ಕಾಳಮ್ಮ ಹಿಂದ್ಗಡೆ ನಿಂತಿದ್ದಳು
ಅಯ್ಯೋ ಮುಂಡೆ ಮಗಳೆ
ನಿಮ್ಮಪ್ಪನ ಮನೆ ಹಾಳಾಗ
ಕೈಗ್ ಬಂದ್ ತುತ್ತು ಬಾಯ್ಗ್ ಬರ್ದೆ ಹೊಯ್ತಲ್ಲಾ
ಬದ್ರಾಗಿ ಹಿಟ್ಟಿನ ಬುಟ್ಟಿ ಹೊತ್ಕಬಾರ್ದ ನೀನು
ಮಲ್ಲಣ್ಣ
ಏನಾರಮಾಡಬೇಕಪ್ಪ ಇವಾಗ
ಕಾಳನಾಯಿ ಇಲ್ಲೆ ಕೂತಿತ್ತು
ಬೆಕ್ಕಲ್ ಕಾದಿತ್ತಪ್ಪ
ಇದು ನನ್ನ ಅದೃಷ್ಟಮಲ್ಲಣ್ಣ
ಆದ್ರೂ ಆಗ್ಲಿ
ಹೊಲಮಾಳ್ ದಲ್ಲಿ ಹೋಗಿ
ಅಣ್ಣೇ ಸೊಪ್ಪಿನಾದ್ರು ಕೊಯ್ಕಂಡುಹೋಗಿ
ಸೊಪ್ಪನಾದರೂ ಬೇಯ್ಸ್ಗಂಡು
ಸಪ್ಪೆ ಸೊಪ್ಪತಿಂದು ನೀರು ಕುಡಿತಿವಿ ಅಂತೇಳಿ

ಕೌದಳ್ಳಿ ಬೀದಿ ಬಿಟ್ಟು ಬರ್ತವಳೆ ಕಾಳಮ್ಮ || ನೋಡಿ ನಮ್ಮ ಶಿವನಾ ||

ಕೌದಳ್ಳಿ ಬೀದಿವಳಗೆ ನಾನು ಕೊಟ್ನ ಕೂಲಿ ಮಾಡಿದ್ರೆ
ಮಲ್ಲಣ್ಣ ನನಗೆ ಭಯವಾಗುತ್ತೆ
ನಾಚಿಕೆ ಆಗುತ್ತದೆ
ಐಸ್ವರಿಯಾದ ಮುಂಡೆ
ಐಸಿರಿಯಲ್ಲಿ ಬಾಳುತಿದ್ದಳು
ಬಂದು ಕೂಲಿ ಮಾಡ್ದಳು ಅಂತ ಹೇಳ್ತಾರೆ
ಈ ಕೌದಳ್ಳಿ ಬೀದಿಗೆ ನಾವು ಬರಬಾರ್ದು ಬನ್ರಮ್ಮ ಅಂತೇಳಿ
ಏಳು ಜನ ಸೊಸೆರ್ನ ಕರಕೊಂಡು ಕಾಳಮ್ಮ
ಪಕ್ಕದಲ್ಲಿ ಕೆಂಪಯ್ಯನಟ್ಟಿ
ಕುರುಟ್ಟಿ ಹೊಸೂರು ಅಂತಾದೆ
ಆ ಊರ್ ಲಾದ್ರು ಹೋಗಿ
ಒನ್ನೊಂದು ಮೂರು ದುಡ್ಡಿಗೆ ಕಳೆ ಕಂಬ್ಳನಾದ್ರು ಕಿತ್ತು
ನಮ್ಮ ಹೊಟ್ಟೆ ಜೀವ್ನ ಮಾಡೋಣ ಬನ್ನಿ ಅಂತೇಳಿ

ಅವಳು ಕೆಂಪಯ್ಯನಟ್ಟಿಗೆ ದಯ ಮಾಡವಳೇ ಕಾಳಮ್ಮ || ನೋಡಿ ನಮ್ಮ ಶಿವನಾ ||

ಬಲಗೈಲಿ ಒಂದು ಕಳೆ ಕುಡ್ಲಿಡ್ಕಂಡಳು
ಏಳು ಜನ ಸೊಸೆರ್ನು ಕರಕಂಡು
ಕೆಂಪಯ್ನಟ್ಗೋದಳು
ಯಾರೂ ಕೂಡ ಇವಳ ಮಾತಾಡ್ಸವರಿಲ್ಲ
ಆವಾಗ ಹೇಳಿದ್ರು ಕೆಂಪಯ್ನಟ್ಟಿ ಒಳಗೆ
ಗಂಡಾನಾದ ಕೆಂಡೇಗೌಡ್ನ ದಾಯಾದಿಗಳಿದ್ರು ಯಾರೋ ಗುರುತ್ನೊರು
ಓಹೋ ಹೊನ್ನುಣ್ಸೆ ಕಾಳಮ್ಮ
ಇಲ್ಲಿ ಬಂದವಳೇ ಕೆಂಡೇಗೌಡನ ಹೆಂಡ್ರಿ
ಗಂಡ ಸತ್ತೋದ್ ಮೇಳೆ ಐಸ್ವರ್ಯವಾಗಿದ್ದವಳು
ಇವತ್ತು ಈ ರೀತಿಯಾಗಿ ಬಂದವಳೆ
ಏನ್ರಪ್ಪ ಇವಳ ಯಾವ ರೀತಿ ಕರೆಯೋಣ ಅಂತೇಳಿ
ಯಾರೂ ಕೂಡ ಮಾತ್ನಾಡ್ತಾ ಇಲ್ಲ
ಕುರಟ್ಟಿ ಹೊಸೂರ್ನ
ಬೀದಿ ಒಳಗೆಲ್ಲ ಸುತ್ತ ಯಾರೂ ಕೂಲಿಗ್ ಕರಿಲಿಲ್ಲ
ಕೆಂಪೈನಟ್ಟಿ ನೋಡುಕಂಡಳು ಅಲ್ಲಿ ಕೂಡ ಯಾರೂ ಕರಿಲಿಲ್ಲ
ಅದೆ ಪಕ್ಕದಲ್ಲಿ ನಾಯಿನತ್ತ ಅಂತ ಒಂದು ಊರದೆ
ಆ ನಾಯನತ್ನಲ್ಲಿ ಹೋಗಿ ಕೇಳ್ದಳು
ಅಲ್ಲಿ ಕೂಡ ಯಾರೂ ಕರಿಲಿಲ್ಲ
ಇದು ನಮ್ಮ ಹಣೆ ಬರಹ
ಬನ್ನಿರಮ್ಮ ಅಂತೇಲಿ
ಆವಾಗ ಕಾಳಮ್ಮ ಹೊಲ ಮಾಳದ ಮೇಲೆ

ಅಣ್ಣೆಸೊಪ್ಪ ಕೊಯ್ಕಂಡು ಬರುತವಳೇ ಕಾಳಮ್ಮ || ನೋಡಿ ನಮ್ಮ ಶಿವನಾ ||

ಅಣ್ಣೆಸೊಪ್ಪು ಕೊಯಿಕಂಡು ಬಂದು
ಏಳೇಳ್ ಹದಿನಾಲ್ಕು ಹಟ್ಟಿ ಬರಿಹಟ್ಟಿ ಆಗದೆ
ಅಯ್ಯಾ ಪರಮಾತ್ಮ
ಮಾಳಗ ಮನೆಯಲ್ಲಿ ಹೋಗಿ
ಅಯ್ಯೋ ಸೊಸೆ ಮುಂಡೇರೆ
ನಿಮ್ಮ ಹಣೇ ಬರಹ ಏನಿರಬಹುದು
ನಿಮ್ಮವ್ವ ಏನು ನನಗೆ ಕೊಟ್ಟಿರಲಿಲ್ಲ
ಯಾರೋ ನನಗೆ ಭಾಗ್ಯ ಕೊಟ್ರು ನನ್ನ ಹಣೇಬರದಿಂದ
ಆದ್ರೆ ನನ್ನ ಭಾಗ್ಯವೆಲ್ಲಿ ಬರ್ದಾಗಿದೆ
ಬೇಯ್ಸಿ ಅಂತ ಹೇಳಿ
ಅಣ್ಣೇ ಸೊಪ್ಪು ಬೆಯ್ಸಿಗಂಡು
ಅಣ್ಣೆ ಸೊಪ್ಪು ತಿಂದು ನೀರು ಕುಡಕಂಡು
ಅಷ್ಟು ಹೊತ್ತಿಗೆ ಮಾದೇವಾ
ಇವಾಗಲಾದ್ರೂ ನೋಡೋಣ
ಈ ಬೇವಿನಕಾಳಮ್ಮನ ದುಡ ಹ್ಯಾಗಿದೆ ಅಂತೇಲಿ

ಅವರು ಕೊರಮಂಜಿ ಯಾನ ತಾಳವರೆ ಮಾಯಕಾರ || ನೋಡಿ ನಮ್ಮ ಶಿವನಾ ||

ಕೊರವಂಜಿ ಯಾಸ ತಾಳ್ಕಂಡು
ಒಂದು ಬುಟ್ಟಿ ನತ್ತಿಮೇಲಿಟ್ಟುಕಂಡು ಮಾಯಕಾರ
ಶಾಸ್ತ್ರ ಹೇಳ್ತೀನಿ ಅಂತೇಳಿ
ಆ ಹೊನ್ನುಣ್ಸೆ ಬೇವಿನಕಾಳಮ್ಮನ
ಹಟ್ಟಿ ಮುಂದುಗಡೆ ಬೀದಿಗುಂಟ ಸಾರ್ಕಂಡು ಹೊಯ್ತಾ ಇದ್ರು
ಕಾಳಮ್ಮ ಓಡ್ ಬಂದಳು
ಅಷ್ಟು ಹೊತ್ಗೆಲ್ಲಾ ದೊಳ್ಳು ಕರ್ಕ್ಗೋಗದೆ
ಬಡಸ್ತಾನ ಬಂದ ಮೇಲೆ ಉಳದದ
ಆವಾಗ ಕಣ್ಣಿನ ಪರೆಯಲ್ಲ ಸುಂಡೋಗದೆ
ಓಡ್ ಬಂದು ಯಾರಪ್ಪ ಕೊರವಂಜಿ
ಬಾರವ್ವ ಬಾರವ್ವ ಅಂತೇಳಿ ಕರೆದಳು
ಹಟ್ಟಿ ಬಾಕಲಿಗೆ ಹೋದ ಮಾದಪ್ಪ
ನಾನು ಕಣಿಶಾಸ್ತ್ರ ಹೇಳೋಳು ಕಾಳಮ್ಮ ಅಂದ್
ಕೂತ್ಕಪ್ಪ ಕೊರವಂಜಿ ಕೂತ್ಕವ್ವ
ನಾನು ಬಾಳ ಐಸ್ವರ್ಯದಿಂದ ಬಾಳ್ತೆ ಇದ್ದಿ

ನನಗೆ ಶಾಸ್ತ್ರ ಹೇಳು ಅಂತವಳೇ ಕಾಳಮ್ಮ || ನೋಡಿ ನಮ್ಮ ಶಿವನಾ ||

ಅಯ್ಯೋ ಕೊರವಂಜಿ ಶಾಸ್ತ್ರ ಹೇಳು ಅಂದಾಗ
ಕೊರವಂಜಮ್ಮ ಕವಡೆ ತಕಂಡಳು
ತನ್ನ ಬುರುಡೆ ಕೈಲಿಡುಕಂಡಳು
ಒಳಗೆ ಗಗ್ಗರ ತುಂಬವಳೆ ಆ ಬುರುಡೆವೊಳಗೆ
ಕೊರವಂಜಿ ಗೂಡೆಯಿಂದ ಎತ್ಗಂಡಳು
ಕವಡೆ ಬುಟ್ಟು ನೋಡ್ದಳು
ಮೂರು ಬಂದುಬುಡ್ತು
ಏನು ಕಾಳಮ್ಮ
ಯಾವ ದೇವರೋ ಸಿಕ್ದಿ ಅದೆ ನಿನಗೆ ಅಂದಳು
ಯಾವ್ ದೇವ್ರು ಇಲ್ಲವಲ್ಲವ್ವ
ನನ್ನ ಮನೆದೇವ್ರು ಅಂದ್ರೆ
ಬೆಳ್ ತೋರಿದ್ರ ಹಸ್ತ ನುಂಗ್ ವಂತ ದೇವ್ರು
ಅಂತ ದೇವ್ರಗಳೂ ಕೂಡ ನನ್ನ ಈ ಟೈಮ್ ನಲ್ಲಿ ಕಾಯ್ನಿಲ್ಲ
ಆ ದೇವರಿಗೆ ನಾನು ಮೂರು ಕಾಸು ದೂಪ ಹಾಕೋದಿಲ್ಲ
ಮೆಣಸಿನಕಾಯಿ ದೂಪ ಹಾಕಿಬುಡ್ತಿನಿ
ಇನ್ನು ಯಾವ್ ದೇವರಿಗಾದ್ರೂ
ಒಕ್ಕಲಾಯ್ತಿನಿ ನೋಡು ಕೊರವಂಜಿ ಅಂದಳು
ಮತ್ತೊಂದು ಸಾರಿ ಕೊರವಂಜಿ ಯಾಸದಲ್ಲಿ
ಮಾಯಕಾರ ಅಂಡ ಕವಡೆ ಬುಟ್ಟ
ಐದು ಬಂದುಬಿಡ್ತು
ಈಗ ನೆನ್ಸಕಳವ ಯಾವ ದೇವರು ಬೇಕು ನಿನಗೆ ಅಂದಳು
ನಾನು ಯಾವ ದೇವರ ಹೆಳ್ಳಿ
ನೀನೆ ಹೇಳಿಕೊಡಪ್ಪ ಕೊರವಂಜಿ ಅಂದಳೂ
ನೋಡು ಕೊರವಂಜಿ
ಈಗೋ ನೋಡು ಮೂಡ್ಲಾಗಿ
ಏಳುಮನೆ ಕೈಲಾಸದಲ್ಲಿ ಯಾರೋ ಮಾಯಕಾರ ಗಂಡ
ಮಾದಪ್ಪ ಅಂತ ಅವ್ನೆ
ಬ್ಯಾಡಗಂಪ್ಣದ ಮಲೆಯೊಳಗೆ
ಆ ಮಲೆಮಾದೇಸ್ವರನಿಗೆ
ನೀನು ವಕ್ಕಲು ಆಯ್ತಿನಿ ಅಂತ ಹೇಳಿ
ಕಾಣಿಕೆ ಕಟ್ಟಿಕಂಡ್ರೆ
ತಿರಗ ಬಾಗ್ಯ ಎಚ್ಚುತ್ತೆ ಅಂದ್ರು
ಅಯ್ಯಯ್ಯೋ ಕೊರವಂಜಮ್ಮ
ಅ ಮಾದೇಶ್ವರ ನನಗೆ ಭಾಗ್ಯಕೊಟ್ಟು ಹೋಗಿದ್ದ
ಆದರೆ
ಅವನ ಹೆಸರಿನ ಮೇಲೆ ನಾನು ಹೋಗಿ
ಮೂರು ಕಾಸಿನ ದೂಪ ಹಾಕ್ನಿಲ್ಲ
ಅದರಿಂದ ನಾನು ಮರತೋಗ್ ಬುಟ್ಟಿ ಮಾದಪ್ನ
ಅದರಿಂದ ನನಗೆ ಬಾಳ ಬಡಸ್ತಾನ ಬಂತು
ತಿರಗ ಹೋಗಿ ನಾಚಿಗೆಲ್ದೆ ನಾನವುನ್ನ ಕೇಳೊದಿಲ್ಲ
ಇನ್ನಾವ ದೇವ್ರಗಾದ್ರೂ ಒಕ್ಕಲಾಗ್ತಿನಿ
ನೋಡು ಕೊರವಂಜಿ ಅಂತೇಳಿ
ತಿರಗ ಮೂರ್ನೆ ಸಾರಿ ಶಾಸ್ತ್ರ ಬಿಟ್ಟಳು
ಏಳು ಬಂದು ಬುಡ್ತು
ಕಾಳಮ್ಮ
ನಿನ್ಗೆ ಮಾತ್ರ ಭಾಗ್ಯ ಬರೋದಿಲ್ಲ

ನಿನಗೆ ಇದೆ ಬಾಗ್ಯ ಅಂತವಳೆ ಕೊರವಂಜಿ || ನೋಡಿ ನಮ್ಮ ಶಿವನಾ ||

ಕಾಳಮ್ಮ
ದೇವರಿಗೆ ಮರೆಬಿದ್ದು ಒಕ್ಕಲಾಗು ಅಂದ್ರೆ
ಆಂಕಾರಪಡ್ತ ಇದ್ದಿಯಲ್ಲಾ
ನಿನ್ನ ಆಂಕಾರ ಅಡವಿ ಪಾಲ ಮಾಡ್ ಬುಡ್ತು
ನಿನ್ನ ದುಷ್ಟಮೆರುಗ
ನಿನ್ನ ದೂಷ್ಣೆ ಮಾಡ್ ಬುಡ್ತು ಕಾಳಮ್ಮ
ನಿನ್ನ ಹಣೆಬರ ಇದ್ದಂಗೆ ಬಾಲು ಅಂತೇಲಿ
ಮಾಯಕಾರಗಂಡ ಕೊರವಂಜಿ ಗೂಡೆ ಎತ್ತಿಕಂಡು
ನಾನು ಒಯ್ತಿನಿ ಕಾಳಮ್ಮ ಅಂತೇಳಿ
ಕೊರವಂಜಿ ಗೂಡ ಒತ್ತಕಂಡು

ಅವರು ಮೂಡಲಾಗಿ ದಯಮಾಡವರೆ ಕೊರವಂಜಿ || ನೋಡಿ ನಮ್ಮ ಶಿವನಾ ||

ಆವಾಗ ಸೊಪ್ಪನಾದ್ರು ಕೂದು
ಸೊಪ್ಪು ಬೆಯ್ಸಿ
ಸಪ್ಪೆಸೊಪ್ಪು ಬೆಯ್ಸಿ ತಿಂದು ನೀರು ಕುಡ್ದು
ಕಾಲಮಾಡ್ತ ಇದ್ರು
ಕಾಳಮ್ಮನಿಗೆ ಬರಗಾಲ ಬಂದುಬುಡ್ತು
ಮಳೆಗಾಲ ಯಾವಾಗ ಇಲ್ದೆ ಒಯ್ತೋ ಕುಡಿಯಕೆ ನೀರಿಲ್ಲ
ಕಾಡ್ನಲ್ಲಿ ಸೊಪ್ಪು ಸೆದೆ ಕೂಡ ಇಲ್ಲ ಮೆಳೆಯೊಳ್ಗೆ
ಆವಾಗ ಏಳು ಜನ ಸೊಸೆರ್ನು ಕರ್ದು
ಅಮ್ಮ ಸೊಸೆರೇ
ನಿಮ್ಮ ನಿಮ್ಮ ತವರು ಮನೆಗೆ ಹೊರ್ಟೋಗಿ
ನನ್ನ ಹಣೇಬರ ಇದ್ದಾಗಾಗ್ಲಿ
ನನ್ನ ಗರದಲ್ಲಿ ಈ ಅಟ್ಟಿ ಬುಟ್ಟು ನಾ ಆಚೆಗೆ ಹೋಗುದಿಲ್ಲ
ಇಲ್ಲೆ ನನ್ನ ಜಲ್ಮ ಅಳದೋದ್ರು ಸರಿ ಅಂತೇಳಿ
ಏಳುಜನ ಸೊಸೆರ್ನ ಕರ್ದು ಬುದ್ಧಿ ಹೇಳ್ದಳು
ಆರುಜನ ಸೊಸೆರುವೆ
ಅವರವರ ತವರು ಮನೆಗೆ ಹೊರ್ಟ ಹೋದರು
ಹಿರೀ ಸೊಸೆಯಾಗಿರ್ತಕ್ಕಂತ ಮಲ್ಲಾಜಮ್ಮ
ಅತ್ತಮ್ಮ ನಿನ್ನ ಬಿಟ್ಟು ನಾನ್ ಹೋಗಲಾರಿ
ನೀನು ಪ್ರಾಣ ಬಿಟ್ಟ ಜಾಗದಲ್ಲಿ ನಾನು ಬಿಡ್ತಿನಿ ಅಂತೇಳಿ
ಆವಾಗಲೀಗ ಕಾಳಮ್ಮನ ಜೊತೆಯೊಳಗೆ

ನಿದ್ರೆ ಮಾಡಿ ಮಲಗವಳೆ ಮಲ್ಲಾಜಮ್ಮ || ನೋಡಿ ನಮ್ಮ ಶಿವನಾ ||

ಮಾಯಕಾರ ಗಂಡ ಮಾದಪ್ಪ
ಸುದ್ದ ಸುಕ್ರುವಾರ ಬಂದು ಸೋಮವಾರ‍ಬುಟ್ಟು
ಅದೇ ರೀತಿಯಾಗಿ ಮುತ್ತಿನ ಜೋಳಿಗೆ ಧರಿಸಿಕೊಂಡು
ಇವತ್ತಾದರು ಭಿಕ್ಷಕ್ಕೆ ಬಂದಳೋ
ಇಲ್ಲಿ ಹಟ್ಟಿಬಾಗಲಿಗೆ ಬಂದು ಏನು ಉಕ್ತಿ ಹೇಳಳೊ ಕಾಳಮ್ಮ
ಈವತ್ತು ಇಂತ ಮುಂಡೆ ಮಡಗಬಾರ್ದು ಮನೆಯೊಳಗೆ
ಅಂತೇಳಿ ಮುತ್ತಿನ ಜೋಳಿಗೆ ಮುಂಗೈಲಿ ಧರ್ಸಿಕಂಡು
ಬೀರನಾಗಿ ದುಂಡಕೋಲು ಹಿಡಕಂಡು
ನನ್ನಪ್ಪಾಜಿ ಏಕಾಂಗಿ ಇವತ್ತೂ
ಒಕ್ಕಳಗಂಟೆ ಹುಲಿಚರ್ಮ ಅಷ್ಟಪಾದ್ಕೆ ಅಮೀರಗೆಜ್ಜೆ
ಕೊರಳ್ ತುಂಬ ರುದ್ರಾಕ್ಷಿ ಮುಕ್ಕಣ್ಣು ಕುಲಾವಿ ದರಿಸಿಕಂಡು

ಅವರು ಬೇವಿನಹಟ್ಟಿ ಬಾಗಿಲಿಗೆ ಬರುತವರೆ ಮಹದೇವಾ || ನೋಡಿ ನಮ್ಮ ಶಿವನಾ ||

ಬೇವಿನಟ್ಟಿ ಬಾಗಿಲಗೆ ಬಂದು ನನ್ನಪ್ಪಾಜಿ ಕಿಡಗಣ್ಣು ಮೂರ್ತಿ
ಪಂಚೇಳಕ್ಸರ ಕ್ವಾರಣ್ಯ ಸಾರುದ್ರು
ಯಾವುದು ಧರ್ಮಗುರು ಕ್ವಾರಣ್ಯದ ಭಿಕ್ಷ
ಭವತಿ ಭಿಕ್ಷಾಂದೇಹಿ
ಗುರುಧರ್ಮ ಕ್ವಾರಣ್ಯ ಬಿಕ್ಷಾ ಅಂತ ಹೇಳೆ
ಲಿಂಅದ ಮೊರ್ತ ಜಂಗ ಸಬ್ದ ಮಾಡಿದ್ರು
ಆವಾಗ ಕಾಳಮ್ಮ ಎದ್ದು ಓಡಿಬಂದಳು
ಇಂದುಗುಟ್ಟ ಸೊಸೆ ಮಲ್ಲಾಜಮ್ಮ ಓಡಿಬಂದಳು

ಇನ್ನು ಅತ್ತೆ ಮುಂದೆ
ನಾನು ಹೋಗಿ ಮಾದೇಶ್ವರ್ನ ಹೆಸ್ರ ಹೇಳಿಬುಟ್ರೆ
ನನ್ನ ಮಡಗೋದಿಲ್ಲ ಕೆಟ್ಟ ಮುಂಡೆ ನಮ್ಮತ್ತಮ್ಮ
ಇವತ್ತು ಅವಳೆ ಮಾತಾಡ್ಲಿ ಅಂತ ನಿಂತ್ಕಂಡಳು ಹಿಂದ್ಗಡೆ
ಯಾರು ಮಲ್ಲಾಜಮ್ಮ
ಕಾಳಮ್ಮ ಅಟಿಯಿಂದೀಚಿಗ್ ಬಂದು
ಯಾರಪ್ಪ ಜಂಗುಮದೇವ್ರೆ
ಭವತಿ ಭಿಕ್ಷಾಂದೇಹಿ ಅಂತ ಕೇಳ್ತ ಇದ್ದಿಯಲ್ಲ
ನನ್ನ ಮನೆಯೊಳಗೆ ಏನಿದಿಯಪ್ಪ ಅಂದ್ರು
ಅಯ್ಯೋ ಕಂದಾ ಕಾಳಮ್ಮ ಆಗನ್ನಬ್ಯಾಡ
ನಿನ್ನ ಮುತ್ತೈದೆಸ್ಥಾನ ಹಾಳಾಗಿಬುಡ್ತು
ಆದರೂ ಹೇಳ್ತ ಇದ್ದಿನಿ ಕೇಳು ಕಾಳಮ್ಮ
ನೀನು ಹಿಂದೆ ಯಾವ ರೀತಿಯಾಗಿದ್ದೆ ಕಾಳಮ್ಮ
ಗಂಡ ಹೆಂಡಿರಿಬ್ಬರು ಒಂದಂಕಣ ಸೊಪ್ಪಿನ ಗುಡ್ಲು ಅಕ್ಕಂಡಿ
ಒಂದೊರೆ ಹುಲ್ಲು ಕೂಯ್ಕಂಡು ಒಂದೊರೆ ಸೌದೆ ಆಯ್ಕಂಡು
ಈ ಕೌದಳ್ಳಿ ಕ್ವಾಮ್ಟಗೇರಿಲಿ ಮಾರ್ತ ಇದ್ರೆ
ಅದರು ನನ್ನ ಬಡಸ್ತಾನ ಬಯಲು ಮಾಡಿದ ದೇವರ್ಗೆ
ಒಕ್ಕಲಾಗ್ತಿನಿ ಅಂತ ಹೇಳ್ದೆಲ್ಲಾ
ಒಂದು ಬಿಡಿಗಾಸು ಕಟ್ರ ಇದ್ದೆ ಕಾಣ್ಕೆ
ಆವಾಗ ಯಾರು ನಿನಗೆ ಭಾಗ್ಯಕೊಟ್ಟರು ಅಂದ್ರು
ಅಪ್ಪ ಜಂಗುಮರೆ
ಪಡ್ಲ ಕೈಲಾಸದಿಂದ ಹೋಯ್ತ ಇದ್ರು ಜಂಗಮರು
ಉತ್ತರ ದೇಶದ ಮಾದೇಶ್ವರನಂತೇ
ಆ ಮಾದೇಸ್ವರನ ಬಾಲ ಹಿಡಕಂಡೇ
ಅ ಮಾದಪ್ಪನೇನು ಹೊತ್ಕ ಬಂದ್ ಕೊಡ್ಲಿಲ್ಲ ನನ್ಗೆ
ನಮ್ಮ ತಂದೆ
ಅಲಗೇಗೌಡ ಮಡಗಿದಂತ ಹೊನ್ನು ಬಂಗಾರ ಕೊಟ್ರು
ಆ ಎರಡು ಗಡ್ಗೆ ಹೊನ್ನಿಂದ ನಾನು ಐಸ್ವರ್ಯವಂತಳಾಗಿದ್ದೆ
ತಿರ್ಗ ಬಂದು ಯಾರೋ ಜಂಗುಮಯ್ಯ
ಅ ಮಾದಪ್ಪನಿಗೆ ಒಕ್ಕಲಾಗಬೇಕು ಎಳ್ ಕೊಡು ಅಂತೇಳಿ
ಜಡಮುಡಿ ಆಡ್ದ
ನಾನು ಕೊಡ್ದೆ ಹೋದಿ
ಸತ್ಯಬಂದಾನ ಮಾಡ್ದಿ
ನನ್ನ ಬಾಯಿನಲ್ಲಿ
ನಿಡ್ ನಾಲ್ಗೆ ಒಳಗ್ ಮತ್ತದೆ
ಮತ್ ನಾಲ್ಗೀಲಿ ಅಡ್ಡ ಮಾತು
ಅದು ಹುಸಿ ಆಗ್ನಿಲ್ಲ
ನಾನಾಡಿದ ಮಾತಿನಂತೆ
ನನ್ನಟ್ಟಿ ಎಲ್ಲಾ ಬರ್ದಾಗ್ ಬುಡ್ತು
ನನ್ನ ಕೊಟ್ಟಿಗೆ ಬರಿದಾಯ್ತು
ನನ್ನ ಐಸ್ವರ್ಯ ಆಳಾಯ್ತು ಕಣಪ್ಪ
ಈಗ ಏನು ಮಾಡಬೇಕು ಅಂದಳು
ಅಯ್ಯೋ ಮುಂಡೆ ಮಗಳೆ
ಆ ರೀತಿಯಾಗಿ ಭಾಗ್ಯ ಕೊಟ್ಟಂತ ಮಾದಪ್ಪನ
ನೀನು ಮಾದೇವ್ನ ಮರ್ತಲ್ಲಾ
ಮಾಯಕಾರ ಗಂಡ ಮಾದಪ್ಪ ಅಂದರೆ
ಉರಿಗಣ್ಣು ಕಿಚ್ಚುಗಣ್ಣು ಕಿಡುಗಣ್ಣು
ನೆತ್ತಿಮೇಲೆ ಕಣ್ಣುಜಾಸ್ತಿ ಉರಿಗಣ್ಣು
ಮಾದಪ್ಪ ಅಂದರೆ ಬೂದಿ ಮುಚ್ಚಿದ ಕೆಂಡ
ಮನಸಿನಲ್ಲಿ ಮಾದಪ್ಪ
ನೆನೆದೋರ ಮನದಲ್ಲಿ
ತುಂಬಿ ತುಳುಕಾಡೋನು
ಅವನ್ಗ ಈಗಲಾದ್ರೂ ಒಕ್ಕಲಾದಿ ಕಾಳಮ್ಮ
ದೂಪ ಹಾಕಿಯ ಏಳುಮಲೆ ಕೈಲಾಸದಲ್ಲೋಗಿ ಅಂತ ಕೆಳಿದ್ರು
ಅಯ್ಯೋ ಜಂಗುಮರೆ
ಯಾವ ದಿಕ್ಕಿನಲ್ಲಿ ದೇವರು ಹೇಳಿದ್ರು ಕೂಡಾ
ಆ ಏಳುಮಲೆ ಸುದ್ದಿ ಏಳ್ ಬೇಡ ಅಂತವಳೆ ಕಾಳಮ್ಮ
ಆದ್ರೆ ನಿನ್ನ ಇಷ್ಟ ಪ್ರಕಾರವಾಗಿ ಬಾಳು ಅಂತ್ಹೇಳಿ
ನನ್ನಪ್ಪಾಜಿ ಮಾದೇವ
ಅವರು ಹಿಂದಿರುಗಿ ಹೋಗಿ ಜಗಲಿ ಮ್ಯಾಲೆ ನಿಂತಕಂಡ್ರು
ಇಂತಹ ಮುಂಡೆ ಮಗಳ ಮಡಗ ಬಾರದು ಅಂತೇಳಿ
ಮಟ್ಟ ಮದ್ಯಾಹ್ನದಲ್ಲಿ
ಸುದ್ದ ಸುಕ್ರವಾರ
ಅರಗಣ್ಣು ಕಿರಗಣ್ಣು ಬಿಟ್ಟು ಮಾದಪ್ಪ
ಹೇಳ್ತಾ ಇದ್ದಾರೆ
ಆವಾಗ ನಾನು ಹೋಗ್ತೀನಿ ಕಾಳಮ್ಮ ಅಂದ್ರು
ಬೇವಿನ ಮರದ ಜಗಲಿ ಮ್ಯಾಲೆ ಕೂತ್ಕಂಡು ಕಳಮ್ಮ
ಹುಗಯ್ಯ ಜಂಗುಮ ಅಂದ್ಲು
ಆಗುದಿಲ್ಲ ಕಾಳಮ್ಮ
ಈಗಲಾದರೂ ನೋಡು ಒಕ್ಕಲಾಗು ಮಾದಪ್ಪನಿಗೆ ಅಂದರು
ಓ ಜಂಗುಮಯ್ಯ
ಮಾದಪ್ಪನ ಕಡೆ ನೀನೇನಾದ್ರೂ ಸಾಯ್ ವಾಗ್ ಬಂದಿದ್ದೀಯ
ಅವನಿಗೆ ಸಪೋರ್ಟಾಗಿ
ನನ್ನ ಏಳೇಲ್ ಹದಿನಾಲ್ಕು ಹಟ್ಟಿ
ಇಲ್ಲಿ ತಿರ್ಗ ಅಡವಿಗೆ ದಾರಿಯಾದರೂ ಸರಿಯೇ
ನಾನು ಆ ರೀತಿ ಒಕ್ಕಲಾಗುವಂತಹ ಮಗಳಲ್ಲ
ನೀನು ಬಂದ ದಾರಿ ಹಿಡಿದು ಹೋಗು ಅಂತವಳೇ ಕಾಳಮ್ಮ
ಆವಾಗ ನಮ್ಮಪ್ಪಾಜಿ ಮಾಯಾಕಾರ ಗಂಡ
ಅರೆಗಣ್ಣು ಕಿರುಗಣ್ಣು ಬಿಟ್ಟು
ಏಳೇಳು ಹದಿನಾಲ್ಕುಟ್ಟಿಯನ್ನು
ಅರೆಗಣ್ಣು ಕಿರುಗಣ್ಣು ಬಿಟ್ಟು
ಮಟ್ಟ ಮದ್ಯಾಹ್ನ ನನ್ನಪ್ಪಾಜಿ
ಏಳುಮಲೆ ಬಸ್ಮ ತೆಗೆದು

ಏಳು ಹಟ್ಟಿಗೂ ಪಿಡಿದವರೆ ಮಹಾದೇವ || ನೋಡಿ ನಮ್ಮ ಶಿವನಾ ||

ದಗದಗನೆ ಕತ್ತಿ ಎಳೇಳ್ ಹದಿನಾಲ್ಕಟ್ಟುವೇ
ಬಗಬಗೆ ಮೆಟ್ಟೆದ್ದು ಮಧ್ಯಾಹ್ನದಲ್ಲಿ ಉರಿದೋಗಿಬುಡ್ತು
ಕಾಳಮ್ಮ ಸೊಸೆ ಕರ್ಕಂಡು ನಿಂತ್ಗಂಡಳು
ಆವಾಗ ಮಾದಪ್ಪ ಇಂತವಳ ಮಡಗಬಾರ್ದು ಅಂತೇಳಿ
ಮಾದೇವ ಏಳುಮಲೆ ಬಸ್ಮ ಅಂಗೈಲಿ ಇಟ್ಟುಕಂಡು
ತನ್ನ ಸಾಲೂರು ಮಠದ ಗುರುಗಳು
ಯಾರು? ಶಾಂತ ಮಲ್ಲಿಕಾರ್ಜುನ ಸ್ವಾಮಿ
ಅವರು ಪಾದವನ್ನು ನೆನೆದು
ಈ ಮುಂಡೆ ನಿಂತ ಜಾಗದಲ್ಲಿ
ಗೋಗಲ್ಲಾಗಿ ಅಂತೇಲಿ
ಆ ಕಾಳಮ್ಮನ ಮಂಡೇ ಮೇಲೆ

ಅವರು ಏಳುಮಲೆ ಬಸ್ಮ ಪಿಡಿದವರೆ ಮಾಯಕಾರ || ನೋಡಿ ನಮ್ಮ ಶಿವನಾ ||

ಮಟ್ಟ ಮದ್ಯಾಹ್ನದಲ್ಲಿ ಸುಟ್ಟು ಬಸ್ಮ ಮಾಡಿಬುಟ್ಟು
ನನ್ನ ಪಡ್ಲ ಕೈಲಾಸ ಬರುವಂತ ಪರುಸೆ ಗಣಗಳಿಗೆ
ಇದು ರೋಡಾಗಳಿ ಅಂತೇಳಿ
ಆದ್ರು ಕೂಡ ಇವತ್ಗೊವೆ
ಬೇವಿನಹಟ್ಟಿ ಜಾಗದಲ್ಲಿ
ಒಡಕೆ ಹಳ್ಳದಲ್ಲಿ ಮಣ್ಣೆಲ್ಲ ಬೂದಿಯ ರೀತಿಯ ಬಣ್ಣವಾಗದೇ
ಅಲ್ಲಿಂದ ಬೂದಿ ಬೆಂದೋಗಿತ್ತಲ
ನೆಲೆ ಮಾಳಿಗೆ ಒಳಗೆ ಕಿತ್ತು
ಮಣ್ಣು ತಕಂಡ್ ಹೋಗಿ
ಅದನ್ನು ವಿಬೂತಿ ಉಂಡೆ ಅಂತ
ಅದ ಉಂಡೆ ಮಾಡ್ತಾರೆ ಬೆಟ್ಟದಲ್ಲಿ
ಮಲ್ಲಾಜಮ್ಮನ ಕರ್ಕಂಡು
ಅಲಾಂಬಾಡಿ ಸೀಮ್ಗೋಗಿ
ನೀನು ನಿನ್ನ ತಂದೆ ಮನೆಯೊಳಗೆ
ಚಿರಂಜೀವಿಯಾಗಿ ಬಾಳು ಅಂತೇಲಿ
ಒಬ್ಬಳೆ ಹೊಯ್ತಾಳೆ ಅಂತೇಳಿ ಮಾದಪ್ಪ
ಆವಾಗ ವಡಕೆ ಅಳ್ಳದಿಂದ
ಮಲ್ಲಾಜಮ್ಮನ ಕರಕಂಡು

ಅವರು ತಾಳು ಬೆಟ್ಟಗಾಣೆ ಹೋಯ್ತವರೆ ಮಾದೇವ || ನೋಡಿ ನಮ್ಮ ಶಿವನಾ ||

ತಾಳ್ ಬೆಟ್ಟದಿಂದ ಚಿಕ್ಕದಿಮ್ಮೆ ಮೆಳೆ ಒಡ್ಗೋದ್ರು
ಅಲ್ಲಿ ಕವಲೊಡ್ದು ದಾರಿ ಹೊಯ್ತ ಇತ್ತು ಪೊನ್ನಾಚಿ ಮೇಲೆ
ಎಲ್ಲಿಗೆ ಆಲಂಬಾಡಿ ಸೀಮೆಗೆ
ಆ ಪೊನ್ನಾಚಿ ಸರ್ಕಲ್ ನಲ್ಲಿ ಹೋಗಿ
ಕಾಲಾದಿ ಒಳಗೆ
ಆ ಹೆಣ್ಣ ಮಗಳ ಕರಕಂಡು ಹೋಗಿ
ನನ್ನಪ್ಪಾಜಿ ಬೂದಿ ಮರೆಸಿದ ಕೆಂಡ
ಕಂದಾ
ನಿಮ್ಮ ತಂದೆ ತೌರು ಮನೆ ಕಾಣ್ತದೆ ಅದೆ ನೋಡು ಮಗಳೆ
ಹೊಂಟು ಹೋಗವ್ವ ನೀನು ಭಯ ಪಡಬೇಡ ಅಂತೇಳಿ
ಆಲಂಬಾಡಿ ಸೀಮೆಗೆ ಕಳಿಸಿಬುಟ್ಟು ಮಲ್ಲಾಜಮ್ಮನ

ಅವರು ಏಳುಮಲೆಲ್ಗೆ ದಯಮಾಡವರೆ ಮಹಾದೇವ || ನೋಡಿ ನಮ್ಮ ಶಿವನಾ ||

ಬೆಟ್ಟದ ಮೇಗಣ ಕಲ್ಲೀಗೆ
ಗುರುವೇ ಹನ್ನೆರಡು ಸಾವಿರ ಮಲ್ಲೀಗೆಯಾ
ರಾಮವ್ವ ಚಂಡುಳ್ಳ ಚೆಲುವೆ ರಾಜ ಮಲ್ಲಿಗೆಯಾ