವನುಡಿಯ
ಹೇಳುವೆವು ನಿಮ್ಮ ಶಿವನುಡಿಯ
ಎತ್ತಿದಾರು ಮಾದೇವರ ಗಂಡುಲಿಯಾ ಮೇಲೆ || ಮಂಗಳ ಮೈಮ ||

ಒಂದನು ಅರಿಯದ ಕಂದನು ಪೇಳುವೆ
ಚೆಂದದಿ ಕೇಳಿರಿ ಶಿವನುಡಿಯ
ಕುಂದು ಕೋವಿದ್ದರೆ ಮನ್ನಿಸಿ ಮಾನ್ಯರೆ
ಸಣ್ಣ ಬಾಲರ ವಾಕ್ಯಗಳ || ಮಂಗಳ ಮೈಮ ||

ಲಿಂಗೈಯನವರ ಮಠದೊಳಗೆ
ಎಂಬೈನೂರ ಜಂಗುಮರು
ಈಬೂತಿ ಬಸುಮಾಂಗ ಮಾಡಿ
ಇದ್ದುದು ಕುಂತೂರು ಮಠದೊಳಗೆ || ಮಂಗಳ ಮೈಮ ||

** *

ಸರಸ್ವತಿಯೇ ಶಾರದಾಂಬೆ
ಪರಸ್ಥಳಕೆ ನಾಗಮ್ಮ
ಕಲಕಂಠಿ ಸ್ವರನ ಪಾರ್ವತಿಯ ಕುಮಾರಾ
ದೇವಾ

ಪಾರ್ವತಿಯ ಕುಮಾರ
ವರಗೌರೀ ಗುರುಪುತ್ರ
ಕೂಸುಳ್ಳ ಗಣಪತಿಯೇ ಕೊಡು ಮತಿಯಾ
ಗಣರಾಜಾ
ದೇವಾ

ಆರೆಲೆ ಮಾವಿನ ತಾಳಿನಲ್ಲಾಡವರೆ
ತಾಳ-ತಂಬುರದ ಗತ್ತುಗೆ ನಲಿಯುವರೇ
ಅಮ್ಮಯ್ಯಾs ತಾಯಮ್ಮಾs
ತಾಳ ತುಂಬುರದ ಗತ್ತುಗೆ ನಲಿಯವರೆ ಸಾರದಾಂಬೆ
ತಾಳಿನಿಂದಲೇ ಹೇಳಿ ವಚನಾವಾs
ತಾಯಮ್ಮಾs

ಅಯ್ಯಾ ಅಟ್ಟಿಯ ಮನೆಯವಳೆ
ನನ್ನ ಪಟ್ಟದುಂಗುರದವಳೆ
ಪಟ್ಟೆಯ ಸೀರೆ ನರಿಯವಳೇs
ಸುವ್ವಾ ಬಾ ಚೆನ್ನ ಬಸವಣ್ಣಾs
ನಮ್ಮ ಪಟ್ಟೆಯ ಸೀರೆ ನರಿಯವಳೆ ಸಾರದಾಂಬೆ
ಓದುವ ಹಲುಗೆ ಬಲಗೈಲಿ || ಸುವ್ವಾ ಬಾ ||
ಓದುವ ಹಲಗೆ ಬಲಗೈಲಿ ಹಿಡಕಂಡು
ಬರೆದು ಹೇಳವ್ವ ವಚನಾವs || ಸುವ್ವಾ ಬಾ ||

ಹಿತ್ತಲ ಮನೆಯವಳೆ ಈರೇಕಾಯ್ನ ನರಿಯವಳೆ
ಸುತ್ತಾ ದಾಳಿಂಬಿಯ ವನದವಳೆ
ಸುತ್ತಾ ದಾಳಿಂಬಿಯ ವನದವಳೆ ಶಾರದಾಂಬೆ
ಸುತ್ತೇಳು ಲೋಕ ಮೆರೆಯುವಳೆ ಸರಸಮ್ಮ || ಸುವ್ವಾ ಬಾ ||

ಸುತ್ತೇಳು ಲೋಕ ಮೆರಿಯವಳೆ ಶಾರದಾಂಬೆ
ಸುತ್ತೀ ಬಾರಮ್ಮ ನಮ್ಮ ಹೃದಯಕ್ಕೆ || ಸುವ್ವಾ ಬಾ ||

ಹಸುರ ಮನೆಯವಳೆ ಸುವ್ವಿನಿಂದ ನಲಿಯುವಳ
ಹೊಸ ಮಡಿಯ ಮೇಲೆ ಚದುರಂಗ
ಹೊಸ ಮಡಿಯ ಮೇಲೆ ಚದುರಂಗ ಬರೆಯುವಳೇ
ಬರೆದು ಹೇಳವ್ವಾ ವಚನಾವಾ || ಸುವ್ವಾ ಬಾ ಚೆನ್ನ ಬಸವಣ್ಣಾ ||

ಅತ್ತೆಮಾವನ ಪಾದ ಮತ್ತೆ ಗುರುವಿನ ಪಾದ
ಹೆತ್ತಮ್ಮ ತಾಯಿ ಸಿರುಪಾದ || ಸುವ್ವಾ ಬಾ ||

ಹೆತ್ತಂಥ ತಾಯ್ತಂದೆ ಪಾದಾವ ನೆನೆದಾರೆ
ಹೊತ್ತಿದ್ದ ತಾಯ್ತಂದೆ ಪಾದಾವ ನೆನೆದಾರೆ
ಹೊತ್ತಿದ್ದ ಪಾಪ ಪರಿಹಾರ || ಸುವ್ವಾ ಬಾ ||

* **

ಅಯ್ಯಾ ಕಲ್ಯಾಣವೆಂಬುದು ತೊಂಬತ್ತೇಳು ಬೀದಿ
ಕಲ್ಯಾಣವಲ್ಲ ನಂದಿ ಕೈಲಾಸ
ಕಲ್ಯಾಣವಲ್ಲ ನಂದಿಯಾ ಕೈಲಾಸದಲ್ಲಿ
ಬಸವಣ್ಣನವರ ಗುರುಮಠ || ಸುವ್ವಾ ಬಾ ||

ಹಸುರಂಗಿ ಬಸವಣ್ಣ ಲೋಕಕ್ಕೆ ಹೆಸರಾದರು
ಏಳುನೂರು ಮಠಕೆ ಶರಣಾರು || ಸುವ್ವಾ ಬಾ ||

ಅವರು ಬಸುರಾಜರ ಮಡದಿ ಹಸುನಾದ ನೀಲಮ್ಮ
ಹುಸಿಯನಾಡುವರಲ್ಲ ಧರೆಯಲ್ಲಿ || ಸುವ್ವಾ ಬಾ ||

ಹುಸಿಯನಾಡುವರಲ್ಲ ಹಸುನಾದ ನೀಲಮ್ಮ
ಹಸುವಾರವಲ್ಲ ನೆರುಳಲ್ಲಿ
ಹಸುವಾರವಲ್ಲ ನೆರಳಲ್ಲಿ ನೀಲಮ್ಮ
ಹಸುವಿನ ಹಾಲು ಒಲೆಮೇಲೆ || ಸುವ್ವಾ ಬಾ ||

ಅಮ್ಮಾ ಹಸುವೀನ ಹಾಲ ಒಲೆ ಮೇಲೆ ಇಟ್ಟುಕೊಂಡು
ಹಸ್ದು ಬಂದ ಜಂಗಮರಿಗೆ ಎಡೆಮಾಡಿ || ಸುವ್ವಾ ಬಾ ||

ಹಸ್ದು ಬಂದ ಜಂಗಮರೀಗೆ ಎಡೆಮಾಡಿ ಬಡಿಸುವಾ ನೀಲಮ್ಮನವರ
ಸೆರಗಿನಲ್ಲವರೇ ಶರಣಾರು || ಸುವ್ವಾ ಬಾ ||

***

ಕಳಸ ಕನ್ನಡಿ ಬಳಸು ತಾಂಬುಲವ ತುಂಬವರೆ
ಬಳಸೀ ಬಾರಮ್ಮ ನಮ್ಮ ಹೃದಯಕ್ಕೆ
ಸುವ್ವೀ ಹೇಳಮ್ಮ ದೇವಾರುದೇವಾs

ಬಳಸಿ ಬಂದರೇ ತಾಯಿ ಹೃದಯಕ್ಕೆ ಶಾರದಾಂಬೆ
ಕಬ್ಬೆಳಗೂ ಕೂಗುವೇ ನಿಮ್ಮ ವಚನಾವಾs
ಸುವ್ವೀ ಹೇಳಮ್ಮ ದೇವಾರುದೇವಾs

ಶಾಂಬದೇ ನಮ್ಮ ಪಾರ್ವತಿ ಪತಿಯಾ
ಹರಹರಾ ಮಹದೇವಾ
ಲಕ್ಷ್ಮೀರಮಣ ಗೋವಿಂದಾ ಗೋವಿಂದಾ