ಛೇ ಜಂಗುಮಯ್ಯ ಕೊಡು ಕೊಡು ಕಾಳಮ್ಮ
ಅಂತ ಕೇಳ್ತಾ ಇರಬೇಡಾ
ದಾನ ಮಾಡ್ದ ಕೈಯಲ್ಲ ನಂದು
ನೋಡಪ್ಪ ಜಂಗುಮಯ್ಯ
ಇನ್ನಾವದಾದ್ರು ಸತ್ಯ ಮಾಡಬೇಕ
ಆಗಾದ್ರೇ ಹೋಗ್ತಿಯ ಅಂದ್ಳು
ಏನು ಸತ್ಯ ಕೇಳುವುದಕ್ಕೆ ಬರಲಿಲ್ಲ
ದಾನಕ್ಕೆ ಬಂದೀವ್ನಿ ಅಂದ್ರು
ದಾನ ಕೊಡುವಂತ ಮಗಳಲ್ಲ
ನನ್ನ ಗಂಡನಾದ ಕೆಂಡೇಗೌಡ
ಮೂಡ್ಲು ಕಾಡಿಗೆ
ಏಳು ಹುಂಡಿ ದನ ವಡ್ಕೊಂಡು ಹೋಗವ್ನೆ
ದನ ಮೇಯ್ಸದಕ್ಕೆ
ನನ್ನ ಗಂಡನಾದ ಕೆಂಡೇಗೌಡ ಹೋದಾಗ
ನನ್ನ ಏಳು ಹುಂಡಿ ದನಗಳೂ
ಕಿರುಬ ಕಿತ್ತಾಡ್ಕಂಡು ತಿನ್ನಕ್ಕಕಂಡ್ರು ಸರಿಯೇ
ನನ್ನ ಗಂಡನಾದ ಕೆಂಡೇಗೌಡ
ಮೂಡ್ಲ ಗಿಡುವಿನಲ್ಲಿ
ಹಿಂಬೇದಿ ಮುಂಬೇದಿ ಬಂದೂ
ಅಲ್ಲೇ ಸತ್ತೋದ್ರು ಸರಿಯೇ
ಅವನು ಒದ್ದಿದಂತಹ ಕಂಬಳಿ ತಂದು
ಹೊಲ್ಯಾರ್ ಕೊಟ್ರು ಸರಿಯೇ
ಮೆಟ್ಟಿದಂತಹ ಜೋಡು ತಂದು ಮಾದ್ಗರ್ಗೆ ಕೊಟ್ರು ಸರಿಯೇ
ಆವಾಗ ಎತ್ಕಂಡುಬಂದು ನನ್ನ ಗಂಡ ಕೆಂಡೇಗೌಡ್ನ
ಬಾಣಗಾರದ ಕೆಬ್ಬೆ ಹೊಲದ ಮೂಲೆ ಒಳಗೆ
ಸುಖ ಸಮಾದಿ ಮಾಡುಬಿಟ್ಟು
ಅವನ ಎದೆಮ್ಯಾಲೆ ಬಳೆ ವಡದು ಬುಟ್ಟು
ನಾನು ವಡ್ಕೆ ಹಳ್ಳದ ಬೀದಿ ಒಳಗೆ ಹೋಗ್ತಾಯಿದ್ರೆ
ಜನಗಳೆಲ್ಲ ಆ ದೊಡ್ಡ ಮಾಳ್ ದೂರು
ಕಾಳಮ್ಮ
ಮದ್ಯಾಹ್ನದ ಮುಂಡೆ
ಸಂಜೆ ಮುಂಡೆ
ಬೆಳಗಿನ ಮುಂಡೆ ಅಂತೇಳಿ ಸಾರಿದ್ರು ಕೂಡ

ನಾನು ದಾನ ಕೊಡುವಂತ ಮಗಳಲ್ಲ ನೋಡಿ ನಮ್ಮ ಶಿವನಾ

ಅಯ್ಯೋ ಮುಂಡೆ ಮಗಳೇ
ಏಳು ಹುಂಡಿ ದನ
ನಿನ್ನ ಮುತ್ತೈಸ್ಥಾನ
ಆಳ್ ಮಾಡ್ಕತ್ತಿದ್ದಿಯಾ ಕಾಳಮ್ಮ
ಅಷ್ಟೆಲ್ಲ ಬೇಡ ನನಗೆ
ಎರಡು ಕೊಳಗ ಅಂದತ್ಕೆ ಹೊಟ್ಟೆ ಉರ್ದುಬುಡ್ತು
ಎರಡು ಕೊಳಗದಲ್ಲಿ ಒಂದು ಕೊಳಗ ಇಟ್ಕಂಡು
ಇನ್ನು ಒಂದು ಕೊಳಗನಾದ್ರು ತಂದ್ರು ಮುತ್ತಿನ
ಜೋಳಗ್ಗೆ ನೀಡು
ಕಾಲಮ್ಮ ಅ ಮಾದಪ್ಪನ್ಗೆ ಎಳ್ಳಮಜ್ಜನ ಮಾಡಬೇಕು

ನಿನಗ ಬಾಳ ಐಶ್ವರ್ಯ ಕೊಡುವನು ಮಾದೇವ || ನೋಡಿ ನಮ್ಮ ಶಿವನಾ ||

ಓ ಮಲ್ಲಣ್ಣ
ಈ ಜಂಜುಮಯ್ಯನೊಂದ್ಗೆ ಆಡಿಆಡಿ
ಟೈಮಾಗುಬುಡ್ತು
ಬೆಳ್ಳಿ ಬಿಂದ್ಗ ನೀರತಕ್ಕಬಾ
ಎರಡು ಕಣ್ಣಿನ ಪರೆ ಎತ್ತು ಅಂತೇಳಿ
ಅರೆಕಲ್ಲು ಮುಂದೆ ಹೋಗಿ ನಿಂತ್ಕಂಡಳು ಕಾಳಮ್ಮ
ಎರಡು ಕಣ್ಣಿನ ಪರೆ ಎತ್ತಿಡ್ಕಂಡು
ಏಳು ಜನ ಜೀತಗಾರ್ರುಗುವೇ
ನೀರು ಮುಕ್ಕಳ್ಸಿ ಮುಕ್ಕಳ್ಸಿ ಉಗಿಸ್ತಯಿದ್ದಳು
ಗಂಟೆಗೊಂದ್ಸಾರಿ
ಯಾತ್ಗೆ? ಎಳ್ಳು ತಿಂದ್ಬುಡ್ತಾರೆ ಆಳ್ಗಳು
ನೀರು ಮುಕ್ಕಳ್ಸಿ ಉಗ್ದುರೇ ತರಿಕಾಣ್ತದೆ
ಅವರ್ಗೆ ಕೊಡಬಾರ್ದು ಕೊಲೆ ಕೊಡಬಹುದು ಅಂತೇಳಿ
ಏಳುಜನ ಜೀತಗಾರ್ನುವೇ
ನೀರು ಮುಕ್ಕಳ್ಸಿ ಅರೆಕಲ್ಲು ಮ್ಯಾಲೆ ಉಗುದು
ಅವರ್ ಪರೀಕ್ಷೆ ಮಾಡುಬುಟ್ಟ
ಅತ್ಕಡೇಲಿ ಮಲ್ಲಣ್ಣ
ಒಂದ್ಕಣ್ಲಾದ್ರು ನೋಡ್ತಿನಿ
ಒಂದ್ಕಣ್ಣಿನ ಪರೆ ಇಡ್ಕಂಡು
ನೀನೊಂದು ಸಾರಿ ಮುಕ್ಕಳ್ಸಿ ಉತಿ ಎಂದ
ನೋಡು
ಕಾಳಮ್ಮನ ಅಪದುಡ
ಅವಳ ಮನೆಯೊಳಗೆ ಜೀತಮಾಡ್ತಾವನೆ
ಮೇಸ್ತ್ರಿ ಕೆಲಸ ಮಾಡ್ಕಂಡು
ಯಾರು ಕೌದಳ್ಳಿ ಕಂಬಳಗಾರ‍ಮಲ್ಲಣ್ಣ
ಕಂಬಳಗಾರ ಮಲ್ಲಣ್ಣ
ಎಳ್ಳ ಗೂಡ್ಸ್ತ ಇದ್ದಾಗ
ಎಲ್ಲೊ ಒಂದು ಎಳ್ಳಾರ್ ಬಿಟ್ಟದ್ದು
ಪುಂಗಲ್ ನಲ್ಲಿ ಕುರ್ಕಬಿಟ್ಟಿದ್ದ
ಆ ತರಿ ಇದ್ದು ಬುಟ್ಟಿತ್ತು
ಮಲ್ಲಣ್ಣ ಒಂದ್ಸಾರಿ ಮುಕ್ಕಳ್ಸಿ
ಉಗ್ದನಲ್ಲ ಎಳ್ತರಿ ಕಂಡುಬುಟ್ಟಾಳು
ಲೋ ಮಲ್ಲಣ್ಣ
ಯಜಮಾನ ಜೋಳ ಕದ್ದಂಗೆ ಆಯ್ತಲ್ಲ
ಏಳು ಜನ ಜೀತ್ಗಾರ್ಗೆ ನೀರು ಮುಕ್ಕಳ್ಸಿ ಉಗಿಸ್ತಿ
ಅವರಲಿಲ್ಲ
ನೀನೇ ಎಳ್ಳುತಿಂದಿದ್ದಿಯಲ್ಲ ಯಜಮಾನ ಮೇಸ್ತ್ರಿಅಂತೇಳಿ
ನೀನು ಎಷ್ಟು ಎಳ್ಳು ತಿಂದಿರಬಹುದು
ಲೋ ಮಂಜಣ್ನ
ಒಂದು ತಿಂಗಳಿಂದ ನನ್ನ ಕೊಟಾರದಲ್ಲಿ
ಕೂಲಿ ಮಾಡಿದ್ದಿಯೇ
ಆ ಒಂದು ತಿಂಗಳು ಸಂಬಳ
ಇಲ್ಗೆ ವಜಾವ ಮಾಡ್ತಿನಿ ಅಂತವಳೇ ಕಾಳಮ್ಮ
ಅವ್ವ ಕಾಳಮ್ಮ
ನೀನು ಒಂದು ತಿಂಗಳ ನನ್ನ ಸಂಬಳ ವಜಾ ಮಾಡ್ಕಂಡ್ರೆ
ನನ್ನಿ ಹೆಂಡ್ತಿ ಮಕ್ಳು ಎಣು ಮಾಡಬೇಕು
ಅರ್ಧ ತಿಂಗ್ಳು ಅರ್ಧ ಸಂಬಳ ವಜಾ ಮಾಡ್ಕೋ ಅಂದಳು
ಆಗ್ಲಿ ಹಾಗೇ ಮಾಡು ಮಲ್ಲಣ್ಣ
ಯಾಕೆ? ಬಿಟ್ಟುಬಿಟ್ಟು ವಂಟೋಯ್ತನೆ ಅಂತೇಳಿ
ಅರ್ಧ ತಿಂಗಳ ಕೂಲಿ ವಜಾ ಮಾಡ್ಕಂಡು
ಅರ್ಧ ತಿಂಗಳ್ ಕೂಲಿ ಕೊಟ್ಟಳು
ಮಾದಪ್ಪ ನಿಂತ್ಕಂಡ್ ನೋಡುದ್ರು
ಮಾಯ್ಕಾರಗಂಡು
ಅಯ್ಯೋ ಮುಂಡೇಮಗಳೆ
ನಿನ್ಗೆಂತ ಅಹಂಕಾರ ಬಂದುಬುಡ್ತ
ನನಗೇನಾದ್ರು ಎಳ್ಳುದಾನ ಕೊಡ್ದೇ ಹೋದ್ರೆ
ಧರೆನಲ್ಲಿ ನಿನ್ನ ಮಡ್ಗೊದಿಲ್ಲ ಅಂತೇಳಿ

ಅವರು ಕೋರಣ್ಯ ಸಾರವರೇ ಮಾದೇವ ನೋಡಿ ನಮ್ಮ ಶಿವನಾ

ಯಾರಪ್ಪಾ ಮಲ್ಲಣ್ಣ
ಆ ಜಂಗುಮ ಇನ್ನು ಹೋಗ್ಲಿಲ್ವ
ಬೆಳ್ಳಿ ಕೊಕ್ಕಿನ ಮೆರೆ ತಕ್ಕೊಂಡು ಬಾ
ನನ್ನ ಕೈ ಹಿಡ್ಕೊ
ಒಂದು ಕೈಲಿ ಕಣ್ಣನ ಪರೆ ಎತ್ತಿಡ್ಕೋ
ಆ ಜಂಗುಮಯ್ಯನ್ಗೆ ಮೂರೇಟು ವಡಿತಿನಿ
ಅಂತೇಳಿ
ಮಲ್ಲಣ್ಣನ ಕರ್ಕಂಡು
ಬಲಗೈಲಿ ಬೆಳ್ಳಿ ಕೊಕ್ಕಿನ ಮೆರೆ ಎತ್ಕಂಡಳು
ಕಂಬಳಗಾರ‍ಮಲ್ಲಣ್ಣ
ಒಂದು ಕಣ್ಣಿನ ಪರೆ ಎತ್ತಿಡಿದಿದ್ದಾನೆ
ಅವಳು ಬೆಳ್ಳಿ ಕೊಕ್ಕಿನ ಮೆರೆ ಎತ್ತಿಕೊಂಡು ಬರ್ತಾವಳೆ
ಕಾಳಮ್ಮ
ಬೆಳ್ಳೀ ಕೊಕ್ಕಿನ ಮೆರೆ ಇಡ್ಕಂಡು
ಎಳ್ಳು ಕೊಟಾರದ ಸುತ್ತ ಓಡಾಡಿಸ್ತವಳೆ
ಮಾದಪ್ಪ ಮೂರು ಚೋಟುದ್ದಕ್ಕ
ಮಾಯ್ಕಾರ ಗಂಡ
ಕಾಳಮ್ಮನ ಮುಂದೆ ಓಡಾಡ್ತವನೆ
ಕೆಟ್ಟ ಮುಂಡೆ
ನಿನ್ನ ಕೊಟಾರ‍ಬಿಟ್ಟು ನಾನೋಗೋದಿಲ್ಲ
ನನ್ನ ಮುತ್ತಿನ ಜೋಳ್ಗೆ ಮುಚ್ಚೋಗ್ತಾ ಇದೇ ಅಂತೇಳಿ
ಈಶಾನ್ಯಬಾಗದಲ್ಲಿ ಪದೇ ನಿಂತ್ಕಂಡ್ರು ಮಾದೇವ ಕಾಳಮ್ಮ ಮುಕ್ಕಾಲು
ಮಂಚದ ಮ್ಯಾಲೆ ಕೂತ್ಕಂಡಳು
ಸಾಕಾಯ್ತ್ ಬಿಡ್ತು
ಮೂರು ಬಳಸು ಓಡಾಡುಬುಟ್ಟು
ಮೂಡೆ ಗಾತ್ರದ ದೊಳ್ಳ
ಎತ್ತನಾರದೇ ಹೋಗಿ ಮುಕ್ಕಾಲು ಮಂಚದ
ಮ್ಯಾಲೆ ಕೂತ್ಕಂಡಳು
ಮಾದಪ್ಪ
ನಿಂತ್ಕಂಡು ಅರೆಗಣ್ಣು ಕಿರಗಣ್ಣು ಬಿಟ್ಟು
ಅವರು ಅರೆಗಣ್ಣು ಕಿರಗಣ್ಣು ಬಿಟ್ಟು

ಅವರು ಪಂಚೇಳಕ್ಷರ ಕೂಗವೇ ಮಾದೇವ || ನೋಡಿ ನಮ್ಮ ಶಿವನಾ ||

ಲೋ ಮುಂಡೆ ಮಗನೇ ಜಂಗುಮಯ್ಯ
ಏನು ಈ ರೀತಿ ಕೂಗ್ತಾಯಿದ್ದೀಯಲ್ಲ
ಎಳ್ಳು ಕೊಡು ಕಾಳಮ್ಮ
ಎಳ್ಳು ಕೊಡು ಕಾಳಮ್ಮ ಅಂತೇಳಿ
ನೀನೇನಾದ್ರು ಮುಂಗಾರ್ನಲ್ಲಿ ಬಂದು
ನನ್ನ ಬಾಣಗಾರ ಕೆಬ್ಬೆ ಹೊಲದಲ್ಲಿ
ಏರ್ ಕಟ್ಕಂಡು
ಹೊಲ ಉತ್ತು ಇಂಟ್ಗೆ ಒಂದು ಮೊರೆ
ನೀರು ಊದು ಸಾಕಾಗಿತ್ತ
ಇಲ್ಲ ನಿಮ್ಮ ಅಪ್ಪ ಅಮ್ಮ
ನಿಮ್ಮ ತಾಯಿ ತಂದೆರು ಬಂದು
ಏನಾದ್ರು ನನ್ನ ಆಳುಗಳಿಗೆಲ್ಲ
ಅಂಬಲಿ ಕಾಯ್ಸಿ ವತ್ತು ಸಾಕಾಗಿತ್ತ
ಅದಕ್ಕಾಗಿ ಕೊಡು ಇದ್ದಿಯಾ ಅಂತ ಕೇಳ್ತಾ
ಒಂದು ಕೊಳಲ್ಗ ಕೇಳ್ತಾಯಿದ್ಯಲ್ಲ
ಒಮ್ದು ಕಾಳು ಕೊಡುವಂತ ಮಗಳಲ್ಲ
ಜಂಗುಮಯ್ಯ

ನನ್ನ ಕೊಟಾರ ಬಿಟ್ಟು ಹೋಗು ಅಂತವಳೇ ಕಾಳಮ್ಮ || ನೋಡಿ ನಮ್ಮ ಶಿವನಾ ||

ನೋಡಯ್ಯ ಪರದೇಸಿ ಜಂಗುಮ
ನನ್ನ ಮುನ್ನೂರು ಮೂವತ್ತು ಕಂಡ್ಗ
ಎಳ್ಳುನ ರಾಸಿಯಲ್ಲ
ಇಲ್ಲಿ ಬೂದಿರಾಸಿಯಾಗೋದ್ರು ಸರಿಯೇ
ನಾನು ದಾನ ಕೊಡುವಂತ ಮಗಳಲ್ಲ
ದಾನದ ಕೈ ಬರೋದಿಲ್ಲ

ನೀನು ಕಡೆದೋಗಯ್ಯ ನೀನು ಜಂಗುಮ || ನೋಡಿ ನಮ್ಮ ಶಿವನ ||

ಅಯ್ಯೋ ಮುಂಡೆ ಮಗಳೇ
ಮುನ್ನೂರು ಮೂವತು ಕಂಡ್ಗ ಎಳ್ಳು
ಹೋಗುವಾಗ ನಿನ್ಗೆ ಹೊಟ್ಟೆ ಉರಿಯಲ್ಲ
ಒಂದು ಕೊಳಗ ಎಳ್ಳು ಕೊಡನಾರ್ಯ
ಆಡ್ಗೆ ಕುಳಮಾಡ್ತಿನಂತ ಮಾದಪ್ಪ
ಕಾಳಮ್ಮ ಒಂದು ಕೊಳಗ ಎಳ್ಳ ಕೊಡುಕೆ
ನಿನ್ನ ಹೊಟ್ಟೆ ಉರುದ್ರೆ
ಒಂದು ಕೊಳಗ್ದಲ್ಲಿ
ನಾಲ್ಕು ಬಳ್ಳ ಎಳ್ಳದೆ
ಒಂದು ಬಳ್ಳ ಅದ್ರಲ್ಲೂ ಕಡೆಮೆ ಮಾಡ್ಕೊ
ಮೂರು ಬಳ್ಳ ಎಳ್ಳಾದ್ರು ತಂದು
ನನ್ನ ಮುತ್ತಿನ ಜೋಳುಗ್ಗೆ ನೀಡಬುಟ್ರೇ
ಮಾದೇಶ್ವರನಿಗೆ ಎಣ್ಮಜ್ಜನಕ್ಕಾಗ್ತದೇ

ನಿನ್ಗ ಮತ್ತಷ್ಟು ಭಾಗ್ಯ ಕೊಡುವಾರು ಮಾದೇವ || ನೋಡಿ ನಮ್ಮ ಶಿವನಾ ||

ನೋಡಯ್ಯ ಜಂಗುಮ
ನನ್ನ ಎಳ್ಳನ ರಾಸಿಗೂ ಸತ್ಯಮಾಡ್ದಿ
ಗಂಡಾನ್ಗೂ ಕೂಡ ಸತ್ಯಮಾಡ್ದಿ
ಇನ್ಯಾರ ಸತ್ಯಮಾಡ್ಲಿ ನನ್ನ ಕೊಟಾರ
ಬಿಟ್ಟು ಹೋಗಪ್ಪ ನೀನು ಎಂದ್ರು
ನಾನು ಹೋಗೋದಿಲ್ಲ ಕಾಳಮ್ಮ
ನನ್ನ ಜೋಳಿಗೆ ಅಸ್ತೋಗ್ತಾಯಿದೆ
ಖಂಡಿತವಾಗಿ ದಾನ ಕೊಟ್ಟೇ ಕೊಡಬೇಕುಅಂದ್ರು
ಕಾಳಮ್ಮ
ದಾನದ ಕೈ ಬರೋದಿಲ್ಲ ಜಂಗುಮಯ್ಯ
ನನ್ನ ಏಳು ಜನ ಮೊಮ್ಮಕ್ಕಳಿದ್ದಾರೆ
ಏಳು ತೊಟ್ಲಲ್ಲಿ ತೂಗ್ತಾಯಿದ್ದಾರೆ
ಏಳು ಜನ ಸೊಸೆರು
ಏಳು ಜನಮೊಮ್ಮಕ್ಕಳು ಗಂಡು ಮಕ್ಕಳೂವೇ
ಅಂಬುಗ್ವಾರ ಹರುಗ್ವಾರ ಬಂದೂ
ಮಲ್ಗಿದ್ ಜಾಗದಲಿ ಬಿರುದೋದ್ರು ಸರಿಯೇ
ನನ್ನ ಏಳು ಜನ ಮೊಮ್ಮಕ್ಕಳ ತಂದು
ಬಾಣಗಾರ‍ಕೆಬ್ಬೆ ಹೊಲದಲ್ಲಿ
ಸಾಲ ಸಮಾಧಿ ಮಾಡುಬುಟ್ಟು
ಪೂಜೆ ಮಾಡುಬುಟ್ಟು ಹೋದ್ರು ಸರಿಯೇ

ನಾನು ದಾನ ಕೊಡುವಂತ ಮಗಳಲ್ಲ || ನೋಡಿ ನಮ್ಮ ಶಿವನಾ ||

ಅಯ್ಯೋ ಮುಂಡೆ ಮಗಳೇ ಕಾಳಮ್ಮ
ಆ ಮೊಮ್ಮಕ್ಕಳು ಅಂದ್ರೆ ಮುಂದೆ ಬೆಳೆದೆ ಒಕ್ಕಲಾಗೋರು
ಅ ಮಕ್ಕಳ ಮ್ಯಾಲೆ ಯಾತಕ್ಕಾಗಿ
ಸತ್ಯಮಾಡಿಯೇ ಕಾಳಮ್ಮ
ಮೂರು ಬಳ್ಳ ಎಳ್ಳು ಕೊಡುವುದಕೆ
ಹೊಟ್ಟೆ ಉರುದ್ರೆ
ಕಷ್ಟ ಮಾಡ್ದೋಳು
ಕಾಲದಿಂದ ಕಂಬಳ ಗೇದೋಳು
ಹೊಟ್ಟೆ ಉರಿಬಹುದು ನಿನ್ಗೆ
ಮೂರು ಬಳ್ಳ ಬೇಡ ಕಾಳಮ್ಮ
ಎರಡು ಬಳ್ಳನಾದ್ರು ತಂದು
ಮುತ್ತಿನ ಜೋಳಿಗ್ಗೆ ನೀಡಬುಡು
ಆಗಾದ್ರು ಪಟ್ಟಾಭಿಷೇಕ ಮಾಡಿ
ನನ್ನ ಏಳುಮಲೀ ಕಳಿಸಿಬುಟ್ರೇ

ನಿನ್ಗೆ ಇನ್ನಿಷ್ಟು ಐಶ್ವರ್ಯ ಕೊಡುವನು ಮಾದೇವ || ನೋಡಿ ನಮ್ಮ ಶಿವನಾ ||

ಏನಯ್ಯಾ ಜಂಗುಮ
ನನ್ನೊಂದ್ಗೆ ಪದೇ ಪದೇ ಚರ್ಚೆ
ಮಾಡ್ತಾ ಇದ್ದಿಯಲ್ಲ
ಮೂರು ಕೊಳಗದಿಂದ
ಎರಡು ಬಳ್ಳವಲ್ಲ
ಎರಡು ಕಾಳು ಎಳ್ಳು ಕೊಡುವಂತ ಮಗಳಲ್ಲ
ನೋಡು ನನ್ನ ಏಳೇಳು ಹದಿನಾಲ್ಕು
ಒಂದಟ್ಟಿ ಒಳಗೆ ರಾಮಲಕ್ಷ್ಮಣ ಅಂತೇಳಿ
ಎರಡಿ ಕಂಣ್ಜ ರೂಪಾಯಿ ತುಂಬಿದ್ದೀನಿ
ಬೆಳ್ಳಿ ರೂಪಾಯಿ
ಆ ರೂಪಾಯಿ ಬಗ್ರೆ ವಾಟೆಯಾಗಿ
ನನ್ನ ಕೈಗೆ ಸಿಕ್ದೆ ಹೋದ್ರು ಸರಿಯೇ

ನಾನು ದಾನ ಕೊಡುವಂತ ಮಗಳಲ್ಲ || ನೋಡಿ ನಮ್ಮ ಶಿವನಾ ||

ಅಯ್ಯಾ ಹೊನ್ನೆಣ್ಸೆ ಕಾಳಮ್ಮ
ಈ ರೀತಿಯಾಗಿ ನೀನು ಯುದ್ವ ತದ್ವ ಮಾತಾಡಬೇಡ
ಮುಂಡೆ ಮಗಳೇ
ನಿನ್ಗೆ ಇಂತಹ ಅಹಂಕಾರ ಬಂದು ಬುಡ್ತ
ಅಹಂಕಾರದ ಮಾತಾಡಿ
ಅಡವಿ ಪಾಲಾಗಬೇಡ
ಯಕ್ಕ ಸೊಕ್ಕಿನ ಮಾತಾಡಿ ಯಕ್ಕುಟ್ಟೋಗ್ ಬೇಡ ಕಾಳಮ್ಮ ಅಂದ್ರು
ಎಲ ಕೆಟ್ಟ ಮುಂಡೆಮಗನೆ
ಓ ಕಂಬಳಗಾರ ಮಲ್ಲಣ್ಣ
ಏನೋ ಹೆಚ್ಚಾಗ್ ಮಾತಾಡ್ತನೆ ಜಂಗುಮಯ್ಯ
ಇಡಿದು ಕಟ್ಟಾಕುಬುಡಯ್ಯ ಅಂದ್ರು
ಏನು ಕಂದಾ
ನನ್ನ ಕಟ್ಟಾಕುವಂತ ತ್ರಾಣವಿದೆಯೇ ಕಾಳಮ್ಮ
ಎರಡು ಬಳ್ಳ ಕೊಡುಕೆ ಹೊಟ್ಟೆ ಉರುದ್ರೆ
ಎನ್ನು ಒಂದು ಬಳ್ಳಾ ನೀನೆ ಮಡಿಕ್ಕೊ
ಒಂದು ಬಳ್ಳ ಎಳ್ಳಾದ್ರು ತಂದೂ
ನನ್ನ ಮುತ್ತಿನ ಜೋಳುಗ್ಗೆ ನೀಡು
ಇವತ್ತು ತುಂಬಿದ ಸ್ವಾಮಾರ‍
ನನ್ನ ಜೋಳ್ಗೆ ಹಸಿಬಾರ್ದು ಅಂದ್ರು
ಜಂಜುಮಯ್ಯ
ಒಂದು ಬಳ್ಳ ಕೇಳ್ತಾ ಇದ್ದೆಯೇ
ನನ್ನಏಳು ಜನ ಗಂಡು ಮಕ್ಕಳಿದ್ದಾರೇ ಕೊಟರದೊಳ್ಗ
ನನ್ ಎಳ್ಳನ ರಾಶಿ ಬೂದಿಯಾಗೋದ್ರು ಸರಿಯೇ
ಏಳು ಜನ ಗಂಡುಮಕ್ಳು
ನಿಂತಾಗೇ ಕೊಟಾರದ ಸುತ್ತ
ಗೋಗಲ್ಲಾಗೇ ನಿಂತ್ಕಂಡ್ರು ಸರಿಯೇ

ನಾನು ದಾನ ಕೊಡುವಂತ ಮಗಳಲ್ಲ || ನೋಡಿ ನಮ್ಮ ಶಿವನಾ ||

ಆವಾಗಲೀಗ ಹೊನ್ನುಣ್ಣೆ ಕಾಳಮ್ಮನ
ಅಡ್ಡ ಮಾತಿಗೆ ಮಾದಪ್ಪ
ಅರೆಗಣ್ಣು ಕಿರುಗಣ್ಣು ಬಿಟ್ರು
ಇಂತಹ ಮುಂಡೇ ಮಕ್ಕಳ
ನರಲೋಕದಲ್ಲಿ ಬಿಟ್ರೇ
ಇನ್ನು ಮುಂದೆ
ದಾಸಯ್ಯನ್ಗೆ ಧರ್ಮವಿಲ್ಲ
ಭೀಮನಿಗೆ ಭಿಕ್ಷವಿಲ್ಲ
ನನ್ನಂತ ಜಂಗಮರ್ಗೆ
ಕ್ವಾರಣ್ಯ ನಿಂತೋಗುಬುಡುತ್ತೆ ಅಂತೇಳಿ
ಮಾದಪ್ಪ
ಆವಾಗಲೀಗ
ಒಂದು ಕಡೆಯಿಂದ

ಕಾಳಮ್ಮ ಹೇಳ್ದ ಪ್ರಕಾರ ಮಾಡ್ತಾಯಿದ್ದಾರೇ || ನೋಡಿ ನಮ್ಮ ಶಿವನಾ ||

ಶತ್ರು ಕಣೆಮೆ ಒಡ್ಡು ದೊಡ್ಡಿಂಬಿ ಮೆಳೆ
ಒಡ್ನಲ್ಲಿ ನಿಂತ್ಕಂಡ್ರು ಮಾದಪ್ಪ
ಗಂಡನಾದ ಕೆಂಡೇಗೌಡ
ಮುದ್ದುಗಂಬಳಿ ಹೆಗಲಮ್ಯಾಲೆ ಒದ್ಕಂಡು
ಕೊಕ್ಕೇ ಜೋಡು ಮೆಟ್ಕಂಡು
ಏಳು ಹುಂಡಿ ದನ ಒಡ್ಕಂಡು
ಮೂಡ್ಲ ಗಿಡಕೆ ಬಂದ ದನ ಮೆಯ್ಸುದ್ಕ
ಮಹದೇವ
ಎಪ್ಪತ್ತೇಳು ಹುಲಿಗಳ್ನೆಲ್ಲ ಕರದ್ರು
ಏಳು ಹುಂಡಿಲಿ ಒಂದ್ನೂ ಮಡ್ಗನಿಲ್ಲ
ಕಿರಬ ಕಿತ್ತಾಡ್ಕಂಡು ತಿದ್ದುಬುಟ್ಟೋ
ಆವಾಘ ಮೂಕಳ್ಳಿ ಮಾರಮ್ಮ ಎಚ್ಚರ ಮಾಡುದ್ರು
ಕಂದಾ ತಾಳು ಬೆಟ್ಟದಲ್ಲಿ
ನೋಡು ಗಂಡನಾದ ಕೆಂಡೇಗೌಡ
ಬೇವುನ ಕಾಳಮ್ಮನ ಗಂಡ ಅವ್ನೆ
ಅವನ್ಗೆ
ನೀನು ಹೋಗಿ ಹೊಟ್ಟೆ ನುಗ್ಗಿ
ಹಿಂಬೇದಿ ಮುಂಬೇದಿ ಕೊಡು ಅಂದ್ರು
ಮೂಕಳ್ಳಿ ಮಾರಮ್ಮ ಮಾದಪ್ನ ಮಾತಕೇಳಿ
ಆಲ ಅಬ್ಬರ್ಸ್ಕಂಡೋದಳು
ಕೆಂಡೇಗೌಡ
ಹುಣಿಸೆ ಮರ್ದಳ್ಳದಲ್ಲಿ ಕೂತ್ತಿದ್ದ ದನ ಬಿಟ್ಗಂಡು
ಆ ಕೆಂಡೇಗೌಡನಿಗೆ

ಅವಳು ಹೋಗಿ ನಿಂತವಳೇ ಮಾರಮ್ಮ || ನೋಡಿ ನಮ್ಮ ಶಿವನಾ ||

ಹುಣಸೆ ಮರದಳ್ಳದಲ್ಲಿ ಹೋಗಿ
ಗಂಡನಾದ ಕೆಂಡೇಗೌಡನಿಗೆ
ಸುಂಟ್ರಗಾಳಿಯಾಗ್ ಸುತ್ತಾಕ್ ಬುಟ್ಟಳು
ಕೆಂಡಾಯ್ಯ
ಮುಕ್ಕಾಣಾಗಿ ಬಿದ್ದೋಗ್ ಬುಟ್ಟ ಅಲ್ಲೆ
ಚಳಿಜರ ಬಂದು ಪ್ರಾಣ ಹೋಗುಬಿಡ್ತು
ಆವಾಗ ಅಕ್ಕ ಪಕ್ಕದಲ್ಲಿದ್ರಲ್ಲ ಜೀತಗಾರ ಆಳ್ಗಳೆಲ್ಲಾ
ಓಡೋಗಿ ದೂರು ಹೇಳಿದ್ರು ಕಾಳಮನ್ಗೆ
ಏಳು ಜನ ಗಂಡು ಮಕ್ಕಳ ಕರಕೊಂಡು ಕಾಳಮ್ಮ
ಗಂಡನಾದ ಕೆಂಡೇಗೌಡರ ಹೊತ್ಗಂಡು ಬಂದು
ಬಾಣಗಾರಿಕೆ ಎಂಬ ಕೆಬ್ಬೆ ಹೊಲದಲ್ಲಿ
ಆಳುದ್ದ ಗುಂಡಿಯನ ತೆಗ್ದು
ಕೆಂಡೇಗೌಡನ ಒಳಗಡೆ ಮಲಗಿಸಿಬುಟ್ಟು
ಮಣ್ಣನ್ನೆ ತಳ್ಳಿ ಸಮಾದಿ ಮಾಡಿಬಿಟ್ಟು
ಸಮಾದಿ ಪೂಜೆ ಮಾಡಿಬಿಟ್ಟು
ಮುತ್ತೈದೆ ಬಳೆ ತೆಗ್ದು ಎದೆ ಮೇಲೆ ಒಡೆದು ಬುಟ್ಟು

ಅವಳು ಮಠಮನೆಗೆ ಬರುತವಳೆ ಕಾಳಮ್ಮ || ನೋಡಿ ನಮ್ಮ ಶಿವನಾ ||

ಮಟಮನೆಗೆ ಬಂದು
ಆವಾಗಲೀಗ ಕಾಳಮ್ಮ
ಏಳುಜನ ಮಕ್ಕಳ್ಗೆ
ಚಿಕ್ಕಕೊಂಡ ದೊಡ್ಡಕೊಂಡ ಮರಕೊಂಡಾ
ಬಾಳಕೊಂಡ ನೆಡಿರಪ್ಪ
ಏಳು ಜನ ಜೀತಗಾರ‍ರ ಕರ್ಕಂಡು
ನಮ್ಮಪ್ಪ ಸತ್ತೊದಾ
ನಮ್ಮ ದನ ಹೋಯ್ತು ಅಂತ ಯೋಚನೆ ಮಾಡಬೇಡಿ
ಎಳ್ಳೀನ ರಾಸ್ಯ ಬಿಡಬೇಡಿ
ಕೊಟಾರದಲ್ಲಿ ಎಳ್ಳಿನ ಒಕ್ಕಣೆ ಮಾಡಿಕೋ ಬರೋಣಾ ಅಂತಹೇಳಿ
ಕಾಳಮ್ಮ ಏಳು ಜನ ಮಕ್ಕಳ ಕರಕೊಂಡು
ತನ ಗಂಡ ಸತ್ತು ಹೋದ ದುಃಖ ಮರ್ತುಬುಟ್ಟು

ಅವಳು ಕೊಟಾರಕ್ಕೆ ಬರುತವಳೇ ಕಾಳಮ್ಮ || ನೋಡಿ ನಮ್ಮ ಶಿವನಾ ||