ಬಾಣಗಾರ ಕೆಬ್ಬೆ ಹೊಲಕ್ಕೆ ಹೋದ ಕಾಳಮ್ಮ
ಕೋಣನ ಬಂಡಿಯಿಂದ ಇಳ್ದುಬಿಟ್ಟು
ಯಾರು ಹೊನ್ನುಣ್ಸೆ ಕಾಳಮ್ಮ
ಮುಕ್ಕಾಲು ಮೆಟ್ಲಲ್ಲಿ ಹೋಗಿ ದೊಳ್ಳಾಕ್ಕಂಡು ಕೂತ್ಕಂಡಳು
ಕುಂಬಳಕಾಯಿನ ಗಾತ್ರ
ತಾಂಬೂಲವತ್ತರಿಸ್ಕಂಡು
ಬ್ಯಾಲಕಾಯಿನ ಗಾತ್ರ ಸುಣ್ಣ ಇಟಗಂಡು
ಚಿನ್ನ ಬೆಳ್ಳಿ ಕೊಕ್ಕೆ
ಮೆರೆ ಕೊಕ್ಕೆಯನ್ನು ತಕ್ಕಂಡು
ಎಳ್ಳು ರಾಶಿಗೆ ಸಿಗಾಕಂಡು ಕೂತವಳೆ
ಎಳ್ಳಿನ ಕೋಟಾರದ ಸುತ್ತಾ ಹುಣಸೆ ತರಗೆಂಡ ಊದವಳೆ
ಕಂಬಳಗಾರ ಮಲ್ಲಣ್ಣ
ಜಾಗ್ರತೆಯಾಗಿ ಕೆಂಡ ಬೀಸು ಕೊಂಗ ತಕ್ಕಂಡು
ಇರುಗಳೆನಾದ್ರು ಬಂದು ಬಿಡ್ತವೆ ಎಂತೇಳಿ
ಮಲ್ಲಣ್ಣ ಗಂಟ್ಗೆ ಒಂದು ಸಾರಿ ಕೆಂಡ ಬೀಸಿ ಬೀಸಿ ಕಾವು ಮಾಡ್ತನೆ
ಇರಗಳು ಕೆಳಕ್ಕೆ ಬರಬಾರದು
ಆವಾಗಲೀಗ ಬೆಳ್ಳಿ ಬಿಂದಿಗಲಿ ನೀರಿಟ್ಕಂಡು
ಏಳು ಜನ ಜೀತಗಾರ್ಗು
ನೀರು ಮುಕ್ಕಳ್ಸಿ ಮುಕ್ಕಳ್ಸಿ ಅರೆಕಲ್ಲುಮ್ಯಾಲೆ ಉಗಿಸ್ತಾಳೆ
ಪರೀಕ್ಷೆ ಮಾಡ್ತಳೆ
ಯಾತಕೆ ? ಎಳ್ಳು ತಿಂದುಬಿಡ್ತರೆ ಆಳುಗಳು ಅಂತೇಳಿ
ಈ ರೀತಿಯಾಗಿ ಕಾದುಕೂತವಳೆ ಕಾಳಮ್ಮ
ಮಾದಪ್ಪ
ನೋಡುದ್ರು ಬೇವಿನ್ಹಟ್ಟಿ ಅಲಂಕಾರವ
ಆ ಬೇವ್ನಮರದ ಜಗಲಿಮ್ಯಾಲೆನಿಂತ್ಕಂಡು
ಅರೆಗಣ್ಣು ಕಿರುಗಣ್ಣು ಬಿಟ್ಟಿದ್ದಾರೆ
ಮಾಯಕಾರ ಗಂಡ ಯಾವ ರೀತಿಯಾಗಿ ಅಂದ್ರೆ

ಉರಿಯ ಬೆಂಕಿ ಮುಂದೆ
ಅರಗಳಿಗೆ ನಿಲಬಹುದು ಮಾದೇವ
ನಿಮ್ಮ ಕರಿಯ ಬರಗನ ಮುಂದೆ ನಿಲಬಹುದಾ || ನೋಡಿ ನಮ್ಮ ಶಿವನಾ ||

ಇಂತ ಮುಂಡೆ ಮಕ್ಕಳಾ
ಧರೆಯಲ್ಲಿ ಬಿಟ್ಟರೇ
ಇನ್ನು ಕೂಡ ಹೆಚ್ಚು ಹೆಚ್ಚಾಗಿ ಅಧರ್ಮ ಕರ್ಮ
ಬಂದುಬಿಡ್ತದ ಕಾಳಮ್ಮನ ದುಡ ಪರೀಕ್ಷೆ ಮಾಡಿ
ನಾನು ವಕ್ಕಲು ಮಾಡ್ಕಳಬೇಕು
ವಕ್ಕಲಾಗದೇ ಹೋದ್ರೆ ಇವಳ ಬಿಡಬಾರದಂದೇಳಿ
ಮಾದಪ್ಪ
ಮುತ್ತಿನ ಜೋಳ್ಗೆ ಎತ್ತಿ ಮುಂಗೈಲಿ ಧರಿಸಿಕಂಡ್ರು
ಇವತ್ತು ಬೇವನಟ್ಟಿ ದುಡ ನೋಡ್ಲೆ ಬೇಕು ಅಂತೇಳಿ
ಧರೆಗಾತ್ರ ದುಂಡಕೋಲು ಬಲಗೈಲಿ ಇಡ್ಕಂಡ್ರು

ಅವರು ಬೇವನಟ್ಟಿಗೆ ಬಿಜು ಮಾಡವರೇ
ನೋಡಿ ನಮ್ಮ ಶಿವನಾ

ಗುರುವೇ ಗುರುಪಾದವೇ ನನ್ನಾಪ್ಪಾಜಿ
ಬೇವನಟ್ಟಿ ಬಾಗಲ್ಗೆ ಬಂದ್ರು ಮಾದಪ್ಪ
ಗೊಲ್ಲಲ್ಣ್ಣರಿಗರು ದೊಣ್ನೆ ಒತ್ಕಂಡ್ರು
ಲೋ ಯಾವನೊಡ್ನೋನೋ
ಜುಂಗುಮ ಬತ್ತ ಅವ್ನೆ
ಒಡಿಬೇಕು ಅವನ್ಗೆ ಅಂತೇಳಿ
ಯಾವಾಗ ದೊಣ್ಣೆ ವತ್ಕಂಡ್ರೊ
ಮಾದಪ್ಪ ಅರೆಗಣ್ಣು ಕಿರುಗಣ್ಣು ಬಿಟ್ಕಂಡು
ನೋಡ್ತಾವರೆ ದೂರದಲ್ಲಿ ನಿಂತ್ಕಂಡು
ಬೇವನಟ್ಟಿ ಬಾಗಲಲ್ಲೀ
ಕಡಿವಂತನಾಯಿ ಬೊಗಳ್ತ ಬಾಯಿ ಬಿಡ್ತಾದೆ
ಕಚ್ಚುವಂತ ಕಾಳಿಂಗ ಸರ್ಪ ಏಳೆಡೆ ಎತ್ತಿಕಂಡು
ಆಡ್ಲಾಗ್ ನಿಂತ್ಕಂಡದೆ
ಮಾದೇವ ಉರಗಣ್ಣು ಬೆರಗಣ್ಣ ಬೆಟ್ಕಂಡು ನೋಡ್ತಾವರೆ
ಈ ಮುಂಡೇ ಮಕ್ಕಳ ಪ್ರಾಣ ತೆಗೆದ್ರೆ
ನನ್ಗೇನು ಸಿಕ್ಕುದಿಲ್ಲ
ಇವರ್ಗೆ ತಕ್ಕಂತಹ ನೈವೇದ್ಯ ಮಾಡಿ
ನಾನು ಬೇವನ್ಹಟ್ಟಿ ಒಳಗೆ ನುಗ್ಗಬೇಕಂತೇಳಿ
ಏಳು ಮಲೆ ಬಸ್ಮ ತೆಗೆದು ಅಂಗೈಲಿ ಇಟಕಂಡು
ನನ್ನಪ್ಪಾ ಮಾದೇಅ
ನಮ್ಮಪ್ಪ ಶಿವಪ್ಪ
ಶಾಂತಮಲ್ಲಿಕಾರ್ಜುನ ಸ್ವಾಮಿ
ಸಾಲೂರುಮಠದ ಗುರುಗಳ ಪಾದ ನೆನೆ ನೆದ್ ಬಿಟ್ಟು

ಅವರು ಮಲೆಯ ಬಸ್ಮ ತೆಗೆದವರೇ
ಮಾದೇವ || ನೋಡಿ ನಮ್ಮ ಶಿವನಾ ||

ಮಲೆಯ ಬಸ್ಮವನ್ನು ತೆಗೆದು ನನ್ನಪ್ಪಾಜಿ
ಆ ಕಡಿವಂತನಾಯಿ
ಕಚ್ಚುವಂತ ಸರ್ಪನಮ್ಯಾಲೆ ಹಾಕುದ್ರು
ಗೊಲ್ಲಣರ ಮ್ಯಾಲೆ ಪಿಡದ್ರು
ಗೊಲ್ಲಣ್ಣಗರು ಹೊತ್ತ ದೊಣ್ಣೆ ಹೊತ್ತಾಗಿಯೇ
ನಿಂತ್ಕಂಡ್ರು ಮಾತು ಇಲ್ಲ ಕತೆಯೂ ಇಲ್ಲ
ಕಡಿವಂತ ಸರ್ಪ
ಹಾಗೆ ಹೆಡೆ ಎತ್ತಿನಿಂತವನೆ
ಸದ್ದು ಸದ್ದು ವಂದೂ ಇಲ್ಲ
ಕಡಿವಂತನಾಯಿ ಬಾಯಿ ಹಾಗೇ ಬಿಟ್ಕಂಡು ನಿಂತದೆ
ಆವಾಗ ಮಾದಪ್ಪ ಬೇವಿನ್ಹಟಿ ಒಳಗಡೆ
ಪಾದ ಇಟ್ಕಂಡು ಹೋಗಿ
ಪಾದಾ ತೊಳೆವಂತ ಪಚ್ಚೆಗಲ್ಲಿನ ಮ್ಯಾಲೆ ನಿಂತ್ಕಂಡು

ಅವರು ಕೋರಣ್ಯ ಸಾರವರೇ ಮಾಯ್ಕಾರಾ || ನೋಡಿ ||
ಗುರುವಿಗೆ ವಂದು ಸರಣಾರ್ತಿ
ಗುರುವಿನ ಪಾದಕೆ ವಂದು ಸರಣಾರ್ತಿ
ಮಾದೇವ
ನಮಗೆ ಲಿಂಗಧಾರಣೇ ಮಾಡಿ ಗುರುವಿನ
ಪಾದಕ್ಕೆ ಸರಣೋ
ಹರಾಹರನ ಭಿಕ್ಷ ಗುರುಧರ್ಮದ ಕೋರಣ್ಯ ಭಿಕ್ಷ
ಎತಿ ಮುನಿಗಳ ಭಿಕ್ಷ
ತಂದೆ ಕಲ್ಯಾಣದವರ ಭಿಕ್ಷ ತಾಯಿ ಉತ್ತರಾಜಮ್ಮನ ಭಿಕ್ಷ
ಜ್ಯೋತಿ ಲಿಂಗಯ್ಯನ ಭಿಕ್ಷ
ಜೋಳ್ಗೆ ಇಡ್ದಆತ್ಮನ ಭಿಕ್ಷೆ ಅಂತೇಳಿ
ಲಿಂಗದ ಮೂರ್ತ ಜಂಗುನ ಶಬ್ದ ಮಾಡ್ಕಂಡು
ಪಂಚೇಳಕ್ಷರ ಕೂಗುದ್ರು
ಮಾಳಿಗೆ ಮನೆಲಿದ್ರಲ್ಲ
ಯಾರು ? ಅಡಿಗೆಮನೆಯೊಳಗೆ
ಏಳು ಜನ ಸೊಸೆರು ಸಾಲಾಗಿ ಬಂದುಬಿಟ್ರು
ಹಣೆ ಕುಟ್ಕಂಡ್ರು ಬತ್ತಾವ್ರೆ
ಓಹೋ ಯಾರಪ್ಪ ಭಿಕ್ಷಕ ಬಂದುಬಿಟ್ರು
ನಮ್ಮ ಅತ್ತಮ್ಮ ಇಷ್ಟ ಕಾವಲಿಟ್ಟಿದ್ಲಲ್ಲ
ಯಾರೋ ಅಂತೇಳಿ ಓಡ್ ಬಂದ್ರು
ಮಾದಪ್ಪ
ಲಿಂಗದ ಮೋರ್ತ ಜಂಗುನ ಶಬ್ಧ ಮಾಡುದ್ರು
ಆರ್ ಜನ ಸೊಸೇರು ದುರುದುರ್ನ ನೋಡ್ತಾ ಅವ್ರೆ ಮಾದಪ್ಪ
ಯಾರೋ ಜಂಗುಮರು ಅಂತೇಳಿ
ಹಿರಿ ಸೊಸೆಯಾಗಿರ್ತಕ್ಕಂತವಳು
ಆಲಂಬಾಡಿ ಜುಂಜೇಗೌಡನ ಮಗಳು
ಅಯ್ಯೋ ನನ್ನಪ್ಪನ ಮನೆ ದೇವ್ರು
ಬಂದುಬಿಟ್ರಲ್ಲ ಅಂತೇಳಿ
ಓಡ್ ಬಂದ ಯಾರು? ಮಲ್ಲಾಜಮ್ಮ
ಆವಾಗಲೀಗ ಹಿರಿಸೊಸೆ
ಮಾದಪ್ಪ ನಿಂತ್ತಿದ್ರಲ್ಲ ಪಾದತೊಳದಳೆ ಪಚ್ಚೆ ಕಲ್ಲಮ್ಯಾಲೆ
ಅವರ ಜಂಗಿನ ಪಾದ ಇಡಕಂಡ್ರು ಮಲ್ಲಾಜಮ್ಮ

ಒಂದೊಂದು ಪಾದ
ಗುರುವೇ ಒಂದೊಂದು ಪಾದ
ಹೌದಯ್ಯ ಹೌದು
ಒಂದೊಂದು ಪಾದಾದ ಮುಂದೆ
ಮಾದೇವ್ರ ಪಾದ

ಗುರುವೇ ಗುರುಪಾದವೇ
ನನ್ನಪ್ಪ ಮನೆ ದೇವ್ರೆ
ಈ ಬೇವಿನ್ಹಟ್ಟಿಗೆ ಬರಬಹುದಪ್ಪ ನೀವು
ನನ್ನಪ್ಪನ ನನ್ನ ಅತ್ತಮ್ಮನಾದ ಕಾಳಮ್ಮ
ನಮಗೆ ರಾಗಿ ಅಳತೆಕೊಡ್ತಾರೆ
ಅಸಿಟ್ಟು ಅಳತೆಕೊಡ್ತಾರ‍ೆ
ಕಟ್ಟಿದ ಮುದ್ದೆ ತೂಕ ಮಾಡ್ತಾರ‍ೆ
ಏನಾದ್ರು ಹೆಚ್ಚು ಕಡೆಮೆಯಾದರೇ
ನಮ್ಮ ನಡಹಟ್ಟಿಯೊಳಗೆ ಮುಂಡ್ಯ ಕಟ್ಟಾಕುಬಿಟ್ಟು
ಹುಣಸೆ ಚಬ್ಬೆ ತಕ್ಕಂಡು
ಸೀರೆ ಎತ್ತಿ ಮ್ಯಾಲೆ ಕಟ್ಟುಬಿಟ್ಟು
ನಮ್ಗ ಕೊಡಬಾರ್ತ ಶಿಕ್ಷೆ ಕೊಡ್ತಾಳೆ ಅತ್ತಮ್ಮ
ದಾನ ಅಂದ್ರೆ ಗ್ಯಾನವಿಲ್ಲ
ಭಿಕ್ಷೆ ಅಂದ್ರೆ ಲಕ್ಷವಿಲ್ಲ
ಭೀಮನಿಗೆ ಭಿಕ್ಷವಿಲ್ಲ
ನಾರಾಯಣಗೆ ಕ್ವಾರಣ್ಯವಿಲ್ಲ
ಈ ರೀತಿ ಕಾವಲಿಟ್ಕಂಡಿದ್ದಾಳೆ
ಇಂತ ಬೇವಿನ್ಹಟ್ಟಿಗೆ ಬರಬಹುದಪ್ಪ ಮಾದೇವ

ವೀರಯ್ಯ ಸರಣು
ವೀರುಭದ್ರಯ್ಯ ಸರಣು
ಮಲ್ಲಯ್ಯ ಸರಣು
ಬೆಟ್ಟದ ಮಾದಪ್ಪ ಸರಣು

ಬಾ ಬಾ ಕಂದಾ
ಮಲ್ಲಾಜಮ್ಮ ನಿನ್ನ ಮುತ್ತೈದೆ ಸ್ಥಾನ
ಜಿರಂಜೀವಿಯಾಗಲಿ
ಕಂದಾ
ಎದರಬೇಡ
ನಮ್ಮಪ್ಪ ಮನೆ ದೇವ್ರು ಭಿಕ್ಷಕ್ಕ ಬಂದ್ರು ಅಂತೇಳಿ
ನನ್ನ ಮುತ್ತಿನ ಜೋಳ್ಗೆ ಅಸಿಯೋದಿಲ್ಲ ಕಂದ
ನಿನ್ನ ಅತ್ತಮನಾದ ಕಾಳಮ್ಮ
ಆಡಿದ ಮಾತನ್ನ ಕೇಳ್ಕಂಡು
ಹುಲಿಯಾಗೋದ್ರು ಬಿಡದಿಲ್ಲ ಕಂದ
ಹುಲಿಯಾಗ್ದೆ ನಿಜವಾದ್ರೆ
ಇನ್ನಿಷ್ಟು ಐಶ್ವರ್ಯ ಕೊಟ್ಟೋಗ್ತಿನಿ ಕಂದ
ನಿಮ್ಮ ಅತ್ತಮ್ಮನಾದ ಕಾಲಮ್ಮ ಎಲ್ಲಿ ಅಂದ್ರು
ಕಾಣ್ದೆ ಇದ್ದವರಂಗೆ ಮಾದಪ್ಪ
ಗುರುವೇ
ನಮ್ಮ ಅತ್ತಮ್ಮನಾದ ಕಾಳಮ್ಮ
ಕಂಬಳಗಾರ ಮಲ್ಲಣ್ಣನ ಕರ್ಕಂಡು
ಕೋಣನ ಬಂಡಿಮ್ಯಾಲೆ
ಅಂಬಲಿ ಗಡಿಗೆ ಮಡಿಕಂಡು
ಬೆಳ್ಳಿ ಬಿಂದ್ಗೆಲಿ ನೀರ್ ಮಡಿಕಂಡು
ಬಾಣಗಾರ ಕೆಬ್ಬೆ ಹೊಲದಲ್ಲಿ ಅವಳೇ ಗುರುವೇ
ಏಳು ಜನ ಗಂಡು ಮಕ್ಳು
ಏಳು ಜನ ಜೀತಗಾರ್ರು ಆವ್ರೆ
ಏಳ್ಳು ವಕ್ಕಣೆ ಮಾಡ್ತಾ
ಕೂತವಳೆ ಹೋಗಿ ಗುರುವೇ ಅಂದಳು
ಕಂದಾ ಮಲ್ಲಾಜಮ್ಮ
ನಿನ್ನ ಆಯಸ್ಸು ಚಿರಂಜೀವಿಯಾಗಲಿ
ಅಂತೇಳಿ ಆಶೀರ್ವಾದ ಮಾಡಿ ಬಿಟ್ಟು
ಮಾದಪ್ಪ

ಅವರು ಬೇವಿನಟ್ಟಿ ಬಿಡುತವರೇ
ಮಹದೇವ || ನೋಡಿ ನಮ್ಮ ಶಿವನಾ ||

ಬೇವನ್ಹಟ್ಟಿಯನ್ನ ಬಿಟ್ಟು
ಆವಾಗಲೀಗ ನನ್ನಪ್ಪಾಜಿ
ಬಾಣಗಾರ ಕೆಬ್ಬೆ ಹೊಲ್ದತ್ರ ಬಂದ್ರು
ಕಾಳಮ್ಮ
ಮುಕ್ಕಾಲು ಮಂಚದ ಮೇಲೆ
ಮೂಡೆಗಾತ್ರದ ದೊಳ್ಲ ಮುಂಗೈವರಗು ಮಾಡ್ಕಂಡು
ಕಣ್ಣು ಮುಚ್ಕಂಡು ಕಾದುಕೂತವಳೆ
ಏಳು ಜನ ಜೀತಗಾರ್ರು
ಏಳು ಜನ ಗಂಡುಮಕ್ಕಳು
ಎಳ್ಳು ವಕ್ಕಣೇ ಮಾಡ್ತಾವರೆ
ಕಂಬಳಗಾರ ಮಲ್ಲಣ್ಣ
ವಟಾರಕೆ ಇರಬಂದುಬಿಡ್ತವೇ ಎಂತೇಳಿ
ಕೆಂಡ ಬಿಸ್ಗಂಡು ಸುತ್ತ ಕಾವಲಾಗವನೆ
ಮಾದಪ್ಪ ನೋಡದ್ರು
ಆವಾಗಲೀಗ ಈಸಾನ್ಯ ಬಾಗಲ್ಲಲ್ಲಿ ನಿತ್ಕಂಡು
ಇಂತ ಮುಂಡೆ ಮಗಳು ನನಗೊಕ್ಕಲಾದಳ
ನರಮನುಶ್ಯ ಮುಂಡೆಮಕ್ಳು
ಕಷ್ಟಬಂದ ಯಾಳ್ಯದಲ್ಲಿ
ಮಾದಪ್ಪ ಮಹದೇವ ಮಾದೇವ ಅಂತಾರೆ
ಕುಂತಿದ್ರು ಮಾದೇವ ಅಂತಾರೆ
ನಿಂತಿದ್ರು ಮಾದೇವ ಅಂತಾರೆ
ಮಲಿಗಿದ್ರು ಮಾದೇವ ಅಂತಾರೆ
ಏನಾದ್ರು ಐಶ್ವರ್ಯ ಬಂದುಬುಟ್ರೇ
ಮಾದಪ್ಪ ಮರೆತುಬುಡ್ತಾರೆ
ಆ ರೀತಿಯಾಗಿ ಕಾಳಮ್ಮ ಮರೆತವಳೇ
ಇವತ್ತು ಕಾಳಮ್ಮನ ದುಡ ನೋಡಬೇಕಂತೇಳಿ
ಮಾಯಿಕಾರ ಗಂಡ ಲಿಂಗದ ಮೊರ್ತ
ಜಂಗುನ ಸಬ್ದ ಮಾಡ್ಕಂಡು

ಅವರು ಪಂಚೇಳಕ್ಷರ ಕೂಗವರೇ…………
ಮಾದೇವ || ನೋಡಿ ನಮ್ಮ ಶಿವನಾ ||
ಭವರಿ ಭಿಕ್ಷಾಂದೇಹಿ
ಧರ್ಮಗುರು ಕ್ವಾರಣ್ಯದ ಭಿಕ್ಷ ಅಂತೇಳಿ
ಗುರುಧರಮ ಕ್ವಾರಣ್ಯದ ಭಿಕ್ಷ ಅಂತೇಳಿ
ಜೋರಾಗಿ ಭಿಕ್ಶ ಸಾರುದ್ರು
ಆರು ಜನ ಗಂಡುಮಕ್ಳು
ಏಳು ಜನ ಜೀತಗಾರ್ರು ನೋಡ್ತಾವರೇ
ಕಂಬಳಗಾರ ಮಲ್ಲಣನೂ ನೋಡ್ತವನೆ
ಕಾಳಮ್ಮನ್ಗೆ
ಕಣ್ಣು ಬುಡಕೆ ಕಣ್ಣು ಪರೆ ಬೆಳ್ದೊಗವೆ
ಆಗ ಮಲ್ಲಣ್ಣನ ಕೂಗವಳೆ
ಓಹೋ ಕಂಬಳಗಾರ ಮಲ್ಲಣ್ಣ
ಏನು ಕಾಲಮ್ಮ ಅಂದ್ರು
ಯಾರಯ್ಯ ಅಲ್ಲಿ ಭಿಕ್ಷ ಕೂಗವರು ಅಂದ್ರು
ಯಾರೋ ಕಾವಿಬಟ್ಟೆ ಜಂಗುಮರು ಬಂದವರೇ ಕಾಳಮ್ಮ ಅಂದ್ರೂ
ಬಾರಪ್ಪ
ಕಂಬಳಗಾರ ಮಲ್ಲಣ್ಣ
ಚಿನ್ನ ಬೆಳ್ಳೀ ಚಿಮ್ಟ ತಕ್ಕೊಂಡ್ ಬಾ
ಎರಡಿ ಕ್ಕೆನಲ್ಲಿ ಎರಡು ಕಣ್ಣಿನ ಪರೆಯೆತ್ತು
ಆ ಜಂಗುಮನ ನೋಡ್ತಿನಿ ಈ ಕಣ್ಣಾರ ಅಂದಳು
ಮುಕ್ಕಲು ಮಂಚದ ಮ್ಯಾಲೆ ಕೂತ್ಕಂಡು
ಯಾರು?ಕಾಳಮ್ಮ
ಕಂಬಳಗಾರ ಮಲ್ಲಣ್ಣ ಬಂದು
ಎಡಗೈಲಿ ಎರಡು ಚಿಮ್ಟ ಇಡ್ಕಂಡು
ಎಡಗಣ್ಣು ಬಲಗಣ್ಣು ರೆಪ್ಪೆ ಇಡ್ಕಂಡು

ಎರಡ ರೆಪ್ಪೆ ಎತ್ತಿ ತೋರವನೇ ಮಲ್ಲಣ್ಣ || ನೋಡಿ ನಮ್ಮ ಶಿವನ ||

ಎರಡು ಕಣ್ಣಿನ ರೆಪ್ಪೆ ಯಾವಾಗ ಎತ್ತಿದ್ರೋ
ಅರಗಣ್ಣು ಕಿರಗಣ್ಣು ಬಿತ್ಟು
ಮಾದಪ್ನ ಜಂಗಮ ರೂಪು ನೋಡ್ಬುಟ್ಟು
ನೊರ್ಕನ ಹಲ್ಲು ಕಡ್ದಳು ಕಾಳಮ್ಮ
ಹ್ಞೂಂ ಅಂತೇಳಿ ಹ್ಞುಂಕರಿಸಿಬಿಟ್ಟು
ಎಲಾ ಜಂಗಮ
ಯಾವ ಕಾಡ್ನೋನು ಜಂಗುಮ ನೀನು
ಬುಡು ಮಲ್ಲಣ್ಣ ಚಿಮ್ಟನಾ
ಈ ಜಂಗುಮ ಬಂದು ಮೊದಲಾಗಿ
ತುಂಬ್ದ ಸೋಮಾರ ಒತ್ತು ಮೂಡವತ್ಗೆ
ಬಾಳು ಹಟ್ಟಿಗೆ ಬೊಗಳೂ ನಾಯಿ ಬಂದಂಗ ಬಂದವ್ನೇ
ನನ್ನ ಕೊಟ್ಟಾರದಲ್ಲಿ
ಮುನ್ನೂರು ಮುವತ್ತು ಕಂಡ್ಗ ಎಳ್ಳು ರಾಶಿ ಅದೇ
ಮೊದಲಾಗ ಬಂದು ಬಿಕ್ಷಾ ಬಿಕ್ಷ ಅಂತ ಕೂಗ್ತವನೆ
ಮಲ್ಲಣ್ಣ
ಇವ್ನ ಕತ್ತಿಡ್ದು ಆಚ್ಗೆ ತಳ್ಳು
ನನ್ನ ಮನೆದೇವ್ರ ಕುಲದೇವ್ರಗೆ ಪೂಜೆ ಮಾಡಿ
ಹೊಲದಲ್ಲಿ ಹೆಚ್ಚು ಮಾಡಿ
ಮೇಘ ರಾಯನ ಪೂಜೆಮಾಡಿ
ಮನೆದೇವ್ರ ಕುಲದೇವ್ರು ಎಂದರೇ ಸಾಮಾನ್ಯವ
ಬೆರಳು ತೋರದ್ರೆ ಹಸ್ತ ನುಂಗುವಂತ ದೇವ್ರು
ಯಾರು? ತಿರುಪತೆ ವೆಂಕಟರಮಣಸ್ವಾಮಿ
ಬಿಲಿಗಿರಿರಂಗಸ್ವಾಮಿ
ಅಕ್ಕಮ್ಮ ಚಿಕ್ಕಮ್ಮ ಚಿಕ್ಕನಾಯ್ಕ ಚಿಕ್ಕದೇವಿ
ಬದ್ದರು ಬಲಮಕಾಳಿ ಬನ್ನೂರು ಹೇಮಾದ್ರಿ
ಮೂಗೂರು ತಿಬ್ಬಾದೇವಿ
ಆದರೆ ತಲಕಾಡು ಬಂಡರಸಿ
ಸಾಸಲು ಹೊನ್ನಾದೇವಿ
ಇಂತ ದೇವರುಗಳು
ಬೆರಳು ತೋರದ್ರೆ ಹಸ್ತ ನುಂಗುವಂತ ದೇವರು
ಆ ದೇವ್ರಗೆ ಮೀಸಲು ಎತ್ತ್ ಮಡ್ಗಬೇಕು
ಮಲ್ಲಣ್ಣ

ಈ ಜಂಗುಮಯ್ಯನ ತಳ್ಳು ಅಂತವಳೇ ಕಾಳಮ್ಮ || ನೋಡಿ ನಮ್ಮ ಶಿವನಾ ||

ಅಯ್ಯೋ ಮುಂಡೇ ಮಗಳೇ ನಿನ್ನ ಕೈಲಿ ನಾನು
ತಳ್ಸಿಕಂಡು ಹೋಗುಕೆ ಬಂದಿದಿನಾ ಕಾಳಮ್ಮ
ಯಾತಕ್ಕಾಗಿ ಅಹಂಕಾರದ ಮಾತಾಡಿ
ಅಡವಿ ಪಾಲಾಗಬೇಡ
ಕಂದಾ ಕಾಳಮ್ಮ
ಯಕ್ಕ ಸೊಕ್ಕದ ಮಾತಾಡಿ
ಯಕ್ಕುಟ್ಟೋಗಬೇಡ ಕಂದಾ
ಕಾಳಮ್ಮ
ನಾನೇನು ನಿನ್ನಲ್ಲಿ
ಮಕ್ಕಳಸಾಕಿ ಹೊಟ್ಟೆವರೆಯೋದ್ಕ ಬಲ್ಲಿಲ್ಲ
ಕಾಳಮ್ಮ ಏಳುಮಲೆ ಕೈಲಾಸದಲ್ಲಿ
ಬೇಡಗಂಪಣದ ಮಲೆಯೊಳಗೆ
ಏಳುಮಲೆ ಮಾದೇಶ್ವರ ಅಂತೇಳಿ
ಏಕವಾಗಿ ನೆಲೆಗೊಂಡವರೇ
ಆ ಮಾದಪ್ಪನ್ಗೆ ಎಳ್ಳು ಮಜ್ಜನಕ್ಕೆ ಬಂದಿದ್ದೀನಿ ಕಾಳಮ್ಮ
ನಿನ್ನ ಕೋಟಾರದಲ್ಲಿರುವಂತ
ಮುನ್ನೂರು ಮುವತ್ತು ಕಂಡ್ಗ ಕೊಡಬೇಡ
ಕಡೆವಳ್ಗೆ ಉದುರೋಗುತ್ತಲ್ಲ
ಅದು ಮೂರು ಕೊಳ್ಗ ಎಳ್ಳು ತಂದು
ನನ್ನ ಮುತ್ತಿನ ಜೋಳಿಗ್ಗೆ ನೀಡಿ ಬಿಟ್ಟರೇ
ಆ ಮಾದಪ್ಪನ್ಗೆ ಅರವಾಗ್ತದೆ ಕಾಳಮ್ಮ
ನಿನಗೆ ಮತ್ತಷ್ಟು ಭಾಗ್ಯ ಕೊಡುವನು ಮಾದೇವ || ನೋಡಿ ನಮ್ಮ ಶಿವನಾ ||

ಹುಂ ಜಂಗಮಯ್ಯ
ಹುಂಕರಿಬಿಟ್ಟಳು ಕಾಳಮ್ಮ
ಎಲಾ ಜಂಗುಮಯ್ಯ
ಏಳು ಮಲೆ ಕೈಲಾಸದಲ್ಲಿರುವ ಮಾದಪ್ಪನ್ಗೆ
ಎಂತೇಳ್ತಾ ಇದ್ದಿಯಾ
ಮಾದಪ್ಪನೊ ಮಾರಪ್ಪನೊ
ನನಗೆ ಒಂದು ಗೊತ್ತಿಲ
ನಾನು ಮಾತ್ರ ದಾನ ಅಂದ್ರೆ ಗ್ಯಾನವಿಲ್ಲ
ಭಿಕ್ಷ ಅಂದ್ರೆ ಲಕ್ಷ್ಯವಿಲ್ಲ ನನ್ನ ಮನೆಯೊಳಗೆ
ಒಳ್ಳೇ ಮಾತ್ನಲ್ಲೆ ಹೋಗು
ಇಲ್ಲವಾದರೇ ಬೆಳ್ಳಿ ಕೊಕ್ನ ಮೆರೆ ಏಟು ಬಿದ್ದಿತು
ಓಹೋ ಮಲ್ಲಣ್ಣ
ಬೆಳ್ಳಿ ಕೊಕ್ನ ಮೆರೆಯೆತ್ತಿಡ್ಕಂಡ್ ಬಾ
ನನ್ನ ಕಣ್ಣಿನ ರೆಪ್ಪೆ ಎತ್ತು
ಈ ಜಂಗುಮಯ್ಗನ್ಗೆ ಮೂರು ಏಟು ವಡೆದು ಓಡಿಸ್ತಿನಿ ಎಂದಳು
ಕಾಳಮ್ಮ ನಿನ್ನ ಕೈಲಿ ನಾನು
ಏಟು ತಿನ್ನಕೆ ಬಂದಿದನ ಕಂದಾ
ನಿನ್ನ ಭಕ್ತಿ ನೋಡುವುದಕ್ಕೆ ಬಂದಿದ್ದೀನಿ
ಮೂರು ಕೊಳಗ ಎಳ್ಳೇನಾದ್ರುವೇ
ಈ ಜಂಗುಮಯ್ಯನ್ಗ ಕೊಟ್ಟುಬಿಟ್ಟರೇ
ನನ್ನ ಕೊಟಾರದಲ್ಲಿ
ಎಳ್ಳಿನ ರಾಶಿ ಕಡೆಮೆಯಾಯ್ತಂತ ಹೊಟ್ಟೆ ಉರಿಬಹುದು
ಮೂರು ಕೊಳಗ ಬೇಡ
ಒಂದು ಕೊಳಗ ನೀನೆ ಇಟ್ಟುಕೊ
ಎರಡು ಕೊಳಗ ಎಳ್ಳಾನಾದ್ರು ತಂದು
ನನ್ನ ಮುತ್ತಿನ ಜೋಳ್ಗೆ ನೀಡುಬುಡು ಕಾಳಮ್ಮ

ನಿನಗೆ ಮತ್ತಷ್ಟು ಭಾಗ್ಯ ಕೊಡುವಾರು ಮಾದೇವ || ನೋಡಿ ನಮ್ಮ ಶಿವನಾ ||