ಎಳ್ಳಿನ ಕೊಟಾರಕ್ಕೆ ಬಂದು ಕಾಳಮ್ಮ
ಎಳ್ಳು ಒಕ್ಕಣೆ ಮಾಡ್ತ ನಿಂತ್ಕಂಡಳು
ಆದರೂ ಮುನ್ನೂರು ಮೂವತ್ತು ಕಂಡುಗ
ಎಳ್ಳಿನ ರಾಸಿ ಹಾಕ್ದಳು
ಕಾಳಮ್ಮು ಎಳ್ಳಿನ ರಾಶಿ ಹಾಕಿದ ತಕ್ಷಣವೇ
ಮಾಯಕಾರಗಂಡ ಮಾದಪ್ಪ
ಸತ್ತೆಂಡು ಮೂಡ್ಲುನಿಂತ್ಕಂಡು
ಅರಗಣ್ಣು ಕಿರಗಣ್ಣು ಬಿಟ್ಟು
ಮುತ್ತಿನ ಜೋಳೀಗ್ಗೆ
ಹಸ್ತವನೆ ಮಡಗಿ ಏಳುಮಲೆ ಬಸ್ಮ ತೆಗ್ದು

ಅವರು ಏಳುಮಲೆ ಬಸ್ಮಪಿಡುದವರೆ ಮಹಾದೇವಾ || ನೋಡಿ ನಮ್ಮ ಶಿವನಾ ||

ಏಳು ಮಲೆ ಬಸ್ಮ ಪಿಡ್ದ ತಕ್ಷಣವೆ
ಮುನ್ನೂರುಕಂಡ್ಗ ಎಳ್ಳಿನ ರಾಸ್ಯ
ಬೂದಿರಾಸ್ಯ ವಾಗ್ ಬುಡ್ತು
ಓ ಮಲ್ಲಣ್ನ
ಅದೇ ಪ್ರಕಾರವಾಗಿ ಬೂದಿ ಆಯ್ತಲ್ಲ
ಆ ಜಂಗುಮಯ್ಯ ಯಾರಾಗಿರಬಹುದು
ಕಾಳಮ್ಮ ಜಂಗುಮಯ್ಯನೋ
ಇಲ್ಲಾ ಏಳುಮಲೆ ಮಹಾದೇಶ್ವರನೋ ಗೊತ್ತಿಲ್ಲ
ಕಾಳಮ್ಮ
ಪಡ್ಲ ಕೈಲಾಸ್ ದಿಂದ ಮಾದೇಶ್ವರ ಹೋಗುವಾಗ
ನೀನು ಒಂದಂಕ್ಣ ಸೊಪ್ಪಿನ ಗುಡ್ಲಾಕಂದಿದ್ದೆ
ಆ ಮಾದಪ್ಪ ಭಾಗ್ಯ ಕೊಡುವಾಗ
ಏನಂತ ಕೇಳ್ದ ಕಾಳಮ್ಮ
ಆ ಮಾದಪ್ಪನ ಕೇಳ್ದೆಲ್ಲಾ

ಆ ಮಾದೇವ್ನ ನೀನು ಮರತ್ಯಮ್ಮ ಕಾಳಮ್ಮ || ನೋಡಿ ನಮ್ಮ ಶಿವನಾ ||

ಕಂಬಳ ಮಲ್ಲಣ್ಣ
ಎಚ್ಚರಿಕೆ ಮಾಡಿ ಕೇಳಿದರು ಗೊತ್ತಿಲ್ಲ ಕಾಳಮ್ಮನಿಗೆ
ಓ ಮಲ್ಲಣ್ಣ
ಆ ಮಾದೇವನೋ ಮೂದೇವಿಯೋ ಗೊತ್ತಿಲ್ಲ
ನಡಿಯಪ್ಪ ಅವನ ಸುದ್ದಿ ಎತ್ತಬೇಡ
ಇವತ್ತು ನನ್ನ ಎಳ್ಳಿನ ರಾಸ್ಯವೆಲ್ಲ
ಬೂದಿ ರಾಸ್ಯವಾಗ್ ಬುಡ್ತು
ನನ್ನ ಮಕ್ಕಳ ಕರ್ಕಂಡು ನಡಿಯಪ್ಪ ಅಂತಹೇಳಿ
ಏಳು ಜನ ಗಂಡುಮಕ್ಕಳ ಕರ್ಕಂಡು
ಕಾಳಮ್ಮ
ತನ್ನ ಬೇವಿನ್ಹಟ್ಟಿಗೆ ಬರುತವಳೇ
ಕಾಳಮ್ಮ
ಇರುವಷ್ಟು ರಾಗಿಯನ್ನೆ
ಆರ್ದು ಅಂಬಲಿ ಕಾಯ್ಸಿ
ಹನ್ನೆರಡು ಬಿಂದ್ಗೆ ನೀರೂದು
ಒಂದು ಸೇರು ರಾಗಿ ಬೀಸಿ
ಅಂಬಲಿ ಕಾಯ್ಸಿ ಮುಂಡೆ ಮಕ್ಕಳೆ
ಸೊಸೆ ಮಂದಿಗೆ ಬುದ್ಧಿ ಹೇಳ್ತವಳೆ
ಹುಸಾರಾಗಿ ಏನಾದ್ರು ಅಂಬ್ಲಿ ಗಟ್ಟಿಯಾಗಬಾರ್ದು
ಆ ರೀತಿ ಕಾಯ್ಸಿ ಬಡಸ್ತಾನ ಕಳಿಯೋಣ ನಾವು
ಬಡ್ತನಾ ಬಂದುಬುಡ್ತು
ನನ್ನ ಮುನ್ನೂರ್ ಮೂವತ್ತು ಕಂಡ್ಗ ಎಳ್ಳಿನ ರಾಸ್ಯ್ ಹೋಯ್ತು
ಗಂಡನಾದ ಕೆಂಡೇಗೌಡ ಹೋದ
ಏಳುಂಡಿ ದನ ಹೋಗ್ ಬುಡ್ತು
ಇನ್ನು ಎಳುಂಡಿ ಕುರಿ ಮಾತ್ರ ಅವೆ
ನನ್ನ ಮಕ್ಕಳು ಕುರಿನಾದ್ರು ಬಾಯಾಡ್ಸಿಕಂಡು
ಮೇಯ್ಸಿಕಂಡಿರ್ಲಿ
ಅಂಬ್ಲಿ ಕಾಯ್ಸಿ ಕೊಡಿ ಅಂತೇಳಿ
ಅಂಬ್ಲಿ ಕಾಯ್ಸಿ ಕುಡಿಸ್ತ ಇದ್ದಳು
ಅಷ್ಟೊತ್ಗೆ ಒಂದ್ ನೊಡ ಬಿದ್ ಬುಡ್ತು
ಮಾಡಪ್ಪ ಅರಗಣ್ಣ ಕಿರಗಣ್ಣ ಬಿಟ್ ನೋಡ್ತ ಅವ್ರೆ
ನೊಣ ಬಿದ್ ಬುಡ್ತು ಅಂಬ್ಲಿ ಮೇಲೆ
ನೊಣಿನ ರೆಕ್ಕೆ ಕಾಲಿಗೆಲ್ಲಾ ಅಂಬ್ಲಿ ಹತ್ಕಾಬುಡ್ತು
ಆ ನೊಣವನ್ನೆ ಎತ್ತಿ ಹಿಡ್ಕಂಡು ಕಾಳಮ್ಮ
ಲೇ ಕೆಟ್ಟ ಮುಂಡೆ ಮಗನ ನೊಣವೇ
ಕಾಳಮ್ಮ ಕುಡ್ದು ಬುಡ್ತಾಳೆ
ನಾವೊಸಿ ಕುಡ್ಕಳಂವ ಅಂತೇಳಿ
ಆ ನೊಣಿನ ಕಾಲ್ನಲ್ಲಿ ಇರುವಂತ ಅಂಬ್ಲಿಯನ್ನ
ಬಾಯ್ಲಿ ಹಿಡ್ಕಂಡು

ಅವಳು ಅಂಬ್ಲಿ ಚೀಪ್ತಾ ಕುಂತವಳೆ ಕಾಳಮ್ಮ || ನೋಡಿ ನಮ್ಮ ಶಿವನಾ ||

ನನ್ನ ಅಪ್ಪಾಜೀ
ಉತ್ತರ ದೇಸದೋರು ಮಾಯ್ಕಾರ ಗಂಡಾ
ಅರೆಗಣ್ಣು ಕಿರಗಣ್ಣು ಬುಟ್ಟು ನೋಡ್ತಾರೆ
ಈ ಮುಂಡೆ ಮಗಾ
ನೊಣಿನ ಕಾಲಿನ ಅಂಬ್ಲಿ ತಿನ್ನೋಳು
ನನ್ಗೆ ದಾನ ಕೊಡುವಳಾ
ಎಳ್ಳು ಮಜ್ನ ಮಾಡೋದ್ ನಿಜವ ಅಂತೇಳಿ
ಇನ್ನೂ ನೋಡ್ತಿನಿ ಇವಳ ದುಡವ
ಇನ್ನು ಪರೀಕ್ಷೆ ಮಾಡಬೇಕು ಅಂತೇಳಿ
ಮಾದಪ್ಪ
ಆವಾಗಲೀಗ ಕೊಟಾರಕ ಬಂದ
ಕೊಟಾರವೆಲ್ಲ ಹಾಳಾಗೋಗದೆ
ಇನ್ನೂ ಬೇವಿನ ಹಟ್ಟಿಗೆ ಒಳಗೆ ಹೋಗಿ ಭಿಕ್ಷೆ ಕೇಳಬೇಕು ಅಂತೇಳಿ
ಹೊನ್ನುಣ್ಸೆ ಕಾಳಮ್ಮ

ಅವರು ಬೇವಿನಹಟ್ಟಿಗೆ ಬರುತವರೆ ಮಹಾದೇವಾ || ನೋಡಿ ನಮ್ಮ ಶಿವನಾ ||

ಬೇವಿನ ಮರ್ದ ಜಗ್ಲಿ ಮೇಲೆ
ತಿರ್ಗ ಕುತ್ಕಂಡು ನೋಡಿದ್ರು ಕಾಳಮ್ಮ
ಏಳುಜನ ಗಂಡು ಮಕ್ಕಳು
ಕುರಿಹೊಡಕಂಡು ಕಾಡಿಗೆ ಹೋಗಿದ್ದಾರೆ
ಹೊನ್ನುಣ್ಸೆ ಕಾಳಮ್ಮ
ಕಂಬ್ಳಗಾರ ಮಲ್ಲಣ್ಣ ಇನ್ನೇನು ಮಾಡಿಯಪ್ಪ
ಕೊಟಾರದಲ್ಲಿ ಯಾವ್ದು ಒಕ್ಕಣೆ ಮಾಡವಾಂಗಿಲ್ಲ
ಹೊರ್ಟ್ ಹೋಗಪ್ಪ ನಿನ್ನೂರ್ಗೆ
ಅರ್ಧ ತಿಂಗಳ ಸಂಬಳ ತಕಂಡು ಅಂತೇಳಿ
ಕೌದಳ್ಳಿಗೆ ಕಳ್ಸಬುಟ್ಟಳು ಕಂಬ್ಳಗಾರ ಮಲ್ಲಣ್ಣನ
ಯಾರು? ಕಾಳಮ್ಮ
ಈ ಕಡೆ ಮಕ್ಳು
ಏಳುಜನ ಕುರಿ ಹೊಡ್ಕಂಡು ಹೋಗವರೆ
ಮಾದಪ್ಪ ನಿಂತ್ಕಂಡು ನೋಡ್ದ ಅರೆಗಣ್ಣು ಕಿರಗಣ್ಣು ಬಿಟ್ಟು
ನನ್ನ ಮಕ್ಕಳ ಗೋಗಲ್ಲು ಮಾಡು ಅಮ್ತ ಹೇಳಿದ್ದಳು
ಇವತ್ತು ಅದೇ ರೀತಿ ಮಾಡಬೇಕು ಅಂತೇಳಿ
ಮೂಡ್ಲಗಿಡುವಿಗೆ ಹೋಗಿದ್ದಂತಹ ಮಕ್ಕಳಿಗೆ

ಅವರು ಅರೆಗಣ್ಣುಬಿಟ್ಟು ನೋಡವರೇ ಮಾಯಕಾರ || ನೋಡಿ ನಮ್ಮ ಶಿವನಾ ||

ಅರೆಗಣ್ಣು ಕಿರುಗಣ್ಣು ಬಿಟ್ಟು
ಮುತ್ತಿನ ಜೋಳಿಗೆಯಿಂದ ಏಳುಮಲೆ ಬಸ್ಮ ತೆಗ್ದು
ಇಂಬಿ ಮಳೆ ಒಡ್ಲಿಗೆ ಹೋಗಿ ನಿಂತ್ಗಂಡು
ಅ ಏಳು ಜನ ಮಕ್ಳ ಆ ಕಾಡಿನಲ್ಲಿ
ಕುರಿ ಮೇಯ್ಸವಂತ ಮಕ್ಕಳ ಮೇಲೆ ಪಿಡಿದ್ರು
ಏಳು ಜನ ಗೋಗಲ್ಲಾಗ್ ಬಿಟ್ರು
ಅವರ ಏಳುಂಡಿ ಕುರಿಯನ್ನೆ
ಕಿರುಬಗಳು ತ್ವಾಳಗಳು ಕಿತ್ತಾಡ್ಕ ತಿಂದುಬುಟ್ಟೊ
ಕಾಳಮ್ಮನಿಗೆ
ದೂರ್ ತಕ್ಕಂಡು ಹೋಗಿ ಹೇಳಿದರು
ಅಕ್ಕ ಪಕ್ಕದೋರೆಲ್ಲಾ
ಅಮ್ಮ ಕಾಳಮ್ಮ ನೋಡು
ನಿನ್ನ ಏಳು ಜನ ಮಕ್ಕಳು ಒಬ್ಬರು ಇಲ್ಲ
ಕಣ್ಣಿಗ್ ಕಾಣ್ಸುದಿಲ್ಲ ಒಂದೂ ಕುರಿ ಕಾಣ್ಸೊಲ್ಲ ಅಂದ್ರು
ಅ ಸನ್ಯಾಸಿ ಜಂಗುಮಯ್ಯ
ಕೇಳ್ದಾಗ ಶಾಪ ಹಾಕಿದ್ದೀ
ಅದೇ ರೀತಿ ಹಾಯ್ತಲ್ಲ ಅಂತೇಳಿ
ಏಳುಜನ ಸೊಸೇರು ಏಳ್ ಮುಂಡೆರಾದರು
ಸುಳು ಮುಂಡೇರಾದರು
ಮಾದೇವಾ ಇನ್ಯಾರಿದ್ದಾರೆ?
ಏಳುಜನ ಮೊಮ್ಮಕ್ಕಳವರೆ
ಇನ್ನು ಕಾಳಮ್ಮವಳೆ
ಇನ್ನು ಅವಳ ಹಟ್ಟಿ ಅದೇ
ಇನ್ನು ಐಶ್ವರ್ಯ ನೋಡಬೇಕಲ್ಲ ಅಂತೇಳಿ
ಕೌದಳ್ಳಿ ಬೀದಿಯೊಳಗೆ ಬಿಟ್ಟಿದ್ರಲ್ಲ ಕಿವ್ಡ್ ಮಾರಿ
ಯಾರು ಪಡ್ಲ ಕೈಲಾಸದಿಂದ ಹೋಗುವಾಗ
ಮಾಲ್ದ ಮಾರಿಯಾಗು ಅಂತ ಬಿಟ್ಟಿದ್ರಲ್ಲಾ
ಅ ಮಾರಿ ಕೂಗ್ತಾವ್ರೆ

ಅವರು ಕಿವ್ದ್ ಮಾರಿಯ ಕೂಗವರೆ ಮಾದೇವಾ || ನೋಡಿ ನಮ್ಮ ಶಿವನಾ ||

ಓ ಕೌದಳ್ಳಿ ಕಿವ್ದ್ ಮಾರಮ್ಮ
ಬಾರವ್ವ ನನ್ನ ಕಂದ ಅಂದ್ರು
ಮಾದಪ್ಪನ ಸಬ್ದ ಕೇಳಿ
ಆ ಕೆವ್ದ್ ಮಾರಮ್ಮ ಓಡೋಡ್ ಬರ್ತಾ ಅವ್ಳೆ ತಾಳಬೆಟ್ಕೆ
ಎನುಬುದ್ಧಿ
ಮಾದೇವ ನಿಮ್ಮ ಹತ್ರ ಬರ್ನಾರಿ ಬುಧಿ
ನಿಮ್ಮ ಉರ್ಗಣ್ ನೋಡಿದ್ರೆ ಭಯ
ನಿಮ್ಮ ಕಿಡುಗಣ್ ನೋಡಿದ್ರೆ ಭಯ
ನಮ್ಮ ಅಕ್ಕ ತಂಗೆರಿಗೆ ಉರಿಕೊಟ್ಟ್ದ್ದೆ
ನನ್ನ ತಂಗಿಯಾಗಿರ್ತಕಂತ ಮೂಕಳ್ಳಿ ಮಾರಿ
ಇಲ್ಲೆ ಅವ್ಳು ಕಾದವ್ಳೆ
ನನ್ನು ಕೂಡ ಕರ್ದೆಪ್ಪ ಅಂದ್ರು
ಇಲ್ಲ ಕಿವ್ದ್ ಮಾರಿ ವಡಕಳದಲ್ಲಿ
ಬೇವಿನ ಕಾಳಮ್ಮನ ಏಳು ಜನ ಗಂಡು ಮಕ್ಕಳಿದ್ದಾರೆ
ಮೊಮ್ಮಕ್ಕಳು
ಆ ಮೊಮ್ಮಕ್ಕಳಿಗೆ ರಾತ್ರಿ ಹೊತ್ತು ಹೋಗಿ ಸುರುವಾಗು
ರಾತ್ರಿ ಹೊತ್ತು ಕಂಡತಕ್ಷಣ
ಅಂಬ್ ಗ್ವಾರ ಅರಗ್ವಾರವಾಗಿ
ಬೆಳ್ಳಿ ಮೂಡಿ ಬೆಳಗಾಗುವ ಹೊತ್ತಿಗೆ ಮಕ್ಕಳು
ಸೂಲ್ಗಳ ಸೆಳ್ಕೊ ಅಂದ್ರು
ಮಾದಪ್ಪನ ಮಾತ ಕೇಳಿ
ಕೆವ್ದ್ ಮಾರಮ್ಮ

ಅವಳು ಬೇವಿನ ಹಟ್ಟಿಗೆ ನುಗ್ಗವಳೆ ಮಾರಮ್ಮ || ನೋಡಿ ನಮ್ಮ ಶಿವನಾ ||

ಬೇವಿನ ಹಟ್ಟಿಗೆ ನುಗ್ಗುವ ತಕ್ಷಣವೇ
ತೊಟ್ಲಲ್ಲಿ ಇದ್ದಂತಹ ಏಳ್ ಮೊಮ್ಮಕ್ಕಳಿಗೂ
ಸಳಿ ಜರ ಬಂದುಬುಡ್ತು
ಸೊಸೆರೆತ್ತಿ ತೊಡ ಮೇಲೆ ಹಾಕ್ಕಂಡ್ರು
ಅವರ ಕಿರಿಚಾಟ ಅರಚಾಟ ಬಿಡ್ನಿಲ್ಲ ಮಕ್ಕಳು
ಆದಎ ಮಾರಮ್ಮ ಯಾವಾಗ ಮೈದುಂಬುದ್ಲೊ
ಮಕ್ಕಳಲ್ಲಿ ಆ ಚಂಛಿ ಜಾಸ್ತಿ ಆಗಿಬುಡ್ತು
ಚಳಿ ಜರ ಜಾಸ್ತಿ ಆಗಿಬುಡ್ತು
ಚಳಿ ಜರ ಜಾಸ್ತಿ ಆಯ್ತು
ಅದ್ರು ಕೂಡ ಮೈದುಮ್ತುದುಮ್ತ
ಮಕ್ಕಳಿಗೆಲ್ಲಾ ಮೈಮೇಲೆ ಅಮ್ಮ ಕಂಡುಬುಟ್ಟಳು
ಆದರೂ ಕೂಡ
ಏಳು ಜನ ಸೊಸೆರು ತೊಟ್ಲಲ್ ಹಾಕೊಂಡು ತೂಗ್ತಾ ಅವರೆ
ಬೆಳಗಾನ ಮಕ್ಳು ಚಂಡಿ ಹಿಡಕಂಡು
ಗಾಬರಿಮಾಡಿ ಮಾದೇಶ್ವರನ ಮಾತ್ನಂತೆ ಆ ಕಿವ್ದ್ ಮಾರಿ
ಅಂಬುಗ್ವಾರ ಅರಗ್ವಾರವಾಗಿ ಆ ಏಳು ಜನ ಗಂಡುಮಕ್ಕಳಿಗುವೆ
ಏಳು ಜನ ಗಂಡುಮಕ್ಕಳ ಮೊಮ್ಮಕ್ಕಳ ಸೂಲ

ಅವಳು ಸಳಕಂಡು ಹೋಯ್ತವಳೆ ಕಾಳಮ್ಮ || ನೋಡಿ ನಮ್ಮ ಶಿವನಾ ||

ಕಿವ್ಡ್ ಮಾರಮ್ಮ ಏಳು ಜನ ಮೊಮ್ಮಕ್ಕಳ ಸೂಲ್ನು ಸೆಳ್ದಾಕಬುಟ್ಟಳು
ಏಳು ಜನ ಮೊಮ್ಮಕ್ಕಳು ಬಿರ್ದೋಗ್ ಬುಟ್ರು
ಕಾಳಮ್ಮ
ಸೊಸೆರೆಲ್ಲಾ ಗೋಳಾಡ್ತ ಕೂತಿದ್ದಾರೆ
ಹೊನ್ನುಣ್ಸೆ ಕಾಳಮ್ಮನ್ಗೆ
ಆವಾಗ ಪರೆ ಸ್ವಲ್ಪ ಕಡೆಮೆಯಾಯ್ತು
ರಾಗಿಪುಡಿ ಸಕ್ಕರೆ ಕುಡ್ಡು ಕುಡ್ಡು ಪೊರೆ ಬೆಳ್ದಿತ್ತು
ದೊಳ್ಳು ಸ್ವಲ್ಪ ಕಡಿಮೆ ಆಯ್ತು
ಸ್ವಲ್ಪ ಹಗ್ತಾಯ್ತು ಎದ್ ಬಂದಾ
ಏ ಕೆಟ್ಟಮುಂಡೇಮಕ್ಳೇ
ಏಳು ಜನ ಸೊಸೆರ್ನು ಕರ್ದು ಯಾತಕ್ಕೆ ಬಾಯ್ ಬಡಿತಿದ್ದಿರಿ
ಅವರ ಹಣೆ ಬರೆ
ಗ್ವಾರ್ದಮ್ಮ ಬಂದು ಗೋರ್ಕ ಹೊಯ್ತವಳೆ
ಇನ್ಯಾರಾರಾ ಮನ್ಸನ್ಯಾನರ ಒಡ್ದ
ಇಲ್ಲೇನಾರ ಕಾಯ್ಲೆ ಬಂತಾ
ಆ ಗ್ವಾರದಮ್ಮ ಯಾರೂ ಅಡ್ದಿ ಮಾಡಕಾಗೋದಿಲ್ಲ
ಗ್ವಾರದಮ್ಮ ಬಂದಮ್ಯಾಲೆ
ಗುಡಸ್ಕಂಡು ಹೊಂಟೊಯ್ತಾಳೆ ಕನ
ಎತ್ಗ ನಡೀರಿ ಅಂತೇಳಿ
ಏಳೂ ಜನ ಸೊಸೆರೆ ಕೈಲುವೇ
ಏಳುಜನ ಮೊಮ್ಮಕ್ಕಳ ಎತ್ಗಂಡು
ಬಾಣಗಾರ ಕೆಬ್ಬೆ ಹೊಲ್ದಲ್ಲಿ ಹೋಗಿ

ಅವಳು ಸಾಲು ಸಮಾದಿ ಮಾಡವಳೆ ಕಾಳಮ್ಮ || ನೋಡಿ ನಮ್ಮ ಶಿವನಾ ||

ಏಳು ಜನ ಮೊಮ್ಮಕ್ಕಳ್ನೊವೆ
ಸಾಲು ಸಮಾದಿ ಮಾಡಿಬುಟ್ಟು
ಇನ್ನೇನು ಮಾಡುವುದು
ಏಳುಜನ ಸೊಸೆರ ಕರಕಂಡು
ಕಾಳಮ್ಮ
ಹಿಂದೆ ಮಾಡ್ತ ಇದ್ನಲ್ಲ ನಾನು ಕೌದಳ್ಳಿ ಕ್ವಾಮ್ಟಗೇರಿ ಒಳಗೆ
ರಜ ಒಡ್ದು ರಂಗೋಲಿನಾದ್ರು ಬಿಡೋಣ
ಅಂತೇಳಿ ಕಾಳಮ್ಮ
ಏಳುಜನ ಸೊಸೆರ್ ಕರಕಂಡು

ಅವಳು ಕೌದಳ್ಳೀ ಬೀದಿಗೆ ಬರುತವಳೆ ಕಾಳಮ್ಮ || ನೋಡಿ ನಮ್ಮ ಶಿವನಾ ||

ಹರಹರ ಹೊನ್ನುಣ್ಸೆ ಬೇವಿನಕಾಳಮ್ಮ
ನನ್ನ ಮನೆಯಲಿ ದವಸ್ಸ ದಾನ್ಯವೆಲ್ಲ ಬರಿದಾಯ್ತು ಅಂತೇಳೀ
ಏಳು ಜನ ಸೊಸೆರ ಕರಕಂಡು
ಕೌದಳ್ಳಿ ಬೀದಿಯೊಳಗೆ
ರಜ ಒಡ್ದು ರಂಗೋಲಿ ಬಿಟ್ಟಗಂಡು
ಕೊಟ್ನೆ ಕೂಲಿ ಮಾಡಿ ಕಾಲ ಕಳೆಯೋಣ ಅಂತೇಳಿ
ಕೌದಳ್ಳಿ ಬೀದಿಗೆ ಬಂದು ಕಾಳಮ್ಮ

ಅವಳೂ ಕೊಟ್ನ ಕೂಲಿ ಮಾಡವಳೆ ಕಾಳಮ್ಮ || ನೋಡಿ ನಮ್ಮ ಶಿವನಾ ||

ಕ್ವಾಮಟಗೇರಿವಳಗೆ ಕೊಟ್ನ ಕೂಲಿ ಮಾಡ್ತ ಇದ್ದ ಕಾಳಮ್ಮ

ಆವಾಗಲೀಗ ಬಡಗಲಗೇರಿಯಿಂದ ಬಂದ
ಯಾರು? ಮಲ್ಲಣ್ಣನಾಗಿರ್ತಕ್ಕಂತ ಕಂಬಳಗಾರ ಮಲ್ಲಣ್ಣ
ಕೌದಳ್ಳಿ ಬೀದಿಯೊಳಗೆ ಬಂದು
ಅಯ್ಯೋ ಕಾಳಮ್ಮ ಎಷ್ಟು ಐಶ್ವರ್ಯ ಅಲಂಕಾರದಿಂದ ಬಾಳ್ತ ಇದ್ದೆ
ನಿನ್ನ ಅಹಂಕಾರ ಅಡವಿಪಾಲು ಮಾಡುಬಿಡ್ತು
ನಿನ್ನ ದುಷ್ಟ ಬಗ್ಗವೆಲ್ಲ ಇವತ್ತು ಹಾಳುಮಾಡಿ ಬಿಡ್ತು
ಅಯ್ಯೊ ಕಾಳಮ್ಮ
ನೀನು ಬಂದು ಕೊಟ್ನೆ ಕೂಲಿ ಮಾಡ್ತ ಇದ್ದಿಯಲ್ಲ
ನಿನ್ನ ಮನೆಯೊಳಗೆ ನಾನು
ಕಂಬ್ಳ ಕೂಲಿಯನು ಮಾಡಿ ಮಕ್ಕಳ ಸಾಕಿದ್ದವನು
ಇವತ್ತು ನನ್ನ ಎದುರಿಗೆ ನೀನು ಕೂಲಿ ಕಂಬ್ಳ ಮಾಡಬೇಡ ಕಾಳಮ್ಮ
ಬಾರ‍ವ್ವ ನನ್ನ ಮನೆಯೊಳಗೆ
ನಿನ್ನ ಏಳುಜನ ಸೊಸೆರ್ಗು ನಿನ್ನುವೇ
ಊಟ ಕೊಟ್ಟು ಅಡಿಗೆ ಮಾಡಿಕೊಡ್ತಿನಿ ಅಂತೇಳಿ
ಕಂಬಳಗಾರ‍ಮಲ್ಲಣ್ಣ

ತನ್ನ ಮನೆಗೆ ಕರಕಂಡು ಹೊಯ್ತವನೆ || ನೋಡಿ ನಮ್ಮ ಶಿವನಾ ||

ಕಂಬಳಗಾರ ಮಲ್ಲಣ್ಣ
ಕಾಳಮ್ಮ ಏಳುಜನ ಸೊಸೆರ್ನ ಕರಕಂಡು
ಮಟಮನೆಯಲ್ಲಿ ಹೋಗಿ ಕೂರ್ಸಿಕೊಂಡು
ಮಡದಿಗೆ ಹೇಳಿದ್ದಾನೆ
ನೋಡು ಮಡದಿ ನಿಂಗಮ್ಮ
ಈ ಕಂಬಳಗಾರ ಮಲ್ಲಣ್ಣ ಅಂದರೆ
ಈ ಹೊನ್ನುಣ್ಸೆ ಕಾಳಮ್ಮನ ಮನೆಯೊಳಗೆ
ಕಂಬಳ ಕೂಲಿಗೇದು ಕಾಲದಿಂದ
ನನ್ನ ಮಕ್ಕಳು ಮನೆಸಾಕಿ ಮನೆಕಟ್ಟಿದ್ದೆ
ಇವತ್ತು ಕಾಳಮ್ಮ ಐಸ್ವರ್ಯವಂತಳಾಗಿದ್ದ ಪುಣ್ಯವಂತೆ
ಇವತ್ತು ಬಂದು ಕ್ವಾಮಟಗೇರಿ ಬೀದಿಯೊಳಗೆ ರಜ ಹೊಡ್ದು
ರಂಗೋಲಿ ಬಿಟ್ಟು ಕೂಲಿಮಾಡ್ತಳೆ
ನನಗೆ ಹೊಟ್ಟೆ ಉರಿದು ಬಿಡ್ತು
ನನ್ನ ಕಣ್ಣ ಮುಂದೆ ನೋಡಲಾರಿ
ನನ್ನ ಮನೆ ಮಕ್ಕಳಿಗೆ ಸ್ವಲ್ಪ ಕಡಿಮೆ ಆದ್ರೂ ಆಗ್ಲಿ
ಅಡಿಗೆಯನ್ನ ಮಾಡಿ
ಆವಾಗ ಉಪ್ಪುನ ಸಾರ್ ಮಾಡು
ಕಾಳಮ್ಮನಿಗೆ
ಊಟಕ್ಕೆ ಚೆನ್ನಾಗಿ ಸಂತೋಷದಲಿ ಊಟಮಾಡ್ಸಿ
ನಾವು ಅವರ ಮನೆಗೆ ಕಳುಹೋಣ ಅಂತವರೆ
ಗಂಡನ ಮಾತ ಕೇಳ್ದ ಮಲ್ಲಣ್ಣನ ಹೆಂಡ್ತಿ ನಿಂಗಮ್ಮ
ಅಯ್ಯಯ್ಯೊ ಅಂತ ಪುಣ್ಯವಂತರು ನನ್ನಟ್ಟಿ ಬರ್ ಬಹುದ
ಭಾಗ್ಯ ಬಂದಂಗಾಯ್ತು ಅಂತೇಳಿ
ಒಡಾಡ್ಕಂಡು
ಮನೆಯೊಳಗೆ ಅಡಗೆನ ಮಾಡ್ತ ಇದ್ದಾಳೆ
ರಾಗಿ ಮುದ್ದೆಯನ್ನ ಮಾಡ್ದಳು
ಏಳುಜನ ಸೊಸೇರು
ಕಾಳಮ್ಮ ಎಂಟು ಜನ ಆಗಿದ್ದಾರೆ
ಅವರಿಗಾಗುವಷ್ಟು ಮುದ್ದೆ ಮಾಡಿಬುಟ್ಟು
ನಿಂಗವ್ವ ಅನ್ನೋಳು ಉಪ್ಪಿನ ಸಾರುಮಾಡಿ
ಆವಾಗ ಊಟಕ್ಕೆ ಬಡುಸ್ತೀನಿ ತಕಳವ್ವ ಅಂದಳು
ಅಯ್ಯೋ ತಾಯಿ ನಿಂಗಮ್ಮ
ನಾವಿಲ್ಲ ಊಟಮಾಡಿಕೊಂಡು ಹೊರ್ಟಹೋಗ್ ಬಿಟ್ರೆ ಹೊಟ್ಟೆ ತುಂಬ
ಸಾಯಂಕಾಲಕೆ ನಾವು ಹಾಗೆ ಮಲಗಬೇಕಾಯ್ತದೆ
ಮನೆಲಿ ಹೋಗಿ ಊಟ ಮಾಡ್ಕತ್ತಿವಿ
ಬೆಳಗರ್ದ ಮಡಿಕತ್ತಿವಿ ಅಂತೇಳಿ
ಆವಾಗ ಬುಟ್ಟಿಗೆ ತುಂಬಿಸ್ಕಂಡಳು
ಮಾದಪ್ಪ
ಅರಗಣ್ಣು ಕಿರಗಣ್ಣು ಬಿಟ್ಟು ನೋಡ್ತಾ ಇದ್ದಾರೆ
ಪತ್ರಯ್ಯ ಒಡ್ದಲ್ಲಿ ನಿಂತಕಂಡ್ರು ಆವಾಗ
ಆವಾಗ ಮಹಾದೇವ

ಅಯ್ಯಾ ಕಾರಯ್ಯ ಬಿಲ್ಲಯ್ಯ ಕರೆದವರೆ ಮಹಾದೇವ || ನೋಡಿ ನಮ್ಮ ಶಿವನ ||

ಬೇವಿನ ಹಟ್ಟಿ ಕಾಳಮ್ಮ
ಕಂಬಳಗಾರ ಮಲ್ಲನಟ್ಟಿಯಿಂದ
ಊಟ ತಂದು ಸಂತೋಷ ಪಡಬೇಕು ಅಂತವಳೆ
ನೋಡಪ್ಪ ನನ್ನ ಕಂದ ಕೋಲುಮಂಡೆ ಕಾರಯ್ಯ
ಕಾರಯ್ಯ ನೀನು ಹೋಗಿ
ಮಲ್ಲಣ್ಣನ ಹಟ್ಟಿಯೊಳಗೆ
ಅಟ್ಲಾ ಮೇಲೆ ತೊಲೆ ಮ್ಯಾಲೆ ಕೂತ್ಕೋ ಕೊತ್ತಿಯಾಗಿ
ಬಿಲ್ಲಯ್ಯಾ
ನೀನು ಹಟ್ಟಿಬಾಗ್ಲಲ್ಲಿ ಕಾಳ್ ನಾಯಿಯಾಗಿ ಕಾಯ್ಕಂಡು ಕುಂತಿರು
ಯಾವಾಗ
ಹಿಟ್ಟಿನ ಬುಟ್ಟಿಯನ್ನು ತಲೆಮ್ಯಾಲೆ ಹೊತ್ಕಂಡ್ಲೊ ಕಾಳಮ್ಮ
ಆ ಟೈಮಿಗೆ ಹಿಟ್ಟಿನ ಬುಟ್ಟಿಯ ಮೇಲೆ ನೆಗ್ದು
ಕೆಳಗಡೆ ಉಳ್ಳಸ್ ಬಿಡಪ್ಪ ನೀನು ಕಾರಯ್ಯ
ಬಿಲ್ಲಯ್ಯ
ಕಾಳ್ ನಾಯಿಯಾಗಿ ಕುಂತಿದ್ದು ನೀನು
ಬಿದ್ದಂತ ಮುದ್ದೆನೆಲ್ಲುವೆ
ಒಂದು ಸಿಕ್ಕದಾಗೆ ಎಲ್ಲನುವೆ ಕಚ್ಗಂಡು ಓಡ್ ಬಂದ್ಬುಡಪ್ಪ
ಅವಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರ್ದಾಗ್ ಮಾಡ್ತೀನಿ ಅಂತೇಳಿ
ಮಾದಪ್ಪ

ಕಾರಯ್ಯ ಬಿಲ್ಲಯ್ಯನ ಕಳಹವರೇ ಮಾದೇವ || ನೋಡಿ ನಮ್ಮ ಶಿವನಾ ||

ಯಾರಿಗೂ ಗೊತ್ತಿಲ್ಲ
ಕಾರ‍ಯ್ಯ ಬಿಲ್ಲಯ್ಯ
ಕೌದಳ್ಳಿ ಬೀದಿಲಿ ಬಂದು
ಮಾದಪ್ಪನ ಮಾತ್ನಂತೆ
ಕಾರಯ್ಯ ಮಲ್ಲಣ್ಣನ ಹಟ್ಟಿ ಒಳ್ಗೆ ತೊಲೆಮ್ಯಾಲೆ
ಕರಿಬೆಕ್ಕಾಗಿ ಕೂತಿದ್ದಾರೆ ಕೊತ್ತಿಯಾಗಿ
ಬಿಲ್ಲಯ್ಯ ಕಾಳ್ ನಾಯಾಗಿ
ಮಲ್ಲಣ್ಣನ ಹಟ್ಟಿ ಮುಂದುಗಡೇ
ಜಗಲಿ ಮೇಲೆ ಕಾದು ಕೂತಿದ್ದಾರೆ
ಆವಾಗಲೀಗ ಕಾಳಮ್ಮ
ಮಲ್ಲಣ್ಣನ ಹೆಂಡತಿ ನಿಂಗಮ್ಮಾ
ಏಳೇಳು ಹದಿನಾಲ್ಕು ಮುದ್ದೆ ಹಿಟ್ ಮಾಡಿ ಬುಟ್ಟಿಗೆ ತುಂಬ್ದಳು
ಉಪ್ಪಿನ್ ಸಾರುಮಾಡಿ ಒಂದು ಗಡಿಗೇಲಿ ತುಂಬ್ದಳು
ಹಿರಿಸೊಸೆ ಕರ್ದು ಮಲ್ಲಾಜಮ್ಮನ
ಬಾ ತಾಯಿ ಮಲ್ಲಾಜಮ್ಮ ನೀ ಹೊತ್ಕೊ ಅಂತೇಳಿ
ಮಲ್ಲಾಜಮ್ಮನ ನೆತ್ತಿಮೇಲೆತ್ತಿ
ಹಿಟ್ಟಿನ ಬುಟ್ಟಿಯನು ಮಡುಗಿದ್ರು
ಹಿಟ್ಟಿನ ಬುಟ್ಟಿ ಹೊತ್ಕಂಡು
ಮಲ್ಲಾಜಮ್ಮ ಒಳಗಡೆ ಹಟ್ಟಿಯಿಂದ
ಇನ್ನೂ ಈಚೆಗೆ ಬರ್ಲಿಲ್ಲ
ಹಟ್ಟಿ ಬಾಕ್ಲಿಗೆ ಬಂದ್ ಕ್ಷಣ
ಕಾರಯ್ಯ ತಲೆ ಮೇಲೆ ಕೊತ್ತಿಯಾಗಿ ಕೂತಿದ್ದು

ಅವನು ಹಿಟ್ಟಿನ ಬುತ್ತಿಯ ಮೇಲೆ ನೆಗೆದವನೆ ಕಾರಯ್ಯ || ನೋಡಿ ನಮ್ಮ ಶಿವನಾ ||

ದಬಕ್ಕನೆ ಬೆದ್ರಾಡ್ಬುಟ್ಟು
ಹಿಟ್ನ ಬುಟ್ಟಿ ಮೇಲೆ ನೆಗೆದು ಕರಿ ಬೆಕ್ಕಾಗಿ
ಕಾರ‍ಯ್ಯ ನೆಗದಾಡ್ಬುಟ್ನೊ
ಮಲ್ಲಾಜಮ್ಮ ಭಯವಾಗಿ ಹಿಟ್ಟಿನ ಬುತ್ತಿ ಕೆಳಕ್ಕೆ ಬಿಸಾಕ್ ಬುಟ್ಟಳು
ಕೆಳಗಡೆ ಹಟ್ಟಿ ಬಾಗಿಲಲ್ಲಿ
ಮುದ್ದೆಲ್ಲಾ ಹಂಡಾಡ್ ಬುಡ್ತು
ಕಾಳನಾಯಾಗಿ ಕುಂತಿದ್ನಲ್ಲ ಬಿಲ್ಲಯ್ಯ
ಬಿದ್ದಂತ ಮುದ್ದೆಯನ್ನೆ
ಗಬಗಬನೆ ಬಾಯಿಲೆತ್ಕಂಡು

ಅವರು ಬಿದ್ದು ಓಟ ಬಿಳ್ತವರೆ ಬಿಲ್ಲಯ್ಯ || ನೋಡಿ ನಮ್ಮ ಶಿವನಾ ||