ಕೋಡುಗಲ್ಲಿನ ಮಲೆಯೊಳಗೆ
ಮಾದೇವ ಲೇಸಾದ ಕೊನೆ ನಾಡಲ್ಲಿ
ಮಾದೇವ ನಿಮ್ಮ ಲೇಸಾದ ಕೊನೆ ನಾಡಲ್ಲಿ
ಯ್ಯಾಗೆ ಹೋಗೆ ನೆಲೆಗೊಂಡ್ಯಪ್ಪ
ಏಳುಮಲೆಯೊಳಗೆ
ಕಾರಯ್ಯ ಬಿಲ್ಲಯ್ಯನವರು
ಮಾದಪ್ಪ ನಿಮ್ಮ ಸೇವಕರು
ನಿಮ್ಮ ಮುಟ್ಟಿ ಪೂಜೆಮಾಡವರಾರು
ಬೇಡರ ಕಣ್ಣಯ್ಯ
ಸತ್ತಿಗೆ ಸೂರಿಪಾನಿಗಳೂ
ಗುರುವಿಗೆ ಒತ್ತಿನಲಿ ತಮ್ಮಡಗೇರಿ
ಎತ್ತಿ ಮೆರೆದರು ಮಾದೇವ್ನ ಗಂಡುಹುಲಿಯ ಮ್ಯಾಲೆ
ಹಗ್ಗದ ಬಲೆಗಳ ತಕ್ಕಂಡು
ಹೆಗ್ಗುರು ದೀವಟಿಗೆ ಇಡಕ್ಕಂಡು
ಬೇಡಮಾರ್ಗ ಹೊರಟವರಲ್ಲ ಬೇಡಾರ ಕಣ್ಣಯ್ಯ
ಬೇಡಗಂಪಣ ಮಲೆಯೊಳಲ್ಗೆ
ಮಾದೇವ ಬೇಡಿದ ವರವ ಕೊಡುವಾರೂs
ನೀಲಗಿರಿ ನಿಜಭಕ್ತರು ಮನೇಲಿ ಲೋಲಕಾರು ದೇವ

ಆವಾಗ ನನ್ನಪ್ಪಾಜಿ ಮಾಯಗಾರಗಣ್ಣ
ಮಾದೇವ
ಐದುಜನಾ ರುಷಿಗಳ ಪಡ್ಕಂಡು
ಏಳುಮಲೆ ಕೈಲಾಸದಲ್ಲಿ ಏಕವಾಗಿದ್ದಾರೆ
ಆ ಬೇಡಗಂಪಣದವರು
ಮಾಡುವಂತಹ ಪೂಜೆ ನೈವೇದ್ಯ ಮಾದಪ್ಪನಿಗೆ ಇಡಿನಿಲ್ಲ
ಕೇಳಪ್ಪ ನನಕಂದ
ಕೋಲು ಮಂಡೆ ಕಾರಯ್ಯ ಬಿಲ್ಲಯ್ಯ
ಈ ಬೇಡಗಂಪಣದೋರು
ಇವರು ಮಾತ್ರಾ ನಮ್ಗೆ ಇನ್ನು ತಿಳಿದಿಲ್ಲ
ನನ್ನ ಮಾತು ಅವರ್ಗೆ ತಿಳಿಯೋದಿಲ್ಲ ಕಂದಾ
ಅವರ ಮಾತು ನನಗೆ ತಿಳಿಯೋದಿಲ್ಲ
ನನ್ನ ಸಾಲೂರು ಮಠದ ಗುರುಗಳೂ
ಶಾಂತಮಲ್ಲಿಕಾರ್ಜುನ ಸ್ವಾಮಿ ಬಂದೂ
ನನಗೆ ಅಭಿಷೇಕ ಮಾಡುಬಿಟ್ಟು ಹೋದರೆ
ಈ ಬೇಡಗಂಪುಣದೋರು ಉಚ್ಚಳೆಣ್ಣೆ ತಂದು ಒತ್ತಾರೆ
ಹರಳೆಣ್ಣೆ ತಂದು ಮಂಡಿಗೊತ್ತಾಯಿದ್ದಾರೆ
ಬರಗಿನ ಎಡೆಮಾಡ್ತಾರ‍ೆ
ಬೂದುಬಾಳೆಹಣ್ಣು ಮುಂದೆ ಮಡ್ಗತಾರೆ
ಈ ಮದನಾಡ ಸೀಮೆಯೊಳಗೆ ಕಂದಾ
ಈ ಕಲಿಯುಗದಲ್ಲಿ
ನನ್ನ ಮಹದೇವ ಅಂತೇಳಿ
ಹೆಸರೇಳಿ ಕೂಗಿ ನನ್ನ
ಮುಟ್ಟಿ ಪೂಜೆ ಮಾಡೋರಿಲ್ಲ ಕಂದಾ
ತಟ್ಟಿ ಮಲಗ್ಸವರಿಲ್ಲ
ಈ ಬೇಡಗಂಪಣ್ಣದವರ್ಗೇನು ಗೊತ್ತಿಲ್ಲ
ನನ್ನ ಗುರುಗಳು ಬಂದಾಗ ನನಗಾನಂದವಾಗ್ತದೆ
ಸಾಲೂರುಮಠದ ಗುರುಗಳು ಬಂದರೆ
ಆನಂದ
ಆಮ್ಯಾಲೆ ಈ ಕಂಪಣದೋರಿಂದ ನನಗೆ
ಮೊಕವೇ ಕಾಣದಿಲ್ಲ ಕಣ್ಣೇ ಕಾಣೋದಿಲ್ಲ ಕಂದಾ
ಈ ಕಲಿಯುಗದಲ್ಲಿ
ತರಗೆಂಡದಲ್ಲಿ ತಳಿಗೆಯಾಗಬೇಕು
ಅಚ್ಚೆಳಿನಲ್ಲಿ ಮಜ್ಜನವಾಗಬೇಕು
ಅಚ್ಚೆಳ್ಳಿನಲ್ಲಿ ಮಜ್ಜನವಾಗಬೇಕು
ಅಂತಹ ಒಕ್ಕಲು ಮೈಸೂರು ಮೇಲ್ನಾಡ್ನಲ್ಲಿ
ಯಾರಿದ್ದಾರು ನೋಡು ಅಂತಾವರೆ
ಮಾದಪ್ಪ
ಗುರುವೇ ಗುರುಪಾದವೇ ನನ್ನಪ್ಪಾಜಿ
ಆ ರೀತಿಯಾಗಿ ಆರುಮಾನ ಅಚ್ಚೆಳ್ಳುತಂದು
ಎಳ್ಳಿನಲ್ಲಿ ಮಜ್ಜನ ಮಾಡೋ ಭಕ್ತರು ಯಾರಿದ್ದರಪ್ಪಾ
ಅಮವಾಸೆ ಒಂದಿನ ಅಂತೇಳಿ
ನಿನಗೆ ತಿಂಗಾ ತಿಂಗಳು
ಅಮವಾಸೆ ಪೂಜೆ ನೀವೇ ಒಪ್ಕಂಡ್ರಿ
ಅಮವಾಸೆಲಿ ಯಾರ್ ಬತ್ತಾರೇ ಗುರುವೇ
ಈ ಏಳುಮಲೆ ಬೆಟ್ಟದ ಮಧ್ಯಕ್ಕೆ
ಈ ಹುಲಿಕಾಟ ಚಿರತೆ ಕಾಟ
ಆನೆ ಕಾಟ
ಈ ಕಾಡು ಮೃಗದ ಜಾತಿಯೊಳಗೆ
ಈ ಮಲೆಯೊಳಗೆ ಯಾರು ಬಂದಾರ‍ಪ್ಪ ಅಂದ್ರೂ
ಕಂದಾ
ಏಳ್ತಾಯಿದ್ದಿನಿ ಕೇಳು ಕೋಲುಮುಂಡೆ ಕಾರ‍ಯ್ಯ
ಯಾರು ಒತ್ತರಂತ ಹೇಳಬೇಡ
ಅರಗಣ್ಣು ಕರೆಗಣ್ಣು ಬಿಟ್ಟರೇ
ಪ್ರಪಂಚವನ್ನೇ ಇಡಿಯಬಲ್ಲೇ ಕಂದಾ
ಕಾಸುಕೊಟ್ಟು ಕರವೆತ್ತಿ
ಕೈ ಮುಗಿಯುತ್ತಿದ್ದಾರೆ
ಕಾಸ್ನ ಧೂಪವಾಕ್ತಾರೆ
ನೆನೆದವರ ಮನದಲ್ಲಿ ಒರಗುತಿನಿ ಕಂದಾ
ದೂರ ಹೋಗಬೇಡ ಕಂದಾ
ನನ್ನ ತಾಳು ಬೆಟ್ಟಕ್ಕೆ ಮೂರು
ಮೈಲಿ ದೂರ
ಯಾವುದಪ್ಪಾ ಅಂದ್ರು
ತಾಳುಬೆಟ್ಟಕ್ಕೆ ಮೂರು ಮೈಲಿ
ದೂರದಲ್ಲೇ
ಬೇರೆ ಗೌಡನ ಮಗಳು
ಹೊನ್ನುಣಸೆ ಕಾಳಮ್ಮ
ನಾನು ಕೈಲಾಸದಿಂದ ಬರುವಾಗ
ಅನ್ನಕ್ಕಾರಬಟ್ಟೆ ಚಿನ್ನಕ್ಕೆ ಮೂರ್ಬಟ್ಟೆ ಆಗಿದ್ದಳು
ಗಂಡ ಹೆಂಡರು ಇಬ್ಬರು ಒಂದು ಬಟ್ಟೆಲಿ
ವನುವಾಸ ಮಾಡ್ತಿದ್ದರು
ಅವಳ ಗಂಡನಾದ ಕೆಂಡೇಗೌಡನಿಗೆ
ಒಡದಾರವಾಗಿತ್ತು ವಡಕೆ ಹುಲ್ಲು
ಅಡಕೆ ಎಲೆ ಲಂಗೋಟೆ
ಮಾಡ್ಕಂಡು
ಹೊನ್ನುಣಸೆಕಾಳಮ್ಮ
ಬೇಲಿ ಮೇಗಳ ಬಟ್ಟೆ ಒಬ್ಬೆ ಮ್ಯಾಗಳ ಬಟ್ಟೆ
ಎತ್ತಿಕೊಂಡು ಬಂದು ತ್ಯಾಪೆ ಹಾಕೊಂಡು
ಕೌದಳ್ಳಿ ಕೋಮ್ಟಗೇರಿಯಲ್ಲಿ
ರಜಾವಡೆದು ರಂಗೋಲಿ ಬಿಟ್ಟಕಂಡಿದ್ದಳು
ಬೇವನಕಾಯಿನ ಗಾತ್ರ ಹಿಟ್ಟುಕೊಟ್ರೆ
ನಿಂತಾವೇ ಕಡ್ಕತಾಯಿದ್ದಳು
ಅಂತ ಕಾಳಮ್ಮನಿಗೆ
ಹರಿಗಣ್ಣು ಕಿರಗಣ್ಣು ಬಿಟ್ಟೂ
ಎಳ್ಳಷ್ಟು ಭಾಗ್ಯಕೊಟ್ಟಿವ್ನಿ
ಕಂದ ಕಾರಯ್ಯ
ಬೇವಿನ ಕಾಳಮ್ಮ ಬರುವಾಗ
ನಿನಗೆ ಒಕ್ಕಲಾಗ್ತಿನೀ ಗುರುವೇ
ತಿಂಗಾ ತಿಂಗಳು ಚಾಕರಿ ಮಾಡ್ತಿನಿ
ಕಂಡ್ಗುದೂಪ ಕೊಂಡುದುಳಿಗೆ ಸುರಿತ್ತೀನಿ
ಎಂದು ಹೇಳಿದ್ದಳು
ನೀ ಬೇವಿನಟ್ಟಿ ದುಡವ ನೋಡಪ್ಪ
ಕಾರಯ್ಯ
ಕಾಳಮ್ಮನ ಸುದ್ಧಿ ಕೇಳಿದ್ರು
ಗುರುವೇ
ನನಗೆ ಎದೆ ಗರ್ಭ ನಡ್ಗತ್ತದೆ
ಹೊನ್ನುಣ್ಸೆಕಾಳಮ್ಮ ಅಂತ ಹೇಳ್ತಿರಿ
ಕಾಳಮ್ಮನ ಸುದ್ಧಿ ಎಂದಾಗಲೇ
ಈವತ್ತು ಕಾಳಮ್ಮ ಅಂದ್ರೆ
ಸಾಮಾನ್ಯವಲ್ಲ
ಏಳೇಳ್ ನಾಲ್ಕುಹಟ್ಟಿಕಟ್ಟಿದ್ದಾಳೆ ಸಾಲ್ಗೆ
ಗಂಧ ತೊಟ್ಟಿ ಗಾರೆ ತೊಟ್ಟಿ
ಚಿನ್ನತೊಟ್ಟಿ ರನ್ನತೊಟ್ಟಿ ಕಟ್ಟಿಸಾವಳೇ
ಏಳುಜನ ಗಂಡು ಮಕ್ಳು
ಏಳುಜನ ಜೀತಗಾರ್ರು
ದನಕುರಿ ಕಟ್ಟುವುದಕ್ಕೆ
ಚಿನ್ನ ಬೆಳ್ಳಿ ಗೂಟನೆಡಿಸಿದ್ದಾಳೆ
ಕಾಳಮ್ಮನ ಐಶ್ವರ್ಯ
ಕಣ್ಣಿಂದ ನೋಡಲು ಸಾಧ್ಯವಿಲ್ಲ ಗುರುವೇ
ಅಂತ ಐಶ್ವರ್ಯ
ಹೊನ್ನೆಣ್ಸೆ ಕಾಳಮ್ಮ ಅಂದ್ರೇ
ಕಂಬಳಗಾರ‍ಮಲ್ಲಣ್ಣ ಅಂತೇಳಿ
ಕೌದಳ್ಳಿಯಿಂದ ಒಬ್ಬ ಮೇಸ್ತ್ರಿ
ಇಟ್ಟಕ್ಕಂಡವಳೇ
ಏಳುಜನ ಜೀತಗಾರ್ಗು ಮೇಸ್ತ್ರಿ ಅವನು
ಕಂಬಳಗಾರ ಮಲ್ಲಣ್ಣ
ಹೊನ್ನುಣಸೇಕಾಲಮ್ಮನಿಗೆ
ರಾಗಿಪುಡಿ ಸಕ್ಕರೆ ಅಂಬಲಿ
ಉಟ ಮಾಡೀ ಮಾಡೀ
ಮೂಡೆಗಾತ್ರ ದೊಳ್ಳು ಬಂದದೆ
ಕಣ್ಣಿನ ಪರೆ ಬೆಳೆದು ಕಣ್ಣು ಕಾಣುದಿಲ್ಲ
ಕಿರುಗಣ್ಣು ಬಿಡುತಾವಳೇ
ದಾನ ಅಂದ್ರೆ ಗ್ಯಾನವಿಲ್ಲ
ಭಿಕ್ಷ ಅಂದ್ರೆ ಲಕ್ಷವಿಲ್ಲ
ದಾಸಯ್ಯನಿಗೆ ದಾನವಿಲ್ಲ
ಜೋಗಯ್ಯನಿಗೆ ಭಿಕ್ಷವಿಲ್ಲ
ಹೊನ್ನುಣ್ಣೆ ಕಾಳಮ್ಮ
ತನ್ನ ಹಟ್ಟಿಗೆ ಯಾರಾದ್ರು ಭಿಕ್ಷಕ್ಕೆ ಬತ್ತರಂತೇಳಿ
ಕಡಿವಂತ ನಾಯಿ
ಕಚ್ಚುವಂತ ಸರ್ಪ
ಗೊಲ್ಲರ ಪಾರ ಇಟ್ಟಿದ್ದಾಳೆ
ಮಾದೇವ
ಭೀಮನಿಗೆ ಭಿಕ್ಷವಿಲ್ಲ
ನಾರಾಯಣನಿಗೆ ಕ್ವಾರಣವಿಲ್ಲ

ಅಂತವಳ ಹಟ್ಟಿಗೆ ನನ್ನ ಕಳುಹಬೇಡಿ ಅಂತವನೆ
ಮಾದೇವಾ ನೋಡಿ ನಮ್ಮ ಶಿವನಾs

ಗುರುವೇ ಗುರುಪಾದವೇ ನನ್ನಾಪ್ಪಾಜಿ
ಅಂತಳವಟ್ಟಿಗೆ ನಾನೋದ್ರೆ
ಬಾರ್ ಕೋಲು ತಕ್ಕಂಡು
ನನ್ನೆಳಕ್ಕೊಂಡು ಹೋಗಿ
ಊರುಮುಂದ್ಲ ಬೇನಿನ ಮರದ ಜಗಲಿ ಮೇಲೆ
ಬೇವಿನ ಮರಕ್ಕೆ ಕಟ್ಟಾಗಿ
ಬಾತ್ ಕೋಲಿಂದ ಒಡಿತಾಳೇ ನನ್ನಪ್ಪ
ಮಾದೇವ
ಅಂತವಳಟ್ಟಿಗೆ ಕಳಗಬೇಡ ಮಾದಪ್ಪ
ಎಲ್ಲಾದ್ರೂ ಹೋಗಿ ನಾಕುರಾಜ್ಯದಲ್ಲಿ
ಭಕ್ತರ ನೋಡಿ ನಾನು ಅವರ ಮನೆಯೊಳಗೆ
ಅವರ ಮನೆವೊಪ್ಪಿ ವಕ್ಕಲು ಮಾಡ್ಕ ಬತ್ತಿನಿ

ನನಗೆ ಕಾಳಮ್ಮನ ಸುದ್ಧಿ ಹೇಳಬೇಡ
ಮಾದೇವ || ನೋಡಿ ನಮ್ಮ ಶಿವನಾ ||

ಮಾಯಕಾರ ಗಂಡ ಮಾದಪ್ಪ
ಕಾರ‍ಯ್ಯ ಬಿಲ್ಲಯ್ಯನ ಮಾತ ಕೇಳದ್ರು
ಓಹೋ ಕಂದಾ
ಕಾಳಮ್ಮ
ಆಷ್ಟೈಶ್ವರ್ಯವಂತಳಾಗಿದ್ದಳೆ
ಅಷ್ಟೈಶ್ವರ್ಯವಂತಳಾಗಿದ್ರೆ
ಮತ್ತೂ ನನಗಾನಂದ
ನನಗೆ ವಕ್ಕಲಾಗ್ತಿನಿ ಅಂತೇಳಿದ್ದಳು
ವಕ್ಕಲಾಗಿ ಎಳ್ಳು ಮಜ್ಜನಕ್ಕೆ ವಕ್ಕಲಾಗ್ತಿನಿ ಎಂದಿದ್ದಳು
ಬಿತ್ತಿದೆ ಬೆಳೆ ಸರಿಪಾಲು ಕೊಡ್ತಿನಿ ಅಂತೇಳಿದ್ದಳು
ಹುಟ್ಟಿದ ಮಕ್ಕಳ್ನೆಲ್ಲ ಹೆಸರ್ಕರಿತೀನಿ ಅಂತೇಳಿದ್ದಳು
ಕಾಳಮ್ಮ
ಐಸಿರಿವಂತರಾದರೆ ಚಂದವಲ್ಲೊ ಕಂದಾ
ನಿಮ್ಮಂದ ಸಾಧ್ಯವಿಲ್ಲವಾ?
ಇಲ್ಲಾ ಗುರುವೇ
ಕಾಳಮ್ಮನ ಸುದ್ಧಿ ಹೇಳಬೇಡಿ ಎಂದ್ರು
ನಾನೇ ನೋಡ್ತಿನಿ ಕಂದಾ
ಬೇವನಟ್ಟಿ ದುಡಾ ನೋಡ್ಕಂಡು
ಬೇವಿನ ಕಾಳಮ್ಮನಿಂದ
ಎಣ್ಣೇ ಮಜ್ಜನಕ್ಕೆ ವಕ್ಕಲು ಪಡಿತಿನಿ ಮಗನೇ
ಎಂದು ಹೇಳ್ಬಿಟ್ಟು
ಮಾದಪ್ಪ
ತುಂಬಿದ ಸೋಮಾರ
ಸ್ನಾನ ಮಡಿಯನ್ನ ಮಾಡ್ಕಂಡು
ಮಯ್ಕಾರ ಗಂಡ ಶಿವಪೂಜೆಯನ್ನ ತೀರಸ್ಕಂಡು
ಎಳಗಾವಿ ಎಳಕಂಡು ಸುಳಗಾವಿ ಸುತ್ತಿಕೊಂಡು
ಒಕ್ಕಳಗಂಟ ಹುಲಿ ಚರ್ಮ
ಅಷ್ಟಪಾದಕ್ಕೆ ಅಮೀರಗೆಜ್ಜೆ
ತೋಳುತುಂಬ ರುದ್ರಾಕ್ಷಿ
ಧರೆಗಾತ್ರದ ದುಂಡಕೋಲು ಬಲಗೈಹಲಿಡಿದ್ರು
ಮುತ್ತುನ ಜೋಳ್ಗೆ ಮುಂಗೈಯಲಿ
ಆಧಾರ‍ ಮಾಡಿಕಂಡು
ಮಾದೇವ

ಅವರು ಕಾಲು ನಡಿಗೇಲಿ ಹೊರಟವರೆ
ಮಾಯಿಕಾರ ಮಾದೇವ
ಏಲು ಮಲೆಗಳ ಲಿಂಗಯ್ಯ
ಎತ್ತಿದೇವು ಮಂಗಳಾರತಿಯ
ಎತ್ತಿಮೆರೆದರು ಮಾದೇವ್ನ

ಹೋಗಬರ್ತಿನಿ ಕಂದಾ ಕಾರ‍ಯ್ಯ ಬಿಲ್ಲಯ್ಯ
ಬೇಡ್ರ ಕಣ್ಣಪ್ಪಾ
ಬಂಟು ಜಡೆ ಶೇಶಣ್ಣ
ನನ್ನ ಏಳು ಮಲೆಯೊಳಗೆ
ಉಸಾರಾಗಿರಿ ಕಂದಾ
ಈ ಬೇಡಗಂಪಣದೋರು ಮಾಡುವಮ್ತ
ಪೂಜೆ ಒಳಗೆ ನೀವೇನು ಕೋಪ ಮಾಡಬೇಡಿ
ನಮ್ಮ ಗುರುಗಳು ಬಂದಾಗ ಮಾತ್ರ ಆನಂದವಾಗಿ
ಸಹ ಪಂಕ್ತಿಯೊಳಗೆ ಊಟ ಮಾಡ್ಕಳ್ಳಿ
ಈ ಬೇಡಗಂಪಣರೋರ ಪೂಜೆ ನಮ್ಮ ಹಿಡಿಯೋದಿಲ್ಲ
ನಾ ಹೋಗಿ ಬೇವಿನಟ್ಟಿ ದುಡನೋಡ್ತಿನಿ ಅಂತೇಳೀ
ಮಾದಪ್ಪ ತುಂಬ್ದ ಸೋಮಾರ ಬೇವಿನಟ್ಟಿಗೆ
ಹೊರಟಿದ್ದಾನೆ

ಅಪ್ಪಾ ಗುಡಿಯ ಗುಂಡಾರ ಕಡೆದವರೆ
ಮೂಡಲ ಮಲೆಯ ಮಾದೇವಾ
ಹತ್ತಿಯ ಕಟ್ಟೆ ಬಿಟ್ಟವರೆ
ಆಲಾದ ಕಟ್ಟೆ ಕಡೆದವರೇ
ಮಹಾಂತ ಕಟ್ಟೆ ಕಡೆದವರೇ
ಬಸವನ ಕಟ್ಟೆ ಬಿಟ್ಟವರೇ
ಈರತ್ತು ಕಟ್ಟೆ ಕಡೆದವರೇ
ಎಳದಿದ್ದು ಕೊಳದ ಕಡೆದವರೇ
ಮೂಡಲ ಮಲೆಯು ಮಾದೇವ
ತಮ್ಮಡಗೇರಿಗೆ ಬಂದವರೆ
ನಾಗುಮಲೆಯ ಶಿವಶರಣ
ಅಪ್ಪ ದಿಂಬದ ಮಲೆಯ ಏರವರೇ
ಮೂಡಲ ಮಲೆಯ ಮಾದೇವಾ || ಕೋರಣ್ಯ ||

ಅಂಗೈಲಾಧಾರ ಮುಂಗೈ ಜೋಳಿಗೆ
ಲಿಂಗಯ್ಯ ದಯ ಮಾಡವರೇ

ಮಾದಪ್ಪ
ದಿಂಬದ ಮಲೆ ಹತ್ತವರೆ
ಕಾಲ್ನಡಿಗೆಲೆ ಹೋಗ್ತಾಯಿದ್ದಾರೆ
ಪುಟ್ಟಪಾದ ಇಟ್ಟಕ್ಕೊಂಡು ಮಾದಪ್ಪ
ದಿಂಬದ ಮಲೆಯನು ಕಡೆದು
ಚಿಕ್ಕಾಲಾಳ್ಳ ದೊಡ್ಡಾಲಾಳ್ಳ ಕಡೆದು
ಭಕ್ತರ ವಡಗಲ್ಲಿ ನಿಂತ್ಕಂಡು
ಹೊನ್ನುಣ್ಣೆ ಕಾಳಮ್ಮನ ಹಟ್ಟಿ ಆನಂದ
ನೋಡ್ತಾಯಿದ್ದಾರೆ
ಕಾರಯ್ಯ ಬಿಲ್ಲಯ್ಯ ಹೇಳಿದೊಪ್ಪಂದವಾಗಿ
ಹೊನ್ನಣ್ಸೆ ಕಾಳಮ್ಮ ಸಾಲ ಹಟ್ಟಿ ಕಟ್ಟಿದ್ದಾಳೆ
ಏಳೇಳು ಹದಿನಾಲ್ಕು ಹಟ್ಟಿ
ಹನ್ನೆರಡು ಕಂಬದ ಹಟ್ಟಿ ಮುಂದ್ಗಡೆ
ಬೇವಿನ ಮರದ ಜಗಲಿ
ಕಾಳಮ್ಮನ ಹಟ್ಟಿಯ ಐಶ್ವರ್ಯ ನೋಡುಬಿಟ್ಟು
ಆಹಾ ಇಂತ ಐಶ್ವರ್ಯವಂತಳಾಗಿದ್ದಾಳೆ ಕಾಳಮ್ಮ
ನನಗೆ ವಕ್ಕಲಾಗ್ತಳೆ ಅಂತೇಳಿ ಮಾದಪ್ಪ
ಮಾದಪ್ಪ ಅರೆಗಣ್ಣು ಕೆಂಗಣ್ಣು ಬಿಟಕಂಡು

ಅಪ್ಪಾ ಬೇವಿನಮರದ ಜಗಲಿಗೆ
ಆದಿಗುರುದಯ ಮಾಡವರೇs || ಕೋರಣ್ಯ ||
ಕೊಂಬುಗುಳಿ ಸುದ್ದನೋಡು
ಜಂಜು ದ್ವೀಪದ ಬಸವಣ್ಣ
ಮಹದೇವ
ಕೊಂಬಲ್ಲಿ ಅಳಸು ಹಣೆಯಲ್ಲಿ ಗಂಧ
ಆಲಂಬಾವಿ ಬಸವಣ್ಣನಿಗೆ

ಮಾದಪ್ಪ ಬೇವಿನ್ಹಟ್ಟಿ ಜಗಲಿಗೆ ಬಂದ್ರು
ಕಾಳಮ್ಮನ ಹಟ್ಟಿ ಐಶ್ವರ್ಯವನ್ನು
ಕಣ್ಣಿಂದ ಅರೆಗಣ್ಣು ಕಿರಿಗಣ್ಣು ಬಿಟ್ಟು ನೋಡ್ತಾರೆ
ಅಲಂಕಾರವಾಗಿದೆ ಏಳೇಳು ಹದ್ನಾಕಟ್ಟಿ
ಗಂಧತೊಟ್ಟಿ ಗಾರೆತೊಟ್ಟಿ ಚಿನ್ನತೊಟ್ಟಿ
ರನ್ನತೊಟ್ಟಿ ಮುತ್ತಿನ ತೊಟ್ಟಿ ಕಬ್ಬಿಣ ತೊಟ್ಟಿ
ಇದೇ ರೀತಿಯಾಗೆ ತೊಟ್ಟಿ ಕಟ್ಟಿಸಿಕೊಂಡು
ಕಾಳಮ್ಮ
ಏಳು ಜನ ಸೊಸೆಯರು
ಏಳು ಜನ ಗಂಡು ಮಕ್ಕಳು
ಏಳು ಜನ ಜೀತಗಾರರು
ಕಂಬಳಗಾರ ಮಲ್ಲಣ್ಣ
ಕಾಳಮ್ಮನ ಕೋಪದಲ್ಲಿ ಬಂಡಿಮ್ಯಾಲೆ
ಕೂರ್ಸಿಕ್ಕಂಡು ಬಾಣಗಾರಿಗೆ
ಹೋಗುದಕ್ಕು ಬರುದುಕ್ಕೂ ಕಂಬಳಗಾರ ಮಲ್ಲಣ್ಣ ಅವ್ನ
ಕಾಳಮ್ಮ
ಕಾರಯ್ಯ ಹೇಳಿದ ಪ್ರಕಾರವಾಗಿ
ಹಟ್ಟಿ ಬಾಗಲಲ್ಲಿ ಕಡಿಯೊ ನಾಯಿ
ಕಚ್ಚುವಂತ ಏಳು ತಲೆ ಕಾಳಿಂಗ ಸರ್ಪ
ಬಾಗೆಲ್ಗೆ ಇಬ್ಬರು ಗೊಲ್ಲರಿಟ್ಕೊಂಡು
ಯಾರು ಕೂಡ ನನ್ನಟ್ಟಿಗೆ
ಹರದೇಶಿ ಪರದೇಶಿ
ಕಾಳಮುಖ ಸನ್ಯಾಸಿ
ದಾಸ ಜೋಗಿ ಗುಡ್ಡ ಯಾರು ಬರಬಾರದು
ಭಿಕ್ಷಕೆ ಎಂತೇಳಿ ಇದ್ದುಕ್ಕೊಂಡವಳೆ
ಮಾದಪ್ಪ ನೋಡುದ್ರು
ಬೇವನ್ಹಟ್ಟಿ ದುಡನೋಡಬೇಕು ಎಂತೇಳಿ
ಮಾದಪ್ಪ
ಆವಾಗ ಜಗಲಿ ಮ್ಯಾಲೆ ಹುಲಿ ಚರ್ಮಹಾಸಿಕೊಂಡು
ಹುಲ್ಲೆ ಚರ್ಮ ಉಟ್ಟಿಕೊಂಡು
ತ್ರಿಶೂಲ ಇಟ್ಟುಕೊಂಡು ಕೂತಿದ್ದಾರೆ
ಅಷ್ಟೊತ್ತಿಗೆ ಕಾಳಮ್ಮ
ಒಂದು ಗಡಿಗೆ ಹಂಬಲಿ ಕಾಸಿಕೊಂಡು
ಏಳು ಜನ ಗಂಡು ಮಕ್ಳು
ಏಳು ಜನ ಜೀತಗಾರ್ರು
ಬಾಣಗಾರಿಗೆ ಕೆಬ್ಬೆ ಹೊಲದಲಿ ಹೋಗಿ
ಎಳ್ಳನ್ನ ಒಕ್ಕಣೆ ಮಾಡ್ತಾ ಅವ್ರೆ
ಕರಿ ಎಳ್ಳಿನ ವಕ್ಕಣೆ ಮಾಡ್ತಾವರೆ
ಏಳೇಳು ಹದ್ನಾಕ್ ಜನ
ಕಂಬಳಗಾರ ಮಲ್ಲಣ್ಣನ ಕರಕಂಡು
ಒಂದು ಗಡಿಗೆ ಅಂಬಲಿ ತುಂಬ್ಕಕಂಡು
ಕೋಣನ ಬಲಿ ಮ್ಯಾಲೆ ಮಡಿಕಮ್ಡು
ತಾನು ಕೂಡ ಕೂತ್ಕಂಡು
ಕಂಬಳಗಾರ ಮಲ್ಲಣ್ಣ
ಜಾಗ್ರತೆಯಾಗಿ ನಡೆ ಆಳ್ಗಳ್ಗೆ ಅಂಬಲಿ
ಕೊಡಬೇಕಂತೇಳಿ
ಏಳುಜನ ಸೊಸೆರ್ಗು ತಾಕೀತಿ ಕೊಟ್ಟು
ಎಲೇ ಬನ್ನಿರಮ್ಮ ಎಲೇ ಸೊಸೆರೇ
ಏನಾದರೂ ನನ್ನ ರಾಗಿಯೊಳಗೆ
ಒಂದು ಪಾವು ರಾಗಿ ಕಡೆಮೆಯಾದರೆ
ಒಂದು ಚಿಟಕಿ ಹಸಿಟು ಕಡಿಮೆಯಾದ್ರೆ
ಕಟ್ಟಿದಂತಹ ಒಂದು ಮುದ್ದೆ ಹೆಚ್ಚು
ಕಡಿಮೆಯಾಗಬಾರ್ದು ಅಂತೇಳಿ
ರಾಗಿ ಅಳತೆ ಕೊಡ್ತಯಿದ್ದಳು
ಕಟ್ಟಿದಂತಹ ಒಂದು ಮುದ್ದೆ ಹೆಚ್ಚು
ಕಡೆಮೆಯಾಗಬಾರ್ದು ಅಂತೇಳಿ
ರಾಗಿ ಅಳತೆ ಕೊಡ್ತಾಯಿದ್ದಳು
ಕಟ್ಟಿದಂತಹ ಮುದ್ದೇನು ತೂಕ ಮಾಡ್ತಾಯಿದ್ದಳು
ಏಳೇಳು ಹದಿನಾಲ್ಕು ಮುದ್ದೆ ಸಮವಾಗಿರಬೇಕು
ಅಂಬಲಿ ಬಿಟ್ಟರೆ ಕೆಳಗಡೆ ನೋಡದ್ರೆ ಮೇಗಡೆ ಸೂರು ಗಳ ಕಾಣಬೇಕು

ಆ ತರ
ಸೊಸೆರ್ಗೆ ಅಳತೆ ಕೊಟ್ಟು ಬಿಟ್ಟು
ಕೋಣನ ಬಂಡಿ ಕಟ್ಟಿಸಿಕೊಂಡು
ಆವಾಗಲೀಗ ಕಾಳಮ್ಮ

ಅಯ್ಯಾ ಬಾಣಗಾರ ಕೆಬ್ಬೆ ಹೊಲಕೆ ನೋಡು
ಬತ್ತವರೆಲ್ಲ ಕಾಳಮ್ಮಾs || ಕೋರಣ್ಯ ||